Friday 9 December 2016

ಹನಿಯೊಂದು ಜಾರಿತು...


ಸಾರ್ಥಕವಾಯ್ತು...
ಒಂದೇ ವೇದಿಕೆಯಲ್ಲಿ ಮೂರು ವಿಶೇಷಗಳಿತ್ತು... ಒಂದು, ನನ್ನ ಕುಂದಾಪ್ರ ಕನ್ನಡ ಭಾಷೆಯ ‘ಗಂಡ್ ಹಡಿ ಗಂಡ್’                                                                                        ಆಲ್ಭಮ್ ಹಾಡುಗಳ ಧ್ವನಿಸುರುಳಿ ಬಿಡುಗಡೆ. ಇನ್ನೊಂದು ಅದೇ ದಿನ ನನ್ನ ಹುಟ್ಟು ಹಬ್ಬ. ಮತ್ತೊಂದು ನನಗೆ ಜನ್ಮವಿತ್ತ ಅಪ್ಪ ಅಮ್ಮಂದಿರನ್ನೂ ಬಹುಜನರ ಮಧ್ಯದಲ್ಲಿ ಸತ್ಕರಿಸಿ, ಸನ್ಮಾನಿಸಬೇಕೆನ್ನುವ ಆಸೆಯೂ ಒಂದೇ ವೇದಿಕೆಯಲ್ಲಿ ಫಲಪ್ರದ. ಇವೆಲ್ಲವೂ ನನ್ನಲ್ಲಿ ಮನಸೊಳಗೆ ಸಾರ್ಥಕತೆಯ ಮಿಡಿತ ಮೇಳೈಸಿತ್ತು... ಎಲ್ಲದಕ್ಕಿಂತ ಹೆಚ್ಚಾಗಿ ಕಾಡಿದ್ದು, ತಂದೆ ತಾಯಿಯರಿಗೆ ಸಲ್ಲಿದ ವಿಶೇಷ ಗೌರವ. ಆ ಕ್ಷಣ ಸವಿಯಲು ನನಗೆ 25 ವರ್ಷ ಬೇಕಾಯಿತು. 25 ವರ್ಷ ಅದಕ್ಕಾಗಿ ಕಾದೆ ಅನ್ನಿಸಿತು. ಆ ಹೊತ್ತು ನನ್ನಲ್ಲಿ ಮೂಡಿದ್ದು, ಮೂಡಿಸಿದ್ದು ಶೂನ್ಯಕ್ಕೆ ಮಿಡಿದ ಕಣ್ಣ ಹನಿಯೊಂದು ಮಾತ್ರ.

 ಬಹುಶಃ ನನ್ನೊಳಗೆ ನನಗೆ ಗೊತ್ತಿದ್ದದ್ದು ನನ್ನ ಇಷ್ಟವನ್ನು ಬೆನ್ನತ್ತಿ ಹೋಗಿ, ಖುಷಿ ಕಾಣುವ ನಲಿವು ಮಾತ್ರ.  ಅಂದೆಲ್ಲ ನಮ್ಮೂರ ಹಳ್ಳಿಯಲ್ಲಿ ಯಾವುದೋ ಗೌಜಿನ ಆಕ್ರೇಸ್ಟ್ರಾವನ್ನೋ, ಮನೆ ಮನೆಯ ಅಂಗಳದಲ್ಲಿ ಹರಕೆಯಾಟವೆಂಬಂತೆ ಆಡುತ್ತಿದ್ದ ಯಕ್ಷಗಾನವನ್ನೋ, ಕೋಲ ಕುಣಿತವನ್ನೋ, ದೂರದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ ಕುಣಿತವನ್ನೋ, ನೋಡಿ; ಮನೆಯಲ್ಲಿದ್ದ ಹಳೆ ಕಾಲದ ಫಿಲಿಪ್ಸ್ ರೇಡಿಯೋವನ್ನೋ ಕೇಳಿ, ಅದರಲ್ಲಿ ನಾದಿಸುತ್ತಿದ್ದ ಹಾಡು ಹಸೆಯಿಂದ ಪ್ರೇರೆಪಿತನಾಗಿ, ನಾನು ಕೂಡ ಯಾವುದಾದರೊಂದು ಕಲೆಯಲ್ಲಿ ತೊಡಗಿಕೊಳ್ಳಬೇಕಲ್ಲ ಎನ್ನುವ ಹುಚ್ಚುತನದಲ್ಲಿ ಅಲೆಯುತ್ತಿದ್ದದ್ದು ಇಂದು ಕಾರ್ಯಫಲವಾಯಿತೇನೋ ಅನಿಸುತ್ತಿದೆ. 

ನಮ್ಮೂರು ಪುಟ್ಟ ಹಳ್ಳಿಯಾದ್ದರಿಂದ ಅಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ನಿಂತಿದ್ದರೂ, ಶಾಲಾ ಕಾಲೇಜುಗಳ ಓದಿಗೆ ಅಡ್ಡಿಯಿರಲಿಲ್ಲ. ಮನೆಯ ಪ್ರತಿ ಮಕ್ಕಳು ಶಾಲೆಗಳಿಗೆ ಹೋಗಿ ವಿದ್ಯಾರ್ಜನೆ ಮಾಡುವುದು ಕಡ್ಡಾಯವೆಂಬಂತೆ ಎಲ್ಲರ ಮನೆಯಲ್ಲೂ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು ಅದಕ್ಕಾಗಿ ಇಂದಿಗೂ ಅಲ್ಲಿನ ಎಲ್ಲಾ ಮಕ್ಕಳು ವಿದ್ಯಾವಂತರೇ ಆಗಿದ್ದಾರೆ. ಆ ಶಾಲೆಯ ದಿನದಲ್ಲಿ ಯಾವುದೋ ದಿನಾಚರಣೆಗೋ, ಇನ್ಯಾವುದೋ ಜಯಂತಿಗೋ ಒಮ್ಮೊಮ್ಮೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದದ್ದೂ ಅಲ್ಲೆಲ್ಲ ನನ್ನ ಉಪಸ್ಥಿತಿ ಬಹುಮುಖ್ಯವಾಗಿದ್ದದ್ದೂ, ಆ ದಿನಗಳಲ್ಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು ಅದೃಷ್ಟ ದೊರಕಿದ್ದದ್ದು ಹೀಗೆ ಎಲ್ಲವೂ ಕೂಡ ಇಂದು ಋಣಿ ಹೇಳುವ ಕಾಯಕ ಒದಗಿಸಿವೆ ಎಂದರೆ ತಪ್ಪಿಲ್ಲ.

ಅಂದು ರೇಡಿಯೋದಲ್ಲಿ ಬರುತ್ತಿದ್ದ ಚಲನಚಿತ್ರಗೀತೆ, ಭಾವಗೀತೆ, ಜಾನಪದಗೀತೆ ಮತ್ತು ಭಕ್ತಿಗೀತೆಯ ಹಾಡುಗಳನ್ನು ಕೇಳಿಸಿಕೊಂಡು, ಅವುಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡು, ಅದರಲ್ಲೇ ತಲ್ಲೀನತೆ ಮೆರೆದು, ಹಾಡುಗಳನ್ನು ಗುನುಗುತ್ತಾ ಗುನುಗುತ್ತಾ ನನ್ನ ಬಾಹ್ಯ ಪ್ರಪಂಚವನ್ನೇ ಮರೆಯುತ್ತಿದ್ದೆ. ಆ ಖುಷಿ, ಆ ನೆಮ್ಮದಿಯ ಕ್ಷಣ, ಆ ಸುಖ ಇಂದು ಇನ್ಯಾವುದರಲ್ಲೋ ಇದೆ ಅಂತ ನನಗನಿಸುವುದೇ ಇಲ್ಲ.
ಆ ಸಮಯ ಗುನುಗುತ್ತಿದ್ದ ಪ್ರತಿ ಹಾಡುಗಳು, ನಾನು ಒಬ್ಬ ಹಾಡುಗಾರನಾಗಬೇಕು, ಕೇಳಬೇಕು, ಹಾಡುಗಳನ್ನು ಕಲಿಯಬೇಕೆನ್ನುವ ಆಸೆಗಳನ್ನು ಮೊಳಕೆಯೊಡಿಸಿದ್ದವು. ಆ  ಮನಸ್ಸಿನ ಹಠ ನನಗರಿವಿಲ್ಲದೇ ನಾನೇ ಹಾಡುಗಳನ್ನು ಬರೆಯುವ ಕಾಯಕವನ್ನು ನನ್ನೊಳಗೆ ಕಲಿಸಿದ್ದವು. ದಿನದಿಂದ ದಿನಕ್ಕೆ ಎಲ್ಲಿಯೇ ಕೂರಲಿ, ಯಾವ ಸ್ವರವೇ ಕೇಳಲಿ ಅದಕ್ಕೊಂದು ಸ್ವರಸೇರಿಸುವ ಹುಚ್ಚು ಅತಿಯಾಗತೊಡಗಿದ್ದÀವು. ಆ ಕಾಡು ಮೇಡುಗಳ ಮಧ್ಯದಲ್ಲಿರುವ ಪ್ರತಿ ಗಿಡ ಮರಕ್ಕೂ ಅಂದಿನ ನನ್ನ ಹಾಡು ಕೇಳುತಿತ್ತೇ ವಿನಃ ಹೊರಗೆಲ್ಲೂ ಬಿದ್ದಿರಲಿಲ್ಲ.

ಪ್ರತಿದಿನದ ನನ್ನೊಳಗಿನ ಹಾಡು, ಎಲ್ಲಾದರು ದೂರ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅಲ್ಲಿಗೆ ಓಡುತ್ತಿದ್ದ ನನ್ನ ಪರಿ ಇತ್ಯಾದಿಗಳೆಲ್ಲವೂ ಒಂದಿಷ್ಟು ಉತ್ಸಾಹ ತುಂಬಿ ನಿನ್ನಿಂದಲೂ ಸಾಧ್ಯ ನಡೆ ಮುಂದೆ ಎಂದು  ಸಣ್ಣಪುಟ್ಟ ವೇದಿಕೆಯ ಅವಕಾಶಗಳನ್ನು ನೀಡಿದ್ದು, ಸದ್ಭಳಕೆ ಎಂಬಂತೆ ನನಗೆ ವರಧಾನವಾಗಿತ್ತು.

‘ನಾ ಏನಿತು ಜೀವರುಗಳಿಗೆ ಋಣಿಯೋ’ ... 
ನನ್ನ ಹಾಡು, ನನ್ನೂರ ಭಾಷೆಯ ಹಾಡು ಲೋಕಾರ್ಪಣೆಗೊಂಡ ಸಮಯವದು. ಆ ಘಳಿಗೆ ಮುಂದೊಂದು ದಿನ ನನ್ನ ಬದುಕಲ್ಲಿ ಬರುತ್ತದೆ ಎಂದು ಏಣಿಕೆಯೇ ಇರಲಿಲ್ಲ. ಆ ದಿನ ಬಿಡುಗಡೆಯಾಗಿದ್ದು ನನ್ನ ಎರಡು ಆಲ್ಭಮ್ ಹಾಡುಗಳು. ಆ ಹಾಡುಗಳಿಗಾಗಿ ಸತತ 365 ದಿನಗಳು ಅಂದರೆ ಒಂದು ವರ್ಷ, ಅಲೆದಾಡದ ಸ್ಥಳಗಳಿಲ್ಲ, ಮಾಡದ ಕೆಲಸಗಳಿಲ್ಲ. ನೀವು ನಂಬುತ್ತೀರೋ ಬಿಡುತ್ತೀರೋ, ಕೇವಲ ಒಂದೇ ಒಂದು ಸಾಂಗನ್ನು ಮೂರು ಮೂರು ಸಲ ರೆಕಾರ್ಡಿಂಗ್ ಮಾಡಿಸಿದ್ದೆ. ಮೊದಲ ಎರಡು ಸಲ ರೆಕಾರ್ಡಿಂಗ್ ಮಾಡಿಸಿದಾಗಲೂ ಇನ್ನೂ ಏನೋ ಬೇಕು ಎನ್ನುವ ಆಸೆಯಿತ್ತೇ ಹೊರತು ಮನಸಿಗೆ ಖುಷಿಯಾಗಿರಲಿಲ್ಲ. ಮತ್ತದೇ ಪ್ರಯತ್ನ. ಮ್ಯೂಸಿಕ್ ಡೈರೆಕ್ಟರ್ ಹತ್ತಿರ ಹೋಗುವುದು, ಮನೆಗೆ ಬರುವುದು... ಎಲ್ಲಾ ಸೆಟ್ ಆಯ್ತು! ನೋ ಪ್ರಾಬ್ಲಂ!!, ಅನ್ನೋವಾಗ ಫೈನಾಶ್ಯೀಯಲಿ ಪ್ರಾಬ್ಲಂ ಆಗೋದು!.. ಹೀಗೆ ಕೇವಲ ಎರಡೇ ಎರಡು ಸಾಂಗ್‍ಗೆ ಬರೋಬ್ಬರಿ ಒಂದು ವರ್ಷ, ಕಾಲದ ಕಾಲು ಚಲಿಸಿತ್ತು. ಅಂತೂ ಇಂತೂ ಸತತ ಪ್ರಯತ್ನದ ನಡುವೆ ಅದ್ಧೂರಿ ಕಾರ್ಯಕ್ರಮದಲ್ಲಿ ಆ ಹಾಡುಗಳು ಬಿಡುಗಡೆಯಾಗುವ ಭಾಗ್ಯವೂ ದೊರಕಿತ್ತು..

ಬಹುದಿನದ ಕನಸನ್ನು ಹೇಗಾದರೂ ಮಾಡಿ ನೆರವೇರಿಸಿಕೊಳ್ಳಲೇಬೇಕೆನ್ನುವ ಆಸೆಯಿಂದ ಇಡೀ ಕಾರ್ಯಕ್ರಮವನ್ನು ಒಬ್ಬನೇ ವಹಿಸಿಕೊಂಡು ಮಾಡಿದ್ದರಿಂದ ಒಂದು ಕಡೆ ಕ್ಷಣಕ್ಷಣಕ್ಕೂ ಕಾರ್ಯಕ್ರಮ ಚೆನ್ನಾಗಿ ಬರಬೇಕು ಎನ್ನುವ ಮನದ ಒತ್ತಡ, ಇನ್ನೊಂದು ಕಡೆ ಅನೇಕರಿಗೆ ನನ್ನ ಕೊಡುಗೆ ಮುಟ್ಟುತ್ತಿದೆಯಲ್ಲಾ ಎನ್ನುವ ಸಂಭ್ರಮ. ಸಭೆ ಪ್ರಾರಂಭವಾಗಿ ಪ್ರಾಸ್ತಾವಿಕ ಮಾತಿಗೆ ಇಳಿದಾಗ, ನಾನು ಈ ಒಂದು ದಿನಕ್ಕಾಗಿ ಹಿಂದೆ ಪಟ್ಟ ಕಷ್ಟ, ಹಾಡಿನ ರಸದ ಹಿಂದಿರುವ ಕಹಿ ಸತ್ಯವನ್ನೆಲ್ಲಾ ಬಿಚ್ಚಿಡುವ ಮನವಿದ್ದರೂ, ಯಾಕೋ ಮನಸ್ಸು ಮೂಕವಾಗಿ ಪದಗಳೇ ಹೊರಡಲಿಲ್ಲ. ನನಗೆ ಬೆನ್ನ ಹಿಂದೆ ಇದ್ದು ಸಹಕರಿಸಿದ ಅನೇಕರಿಗೆ ಅಭಿನಂದಿಸಿ, ಕೊನೆಯದಾಗಿ ನನ್ನ ಹೆತ್ತವರಿಗೆ ಆ ಹಾಡುಗಳನ್ನು ಅರ್ಪಿಸಬೇಕೆನ್ನುವ ಆಸೆಯಿಂದ ನನ್ನ ಅಪ್ಪ ಅಮ್ಮನಿಗೆ ವಿಶೇಷ ಸನ್ಮಾನ ಮಾಡಿಸಬೇಕು ಎಂದು ಅತಿಥಿಯಾಗಿ ಆಗಮಿಸಿದ ಡಾ.ಶ್ರೀ ಶ್ರೀ ರಾಮಚಂದ್ರ ಗುರೂಜಿಯವರ ಬಳಿ ಕೇಳಿಕೊಂಡಾಗ ತಡೆÀಯಲಾರದ ಕಂಪನ ಮಮತೆಯಿಂದ ಮುದ್ದಿಸಿತು. ಬಹುಶಃ ನನ್ನ ಜೀವನದಲ್ಲಿ ನೀನೇನು ಮಹತ್ತರವಾದ ಕಾರ್ಯವನ್ನು ಮಾಡಿರುವೆ ಎಂದು ಕೇಳಿದರೆ ನನಗೆ ಇದಕ್ಕಿಂತ ದೊಡ್ಡ ಉತ್ತರ ಕೊಡಲು ಬೇರೇನೂ ಇಲ್ಲ.


ಅದು ನನ್ನ ಜೀವನದ ಅತ್ಯಂತ ಅಮೂಲ್ಯವಾದ ಕ್ಷಣ. ಇಡೀ ಸಭೆಗೆ ಸಭೆಯೇ ಎದ್ದು ನಿಂತಿತ್ತು. ಮನಸ್ಸಿನೊಳಗಿರುವ ಭಾವಾಂತರಂಗದ ಮನಸು ಎದ್ದು ಕುಳಿತಿತ್ತು. ಅಪ್ಪ ಅಮ್ಮ ಎನ್ನುವ ಸೋಜಿಗ ನವಿರಾದ ಪುಳಕವಿಟ್ಟಿತ್ತು.
 ಆಗಲಿಲ್ಲ... ನನ್ನ ಬಳಿ ಆ ಪ್ರೀತಿಯನ್ನು ಕಂಟ್ರೋಲ್ ಮಾಡಿಕೊಳ್ಳೋಕೆ ಆಗಲಿಲ್ಲ... ಕಣ್ಣೊಳಗಿರುವ ಹನಿಯೊಂದು ಕಟ್ಟೆಯೊಡೆದು ಕೆನ್ನೆಯ ಮೇಲೆ ದಾರಿ ಅರಸಿತು.  
 ಕಣ್ಣಾಲಿಗಳು ತೇವಗೊಂಡವು... ಇಂದಿಗೂ ಆ ಕ್ಷಣವನ್ನು ಎಣಿಸಿಕೊಳ್ಳುತ್ತಲೇ ಇರುವೆ. ಬಹುಶಃ ಅಲ್ಲಿ ನೆರೆದಿರುವ ಎಲ್ಲರಿಗೂ ಸೆಂಟಿಮೆಂಟ್ ಟಂಚ್ ಆಗಿ ಅವರೂ ಅತ್ತಿರಬಹುದು. ನಾ ಕಂಡ ಕನಸು ಸಾಕಾರವಾಯಿತು. ಹಾಡುಗಳು ಅಷ್ಟೇ ಜಬರ್‍ದಸ್ತ್ ಹಿಟ್ ಎನ್ನುವ ಮಾತುಗಳು ಕೇಳಿಬಂದಿವೆ. ನಲಿವಿಗೆ ಬೇರೇನೂ ಬೇಕು ಇಷ್ಟೇ ಸಾಕಲ್ಲವಾ ನೀವೇ ಹೇಳಿ!??

ಅಂದು ಮರದಡಿಯಲ್ಲೋ, ಗದ್ದೆ ಕಡೆಯಲ್ಲೋ ಹಾಡುಗಳನ್ನು ಕಟ್ಟಿ, ಸಣ್ಣ ಟೇಪ್‍ರೆಕಾರ್ಡ್‍ನ್ನ ತಟ್ಟಿ ಹಾಡುತ್ತಿದ್ದ, ಕೇಳುತ್ತಿದ್ದ ಪುಟ್ಟ ಹುಡುಗನ ಎದೆಯಾಂತರಾಳದಲ್ಲಿ ಅದೇನೋ ಖುಷಿಕೊಡುವ ಸಾಧನೆ ಏರಿದ ಖುಷಿಯಿದೆ ಅದರಂತೆ ಬಗಲಲ್ಲಿ ಮುಂದೆಯೂ ಒಳ್ಳೊಳ್ಳೆ ಕಾರ್ಯ ಮಾಡುವ, ಗುರಿಯನ್ನು ಬೆನ್ನತ್ತುವ ಬಾಕಿ ಮೊತ್ತಗಳಿವೆ.. .ನಿಮ್ಮೆಲ್ಲರ ಸಹಕಾರ, ಅಭಿಮಾನದ ಋಣವಿದೆ... ಎಲ್ಲರಿಗೂ ಇವನ ವಂದನೆ ಅಭಿನಂದನೆ... ಕಾರ್ಯಕ್ರಮ ಮುಗಿಸಿ ಹೊರಬಂದ ಮೇಲೆ ಸಾಧನೆಯ ಹಿಂದೆ ಕಷ್ಟವಿರುತ್ತದೆ ಮತ್ತು ಕಷ್ಟದ ಮುಂದೆ ಸುಖದ ಸವಿಯೂ ಇರುತ್ತದೆ ಎನ್ನುವುದು ಸಾಭೀತಾಯಿತು ಎನ್ನುವ ಸತ್ಯವನ್ನು ಕಂಡು ನನಗೆ ನಾನೇ ಅಪ್ಪಿಕೊಂಡೆ...

No comments:

Post a Comment