Tuesday 11 August 2015

"ನಮ್ಮ ಭಾರತ" - ಭಾರತಕ್ಕೆ ಭಾರತವೇ ಸಾಟಿ



    ಭಾರತ ಅಥವಾ ಭಾರತೀಯತೆಯ ಬಗ್ಗೆ ಮಾತನಾಡುವಾಗ ಯಾರಿಗೆ ಆಗಲಿ ಆತ್ಮದೊಳಗಿನಿಂದ ಉತ್ಸಾಹ ಭಾವಕತೆ, ದೇಶಾಭಿಮಾನದ ಜ್ವಾಜ್ವಲ್ಯ ಮೂಡಿ ಬರುತ್ತದೆ. ಯಾಕೆಂದರೆ, ಭಾರತದಲ್ಲಿ ಅನೇಕ ಭಾರತಗಳಿವೆ. ನೂರಕ್ಕೂ ಹೆಚ್ಚು ಭಾಷೆಗಳು ಹತ್ತಕ್ಕೂ ಪ್ರಮುಖ ಹಾಗೂ ಅನೇಕ ಅಪ್ರಮುಖ ಲಿಪಿ ವ್ಯವಸ್ಥೆಗಳು ಅಸಂಖ್ಯಾತ ಕುಲ, ಪಂಗಡಗಳಿಂದೊಡಗೂಡಿದ ಅನೇಕ ಪ್ರಾಚೀನ ಮತ ಧರ್ಮಗಳು, ಸಾವಿರಾರು ವರ್ಷಗಳಲ್ಲಿ ನಡೆದಿರುವ ವರ್ಣಸಂಕರಗಳು, ಬಗೆ ಬಗೆಯ ಭೂಪ್ರದೇಶಗಳು, ನಾನಾ ತೆರನಾದ ಹವಾ ಗುಣಗಳು ಇವೇ ಮುಂತಾದವುಗಳಿಂದಾಗಿ ಪರಂಪರೆ ಹಾಗೂ ವಿರುದ್ಧ ಪರಂಪರೆಗಳ ಅತ್ಯಂತ ಸಂಕೀರ್ಣವಾದ ಜಾಲ ನಿರ್ಮಾಣವಾಗಿದೆ. ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ನೀವು ಭಾರತದ ಬಗೆಗೆ ಇದು ಸತ್ಯ ಎಂದು ಎನನ್ನೇ ಹೇಳಿದರೂ, ಅದಕ್ಕೆ ತೀರ ವಿರುದ್ಧವಾದುದನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಕೂಡ ಹೇಳಬಹುದು.
   ‘ಭಾರತ’ ಎಂದರೆ ಹೆಮ್ಮೆ. ಅದೊಂದು ಗರಿಮೆ, ಹಿರಿಮೆ. ನಮ್ಮ ದೇಶಕ್ಕೆ ನಮ್ಮ ದೇಶವೇ ಸಾಟಿ ಯಾಕೆಂದರೆ ಭಾರತ ತನ್ನ ದೀರ್ಘ ಇತಿಹಾಸದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿದೆ. ಹಲವು ಬಾರಿ ಪರರ ದಾಳಿಗೆ, ಆಕ್ರಮಣಗಳಿಗೆ ತುತ್ತಾಗಿದೆ. ಎದುರಾದ ಎಲ್ಲಾ ವಿಷಮ ಸಂಧರ್ಭಗಳನ್ನೆಲ್ಲಾ ತಾಳ್ಮೆಯಿಂದ ಆತ್ಮ ವಿಶ್ವಾಸದಿಂದ ಎದುರಿಸಿದೆ. ನಮ್ಮ ಭಾರತ ಆಕ್ರೋಶದಿಂದ ಬಿರಿಯುತ್ತಾ ಮೇಲೆದ್ದು ನಿಂತು ಹೋರಾಡುವುದಿಲ್ಲ ಬದಲಾಗಿ ತನ್ನ ಸಮಯಕ್ಕಾಗಿ ತಾಳ್ಮೆಯಿಂದ ಕಾದು ನಿಲ್ಲುತ್ತದೆ. ಈ ದೇಶ ತಗ್ಗ ಬಲ್ಲದು, ಬಗ್ಗ ಬಲ್ಲದು ಆದರೆ ಮುರಿದು ಬೀಳುವುದಿಲ್ಲ. ಸಮಾಧಾನದಿಂದ ತನ್ನ ಅಂತಃಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆಯೇ ಹೊರತು ಕುಗ್ಗುವುದಿಲ್ಲ.
   1757 ರಿಂದ ಭಾರತವನ್ನು ಬ್ರಿಟೀಷರು ಆಕ್ರಮಿಸಿಕೊಳ್ಳುತ್ತಾ ಬಂದಾಗ ಸಾಮಾನ್ಯ ಜನರಲ್ಲಿ ಉಂಟಾದ ಪ್ರತ್ರಿಕ್ರೀಯೇನು ಎಂಬುದನ್ನು ನಾವು ಅರಿತುಕೊಳ್ಳಬೇಕು ಮತ್ತು ನಮ್ಮ ಜನ ಆಗಲೇ ಪ್ರತಿಕ್ರಿಯಿಸಿದ್ದರೆ ಬ್ರಿಟೀಷರ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಪ್ಲಾಸಿ ಕದನವನ್ನು ರಾಬರ್ಟ್‍ಕ್ಲೈವ್‍ನ ನಾಯಕತ್ವದಲ್ಲಿ ಬ್ರಿಟಿಷರು ಗೆದ್ದರೇನೋ ನಿಜ. ಆದರೆ ಆ ನಂತರ ಅವನು 200 ಇಂಗ್ಲೀಷ್ ಸೈನಿಕರು ಹಾಗೂ 500 ಭಾರತೀಯ ಸಿಪಾಯಿ ದಳಗಳೊಂದಿಗೆ ಬಂಗಾಳದ ರಾಜಧಾನಿಯಾಗಿದ್ದ ಮುರ್ಷಿದಾ ಬಾದಿನಲ್ಲಿ ಒಂದು ವಿಜಯೋತ್ಸವ ನಡೆಸಿದ್ದ. ಸಹಸ್ರಾರು ಪ್ರಜೆಗಳು ಆ ಮೆರವಣಿಗೆಯನ್ನು ನೋಡಿದ್ದರು. ಅದನ್ನು ಕುರಿತು ಕ್ಲೈವ್ ಪಾರ್ಲಿಮೆಂಟರಿ ಸಮಿತಿಗೆ ವರದಿ ನೀಡುವಾಗ, ಮೆರವಣಿಗೆಯ ಸಂಧರ್ಭದಲ್ಲಿ ಲಕ್ಷಾಂತರ ಮಂದಿ ಭಾರತೀಯರು ಕೂಡಿದ್ದು, ಅವರು ಮನಸ್ಸು ಮಾಡಿದ್ದರೆ ಕಲ್ಲು, ದೊಣ್ಣೆಗಳಿಂದಲೇ ಯುರೋಪಿಯನ್ನರನ್ನು ನಾಶ ಮಾಡಬಹುದಾಗಿತ್ತು ಎಂದಿದ್ದನಂತೆ. ಅವನಾಡಿದ ಅಂದಿನ ಆ ಮಾತಿನಿಂದಲೇ ತಿಳಿಯುತ್ತದೆ ನಮ್ಮ ಭಾರತೀಯರು ಎಷ್ಟು ಪರಾಕ್ರಮಿಗಳು ಜೊತೆಗೆ ಎಷ್ಟು ಮುಗ್ಧರು ಎಂದು. ನಮ್ಮ ಅಂದಿನ ಮುಗ್ಧತೆಯನ್ನು ಬ್ರಿಟೀಷರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು 18ನೇ ಶತಮಾನದ ಮಧ್ಯಭಾಗದಲ್ಲಿ ಸಮೃದ್ಧ ದೇಶವೆಂದು ಖ್ಯಾತಿ ಪಡೆದಿದ್ದ ಭಾರತವನ್ನು 19ನೇಯ ಶತಮಾನದ ಕೊನೆಯ ವೇಳೆಗೆ ಜಗತ್ತಿನ ಅತ್ಯಂತ ಧೀನ ಧರಿದ್ರ ದೇಶ ಎಂಬ ಸ್ಧಿತಿಗೆ ತಂದರು. ಆದರೆ ಭಾರತ ಎಂದೂ ತನ್ನ ಅಸ್ಧಿತ್ವವಾಗಲಿ, ಹಿರಿಮೆಯಾಗಲಿ, ತನ್ನತನವನ್ನಾಗಲಿ ಕಳೆದುಕೊಳ್ಳಲಿಲ್ಲ. ಅದು ಕಣ್ರೀ ನಮ್ಮ ಭಾರತದ ಅಂತಸ್ತು.
   ಆಗತಾನೆ ಇಂಗ್ಲೆಂಡಿನಲ್ಲಿ ನಡೆದ ಔಧ್ಯಮಿಕ ಕ್ರಾಂತಿಯು ಭಾರತಕ್ಕೆ ‘ಹಳ್ಳಕ್ಕೆ ಬಿದ್ದವನ ಮೇಲೆ ಬಂಡೆ ಎಳೆದಂತೆ’ ಮಾಡಿತ್ತು. ಇದರ ಸರಿದೂಗುವಿಕೆಗೆ ಭಾರತದ ಪಾತ್ರ ಎಷ್ಟು ಆಳವಾಗಿತ್ತೆಂದು ಆಲೋಚಿಸಿದರೆ ತಲೆ ಕೆಡುತ್ತದೆ. ಯಾಕೆಂದರೆ ನಮ್ಮಲ್ಲಿಯ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ಇಂಗ್ಲೆಂಡಿಗೆ ಹಣದ ಹೊಳೆ ಹರಿಸಿ ಬೃಹತ್ ಉದ್ಯಮಗಳು ತಲೆ ಎತ್ತಲು ಅಗತ್ಯವಾದ ಬಂಡವಾಳವನ್ನು ಓದಗಿಸಿತ್ತು. ಹತ್ತಿ ಉದ್ಯಮ, ಸಣ್ಣ ಕೈಗಾರಿಕೆಯ ಇತರ ಉದ್ಯಮ ಇತ್ಯಾದಿಗಳಿಂದಲೇ ಇಂಗ್ಲೆಂಡಿಗೆ ದುಡ್ಡಿನ ಸುರಿಮಳೆಗಳೇ ಬರುತ್ತಿದ್ದವು ಹೊರತು, ಅವರು ಮಾಡಿದ ಕ್ರಾಂತಿಯಿಂದಲ್ಲ ಅದು ನಮ್ಮ ಭಾರತದ ಕೌಶಲ್ಯತೆ.
   ಅದು 1919 ಏಪ್ರಿಲ್ 11. ಆ ಸಂಧರ್ಭ ಡಯರ್ ಎಂಬ ಸೇನಾಧಿಕಾರಿಯನ್ನು ಭಾರತಕ್ಕೆ ಕರೆಸಿ ಮಾರ್ಷಲ್ ಲಾ ಜಾರಿ ಮಾಡಲಾಗಿತ್ತು. ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್‍ನಲ್ಲಿ ಒಂದು ಜಾತ್ರೆಗಾಗಿ ಜನ ಕೂಡಿದ್ದರು. ಬಹುತೇಕ ಜನ ಹಳ್ಳಿಗರಾಗಿದ್ದು, ಅವರಿಗೆ ಬ್ರಟಿಷ್ ನಾಯಿಗಳ ಪ್ರತಿ ಬಂಧಕ ವಿಚಾರವೇ ತಿಳಿದಿರಲಿಲ್ಲ. ಆ ಮೈದಾನಕ್ಕೆ ಸುತ್ತಲೂ ಗೋಡೆ ಇದ್ದು ಒಂದೇ ಒಂದು ಧ್ವಾರ ಇತ್ತು. ಡಯರ್ ತಾನೇ ಮುಂದೆ ನಿಂತು ನಿಶ್ಯಸ್ತ್ರ ಗುಂಪಿನ ಮೇಲೆ ಯಾವ ಮುನ್ನಚ್ಚರಿಕೆಯನ್ನು ನೀಡದೆ ಗುಂಡಿನ ಮಳೆಗೆರೆದಿದ್ದ. ಆ ದಿನ ಅಲ್ಲಿ ಸತ್ತವರ ಸಂಖ್ಯೆ 379 ಎಂದು ಸರ್ಕಾರವೇ ತಿಳಿಸಿತ್ತು. ಇದಾದ ಬಳಿಕ ಮಾತನಾಡಿದ್ದ ಡಯರ್ ಈ ಅಮಾನುಷ ಕೃತ್ಯಕ್ಕೆ ಗುಂಡುಗಳು ಸಾಲದಾದವು, ಗಲ್ಲಿಗಳು ಕಿರಿದಾದವು, ಕಾರಣ ಅರ್ಮರ್ಡ ಕಾರುಗಳನ್ನು ತರಲಾಗಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದ. ಇದರಿಂದಲೇ ತಿಳಿಯುತ್ತದೆ ನಿಶ್ಯಸ್ತ್ರಧಾರಿಗಳಾದ ನಮ್ಮನ್ನು ಕೊಲ್ಲಲು ಅವನಿಗೆ ಅಷ್ಟು ಗಂಡುಗಳು ಸಾಲಲಿಲ್ಲ. ಇನ್ನು ನಾವು ಅವರಂತೆ ಶಸ್ತ್ರಧಾರಿಗಳಾಗಿದ್ದರೆ ನಮ್ಮ ಮೈಯನ್ನೇ ಅವರಿಗೆ ಮುಟ್ಟಲಾಗುತ್ತಿರಲಿಲ್ಲವೇನೋ ಅಲ್ಲವೇ...
      17 ಮತ್ತು 18ನೇಯ ಶತಮಾನಗಳಲ್ಲಿ ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಹೇಳಿದರೆ ಅದನ್ನು ನಂಬುವುದು ಕಷ್ಟ ಆದರೂ ಈ ಮಾತು ಅಕ್ಷರಶಃ ನಿಜ ಈ ಅಭಿಪ್ರಾಯವನ್ನು ಸ್ಫಷ್ಟ ಪಡಿಸಲು ಎರಡು ಮೂರು ಉಲ್ಲೇಖಗಳಿವೆ ನನ್ನ ಬಳಿ. ಹೇಳ್ತೀನಿ. ಓದಿದ ನಂತರ ನಮ್ಮ ದೇಶಕ್ಕೆ ಯಾವ ದೇಶವೂ ಸಾಟಿ ಆಗಲಾರದು  ಬಿಡಿ ಎಂದು ನಿಮಗೆ ಅನಿಸಬಹುದು. ಇಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಆಗಲೇ ಅಷ್ಟಿದ್ದ ಶ್ರೀಮಂತಿಕೆ ಇಂದಿದ್ದರೆ ಎಷ್ಟು ಕೋಟಿ ಆಗುತ್ತಿತ್ತೋ ಎಂದು ನಿಬ್ಬೆರಗಾಗಬಹುದು.
ಪಿಯರ್ ಸೆನ್ ಎಂಬಾತ 1572ರಲ್ಲಿ ಭಾರತದ ಸಮುದ್ರ ವ್ಯಾಪಾರ 8 ಕೋಟಿ ರೂಪಾಯಿಗಳಷ್ಟು ಎಂದು ಅಂದಾಜು ಮಾಡಿ ಹೇಳಿದ್ದ. (ಗಮನಿಸಬೇಕು ನೀವು ಇದು ಸಾವಿರ ಅಲ್ಲ ಲಕ್ಷ ಅಲ್ಲ ಬದಲಾಗಿ ಕೋಟಿ)
ಬ್ರಿಟೀಷರು ಭಾರತಕ್ಕೆ ಬರುವ ಮುಂಚಿನ ಮಾತು ಇದು 1601 ರಿಂದ 1623ರವರೆಗೆ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ತಂದ ವಸ್ತುಗಳಲ್ಲಿ ಶೇ 68.2 ಪಾಲು ಚಿನ್ನ ಬೆಳ್ಳಿ ಯಾಗಿತ್ತಂತೆ.
ಆಗ ಭಾರತಕ್ಕೆ ವಿನಿಮಯವಾಗಿ ಕಳುಹಿಸಲು ಯೋಗ್ಯವಾದ ವಸ್ತುಗಳು ಬ್ರಿಟನ್‍ನಲ್ಲಿ ತಾಯಾರಾಗುತ್ತಿರಲಿಲ್ಲ ಹಾಕ್ಸಿನ್ ಎಂಬಾತ ಎಲ್ಲ ರಾಷ್ಟ್ರಗಳು ಇಲ್ಲಿಗೆ ನಾಣ್ಯ (ಚಿನ್ನ,ಬೆಳ್ಳಿ) ತಂದು ಸರಕುಗಳನ್ನು ಒಯ್ಯುತ್ತವÉ. ಎಂದು ತನ್ನ ಪ್ರವಾಸ ಕಥನದಲ್ಲಿ ತಿಳಿಸಿದ್ದಾನೆ.
ಈಸ್ಟ್ ಇಂಡಿಯಾ ಕಂಪೆನಿ ತನ್ನ ವ್ಯಾಪಾರ ಕುದುರಿಸಿಕೊಂಡ ನಂತರವೂ 1710-1759 ರ ಅರ್ಧ ಶತಮಾನದ ಅವಧಿಯಲ್ಲಿ ಇಂಗ್ಲೆಂಡು ಪೂರ್ವ ದೇಶಗಳೊಂದಿಗೆ ಮಾಡಿದ ರಪ್ತು ವ್ಯಾಪಾರದ ಒಟ್ಟು 3 ಕೋಟಿ 60 ಲಕ್ಷ ಪೌಂಡು ಆಗಿತ್ತಂತೆ.  ಅವುಗಳಲ್ಲಿ 92 ಲಕ್ಷ ಮಾತ್ರ ಸರಕು ರೂಪದಲ್ಲಿ ಉಳಿದ 2 ಕೋಟಿ 68 ಲಕ್ಷ ಚಿನ್ನ, ಬೆಳ್ಳಿ, ರೂಪದಲ್ಲಿ ಇದ್ದವಂತೆ.

ನೋಡಿ ನಾವೆಷ್ಟು ಶ್ರೀಮಂತರಲ್ವಾ...ಎಂಥಹ ಅರ್ಥವ್ಯವಸ್ಥೆ ನಮ್ಮದಲ್ವಾ...!!!
  ಈ ಅಂಕಿ ಸಂಖ್ಯೆಗಳ ಅರ್ಥ ಇಷ್ಟು. ಭಾರತ 18ನೇಯ ಶತಮಾನದ ನಡು ಭಾಗದವರೆಗೆ ಸಿದ್ಧ ವಸ್ತುಗಳನ್ನು ರಫ್ತು ಮಾಡಿ ಸಂಪತ್ತನ್ನು ಗಳಿಸುತ್ತಿತ್ತು. ಹಲವಾರು ಆಕ್ರಮಣಗಳು, ಯುದ್ಧಗಳು ನಡೆಯುತ್ತಿದ್ದ ಆ ಕಾಲದಲ್ಲಿಯೂ ಸುಭದ್ರವಾಗಿದ್ದ ನಮ್ಮ ಅರ್ಥವ್ಯವಸ್ಥೆ ಸುಮಾರು 10 ಕೋಟಿಯಷ್ಟಿದ್ದ ಅಂದಿನ ಜನ ಸಂಖ್ಯೆಯ ಅಗತ್ಯಗಳನ್ನು ಪೂರೈಸಿ, ದೇಶದ ಒಳ ಮಾರುಕಟ್ಟೆಗೆ, ಬೆಳೆಯುತ್ತಿದ್ದ ವಿದೇಶಿ ಮಾರುಕಟ್ಟೆಗೆ , ಮೊಘಲ್ ಸಾಮ್ರಾಜ್ಯದ ಸೈನ್ಯಕ್ಕೆ ಹಾಗೂ  ಬೃಹತ್ ಸಾರ್ವಜನಿಕ ಕಟ್ಟಡ ಮತ್ತಿತರ ನಿರ್ಮಾಣ ಕಾರ್ಯಗಳಿಗೆ  ವಿವಿಧ ಸಿದ್ಧವಸ್ತುಗಳನ್ನು ಒದಗಿಸುತ್ತಿದ್ದು ಅಂತಹ ಅರ್ಥ ವ್ಯವಸ್ಥೆಯನ್ನು ನಿರ್ಬಲವಾಗಿತ್ತೆಂದೋ ಶಿಥಿಲವಾಗಿತ್ತೆಂದೋ ಹೆಸರಿಸುವುದು ಅಪಚಾರವೇವಾಗುತ್ತದೆ ಅಲ್ವಾ!?
  ಈ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ. ಆದರೆ ಇಲ್ಲಿ ನಾ ಹೇಳಿರುವುದು ಅತ್ಯಂತ ಸ್ಥೂಲ ರೂಪ. ದೂರದಿಂದ ಬೆಟ್ಟ ತೋರಿಸಿದ ಹಾಗೆ. ಈ ವಿಷಯಗಳನ್ನು ಬಹಳ ಕೂಲಂಕುಶವಾಗಿ ವಿವರಿಸಲು ವಿಧ್ವಾಂಸರೇ ಹಿಂಜರಿಯುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ಭಾರತದ ಸಂಪತ್ತನ್ನು ಅರಿಯಲು ಇಂದಿಗೂ ಕಷ್ಟ ಸಾಧ್ಯವಾಗಿದೆ.
  ಇದು ನಮ್ಮ ಭಾರತ ಬಹಳ ಪುರಾತನ ಕಾಲದಿಂದ ಪರಕೀಯ ದಾಳಿ ಆಕ್ರಮಣಗಳನ್ನು ಎದುರಿಸಿದ ದೇಶ. ಆದರೆ ಅಮೇರಿಕಾದ ಮೆಕ್ಸಿಕೋ, ಪೆರುಗಳಂತೆ ತಳ್ಳಿದರೆ ಬೀಳುವಂತಹ ದುಃಸ್ಥಿತಿಯಲ್ಲಿರಲಿಲ್ಲ 8-10 ಶತಮಾನಗಳ ಕಾಲ ಅರಬರ, ತುರ್ಕರ, ಅಫ್ಘ್‍ನ್ನರ ದಾಳಿಗಳನ್ನು ಅನುಭವಿಸಿ ಒಂದೊಂದರ ಪರಿಣಾಮವಾಗಿಯನ್ನು ಒಂದೊಂದು ಹೊಸ ಸಮತೋಲನವನ್ನು ಸಾಧಿಸಿಕೊಂಡ ಹೆಮ್ಮೆ ಇದ್ದರೆ ಅದು ನಮ್ಮ ಭಾರತದ್ದು ಮಾತ್ರಾ.
ಹೀಗೆ ಒಂದೊಂದು ವಿಷಯ ವೈವಿಧ್ಯವನ್ನು ಹೋಲಿಸುತ್ತಾ ವಿಮರ್ಶಿಸುತ್ತಾ ಸಾಗಿದರೆ ನಂಬಲಾರದ ಅದೆಷ್ಟೋ ಸತ್ಯಗಳು ಕಣ್ಮುಂದೆ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ ಸಾಗುತ್ತವೆ. ಈಗ ಹೇಳಿ ನಾವು ಪುಣ್ಯಾತ್ಮರಲ್ಲವೇ. ಮತ್ತೆ ಎಲ್ಲರಿಗೂ ಎದೆತಟ್ಟಿ ಕೂಗಿ ಹೇಳಿ ಇದು “ನಮ್ಮ ಭಾರತ”...

ಅತ್ತೆ ಸೊಸೆ...ಕಿರಿಕ್...


          ಮನಸ್ತಾಪ, ಜಗಳ, ವೈಮನಸ್ಸು ಇದು ಮಹಿಳೆಯರ ಸಹಜ ದೌರ್ಬಲ್ಯ...ಅವರ ಕಷ್ಟ ಕಾರ್ಪಣ್ಯ ಎಷ್ಟಿದ್ದರೂ, ಒಳಗೊಳಗೆ ಪ್ರಾರಂಭವಾಗುವ ಮುನಿಸು, ಜಲಸು, ಬೇರೆಯದನ್ನು ತನ್ನದಾಗಿಸಿಕೊಳ್ಳಲು ನಡೆಸುವ ಹೋರಾಟ ಎಲ್ಲವೂ ರೌದ್ರಾವತಾರದಂತೆ ಹೊಡೆದಾಡುತ್ತಲೇ ಇರುತ್ತವೆ.ಇನ್ನೂ ಇಬ್ಬರು ಹೆಂಗಸರ ಕಚ್ಚಾಟ ಪ್ರಾರಂಭವಾದರಂತೂ ಸಾಮಾಜಿಕವಾಗಿ ಪಸರಿಸದಿದ್ದರೆ ಅವರಿಗೆ ಸಮಾಧಾನ ಇರಲ್ಲ ಬಿಡಿ. ಇಲ್ಲಿ ಬರುವ ಎರಡು ಪಾತ್ರಗಳು ಹೆಣ್ಣೆ ಆದರೂ ಭಾವಗಳು ಬೇರೆ, ಅದೇ ಅವರ ಜಿದ್ದಿಗೆ ಹೆಚ್ಚು ಕಾರಣವಾದರೂ ಅರಿತು ಬಾಳಲು ಆಗುವುದಿಲ್ಲ ಎಂದರ್ಥವಲ್ಲ. ಬರವಣಿಗೆಗೂ ಮುನ್ನ ಈ ಪೀಠಿಕೆ ಯಾಕೆಂದರೆ  ಇದು ಸಾಮಾನ್ಯ ವಿಷಯವಲ್ಲ ಏರಡು ಹೆಂಗಳೆಯರ ಮಧ್ಯೆ ಕಂಡು ಬರುವ, ಪರಸ್ಫರ ಅಧಿಕಾರದಿಂದಲೋ, ಸ್ಥಾನ ಮಾನದ ಘನತೆಯಿಂದಲೋ  ಕೂಡಿರುವ ವಾದ ವಿವಾದ ಅದುವೇ ಅತ್ತೆ ಸೊಸೆಯರ ವಿಕಾರ ನಾದ...
          ಅತ್ತೆ ಸೊಸೆ ಕಾನ್ಸೆಪ್ಟ್ ತಲೆಗೆ ಮೂಡಿದಾಗಲೇ ನಮಗೆ ತೋಚುವುದೇ ದಿನಂಪ್ರತಿ ಕಾಣುತ್ತಿರುವ ಜಗಳದ ಅವರಿಬ್ಬರ ಜಲಕು. ಈ ಅತ್ತೆ ಸೊಸೆ ಜಗಳ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ  ಇತ್ತು ಇಂದು ಇದೆ. ಆದರೆ ಅದು ಮುಂದೆ ಪ್ರವೃತ್ತಿ ಆಗುವುದು ಬೇಡ ಎನ್ನುವ ನಿಟ್ಟಿಲ್ಲಿ ಈ ಬರಹ ಅಷ್ಟೆ.

           ಒಂದು ಕಡೆ ಮನೋವೈಧ್ಯರು ಹೇಳುತ್ತಾರೆ ಅತ್ತೆ ಸೊಸೆಯ ಜಗಳಕ್ಕೆ ಮುಖ್ಯ ಕಾರಣ ಅವರ ಪರಸ್ಫರ ಧನಾತ್ಮಕ ನಿರೀಕ್ಷೆಗಳೇ ಕಾರಣವಂತೆ. ಆದರೆ ಕೆಲವೊಮ್ಮೆ ಅಧಿಕಾರ, ನಾನು ನನ್ನದು ಎನ್ನುವ ಭಾವೈಕ್ಯವೂ ಬರಬಹುದೇನೋ ಹೇಳಲಾಗದು. ನಾವೆಲ್ಲ ಸಮಾಜದಲ್ಲಿ ಮಹಿಳೆ ನಿರ್ಲಕ್ಷ್ಯಕ್ಕೊಳಪಟ್ಟಿದ್ದರೂ, ಆಕೆಯನ್ನು ದೇವತೆಯ ಸ್ಥಾನದಲ್ಲಿಯೇ ನೋಡುತ್ತೇವೆ., ಭೂಮಿಯನ್ನು ನೀರನ್ನು ಕೂಡ ಸ್ತ್ರೀ ರೂಪಿಯಾಗಿ, ಅಮ್ಮನ ಪಾತ್ರದಲ್ಲಿ ದೇವತೆಯಾಗಿ ಕಾಣುತ್ತೇವೆ. ಇಷ್ಟೆಲ್ಲಾ ಆದರೂ ಹೆಣ್ಣನ್ನೂ ಹೆಣ್ಣೆ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.ಇನ್ನೂ ಗಹನವಾಗಿ ಆಲೋಚನೆಗೆ ಕುಳಿತರೆ, ಬಲಗಾಲಿಟ್ಟು ಬಂದ ಸೊಸೆಗೆ ಅತ್ತೆ ರಾಕ್ಷಸಿಯಂತೆ ಕಾಣುವುದ್ಯಾಕೆ?, ಸಂಧರ್ಭಕ್ಕೆ ತಕ್ಕಂತೆ ಸೊಸೆಯ ಪಾಲಿಗೆ ಅತ್ತೆ ಯಾಕೆ ತಾಯಿಯಾಗುತ್ತಿಲ್ಲ?, ಅತ್ತೆಯ ಬುದ್ಧಿ ಮಾತುಗಳ್ಯಾಕೆ ಸೊಸೆಗೆ ತಾಯಿಯ ಬುದ್ಧಿ ಮಾತುಗಳಾಗುತ್ತಿಲ್ಲ?, ಗಂಡನ ಮನೆಗೆ ಬಂದಾಗ  ಅತ್ತೆಯೂ ತನ್ನ ತಾಯಿಯಂತೆ ಎಂದು ಯಾಕೆ ಅಂದುಕೊಳ್ಳುವುದಿಲ್ಲ?, ಮಗನನ್ನು ಕಂಡುಕೊಂಡ ಪ್ರೀತಿಯಲ್ಲಿಯೇ ಅತ್ತೆ ಯಾಕೆ ಸೊಸೆಯನ್ನು ಕಾಣುವುದಿಲ್ಲ?, ಸಂಧರ್ಭದ ಆಧಾರದಲ್ಲಿ  ನಮ್ಮ ಮನಸ್ಥಿತಿಗಳು ಬದಲಾಗುತ್ತವೆಯಾ?, ತಾಯಿ ಮನೆ ಸ್ವರ್ಗ, ಅತ್ತೆ ಮನೆ ನರಕ ಎನ್ನೋ ಮನೋಕ್ಲಿಷೆ ಸರ್ವವ್ಯಾಪಿಯಾಗಿ ಬಿಟ್ಟಿದೆಯಾ?, ಅತ್ತೆ ಸೊಸೆಯರ ಸಂಬಂಧ ವ್ಯತಿರಿಕ್ತವಾಗೋದ್ಯಾಕೆ?, ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ಅಮ್ಮನಂತೆ ಯಾಕೆ ನೋಡಿಕೊಳ್ಳಬಾರದು!? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಬಹುಶಃ ಕವಿ ಜಿ.ಎಸ್. ಶಿವರುದ್ರಪ್ಪ ಬಹಳ ಹಿಂದೆಯೇ “ಸ್ತ್ರೀ ಎಂದರೆ ಅಷ್ಟೇ ಸಾಕೆ ..!?” ಎಂಬ ಪ್ರಶ್ನೆ ಮಾಡಿದ್ದು ಇದಕ್ಕೆ ಎನಿಸುತ್ತದೆ.
          ದಿನಂಪ್ರತಿ ಎನ್ನದೇ ಅತ್ತೆ ಸೊಸೆಯರ ಬಗೆಗಿನ ಸುದ್ಧಿಗಳಂತೂ ಕಿವಿಗೆ ಬೀಳುತ್ತಲೇ ಇರುತ್ತವೆ. ಅತ್ತೆಯ ಕಾಟಕ್ಕೆ ನೇಣು ಬಿದಿದುಕೊಂಡ ಸೊಸೆ, ವರದಕ್ಷಿಣೆಗಾಗಿ ಅತ್ತೆಯಿಂದ ಹಿಂಸೆ, ಮಾವ ಹಾಗೂ ಅತ್ತೆಯ ಮೇಲೆ ಕೇಸ್ ದಾಖಲಿಸಿದ ಸೊಸೆ... ಹೀಗೆ ಒಂದರ ಮೇಲೊಂದರಂತೆ ದಿನಂಪ್ರತಿ ಘಟನೆಗಳು ಘಟಿಸುತ್ತಲೇ ಇವೆ.  ಆದರೆ ಯಾರೊಬ್ಬರು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೇ, ಬಗೆ ಹರಿಸಿಕೊಳ್ಳದೇ, ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುತ್ತಿಲ್ಲದಿರುವುದೇ ಸಮಸ್ಯೆಯ ಜ್ವಾಲಕ್ಕೆ ಇನ್ನಷ್ಟು ತುಪ್ಪ ಎರೆದಂತಾಗಿದೆ. ಇನ್ನೂ ಮಾಧ್ಯಮಗಳಂತೂ ಏಕಾಏಕಿ ಸಂಧರ್ಭದ ಲಾಭ ಪಡೆದು ಸುಮ್ಮನಾಗುತ್ತಿವೆ. ಎಂಟರ್ ಟೈನ್ ಮೆಂಟ್ ಹೆಸರಿನಲ್ಲಿ ಮನೆಮಂದಿಗೆ ಜಗಳಗಳನ್ನು ತಂದಿಕ್ಕಿ ರಂಪಾಟ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿವೆ. ಬೇಸರದ ಸಂಗತಿ ಎಂದರೆ ಪೋಸಿಟಿವ್ ವಿಷಯ ನೀಡಿ ಇಂತಹ ಕೌಟಂಬಿಕ ವಿಚಾರಗಳನ್ನು ತಿಳಿ ಹೇಳಲು ಯಾವ ಮಾಧ್ಯಮವೂ ಪುಷ್ಟಿ ನೀಡುತ್ತಿಲ್ಲ...
 ಇದು ಕೇವಲ ಒಂದೆರಡು ಮನೆಗಳ ಸಮಸ್ಯೆಯಲ್ಲ. ಪ್ರಪಂಚದ ಮುಕ್ಕಾಲು ಭಾಗ ಸಂಸಾರಗಳಲ್ಲಿ ಅತ್ತೆ ಸೊಸೆ ವೈಮನಸ್ಸು ಇದ್ದದ್ದೆ. ಅತ್ತೆ  ಒಳ್ಳೆಯವಳಾದರೆ ಸೊಸೆ ಕೆಟ್ಟವಳು. ಅತ್ತೆ ತಾಟಕಿಯಾದರೆ ಸೊಸೆಗೆ ಗೋಳು. ಇವರ ಮಧ್ಯೆ ಸಾಮರಸ್ಯವೇ ಸಾಧ್ಯವಿಲ್ಲವಾ ಎನ್ನುವುದು ವಿದ್ವಾಂಸರ ಮುಂದಿರುವ ಯಕ್ಷ ಪ್ರಶ್ನೆ.
ಮಗನಿಗೆ ಹೆಂಡತಿ ಬರುತ್ತಾಳೆ ಎಂದರೆ ಅತ್ತೆ ಸ್ಥಾನಕ್ಕೇರುವ ಆ ಮನೆಯ ಸೊಸೆಯ ಮನಸ್ಸಿನಲ್ಲೊಂದು ಸಣ್ಣ ಏರುಪೇರು ಉಂಟಾಗುತ್ತದೆ.  ಸೊಸೆ ತನ್ನ ಮಗನನ್ನು ತನ್ನಿಂದ ಕಸಿದುಕೊಂಡು  ಬಿಡುತ್ತಾಳೇನೋ ಎನ್ನುವ ಆತಂಕ ಪ್ರತಿಯೊಂದು ಅಮ್ಮನಲ್ಲೂ ಇರುತ್ತೆ. ಇದು ಹೆತ್ತವಳ ಪ್ರೀತಿಯ ಚಡಪಡಿಕೆ ಅಷ್ಟೆ. ಮದುವೆಯ ನಂತರ ಮಗ ಪತ್ನಿಯನ್ನು ಕರೆದಾಗ ತಾಯಿ ಸಣ್ಣದೊಂದು ಶಾಕ್ ಅನುಭವಿಸುತ್ತಾಳೆ.   ಜತನದಿಂದ ಸಾಕಿದ ಮಗನನ್ನು ಸೊಸೆ ಬಂದು ಕೈವಶ ಮಾಡಿಕೊಂಡಳೆಂಬ ಭಾವನೆ ಅತ್ತೆಗೆ. ಮಗ ವಯಸ್ಸಿಗೆ ಬಂದಿದ್ದಾನೆ ಈಗವನಿಗೆ ಹೆಂಡತಿ ಪ್ರೀತಿಯೂ ಅಷ್ಟೆ ಮುಖ್ಯ ಎಂದಾಲೋಚಿಸಿದರೆ ಏನಾಗುತ್ತದೆ!?? ಇನ್ನೂ ಏನಾದರೂ ಮಗ ಅಮ್ಮನ ಮಾತೇ ಸರಿ ಎಂದು ಪುಸಲಾಯಿಸಿದರೆ  ಸೊಸೆಗೆ ಮಗನನ್ನು ತನ್ನ ಕೈಮುಷ್ಠಿಯಲ್ಲೇ ಇರಿಸಿಕೊಂಡು ಆಡಿಸುತ್ತಿದ್ದಾಳೆ ಎನ್ನೋ ಭಾವನೆ ಅದನ್ನೆ ಯಾಕೆ ಸೊಸೆಯಾದವಳು ದೊಡ್ಡದು ಎಂದು ಗೊಗೆರೆದುಕೊಳ್ಳಬೇಕು. ಎಲ್ಲವೂ ಸ್ವಲ್ಪ ಸಮಯ ಕೊಟ್ಟು ಆಲೋಚಿಸಿದರೆ ಯಾವುದು ಸಮಸ್ಯೆ ಅಥವಾ ತಪ್ಪು ಅನ್ನಿಸುವುದಿಲ್ಲ.. ಇದು ಜಗಳವಲ್ಲ, ಮನಸು ಮನಸುಗಳ ಹೊಡೆದಾಟ.  ನಮ್ಮ ಎದುರಾಗುವ ಎಲ್ಲಾ ಪೂರ್ವಾಗ್ರಹಗಳಿಂದ ಹೊರಬಂದು ನೋಡಿದಾಗ ಅತ್ತೆ ಮಾತ್ರಾ ಕೆಟ್ಟವಳು ಅಂತ ಎಲ್ಲಿಯೂ ಹೇಳಲಾಗದು. ಎಷ್ಟೋ ಬಾರಿ ಅತ್ತೆ ಹೊಂದಿಕೊಂಡರೂ, ಸೊಸೆ ಅತ್ತೆಯನ್ನು ನಿರ್ಲಕ್ಷ್ಯದಿಂದ ನೋಡುತ್ತಾಳೆ. ಮನೆಕೆಲಸ ಮಗುವಿನ ಆರೈಕೆ ಎಲ್ಲವನ್ನೂ ಅತ್ತೆಗೊಪ್ಪಿಸಿ, ತಾವು ಮಾತ್ರಾ ಕ್ಲಬ್, ಪಬ್ ಎನ್ನುತ್ತಾ ಕಾಲ ಕಳೆಯುವ ಸೊಸೆಯಂದಿರೂ ಇದ್ದಾರೆ.
              ಅವಳು ಸರಿ ಇಲ್ಲ. ಇವಳಿಗೆ ಅಹಂಕಾರ ಅಂತೆಲ್ಲ ಪರಸ್ಫರ ಆರೋಪ ಮಾಡಿಕೊಳ್ಳುವುದಕ್ಕಿಂತ ಸಾಮರಸ್ಯದ ಬದುಕು ನಡೆಸಬೇಕು. ಇದೇನೂ ಕಷ್ಟದ ಕೆಲಸವಲ್ಲ. ಪರಸ್ಫರ ಗೌರವ, ಪ್ರೀತಿ ಇದ್ದರೆ ಅತ್ತೆ ಸೊಸೆ ತಾಯಿ- ಮಗಳಂತಿರಬಹುದು. ಅತ್ತೆಯಾದವಳು ತನ್ನ ಹಿರಿತನದಿಂದ ಸೊಸೆಯನ್ನು ವಾತ್ಸಲ್ಯದಿಂದ ಮಗನ ಜವಾಬ್ಧಾರಿ ಅವಳಿಗೊಪ್ಪಿಸಿದರೆ ಸೊಸೆಯೂ ಅತ್ತೆಯನ್ನು ಪ್ರೀತಿಯಿಂದ ಕಾಣುತ್ತಾಳೆ. ಹಿರಿಯರನ್ನು ಗೌರವದಿಂದ ಕಂಡು ಅವರನ್ನು ಪ್ರೀತಿಯಿಂದಾಗಿ ನೋಡಿಕೊಂಡು ಸೊಸೆಗೂ ಗಂಡನ ಪ್ರೀತಿ ಹಿರಿಯರ ವಾತ್ಸಲ್ಯ ದೊರಕುತ್ತದೆ. ಎಲ್ಲ ಸಂಸ್ಕಾರವಂತರೊಳಗೂ ಜಗಳವನ್ನು ನಿಯಂತ್ರಿಸುವ ಶಮನಗೊಳಿಸುವ, ಹತ್ತಿಕ್ಕುವ, ನಂದಿಸುವ ಒಂದು ಅದ್ಭುತ ಇನ್ ಬ್ಯುಲ್ಟ್ ಸಿಸ್ಟಮ್ ರಚನೆ ಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಕೊಳ್ಳಬೇಕಷ್ಟೆ. ನಾವು ನಮ್ಮೊಳಗೆ ವಿಕಾರತೆಯ ಅನಾವರಣ ಮಾಡಿಕೊಂಡು ಅಪ್ರಬುದ್ದ ಮನಸ್ಸಿನ ಬಡಬಡಿಕೆಯ ತಾಂಡವವನ್ನು ಪ್ರದರ್ಶಿಸುತ್ತಾ ಇರುತ್ತೇವೆಯೋ ಹೊರತು ಸಂಸಾರ ದೋಣಿ ಬಳುಕುವ ನೃತ್ಯ ನಿಲ್ಲಿಸಿಕೊಂಡು ಸರಿದೂಗಿಸಿಕೊಳ್ಳುವುದಿಲ್ಲ. ಸೊಸೆಯಂದಿರೆ ನಿವೇಕೆ ಅತ್ತೆಯನು ಕೆಟ್ಟವಳಂತೆ ಕಾಣುತ್ತೀರಿ. ಅತ್ತೆ ಯಾವಾಗಲೂ ಸೊಸೆಯಿಂದ ನಿರೀಕ್ಷಿಸುವುದು, ನಯವಾದ ಮಾತು, ಉತ್ತಮ ನಡತೆ, ಗುಣ, ಆಡಮಬರವಿಲ್ಲದ ಸೌಂದರ್ಯಪ್ರಜ್ಞೆ, ಮನೆಯವರನ್ನೆಲ್ಲಾ ಪ್ರೀತಿಯಿಂದ ಓಲೈಸುವ ಮನೊಭಾವ ಅಷ್ಟೆ. ಮಗ ಪ್ರತಿ ದಿನ ಆಫೀಸ್‍ಗೆ ಹೋಗುವಾಗ ಅಮ್ಮ ಟಿಫಿನ್ ರೆಡಿ ಮಾಡಿ ಕೊಡುವುದು ಹೊಸತೇನಲ್ಲ ಆದರೆಸೊಸೆ ಬಂದ ಮೇಲೆ ಇದು ಬದಲಾಗಬೇಕು ಅತ್ತೇ ನಾನೀದಿನಲ್ಲಾ ಇನ್ನೂ ನೀವ್ಯಾಕೆ ಇದನ್ನೆಲ್ಲಾ ಮಾಡ್ಬೇಕು. ಅನ್ನುವ ಸೊಸೆಯ ಪ್ರೀತಿ ತುಂಬಿದ ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ಖಾತೆ ತೆರೆದಂತೆ. ಅಲ್ಲಿ ಅತ್ತೆ ನಿಮ್ಮೆದುರು ಏನೇ ಗೊಣಗಿದರೂ ಮರೆಯಲ್ಲಿ ನಿಂತು ಆನಂದದ ಕಣ್ಣೀರು ಸುರಿಸುತ್ತಾಳೆ. ಹೆಣ್ಮಕ್ಕಳೆ ಒಂದು ನೆನಪಿಟ್ಟುಕೊಳ್ಳಿ ಇಂದು ನೀವು ಸೊಸೆಯಾಗಿ ಮನೆ ಬೆಳಗಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.



"ಅತ್ತೆ ಸೊಸೆ ಜಗಳವೆಂಬುದು ಅನಾಧಿಕಾಲದಿಂದಲೂ ಇದೆ. ಅದೊಂಥರ ಇನ್‍ಬಾರ್ನ್ ಸಿಸ್ಟಮ್. ಅತ್ತೆಯಾದವಳು ಅವಳ ಅತ್ತೆಯಿಂದ ಅನುಭವ ಪಡೆದಿರುತ್ತಾಳೆ ಅದನ್ನು ಅವಳು ತನ್ನ ಸೊಸೆ ಮೇಲೆ ತೀರಿಸಿಕೊಳ್ಳುತ್ತಾಳೆ. ಆದರೆ ಸೊಸೆಯಂದಿರು ಅತ್ತೆ ಮೇಲೆ ಹರಿಹಾಯಲು ಕಾರಣ ತಾನು ಸ್ವತಂತ್ರ ವಾಗಿರಲು ಭಯಸುವುದೇ ಆಗಿರುತ್ತದೆ. ಇದನ್ನು ಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಆದರೆ ಇಂತಹ ದೌರ್ಜನ್ಯ ಕಂಡುಬಂದಾಗ ‘ಕೌಟುಂಬಿಕ ದೌರ್ಜನ್ಯ ಕಾಯ್ದೆ’ಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ದೂರು ನೀಡಬಹುದಾಗಿದೆ."
-ಪ್ರಮೀಳಾ ನೇಸರ್ಗಿ.
ವಕೀಲರು, ಶಿಕ್ಷಣ ತಜ್ಞರು, ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ.

ಹೆಣ್ಣು-8


        ಈ ಸ್ಟೋರಿ ಪ್ರಾರಂಭವಾಗುವುದಕ್ಕೆ ಮುಂಚೆ ಅವಳೊಬ್ಬಳು ಪಾಪದ ಹುಡುಗಿ. ಸುಂದರ ಕನಸುಗಳನ್ನು ಹೊತ್ತ ಸುಂದರಿ. ಅವಳಿಗಿತ್ತು ಅವಳದೇ ಕೆಲವೊಂದು ರೀತಿ-ನೀತಿ, ನಲಿವಿನ ಪರಿಚಯ ಮಾತ್ರವೇ ಇತ್ತು.  ಆ ಬಾಲೆಗೆ ಮುಂದೊಂದು ದಿನ ಬದುಕೆಂಬ ದೋಣಿ ಬಿರುಗಾಳಿಗೆ ಸಿಲುಕಿ ಮುಳುಗಿ ಹೋಗುತ್ತದೆಯೇನೊ ಎಂಬ ಪರಿವೆಯೇ ಇರಲಿಲ್ಲ. ಟೋಟಲ್ ಆಗಿ ಅವಳೊಬ್ಬಳು ಮುಗ್ಧೆ ಎಂದರೆ ತಪ್ಪಿಲ್ಲ.
ತಂದೆ ತಾಯಿಯರಿಗೆ ಕಷ್ಟವಿದ್ದರೂ ಮಗಳಿಗೆ ಅದರ ಗುರುತು ನೀಡಿರಲಿಲ್ಲ. ಬೇಕೆಂದಿದ್ದನೆಲ್ಲಾ ಕೊಡಿಸಿ ಶ್ರೀಮಂತಿಕೆಯ ರಕ್ಷಾ ಕವಚ ಪರಿಚಯಿಸಿದ್ದರು. ಆಗಲೇ ಲೈಫ್ ಈಸ್ ಬ್ಯೂಟಿಫುಲ್ ಎನ್ನುತ್ತಾ ಮೆಲ್ಲನೆ ಎಸ್.ಎಸ್.ಎಲ್.ಸಿ ಮುಗಿಸುತ್ತಾ ಪಿ.ಯು.ಸಿ ಗೆ ಕಾಲಿರಿಸಿದ್ದಳು ಆಕೆ. ಈಗವಳು ಹರೆಯಕ್ಕೆ ಕಾಲಿಟ್ಟ ಚೆಲುವೆ. ಅದೊಂದು ರೀತಿಯ ಹೊಸ ಬಗೆ, ನವನವೀನ ಹುರುಪು, ಚಲ್ಲಾಟಕ್ಕೆ ಬ್ರೇಕ್ ಕೊಟ್ಟು ಸ್ವಲ್ಪ ಗಂಭೀರಕ್ಕೆ ತಿರುಗುವ ಜೋಷ್, ಬೇಡವೆಂದರೂ ಕನ್ನಡಿಯ ಮುಂದೆ ನಿಲ್ಲಿಸಿ ಮೇಕಪ್ ಮಾಡುವ ವಯಸ್ಸು. ಅದಾಗಲೇ ಹಳೆಯ ಗೆಳತಿಯರ ಜೊತೆಗೆ ಒಂದಿಷ್ಟು ಹೊಸ ಗೆಳತಿಯರು ದೊರಕಿರುವ ಖುಷಿ. ಹೀಗೆ ಎಲ್ಲವೂ ಭಿನ್ನ ಭಿನ್ನವಾಗಿದ್ದವು. ಪುಟ್ಟ ಹಳ್ಳಿಯಲ್ಲಿ ಬೆಳೆದು ಓದಿರುವ ಅವಳು ಆ ಹೊತ್ತಿಗಾಗಲೇ ಬಸ್ಸ್‍ನಲ್ಲಿ ಪಟ್ಟಣದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ನಮ್ಮ ಹಾಗೆ ನಮ್ಮ ಮಗಳು ಆಗಬಾರದು, ಆಧುನಿಕತೆ ಅವಳಿಗೂ ಒಗ್ಗಲಿ ಎಂದೆನಿಸಿಕೊಂಡು ಮೂಲಭೂತ ಸೌಕರ್ಯ ಎಂಬಂತೆ ಒಂದೊಳ್ಳೆ ಮೊಬೈಲ್‍ನ್ನು ತೆಗೆಸಿಕೊಟ್ಟರು ತಂದೆ ತಾಯಿ.
‘ಮನೆಗೆ ಬರುವುದು ಲೇಟಾದರೆ, ಬಸ್ಸ್ ಮಿಸ್ ಆದರೆ, ಕಾಲ್ ಮಾಡಿ ತಿಳಿಸು ಮಗಳೆ’ ಎಂದು ಮುದ್ದಿಸಿ ಇನ್ನು ಸ್ವಲ್ಪ ಜಾಸ್ತಿ ಶ್ರೀಮಂತಿಕೆ ನೀಡಿ ಸಂಧರ್ಭಗಳ ಸವಿಯನ್ನು ಸವಿದಿದ್ದರು.
ಪ್ರಾರಂಭದಲ್ಲಿ ಎಲ್ಲ್ಲವೂ ನೀಟಾಗಿಯೇ ಇತ್ತು. ಸಂಬಂಧಿಕರು ಗೆಳತಿಯರು ಎಂದು ಕಾಂಟಾಕ್ಟ್ ಸೇವ್ ಆಗುತ್ತಿದ್ದ ಮೊಬೈಲ್‍ಗೆ ಮಸೇಜ್, ಕಾಲ್‍ಗಳು ಮಾಮುಲಿಯಾಗಿ ಬಂದು ಹೋಗುತ್ತಿದ್ದವು. ಇದೆಲ್ಲದರ ಮಧ್ಯೆ ಒಂದು ದಿನ ಅಚಾನಕವಾಗಿ ಬಂದ ಮಿಸ್‍ಕಾಲ್ ಅವಳ ಮೊಬೈಲ್  ಪರದೆಗೆ ಅಪ್ಪಳಿಸಿತ್ತು. ಅಂದಿನ ಆ ಮಿಸ್ಸ್ ಕಾಲ್‍ಗೆ ಶುರುವಾದ ಕ್ಯೂರ್ಯಾಸಿಟಿ ಯಾವಾಗ ಆಕೆ ಪದೆ ಪದೇ ಮೊಬೈಲ್ ನೋಡುವಂತೆ ಮಾಡಿತ್ತೋ, ಅಲ್ಲಿಂದಲೇ ಬದಲಾವಣೆಯ ಗಾಳಿ ಬೀಸಿತ್ತು ನೋಡಿ. ಅದೊಂದು ಕಳ್ಳಾಟಿಕೆ ತನ್ನ ಲೈಫ್‍ನ್ನೇ ಮುಂದೊಂದು ದಿನ ಮಿಸ್ ಮಾಡುತ್ತೆ ಎಂದು, ತಿಳಿದಿರಲಿಲ್ಲ ಆಕೆಗೆ. ಆನಾಮಿಕನಂತೆ ಮಿಸ್ ಕಾಲ್‍ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇವಳಿಗೆ ದಿನ ಕಳೆದಂತೆ ಅವನ ವನಪು, ವಯ್ಯಾರವನ್ನು ಮೆಸೇಜ್ ಎಂಬ ಮಾಯೆಯಲ್ಲಿ ಕಳುಹಿಸುತ್ತಾ, ತನ್ನೆಡಗೆ ಸೆಳೆದು, ಬಗೆಬಗೆಯ ಆಸೆ ಹುಟ್ಟಿಸುತ್ತಾ ಮೊದಲು ಮೀಟಿಂಗ್ ಮಾಡೋಣ ಎಂದು ಕಾಲ್ ಮಾಡುವ ಸಾಹಸಕ್ಕೆ ಕೈ ಹಾಕಿ, ನಂತರ ಡೇಟಿಂಗ್‍ವರೆಗೂ ಕರೆದು ಮುಂದೇನು ಎಂಬುವಷ್ಟರಲ್ಲಿ ಜೇನು ರಸವನ್ನು ಹೀರಿ ಗೂಡು ಬಿಟ್ಟು ಪರಾರಿ ಎಂಬಂತೆ ಮಾಯವಾಗಿದ್ದ. ಜೊತೆಗೆ ತನ್ನ ಲೀಲೆಯ ಮಹಿಮೆಯನ್ನು ಸೋಷಿಯಲ್ ಆಗೂ ತಿಳಿಯುವಂತೆ ಮಾಡಿ ಪರಾರಿಯಾಗಿದ್ದ. ಮನೆಗೆ ದೀಪವಾಗಿದ್ದ ಅವಳ ಬೆಳಕು ಆ ಕ್ಷಣದಿಂದಲೇ ಬಿರುಗಾಲಿಗೆ ಸಿಲುಕಿ ನಂದಿ ಹೋಗುವ ಹಣಾಹಣಿಯಲ್ಲಿ ಸಾಗಿತ್ತು.  ವಿಷಯ ತಿಳಿದ ಅಪ್ಪ ಅಮ್ಮನ ಪ್ರೀತಿ ಅಷ್ಟಕಷ್ಟೆ ಆಗಿತ್ತು. ಕಾಲೇಜುಗಳಲ್ಲಿಯೂ ಎಲ್ಲರದೂ ಇವಳ ಜೊತೆ ನೀರವ ಮೌನ. ಸೆಳೆದು ಅಬ್ಬರಿಸುತ್ತಿದ್ದ ಅವಳ ಅಂದಕ್ಕೆ ನೋಡುವವರೆ ಗತಿ ಇರಲಿಲ್ಲ. ಅವಳಿಗೆ ಇದೀಗ ಎಲ್ಲವೂ ಸಾಕಾಗಿದೆ. ಅಂದು ಅವನ ಒಂದು ಮೆಸ್ಸೇಜ್‍ಗೆ ತಡಬಡಿಸಿ ಕಾಯುತ್ತಿದ್ದವಳು ಇಂದು ಅವನನ್ನು ನೆನೆಸಿದರೆ ಮೈಪರಚಿದಂತೆ ಪರಿತಪ್ಪಿಸುತ್ತಿದ್ದಳು. ಜೀವನವೇ ಬೇಡ ಎನಿಸಿ ಕೊನೆಗೂ ತೀರ್ಮಾನಿಸಿಯೇ ಬಿಟ್ಟಿದ್ದಳು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಪರಲೋಕ ಸೇರಿದ್ದಳು.
ಈ ನೋವಿನ ಘಟನೆ ನಾ ಕಂಡ ನಿಜವೇ ಆದರೂ ಇದು ಒಂದು ಹುಡುಗಿಯ ಜೀವನದ ಗಾಥೆಯಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸಿರುವ ಘಟನೆ. ನಾನು ಹೇಳುವುದು ಇಷ್ಟೇ, ಹರೆಯದ ಹುಡುಗಿಯರೇ ಯಾವುದೂ ಎಷ್ಟೂ ಬೇಕೋ ಅಷ್ಟೇ ಇರಲಿ ಅತಿಯಾದರೆ ಅಮೃತವು ವಿಷ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಒಂದಿಷ್ಟು ಜನ ಬಣ್ಣ ಹಚ್ಚುವುದರಲ್ಲೆ ಬೇರೆಯವರ ಜೀವನದ ಓಕುಳಿಯನ್ನು ಆಡುತ್ತಿರುತ್ತಾರೆ, ಆಡಿರುತ್ತಾರೆ. ಕೆಲವೊಂದು ವರ್ಗ ಅದಕ್ಕಾಗಿ ನೆಲೆನಿಂತುಕೊಂಡು ಅಂದದ ಹುಡುಗಿಯರು, ಅಮಾಯಕ ಮಹಿಳೆಯರ ಜೊತೆ ಆಟವಾಡಿ ಮಜಾ ತೆಗೆದುಕೊಂಡು ಸಂಸ್ಕøತಿಯ ರೂಪು ರೇಷೆಯನ್ನು ಹಾಳುಗೆಡವುತ್ತಿದೆ. ಹೆಣ್ಣನ್ನು ಭೋಗಕ್ಕೆಂದೆ ಉಪಯೋಗಿಸುವ ಸಾಮಾಜಕ್ಕೆ ಸೋಷಿಯಲ್ ಮೀಡಿಯಾಗಳು ಪುಷ್ಟಿಕೊಟ್ಟು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಮೊಬೈಲ್ ಫೋನ್ ಗಳನ್ನು ಬಳಸಿ ಆದರೆ ಬಳಕೆಯಲ್ಲಿ ಮಿತಿಯಿದ್ದು, ಎಲ್ಲವೂ ನಿಜವೆಂದು ನಂಬದೆ, ಗುರುತು ಪರಿಚಯವಿಲ್ಲದವರ ಬಳಿ ಕಾಂಟ್ಯಾಕ್ಟ್ ಬಳಸುವ ವೇಳೆ ಜಾಗೃತೆ ವಹಿಸಿ, ಹೆತ್ತವರೇ,,, ಮಕ್ಕಳ ನಡೆ ನುಡಿಯಲಿ ನೀವೂ ಎಚ್ಚರವಹಿಸಿ  ಯಾಕೆಂದರೆ ನಿಮ್ಮ ಮಕ್ಕಳಿಗೆ ಏನೇ ಆದರೂ ಹೊಣೆಗಾರರು ನೀವೆ ಎಚ್ಚರವಿರಲಿ ...