Saturday 14 February 2015

ಇನ್ನೂ ಅನಿಸುತಿದೆ...

       ಮುಸ್ಸಂಜೆಯ ಮೌನ ಲಹರಿಯಲ್ಲಿ ಮರೆಯಾದ ಗೆಳತಿಯ ನೆನೆಯುತ್ತ ಕಡಲ ತೀರದ ಸಂದಿಯಲ್ಲಿ ಕುಳಿತ ನನಗೆ ಅವಳ ನೆನಪು ನೀರು ಬಂಡೆಗಪ್ಪಳಿಸುವಂತೆ ಪದೆ ಪದೇ ಮನದಲ್ಲಿ ಮೂಡುತ್ತಿತ್ತು...ಇಂದಿನ ಫೇಸ್ ಬುಕ್, ಪಾಟ್ಸಾಪ್‍ನ ಟ್ರೆಂಡ್ ಯುಗದಲ್ಲೂ ಅದ್ಯಾವುದರ ಬಗ್ಗೆಯೂ ಜಾಸ್ತಿ ಗಮನಕೊಡದೆ ಹಳೆ ಹುಡುಗಿಯೇ ಇವೆಲ್ಲಕ್ಕಿಂತ ಮಿಗಿಲೆಂದು ಸದಾ ತುಡಿಯುತ್ತಿರುವ ಮನಸ್ಸಿಗೆ ಹಾಗೇ ಸುಮ್ಮನೆ ಪ್ರಶ್ನೆ ಕೇಳುತ್ತಾ ಕುಳಿತಿದ್ದೆ. ಹೀಗಿರುವಾಗ ನನ್ನೋಳಗಿನ ಭಾವನೆ ಮತ್ತೆ ಮಿಡಿಯುದಿಲ್ಲ ಅಂತ ನಾ ಹೇಳಲಾರೆ. ಯಾಕೆಂದರೆ ಅದೊಂದು ಶುದ್ದ, ನಿರ್ಮಲ ನೆನಪು..ನೆನಪುಗಳೇ ಹಾಗೆ ಎಲ್ಲಿ ಎನು ಮರೆಯಾದರೂ ಸಂದಿಗೊಂದಿಯಲ್ಲಾದರೂ ನುಸುಳಿ ಮತ್ತೆ ಮತ್ತೆ ಕಾಡದಿದ್ದರೆ ಅವುಗಳಿಗೆ ನೆಮ್ಮದಿನೆ ಇರಲ್ಲ.  ಈ ನೆನಪುಗಳು ಯಾಕೆ ಸುಳಿಯಬಹುದು ಎನ್ನುವ ಪ್ರಶ್ನೆ ಕಾಡಿದರೆ ಅದಕ್ಕೆ ಉತ್ತರ ‘ಗೆಳತಿ ಈಗ ಪಕ್ಕದಲ್ಲಿಲ್ಲ’ ಎಂಬ ಮುಗ್ಧ ಮನಸ್ಸಿನ ಮೆಲುಕುವಿಕೆ..
ವ್ಯಕ್ತಿಯ ಉಪಸ್ಥಿತಿ ಪ್ರೇಮವನ್ನು ಬಲಗೊಳಿಸಿದರೆ, ವ್ಯಕ್ತಿಯ ಅನುಪಸ್ಥಿತಿ ಪ್ರೀತಿಯನ್ನು ತೀಕ್ಷಗೊಳಿಸುತ್ತದೆ ಎಂಬ ಮಾತು ಈ ಕ್ಷಣ ಅನಿಸುತ್ತಿರುವುದು ಸುಳ್ಳಲ್ಲ... ಹೌದು ಅದು ಸುಮಾರು 5 ವರ್ಷಗಳ ಹಿಂದಿನ ಕತೆ. ವರುಷಗಳು ಅದುಮಿಟ್ಟ ಭಾವನೆ ಈಗ ವ್ಯಕ್ತಪಡಿಸಲು ಕಾರಣ, ಎಲ್ಲರೂ ತಮ್ಮೊಳಗಿರುವ ಲವ್ ಭಾವನೆ ವ್ಯಕ್ತಪಡಿಸಲು ‘ವ್ಯಾಲೆಂಟೈನ್ಸ್ ಡೇ’ ಬರಲಿ ಎಂದು ಕಾಯುತ್ತಿರುತ್ತಾರೆ. ಕೆಲವರು ಅದನ್ನು ಹೇಳಿ ಸಂತಸದ ನಗುಬೀರಿದರೆ, ಇನ್ನೂ ಕೆಲವರು ದೇವದಾಸನಂತಾಗುತ್ತಾರೆ. ಆದರೆ ನನ್ನದು ಇವೆರಡೂ ಅಲ್ಲದ ಒಂಥರಾ ಡಿಫರೆಂಟ್ ಲವ್. ಇದು ಸಹಜ ಪ್ರೇಮಿಯ ಅಸಹಜ ನೋವು ನಲಿವಿನ ಪುಟ, ಒಳಗೆ ಅರಳಿ ಒಳಗೆ ಹುದುಗಿ, ಈಗಲೂ ತನ್ನೊಳಗಿರುವ, ಖುಷಿಕೊಡುವ ಸೋಜಿಗ...
ಅಂದು ಪರಿಚಯವಿದ್ದ ಗೆಳೆಯನ ಮನೆಗೆ ಅತಿಥಿಯಾಗಿ ಆಗಮಿಸಿದ ನನಗೆ ಅವಳು ಮೊದಲು ಇದಿರಾಗಿದ್ದು ಹೊಸ್ತಿಲಬಳಿ. ಆಗಿನ್ನು ನನ್ನದು ಟೀನೇಜಿನ ಸಮಯ. ಮೊದಲ ನೋಟದಲ್ಲೆ ಅವಳ ಬ್ಯೂಟಿ ಮನಸೆಳೆದರೂ, ಆಗಲೇ ಪ್ರೀತಿಯ ಅದ್ಭುತ ಪ್ರಾರಂಭವಾಗೋ ಕಾಲಘಟ್ಟದ ಪವರ್ ಇದ್ದರೂ, ನನಗೆ ಅವೆಲ್ಲದರ ಬಗ್ಗೆ ಕಲ್ಪನೆಯೂ ಇರಲಿಲ್ಲ. ಸಹಜವಾಗಿ ಆ ದಿನ ಪ್ರಾರಂಭವಾದ ಅವಳ ಪರಿಚಯ ಮುಂದೆ ಆಪ್ತಸ್ನೇಹಿತನಾಗುವವರೆಗೆ ತಿರುಗಿದ್ದು ನನ್ನ ಪುಣ್ಯವೋ, ಪ್ರೀತಿಯಾಗುವ ಮಹಿಮೆಯೋ ತಿಳಿದಿಲ್ಲ.
   
ಅದು ವಯರ್ ಲೆಸ್ ಲ್ಯಾಂಡ್ ಫೋನ್ ಗಳು ಉದ್ದನೆಯ ಕಂಬದ ಬಲದಿಂದ ಸಿಗ್ನಲ್ ಕೊಟ್ಟು ಮಾತನಾಡುವ ಹುರುಪನು ತುಂಬಿಸಿದ ಕಾಲ. ಅಂದುಕೊಂಡಂತೆ ಗೆಳೆಯನಿಗೆ ದಿನಾ ಸಂಜೆ ಫೋನ್ ಮಾಡುವುದು, ಮನೆಯಲ್ಲಿರುವ ಹೊಸ ಫೋನ್‍ನ ಕ್ರೇಜ್‍ನ್ನು ಮಾತನಾಡುವುದರ ಮೂಲಕ ಆನಂದಿಸುವುದು ನನ್ನ ಸಂಜೆ ದಿನಚರಿ. ಎಂದಿನಂತೆ ಆ ದಿನವೂ ಗೆಳೆಯನಿಗೆ ಫೋನ್  ಮಾಡಿದಾಗ ಅತ್ತ ಕಡೆಯಿಂದ ಹೆಣ್ಣಿನ ಧ್ವನಿ ಬಂದಿದ್ದು ಅಚ್ಚರಿಯಲ್ಲದಿದ್ದರೂ ನನ್ನ ಸ್ವರಕ್ಕೆ ಚಿಮಾರಿ ಹಾಕಿ ಹೆದರಿಸಿತ್ತು. ಅಂದಿನ ನನ್ನ ಅವಳ ಮಾತು ಯಾಕೋ ತುಂಬಾ ಹತ್ತಿರ ನಿಲ್ಲಿಸಿ, ಒಂದೇಮರದಡಿ ಎಕಾಂತದಲ್ಲಿ ಪ್ರೇಮಿಳಲ್ಲದಿದ್ದರೂ ಫ್ರೇಂಡ್ಸ ಆಗಿ ಮಾತನಾಡುವ ಮುಗ್ಥತೆಯವರೆಗೂ ಕರೆದುಕೊಂಡು ಹೋಗಿತ್ತು. ಪರಿಚಯ ಆಕಸ್ಮಿಕವಾಗಿ ಆದರೂ ಅದು ಕೊಡುವ ಸಂಬಂಧ ಶಾಶ್ವತವೆನ್ನುವಂತೆ ಮನದಲ್ಲಿ ಎನೂ ಅರಿಯದೇ ಅವಳ ಮೇಲೆ ಭಾವನೆ ತೇಲಾಡಲು ತೊಡಗಿದಾಗಲೇ ತಿಳಿದದ್ದು ಅವಳ ಮೇಲೆ ಪ್ರೀತಿಯಾಗಿದೆ ಅಂತ. ಈ ಮೆಲುಕಾಡುವ ಭಾವನೆಯು ಯಾವಾಗಾ ಪ್ರಾರಂಭವಾಯ್ತೋ ಆವಾಗಲೇ ಅವಳೆದುರು ಬಂದಾಗ, ಹೊಸದಾಗಿ ಭಯ, ಶಿಸ್ತು, ಸಂಯಮ, ಬೆವರುವಿಕೆಯ ನಡುಕ ಎಲ್ಲವೂ ಪ್ರಾರಂಭವಾಗತೊಡಗಿದವು. ಅಲ್ಲಿಂದ ಶುರುವಾಯ್ತು ನೋಡಿ ನನ್ನೊಳಗಿರುವ ಪ್ರೀತಿ ಅವಳಿಗೆ ಹೇಳಬೇಕೆನ್ನುವ ಆಸೆ. ಅವಳಿಗೆ ಇವತ್ತು ಹೇಳಬೇಕು,ನಾಳೆ ಹೇಳಬೇಕು ಎಂದು ಸಾಗಿದ ನಡೆÉಗಳು ಕೊನೆಯನ್ನೆ ಕಾಣದೆ ನನ್ನೊಳಗೆ ಉಳಿಯಿತೆನ್ನುವುದು ದುರಂತ. ಆದರೆ ಅಷ್ಟು ಆತ್ಮೀಯಳಾಗಿ ನನ್ನ ಜೊತೆ ಸಲುಗೆಯಿಂದಿದ್ದ ಅವಳಿಗೆ ನನ್ನ ಮೇಲೆ ಪ್ರೀತಿ ಬಂದಿಲ್ಲವೇ ಎನ್ನುವುದೇ ಇವತ್ತಿಗೂ ನನ್ನ ಬಳಿ ಉಳಿದಿರುವ ಪ್ರಶ್ನಾಂಶ. ಹಾಗಾದರೆ, ಅಂದಿನಿಂದ ಇಂದಿನವರೆಗೂ ನನ್ನದು ಒನ್ ಸೈಡ್ ಲವ್ ಇರಬಹುದಾ ಅಂತ ನಿಮಗನ್ನಿಸಿದರೆ ನಾ ಅದಕ್ಕೆ ಉತ್ತರ ನೀಡಲು ಅಸಮರ್ಥ ಯಾಕೆಂದರೆ ಈಗಲೂ ಒಮ್ಮೊಮ್ಮೆ ಅವಳು ಪ್ರೀತಿಯಿಂದ ಮಾತನಾಡಿಸುತ್ತಾಳೆ. ಆದರೆ ನನಗಂತೂ ಇಂದಿಗೂ ಹೇಳಲಾಗದ ಅಸಮರ್ಥ ಭಾವನೆ. ಹೇಳಿದರೆ ತಪ್ಪು ತಿಳಿದರೆ ಅನ್ನೋ ಆತ್ಮೀಯತೆಯ ಹೆದರಿಕೆ. ಅದಕ್ಕೆ ಎಲ್ಲವನ್ನು ಬಿಟ್ಟು ಅವಳ ನೆನಪು ಜೊತೆಯಲ್ಲಿ ಕಳೆದ ಕಾಲ ನೆನಸಿಕೊಂಡು ಕುಳಿತುಕೊಳ್ಳುವೆ. ಆ ನೆನಪುಗಳೇ ಇಂಧು ಸಂಜೆಯ ಕೊಲೆ ಮಾಡುತ್ತಿದೆ. ಬೇರೆಲ್ಲಾ ವಿಷಯದಲ್ಲೂ  ಮನಸ್ಸಿನ ಆಸೆ ನಿಧಾನವಾಗಿ ಕರಗತೊಡಗಿದರೂ, ಆ ಹಳೆಯ ನೆನಪು, ಅವಳ ವೈಖರಿಯ ನೆನೆಯುವಿಕೆ ಮೊದಲಿನ ಜೋಷ್ ನಲ್ಲೆ ಮುಂದುವರಿದಿದೆ.
ಹೋ ಸಮಯವಾಯ್ತು ಇನ್ನೂ ಹೆಚ್ಚು ನೆನೆಸಿಕೊಂಡರೆ, ತಾಳ್ಮೆಗೆ ಮನಸೋತ ಚಂದಿರ ಬಾನಿಂದ ಕಣ್ಣೀರು ಸೂಸಿಯಾನು. ಭಾವನೆಗಳನ್ನು ಹಿಡಿದಿಟ್ಟುಕೊಂಡು ಕಟ್ಟೆ ಕಟ್ಟಿ ‘ಐ ಲವ್ ಯೂ’ ಅಂತ ಹೇಳಿ ಪ್ರತಿಕ್ರೀಯೆ ಮತ್ತು ಮುಂದಿನ ನಿರ್ಧಾರಕ್ಕೆ ತುದಿಗಾಲಲ್ಲಿ ಕಾಯುವ, ಇಬ್ಬರೂ ಪರಸ್ಫರ ಒಪ್ಪಿಕೊಂಡರೆ ಸಿನಿಮಾ ಪಾರ್ಕ್ ಅಂತ ಅಲೆÉದಾಡುವ ಇಂದಿನ ಜನರ ಮಧ್ಯೆ ನನ್ನ-ನಮ್ಮಿಬ್ಬರ, ಪ್ರೀತಿ-ಸ್ನೇಹ ಸಂಪೂರ್ಣ ಡಿಫರಂಟ್ ಅಂತ ಅನ್ನಿಸದೆ ಇರದು. ಏನೇ ಇದ್ದರೂ ‘ಪ್ರೇಮಿಗಳ ದಿನ’ ಆಚರಿಸುವ ಈ ಮಾಸದಲ್ಲಿ ಆ ಹಳೆಯ ಸುಮಧುರತೆ ಮತ್ತೆ ನೆನಪಿಸಿಕೊಂಡೆ. ಮಾತು ಮೌನವಾದಾಗ ಕಣ್ಣ ಭಾಷೆ ಅರಿಯುವುದು ಮನ, ಮಾತಾಡದೇ ಸುಮ್ಮನೇ ಕುಳಿತರೆ ಕಳೆದು ಹೋಗುವುದು ಪ್ರೀತಿಯ ಮಾಮರ ಎನ್ನುವಂತೆ, ನೀವು ಪ್ರೇಮಿಯಾಗಿದ್ದರೆ, ಮುಚ್ಚುಮರೆಯಿಲ್ಲದೆ ಯಾರಿಗೂ ನೋವಿಲ್ಲದಂತೆ ಪ್ರೀತಿಸಿ, ಪ್ರೀತಿಗಾಗಿ ಬದುಕು ನೀಡಬೇಡಿ, ಬದುಕಿಗಾಗಿ ಪ್ರೀತಿ ನೀಡಿ, ‘ವ್ಯಾಲೆಂಟೈನ್ಸ್ ಡೇ’ಗಾಗಿ ಕಾಯಬೇಡಿ, ಪ್ರತಿದಿನ‘ವ್ಯಾಲೆಂಟೈನ್ಸ್ ಡೇ’ನಂತೆ ಪ್ರೀತಿ ಆಚರಿಸಿ ಬದುಕನ್ನು ಸಂಭ್ರಮಿಸಿ..
ಎಲ್ಲರಿಗೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ..

Thursday 5 February 2015

ಕಂಬಳ ಕಂಡೀರಾ!!?



ಸಾಮಾನ್ಯವಾಗಿ ನವೆಂಬರ್‍ನಿಂದ ಪ್ರಾರಂಭವಾಗಿ ಮಾರ್ಚ್ ತಿಂಗಳ ಅಂತ್ಯದವರೆಗೆ ನಡೆಯುವ ಹಾಗೂಮೊದಲ ಭತ್ತದ  ಬೆಳೆಯ ಕೊಯ್ಲು ಮುಗಿದು ಎರಡನೇ ಸುಗ್ಗಿ ಬೆಳೆಗೆ ಭೂಮಿ ಹದ ಮಾಡುವ ಸಮಯದಲ್ಲಿ ನಡೆಯುವುದೇ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಹಾಗೂ ವಿಶಿಷ್ಟ ಮಾದರಿಯ ಸಾಂಸ್ಕ್ರತಿಕ ಕ್ರೀಡೆಯೆ “ಕಂಬಳ”.. ಕರಾವಳಿಯ ಜನರ ಜೀವನ ವೃತ್ತಿಯ ಸಮಯದಲ್ಲಿ ಬೇಸಾಯದ ಜೊತೆಗೆ ಕೋಳಿ-ಕೋಣ,ದನ-ಕರು, ನಾಯಿ-ಬೆಕ್ಕುಗಳನ್ನು ಸಾಕುವುದು ಕೂಡ ಬದುಕಿನಲ್ಲಿ ಹುದುಗಿ ಹೋಗಿರುವ ಅಂಶ. ಬೇಸಾಯದ ಸಂದರ್ಭದಲ್ಲಿ ಬೇಸಾಯಕ್ಕಿಂತ ಮುಂಚೆ ಗದ್ದೆ ಉಳುಮೆ ಮಾಡಿ, ಅದರಲ್ಲಿ ಕೋಣಗಳನ್ನು ಓಡಿಸಿ ಓಟದ ಸ್ಫರ್ಧೆಯಾಗಿಸಿ ಕೃಷಿ ಬದುಕನ್ನು ಸಂಭ್ರಮಿಸುವ ಸಾಂಕೇತಿಕತೆಯೇ ಕಂಬಳ ಆಗಿದೆ..ಇನ್ನೊಂದು ಅರ್ಥದಲ್ಲಿ ಹೇಳೋದಾದರೆ ದಷ್ಟ-ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿಓಡಿಸುವ ಸ್ಪರ್ಧೆಯೇ ಕಂಬಳ ಎನ್ನಬಹುದು. ಕಂಬಳ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಯಾಗಿದ್ದು,ಇದಕ್ಕೆ 800 ರಿಂದ 900 ವರ್ಷಗಳ ಇತಿಹಾಸವಿದೆ.ಕಂಬಳದ ಬಗ್ಗೆ ಉಲ್ಲೇಖವಿರುವ ಅನೇಕ ಶಾಸನಗಳು ದೊರಕಿದ್ದು ಉಡುಪಿಯ ಕೆಂಜೂರಿನಲ್ಲಿ ದೊರಕಿರುವ ಆಳುಪರಾಣಿ ಬಲ್ಲಮಹಾದೇವಿಗೆ ಸೇರಿದ ಕಲ್ಬರಹದಲ್ಲಿ ಕಂಬಳದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ನಡೆಯುತ್ತಿದ್ದ ಕಂಬಳ ಇದೀಗ ಪದ್ದತಿ ಉಳಿಸಿಕೊಂಡು ಬಂದಿರುವ ಮನೆಯವರ ಆಯೋಜನೆಯಲ್ಲಿ ಸ್ಪರ್ಧೆಯ ರೂಪದಲ್ಲಿ ನಡೆಯುತ್ತಿದೆ. ಪ್ರಾರಂಭದಲ್ಲಿ ಇದೊಂದು ಸ್ಫರ್ಧೆಯಾಗಿರದೆ, ಸಾಮೂಹಿಕ ಶ್ರಮ ಸಂಸ್ಕ್ರತಿಯ ಮೂಲಕ ಭತ್ತದ ಶ್ರಮ ಸಂಸ್ಕ್ರತಿಯನ್ನು ಪ್ರೋತ್ಸಾಹಿಸುವುದಾಗಿತ್ತಂತೆ.ಮತ್ತೊಂದು ಕಥೆಯ ಪ್ರಕಾರ,ಸುಗ್ಗಿಯ ಬೆಳೆಯನ್ನು ಮದುಮಗಳಿಗೆ ಹೋಲಿಸುತ್ತಿದ್ದ ಅಂದಿನ ಜನ ಕಂಬುಲವನ್ನು ಭೂಮಿಗೆ ಹೋಲಿಸಿ ಗದ್ದೆ ಮಧ್ಯೆ ಬಾಳೆಗಿಡ ನೆಟ್ಟು ಅವೆರಡರ ಮದುವೆ ಸಮಾರಂಭವೆಂಬಂತೆ ಈ ಕ್ರೀಡೆಯನ್ನು ಆಚರಣೆ ತಂದಿದ್ದಾರೆಂದು ಹಿರಿಯರು ಹೇಳುತ್ತಾರೆ.

ಕರಾವಳಿ ಕರ್ನಾಟಕದ ಜನಪದ ಆಚರಣೆಯಾದ ಕಂಬಳದಲ್ಲಿ ಗದ್ದೆಯ ಮಧ್ಯೆ ಕೋಣಗಳು ಓಡುವಾಗ ಆಗಸದೆತ್ತರಕ್ಕೆ ಚಿಮ್ಮುವ ಗದ್ದೆಯ ಕೆಸರಿನ ವೈಭವದ ಅಂದ ಒಮ್ಮೆ ನೋಡಬೇಕು ಅದರ ಅನುಭವವೇ ಒಂಥರ ವಿಶಿಷ್ಟವಾದದು.ಕಂಬಳ ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆ ಕೂಡ ಹೌದು. ತುಳುನಾಡಿನಲ್ಲಿ ಈಗಲೂ ತನ್ನದೇ ಶೈಲಿಯಲ್ಲಿರುವ ಕೋಣಗಳ ಈ ಓಟ.ಇದೀಗ ವ್ಯಾವಹಾರಿಕ ಆಯಾಮ ಪಡೆದು ಸಾಂಗಿಕ ಬಲದೊಂದಿಗೆ ಬೆಳೆಯುತ್ತಿರುವುದು ಹಿಂಸೆಯೆಂಬ ಮನೋಭಾವ ತಳೆದಿದೆ. ಭತ್ತದ ಕೊಯಿಲಿನ ನಂತರ ರೈತರ ಮನೋರಂಜನಗೋಸ್ಕರ ಎರ್ಪಡುತ್ತಿದ್ದ ಈ ಆಟ, ಉಳ್ಳವರ ಸೋಲು ಗೆಲುವಿನ ಪೈಪೋಟಿಯಲ್ಲಿ ನಿಷೇಧವೆಂಬ ಪ್ರಶಸ್ತಿ ಪಡೆಯೋವರೆಗೂ ಹೋಗಿದ್ದು  ಒಂದು ರೀತಿಯ ಅಸಹನೆಯೇ ಎನ್ನಬಹುದು. ಮೂಲತಃ ಕಂಬಳಗದ್ದೆ ಎನ್ನುವುದು ಉತ್ಪತ್ತಿ ತರುವ ಹೊಲವಾಗಿದ್ದು, ಧಾರ್ಮಿಕ ಆಚರಣೆಯ ಭಾಗವೇನೂ ಆಗಿರಲಿಲ್ಲ. ನಿಧಾನವಾಗಿ ಈ ಹೊಲಗಳು ದೇವಸ್ಥಾನದ ಸೇವೆಗೆ ಧಾನ ಬಿಟ್ಟಿದ್ದರಿಂದ ಧಾರ್ಮಿಕ ಹಿನ್ನಲೆ ಒದಗಿ ಬಂದಿರಬಹುದೆಂದು ಅಭಿಪ್ರಾಯಿಸಲಾಗಿದೆ.
ಪ್ರಸ್ತುತ ತುಳು-ಕರಾವಳಿಯ ಭಾಗದಲ್ಲಿ 30 ಕ್ಕೂ ಹೆಚ್ಚು ಸ್ಥಳದಲ್ಲಿ ಕಂಬಳದ ಆಚರಣೆ ಇಂದು ಇರುವುದಲ್ಲದೇ,ಇತ್ತೀಚಿನ ದಿನಗಳಲ್ಲಿ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ,ಸೋಲು-ಗೆಲುವು ಮರ್ಯಾದೆ,ಬಹುಮಾನ ಪಡೆಯುವುದು ಪ್ರತಿಷ್ಠೆಯ ವಿಚಾರ ಕೂಡ ಆಗಿದೆ.
ತೀರಾ ಇತ್ತೀಚೆಗೆ ಕಂಬಳವೆನ್ನುವುದು ಪ್ರಾಣಿ ಹಿಂಸೆ, ಅದನ್ನು ನಿಷೇಧಿಸಬೇಕೆನ್ನುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಜನ ಅಸಮಾಧಾನವಾಗಿದ್ದರು. ಹಿಂದೆ ಇದ್ದ ಅನೇಕ ಜಾನಪದ ಕ್ರೀಡೆಗಳು ಮರೆಯಾಗುತ್ತಿರುವ ಇಂದಿನ ಆಧುನಿಕತೆಯಲ್ಲಿ ಈಗಿರುವ ಆಟವನ್ನು ನಿಷೇಧಿಸಿದರೆ,ಮುಂದೆಲ್ಲಿ ಇದನ್ನು ಕಾಣುವುದು ಎಂಬ ಪ್ರಶ್ನೇ! ಎಲ್ಲರಲ್ಲೂ ಉದ್ಭವಿಸುವುದು ಸಹಜ ಆದರೀಗ ಅದಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಸಿಸಿಟಿವಿ ಸೇರಿದಂತೆ ಹಲವಾರು ಷರತ್ತಿನಡಿ ಹಿಂಸೆ ನೀಡದೆ ಕಂಬಳ ನಡೆಸಲು ಅನುಮತಿ ನೀಡಿದ್ದು ಖುಷಿ ಕೊಡುವ ವಿಚಾರ.. ಮುಂದೆಯೂ ಕೂಡ ಎಂದಿನಂತೆ ಕಂಬಳ ನಡೆಯುತ್ತೆ, ರೈತಮಿತ್ರರಿಗೆ ಮನರಂಹನೆ ದೊರಕುತ್ತದೆ ಎಂಬುದು ಸಂತೋಷದ ವಿಚಾರ. ಎನೇ ಇರಲಿ ಸಾಮಾನ್ಯವಾಗಿ ಕುದುರೆ,ಶ್ವಾನದಂತಹ ಪ್ರಾಣಿಗಳ ಆಟಕ್ಕೆ ವಿದೇಶದಲ್ಲೇ ಭಾರಿಮನೋರಂಜನೆ ಸಿಗುತ್ತಿರುವಾಗ ಈ ಕಾಲದಲ್ಲಿ ನಮ್ಮ ಶತಮಾನದ ಇತಿಹಾಸವಿರುವ ಈ ಹಳ್ಳಿ ಸೊಗಡಿನ ಪ್ರಾಚೀನ ಕಾಲದ ಕಂಬಳದ ಕ್ರೀಡೆಗೆ ವಿದೇಶಿಯರು ಕೂಡ ಆಕರ್ಷಿತರಾಗಿ ನಮ್ಮ ಈ ಕ್ರೀಡೆ ವಿಶ್ವವ್ಯಾಪಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.ಇಂತಹ ಹಿನ್ನೆಲೆ,ಹಿರಿಮೆ ಮೇಲ್ತನವನ್ನು ಹೊಂದಿರುವ ಕರುನಾಡಿನ ಕಂಬಳ ವಿಶ್ವದೆಲ್ಲೆಡೆ ಹರಡಿ ಕರುನಾಡಿನ ಸಂಸ್ಕ್ರತಿ ಇನ್ನೂ ಹೆಚ್ಚಾಗಿ ಹಬ್ಬಿ ಕರುನಾಡ ಕಂಪು ಎಲ್ಲೆಡೆ ಸೂಸಲಿ ಎಂಬುದು ನನ್ನ ಹೆಬ್ಬಯಕೆ.

ಕಂಬಳದ ವಿಧಗಳು:
1.ಬಾರೆ ಕಂಬಳ
2.ಪೊಕರೆ ಕಂಬಳ
3.ಅರಸು ಕಂಬಳ
4.ಆಧುನಿಕ ಕಂಬಳ

ಕಂಬಳ ಗದ್ದೆಯ ವಿಧಗಳು:
1.ಒಂಟಿ ಗದ್ದೆಯ ಕಂಬಳ
2.ಜೋಡಿ ಗದ್ದೆಯ ಕಂಬಳ

ಕಂಬಳದ ವಿಶಿಷ್ಟತೆ:
ಕಂಬಳ ಗದ್ದೆಯ ಜೊತೆ ಕಂಬಳದಲ್ಲಿ ಭಾಗಿಯಾಗುವ ಕೋಣಗಳನ್ನು ಸಿಂಗರಿಸುವುದು. ಒಬ್ಬ ವ್ಯಕ್ತಿ ಸಿಂಗರಿಸಿದ ಕೋಲಿನಿಂದ ತನ್ನದೇ ಶೈಲಿಯಲ್ಲಿ ಕೂಗುತ್ತಾ ಕೋಣಗಳನ್ನು ಓಡಿಸುವುದು.