Saturday 13 February 2016

ಭಾವದ ಬೆನ್ನೇರಿ...ಈ ಗುಟ್ಟಲ್ಲಿ ಶಾಮೀಲು ನೀನು...



(ಪ್ರೇಮಿಗಳ ದಿನದ ವಿಶೇಷವಾಗೊಂದು ಲೇಖನ. ಓದುವ ಮುನ್ನ ಎಚ್ಚರಿಕೆಯ ಮಣೆ, ಹುಡುಗಿಯರೇ ನಿಮ್ಮ ಹಾರ್ಟ್‍ಗೆ ನೋವಾದರೆ ನಾನಲ್ಲ ಹೊಣೆ)
ಹಾಯ್ ಡಿಯರ್,
ಇ...
“ ಎಲ್ಲಿಂದ ಬಂದೆ ನೀನೊಬ್ಬಳೆ..,
ಊಹೆಗೂ ಮೀರಿದ ಗಂಧರ್ವಳೆ..,
ಕಾಡಿಹೆ ನೀನು ಇಂದಿಗೂ ನನ್ನೊಬ್ಬಳೆ...”


ಇಲ್ ಕೇಳು...
ನೋ ಡೌಟ್...
 ನಾನೊಬ್ಬ ತ್ಯಾಗಿಯಾಗಿ ತಂತಿ ಮೀಟುವುದು ಖಚಿತ, ಅದಕ್ಕೆ ಮನಪೂರ್ಣ ಸಿದ್ಧನಾಗಿರುವುದು ನಿಜ...ಆರಾಮಾಗಿ ಸ್ವಚ್ಚಂದದಿ ಬಾನಂಗಳದಲ್ಲಿ ಹಾರಾಡಿಕೊಂಡಿದ್ದ ನನ್ನ ಭ್ರಾಂತಿ ಮಂಪರಿಗೆ ಬಲೆ ಬೀಸಿ ಮನವ ಕದ್ದಿದ್ದು ನೀನಾ!? ನಿನ್ನಾ ಚೆಲುವಾ!!? ಎನ್ನುವ ಸಂಶಯ ಇಂದಿಗೂ ನನ್ನೊಳಗೆ ಪ್ರಶ್ನೆಯಾಗಿಯೇ ಉಳಿದಿದೆ. ನಿಂಗೊತ್ತಾ!?..,ನಿನ್ನ ಮೋಹಕತೆ ಈಗಲೂ ನನ್ನನ್ನ ಬಡಿದೆಬ್ಬಿಸುತ್ತೆ, ಪುಟಿದೆಬ್ಬಿಸುತ್ತೆ, ಕಳವಳಗೊಳ್ಳುವಂತೆ ಮಾಡುತ್ತೆ, ಆದರೂ ಇದ್ಯಾವುದು ನಿನಗೆ ತಿಳಿದಿಲ್ಲ ಬಿಡು. ನಾನೊಂತರ ಹೂವಿನ ಸಂತೆಗೆ ಬಂದಿರೋ ದುಂಬಿ ಅನಿಸಿದರೂ, ನನ್ನ ಮನಸಿಗೆ ಸುವಾಸನೆ ಬೀರಿದ ಹೂ ಮಾತ್ರಾ ನೀನೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಒಮ್ಮೊಮ್ಮೇ ಹೀಗೇ ಕಳೆಯಲಿ ಜೀವನಾ, ಹೀಗೆ ಮೆರೆಯಲಿ ತನುಮನ ಅನಿಸಿದರೂ ಮುಂದೊಂದು ದಿನ ನೀ ಸಿಗಲಾರೆಯೇನೋ ಅನ್ನಿಸಿ ಬೇಡ ಸುಮ್ಮನಿರು ಎನ್ನುವ ಮೌನದಲ್ಲೇ ನಿಟ್ಟುಸಿರಿಯುತ್ತೇನೆ.
ಬೇಜಾರಿಲ್ಲ.., 
ಈಗಲೂ ರಾತ್ರಿ ಸಮಯ ಬಾನಂಗಳಕ್ಕೆ ಮುಖ ಮಾಡಿ ನಿಂತರೆ ಅಗೋಚರಕ್ಕೆ ನಕ್ಷತ್ರಗಳ ರಾಶಿ ಮಧ್ಯೆ ನಿನ್ನ ನಗು ಹೊಳೆದಂತಾಗಿ ಭಾವನೆಗಳ ಮೆರವಣಿಗೆ ರಥಭೀದಿ ತುಳಿಯಲು ಆರಂಭಿಸಿಯೇ ಬಿಡುತ್ತದೆ. ಬಹುಶಃ ಸರಿಸುಮಾರು 7 ವರ್ಷಗಳಿಂದ ಕಾಣುತ್ತಿದ್ದ ನಿನ್ನ ಮುಖದ ಸೊಬಗೂ ಇನ್ನೂ ಮಾಸದೇ ಹಾಗೆ ಉಳಿದಿದ್ದರೂ, ಕಾಂತಿ ಹೆಮ್ಮರವಾಗಿ ಬೆಳೆಯುತ್ತಲೇ ಹೆಜ್ಜೆ ಇಡುತ್ತಿದ್ದರೂ, ನನ್ನೊಳಗಿರುವ ಭಾವನೆಯನ್ನು ಮಾತ್ರಾ ಒಂದಿನಿತು-ಒಂದಿನವೂ ಹೇಳಲಾಗದೇ ತಡಬಡಿಸುತ್ತಿರುವುದು, ನನ್ನ ದೌರ್ಭಾಗ್ಯವೋ, ನಿನ್ನ ಸೌಭಾಗ್ಯವೋ ತಿಳಿದಿಲ್ಲ ಕಣೇ...
ನಂಗೊತ್ತು ನಾ ಭಾವಗಳ ಬೆನ್ನೇರಿ ಸಾಗುತ್ತಿರುವ ಪಯಣಿಗ ಎಂದು, ಆದರೆ ನಾ ಇಷ್ಟು ದೂರ ಸಾಗಿ ಬರಲು, ಎತ್ತರಕ್ಕೇರಲು, ಈ ಮಾರ್ಗ ಕಂಡುಕೊಳ್ಳಲು ಕಾರಣ ಇದ್ದರೇ  ಅದು ನೀನೇ ಬಂಗಾರಿ.  ಈ ನನ್ನ ಒಂಟಿಯಾದ ಭಾವನೆಗಳಿಗೆ ಗೊಬ್ಬರವಿತ್ತು ಪೋಷಿಸುತ್ತಿರುವ, ಏಕಾಂಗಿ ತನದಲ್ಲಿ ಒಮ್ಮೊಮ್ಮೆ ನೋವು-ನಲಿವನ್ನು ಝಳಪಿಸುವಂತೆ ಮಾಡುವ ಮನ್ಮಥೆಯೂ ನೀನೆ. ಸದಾ ಕಾಡುವ ನೆನಪೂ ನಿನೆ...  ಹಾ...ನೀನೊಂತರ ತಿಳಿನೀರು, ನಾನೊಂಥರ ಭೂಮಿಗಾವು. ಆದರೆ, ಮರುಭೂಮಿಯ ಭಂಜರಲ್ಲ್ಲಿ ಬಿದ್ದಿದ್ದ ನನ್ನ ಬದುಕಿಗೆ ನೀರುಣಿಸಿ ಮೊಳಕೆಯೆಬ್ಬಿಸಿ ಭಾವದ ಜೀವ ಬೆಳೆಸಿ ಬಳಿಕ ಸುಳಿವಿಲ್ಲದೇ ಸಾಗಿದ ನಿನಗೆ ನಿನ್ನ ಪಾಪುವಿನ ಚಿಂತೆಯಿಲ್ಲದಿರುವುದು ಪಾಲನೆಯ ಕೊರತೆಯಾಗುತ್ತೆಂದು ಒಂದಿನವು ಅನಿಸಿಲ್ಲವೇ ಗೆಳತಿ!?.
ಯಾಕೀತರ!!?, 
ನೀ ಎದುರು ಬಂದಾಗೆಲ್ಲಾ ಏನೋ ನಿರೀಕ್ಷೆ, ಸಡಗರ, ಸಂತೋಷ, ಜೊತೆಗೊಂದಿಷ್ಟು ಅಳುಕು, ಬೆವರು, ಭ್ರಾಂತಿ, ನಡುಕ. ಆದರೆ ಅವುಗಳಲ್ಲೂ ಎಷ್ಟೊಂದು ಸುಖವಿತ್ತು ಗೊತ್ತಾ... ನಡುರಾತ್ರಿಯಲ್ಲಿ ಕೆಟ್ಟ ಕನಸು ಕಂಡು ಹೆದರಿದವನೊಬ್ಬ ಬೆಳಿಗ್ಗೆ ಎದ್ದಾಗ ಜ್ವರದಿಂದ ಬೇವತ ಸುದ್ದಿ ಸುಮಾರು ಬಾರಿ ಅಜ್ಜಿ ಬಾಯಲ್ಲಿ ಕೇಳಿದ್ದ ನನಗೆ ಈ ಪ್ರೀತಿ ಜ್ವರ ಎಬ್ಬಿಸಿ ತೋರಿಸಿದ್ದು ಬರವಣಿಗೆಯ ನಿರಾಳ ವೇಧ...
ನನಗೆ ಗೊತ್ತು..,
ಈ ಎಳು ವರ್ಷ ನಾ ಕಳೆದಿದ್ದು ಮೌನ ಕ್ರಾಂತಿಯಲ್ಲಿಯೆ. ನೀನೂ ಅಮವಾಸೆಗೋ, ಹುಣ್ಣಿಮೆಗೋ ಒಮ್ಮೊಮ್ಮೆ ಬಳಿ ಬಂದು ಹತ್ತಿರ ನಿಂತು ಕೈ ಹಿಡಿದು ಮಾತನಾಡಿಸುತ್ತಿದ್ದರೂ, ನಿಜಾನಾ-ಸುಳ್ಳಾ, ಕನಸಾ-ನನಸಾ ಎನ್ನುವ ಮಂಪರಿನಿಂದ ಹೊರಬರಲಾರದೇ ಗದ್ಗಧಿತನಾಗಿ ಮಾತಾಡದೆ ನಿಂತಿದ್ದು, ನಿನಗೆ ನನ್ನ ಒಳಭಾವ ಅರಿಯಲು ಅಸಮರ್ಥಳನ್ನಾಗಿ ಮಾಡಿರಬಹುದು...ಕ್ಷಮೆ ಇರಲಿ... ಯಾಕೆಂದರೆ ಎಲ್ಲರಂತಲ್ಲ ಈ ನಿನ್ನ ಪ್ರೇಮಿ.
ಪರಿತಾಪವಿದೆ ಮುದ್ದು..,
 ಹಳೆಯ ದಿನಗಳ ಮೆಲುಕು ಹಾಕಿದರೆ ಕಣ್ಣು ಹನಿಯ ದಾರಿ ನೋಡುತ್ತದೆ. ನೆನಪಿದ್ಯಾ ನಿಂಗೆ, ನಾವಿಬ್ಬರೂ ಬಹಳ ಹತ್ತಿರವಿದ್ದರೂ ಮಾತಾಡದೇ ದೂರ ನಿಂತಿದ್ದೆವು, ನಿನಗೆ ನಾನು, ನನಗೆ ನೀನು ಅನೇಕ ಬಾರಿ ಕಷ್ಟ ಸುಖ, ನೋವು ನಲಿವನ್ನು ಹಂಚಿಕೊಂಡಿದ್ದೇವು. ಆದರೆ ಅದೆಲ್ಲಾ ಪ್ರೀತಿ ಅಲ್ಲಾ ಎಂದು ಹೇಗೆ ಹೇಳಲಿ ಇಂದು...
ಕನ್ಫ್ಯೂಷನ್ ಆಗ್ತಿದೆ ನಂಗೆ..,
 ಒಟ್ಟಿಗೆ ಹಿಂದೆ ಮುಂದೆ ನಡೆದ ದಾರಿಗಳು ಇವತ್ತಿಗೂ ಒಂಟಿ ಪಯಣಮಾಡುತ್ತಿದ್ದಾಗ ಎದ್ದು ನಿಂತು ನಿನ್ನ ಬಗ್ಗೆ ಕೇಳುವವು!?, ಮೊದಲು ಮಾತನಾಡಿ ಇಟ್ಟ ಫೋನ್ ಇಂದಿಗೂ  ಮತ್ತೆ ಯಾವಾಗ ನಿಮ್ಮ ಮಾತು ಎನ್ನುವ ಪ್ರಶ್ನೆ ಮಾಡುವುದು!?, ರಜೆ ತನ್ಮಧ್ಯೆ ನಮ್ಮನೆಗೆ ನೀ ಭೇಟಿ ಇಟ್ಟಾಗ ವರಾಂಗಣ ಸುತ್ತಿ ಬರೋಣವೆಂದು ಕರೆದಾಡಿದ ಸ್ಥಳಗಳು ಇಂದು ನನ್ನೊಬ್ಬನ ನಡಿಗೆ ನೋಡಿ ಎಲ್ಲಿ ಅವಳು ಎನ್ನುವವು!?,  ಒಂದೇ ಮರದಡಿ ಮಾತಾಡದೇ ಒಂದರ್ಧ ಗಂಟೆ ಕಳೆದ ಸಮಯ ಇಂದಿಗೂ ನಿಮ್ಮ ಸಂಕೋಚ ಹೋಗಿಲ್ಲವೇ ಎಂದು ಮುಜುಗರ ಪಡಿಸುತ್ತಿರುವುದು, ಮೊದಲ ಬಾರಿ ಹತ್ತಿಸಿಕೊಂಡು ಹಳ್ಳಿ ಸುತ್ತಿಸಿದ್ದ ನನ್ನ  ಬೈಕ್ ನಿಮ್ಮಿಬ್ಬರ ಅಂತರ  ಇನ್ನೂ ಅಷ್ಟೇಯೇ ಇದೆಯಾ ಎಂದು ಗುರಾಯಿಸುತ್ತಿರುವುದು, ಅಂದಿಂದ ಇಂದಿಗೂ ಹೇಳಲಾಗದೇ ಉಳಿದಿರುವ ಮಾತುಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದು,  ಕೆಲವೊಂದಿಷ್ಟು ಆತ್ಮಹತ್ಯೆಗೂ ಮನಸ್ಸು ಮಾಡಿರುವುದು ಸಂಕಟ ತಂದೊಡ್ಡಿದೆ, ಬಾ ಇವರೆಲ್ಲರಿಗೆ ನೀನೆ ಉತ್ತರ ಹೇಳು, ಭವಿಷ್ಯ ನೀಡು.
ಕಾರಣ ಕಂಡವರ್ಯಾರು..,
 ಬಹುಶಃ ನನ್ನ ಪ್ರೇಮ ಪವಿತ್ರವಿರಬಹುದು. ಪವಿತ್ರ ಪ್ರೇಮದ ಹಿನ್ನೆಲೆಯಲ್ಲಿ ಅದೆಷ್ಟೋ ದಂತ ಕತೆಗಳಿವೆ, ಗ್ರಂಥಗಳಿವೆ, ಮರೆಯಲಾರದ ಹಾಡುಗಳಿವೆ, ಅದ್ಭುತ ಸ್ಮಾರಕಗಳಿವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯೆಂದರೆ , ದಿನಕ್ಕೊಂದು ಕಡೆ ಪಾರ್ಕು, ಸಿನೆಮಾ, ಔಟಿಂಗ್, ಡೇಟಿಂಗ್ ಅಂತ ಬಾಯ್ ಫ್ರೆಂಡ್/ಗರ್ಲ್ ಫ್ರೆಂಡ್ಸ್ ಜೊತೆ ಸುತ್ತಾಡಿ, ರಾತ್ರಿ ಇಡೀ ಚಾಟಿಂಗ್ ನಡೆಸಿ, ಇನ್ ಬಾಕ್ಸ್ ಫುಲ್ ಆದ ಮೇಲೆ ಡಿಲೀಟ್ ಮಾಡುವ ಮೆಸೇಜ್‍ನಂತೆ ಹುಡುಗ ಹುಡುಗಿಯರ ಭಾವಗಳು ಬದಲಾಗುತ್ತಿರುವುದು ನಿಜಕ್ಕೂ ನನ್ನ ಪ್ರೀತಿಗೆ ಅನ್ವಯವಾಗುದಿಲ್ಲ ಆದರೂ ಹೋಗುವ ಮುಂಚೆ ಹೇಳಿ ಹೋಗು ಕಾರಣ ಮರೆಯದಿರು!..
ನಿಂಗೊತ್ತಾ ಚಿನ್ನಿ.., 
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು, ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಗೆ ಒಳಪಡದೆ ಇದ್ದದ್ದು.  ಸ್ವಾರ್ಥಕ್ಕೆ ಎಷ್ಟು ದೂರವಾದುದ್ದೋ, ಅಷ್ಟೇ ಹತ್ತಿರವಾದದ್ದು. ಇದುವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಬಗೆ ಬಗೆಯಲ್ಲಿ ಬಣ್ಣಿಕೆ ಕಂಡದ್ದು, ಹೇಗೆ ವರ್ಣಿಸಿದರೂ ಮತ್ತೆ ಮತ್ತೇ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೊ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ಪಟ್ಟಿದ್ದು, ಮತ್ತೆ ಮತ್ತೆ ಬಣ್ಣಿಸಲ್ಪಟ್ಟಿದ್ದು. ಇಷ್ಟೆಲ್ಲಾ ಇದ್ದರೂ ನಿನಗ್ಯಾಕೆ ಅದರಂದ ನನ್ನ ಮನದಲ್ಲಿದೆ ಎಂಬುದು ಅರಿವಾಗಲಿಲ್ಲ ಎನ್ನುವುದೇ ಇಂದಿನ ನನ್ನ ಚಿಂತೆಯ ಚಿಂತನೆ...
ಸಮಸ್ಯೆ ಇದೆ..,
ತಿಳುವಳಿಕೆ ಬರಲು ಈ ಸಮಸ್ಯೆಯೂ ಇರಬಹುದೇನೋ!? ಒಂದು ದಿನವೂ ನಾವು ಪ್ರಾಪಂಚಿಕ ಜಗತ್ತಿನಲ್ಲಿ ಪ್ರೇಮಿಗಳ ಥರ ಜೋಕಾಲಿ ಆಡಲಿಲ್ಲ, ಪ್ರೀತಿ ಎನ್ನುವ ಕಾರಣಕ್ಕೆ ನಾ ನಿನ್ನ ಪೀಡಿಸಿಲ್ಲ, ನಿನ್ನ ಸಾನಿಧ್ಯಕ್ಕೆ ನಾ ತುಂಬಾ ಹತ್ತಿರವಾಗಿ ನಿಂತಿದ್ದರೂ, ನೀ ಅದನ್ನು ಕೆಟ್ಟದೆಂದು ಗ್ರಹಿಸಿಲ್ಲ, ಗೆಳೆಯ ಗೆಳತಿಯ ಹಸಿಬಿಸಿ ಕಣ್ಣ ಸುದ್ದಿಗೆ ಒಂದೆರಡು ಬಾರಿ ನಾವು ಪ್ರೇಮಿಗಳೆನಿಸಿದ್ದರೂ ನಾವು ಪ್ರೇಮಿಗಳಾಗಿದ್ದೇವಂದುಕೊಂಡಿಲ್ಲ. ಅನೇಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತು ಕನಸು ಕಂಡಿದ್ದರೂ ಒಂದೇ ಮನೆ ಮಾಡಿ ಒಂದಾಗುವ ಆಸೆ ತೋರಿಲ್ಲ. ಮುಖ್ಯವಾಗಿ ನನ್ನ ಮನಸ್ಸಲ್ಲಿ ಮೂಡಿದ ಭಾವಾರ್ಥ ನಾ ನಿನಗೆ ಹೇಳಿರಲಿಲ್ಲ... ಇದು ಪ್ರೀತಿಯಲ್ವಾ ಹಾಗಾದರೆ, ಅದು ಸರೀನಾ!!? ಇದು ತಪ್ಪಾ!!?...ಲೆಕ್ಕಕ್ಕೆ ಸಿಗುತ್ತಿಲ್ಲ.ಬಿಟ್ಟೋಗು ಬೇಜಾರಿಲ್ಲ...
ನೀ ನನ್ನ ಪ್ರೀತಿಸಿದ್ದೀಯೋ, ಬಿಟ್ಟಿದ್ದಿಯೋ ಗೊತ್ತಿಲ್ಲ ಕಣೋ, ಆದರೆ ನಿನ್ನಿಂದ ನನ್ನೊಳಗೊಂದು ಅಪರೂಪದ ಭಾವಾತ್ಮ ಮರಿ ಹಾಕುವಂತೆ ಮಾಡಿರುವೆ. ನೀ ಬಳಿ ಬಂದಾಗೆಲ್ಲಾ ನಾ ದಿಕ್ಕೆಟ್ಟು ಓಡುವ ಕನಸುಗಳ ರಭಸಕ್ಕೆ ಎದೆಯೊಡ್ಡಿ ನಿಂತು ನಿನ್ನ ಬೀಳ್ಕೊಡುತ್ತಿದ್ದೆ. ಒಮ್ಮೊಮ್ಮೆ ನನ್ನ ಮೇಲೆ ಸಿಟ್ಟಾಗಿದ್ದೆ, ಒಮ್ಮೊಮ್ಮೆ ಹಲ್ಲು ಕೆರೆದಿದ್ದೆ, ಒಮ್ಮೊಮ್ಮೆ ಪ್ರೀತಿಯಿಂದ ಮುದ್ದು ಮಾಡಿದ್ದೆ, ಮಾತನಾಡಿಸಿದ್ದೆ. ಇವುಗಳೇ ನನ್ನ ಜೀವನದ ಬರವಣಿಗೆಗೆ ಸ್ಫೂರ್ತಿಯಾಗಿತ್ತೆಂದರೆ ಅತಿಶಯೋಕ್ತಯಲ್ಲ ಬಿಡು. ನಿನ್ನ ಸ್ಫೂರ್ತಿ ಚಿಲುಮೆಯೇ ನನ್ನ ಈ ಬರವಣಿಗೆ. ಎಷ್ಟೋ ಬಾರಿ ಅರ್ಧಂಬರ್ಧ ಬರವಣಿಗೆ ಕಂಡಿದ್ದ  ನನ್ನ ಕವನಗಳು ನಿನ್ನುಸಿರು ಕೇಳುತ್ತಿದ್ದಂತೆ ಪೂರ್ತಿಯಾಗಿದ್ದು ಎಂದೂ ಮರೆಯಲಾಗದು ಬಿಡು. ಸಂಜೆ ಮಬ್ಬುಗತ್ತಲ ನಡುವೇ ಅಂದು ಪಾನೀಪೂರಿ ಸವಿದ ಕ್ಷಣದ ಜೊತೆ, ಓಲೈಕೆ ಇಲ್ಲದೇ ದೂರವಾಗಿರುವ ಈ ನಿಮಿಷಕ್ಕ್ಕೆ ಅಜಗಜಾಂತರ ವ್ಯತ್ಯಾಸವಿದ್ದರೂ, ಇಂದಿಗೂ ನಾ ಹೇಳಬೇಕೆಂದ ಪದ ಬಾಯಿಂದ ಹೊರಬೀಳದೆ ಸತಾಯಿಸುತ್ತಿದೆ ಪುಟ್ಟಾ. ನನಗೆ ಗೊತ್ತು ನೀ ಸಿಗುವುದಿಲ್ಲವೆಂದು, ಹಾಗಂತ ನೀ ಸಿಗದೇ ಇದ್ದರೆ ಅದನ್ನೆ ರಂಪಾಟಕ್ಕೆ ತಂದಿಟ್ಟು ಸೆಡ್ಡು ಹೊಡೆಯುವ ಭಗ್ನ ಪ್ರೇಮಿಯ ಹುಚ್ಚು ವರ್ತನೆ ನನ್ನಲ್ಲಿಲ್ಲ. ನನ್ನ ಭಾವ ಹೇಗೆ ನನ್ನದೋ ಹಾಗೆ ನಿನ್ನ ಭಾವ ನಿನ್ನದು. ಆದರೂ ನನ್ನ ಜೀವನದಲ್ಲಿ ನಿನಗೊಂದು ಸಣ್ಣ ವಂದನೆ ಒಂಉ ಬಾರಿ ಬಂದು ಹೇಳಿ ಹೋಗು ಬೇಕಿದ್ದರೆ ಆಮೇಲೆ ಕಾಲ್ತೋಳೆದು ಬಿಳ್ಕೋಡುವೆ ಭಯ ಪಡದಿರು.

ವಿಷಯ ತಿಳಿದು ಅಳದಿರು...
ಜೀವನದ ಪಯಣದಿ ಯಾವುದೋ ಒಂದು ನಿಲ್ದಾಣದಲ್ಲಿ ಸಿಕ್ಕವಳು ನೀನು. ಹಾಗೇ ಇಳಿದು ಹೋಗುವೆ ಎನ್ನುವ ಪರಿವೆ ಇಲ್ಲದಿದ್ದರೂ ಖಾಲಿ ಜೇಬಿನ ಮಜುನೂಗೆ ಪ್ರೀತಿ ಚಿಲ್ಲರೆಯ ಬಸಿದು ಹೋದೆ ಎನ್ನುವ ಸಾಂತ್ವಾನ ನನ್ನೊಳಗೆ ನನಗೆ ಎರಕವೈದುಕೊಂಡಿರುವೆ. ಮುಂದೆಯೂ ಹಾಗೇ ಅಂದುಕೊಂಡೆ ಬಾಳುವೆ...ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲ್ಲಿ ಬದುಕೊಳಗೆ ಸಲೀಸಾಗಿ ನಡೆದು ಬಂದ ನೀನು ನನ್ನ ಮತ್ತೊಂದು ಮಗ್ಗಲು ಬದಲಾಯಿಸಿಬಿಟ್ಟೆ. ನಂಗೊತ್ತು ಇಷ್ಟು ವರ್ಷ ಕಳೆದರೂ ಹೇಳಲಾರದ ಪ್ರೀತಿ ಭಾವ ಇನ್ನೂ ಮುಂದೆಯೂ ಹೇಳಲಾಗದು. ಇನ್ನೂ ಮುಂದೆ ನಾ ಒಬ್ಬಂಟಿ, ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಂಟಿತನ, ಕಾಡದಿರಲಿ ಅವ್ಯಾವುದೂ ನಿನ್ನ ತನುಮನ...
‘ಕೊನೆಯ ಮಾತು ಪ್ರೇಮಿಗಳ ದಿನದ ಶುಭಾಶಯಗಳು...’
ಇತೀ ನಿನ್ನ
ಅ...
(ಭಗ್ನ ಪ್ರೇಮಿ)

ಮಂಡೆ ಬಿಸಿ ಮಾಡಿರುವ ಮಂಡೆ ಕವಚ...


* ರಕ್ಷಣೆಯೇನೋ ಸರಿ, ಸೇಫ್ಟಿ ಫಾಲೋ ಯಾರ ಗುರಿ...
* 2006ರಲ್ಲಿ ಒಬ್ಬರಿಗೆ, 2016ರಲ್ಲಿ ಇಬ್ಬರಿಗೆ...
* ಉಪಕಾರಿ ಎನಿಸಿದ್ದು, ಉಪದ್ರವಕಾರಿಯಾಗದಿದ್ದರೆ ಒಳಿತು...
*ರಸ್ತೆ ಗುಂಡಿಗಳನ್ನು ಮೊದಲು ಮುಚ್ಚಿಸಿ, ಸಾವನ್ನು ತಪ್ಪಿಸಿ...

ಮೊನ್ನೆ ರೈಲು ಪ್ರಯಾಣದ ವೇಳೆ ನನ್ನೆದುರಿಗೊಬ್ಬ ವ್ಯಕ್ತಿ ಕುಳಿತುಕೊಂಡು ತನ್ನಷ್ಟಕ್ಕೆ ತಾನೆ ಗೊಣಗಿಕೊಂಡು ಪೇಪರ್ ಓದುತ್ತಾ, ಹಿಡಿ ಹಿಡಿ ಶಾಪ ಎನ್ನುವಂತೆ ಕರಕಿರಿಸುತ್ತಿದ್ದ. ಏನಾಯ್ತಪ್ಪಾ!, ಯಾಕೆ ಹೀಗಾಡುತ್ತಿದ್ದೀಯಾ? ಎಂದು ಕೇಳಿದ್ದೆ ತಡ ಅವನ ಕೋಪ ತಾಪವೆಲ್ಲ ನನ್ನ ಬಳಿ ತೋರಿಸುವನಂತೆ ವರ್ತಿಸಿ, ‘ನೋಡಿ ಸ್ವಾಮಿ!, ಇಷ್ಟು ದಿನ ಏನೋ ಒಂದು ನಡೆದು ಹೋಯ್ತು, ಆದರೆ ಇನ್ನೂ ಮುಂದಿನ ದಿನಗಳಲ್ಲಿ ಜೀವನ ಕ್ರಮ ಬಹಳ ಕಷ್ಟವಿದೆ.., ಆಳುವವರ ದಬ್ಬಾಳಿಕೆ ಹಿಂದಿದ್ದ ಕಾಲಕ್ಕೆ ಮತ್ತೆ ನಮ್ಮನ್ನ ದೂಡಿ ಬ್ರಿಟೀಷ್ ಕಾಲದಲ್ಲಿದ್ದಂತೆ ಹೆದರಿ ಬದುಕುವುದೇ ಮಾಮೂಲಿಯಾಗಿ ಬಿಡುತ್ತದೇನೋ ಎನ್ನುವ ಭಯ ಮೂಡುತ್ತಿದೆ.!, ಅಲ್ಲಾ ಸಾರ್!, ಇದನ್ನ ನೋಡಿ ಆಮೇಲೆ ನೀವೆ ಹೇಳಿ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಂತೆ ಇದು ಬೇಕಿತ್ತಾ...??? ಎಂದ
 ಉತ್ತರವಾಗಿ, ಹು.., ಹೌದು. ಇದು ಸರ್ಕಾರದ ಆಜ್ಞೆ ಪಾಲಿಸಲೇಬೇಕಲ್ಲ ಅದಕ್ಯಾಕೆ ಇಷ್ಟು ಟೆನ್ಷನ್ ಮಾಡ್ಕೊಂಡಿದ್ದೀರಾ ಎಂದೆ.
ಹಾಗಲ್ಲಾ ಸಾರ್, ಈಗ ನೀವೊಬ್ಬರೇ ಮನೆಗೆ ಹೋಗ್ತಾ ಇರುತ್ತೀರಾ, ನಿಮ್ಮ ಆತ್ಮೀಯ ಸ್ನೇಹಿತ ಎದುರಿಗೆ ಸಿಗುತ್ತಾನೆ. ಅವನನ್ನು ನಿಮ್ಮ ಮನೆಗೆ ಕರೆದುಕೊಂಡು ಹೊರಡುತ್ತೀರಿ. ಮಧ್ಯದಾರಿಯಲ್ಲಿ ಬಿಳಿ ಖಾಕಿವೆತ್ತ ಪೊಲೀಸರು ತಡೆದು ಪ್ರಶ್ನಿಸುತ್ತಾರೆ. ‘ಹಿಂಬದಿ ಸವಾರರ ಹೆಲ್ಮೆಟ್ ಎಲ್ಲಿ?, ಕಟ್ಟಿ ಫೈನ್!!’ ಎಂದು ರಿಸಿಟ್ ಹರಿದೇ ಬಿಡುತ್ತಾರೆ. ನೀವು ಲಂಚಾನೋ ಅಥವಾ ಫೈನ್ ಬಿಲ್‍ನ ಮೊತ್ತವನ್ನೋ ಪ್ರಾಮಾಣಿಕನಂತೆ ಕೈಗಿತ್ತು ಬರುತ್ತೀರಿ. ಇಲ್ಲವಾದರೆ ನೀವೆನ್ ಮಾಡ್ತೀರಾ!? ಹೇಳಿ ಎಂದ.
ನನಗೆ ಉತ್ತರ ದೋಚಲಿಲ್ಲ. ಸುಮ್ಮನೆ ಕುಳಿತೆ. ಅದಾಗಲೇ ಆತ ಮಾತನ್ನು ಮುಂದುವರಿಸಿ ಹಾಗೆ ಮಾಡಲೇಬೇಕು ಬೇರೆ ಉಪಾಯವೇ ಇಲ್ಲ ಬಿಡಿ..,!? ಏನು ಸರ್ಕಾರವೋ ಏನೋ, ಎಂದು ಎದ್ದು ಪಕ್ಕದಲ್ಲಿದ್ದ ಲ್ಯಾಟ್ರಿನ್ ಒಳಹೋದ.
ಹೌದಲ್ವಾ!!!..,ಈ ಹೆಲ್ಮೆಟ್ ಎಷ್ಟು ಉಪಕಾರಿ ಎನಿಸುತ್ತೋ ಅಷ್ಟು ಉಪದ್ರವಕಾರಿಯಾಗಿಯೂ ಕಿರಿಕಿರಿ ಉಂಟು ಮಾಡುತ್ತಿದೆ ಎನಿಸಿದ್ದೇ ಆಗ.
ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಸಾವು ನೋವುಗಳಿಗೆ ತುತ್ತಾಗುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಇಗಾಗಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಈ ಹಿಂದೆ ದೆಹಲಿ, ಕೋಲ್ಕತ್ತಾ ಹಾಗೂ ಜೈಪುರಗಳಲ್ಲಿ ಜಾರಿಯಲ್ಲಿದ್ದ ಕಾಯ್ದೆಯನ್ನು ಇದೀಗ ನಮ್ಮ ರಾಜ್ಯದಲ್ಲೂ ಜಾರಿಗೊಳಿಸಿದೆ. ಹಾಗಾಗಿ ಮೋಟಾರು ವಾಹನ ಕಾಯ್ದೆ ಕಲಂ 129ರ ಅನ್ವಯ ‘ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್’ನಿಂದ ಪ್ರಾಮಾಣೀಕೃತ ಐ.ಎಸ್.ಐ ಮಾರ್ಕ್ ಇರುವ ಹೆಲ್ಮೆಟ್‍ಗಳನ್ನೇ ಬೈಕ್ ಸವಾರರು ಬಳಸಬೇಕು, ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಬೇಕು. ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ  ಬೈಕ್ ಚಲಾಯಿಸುವ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆ ಎನ್ನುವ ಮಾನದಂಡದ ಘೋಷವಾಕ್ಯ ಎಲ್ಲೆಲ್ಲೂ ಇತ್ತೀಚಿಗೆ ಪ್ರಭೆ ಬಿರುತ್ತಾ ಮಂಡೆ ಬಿಸಿ ಮಾಡಿದೆ. ದಂಡದ ಪ್ರಮಾಣವೂ ಹೀಗಿದೆ, ಮೊದಲಬಾರಿಗೆ 100ರೂ, ಎರಡನೇ ಬಾರಿಗೆ 200ರೂ, ಹಾಗೂ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ಸವಾರನ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಮಾಡುವ ವಿಶೇಷ ಅಧಿಕಾರವನ್ನು  ಸಾರಿಗೆ ಇಲಾಖೆಯು ಹೊಂದಿರುತ್ತದೆ. ಈ ಕಡ್ಡಾಯದ ಕಷಾಯ ಚಿಕ್ಕ ಮಕ್ಕಳಿಗೂ ಅನ್ವಯಿಸುತ್ತದೆ. ಅದಕ್ಕಾಗಿ ಇನ್ನೂ ಮುಂದೆ ಮಕ್ಕಳಿಗೆ ಶಾಲಾ ಬ್ಯಾಗು, ಕೈಯಲ್ಲೊಂದು ಟಿಫಿನ್ ಬಾಕ್ಸ್ ಜೊತೆಗೆ ಹೆಲ್ಮೆಟ್‍ನ್ನು ಹಿಡಿದುಕೊಂಡು ಸ್ಕೂಲ್‍ಗೆ ಹೋಗುವ ಸೌಭಾಗ್ಯವೂ ದೊರತಿದೆ.
ರೂಲ್ಸ್ ಇರಲಿ ಅದೆಂತಹದ್ದೆ ಆಗಿರಲಿ ಫಾಲೋನೂ ಮಾಡೋಣ.., ಆದರೆ ಇರುವ ಸಿದ್ಧಾಂತಗಳೇ ನೆಲಕಚ್ಚಿ ಕಾಲ ಮುನ್ನುಗ್ಗುತ್ತಿರುವ ಸಂಧರ್ಭದಲ್ಲಿ ತಾಪತ್ರಯಗಳನ್ನು ಸರಿ ಮಾಡುವ ಬದಲಾಗಿ ಇನ್ನೂ ಬೇರೆ ಬೇರೆ ಹೊಸ ಹೊಸ ಸಿದ್ಧಾಂತಗಳನ್ನು ಹೊರಡಿಸಿದರೆ ಯಾರು ಫಾಲೋ ಮಾಡೋರು ನೀವೆ ಹೇಳಿ!?.
ದಿನದ ತಿರುಗಾಟದಲ್ಲಿ ಒಂದು ಹೆಲ್ಮೆಟ್‍ನ್ನು ಕ್ಯಾರಿ ಮಾಡುವುದೇ ಕಷ್ಟ ಅಂತಹದ್ದರಲ್ಲಿ ಎಲ್ಲೆಲ್ಲೋ ಸಿಗುವ ಹಿಂಬದಿ ಸವಾರರಿಗಾಗಿ (ಗೆಳೆಯರು, ಸಂಬಂಧಿಕರು,ದಾರಿಹೋಕರು) ನಾವು ಇನ್ನೊಂದು ಹೆಲ್ಮೆಟ್‍ನ್ನು ಹೇಗೆ ಕ್ಯಾರಿ ಮಾಡಬಹುದು ಸಣ್ಣ ಐಡಿಯಾ ಕೊಡಿ ಪ್ಲೀಸ್...
ಮದುವೆ ಪಾರ್ಟಿ ಇರುತ್ತೆ. ಗಂಡ-ಹೆಂಡತಿ ಇಬ್ಬರೂ ರೆಡಿಯಾಗಿ ಹೊರಡುತ್ತಾರೆ. ಗಂಡ ಮಾಮೂಲಿಯಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸುತ್ತಿರುತ್ತಾನೆ. ಹೆಂಡತಿಯಾದವಳು ಜರಿ ಸೀರೆಯುಟ್ಟು, ಒಡವೆತೊಟ್ಟು ತಲೆಗವಚುವ ಹೆಲ್ಮೆಟ್ ಹಾಕಿ ಬೈಕ್ ಹಿಂದೆ ಕುಳಿತು ಸವಾರಿಯಾರಂಭಿಸಿದರೆ ಮೇಕಪ್ ಭರಿತ ಅವರ ಬ್ಯುಟಿ ಎಷ್ಟು ಕೆಟ್ಟದಾಗಿ ನೋಡುವವರಿಗೆ ಕಾಣಬಹುದು ನೀವೇ ಹೇಳಿ..!?
ಈ ಸಮಸ್ಯೆ ತಡೆಯಲು ಕಾರ್ ಖರೀದಿಸುವ ಗೋಜಿಗೆ ಬಿದ್ದರೆ ಈಗಲೇ ತಡೆಯಲಾರದ ಟ್ರಾಫಿಕ್ ಸಮಸ್ಯೆ ತಡೆಯಲು ಯಾವ ಬುದ್ಧಿ ಶಿಖಾಮಣಿ ಬರುತ್ತಾನೆ ಉತ್ತರಿಸಿ!?...
ಇತ್ತೀಚಿನ ದಿನUಳಲ್ಲಿ ಜನ ಅವರ ಜೀವಕ್ಕೆ ಭಯ ಪಡುವುದಕ್ಕಿಂತ, ಪೊಲೀಸರಿಗೆ ಭಯ ಪಡುವುದೇ ಜಾಸ್ತಿಯಾಗಿದೆ. ವಾಹನವಿರುವ ಪ್ರತಿ ವ್ಯಕ್ತಿಗೆ ಮೂಲಭೂತವಾದ ಒಂದಿಷ್ಟು ಡಾಕ್ಯುಮೆಂಟ್, ನಿಯಮಾವಳಿ ಇತ್ಯಾದಿಗಳ ಹಾವಳಿಯಿಂದ ಸ್ವಲ್ಫ ಯಾಮಾರಿದರೂ ಫೈನ್ ಬೀಳುತ್ತಪ್ಪಾ ಎನ್ನುವ ಸಂಕಟದಿಂದ ಅನೇಕರು ಪೋಲೀಸರನ್ನು ಕಂಡ ಕÀಡೆ ವಾಹನ ಚಲಾಯಿಸಲು ಭಯಭೀತರಾಗುತ್ತಿದ್ದಾರೆ. ಒಂದು ವರದಿಯ ಪ್ರಕಾರ 2014 ರಲ್ಲಿ ಒಟ್ಟು 16,67,248 ಹಾಗೂ 2015 ರಲ್ಲಿ 17,70,890 ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಕೇಸ್ ದಾಖಲಾಗಿವೆಯಂತೆ. ಇದರಿಂದ ಸರ್ಕಾರಕ್ಕೆ ಎಷ್ಟು ಆದಾಯ ಬಂದಿರಬಹುದು ನೀವೆ ಹೇಳಿ, ಒಂದು ಹೆಲ್ಮೆಟ್ ಕಡ್ಡಾಯದಿಂದಲೇ ಇಷ್ಟೊಂದು ಆದಾಯ ಬಂದಿದೆ ಎಂದರೆ ಇನ್ನೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ಕಾಯ್ದೆಯಿಂದ ಇನ್ನೆಷ್ಟು ಆದಾಯ ಹರಿದಾಡಬಹುದು ಮತ್ತು ಹೆಲ್ಮೆಟ್ ಕಂಪೆನಿಗಳಿಂದ ಸರ್ಕಾರಿ ಬೊಕ್ಕಸ ಎಷ್ಟು ತುಂಬಬಹುದು, ತುಂಬಿರುತ್ತೆ ಎಂಬುದನ್ನು ಪ್ರತಿಯೊಬ್ಬನೂ ಯೋಚಿಸಬೇಕಾಗಿದೆ.
  ಡೈರೆಕ್ಟ್‍ಶೂಟ್ ಎನ್ನುವಂತೆ ನಾನಿಂದು ಒಬ್ಬ ಸಾಮಾನ್ಯ ಪ್ರಜೆಯಾಗಿ ಸರ್ಕಾರಕ್ಕೆ ಹೇಳ ಹೊರಟಿರುವುದು ಇಷ್ಟೆ. ಅಪಘಾತ ಎನ್ನುವುದು ದ್ವಿಚಕ್ರ ವಾಹನಗಳಿಂದ ಮಾತ್ರಾ ಉಂಟಾಗುವುದಲ್ಲ. ರಸ್ತೆಗಳ ದುರ್ಬಲೀಕರಣದಿಂದಲೂ ಇವು ಪ್ರತಿನಿತ್ಯ ನಡೆಯುತ್ತಿರುತ್ತದೆ. ಮೊದಲು ರಸ್ತೆ ಸರಿ ಮಾಡಿ.  ಈ ಹೊಸ ಹೊಸ ಕಾಯ್ದೆಯನ್ನು ತರುವ ಬದಲು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಲು ವ್ಯವಸ್ಥೆ ಮಾಡಿ. ಗಾಡಿ ಓಡಿಸುವ ವ್ಯಕ್ತಿ ನಿರ್ದಿಷ್ಟ ವಯಸ್ಸು ತಲುಪಿದ್ದಾನೆಯೇ?, ಲೈಸನ್ಸ್ ಪಡೆದಿದ್ದಾನೆಯೇ? ಎಂಬುದನ್ನು  ಸರಿಯಾಗಿ ಪರಿಗಣಿಸಿ ನಿಯಮ ಪಾಲಿಸಿ. ಇಂದು ನಾವು ನೀವು ನೋಡುತ್ತಿರುವಂತೆ ಪೊಲೀಸರು ಧರಿಸುತ್ತಿರುವ ಹೆಲ್ಮೆಟ್‍ಗಳೇ ಸರಿಯಾಗಿ ಅವರ ಕಿವಿಗಳನ್ನು ಮುಚ್ಚುತ್ತಿಲ್ಲ, ಆ ರೀತಿಯ ಅನ್ ಸೇಫ್ಟಿ  ಹೆಲ್ಮೆಟ್‍ಗಳನ್ನು ಯಾರದೋ ಕಣ್ತಪ್ಪಿಸಲು ಹಾಕಿಕೊಂಡು ಓಡಾಡುವ ಮುಂಬದಿ ಸವಾರನನ್ನೇ ಮೊದಲು ಹಿಡಿದು ನಿಲ್ಲಿಸಿ. ಅಂತಹ ಹೆಲ್ಮೆಟ್‍ಗಳನ್ನು ಮೊದಲು ಬ್ಯಾನ್ ಮಾಡಿ. ಅಷ್ಟೇ ಅಲ್ಲದೇ ಸಾಮಾನ್ಯ ಮನುಷ್ಯನಿಗೂ ಸ್ಟಾಂಡರ್ಡ್ ಸೇಫ್ಟಿ ಎನ್ನುವಂತೆ ಕಡಿಮೆ ದರೆದಲ್ಲಿ ಒಳ್ಳೆಯ ಹೆಲ್ಮೆಟ್ ದೊರೆಯಲು ಅನುವು ಮಾಡಿಕೊಡಿ... ಇಷ್ಟು ಮಾಡಲಾಗುತ್ತದಾ!? ಹಾಗಿದ್ದರೆ ಹೊಸ ಹೊಸ ಕಾಯಿದೆ ತನ್ನಿ. ಮನಪೂರ್ವಕವಾಗಿ ಫಾಲೋ ಮಾಡ್ತೇವೆ ಡೌಟೇ ಬೇಡ.
ಇನ್ನೂ ನಮ್ಮ ರಾಜಧಾನಿ ಬೆಂಗಳೂರನ್ನು ದ್ವಿಚಕ್ರ ವಾಹನಗಳ ನಗರಿ ಎಂದು ಕರೆದರೂ ತಪ್ಪಲ್ಲ ಬಿಡಿ. ಇಂದು ನಗರದ ರಸ್ತೆಗಳಲ್ಲಿ ಓಡಾಡುವ ಬೈಕ್, ಸ್ಕೂಟರ್, ಮುಂತಾದ ದ್ವಿಚಕ್ರ ವಾಹನಗಳ ಪ್ರಮಾಣ ಶೇ.70 ಕ್ಕೆ ಮುಟ್ಟಿದೆ. ಅವನ್ನು ಓಡಿಸುವುದೆಂದರೆ ಸರ್ಕಸ್ ಮಾಡಿದಷ್ಟೇ ಕಷ್ಟ ಕರ. ಆಯತಪ್ಪಿದರೆ ಮೂಳೆಮುರಿತ. ಮತ್ತೂ ಎಡವಟ್ಟಾದರೆ ಪ್ರಾಣಕ್ಕೆ ಕುತ್ತು. ಜವರಾಯನಿಗೆ ವಾಹನ ಚಾಲನೆ ಮಾಡುವವರು, ಹಿಂಬಂದಿ ಸವಾರರೂ, ಎಂದು ಬೇಧಭಾವವಿಲ್ಲ!!. ‘ನಿಮ್ಹಾನ್ಸ್’ ಅಧ್ಯಯನದ ಪ್ರಕಾರ,  ದ್ವಿ ಚಕ್ರವಾಹನ ಅಪಘಾತದಲ್ಲಿ ದುರ್ಮರಣಕ್ಕೀಡಾದ 116 ಮಂದಿಯಲ್ಲಿ 33 ಮಂದಿ ಹಿಂಬದಿ ಸವಾರರೆ ಆಗಿದ್ದಾರಂತೆ. ಹೆಲ್ಮೆಟ್ ಧರಿಸುವುದು ಮೂಲಭೂತವಾದ ಒಂದು ಸುರಕ್ಷ ಕ್ರಮ ನಿಜ  ಅಪಘಾತದಿಂದ ತಲೆಗೆ ಆಗಬಹುದಾದ ಪೆಟ್ಟಿನ ತೀವೃತೆಯನ್ನು ಹೆಲ್ಮೆಟ್ ತಗ್ಗಿಸಬಲ್ಲದು. ಇದೀಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಲ್ಲಿ ರಾಜ್ಯ ಸರ್ಕಾರದ ಈ ಮೇಲಿನ ಸಮರ್ಥನೆಯಂತೂ ಇದ್ದೆ ಇದೆ. ಆದರೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಸಾಲದು. ಇದೇ ನಿಟ್ಟಿನಲ್ಲಿ ದ್ವಿಚಕ್ರವಾಹನರ ಜೀವರಕ್ಷಣೆಗೆ ಬೇರೇನೂ ಬೇಕಿಲ್ಲ ಎಂದು ಆಳುವ ಮಂದಿ ಯೋಚಿಸುತ್ತಿರುವುದು ತಪ್ಪು. ಇಂದು ದ್ವಿಚಕ್ರವಾಹನಗಳ ಅಪಘಾvಗಳಿಗೆ ರಸ್ತೆಯ ಗುಂಡಿಗಳೇ ಕಾರಣವಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಅಪಾರ ಹಣ ವೆಚ್ಚವಾಗುತ್ತಿದ್ದರೂ ಪದೇ ಪದೇ ಇಂತಹ ಗುಂಡಿಗಳು ಉದ್ಭವವಾಗಲೂ ಏನು ಕಾರಣ ಎನ್ನುವುದೇ ತಿಳಿಯದಾಗಿರುವುದು ವಿಪರ್ಯಾಸವೇ ಸರಿ.

ಕೊನೆಯ ಮಾತು;
ನಾವು ನಿಮ್ಮ ತತ್ವಕ್ಕೆ ಬದ್ದರಾಗುತ್ತೇವೆ. ಆದರೆ ಹೊಸ ಯೋಜನೆಗೆ ಅಡಿ ಇಡುವ ಮೊದಲು ಈ ಕೆಳಗಿನವುಗಳ ಬಗ್ಗೆ ಒಂದಿಷ್ಟು ಗಮನಹರಿಸಿ ಮಾನ್ಯ ಮುಖ್ಯಮಂತ್ರಿಗಳೇ...
*ನಗರ ಸ್ಥಳೀಯ ಸಂಸ್ಥೆಗಳಿಗೆ ಗಂಭೀರ ವಾರ್ನಿಂಗ್ ನೀಡಿ ರಸ್ತೆ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ.
*ಪಾದಚಾರಿ ಮಾರ್ಗ ಹಾಗೂ ರಸ್ತೆ ನಡುವೆ ನಿಗಧಿತ ವ್ಯತ್ಯಾಸ ರೂಪಿಸಿ
*ದುರಸ್ತಿ ಎನ್ನುವ ದಂಧೆ ತಡೆಯಿರಿ
*ಸರ್ಕಾರದ ನೀತಿ ನಿಯಮಗಳಲ್ಲಿ ಪಾರದರ್ಶಕತೆ ರೂಪಿಸಿ
*ನಿಯಮ ಅನುಷ್ಠಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ
* ಕಾಟಾಚಾರದ ಹೆಲ್ಮೆಟ್ ಧರಿಸುವುದು, ಅತೀ ವೇಗ, ಮಧ್ಯಸೇವಿಸಿ ವಾಹನ ಓಡಿಸುವುದು ಇತ್ಯಾದಿಗಳ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಿ.
ಮಾಡ್ತೀರಲ್ವಾ.../ ಡೌಟ್ ಇದೆ ನನಗೆ... ಆದರೂ ಚಿಂತೆಯಿಲ್ಲ, ಇದೇ ರೀತಿ ಬರವಣಿಗೆಯಲ್ಲೇ ಆಗಾಗ ಎಬ್ಬಿಸುತ್ತಿರುತ್ತೇನೆ...