Wednesday 23 December 2015

ಮಳೆಯ ಹನಿಯಲ್ಲಿ ಕೂತು...


“ಎಲ್ಲ ಮರೆತು ನೆವವ ಹೂಡಿ ಅಡಗಿ ಕುಳಿತ ನೆನಪೆ..,
ಗುಳಿತೋಡಿ ಎದೆಯಿಳಿದು ಕುಳಿತು ಮನ ಕುಣಿಸುತಿರುವೆ ಏಕೆ ನೆನಪೆ...!?”
ನಿಜ...ತಮಿಳುನಾಡಿನಲ್ಲೂಂಟಾದ ಚಂಡಮಾರುತದ ನಿಮಿತ್ತ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ವರ್ಷಧಾರೆ ದೀರ್ಘ ಎರಡು ಮೂರು ದಿನಗಳು ಸುರಿದಿತ್ತು. ಈ ಸಮಯ ನೆರೆ ಬರುವಂತೆ ಹೊಡೆಯುವ ಮಳೆಗಾಲ ಅಲ್ಲ. ಆದರೂ ಎಡೆಬಿಡದ ದುಂಬು ದುಂಬು ಮಳೆ ಎಲ್ಲೆಲ್ಲೂ ಚಳಿ ಹಿಡಿಸಿದ್ದಂತೂ ನಿಜ. ಧರಿತ್ರಿ ಈ ವರ್ಷ ಸಿಂಚನದಿಂದ ಚೇತನಗೊಂಡಿದ್ದಾಳೆ. ಬೇಸಿಗೆಯಂತೆ ಸೂರ್ಯನ ಧಗೆಯಿಂದ ದಹಿಸುತ್ತಿದ್ದ ಭೂಮಿ ಈಗ ತಂಪಾಗಿದೆ. ಪರಿಚಿತರೊಬ್ಬರು ಹೇಳುವಂತೆ ಸುಮಾರು 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಹವಮಾನ ಸುಮಾರು ತಿಂಗಳುಗಳ ಕಾಲ ಇತ್ತಂತೆ. ಬಹುಶಃ ಇದೀಗ ಮತ್ತೇ ಹಾಗೆ ಆದಂತಿದೆ. ಅಬ್ಬಾ ಭೂಮಿಗೆ ಸೂರ್ಯನ ಕಿರಣವೇ ಇಲ್ಲ, ಮಂಜಿನಂತೆ ಸದಾ ಪಿರಿ ಪಿರಿಸುವ ಮಳೆ ಎಲ್ಲರಿಗೂ ಸ್ವೆಟರ್ ಹಾಕಿಸುವಂತೆ ಮಾಡಿತ್ತು. ಯಾರಿಗೆ ಫೋನ್ ಮಾಡಿದರೂ ಅಬ್ಭಾ ಏನು ಚಳಿ ಸಾಕಾಗಿ ಹೋಯ್ತು ಅನ್ನಿಸುವಷ್ಟು ಮಳೆರಾಯ ಬೆಂಗಳೂರಲ್ಲಿ ಚಳಿ ಬೀಸಿ ಹೋಗಿದ್ದ. ಇವಿಷ್ಟು ಒಂದು ಕಡೆಯ ವಿಷಯವಾದರೆÉ ಇಂತಹ ಮಳೆ ಚಳಿಯಲ್ಲೂ ಅಡಗಿ ಕುಳಿತ ಭಾವನೆಗಳು ಮತ್ತೆ ಗರಿಗೆದರಿ ಏದೆಯಲ್ಲಿ ಕುಳಿತದ್ದು ನನ್ನನ್ನು ಇನ್ನಷ್ಟೂ ಮೋಹಕತೆಗೆ ಜಾರಿಸಿ ನೆನಪ ತೇರಲ್ಲಿ ಒಂದು ಮೆರವಣಿಗೆ ಕರೆದುಕೊಂಡು ಹೋಗಿಯೇ ಬಿಟ್ಟಿತು...
ಅದೊಂದು ಸಂಭ್ರಮ...
ಬಾಲ್ಯದಿಂದ ಹಿಡಿದು ಇಂದಿನ ತನಕದ ಹಲವು ನೆನಪುಗಳು ಮಳೆಗಾಲದೊಂದಿಗೆ ಯಾವಾಗಲೂ ಮರುಕಳಿಸುತ್ತವೆ. ಬಹುಶಃ ಇದಕ್ಕೆ, ಹಿರಿಯರು ಹೇಳಿರಬೇಕು ವರ್ಷ ಋತುವಿಗೆ ಸೋಲದ ಮನಸ್ಸುಗಳೇ ಇರಲಾರವು ಎಂದು.
ಬಾಲ್ಯದಲ್ಲಿ ಮಳೆಯೊಂದಿಗೆ ಮಾಡಿದ ಅದೆಷ್ಟೋ ಮೋಜುಗಳು ಮೊನ್ನೆ ನೆನೆಪುಗಳ ಪುಟ ತೆರೆಯಿತು. ಮೊದಲ ರಭಸದ ಮಳೆಗೆ ತುಂಬುತ್ತಿದ್ದ ಮನೆಯ ಮುಂದಿನ ತೋಡುಗಳು, ಹರಿಯುವ ನೀರಿನಲ್ಲಿ ಮುಳುಗಿ ಆಟವಾಡಿ ಮೈರೆತು ಒದ್ದೆಯಾಗಿತ್ತಿದ್ದ ಸಂಧರ್ಭಗಳು, ಕಪ್ಪೆಗಳನ್ನು ಮೀನುಗಳೆಂದು ಭಾವಿಸಿ ಹಿಡಿಯುತ್ತಿದ್ದ ದಿನಗಳು. ನನ್ನೊಡನೆ ಆಡಲು ಬಂದ ಪುಟ್ಟ ನಾಯಿಯನ್ನು ನೀರಿಗೆ ದೂಡಿ ಅದರÀ ಈಜನ್ನು ನೋಡಿ ಖುಷಿಪಡುತ್ತಿದ್ದ ಕ್ಷಣಗಳು, ಮುಂಜಾನೆ ಬಿಸಿಲಿದ್ದ ಕಾರಣ ಕೊಡೆ ಮರೆತು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಕೊಡೆಯಿಲ್ಲದೇ ನೆನದು ಬಳಿಕ ಕಟ್ಟಿಗೆ ಒಲೆಯ ಮುಂದೆ ಕುಳಿತಿದ್ದ ಆ ಬೆಚ್ಚನೆಯ ಸವಿಸಮಯಗಳು, ಪಾಪ ಧನಕರುಗಳು ಮಳೆಯಲ್ಲೇ ನಿಂತಿವೆ ಎಷ್ಟು ಚಳಿಯಾಗಬಹುದೇನೋ!? ಎಂದು ಮಳೆಯನ್ನು ತಡೆಯಲು ಕೊಡೆ ಹಿಡಿದ ಆ ಸುಂದರ ಸವಿಕ್ಷಣಗಳು, ಮಳೆಯಿದೆ ಶಾಲೆಗೆ ಹೋಗಲ್ಲ ಎಂದು ಹಠ ಬಿದ್ದು ಅಮ್ಮನ ಕೈ ಏಟು ತಿಂದು ಮಳೆಗಿಂತ ಜೋರಾಗಿ ಕಣ್ಣೀರ ಧಾರೆ ಹರಿಸಿ ಮನೆ ಸೇರಿದಂತ ವೇಳೆಗಳು, ಶಾಲೆ ಆರಂಭವಾಗುವ ಸಮಯ ರೈನ್ ಕೋಟ್, ಕೊಡೆಗಳಿಗಾಗಿ ಮಾಡಿದ್ದ ರಂಪಾಟಗಳು ಹೀಗೆ ನೆನಪುಗಳು ಒಂದೆರಡಲ್ಲ. ನಿಜಕ್ಕೂ ಅವೆಲ್ಲವೂ ಒಂದು ಸಂಭ್ರಮವೇ ಸರಿ...
ಚಿಕ್ಕವರಿದ್ದಾಗ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆಪಕ್ಕೊಂದು ಕೊಡೆ ಹಿಡಿದು ಚಪ್ಪಲಿಯನ್ನು ಬೇಕೆಂದೇ ಮನೆಯಲ್ಲಿ ಮರೆತು ಬರಿಗಾಲಲ್ಲಿ ಶಾಲೆಗೆ ಹೋಗುವುದೇ ಒಂದು ಪುಟ್ಟ ಹಬ್ಬದಂತೆ. ಆದರಿಂದು ಬೈಕ್ ಏರಿ ರಸ್ತೆಯಲ್ಲಿ ಸಾಗುವಾಗ ಅಂದು ಅನುಭವಿಸುತ್ತಿದ್ದ, ರಸ್ತೆಯ ನೀರಾಟದ ಮಜಾ ಮತ್ತೆ ಮತ್ತೆ ಮನ ಪಟಲವನ್ನು ಚಾಚುತ್ತದೆ. ಅಂದದು ಕೆಸರು ನೀರೋ, ಸ್ವಚ್ಚ ನೀರೋ ನಮಗೇ ವ್ಯತ್ಯಾಸವೇ ಇರಲಿಲ್ಲ, ಯಾವಶುಚಿತ್ವದ ಕಲ್ಪನೆಯೂ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಕಣ್ಣಿಗೆ ಬೀಳುವ ಕೆಂಪು ಬಣ್ಣದ ‘ರೇಶಿಮೆ ಹುಳು’ಗಳು, ನೀರಿನಲ್ಲಿ ಆಟವಾಡುವಾಗ ಕಾಲಿಗೆ ಹತ್ತಿಕೊಳ್ಳುವ ನಂಜು ಹುಳಗಳು, ಮೈ ಕೈ ತಾಗಿ ತುರಿಕೆ ಎಬ್ಬಿಸುವ ಕಂಬಳಿ ಹುಳಗಳು, ಇನ್ನೂ ಅನೇಕ ನೀರಿನಲ್ಲಿ ತೊಯ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜೀವಿಗಳು ಮಳೆಗಾಲದಲ್ಲಿ ನಮ್ಮ ಆಸಕ್ತಿ ವಿಷಯಗಳಾಗಿದ್ದವು. ಕೆಲವಂತೂ ನಮ್ಮ ಹಿಂಸೆಗೆ ಜೀವ ತೆಯ್ದವೂ ಇವೆ, ಪಾಪದಂತೆ ಕಂಡು ಕೈ ಹಿಡಿದು ದಡ ಕಂಡವೂ ಇವೆ...
ಆ ಸಮಯ ಸಂಧರ್ಭಗಳೇ ಹಾಗೆ... ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗುತ್ತಿದ್ದ ಮರಗಿಡಗಳು ಮಳೆಯ ಹನಿಯ ಸ್ಫರ್ಶಕ್ಕೆ  ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗೊಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು.  ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಳದಲ್ಲಿ ಹಾವಸೆಯ ಸ್ಫರ್ಶದ ಹಿತವನ್ನು ಅನುಭವಿಸುತ್ತಿದ್ದವು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತಿದ್ದದ್ದೂ ಮೊನ್ನೆ ಸುರಿದ ಮಳೆ ಮತ್ತೆ ಮನಸ್ಸನ್ನು ತೆರೆಸಿತ್ತು. ಆಗೆಲ್ಲ ಕೊಡೆಗಳಲ್ಲಿ ಅಷ್ಟು ವೆರೈಟಿ ಬಂದಿರಲಿಲ್ಲ. ಕಪ್ಪು ಬಟ್ಟೆಯ ದೊಡ್ಡ ಕೊಡೆಗಳಷ್ಟೇ ಹೆಚ್ಚಾಗಿ ಕಾಣಸಿಗುತಿದ್ದವು. ಅವುಗಳಲ್ಲಿ ನಮಗೆ ಮರದ್ದೋ, ಸ್ಟೀಲ್‍ದ್ದೋ ಬಾಗಿದ ಬೆತ್ತದಂತಿರುವ ಉದ್ದನೆಯ ಹಿಡಿPಯ ಕೊಡೆÉ ಮಾತ್ರಾ ಕಾಣ ಸಿಗುತ್ತಿತ್ತು. ಇಂದಿನ ಮಾಡರ್ನ್ ಯುಗದ ಚಿಕ್ಕ ಚಿಕ್ಕ ಛತ್ರಿಗಳನ್ನು ನೋಡಿದ ನೆನಪೇ ಇಲ್ಲ. ಆ ಉದ್ದನೆಯ ಅಜ್ಜನ ಕೊಡೆಗಳಿಗೊಂದು ಹಚ್ಚೆ ಹಾಕಿಸಿಕೊಂಡು, ನಾಮಾಂಕಿತ ಮಾಡಿಕೊಂಡು ಇದು ನನ್ನದು ಎನ್ನುವ ಗ್ಯಾರಂಟಿ ಕಾರ್ಡ್‍ನ್ನು ನಿಗಧಿಪಡಿಸಿ ಗುರುತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೂಡ ಎಷ್ಟೊ ಸಲ ಕೊಡೆ ಕಳುವಾಗುತ್ತಿದ್ದವು. ಆದರೆ ಇದರಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಮನೆಯಲ್ಲಿ ಕಡುಬು ತಿನ್ನಬೇಕಾಗಿದ್ದು ನಾವೇ ಆಗಿದ್ದೇವು. ಕೊಡೆಯೋ ಬುತ್ತಿಯೋ, ಹಾಕೋ ಚಪ್ಪಲಿಯೋ ಇದರಲ್ಲಿ ಯಾವೊಂದು ಕಳುವಾದರೂ ನಮ್ಮ ತಲೆಮೇಲೆ ಆಕಾಶ ಬಿದ್ದ ಹಾಗೇ ಫೀಲೀಂಗ್ ಆಗುತ್ತಿದ್ದದ್ದೂ ಮಾತ್ರಾ ಸುಳಲ್ಲ...
ಮಳೆಗಾಲವೆಂದರೆ ಇಷ್ಟೇ ಅಲ್ಲ ಅದು ಎಲ್ಲರ ಗೆಳೆಯ. ನೊಂದ ಮನಸ್ಸುಗಳ ಮಿತ್ರ, ಪ್ರೇಮಿಗಳ ಪ್ರೀತಿಯನ್ನು ಇಮ್ಮಡಿಸುವ ಆತ್ಮೀಯ. ನೋವನ್ನು ಮರೆಸುವ ಮಾಣಿಕ್ಯ. ಕಣ್ಣೀರನ್ನು ಒರೆಸುವ ಅಮ್ಮ. ಇನ್ನೂ ಏನೇನೋ ಒಬ್ಬೊಬ್ಬರಿಗೆ ಒಂದೊಂದು ಥರ. ನನಗಂತೂ ಮಳೆಯೆಂದರೆ ಪ್ರಾಣ. ಮತ್ತೆ ಮತ್ತೆ ಭೂವಿಗೆ ಮಳೆಯಾಗಲಿ ಎಂದು ಯಾವಾಗಲೂ ಹಂಬಲಿಸುವ ಮುದ್ದು ಮನಸು ನನದು. ಪ್ರತಿ ಮಳೆಯಲ್ಲೂ ಮನಪಟಲದಿಂದ ನೆನಪುಗಳು ಗರಿಗೆದರಿ ಬಂದು ಭಾವನೆಯನ್ನು ಕೆಣಕಿ ಮಾತನಾಡಿಸುತ್ತವೆ. ಈ ಮಳೆ ಇಲ್ಲಿಗೆ ನಿಲ್ಲಬಹುದು ಆದರೆ ನನ್ನ ಮೈ ಮನ ಮುಂದಿನ ಮುಂಗಾರಿನ ಸಿಂಚನಕ್ಕೆ ಮೈಯೊಡ್ಡಲು ಈಗಲೇ ಕಾತರಿಕೆಯಲಿ ನಿಂತಿದೆ...ಯಾವುದೇ ಜವಾಬ್ಧಾರಿಯಿಲ್ಲದ, ಕೇವಲ ಕುತೂಹಲ, ಹುಡುಗಾಟದಲ್ಲಿಯೇ ಕಳೆದು ಹೋಗುವ ಬಾಲ್ಯದ ಆ ದಿನಗಳು  ಮತ್ತೆಂದು ಹಿಂದಿರುಗಿ ಬರಲಾರವು ಎನ್ನುವ ಮನೋಭಾವವಿದ್ದರೂ, ಕಳೆದ ಆ ದಿನಗಳನ್ನೇ ಸಿಕ್ಕ ಸಮಯ ನೆನಪಿಸಿಕೊಂಡು ಎಂಜಾಯ್ ಮಾಡುವುದು ನಿಜಕ್ಕೂ ಮನಸ್ಸಿಗೆ ಉಲ್ಲಾಸ ಕೊಡದೆ ಇರದು. ನನಗೆ ಇದುವರೆಗೂ 24 ವಸಂತಗಳು ಕಳೆದು ಹೋದವು ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೊ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ಒತ್ತಡದ ಬದುಕಿನ ಈ ದಿನಗಳಲ್ಲಿ ಅಪರೂಪಕ್ಕೊಮ್ಮೆ ಸಿಗುವ ಏಕತಾನತೆಯ ನಡುವೆ ಮತ್ತೊಮ್ಮೆ ಹಂಬಲಿಸುವ ಹಳೆಯ ನೆನಪಿನ ರೀವೈಂಡಿಂಗ್ ರೀಲ್ ನಿಜಕ್ಕೂ ಮಳೆಗಾಲದಲ್ಲೇ ಜಾಸ್ತಿ ಅನ್ನಿಸುತ್ತದೆ.
ಹೊರಗೆ ಭೋರ್ಗೆರದು  ಸುರಿವ ಮಳೆಗೆ, ಬೆಚ್ಚಗೆ ಬೆಡ್ ಶೀಟ್ ಹೊದ್ದು ಅಮ್ಮಾ ಮಾಡಿದ ಬಿಸಿ ಚಹವನ್ನು ತುಟಿಗೇರಿಸಿ, ಜತೆಜತೆಗೆ ಬಿಸಿ ಬಿಸಿ ಬೋಂಡಾ ತಿನ್ನುವ ಆಸೆಗಳನ್ನು ಅನುಭವಿಸಿದಂತೆ ನಿಮಗೂ ಈಗ ನೆನಪುಗಳ ಫೀಲಿಂಗ್ ಗರಿಗೆದರುತ್ತಿರಬಹುದು ಅಲ್ವಾ...ಅಷ್ಟಾದರೆ ಸಾಕು. ಓದಿ ಮುಗಿಸಿದ ನಂತರ ಪ್ಲೀಸ್ ಮಳೆರಾಯನಿಗೆ ನೀವು ತಿಳಿಸಿ ಒಂದು ಸಣ್ಣ ಧನ್ಯವಾದ...ಯಾಕೆಂದರೆ ಈ ಬರವಣಿಗೆಗೆ ಮೊನ್ನೆ ಅವನೇ ಕಾರಣವಾದ...

ವೆಂಕಟ ಇನ್ ಸಂಕಟ...


ಟಿ.ವಿ ಮಾಧ್ಯಮಗಳೇ ಶೇಮ್... ಶೇಮ್...
ಖಾಸು ಸಿಗುತ್ತದೆಂದು ಬಾಸು ಆದ ಹುಚ್ಚ ವೆಂಕಟ್...
ಟಿ.ಆರ್.ಪಿ ಸುಲ್ತಾನನ ಫೈರಿಂಗ್
ಅಂದು ಜಂಗಲ್ ಜಾಕಿ ರಾಜೇಶ ಇಂದು ಹುಚ್ಚ ವೆಂಕಟ್...

              ‘ನನ್ ಎಕ್ಡಾ.., ನನ್ ಮಗಂದ್.., ಬ್ಯಾನ್ ಆಗ್ಬೇಕ್...’ಈ ಡೈಲಾಗ್‍ಗಳೆಲ್ಲ ಇದೀಗ ಸಣ್ಣ ಮಗುವಿನಿಂದ ಹಿಡಿದು ಹಿರಿಯವರೆನಿಸಿಕೊಂಡ ದೊಡ್ಡಣ್ಣರ ಬಾಯಲ್ಲೂ ಕಾಮನ್ ಆಗಿ ಬಿಟ್ಟಿದೆ...ಇದಕ್ಕೆ ಕಾರಣ ವೆಂಕಟ್ ಹುಚ್ಚ ವೆಂಕಟ್... ಇರಬಹುದು ಹುಚ್ಚು ಮನಸ್ಸಿಗೆ ಹತ್ತು ಮುಖಗಳಂತೆ ಇತ್ತೀಚಿಗೆ ಟಿ.ವಿ ಮಾಧ್ಯಮದಲ್ಲಿ ಭಿತ್ತರವಾಗುತ್ತಿರುವ ವೆಂಕಟನ ಸಂಕಟ ವೀಕ್ಷಿಸಿ ನಗು, ಅಸಹನೆ, ನೋವು ಎಮಬಿತ್ಯಾದಿಗಳನ್ನೆಲ್ಲ ತಾಳಲಾರದೇ ಈಗ ಜನ ಹೇಳುತ್ತಿದ್ದಾರೆ ಹುಚ್ಚು ಮನಸ್ಸಿಗೆ ಹತ್ತಲ್ಲ ನೂರೋ, ನೂರಿಪ್ಪತ್ತೋ ಮುಖಗಳಿರಬೇಕು ಎಂದು!!. ಬಹುಶಃ ಇಂತದ್ದೊಂದು ಆಲೋಚನೆ ಮೂಡಿ ಬಂದಿದ್ದು ಹುಚ್ಚ ವೆಂಕಟ್‍ರವರ ಡಿಬೆಟ್ ಪ್ರೋಗ್ರಾಮ್ ನೋಡಿದ ಮೇಲೆಂದರೆ ಅನುಮಾನ ಸುಳಿಯುವುದಿಲ್ಲ ಬಿಡಿ. ನಾವು ಕನ್ನಡಿಗರೂ ವಿಶಾಲ ಹೃದಯದವರು, ಅನೇಕ ಒಳ್ಳೆಯ ಲೋಕ ಕಲ್ಯಾಣದ ವಿಚಾರಗಳಿದ್ದರೂ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹುಚ್ಚುಚ್ಚಾದ ವಿಷಯಗಳಿಗೆ ತಲೆ ಕೆರೆದುಕೊಳ್ಳುವುದು ಜಾಸ್ತಿ...ನಮ್ಮವರಿಗೆ ಮನೆ ಒಡೆಯುವುದರಲ್ಲಿರುವ ಸುಖ ಮನೆ ಕಟ್ಟುವುದರಲ್ಲಿಲ್ಲ. ಯಾರೂ ಹುಚ್ಚನಾಗಿದ್ದಾನೆ, ಯಾರನ್ನು ಹುಚ್ಚನ ಸ್ಥಾನದಲ್ಲಿ ನಿಲ್ಲಿಸಿ ಗೋಳಾಡಿಸುವುದು, ಎಂಬಿತ್ಯಾದಿ ವಿಚಾರಗಳನ್ನು ಕೆಲವೇ ಕೆಲವು ಮಂದಿ ನಿರ್ಧರಿಸಿ ಮೀಡಿಯಾ ಎಂಬ ಬಣ್ಣವನ್ನು ಹಚ್ಚಿ, ಕುಣಿಸಿ, ನಂತರ ಹೀರೋವಾಗಿಸುತ್ತಾರೆ. ಅವನ ಪ್ರತಿ ಘಳಿಗೆಯನ್ನು ಉಪಯೋಗಿಸಿಕೊಂಡು ಹಣ ಸಂಪಾದಿಸಿ ನಂತರ ಸತ್ತನೋ!, ಜೀವಿದ್ದನೋ! ಎಂಬುದನ್ನು ತಿಳಿಯದೇ ಮುಗ್ಧರಂತಿರುತ್ತಾರೆ. ಸದ್ಯಕ್ಕೆ ಇವು ಈ ತಿಂಗಳ ಹೈಲೆಟ್...
 ಕರೆಕ್ಟ್...ಇಲ್ಲಿನ ಸಮಸ್ಯೆ ಎದ್ದು ಕಾಣುತ್ತಿರುವುದು ಒಬ್ಬ ವ್ಯಕ್ತಿಯ ಅಭಿವ್ಯಕ್ತತೆಯ ಶೈಲಿಯಲ್ಲಿ ಅಷ್ಟೆ.  ಹುಚ್ಚ ವೆಂಕಟ್ ಒಬ್ಬ ಹುಚ್ಚ ಅಲ್ಲದಿದ್ದರೂ ಅವನ ಸಿನಿಮಾ ಹುಚ್ಚು,  ಕೆಲವೊಂದು ವಿಚಾರದಲ್ಲಿ ಆತ ತೆಗೆದುಕೊಳ್ಳುವ ನಿರ್ಣಯಗಳು, ಮಾತುಗಳು, ಅಷ್ಟೇ ಅಲ್ಲದೇ ಅವನ ಸಿನಿಮಾ ಟೈಟಲ್, ಎಲ್ಲಾ ಜೊತೆ ಜೊತೆಗೆ ಸೇರಿಸಿ ಆತನನ್ನ ‘ಹುಚ್ಚ’ನನ್ನಾಗಿ ಮಾಡಿದೆ ಅಷ್ಟೇ. ವೆಂಕಟ್ ಒಳಗೆ ಒಂದು ಮುಗ್ಧ ಮನಸ್ಸಿದೆ ಅದರ ಬಗ್ಗೆ ಯಾವ ಅನುಮಾನವೂ ಇಲ್ಲ, ಯಾವ ನಿರಾಸಕ್ತಿಯೂ ಇಲ್ಲ ಬದಲಾಗಿ ಅಭಿಮಾನವಿದೆ. ಎಷ್ಟೇ ಏನೆ ಅನ್ ವಾಂಟೆಡ್ ಸ್ಟೇಟ್‍ಮೆಂಟ್ ಇದ್ದರೂ ಈ ಒಂದು ಕಾರಣಕ್ಕಾಗಿಯೇ ಜನರಿಗೆ ಈತ ಹಿಡಿಸಿರಬೇಕು.
ಕಳೆದೆರಡು ಆವೃತ್ತಿಯ ಬಿಗ್‍ಬಾಸ್ ಎನ್ನುವ ಹೈ ಬಜೆಟ್  ಡ್ರಾಮಾ ಇಡೀ ಕರ್ನಾಟಕದ ಜನತೆಗೆ ಎಷ್ಟು ತಿಳಿದಿತ್ತೋ, ಮನೆರಂಜನೆ ನೀಡಿತ್ತೋ ತಿಳಿದಿಲ್ಲ. ಆದರೆ ಈ ಬಾರಿಯ ಬಿಗ್ ಬಾಸ್ ಅಂತೂ  ಉಳಿದೆಲ್ಲಾ ಟಿ.ವಿ ಕಾರ್ಯಕ್ರಮಗಳಿಗಿಂತ ಹೆಚ್ಚು ವೀಕ್ಷಿಸಲ್ಪಟ್ಟಿದೆ ಎಂದು ಬಿಗ್‍ಬಾಸ್ ಮಂಡಳಿ ಹೆಮ್ಮೆಯಿಂದ ಬೀಗಿದೆ. ಅನೇಕ ಜನ ಹೇಳುವಂತೆ ಇದಕ್ಕೆಲ್ಲಾ ಒಬ್ಬನೇ ಒಬ್ಬ ವ್ಯಕ್ತಿ ಕಾರಣ ಅವನೆ ಹುಚ್ಚ ವೆಂಕಟ್. ಈ ಮೊದಲು ಎರಡು ಸಿನಿಮಾಗಳಲ್ಲಿ ಅಭಿನಯವನ್ನು ತೋರಿದ್ದರೂ ವೆಂಕಟ್ ಥೀಯೇಟರ್‍ನಲ್ಲಿ ಸ್ಟಾರ್ ನಾಯಕನಾಗಿ ಹೊರಬೀಳಲಿಲ್ಲ. ಬದಲಾಗಿ ನಿರಾಸೆಯ ಆಕ್ರೋಶದಿಂದ ಹೊರಬಿದ್ದು, ಬಾಯಿಗೆ ಬಂದ ಸ್ಟೇಟಸ್ ನೀಡಿ ಯುಟ್ಯೂಬ್‍ನಲ್ಲಿ ಅಲ್ಟೀಮೇಟ್ ಹಿಟ್ ಆಗಿದ್ದ. ಅದೇ ಡೈಲಾಗು, ಅವನದೇ ವೈಖರಿಯನ್ನು ಅನೇಕ ಜನ ಅನುಕರಿಸಿ ಎಲ್ಲರ ಕಣ್ಣು ವೆಂಕಟ್ ಮೇಲೆ ಎನ್ನುವಂತಾಗಿತ್ತು. ಅದು ಬಿಗ್‍ಬಾಸ್ ಮನೆಗೂ ಎಂಟ್ರಿ ದೊರಕಿಸಿಕೊಟ್ಟಿತ್ತು. ಅಲ್ಲಿಯೂ ತನ್ನ ಬುದ್ಧಿಯನ್ನು ಎಳ್ಳಷ್ಟೂ ಬಿಟ್ಟುಕೊಡದ ವೆಂಕಟ್ ತಂದೆ, ತಾಯಿ ಹಾಗೂ ಹೆಣ್ಮಕ್ಕಳ ಬಗ್ಗೆ ಅಪಾರ ಅಭಿಮಾನದ ಮಾತುಗಳನ್ನಾಡಿ ಅಭಿಮಾನಿಗಳ ಗುಂಪನ್ನು ಗಿಟ್ಟಿಸಿಕೊಂಡು ಎಲ್ಲರಿಗೂ ಅಣ್ಣನಾಗಿಯೇ ಬಿಟ್ಟ...
 ಬಹುಶಃ ಇಲ್ಲಿಯವರೆಗೆ ಆಗಿದ್ದೆಲ್ಲವೂ ಆತನ ವೈಯಕ್ತಿಕ ವಿಚಾರ ಆಗಿದ್ದಿರಬಹುದು. ಆದರೆ ಇನ್ನೂ ಮುಂದೆ ಸಂಭವಿಸಿದ್ದು ನಿಜಕ್ಕೂ ವಿಷಾಧನೀಯ. ಇದರಲ್ಲಿ ಜನತೆಯ ತಪ್ಪೇನು ಇರಲಿಕ್ಕಿಲ್ಲ ಯಾಕೆಂದರೆ ಯಾರೊಬ್ಬನನ್ನು ಅವರು ಹೀರೋ ಮಾಡಬೇಕೆಂದರೂ, ಆತ ಟಿ.ವಿ.ಯಲ್ಲಿ ಮೊದಲು ಕಾಣಿಸಿಕೊಂಡು ಓ.ಕೆ ಆದ ಮೇಲೆ ಬೆಂಬಲ ಸೂಚಿಸಿ ಚಪ್ಪಾಳೆ ತಟ್ಟೋದು. ಆದರೆ ಟಿ.ವಿಯವರು ಎಂತಹವರನ್ನು ಬೇಕಾದರೂ ಸ್ಟಾರ್ ಮಾಡುತ್ತಾರೆ!. ಆ ತಾಕತ್ ಅವರಿಗಿದೆ ಬಿಡಿ!!!. ನಮ್ಮಲ್ಲೂ ಸ್ಟಾರ್‍ಗಿರಿಗೇನೂ ಕಡಿಮೆ ಇಲ್ಲ. ಎಂತಹವ ಬೇಕಾದರೂ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡುವ, ಬಿಡಿಸುವ  ಶಕ್ತಿ ನಮಗಿದೆ. ಇಲ್ಲಿಯ ನನ್ನ ನೋವು ಹುಚ್ಚ ವೆಂಕಟನ ಮೇಲೂ ಅಲ್ಲ, ಹೀರೋ ಮಾಡಿದ ಜನತೆಯ ಮೇಲೂ ಅಲ್ಲ ಟಿ.ಆರ್.ಪಿ ಹುಚ್ಚು ಹಿಡಿದಿರೋ ಟಿವಿ ಮಾಧ್ಯಮಗಳ ಮೇಲೆ. ಪ್ರಸರಿಸೋ ಪ್ರತಿ ಕಾರ್ಯಕ್ರಮವನ್ನು ಸ್ಲ್ಯಾಟ್ ಎನ್ನುವ ಸಂಭಾವನೆಯಲ್ಲಿಯೇ ಮುಳುಗುವ ವಾಹಿನಿಗಳಿಗೆ ಇತ್ತೀಚೆಗೆ ವೆಂಕಟನ ಲೀಲೆ ಖಾಸು ಮಾಡಲು ದಾರಿ ಮಾಡಿ ಕೊಟ್ಟಿತ್ತೆಂದರೆ ಅತಿಶಯೋಗ್ತಿಯಲ್ಲ.  ರವಿ ಮುರೂರು  ಮೇಲೆ ಹಲ್ಲೆ ಮಾಡಿದ ಪರಿಣಾಮ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ವೆಂಕಟ್‍ಗೆ ಅಭಿಮಾನಿ ಬಳಗವೇ ಸೃಷ್ಟಿಯಾದದ್ದು ಟಿ.ವಿ ಚಾನೆಲ್‍ಗಳಿಗೆ ವರವಾಗಿ ಪರಿಣಮಿಸಿತು.  
ಇದೆಲ್ಲ ನಡೆಯುತ್ತಿರುವ ಸಮಯದಲ್ಲೇ ಹಲವಾರೂ ಏಳುಬೀಳುಗಳು, ಏನೇನೋ-ಎಷ್ಟೆಷ್ಟೋ ಲೋಕಕಲ್ಯಾಣದ ಕಾರ್ಯಗಳು ನಡೆಯುತ್ತ್ತಾ ಇದ್ದರೂ ಅದನ್ಯಾವ ಚಾನಲ್‍ಗಳು ಜಾಸ್ತಿ ತೋರಿಸುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಏಕೆ ಪ್ರಧಾನಿ ಮೋದಿ ಲಂಡನ್‍ಗೆ ಹೋಗಿದ್ದು, ಮೊದಲ ದಿನ ಎಡಬಿಡದೆ ವರದಿಯಾಗುತ್ತಿದ್ದರೂ ನಂತರದ ಭಾಷಣ, ಬಸವಣ್ಣನ ಪ್ರತಿಮೆ ಅನಾವರಣ ಇತ್ಯಾದಿಗಳ್ಯಾವವು ಹೆಚ್ಚು ಸುದ್ದಿಯಾಗಲಿಲ್ಲ ಕಾರಣ ಬಿಗ್‍ಬಾಸ್ ಮನೆಯಿಂದ ಹುಚ್ಚ ವೆಂಕಟ್ ಹೊರಬಂದಿದ್ದರು!. ನೋಡಿ ಎಂಥಾ ವಿಪರ್ಯಾಸ!!!.
ಅಷ್ಟಕ್ಕೂ ಮಾಧ್ಯಮಗಳು ಇಂತಹ ವಿಚಾರಗಳನ್ನು ಯಾಕಿಷ್ಟು ವೈಭವೀಕರಿಸುತ್ತವೆ ಎಂಬುದು ಹೆಚ್ಚಿನವರ ಪ್ರಶ್ನೆಯಾದರೂ ಇದಕ್ಕೆ  ಟಿ. ಆರ್.ಪಿ ಎನ್ನೋ ಸಾಮಾನ್ಯ ಉತ್ತರ ಎಂದು ತಿಳಿದಿದೆ. ಹೌದು ಬಹುಶಃ ವೆಂಕಟ್ ಬಿಗ್‍ಬಾಸ್‍ನಿಂದ ಹೊರಬಿದ್ದ ನಂತರ ಮನೆಯಲ್ಲಿ ಸರಿಯಾಗಿ ಕುಳಿತಿದ್ದನೋ ಇಲ್ಲವೋ ಗೊತ್ತಿಲ್ಲ!, ಆದರೆ ರಾತ್ರಿ 2ರ ತನಕವೂ ಬೇರೆ ಬೇರೆ ನ್ಯೂಸ್ ಚಾನೆಲ್‍ಗಳಲ್ಲಿ ಕುಳಿತು ಮಾತನಾಡಿದ್ದ. ಊಟ ಮಾಡಿಸಿದ್ದರೋ ಇಲ್ಲವೋ! ಆದರೆ ಬ್ರೇಕ್ ಕೊಡದೆ ಮಾತನಾಡಿಸಿದ್ದರು... ಯಾಕೆಂದರೆ ಅವನೊಬ್ಬ ಟಿ.ಆರ್.ಪಿ ಮೇಕರ್.
ವರ್ಷಗಳ ಹಿಂದೆ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಎನ್ನುವ ರಿಯಾಲಿಟಿ ಶೋನಲ್ಲಿ ತೊಡೆ ತಟ್ಟಿ ‘ಕುಂತ್ರೆ ಕುರುಬ ನಿಂತ್ರೆ ಕಿರುಬ’ ಎಂದು ಡೈಲಾಗ್ ಹೊಡೆದು ಕನ್ನಡ ಜನತೆಯ ಮನಗೆದ್ದು, ನಿಜವಾದ ಹೀರೋ ಆಗಿದ್ದ್ ‘ಜಂಗಲ್ ಜಾಕಿ ರಾಜೇಶ್’ ಎನ್ನುವ ಹುಡುಗ ಫೈನಲ್‍ನಲ್ಲಿ ಗೆದ್ದಾಗ ಇದೇ ಪಾಡನ್ನು ಅನುಭವಿಸಿದ್ದ.
ನಂತರದ ದಿನಮಾನಗಳಲ್ಲಿ ಇದೇ ಮಾಧ್ಯಮಗಳು ವೈಭವೀಕರಿಸಿ ಹೀರೋ ಮಾಡಿ, ಕಾಡಿನ ಮಧ್ಯದಲ್ಲಿ ಬೆಳೆದ ಹುಡುಗನನ್ನು ಪ್ಯಾಟೆಗೆ ತಂದು  ಇಲ್ಲಿನ ಸಂಪ್ರದಾಯ ಸಂಸ್ಕøತಿಯನ್ನು ತೋರಿಸಿ, ಅವನಿಗೆ ಆ ಕಡೆ ಸಂಪೂರ್ಣವಾಗಿ ಹಳ್ಳಿಯ ಕ್ರಮವನ್ನು ಅನುಸರಿಸಲಾಗದೆ, ಇತ್ತ ನಗರ ಜೀವನಕ್ಕೂ ಒಗ್ಗಲಾಗದೇ ಮನಸ್ಸಿನಲ್ಲಿ  ತೀವ್ರ ತಳಮಳ ಅನುಭವಿಸುವಂತೆ ಮಾಡಿ , ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದ್ದರು. ಇದರಿಂದಾಗಿ  ಆತ ‘ ಅಕ್ಯೂಟ್ ಮೇನಿಯಾ’  ಖಾಯಿಲೆಗೂ ತುತ್ತಾಗಿದ್ದ.  ನಂತರ ಮನೆಯ ಮೇಲಿಂದ ಹಾರಿ ಪ್ರಾಣವನ್ನು ತೆತ್ತಿದ್ದ.   ಇಂತಹ ಚಿತ್ರಣವೊಂದು ಮಾಸುವ ಮುನ್ನವೇ ಇದೀಗ ಮತ್ತೊಬ್ಬನನ್ನು ಹೀರೋ ಮಾಡಿ, ಅವನಾಡುವ ಮಾತುಗಳಿಗೆ ಬಣ್ಣ ಬಳಿದು ಟಿ.ಆರ್.ಪಿ ಹೆಚ್ಚಿಸಿಕೊಂಡು  ಇವನ ಕತೆಯನ್ನು ಮುಗಿಸುತ್ತಾರೋ ಏನೋ ತಿಳಿದಿಲ್ಲ ಎನ್ನುವುದೇ ಸುಮಾರು ಜನರ ಭಯ. ವೆಂಕಟ್ ಒಬ್ಬ ಹುಚ್ಚನಲ್ಲ ಅವನೊಳಗೆ ಬೇಯುತ್ತಿರುವ ನೋವು, ತುಡಿತ ಹಾಗೆ ಆಡಿಸುತ್ತಿದೆ ಅಷ್ಟೆ.  ರಕ್ತದೊತ್ತಡ ಜಾಸ್ತಿಯಾಗಿ ಅತಿರೇಖತೆಗೆ ತಲುಪಿ ಏನೇನೋ ಆಡುವಂತೆ ಮಾಡುತ್ತಿದೆ. ಇದು ಸ್ಥಿತ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಇಲ್ಲದ ಆಟವಷ್ಟೆ...
 ಟಿ.ವಿ ಮಾಲೀಕರೇ ಯಾಕಿಷ್ಟು ಉತ್ಸಾಹ ನಿಮಗೆ ಬೇರೆಯವರ ಜೀವನದಾಟದಲ್ಲಿ.!? ಅದೇ ವೆಂಕಟ ಯಾಕೆ ಹೀಗಾದ ಅವನನ್ನು ಸರಿ ಮಾಡೋಕೆ ಆಗುತ್ತಾ? ಅವನಿಗೆ ನಮ್ಮಿಂದ ಏನಾದರೂ ಸಹಾಯ ಆಗಬಹುದಾ?, ಅವನ ಸಮಸ್ಯೆ ಏನು ಎಂಬಿತ್ಯಾದಿ ವಿಚಾರವನ್ನು ಗಹಗಹಿಸುವುದ ಬಿಟ್ಟು, ಅವನ ಜೊತೆ ಡಮ್ಮಿ ನಿರೂಪಕನೊಬ್ಬನನ್ನು ಕುಳ್ಳಿರಿಸಿ, ಅವನು ಹೇಳಿದ ಹಾಗೆ ಪೂಸಿ ಹೊಡೆದು ಮರುಮಾತನಾಡದೇ ಊಟ ಏನ್ ಮಾಡ್ತೀರಾ?, ಅವರ ಬಗ್ಗೆ ಏನ್ ಹೇಳ್ತೀರಾ?, ಇವರಿಗೆ ಬೈತೀರಾ!? ಎಂದೆಲ್ಲಾ ಕಾಲಹರಿಸಿ, ನಿಮ್ಮ ಜೀವನ ಉತ್ತುಂಗಕ್ಕೇರಿಸಿ, ಮತ್ತೊಬ್ಬನ ಜೀವನ ಪಲ್ಟಿ ಹೊಡೆಸುವುದು ಸರಿನಾ?  ದಯಮಾಡಿ ಉತ್ತರಿಸಿ.
ಹಿಂದಿನ ದಿನ  ಸ್ಟುಡಿಯೋದಲ್ಲಿಟ್ಟುಕೊಂಡು ಕೊಂಡಾಡಿದವರು ಆನಂತರ ದಿನ ಶಾಕ್ ನ್ಯೂಸ್‍ನ್ನು ಕೊಟ್ಟು ಮತ್ತೇ ಬ್ರೇಕಿಂಗ್ ಎಂದರು. ಬಹುಶಃ ಇಷ್ಟು ಆಗಬೇಕು ಎಂದು ಕಾದಿದ್ದರೋ ಗೊತ್ತಿಲ್ಲ ಆದರೂ ಇಷ್ಟಾಯ್ತು...
“ ಕುತಂತ್ರದಿಂದ ಮಸಿ ಬಡಿಸಿದರು, ಬಾಯಿಗೆ ಬಂದಂತೆ ಮಾತಾಡಿಸಿದರು. ವೆಂಕಟ್ ಮೇಲೆ ಆರೋಪ ಬಿತ್ತು, ಪೋಲೀಸರು ಅರೆಸ್ಟ್ ಮಾಡಿದ್ರು, ಕೋರ್ಟ್‍ಗೆ ಹಾಜರು ಪಡಿಸಿದ್ರು...ಕೋರ್ಟ್ ಹಾಲ್ ತುಂಬಿತ್ತು... ನೂರಕ್ಕೂ ಹೆಚ್ಚು ಅಡ್ವೋಕೇಡ್‍ಗಳು ವೆಂಕಟ್‍ನ ನೋಡಲು ಮುಗಿಬಿದ್ರು, ಆದರೆ ವಿಚಾರಣೆ ವೇಳೆ ವೆಂಕಟ್ ಪರ ವಕೀಲರು ಜೆರಾಕ್ಸ್‍ಗೆಂದು ಹೋದವರು ಬರಲಿಲ್ಲ... ಕೋರ್ಟ್ ಹಾಲ್‍ನಲ್ಲಿದ್ದ 400 ಕ್ಕೂ ಅಧಿಕ ವಕೀಲರು ವೆಂಕಟ್ ಬಳಿ ನಾವೇ ಬಂದು ಪುಕ್ಸಟ್ಟೆ ವಾದ ಮಂಡಿಸ್ತೀವಿ ಅಂತದ್ರು. ಆದರೆ ನಂತರ ಸುಮ್ಮನಿರಿ ಎನ್ನುವ ಜಡ್ಜ್ ಮಾತಿಗೆ ಎಲ್ಲ ಸುಮ್ಮನಾದ್ರು.  ಜಡ್ಜೇ ವಾದ ಶುರು ಮಾಡಿದ್ರು... ನೀನು ಅಂಬೇಡ್ಕರನ್ನು ನಿಂದಿಸಿದ್ದು ನಿಜಾನಾ ಅಂತ ಕೇಳಿದ್ರು. ಪಾಪ ವೆಂಕಟ್ ನಿಜ ನುಡಿದು ಹೌದೆಂದ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು ಕೋರ್ಟ್. ವೆಂಕಟ್ ಅಣ್ಣ ಮಾತ್ರ ಎಲ್ಲದಕ್ಕೂ ಮೀಡಿಯಾಗಳೇ ಕಾರಣ ಎಂದ್ರು. ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದ್ರು. ಅಲ್ಲೂ ಅಭಿಮಾನಿಗಳ ಜೈಕಾರ ಸಿಕ್ತು...”
ಇಷ್ಟೆಲ್ಲಾ ಆಯ್ತು ಇನ್ನು ಅದರ ಫಲಿತಾಂಶ ಎಲ್ಲಿಗೆ ಹೋಗಿ ಮುಟ್ಟುವುದೋ ಆ ದೇವನೇ ಬಲ್ಲ. ಆದರೆ ಟಿ.ಆರ್.ಪಿ ಸಮರಕ್ಕಾಗಿ ಮತ್ತೊಬ್ಬನ ಜೀವನವನ್ನೇ ಸಮರ ಸಾರುವುದು ಎಷ್ಟು ಸರಿ...? ಮಾನಸಿಕವಾಗಿ ನೊಂದಿರುವವನ್ನು ಕೂರಿಸಿ ಮಜಾ ತಗೊಂಡ್ರು... ಟಿ.ಆರ್.ಪಿ ಸುಲ್ತಾನ ಏಕಾಂಗಿಯಾಗಿ ಇರಲು ಬಿಡದೆ ಪ್ರಚೋಧನಾತ್ಮಕವಾಗಿ ಕೆಣಕಿ ಕಣ್ಣೀರು ಸುರಿಸುವಂತೆ ಮಾಡಿದರು. ಅಣ್ಣ ತಮ್ಮಂದಿರಂತಿದ್ದವರನ್ನು ದಾಯಾದಿಗಳಂತೆ ಮಾಡಿದರು. ನಿಜಕ್ಕೂ ಇದು ವಿಚಾರ ಹೀನತೆಯ ಪರಮಾವಧಿ, ಟಿ.ಆರ್.ಪಿ ಹುಚ್ಚು


ಹೆಣ್ಣು-12


ಹೆಣ್ಣಿನ ಮೇಲಿನ ದುರಾಕ್ರಮಣ, ಅತ್ಯಾಚಾರ, ಅನಾಧಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಈ ಬಗ್ಗೆ ನಮ್ಮ ಪುರಾಣಗಳಲ್ಲೂ ಕೂಡ ಬಹಳಷ್ಟು ಹೃದಯ ವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣನ್ನು ತನ್ನ ಭೋಗದ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ಈ ನಡೆಯನ್ನು ಸಮಾಜ ಕೂಡ ಸತತವಾಗಿ ಕ್ಷಮಿಸುತ್ತಲೇ ಬಂದಿದೆ. ಕೇವಲ ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು  ನೋಡಿದರೂ ಇದೇ ಕಥೆ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬಾಕೆಯನ್ನು ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಬಹುದಾದರೂ, ಅದು ಕೇವಲ ಸಂಭೋಗವೇ ಆಗಿರಬೇಕೆಂದೇನೂ ಇಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಕೆಣಕುವುದು, ಪೀಡಿಸುವುದು, ಚುಡಾಯಿಸುವುದು ಅನಾವಶ್ಯಕವಾಗಿ ಅವಳ ಮೇಲೆ ಕೈಯಾಡಿಸುವುದು, ಮುಟ್ಟುವುದು ಕೂಡ ಅತ್ಯಾಚಾರದ ಪರಿಧಿಯೊಳಗೆ ಬರುತ್ತದೆ.
ಕೇವಲ ಮನುಷ್ಯ ವರ್ಗದಲ್ಲಿ ಮಾತ್ರವಲ್ಲದೆ ಪ್ರಾಣಿವರ್ಗವೆನ್ನುವ ಎಲ್ಲಾ ಜಾತಿಯಲ್ಲೂ ಈ ಅತ್ಯಾಚಾರವೆನ್ನುವುದು ಸಾಮಾನ್ಯವಾದರೂ, ಮನುಷ್ಯನ ಮಾನಕ್ಕೆ ಜಾಸ್ತಿ ಬೆಲೆ ಎನ್ನುವಂತೆ ಮನುಷ್ಯರಾದ ನಮ್ಮ ಘಟನೆಯನ್ನು ಮಾತ್ರಾ ಪ್ರತಿಬಿಂಬಿಸುತ್ತಾ ಸಾಗುತ್ತೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತಿದ್ದರೂ, ನಡೆದದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಆಗಿದ್ದೆಲ್ಲವೂ ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಗಣನೆಗೆ ತೆಗೆದುಕೊಂಡು ನೋಡಿದರೆ ಒಂದು ಕ್ಷಣ ಎಂತಹವರು ದಂಗಾಗಬೇಕು ಹಾಗಾಗುತ್ತದೆ.
ಒಂದು ಮೂಲಗಳ ಪ್ರಕಾರ, ನಮ್ಮ ಕರ್ನಾಟಕದಲ್ಲೇ 2008 ರಿಂದ 2012 ರ ವರೆಗೆ 2,798 ಅತ್ಯಾಚಾರ ಪ್ರಕರಣಗಳು ನಡೆದಿವೆಯಂತೆ. ಇದು ಪೋಲಿಸ್ ಇಲಾಖಾ ವರದಿಯಾದರೆ ಲೆಕ್ಕಕ್ಕೆ ಸಿಗದೆ ಮಣ್ಣು ಕಚ್ಚಿರುವ ರೋಧನಿಕೆ ಎಷ್ಟು ನಡೆದಿವೆಯೋ ದೇವನೇ ಬಲ್ಲ. ಇನ್ನೂ ಈ ಅಂಕಿ ಸಂಖ್ಯೆಯನ್ನು ದೇಶೀಯ ಮಟ್ಟದಲ್ಲಿ ಗಮನಿಸಿದರೆ 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದ್ದು, 22,172 ಲೈಂಗಿಕ ಆಕ್ರಮಣ, 40,613 ಅಸಭ್ಯ ವರ್ತನೆಗಳ ಕೇಸ್‍ಗಳು ದಾಖಲೆಯಲ್ಲಿವೆ. 2011ರ ಅಂಕಿ ಅಂಶಗಳ ಪ್ರಕಾರ ಪ್ರತಿ 54 ನಿಮಿಷಗಳಿಗೊಂದು ರೇಪ್, 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ, 26 ನಿಮಿಷಗಳಿಗೊಮ್ಮೆ ಹೆಂಗಸನ್ನು ಚುಡಾಯಿಸುವುದು, 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ ನಡೆದಿದೆಯಂತೆ. ಇವೆಲ್ಲವನ್ನು ಮೀರಿ ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ.
ಅತ್ಯಾಚಾರವೊಂದು ಗುರುತರವಾದ, ಅಮಾನವೀಯ ಅಪರಾಧ ಅದಕ್ಕೆ ತಕ್ಕ ಶಿಕ್ಷೆಯಾಗಬೇಕೆಂಬುನ್ನು ಸಮಾಜ ಪದೆ ಪದೇ  ಸಭೆ, ಪ್ರತಿಭಟನೆ, ಭಾಷಣದಲ್ಲಿ ತೋರ್ಪಡಿಸುತ್ತಿದ್ದರೂ ಯಾವ ಬದಲಾವಣೆಯೂ ಆಗುತ್ತಿಲ್ಲ. ದಿನೇ ದಿನೇ ಹೆಣ್ಣು ಮಕ್ಕಳ ಈ ಶೋಷಣೆ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಭವಣೆ ನೀಗಲು ಕಾನೂನು ಕೈ ಇದ್ದರೂ ಸಮರ್ಪಕವಾದ ವಿಚಾರಣೆಯಿಲ್ಲದೆ ಆರೋಪಿಗಳೆಲ್ಲ ಕೈ ತಪ್ಪಿಸಿಕೊಳ್ಳುತ್ತಿದ್ದಾರೆ.
 ಒಂದಂತು ನಿಜ...
‘ದಶ ಶಿರಂ ಪೊತ್ತೊಯ್ಧುದು ಒರ್ಬನ ಸತಿಯನಲ್ತು, ಸತಿತನವನ್  ಉಯ್ದಿಹನ್...’ ಎಂಬ ಸಾಲು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹೇಗಿದೆಯೋ ಹಾಗೆ ಇಂದು ಅತ್ಯಾಚಾರ ವೈಯಕ್ತಿಕವಾಗಿ ಯಾವುದೋ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವುದಿಲ್ಲ. ಅದು ಇಡೀ ಹೆಣ್ಣು ಕುಲದ ಮೇಲೆ, ಆ ಮನು ಕುಲದ ಮೇಲೆ ನಡೆಯುತ್ತಿರುವ ಅತ್ಯಾಚಾರ. ಅದರ ಹೊಣೆಯನ್ನು ಇಡೀ ಮನುಕುಲವೇ ಹೊರಬೇಕಾಗಿದೆ. ‘ಪುರುಷನಿರಲಾಗದು ಈ ಧರೆಯ ಮೇಲೊರ್ವನುಂ  ಪೊರೆಯದೆ ಅನ್ನೆಗಂ ಆ ಸತೀತ್ವಮಂ...’ ಎಂಬ ರನ್ನನ ಮಾತುಗಳನ್ನು ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ಈ ಅತ್ಯಾಚಾರದ ಅನಿಷ್ಟವನ್ನು ತಡೆಯಲಾಗದಿದ್ದರೆ ಈ ಭೂಮಿಯ ಮೇಲೆ ವಾಸಿಸುವ ಹಕ್ಕನ್ನು ಮನುಷ್ಯ ಕಳೆದುಕೊಳ್ಳುತ್ತಾನೆ ಎಂದರ್ಥ...