Friday, 23 October 2015

ಕಳಚಿತು ಸಾರಸ್ವತ ಲೋಕದ ಮತ್ತೊಂದು ಕೊಂಡಿ...


ಡಾ. ಎಂ.ಎಂ. ಕಲಬುರ್ಗಿಗೆ ಗುಂಡು, ಯುವಕರೇ ನಿಮಗ್ಯಾಕೆ ಇಷ್ಟವಾಯ್ತು ಈ ಸೌಂಡು...
ವಿಚಾರದ ಧನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. 
ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...
ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ!!? 
ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.           ಶಬ್ಧ ಬಳಕೆಯ ಬಗ್ಗೆ ಇರುವ ಜಿಜ್ಞಾಸೆ ಹಾಗೂ ಪಂಥೀಯ ನಿಲುವುಗಳ ಬಗ್ಗೆ ಇರುವ ತಾರ್ಕಿಕ ಧ್ವಂಧ್ವಗಳನ್ನು
ಮನಸ್ಸಲ್ಲಿಟ್ಟುಕೊಂಡು ಈ ತಿಂಗಳ ಸಿರಿ ಬುಲೆಟ್ ಅಂಕಣವನ್ನು ಪ್ರಾರಂಭಿಸುತ್ತಿರುವೆ...
ನನ್ನ ಮಾತು, ಪ್ರಶ್ನೆ ಎಲ್ಲಾ ಯುವಜನಾಂಗಕ್ಕೆ, ನಾವೇಕೆ ಹೀಗೇ ಜಾತಿ, ಮತ, ಭೇಧ,ಎಂಬ ಅಸಹ್ಯಕರ ಭಾವದಿಂದ ಕಚ್ಚಾಡುತ್ತಲೇ ಬಾಳುತ್ತಿದ್ದೇವೆ!?, ಸರಿಯಾಗುವುದು ಯಾವಾಗ!? ಎಂಬಿತ್ಯಾಧಿಗಳು ನನನ್ನು ಈ ಸಂಧರ್ಭ ಜಿಜ್ಞಾಸೆಗೆ ಸಿಲುಕಿ ತಡಕಾಡಿಸುತ್ತಿವೆ. ಮಿತ್ರರೇ ಇದೊಂಥರ ಪ್ರಶ್ನೆ ಎನಿಸಿದರೂ, ಉತ್ತರ ಕಂಡುಕೊಳ್ಳುವ ಮಾರ್ಗ ಗೊತ್ತಿದ್ದರೂ,  ಬಹುಶಃ ಕಷ್ಟಪಟ್ಟು  ಜಿಜ್ಞಾಸೆಯಿಂದಲೇ ಮಥಿಸಿ ಸತ್ಯ ಕಂಡುಕೊಳ್ಳಬೇಕೇನೋ ಗೊತ್ತಿಲ್ಲ..! ಆದರೆ ಒಂದು ಮಾತು ನಿಜ!, ‘ಇಂದು ನಡೆಯುತ್ತಿರುವ ಅನಾಚಾರಕ್ಕೆ, ಗೂಂಡಾಗಿರಿಗೆ ‘ಬೆಳೆಯುತ್ತಿರುವ ನಮ್ಮಂತ ನಡುವಯಸ್ಸಿನ ಯುವಕರುಗಳೇ ಕಾರಣ’. ಅವರ ರೋಷ, ಕೋಶ ಎಲ್ಲವೂ ಬಲಪಂಥಕ್ಕೆ ಸಿಲುಕಿ ಅನಾಚಾರಕ್ಕೆ ಮುಹೂರ್ತವಿಡುತ್ತಿರುವುದು ನಿಜ.
ಬಿಸಿ ರಕ್ತದ ಪಂಥೀಯರೇ ನೀವು ಇದೇ ಸತ್ಯ, ಇದೇ ಹೌದು, ಇದೇ ಸರಿ ಎಂದು ವಾದಿಸಿ ಆದರೆ ನನ್ನ ನಿಲುವೇ ಸರಿ ನಾನೋಬ್ಬನೇ ಧರ್ಮ ಉಳಿಸುವವನು ಎನ್ನುವುದು ಎಷ್ಟು ಐಕ್ಯರೂಪಿ!?. ತಪ್ಪುಗಳ ಲೆಕ್ಕಾಚಾರ ಹಾಕದೇ, ಪ್ರಭುತ್ವದ ಶಾಂತಿ ನೆಮ್ಮದಿಯನ್ನು ಸುಖಿಯಾಗಿಡುವ ಐಕ್ಯರೂಪಿ ಗುಣವನ್ನು ಹೊಂದದೆ, ನನ್ನ ಧರ್ಮವೇ ಶ್ರೇóಷ್ಠ ಎಂದು ವಾದಿಸುವುದು ಎಷ್ಟು ಸರಿ!?. ಹೇಳುವ ಮಾತಿನಲ್ಲಿ ಕೇಳುವ ತಾಳ್ಮೆಯೂ ಇರಬೇಕು. ಇದ್ದರೆ ಚಂದ.
ಯಾಕೆ ಈ ಮಾತು ಎಂದು ನೀವು ಚಿಂತಿಸುತ್ತಿರಬಹುದು ಅದಕ್ಕೆ ಕಾರಣವೂ ಇದೆ,
ಮೊನ್ನೆ ಮೊನ್ನೆ ಅಪರಿಚಿತ ವ್ಯಕ್ತಿಗಳಿಂದ ನಡೆದ ಹಿರಿಯ ಸಾಹಿತಿ ಮತ್ತು ಸಂಶೋಧಕ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿರವರ ಹತ್ಯೆ ನಾಡು  ನುಡಿಯ ಜನರನ್ನು ಬೆಚ್ಚಿ ಬೀಳಿಸಿದ್ದಲ್ಲದೇ ಜನರಲ್ಲಿ ‘ಏನಪ್ಪಾ ಕಾಲ ಯಾಕೆ ಈ ಥರ ಎನ್ನುವ ಯಕ್ಷ ಪ್ರಶ್ನೆ ನೆಲೆಸುವಂತೆಯೂ ಮಾಡಿತ್ತು. ಹಂತಕರು ಯಾಕೆ ಗುಂಡು ಹೊಡೆದು ಅವರನ್ನು ಕೊನೆಗಾಣಿಸಿದ್ದಾರೆ ಎನ್ನುವುದು ಇಂದಿಗೂ ಸರಿಯಾದ ವಿಚಾರಣೆಯಲ್ಲಿ ತಿಳಿಯದಿದ್ದರೂ, ಮಾನವೀಯ ಹೃದಯವಂತರಿಗೆ ನೋವಾದರೂ ಅವರು ಸತ್ತ ಬಗೆ ಹಾಗೂ ವಿಚಾರ ಹಲವಾರೂ ಪಂಥೀಯ ನಿಲುವುಗಳ ಪುಂಡರಿಗೆ ಪಾಯಸವುಂಡಷ್ಟು ಖುಷಿ ನೀಡಿದ್ದು, ಆಶ್ಚರ್ಯವಾಗುತ್ತದೆ. ಇದು ನಮ್ಮ ದೌರ್ಬಲ್ಯವಲ್ಲದೇ ಮತ್ತೇನೆನ್ನಿಸಿ ಪೆನ್ನನ್ನು ಕೈಗೆತ್ತಿಕೊಂಡಿರುವೆ ಅಷ್ಟೇ. ಸತ್ಯ ತಿಳಿಸುವ, ತಮ್ಮನ್ನು ತಮಗೆ ಅರಿಸುವ ಸಣ್ಣ ಮೊಂಡುತನ ನನ್ನದಾದರೂ ಚಿಂತೆಯಿಲ್ಲ. ಖಂಡಿತಾ ಇದು ಹುಚ್ಚುತನ ಮಾತ್ರಾ ಅಲ್ಲಾ.
ನೇರ ನಿಷ್ಠುರ ಮಾತುಗಳು ಹಾಗೂ ಬರವಣಿಗೆಯಿಂದ  ಅನೇಕ ಬಾರಿ ವಿವಾಧಗಳಿಗೂ ಸಿಲುಕಿದವರಾಗಿದ್ದ ಡಾ.ಕಲಬುರ್ಗಿಯ ಗ್ರಂಥ ‘ಮಾರ್ಗ’ದ ಮೊದಲ ಸಂಪುಟದಲ್ಲಿನ  ಎರಡು ಲೇಖನಗಳು 1989ರಲ್ಲಿ ಭಾರಿ ವಿವಾಧ ಸೃಷ್ಟಿಸಿತ್ತು, ಈ ಎರಡು ಲೇಖನಗಳು  ಬಸವಣ್ಣನ ಪತ್ನಿ ಹಾಗೂ ಸೋಧರರಿಗೆ ಸಂಬಂಧಿಸಿದ್ದವಾಗಿದ್ದವು. ಮುಂದೆ ತನಗೆ ತಾನೇ ಮೋಸಮಾಡಿಕೊಂಡಂತೆ ತಮ್ಮ ಲೇಖನಗಳನ್ನು ಬರೆದ ಕಲಬುರ್ಗಿ ಇದು ‘ಬೌದ್ಧಿಕ ಆತ್ಮಹತ್ಯೆ’ ಎಂದು ಮರುಗಿದ್ದರು. ಏರಡು ವರ್ಷಗಳ ಹಿಂದೆ ಅನಂತಮೂರ್ತಿಯವರ ಮಾತೊಂದನ್ನು ತಪ್ಪಾಗಿ ಉಲ್ಲೇಖಿಸಿದ ಪ್ರಕರಣದಲ್ಲಿ ಕಲಬುರ್ಗಿ ಸಮಸ್ತ ಹಿಂದೂ ಜನತೆಯ ಕೆನ್ನಾಲಿಗೆಗೆ ಗುರಿಯಾಗಿದ್ದಲ್ಲದೇ ನೋವಲ್ಲೇ ಸಂಶೊಧನೆಯನ್ನು ಮುಂದುವರಿಸುತ್ತಾ ಸಾಯೋ ದಿನದವರೆಗೂ ಎದೆಗುಂದದೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರನ್ನು ಬೃಹತ್ ಧರ್ಮಧ್ವೇಷಿ ಎಂಬ ಪಟ್ಟವನ್ನು ನೀಡಿದ್ದು, ಸ್ವತಃ ಅವರಿಗೆ ನೋವಿದ್ದರು ಯಾವುದನ್ನೂ ಮನಸ್ಸಲ್ಲಿಟ್ಟುಕೊಳ್ಳದೇ ಬದುಕಿದ್ದರು.
ಆಡಿದ ಮಾತು ಎಲ್ಲವೂ ಸರಿಯಿರಬೇಕೆಂದೇನೂ ಇಲ್ಲ, ಅವರವರ ನಿಲುವು ಅಷ್ಟೆ.  ಒಬ್ಬ ಸಂಶೋಧಕನಾಗಿ  ಅವರಾಡಿದ ಮಾತು ಸಂಶೋಧನೆಯ ಎಳೆ ಇರಬಹುದು ಆದರೆ ಅದನ್ನೇ ಹಿಡಿದು ಕೊನೆಗಾಣಿಸಬಾರದಿತ್ತು. ಅಥವಾ ಅದನ್ನು ತಪ್ಪೆಂದು ನಾವು ಚರ್ಚಿಸುವುದು ಬಿಟ್ಟು, ಸಂಶೋಧನೆಯೇ ಸರಿಯಿಲ್ಲ, ಅವನೊಬ್ಬ ಸಂಶೋಧಕನೇ ಅಲ್ಲ ಎನ್ನುವುದು ಎಷ್ಟು ಸರಿ!? ಸಾರಸ್ವತ ಲೋಕದ ಒಬ್ಬ ಚಿಂತಕ, ಶ್ರೇಷ್ಠ ಬರಹಗಾರ ಸತ್ತನೆಂದರೆ ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆಂದರೆ ನಾವೆಂತ ಮಾನವತಾವಾಧಿಗಳಾದೆವು ನೀವೆ ಹೇಳಿ,
ಸಮಾಜದಲ್ಲಿ ಯಾವೊಬ್ಬ ಸಾಮಾನ್ಯನಾಗಲಿ, ಶ್ರೀಮಂತನೇ ಆಗಿರಲಿನ ಸತ್ತ ಎಂದರೆ ಅವನ ಹಿಂದಿನ ಎಂತಹ ಕೆಟ್ಟ ಕರ್ಮ ಫಲಗಳಿದ್ದರು, ಎಲ್ಲವನ್ನು ಪಕ್ಕಕ್ಕಿಟ್ಟು ಅರ್ಪಣೆಯಾಗಿ ಮನಪೂರ್ಣ ನಮನ ಸಲ್ಲಿಸಬೇಕಾಗಿರುವುದು ನಮ್ಮ ಹಿಂದೂ ಸಂಸ್ಕøತಿಯ ಸಂಸ್ಕಾರ. ಅದನ್ನ ಬಿಟ್ಟು ಹಿರಿಯ ತಲೆ ಉರುಳಿತು, ಸಾವು ಖುಷಿಕೊಟ್ಟಿತು, ಇನ್ನೂ ಕೆಟ್ಟ ಸಾವು ಅವನದಾಗಬೇಕಿತ್ತು, ಇಷ್ಟು ದಿನ ಬದುಕಲು ಬಿಟ್ಟಿದ್ದೆ ಹೆಚ್ಚು ಎನ್ನುವುದು,ಸತ್ತಿದ್ದಕ್ಕೆ ಹಬ್ಬ ಆಚರಿಸುವುದು ಮಾನವೀಯತೆ ಅಲ್ಲ. ಬೇಜಾವಾಬ್ದಾರರಾಗಿ ಉಂಡಾಡಿ ಗುಂಡನ ಹಾಗೆ ಬೊಬ್ಬಿರುವ ಬಾಯಿಯಿದೆ ಎಂದು  ಕತ್ತೆ, ನಾಯಿಗಳಂತೆ ಬೋರ್ಗೆರೆದರೆ ನಮ್ಮ ಸಂಸ್ಕøತಿಯನ್ನು ನಾವೇ ಬೀದಿಲಿಟ್ಟು ಮಾನ ತೆಗೆಸಿಕೊಂಡಂತೆ ವಿನಃ ಕಿಂಚಿತ್ತು ಉಳಿಸಿದಂತಲ್ಲ. ಕಲಬುರ್ಗಿ ಸತ್ತ ನಂತರ ಬಲಪಂಥೀ, ಎಡ ಪಂಥೀಯ ನಿಲುವುಗಳ ಮಧ್ಯದಲ್ಲಿ, ಟಿ.ವಿ ಹಾಗೂ ಸೋಷಿಯಲ್ ಮೀಡಿಯಾಗಳ ಮಾಧ್ಯಮದಲ್ಲೂ ಅನೇಕ ಮಾತುಗಾರಿಕೆಯ ಹೊಡೆದಾಟಗಳಾಯಿತು. ಹಿಂದೂ ಮುಂದು ಯೋಚಿಸದ ಯುವಕರು ತಮಗನಿಸಿದಂತೆ ಸ್ಟೇಟಸ್ ಕೊಟ್ಟು ಮೆರೆದರು. ಇದೆಲ್ಲಾ ಅವರ ಮನೆಯವರಿಗೆ, ಸಂಬಂಧಿಕರಿಗೆ, ಆಗಿದ್ದರೆ ಆಗೇನು ಹೇಳುತಿದ್ದರೋ ನಾ ತಿಳಿಯೆ. ಈ ಹಿಂದೆ ಅನಂತ ಮೂರ್ತಿ ಸತ್ತಾಗಲೂ ಅವರೊಬ್ಬ ಹಿಂದೂ ಧರ್ಮ ವಿರೋಧಿ, ಅವಹೇಳನಕಾರಿ ವ್ಯಕ್ತಿ ಎಂದು ಪಟಾಕಿ ಸಿಡಿಸಿದ ಘಟನೆಗಳು ನಡೆದಿದ್ದು ಮಾಸುವಾಗಲೇ ಮತ್ತೊಮ್ಮೆ ಈ ರೀತಿಯ ಘಟನೆ ಸಂಭವಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ನಾಚಿಗೆ ಗೇಡಿನ ಸಂಗತಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಈ ಜಾತಿ-ಭೇಧ ಎನ್ನುತ್ತಾ ವಿಷ ಬಿಜ ಬಿತ್ತುತ್ತಿರುವವರು ಯಾರೂ!?...  ನಾವೇ ಅಲ್ಲವೇ!?... ಯಾಕೆ ಬೇಕು ಇದು?. ಬರಿಯ ಸ್ವಾತಂತ್ರ್ಯ ದಿನಾಚರಣೆಯ ದಿನ ‘ನಾವು ಭಾರತೀಯರು, ನಾವೆಲ್ಲ ಒಂದೇ, ಅವಳ ಮಕ್ಕಳು’ ಎಂದು ಹೇಳುತ್ತೇವೆ ಆದರೆ ಈಗ್ಯಾಕೆ ಈ ಮೊಂಡುತನ.
 ಯುವಕರೇ ಪದೇ ಪದೇ ಮಾತುಗಳನ್ನೇ ನೆಕ್ಕಿಕೊಳ್ಳುತ್ತಾ ಡೆಮಾಕ್ರಸಿಯ ವಿಷಬೀಜ ಬಿತ್ತುತ್ತಿದ್ದೀರಲ್ಲಾ, ನೀವು ಸಮಾಜದ ಸಹಿಷ್ಣು ಕಾಪಾಡುವ ವ್ಯಕ್ತಿಗಳಾ!?, ನೀವು ನಮ್ಮ ಭಾರತಾಂಭೆಯ ಮಕ್ಕಳಾ!? ನಿಮಗೆ ಕರಣೆ ಮಮಕಾರದ ಭಾವನಾತ್ಮಕತೆಯ ನಲಿವು ಗೊತ್ತಿದ್ಯಾ!?? ಮೊದಲು ಪಂಥಗಳನ್ನು ಬಿಟ್ಟು, ಕಾರಣಿಭೂತರಾದ ಹಂತಕರನ್ನು ಹಿಡಿಯಲು ಸಹಾಯ ಮಾಡಿ.  ಉಗ್ರತ್ವಕ್ಕೆ  ಶಹಬ್ಬಾಸ್ ಎಂದರೆ ನಾವೆಂಥಾ ನೈತಿಕೆಯುಳ್ಳವರು.
ಡಾ.ಎಂ ಎಂ. ಕಲಬುರ್ಗಿಯವರಿಗಾದ ಗತಿಯೇ ನಾಳೆ ನಿಮಗೂ ನಿಮ್ಮ ಮಕ್ಕಳಿಗೂ ಆದರೆ ಅದನ್ನು ಹೀಗೆ ಕಾಣುತ್ತೀರಾ!?, ಸ್ವಲ್ಪ ಚಿಂತಿಸಿ, ಕಚ್ಚಾಟ ನಮ್ಮನ್ನು ಬದಲಿಸುವುದಿಲ್ಲ, ಮೆರೆದಾಟ ಎಂದು ಮೇಲೆ ನಿಲ್ಲಿಸುವುದಿಲ್ಲ.ಬದಲಾಗೋಣ. ಸಂಘ ಸಂಘಟನೆಗಳ ಬೆಂಬಲವಿದೆಯೆಂದು ಗುಂಪುಗಾರಿಕೆ ಸರಿಯಲ್ಲ.ಅವುಗಳು ಇರುವುದು ಒಳ್ಳೆಯ ಕಾರ್ಯಮಾಡಲು ಹೊರತು ನೀಚತನಕ್ಕಲ್ಲ. ನಿಮಗೆ ಹೇಗೆ ಮಾತನಾಡುವ ಹಕ್ಕಿದೆಯೋ ಹಾಗೆ ಎಲ್ಲರಿಗೂ ತನ್ನ ಭಾವನೆ ವ್ಯಕ್ತಪಡಿಸುವ ಹಕ್ಕಿದೆ. ಆಂದ ಮಾತ್ರಕ್ಕೆ ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.
ನಾನೊಬ್ಬ ಮುಖ್ಯಸ್ಥ ನನ್ನ ಹಿಂದೆ ಸುಮಾರು ಜನರ  ನಾಯಿ ಬಾಲವಿದೆ ಎಂದ ಮಾತ್ರಕ್ಕೆ ಕಿರುಚಬಾರದು ಬದಲಾಗಿ ಫ್ರೌಡರಾಗಬೇಕು, ಓದಬೇಕು, ಲೋಕ ಜ್ಞಾನ ಮೈಗೂಡಿಸಿಕೊಳ್ಳಬೇಕು.

ಕಲಬುರ್ಗಿಯವರು ಸಾಹಿತ್ಯ ಚರಿತ್ರೆ, ಗ್ರಂಥ ಸಂಪಾಧನೆ, ಶಾಸನ ಶಾಸ್ತ್ರ, ವಚನ ಸಾಹಿತ್ಯ, ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅಪಾರ. ಐದು ದಶಕಗಳಿಗಿಂತಲೂ ಹೆಚ್ಚಿನ ಕಾಲ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...ಕಲಬುರ್ಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಇತಿಹಾಸ ಕುರಿತಂತೆ ಖಚಿತ ಅಭಿಪ್ರಾಯಗಳನ್ನು ಹೊಂದಿದ್ದರಲ್ಲದೇ, 4 ಸಂಪುಟಗಳಲ್ಲಿ ಅವರು ಪ್ರಕಟಿಸಿದ ‘ಮಾರ್ಗ’ಪುಸ್ತಕದಲ್ಲಿರುವ ಸಂಶೋಧನಾ ಲೇಖನಗಳು ಅವರ ವಿಧ್ವತ್ತಿಗೆ ಸಾಕ್ಷಿಯಾಗಿವೆ. ತಮ್ಮ ಪ್ರಧಾನ ಸಂಪಾದಕತ್ವದಲ್ಲಿ
ವಿವಿಧ ಸಂಪಾದಕರು ಸಂಪಾಧಿಸಿರುವ ಸಮಗ್ರ ವಚನ ಸಂಪುಟಗಳಲ್ಲಿರುವ ಇಪ್ಪತ್ತು ಸಾವಿರ ವಚನಗಳನ್ನು ಆರಿಸುವಲ್ಲಿ ಕೊನೆಯ ಪಕ್ಷ ಮೂವತ್ತುಸಾವಿರ  ವಚನಗಳನ್ನಾದರೂ ನಿಕಟವಾಗಿ ಓದಿದ್ದಾರೆ ಡಾ.ಎಂ ಎಂ. ಕಲಬುರ್ಗಿ..ಉತ್ತರ ಕೊಡಿ ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ???. ಅನಂತಮೂರ್ತಿ ಅಥವಾ ಕಲಬುರ್ಗಿ ಮಾಡಿರುವ ಸಾಹಿತ್ಯ ಕೃಷಿಯ ಒಂದು ಎಳೆಯನ್ನ ನೀವು ಮಾಡಿದ್ದೀರಾ?.. ಅದು ನಿಮ್ಮಿಂದ ಸಾಧ್ಯವಾದರೂ ಇದ್ಯಾ?.. ನಿಮಗೆ ಕೂಗುವುದು, ಬೆಂಕಿಹಚ್ಚುವುದು, ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿಯಲು ಗೊತ್ತು ಆದರೆ ಯೋಚಿಸುವುದು ಮಾತ್ರಾ ಗೊತ್ತಿಲ್ಲ ಅಲ್ವಾ...
ನಾನು ಒಬ್ಬ ಹಿಂದೂ, ನನಗೂ ಕೆಚ್ಚೆದೆ ಇದೆ, ರೋಷವಿದೆ. ಹಾಗಂತ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವಾಗ್ವಾದಗಳ ನೆಲೆಗಳಲ್ಲಷ್ಟೇ ಉಳಿಸದೇ ಒತ್ತಡಗಳನ್ನು ಸೃಷ್ಟಿಸುವಂತಹ ಈ ಬಗೆಯ ಬೆದರಿಕೆಯ ವಾತಾವರಣ ಸೃಷ್ಟಿಸುವುದು ಸಾಮಾಜಿಕ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ.  ಪ್ರಜಾ ಪ್ರಭುತ್ವದಲ್ಲಿ ಅದರಲ್ಲೂ ಕನ್ನಡದ ನೆಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ವಿಚಾರದ ದನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. ವಿಚಾರಗಳನ್ನು ಹತ್ತಿಕ್ಕಿದಷ್ಟೂ ಅವು ಬೆಳೆಯುತ್ತಲೇ ಇರುತ್ತವೆ ಯಾವುದೇ ಭಿನ್ನಾಭಿಪ್ರಾಯವೂ ಕೊಲೆಯ ಹಂತಕ್ಕೆ ಹೋಗಬಾರದು. ಇದೆಲ್ಲವನ್ನು  ಅರಿಯುವ ಅಗತ್ಯ ಇಂದು ನಮ್ಮ ಸಮಾಜಕ್ಕಿದೆ.
 ‘ನಿನ್ನ ಆಭಿಪ್ರಾಯವನ್ನು ನಾನು ಒಪ್ಪುವುದಿಲ್ಲ ಆದರೆ ಅಭಿಪ್ರಾಯವನ್ನು ಹೊಂದುವ ನಿನ್ನ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ’ ಎನ್ನುವುದು ನಮ್ಮ ‘ಪ್ರಜಾಪ್ರಭುತ್ವ’. ಆದರೆ ಇಂದು ಹಾಗಾಗುತ್ತಿಲ್ಲ ಜನ ನೈತಿಕತೆಯನ್ನೇ ಮರೆತು ವರ್ತಿಸುತ್ತಿದ್ದಾರೆ. ಇಲ್ಲಿ ಯಾರೂ ಯಾರ ಮೇಲೂ ಏನೂ ಹೇಳುವಂತಿಲ್ಲ. ಬಲವಂತನ ಮಾತು ಬಡವಂತ ಕೇಳಲೆಬೇಕು. ಇಲ್ಲವಾದರೆ ಜಗಳವಾಗುತ್ತದೆ, ಹೊಡೆದಾಟ ನಡೆಯುತ್ತದೆ. ಅಷ್ಟೇ ಏಕೆ ಪಾಪಿಗಳು ಕೊಲೆಯನ್ನು ಮಾಡುತ್ತಾರೆ. ಇದರಲ್ಲಿ ರಾಜಕೀಯದ ಹಾವು ಏಣಿ ಆಟವೂ ಇದೆ ಎನ್ನುವುದು ತಿಳಿದಿದ್ದರೂ ಜನ ಅಸಹನೆಯ ಭಾವನೆಗಳಿಂದ ಹೊರಬರುತ್ತಿಲ್ಲ...ಹಾಗೆ ಮಾಡುವುದರಿಂದ ನಾವು ಮೂಲಭೂತ ವಾದಿಗಳಂತೆ ಸತ್ಯಶೋಧನೆಯ  ಕಣ್ಣು ಕಳೆದುಕೊಳ್ಳುತ್ತೇವೆ.
ಕೊನೆ ಮಾತು ಸರ್ಕಾರ ಸೇರಿ ಎಲ್ಲರಿಗಾಗಿ... ವಾದ ವಿವಾದಗಳ ನಡುವೆ ಕಲಬುರ್ಗಿಯವರ ಸಾವಿನಿಂದಾಗಿ, ಒಂದು ಬಗೆಯ ವಿಶಿಷ್ಟ ವಿದ್ವಾಂಸ ಮಾರ್ಗದ ಕಡು ಸಂಶೋಧನಾ ನಿಷ್ಠೆಯ ಕೊನೆಯ ಕೊಂಡಿಯೊಂದು ಕಳಚಿ ಹೋದದ್ದರ ಬಗ್ಗೆ ತುಂಬಾ ವಿಷಾಧವಿದೆ. ಹಾಡ ಹಗಲೇ ಸಾಹಿತಿಯೊಬ್ಬನನ್ನು ಗುಂಡೇಟಿನಿಂದ ಕೊಲ್ಲುವ ಪರಿ ನಿಜಕ್ಕೂ ಒಳ್ಳೆಯದಲ್ಲ. ಟೀಕಿಸುವುದನ್ನು ಬಿಟ್ಟು ನಾವೆಲ್ಲ ಎದ್ದೇಳಬೇಕಿದೆ. ಈ ಬಗ್ಗೆ ಸರ್ಕಾರ ತೀವ್ರ ಕಾಳಜಿ ಮತ್ತು ಭಧ್ರತೆ ಇಟ್ಟು ದುಷ್ಟ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಬೇಕು. ಮಾನ್ಯ ಮುಖ್ಯಮಂತ್ರಿಗಳೇ, ಅದು ಯಾರಾದರೂ ಸರಿ ಆದಷ್ಟು ಬೇಗ ವಿಚಾರಿಸಿ ಸಮಾಜದ ನೆಮ್ಮದಿ ಕಾಪಾಡಿ, ಅಬ್ಬರಿಸುವ ಬೊಬ್ಬಿರುವ ಅಶಾಂತಿ ರೂಪಿಸುವ  ಕೋಮುಗಲಭೆಯನ್ನು ಹುಟ್ಟಿಸುವವರನ್ನು ಜಾಡಿಸಿ ಒದೆಯಿರಿ...ಮುಲಾಜೇ ಬೇಡ...

ಪ್ರೀತಿ ಎಂದರೆ ಇದೇನಾ!?...       ರಿಂಗಣಿಸಿದ ಮೊಬೈಲ್ ಸೌಂಡ್‍ಗೆ ಬೇಗ ಬೆಳಗಾಯಿತಾ ಎಂದು ಲಘುಬಗೆಯಲ್ಲಿ ಎದ್ದು ಸ್ಕ್ರೀನ್ ನೋಡಿದರೆ ಆ ಕಡೆಯಿಂದ ಬಾಸ್ ಪೋನ್ . ಟೈಮ್ ಮುಂಜಾನೆ ಎಂಟರ ಸಮಯ. ರಾತ್ರಿ ರೀಡಿಂಗ್ ಗೆ ಕುಳಿತಿದ್ದರಿಂದ ಮಲಗೋದು ಕೊಂಚ ತಡವಾಗಿದ್ದೆ ಅಷ್ಟೊಂದು ನಿದ್ದೆಗೆ ಕಾರಣವಾಗಿತ್ತೋ ಏನೋ ಗೊತ್ತಿಲ್ಲ. ಆಲ್ ಮೋಸ್ಟ್ ಎಲ್ಲರೂ ಕಾಳಜಿಯಿಂದ ನನಗೆ ಬೈಯೋದು ಇತ್ತೀಚೆಗೆ ಮಾಮೂಲಾಗಿತ್ತು. ಸರಿ ಟೈಮ್ ಗೆ ಊಟ ತಿಂಡಿ ಮಾಡಲ್ಲ, ಸರಿಯಾದ ಸಮಯಕ್ಕೆ ಮಲಗಲ್ಲ ಅಂತ ಕೇಳಿಸಿಕೊಂಡು ಕೇಳಿಸಿಕೊಂಡು ಕಿವಿಗೆ ಜಿಡ್ಡು ಹಿಡಿದಂತಿತ್ತು.
    ‘ಏನಪ್ಪಾ ಇದು ಬೆಳಿಗ್ಗೆ ಬೆಳಿಗ್ಗೆ ಬಾಸ್ ಫೋನ್ ಮಾಡುತ್ತಿದ್ದಾರೆ’ ಎಂದು ಗೊಂದಲದಲ್ಲೇ ಮುದ್ದಾದ ಮನಸ್ಸಿಂದಲೇ ಹಸಿರು ನಿಶಾನೆಯತ್ತ ಕೈ ಜಾರಿಸಿ ರಿಸಿವ್ ಮಾಡಿ ‘ಗುಡ್ ಮಾರ್ನಿಂಗ್, ಹೇಳಿ ಸರ್’ ಎಂದೇ... ‘ಗುಡ್ ಮಾರ್ನಿಂಗ್ ಸ್ಯಾಂಡಿ’ ಇವತ್ತು ಸ್ವಲ್ಪ ಬೇಗ ಬನ್ನಿ, ಒಂದು ಫಕ್ಷನ್ ಇದೆ ಹೋಗೋಣ. ಮ್ಯಾಗಜಿನ್ ಕಡೆಯಿಂದ ನೀವು ನಾವು ಹೋಗಿ ಒಂದಿಷ್ಟು ಪ್ರಚಾರ ಮಾಡಿ ಬರೋಣ ಎಂದರು. ಹೌದಾ!!!, ಹಾ ಆಯ್ತು ಸರ್ ಇದೋ ಈಗ್ ಹೊರಟೆ ಎಂದವನೆ, ಗೀಝರ್ ಆನ್ ಮಾಡಿ ಸ್ನಾನಕ್ಕೆ ರೆಡಿ ಆದೆ. ಎಲ್ಲರ ಥರ ಗಂಟೆಗಟ್ಟಲೇ ಸ್ನಾನ ಗೃಹದಲ್ಲಿ ಕಾಲ ಕಳೆಯುವ ಅಭ್ಯಾಸ ನನ್ನದಲ್ಲ. ಏರಡೇ ನಿಮಿಷ. ಹಾಗೆ ಹೋಗಿ ಹೀಗೆ ಬರುವುದಂತ ಅಮ್ಮ ಯಾವಾಗಲೂ ಹೇಳುತ್ತಿದ್ದಳು.ಅದು ನಿಜವೆ ಬಿಡಿ. ನಂತರ ಬಡಬಡನೇ ಬಟ್ಟೆಗೆ ಐರನ್ ಪೋಣಿಸಿದೆ. ಕೈಗೊಂದು ವಾಚ್, ಹಣೆಗೊಂದು ಕುಂಕುಮದ ಬಿಂದು, ಕಿಸೆಯಲ್ಲೊಂದು ಖರ್ಚಿಫ್, ತಲೆಗೆ ಹೆಲ್ಮೆಟ್, ಕಿವಿಗೊಂಡು ಹೆಡ್ ಫೋನ್, ಹಿಂದಿನ ಜೋಬಲ್ಲಿ ಪಾಕೆಟ್ ಜೊತೆಗೆ ಸಣ್ಣದೊಂದು ಬಾಚಣಿಗೆ.., ದಿನನಿತ್ಯ ನಾನು ಮನೆಯಿಂದ ಹೊರಬೀಳಬೇಕಾದರೆ ಘನವೆತ್ತ ಬದುಕಲ್ಲಿ ಈ ಮಾಮೂಲಿಗಳು ಪ್ರತಿದಿನ ಅವಶ್ಯವಾಗಿ ಇರಲೇಬೇಕು. ಅಷ್ಟಿದ್ದರೇ ಏನೋ ಒಂದು ರೀತಿಯ ಸಮಾಧಾನ. ಇಲ್ಲವೆಂದರೇ ಏನೋ ಕಳೆದುಕೊಂಡಂತೆ ಫೀಲ್ ಅಷ್ಟೆ.
ಪ್ರತಿದಿನದಂತೆ ಹೆಡ್ ಫೋನ್‍ನನ್ನು ಕಿವಿಗೆ ಸಿಕ್ಕಿಸಿಕೊಂಡು, ಗುನುಗುನಿಸಲು ಮೆಲ್ಲನೆ ಒಂದು ಹಾಡನ್ನು ಹಾಕಿಕೊಂಡು, ನನ್ನ ರೆಂಜ್‍ನ ಮಿನಿಮಮ್ ಸ್ಫೀಡ್‍ನಲ್ಲಿ ಬೈಕ್ ಏರಿ ಸರಾಗವಾಗಿ ಹೊರಟೆ.
ಅದಾಗಲೇ ಶಾಲಾವಾಹನಗಳು, ಅಟೋರಿಕ್ಷಾಗಳು, ಬಸ್‍ಗಳೆಲ್ಲ ಮಕ್ಕಳನ್ನು ಶಾಲೆಗೆ ತಲುಪಿಸುವ ಕೆಲಸವನ್ನು ಪಾರಂಭಿಸಿ, ಎಲ್ಲೆಂದರಲ್ಲಿ ಪುಟಾಣಿಗಳನ್ನು ತುಂಬಿಸಿಕೊಳ್ಳುತ್ತಿದ್ದವು. ಅಷ್ಟೆಲ್ಲಾ ಬದುಕು ಭಿನ್ನಣದ ನಡುವೇ ಆ ದಿನ ದಾರಿ ಮಧ್ಯೆ ಕಂಡ ಒಂದೇ ಒಂದು ಸೀನ್ ಮಾತ್ರಾ ನನ್ನ ಕಣ್ಣನ್ನು ಸೆಳೆದು ಮನಸ್ಸನು ಮುಟ್ಟಿ ಬೈಕ್‍ನ ವೇಗವನ್ನು ತಗ್ಗಿಸಿ, ನಿಲ್ಲಿಸುವಂತೆ ಮಾಡಿತು.
ನೋಡಿದ್ದಿಷ್ಟೇ...
ತಾಯಿಯೊಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಹಿಡಿದುಕೊಂಡು ಎದುರು ಕಾರ್ನರ್ ರೋಡ್‍ನಿಂದ ಓಡುತ್ತಾ ಬರುತ್ತಿದ್ದಳು. ಆಕೆ ನೋಡಲು ಎಷ್ಟೊಂದು ಕುರೂಪಿಯಾಗಿದ್ದಾಳೆಂದರೆ, ಶಿ ಇಸ್ ಕಂಪ್ಲೀಟ್ಲಿ ಲುಕ್ ಲೈಕ್ ಔಟ್ ಆಫ್ ಬ್ಲಾಕ್...                                                                                                                    
                                                                                 ರಸ್ತೆ ಬದಿ ಬೇಡಲು ಬರುವ ಬಿಕ್ಷುಕಿಯನ್ನಾದರೂ ನೋಡಬಹುದು ಆದರೆ ಅದಕ್ಕಿಂತಲೂ ವಕೃವಾಗಿ, ವಿರೂಪಿಯಾಗಿ, ಕುರೂಪಿಯಂತೆ ಹರಿದ ಸೀರೆ ಉಟ್ಟು, ಒಂದೇ ಮಗ್ಗಲಲ್ಲಿ ಮಲಗಿ ಎದ್ದವಳಂತೆ ಗಿಜಿ-ಗಿಜಿ ಕೂದಲಲ್ಲಿ ಒಂದಿಷ್ಟು ಮಣ್ಣ ಮೆತ್ತಿದಂತೆ, ಬಾಯಲ್ಲಿರುವ ಹಲ್ಲು ತಂಬಾಕು ಸೇವನೆಯಿಂದ ಕಪ್ಪಾಗಿಸಿಕೊಂಡಿದ್ದಂತೆ, ಸಂಪೂರ್ಣ ಅನಾಥಳ ಹಾಗೆ ಬಾಳಿ ಬದುಕಿ, ಭಿನ್ನವಾಗಿ ಕರಾಬಾಗಿ ಕಾಣುತ್ತಿದ್ದಳು. ಆದರೆ ತನ್ನಪ್ಪುಗೆಯಲ್ಲಿದ್ದ ಕಂದನನ್ನು ಮಾತ್ರಾ ಅದೆಷ್ಟು ಸಿಂಗರಿಸಿ, ಮುದ್ದಾಗಿಸಿ ಅಂದವಾಗಿರಿಸಿದ್ದಳೆಂದರೆ ರಸ್ತೆ ಮೇಲಿರುವ ಜನರ ದೃಷ್ಟಿ ಆ ಮಗುವಿಗೆ ತಾಗುವುದೇನೋ ಅನ್ನಿಸುವಂತಿತ್ತು. ವಿಶೇಷವೇನೆಂದರೆ ಅವಳಂದದ ಬಗ್ಗೆ ಅವಳಿಗೇನೂ ಬೇಸರವಿರಲಿಲ್ಲ ತನ್ನ ಮಗುವಿನ್ನು ಸಿಂಗರಿಸಿ ಸ್ಕೂಲ್ ಬಸ್ ಗೆ ಹತ್ತಿಸಲು ಎಷ್ಟೊಂದು ಉತ್ಸುಕಳಾಗಿ ಆಯಾಸವಿಲ್ಲದೇ ಓಡಿ ಬರುತ್ತಿದ್ದಳೆಂದರೆ ಅದನ್ನು ನೋಡುತ್ತಲೇ ನಾನೊಂದು ಕ್ಷಣ ತನ್ಮಯನಾದೆ. ಬಸ್ ಇನ್ನೇನು ಮುಂದೆ ಚಲಿಸುವುದು ಎನ್ನುವಷ್ಟರಲ್ಲಿ ಬಾಗಿಲಿನೊಳಗೆ ಹತ್ತಿ ಮಗುವಿಗಾಗಿ ಕಾದಿರಿಸಿದ್ದ ಸೀಟ್ ನಲ್ಲಿ ಕೂರಿಸಿ, ಮೆಲ್ಲನೆ ಕೆಳಗೆ ಎಗರಿ ಮುಗ್ಧ ಕಂದಮ್ಮಗೆ ಕೈ ಮಾಡಿದ್ದಳು ಟಾಟಾ ಟಾಟಾ ಎಂದು. ಅದಕ್ಕುತ್ತರವಾಗಿ ಮಗಳ ಎರಡು ಕೈಗಳ ಜೊತೆಗೆ ಬಸ್‍ನಲ್ಲಿದ್ದ ಹತ್ತಿಪ್ಪತ್ತು ಮಕ್ಕಳು ತಮ್ಮೆಲ್ಲ ತೊಳನ್ನು ಮೇಲಕ್ಕೆತ್ತಿ ಅವಳಿಗೆ ಹೋಗಿ ಬರುವೆವು ಅಮ್ಮಾ ಎನ್ನುವಂತೆ ಟಾಟಾ ಮಾಡುತ್ತಿದ್ದದ್ದೂ ನೋಡಿದರೆ ಎಂತಹವರಿಗೂ ಸನ್ನಿವೇಶ ಮನ ತಟ್ಟದೆ ಇರದು. ನಿಜಕ್ಕೂ ಆ ತಾಯ ಜೀವ ಆ ಸಂಧರ್ಭ ಎಷ್ಟು ಖುಷಿ ಪಟ್ಟಿರಬಹುದು ಅಲ್ವಾ...
ಪ್ರತಿಯೊಂದರಲ್ಲೂ ಶಿಸ್ತು, ಅಂದ ಚಂದ ಲೆಕ್ಕ ಹಾಕುವ ನಾವು, ಇಂತಹ ಅದೆಷ್ಟೋ ಪ್ರೀತಿಗಳನ್ನು ಕಳೆದುಕೊಂಡಿರುತ್ತೇವೋ ದೇವನೇ ಬಲ್ಲ.  ಯಾವ ಕುಹಕವೂ ಇರದ ಮುಗ್ಧ ಮನಸ್ಸಿನ ನಗುವನ್ನು ಹೊಂದಿರುವ ಆ ಪುಟ್ಟ ಮಕ್ಕಳಿಗೆ ಯಾವ ಭೇಧ ಭಾವವು ಇಲ್ಲದೇ ಪ್ರೀತಿಸುವ ಹೃದಯ ಎಲ್ಲಾ ತಿಳಿದ-ಬೆಳೆದ ನಮಗೆ ಇಲ್ಲವಲ್ವಾ...ಎಂದು ಮನ ಮೌನಮುರಿಯಿತು. ಜೀವನ ಜೋಪಾನ ಮಾಡುವ ತಾಯಿಯ ಪ್ರೀತಿ ಪ್ರತಿ ಮಕ್ಕಳು ಎಷ್ಟು ಬಡತನವಿದ್ದರೂ ಸಿರಿತನದಲ್ಲೇ ಹೇಗೆಲ್ಲಾ ಅನುಭವಿಸುತ್ತಾರೆ ಎನ್ನುವುದನ್ನು ಆ ಒಂದು ಸೀನ್ ಕಣ್ಮುಂದೆ ಬಂದು ತೋರಿಸಿತು.ಮಕ್ಕಳ ಪ್ರೀತಿ ಒಂದು ಕಡೆ, ತಾಯಿಯ ಪ್ರೀತಿ ಇನ್ನೊಂದು ಕಡೆ ಇವೆರಡನ್ನು ನೋಡಿ ಮನಸ್ಸು ಕೇಳಿತು ಪ್ರೀತಿ ಎಂದರೆ ಇದೇನಾ!???

                                                             
                                                              *******************


ಇದೊಂದು ಅನ್ ಎಕ್ಸಫೆಕ್ಟೆಡ್ವ ಇನ್‍ಸಿಡೆಂಟ್...
                 ಈ ಘಟನೆ ನಡೆದಿದ್ದು ಮೊನ್ನೆ ಮೊನ್ನೆ . ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಮಗಳ ಮದುವೆಗೆ ಎಲ್ಲರಂತೆ ನಮಗೂ ಆಮಂತ್ರಣವಿತ್ತು. ಕಳೆದ ಎರಡು ದಿನದಿಂದಲೂ ಅರಮನೆ ಮೈದಾನದಲ್ಲಿ ದೊಡ್ಮನೆ ಮದುವೆಯದೇ ಗಲಾಟೆ, ಇಡೀ ಅರಮನೆ ಮೈದಾನವನ್ನೇ ರೊಚ್ಚಿಗೆಬ್ಬಿಸಿತ್ತು. ಸ್ಟಾರ್ ನಟನ ಮಗಳ ಮದುವೆ ಎಂದರೆ ನಾರ್ಮಲ್ಲಿ ಎಲ್ಲಾ ಸ್ಟಾರ್ಸ್‍ಗಳು ಹಾಜರಾಗಿಯೇ ಆಗುತ್ತಾರೆ. ನಮ್ಮ ಜನತೆ ಮನೆಯಲ್ಲಿ ದೇವರನ್ನು ಪೂಜಿಸುತ್ತಾರೋ ಇಲ್ಲವೋ!? ಆದರೆ ಸಿನಿಮಾ ನಟ/ನಟಿಯನ್ನು ಮಾತ್ರಾ ದೇವರಿಗಿಂತ ಎತ್ತರದಲ್ಲಿ ನಿಲ್ಲಿಸಿ, ಅಯ್ಯೋ ಅವರನ್ನು ನೋಡುವುದೇ ಒಂದು ಭಾಗ್ಯವೆನ್ನುತ್ತಾರೆ. ಅಪ್ಪಿ ತಪ್ಪಿ ಅವರನ್ನು ನೋಡಿದರೆ ತಿರುಪತಿ ತಿಮ್ಮಪ್ಪನ ಮೊದಲ ದರ್ಶನ ಮಾಡಿದ್ದಕ್ಕಿಂತಲೂ ದೊಡ್ಡ ಖುಷಿ ಘೋಷವನ್ನು ಸಾರಿ-ಸಾರಿ ನೆನೆದು ಹಲುಬುತ್ತಾರೆ. ಹಿಂದಿನ ದಿನದಂತೆ ಆ ದಿನವೂ ಚಿತ್ರರಂಗದ ಅನೇಕಾನೇಕ ಗಣ್ಯರೂ ಆಗಮಿಸಿ ಆಶೀರ್ವಧಿಸಿ ವಧು-ವರರನ್ನು ಹರಸುತ್ತಿದ್ದರೂ. ನಮ್ಮದೂ ಅದೇ ನಡೆ. ಅಂತೂ ನಾನು, ಭಾಸ್, ಅಭಿ, ರಾಜೇಶ್ ನಾಲ್ಕು ಮಂದಿ ಜನಗಳ ಮಧ್ಯೆ ಸಿಕ್ಕಿಹಾಕಿಕೊಂಡು, ಅಲ್ಲೋ-ಇಲ್ಲೋ ನಾಲ್ಕಾರೂ ಆಫಿಸರ್‍ಗಳ ಪರಿಚಯವಿದ್ದ ಕಾರಣ, ವಿ.ವಿ.ಐ.ಪಿ ಎಂಟ್ರೆನ್ಸ್‍ನಲ್ಲಿ ಒಳನುಗ್ಗಿ, ಒಂದಷ್ಟು ಹೊತ್ತು ಸ್ಟೇಜ್‍ನಲ್ಲಿ ನಿಂತು, ನಂತರ ಊಟವನ್ನು ಮುಗಿಸಿ, ಹೊರನಡೆಯಲು ಅಣಿಯಾದೆವು. ಎಲ್ಲಿ ಕಂಡರೂ ಪೊಲೀಸ್ ಬಂದೋಬಸ್ತು ಹೇರಳವಾಗಿತ್ತು. ಅದು ದೊಡ್ಮನೆ ಮದುವೆಯಾದ್ದರಿಂದ, ಭೋಜನ ಶಾಲೆಯಲ್ಲಿ ವಿವಿಧ ತಿಂಡಿ ತಿನಿಸುಗಳ ಜೊತೆಗೆ ಬಂದ ಪ್ರತಿಯೊಬ್ಬರಿಗೂ ಹೊಸ ಹೊಸ ಪ್ಲೇಟನ್ನು ಆಗತಾನೆ ಕವರ್‍ನಿಂದ ತೆಗೆ-ತೆಗೆದು ಕೊಡುತ್ತಿದ್ದರು. ಬಹುಶಃ ಅದನ್ನು ನೀಡುವವನಿಗೆ ನಾನ್ಯಾರಿಗೆ ನೀಡುತ್ತಿರುವೆ ಎನ್ನುವ ಪರಿವೇ ಇರಲಿಕ್ಕಿಲ್ಲ ಯಾಕೆಂದರೆ ಅದು ಲಕ್ಷ ಜನರಿಗೂ ಮಿಕ್ಕಿ ಸೇರಿದ್ದ ಮದುವೆಯ ಸಂಭ್ರಮ.
ಅವನ್ಯಾರೋ ಗೊತ್ತಿಲ್ಲ. ಬಡವನಂತೆ ಕಾಣುತ್ತಾನೆ. ಶಿವಣ್ಣನ ಅಭಿಮಾನಿಯೋ ಅಥವಾ ಎಲ್ಲ ಬರುತ್ತಾರೆ ಅಂತ ನಾನು ಮದುವೆಗೆ ಹೋಗಿ ಊಟ ಮಾಡಿ ಬರೋಣವೆಂದು ಬಂದಿದ್ದಾನೆಯೋ ಗೊತ್ತಿಲ್ಲ!!!. ಆದರೆ ಊಟ ಮಾಡಿದಾತ ಮತ್ತೊಮ್ಮೆ ಪ್ಲೇಟ್ ಕೊಡುವ ಕೌಂಡರ್ ಗೆ ಹೋಗಿ ಹೊಸತೊಂದು ಕವರ್ ಹೊಂದಿರುವ ಪ್ಲೇಟ್ ತೆಗೆದುಕೊಂಡು ಲಾಗ್ ಔಟ್ ಆಗುವ ಗೇಟ್‍ನ ಕಡೆಗೆ ನಮ್ಮ ಜೊತೆನೆ ಹೊರಬರುತ್ತಿದ್ದ. ಉಳಿದ ಎರಡು ಮೂರು ಗೇಟ್‍ನಲ್ಲಿ ಅವನ ಕೈಲಿರುವ ಪ್ಲೇಟ್ ಪೊಲೀಸ್ ಮಾಮರ ಕಣ್‍ಗೆ ಬಿಳದೇ ಕೊನೆಯ ಗೇಟ್ ದಾಟಿ ಇನ್ನೇನು ಹೊರಗೆ ಹೋದ ಎನ್ನುವಷ್ಟರಲ್ಲಿ ಒಬ್ಬ ಪೇದೆಯ ಕಣ್ಣಿಗೆ ಇವನ ಕೈಲಿರುವ ಪ್ಲೇಟ್ ಕಂಡು ಬಂದು ‘ಲೇ ಲೋಫರ್ ಎಲ್ಲಿಗೆ ಪ್ಲೇಟ್ ತಗೊಂಡು ಹೋಗ್ತಿದ್ದೀಯಾ? ಊಟ ಮಾಡಲು ಪ್ಲೇಟ್ ಕೊಟ್ಟರೆ ಅದನ್ನು ಕದ್ದು ಒಯ್ಯುತ್ತಿದ್ದೀಯಾ!? ಎಂದು ಹಿಡಿದುಕೊಂಡ. ಪೊಲೀಸ್ ಮಾಮನೇನೋ ತಾನೋಬ್ಬ ಘನಂಧಾರಿ ಎಂಬಂತೆ ಆ ಯುವಕನನ್ನು ಅಷ್ಟು ಜನರ ಮಧ್ಯೆ ಕರೆದು, ನಾಲ್ಕಾರೂ ಬೈಗುಳವನ್ನಿತ್ತು, ಇಲ್ಲೇ ಇಟ್ಟು  ಹೋಗು ಎನ್ನುವಂತೆ ಗಧರಿಸಿ ಅವಮಾನಿಸಿ, ಮೂಲೆಯೊಂದರಲ್ಲಿ ಪ್ಲೇಟನ್ನು ಇರಿಸಿ ಅವನನ್ನು ಕಳುಹಿಸಿದ ಆದರೆ ಇದೆಲ್ಲವನ್ನು ಜನರ ಮಧ್ಯೆದಲ್ಲಿ ನಾನೊಬ್ಬನಾಗಿ  ನೋಡುವಾಗ ಒಂದೆರಡು ಕ್ಷಣ ಮನಸು ಆತನ ಮನದಿಂಗಿತ ಹೀಗಿರಬಹುದೇನೋ ಎಂದು ಮರುಗಿತು.
“ನಾನೊಬ್ಬ ಬಡವ, ಈ ಪ್ಲೇಟ್‍ನ್ನು ದುಡ್ಡು ಕೊಟ್ಟು ಖರೀಧಿಸಲು ಸಾಧ್ಯವಿಲ್ಲ. ಬಹುಶಃ ಇಷ್ಟೊಂದು ಚೆಲ್ಲಾಪಿಲ್ಲಿಯಾಗಿರುವ ಪ್ಲೇಟ್‍ಗಳಲ್ಲಿ ಒಂದನ್ನು ನನ್ನ ಮನೆಗೆ ತೆಗೆದುಕೊಂಡು ಹೋದರೆ ನನ್ನ ಹೆಂಡತಿ ಅಥವಾ ಮಗ/ಮಗಳು ಖುಷಿಯಾಗಬಹುದು. ಅವರಿಗೆಲ್ಲಾ ಇಷ್ಟೊಂದು ದೊಡ್ಡ ಸಮಾರಂಭಕ್ಕೆ ಬಂದು ಊಟ ಮಾಡಲು ಆಗುವುದಿಲ್ಲ. ಅಟ್‍ಲೀಸ್ಟ್ ಇಂತ ಪ್ಲೇಟ್‍ಗಳಲ್ಲಾದರೂ ಊಟ ಮಾಡಿ ಖುಷಿ ಪಡಲಿ, ಮಗ/ಮಗಳಾದರೂ ಖುಷಿಯಿಂದ ನಲಿಯಲಿ, ಇದರಲ್ಲಿ ನನ್ಮಗ/ಮಗಳು ಊಟ ಮಾಡುತ್ತಾಳೆ ಎನ್ನುವಂತಿತ್ತೋ ಏನೋ” ಎಂದೆನಿಸಿತು. ಅದಾಗಲೇ ಮನದೊಳಗಿಂದ ಪ್ರೀತಿ ಎಂದರೆ ಇದೇನಾ ಎನ್ನುವ ಭಾವ ಹೊರಹೊಮ್ಮಿ ಕಂಬನಿ ಕಣ್ಣಿನಂಚಲಿ ಜಾರಿತ್ತು...
“ಅರಿವಿಲ್ಲದೇ ಆದ ಒಲವಿನ ಚೆಲುವು ತಿಳಿಸಿ ಕೇಳಿತು ಪ್ರೀತಿ ಎಂದರೆ ಇದೇನಾ!?..” ನೀವೇ ಹೇಳಿ ಉತ್ತರ...


ಅಭಿಮಾನಿಗಳ ಅಣ್ಣ, ಕನ್ನಡದ ಯಜಮಾನ ಡಾ. ವಿಷ್ಣುವರ್ಧನ್...


         ಸಿನಿಮಾ ಅಂದರೆ ಹಾಗೆ ಅಲ್ಲಿ ಅನೇಕ ಪ್ರತಿಭೆಗಳು ದಿನದಿಂದ ದಿನಕ್ಕೆ ಅನಾವರಣಗೊಳ್ಳುತ್ತಲೇ ಇರುತ್ತಾರೆ. ಆದರೆ ಏಷ್ಟೇ ಹೊಸ ಪ್ರತಿಭೆಗಳು ಬಂದರೂ ಹಿಂದೆ ಇದ್ದ, ಕನ್ನಡ ಸಿನಿ ಜಗತ್ತನ್ನು ವಿಶಾಲಗೊಳಿಸಿ, ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ತಂದಿತ್ತ, ಅನೇಕ ಮಹನೀಯರಿಗೆ ಎಂದಿಗೂ ಇಂದಿನ ಪ್ರತಿಭೆಗಳು ಸಾಟಿಯಾಗಲಾರದು. ಅಂದು ನಟನೆಯಲ್ಲಿ ರಂಗಭೂಮಿ ಹಿನ್ನೆಲೆಯ ಅಭಿನಯದ ಸೊಗಡಿತ್ತು, ಅಲ್ಲಿ ಕಷ್ಟದ ಕೆಲಸವಿತ್ತು, ಗಂಜಿ ನೀರಿಗೂ ಛಲದ ಬದುಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞಾನದ ಕೊರತೆಯಿತ್ತು. ಇಂದಿರುವ ತಾಂತ್ರಿಕತೆಯ ಬಳಕೆ ಅಂದು ಇರಲಿಲ.್ಲ ಆದರೂ ಇರುವ ಟೆಕ್ನಾಲಜಿಯಲ್ಲೇ ಮನಮುಟ್ಟುವ ಸಿನಿಮಾ ನೀಡುತ್ತಿದ್ದವರು ಆಗಿನ ಮೇರು ಪ್ರತಿಭೆಗಳು.
ಏನೇ ಹೇಳಿ ಅವರಿಗೆ ಅವರೇ ಸಾಟಿ. ವರ್ಷಗಳ ಹಿಂದೆ ಮೂಡಿ ಬಂದ ಅನೇಕ ನಟ, ನಟಿ, ನಿರ್ದೇಶಕ, ಸಹಕಲಾವಿದರನ್ನು  ನೆನೆಸಿಕೊಂಡರೇ ಕಣ್ಮುಂದೆ ಅನೇಕಾನೇಕ ಕಾಣದ, ಕಾಣುವ ಪ್ರತಿಭೆಗಳು ಹೊರಹೊಮ್ಮುತ್ತವೆ. ಮಹಾನ್ ಮೇರು ನಟರ ಸಾಲೇ ಜಿನುಗುತ್ತದೆ. ಅಂತಹ ನಟನಾ ವೀರರ ಪೈಕಿಯಲ್ಲಿ ನಮಗೆ ಕಾಣುವ ವಿಶೇಷ ಪ್ರತಿಭೆ ಅಂದರೆ ಅದು ‘ಸಾಹಸಸಿಂಹ ಡಾ. ವಿಷ್ಣುವರ್ಧನ್’.
       

ಹೌದು.., ಅವರೊಂದು ಸಂಪತ್ತು, ಚಿತ್ರರಸಿಕರ ಪಾಲಿನ ಮುತ್ತು, ನಿರ್ಮಾಪಕರ ಪಾಲಿನ ಕಾಮಧೇನು, ಅಭಿಮಾನಿಗಳ ಪ್ರೀತಿಯ ಅಣ್ಣ. ‘ ನಾನು ಅಭಿಮಾನಿಗಳನ್ನು ಪ್ರೀತಿಸುತ್ತೇನೆ, ಅವರ ಆಶೀರ್ವಾದದಿಂದಲೇ ನಾನಿಲ್ಲಿ ಇದ್ದೇನೆ. ಅವರ ಪ್ರೀತಿಗೆ ನಾನೆಂದು ಋಣಿ’ ಎಂದು ಬದುಕಿನ ತುಂಬಾ ಅಭಿಮಾನಿಗಳನ್ನು ಪ್ರೀತಿಸುತ್ತಲೇ ಇದ್ದ ಚಿರಋಣಿ. ಇಂದಿಗೂ ವಿಷ್ಣು ಎಂದರೆ ಅಭಿಮಾಣಿಗಳಲ್ಲಿ ಎನೋ ಒಂದು ರೀತಿಯ ಪುಳಕ. ಅವರ ನೆನಪು ಅಂದು-ಇಂದು-ಮುಂದು ಎಂದೆಂದೂ ಚಿರಸ್ಥಾಯಿ. ರಕ್ತಧಾನ, ನೇತ್ರಧಾನ, ಹೃದಯ ತಪಾಸಣೆ, ಕಣ್ಣಿನ ಪರೀಕ್ಷೆ, ಅನ್ನದಾನ, ವಿವಿಧ ವಿನೋಧಾವಳಿಯ ಮೂಲಕ ಪ್ರತಿ ದಿನ, ಪ್ರತಿ ನಿಮಿಷ ಅಭಿಮಾನಿಗಳು ಯಜಮಾನನನ್ನು ತಾವು ಮಾಡುವ ಸಮಾಜ ಸೇವೆಯ ಮೂಲಕ ಕಾಣುತ್ತಲೇ ಇರುತ್ತಾರೆ, ಇದ್ದಾರೆ ಕೂಡ.
ವಿಷ್ಣುವರ್ಧನ ಎನ್ನುವುದೊಂದು ಅಪ್ರತಿಮ ಮೇರು ಪ್ರತಿಭೆ. ಬಹುಶಃ ಆ ಸ್ಥಾನಕ್ಕೆ ಕನ್ನಡ ಚಿತ್ರರಂಗ ಮತ್ತೊಂದು ಪ್ರತಿಭೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವಷ್ಟು ದೊಡ್ಡ ನಟಶಿಖರ. ಡಾ. ರಾಜ್ ಕುಮಾರ್ ಜೊತೆ ಗಂಧದ ಗುಡಿ ಚಿತ್ರದಲ್ಲಿ ನಾಯಕನ ಸಮಾನ ಪಾತ್ರವನ್ನು ಹಂಚಿಕೊಂಡ ನಂತರವಂತೂ ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜರು ಎಂಬ ಖ್ಯಾತಿಯೂ ಬಂದಿದ್ದೂ, ಇಂದಿಗೂ ಆ ಖ್ಯಾತಿ ಅವರಿಬ್ಬರಿಗೆ ಸಲ್ಲವುದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
1952 ರ ಸಪ್ಟೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್, ನಾರಾಯಣರಾವ್ ಹಾಗೂ ಕಾಮಾಕ್ಷಮ್ಮನವರ ಪ್ರೀತಿಯ ಮಗನಾಗಿದ್ದರು. ಬಾಲ್ಯದಿಂದಲೂ ಸಂಪತ್‍ಕುಮಾರ್ ಎಂಬ ಹೆಸರಲ್ಲಿದ್ದ ವಿಷ್ಣು, 1955ರಲ್ಲಿ ಮೊದಲಬಾರಿಗೆ ‘ಶಿವಶರಣ ನಂಬೆಯಕ್ಕ’ ಎಂಬ ಸಿನಿಮಾದಲ್ಲಿ ಬಾಲನಟನಾಗಿ ಅವಕಾಶವನ್ನು ಗಿಟ್ಟಿಸಿಕೊಂಡರು. ಮುಂದೊಂದು ದಿನ ಭರವಸೆಯ ನಾಯಕನಾಗುವುದನ್ನು ಆ ಸಿನಿಮಾ ನಟನೆಯಲ್ಲೇ ತೋರ್ಪಡಿಸಿದ್ದರು. ಆಗಿನ ಕಾಲಕ್ಕೆ ಆ ಸಿನಿಮಾ ಹೊಸ ಇತಿಹಾಸ ಬರೆದಿತ್ತು. ಅದಾಗಲೇ ಬರೋಬ್ಬರಿ 28 ದಿನಗಳ ಚಿತ್ರೀಕರಣ ನಡೆಸಿ, ಅಷ್ಟು ದಿನ ಸಿನಿಮಾ ಶೂಟಿಂಗ್ ನಡೆಸಿದ ಕನ್ನಡದ ಮೊದಲ ಚಿತ್ರ ಎಂಬ ಕೀರ್ತಿಗೂ ಪಾತ್ರವಾಗಿತ್ತು. ಇದಾದ ನಂತರ ಎಸ್. ಎಲ್. ಬೈರಪ್ಪನವರ ವಂಶವೃಕ್ಷ ಕಾದಂಬರಿಯಾಧಾರಿತ ‘ಕೋಕಿಲವಾಣಿ’ ಎಂಬ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡು ಪುಟ್ಟ ಪಾತ್ರವನ್ನು ನಿರ್ವಹಿಸಿ ನಾಯಕನಾಗುವ ಎಲ್ಲಾ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.  ನಟನಾಗಿ ಅಭಿನಯಿಸಿದ ಪ್ರಥಮ ಚಿತ್ರ ‘ನಾಗರಹಾವು’. ಅವರಿಗೆ ಆ ಚಿತ್ರದ ನಿರ್ದೇಶಕ ಪುಟ್ಟಣ್ಣ ಕಣಗಾಲರವರು ಸಿನಿಮಾದ ಶೂಟಿಂಗ್ ವೇಳೆಯಲ್ಲಿ ‘ವಿಷ್ಣುವರ್ಧನ’ ಎಂದು ಹೊಸ ನಾಮಕರಣ ಮಾಡಿದ್ದರು. ಅಲ್ಲಿಂದ ಸಂಪತ್‍ಕುಮಾರ್‍ನಾಗಿದ್ದವನು ವಿಷ್ಣುವರ್ಧನ ಆದ. ಬಾಲ್ಯದ ವಿಧ್ಯಾಭ್ಯಾಸವನ್ನು ಮೈಸೂರಿನಲ್ಲೇ ಕಳೆದ ವಿಷ್ಣುವರ್ಧನ್, ಮುಂದಿನ ಶಿಕ್ಷಣವನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿ ನಟನೆಯತ್ತ ಹೆಜ್ಜೆಹಾಕಿದ್ದರು. ಇವರ ತಂದೆ ಕಲಾವಿದರಾಗಿದ್ದು, ತಂದೆಯ ಕಲಾ ಭಕ್ತಿ ಮಗನಿಗೂ ಪಸರಿಸಿತ್ತು. ತಂದೆಯವರು ಸಂಗೀತ, ಸಂಭಾಷಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅದುವೇ ಸಂಪತ್‍ಕುಮಾರ್(ವಿಷ್ಣುವರ್ಧನ)ನಿಗೆ ಬಾಲ್ಯದಿಂದಲೂ ನಟನೆಯ ವಿಷಯದಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿತ್ತು..
‘ವಿಷ್ಣುವರ್ಧನ’ ಎಂಬ ಹೆಸರು ಚಿತ್ರದ ಶೀರ್ಷಿಕೆಯ ಮೇಲೆ ಬಂತೆಂದರೆ ಆ ಸಿನಿಮಾ ಫ್ಯಾಮಿಲಿ ಚಿತ್ರರಸಿಕ ಬಳಗವನ್ನು ಚಿತ್ರಮಂದಿರದ ಕಡೆಗೆ ಸೆಳೆಯುವುದು ಖಾತ್ರಿ ಎಂದೇ ಅರ್ಥ. ಅಲ್ಲದೇ ಅವರ ಸಿನಿಮಾಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಸರು ಮಾಡುತ್ತಿದ್ದದ್ದೂ ನಿರ್ಮಾಪಕರುಗಳಲ್ಲಿ ನಮ್ಮ ದುಡ್ಡು ಸೇಫ್ ಎನ್ನುವ ಭಾವವನ್ನು ತಂದಿರುತ್ತಿತ್ತು. ಅವರೊಬ್ಬ ಸಾಧು ವ್ಯಕ್ತಿ. ಯಾರನ್ನು ಯಾವುದನ್ನೂ ನೋಯಿಸದ ಹೃದಯವಂತ. ತನ್ನ ನಿಜ ಜೀವನದಲ್ಲಿ ಯಾವತ್ತೂ ಮತ್ತೊಬ್ಬರಿಗೆ ನೋವಾಗುವಂತೆ ಗಟ್ಟಿಯಾಗಿ ಮಾತನಾಡಿದವರಲ್ಲ. ಯಾವ ಕೆಲಸ ಮಾಡುವುದಿದ್ದರೂ ಮತ್ತೊಬ್ಬರಿಗೆ ತಿಳಿಯದಂತೆ ಕಾಯ ಕೈಗೊಳ್ಳುವುದು ಅವರ ಸ್ಫೆಷಾಲಿಟಿಯಲ್ಲೊಂದು. ಅವರದು ಸರಳ ವ್ಯಕ್ತಿತ್ವ. ಸದಾ ಸಾಯಿಬಾಬನ ಭಕ್ತಿಯಲ್ಲಿಯೇ ಕಾಲಕಳೆಯುತ್ತಿದ್ದ ವಿಷ್ಣುವರ್ಧನ ಎಂದೂ ರಾಜಕೀಯದ ವಿಷಯಕ್ಕೆ ಹೋಗದೆ ಸ್ವತಂತ್ರತೆಯಲ್ಲಿಯೇ ತಮ್ಮ ಬಳಿ ಬಂದ ಅಭಿಮಾನಿಗಳನ್ನು ತಮ್ಮಿಂದ ಆದ ರೀತಿಯಲ್ಲಿ ಸಹಾಯ ಮಾಡಿ, ಕಳುಹಿಸುತ್ತಿದ್ದರು.
ತಮ್ಮೊಳಗೆ ಅದೇನು ನೋವಿದ್ದರೂ ಯಾರಲ್ಲಿಯೂ ತೋಡಿಕೊಳ್ಳದ ವಿಷ್ಣು, ನಿಜಕ್ಕೂ ಇನ್ನೊಬ್ಬರಿಗಾಗಿ ಬದುಕಿದ ಧೀಮಂತ ವ್ಯಕ್ತಿ ಎಂದರೆ ತಪ್ಪಿಲ್ಲ. ಅವರ ಸಿನಿಮಾ ಎಂದರೆ ಅಲ್ಲೊಂದು ಹೊಸ ದಾಖಲೆ ಇದ್ದೆ ಇರುತ್ತದೆ ಎಂದು ಜನ ಮಾತನಾಡುತ್ತಿದ್ದ ಕಾಲವೊಂದಿತ್ತಂತೆ. ಅದಕ್ಕೆ ಕಾರಣವೂ ಇತ್ತು. ಅವರ ಮೊದಲ ಸಿನಿಮಾ ‘ನಾಗರಹಾವು’ ಬೆಂಗಳೂರಿನ ಸಾಗರ್ ಚಿತ್ರಮಂದಿರವೊಂದರಲ್ಲೇ ಬರೋಬ್ಬರಿ 25 ವಾರಗಳನ್ನು ಪೂರೈಸಿ, ಆಗಿನ ಕಾಲಕ್ಕೆ 7 ಲಕ್ಷ ರೂಪಾಯಿಗಳ ಗಳಿಕೆ ಕಂಡು ಹೊಸ ದಾಖಲೆ ಬರೆದಿತ್ತು. ಅಲ್ಲದೇ ಬೆಂಗಳೂರಿನ 3 ಚಿತ್ರ ಮಂದಿರಗಳಲ್ಲಿ ನೂರು ದಿನ ಪೂರೈಸಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಆ ಚಿತ್ರ ಪಾತ್ರವಾಗಿತ್ತು. ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಅದಾದ ನಂತರ ನೂರಕ್ಕೂ ಹೆಚ್ಚು ಹಿಟ್ ಸಿನಿಮಾ ನೀಡಿದ ಖ್ಯಾತಿ ಡಾ. ವಿಷ್ಣುವರ್ಧನ್‍ರದ್ದು. ಅವರ ಸಿನಿಮಾ ಸಾಧನೆಯನ್ನಂತು ಪಟ್ಟಿ ಮಾಡುತ್ತಾ ಹೊರಟರೆ ಲೇಖನ ಮುಗಿಯದಷ್ಟು ಸಿಗುತ್ತವೆ, ಸರಳ ಜೀವನದ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದ ವಿಷ್ಣುವರ್ಧನ ಕನ್ನಡ ಚಿತ್ರರಂಗಗಳಲ್ಲಿ ಅತೀ ಹೆಚ್ಚು ದ್ವಿಪಾತ್ರ ನಿರ್ವಹಿಸಿದ ನಟ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರ ನಟನೆಗೆ 6 ಬಾರಿ ‘ಶ್ರೇಷ್ಠ ನಟ’ ಪ್ರಶಸ್ತಿಯೂ ದೊರೆತಿದ್ದು, ನಟನೆ ಮಾತ್ರವಲ್ಲದೇ ಕಿಲಾಡಿ ಕಿಟ್ಟು, ನಾಗಕಾಳ ಬೈರವ, ಸಾಹಸಸಿಂಹ, ಖೈದಿ, ಮೋಜುಗಾರ, ಸೊಗಸುಗಾರ, ವಿಷ್ಣುಸೇನಾ ಮೊದಲಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನು ಮಾಡಿ ಗಾಯಕರಾಗಿಯೂ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
ಅದು ಡಾ. ರಾಜ್‍ಕುಮಾರ್ ನಿಧನ ಹೊಂದಿದ್ದ ಸಮಯ. ಆಗ ಹಲವಾರು ಜನ, ವಿಷ್ಣುವರ್ಧನ್ ಬಳಿ ಬಂದು ರಾಜ್‍ಕುಮಾರ್ ಅವರ ಸ್ಥಾನಕ್ಕೆ ನೀವೇ ಬರಬೇಕು ಎಂದು ಹೇಳಿದ್ದರು. ಜನರ ಆ ದಿನದ ಮಾತಿಗೆ ಉತ್ತರ ನೀಡಿದ್ದ ವಿಷ್ಣುವರ್ಧನ್, ‘ರಾಜಕುಮಾರ ಎಂದರೆ ಸೂರ್ಯ ಇದ್ದಂತೆ. ನಾನು ಎಂದಿಗೂ ಸೂರ್ಯನಾಗಲೂ ಸಾಧ್ಯವಿಲ್ಲ. ಸೂರ್ಯ  ಚಂದ್ರನಾಗುವುದಿಲ್ಲ, ಚಂದ್ರ ಸೂರ್ಯನಾಗುವುದಿಲ್ಲ. ಚಂದ್ರ ಚಂದ್ರನೇ, ಸೂರ್ಯ ಸೂರ್ಯನೆ’ ಎಂದು ಬರೀ ಕಲೆಯಷ್ಟೇ ಅಲ್ಲದೇ ಇನ್ನೊಬ್ಬ ಕಲಾವಿದನ ಮೇಲೆ ಇರುವ ಪ್ರೀತಿ, ಗೌರವವನ್ನು ತೋರಿಸಿದ್ದರು. ಈ ಸಾಕ್ಷಿ ಪ್ರಜ್ಞೆಯನ್ನು ಗಮನಿಸಿದರೆ ವಿಷ್ಣು ಎಷ್ಟು ದೊಡ್ಡ ಸಹಬಾಳ್ವೆಯ, ಗೌರವಾಧಾರಿತ ವ್ಯಕ್ತಿ ಎಂಬುದು ಎಲ್ಲರಿಗೂ ಅರಿಯುತ್ತದೆ. ಇಂತಹ ಮೇರು ಪ್ರತಿಭೆ ಕೇವಲ ಪರದೆಯ ಮೇಲಷ್ಟೆ ಮೇರು ಬಿಂಬವಾಗಿ ಮಿಂಚದೇ ನಾವೆಲ್ಲ ಇಂದು ನೆನಸಿಕೊಳ್ಳುವ ನೆನಪುಗಳ ಚಿತ್ರವಾಗಿ ಪ್ರತಿ ಕನ್ನಡಿಗನ ಹೃದಯದಲ್ಲಿ ನಿಂತಿದ್ದಾರೆ. ಅವರಿಂದು ನಮ್ಮ ಜೊತೆ ಇಲ್ಲವೆನ್ನುವ ಕೊರಗೊಂದನ್ನು ಬಿಟ್ಟರೆ, ಅವರ ನೆನಪು, ಆದರ್ಶ, ಎಲ್ಲವೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಹೂ ಬಳ್ಳಿಯಂತೆ ಹಬ್ಬಿ ನಿಂತಿದೆ. ಅಭಿಮಾನಿಗಳಿಗೆ ಪ್ರೀತಿಯ ಅಣ್ಣನಾಗಿ, ಕನ್ನಡದ ಸಿಂಹಾದ್ರಿಯಂತೆ ತನು ಮನದಲ್ಲಿ ನಲೆಸಿರುವ ನಮ್ಮ ವಿಷ್ಣುವರ್ಧನ ಯಾವಾಗಲೂ ಕರುನಾಡಿನ ಸಿಂಹನೆ ಎನ್ನುವುದರಲ್ಲಿ ಏರಡು ಮಾತಿಲ್ಲ...


ಹೆಣ್ಣು-10         ಮೊನ್ನೆ ಒಂದು ವ್ಯಾಟ್ಸಾಪ್ ವೀಡಿಯೋ ನೋಡಿದೆ. ಅದು ಐದು ನಿಮಿಷದ ಒನ್ ಲೈನ್ ಸ್ಟೋರಿಯಂತೆ ಸಮಾಜದಲ್ಲಿ ಈಗ ಆಗುತ್ತಿರುವ ಅತ್ಯಾಚಾರ ಅನಾಚಾರವನ್ನು ತೋರಿಸುವ ಮತ್ತು ದಾರಿತಪ್ಪುತ್ತಿರುವ ಇಂದಿನ  ಹದಿ ಹರೆಯದ ಹುಡುಗಿಯರಿಗೆ ಅರಿವು ಮೂಡಿಸುವ ಒಂದೊಳ್ಳೆ ವೀಡಿಯೋ ಎನ್ನುವುದರಲ್ಲಿ ಎರಡು ಮಾತಿಲ್ಲ...


ಸ್ಟೋರಿ ಹೀಗಿತ್ತು...
      ಹೈಸ್ಕೂಲು ಓದುವ ಹುಡುಗಿ.  ಓದು ತುಂಬಾ ಚೆನ್ನಾಗಿಯೇ ನಡೆಯುತ್ತಿತ್ತು. ಎಲ್ಲವುದರಲ್ಲೂ ಮುಂದಿದ್ದಳು. ಆದರೆ ಅಚಾನಕ್ಕಾಗಿ ಮನೆಯವರು ತೆಗೆದುಕೊಟ್ಟ ಮೊಬೈಲ್‍ನ ಮಿಸ್ ಕಾಲ್‍ಗೆ ಮುಗಿಬಿದ್ದ ಹುಡುಗಿ, ತನ್ನಲ್ಲಿರುವ ಉಳಿದ ಆಸಕ್ತಿಯನ್ನೆಲ್ಲಾ ಕಳೆದುಕೊಂಡು, ನಿಧಾನವಾಗಿ ಮಿಸ್ ಕಾಲ್ ನಲ್ಲಿ ಪರಿಚಯವಾದ ಹುಡುಗನ ಬಣ್ಣಬಣ್ಣದ ಮಾತಿಗೆ ಮರುಳಾಗಿ ಲವ್ ಎನ್ನುವ ಪಾಶಕ್ಕೆ ಬೀಳುತ್ತಾಳೆ.
ಒಂದು ದಿನ ಬೆಳಿಗ್ಗೆ ತುಂಬಾ ಅಸಹ್ಯಕರವಾದ ಅಶ್ಲೀಲ ಪೋಟೋಗೆ ಇವಳ ಮುಖವನ್ನು ಎಡಿಟ್ ಮಾಡಿ, ನೀನು ನಾ ಹೇಳಿದಲ್ಲಿಗೆ ಬರಬೇಕು ಇಲ್ಲವೆಂದರೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ನಿಮ್ಮ ಮನೆಯವರೆಲ್ಲರಿಗೂ ಈ ಫೋಟೋವನ್ನು ಸೆಂಡ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್‍ಗೆ ಇಳಿಯುತ್ತಾನೆ. ಲೈಂಗಿಕ ಉಪಯೋಗಕ್ಕಾಗಿ ಅವಳನ್ನು ಬಳಸಿಕೊಳ್ಳುವ ಆ ಧಂಧೆಗೆ ಇಳಿಸುವ,ಯಾವುದೋ ಹೊರ ಪ್ರಪಂಚಕ್ಕೆ ಕಿಡ್ನಾಪ್ ಮಾಡಿ ಮಾರಾಟ ಮಾಡುವ ಇರಾದೆ ಅವನದ್ದಾಗಿತ್ತು. ಆ ಫೋಟೋಗಳನ್ನು  ನೋಡಿದ ಹುಡುಗಿ ಹೆದರಿ ಮನೆಯವರಿಗೆ ತಿಳಿದರೆ ಸಾಯಿಸುತ್ತಾರೆ, ಪ್ಲೀಸ್ ಹಾಗೆ ಮಾಡದಿರು ನೀವು ಹೇಳಿದಲ್ಲಿಗೆ ಬರುತ್ತೆನೆಂದು ತಿಳಿಸಿದ ವಿಳಾಸದ ಕಡೆ ಹೊರಡುತ್ತಾಳೆ. ಆದರೆ ದಾರಿಮಧ್ಯೆ ಅವಳು ತಲುಪಬೇಕಾದ ವಿಳಾಸ ತಿಳಿಯದೇ ಪರದಾಡುತಿದ್ದಾಗ, ಅದೇ ಮಾರ್ಗವಾಗಿ ಬಂದ ಅವಳ ಸ್ಕೂಲ್ ಟೀಚರ್ ಅವಳನ್ನು ಇಲ್ಲೇನು ಮಾಡುತ್ತಿರುವೆ ಎಂದು ಗದರಿಸಿ ವಿಷಯತಿಳಿದು, ಕೂಪಕೃತ್ಯದ ಬಾಯಿಂದ ಪಾರು ಮಾಡಿಸಿ, ಧೈರ್ಯ ಹೇಳಿ ಮನೆಗೆ ಕಳುಹಿಸುತ್ತಾರೆ.
ವಿಚಾರ ಇಷ್ಟೆ ಆದರೂ ವೀಡಿಯೋ ನೋಡುತ್ತಾ ಹೋದರೆ ನಿಜಕ್ಕೂ ಮನ ಕಂಪಿಸುತ್ತದೆ. ಕುರುಡು ಪ್ರೇಮದ ಅಮಲಿನಲ್ಲಿ ಎಷ್ಟೋ ಜನ ಹುಡುಗಿಯರು, ತಮ್ಮ ಪ್ರೇಮಿಯು ಎದುರು ತೋರುವ ಉತ್ತಮ ಗುಣಗಳನ್ನು ಮಾತ್ರವೇ ಕಂಡು ಯಾಮಾರುತ್ತಾರೆ. ಎಷ್ಟೋ ಕಡೆ ಸ್ಫುರದ್ರೂಪಿ ಯುವಕರು ತಮ್ಮ ಸೌಂದರ್ಯವನ್ನೇ ಬಂಡವಾಳವನ್ನಿಟ್ಟುಕೊಂಡು ಹುಡುಗಿಯರ ಜೊತೆ ಆಟವಾಡಿ, ಅತೀವ ಬುದ್ಧಿವಂತಿಕೆಯಿಂದ ತಮ್ಮ ಆಸೆ ಅಕಾಂಕ್ಷೆಗಳನ್ನೆಲ್ಲಾ ಈಡೇರಿಸಿಕೊಂಡ ಮೇಲೆ ವಿಳಾಸ ತಿಳಿಯದಂತೆ ಮಾಯವಾಗುತ್ತಾರೆ. ಹೆಣ್ಮಕ್ಕಳೇ ಆದಷ್ಟು ಎಚ್ಚರವಿರಿ, ನೀವು ನಂಬಿರುವ ಪ್ರೀತಿ, ಮೋಸದಿಂದಲೂ ಕೂಡಿರಬಹುದು. ಯಾವುದೇ ಹೆಜ್ಜೆ ಇಡುವುದಕ್ಕೆ ಮುನ್ನ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ.
ಇಂತಹ ಸ್ಟೋರಿಯ ವೀಡಿಯೋಗಳು ನಮ್ಮ ನಿಜ ಜೀವನದಲ್ಲಿ ದಿನಾಲೂ ನೋಡುತ್ತಿದ್ದರೂ ಎಂದೂ ಅವುಗಳ ಬಗ್ಗೆ ಚಿಂತಿಸುವುದಿಲ್ಲ. ಮೊದಲು ನಾವು ಒಳ್ಳೆಯವರಾಗೋಣ. ಕೆಲವೊಂದನ್ನು ಹೇಳುವುದರಿಂದಲೂ ಬದಲಾಯಿಸÀಲು ಸಾಧ್ಯವಿಲ್ಲ. ತಮ್ಮನ್ನು ತಾವು ಅರಿತಾಗಲೇ ಬದಲಾವಣೆ ಸಾಧ್ಯ. ಹೆಣ್ಮಕ್ಕಳೇ ಗೊಡ್ಡು ನಂಬಿಕೆ, ಮೊಬೈಲ್ ಪ್ರೀತಿಯನ್ನು ನಂಬದಿರಿ. ಎಂಜಾಯ್ ಮೆಂಟ್‍ಗಾಗಿ ಈ ಕ್ಷಣವನ್ನು ಮರೆಯದಿರಿ. ದಾರಿ ತಪ್ಪದಿರಿ. ಕ್ಷಣಿಕ ಸುಖಕ್ಕಾಗಿ ಹಾತೋರೆದು ಬಂಗಾರದ ಬಾಳನ್ನು ಕೈತಪ್ಪಿಸಿಕೊಳ್ಳದಿರಿ. ಜಾಗೃತಿ ವಿಚಾರ ಮೂಡಿಸುವ ಆ ವೀಡಿಯೋ ಮಾಡಿ ಕಳುಹಿಸಿದವನಿಗೆ ನನ್ನದೊಂದು ಸಣ್ಣ ಸಲಾಮ್...