Tuesday, 14 June 2016

ಮಳೆಗೆ ಶುರು ಬಾಲ್ಯದ ನೆನಪ ತೇರುಬರಡಾಗಿ ಬೆಂಡಾದ ಭುವಿಗೆ ತಂಪಾಗೋ ಕಾಲ ಸನ್ನಿಹಿತವಿನ್ನೂ..
ಶುರುವಾಗುತ್ತದೆ ಎಲ್ಲೆಲ್ಲೂ ಹನಿಮಳೆಯ ಪುಳಕವಿನ್ನೂ...

ಜಯಂತ್ ಕಾಯ್ಕಿಣಿ ಹೇಳುವಂತೆ "ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು"..
ನಿಜ.! ಎಂಥಾ ಸಾಲುಗಳಲ್ವಾ!, ಇಷ್ಟುದಿನ ಮೇಲೆ ತೇಲಾಡುತ್ತಿದ್ದ ಮೋಡಗಳು, ಇಳೆಗೆ ಹನಿಯಾಗಿ ಮುಗಿಲನ್ನು ತರುವ ಸನ್ನಿಹಿತ ಬರುತ್ತಿದೆ.ಮೋಡಗಳೆಲ್ಲಾ ಮುಗಿಲಾಗುವ ಕಾತರಿಕೆಯಲ್ಲಿ ತಾ ಮುಂದು ನಾ ಮುಂದು ಎಂದು ಬಂದು ಒಬ್ಬೋಬ್ಬರಿಗೆ ಇಷ್ಟ, ಇನ್ನೂ ಕೆಲವರಿಗೆ ಕಷ್ಟವಾಗೋ ಪ್ರಮಯವೂ ಬರುತ್ತಿದೆ..ಆದ್ರೂ ಮಳೆಕೊಡುವ ನೆನಪು, ಖುಷಿ, ಬಹುಹಿಂದಿನ ಪುನರ್ಮಿಲನದ ಭಾವನೆ, ಪುಳಕ, ಇನ್ಯಾವುದು ಕೊಡಲಾರವು ಅಲ್ವಾ..ಅದೇಷ್ಟೋ ನೋವು-ನಲಿವು, ದುಃಖ-ದುಮ್ಮಾನಗಳು ಜೊತೆ ಇದ್ದರೂ ಒಮ್ಮೆ ಹನಿಮಳೆಯಲಿ ಕೈಚಾಚಿ ಭಾವಪೂರ್ಣವಾಗಿ ನೆನೆದರೆ ಅದರ ಹಿತವೆ ಬೇರೆ ಮುಖ್ಯವಾಗಿ ಅದು ನೀಡೊ ಬಾಲ್ಯ ಜೀವನದ ಆ ಸುಖವೆ ಬೇರೆ ಅಲ್ವಾ!.

ಆಗೆಲ್ಲಾ ನಮ್ಮ ಚಿಕ್ಕವಯಸ್ಸು, ಹರಿದಕೊಡೆಯ ಜೊತೆ, ತುಂಬು ಭಾರದ ಚೀಲಾ ಬಗುಲಲ್ಲಿ..ಜೊತೆಗೆ ಮಧ್ಯಾಹ್ನದ ತಂಪು ಊಟದ ಬುತ್ತಿ(ಇಗಿನ ಮಕ್ಕಳದ್ದು ಬಿಸಿಯೂಟ),ಶಾಲೆಯ ಪ್ರಾರಂಭದ ದಿನಗಳೇ ಮಳೆಯ ಚಳಿ..ರಸ್ತೆಯ ಕೆಂಪುಮಣ್ಣಿನ ಪಾಕದ ಮೇಲೆ ಸವಾರಿ ಅಲ್ಲಲ್ಲಿ ಹರಿಯೋ ಸಣ್ಣ ಜರಿಗಳಲ್ಲಿ ಮೀನು ಹಿಡಿದುಬಿಡೊ ಆಟ..ಆಗ ಬರುತಿದ್ದ ಪ್ಯಾರಗಾನ್ ಚಪ್ಪಲಿ.,, ಇದೆ ಮೊದಲಾದವುಗಳ ಸಂಘಮ..

ಸ್ವಲ್ಪ ದುಡ್ಡಿರೋರು ತಮ್ಮ ಮಕ್ಕಳಿಗೆ ಹೊಸ ಕೊಡೆಯನ್ನ ತೆಗೆಸಿಕೊಟ್ಟರೆ, ನಮ್ಮ ಬಡವರ ಪಾಡು ನಡೆದಿದ್ದೆ ಹರಿದ ಹಿರಿದಾದ ಉದ್ದನೆಯ ಹಿಡಿಯ ನಡುವೆ..ಆ ಸುಖವೆ ಒಂಥರ ಬೇರೆ;ನಡುದಾರಿಯಲ್ಲಿ ಗಾಳಿಮಳೆಗೆ ಸಿಕ್ಕ ಛತ್ರಿ ಮೇಲಕ್ಕೆ ಹಾರಿದ್ದು, ಒಂದೇ ಕೊಡೆಯ ನಡುವೆಅಡಿ ನಾಲ್ಕು ಜನರು ಆಶ್ರಯ ಪಡೆದು ಮೈ ಒದ್ದೆಯೊಂದಿಗೆ ಮನೆ ಸೇರಿದ್ದು, ಅನ್ಯಾಯದ ಮರೆಯುವಿಕೆಯ ನಡುವೆ ಶಾಲೆಯಲ್ಲೆ ಛತ್ರಿ ಮರೆತು ಗೆಳೆಯನ ಜೊತೆ ಆಶ್ರಯ ಕೇಳಿದ್ದು, ರಸ್ತೆಯ ಹೊಂಡದ ನೀರನ್ನ ಕಾಲಲ್ಲಿ ಚೊಗೆದು ಖುಷಿಪಟ್ಟಿದ್ದು, ತೊರೆಗಳಲ್ಲಿ ಮೀನು ಹಿಡಿಯುತ್ತಾ ಕುಳಿತು ಸಮಯ ಮರೆತು ಮಾಸ್ಟರ್ ಹತ್ತಿರ ಭೈಸಿಕೊಂಡಿದ್ದು, ಹೊಸ ಕೊಡೆಬೇಕು ಅಂತಾ ಅಮ್ಮನ ಹತ್ತಿರ ಗೋಗೆರೆದಿದ್ದು, ಲೋ ಮಳೆರಾಯ ಇವತ್ತು ಇಡೀ ಬಾ ಶಾಲೆಗೆ ರಜೆ ಕೊಡುತ್ತಾರೆ ಅಂತ ಮಳೆರಾಯನಿಗೆ ಭುವಿಯಿಂದಲೇ ಕರೆಕೊಟ್ಟಿದ್ದು.., ಹೀಗೆ ಹಲವು ಅಂಶಗಳು ಸವಿಮಳೆಯ ಮೆಮೋರಿಯಲ್ ಮೆಮೋರೇಬಲ್ ಆಗೆ ಕುಳಿತು ನಮ್ಮೇದೆಯಲ್ಲಿ ಕಚಗುಳಿಯ ಪುಳಕವೆಬ್ಬಿಸಿದರೆ ಆಶ್ಚರ್ಯ ಪಡಬೇಕಿಲ್ಲಾ ಅಲ್ವಾ .ನಿಮಗೂ ಇಗ ನಿಮ್ಮ ಹಳೆಯ ಮೆಮೋರೆಬಲ್ ನೆನಪಿನ ಸವಿ ಕಾಡುತ್ತಾ ಇದ್ಯೆನೋ ಅಲ್ವ..

ನೀವು ಒಮ್ಮೆ ಸಖತ್ತಾಗಿರೋ ಅನುಭವ ಪಡಿಬೇಕು ಅಂದ್ರೆ ಹನಿ ಮಳೆಯಲ್ಲಿ ಹಾಯಾಗಿ ಬಾನಿಗೆ ಮುಖಚಾಚಿ , ಕಣ್ಮುಚ್ಚಿ ನೆನೆದು ಬಾಲ್ಯದ ಸವಿ ನೆನಪನ್ನ ಸವಿಯಿರಿ..
ಹಾ..,! ಶೀತ ಜ್ವರ ಬರೋತರ ನೆನಿಬೇಡಿ ಅಮೇಲೆ ಕಷ್ಟವಾದೀತು.. ನಿಮಗೆ ಎನನಿಸಿತ್ತು ಮಳೆಯಲ್ಲಿ ನೆನೆದಾದ ಮೇಲೆ ನನಗೂ ತಿಳಿಸಿ..


Monday, 13 June 2016

ಕವಿ ಕನವರಿಕೆ - ಪ್ರೇಮಾಯಣ...


-ಸ್ಯಾಂಡಿ...

ಕಾತರಿಕೆ ಅವಳ ಮನದಲ್ಲಿ ಹನಿಯಂತೆ ಜಿನುಗುತ್ತಿತ್ತು. ಸುಂದರತೆಯ ವೈಭೋಗವು ಹುಟ್ಟಿನಿಂದಲೇ ಬಳುವಳಿಯಾಗಿ ಅವಳಿಗಪ್ಪಿತ್ತು. ಮುಂಜಾನೆ ಬಿಸಿಚಳಿಯ ಗಾವು ನಡುಕತೆ ಸೃಷ್ಟಿಸುತ್ತಿದ್ದರೂ, ಹೊಸ ಭೇಟಿಗೆ, ಹೊಸ ಕಂಪನತೆಗೆ ಬೇಗನೆ ಎದ್ದು ಅಂದಕ್ಕಿಂತ ಅಂದವಾಗಿ ಸಿಂಗಾರ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಳು ಆಕೆ. ಕಾರಣ ಇಷ್ಟೇ ಅರಿಯದ ಪ್ರೀತಿಯಲ್ಲಿ ಬಿದ್ದಿದ್ದ ಅವಳಿಗೆ ನವಿರಾದ ಪ್ರೇಮಾಂಕುರವಾಗಿದ್ದು ಪಕ್ಕದೂರಿನ ಹುಡುಗನ ಜೊತೆ. ಅವರಿಬ್ಬರ ಪ್ರಥಮ ಭೇಟಿಯ ಚಡಪಡಿಕೆಯೇ ಇವಳ ಈ ದಿನದ ಪಯಣಕ್ಕೆ ಹೊಸ ರೂಪದ ಇಂಪಾಗಿತ್ತು.

ಅದೇನೋ ತಳಮಳ, ಅದೇನೋ ನಾಚಿಕೆ, ಕೆಂಪಾದ ಕೆನ್ನೆತುಂಬೆಲ್ಲಾ ಹೊಸ ಅಪ್ಪುಗೆ ದೊರೆಯುವ ವೈಯಾರ, ನಿಂತಲ್ಲಿ ನಿಲ್ಲಲೂ ಬಿಡದೆ ಮನೆಯಿಂದ ನಡೆ ಹೊರಡುವಂತೆ ಮಾಡಿತ್ತು.

 ಆಗಲೇ ಸೂರ್ಯ ಬೆಟ್ಟಗುಡ್ಡಗಳನ್ನು ಸೀಳಿ ಮೇಲೆ ಬಂದಿದ್ದ. ಮೊದಲೇ ನಿರ್ಧರಿಸಿದ್ದ ಸ್ಥಳದಲ್ಲಿ ಅವನು ಕಾಯುತ್ತಿದ್ದ. ಕೈಯಲ್ಲೊಂದು ಪ್ರೇಮ ಪತ್ರ ಹಿಡಿದಿದ್ದಾನೆ. ಕಣ್ಣಿಂದ ದೂರ ಇರುವ ಅವಳನ್ನು ಕಣ್ಮಚ್ಚಿ ನೆನಸಿಕೊಳ್ಳುತ್ತಿದ್ದಾನೆ. ಇವಳೋ ಭಯಪಡುತ್ತಲೇ ಹತ್ತಿರ ಹೋಗಿದ್ದಾಳೆ. ಸಮಯ ಮಿಂಚು ಗುಡುಗುಗಳು ಒಟ್ಟಿಗೆ ಸೇರುವ ಸನ್ನಿಹಿತ... ಇಬ್ಬರೂ ಬೇವತಿದ್ದಾರೆ!... ತುಟಿ ತೊದಲುತ್ತಿದೆ!..ಗಂಟಲು ಸ್ವರ ಕಟ್ಟಿಸುತ್ತಿದೆ!.. ಸೌಂದರ್ಯವರ್ಧಕ ಕರಗಿ ಇವರ ಮಧ್ಯೆ ನಾನಿರಲ್ಲ!!! ನನ್ನ ಅವಶ್ಯಕತೆ ಇಲ್ಲ!!! ಎಂದು ನಾಚಿ ದೂರಸರಿಯುತ್ತಿದೆ!.. ಮಾತನಾಡಬೇಕೆಂದಿದ್ದ ಪದಗಳೆಲ್ಲ ಮೌನದಲ್ಲಿ ನೀನಾಡು!.. ನೀನಾಡು!.. ಎನ್ನುತ್ತಿವೆ. 

      ಬೀಸೋಗಾಳಿಯು, ಇವರ ಬೆವರ ಹನಿಗೆ ಬಾ ತೊಂದರೆ ಮಾಡಬೇಡ ಎಂದು ಆವಿಯಾಗಿಸುತ್ತಿದೆ!..
ಕೊನೆಗೂ ಹುಡುಗನೇ ನಿವೇದಿಸಿದ್ದಾನೆ... ‘ನನ್ನ ಪ್ರತಿ ಹೆಜ್ಜೆಗೂ ನಿನ್ನ ಗೆಜ್ಜೆಯ ಸದ್ದಿರಬೇಕು, ನಿನ್ನ ಪ್ರತಿ ನೋವಿಗೂ ನನ್ನ ಪ್ರೀತಿಯ ಮದ್ದಿರಬೇಕು’...
   ಮುದ್ದಿನ ಹುಡುಗನ ಮುದ್ದು ಮಾತಿಗೆ ಅವಳು ಸೋತು ಸುಣ್ಣವಾಗಿದ್ದಾಳೆ...ಪೆದ್ದುಮುದ್ದಾದ ಪ್ರೀತಿ ಇಬ್ಬರನ್ನು ಬಾಚಿ ತಬ್ಬಿಕೊಂಡಿದೆ...ಸೂರ್ಯನ ಕಿರಣ ನಾಚಿ ಮೋಡ ಸೇರಿದೆ. ಪ್ರಕ್ರತಿಯ ಕಲರವ ಬೆಚ್ಚಿ ಮೌನವಹಿಸಿದೆ...

ಎದುರು ಮನೆಯ ತಾತ ಸತ್ತೋದರು:..


   
ಇಡೀ ಏರಿಯಾಕ್ಕೆ ಅವರೊಂಥರ ಓಲ್ಡ್...ಸದಾ ಮೌನಿ...ಮೊನ್ನೆ ಸತ್ತೋದರು... ಸರಾಗ ಕನ್ನಡ ಬರದಿದ್ದರೂ ಕರ್ನಾಟಕವೇ ನನ್ನ ಮನೆ ಎಂದು ತಿಳಿದ ತಿಳುವಳಿಕ, ಅಂತಿಮವಾಗಿಯೂ ಇಲ್ಲಿಯೇ ಉಸಿರು ಬಿಟ್ಟು ಹೊರಟು ಹೋದ ಈ ಮಣ್ಣಿನ ಅಭಿಮಾನಿ. 
  
        ಸದಾ ಒಂಟಿಯಾಗಿರುತ್ತಿದ್ದ ಅಜ್ಜನನ್ನು ನಾನು ಸುಮಾರು ದಿನದಿಂದ ನೋಡುತ್ತಲೇ ಇದ್ದೆ. ಒಬ್ಬಳು ಹುಡುಗಿ ಅವರನ್ನು ನೋಡಿಕೊಳ್ಳುತ್ತಿದ್ದಳು. ಬಹುಶಃ ಯಾರೂ ಇಲ್ಲವೇನೋ ಅಂದುಕೊಂಡಿದ್ದೆ. ಒಂದಿನ ವಿಷಯ ತಿಳಿಯಿತು!, ತಾತನಿಗೆ ಇಬ್ಬರು ಮಕ್ಕಳು. ಅವರಿಬ್ಬರು ತಾತನ ಜೊತೆ ಇಲ್ಲ. ಬೆಳೆಸಿ, ಓದಿಸಿ ವಿದೇಶಕ್ಕೆ ತಾತನೇ ಕಳುಹಿಸಿದ್ದರಂತೆ. ಮಕ್ಕಳ ವಾಸ ಯಾವಾಗ ಹೊರದೇಶದಲ್ಲೇ ಫಿಕ್ಸ್ ಆಯ್ತೋ!, ಅಂದಿನಿಂದ ಅವರು ಒಂಥರಾ ತಾತನಿಂದ ಹೊರಗಿದ್ದರು.

ನಾನು ದಿನಾ ಬೆಳಿಗ್ಗೆ ಎದ್ದು ಆಫೀಸ್‍ಗೆ ಹೊರಡೋ ಮುಂಚೆ ಮನೆಯ ಹೊರಗಿನ ಅಂಗಳದಲ್ಲಿ ಕುಳಿತಿರುತ್ತಿದ್ದ ತಾತ ದಿನಾಲೂ ಮುಗುಳ್ನಗೆ ಬೀರುತ್ತಿದ್ದರೇ ವಿನಃ, ಎಂದಿಗೂ ನನ್ನ ಅವರ ನಡುವೆ ಫೇಸ್ ಟು ಫೇಸ್ ಮಾತುಗಾರಿಕೆಯೇ ಆಗಿರಲಿಲ್ಲ.
ನನ್ನದು ಒಂಥರಾ ಮೌನ!.. ಅವರದು ಇನ್ನೊಂದು ಬಗೆಯ ಮೌನ!!. ಮಾತನಾಡಬೇಕು ಅಂದುಕೊಂಡಾಗೆಲ್ಲಾ ಆಫೀಸ್ ಲೇಟಾಗುತ್ತೆ!!, ಎನ್ನುವ ಸಮಯದ ಭಯದಿಂದಲೋ!, ಏನಿರುತ್ತೆ ಮಾತನಾಡಲು ಎನ್ನುವ ಕಾತುರತೆ ಇರದೆಯೋ!, ಮತ್ತೆ ಮಾತಾನಾಡೊಣ ಎನ್ನುವ ಭವಿಷ್ಯದ ಬಂಧದಿಂದಲೋ! ಹಾಗೆ ಬೈಕ್ ಸ್ಟಾರ್ಟ್ ಮಾಡಿ ಅವರೆದುರೇ ದಿನಾಲೂ ಪಯಣಿಸುತ್ತಿದ್ದೆ. ಆದರೆ ಉದ್ದನೆಯ ದಾರಿ ಎಡಕ್ಕೆ ತಿರುಗಿ ನನ್ನ ಬಿಂಬ ಮಾಯವಾಗುªವÀರೆಗೂ ದುರುಗುಟ್ಟಿಕೊಂಡು ಬೆನ್ನನ್ನೇ ನೋಡುತ್ತಿದ್ದ ತಾತ ಎಂದೂ ನನ್ನ ಬೈಕ್ ರೈಡ್ ಬಗ್ಗೆಯಾಗಲಿ, ಟೈಮಿಂಗ್‍ಗಾಗಲಿ, ನಡೆದುಕೊಳ್ಳುತ್ತಿದ್ದ ರೀತಿಗಾಗಲಿ ಎಲ್ಲೂ ಯಾವ ಬೇಸರಿಕೆಯನ್ನೂ ಕಂಡಿರಲಿಲ್ಲ. ಯಾಕೆಂದರೆ ಅವರು ಒಂದಿನವೂ ನನ್ನನ್ನು ಬೇರೊಬ್ಬ ಹುಡುಗ ಎನ್ನುವಂತೆ ನೋಡಿರಲಿಲ್ಲ.

         
   ಅವರೊಂಥರ ಮೌನಿಯಾಗಿದ್ದರು!!. ಉದ್ದ ಮೀಸೆ, ದಪ್ಪ ದೇಹ, ಕಟ್ಟುಮಸ್ತಾದ ತೋಳು ಎಲ್ಲವೂ ಈಗಲೂ ಹಾಗೆ ಮನದ ಗೋಡೆಯಲ್ಲಿ ವ್ಯಕ್ತಿಚಿತ್ರ ಅಚ್ಚೊತ್ತಿದಂತಿದೆ.  ಆದರೆ ಮೊನ್ನೆ ಮೊನ್ನೆ ಇದ್ದ ಅವರೆದುರಾಗುವಿಕೆಯ ಉಪಸ್ಥಿತಿ ಇಂದು ಆ ಅಂಗಳದಲ್ಲಿಲ್ಲ ಅಷ್ಟೆ...

          ಹೊರದೇಶಗಳಲ್ಲಿ ಮಕ್ಕಳಿದ್ದ ಪಕ್ಷಕ್ಕೋ ಅಥವಾ ತನ್ನ ಒಡನಾಟಕ್ಕೆ ಸಾಥ್ ಕೊಡುತ್ತವೇ ಎನ್ನುವ ಆಸೆಗೋ!, ಏನೋ!... ಎರಡು ನಾಯಿಗಳನ್ನು ಮುದ್ದಿನಿಂದ ಸಾಕಿದ್ದರು. ಇದೀಗ ಅವುಗಳು  ಅನಾಥವಾಗಿವೆ. ಇಂದು ನಾ ಪಾರ್ಕಿಂಗ್‍ಗೆ ಬಂದು ಬೈಕ್ ನಿಲ್ಲಿಸುವಾಗ ಅವುಗಳು ಗೊಳೋ ಎಂದು ಅಳುತ್ತಾ ಕೂಗುತ್ತವೆ. ಸಾಂತ್ವಾನ ಹೇಳೋಣ ಅಂದರೆ ಏನೆಂದು ಹೇಳಲಿ... ಬಹುಶಃ ತಾತ ಸತ್ತಿರುವ ವಿಚಾರ ಅವುಗಳಿಗೂ ತಿಳಿಯಿತೋ ಏನೋ...ಎಂದು ಸುಮ್ಮನಾಗುವೆ...ದಿನಾ ಸಂಜೆ ಬೆಳಿಗ್ಗೆ ನನ್ನ ನಾ ಬೈಕ್ ಹತ್ತಿರ ಹೋದಾಗ ಅವು ಮತ್ತೆ ಮತ್ತೆ ಕೂಗುತ್ತಿವೆ. ಬಿಳಿ ಮೈಯ ಟಾಮಿಯಂತೂ ಅಜ್ಜನ ಉಪಸ್ಥಿತಿ ಕಾಣದೆ ಕಂಗೆಟ್ಟಿದಂತಿದೆ!.. 

        ಪಕ್ಕದ ಮನೆಯ ಅಂಕಲ್ ಹೇಳುತ್ತಿದ್ದಾರೆ, ತಾತ ಮೊದಲು ಐದಾರು  ನಾಯಿ, ಹತ್ತಿಪ್ಪತ್ತು ಕೋಳಿಗಳನ್ನು ಸಾಕಿದ್ದರಂತೆ...ಇದೀಗ ಆರೋಗ್ಯ ಸ್ಥಿತಿಯ ಹದಗೆಡುವಿಕೆಯಿಂದಾಗಿ ಅವುಗಳಂಕಿಯನ್ನು ಕಡಿಮೆಗೊಳಿಸಿದ್ದರಂತೆ...ಡೆಹರಾಡೂನ್ ಮೂಲದಿಂದ ಇಲ್ಲಿಗೆ ವಲಸೆ ಬಂದು, ಕನ್ನಡ ಕಲಿತು, ಇಲ್ಲಿಯೇ ಮನೆ ಕಟ್ಟಿ ವಾಸವಾಗಿದ್ದ ಅವರು ಮೊದಲೆಲ್ಲ ದುಡಿದ ಅರ್ಧದಷ್ಟನ್ನು ಪ್ರಾಣಿ ಪಕ್ಷಿಗಳಿಗೆ ಖರ್ಚುಮಾಡುತ್ತಿದ್ದರಂತೆ. ‘ಅವರು ಯಾಕೆ ಸೈಲೆಂಟ್ ಆಗಿ ಇರುತ್ತಿದ್ದರು’!? ಎನ್ನುವ ನನ್ನ ಪ್ರಶ್ನೆಗೆ, ಮದುವೆಯಾಗಿ ಎರಡು ಮಕ್ಕಳು ಹುಟ್ಟಿ, ಸ್ವಲ್ಪ ಸಮಯದಲ್ಲೇ ಹೆಂಡತಿ ಅನಾರೋಗ್ಯದಿಂದ ಸತ್ತಿದ್ದು ತಾತನ ಸೈಲೆಂಟ್ ನೆಸ್‍ಗೆ ಕಾರಣವಿರಬಹುದೆನೋ! ಎನ್ನುತ್ತಿದ್ದಾರೆ ಏರಿಯಾ ಮಂದಿ.
ಮಕ್ಕಳ ಜೀವನವನ್ನು ಚೆನ್ನಾಗಿರುವಂತೆ ನೋಡಿಕೊಂಡಿದ್ದ ತಾತ ಮನಸ್ಸು ಮಾಡಿದ್ದರೆ ಇನ್ನೊಂದು ಮದುವೆಯಾಗಬಹುದಿತ್ತು ಆದರೆ ಮಕ್ಕಳಿಗಾಗಿ ಮದುವೆಯನ್ನೆ ಮಾಡಿಕೊಳ್ಳಲಿಲ್ಲ ಎಂಬುದು ಅವರ ಒಡನಾಡಿಯೊಬ್ಬರ ಮಾತು.

        ಏನಿದ್ದರೂ ಎಲ್ಲವೂ ಉಸಿರಿರೋವರೆಗೆ ಅನ್ನುವ ಮಾತು ನಿಜ ಅನಿಸುತ್ತದೆ. ಮೊನ್ನೆಯವರೆಗೂ ದಿನಾ ಕಾಣುತ್ತಿದ್ದ ತಾತನ ಖುರ್ಚಿ, ಅಂಗಳ ಇಂದು ಅವರಿಲ್ಲದೇ ಖಾಲಿ ಹೊಡೆಯುತ್ತಿದೆ. ನೆನಪು ಗಿರಕಿಯಂತೆ ಬಡಿ ಬಡಿದು ಮನ ನೋಯಿಸುತ್ತಿದೆ.  ಈ ನೋವಲ್ಲಿ ನನ್ನಜ್ಜನು ನೆನಪಾಗುತ್ತಿದ್ದಾರೆ.  

ನಮ್ಮ ವ್ಯಕಿತ್ವಗಳೆಲ್ಲ ರೂಪುಗೊಂಡಿದ್ದು ಅಜ್ಜಂದಿರಿಂದಲೇ. ಅವರ ಅನುಭವ, ಅವರ ಕಥೆಗಳು, ಅವರ ಎದೆಗಾರಿಕೆ ಇತ್ಯಾದಿಗಳೆಲ್ಲವೂ ನಮಗಂದು ವೈವಿಧ್ಯಮಯವಾಗೆÉೀ ಜೀವನ ರೂಪಿಸಿದ್ದವೆಂದರೆ ತಪ್ಪಿಲ್ಲ. ಇವತ್ತು ಎಷ್ಟೇ ಉನ್ನತ ವ್ಯಾಸಂಗ ಮುಗಿಸಿ ಬದುಕು ಕಟ್ಟಿಕೊಂಡಿದ್ದರೂ ನನಗೆ ಸಮಾಜದಲ್ಲಿ ಮಾನವೀಯತೆಯನ್ನು ಕಲಿಸಿಕೊಟ್ಟಿದ್ದು ಅಜ್ಜನ ಕತೆಗಳೇ ಹೊರತು ಇಂದು ನಾವು ಓದುತ್ತಿರುವ ಸ್ಟೋರಿಗಳಲ್ಲ.

     ಶಾಲೆಗಳಲ್ಲಿ ಬೇಸಿಗೆ ರಜೆ ಬಂದರೆ ಅಜ್ಜನ ಮನೆಗೆ ಹೋಗುವುದು, ಅಜ್ಜಿಯಿಂದ ಕೈ ತುತ್ತು ತಿನ್ನಲು ಹವಣಿಸುವುದು, ರಾತ್ರಿಯಾದರೆ ಕಥೆ ಹೇಳಿ ಮಲಗಿಸಿ ಎಂದು ದೊಂಬಾಲು ಬೀಳುವುದೆಲ್ಲ ಇಂದು ಕನಸಷ್ಟೆ. ನನ್ನಜ್ಜ ಕತೆ ಹೇಳುತ್ತಿದ್ದಾಗಂತೂ ನಾನು ಈ ಭೂಮಿ ಮೇಲಿರುವುದನ್ನೆ ಮರೆತು ಕಲ್ಪನಾ ಲೋಕದಲ್ಲಿ ವಿರಹಿಸುತ್ತಿದ್ದೆÉ. ಅಜ್ಜ ಕತೆ ಕಟ್ಟಿ ಹೇಳುವ ರೀತಿಯೇ ಹಾಗಿತ್ತು. ಕತೆಯೊಳಗೆ ತಾವೇ ಪ್ರವೇಶಿಸಿಕೊಂಡು ನಮ್ಮನ್ನು ಅಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲದೇ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ  ತಾತ ಮತ್ತು ಅವರ ಗೆಳೆಯರು ಸಿಡಿದು ನಿಂತಿದ್ದು, ಚಳ್ಳೆಹಣ್ಣು ತಿನ್ನಿಸಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದು, ಹೀಗೆ ಹೋರಾಟದ ಬದುಕನ್ನು ಹೇಳುತ್ತಿದ್ದಾಗ ನಮ್ಮ ಕಣ್ಣ ಮುಂದೆಯೇ ಅವೆಲ್ಲ ನಡೆದಂತಿರುತ್ತಿತ್ತು.

          ಬೇಸಿಗೆ ರಜೆಯ ದಿನಗಳಲ್ಲಿ ಅಜ್ಜನ ಬೆನ್ನ ಹಿಂದೆ ತಿರುಗಿ ಕಾಲ ಕಳೆಯುತ್ತಿದ್ದ ನನಗೆ, ಈಗಲೂ ಅವರು ಬಾಳಿ ಬದುಕಿದ್ದ ಮನೆಗೆ ಹೋದೆನೆಂದರೆ ಹಳೆಯ ನೆನಪುಗಳೆಲ್ಲ ಕಾಡದೆ ಇರದು. ಕೆರೆ, ಗದ್ದೆ, ಬೀದಿಯಲ್ಲಿರುವ ದೇವರ ಕಲ್ಲು, ಕಾಡಿಗೆ ಹೋಗುತ್ತಿದ್ದಾಗ ವಿರಾಮ ಪಡೆಯಲು ನಿಲ್ಲುತ್ತಿದ್ದ ಗುತ್ತುಗಳು, ರಾತ್ರ್ರಿ ಬೇಟೆಗೆ ಸಜ್ಜಾಗುತ್ತಿದ್ದಾಗ, ‘ನೀನಿನ್ನು ಚಿಕ್ಕವನು ಇಲ್ಲೇ ಇರು ಬರುವುದು ಬೇಡ ನಾನು ಶಿಕಾರಿ ಮಾಡಿಕೊಂಡು ಬರುವೆ.. ಕಾಯುತ್ತಿರು’... ಎಂದು ಅಜ್ಜಿಯ ತೋಳ ತೆಕ್ಕೆಯಲ್ಲಿ ನನ್ನ ಮಲಗಿಸಿ, ರಾತ್ರಿಯಿಡಿ ಕಾಡಿನಲ್ಲಿ ಪ್ರಾಣಿಗಳಿಗಾಗಿ ಬಲೆ ಬೀಸಿ ಮೊಮ್ಮಗನಿಗೆ ಮಾಂಸದೂಟ ಹಾಕಲು ಓಡಾಡುತ್ತಿದ್ದ ನನ್ನಜ್ಜ ಇಂದಿಗೂ ನನಗೆ ಇತಿಹಾಸ.

     ಪ್ರತಿದಿನ ಸಂಜೆ ‘ವಂದಿಪೆ ನಿನಗೆ ಗಣನಾಥ’ ಎಂದು ಪ್ರಾರಂಭವಾಗುವ ಭಜನೆಯ ಪರಿಪಾಠವನ್ನು ಹೇಳಿಕೊಟ್ಟಿದ್ದ ತಾತ, ಹಳ್ಳಿಯಲ್ಲಿ ಸುದೀರ್ಘ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಕರೆದುಕೊಂಡು ಹೋಗಿದ್ದ ನೆನಪು ಇದೆ ನನಗೆ. ಆಗೆಲ್ಲ ಚಳಿಯಾಗುತ್ತೆ! ಎಂದು ಅವನ ಹೆಗಲ ಮೇಲಿದ್ದ ಟವೆಲ್‍ನ್ನು ನನ್ನ ತಲೆ ಮೇಲೆ ಹೊದೆಸುತ್ತಿದ್ದ ತಾತನ ಬಗ್ಗೆ ಬರೆಯಹೊರಟರೇ ಬರವಣಿಗೆ ಮುಗಿಯೋದಿಲ್ಲ.

         
     ನಮ್ಮ ಸುತ್ತಮುತ್ತಲಿನ ಇತಿಹಾಸ, ಪೌರಾಣಿಕ ಮಹತ್ವವನ್ನು ಯಾವುದೇ ಪಠ್ಯಕ್ರಮಗಳ ಓದಿಲ್ಲದೇ ಅಜ್ಜ ಕತೆಗಳ ಮೂಲಕ ತಿಳಿಯುತ್ತಿದ್ದ ನನಗೆ ಇಂದಿನ ಮಕ್ಕಳಿಗೂ ಅಜ್ಜಂದಿರ ಅಪ್ಪುಗೆ ಬೇಕು ಎನಿಸುತ್ತಿದೆ.

       ಇಂದಿನ ದಿನಗಳಲ್ಲಿ ಅಜ್ಜ ಮೊಮ್ಮಕ್ಕಳ ಗಾಢ ಸಂಬಂಧ ಮೊದಲಿನ ಹಾಗೇ ಕಂಡು ಬರುವುದಿಲ್ಲ. ಇವತ್ತಿನ ಮಕ್ಕಳು ಅಜ್ಜ-ಅಜ್ಜಿಯರ ಜೊತೆ ಬೆರೆಯಲು ತಂದೆ ತಾಯಂದಿರು ಬಿಡುತ್ತಿಲ್ಲ. ಯಂತ್ರದ ರೀತಿ ಬೆಳೆಸುತ್ತಿದ್ದಾರೆ. ಮೊದಲೆಲ್ಲ ಹಿರಿಯರ ಪ್ರಭಾವ ಮಕ್ಕಳ ಬೆಳವಣಿಗೆಗೆ ಪೂರಕವಾಗಿತ್ತು. ಇಂದು ಬೇಸಿಗೆಯ ಶಿಬಿರಗಳಿಗೆ ಮಕ್ಕಳನ್ನು ದೂಡುವ ಪಾಲಕರು ಮಕ್ಕಳನ್ನು ಮನೆಯಲ್ಲೇ ಕ್ರೀಯಾಶೀಲರನ್ನಾಗಿಸುವ ಪ್ರಯತ್ನದಲ್ಲಿ ಸಂಬಂಧಗಳ ಪ್ರೀತಿ ತೋರದೆ ಕೂಡಿ ಹಾಕುತ್ತಿದ್ದಾರೆ. ಮಕ್ಕಳು ಮತ್ತು  ಹಿರಿಯರ ನಡುವೆ ಪಾಲಕರು ತಡೆಗೋಡೆಯಾಗಿರದೆ ಬೆಸೆಯುವ ಕೊಂಡಿಯಾಗಬೇಕು. ಇಂದು ಶಾಲೆ ಮುಗಿಸಿ ಮನೆಗೆ ಬರುವ ಮಕ್ಕಳು ಟ್ಯೂಶನ್, ಟಿ.ವಿ ಇತ್ಯಾದಿಗಳಲ್ಲೇ ಸಮಯ ಹಾಳುಮಾಡುವುದನ್ನು ನಿಲ್ಲಿಸಿ ಹಿರಿಯರ ಜೊತೆ ಬೆರೆತು ಭಾಂಧವ್ಯ ಸವಿಯಬೇಕು ಆಗಲೇ ಮಕ್ಕಳ ವ್ಯಕ್ತಿತ್ವ, ಕಲ್ಫನಾ ಶಕ್ತಿ, ಕ್ರೀಯಾಶೀಲತೆ ಚಿಗುರಲು ಸಾಧ್ಯ.
ಏನೇ ಇರಲಿ...ನನ್ನ ತಾತನು ಇಂದು ನನ್ನ ಬಳಿ ಇಲ್ಲ. ಊರಿಂದ ಉದ್ಯೋಗವರಸಿ ಬೆಂಗಳೂರಿಗೆ ಬಂದ ನಂತರ ಎದುರು ಮನೆಯ ತಾತನೇ ನನ್ನವರಾಗಿ ಮನಸೆಳೆಯುತ್ತಿದ್ದರು. ಆದರೆ ಅವರ ಉಪಸ್ಥಿತಿ ಇಂದಿಲ್ಲ. ದಿನಾ ಬೆಳಿಗ್ಗೆ ಸಿಗುತ್ತಿದ್ದ ಸ್ಮೈಲ್ ಫೇಸ್ ಎದುರಿಲ್ಲ...

        ಇಂದು ಎಲ್ಲವೂ ಖಾಲಿ ಖಾಲಿಯಾಗಿ, ನೆನಪುಗಳು ಮಾತ್ರಾ ಉಳಿದಿದೆ ಜೋಲಿಯಾಗಿ...ಎದುರು ಮನೆಯ ತಾತನನ್ನ ಇಂದು ಮಾತನಾಡಿಸಬೇಕು ಅನ್ನಿಸುತ್ತಿದೆ!.  ಆದರೆ ಅವರೇ ಇಲ್ಲ. ಅವರಿಲ್ಲದ ಆ ಜಾಗ ಮತ್ತೆ ಮತ್ತೆ ಕಣ್ಣನ್ನು ಆಕರ್ಷಿಸಿ, ಹೃದಯ ಕರಗಿಸುತ್ತಿದೆ. ಕರಗುವ ಭಾವ ಕಣ್ಣಂಚಲಿ ನೀರು ತರಿಸುತ್ತಿದೆ...ಮಕ್ಕಳು ತಾತನ ಅಂತ್ಯಕ್ರಿಯೆಯ ನಂತರ ಪರಲೋಕಕ್ಕೆ ವಾಪಾಸಾಗಿದ್ದಾರೆ. ತಾತನನ್ನ ನೋಡಿಕೊಳ್ಳುತ್ತಿದ್ದ ಹುಡುಗಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದಾಳೆ. ಅಂಗಳ ಬೀಕೋ ಎನ್ನುತ್ತಿದೆ...

Thursday, 9 June 2016

ಸಿರಿ ಬುಲೆಟ್ - ನಾಮ ಹಾಕುವ ಓಲಾ...

ಊಲಾಲಾ ಆಡುವ ಓಲಾ...
ಅಯ್ಯೋ ಓಲಾ ಇರುವುದು ಬಡವರ ಪಾಲಿಗಲ್ಲಯ್ಯ!!.
‘ಪೀಕ್ ಚಾರ್ಚ್’ ಎಂದು ಫಜೀತಿಗೆ ಸಿಲುಕಿಸುತ್ತಾರೆ ಹುಷಾರ್!!!
ಇಂಗ್ಲೀಷ್ ಓದಿ ಅರ್ಥೈಸಿಕೊಳ್ಳಲು, ಬಂದಿಲ್ಲವೆಂದರೆ ನಿಮ್ಮ ಕತೆ ಗೋವಿಂದ..! 

          ಮಾರುಕಟ್ಟೆಗಿಂದು ಬರಗಾಲವಿಲ್ಲ... ಎಲ್ಲ ರಂಗದಲ್ಲಿಯೂ ಅದರ ವ್ಯಾಪಕತೆ ಜೋರಾಗಿದೆ, ಹಬ್ಬಿಕೊಂಡಿದೆ!..ತಬ್ಬಿಕೊಂಡಿದೆ!.. ಅನೇಕ ವರ್ಷಗಳಿಂದ                                                                                                                                                                                                                                                                ಅಂತ್ಯವಿಲ್ಲವೆಂಬಂತೆ ಲಾಭ ನಷ್ಟಗಳ ಮೆಟ್ಟಿಲ ಮಜಲುಗಳನ್ನು ಹತ್ತಿಕೊಂಡು ಸಾಗುತ್ತಲೇ ಇದೆ. ಪ್ರಾರಂಭದಲ್ಲಿ ಮಾರುಕಟ್ಟೆ ಎನ್ನುವ ಪದ ಸಂಚಾರವಾಗಿದ್ದು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಕೋಡು-ಕೊಂಡುವಿಕೆಯಲ್ಲಾದರೂ, ಔಧ್ಯಮಿಕ ಕ್ರಾಂತಿಯ ನಂತರದ ದಿನಗಳಲ್ಲಿ ಮಾನವ ಸ್ಮಾರ್ಟ್ ಥಿಂಕಿಂಗ್ ನಡೆಸುತ್ತಾ, ಎಲ್ಲಾ ವ್ಯವಹಾರದ ಪ್ರಗತಿ ಕಂಡುಕೊಳ್ಳಲು ಮಾರ್ಕೆಟಿಂಗ್ ವ್ಯಾಕುಲತೆಯ ಸಂಚಲನ ಸೃಷ್ಟಿಸಿಕೊಂಡ.

         ದೇಶ ಪ್ರಗತಿಯಲ್ಲಿದೆ ನಿಜ!, ಬೆಳವಣಿಗೆ ಕಾಣುತ್ತಿದೆ ಅದೂ ನಿಜ!!. ಅನೇಕಾನೇಕ ಕಂಪೆನಿಗಳು ಮಾರುಕಟ್ಟೆಯ ಸಹಾಯದಿಂದ ಇಂದು ತಲೆಯೆತ್ತಿ ನಿಂತು ದೇಶದ ಪ್ರಗತಿಯಲ್ಲಿ ಸಕ್ರೀಯವಾಗಿವೆ. ಒಂದರ ಹಿಂದೆ ಒಂದು ಎಂಬಂತೆ ಲಕ್ಷಗಟ್ಟಲೇ ಕಂಪೆನಿಗಳು ಮಾರುಕಟ್ಟೆಯ ಲಾಭದಿಂದ ಬೀಗಿ ಬೆಂಡಾಗದೆ ನೆಲೆನಿಂತಿವೆ. ಆದರೆ ಆ ಲಾಬಾಂಶಗಳ ಅತೀ ಆಸೆ ಇದೀಗ ಅಕ್ರಮಗಳು ತಾಂಡವವಾಡುವಂತೆ ಮಾಡಿದೆ. ಸಾವಿರ ಎನ್ನುವಂತಹ ಲಾಭಾಂಶ ಲಕ್ಷಕ್ಕೇರಿಸಬೇಕು ಎನ್ನುವ ದುರಾಸೆಗಳಿಂದ ಸಾಮಾನ್ಯ ವರ್ಗದ ಜನತೆಯನ್ನು ಬಂಡವಾಳ ವರ್ಗ ಯಾಮಾರಿಸುತ್ತಿದೆ. ಅಂತಹ ಒಂದು ಲೇಟೆಸ್ಟ್ ವಂಚನೆಯ ಮಾಹಿತಿಯೇ ಈ ಲೇಖನ. 
ಯಾಮಾರಬೇಡಿ ಹುಷಾರಾಗಿರಿ...

     ಇಂತಹದೊಂದು ಆಕ್ರಮಣಶೀಲತೆ ಸೃಷ್ಟಿಯಾಗುತ್ತಿರುವುದು ಬೇರೆಲ್ಲೂ ಅಲ್ಲ, ‘ಬಡವರ ಟ್ಯಾಕ್ಸಿ’, ‘ಕಡಿಮೆ ಬಾಡಿಗೆಯಲ್ಲಿ ಸರ್ವರೂ ಚಲಿಸಿ’ ಎಂಬಂತ ಘೋಷವಾಕ್ಯವನ್ನಿಟ್ಟು ಮಾರುಕಟ್ಟೆಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವಾಹನಗಳೊಂದಿಗೆ ಸವಾರಿ ಆರಂಭಿಸಿದ ‘ಓಲಾ ಕ್ಯಾಬ್’ ಸರ್ವಿಸ್‍ನಲ್ಲಿ!..
ಎಸ್!.. ನಿಜ...

ನಂಬಲಾಗುತ್ತಿಲ್ಲವಾ!? ನಂಬಲೇಬೇಕು!..
    ಹಾಗಿದೆ-ಹೀಗಿದೆ!, ಆ ಸೇವೆ ಇದೆ-ಈ ಸೇವೆ ಇದೆ!., ಎಂದು ನಂಬಿಸಿ ಸಾವಿರಾರು ಜನರನ್ನು ತನ್ನತ್ತ ಸೆಳೆದು ಆ್ಯಪ್ ಎನ್ನುವ ಮಾಯಾಜಾಳದಲ್ಲೇ ಪಿಕ್ ಅಪ್ ಡ್ರಾಪ್ ಎನ್ನುವ ಆಟ ಆಡಿ, ನಂಬಿಸಿ ಇದೀಗ ಹೊಸ ಹೊಸ ಪ್ಲಾನ್ ಗಳ ಅಪ್ ಡೇಟ್ ನಿಂದ ಕತ್ತು ಕುಯ್ಯಲು ಮುಂದಾಗಿದೆ ಓಲಾ ಎನ್ನುವ ಒಡೆಯನ ಕಾರು.

ಉದಾಹರಣೆ ಕೊಡ್ತೀನಿ ಓದಿ:
   ತೀರಾ ಮೊನ್ನೆ ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೆಂದುಕೊಂಡಿದ್ದ  ಆಕಾಶ್ ಎಂಬ ವ್ಯಕ್ತಿ ಮಾಮೂಲಿಯೆಂಬಂತೆ ಬೆಳಿಗ್ಗೆ 5:50 ರ ಸುಮಾರಿಗೆ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಕೋರಮಂಗಲದಿಂದ   ಏರ್ ಪೋರ್ಟ್‍ಗೆ ಸಾಗಿದ್ದ. ಅಲ್ಲಿಂದಲ್ಲಿಗೆ ಸುಮಾರು 50 ಕಿಲೋಮೀಟರ್ ದೂರ ಟ್ಯಾಕ್ಸಿ ಪ್ರಯಾಣ ಆಗಿರಬಹುದು. ಏರ್‍ಪೋರ್ಟ್ ತಲುಪಿದ ನಂತರ ಆಕಾಶ್‍ಗೆ ಟ್ಯಾಕ್ಸಿ ಬಿಲ್ ನೋಡಿ ಗಾಬರಿ!!. ಸಾಮಾನ್ಯವಾಗಿ ಅಬ್ಬಾಬ್ಬಾ ಅಂದರೆ 800 ರೂಪಾಯಿಯ ಒಳಗೆ ಕಾಣಿಸಬೇಕಾಗಿದ್ದ ಬಿಲ್ ಮೊತ್ತ ಬರೋಬ್ಬರಿ 2,767 ರೂ ತೋರಿಸುತ್ತಿತ್ತು. ಕ್ಷಣಾರ್ಧದಲ್ಲಿ ತೀವ್ರ ವಿರೋಧದ ನಡುವೆ ಸಿಡಿದೆದ್ದ ಆಕಾಶ್, ಕ್ಯಾಬ್‍ನ ಡ್ರೈವರ್ ಮೇಲೆ ಜಗಳಕಾಯ್ದರು ಯಾವ ಪ್ರಯೋಜನವಾಗದೆ ಬಿಲ್ ಪೇಮೇಂಟ್ ಮಾಡಲೇಬೇಕಾಯಿತು. ಓಲಾ ಕಸ್ಟಮರ್ ಕೇರ್‍ಗೆ ಫೋನ್ ಮಾಡಿ ವಿಚಾರಿಸಿದರೆ ಅವರ ಉತ್ತರ, ಸರ್ ನಿಮಗೆ ‘ಪೀಕ್ ಚಾರ್ಚಸ್’ ಅಪ್ಲೈ ಆಗಿದೆ, ಪೀಕ್ ಆಪ್ಶನ್‍ನಲ್ಲಿ ನೀವು ಬುಕ್ ಮಾಡಿದ್ರಿ!... ಡಿಸ್ ಪ್ಲೇ ಮೆಸೇಜ್ ಓದಿ ನೋಡಿ ನೀವು ಕ್ಯಾಬ್ ಬುಕ್ ಮಾಡಬೇಕಿತ್ತು. ಏನೂ ಮಾಡಲಾಗುವುದಿಲ್ಲ ಪೇ ಮಾಡಲೇಬೇಕು ಎಂದು ಕೈತೊಳೆದುಕೊಂಡಿದ್ದಾರೆ. ಲೆಕ್ಕಾಚಾರ ಮಾಡಿ ನೋಡಿದರೆ ಆಕಾಶ್‍ರವರ ಪ್ರಯಾಣದ 50 ಕಿ,ಮೀನಲ್ಲಿ ಮೊದಲ 30 ಕಿ.ಮೀಗೆ 540 ರೂ. ಹಾಗೂ ನಂತರದ 20 ಕಿ.ಮೀಗೆ 1,639 ರೂ. ಚಾರ್ಜಸ್ ಬಿದ್ದಿದೆ. ಎಲ್ಲಿದೆ ಸ್ವಾಮಿ ಇಷ್ಟೊಂದು ಬಿಲ್!! ಯಾವ ಮಾಮೂಲಿ ಟ್ಯಾಕ್ಸಿ, ಆಟೋದವರು ಇಷ್ಟು ಚಾರ್ಚ್ ಮಾಡುತ್ತಾರೆ ನೀವೇ ಹೇಳಿ!?.  

   ಆಕಾಶ್‍ಗೆ ಒಂದು ಕಿಲೋ ಮೀಟರ್‍ಗೆ 81.95 ರೂ ಚಾರ್ಜಸ್ ಬಿದ್ದಿತ್ತು. ಸದ್ಯ ಒಂದು ಲೀಟರ್ ಪೆಟ್ರೋಲ್‍ಗೆ 67.64 ಹಾಗೂ ಡೀಸೆಲ್ ಬೆಲೆ ಇರುವುದು 55.32 ರೂ. ಅಂದರೆ 1 ಲೀಟರ್ ಪೆಟ್ರೋಲ್, ಡೀಸೆಲ್‍ಗಿಂತಲೂ ದುಪ್ಪಟ್ಟು ದುಡ್ಡನ್ನು ತೆಗೆದುಕೊಂಡು ಅದಕ್ಕೊಂದು ನಾಮಧ್ಯೇಯ ಎಂಬಂತೆ ಪೀಕ್ ಚಾರ್ಚ್ ಎಂದು ಚಾಕಚಕ್ಯತೆಯಲ್ಲಿ ತಲೆ ಹೊಡೆದು ದುಡ್ ಮಾಡುವುದೆಂದರೆ ಇದೆ ಅಲ್ವಾ!?
 ಈಗ ಹೇಳಿ ಸ್ವಾಮಿ ಮಾಮೂಲಿ 1 ಕಿ.ಮೀ ಗೆ 6 ರೂ.ನಂತೆÉ ಟ್ಯಾಕ್ಸಿ ದೊರಕಿಸಿಕೊಡುತ್ತಿದ್ದ ಓಲಾ ಯಜಮಾನ ಹೀಗೆಲ್ಲಾ ಅಕ್ರಮವಾಗಿ ಆಟವಾಡಿ ಊಲಾಲಾ ಆಡುತ್ತಿರುವುದನ್ನು ಏನೆಂದು ಕರೆಯಬಹುದು!?

    ಇಂತಹ ಅಕ್ರಮವನ್ನು ಬಯಲಿಗೆಳೆಯಬೇಕು, ಸಾಮಾನ್ಯರಿಗಾಗುತ್ತಿರುವ, ಮುಂದೆ ಆಗಬಹುದಾದ ಅನ್ಯಾಯವನ್ನು ತಡೆಯಬೇಕು, ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಬೇಕೆಂದು ನಮ್ಮ ಸಿರಿ ತಂಡ  ಓಲಾ ಕ್ಯಾಬ್ ಬುಕ್ ಮಾಡಿ ಹೊಸತೊಂದು ಸಾಹಸಕ್ಕೆ ಕೈ ಹಾಕಿತು.

     ಮೂರು ಜನರಿದ್ದ ನಮ್ಮ ತಂಡ, ಸಿರಿ ಕಛೇರಿ ಪ್ಯಾಲೆಸ್ ಗುಟ್ಟಹಳ್ಳಿಯಿಂದ ಮೈಸೂರು ರಸ್ತೆಯ ಬಳಿ ಇರುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‍ವರೆಗೆ ಓಲಾ ಕ್ಯಾಬ್ ಬುಕ್ ಮಾಡಿ ಹೊರಟುಬಿಟ್ಟಿತು. ಹೋಗುವಾಗ ಮಿನಿ ಕ್ಯಾಬ್ ಮಾಡಿಕೊಂಡು, ಸಾಮಾನ್ಯ ಬುಕ್ಕಿಂಗ್‍ನಲ್ಲಿ ಹೋಗಿ ಇಳಿದೆವು. ಚಾರ್ಜಸ್ 125 ರೂಪಾಯಿ ಆಯ್ತು. ಮತ್ತೆ ರಿಟರ್ನ್, ಓಲಾ ಆ್ಯಪ್ ಓಪನ್ ಮಾಡಿ ಪೀಕ್ ಚಾರ್ಜಸ್‍ನಲ್ಲಿ ಬುಕ್ ಮಾಡಲಾಯಿತು. ಅದು ಯಾವ ನಿಖರವಾದ ಮೆಸೇಜ್‍ಗಳನ್ನು ಕಣ್ಣಿಗೆ ಕಾಣಿಸದೇ ಬುಕ್ಕಿಂಗ್ ತೆಗೆದುಕೊಂಡಿತು. ಸೆಟಲೈಟ್ ಬಸ್ ಸ್ಟ್ಯಾಂಡ್‍ನಿಂದ, ಪ್ಯಾಲೇಸ್ ಗುಟ್ಟಳ್ಳಿಗೆ ಬಂದು ಇಳಿಯಿತು ನಮ್ಮ ತಂಡ. ಇಳಿಯುವವರೆಗೂ ಪೀಕ್ ಚಾರ್ಜಸ್‍ನಲ್ಲಿ ಪ್ರಯಾಣಿಸಲಾಗುತ್ತಿದೆ ಎಂದು ನಮ್ಮ ತಂಡಕ್ಕಾಗಲಿ, ಡ್ರೈವರ್‍ಗಾಗಲಿ ತಿಳಿಯಲೇ ಇಲ್ಲ. ಮಧ್ಯೆ ಯಾವ ಮೆಸೇಜ್ ಕೂಡ ಸಂದೇಶ ಸಾರಲಿಲ್ಲ... ಜರ್ನಿ ಅಂತಿಮಗೊಳಿಸಿ ಬಿಲ್ ಡಿಸ್ ಪ್ಲೇ ಆದಾಗಲೇ ತಿಳಿಯಿತು. ಕೇವಲ 8 ಕಿ.ಮೀನ ನಮ್ಮ ಪ್ರಯಾಣಕ್ಕೆ ಬರೋಬ್ಬರಿ 512 ರೂಪಾಯಿಯ ಬಿಲ್ ಹೊರಬಿದ್ದಿತ್ತು!.. 
ಅಬ್ಬಾ!! ಹೀಗೂ ದುಡಿತಿದ್ದಾರಾ ಓಲಾ ಸಂಸ್ಥೆ ಎನ್ನುವ ಶಾಕ್ ಆಗ ನಮಗಾಯಿತು.

   
       ನಿಗಧಿಪಡಿಸಿದ ಹತ್ತಾರುಪಟ್ಟು ಹೆಚ್ಚು ಮೊತ್ತವನ್ನು ನಮಗೆ ಅರಿವಿಲ್ಲದೇ, ಇರಿದು ರಕ್ತಬರದಂತೆ ಸಾಯಿಸಿ ಸುಲಿಗೆಗೈಯುವುದೆಂದರೆ ಇದೆ ಅಲ್ಲವಾ!!? ಎರಡೂವರೆ ವರ್ಷಗಳ ಹಿಂದೆ ಓಲಾ ದೆಹಲಿಯಲ್ಲಿ ಚಾಲ್ತಿಯಾದಾಗ ಬೆಂಗಳೂರಿಗೆ ಬರಲಿ ಎಂದು ನಾವೂ ಸ್ವಾಗತಿಸಿದ್ದೆವು. ಎಲ್ಲೆಲ್ಲೂ ಓಲಾ ಓಲಾ ಎನ್ನುವ ಮಾತುಬಂದಾಗ ಇನ್ನಾದರೂ ಆಟೋ ರಿಕ್ಷಾದವರು ಮಾಡುವ ಸುಲಿಗೆಗೆ ಬ್ರೇಕ್ ಬಿತ್ತು. ಒಳ್ಳೆಯ ಸೇವೆ ಎಂದು ಅಪ್ಪಿಕೊಂಡಿದ್ದೆವು. ಪ್ರಾರಂಭದಲ್ಲಿ ‘ಕಡಿಮೆ ದರ, ಸಾಮಾನ್ಯನಿಗೆ ವರ’.., ಎನ್ನುವಂತಿದ್ದ ಓಲಾವನ್ನು ‘ಬಡವರ ಪ್ರಯಾಣದ ದೇವರಾಯಿತು, ಎಲ್ಲರಿಗೂ ಕೈ ಗೆಟುಕುವ ದರದಲ್ಲಿ ಸಿಗುತ್ತೆ’ ಹಾಗೆ ಹೀಗೆ ಎಂದೆಲ್ಲಾ ಪಟಾಕಿ ಹಾರಿಸಿದ್ದ ಓಲಾ ಸಂಸ್ಥೆ ಇದೀಗ ‘ಪೀಕ್ ಚಾರ್ಚಸ್’ ಎನ್ನುವ ಮೂಲಕ ಬಡ ಸವಾರರನ್ನು ಪ್ರಯಾಣದ ಬಳಿಕ ಪೀಕಲಾಟಕ್ಕೆ ದೂಡುವುದು ನಿಶ್ಚಿತ ಎನಿಸುತ್ತಿದೆ.     

   ಅಷ್ಟಕ್ಕೆ ನಮ್ಮ ತಂಡ ಸುಮ್ಮನಾಗಲಿಲ್ಲ. ಕಸ್ಟಮರ್ ಕೇರ್‍ಗೆ ಡಯಲ್ ಮಾಡಿ ವಿಚಾರಿಸೋಣವೆಂದು ಟೋಲ್ ಫ್ರಿ ನಂಬರ್‍ಗೆ ಡಯಲ್ ಮಾಡಿತು. ಒಂದೆರಡು ಬಾರಿ ನೇರ ಕನೆಕ್ಟ್ ಆಗದೆ ಆಟ ಆಡಿಸಿದ ಅವರ ಕಸ್ಟಮರ್ ಸರ್ವಿಸ್, ನಂತರ  5 ನಿಮಿಷದ ವೈಟಿಂಗ್‍ನಲ್ಲಿ ಆಂಗ್ಲಬಾಷೆಯಲ್ಲಿ ಮಾತುಗಾರಿಕೆಗೆ ಇಳಿಯಿತು. ಅಂತೂ ಮೇಲೆ ಹೇಳಿದಂತೆ ತಮ್ಮ ನಿಲುವೇ ಸರಿ, ನೀವು ಬುಕ್ ಮಾಡಿದ್ದೇ ತಪ್ಪು, ಸರಿಯಾಗಿ ನೋಡಿಕೊಂಡು ಮಾಡಬೇಕು, ಪೀಕ್ ಚಾರ್ಜಸ್ ಇದ್ದರೆ ನಿಮ್ಮ ಮೊಬೈಲ್‍ನಲ್ಲಿ ವಾರ್ನಿಂಗ್ ಮೆಸೇಜ್ ಬರುತ್ತೆ!, ಅದನ್ನು ಗಮನಿಸದೇ ಬುಕ್ ಮಾಡಿದರೆ ಹೀಗೆ ಆಗುತ್ತೆ! ಎನ್ನುವ ಮಾತಿನೊಂದಿಗೆ, ‘ನಾವೇನು ಮಾಡಲು ಬರುವುದಿಲ್ಲ ಸರ್ ದಯಮಾಡಿ ಪೇ ಮಾಡಿ’ ಎಂದಳಾಕೆ. ‘ಆಯ್ತು ಮಾಡ್ತೀವಿ.., ಆದ್ರೆ ಯಾಕೀಥರ ಬಡವರ ಮೇಲೆ ಸುಲಿಗೆ ಮಾಡುತ್ತೀರಾ? ನಿಮ್ಮ ಮ್ಯಾನೇಜ್‍ಮೆಂಟ್ ಲೆವೆಲ್‍ಗೆ ಕಾಲ್ ಕನೆಕ್ಟ್ ಮಾಡಿ ನಾವು ಮಾತಾಡ್ತೇವೆ’ ಅಂದ್ರೆ ‘ಹಾಗೆ ಕನೆಕ್ಟ್ ಮಾಡೋಕೆ ಆಗುವುದಿಲ್ಲ ಸರ್ ಬೇಕಿದ್ರೆ ನಿಮ್ಮ ಅಹವಾಲನ್ನು ಮೇಲ್ ಮೂಲಕ ನಾನು ಮಂಡಳಿಗೆ ತಿಳಿಸುತ್ತೇನೆ, ನಿಮಗೆ ಮೇಲ್ ಬರುತ್ತೆ ನಿಮ್ಮ ಕಂಪ್ಲೇಂಟ್ ಪಡೆದುಕೊಳ್ಳುತ್ತೇನೆ’ ಎನ್ನುತ್ತಾ ಕಾಲ್ ತುಂಡರಿಸಿದ ಆಕೆ ಇವತ್ತಿನವರೆಗೂ ನಾವು ಕಾಯುತ್ತಿದ್ದರೂ ಯಾವ ಕಂಪ್ಲೇಂಟ್ ಕಾಪಿಗಳನ್ನು ಇ-ಮೇಲ್‍ಗೆ ರವಾನಿಸದೇ ಇರುವುದು ಸಂಶಯಕ್ಕೆ ಎಡೆಮಾಡಿದೆ.

   ಹೌದು ಸ್ವಾಮಿ!, ನಾವು ಬಡವರು ಅದನ್ನು ಬಿಡಿ ಆದರೆ ಎಲ್ಲರಿಗೂ ಇಂಗ್ಲೀಷ್ ಬುರುತ್ತದಾ!? ಅದನ್ನು ಹೇಳಿ ಮೊದಲು!!! ನಾವೇನೋ ಓದಿದ್ದೀವಿ, ಇಂಗ್ಲೀಷ್ ಕಲಿತಿದ್ದೀವಿ, ಮೆಸೇಜ್‍ನ್ನು ಓದಿ ಬುಕ್ ಮಾಡುತ್ತೇವೆ!, ಆದರೆ ಒಬ್ಬ ಸಾಮಾನ್ಯ ಮನುಷ್ಯ, ಇಂಗ್ಲೀಷ್ ಬರದಿದ್ದವನು ನಿಮ್ಮ ಕಾರ್‍ನಲ್ಲಿ ಚಲಿಸಬೇಕಲ್ಲ... ಅವನು ಹೇಗೆ ಆ ನಿಮ್ಮ ವಾರ್ನಿಂಗ್ ಮೆಸೇಜ್‍ಗಳನ್ನೆಲ್ಲಾ ಓದುತ್ತಾನೆ!?? ಉತ್ತರ ನೀಡಿ...

   ಪ್ರಾರಂಭ ದಿನಗಳಲ್ಲಿ ಗ್ರಾಹಕರು, ಡ್ರೈವರ್‍ಗಳನ್ನು ಸೆಳೆಯುವ ದೃಷ್ಟಿಯಿಂದ ಸಾವಿರ ಸಾವಿರ ಸಂಬಂಳ, ಇನ್‍ಸೆಂಟಿವ್ ನೀಡುತ್ತಿದ್ದ ಓಲಾ ಒಡೆಯ ಇಂದು  ಅಂದುಕೊಂಡಂದ್ದಕ್ಕಿಂತ ಅಧಿಕ ಲಾಭ, ಹಾಗೂ ಜನ ಬಲ ಬಂದ ಕೂಡಲೇ ಎಲ್ಲದಕ್ಕೂ ಬದಲಾವಣೆ ಹಾಡಿದ್ದಾನೆ. ಅಂದು ಡ್ರೈವರ್‍ಗಿದ್ದ ಲಾಭಾಂಶ ಕಡಿಮೆಗೊಳಿಸಿದ್ದಾನೆ. ಇನ್ ಸೆಂಟಿವ್‍ನಲ್ಲೂ ಹಂಬಾಕಿನ ಆಟವಾಡುತ್ತಿದ್ದಾನೆ.

  ಇಷ್ಟೇ ಅಲ್ಲದೇ ಕ್ಯಾಬ್‍ಗಳು ಎಷ್ಟು ದುರ್ಬಳಕೆಯ ಹಂತಕ್ಕೆ ಇಂದು ತಲುಪಿದೆ ಎಂದರೆ, ವರದಿಯೊಂದರ ಪ್ರಕಾರ ಕ್ಯಾಬ್‍ಗಳು ರಾಜ್ಯ ಪರವಾನಗಿ ಪಡೆದು, ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಹೇಳಲಾಗಿದೆ. ಅದೆಷ್ಟೋ ಕ್ಯಾಬ್‍ಗಳಲ್ಲಿ ಇನ್ನೂ ಯಾವುದೇ ರೀತಿಯ ಡಿಜಿಟಲ್ ಮೀಟರ್ ಅಳವಡಿಸಿಲ್ಲ, ರಸ್ತೆÉ ತೆರಿಗೆ ಪಾವತಿಸಿಲ್ಲ, ವಾಹನಗಳ ಅರ್ಹತೆ, ಪತ್ರದ ಅವಧಿ ಮುಗಿದಿದ್ದರೂ ವಾಹನಗಳ ಕಾರ್ಯಾಚರಣೆ ಮುಂದುವರಿದಿರುವುದು ಬೆಳಕಿಗೆ ಬಂದಿದೆ.  ಇದಷ್ಟೇ ಅಲ್ಲದೇ ಇದೀಗ ಸಾರಿಗೆ ನಿಯಮ ನಿಗಧಿಪಡಿಸಿದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿಗಳು ದಾಖಲಾಗುತ್ತಿದ್ದು, ಜನರ ಹಣವನ್ನು ದೋಚುವ ಹುನ್ನಾರ ನಡೆಯುತ್ತಿರುವುದು ಕಂಡು ಬಂದಿದೆ...

   
ನೀವು ಸಾಮಾನ್ಯ ಮನುಷ್ಯರಾಗಿದ್ದರೆ ನಿಮ್ಮ ಪಾಕೇಟ್ ಮೇಲು ಇವರು ಬರೆ ಎಳೆಯುವುದು ಗ್ಯಾರಂಟಿ. ಸಂಬಂಧಿಸಿದ ಸಾರಿಗೆ ಇಲಾಖೆ ಇದರ ಬಗ್ಗೆ ಈಗಲೇ ಸರಿಯಾದ ನಿರ್ಣಯ ತೆಗೆದುಕೊಂಡಿಲ್ಲ ಎಂದಾದರೆ ಮುಂದೊಂದು ದಿನ 10 ರೂಪಾಯಿಯ ಮೀಟರ್ ಚಾರ್ಜ್‍ಗೆ 100 ರೂಪಾಯಿ ನೀಡಿ ಹೋಗುವ ಸಮಯ ನಿಮಗೂ ಬಂದು ‘ಪೀಕ್ ಫಜೀತಿ’  ಸಂಭವಿಸಬಹುದು!. 
ಸರ್ಕಾರ ಈ ಬಗ್ಗೆ ಸರಿಯಾದ ನಿಲುವನ್ನು ಕೈಗೊಂಡು ಎಲ್ಲರಿಗೂ, ಎಲ್ಲ ಸಮಯದಲ್ಲೂ ಸಮಾನ ರೀತಿಯಲ್ಲಿ ದೊರಕುವ ಭಾಗ್ಯ ಒದಗಿಸಬೇಕಾಗಿದೆ. ಯಾರೋ ಓಡಿಸುವವನು!, ಯಾರೋ ಆಡಿಸುವವನು! ಆಗಿರುವ ಈ ಆನ್ ಲೈನ್ ಕ್ಯಾಬ್‍ಗಳ ಬಗ್ಗೆ ಅಧಿಕಾರಿಗಳು ಒಂದು ಕಣ್ಣನ್ನು ಇಡಬೇಕು. ಅವರವರೇ ತಂದುಕೊಳ್ಳುವ ಕಾನೂನುಗಳಿಗೆ ಬ್ರೇಕ್  ನೀಡಬೇಕು...
ಪ್ರಯಾಣಿಕರು ಅಷ್ಟೇ ಜಾಗೃತರಾಗಿ ಮುಂದುವರಿಯಿರಿ. ದೋಚುವ ಕ್ಯಾಬ್‍ಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲವಾದರೆ ಮುಂದೊಂದು ದಿನ ಇನ್ನೂ ಯಾವ ಯಾವ ಚಾರ್ಜಸ್‍ನ್ನು ಹೇರಿ ನಮ್ಮನ್ನು ಸುಲಿಗೆ ಮಾಡುವರೋ ತಿಳಿದಿಲ್ಲ...
                                                    ಕೇರ್ ಫುಲ್ ಯೂರ್ ಸೆಲ್ಫ್...