Tuesday, 22 September 2015

ಹೆಣ್ಣು-9


“ಹೆಣ್ಣು ಹೆಂಗಸಾದಾಗಾ ಬದಲಾಗುತ್ತಾಳೇ ಅನಿಸುತ್ತದೆ ಅಲ್ವಾ ಸಾರ್!...”
ಈ ಹಿಂದಿನ ಸಂಚಿಕೆಗಳಲ್ಲಿ ಮೂಡಿಬಂದಿರುವ ಹೆಣ್ಣು ಅಂಕಣವನ್ನು ಓದಿದ ಓದುಗರೊಬ್ಬರು ಈ ಮೇಲಿನ ಪ್ರಶ್ನೆಯನ್ನು ಕರೆ ಮಾಡಿ ಕೇಳಿದ್ದರು.
 ‘ಹೌದು, ಖಂಡಿತ ನೋ ಡೌಟ್’ ಎಂದೆ.
‘ಹಾಗಾದರೆ ಅವಳು ಬದಲಾವಣೆಗೆ ಒಳಗಾದಾಗ ಸಹಜ ಸಂವೇದನೆಗಳನ್ನ ಕಳೆದುಕೊಳ್ಳುತ್ತಾಳಾ ಸರ್’ ಎಂದು ಮರುಪ್ರಶ್ನೆ ಪ್ರೀತಿಯಿಂದಲೇ ಕೇಳಿದರು.
 ‘ಸಹಜವಾದ ಸಂವೇದನೆಗಳನ್ನು ಕಳೆದುಕೊಂಡಾಗಲೇ ಬದಲಾವಣೆ ಕಾಣಲು ಸಾಧ್ಯ ಅಲ್ವಾ, ಇಲ್ಲವೆಂದರೆ ಬದಲಾವಣೆಯಾಗೋದು ಕಷ್ಟ ಸಾಧ್ಯ ಸರ್’ ಎಂದೆ.

 ಎಸ್.., ಈ ಮಾತು ನಿಜ. ಹುಡುಗಿ ಹೆಣ್ಣಾಗಿ ಹೆಂಗಸಾಗುವ ಪ್ರವರ್ಧಮಾನಕ್ಕೆ ತಿರುಗಿದಾಗ ತನ್ನಿಂದ ತಾನೇ ಬರುವ ಕಾತುರತೆ, ನಿರೀಕ್ಷೆ, ಲಜ್ಜೆ, ನಾಚಿಕೆ, ಕನಸು ಕಂಗಳು , ಕೆನ್ನೆ ಚುಂಬಿಸುತ್ತಲೇ ಇರುವ ರೆಪ್ಪೆಗಳು, ಬಳುಕೋ ವೈಯಾರ, ಬಿಂಕ ಭಿನ್ನಾಣಗಳು ಎಲ್ಲವೂ ತನ್ನಿಂದ ತಾನೇ ಅವಳ ಸಂವೇದನೆಗೆ ಅರಿಯದೆ ಪ್ರವೇಶಿಸುತ್ತದೆ.
ಬಾಲಕಿ ಹೆಣ್ಣಾಗುತ್ತಾಳೆ, ಸೀದಾ ಮಹಿಳೆಯೂ ಆಗುತ್ತಾಳೆ ಆಗ, ಅವಳಲ್ಲಿ ಬದಲಾವಣೆಯ ಮಹಾಪೂರವೇ ಹರಿಯುತ್ತದೆ. ಒಂಥರ ಗಾಂಭೀರ್ಯ, ದಿನಚರಿಯಲ್ಲಿ ಬದಲಾವಣೆ, ಆರೋಗ್ಯದ ಕಡೆ ಗಮನ, ತನ್ನ ತನದ ಕಾಳಜಿ, ಲೈಂಗಿಕತೆಯ ಬಗೆಗಿನ ಕುತೂಹಲ, ಹುಡುಗರ ಮೇಲಿನ ಸೆಳೆತ, ಉಡುಗೆ ತೊಡುಗೆಯ ಬದಲಾವಣೆ ಇವೇ ಮುಂತಾದವುಗಳು ತನ್ನಿಂದ ತಾನಾಗಿಯೇ ಯಾರ ಹೇಳಿಕೆಯನ್ನು ಪಡೆಯದೇ ಬರುವುದು. ಇದೆಲ್ಲ ಕಾಮನ್ ಬದಲಾವಣೆಯಾದರೆ, ಇನ್ನೊಂದು ಬದಲಾವಣೆಗಳನ್ನು ನಮಗೆ ನಾವೇ ಮಾಡಿಕೊಂಡು ಬಿಡುವ ಪ್ರಜ್ಞೆಯ ಬದಲಾವಣೆ. ಉದಾಹರಣೆಗೆ, ಅವಳು ಮದುವೆಯ ನಂತರ ಮನೆ ಹಾಗೂ ಗಂಡನ ಮನೆ ಎರಡನ್ನು ಹೊಂದಾಣಿಸಿಕೊಂಡು ಬದುಕುವುದು ಸಹಜ ಧರ್ಮವಾಗಿ ಬಿಡುತ್ತದೆ. ಹೊಂದಿಕೊಂಡು ಸರಿಸಮಾನವಾಗಬೇಕಾಗುತ್ತದೆ. ಆದರೆ ಇದರಲ್ಲಿ ಈಗೀಗ ಬದಲಾವಣೆಯನ್ನು ಕಾಣುತ್ತಿದ್ದೇವೆ.  ಇತ್ತೀಚಿನ ಮಹಿಳೆ ತಮ್ಮ ಕಾಲ ಮೇಲೆ ತಾನು ನಿಂತುಕೊಳ್ಳುವ ಉಸಾಬರಿಯಲ್ಲಿ ವೃತ್ತಿ ಮತ್ತು ಸಂಸಾರ ಎರಡನ್ನು ನೋಡಿಕೊಳ್ಳಬೇಕಾಗುತ್ತಿದ್ದು, ಹೊಂದಾಣಿಕೆ ಒಂದು ಹೆಜ್ಜೆ ಮುಂದೆ ಸಾಗಿ ಆಯತಪ್ಪುತ್ತಿದೆ. ಇತ್ತೀಚಿನ ಮಹಿಳೆಯರ ಹೊಂದಾಣಿಕೆ ನೆಮ್ಮದಿಗೆ ಅಡ್ಡಗಾಲಿಡುವುದರ ಜೊತೆಗೆ ಜೀವನದ ಸುಖ, ಸಂತೋಷವನ್ನು ಕೊಲ್ಲತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬದುಕೆ ಇಷ್ಟೆ. ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತೇವೆ ಎಂದುಕೊಂಡರೆ ಸಡಗರ. ಇಲ್ಲವಾದರೆ ತಡಬಡ. ಗಂಡು-ಹೆಣ್ಣಿನಲ್ಲಿ ಹೆಚ್ಚು ಯಾತನಾದಾಯಕ ಬದುಕು ಹೆಣ್ಣಿದ್ದೆ ಆದರೂ ಅವಳ ಸಂವೇದನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದು ಅವರವರ ನೇರಕ್ಕೆ ನಿಂತಿರುತ್ತದೆ. ಪ್ರೀತಿ, ಪ್ರೇಮ, ಕಾಮ ಹೀಗೆ  ಕ್ಷಣದ ಮಾಯೆಯಾಗುತ್ತಾಳೆ. ಲವ್ ಅನ್ನುವ ಎರಡಕ್ಷರದ ಮಾಯೆ ಹೆಣ್ಣು ಹೆಂಗಸಾದಾಗ ಬಹುಮುಖ ಪ್ರತಿಭೆಯ ಆಟ ತರಿಸುತ್ತದೆ. ಅವಳು ಸಹಜ ಸಂವೇದನೆಗೆ ತಿರುಗಿದಾಗ ಕಾಣದ ಅಷ್ಟೂ-ಇಷ್ಟೂ ಎಲ್ಲವೂ ಆವರಿಸುತ್ತದೆ.
ಆದರೂ ‘ಬಿ ಕೇರ್‍ಫುಲ್’ ಈ ಸಮಯದಲ್ಲಿ ನಿಮ್ಮ ಜಾಗೃತೆ ನಿಮ್ಮಲ್ಲಿರಲಿ. ಸಂವೇದನೆಗಳು ಸಮಯಪ್ರಜ್ಞೆ ಕಳೆದುಕೊಳ್ಳದಿದ್ದರೆ ಚೆಂದ. ಅಂತ ಬದುಕು ನಿಮ್ಮದಾಗಲಿ.
ಹೊಸ ಮನೆಗೆ ಹೋಗುತ್ತಿದ್ದೀರಾ!? ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ...


          ಮನೆ ಬದಲಿಸಬೇಕು, ಸ್ವಲ್ಪ ದೊಡ್ಡ ಮನೆನೆ ನೋಡಿದ್ದೀವಿ, ಫೈನಲ್ ಸೆಟ್ಲಮೆಂಟ್ ಬಾಕಿ ಇದೆ ಅಷ್ಟೇ, ಅದೆಲ್ಲಾ ಹೇಗೋ ಆಗತ್ತೆ ಆದ್ರೇ ಇಲ್ಲಿರೋ ಸಾಮಾನು ಸರಂಜಾಮು ವರ್ಗಾವಣೆ ಮಾಡುವುದೇ ದೊಡ್ಡ ತಲೆ ನೋವು. ಇಲ್ಲಿ ನಮಗೆ ಎಲ್ಲವೂ ಚೆನ್ನಾಗಿತ್ತು. ಈ ಮನೆ ಒಂಥರಾ ಲಕ್ಕಿ ಕಣ್ರೀ.., ಏನ್ಮಾಡೋದು ಅಲ್ಲಿಯ ವಾತಾವರಣ ಹೇಗಿರುತ್ತೋ ಏನೋ? ಇದೆಲ್ಲಾ ಹೇಗೆ ಸರಬರಾಜಾಗಿ ಅಲ್ಲಿ ಹೋಗಿ ಸೆಟ್ ಆಗುತ್ತೋ ದೇವರೇ ಬಲ್ಲ..!. ಬಹುಶಃ ಇಂತಹ ಮಾತುಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುವವರಿಗೆ ಸರ್ವೇಸಾಮಾನ್ಯವಾಗಿರುತ್ತದೆ. ನಿಜ.., ಅವರನ್ನು ತೀರದ ಭಾವಗಳು, ನೆನಪುಗಳು, ಕನಸುಗಳು, ಹೊಸಸ್ಥಳದ ಆತಂಕಗಳು ಕಟ್ಟಿ ಹಾಕುತ್ತವೆ. ತೀರಾ ಅಟ್ಯಾಚಮೆಂಟ್ ಇದ್ದರೆ ಹಾಗೆ ಆಗುವುದು ನೋಡಿ...!


 ಆ ಮನೆಯಲ್ಲಿ ಕಳೆದಿರುವುದು ಒಂದಿಷ್ಟೇ ದಿನವಾಗಿದ್ದರೂ, ಕಳೆದಿರುವ ಭಾವನೆಗಳು, ಜೊತೆಯಾಗಿ ಸವಿಯೂಟ ಮಾಡಿದ್ದ ಕ್ಷಣಗಳು,  ಎಲ್ಲೆಂದರಲ್ಲಿ ಕುಳಿತು, ನಿಂತು, ಮಲಗಿ, ಆಟವಾಡಿದ್ದ ಹಲವಾರು ಸವಿ ನೆನಪು, ಕಷ್ಟ- ಸುಖ- ದುಃಖಗಳಿಗೆ, ಪ್ರೀತಿಯ ನೆಮ್ಮದಿಗೆ ಕಾರಣವಾಗಿದ್ದ ಭಾವಾಂತರಂಗಗಳು ಹೀಗೆ ಎಲ್ಲವೂ ನಮ್ಮನ್ನು ಒಂದು ಕ್ಷಣ ಮಮಕಾರದ ಪ್ರೀತಿಯ ಸಂಕೋಲೆಯಿಂದ ಬಂಧಿಸುತ್ತವೆ.  ಆದರೇನು ಮಾಡೋದು ಸೂರನ್ನು ಬದಲಿಸಲೇಬೇಕಿದೆ. ಯಾಕೆಂದರೆ ಅದು ನಮ್ಮ ಸ್ವಂತದಲ್ಲವಲ್ಲ...
ಪ್ರತಿ ಬಾಡಿಗೆ ಮನೆಯೂ ಮುಂದಿನ ಮನೆಗೆ ಹೋಗುವರೆಗೂ ಸ್ವಂತದ್ದೇ ಆದ್ದರಿಂದ  ಪ್ರತಿ ಮನೆಯ ಮೇಲೂ ಅಕ್ಕರೆ, ಪ್ರೀತಿ, ದ್ವೇಷ, ಕೋಪ, ಇತ್ಯಾದಿ, ಇತ್ಯಾದಿ... ಮನುಷ್ಯ ನಿರ್ಮಿತ ಭಾವನೆಗಳು ಇದ್ದೆ ಇರ್ತವೆ. ಮನೆ ಬದಲಾಯಿಸುವುದೆಂದರೆ ಅದು ಕೇವಲ ಸಾಮಾನುಗಳ ಮೆರವಣಿಗೆಯಲ್ಲ ಬದಲಿಗೆ ನಮ್ಮನುಭವಗಳ ಪಾರಮ್ಯದಲ್ಲಿ ವಿಕಸಿತಗೊಂಡ ಕುಶಲ ಕಲೆ. ಒಂದಿಷ್ಟು ವರ್ಷಕ್ಕಾಗಿ ಹಿಂದೂ-ಮುಂದೂ ನೂರು ಬಾರಿ ಯೋಚಿಸಿ,  ಅಡ್ವಾನ್ಸ್ ಹಾಗೂ ಬಾಡಿಗೆ ವಿಚಾರವಾಗಿ ಓನರ್ ಎಷ್ಟೇ ಕಮ್ಮಿ ಹೇಳಿದ್ದರೂ ಅದರಲ್ಲೇ ಇನ್ನು ಸ್ವಲ್ಪ ಬೌಕಾಶಿಗಿಳಿದು, ಓ.ಕೆ ಫರ್ಫೆಕ್ಟ್ ಎಂದು ಶಿಫ್ಟಿಂಗ್ ಮಾಡಿ ಇನ್ನೇನು ಸೆಟ್ ಆಯ್ತು ಮನೆ ಎಂದು ಮನೆಯಿಂದ ಮನೆಗೆ ಲಗ್ಗೇಜು ಹೊತ್ತೊಯ್ದು ಹೈರಾಣಾಗಿ, ನಿಟ್ಟುಸಿರು ಬಿಟ್ಟು ಜೀವನದ ಬಂಡಿ ನೂಕುತ್ತಿರುವಾಗಲೇ ಎರ್ಗಿಮೆಂಟ್ ಮುಗ್ತಾಯವೋ, ವರ್ಗಾವಣೆಯ ಸಂದೇಶವೋ, ಓನರ್‍ನ ಕಿರಿಕ್ಕೋ, ನಮ್ಮನೆ ಇಂಗಿನ ಒಗ್ಗರಣೆಯ ವಾಸನೆ ಪಕ್ಕದಲ್ಲೇ ಇರುವ ಒನರ್ ಮಗಳಿಗೆ  ತಲೆನೋವು ಬರಿಸುತ್ತೆಯಂತಲೋ, ಪ್ರತಿ ಭಾನುವಾರ ಆಂಟಿ ಮನೆಯ ಕಿಚನ್‍ನಿಂದ ಹೊರಹೊಮ್ಮುವ ಗರಂ ಮಸಾಲೆಯ ವಾಸನೆ  ನನ್ನ ಹೆಂಡತಿಗೆ ವಾಕರಿಕೆ ತರಿಸುತ್ತೆಯಂತಲೋ, ಸ್ನಾನಕ್ಕೆ ಸರಿಯಾದ ನೀರನ್ನು ಕೊಡಲ್ಲ ಅಂತಲೋ, ಸಮ್‍ಥಿಂಗ್ ಪ್ರಾಬ್ಲಂ! ಮನೆಯ ವಾಸ್ತುನೇ ಸರಿಯಿಲ್ಲ ಅಂತಲೋ, ಯಾವುದೋ ಸ್ವಾಮೀಜೀ ಹೇಳಿದ ಅಡುಗೆ ಮನೆ ಸರಿಯಿಲ್ಲ ಎಂಬ  ಮಾತಿಗೆ ಮರುಳಾಗಿಯೋ, ಸಕ್ಸಸ್ ದೊರೆಯುತ್ತಿಲ್ಲ ಮನೆ ಬದಲಾಯಿಸೋಣ ಎಂತಲೋ, ಸ್ಕೂಲ್‍ಗೆ ಹೋಗಲು ಮಗನಿಗೆ ದೂರ ಪ್ರಯಾಣವಾಗುತ್ತದೆ ಹತ್ತಿರದಲ್ಲೇ ಮನೆ ಮಾಡೋಣವಂತಲೋ, ಪಾರ್ಕಿಂಗ್ ಪ್ರಾಬ್ಲಂ ಇದೆಯಂತಲೋ, ಜೀವನದ ಚಕ್ರಕ್ಕೆ ಕಲ್ಲುಬಂಡೆ ಸಿಕ್ಕಂತೆÉ ಜರ್ಕ್ ಹೊಡೆಸಿ ಮತ್ತೆ ನವ ದಾರಿ ಹಿಡಿದು ಹೊಸ ಮನೆಯ ಹುಡುಕಾಟಕ್ಕೆ ನಮ್ಮ ಚಂಚಲ ಚಿತ್ತವನ್ನು ಆಯಾಯ ಸಂಧರ್ಭಗಳು ಅಣಿಗೊಳಿಸುತ್ತವೆ.
ಬಹಳ ಹಿಂದೆ ಮಾನವ ನೆಲೆಸಲು ಉಪಯೋಗಿಸಿಕೊಂಡ ಸ್ಥಳದ ಸೂರುಗಳೇ ಇಂದು ಈ ಮನೆಗಳು ಎಂಬ ಧೈತ್ಯಕ್ಕೆ ಬಂದು ನಿಂತಿವೆ. ಸುಮಾರು 11,000 ವರ್ಷಗಳ ಹಿಂದೆ, ಮಾನವ ಮರದ ಪೊಟರೆ, ಗುಹೆ, ಕಲ್ಲು ಬಂಡೆಗಳ ಸಂಧಿನಿಂದ ತೊಡಗಿ ಇಂದಿನ ಗಗನಚುಂಬಿ ಗ್ರಹಗಳವರೆಗೆ ಬೆಳೆದ ಮನೆಗಳ ಬೆಳವಣಿಗೆ ಮಾನವ ಸಮಾಜದ ವಿಕಾಸದಲ್ಲಿ ದೊಡ್ಡ ಮುಖ ಎಂದರೆ ತಪ್ಪಿಲ್ಲ. ಮನೆಗಳು ನಾಗರಿಕತೆಯ ವಿಕಾಸದೊಂದಿಗೆ ನಿಕಟವಾಗಿ ಸಂಪರ್ಕ ಹೆಣೆದುಕೊಂಡು ಶತಶತಮಾನಗಳ ಹಿಂದಿನಿಂದಲೇ ಉದ್ಭವಿಸಿಕೊಂಡು ಬಂದಿದೆ. ತನಗಾಗಿ, ತನ್ನವರಿಗಾಗಿ, ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವ ಹುಟ್ಟಿನ ಸ್ವಲ್ಪ ಕಾಲದಲ್ಲೇ ಉದ್ಬವಿಸಿದ್ದು ವಿಶೇಷವೇ ಆದರೂ, ಇವತ್ತು ಅದೆ ಬಾಡಿಗೆ, ಲೀಸ್ ಎಂಬ ನೆಪದಲ್ಲಿ ಅನೇಕ ಬಿಲ್ಡಿಂಗ್ ಮಾಲೀಕರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ಬಿಟ್ಟು, ಲಕ್ಷ ಲಕ್ಷ ಅಡ್ವಾನ್ಸ್ ಪಡೆದು, ಸರ್ಕಾರಕ್ಕೆ ತೆರಿಗೆಯನ್ನು ನೀಡದೆ ಹಗಲು ದರೊಡೆಯಲ್ಲಿ ಸಾಗುತ್ತಿರುವುದು ವಿಶೇಷವಲ್ಲದೇ ಮತ್ತೇನು?
ಮನುಷ್ಯ ನಿರ್ಮಿಸಿಕೊಂಡ ಮನೆ ಎಂಬ ನೆಲೆ, ಗುಹೆ-ಮರದ ಪೊಟರೆಯ ನಂತರ ಗುಡಿಸಲಿನಂತೆ ಇದ್ದು, ಅದು ಮೊದಲು ಅತೀ ಪ್ರಾಚೀನ ಕಾಲದಲ್ಲಿ ಅಸ್ಸೀರಿಯಾದ ಉಬೈದನ್ ಗ್ರಾಮದಲ್ಲಿ ಹಾಗೂ ನಂತರದ ನೆಲೆಗಳನ್ನು ಈಜಿಪ್ಟ್‍ನ ನೈಲ್ ನದಿಯ ರೊಸೆಟ್ಟಾ ಶಾಖೆಯ ಬಳಿ ಇರುವ ಮೆರಿಂದೆ ಎಂಬಲ್ಲಿತ್ತು ಎನ್ನುವುದು ಉತ್ಕನನದಲ್ಲಿ ಸಿಕ್ಕ ಅವಶೇಷಗಳಿಂದ ತಿಳಿದು ಬಂದಿದೆ. ಇನ್ನೂ ಭಾರತದ ವಿಚಾರಕ್ಕೆ ಬಂದರೆ  ಪ್ರಾಚೀನ ಗ್ರಹಾಶೇಷಗಳು, ಗಂಗಾನದಿಯ ಬಯಲಿನಲ್ಲಿರುವ ಸೂಕ್ಷ್ಮ ಶಿಲಾಯುಗದ ನೆಲೆಗಳಲ್ಲಿ ಆಯತ, ವೃತ್ತಾಕಾರ ಹೀಗೆ ಹಲವು ಬಗೆಂiÀಲ್ಲಿ  ಅವಶೇಷಗಳು,  ಮನೆಯ ಕುರುಹುಗಳು ಪತ್ತೆಯಾಗಿದ್ದು, ಹರಪ್ಪ, ಮೊಹೆಂಜೋದಾರೋ ನಾಗರಿಕತೆಯಲ್ಲೂ ಕೂಡ ಅದೇ ಸಂಸ್ಕøತಿಗೆ  ಹೊಂದಿಕೊಂಡಿರುವ ಕುರುಹುಗಳು ಲಭಿಸಿವೆ. ಅಂದರೆ ಮನೆ ನಿರ್ಮಾಣ ಇಂದು ನಿನ್ನೆಯ ಪ್ರಕ್ರಿಯೇ ಅಲ್ಲ ಎಂಬುದು ಸ್ಫಷ್ಟವಾಗುತ್ತದೆ.
 ಅದೇನೆ ಇರಲಿ. ಪ್ರಾರಂಭದಲ್ಲಿ ಪೊದೆ, ಪೊಟರೆ, ಗುಹೆ, ಆಮೇಲೆ ಹುಲ್ಲಿನ ಸೂರು, ನಂತರದಲ್ಲಿ ಬಿದಿರು, ಮರಗಳನ್ನು ಕಡಿದು ನಿರ್ಮಿಸುತ್ತಿದ್ದ ಮನೆ ಇಂದು ಸೀಮೆಂಟ್, ಕಬ್ಬಿಣ ರಾಡ್‍ಗಳ ಸಹಾಯದಿಂದ ದೈತ್ಯಾಕಾರಕ್ಕೂ ಬೆಳೆದು ನಿಂತಿರುವುದು ಮಾನವನ ಬೆಳವಣಿಗೆಯ ವಿಕಸನವನ್ನು ತೋರಿಸುತ್ತದೆ. ಇಂತಹ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಬಾಡಿಗೆ ಮನೆಯನ್ನು ಕೊಡಲು ಸಮರ್ಥವೆಂಬಂತೆ ಅದರಲ್ಲೂ ಹೊಸತನ ಕಂಡುಕೊಂಡು  ‘ಇನ್‍ಸ್ಟಾಲ್ ಮೆಂಟ್ ಕಟ್ಟಿ, ಅಪಾರ್ಟ್‍ಮೆಂಟ್ ಪಡೆಯಿರಿ’ ಎಂಬ ವ್ಯಾಪಾರೀಕರಣದಲ್ಲಿ’ ಹಣ ಮಾಡಲು ತೊಡಗಿದೆ ಇಂದಿನ ಜನತೆ.
 ಮನೆಯೆಂದರೆ ಹಾಗೆ ಅದಕ್ಕಾಗಿ ಎಷ್ಟು ದುಡ್ಡು ಬೇಕಿದ್ದರೂ ಸುರಿಯುತ್ತೇವೆ. ಅದು ಮನಕ್ಕೆ ಸುಸ್ತು ಬಡಿದಿದ್ದಾಗ ಶಾಂತಿ ನೀಡುವ ನೆಮ್ಮದಿಯ ಸೂರು. ಬೆಂಗಳೂರಿನಂತ ಮಹಾನಗರಿಯಲ್ಲಿ ವಾಸಿಸುವವರಿಗೆ ಮನೆ ಮಾಡುವುದು, ಬದಲಾಯಿಸುವುದು ಯಾವುದು ಅಸಾಮಾನ್ಯವಲ್ಲ. ಇಲ್ಲಿನ ಜನರಿಗಿಂತ, ಕೆಲಸವರಸಿ ವಲಸೆ ಬಂದಿರುವ ಜನರೇ ಮಹಾನಗರದಲ್ಲಿ ಜಾಸ್ತಿ ಇರುವುದರಿಂದ ಬಾಡಿಗೆ ಮನೆಗೆ ಬಹು ಬೇಡಿಕೆ ಇದೆ. ಎಷ್ಟು ಬೇಡಿದರು ಸಿಗುತ್ತೆ ಮನೆಗಳಿಗೆ ಕೊರತೆ ಇಲ್ಲ ಎನ್ನುವಂತ ಭೂಮಿ ಮಾಲೀಕರು ಸಣ್ಣ ರೋಡನ್ನು ಬಿಡದೆ  ಹಂತ ಹಂತವಾಗಿ ಸಿಕ್ಕ ಸಿಕ್ಕಲ್ಲಿ ಮನೆ ನಿರ್ಮಿಸಿ ಗ್ರಹ ರಚನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬಾಡಿಗೆಗೆ ಬಿಟ್ಟು ಆರಾಮಾಗಿ ಅರಸರಾಗಿದ್ದಾರೆ. ಅಲ್ಲಲ್ಲಿ ಅಕ್ರಮ ಮನೆಗಳು ಕೆರೆ ಕಟ್ಟೆಗಳು ಇವೆ ಎಂದು ನೋಡದೆ ನಿರ್ಮಿಸಿಕೊಂಡ ಮಹಾನುಭಾವರು ಇಂದು ಸರ್ಕಾರದ ಕಟ್ಟು ನಿಟ್ಟಿನ ಅಕ್ರಮಗಳ ಮರುಕಬಳಿಕೆಗೆ ತುತ್ತಾಗಿ ಅನೇಕ ಬಾಡಿಗೆದಾರರಿಂದ ಲಕ್ಷಗಟ್ಟಲೇ ಅಡ್ವಾನ್ಸ್ ಪಡೆದು ಪಂಗನಾಮ ಹಾಕಿ ಓಡಿ ಹೋದವರು ಇದ್ದಾರೆ.
ಏನೇ ಹೇಳಿ ಆದ್ರೆ, ಸಾಯೋದ್ರೊಳಗೆ ಸ್ವಂತದೊಂದು ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಮನುಜನ ಆಸೆ. ಇದನ್ನು ಸಾಕಾರಗೊಳಿಸಿಕೊಳ್ಳುವುದು ಬೆಂಗಳೂರಿನಂತಹ ಮಹಾ ನಗರಿಯಲ್ಲಿ ಇದು ದೊಡ್ಡ ಸಾಧನೆಯೇ ಸರಿ. ಇನ್ನು ಸ್ವಲ್ಪ ವರ್ಷ ಕಳೆದರೆ ಮನೆ ಕಟ್ಟೋದಿರಲಿ ಬಾಡಿಗೆ ಮನೆಯ ಬೆಲೆಯೂ ಗಗನಕ್ಕೇರಬಹುದೇನೋ!?
ಮನೆ ಮಾಡುವುದು, ಬದಲಾಯಿಸುವುದೆಲ್ಲವೂ ಜೀವನದ ಆಕಸ್ಮಿಕ ಘಟನೆಗಳಾದರೂ   ಅದು ಮನಸ್ಸು ಮನಸ್ಸುಗಳ ತೀರದ ಸ್ಪಂಧನ, ಕೂಡಿಕೆ ಅಗಲಿಕೆಗಳ ನಿರಂತರ ಸಮ್ಮಿಲನ. ಸಣ್ಣ ಮನೆಯಿಂದ ದೊಡ್ಡ ಮನೆಗೆ ಪ್ರಯಾಣಿಸುವ ಚಿಂತನೆ ಒಂದು ಕಡೆಯಾದರೆ, ಇರುವ ಮನೆಯನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಚಿಂತೆ ಇನ್ನೊಂದು ಕಡೆ. ತೀರಾ ಅಟ್ಯಾಚ್‍ಮೆಂಟ್ ಹಳೆ ಮನೆಯ ಬಗ್ಗೆ ಇದ್ದರೆ ನಮ್ಮ ಮನಸ್ಸು ಒಂದಿಷ್ಟು ದಿನ ಬೇಸರಿಕೆಯಿಂದ  ಅಳಲುಬಹುದು. ಆದರೆ ಸ್ವಲ್ಪ ದಿನವಾದ ಬಳಿಕ ಇದೇ ಚೆನ್ನಾಗಿದೆ ಎಂಬಂತೆ ಹೊಂದಿಕೊಳ್ಳುತ್ತದೆ. ನಾವು ಮಾನವರೇ ಹೀಗೆ ನೀರಿನ ಥರ. ಸಣ್ಣ ಮನೆಯಿಂದ ದೊಡ್ಡ ಮನೆಗೆ ಬಹುಬೇಗ ಅಡ್ಜಸ್ಟ್ ಆಗುತ್ತೇವೆ ಯಾವ ಸಂಶಯವೂ ಇಲ್ಲ. ಹಿಂದಿದ್ದ ಮನೆಗಿಂತ ಈಗ ಬಂದಿರುವ ಮನೆ ದೊಡ್ಡದೇ ಇದ್ದರೂ ಹೆಂಗಸರು ಮಾತ್ರ ಓಡಾಡುವ ಜಾಗ ಕತ್ತಲು ಎನ್ನುತ್ತಲೋ, ರೂಮಿಗೆ ಮಂಚ (ಕಾಟ್) ಹಾಕಿದ ಮೇಲೆ ಕಾಲಿಡಲು ಜಾಗ ಇಲ್ಲ ಎನ್ನುತ್ತಲೋ, ಹಿಂದಿನ ಮನೆಯಲ್ಲಿ ಇಟ್ಟಿದ್ದ ವಸ್ತುಗಳು ಇಲ್ಲಿ ಸರಿಯಾಗಿ ಜೋಡಿಸಲು ಆಗುತ್ತಲೇ ಇಲ್ಲ ಎನ್ನುತ್ತಲೋ, ಎಂದಿನ ತಮ್ಮ ಅಸಹನೆಯನ್ನು ತೋರ್ಪಡಿಸುತ್ತಲೇ ಇರುತ್ತಾರೆ. ಸತತ ಬದಲಾವಣೆ ಕಾಣುವ ನಮ್ಮ ದೈನಂದಿನ ಜೀವನದಲ್ಲಿ ಮನೆಗಳನ್ನು ಬದಲಾಯಿಸುತ್ತಾ ಇರುವಾಗ ನನಗೆ ಊರಲ್ಲಿರುವ ನಮ್ಮ ಸ್ವಂತ ಮನೆ ನೆನಪಿಗೆ ಬಂದು, ಅಲ್ಲಿ ಕಳೆದ ದಿನಗಳು, ಓಡಾಡಿಕೊಂಡಿದ್ದ ನಮ್ಮ ಬಾಲ್ಯಗಳೆಲ್ಲಾ ಕಚಗುಳಿ ಇಟ್ಟು, “ಅಲ್ಲಿರುವುದು ನಮ್ಮನೆ ಇಲ್ಲಿರುವುದು ಬಾಡಿಗೆ ಮನೆ, ಕಷ್ಟಪಟ್ಟು ದುಡಿಯುತ್ತಿರುವ ಹಣವನ್ನು ಹೋಮ್ ಓನರ್‍ಗಳಿಗೆ ನೀಡುತ್ತೇವೆ ಸುಮ್ಮನೆ, ಹೊಟ್ಟೆ ಪಾಡಿಗಾಗಿ ಈ ಒದ್ದಾಟ ಒಮ್ಮೊಮ್ಮೆ.., ನೆಮ್ಮದಿಯ ಜೀವನವಿದೆ ಊರಲ್ಲಿ ಬೆಚ್ಚನೆ.., ಏನಿದು ಬದುಕೇ ನಿನ್ನ ಮಹಿಮೆ...”ಎನಿಸುತ್ತದೆ.

ಗುರುತ್ವ ... ಇದು ಗುರು ಶಿಷ್ಯರ ಸಂಬಂಧ


      ಪ್ರೀತಿಯ ಮಾತುಗಳಲ್ಲಿ ಸಿಹಿಮುತ್ತು ಎಷ್ಟು ಮುಖ್ಯವೋ? ಹೆಮ್ಮೆಯ ದೇಶಕ್ಕೆ ಪ್ರಭುತ್ವ ಎಷ್ಟು ಮುಖ್ಯವೋ? ಹಾಗೆ ನಲ್ಮೆಯ ಮುಗ್ಧಮನಸಿನ ಮಕ್ಕಳಿಗೆ ಗುರು ಅಥವಾ ಗುರುತ್ವ ಇವೆಲ್ಲಕ್ಕಿಂತ ಮುಖ್ಯ. ಇದೇ ಇಂದಿನ ಜನಾಂಗದ ಕೊರತೆ. ಗುರು ಎಂದರೆ ಭಾರ. ಶಿಷ್ಯನೆಂದರೆ  ಹಗುರವೆಂದರ್ಥವಲ್ಲ. ಗುರು ಎಲ್ಲ ರೀತಿಯಲ್ಲೂ ಭಾರ. ತಿಳಿವಿನಲ್ಲಿ, ಅರಿವಿನಲ್ಲಿ, ಆನಂದದಲ್ಲಿ, ವಿಧ್ಯೆಯಲ್ಲಿ, ಬಗೆ ಬಗೆಯ ಜ್ಞಾನದಲ್ಲಿ.
ಆದರೆ ಶಿಷ್ಯ ಶೂನ್ಯ. ಇನ್ನೂ ಹೆಚ್ಚಿನ ಮಾತಲ್ಲಿ ಹೇಳಬೇಕೆಂದರೆ ಶಿಷ್ಯನೇನನ್ನೂ ಬೇಡುವುದಿಲ್ಲ. ಗುರು ಏನನ್ನೂ ಭರವಸೆ ನೀಡುವುದಿಲ್ಲ. ಶಿಷ್ಯನಲ್ಲಿ ತೃಷೆಯಿದೆ, ಗುರುವಿನಲ್ಲಿ ತಕ್ಕ ಭರವಸೆಯಿದೆ. ಈ ಸಾಮೀಪ್ಯದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ.
 ಶಿಷ್ಯತ್ವ ಒಂದು ಸ್ತ್ರೀತ್ವ. ಶಿಷ್ಯನೊಂದು ಧ್ವಾರ, ಶಿಷ್ಯನೊಂದು ಗರ್ಭ, ಶಿಷ್ಯನೊಂದು ಸ್ವೀಕೃತಿ. ಗುರುತ್ವ ಎಂದೂ ಪುರುಷತ್ವ. ಗುರು ಕೊಡುಗೈ ತುಂಬಿದ ಕೊಡ. ಕೊಡುವುದೊಂದು ಗೊತ್ತು. ಅವನು ಕೊಡಬೇಕು ಅದು ಮಳೆ ತುಂಬಿದ ಮೋಡ.

  ಗುರು ಶಿಷ್ಯ ಪರಿಕಲ್ಪನೆಯೇ ಭಿನ್ನವಾದುದು. ಗುರು ಜ್ಞಾನವನ್ನು ಕೊಡುವುದಿಲ್ಲ. ತನ್ನ ಅಸ್ತಿತ್ವವನ್ನೇ ಸಮಗ್ರವಾಗಿ ಶಿಷ್ಯನೊಂದಿಗೆ ಹಂಚಿಕೊಳ್ಳುತ್ತಾನೆ. ಶಿಷ್ಯನೂ ಅರಸುತ್ತಿರುವುದು ಜ್ಞಾನವನ್ನಲ್ಲ ಬದಲಾಗಿ ತನ್ನ ಸಮಗ್ರ ಅಸ್ತಿತ್ವ ಅಷ್ಟೆ. ಅವನಿದ್ದಾನೆ ಆದರೂ ಅವನಾರಿದ್ದಾನೆಂಬುದು ಅವನೇ ಅರಿತಿಲ್ಲ. ಅದನ್ನೇ ಅರಿಯುವ ಗಾಢ ಯತ್ನ ಅವನದು. ತನಗೆ ತಾನೇ ಬತ್ತಲಾಗುವ ತೃಷೆ ಅವನದು. ಹೀಗೆ ಗುರು ಶಿಷ್ಯರ ಸಂಬಂಧ ಶಿಷ್ಯನಿಗೋ ಒಂದು ಹುಡುಕಾಟ. ಹಾಗೆ ಗುರುವಿಗೂ ಕೂಡ. ಈ ಹುಡುಕಾಟವನ್ನು ಪೂರ್ಣಗೊಳಿಸಲು ಶಿಷ್ಯನಲ್ಲಿ ಆತ್ಮವಿಶ್ವಾಸವನ್ನು ಸೃಷ್ಟಿಸುವುದೇ ಅವನ ಕಾರ್ಯ ಉಳಿದೆಲ್ಲವೂ ತಂತಾನೇ ಘಟಿಸುವುದು.
ಮನೆಯಲ್ಲಿ ತಾಯಿಯ ಪ್ರೀತಿ, ಅವಳ ಪಾಠಗಳೆಷ್ಟು ಮುಖ್ಯವೋ ಅಂತೆಯೇ ಶಾಲೆಯಲ್ಲಿ ಒಬ್ಬ ಒಳ್ಳೆಯ ಗುರು ಅವನ ಮಾರ್ಗದರ್ಶನವೂ ಅಷ್ಟೆ ಅಗತ್ಯ. ಗುರುವಿನ ಕೈಯಲ್ಲಿ ಅಸಾಧ್ಯವಾದದ್ದು ಏನೂ ಇಲ್ಲ . ಹೀಗೆ ಹೇಳುವಾಗ ಒಂದು ಮಾತು ಬಹಳ ಹತ್ತಿರಕ್ಕೆ ನೆನಪಾಗುತ್ತದೆ. ಪ್ರಾರ್ಥನೆಗಾಗಿ ಜೋಡಿಸಿರುವ ಸಾವಿರ ಕೈಗಳಿಗಿಂತ ಹಿರಿದಾದ್ದನ್ನು, ಕೆಲಸ ಮಾಡುತ್ತಿರುವ ಎರಡು ಕೈಗಳು ಸಾಧಿಸಬಲ್ಲದು. ಈ ಮಾತು ನಿಜವಾಗಿಯೂ ಹೌದು ಏನಿಸುತ್ತದೆ. ಗುರು ಎನ್ನುವ ಏರಡು ಅಕ್ಷರದಲ್ಲಿ ಎಷ್ಟು ಭಾವ, ಭಕ್ತಿ, ಭಯ ಅಡಗಿದೆಯೋ ಹಾಗೆಯೇ ಅವರ ಕೆಲಸದಲ್ಲೂ ಕೂಡ ಅಷ್ಟೆ ಪರಿಶ್ರಮ ಅಗತ್ಯವಿದೆ. ಈ ಮೊದಲೇ ಹೇಳಿದ ಹಾಗೆ ನಮ್ಮ ದೇಶದ ಪ್ರಭುತ್ವ ನಿಂತಿರುವುದು ಈ ಗುರು ಅಥವಾ ಗುರುತ್ವದ ಮೇಲೆ ಯಾಕೆಂದರೆ ನಮ್ಮ ಹೆಮ್ಮೆಯ ರಾಷ್ಟ್ರದ ಮಕ್ಕಳನ್ನು ತಿದ್ದಿ, ಬುದ್ದಿ, ಬೆಳೆಸುವುದು ಗುರುವಾದವನ ಕೈಯಲ್ಲೇ ಅಡಗಿದೆ. ಮಾನ್ಯ ಸಿದ್ಧೇಶ್ವರ ಸ್ವಾಮಿಯವರ ಒಂದು ಮಾತು ಎಷ್ಟು ಚಂದಕ್ಕಿದೆ ನೋಡಿ, “ದೋಷಗಳನ್ನು ಬಿಟ್ಟು ಸದ್ಗುಣಗಳನ್ನು ಅರಸೋದು ಗುಣಗ್ರಾಹಿತವಾಗುತ್ತದೆ. ದಿನಪತ್ರಿಕೆ ಹಿಡಿದು  ಒಂದೆರಡು ಗಂಟೆ ಓದಿನೋಡಿ  ಆಮೇಲೆ ನೀವು ಬರೆದಿಟ್ಟ ವಿಷಯಗಳು ಯಾವುದಕ್ಕೆ ಸಂಬಂಧಿಸಿದ್ದೆಂದು ಕಣ್ಣಾಟಿಸಿ. ನಿಮಗೆ ಅಚ್ಚರಿಯಾಗುತ್ತದೆ ಯಾಕೆಂದರೆ ಶೇ. 90 ರಷ್ಟು ಕೆಡುಕಿನ ವಿಚಾರಗಳೇ  ಬರೆದಿಟ್ಟ ಹಾಳೆಯಲ್ಲಿರುತ್ತದೆÉ. ದೃಷ್ಟಿಯನ್ನು ಬದಲಿಸಿ ಒಳ್ಳೆಯದನ್ನೇ ಹುಡುಕುವ ಕೆಲಸ ಶುರುಹಚ್ಚಿ ಕೆಲವೇ ತಿಂಗಳಲ್ಲಿ ಉಲ್ಟಾ ಫಲಿತಾಂಶ ಬಂದಿರುತ್ತದೆ”. ಹೌದು ಇದು ಗ್ಯಾರಂಟಿ. ಬಹುಶಃ ಈ ಮಾತು ಎಲ್ಲದಕ್ಕೂ ಹೋಲಿಕೆಯಾಗುತ್ತದೆ ಎನಿಸುತ್ತದೆ. ಹಾಗೆ ಇಲ್ಲಿ ಕೂಡ. ಒಬ್ಬ ಶಿಕ್ಷಕ ಅಥವಾ ಗುರು ಎಂದರೆ ಕೇವಲ ಹೆಸರಿಗೆ ಮಾತ್ರಾ ಅಲ್ಲ. ಇಡೀ ಸಮಾಜವನ್ನೇ ಉಳಿಸಿ ಬೆಳೆಸುವ ಜವಾಬ್ಧಾರಿ ಅವನ ಕೈಯಲ್ಲಿದೆ. ಅಂತೆಯೇ ಗುರುವೊಬ್ಬ ಒಳ್ಳೆಯವನಾಗಿದ್ದರೆ ಖಂಡಿತಾ ಶಿಷ್ಯಂದಿರು ಒಳ್ಳೆಯವರಾಗಿ ಬೆಳೆಯಲು ಸಾಧ್ಯ. ಮಕ್ಕಳು ಒಳ್ಳೆಯವರಾದರೆ ಸಮಾಜ ಒಳ್ಳೆಯದಾಗಲೂ ಸಾಧ್ಯ. ಯಾಕೆಂದರೆ ಇಂದಿನ ಮಕ್ಕಳೆ ನಾಳೆಯ ಪ್ರಜೆಗಳಲ್ಲವೇ!?...
          ಗುರು ಶಿಷ್ಯವೆಂಬ ಎರಡೂ ಬಿಂದುಗಳು ನಿಧಾನವೋ, ಶೀಘ್ರವೋ ಸ್ಫಂಧಿಸುವವು, ಒಂದಾಗುವವು. ಇಲ್ಲಿ ಮಿಲನ ಶರೀರದಲ್ಲ, ಮನಸ್ಸಿನದ್ದಲ್ಲ, ಬದಲಾಗಿ ಆತ್ಮದ್ದು.
ಎರಡು ದೀಪಗಳು ಸನಿಹ  ಬಂದಾಗ ಒಂದೇ ಜ್ವಾಲೆಯಾದಂತೆ. ಗುರು ಶಿಷ್ಯ ಎರಡು ಒಂದಾದರೆ ಬೆಳಕು ಉನ್ನತಿಯಲ್ಲಿ ಉರಿಯುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಷ್ಟು ಸುಲಭವಲ್ಲ. ಭಾವಗಳ ಭಾವೈಕ್ಯ ಒಂದಾಗಬೇಕು. ಗುರು ಶಿಷ್ಯರ ಪರಂಪರೆ, ಸಂಸ್ಕ್ರತಿ ಪ್ರವಹಿಸಲು, ನಿರರ್ಗಳವಾಗಿ ಹರಿಯಲು, ಹೆಸರುವಾಸಿಯಾಗಲು ಗುರು ಶಿಷ್ಯರ ಶ್ರಮವೂ ಅತ್ಯಗತ್ಯ. ತಾನು ಗುರುವಿನಿಂದ ಕಲಿತ ವಿದ್ಯೆಯನ್ನು ತನ್ನ ಸೃಜನಾತ್ಮಕತೆಯಿಂದ ಪರಿಪಕ್ವಗೊಳಿಸಿ ಶಿಷ್ಯನಿಗೆ ಧಾರೆಯೆರೆಯುವವನೇ ಪರಮ ಶ್ರೇಷ್ಠ ಗುರು. ಸಂಪ್ರದಾಯವೆನ್ನುವುದು ನಿಂತ ನೀರಲ್ಲ, ಪ್ರವಹಿಸುವ ಮಹಾಪೂರ. ಗುರು ಶಿಷ್ಯರಿಬ್ಬರೂ ಒಂದರ ಮುಂದೊಂದು ಹಿಡಿದ ಕನ್ನಡಿಗಳಂತೆ. ಒಂದರೊಳಗೊಂದು ಕಾಣುವ ಪ್ರತಿಬಿಂಬದಂತೆ. ಗುರುವಿನಿಂದ ಶಿಷ್ಯ ಹೇಗೆ ಕಲಿಯುತ್ತಾನೋ, ಗುರು ಶಿಷ್ಯನಿಗೆ ಪಾಠ ಹೇಳುತ್ತಾ ಅನೇಕ ವಿಚಾರಗಳನ್ನು ಅರಿತು, ಓರೆಕೋರೆಗಳನ್ನು ತಿದ್ದಿ ತೀಡಿ ಮುಂದುವರಿಯುತ್ತಾನೆ.
ಶಿಷ್ಯ ಪ್ರವರ್ಧಮಾನನಾಗುತ್ತಾ ಗುರುವಿನ ಹೆಗ್ಗಳಿಕೆಯೂ ವೃದ್ಧಿಸುತ್ತಾ ಹೋಗುತ್ತದೆ. ಇದೇ ಗುರು ಶಿಷ್ಯ ಪರಂಪರೆಯ ಧ್ಯೇಯ, ಆದರ್ಶ. ಹಿಂದಿನಿಂದ ಬಂದಿರುವ ಈ ಗುರು ಶಿಷ್ಯ ಪರಂಪರೆ ಇಂದು ಹಲವಾರೂ ಬದಲಾವಣೆಗಳೊಂದಿಗೆ ಮುಂದುವರಿಯುತ್ತಿದೆ. ಆ ಪರಂಪರೆಗೂ ಸಂಪ್ರದಾಯದ ಸಂಸ್ಕಾರಕ್ಕೂ ಆಧುನೀಕತೆ ಅನೇಕ ಬದಲಾವಣೆಯ ಗಾಳಿ ಸೋಕಿಸಿದೆ. ಆದರೆ ಒಂದಂತು ನಿಜ.
“ಗುರು ಎಂದೂ ಶಿಷ್ಯನ ಕಡೆಗೆ ಆಕರ್ಷಿತ,
ಶಿಷ್ಯನೆಂದೂ ಗುರುವಿನ ಕಡೆಗೆ ಆಕರ್ಷಿತ”...

“ನಮ್ಮೆಲ್ಲಾ ಓದುಗರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು”