Friday 9 December 2016

ಕವಿ ಕನವರಿಕೆ: ಪ್ರೇಮಾಯಣ:6




         ಅವಳಿಂದ ಪದೆ ಪದೇ ನನಗೆ ನೋವಾಗುತ್ತಲೇ ಇರುತ್ತೆ. ಅವಳು ಒಂದೊಂದು ವಿಚಾರದಲ್ಲಿ ಒಂದೊಂದು ಥರ. ಒಮ್ಮೆ ನಗಿಸುತ್ತಾಳೆ. ಒಮ್ಮೆ ಮುದ್ದಿಸುತ್ತಾಳೆ, ಒಮ್ಮೆ ಅಳಿಸುತ್ತಾಳೆ.
 ಮೊದಲೆಲ್ಲ ಅವಳಿಗೆ ನಾ ತುಂಬಾ ಇಷ್ಟವಾಗುತ್ತಿದ್ದೆ. ಆ ಪರಿವೆಯಲಿ ಅವಳ ಇಷ್ಟ ಕಷ್ಟ ಎಲ್ಲವನ್ನು ಸಹಿಸಿಕೊಂಡು ಮನಸಾರೆ ನಾನು ಇಷ್ಟಪಟ್ಟೆ. ಆದರೆ ಇಂದು ಅದೇನೋ ಗೊತ್ತಿಲ್ಲ, ನನಗೇನು ಇಷ್ಟವಿಲ್ಲವೋ, ನನಗ್ಯಾವುದು ಸರಿ ಅನಿಸುವುದಿಲ್ಲವೋ ಅದನ್ನೇ ಹುಚ್ಚಿಯಂತೆ ಮಾಡಿ ಖುಷಿ ಪಡುತ್ತಾಳೆ. ಮತ್ತೆ ನನಗೆ ಬೇಜಾರಾಯ್ತು ಅಂತ ತಿಳಿದು ಅದನ್ನೇನೋ ಸರಿ ಮಾಡಲು ಹೊರಟು ಮತ್ತೆ ಮಗುವಾಗಿ ಅಳುತ್ತಾಳೆ... ಸಾರಿ ಕೇಳಿ ಅವಳಿಗವಳೇ ವಿಷಾಧಿಸುತ್ತಾಳೆ.
ಅವಳು ಸ್ವಲ್ಪ ಶ್ರೀಮಂತೆ, ನಾನೋ ಹುಟ್ಟು ಬಡವ. ಬಹುಶಃ ನಾನು ನೋಡುವ ಎಲ್ಲಾ ವೆರೈಟಿ ವೆರೈಟಿ ಸುಖಾನುಭವಗಳನ್ನು ಈಗಾಗಲೇ ಅವಳು ನೋಡಿ ಮುಗಿಸಿರಬಹುದು ಆದರೆ ನನಗೆ ತಿಳಿದಿರುವಷ್ಟು, ನನ್ನ ಸಣ್ಣ ಬದುಕಿಗೆ ಆಗಿರುವಷ್ಟು ಕಷ್ಟ ನಷ್ಟದ ಎಕ್ಸ್‍ಫೀಯರೆನ್ಸ್ ಅವಳಿಗಿಲ್ಲ.


         ಪ್ರತಿ ಸಲ ಜಗಳವಾದಾಗಲೂ ನಾವು ಪರಸ್ಫರ ಭೇಟಿಯಾಗುತ್ತೇವೆ. ಒಂದಿಷ್ಟು ಸಮಯ ದೂರ ಕುಳಿತು ಮತ್ತೆ ಹತ್ತಿರಾಗಿ ಅಪ್ಪಿಕೊಳ್ಳುತ್ತೇವೆ. ಆದರೆ ಯಾಕೋ ಇಂದು ಅವಳು ನನ್ನ ಕರೆದಿಲ್ಲ. ಮತ್ತೆ ತಪ್ಪು ಮಾಡಿದ್ದಾಳೆ. ಆದರೂ, ನಿಂದೇ ತಪ್ಪು ಅಂತ ಕೂಗಾಡುತ್ತಿದ್ದಾಳೆ. ದಿಕ್ಕೇ ತೋಚದ ಸಪ್ಪೆ ಕುದುರೆಯ ಹಾಗೆ ಒಬ್ಬನೇ ಕುಳಿತು ಎದೆಯೊಳಗಿನ ಉರಿಯಲ್ಲಿ ಬೇಯುತ್ತಿದ್ದೇನೆ. ಅವಳ ಕರೆಗಾಗಿ ಸಾಯುತ್ತಿದ್ದೇನೆ... ಕರೆಯುತ್ತಾಳೋ, ಕರೆಯದಿರುತ್ತಾಳೋ ಅವಳಿಗಾಗಿ ಯಾವಾಗಲೂ ಕಾಯುತ್ತೇನೆ... ಬದುಕು ಉತ್ತರವಿಲ್ಲದ ಪ್ರಶ್ನೆಯಾಗಿ ಹೀಗೆ ಸುಮಾರು ಸಲ ಸತ್ತು ಬದುಕಿದ್ದೇನೆ. ಬದುಕುತ್ತಿದ್ದೇನೆ.

No comments:

Post a Comment