Monday, 23 March 2015

ಹೆಣ್ಣು-2

    ಒಂದು ಹುಡುಗಿ ಹೇಗಿರಬಹುದು,? ಹೇಗಿದ್ದರೆ ಚೆನ್ನ? ಅವಳ ವ್ಯಕ್ತಿತ್ವ ಬದಲಾವಣೆಯ ಮೂಲ ಏನಿರಬಹುದು...?ಅವಳು ಹೇಗೆ ಸಾಗಿದರೆÉ ಸಮಾಜ ಸರಿ ಹೋಗಬಹುದು...!? ಇದು ಇಂದಿನ ದಿನಮಾನಸದಲ್ಲಿ ಎಲ್ಲರ ಮನದಲ್ಲೂ ಉದ್ಭವಿಸುವ ಪ್ರಶ್ನೆ...
      ಅಂದೊಂದಿತ್ತು ಕಾಲ ಎಂಬಂತೆ  ಈ ಕಾಲದಲ್ಲಿ ಹಳೆತನ್ನು ತುಳಿದು ಬದುಕುತ್ತಿದೆ ಸಮಾಜ. ಮೇಲಿನ ಪ್ರಶ್ನೆಗಳ ಹಿಂದೆ ಸಾವಿರಾರು ಉಪಪ್ರಶ್ನೆಗಳು ಕಾಲ್ತೇಗೆದು ಕದನಕ್ಕೆ ಬರುತ್ತವೆ. ವಿಷಯ ಸ್ವಲ್ಪ ಭಿನ್ನವಾದರೂ ಪ್ರಶ್ನೆಗಳಿಗೆ ತೂಕ ಬಹಳವಿದೆ. ಒಂದು ಹುಡುಗಿ ಹೀಗಿರಬಾರದಾ? ಹೀಗೆಯೇ ಯಾಕಿರಬೇಕು? ಎನ್ನುವವರಿಗೆ ಅಡೆತಡೆಯಲ್ಲೇ ಈ ಪ್ರಶ್ನೆ ಬಂದಿರುತ್ತೆ ಆದರೆ ಹೀಗಿದ್ದರೆ ಚನ್ನಾಗಿರುತ್ತೆ ಅಲ್ವಾ!?, ಅನ್ನೋದಕ್ಕೆ ಯಾವ ಅಡ್ಡ ತೊಂದರೆಯೂ ಇರೋದಿಲ್ಲ. ಇದು ಇಂದಿನ ಬದುಕು.
    ಅಂದು ಮನೆಯ ಜಗುಲಿಯ ಹೊರಗೆ ಬಾರದಿದ್ದ ಹೆಣ್ಣು, ಇಂದು ಹೋರಬಿದ್ದಿದ್ದಾಳೆ. ಅಂದು ವರಾಂಡವೇ ವಿಶ್ವ ಎಂದರಿತ್ತಿದ್ದ ಆಕೆ, ಇಂದು ವಿಶ್ವವೇ ವರಾಂಡ ಎನ್ನುವ ಹಂತಕ್ಕೆ ಬಂದಿದ್ದು ನಿಜಕ್ಕೂ ಖುಷಿಯ ವಿಚಾರ. ಆದರೆ ಅವಳಿಗೆಲ್ಲಿದೆ ರಕ್ಷಣೆ ಎನ್ನುವ ಸ್ಥಿತಿಗೆ ಇಂದು ನಾವು ತಲುಪಿರುವುದು ಭಯತರಿಸುವ ಭೀಭತ್ಸ. ಹಿಂದಿದ್ದ ಕಟ್ಟು ಕಟ್ಟಳೆಗಳು ಅವಳಿಗೆ ಒಂದು ರೀತಿಯಲ್ಲಿ ಸುಭದ್ರವಾಗಿದ್ದವೋ ಏನಿಸುವಷ್ಟು ಆಪ್ತವಾಗುತ್ತವೆ. ಎಲ್ಲೋ ಇರುವ ಗಂಡಿಗೆ ಇನ್ನೆಲ್ಲೋ ಇರುವ ಹೆಣ್ಣಿನ್ನು ಗುರುತಿಸಿ,ಮದುವೆ ದಿನದವೆರೆಗೂ ಒಬ್ಬರಿಗೊಬ್ಬರ ಪರಿಚಯವೇ ಮಾಡಿಸದೆ ಪರಸ್ಪರ ನೋಡಲೂ ಬಿಡದೆ, ಬಳಿಕ ದಾಂಪತ್ಯದ ಜೀವನಕ್ಕೆ ಬಿಡುತ್ತಿದ್ದದ್ದು ಜೀವ ಇರುವ ತನಕ ಆ ಜೋಡಿ ಬೇರೆಯಾಗದೆ ಬದುಕಲು ನಾಂದಿಯಾಗಿತ್ತು. ಆದರೆ ಇಂದಿನ ಜನಾಂಗಕ್ಕೆ ಎಲ್ಲವೂ ಹದಿವಯಸ್ಸಿನಲ್ಲೇ ಬಹಳ ಸುಲಭವಾಗಿ ಸಿಗುವುದರಿಂದ ಎಂಜಾಯ್ ಎಂಬ ಪದದಲ್ಲಿ ಹೆಣ್ಣು ಬಳಕೆಯಾಗುತ್ತಿದ್ದಾಳೆ. ಯುವ ಜನಾಂಗವಿಂದು ಮದುವೆಗೆ ಮುಂಚೆಯೆ ಎಲ್ಲಾ ಬುಡಮೇಲಾಗಿ ತದನಂತರ ಕಾಯ್ಧೆಯಡಿಯಲ್ಲಿ ಅದು-ಇದು ಎಂದು ಕಟಕಟೆಗೆ ಬಂದು ಅತ್ಯಾಚಾರವೋ, ಅನಾಚಾರವೋ,ಡಿವೋರ್ಸೋ ಎಂಬ ಸರ್ಟಿಫಿಕೆಟ್ ಪಡೆದು ಹೊರಬರುತ್ತಿದ್ದಾರೆ. ಸೋಷಿಲ್ ಮೀಡಿಯಾಗಳ ಹಾವಳಿಯಿಂದ ಇಷ್ಟೆಲ್ಲಾ ಪರಿವರ್ತನೆ ನಾವು ಕಂಡಿದ್ದೇವೆ ಎಂದರೆ ತಪ್ಪಿಲ್ಲ. ಗುರುತು ಪರಿಚಯವಿಲ್ಲದೆ ಗೆಳೆತನವಾಗಿ ಅದುವೇ ಪ್ರೀತಿ ಎನ್ನುವ ಬಲೆಯಾಗಿ ಕೊನೆಗೊಂದು ದಿನ ಒಪ್ಪಿಗೆ ಇಲ್ಲಾ ಎನ್ನುವ ಕಾರಣಕ್ಕೆ ಅವಳ ಕೊಲೆ, ಅವಳಿಗೆ ತನ್ನ ಮೇಲೆ ಅವನಿಗೆ ಮೋಹವಿದೆ ಎಂದು ತಿಳಿಯುವ ಮೊದಲೇ ಅವನಿಂದಲೇ ಅತ್ಯಾಚಾರ..ಈಗೆ ಸಾಗುತ್ತಿದೆ ಇಂದಿನ ಸರಣಿ ದಿನಗಳು.
      ಹಾಗಾದರೆ ಹೆಣ್ಣು ಶೋಷಿತಳಾಗುತ್ತಿರುವುದು ಎಲ್ಲಿ? ಅವಳು ದಾರಿ ತಪ್ಪುತ್ತಿರುವುದು ಹೇಗೆ? ಅವಳು ಹಾಗಾಗುವುದಕ್ಕೆ ಅವಳೇ ಕಾರಣವಾ ಎಂಬುದನ್ನು ತಡಕಾಡಿಸಿ ನೋಡಿದರೆ ಬದಲಾಗುತ್ತಿರವ ಯುಗದ ಆಧುನಿಕತೆಯ ಹೊಸ ರೂಪ ಇಷ್ಟೆಲ್ಲದ್ದಕ್ಕೆ ಕಾರಣ ಎಂಬ ಉತ್ತರ ದೊರಕುತ್ತದೆ. ಇಂದಿನ ಮೌಲ್ಯುಯುತ ಸಮಾಜದಲ್ಲಿ ಎಲ್ಲವೂ ಮೌಲ್ಯ. ಆದರೆ ಯಾವುದನ್ನು ಎಷ್ಟು ಉಪಯೋಗಿಸಬೇಕು ಎಂಬುದನ್ನು ನಾವು ಮರೆತಿದ್ದೇವೆ ಅಷ್ಟೇ.. ಎಲ್ಲವೂ ಸುಲಭವಾಗಿ ದೊರಕುತ್ತಿರುವುದು ದಾರಿತಪ್ಪಿಸಲು ಮಹತ್ವದ ಮೈಲಿಗಲ್ಲಾಗಿದೆ. ಏನು ಎಷ್ಟಿದ್ದರೂ ನಮ್ಮ ತನದಲ್ಲಿ ನಾವಿರಬೇಕು, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವ ಮುನ್ನ ಸ್ವಲ್ಪ ಎಚ್ಚರದಿಂದ ಮುಂದುವರಿಯಿರಿ. ದಿನಕ್ಕೊಂದು ಬಗೆಯಲ್ಲಿ ಪೋಟೋ ಕ್ಲಿಕ್ಕಿಸಿ ಹೆಣ್ಣುಮಕ್ಕಳೊಂದಿಗೆ ವಿಚಿತ್ರವಾಗಿ ವರ್ತಿಸುವ ಒಂದು ವರ್ಗವೇ ಇದೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಹೆಣ್ಣು ಮಕ್ಕಳೊಂದಿಗೆ ವಿಚಿತ್ರವಾಗಿ ವರ್ತಿಸುತ್ತಾ  ಅವಳನ್ನು ಮರಳು ಮಾಡುತ್ತಾರೆ ನಿಜ ಆದರೆ ಹೆಣ್ಣು ಜಾಗ್ರತೆ ಮರೆತರೆ ಮನೆಯವರು ಮಾತ್ರವಲ್ಲ ಎಲ್ಲರೂ ತಲೆತಗ್ಗಿಸಬೇಕಾಗುತ್ತದೆ. ವಿದೇಶಿ ಸಂಸ್ಕ್ರತಿಗೆ ಏಡೆ ಕೊಡೋದು ಬೇಡ ಎಂದಲ್ಲ. ನಮ್ಮ ತನವನ್ನು ಉಳಿಸುವ ನಮ್ಮ ಸಂಸ್ಕ್ರತಿಯನ್ನು ಬಳಸಿಕೊಳ್ಳಿ. ಮುಖ್ಯವಾಗಿ ಆಧುನಿಕತೆಯ ಟ್ರೆಂಡ್ ಗೆ ಅಡಿಇಡುವ ಮೊದಲು ಅದರ ಕೆಡುಕು ವಿಚಾರಗಳ ಬಗ್ಗೆ ಗಮನವಿರಲಿ. ಎಲ್ಲಾ ತನದಲ್ಲೂ ಎಚ್ಚರವಿರಲಿ ಮೋಸಹೋಗುವುದರಿಂದ ದೂರವಿರಿ,.

ಹೆಣ್ಣು-3 (ಮಹಿಳಾ ದಿನಾಚರಣೆ ಸ್ಫೇಷಲ್)


ಮಾರ್ಚ್ 8, ವಿಶ್ವ ಮಹಿಳಾ ದಿನ, ಸಾಂಸ್ಕøತಿಕ, ಆರ್ಥಿಕ, ರಾಜಕೀಯ, ರಾಷ್ಟ್ರಾತೀತ, ಜನಾಂಗೀಯ, ಭಾಷಾವಾರು ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ತೋರಿಸುವ ಮಹಿಳೆಯರ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ಇದು ಹಬ್ಬವಲ್ಲ ಮಹಿಳೆ ತನ್ನ ಹಕ್ಕನ್ನು ಪಡೆಯಲು ಹೋರಾಟಗೈದ ಯಶೋಗಾಥೆಯ ಪ್ರತೀಕ. 1909ರ ಫೆಬ್ರವರಿ 28ರಂದು ಉತ್ತರ ಅಮೇರಿಕಾದಲ್ಲಿ ನಡೆದ ಕೂಲಿ ಚಳುವಳಿ (ಲೇಬರ್ ಮೂಮೆಂಟ್ಸ್) ಯಿಂದಾಗಿ, ಮೊತ್ತಮೊದಲ ಬಾರಿಗೆ ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಯಿತು. ಆನಂತರದಲ್ಲಿ ಸಂಯುಕ್ತ ರಾಷ್ಟ್ರಗಳೆಲ್ಲಾ ಒಂದಾಗಿ 1975ರಿಂದ  ಮಾರ್ಚ್ 8ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿದವು. ಅಮೇರಿಕಾದ ಸಮಾಜವಾದಿ ಪಕ್ಷ ಈ ದಿನವನ್ನು ಸರ್ಕಾರಿ ಕಾರ್ಮಿಕ ಚಳುವಳಿಯಲ್ಲಿ ಭಾಗವಹಿಸಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಿತು. ಹಾಗಾಗಿ ಇದನ್ನು ಹೋರಾಟ, ಸಂಘರ್ಷದ ಯಶೋಗಾಥೆ ಎಂದು ಕರೆಯಬಹುದು.

ಮಹಿಳಾ ದಿನಾಚರಣೆ ಪ್ರತಿ ವರ್ಷವೂ ಬರುತ್ತದೆ ಆದರೆ ಈ ದಿನವನ್ನು ಅಂದವಾಗಿ ಆಚರಿಸಿಕೊಂಡು ಸುಮ್ಮನಿದ್ದರೆ ಸಾಕಾ!? ,ಅಂದು ಹೋರಾಟದ ಸಂಕೇತವಾಗಿ ಆಚರಿಸಿಕೊಂಡ ದಿನವನ್ನು ಭಾಷಣ, ವಿನೋಧಾವಳಿಯ ಕಾರ್ಯಕ್ರಮ ಮಾಡಿ, ಕೊನೆಯಲ್ಲಿ ಗಡದ್ದಾಗಿ ಊಟ-ತಿಂಡಿ ಮಾಡಿಕೊಂಡು ದಿನವನ್ನು ಮರೆತರೆ ಸಾಕಾ!?...ಅಥವಾ ಈ ಸಮಯದಲ್ಲಾದರೂ ಮಹಿಳೆಯ ಮೇಲೆ ನಡೆಯುತ್ತಿರುವ ಆಚಾರ ಅನಾಚಾರಗಳನ್ನು ವಿವೇಚನವಾಗಿ ಅರಿತು ಅವುಗಳನ್ನೆಲ್ಲಾ ತೊಡೆದು ಹಾಕುವÀ ಸಂಕಲ್ಪ ಮಾಡಬಹುದಾ ಎಂಬುದು ನಾವು ಯೋಚಿಸಬೇಕಾದ ವಿಷಯ. ಇತ್ತೀಚೆಗಂತೂ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಶೋಷಣೆ ದೊಡ್ಡ ಘೋಷವಾಕ್ಯ ಪಡೆಯುತ್ತಿದೆ. ನಿಜಕ್ಕೂ ಮಹಿಳೆಯರ ಮೇಲಿನ ಈ ಅನಾಚಾರಗಳನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಲೆಕ್ಕಹಾಕಿದರೆ ಬರೆಯಲು ಪುಟ ಸಾಲದು. ಇದು ಇಂದು ನಿನ್ನೆಯ ವಿಷಯವಲ್ಲ. ಅನಾದಿಕಾಲದಿಂದಲೂ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ. ಮೊದಲೆಲ್ಲಾ ಬಾಹ್ಯಪ್ರಪಂಚಕ್ಕೆ ಅಷ್ಟು ಬೆಳಕಿಗೆ ಬಾರದಿದ್ದ ಪ್ರಸಂಗಗಳು ಇಂದು ಮಾಹಿತಿ ತಂತ್ರಜ್ಞಾನದಲ್ಲೂಂಟಾದ ಅಗಾಧ ಬೆಳವಣಿಗೆಯ ಪರಿಣಾಮದಿಂದ  ಎಲ್ಲಾ ಕಡೆಯೂ ಎಲ್ಲವೂ ಬೆಳಕಿಗೆ ಬರುತ್ತಿದೆ. ಸೋಷಿಯಲ್ ಮೀಡಿಯಾಗಳಿಂದಾಗಿ ಒಳಗಿರುವ ಅತ್ಯಾಚಾರ ಇಡೀ ಜನಸಮೂಹಕ್ಕೆ ತಿಳಿದು ಅವಳು ಇನ್ನಷ್ಟು ಕುಗ್ಗುವಂತಾಗಿದೆ. ಅಷ್ಟೆ ಅಲ್ಲದೇ ದಿನ ಬೆಳಗಾದರೆ ಟಿ.ವಿ ಪೇಪರ್ ಎನ್ನದೇ ಅಲ್ಲಿ-ಇಲ್ಲಿ ಎಲ್ಲಾ ಕಡೆಗಳಲ್ಲೂ ದೌರ್ಜನ್ಯದ ಬಿಕಲಾಟವು ಬರುತ್ತಲೇ ಇದೆ. ಇನ್ನೂ ಮುಖ್ಯವಾದ ವಿಚಾರವೆಂದರೆ ಅನೇಕ ಕಡೆಗಳಲ್ಲಿ ಹೆಣ್ಣಿನಿಂದಲೆ ಹೆಣ್ಣು  ಶೋಷಿತಳಾಗುತ್ತಿದ್ದಾಳೆ. ಆಫೀಸ್, ಕೂಲಿ ಮಾಡುವ ಸ್ಥಳ, ಸಾಮಾಜಿಕ ಜಾಲತಾಣ, ಸಾರ್ವಜನಿಕ ಸ್ಥಳ ಹೀಗೆ ಎಲ್ಲಾ ಕಡೆಗಳಲ್ಲೂ ಇದನ್ನೆಲ್ಲಾ ಕಣ್ಣಾರೆ ಕಂಡರೂ ಕೂಡ ನಾವು ಸುಮ್ಮನಿರುತ್ತೇವೆ. ಇದರರ್ಥ ನಮಗೆ ನಮ್ಮ ಸಾಮಾಜಿಕ ಪ್ರಜ್ಞೆ ಬೆಳವಣಿಗೆಯಾಗಿಲ್ಲವೆಂದೇ ಹೊರತು, ಇದನ್ನು ತಡೆಯಲು ಆಗಲ್ಲ ಎಂದರ್ಥವಲ್ಲ. ಆದ್ದರಿಂದ ಮಹಿಳೆಯರ ದಿನವನ್ನು ಕೇವಲ ಆಚರಣೆಯಾಗಿ ಮಾತ್ರವೇ ಆಚರಿಸದೇ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆಯನ್ನು ಸಂಪೂರ್ಣ ಮಟ್ಟ ಹಾಕುವತ್ತ ಸಾಗೋಣ, ಇದಕ್ಕೆ ಇಂದೇ ಅಣಿಯಾಗೋಣವಲ್ಲವೇ...
ಎಲ್ಲರಿಗೂ ವಿಶ್ವ ಮಹಿಳಾ ದಿನದ ಶುಭಾಶಯಗಳು...

Wednesday, 18 March 2015

ಪಯಣದ ಸುತ್ತಾ...


      ಮೊನ್ನೆಯಷ್ಟೆ ನಾಲ್ಕೈದು ದಿನಗಳ ರಜೆ ಪಡೆದು ಊರಿನ ಕಡೆ ಪ್ರಯಾಣ ಬೆಳೆಸಿದ್ದೆ. ಊರು ಬಿಟ್ಟು ಬಂದು ಬರೋಬ್ಬರಿ ಮೂರು ವರ್ಷದ ನಂತರ ನನ್ನ ಈ ಪ್ರಯಾಣ ನನ್ನೂರಿಗೆ. ಸ್ವಲ್ಪ ಅದ್ಭುತ, ಸ್ವಲ್ಪ ಕುತೂಹಲದ ನಡುವೆ ಹೋಗುವಾಗಲೇ ಹಳೆಯ ನಮ್ಮ ಹಳ್ಳಿಯ ವೈಖರಿ ನಾವಾಗಾ ಬೆಳೆದಿದ್ದು, ಓದಿದ್ದು, ಎಲ್ಲಾ ನೆನಪು ಮಾಡಿಕೊಂಡೆ. ಅದೇ ಟಾರು, ಅದೇ ರೋಡು, ಅದೇ ಬಿಲ್ಡಿಂಗ್‍ಗಳು, ಅದೇ ಟ್ರಾಫಿಕ್‍ನ ಸಂಧಿಗೊಂದಿ, ಬೇಡದ ನೂಕು ನುಗ್ಗಲು, ಕರುಣೆ ತೋರದ ಜನಗಳು, ಸದಾ ಮಂಡೆಬಿಸಿ ಮಾಡುವ ಓಡಾಟಗಳು.., ಇವುಗಳಿಗೆಲ್ಲಾ ಬ್ರೇಕ್ ಹಾಕಿ ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ನೆಮ್ಮದಿಯಲ್ಲಿ ಒಂದಿಷ್ಟು ದಿನವಾದರೂ ಆರಾಮಾಗಿ ಸುಖಿಸಿ ಸರಿಯಾದ ನಿದ್ರೆಯ ಜೊತೆಗೆ ಸ್ವಲ್ಪ ಹಳ್ಳಿಯ ಅಂದವನ್ನು ಸವಿದುಕೊಂಡು ಬರೋಣವೆನ್ನುವುದು ನನ್ನ ಜರ್ನಿಯ ಆಶಯವಾಗಿತ್ತು.
  ಈಗೆಲ್ಲಾ ಮನೆಯ ಹತ್ತಿರವೇ ಬಸ್ಸು ಹೋಗುವುದರಿಂದ ಮೊದಲಿನ ರೀತಿ ಮೈನ್ ರೋಡ್‍ನಲ್ಲಿ ಬಸ್ಸಿಳಿದು, ಬಳಿಕ ಕೈಲಿರುವ ಭಾರದ ಬ್ಯಾಗನ್ನು ಹಿಡಿದುಕೊಂಡು ಎತ್ತಿನ ಗಾಡಿಯೋ, ಜೀಪನ್ನೋ ಬಳಸಿಕೊಂಡು, ಅದಾದ ನಂತರ ಇನ್ನರ್ಧ ಕಿಲೋ ಮೀಟರ್ ನಡೆದು ಸುಸ್ತಾಗಿ ‘ಇಲ್ಲಿಗೆ ಬರೋದಂದ್ರೆ ಇದೇ ರಗಳೆನಪ್ಪಾ’ ಎನ್ನುವಾ ತಗಾದೆಯ ಮಾತೆ ಇರಲಿಲ್ಲ.
ಅಂತೂ-ಇಂತೂ ಆ ಊರಿನಲ್ಲಿ ಹತ್ತಿದ ಬಂಡಿ  ನಮ್ಮೂರಿಗೆ ನನ್ನ ಸೇಪ್ ಆಗಿ ಕರೆದುಕೊಂಡು ಬಂದು ಇಳಿಸಿ, ಅದರ ಪಾಡಿಗೆ ನನ್ನ ಪಯಣ ಇನ್ನೂ ಮುಂದಕ್ಕಿದೆ ಎನ್ನುವಂತೆ ಇನ್ನೊಂದೂರಿಗೆ ಪ್ರಯಾಣ ಬೆಳೆಸಿತು. ಬಸ್ಸಿಂದ ಇಳಿದ ನಂತರ ಒಂದು ನಿಮಿಷ ಸೈಲೆಂಟ್ ಆಗಿ ಆಚೆ-ಇಚೆ ನೋಡಿದವನಿಗೆ ನಾನು ನಮ್ಮೂರಿಗೆ ಬಂದಿದ್ದೀನಾ!? ಆಥವಾ ಬೇರೆಲ್ಲಾದರೂ ಬಂದು ಇಳಿದೆನಾ!? ಎಂಬ ಪ್ರಶ್ನೆ ಮೂಡಿತು. ನಾ ಈ ಊರನ್ನು ಬಿಟ್ಟು ಹೋಗುವ ದಿನ ಈ ಊರು ಎಷ್ಟು ಹಸಿರಿನಿಂದ ಕೂಡಿತ್ತು. ಎಲ್ಲಿ ನೋಡಿದರೂ ಮರ-ಗಿಡ, ಪಶು-ಪಕ್ಷಿಗಳ ಕಲರವ, ಮಕ್ಕಳ ಆಟ-ಓಟ, ಹೀಗೆ ಎಲ್ಲವೂ ನೈಜ ಬದುಕಲ್ಲಿ ತನ್ನದೇ ಆದ ಸಂತೋಷವನ್ನು ನೀಡುವ ಪಾರ್ಟನರ್ ಆಗಿ ಕಾಣುತ್ತಿತ್ತು. ಆದರೆ ಇಂದು ಎಲ್ಲವೂ ಬದಲಾಗಿದೆ!. ಅಂದಿದ್ದ ಕೆಂಪು ರಸ್ತೆಗೆ ಡಾಂಬರ್‍ನ ಕವಚ ಬಂದಿದೆ. ನಡುವೆ ಎರಡೂ ಕಡೆ ಚರಂಡಿಯ ವೈಭವ ಬೇರೆ. ಏನಾಶ್ಚರ್ಯ!! ನಾನಂದುಕೊಂಡು ಬಂದ ಊರು ಇದಲ್ಲವಾದರೂ, ನಾನು ಹುಟ್ಟಿ ಬೆಳೆದ ಊರು ಇದೇನೆ. ಅಷ್ಟೊಂದಿದ್ದ ಮರಗಳು ಇಷ್ಟಾಗಿವೆ. ಇಷ್ಟಿದ್ದ ವೈಖರಿಗಳು ಏನೂ ಇಲ್ಲದಾಗಿವೆ...ಇದನ್ನು ಬದಲಾವಣೆ ಎನ್ನಲೋ, ನಾವೇ ನಮ್ಮ ತನವನ್ನು ಹಾಳುಗೆಡವಿಗೊಳ್ಳಲು ಆಹ್ವಾನಿಸಿದ ದಾರಿಹೋಕನ ಕಾಟ ಎನ್ನಲಾ!? ತಿಳಿಯುತ್ತಿಲ್ಲ!!...
ಅಯ್ಯೋ ಸುಮ್ಮನಿರು ಮನವೇ ಡಿಲ್ಲಿಯಿಂದ ಹಳ್ಳಿಗೆ ಬಂದರೂ ನಿನ್ನ ವಿಮರ್ಶೆ ಬುದ್ಧಿ ಬದಲಾಗಿಲ್ಲವಲ್ಲಾ, ಅದೆಲ್ಲಾ ಈಗ್ಯಾಕೆ ನೀ ಬಂದಿರೋದು ಆರಾಮಾಗಿ ಇದ್ದು ಹೋಗೋಕೆ. ಅಷ್ಟಕ್ಕೂ ಇಷ್ಟು ದಿನ ಊರಿನ ಮೇಲೆ ಇಲ್ಲದ ಈ ಪ್ರೀತಿ ಈಗ್ಯಾತಕೆ ಎಂದು ನನ್ನ ಮನಕ್ಕೆ ನಾನೇ ಬೈದುಕೊಂಡೆ.  ಸುಮ್ಮನೆ ಈ ಆಲೋಚನೆಗಳಿಗೆಲ್ಲಾ ವಿರಾಮವಿತ್ತು ಮನೆ ಕಡೆ ಹೆಜ್ಜೆ ಹಾಕಿದರೂ ನಾವು ಬೆಳೆದ ಪರಿಸರ, ಆಗಿನ ನಮ್ಮ ಬಾಲ್ಯ, ಜೀವನದ ಆಗುಹೋಗು, ಚಿಕ್ಕವಯಸ್ಸಲ್ಲಿ ನಾವು ಎಂಜಾಯ್ ಮಾಡುತ್ತಿದ್ದ ಮನೆಯಾಟ ಇತ್ಯಾದಿಗಳು ತುಂಬಾನೆ ನೆನಪಾಗಿ ಕಾಡತೊಡಗಿದವು. ಯಾವುದೇ ವ್ಯಕ್ತಿಗೆ ಹಳೆಯ ನೆನಪು ಹೇಗೆ ಅವಿಸ್ಮರಣೀಯ ಅವರ್ಣನೀಯವೋ, ಹಾಗೆಯೆ ಪ್ರಸ್ತುತ ಜೀವನದೊಂದಿಗೆ ಹಳೆಯ ನನಪು ಮತ್ತೆ ನೆನೆಗುದಿಗೆ ಬಂದು ಸಾಕಾರವಾಗಿ ಅದ್ಭುತ ಅನುಭವವನ್ನು ನೀಡುವುದು ಒಂಥರ ಮನಸ್ಸಿನ ಮೂಲೆಗೆ ಸಿಹಿಯ ಸಿಂಚನ.
 ಎಸ್.., ಅದು  ನಮ್ಮ ಬಾಲ್ಯ. ಬಾಲ್ಯವೆ0ಬ ಮಧುರ ನೆನಪುಗಳ ಕಣಜವನ್ನೊಮ್ಮೆ ಬಗ್ಗಿ ನೋಡಿದಾಗ, ಎಷ್ಟೆಲ್ಲಾ ಮನೋಹರ ದೃಶ್ಯಗಳು ಕಾಣಸಿಗುತ್ತವೆ. ಅದೊಂದು ಕಶ್ಮಲವಿಲ್ಲದ ಜಗತ್ತು. ಚಿಕ್ಕ ವಯಸ್ಸಿನಿಂದ ಹಿಡಿದು ಬೆಳೆದು ದೊಡ್ಡವರಾಗುವವರೆಗೂ ನಾವು ಕಂಡ ಜೀವನದ ಅದ್ಭುತಗಳೇ ಇಂದು ಎಷ್ಟೇ ಆಧುನೀಕರಣಕ್ಕೆ ಒಳಗಾದರೂ ಮರೆಯಲಾಗದ ಅನುಭವ ನೀಡುತ್ತವೆ. ಇಂದು ಹಣ ಮಾಡಬೇಕು,  ಎಂದು ಬೇರೆ ಊರಿಗೆ ಹೋಗುವ ನಾವು ಬಗೆ ಬಗೆಯಲ್ಲಿ ಪ್ರತಿದಿನವೆನ್ನದೇ ಹೋರಾಡುತ್ತಲೇ ಬದುಕುತ್ತವೆ. ಎಲ್ಲವನ್ನೂ ಮರೆಯುತ್ತೇವೆ. ಆದರೆ ಕಷ್ಟದ ಸಂಧರ್ಭ ಬಂದಾಗ ಇಲ್ಲಿನ ಸಹವಾಸ ಸಾಕು ಊರಿಗೆ ಹೋಗಿ ಇದ್ದು ಬಿಡೋಣವೆಂದುಕೊಳ್ಳುತ್ತೇವೆ. ಇದೇ ಅಲ್ವಾ ಹುಟ್ಟೂರಿನ ಮಹಿಮೆ. ಅಲ್ಲಿ ಏನಿತ್ತೋ ಎನಿಲ್ವೋ ಆದರೆ ಸಂಭ್ರಮ ಇತ್ತು ಜೊತೆಗೆ ಪ್ರೀತಿ ಇತ್ತು. ಬೆಳಿಗ್ಗೆ ಎದ್ದು, ಗದ್ದೆ-ತೋಟದ ಕಡೆ ಪಯಣಿಸಿ ಸಣ್ಣ ಪುಟ್ಟ ಕೆಲಸ ಮಾಡಿ ಆನಂತರವೇ ಶಾಲೆಗೆ ಹೋಗುವುದು, ಅಲ್ಲಿಂದ ಮನೆಗೆ ಬಂದು ಮತ್ತೆ ಆಟ ಆಟಲು ಹೊರಡುವುದು ಹೀಗೆ ಎಲ್ಲವೂ ಒಂದು ಮಜಾ. ಸುಮಾರು ಮೈಲಿಗಳಷ್ಟು ದೂರವಿರುವ ಒಂದೇ ಶಾಲೆಗೆ, ಹೋಗುವ ದಾರಿಯಂತೂ ಕಲ್ಲು ಬೆಟ್ಟಗಳ ಮೇಲೆ ಇತ್ತು. ಅಲ್ಲಲ್ಲೇ ಆಟ, ಅಲ್ಲಲ್ಲೇ ಜಗಳ, ಬಡಿದಾಟ, ಮದ್ಯಾಹ್ನದ ಮೇಲೆ ಕುಂಟೆ ಬಿಲ್ಲೆಯೊ, ಲಗೋರಿಯೋ. ಚೀನಿ ಆಟವೋ ಮತ್ಯಾವುದೋ ಆಡುತ್ತಾ ಕಾಲ ಕಳೆಯುತ್ತಿದ್ದದ್ದೂ, ಹೀಗೆ ಎಲ್ಲವೂ ಅದ್ಭುತ ಏನಿಸುತ್ತದೆ. ಈಗಲೂ ಸಂಜೆ ಸಮಯದಲ್ಲಿ ಕಣ್ಮುಚ್ಚಿ ನೆನೆದುಕೊಂಡರೆ ಆ ಸಮಯದ ಎಲ್ಲವೂ ನೆನಪಿಗೆ ಬಂದು ಮೈ ರೋಮಾಂಚನಗೊಳಿಸುತ್ತವೆ.
        ಅಂತೂ ಹಲವು ದಿನಗಳ ಬಳಿಕ ಮನೆ ಸೇರಿದ ನನಗೆ ತಾಯಿ ಪ್ರೀತಿಯೊಂದು ಮೊದಲಿನಂತೆ ಸಿಕ್ಕಿದ್ದು ಬಿಟ್ಟರೆ ಬೇರೆನೂ ಮೊದಲಿನ ರೀತಿಯಲ್ಲಿ ಕಾಣಲು ಸಾಧ್ಯವಾಗಲಿಲ್ಲ. ಎಲ್ಲವೂ ಕೂಡ ಚೆಂಜ್ ಚೆಂಜ್.. ಎಲ್ಲಿಯವರೆಗೆ ಹೊಸತನಕ್ಕೆ ಹಾಸುಹೊಕ್ಕಾಗಿದ್ದೇವೆ ಎಂದರೆ ಮೊದಲೆಲ್ಲಾ ದೂರದೂರಿಂದ ಮನೆಗ್ಯಾರಾದರೂ ಬರುತ್ತಾರೆ ಎಂದರೆ ಬಾಗಿಲ ಬಳಿಯೇ ನಿಂತು ಕಾಯುತ್ತಾ ಕುಳಿತಿರುತ್ತಿದ್ದೆವು ನಾವು. ಅದರೆ ಇಂದು ಮನೆಬಾಗಿಲಿಗೆ ಧಾವಿಸಿದರೂ ಕುಳಿತುಕೊಳ್ಳಿ ಕೊನೆಯ ಒಂದು ಎಪಿಸೊಡ್ ಇದೆ ನೊಡ್ಕೋತೀವಿ ಆಮೇಲೆ ಮಾತಾಡೋಣ ಎಂದು ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತು  ಮನೆಗೆ ಬಂದವರನ್ನೇ ಮರೆಯುತ್ತಾರೆ. ಮಕ್ಕಳಂತೂ ಹೊರಗಿನ ಆಟವನ್ನೇ ನೋಡಿಲ್ಲ. ನಾವು ಕಾಣದ ಹೊಸ ಬಗೆಯ ಆಟವನ್ನು ಮೂಬೈಲ್, ಕಂಪ್ಯೂಟರ್‍ನಲ್ಲೇ ಆಡಿ ನಾವೇ ಜಾಣರು ಎನಿಸಿಕೊಳ್ಳುತ್ತಿದ್ದಾರೆ... ಇನ್ನೂ ಪ್ರಕೃತಿಯ ವಿಚಾರಕ್ಕೆ ಬಂದರೆ  ಆಧುನಿಕತೆಯ ಗುಂಗು ಪರಿಸರದ ಮೇಲೆ ಅತಿಕ್ರಮಣ ನಡೆಸಿದೆ. ಮೊದಲಿದ್ದ ಕಾಡು ಇಗಿಲ್ಲದಾಗಿದೆ. ಒಟ್ಟಿನಲ್ಲಿ ಬದಲಾವಣೆಯ ಸೊಂಕು ಎಲ್ಲೆಡೆಯೂ ಪಸರಿಸಿ ನಮ್ಮೂರಿಗೆ ವಿಶಿಷ್ಟ ಲೇಪನ ಕೊಟ್ಟಿರೋದು ಸುಳ್ಳಲ್ಲ. ಇನ್ನೂ ಜಾನಪದೀಯಾಚರಣೆಗಳು ಅಷ್ಟಕಷ್ಟೆ ಎಂಬಂತೆ ಮನೆಯಿಂದ ಹೊರಹೋಗಲು ಬಾಗಿಲ ಬಳಿ ಬಂದು ನಿಂತಿದೆÉ. ಕಳುಹಿಸಿ ಕೊಡಲು ಜನರಂತೂ ಅಳುಕಿಲ್ಲದೆ ಮಾತಾಡುತ್ತಿದ್ದಾರೆ. ಎಲ್ಲಿಯ ಬದುಕು ಎಲ್ಲಿಗೆ ಸಾಗಿದೆ  ಆಲ್ಲವಾ?ಹೀಗೆ ಜೀವನದಲ್ಲಿ ಪ್ರತಿಯೊಂದು ಬದಲಾವಣೆ ಕಂಡಿರುವ ನನ್ನೂರನ್ನು ಕಂಡು ಖುಷಿ ಎಷ್ಟಾಯಿತೋ ನಾ ತಿಳಿಯೇ ಆದರೆ, ನೋವಂತೂ ತುಂಬಾ ಆಯ್ತು. ಹೊಲ ಗದ್ದೆಗಳನ್ನು ನೋಡೋಣವೆಂದು ಬಯಲಿನ ಕಡೆ ಸಾಗಿದರೆ ಎಲ್ಲಾ ಗದ್ದೆಗಳು ಮರುಭೂಮಿಯಂತೆ  ಬರಡಾಗಿ ಬಿದ್ದದ್ದವು. ಯಾಕೆ ಯಾರೂ ಕೃಷಿ ಮಾಡಿಲ್ಲವೆಂದು ತಂದೆಯನ್ನು ಕೇಳಿದರೆ ಎಲ್ಲರ ಮನೆ ಮಕ್ಕಳು ಕಲಿತು ದೊಡ್ಡವರಾಗಿ ನಿನ್ನಂತೆ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದಾರೆ. ತಿಂಗಳು ತಿಂಗಳಿಗೆ ಹಣ ಕಳುಹಿಸುತ್ತಾರೆ. ಆ ಹಣದಿಂದ ಇವರೆಲ್ಲಾ ಆರಾಮಾಗಿ ಇದ್ದಾರೆ. ಈ ಕಷ್ಟ ಯಾರಿಗೂ ಬೇಡದಾಗಿದೆ. ಅದರಿಂದ ಎಲ್ಲರೂ ಈ ಕೃಷಿಯನ್ನೇ ಮರೆತಿದ್ದಾರೆ. ನಾನಾದರೂ ಮಾಡೋಣ ಎಂದರೆ ನನ್ನ ಗದ್ದೆಯೊಂದರಲ್ಲೇ ಕೃಷಿ ಮಾಡಿದರೆ ಕಾಡು ಪ್ರಾಣಿಗಳ ಹಾವಳಿ. ಕಾರ್ಖಾನೆ ಕೆಲಸದಿಂದ ಕೃಷಿ ಕೆಲಸಕ್ಕೆ ಜನವಂತೂ ಮೊದಲೇ ಸಿಗುತ್ತಾ ಇಲ್ಲಾ. ಇನ್ನೂ ಇದನ್ನೆಲ್ಲಾ ಮಾಡೋಕಾಗಲ್ಲ ಕಷ್ಟವಿದೆ ಎಂದರು. ನನಗೂ ಹೌದು ಎನಿಸಿತು. ಆದರೂ ನಮ್ಮ ದೇಶ ಸದೃಡವಾಗಿರುವುದೇ ಕೃಷಿಯಿಂದ ಅದನ್ನು ಮಾಡುವ ರೈತರಿಂದ. ಅದಕ್ಕೆ ಇಂತ ಗತಿ ಬಂದರೆ ಮುಂದೆ ಹೇಗೆ ಎನ್ನುವ ಭಯ ಕಾಡಿತು. ಬದಲಾವಣೆ ಒಳ್ಳೆಯದು ಅದರೆ ಅದು ಮುಂದೆ..!????
       ಆಧುನೀಕರಣ, ನಗರೀಕರಣ ಮತ್ತು ಕೈಗಾರೀಕರಣಗಳ ಭರಾಟೆಯ ಓಟಕ್ಕೆ ಸಿಲುಕಿ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ಥಂಭವಾಗಿದ್ದ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಈಗ ಹಳೆಯ ಸಂಸ್ಕøತಿಗಳು ಅಪರೂಪಕ್ಕೆ ಮರುಭೂಮಿಯಲ್ಲಿ ಕಾಣಿಸುವ ಓಯಸಿಸ್‍ನಂತಾಗಿವೆ. ಇವುಗಳ ಅಬ್ಬರದಲ್ಲಿ ಭಾರತೀಯ ಸಂಸ್ಕ್ರತಿಯ ನೈಜತೆ ಬದಲಾದದ್ದು ವಿಶೇಷ ಅನ್ನಿಸಲಿಲ್ಲ...ಏನಾದರಾಗಲಿ, ಆಧುನಿಕತೆಯ ವ್ಯಾಮೋಹದಲ್ಲಿ ನಮ್ಮ ತನವನ್ನು ನಾವು ಮರೆಯಬಾರದು. ಹಾಗೆÉ ಮರೆತರೆ ನಮ್ಮ ಹಳ್ಳಿಗೂ ಸಿಟಿಯ ಜನರಿಗೂ ಇರುವ ವ್ಯತ್ಯಾಸದಲ್ಲಿ ಯಾವ ಬದಲಾವಣೆಯೂ ಇರಲು ಸಾಧ್ಯವಿಲ್ಲ. ಅಂತೂ ಈ ಹಳೆಯ ಇಂದಿನ ವಿಮರ್ಶೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಗೊಂದಲದಲ್ಲಿ  ನಾಲ್ಕು ದಿನ ರಜೆ ಕಳೆದು ಮತ್ತೆ ಜೀವನದ ಬೇಳೆ ಬೇಯಿಸಲು ಮಹಾನಗರಿಯತ್ತ ಹೊರಟೆ. ಹೊರಡುವ ಮುಂಚೆ ಒಂದಲ್ಲ ಒಂದು ದಿನ ನಾನು ವಾಪಾಸಾಗಿ ಮತ್ತೆ ಇಲ್ಲಿಗೆ ಬರಬೇಕು. ಕೃಷಿ ಮತ್ತು ಸಂಸ್ಕ್ರತಿಗಾಗಿ ನನ್ನ ಜೀವನ ಮುಡಿಪಾಗಿಡಬೇಕು ಎಂದು ಸಂಕಲ್ಪಿಸಿದೆ.

Wednesday, 11 March 2015

ಎಕ್ಸಾಮ್ ಓ.ಕೆ... ಟೆನ್ಷನ್ ಯಾಕೆ...


        ದೊಂದು ಕೆಟ್ಟ ಸುದ್ಧಿ; ಸುಮಾರು ಪತ್ರಿಕೆಗಳಲ್ಲಿ ಟಿ.ವಿಯಲ್ಲಿ ಅದರ ತಕ್ಕಮಟ್ಟಿಗೆ ಸುದ್ಧಿ ಪ್ರಕಟವಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದ ನಂತರ ಫಲಿತಾಂಶದ ಕುರಿತು ತಳಮಳಗೊಂಡು, ವಿಕೃಮನಸ್ಸಿನ ಭಾವನೆಗೆ ಸಿಕ್ಕಿ ತಳಮಳಗೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಎಲ್ಲಾ ಮುಗಿದು ಪರೀಕ್ಷೆ ಫಲಿತಾಂಶ ಬಂದಾಗ ಅವನು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ.
ಹೌದು ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಆತಂಕಕ್ಕೆ ಒಳಗಾಗುತ್ತಾರೆ. ಫಲಿತಾಂಶ ಹೇಗೆ ಬರುತ್ತದೆಯೋ ಏನೋ? ಮನೆಯಲ್ಲಿ ಅಪ್ಪ ಬೈತಾರೇನೋ? ಸಫೋಸ್ ನಾನು ಫೇಲಾದರೆ!?, ನನ್ನ ಕಥೆ ಮುಗಿದೆ ಹೋಯಿತು ಎಂದು ನಲುಗುತ್ತಾರೆ. ಈ ರೀತಿಯ ಮನಸ್ಥಿತಿಗಳೇ ಮೇಲೆ ಹೇಳಿದ ಕೆಟ್ಟ ಸುದ್ದಿಗೆ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪರೀಕ್ಷೆ ಎದುರಿಸುವ ಮತ್ತು ಫಲಿತಾಂಶ ಸ್ವಿಕರಿಸುವ ಮನೋಭಾವ ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ. ಕಎಲವರು ಪರೀಕ್ಷೆ ಮುಗಿಯುತ್ತಿದ್ದಂತೆ ನಿರಾಳರಾದರೆ,ಇನ್ನು ಕೆಲವರು ಮುಂದೆ ಓದುವ ಕಾಟ ತಪ್ಪಿತಲ್ಲ ಎಂದು ಸಂತಸಪಡುತ್ತಾರೆ, ಗೆಳೆಯರೊಂದಿಗೆ ಪ್ರವಾಸ, ಪಾರ್ಟಿ, ಚಲನಚಿತ್ರ, ವಿಕ್ಷಣೆಯ ಮೂಲಕ ಸಂಭ್ರಮ ಪಡುತ್ತಾರೆ. ಕೆಲವರಿಗೆ ಪರೀಕ್ಷೆಯ ಪ್ರಾರಂಭದಿಂದ ಹಿಡಿದು ಫಲಿತಾಂಶ ಪ್ರಕಟವಾಗುವವರೆಗೂ ಹೃದಯ ಜೋರಾಗಿ ಬಡಿದುಕೊಳ್ಳುತ್ತಲೆ ಇರುತ್ತದೆ. ಇನ್ನೊಂದಿಷ್ಟು ವಿದ್ಯಾರ್ಥಿಗಳು  ಏನೇ ಭಯವಿದ್ದರೂ ತಮ್ಮ ಅಂತರಂಗದೊಳಗೆ ಇಟ್ಟುಕೊಂಡು ಒದ್ದಾಡುತ್ತಿರುತ್ತಾರೆ.
ಇಂದಿನ ಸ್ಫರ್ದಾತ್ಮಕ ಯುಗದಲ್ಲಿ ಫಲಿತಾಂಶ ಕಡಿಮೆಯಾದರೆ, ಮಗುವಿನ ಶೈಕ್ಷಣಿಕ ಬದುಕು ಭವಿಷ್ಯವೆರಡು ಡೋಲಾಯಮಾನವಾಗುತ್ತದೆ. ಹಾಗಂತ ಪರೀಕ್ಷೆಯೇ ಎಲ್ಲದಕ್ಕೂ ಅಂತಿಮ ಮಾನದಂಡವಲ್ಲ. ಓದು ಬೇಕು ಆದರೆ ಭಯದ ಓದು ಬೇಡ. ಪರೀಕ್ಷಾ ಭಯದಿಂದ ದೂರವಾಗಿ ಧೈರ್ಯದಿಂದ ಅತ್ಯಂತ ಸಮರ್ಥವಾಗಿ ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆ ನಡೆದಾದ ಮೇಲೆ ಹಾಗಾಯ್ತು- ಹೀಗಾಯ್ತು ಅಂತ ತಲೆ ಕೆಡಿಸಿಕೊಳ್ಳದೇ ಏನೇ ಆದರೂ ಸ್ವೀಕರಿಸುವೇ ಎನ್ನುವ ಧೃಡತೆ ಮನದಲ್ಲಿ ಮೂಡಿಸಿಕೊಳ್ಳಬೇಕು. ತಂದೆ-ತಾಯಂದಿರೂ ಅಷ್ಟೇ ಮಕ್ಕಳಿಗೆ ಪರೀಕ್ಷೆಯನ್ನು ಭಯದ ನೆರಳಲ್ಲಿ ಇಟ್ಟು ತೋರಿಸಬೇಡಿ.
ಸಾಮಾನ್ಯವಾಗಿ ವಿದ್ಯಾರ್ಥಿಗಳ ಎದೆಯಲ್ಲಿ ಆತಂಕ, ದುಗುಡ, ತಳಮಳ ಆರಂಭವಾಗುವುದೇ ಈ ಪರೀಕ್ಷೆಗಳ ಸಮಯ ಬಂದಾಗ, ಎಲ್ಲವನ್ನೂ ಓದಿ ಪರಿಪೂರ್ಣರಾಗಿದ್ದರೂ, ಮನಸ್ಸಿನಲ್ಲಿ ಅದೇನೋ ಒಂದು ರೀತಿಯ ಭಯ ಮನೆಮಾಡಿರುತ್ತದೆ. ಈ ಭಯಗಳನ್ನು ಹೇಗೆ ಹೋಗಲಾಡಿಸಿಕೊಳ್ಳುವುದು?, ಹೇಗೆ ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸುವುದು?, ಮನಸ್ಸಿನ ತುಮುಲಗಳನ್ನು ನಿವಾರಿಸಿಕೊಂಡು ಪರೀಕ್ಷೆಯ ಭಯ ನಿವಾರಿಸಿಕೊಳ್ಳುವುದು ಎಂಬ ಚಿಂತನೆಯಲ್ಲಿ ನೀವಿದ್ದರೆ ದಯವಿಟ್ಟು ಕೆಳಗಿನ ಅಂಶಗಳನ್ನು ಪಾಲಿಸಿ, ಯಶಸ್ಸು ನಿಮ್ಮದಾಗುವುದು ಖಂಡಿತ.
1. ಸರಿಯಾದ ವೇಳಾಪಟ್ಟಿ ಇರಲಿ ನಿಮ್ಮ ಓದಿಗೆ :
ನಿಮ್ಮ ಓದಿನ ಪೂರ್ವ ತಯಾರಿಯ ಜೊತೆಗೆ ಸರಿಯಾದ ವೇಳಾಪಟ್ಟಿ ನಿಮ್ಮ ಬಳಿ ಇರಲಿ. ಒಂದೊಂದು ವಿಷಯಕ್ಕೆ ಇಂತಿಷ್ಟು ಸಮಯ ಎಂಬಂತೆ ಅದರಲ್ಲಿ ಪ್ರತಿಯೊಂದು ವಿಷಯಕ್ಕೂ ಮನ್ನಣೆ ಇರಲಿ. ಟೈಮ್ ಟೇಬಲ್  ಗೋಡೆಗೆ ಮಾತ್ರಾ ಸೀಮಿತವಾಗಿರದೇ ಪಾಲಿಸುವ ಮನಸ್ಸಿನ ಗೋಡೆಯ ಮೇಲೂ ಅದನ್ನು ಅಚ್ಚೊತ್ತಿಕೊಂಡಿರಿ. ಪ್ರತಿ ವಿಷಯದ ಓದಿನ ನಡುವೆ 5/10 ನಿಮಿಷಗಳ ಅಂತರವಿರಲಿ.
2. ಸಮರಭ್ಯಾಸಕ್ಕೆ ಇಂದೇ ಅಡಿ ಇಡಿ;
  ಪರೀಕ್ಷೆ ಎನ್ನುವುದು ಒಂದು ರೀತಿಯಲ್ಲಿ ಯುದ್ಧವಿದ್ದ ಹಾಗೇ. ಅದಕ್ಕೆ ಯುದ್ಧಬ್ಯಾಸ ಇಂದೇ ಪ್ರಾರಂಭವಾಗಲಿ. ಬಹುತೇಕರು ಪರೀಕ್ಷೆಗೆ ಇನ್ನೂ ಅನೇಕ ವಾರಗಳಿವೆ. ಆಮೇಲೆ ಓದಿದರಾಯಿತು. ಎಂದು ಓದಿನ ಕಾರ್ಯಕ್ರಮವನ್ನು ಮುಂದೂಡುತ್ತಾ ಇರುತ್ತಾರೆ. ಇದು ತಪ್ಪು. ನೀವು ಇಂದಿನಿಂದಲೇ ಪರೀಕ್ಷೆಯ ಯುದ್ಧಕ್ಕೆ ಸನ್ನದ್ಧರಾಗಲೂ ಅಡಿ ಇಡಿ. ಇಂದೇ ಓದನ್ನು ಪ್ರಾರಂಭಿಸಿ.

3. ಗೊಂದಲಬೇಡ ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇರಲಿ:
ಮನೋವಿಜ್ಞಾನಿಗಳ ಪ್ರಕಾರ ಗೊಂದಲವು ಮಾನಸಿಕ ಪ್ರಕ್ರಿಯೆ. ಕೆಲವು ಸಂಧರ್ಭಗಳಲ್ಲಿ ಇದು ಸ್ವಾಭಾವಿಕ, ಮನಸ್ಸು ಮಾಡಿದರೆ ಈ ಭಯದಿಂದ ಹೊರಬರಬಹುದು. ಮುಖ್ಯವಾಗಿ ಪರೀಕ್ಷೆ ಎದುರಿಸುವ ಸಮಯ ಅದಕ್ಕಿಂತ ಮುಂಚಿನ ಪರೀಕ್ಷಾಭ್ಯಾಸದಲ್ಲಿ ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ವಿಶ್ವಾಸ ನಿಮ್ಮಲ್ಲಿರಲಿ. ನನ್ನ ಹತ್ತಿರ ಇದು ಸಾಧ್ಯ,ಅಂದುಕೊಂಡಿದ್ದಕ್ಕಿಂತ ಜಾಸ್ತಿನೇ ಸಾಧಿಸುತ್ತೇನೆ ಎಂಬ ನಂಬಿಕೆ ಮನದಲ್ಲಿರಲಿ. ಯಾವ ವಿಷಯ ಮೊದಲು ಓದಬೇಕು, ಯಾವುದಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬುದನ್ನು ಬೇಗ ನಿರ್ಣಯಿಸಿ. ಅದಕ್ಕಾಗೆ ಸಮಯ ವ್ಯರ್ಥ ಮಾಡದಿರಿ.

4. ಓದಿನ ಜೊತೆ ಆಟ-ಊಟ- ಮನರಂಜನೆಯೂ ಇರಲಿ:
ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಬಹುತೇಕ ವಿದ್ಯಾರ್ಥಿಗಳು ಆಟ-ಊಟ- ಮನರಂಜನೆಗಳನ್ನು ದೂರತಳ್ಳಿ ಲೋಕದ ಸಂಪರ್ಕವನ್ನು ಒಂದು ಕೊಠಡಿಗೆ ಸೀಮಿತವಾಗಿ ಒಟ್ಟುಕೊಳ್ಳುತ್ತಾರೆ. ಇದರಿಂದ ಲಾಬಕ್ಕಿಂತ ನಷ್ಟವೇ ಹೆಚ್ಚು. ನಿಮ್ಮ ದಿನವಿಡೀ ಓದಿನ ಜೊತೆಗೆ ಎಲ್ಲ ಮನರಂಜನೆಯನ್ನು ಅನುಭವಿಸಿ. ಅದು ಮನಸ್ಸಿಗೆ ಉಲ್ಲಾಸ ನೀಡಿ ಓದಿನ ಸುಸ್ತನ್ನು ತೊಡೆದುಹಾಕುತ್ತದೆ.
5. ಮರೆಯುವಿಕೆಗೆ ಒಂದು ಸಣ್ಣ ಪಟ್ಟಿಯಿರಲಿ:
ಬಹುತೇಕರಿಗೆ ಗಣಿತ, ವಿಜ್ಞಾನದ ವಿಷಯಗಳು ಕಬ್ಬಿಣದ ಕಡಲೆಕಾಯಿ. ಅದನ್ನು ನೀವು ಸುಲಿದ ಬಾಳೆ ಹಣ್ಣಿನಂತೆ ಪರಿವರ್ತಿಸಿಕೊಳ್ಳಬೇಕೆಂದರೆ ಸೂತ್ರಗಳ, ಸರಳ ರೇಖಾ ಸಮೀಕರಣಗಳ, ರಾಸಾಯನಿಕ ಸೂತ್ರಗಳ, ಸಮಾಜ ವಿಷಯದ ಇಸವಿಗಳ ಒಂದು ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಈ ರೀತಿ ನಿಮ್ಮ ಪಟ್ಟಿಯನ್ನು ನಿರ್ವಹಿಸಿದರೆ ಬಿಡುವಿನ ಸಮಯದಲ್ಲಿ ಒಮ್ಮೊಮ್ಮೆ ಅದರ ಮೇಲೆ ಕಣ್ಣಾಡಿಸುತ್ತಾ ಇದ್ದರೆ ಮರೆಯುವಿಕೆಯನ್ನು ತಡೆಯಬಹುದು.

6. ಓದಿನ ಮನನ ಮಾಡಲು ಒಂದಿಷ್ಟು ಸಮಯ ಮೀಸಲಿಡಿ:
ನೀವು ಎಷ್ಟು ಓದುತ್ತೀರಿ ಎನ್ನುವುದು ಮುಖ್ಯವಲ್ಲ. ಓದಿದ್ದು ಎಷ್ಟು ನೆನಪಿಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯ. ಓದಿನ ಮಧ್ಯೆ ಮಧ್ಯೆ ಅಥವಾ  ಬಸ್‍ನಲ್ಲಿ ಪ್ರಯಾಣಿಸುವಾಗ, ಎನಾದರೂ ಕೆಲಸ ಮಾಡುವಾಗ ಹೀಗೆ ಸಮಯ ಸಿಕ್ಕಾಗ ಓದಿದ್ದನ್ನು ಮನನ ಮಾಡಿಕೊಳ್ಳುತ್ತಿರಿ. ಹೀಗೆ ಮನನ ಮಾಡಿಕೊಳ್ಳುವುದರಿಂದ ಓದಿದ್ದು ಶಾಶ್ವತ ನೆನಪಿಟ್ಟುಕೊಳ್ಳಬಹುದಾಗಿದೆ.
7. ಬರೆದು ಓದಿ;
ಲೆಕ್ಕ ಬಿಡಿಸುವಾಗ ಅಥವಾ ರಾಸಾಯನಿಕ ಸೂತ್ರಗಳನ್ನು ಓದುವಾಗ ಸಾಧ್ಯವಾದಷ್ಟು ಬರೆದು ಓದಿ.ಇದರಿಂದ ನಿಮ್ಮ ಬರವಣಿಗೆಯ ವೇಗವು ಹೆಚ್ಚುವುದರ ಜೊತೆಗೆ ಓದಿದ್ದು ಮನಸ್ಸಲ್ಲಿ ಅಚ್ಚೊತ್ತಿ ನೆನಪಿನಲ್ಲಿರಲು ಸಹಾಯಕವಾಗುತ್ತದೆ.
8.ಪರೀಕ್ಷೆಯಲ್ಲಿ ಗಡಿಬಿಡಿಯಿಂದ ಒತ್ತಡಕ್ಕೆ ಸಿಲುಕಿಕೊಳ್ಳಬೇಡಿ:
ಎಲ್ಲಾ ಓದಿನ ನಂತರ ಪರೀಕ್ಷೆಗೆ ಕುಳಿತಾಗ ಒತ್ತಡವನ್ನು ತಂದುಕೊಳ್ಳಬೇಡಿ. ಪರೀಕ್ಷೆಯ ದಿನ ಆದಷ್ಟು ಕೂಲ್ ಆಗಿರಿ. ಒತ್ತಡಕ್ಕೆ ಸಿಲುಕಿ ಗಡಿಬಿಡಿ ಮಾಡಿಕೊಂಡರೆ ಗೊತ್ತಿದ್ದು ನೆನಪು ಹೋಗಬಹುದು. ಇಂತ ಪ್ರಶ್ನೆಗಳಿಗೆ ಇಷ್ಟು ಸಮಯದೊಳಗೆ ಉತ್ತರಿಸಿಕೊಳ್ಳಬೇಕು ಎಂದು ಮೊದಲೇ ಮನದಲ್ಲಿ ಟೈಮ್ ಸೆಟ್ ಮಾಡಿಕೊಂಡಿರಿ.

ಓದು ವಿದ್ಯಾರ್ಥಿಯ ಭವಿಷ್ಯದ ಅಡಿಪಾಯ ಹೌದು. ಆದರೆ ಅದೇ ಅವರ ಬದುಕಲ್ಲ. ಪೋಷಕರೇ ದಯವಿಟ್ಟು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಬದುಕು ಕಲಿಯುವುದಕ್ಕಾಗಿ ಮಕ್ಕಳು ಓದಬೇಕು. ಕಲಿಕೆ ಅವರ ಬದುಕನ್ನು ರೂಪಿಸಲು ಸಹಕಾರಿ ಹಾಗೆಯೇ ಪರೀಕ್ಷೆ ಕಲಿಕೆಯ ಗುಣಮಟ್ಟವನ್ನು ಪರೀಕ್ಷಿಸುವ ಮಾನದಂಡವಷ್ಟೆ. ವಿದ್ಯಾರ್ಥಿಗಳೇ ಇದರ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಎದುರಿಸಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ನಿಮ್ಮ ಓದನ್ನು ಇಂದೇ ಆರಂಭಿಸಿ ವಿದ್ಯಾರ್ಥಿಗಳೆ... ಅಲ್ ದಿ ಬೆಸ್ಟ್...