Friday 19 June 2015

ನೆನಪಿನಂಗಳದಿಂದ...


“ಊರು ಉಡಿಯೊಳಿಟ್ಟುಕೊಂಡುನಿಂತ ತೆಂಗು ಅಡಿಕೆಯು
ಬೆಟ್ಟಗಳಿಗೆ ಹಗಲಿರುಳು ನೀಲ ನೀಲ ನಿದ್ದೆಯು
ಊರ ಸುತ್ತ ತೆನೆಗಳಿಂದ ತೊನೆವ ಹಸಿರು ಗದ್ದೆಯು
ಮುಗಿಲು ಹರಿದ ಹಾಗೆ ಸುರಿದು ಬಿದ್ದ ನೀರ ಮಳೆಯು
ಸಾಲು ಮರದ ನೆರಳಿನಲ್ಲಿ ಹಾವಿನಂಥಾ ಹಾದಿಯು”
ಇದೇನೂ ಕವಿತೆಯಾ!? ಆಥವಾ ಕಥೆಯಾ!? ಎಂದು ಕೇಳಬೇಡಿ! ಯಾಕೆಂದರೆ ಮೊನ್ನೆ ಮೊನ್ನೆ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತು ಅನುಭವಿಸಿದ ಪುಳಕವನ್ನು ಕವಿತೆಯ ಮೂಲಕ ಹೇಳಲಾ? ಅಥವಾ ಕತೆಯ ಮೂಲಕ ಹೇಳಲಾ? ಎಂದು ತಿಳಿಯಲಾಗದೆ ಧ್ವಂಧ್ವದಲ್ಲೇ ಭಾವನೆಗಳನ್ನು ಬಚ್ಚಿಟ್ಟು ಕುಳಿತುಕೊಂಡಿರುವೆ. ಮೇಲಿನ ಸಾಲುಗಳನ್ನು ಓದಿ ಕಣ್ಮುಚ್ಚಿ ಮನನ ಮಾಡಿದರೆ ನಿಮಗೂ ನಿಮ್ಮ ಬಾಲ್ಯ, ಆಟ, ಪಾಠ, ಹಳೆಯ ನೆನಪುಗಳು ಮತ್ತೆ ಮನದಲ್ಲಿ ಮೂಡಬಹುದು.
ಒಂದೈದು ದಿನಗಳ ರಜೆ ಪಡೆದು ಊರಿಗೆ ಬಸ್ ಹತ್ತಿದ ನನಗೆ ರಾತ್ರಿಯ ತಂಪಾದ ಗಾಳಿಯಲ್ಲಿ ಒಳ್ಳೆಯ ನಿದ್ದೆಬಂದಿತ್ತು. ಬಸ್ ಶಿರಾಡಿಘಾಟ್  ದಾಟಿ ಮುಂದೆ ಸಾಗಿ ಮಂಗಳೂರನ್ನು ಬಳಸಿ ನಮ್ಮೂರ ಕಡೆ ಸಾಗುವ ಬರದಲ್ಲಿ ಕಿಟಕಿಯಿಂದ ನುಗ್ಗಿದ ಮಳೆಯ ಹನಿಯೊಂದು ಮುಖದ ಮೇಲೆ ಬಿದ್ದು ನಿದ್ರಾದೇವಿಯನ್ನು ಓಡಿಸಿ ಮುಂಜಾನೆÉಯ ಗುಡ್ ಮಾರ್ನಿಂಗ್ ಎಂಬಂತೆ ನನ್ನ ಕಣ್ಣನ್ನು ತೆರೆಸಿತ್ತು. ಕಣ್ಬಿಟ್ಟು ನೋಡಿದರೆ ವಾವ್ಹ್ ಅದೇನೂ ತಂಪು, ಮೆಲ್ಲನೆ ಮಳೆಯ ಜೊತೆಗೆ ತಂಪಾದ ಗಾಳಿ, ನಡುವೆ ಊರು ಕೇರಿಯ ತೆಂಗು ಅಡಿಕೆ ಮರಗಳ ಸಾಲು, ಬೆಟ್ಟಗುಡ್ಡಗಳ ಝರಿ, ಹಸಿರು ಗದ್ದೆ, ಹಾವಿನಂತೆ ಸಾಗುತ್ತಿರುವ ಏರುಪೇರಿನ ಹಾದಿ, ಇವುಗಳ ಮಧ್ಯೆ ನಾನು!. ನಿಜವಾಗಲೂ ಪ್ರಕೃತಿ ಮಾತೆಯ ಮಡಿಲಲ್ಲಿ ನಾವು ಎಷ್ಟು ಎಂಜಾಯ್ ಮಾಡಬಹುದು ಎಂದು ಅನಿಸಿದ್ದೆ ಆ ಘಳಿಗೆ. ಅದಾಗಲೇ ರಾತ್ರಿಯಿಂದ ಎಡೆಬಿಡದೆ ಗಾನದ ಹೊಳೆಯನ್ನೆ ಹರಿಸುತ್ತಿದ್ದ ಹೆಡ್ ಫೋನ್‍ನ್ನು ಕಳಚಿ, ಸಿಕ್ಕಿದ್ದೆ ಸಮಯ ಎಂಬಂತೆ ಬಾಲ್ಯ ಜೀವನದಲ್ಲಿ ಆಡಿದ ಆಟ, ನೋವು, ನಲಿವು ಇತ್ಯಾದಿಗಳನ್ನು ನೆನೆಯುತ್ತಾ ಅಂದಿನ ಕಾಲಕ್ಕೆ ಕಣ್ಮುಚ್ಚಿಕೊಂಡು ಮತ್ತೆ ಜಾರಿದೆ. ಆಗ ಮೂಡಿದ ವಿಚಾರ ಸರಣಿಯೇ  ಈ ನೆನಪಿನಂಗಳ...
ಬೆಚ್ಚನೆಯ ಚಳಿಯ ಮಧ್ಯೆ ಅಮ್ಮ ‘ಏಳು ಮಗಾ ಟೈಮ್ ಏಳಾಯಿತು’ ಎಂದು ಪದೆ ಪದೇ ಕೂಗಿ ಎಬ್ಬಿಸಿದರು  ಇನೈದು ನಿಮಿಷ ಮಲಗಿರ್ತೀನಿ ಇರಮ್ಮಾ ಎಂದು ಪೂಸಿ ಹೊಡೆದು ಅರ್ಧಗಂಟೆಯಾದರೂ ಎಳದೆ  ಮತ್ತೊಂದು ಬೆಡ್ ಶೀಟ್ ಹೊದ್ದು ಮಲಗಿ ಅಪ್ಪನ ಚೀರುವಿಕೆಗೆ ಭಯಪಟ್ಟು ಎದ್ದು ಹಲ್ಲುಜ್ಜಿ ತಿಂಡಿ ತಿನ್ನುವುದು ಮತ್ತೊಂಧರ್ಧ ಗಂಟೆಯಾಗುತ್ತಿತ್ತು.
ಸಮಯ 8 ಆಯಿತೆಂದರೆ ಶಾಲೆಗೆ ಓಡುವ ತರಾತುರಿ, ಬುತ್ತಿ ಕೈಯಲ್ಲಿಟ್ಟು ಬಗಲಿಗೆ ಬೀಣಿಚೀಲ ಸಿಕ್ಕಿಸಿಕೊಂಡು, ಮರೆತು ಹೋದ ಕೊಡೆಯನ್ನು ಮತ್ತೆ ನೆನಪಿಸಿಕೊಂಡು, ಶಾಲೆಗೆ ಮಳೆಯ ನೀರಿನಲ್ಲೇ ಆಡುತ್ತಾ ಮೈ ಒದ್ದೆ ಮಾಡಿಕೊಂಡು ಓಡಿ ಹೋಗಿ ಟೀಚರ್ಗೆ ಮೊದಲ ಬೆಲ್ ಕ್ಕಿಂತ ಮೊದಲೇ ಕೋಪಿ ಪುಸ್ತಕ, ಮಗ್ಗಿ ಬರೆದಿದ್ದನ್ನು ತೋರಿಸಿ ಅಬ್ಬಾ! ನಾನು ಪ್ರಾಮಾಣಿಕ ಎಂಬಂತೆ ಎದೆಯುಬ್ಬಿಸಿಕೊಂಡು ಕ್ಲಾಸ್ ಮುಗಿಸಿ, ಮನೆಯ ಬೆಲ್ ಹೊಡೆಯುವುದನ್ನೇ ಕಾದು, ಪಟ-ಪಟನೇ ಮನೆಗೆ ಬಂದು ಚೀಲ ಬಿಸಾಕಿ, ಪಕ್ಕದ ಮನೆಯ ಹುಡುಗರ ಜೊತೆ ಶಾಲೆಯಿಂದ ಬರುವಾಗಲೇ ಪಾರ್ಟಿಹಾಕಿಕೊಂಡು ಇಲ್ಲಿ ಸೇರೋಣ ಎಂದು ನಿರ್ಧರಿಸಿರುವ ಆಟವನ್ನು ಆಡಲು ರೆಡಿ ಎಂಬಂತೆ ತಿಂಡಿ ತಿಂದು ಮನೆಯಿಂದ ಹೊರಬೀಳುತ್ತಿದ್ದೆವು.
ಆಗೆಲ್ಲಾ ಸಮಯ ಸಿಕ್ಕಾಗ ಈಗಿನ ರೀತಿ ಟಿ.ವಿ, ಮೊಬೈಲ್ ಅಂತ ಸಮಯ ಹಾಳು ಮಾಡುವ ಪರಿ ಇರಲಿಲ್ಲ. ಬೆಳಿಗ್ಗೆ ಎದ್ದಾಗಲೇ ನಮ್ಮ ಕಿವಿಗೆ ಬೀಳುವುದೆಂದರೆ ಅದು ರೇಡಿಯೋ ಧ್ವನಿಗಳು ಮಾತ್ರಾ. ಬೆಳಿಗ್ಗೆಯ ಪ್ರಾರ್ಥನೆ, ಚಿಂತನ, ವಾರ್ತೆ, ಮಧ್ಯಾಹನದ ಭಾವಗೀತೆ. ಚಿತ್ತಗೀತೆಗಳು, ಸಂಜೆಯ ಕೃಷಿರಂಗ, ಯುವವಾಣಿ, ನಾಟಕ, ಇತ್ಯಾದಿಗಳ ರೇಡಿಯೋ ಕಾರ್ಯಕೃಮ ಬಿಟ್ಟರೆ ರಾತ್ರಿ ಪಾಳಯದಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಯಕ್ಷಗಾನ ಬಯಲಾಟಗಳಷ್ಠೆ ನಮ್ಮ ಮನರಂಜನೆ. ಈ ಮನರಂಜನೆಗಳನ್ನು ಹೊರತುಪಡಿಸಿದರೆ ನಮ್ಮ ಪ್ರಪಂಚ ನಾವು ಕಂಡಿದ್ದು ನಮ್ಮ ಆಟಗಳಲ್ಲಿ.
ಎಷ್ಟೋ ಬಾರಿ ನಮ್ಮ ಆಟಗಳು ರಾತ್ರಿ ಕನಸಿನಲ್ಲೂ ದಾಳಿ ಇಟ್ಟು ಸೋಲಿಸುವ ಕ್ಷಣದಲ್ಲೇ ನನ್ನನ್ನು ಗೆಲ್ಲಿಸಿ ಕೂಗುವಂತೆ ಮಾಡಿದ್ದು ಉಂಟು. ನಮ್ಮೂರಿನ ಗುಡ್ಡದಲ್ಲಿ ಒಂದು ದೊಡ್ಡ ಮರವಿತ್ತು. ಅದರ ಹೆಸರೆ ‘ಹಾಸಿಗೆ ಗೇರು ಮರ’. ಮರದ ಬುಡಕ್ಕಿಂತ ಅದರ ಕೊಂಬೆಗಳೆ ಬಲು ಅಗಲ. ಇಬ್ಬರೂ ಸರಾಸರಿ ವ್ಯಕ್ತಿಗಳು ನಡೆಯಬಹುದಾದ ಆ ಕೊಂಬೆಗಳ ಮೇಲೆಯೆ ನಮ್ಮ ಆಟ ಸಾಗುತ್ತಿತ್ತು ಅದುವೇ ‘ಮರಕೋತಿ ಆಟ’. ಒಟ್ಟಿಗೆ ಸೇರುವ ಒಂದಿಷ್ಟು ಮಂದಿಯಲ್ಲಿ ಒಬ್ಬನನ್ನು ಸೆಲೆಕ್ಟ್ ಮಾಡಿ ಉಳಿದವರನ್ನು ಆತ ಮೇಲೆ-ಕೆಳಗೆ  ಅಟ್ಟಾಡಿಸಿ ಓಡಿಸಿಕೊಂಡು, ಕೈಯಲ್ಲಿ ಮುಟ್ಟಿ ಔಟ್ ಮಾಡಿ ಆಡುವ ಆಟವೇ ಈ ಮರಕೋತಿಯಾಟ. ಇದು ಥೇಟ್ ಕೋತಿಗಳ ಆಟದಂತೆ ಇರುವುದರಿಂದ ಮರಕೋತಿಯಾಟ ಎಂದೆ ನಮಗೆಲ್ಲಾ ಚಿರಪರಿಚಿತ. ಮರಗಳನ್ನು ಹತ್ತಿಹಾರುವ ಸಂಧರ್ಭ ಆಯತಪ್ಪಿ ಕೆಳಗೆ ಬಿದ್ದರೆ ಕೈಕಾಲು ಮುರಿಯುವುದು ಗ್ಯಾರಂಟಿ ಇದ್ದರೂ ಅದಕ್ಕೆಲ್ಲಾ ಭಯಪಡದೆ ಬೆಳೆದವರು ನಾವು. ಹಾಗೆ ಸಣ್ಣ ಪುಟ್ಟ ಏಟಿಗೆ ಹೆದರುವ ಜಾಯಮಾನವೂ ನಮ್ಮದಲ್ಲ ಬಿದ್ದು ಕೈ ಮುರಿದರೂ ಒಂದು ತಿಂಗಳು ಅಷ್ಟೆ ಕಣೋ ಸರಿಯಾಗುತ್ತೆ ಎಂದು ಕೈಗೊಂದು ಸಿಮೆಂಟ್ ಬ್ಯಾಂಡೆಜ್ ಏರಿಸಿಕೊಂಡು ನಗುತ್ತಲೇ ಇದ್ದೆವು ಆದರೆ ಇಂದಿನ ಮಕ್ಕಳು!.. ಮನೆಯ ಮೆಟ್ಟಿಲಿಂದ ಕೆಳಗೆ ಬಿದ್ದರೂ ಕೈಯೋ ಕಾಲೋ ಡ್ಯಾಮೇಜ್ ಆಗೋದು ಗ್ಯಾರಂಟಿ. ಇದು ಇಂದಿನ ಕಾಲದ ತಪ್ಪೋ, ಹೆತ್ತವರ ಕರುಣೆ ಮಮತೆಯ ತಪ್ಪೋ, ನಮಗ್ಯಾಕೆ!? ಹೇಳಿದರೆ ಕೆರಳುವ ವಿಚಾರ.
        ನಾನು ಓದಿದ್ದು ಸರಕಾರಿ ಶಾಲೆ, ಹಾಗಾಗಿ ಆಗೆಲ್ಲಾ ಆಂಗ್ಲ ಭಾಷೆ ಗೊತ್ತಿರಲಿಲ್ಲ. ‘ಎಳೆ ವಯಸ್ಸು ಸ್ವಚ್ಚ ಮನಸ್ಸು’ ಎಂಬಂತೆ ಆಗಿನ ಮುಗ್ಧತೆಯ ಆಟಗಳು ಇಂದಿನ ಬೆಟ್ಟಿಂಗ್‍ನ ಅಸಂತೋಷದ ಕ್ಷಣದಂತೆ ನೋವನ್ನು ತರುತ್ತಿರಲಿಲ್ಲ. ಬೇಸಿಗೆಯ ರಜೆಯಲ್ಲಿ ಮಾವಿನ ಕಾಯಿಯನ್ನು ಕೊಯ್ದು ಉಪ್ಪು ಊಡಿಕೊಂಡು ಸವಿಯುತ್ತಿದ್ದ ಕಾಲ ಇಂದಿಗೂ ಬಾಯಲ್ಲಿ ನೀರನ್ನು ಸುರಿಸುತ್ತವೆ. ‘ಕಳೆದು ಹೋದ ನೆನಪುಗಳು ಕಳೆದುಕೊಂಡ ಆಭರಣಗಳಂತೆ’ ಅದರ ಮೇಲಿನ ನೋವು.ನೆನಪು ಕಾಡುತ್ತಲೇ ಇರುತ್ತವೆ ಹೊರತು ಎಂದಿಗೂ ಮನಸ್ಸಿನಿಂದ ಮರೆಯಾಗುವುದಿಲ್ಲ. ಅಂದು ಆಡಿದ್ದ ಕುಂಟೆ ಬಿಲ್ಲೆ, ಲಗೋರಿ, ಗೋಲಿ, ಗಿಲ್ಲಿ ದಾಂಡು, ಜೋಕಾಲಿ, ಜೂಟಾಟ, ಬುಗುರಿ, ಗಿರಿಗಿಟ್ಲೆ, ಈಜಾಟ, ಅಳಿಗುಳಿಮನೆ, ಚೌಕಾಬಾರ, ಅವರ್ ಬಿಟ್ ಇವರ್ ಬಿಟ್ ಅವರ್ಯಾರು ಸೇರಿದಂತೆ ಅನೇಕ ಆಟಗಳು ಇಂದು ಮರೆಯಾಗಿ ಏನು?, ಹೇಗೆ? ಎಂಬುದು ಅರಿಯದೆ ಪುಸ್ತಕದಲ್ಲೋ, ಇಂಟರ್‍ನೆಟ್‍ನಲ್ಲೋ ಹುಡುಕಿ ಓದುವ ಕಾಲ ವರ್ತಮಾನದಲ್ಲಿದೆ. ಅಂದಿನ ‘ಕಣ್ಣಾಮುಚ್ಚೆ ಕಾಡೇ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು, ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ  ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ’ ಎಂದಿರುವ ಆಟದ ಹಾಡು ಇಂದು ನೆರೆದು ದೊಡ್ಡವರಾದ ಅದೆಷ್ಟೋ ಪ್ಯಾಟೆಮಂದಿಯ ಹುಡುಗರಿಗೆ ತಿಳಿಯದಿರುವುದು ಬೇಸರ ತರಿಸುತ್ತೆ. ಹಳ್ಳಿಯ ಸೊಗಡಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ ಇವುಗಳ ಇಂಗಿತ, ಇಂಪು  ಸಿಕ್ಕೆ ಸಿಕ್ಕಿರುತ್ತೆ. ಆದರೆ ಇಂದು ಹಳ್ಳಿಗಳಲ್ಲೂ ಆಧುನಿಕತೆಯ ಸೋಗಡಿನ ಗಾಳಿ ಬೀಸಿ ಅಲ್ಲಿಯೂ ಕಾಣದಾಗಿರುವುದು ಯಾರ ದುರಾದೃಷ್ಟವೋ ತಿಳಿಯುತ್ತಿಲ್ಲ.
        ನನಗೆ ಈಗಲೂ ನೆನಪಿದೆ ಅಂದು ಎಮ್ಮೆಯನ್ನು ಸ್ನಾನಕ್ಕೆಂದು ನೀರಿಗೆ ಕರೆದುಕೊಂಡು ಹೋಗುವಾಗ ಅದರ ಬಾಲ ಹಿಡಿದುಕೊಂಡು ಹೋಗಿ ಅದರ ಜೊತೆಯೇ ನೀರಿಗೆ ಬೀಳುವ ಆಟ, ಮೊದಲ ಮಳೆಯ ಸಂಧರ್ಭ ಹರಿವ ನೀರಿಗೆ ಕಾಗದದ ದೋಣಿಯನ್ನು ಬಿಟ್ಟು ಅದರಲ್ಲೇ ಖುಷಿ ಪಡುತ್ತಿದ್ದದ್ದು, ಸೈಕಲ್ ಚಕ್ರವನ್ನು ಬಳಸಿ ಸಣ್ಣ ಕೋಲಿಂದ ಓಡಿಸುತ್ತಿದ್ದು, ಹೀಗೆ ಅನೇಕ ವಿಧದಲ್ಲೇ ಅದೆಷ್ಟು ಸಂತೋಷ ಪಡುತಿದ್ವಿ ಎಂದರೆ ಹೇಳಲಾಗದು ಎನಿಸುತ್ತೆ. ಹಾಗೆಯೇ ಎಂದಿಗೂ ಎಂದೆಂದಿಗೂ ಇನ್ನೂ ಅವುಗಳನ್ನು ಸವಿಯುವುದು ಕಷ್ಟ ಅನ್ನಿಸುತ್ತದೆ.
       ಬಾಲ್ಯದ ಆಟ-ಹಾಡು-ಹಸೆ ಇಂದು ಕಾಲದ ತೊರೆಯಲ್ಲಿ ಕೊಚ್ಚಿ ಹೋಗುತ್ತಿದ್ದು, ತಡೆಯಲು ಯತ್ನಿಸುವ ನೆನಪಿನ ಹಾಯಿದೋಣಿಗಳು ಇಲ್ಲದೇ ಎಲ್ಲಾ ಆಟಗಳು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿವೆ. ಅಂದಿನ ಆಟಗಳು ಮನಸ್ಸಿಗೆ ಉಲ್ಲಾಸದ ಜೊತೆ ದೇಹಕ್ಕೆ ಒಂದಿಷ್ಟು ವ್ಯಾಯಾಮವನ್ನು ನೀಡಿ ಆರೋಗ್ಯಕರವಾಗಿರಿಸುತ್ತಿದ್ದವು ಆದರೆ ಇಂದು ಅಂತಹ ಆಟಗಳೇ ಆಡದೇ ಅನಾರೋಗ್ಯಕರ ಕೆಲಸವನ್ನು ಮಾಡುತ್ತಿದ್ದೇವೆ ಎನ್ನಲೂ ವಿಷಾಧಕರವಾಗುತ್ತದೆ. ಹಳೆಯ ನೆನಪುಗಳು ಹೊಸ ಜೀವನವನ್ನು ಕಟ್ಟುತ್ತವಂತೆ ಹಾಗೆ ಅವುಗಳು ನಮ್ಮೆಲ್ಲರ ಬದುಕನ್ನು ವಿಧವಿಧವಾಗಿ ಕಲಿಸಿ ಬೆಳೆಸುತ್ತವೆ ಎನ್ನುವುದರಲ್ಲೂ ಯಾವುದೇ ಅಪಾರ್ಥವಿಲ್ಲ. ಇನ್ನಾದರೂ ಹಳೆಯ ಆಟವನ್ನು ಗುರುತಿಸಿ ಬೆಂಬಲಿಸೋಣ, ಪೋಷಿಸೋಣ ಅಲ್ವಾ!? ವಾಟ್ ಯೂ ಸೇ...

ಹೆಣ್ಣು-6


       'ಬೇಲಿಯೆ ಎದ್ದು ಹೊಲ ಮೆಯ್ದರೆ ಗತಿಯೇನು' ಎಂದು ಹಿರಿಯರು ಯಾವಾಗಲೂ ಹೇಳಿದ್ದು ನನಗೆ ಈಗಲೂ ನೆನಪಿದೆ. ನಾವು ಅವರ ಮಾತನ್ನು ಕೇಳಿದ್ದೆವೆ ಹೊರತು ಎಂದಿಗೂ ಫಾಲೋ ಮಾಡಲಿಲ್ಲ. ಹೆಣ್ಣು ಮಕ್ಕಳು ಸಮಾಜದ ಕಣ್ಣುಗಳಿದ್ದಂತೆ. ಗಂಡು ಮಕ್ಕಳನ್ನು ಅತೀರೇಕದಿಂದ ಕಾಣುವುದು, ಹೆಣ್ಣು ಮಕ್ಕಳನ್ನು ವಕ್ರದೃಷ್ಠಿಯಿಂದ  ಕಾಣುವುದು ಮಾಡಬಾರದು ಅಂತಲೂ ಅವರು ಹೇಳಿ ಹೋಗಿದ್ದಾರೆ. ಆದರೆ ಇಂದೇನಾಗುತ್ತಿದೆ!. ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು, ಗುಲಾಮಿ ಇವಳಲ್ಲ, ಸಲಾಮು ಹೊಡೆಯೊಲ್ಲ ಎಂದು ಮನೆಯಿಂದ ಹೊರಬಿದ್ದು ಅಧಿಕಾರ ಮತ್ತು ಹಕ್ಕುಗಳು ಹಾಗೂ ಜೊತೆಯಲ್ಲಿ ಕರ್ತವ್ಯ ಹಾಗೂ ಜವಾಬ್ಧಾರಿಗಳನ್ನು ಅರಿತುಕೊಂಡಿದ್ದಾಳೆ. ದಕ್ಷತೆ ಎಂಬುದೇನು ಎನ್ನುವುದನ್ನು ಅರಿತಿದ್ದಾಳೆ. ಎಲ್ಲಾ ರಂಗದಲ್ಲೂ ಸಫಲತೆಯನ್ನು ಕಂಡುಕೊಂಡಿದ್ದಾಳೆ. ಇವೆಲ್ಲವೂ ಸಂತೋಷದ ವಿಚಾರವೇ ಆಗಿದೆ. ಆದರೆ ಇಂದು ಅದೇ ಹೆಣ್ಣು ದುಶ್ಚಟಗಳಿಗೆ ದಾಸಿಯಾಗಿ ಸಂಸ್ಕ್ರತಿಯೆಂಬ ಗೆರೆ ದಾಟಿ ಅನಾಚಾರಕ್ಕೆ ಲಗ್ಗೆ ಇಡುತ್ತಿರುವುದು ಭಯ ತರಿಸುತ್ತದೆ.
ಜಗತ್ತು ಬದಲಾಗಿದೆ. ಎಲ್ಲವೂ, ಎಲ್ಲರೂ ಬದಲಾವಣೆಯ ಗಾಳಿಗೆ ಸಿಲುಕಿದ್ದಾರೆ. ನಾಗರಿಕತೆಯು ಬದಲಾಗಿದೆ.
ಹಾಕೋ ಡ್ರೆಸ್‍ನಿಂದ ಹಿಡಿದು ಮಾತಾಡೋ, ಜೀವನ ನಡೆಸೋ ಶೈಲಿಯವರೆಗೂ ಬದಲಾಗಿದೆ. ಹೆಣ್ಣಿನ ಜೀವನಕ್ಕೆ ಬಂದರೆ ಇದು ಇನ್ನೂ ಜಾಸ್ತಿ ಅಳವಡಿಕೆ ಕಂಡಿದೆ ಏನಿಸುತ್ತದೆ. ಆದರೆ ಇಂದಿನ ಹುಡುಗಿಯರ ಅಬ್‍ನಾರ್ಮಲ್ ಏದೆಗಾರಿಕೆಯನ್ನು ಕಂಡಾಗ ಅಚ್ಚರಿ, ಬೆರಗು, ಮೂಡಿ ಎಲ್ಲಾ ಹಾರ್ಮೋನುಗಳ ಮಹಿಮೆ ಎನಿಸುತ್ತದೆ. ಎಲ್ಲೆಂದರಲ್ಲಿ ಬಟ್ಟೆಬಿಚ್ಚಿ ಅರೆಬೆತ್ತಲಾಗಿ ಸಾರ್ವಜನಿಕವಾಗಿ ತೆರೆದುಕೊಳ್ಳುವ,  ಅದನ್ನು ಯಾರೂ ಗಮನಿಸಿಲ್ಲ ಎಂದು ತಮ್ಮ ಪಾಡಿಗೆ ತಾವಿರುವ ವಾತಾವರಣ ನೋಡಿದಾಗ ಅಯ್ಯೋ ಏನಿಸುತ್ತದೆ. ಹಿಂದೆಲ್ಲಾ ಎಲ್ಲೋ ಫೋಟೋಗಳಲ್ಲಿ ಕುಡಿಯುತ್ತಿರುವ, ಸಿಗರೇಟ್ ಸೇದುತ್ತಿರುವ ಫಾರಿನ್ ಹುಡುಗಿಯನ್ನು ಕಂಡರೆ ಬಾಯಿ ಮೇಲೆ ಕೈಯಿಟ್ಟುಕೊಂಡು ಅಬ್ಬಾ ಎಂಥಾ ಕಾಲ ಬಂದಿತಪ್ಪಾ! ಎಂದು ಆಶ್ಚರ್ಯಚಕಿತರಾಗುತ್ತಿದ್ದೆವು. ಆದರಿಂದು ಇಂತಹ ಸೇವನೆಗಳು ನಮ್ಮ ಭಾರತಕ್ಕೂ ಲಗ್ಗೆ ಇಟ್ಟು ಕಾಮನ್ ಎನ್ನುವ ಹಂತಕ್ಕೆ ತಲುಪಿದೆ.
ಸಾಮಾನ್ಯವಾಗಿ ಐಟಿಬಿಟಿ ಕಂಪೆನಿಗಳ ಆವರಣದಲ್ಲಿ ನೀವು ಒಂದು ವಾಕ್ ಮಾಡಿ ನೋಡಿದರೆ ಹುಡುಗಿಯರ ಸಿಗರೇಟ್ ಸೇವನೆಯ ಶೋಕಿ ನಿಮಗೆ ಶಾಕ್ ನೀಡುವುದು ಗ್ಯಾರಂಟಿ. ಹೌದು! ಸಿಗರೇಟ್ ಸೇವನೆ ಕೆಲವರಿಗೆ ಚಟವಷ್ಟೆ ಅಲ್ಲ ಅದೊಂದು ಶೋಕಿಯೂ ಹೌದು. ಎನಾದರೂ ಇದು 21 ಶತಮಾನ ನೋಡಿ ಇಲ್ಲಿ ಮಾನಕ್ಕಿಂತ ಶೋಕಿಯೇ ಇಂಪಾರ್ ಟೆಂಟ್.
 ಫಾರಿನ್ ಸಂಸ್ಕ0ತಿಯವರು ಏನಾದರೂ ಮಾಡಿಕೊಂಡು ಸಾಯಲಿ ಆದರೆ ನಮಗಿದು ಸಮಂಜಸವೇ ಎಂಬುದನ್ನು ನಾವರಿಯಬೇಕು. ಕೇವಲ ಸಿಗರೇಟ್ ಸೇವನೆಯೊಂದರಿಂದಲೇ ತಲೆದೊರುವ ಸಮಸ್ಯೆಗಳನ್ನು ಏಣಿಸಿದರೆ ಇದೆಲ್ಲಾ ಬೇಕಾ ಎನಿಸುತ್ತೆ. ಉಸಿರಾಟದ ಸಮಸ್ಯೆ, ಕಿಡ್ನಿ ವೈಫಲ್ಯ, ಬಂಜೆತನ, ಗರ್ಭಪಾತ, ಕಡಿಮೆ ತೂಕ, ಶಿಶುಮರಣ, ಲೈಂಗಿಕ ನಿರುತ್ಸಾಹತೆ ಹೀಗೆ ಇನ್ನೂ ಅನೇಕ ಸಮಸ್ಯೆ ಈ ಚಟದಿಂದ ನಾವೇ ಆಮುದು ಮಾಡಿಕೊಳ್ಳಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವಿಶ್ವದ ಶೇಕಡಾ 20ರಷ್ಟು ಅಂದರೆ ಸುಮಾರು 100 ಕೋಟಿಗೂ ಹೆಚ್ಚು ಮಹಿಳೆಯರು ಸಿಗರೇಟು ಸೇದುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆಯಂತೆ.
ಇನ್ನಾದರೂ ಚಿಂತಿಸಿ ಹೆಣ್ಣುಮಕ್ಕಳೆ ನಿಮ್ಮ ಒಂದು ಪರಿವರ್ತನೆ ನಮ್ಮ ದೇಶ, ರಾಜ್ಯ, ಊರು, ಮನೆ, ಇತ್ಯಾದಿಗಳನ್ನು ಬದಲಿಸಿ ಸುಖದ ಬೆಳಕಾಗಬಹುದು, ಸಾರಿ!!, ಈ ಮಾತುಗಳು ಮಧ್ಯ ಮತ್ತು ಧೂಮಲೀಲೆಗೆ ಇಳಿದಿರುವ ನಾರಿಗೆ ಮಾತ್ರಾ. ಮನೆಬೆಳಗುವ ಹೆಣ್ಣು ಸಿಗರೇಟ್ ಬೆಳಗಿದರೆ ಮನೆಗೆ ಜೊತೆಗೆ ದೇಶಕ್ಕೆ ಬೆಂಕಿ ಇಡುತ್ತಿದ್ದಾಳೆ ಎಂದರ್ಥ ಕಾರಣ ಮಾನ ಹಾಗೂ ಜೀವನ ಎರಡು ಹಾರಾಜಾಗುವುದು ಪ್ರಭುತ್ವದ್ದೆ ಹೊರತು ಹುಡುಗಿಯರದಲ್ಲ!..

ಜಗತ್ತಿನಲ್ಲಿಯೇ ಕಷ್ಟದ ಕೆಲಸ ಯಾವುದು ಗೊತ್ತಾ!?

 “ದಿನಂಪ್ರತಿ ಜಗತ್ತಿನಲ್ಲಿ ಅನೇಕ ಜನ ತಮ್ಮ-ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಆದರೆ ಜಗತ್ತಿನಲ್ಲಿಯೇ ಮನುಷ್ಯನಿಗೆ ಅತ್ಯಂತ ಕಷ್ಟವಾದ ಕೆಲಸ ಅಥವಾ ಹೆಚ್ಚು ಕಷ್ಟಕರವಾದ ಕೆಲಸ ಯಾವುದು!!?”...
ಹೀಗೊಂದು ಪ್ರಶ್ನೆ ಕೇಳಿ ತಲೆ ಕೆರೆಯುವಂತೆ ಮಾಡಿದ್ದು, ನಮ್ಮ ಸಿರಿ ಮಾಸ ಪತ್ರಿಕೆಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಭಾವನಾಜೀವಿ ಶ್ರೀಮತಿ ಜೆ.ಎಸ್. ರುಕ್ಮಿಣಿಯವರು. ಪ್ರಶ್ನೆ ಒ0ಥರಾ ಎಲ್ಲರ ಜೀವನಕ್ಕೂ ನೆರೆಟಿವ್ ಅನಿಸಿದ್ದರೂ, ನನ್ನ ಮುಂದೆ ಮೇಡಂ ಈ ಪ್ರಶ್ನೆ ಕೇಳಿದಾಗ ಒ0ದು ಕ್ಷಣ ನನ್ನೋಳಗೆ ನಾನು ಸ್ಥಬ್ಧನಾಗಿಬಿಟ್ಟೆ. ಮನಸ್ಸನ್ನು ಶರವೇಗದಲ್ಲಿ ಓಡಾಟ ಆರಂಭಿಸಿ, ರಾಜ್ಯ, ದೇಶ, ವಿದೇಶದಿಂದ ಹಿಡಿದು, ಸಂಸ್ಕøತಿಯಿಂದ ಸಮಾಜದೊರೆಗೂ, ಅಡುಗೆ ಮನೆಯಿಂದ ಬಚ್ಚಲ ಮನೆಯವರೆಗೂ, ಅಷ್ಟೇ ಏಕೆ ಬೀದಿಯ ಪುಟ್‍ಪಾತ್ ದಾರಿ ಅಂಗಡಿಗಳಿಂದ ಹಿಡಿದು, ಎಮ್.ಎನ್.ಸಿ ಕಂಪೆನಿಯ ಒಳಗೂ ಹೊರಗೂ ಎಲ್ಲಾ ಕಡೆಗಳಲ್ಲೂ ಆಡಿಸಿ, ಓಡಿಸಿ, ತಡಕಾಡಿಸಿ, ಸರ್ಚ್ ಮಾಡಿದರೂ, ಎಲ್ಲೆಂದರಲ್ಲಿ ಯೋಚನೆಯ ತಕಧಿಮಿತವನ್ನೂ ಆರಂಭಿಸಿದರೂ, ಯಾವುದಿರಬಹುದೂ ಈ ಪ್ರಶ್ನೆಗೆ ಉತ್ತರ? ಏನೆಂದೂ ಹೇಳಬಹುದು ಪ್ರತ್ಯುತ್ತರ ಎನ್ನುವ ಕೃಮಾಗತದಲ್ಲಿ ಎಲ್ಲ್ಲಿಯೂ ನಿಖರವಾದ ಉತ್ತರ ನೀಡಲು ತಯಾರಿರದೇ ಸುಮ್ಮನೆ ನಗುಮುಖದಲ್ಲೇ ನಿಂತುಬಿಟ್ಟೆ.
ಪ್ರಶ್ನೆಗೆ ಸಮಜಾಯಿಸಿ ಉತ್ತರವನ್ನು ಮಾತುಬಲ್ಲ ನಾನು ಕೊಡಬಹುದು ಏನಿಸಿದರೂ ಎಲ್ಲೋ ಒಂದು ಕಡೆ ನನ್ನ ಮನಸ್ಸಿನ ನೇರಕ್ಕೆ ನಾ ಹೇಳಿದ್ದು ತಪ್ಪಾಗಲೂಬಹುದು ಎಂದೆನಿಸಿ, ಕೋಲಿಗೆ ಕೋಲು ಎಂಬಂತೆ  ಏನ್ ಸಮಾಚಾರ ಮೇಡಂ!, ನೀವ್ಯಾಕೆ ಈ ಪ್ರಶ್ನೆ ಎತ್ತಿದ್ದು ಈಗ? ಪ್ರಶ್ನೇ ಮೂಡಿದ್ದರ ಸೋಜಿಗ ಕೇಳಬಹುದೇ? ಎಂಬ ನನ್ನ ಇನ್ನೊಂದಿಷ್ಟು ಮರುಪ್ರಶ್ನೆಗಳನ್ನು ಮುಂದಿಟ್ಟೆ.
ನಾನೊಮ್ಮೆ ಕಾರ್‍ನಲ್ಲಿ ಹೋಗುವಾಗ, ರಸ್ತೆಬದಿಗಳಲ್ಲಿ ತಳ್ಳಿಕೊಂಡು ಹೋಗುವ ಸೈಕಲ್ ಗಾಡಿಗಳ ಮೂಲಕ ವ್ಯಾಪಾರ ಮಾಡುವವರನ್ನು ನೋಡಿದಾಗ, ಅವರು ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೋ ದೂರದೂರಿಗೆ ಹೋಗಿ ಅಲ್ಲಿ ಪದಾರ್ಥಗಳನ್ನು ಮೂಟೆಕಟ್ಟಿಕೊಂಡು ತಂದು ಮನೆ ಮನೆಗೋ, ರಸ್ತೆ ಬದಿಗಳಲ್ಲೋ ನಿಂತು ವ್ಯಾಪಾರ ಮಾಡುವುದನ್ನು ಏಣಿಸಿ ಹೀಗನ್ನಿಸಿತು ಸಂದೀಪ್ ಎಂದರು ಮೇಡಂ.
ಓಹೋ ಹೀಗಾ ಸಮಾಚಾರ ಆದ್ರೂ ವಾವ್ಹ್ ಸೂಪರ್ ಪ್ರಶ್ನೆ ...ಮೇಡಂ ರೀಯಲೀ ನನ್ನಲ್ಲಿ ಗರಿಗೆದರಿ ದಿನವೂ ಹೊಸತನ್ನು ಹುಡುಕುವ ಭಾವನೆಗೆ ಇನ್ನಷ್ಟೂ ಕೆಲಸ ಸಿಕ್ಕಂತಾಯಿತು. ಥ್ಯಾಂಕ್ಯೂ ಮೇಡಂ ಎನ್ನುತ್ತಾ ಇಂಥಹ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡುವುದು ಮೂರ್ಖತನವೆನಿಸುತ್ತದೆ, ನನಗೆ ಒಂದಿಷ್ಟು ಸಮಯ ಬೇಕೆ ಬೇಕು ವಿಷಯ ವೈವಿಧ್ಯವನ್ನುಆಲೋಚಿಸಿ, ಸಮಾಲೋಚಿಸಿ, ಸಂಧರ್ಭದಲ್ಲಿ ನಿಮಗೆ ಉತ್ತರಿಸುತ್ತೇನೆ ಎಂದು ಕ್ಯಾಬಿನ್ ಹೊರಬಂದೆ.
ಈಗ ನಿಮ್ಮ ಮೈಂಡ್‍ನಲ್ಲೂ ಇದೇನೂ ಅಷ್ಟೊಂದು ಕಷ್ಟದ ಪ್ರಶ್ನೆಯಾ ಎಂದೆಸುತ್ತಿರಬಹುದು ಅಲ್ವಾ? ಆದರೆ ನನ್ನ ಮನಸ್ಸೆ ಹಾಗೆ, ಯಾವುದನ್ನೂ, ಯಾರನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಂಡು ಬಿಡುವ ಜಾಯಮಾನದಲ್ಲ್ಲ ಅದು. ಏನಿದ್ದರೂ ನೆಕ್ಕಿ ರುಚಿನೋಡಿದ ಬಳಿಕವೇ ಒಪ್ಪೋ- ಉಪ್ಪೋ, ಚಪ್ಪೆಯೋ- ಹುಳಿಯೋ ಎಂದು ಪ್ರರಿಭ್ರಮಿಸುವುದು. ಸುಲಭವಾಗಿ ಒಪ್ಪಿಕೊಳ್ಳುವುದು, ಉತ್ತರ ನೀಡೋದು, ಪೆದ್ದುಪೆದ್ದಾಗಿ ಉತ್ತರದ ಮಾತನಾಡುವುದು ನನ್ನ ಪ್ರಕಾರ ಸಮಂಜಸವೂ ಅಲ್ಲ. ನಾನೊಂದು ಪರಿಸರಕ್ಕೆ ವಾಸಿಸಿಕೊಂಡಿದ್ದನ್ನು ಏಣಿಸಿ ಮೇಲಿನ ಪ್ರಶ್ನೆಗೆ ಉತ್ತರ ಹೇಳಿದರೆ, ಅಲ್ಲಿ ಕೆಲಸ ಮಾಡುವವರ ಅನೇಕಾನೇಕ ಕೈಂಕರ್ಯವನ್ನು ಗಮನಿಸಿ ಹೇಳಿದರೆ, ಪ್ರತಿ ಕೆಲಸವವೂ ಅವರವರ ಭಾವನೆಗಳಿಗೆ ಹೊಂದಿಕೊಂಡು ಅರುಹಿದರೆ ಮನದಾಳದಲ್ಲಿ “ಕಷ್ಟ ಕಷ್ಟ ಅದು ಕಷ್ಟವೇ” ಎಂಬ ಉತ್ತರ ಬರುತ್ತೆ. ಅದು ವ್ಯಕ್ತಿ, ವರ್ಗ, ಎನ್ನುವುದಕ್ಕಿಂತ ಮನಸ್ತಿತಿ ಅನ್ನಬಹುದೇನೋ ಎನಿಸುತ್ತೆ. ಸರ್ಕಾರದ ಹತ್ತಿರ ಈ ಪ್ರಶ್ನೆ ಎತ್ತಿದರೆ ಮಲ ಎತ್ತುವುದು ಅತ್ಯಂತ ಅಸಹ್ಯಕರ ಹಾಗೂ ಕಷ್ಟದ ಕೆಲಸ ಎನ್ನುವ ವೈರುಧ್ಯದ ಉತ್ತರ ಕೊಟ್ಟರೆ, ರಸ್ತೆಯಲ್ಲಿ ಡಾಂಬರ್ ಕೆಲಸ ಮಾಡುವುದು ಅತ್ಯಂತ ಬೇಗೆಯ ಕಷ್ಟದ ಕಾಯ ಎಂದು ನಾನು ಉತ್ತರಕೊಡುವೆ ಆದರೆ ಇದು ನಮ್ಮ ನೇರಕ್ಕೆ ಅಷ್ಟೆ.


ಸತ್ಯ ಜಿಜ್ಞಾಸೆಯಿಂದ ಮಥಿಸಿ ಸಿಗಬೇಕು ಎಂದು ಹೇಳುತ್ತಾರೆ ಆದರೆ ಇಲ್ಲಿ ಜಿಜ್ಞಾಸೆ ಯಾವುದು!? ಸತ್ಯ ಯಾವುದು!? ಎನ್ನುವ ಭಾವನೆಗಳನ್ನು ಅಂತಃಕರಣವನ್ನು ಕಾಡುತ್ತವೆ ಅದಕ್ಕಾಗಿ ನೋಡೋಣ ಈ ಪ್ರಶ್ನೆಯನ್ನು ಜನಕ್ಕೆ ಎದುರಿಟ್ಟರೆ ಅವರ ಬಾಯಿಂದ ಯಾವ್ಯಾವ ಉತ್ತರಗಳು ಬರುತ್ತವೆ ಎಂದು ಒಂದು ಸಮೀಕ್ಷೆಯನ್ನು  ಆರಂಭಿಸಿಯೇ ಬಿಟ್ಟೆ.
ನನ್ನ ಮೊದಲ ಪ್ರಯತ್ನವೆಂಬಂತೆ ಫೇಸ್‍ಬುಕ್‍ನ ಗೆಳೆಯರಿಗೆ ಈ ಪ್ರಶ್ನೆ ಮುಂದಿಟ್ಟೆ. ಉತ್ತರಗಳು ಬಹುಬೇಗನೆ ಬಗೆ ಬಗೆಯಲಿ ಟೈಮ್ ಲೈನ್‍ನ ಕಮೆಂಟ್‍ಬಾಕ್ಸ್‍ಗೆ ನಾ ಮುಂದೆ ತಾ ಮುಂದೆ ಎಂಬಂತೆ ಬಂದಿಳಿದವು. ಮನೆಯಲ್ಲಿ ಅಮ್ಮ ಮಾಡುವ ಕೆಲಸ ಅವಳು ನಮಗಾಗಿ ಕಷ್ಟಪಡುವುದನ್ನು ನೋಡಿದರೆ ಅವಳಿಗೆ ಜೀವನದಲ್ಲಿ ಕಷ್ಟದ ಕೆಲಸ ಇರೋದು ಅಂತ ಆತ್ಮೀಯನೊಬ್ಬ ಹೇಳಿದರೆ, ರೈತ ಎಲ್ಲರಿಗಿಂತ ಹೆಚ್ಚು ಕಷ್ಟ ಪಡುವವ, ದೇಶ ಕಾಯೋ ಸೈನಿಕ ಪ್ರಾಣ ಒತ್ತೆ ಇಟ್ಟು ಹೋರಾಡುತ್ತಿರುತ್ತಾನೆ. ಚಳಿಯಲ್ಲಿ ಅವನ ಪಾಡು ಅದೆಷ್ಟು ಕಷ್ಟವೆಂದರೆ ಹೇಳತೀರದು ಎಂದು ಮತ್ತೊಬ್ಬಳು ಗೆಳತಿ ಉತ್ತರಿಸಿದಳು. ಮತೊಬ್ಬ “Very urgent but not important, Very important but not urgent” ಎನ್ನುವ ಹಾಸ್ಯ ಸಮರ್ಥನೆಯನ್ನು ಹೇಳಿದ್ದ. ಕಂಪೆನಿಯಲ್ಲಿ ಕೆಲಸ ಮಾಡುವ ಎಜ್ಯುಕೇಟೆಡ್ ಮಿತ್ರ ಪ್ರಾಡಕ್ಟ್ ಗಳನ್ನು ತಯಾರಿಸುವಾಗ ಅದರ ರುಚಿ (taste)   ನೋಡುವ ಕೆಲಸ ಮಾಡುತ್ತಾರಲ್ಲ (ಉದಾ; ಸಿಗರೇಟ್, ಕೂಲ್ ಡ್ರಿಂಕ್ಸ್, ವೈನ್ ಇಲ್ಯಾದಿಗಳ ರುಚಿ ನೋಡುವುದು) ಅದು ತುಂಬಾನೆ ಕಷ್ಟ ಮಗಾ ಎಂದ. ಯಾವುದು ನಂಬುವುದು!?,ಯಾವುದು ಬಿಡುವುದು!?, ಆದರೂ ಇವ್ಯಾವುದು ಸರಿಯಾದ ಉತ್ತರವೆಂದು ಅನಿಸದೇ ಮುಂದಿನ ಸಮೀಕ್ಷೆಯತ್ತ ಮುಂದುವರಿದೆ. ನಿಮ್ಮ ಮನದಲ್ಲೂ ಈಗ ಪ್ರಶ್ನೆಗೆ ಉತ್ತರದ ಆಲೋಚನೆಗಳು ಅದಾ ಇದಾ ಎಂದು ಮೂಡಿ ಹುಳ ಬಿಟ್ಟಂತೆ ಆಗುತ್ತಿರಬಹುದಲ್ವಾ. ಸ್ವಲ್ಪ ಇರೀ ಇನ್ನೂ ಒಂದಿಷ್ಟು ಹಿರಿಯ ಕಿರಿಯರನ್ನು ವಿಚಾರಿಸಿದಾಗ ಅವರು ಹೇಳಿದ ಉತ್ತರ ಹೇಳುತ್ತೇನೆ ಓದಿ.
ಹಿಂದಿ ಚಿತ್ರರಂಗದ ಖ್ಯಾತ ನಟಿ ಸೋನಂ ಕಪೂರ್‍ಗೆ  ಸೆಟ್‍ನಲ್ಲಿ ಮನೆಯವರ ಜೊತೆ ನಟಿಸುವುದು ಕಷ್ಟದ ಕೆಲಸವಂತೆ. ಪ್ರಸಿದ್ದ ರಾಜಕಾರಣಿಯೊಬ್ಬ ಹೇಳಿದ ಹಾಗೆ ಅವನಿಗೆ ಕನಸುಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟವಂತೆ. ಪರಭಾಷಾ ನಟಿ ನಮಿತಾಗೆ ನಿರ್ಧೇಶನ ಮಾಡುವುದು ಕಷ್ಟ ಅನಿಸುತ್ತದೆ. ಗ್ಯಾಂಗ್‍ಸ್ಟರ್, ಫ್ಯಾಷನ್, ಕ್ವೀನ್, ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಯಾಗಿ ಮಿಂಚಿರುವ ಕಂಗನಾ ರನೋಟ್‍ಗೆ ದ್ವಿಪಾತ್ರದಲ್ಲಿ ನಟಿಸೋದು ಕಷ್ಟದ ಕೆಲಸ ಅನ್ನಿಸುತ್ತದಂತೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕಷ್ಟ ಬದುಕಲ್ಲಿ.
ಕೆಲವರಿಗೆ ಉತ್ತಮ ವ್ಯಕ್ತಿಯಾಗುವುದು ಕಷ್ಟ ಎನಿಸಿದರೆ ಇನ್ನೂ ಕೆಲವರಿಗೆ ಮರಣೋತ್ತರ ಪರೀಕ್ಷೆ ಮಾಡುವುದು ಕಷ್ಟ ಎನಿಸುತ್ತದಂತೆ. ಇಲ್ಲಿ ಪರಾಮರ್ಶೆಗೆ ಇಳಿದರೆ ಮಾನಸಿಕ ವಿಕ್ಷಿಪ್ತತೆಗೆ ಒಳಗಾಗುತ್ತೇವೆ. ಸರ್ಕಾರಿ ಅಧಿಕಾರಿಯೊಬ್ಬ ಬಡತನದ ರೇಖೆ ನಿರ್ಧರಿಸುವುದು ಕಷ್ಟದ ಕೆಲಸ ಎಂದರೆ, ಹಿರಿಯರ ಬದುಕಿನ ಒಳ ಅರ್ಥಗಳನ್ನು ಅರಿಯೋದು ಕಷ್ಟವೆಂದು  ವೃದ್ಧಾಶ್ರಮದ ಸಂಘಟಕರು ಹೇಳುತ್ತಾರೆ. ಖೈದಿಗಳನ್ನು ಕಾಯುವ ಜೈಲರ್ 500ಕ್ಕಿಂತ ಹೆಚ್ಚು ಖೈದಿಗಳು ಜೈಲಲ್ಲಿ ತುಂಬಿದಾಗ ಅವರನ್ನು ನೋಡಿಕೊಳ್ಳೋದು ಕಷ್ಟದ ಕೆಲಸ ಎಂದರೆ,  ಖೈದಿಯೊಬ್ಬ ಸೆರೆಮನೆಯಲ್ಲಿ ಖುರ್ಚಿ ನೇಯುವ ಕೆಲಸ ಕಷ್ಟ ಅಂತಾನೆ. ವಿದ್ಯಾರ್ಥಿ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಕಣ್ರೀ ಎಂದರೆ ಕಲಾವಿದನೊಬ್ಬ ರೇಖೆಯಲ್ಲಿ ಡೊಂಬರಾಟ ನಡೆಸುವುದು ಕಷ್ಟದ ಕೆಲಸವೆಂದು ಹೇಳುತ್ತಾನೆ. ಹೌಸ್ ವೈಫ್ ಆಗಿರುವುದು ಕಷ್ಟವೆಂದು ಮಹಿಳಾ ಮಣಿಯೊಬ್ಬಳು ಹೇಳಿದರೆ, ಶಾಸಕರಾಗಿ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸವೆಂದು ಎಂ.ಎಲ್.ಎ ಯೊಬ್ಬರು ಹೇಳುತ್ತಾರೆ. ಸಿಟಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಕಷ್ಟ ಎಂದು ಒಬ್ಬ ಹೇಳಿದರೆ ಕಾಮಿಡಿ ಪಾತ್ರಗಳನ್ನು ನಿರ್ವಹಿಸುವು ಕಷ್ಟದ ಕೆಲಸವೆಂದು ನಟನೊಬ್ಬ ಹೇಳುತ್ತಾನೆ... ಹೀಗೆ ಮನಸ್ಥಿತಿಯ ನೇರಕ್ಕೆ ಅವರರವರ ಕಷ್ಟವೆಂದರೆ ಪ್ರಶ್ನೆಯೆಂಬ ಹುಳಕ್ಕೆ ವಿಷವೆಂಬ ಉತ್ತರ ಆಗಬಹುದು.
ಬಹುಶಃ ಈ ಪ್ರಶ್ನೆಗೆ ಇದೇ ರೀತಿ ಉತ್ತರ ನೀಡುತ್ತಾ ಹೊರಟರೆ ನಿಮಗೂ ಹೌದು ಹೌದು ಎನ್ನಿಸುತ್ತಲೇ ಹೋಗಬಹುದು ಅದಕ್ಕಾಗಿ ಒಂದು ಪುಟ್ಟ ದೇವತೆಗಳ ಕಷ್ಟ ಎಂಬ ಕಥೆಯನ್ನು ಹೇಳಿ ಲೇಖನ ಮುಗಿಸುತ್ತೇನೆ ಕೇಳಿ...

ಇಳಿಸಂಜೆಯ ಹೊತ್ತಲ್ಲಿ ಇಬ್ಬರು ದೇವತೆಗಳು ನಗರದ ಹೊರಬಾಗಿಲಲ್ಲಿ ಪರಸ್ಪರ ಬೇಟಿಯಾದರು. ಅನೇಕ ದಿನಗಳ ನಂತರ ಅವರ ಬೇಟಿಯಾಗಿದ್ದರಿಂದ ಉಭಯಕುಶಲೋಪರಿಯ ಜೊತೆಗೆ ಬದುಕಿನ ಹಾದಿಯ ಕೆಲಸಗಳ ಬಗ್ಗೆಯೂ ಮಾತುಕತೆಗಳನ್ನು ನಡೆಸುತ್ತಾ. ಒಬ್ಬ ದೇವತೆ ಇನ್ನೊಬ್ಬಳಿಗೆ ಕೇಳಿದರು, ‘ನಿನ್ನ ಕೆಲಸ ಹೇಗೆ ನಡೆದಿದೆ. ಈಗ ನಮ್ಮ ನಾಯಕರು ನಿನಗೆ ಯಾವ ಕೆಲಸ ವಹಿಸಿದ್ದಾರೆ.ಎಂದು ಕೇಳಿದಳು. ಅಯ್ಯೋ ಅದನ್ನೇನು ಕೇಳುತ್ತೀಯಾ?. ನಿನಗೇ ಗೊತ್ತಲ್ಲ, ನಮಗೆ ಕೆಲಸಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದೆಯೇ?. ನಾಯಕರು ಕೊಟ್ಟಿದನ್ನು ಮಾಡಬೇಕು. ಸದ್ಯ ನೀಚ ಮನುಷ್ಯನನ್ನು ಹಿಂಬಾಲಿಸುವ, ಅವನ ಕಾಳಜಿ ಮಾಡುವ ಕೆಲಸ. ಅವನೋ ಪರಮ ನೀಚ, ಕಣಿವೆ ಪ್ರದೇಶದಲ್ಲಿ ವಾಸವಾಗಿದ್ದಾನೆ. ಇದು ತುಂಬ ಕಷ್ಟದ ಕಾರ್ಯ. ಆದರೆ ನಾನು ಅತ್ಯಂತ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದೇನೆ’. ಇದಕ್ಕೆ ಇನ್ನೊಬ್ಬ ದೇವತೆ ಉತ್ತರಿಸುತ್ತಾ ‘ಹಾಗಾದರೆ ನಿನ್ನ ಕೆಲಸವೇ ವಾಸಿ. ನೀಚರನ್ನು ಉದ್ಧರಿಸುವುದು ಸುಲಭ. ನಾನು ಕೆಲವರನ್ನು ಉದ್ಧರಿಸಿದ್ದೇನೆ.ಅದೇನು ಮಹಾ!. ನನ್ನ ಪಾಡು ಕೇಳಿದರೆ ನಿನ್ನದೇ ವಾಸಿ. ನನ್ನ ಕೆಲಸ ತುಂಬ ಕಷ್ಟಕರವಾದದ್ದು. ನನಗೊಬ್ಬ ಧರ್ಮಗುರುವನ್ನು ನೋಡಿಕೊಳ್ಳುವ ಕರ್ಮಬಂದಿದೆ. ಅವನು ತನ್ನದೇ ಸಾಮ್ರಾಜ್ಯದಲ್ಲಿದ್ದಾನೆ. ಇದಕ್ಕಿಂತ ಕಷ್ಟದ ಕೆಲಸ ಯಾವುದೂ ಇರಕ್ಕಿಲ್ಲ’ ಎಂದಳು.
ಇನ್ನೊಬ್ಬಳು ಬಿಟ್ಟಾಳೆಯೇ. ‘ಎಷ್ಟು ಅಹಂಕಾರ ನಿನಗೆ. ನಿನ್ನ ಕೆಲಸವೇ ಮುಖ್ಯ ಮತ್ತು ಕಷ್ಟದ್ದೇ. ನೀನು ಕೆಲವು ನೀಚರನ್ನು ಸರಿಮಾಡಿದ್ದಿರಬಹುದು. ಆದರೆ, ಇವನನ್ನು ಕಂಡವರೆಲ್ಲ ಗುಣಗಾನ ಮಾಡುತ್ತಾರೆ. ಏಕಾಂತದಲ್ಲಿ ಸದಾ ಅವನಿಗೆ. ಯಾರಿಗೆ, ಎಲ್ಲಿ ಎಷ್ಟು ಮೋಸ ಮಾಡಬೇಕು ಎಂಬುದೊಂದೇ ಯೋಚನೆ. ಅವನ ಮನಸ್ಸು ಎಂದಿಗೂ ಸರಿಯಾದ ದಾರಿಯಲ್ಲಿ ಚಿಂತಿಸುವುದಿಲ್ಲ. ಇಂಥವನನ್ನು ನಿಭಾಯಿಸುವ ಕೆಲಸ ನಿನಗೆ ಸಿಕ್ಕಿದ್ದರೆ ಕಷ್ಟ ಅರ್ಥವಾಗುತ್ತಿತ್ತು’. ಎಂದು ಹೂಂಕರಿಸಿದಳು. ಮೊದಲನೆಯವಳಿಗೆ ಕೋಪ ಉಕ್ಕೇರಿತು. ‘ನಿನ್ನ ಸ್ವಭಾವ ನನಗೆ ಗೊತ್ತು. ಮೊದಲಿನಿಂದಲೂ ನೀನು ಹಾಗೆಯೇ. ಯಾವಾಗಲೂ ನಿನ್ನ ಕೆಲಸವೇ ದೊಡ್ಡದು, ನೀನೇ ಶ್ರೇಷ್ಠ ಅಲ್ಲವೇ. ನಾನು ನೋಡಿಕೊಳ್ಳುತ್ತಿರುವುದು ಒಬ್ಬ ಧರ್ಮಗುರುವನ್ನು. ಅವನನ್ನು ಧಾರ್ಮಿಕನನ್ನಾಗಿಯೇ ಇಡಲು ನಾನು ಪಡುತ್ತಿರುವ ಕಷ್ಟ  ಯಾರಿಗೂ ತಿಳಿಯದು. ಅವನು ಧರ್ಮಕಾರ್ಯಗಳನ್ನು ಬಿಟ್ಟು ಇನ್ನೆಲ್ಲವನ್ನೂ ಮಾಡುತ್ತಾನೆ. ಅವನಷ್ಟು ಅನಾಚಾರಗಳನ್ನು ನೀನು ನೋಡಿಕೊಳ್ಳುತ್ತಿರುವ ಪಾಪಿಯೂ ಮಾಡಲಿಕ್ಕಿಲ್ಲ. ಅವನನ್ನು ನಿಧಾನವಾಗಿ ದಾರಿಗೆ ತರುತ್ತಿದ್ದೇನೆ. ನನ್ನ ಕೆಲಸವೇ ದೊಡ್ಡದು’ ಎಂದಳಾಕೆ ಉಗ್ರವಾಗಿ.
ಮಾತಿಗೆ ಮಾತು ಬೆಳೆಯಿತು. ಮಾತು ಜಗಳವಾಯಿತು. ಜಗಳ ಜಗಮಗಿಸಿತು. ದೇವತೆಗಳಾದರೇನಂತೆ ಅವರಿಗೂ ಸಿಟ್ಟು, ಅಹಂಕಾರ ಇದ್ದದ್ದೇ. ಕೊನೆಗೆ ಕೈಕೈಮಿಲಾಯಿಸುವ ಸಂದರ್ಭ ಬಂದಿತು. ಆಗ ಭಗವಂತನ ಆಗಮನ ಅನಿವಾರ್ಯವಾಯಿತು. ಆತ ಬಂದು ಜಗಳ ನಿಲ್ಲಿಸಿದ. ಇಬ್ಬರೂ ತಮ್ಮ ತಮ್ಮ ವಾದಗಳನ್ನು ಮಂಡಿಸಿ ಹೇಗೆ ತಮ್ಮ ಕಾರ್ಯವೇ ಶೇಷ್ಠವಾದದ್ದು ಎಂದು ಅರುಹಿದರು. ಭಗವಂತ ತಾಳ್ಮೆಯಿಂದ ಇಬ್ಬರ ಮಾತುಗಳನ್ನು ಕೇಳಿಸಿಕೊಂಡು ಹೇಳಿದ, ‘ನಾನು ಈಗಲೇ ಯಾರ ಕಾರ್ಯ ಹೆಚ್ಚು ದೊಡ್ಡದು, ಜವಾಬ್ದಾರಿಯಾದದ್ದು ಎಂದು ಹೇಳಲಾರೆ.
ಆದರೆ ನಿಮಗಿಬ್ಬರಿಗೂ ಒಂದು ವಿಷಯ ಖಚಿತವಾಗಿದೆ. ಅದೇನೆಂದರೆ ಇನ್ನೊಬ್ಬರ ಕೆಲಸ ಸುಲಭವಾದದ್ದು. ಆದ್ದರಿಂದ ನಿಮಗೆ ನಿಮ್ಮ ಕೆಲಸಗಳನ್ನು ಹಗುರಮಾಡಿಕೊಳ್ಳಲು ಈ ಕ್ಷಣದಿಂದ ನೀವು ಮಾಡುತ್ತಿರುವ  ಕಾರ್ಯಗಳನ್ನು ಅದಲುಬದಲು ಮಾಡಿದ್ದೇನೆ. ನೀವಿನ್ನು ಹೊರಡಿ’, ಇಬ್ಬರೂ ತಮ್ಮ ಕೆಲಸ ಕಡಿಮೆಯಾಯಿತೆಂಬ ಸಂತೋಷದಲ್ಲಿ  ಕುಣಿಯುತ್ತ ಹೋದರು. ಒಂದು ವಾರದ ನಂತರ ಮತ್ತೆ ಬೇಟಿಯಾದಾಗ ಮತ್ತೆ ಅದೇ ವಾದ ಮಾಡುತ್ತಾ ಈಗ ನಾವು ನಿರ್ವಹಿಸುತ್ತಿರುವ ತಮ್ಮ ಕೆಲಸವೇ ಕಷ್ಟದ್ದು ಎಂದು ಜಗಳಕ್ಕಿಳಿದರು.
ನಾವೂ ಹಾಗೆಯೇ . ನಮ್ಮ ಕಷ್ಟವೇ ದೊಡ್ಡದು, ನಮ್ಮ ಸಾಧನೆಯೇ ಹೆಚ್ಚಿನದು ಎಂದು ಭಾವಿಸುತ್ತೇವೆ, ಇನ್ನೊಬ್ಬರ ಕಷ್ಟ, ಪರಿಶ್ರಮ ಅರ್ಥವಾಗುವವರೆಗೆ ಅವರ ಕಷ್ಟ ತಿಳಿಯುವುದಿಲ್ಲ. ಅನಂತರವೇ ತಿಳಿವಳಿಕೆ ಮೂಡುತ್ತದೆ. ಅಂದರೆ ಭೂಮಿಯ ಮೇಲೆ ಮನುಷ್ಯನಿಗೆ ಕಷ್ಟವಾಗುವ ಕೆಲಸ ಯಾವುದೂ ಇಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನಬಹುದು ಆದರೆ ಅಲ್ಲಿ ಹೋಗಿ ಪರಾಂಭರಿಸಿ ನೋಡಿದರೆ ನುಣ್ಣಗಿದ್ದದ್ದೂ ವಕ್ರವಾಗಿರಬಹುದು. ಕಷ್ಟಗಳು ಹಾಗೆ ಇನ್ನೊಬ್ಬರದು ನೋಡುವಾಗ ಸುಲಭ ಎನಿಸಬಹುದು. ಅಥವಾ ನಾವಂದುಕೊಂಡಂತೆ ಎಲ್ಲವೂ ಸುಲಭ ಅಥವಾ ಎಲ್ಲವೂ ಕಷ್ಟ ಎನಿಸಲುಬಹುದು. ಅಂದುಕೊಂಡು ಮನಸಿಟ್ಟು, ಕೆಲಸ ಮಾಡಿದರೆ ಯಾವುದು ಕಷ್ಟವಿಲ್ಲ ಎಲ್ಲವೂ ನಾವಂದುಕೊಂಡಂತೆÀ ಅಲ್ವಾ ಕಷ್ಟಕ್ಕೆ ಕಷ್ಟವೇ ಸಾಟಿ,ನೋಡುವುದೆಲ್ಲಾ ಸುಲಭ, ಮಾಡುವುದು ಕಷ್ಟ, ಮಾಡುವುದು ಸುಲಭವಿರಬಹುದು!!! ಮಾಡುವ ಕೆಲಸ ನೋಡುವ ನಮ್ಮ ಕಂಗಳೆ ಕಷ್ಟವೆಂದುಕೊಂಡಿರಬಹುದು ಅಲ್ವಾ...
 ಏನಂತೀರಾ!?