Wednesday, 23 December 2015

ಮಳೆಯ ಹನಿಯಲ್ಲಿ ಕೂತು...


“ಎಲ್ಲ ಮರೆತು ನೆವವ ಹೂಡಿ ಅಡಗಿ ಕುಳಿತ ನೆನಪೆ..,
ಗುಳಿತೋಡಿ ಎದೆಯಿಳಿದು ಕುಳಿತು ಮನ ಕುಣಿಸುತಿರುವೆ ಏಕೆ ನೆನಪೆ...!?”
ನಿಜ...ತಮಿಳುನಾಡಿನಲ್ಲೂಂಟಾದ ಚಂಡಮಾರುತದ ನಿಮಿತ್ತ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ವರ್ಷಧಾರೆ ದೀರ್ಘ ಎರಡು ಮೂರು ದಿನಗಳು ಸುರಿದಿತ್ತು. ಈ ಸಮಯ ನೆರೆ ಬರುವಂತೆ ಹೊಡೆಯುವ ಮಳೆಗಾಲ ಅಲ್ಲ. ಆದರೂ ಎಡೆಬಿಡದ ದುಂಬು ದುಂಬು ಮಳೆ ಎಲ್ಲೆಲ್ಲೂ ಚಳಿ ಹಿಡಿಸಿದ್ದಂತೂ ನಿಜ. ಧರಿತ್ರಿ ಈ ವರ್ಷ ಸಿಂಚನದಿಂದ ಚೇತನಗೊಂಡಿದ್ದಾಳೆ. ಬೇಸಿಗೆಯಂತೆ ಸೂರ್ಯನ ಧಗೆಯಿಂದ ದಹಿಸುತ್ತಿದ್ದ ಭೂಮಿ ಈಗ ತಂಪಾಗಿದೆ. ಪರಿಚಿತರೊಬ್ಬರು ಹೇಳುವಂತೆ ಸುಮಾರು 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಹವಮಾನ ಸುಮಾರು ತಿಂಗಳುಗಳ ಕಾಲ ಇತ್ತಂತೆ. ಬಹುಶಃ ಇದೀಗ ಮತ್ತೇ ಹಾಗೆ ಆದಂತಿದೆ. ಅಬ್ಬಾ ಭೂಮಿಗೆ ಸೂರ್ಯನ ಕಿರಣವೇ ಇಲ್ಲ, ಮಂಜಿನಂತೆ ಸದಾ ಪಿರಿ ಪಿರಿಸುವ ಮಳೆ ಎಲ್ಲರಿಗೂ ಸ್ವೆಟರ್ ಹಾಕಿಸುವಂತೆ ಮಾಡಿತ್ತು. ಯಾರಿಗೆ ಫೋನ್ ಮಾಡಿದರೂ ಅಬ್ಭಾ ಏನು ಚಳಿ ಸಾಕಾಗಿ ಹೋಯ್ತು ಅನ್ನಿಸುವಷ್ಟು ಮಳೆರಾಯ ಬೆಂಗಳೂರಲ್ಲಿ ಚಳಿ ಬೀಸಿ ಹೋಗಿದ್ದ. ಇವಿಷ್ಟು ಒಂದು ಕಡೆಯ ವಿಷಯವಾದರೆÉ ಇಂತಹ ಮಳೆ ಚಳಿಯಲ್ಲೂ ಅಡಗಿ ಕುಳಿತ ಭಾವನೆಗಳು ಮತ್ತೆ ಗರಿಗೆದರಿ ಏದೆಯಲ್ಲಿ ಕುಳಿತದ್ದು ನನ್ನನ್ನು ಇನ್ನಷ್ಟೂ ಮೋಹಕತೆಗೆ ಜಾರಿಸಿ ನೆನಪ ತೇರಲ್ಲಿ ಒಂದು ಮೆರವಣಿಗೆ ಕರೆದುಕೊಂಡು ಹೋಗಿಯೇ ಬಿಟ್ಟಿತು...
ಅದೊಂದು ಸಂಭ್ರಮ...
ಬಾಲ್ಯದಿಂದ ಹಿಡಿದು ಇಂದಿನ ತನಕದ ಹಲವು ನೆನಪುಗಳು ಮಳೆಗಾಲದೊಂದಿಗೆ ಯಾವಾಗಲೂ ಮರುಕಳಿಸುತ್ತವೆ. ಬಹುಶಃ ಇದಕ್ಕೆ, ಹಿರಿಯರು ಹೇಳಿರಬೇಕು ವರ್ಷ ಋತುವಿಗೆ ಸೋಲದ ಮನಸ್ಸುಗಳೇ ಇರಲಾರವು ಎಂದು.
ಬಾಲ್ಯದಲ್ಲಿ ಮಳೆಯೊಂದಿಗೆ ಮಾಡಿದ ಅದೆಷ್ಟೋ ಮೋಜುಗಳು ಮೊನ್ನೆ ನೆನೆಪುಗಳ ಪುಟ ತೆರೆಯಿತು. ಮೊದಲ ರಭಸದ ಮಳೆಗೆ ತುಂಬುತ್ತಿದ್ದ ಮನೆಯ ಮುಂದಿನ ತೋಡುಗಳು, ಹರಿಯುವ ನೀರಿನಲ್ಲಿ ಮುಳುಗಿ ಆಟವಾಡಿ ಮೈರೆತು ಒದ್ದೆಯಾಗಿತ್ತಿದ್ದ ಸಂಧರ್ಭಗಳು, ಕಪ್ಪೆಗಳನ್ನು ಮೀನುಗಳೆಂದು ಭಾವಿಸಿ ಹಿಡಿಯುತ್ತಿದ್ದ ದಿನಗಳು. ನನ್ನೊಡನೆ ಆಡಲು ಬಂದ ಪುಟ್ಟ ನಾಯಿಯನ್ನು ನೀರಿಗೆ ದೂಡಿ ಅದರÀ ಈಜನ್ನು ನೋಡಿ ಖುಷಿಪಡುತ್ತಿದ್ದ ಕ್ಷಣಗಳು, ಮುಂಜಾನೆ ಬಿಸಿಲಿದ್ದ ಕಾರಣ ಕೊಡೆ ಮರೆತು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಕೊಡೆಯಿಲ್ಲದೇ ನೆನದು ಬಳಿಕ ಕಟ್ಟಿಗೆ ಒಲೆಯ ಮುಂದೆ ಕುಳಿತಿದ್ದ ಆ ಬೆಚ್ಚನೆಯ ಸವಿಸಮಯಗಳು, ಪಾಪ ಧನಕರುಗಳು ಮಳೆಯಲ್ಲೇ ನಿಂತಿವೆ ಎಷ್ಟು ಚಳಿಯಾಗಬಹುದೇನೋ!? ಎಂದು ಮಳೆಯನ್ನು ತಡೆಯಲು ಕೊಡೆ ಹಿಡಿದ ಆ ಸುಂದರ ಸವಿಕ್ಷಣಗಳು, ಮಳೆಯಿದೆ ಶಾಲೆಗೆ ಹೋಗಲ್ಲ ಎಂದು ಹಠ ಬಿದ್ದು ಅಮ್ಮನ ಕೈ ಏಟು ತಿಂದು ಮಳೆಗಿಂತ ಜೋರಾಗಿ ಕಣ್ಣೀರ ಧಾರೆ ಹರಿಸಿ ಮನೆ ಸೇರಿದಂತ ವೇಳೆಗಳು, ಶಾಲೆ ಆರಂಭವಾಗುವ ಸಮಯ ರೈನ್ ಕೋಟ್, ಕೊಡೆಗಳಿಗಾಗಿ ಮಾಡಿದ್ದ ರಂಪಾಟಗಳು ಹೀಗೆ ನೆನಪುಗಳು ಒಂದೆರಡಲ್ಲ. ನಿಜಕ್ಕೂ ಅವೆಲ್ಲವೂ ಒಂದು ಸಂಭ್ರಮವೇ ಸರಿ...
ಚಿಕ್ಕವರಿದ್ದಾಗ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆಪಕ್ಕೊಂದು ಕೊಡೆ ಹಿಡಿದು ಚಪ್ಪಲಿಯನ್ನು ಬೇಕೆಂದೇ ಮನೆಯಲ್ಲಿ ಮರೆತು ಬರಿಗಾಲಲ್ಲಿ ಶಾಲೆಗೆ ಹೋಗುವುದೇ ಒಂದು ಪುಟ್ಟ ಹಬ್ಬದಂತೆ. ಆದರಿಂದು ಬೈಕ್ ಏರಿ ರಸ್ತೆಯಲ್ಲಿ ಸಾಗುವಾಗ ಅಂದು ಅನುಭವಿಸುತ್ತಿದ್ದ, ರಸ್ತೆಯ ನೀರಾಟದ ಮಜಾ ಮತ್ತೆ ಮತ್ತೆ ಮನ ಪಟಲವನ್ನು ಚಾಚುತ್ತದೆ. ಅಂದದು ಕೆಸರು ನೀರೋ, ಸ್ವಚ್ಚ ನೀರೋ ನಮಗೇ ವ್ಯತ್ಯಾಸವೇ ಇರಲಿಲ್ಲ, ಯಾವಶುಚಿತ್ವದ ಕಲ್ಪನೆಯೂ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಕಣ್ಣಿಗೆ ಬೀಳುವ ಕೆಂಪು ಬಣ್ಣದ ‘ರೇಶಿಮೆ ಹುಳು’ಗಳು, ನೀರಿನಲ್ಲಿ ಆಟವಾಡುವಾಗ ಕಾಲಿಗೆ ಹತ್ತಿಕೊಳ್ಳುವ ನಂಜು ಹುಳಗಳು, ಮೈ ಕೈ ತಾಗಿ ತುರಿಕೆ ಎಬ್ಬಿಸುವ ಕಂಬಳಿ ಹುಳಗಳು, ಇನ್ನೂ ಅನೇಕ ನೀರಿನಲ್ಲಿ ತೊಯ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜೀವಿಗಳು ಮಳೆಗಾಲದಲ್ಲಿ ನಮ್ಮ ಆಸಕ್ತಿ ವಿಷಯಗಳಾಗಿದ್ದವು. ಕೆಲವಂತೂ ನಮ್ಮ ಹಿಂಸೆಗೆ ಜೀವ ತೆಯ್ದವೂ ಇವೆ, ಪಾಪದಂತೆ ಕಂಡು ಕೈ ಹಿಡಿದು ದಡ ಕಂಡವೂ ಇವೆ...
ಆ ಸಮಯ ಸಂಧರ್ಭಗಳೇ ಹಾಗೆ... ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗುತ್ತಿದ್ದ ಮರಗಿಡಗಳು ಮಳೆಯ ಹನಿಯ ಸ್ಫರ್ಶಕ್ಕೆ  ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗೊಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು.  ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಳದಲ್ಲಿ ಹಾವಸೆಯ ಸ್ಫರ್ಶದ ಹಿತವನ್ನು ಅನುಭವಿಸುತ್ತಿದ್ದವು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತಿದ್ದದ್ದೂ ಮೊನ್ನೆ ಸುರಿದ ಮಳೆ ಮತ್ತೆ ಮನಸ್ಸನ್ನು ತೆರೆಸಿತ್ತು. ಆಗೆಲ್ಲ ಕೊಡೆಗಳಲ್ಲಿ ಅಷ್ಟು ವೆರೈಟಿ ಬಂದಿರಲಿಲ್ಲ. ಕಪ್ಪು ಬಟ್ಟೆಯ ದೊಡ್ಡ ಕೊಡೆಗಳಷ್ಟೇ ಹೆಚ್ಚಾಗಿ ಕಾಣಸಿಗುತಿದ್ದವು. ಅವುಗಳಲ್ಲಿ ನಮಗೆ ಮರದ್ದೋ, ಸ್ಟೀಲ್‍ದ್ದೋ ಬಾಗಿದ ಬೆತ್ತದಂತಿರುವ ಉದ್ದನೆಯ ಹಿಡಿPಯ ಕೊಡೆÉ ಮಾತ್ರಾ ಕಾಣ ಸಿಗುತ್ತಿತ್ತು. ಇಂದಿನ ಮಾಡರ್ನ್ ಯುಗದ ಚಿಕ್ಕ ಚಿಕ್ಕ ಛತ್ರಿಗಳನ್ನು ನೋಡಿದ ನೆನಪೇ ಇಲ್ಲ. ಆ ಉದ್ದನೆಯ ಅಜ್ಜನ ಕೊಡೆಗಳಿಗೊಂದು ಹಚ್ಚೆ ಹಾಕಿಸಿಕೊಂಡು, ನಾಮಾಂಕಿತ ಮಾಡಿಕೊಂಡು ಇದು ನನ್ನದು ಎನ್ನುವ ಗ್ಯಾರಂಟಿ ಕಾರ್ಡ್‍ನ್ನು ನಿಗಧಿಪಡಿಸಿ ಗುರುತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೂಡ ಎಷ್ಟೊ ಸಲ ಕೊಡೆ ಕಳುವಾಗುತ್ತಿದ್ದವು. ಆದರೆ ಇದರಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಮನೆಯಲ್ಲಿ ಕಡುಬು ತಿನ್ನಬೇಕಾಗಿದ್ದು ನಾವೇ ಆಗಿದ್ದೇವು. ಕೊಡೆಯೋ ಬುತ್ತಿಯೋ, ಹಾಕೋ ಚಪ್ಪಲಿಯೋ ಇದರಲ್ಲಿ ಯಾವೊಂದು ಕಳುವಾದರೂ ನಮ್ಮ ತಲೆಮೇಲೆ ಆಕಾಶ ಬಿದ್ದ ಹಾಗೇ ಫೀಲೀಂಗ್ ಆಗುತ್ತಿದ್ದದ್ದೂ ಮಾತ್ರಾ ಸುಳಲ್ಲ...
ಮಳೆಗಾಲವೆಂದರೆ ಇಷ್ಟೇ ಅಲ್ಲ ಅದು ಎಲ್ಲರ ಗೆಳೆಯ. ನೊಂದ ಮನಸ್ಸುಗಳ ಮಿತ್ರ, ಪ್ರೇಮಿಗಳ ಪ್ರೀತಿಯನ್ನು ಇಮ್ಮಡಿಸುವ ಆತ್ಮೀಯ. ನೋವನ್ನು ಮರೆಸುವ ಮಾಣಿಕ್ಯ. ಕಣ್ಣೀರನ್ನು ಒರೆಸುವ ಅಮ್ಮ. ಇನ್ನೂ ಏನೇನೋ ಒಬ್ಬೊಬ್ಬರಿಗೆ ಒಂದೊಂದು ಥರ. ನನಗಂತೂ ಮಳೆಯೆಂದರೆ ಪ್ರಾಣ. ಮತ್ತೆ ಮತ್ತೆ ಭೂವಿಗೆ ಮಳೆಯಾಗಲಿ ಎಂದು ಯಾವಾಗಲೂ ಹಂಬಲಿಸುವ ಮುದ್ದು ಮನಸು ನನದು. ಪ್ರತಿ ಮಳೆಯಲ್ಲೂ ಮನಪಟಲದಿಂದ ನೆನಪುಗಳು ಗರಿಗೆದರಿ ಬಂದು ಭಾವನೆಯನ್ನು ಕೆಣಕಿ ಮಾತನಾಡಿಸುತ್ತವೆ. ಈ ಮಳೆ ಇಲ್ಲಿಗೆ ನಿಲ್ಲಬಹುದು ಆದರೆ ನನ್ನ ಮೈ ಮನ ಮುಂದಿನ ಮುಂಗಾರಿನ ಸಿಂಚನಕ್ಕೆ ಮೈಯೊಡ್ಡಲು ಈಗಲೇ ಕಾತರಿಕೆಯಲಿ ನಿಂತಿದೆ...ಯಾವುದೇ ಜವಾಬ್ಧಾರಿಯಿಲ್ಲದ, ಕೇವಲ ಕುತೂಹಲ, ಹುಡುಗಾಟದಲ್ಲಿಯೇ ಕಳೆದು ಹೋಗುವ ಬಾಲ್ಯದ ಆ ದಿನಗಳು  ಮತ್ತೆಂದು ಹಿಂದಿರುಗಿ ಬರಲಾರವು ಎನ್ನುವ ಮನೋಭಾವವಿದ್ದರೂ, ಕಳೆದ ಆ ದಿನಗಳನ್ನೇ ಸಿಕ್ಕ ಸಮಯ ನೆನಪಿಸಿಕೊಂಡು ಎಂಜಾಯ್ ಮಾಡುವುದು ನಿಜಕ್ಕೂ ಮನಸ್ಸಿಗೆ ಉಲ್ಲಾಸ ಕೊಡದೆ ಇರದು. ನನಗೆ ಇದುವರೆಗೂ 24 ವಸಂತಗಳು ಕಳೆದು ಹೋದವು ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೊ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ಒತ್ತಡದ ಬದುಕಿನ ಈ ದಿನಗಳಲ್ಲಿ ಅಪರೂಪಕ್ಕೊಮ್ಮೆ ಸಿಗುವ ಏಕತಾನತೆಯ ನಡುವೆ ಮತ್ತೊಮ್ಮೆ ಹಂಬಲಿಸುವ ಹಳೆಯ ನೆನಪಿನ ರೀವೈಂಡಿಂಗ್ ರೀಲ್ ನಿಜಕ್ಕೂ ಮಳೆಗಾಲದಲ್ಲೇ ಜಾಸ್ತಿ ಅನ್ನಿಸುತ್ತದೆ.
ಹೊರಗೆ ಭೋರ್ಗೆರದು  ಸುರಿವ ಮಳೆಗೆ, ಬೆಚ್ಚಗೆ ಬೆಡ್ ಶೀಟ್ ಹೊದ್ದು ಅಮ್ಮಾ ಮಾಡಿದ ಬಿಸಿ ಚಹವನ್ನು ತುಟಿಗೇರಿಸಿ, ಜತೆಜತೆಗೆ ಬಿಸಿ ಬಿಸಿ ಬೋಂಡಾ ತಿನ್ನುವ ಆಸೆಗಳನ್ನು ಅನುಭವಿಸಿದಂತೆ ನಿಮಗೂ ಈಗ ನೆನಪುಗಳ ಫೀಲಿಂಗ್ ಗರಿಗೆದರುತ್ತಿರಬಹುದು ಅಲ್ವಾ...ಅಷ್ಟಾದರೆ ಸಾಕು. ಓದಿ ಮುಗಿಸಿದ ನಂತರ ಪ್ಲೀಸ್ ಮಳೆರಾಯನಿಗೆ ನೀವು ತಿಳಿಸಿ ಒಂದು ಸಣ್ಣ ಧನ್ಯವಾದ...ಯಾಕೆಂದರೆ ಈ ಬರವಣಿಗೆಗೆ ಮೊನ್ನೆ ಅವನೇ ಕಾರಣವಾದ...

ವೆಂಕಟ ಇನ್ ಸಂಕಟ...


ಟಿ.ವಿ ಮಾಧ್ಯಮಗಳೇ ಶೇಮ್... ಶೇಮ್...
ಖಾಸು ಸಿಗುತ್ತದೆಂದು ಬಾಸು ಆದ ಹುಚ್ಚ ವೆಂಕಟ್...
ಟಿ.ಆರ್.ಪಿ ಸುಲ್ತಾನನ ಫೈರಿಂಗ್
ಅಂದು ಜಂಗಲ್ ಜಾಕಿ ರಾಜೇಶ ಇಂದು ಹುಚ್ಚ ವೆಂಕಟ್...

              ‘ನನ್ ಎಕ್ಡಾ.., ನನ್ ಮಗಂದ್.., ಬ್ಯಾನ್ ಆಗ್ಬೇಕ್...’ಈ ಡೈಲಾಗ್‍ಗಳೆಲ್ಲ ಇದೀಗ ಸಣ್ಣ ಮಗುವಿನಿಂದ ಹಿಡಿದು ಹಿರಿಯವರೆನಿಸಿಕೊಂಡ ದೊಡ್ಡಣ್ಣರ ಬಾಯಲ್ಲೂ ಕಾಮನ್ ಆಗಿ ಬಿಟ್ಟಿದೆ...ಇದಕ್ಕೆ ಕಾರಣ ವೆಂಕಟ್ ಹುಚ್ಚ ವೆಂಕಟ್... ಇರಬಹುದು ಹುಚ್ಚು ಮನಸ್ಸಿಗೆ ಹತ್ತು ಮುಖಗಳಂತೆ ಇತ್ತೀಚಿಗೆ ಟಿ.ವಿ ಮಾಧ್ಯಮದಲ್ಲಿ ಭಿತ್ತರವಾಗುತ್ತಿರುವ ವೆಂಕಟನ ಸಂಕಟ ವೀಕ್ಷಿಸಿ ನಗು, ಅಸಹನೆ, ನೋವು ಎಮಬಿತ್ಯಾದಿಗಳನ್ನೆಲ್ಲ ತಾಳಲಾರದೇ ಈಗ ಜನ ಹೇಳುತ್ತಿದ್ದಾರೆ ಹುಚ್ಚು ಮನಸ್ಸಿಗೆ ಹತ್ತಲ್ಲ ನೂರೋ, ನೂರಿಪ್ಪತ್ತೋ ಮುಖಗಳಿರಬೇಕು ಎಂದು!!. ಬಹುಶಃ ಇಂತದ್ದೊಂದು ಆಲೋಚನೆ ಮೂಡಿ ಬಂದಿದ್ದು ಹುಚ್ಚ ವೆಂಕಟ್‍ರವರ ಡಿಬೆಟ್ ಪ್ರೋಗ್ರಾಮ್ ನೋಡಿದ ಮೇಲೆಂದರೆ ಅನುಮಾನ ಸುಳಿಯುವುದಿಲ್ಲ ಬಿಡಿ. ನಾವು ಕನ್ನಡಿಗರೂ ವಿಶಾಲ ಹೃದಯದವರು, ಅನೇಕ ಒಳ್ಳೆಯ ಲೋಕ ಕಲ್ಯಾಣದ ವಿಚಾರಗಳಿದ್ದರೂ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹುಚ್ಚುಚ್ಚಾದ ವಿಷಯಗಳಿಗೆ ತಲೆ ಕೆರೆದುಕೊಳ್ಳುವುದು ಜಾಸ್ತಿ...ನಮ್ಮವರಿಗೆ ಮನೆ ಒಡೆಯುವುದರಲ್ಲಿರುವ ಸುಖ ಮನೆ ಕಟ್ಟುವುದರಲ್ಲಿಲ್ಲ. ಯಾರೂ ಹುಚ್ಚನಾಗಿದ್ದಾನೆ, ಯಾರನ್ನು ಹುಚ್ಚನ ಸ್ಥಾನದಲ್ಲಿ ನಿಲ್ಲಿಸಿ ಗೋಳಾಡಿಸುವುದು, ಎಂಬಿತ್ಯಾದಿ ವಿಚಾರಗಳನ್ನು ಕೆಲವೇ ಕೆಲವು ಮಂದಿ ನಿರ್ಧರಿಸಿ ಮೀಡಿಯಾ ಎಂಬ ಬಣ್ಣವನ್ನು ಹಚ್ಚಿ, ಕುಣಿಸಿ, ನಂತರ ಹೀರೋವಾಗಿಸುತ್ತಾರೆ. ಅವನ ಪ್ರತಿ ಘಳಿಗೆಯನ್ನು ಉಪಯೋಗಿಸಿಕೊಂಡು ಹಣ ಸಂಪಾದಿಸಿ ನಂತರ ಸತ್ತನೋ!, ಜೀವಿದ್ದನೋ! ಎಂಬುದನ್ನು ತಿಳಿಯದೇ ಮುಗ್ಧರಂತಿರುತ್ತಾರೆ. ಸದ್ಯಕ್ಕೆ ಇವು ಈ ತಿಂಗಳ ಹೈಲೆಟ್...
 ಕರೆಕ್ಟ್...ಇಲ್ಲಿನ ಸಮಸ್ಯೆ ಎದ್ದು ಕಾಣುತ್ತಿರುವುದು ಒಬ್ಬ ವ್ಯಕ್ತಿಯ ಅಭಿವ್ಯಕ್ತತೆಯ ಶೈಲಿಯಲ್ಲಿ ಅಷ್ಟೆ.  ಹುಚ್ಚ ವೆಂಕಟ್ ಒಬ್ಬ ಹುಚ್ಚ ಅಲ್ಲದಿದ್ದರೂ ಅವನ ಸಿನಿಮಾ ಹುಚ್ಚು,  ಕೆಲವೊಂದು ವಿಚಾರದಲ್ಲಿ ಆತ ತೆಗೆದುಕೊಳ್ಳುವ ನಿರ್ಣಯಗಳು, ಮಾತುಗಳು, ಅಷ್ಟೇ ಅಲ್ಲದೇ ಅವನ ಸಿನಿಮಾ ಟೈಟಲ್, ಎಲ್ಲಾ ಜೊತೆ ಜೊತೆಗೆ ಸೇರಿಸಿ ಆತನನ್ನ ‘ಹುಚ್ಚ’ನನ್ನಾಗಿ ಮಾಡಿದೆ ಅಷ್ಟೇ. ವೆಂಕಟ್ ಒಳಗೆ ಒಂದು ಮುಗ್ಧ ಮನಸ್ಸಿದೆ ಅದರ ಬಗ್ಗೆ ಯಾವ ಅನುಮಾನವೂ ಇಲ್ಲ, ಯಾವ ನಿರಾಸಕ್ತಿಯೂ ಇಲ್ಲ ಬದಲಾಗಿ ಅಭಿಮಾನವಿದೆ. ಎಷ್ಟೇ ಏನೆ ಅನ್ ವಾಂಟೆಡ್ ಸ್ಟೇಟ್‍ಮೆಂಟ್ ಇದ್ದರೂ ಈ ಒಂದು ಕಾರಣಕ್ಕಾಗಿಯೇ ಜನರಿಗೆ ಈತ ಹಿಡಿಸಿರಬೇಕು.
ಕಳೆದೆರಡು ಆವೃತ್ತಿಯ ಬಿಗ್‍ಬಾಸ್ ಎನ್ನುವ ಹೈ ಬಜೆಟ್  ಡ್ರಾಮಾ ಇಡೀ ಕರ್ನಾಟಕದ ಜನತೆಗೆ ಎಷ್ಟು ತಿಳಿದಿತ್ತೋ, ಮನೆರಂಜನೆ ನೀಡಿತ್ತೋ ತಿಳಿದಿಲ್ಲ. ಆದರೆ ಈ ಬಾರಿಯ ಬಿಗ್ ಬಾಸ್ ಅಂತೂ  ಉಳಿದೆಲ್ಲಾ ಟಿ.ವಿ ಕಾರ್ಯಕ್ರಮಗಳಿಗಿಂತ ಹೆಚ್ಚು ವೀಕ್ಷಿಸಲ್ಪಟ್ಟಿದೆ ಎಂದು ಬಿಗ್‍ಬಾಸ್ ಮಂಡಳಿ ಹೆಮ್ಮೆಯಿಂದ ಬೀಗಿದೆ. ಅನೇಕ ಜನ ಹೇಳುವಂತೆ ಇದಕ್ಕೆಲ್ಲಾ ಒಬ್ಬನೇ ಒಬ್ಬ ವ್ಯಕ್ತಿ ಕಾರಣ ಅವನೆ ಹುಚ್ಚ ವೆಂಕಟ್. ಈ ಮೊದಲು ಎರಡು ಸಿನಿಮಾಗಳಲ್ಲಿ ಅಭಿನಯವನ್ನು ತೋರಿದ್ದರೂ ವೆಂಕಟ್ ಥೀಯೇಟರ್‍ನಲ್ಲಿ ಸ್ಟಾರ್ ನಾಯಕನಾಗಿ ಹೊರಬೀಳಲಿಲ್ಲ. ಬದಲಾಗಿ ನಿರಾಸೆಯ ಆಕ್ರೋಶದಿಂದ ಹೊರಬಿದ್ದು, ಬಾಯಿಗೆ ಬಂದ ಸ್ಟೇಟಸ್ ನೀಡಿ ಯುಟ್ಯೂಬ್‍ನಲ್ಲಿ ಅಲ್ಟೀಮೇಟ್ ಹಿಟ್ ಆಗಿದ್ದ. ಅದೇ ಡೈಲಾಗು, ಅವನದೇ ವೈಖರಿಯನ್ನು ಅನೇಕ ಜನ ಅನುಕರಿಸಿ ಎಲ್ಲರ ಕಣ್ಣು ವೆಂಕಟ್ ಮೇಲೆ ಎನ್ನುವಂತಾಗಿತ್ತು. ಅದು ಬಿಗ್‍ಬಾಸ್ ಮನೆಗೂ ಎಂಟ್ರಿ ದೊರಕಿಸಿಕೊಟ್ಟಿತ್ತು. ಅಲ್ಲಿಯೂ ತನ್ನ ಬುದ್ಧಿಯನ್ನು ಎಳ್ಳಷ್ಟೂ ಬಿಟ್ಟುಕೊಡದ ವೆಂಕಟ್ ತಂದೆ, ತಾಯಿ ಹಾಗೂ ಹೆಣ್ಮಕ್ಕಳ ಬಗ್ಗೆ ಅಪಾರ ಅಭಿಮಾನದ ಮಾತುಗಳನ್ನಾಡಿ ಅಭಿಮಾನಿಗಳ ಗುಂಪನ್ನು ಗಿಟ್ಟಿಸಿಕೊಂಡು ಎಲ್ಲರಿಗೂ ಅಣ್ಣನಾಗಿಯೇ ಬಿಟ್ಟ...
 ಬಹುಶಃ ಇಲ್ಲಿಯವರೆಗೆ ಆಗಿದ್ದೆಲ್ಲವೂ ಆತನ ವೈಯಕ್ತಿಕ ವಿಚಾರ ಆಗಿದ್ದಿರಬಹುದು. ಆದರೆ ಇನ್ನೂ ಮುಂದೆ ಸಂಭವಿಸಿದ್ದು ನಿಜಕ್ಕೂ ವಿಷಾಧನೀಯ. ಇದರಲ್ಲಿ ಜನತೆಯ ತಪ್ಪೇನು ಇರಲಿಕ್ಕಿಲ್ಲ ಯಾಕೆಂದರೆ ಯಾರೊಬ್ಬನನ್ನು ಅವರು ಹೀರೋ ಮಾಡಬೇಕೆಂದರೂ, ಆತ ಟಿ.ವಿ.ಯಲ್ಲಿ ಮೊದಲು ಕಾಣಿಸಿಕೊಂಡು ಓ.ಕೆ ಆದ ಮೇಲೆ ಬೆಂಬಲ ಸೂಚಿಸಿ ಚಪ್ಪಾಳೆ ತಟ್ಟೋದು. ಆದರೆ ಟಿ.ವಿಯವರು ಎಂತಹವರನ್ನು ಬೇಕಾದರೂ ಸ್ಟಾರ್ ಮಾಡುತ್ತಾರೆ!. ಆ ತಾಕತ್ ಅವರಿಗಿದೆ ಬಿಡಿ!!!. ನಮ್ಮಲ್ಲೂ ಸ್ಟಾರ್‍ಗಿರಿಗೇನೂ ಕಡಿಮೆ ಇಲ್ಲ. ಎಂತಹವ ಬೇಕಾದರೂ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡುವ, ಬಿಡಿಸುವ  ಶಕ್ತಿ ನಮಗಿದೆ. ಇಲ್ಲಿಯ ನನ್ನ ನೋವು ಹುಚ್ಚ ವೆಂಕಟನ ಮೇಲೂ ಅಲ್ಲ, ಹೀರೋ ಮಾಡಿದ ಜನತೆಯ ಮೇಲೂ ಅಲ್ಲ ಟಿ.ಆರ್.ಪಿ ಹುಚ್ಚು ಹಿಡಿದಿರೋ ಟಿವಿ ಮಾಧ್ಯಮಗಳ ಮೇಲೆ. ಪ್ರಸರಿಸೋ ಪ್ರತಿ ಕಾರ್ಯಕ್ರಮವನ್ನು ಸ್ಲ್ಯಾಟ್ ಎನ್ನುವ ಸಂಭಾವನೆಯಲ್ಲಿಯೇ ಮುಳುಗುವ ವಾಹಿನಿಗಳಿಗೆ ಇತ್ತೀಚೆಗೆ ವೆಂಕಟನ ಲೀಲೆ ಖಾಸು ಮಾಡಲು ದಾರಿ ಮಾಡಿ ಕೊಟ್ಟಿತ್ತೆಂದರೆ ಅತಿಶಯೋಗ್ತಿಯಲ್ಲ.  ರವಿ ಮುರೂರು  ಮೇಲೆ ಹಲ್ಲೆ ಮಾಡಿದ ಪರಿಣಾಮ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ವೆಂಕಟ್‍ಗೆ ಅಭಿಮಾನಿ ಬಳಗವೇ ಸೃಷ್ಟಿಯಾದದ್ದು ಟಿ.ವಿ ಚಾನೆಲ್‍ಗಳಿಗೆ ವರವಾಗಿ ಪರಿಣಮಿಸಿತು.  
ಇದೆಲ್ಲ ನಡೆಯುತ್ತಿರುವ ಸಮಯದಲ್ಲೇ ಹಲವಾರೂ ಏಳುಬೀಳುಗಳು, ಏನೇನೋ-ಎಷ್ಟೆಷ್ಟೋ ಲೋಕಕಲ್ಯಾಣದ ಕಾರ್ಯಗಳು ನಡೆಯುತ್ತ್ತಾ ಇದ್ದರೂ ಅದನ್ಯಾವ ಚಾನಲ್‍ಗಳು ಜಾಸ್ತಿ ತೋರಿಸುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಏಕೆ ಪ್ರಧಾನಿ ಮೋದಿ ಲಂಡನ್‍ಗೆ ಹೋಗಿದ್ದು, ಮೊದಲ ದಿನ ಎಡಬಿಡದೆ ವರದಿಯಾಗುತ್ತಿದ್ದರೂ ನಂತರದ ಭಾಷಣ, ಬಸವಣ್ಣನ ಪ್ರತಿಮೆ ಅನಾವರಣ ಇತ್ಯಾದಿಗಳ್ಯಾವವು ಹೆಚ್ಚು ಸುದ್ದಿಯಾಗಲಿಲ್ಲ ಕಾರಣ ಬಿಗ್‍ಬಾಸ್ ಮನೆಯಿಂದ ಹುಚ್ಚ ವೆಂಕಟ್ ಹೊರಬಂದಿದ್ದರು!. ನೋಡಿ ಎಂಥಾ ವಿಪರ್ಯಾಸ!!!.
ಅಷ್ಟಕ್ಕೂ ಮಾಧ್ಯಮಗಳು ಇಂತಹ ವಿಚಾರಗಳನ್ನು ಯಾಕಿಷ್ಟು ವೈಭವೀಕರಿಸುತ್ತವೆ ಎಂಬುದು ಹೆಚ್ಚಿನವರ ಪ್ರಶ್ನೆಯಾದರೂ ಇದಕ್ಕೆ  ಟಿ. ಆರ್.ಪಿ ಎನ್ನೋ ಸಾಮಾನ್ಯ ಉತ್ತರ ಎಂದು ತಿಳಿದಿದೆ. ಹೌದು ಬಹುಶಃ ವೆಂಕಟ್ ಬಿಗ್‍ಬಾಸ್‍ನಿಂದ ಹೊರಬಿದ್ದ ನಂತರ ಮನೆಯಲ್ಲಿ ಸರಿಯಾಗಿ ಕುಳಿತಿದ್ದನೋ ಇಲ್ಲವೋ ಗೊತ್ತಿಲ್ಲ!, ಆದರೆ ರಾತ್ರಿ 2ರ ತನಕವೂ ಬೇರೆ ಬೇರೆ ನ್ಯೂಸ್ ಚಾನೆಲ್‍ಗಳಲ್ಲಿ ಕುಳಿತು ಮಾತನಾಡಿದ್ದ. ಊಟ ಮಾಡಿಸಿದ್ದರೋ ಇಲ್ಲವೋ! ಆದರೆ ಬ್ರೇಕ್ ಕೊಡದೆ ಮಾತನಾಡಿಸಿದ್ದರು... ಯಾಕೆಂದರೆ ಅವನೊಬ್ಬ ಟಿ.ಆರ್.ಪಿ ಮೇಕರ್.
ವರ್ಷಗಳ ಹಿಂದೆ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಎನ್ನುವ ರಿಯಾಲಿಟಿ ಶೋನಲ್ಲಿ ತೊಡೆ ತಟ್ಟಿ ‘ಕುಂತ್ರೆ ಕುರುಬ ನಿಂತ್ರೆ ಕಿರುಬ’ ಎಂದು ಡೈಲಾಗ್ ಹೊಡೆದು ಕನ್ನಡ ಜನತೆಯ ಮನಗೆದ್ದು, ನಿಜವಾದ ಹೀರೋ ಆಗಿದ್ದ್ ‘ಜಂಗಲ್ ಜಾಕಿ ರಾಜೇಶ್’ ಎನ್ನುವ ಹುಡುಗ ಫೈನಲ್‍ನಲ್ಲಿ ಗೆದ್ದಾಗ ಇದೇ ಪಾಡನ್ನು ಅನುಭವಿಸಿದ್ದ.
ನಂತರದ ದಿನಮಾನಗಳಲ್ಲಿ ಇದೇ ಮಾಧ್ಯಮಗಳು ವೈಭವೀಕರಿಸಿ ಹೀರೋ ಮಾಡಿ, ಕಾಡಿನ ಮಧ್ಯದಲ್ಲಿ ಬೆಳೆದ ಹುಡುಗನನ್ನು ಪ್ಯಾಟೆಗೆ ತಂದು  ಇಲ್ಲಿನ ಸಂಪ್ರದಾಯ ಸಂಸ್ಕøತಿಯನ್ನು ತೋರಿಸಿ, ಅವನಿಗೆ ಆ ಕಡೆ ಸಂಪೂರ್ಣವಾಗಿ ಹಳ್ಳಿಯ ಕ್ರಮವನ್ನು ಅನುಸರಿಸಲಾಗದೆ, ಇತ್ತ ನಗರ ಜೀವನಕ್ಕೂ ಒಗ್ಗಲಾಗದೇ ಮನಸ್ಸಿನಲ್ಲಿ  ತೀವ್ರ ತಳಮಳ ಅನುಭವಿಸುವಂತೆ ಮಾಡಿ , ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದ್ದರು. ಇದರಿಂದಾಗಿ  ಆತ ‘ ಅಕ್ಯೂಟ್ ಮೇನಿಯಾ’  ಖಾಯಿಲೆಗೂ ತುತ್ತಾಗಿದ್ದ.  ನಂತರ ಮನೆಯ ಮೇಲಿಂದ ಹಾರಿ ಪ್ರಾಣವನ್ನು ತೆತ್ತಿದ್ದ.   ಇಂತಹ ಚಿತ್ರಣವೊಂದು ಮಾಸುವ ಮುನ್ನವೇ ಇದೀಗ ಮತ್ತೊಬ್ಬನನ್ನು ಹೀರೋ ಮಾಡಿ, ಅವನಾಡುವ ಮಾತುಗಳಿಗೆ ಬಣ್ಣ ಬಳಿದು ಟಿ.ಆರ್.ಪಿ ಹೆಚ್ಚಿಸಿಕೊಂಡು  ಇವನ ಕತೆಯನ್ನು ಮುಗಿಸುತ್ತಾರೋ ಏನೋ ತಿಳಿದಿಲ್ಲ ಎನ್ನುವುದೇ ಸುಮಾರು ಜನರ ಭಯ. ವೆಂಕಟ್ ಒಬ್ಬ ಹುಚ್ಚನಲ್ಲ ಅವನೊಳಗೆ ಬೇಯುತ್ತಿರುವ ನೋವು, ತುಡಿತ ಹಾಗೆ ಆಡಿಸುತ್ತಿದೆ ಅಷ್ಟೆ.  ರಕ್ತದೊತ್ತಡ ಜಾಸ್ತಿಯಾಗಿ ಅತಿರೇಖತೆಗೆ ತಲುಪಿ ಏನೇನೋ ಆಡುವಂತೆ ಮಾಡುತ್ತಿದೆ. ಇದು ಸ್ಥಿತ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಇಲ್ಲದ ಆಟವಷ್ಟೆ...
 ಟಿ.ವಿ ಮಾಲೀಕರೇ ಯಾಕಿಷ್ಟು ಉತ್ಸಾಹ ನಿಮಗೆ ಬೇರೆಯವರ ಜೀವನದಾಟದಲ್ಲಿ.!? ಅದೇ ವೆಂಕಟ ಯಾಕೆ ಹೀಗಾದ ಅವನನ್ನು ಸರಿ ಮಾಡೋಕೆ ಆಗುತ್ತಾ? ಅವನಿಗೆ ನಮ್ಮಿಂದ ಏನಾದರೂ ಸಹಾಯ ಆಗಬಹುದಾ?, ಅವನ ಸಮಸ್ಯೆ ಏನು ಎಂಬಿತ್ಯಾದಿ ವಿಚಾರವನ್ನು ಗಹಗಹಿಸುವುದ ಬಿಟ್ಟು, ಅವನ ಜೊತೆ ಡಮ್ಮಿ ನಿರೂಪಕನೊಬ್ಬನನ್ನು ಕುಳ್ಳಿರಿಸಿ, ಅವನು ಹೇಳಿದ ಹಾಗೆ ಪೂಸಿ ಹೊಡೆದು ಮರುಮಾತನಾಡದೇ ಊಟ ಏನ್ ಮಾಡ್ತೀರಾ?, ಅವರ ಬಗ್ಗೆ ಏನ್ ಹೇಳ್ತೀರಾ?, ಇವರಿಗೆ ಬೈತೀರಾ!? ಎಂದೆಲ್ಲಾ ಕಾಲಹರಿಸಿ, ನಿಮ್ಮ ಜೀವನ ಉತ್ತುಂಗಕ್ಕೇರಿಸಿ, ಮತ್ತೊಬ್ಬನ ಜೀವನ ಪಲ್ಟಿ ಹೊಡೆಸುವುದು ಸರಿನಾ?  ದಯಮಾಡಿ ಉತ್ತರಿಸಿ.
ಹಿಂದಿನ ದಿನ  ಸ್ಟುಡಿಯೋದಲ್ಲಿಟ್ಟುಕೊಂಡು ಕೊಂಡಾಡಿದವರು ಆನಂತರ ದಿನ ಶಾಕ್ ನ್ಯೂಸ್‍ನ್ನು ಕೊಟ್ಟು ಮತ್ತೇ ಬ್ರೇಕಿಂಗ್ ಎಂದರು. ಬಹುಶಃ ಇಷ್ಟು ಆಗಬೇಕು ಎಂದು ಕಾದಿದ್ದರೋ ಗೊತ್ತಿಲ್ಲ ಆದರೂ ಇಷ್ಟಾಯ್ತು...
“ ಕುತಂತ್ರದಿಂದ ಮಸಿ ಬಡಿಸಿದರು, ಬಾಯಿಗೆ ಬಂದಂತೆ ಮಾತಾಡಿಸಿದರು. ವೆಂಕಟ್ ಮೇಲೆ ಆರೋಪ ಬಿತ್ತು, ಪೋಲೀಸರು ಅರೆಸ್ಟ್ ಮಾಡಿದ್ರು, ಕೋರ್ಟ್‍ಗೆ ಹಾಜರು ಪಡಿಸಿದ್ರು...ಕೋರ್ಟ್ ಹಾಲ್ ತುಂಬಿತ್ತು... ನೂರಕ್ಕೂ ಹೆಚ್ಚು ಅಡ್ವೋಕೇಡ್‍ಗಳು ವೆಂಕಟ್‍ನ ನೋಡಲು ಮುಗಿಬಿದ್ರು, ಆದರೆ ವಿಚಾರಣೆ ವೇಳೆ ವೆಂಕಟ್ ಪರ ವಕೀಲರು ಜೆರಾಕ್ಸ್‍ಗೆಂದು ಹೋದವರು ಬರಲಿಲ್ಲ... ಕೋರ್ಟ್ ಹಾಲ್‍ನಲ್ಲಿದ್ದ 400 ಕ್ಕೂ ಅಧಿಕ ವಕೀಲರು ವೆಂಕಟ್ ಬಳಿ ನಾವೇ ಬಂದು ಪುಕ್ಸಟ್ಟೆ ವಾದ ಮಂಡಿಸ್ತೀವಿ ಅಂತದ್ರು. ಆದರೆ ನಂತರ ಸುಮ್ಮನಿರಿ ಎನ್ನುವ ಜಡ್ಜ್ ಮಾತಿಗೆ ಎಲ್ಲ ಸುಮ್ಮನಾದ್ರು.  ಜಡ್ಜೇ ವಾದ ಶುರು ಮಾಡಿದ್ರು... ನೀನು ಅಂಬೇಡ್ಕರನ್ನು ನಿಂದಿಸಿದ್ದು ನಿಜಾನಾ ಅಂತ ಕೇಳಿದ್ರು. ಪಾಪ ವೆಂಕಟ್ ನಿಜ ನುಡಿದು ಹೌದೆಂದ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು ಕೋರ್ಟ್. ವೆಂಕಟ್ ಅಣ್ಣ ಮಾತ್ರ ಎಲ್ಲದಕ್ಕೂ ಮೀಡಿಯಾಗಳೇ ಕಾರಣ ಎಂದ್ರು. ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದ್ರು. ಅಲ್ಲೂ ಅಭಿಮಾನಿಗಳ ಜೈಕಾರ ಸಿಕ್ತು...”
ಇಷ್ಟೆಲ್ಲಾ ಆಯ್ತು ಇನ್ನು ಅದರ ಫಲಿತಾಂಶ ಎಲ್ಲಿಗೆ ಹೋಗಿ ಮುಟ್ಟುವುದೋ ಆ ದೇವನೇ ಬಲ್ಲ. ಆದರೆ ಟಿ.ಆರ್.ಪಿ ಸಮರಕ್ಕಾಗಿ ಮತ್ತೊಬ್ಬನ ಜೀವನವನ್ನೇ ಸಮರ ಸಾರುವುದು ಎಷ್ಟು ಸರಿ...? ಮಾನಸಿಕವಾಗಿ ನೊಂದಿರುವವನ್ನು ಕೂರಿಸಿ ಮಜಾ ತಗೊಂಡ್ರು... ಟಿ.ಆರ್.ಪಿ ಸುಲ್ತಾನ ಏಕಾಂಗಿಯಾಗಿ ಇರಲು ಬಿಡದೆ ಪ್ರಚೋಧನಾತ್ಮಕವಾಗಿ ಕೆಣಕಿ ಕಣ್ಣೀರು ಸುರಿಸುವಂತೆ ಮಾಡಿದರು. ಅಣ್ಣ ತಮ್ಮಂದಿರಂತಿದ್ದವರನ್ನು ದಾಯಾದಿಗಳಂತೆ ಮಾಡಿದರು. ನಿಜಕ್ಕೂ ಇದು ವಿಚಾರ ಹೀನತೆಯ ಪರಮಾವಧಿ, ಟಿ.ಆರ್.ಪಿ ಹುಚ್ಚು


ಹೆಣ್ಣು-12


ಹೆಣ್ಣಿನ ಮೇಲಿನ ದುರಾಕ್ರಮಣ, ಅತ್ಯಾಚಾರ, ಅನಾಧಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಈ ಬಗ್ಗೆ ನಮ್ಮ ಪುರಾಣಗಳಲ್ಲೂ ಕೂಡ ಬಹಳಷ್ಟು ಹೃದಯ ವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣನ್ನು ತನ್ನ ಭೋಗದ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ಈ ನಡೆಯನ್ನು ಸಮಾಜ ಕೂಡ ಸತತವಾಗಿ ಕ್ಷಮಿಸುತ್ತಲೇ ಬಂದಿದೆ. ಕೇವಲ ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು  ನೋಡಿದರೂ ಇದೇ ಕಥೆ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬಾಕೆಯನ್ನು ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಬಹುದಾದರೂ, ಅದು ಕೇವಲ ಸಂಭೋಗವೇ ಆಗಿರಬೇಕೆಂದೇನೂ ಇಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಕೆಣಕುವುದು, ಪೀಡಿಸುವುದು, ಚುಡಾಯಿಸುವುದು ಅನಾವಶ್ಯಕವಾಗಿ ಅವಳ ಮೇಲೆ ಕೈಯಾಡಿಸುವುದು, ಮುಟ್ಟುವುದು ಕೂಡ ಅತ್ಯಾಚಾರದ ಪರಿಧಿಯೊಳಗೆ ಬರುತ್ತದೆ.
ಕೇವಲ ಮನುಷ್ಯ ವರ್ಗದಲ್ಲಿ ಮಾತ್ರವಲ್ಲದೆ ಪ್ರಾಣಿವರ್ಗವೆನ್ನುವ ಎಲ್ಲಾ ಜಾತಿಯಲ್ಲೂ ಈ ಅತ್ಯಾಚಾರವೆನ್ನುವುದು ಸಾಮಾನ್ಯವಾದರೂ, ಮನುಷ್ಯನ ಮಾನಕ್ಕೆ ಜಾಸ್ತಿ ಬೆಲೆ ಎನ್ನುವಂತೆ ಮನುಷ್ಯರಾದ ನಮ್ಮ ಘಟನೆಯನ್ನು ಮಾತ್ರಾ ಪ್ರತಿಬಿಂಬಿಸುತ್ತಾ ಸಾಗುತ್ತೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತಿದ್ದರೂ, ನಡೆದದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಆಗಿದ್ದೆಲ್ಲವೂ ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಗಣನೆಗೆ ತೆಗೆದುಕೊಂಡು ನೋಡಿದರೆ ಒಂದು ಕ್ಷಣ ಎಂತಹವರು ದಂಗಾಗಬೇಕು ಹಾಗಾಗುತ್ತದೆ.
ಒಂದು ಮೂಲಗಳ ಪ್ರಕಾರ, ನಮ್ಮ ಕರ್ನಾಟಕದಲ್ಲೇ 2008 ರಿಂದ 2012 ರ ವರೆಗೆ 2,798 ಅತ್ಯಾಚಾರ ಪ್ರಕರಣಗಳು ನಡೆದಿವೆಯಂತೆ. ಇದು ಪೋಲಿಸ್ ಇಲಾಖಾ ವರದಿಯಾದರೆ ಲೆಕ್ಕಕ್ಕೆ ಸಿಗದೆ ಮಣ್ಣು ಕಚ್ಚಿರುವ ರೋಧನಿಕೆ ಎಷ್ಟು ನಡೆದಿವೆಯೋ ದೇವನೇ ಬಲ್ಲ. ಇನ್ನೂ ಈ ಅಂಕಿ ಸಂಖ್ಯೆಯನ್ನು ದೇಶೀಯ ಮಟ್ಟದಲ್ಲಿ ಗಮನಿಸಿದರೆ 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದ್ದು, 22,172 ಲೈಂಗಿಕ ಆಕ್ರಮಣ, 40,613 ಅಸಭ್ಯ ವರ್ತನೆಗಳ ಕೇಸ್‍ಗಳು ದಾಖಲೆಯಲ್ಲಿವೆ. 2011ರ ಅಂಕಿ ಅಂಶಗಳ ಪ್ರಕಾರ ಪ್ರತಿ 54 ನಿಮಿಷಗಳಿಗೊಂದು ರೇಪ್, 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ, 26 ನಿಮಿಷಗಳಿಗೊಮ್ಮೆ ಹೆಂಗಸನ್ನು ಚುಡಾಯಿಸುವುದು, 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ ನಡೆದಿದೆಯಂತೆ. ಇವೆಲ್ಲವನ್ನು ಮೀರಿ ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ.
ಅತ್ಯಾಚಾರವೊಂದು ಗುರುತರವಾದ, ಅಮಾನವೀಯ ಅಪರಾಧ ಅದಕ್ಕೆ ತಕ್ಕ ಶಿಕ್ಷೆಯಾಗಬೇಕೆಂಬುನ್ನು ಸಮಾಜ ಪದೆ ಪದೇ  ಸಭೆ, ಪ್ರತಿಭಟನೆ, ಭಾಷಣದಲ್ಲಿ ತೋರ್ಪಡಿಸುತ್ತಿದ್ದರೂ ಯಾವ ಬದಲಾವಣೆಯೂ ಆಗುತ್ತಿಲ್ಲ. ದಿನೇ ದಿನೇ ಹೆಣ್ಣು ಮಕ್ಕಳ ಈ ಶೋಷಣೆ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಭವಣೆ ನೀಗಲು ಕಾನೂನು ಕೈ ಇದ್ದರೂ ಸಮರ್ಪಕವಾದ ವಿಚಾರಣೆಯಿಲ್ಲದೆ ಆರೋಪಿಗಳೆಲ್ಲ ಕೈ ತಪ್ಪಿಸಿಕೊಳ್ಳುತ್ತಿದ್ದಾರೆ.
 ಒಂದಂತು ನಿಜ...
‘ದಶ ಶಿರಂ ಪೊತ್ತೊಯ್ಧುದು ಒರ್ಬನ ಸತಿಯನಲ್ತು, ಸತಿತನವನ್  ಉಯ್ದಿಹನ್...’ ಎಂಬ ಸಾಲು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹೇಗಿದೆಯೋ ಹಾಗೆ ಇಂದು ಅತ್ಯಾಚಾರ ವೈಯಕ್ತಿಕವಾಗಿ ಯಾವುದೋ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವುದಿಲ್ಲ. ಅದು ಇಡೀ ಹೆಣ್ಣು ಕುಲದ ಮೇಲೆ, ಆ ಮನು ಕುಲದ ಮೇಲೆ ನಡೆಯುತ್ತಿರುವ ಅತ್ಯಾಚಾರ. ಅದರ ಹೊಣೆಯನ್ನು ಇಡೀ ಮನುಕುಲವೇ ಹೊರಬೇಕಾಗಿದೆ. ‘ಪುರುಷನಿರಲಾಗದು ಈ ಧರೆಯ ಮೇಲೊರ್ವನುಂ  ಪೊರೆಯದೆ ಅನ್ನೆಗಂ ಆ ಸತೀತ್ವಮಂ...’ ಎಂಬ ರನ್ನನ ಮಾತುಗಳನ್ನು ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ಈ ಅತ್ಯಾಚಾರದ ಅನಿಷ್ಟವನ್ನು ತಡೆಯಲಾಗದಿದ್ದರೆ ಈ ಭೂಮಿಯ ಮೇಲೆ ವಾಸಿಸುವ ಹಕ್ಕನ್ನು ಮನುಷ್ಯ ಕಳೆದುಕೊಳ್ಳುತ್ತಾನೆ ಎಂದರ್ಥ...

Saturday, 7 November 2015

ಚಿಂತನೆಯಿಂದ ಅಳಿಯದು ಉಳಿವಿನ ಚಿಂತೆ...


“ದೂರದ ಆಂಧ್ರಪ್ರದೇಶಕ್ಕೆ ಸೇರಿದ  ರಾಯದುರ್ಗದ ಮೋಣಕಾಲ್ಮೂರಿನಿಂದ 11 ಕಿ.ಮೀ ದೂರದಲ್ಲಿರುವ ಆಂಧ್ರಕರ್ನಾಟಕ ಗಡಿಭಾಗದ ಊರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ”.
 ಹೀಗೋಂದು ಅಚ್ಚರಿಯ ಸುದ್ಧಿ ಕೇಳಿ ಪುಳಕಗೊಂಡೆ...
                           ನಿಜ ಕೇವಲ ರಾಯದುರ್ಗವಷ್ಟೇ ಅಲ್ಲದೇ ರಾಜ್ಯದ ಗಡಿ ಭಾಗದಲ್ಲಿರುವ ಹಿರಿಯೂರು, ಚಳ್ಳಕೇರೆ, ಮೊಣಕಾಲ್ಮುರು ತಾಲ್ಲೂಕುಗಳು, ಅಲ್ಲಿನ ಅನೇಕ ಹಳ್ಳಿಗಳು, ಮೊಣಕಾಲ್ಮೂರಿನ ನೆರೆಯ ತಾಲ್ಲೂಕುಗಳು, ನೆರೆಯ ಆಂಧ್ರಪ್ರದೇಶದ ಹಳ್ಳಗಳೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಪರಸ್ಫರ ಸಂಬಂಧವನ್ನು ಹೊಂದಿರುವುದು ಮಾತ್ರವಲ್ಲದೇ, ಗಡಿಭಾಗದಲ್ಲಿರುವ ಏರಡೂ ರಾಜ್ಯಗಳ ಹಳ್ಳಿಗಳಲ್ಲಿ  ಆಚಾರ, ವಿಚಾರ, ಸಂಸ್ಕøತಿಗಳು ಅದೆಲ್ಲಕ್ಕಿಂತ ಹೆಚ್ಚಾದ ಬುಡಕಟ್ಟು ಸಂಸ್ಕೃತಿ ಒಂದೇ ರೀತಿಯಲ್ಲಿವೆ. ಒಂದು ಮಾಹಿತಿಯ ಪ್ರಕಾರ ಇಡೀ ಆಂಧ್ರದಾದ್ಯಂತ 84 ಕನ್ನಡ ಶಾಲೆಗಳಿದ್ದು, ಅಲ್ಲಿನ ಮಕ್ಕಳು ಕನ್ನಡ ವಿಧ್ಯಾಭ್ಯಾಸವನ್ನೇ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಗಡಿನಾಡಭಾಗದಲ್ಲಿರುವ ಜನ ಕನ್ನಡ ಸಾಹಿತ್ಯವನ್ನು ಓದುವ ಬರೆಯುವ ಹಾಗೂ ಅದರ ಬಗ್ಗೆ ಮಾತನಾಡುವಂತಹ ಅಭಿರುಚಿಯನ್ನು ಹೆಚ್ಚು ಮೈಗೂಡಿಸಿಕೊಂಡಿದ್ದು, ಅಲ್ಲಿ ಸುಮಾರು ಜನ ಕನ್ನಡ ಸಾಹಿತಿಗಳನ್ನು ನಾವು ಕಾಣಬಹುದಾಗಿದೆ ಎಂದರೆ ಅಚ್ಚರಿಯಾಗದೇ ಇರಲು ಸಾಧ್ಯವೇ ನೀವೆ ಹೇಳಿ... ನೋಡಿ ಕನ್ನಡ ಪ್ರೀತಿ ಅಂದರೆ ಇದು. ಗಡಿನಾಡಿನಲ್ಲಿದ್ದುಕೊಂಡು ನಾಡು ನುಡಿಯ ಕಂಪನ್ನು ಉಳಿಸುತ್ತಿರುವ, ಬೆಳೆಸುತ್ತಿರುವ ಅವರ ಮುಂದೆ ರಾಜಧಾನಿಯಲ್ಲಿದ್ದುಕೊಂಡು ಪರಭಾಷೆಯನ್ನು ಉಪಯೋಗಿಸುತ್ತಿರುವ ನಾವುಗಳು ಶೂನ್ಯರೆಂದರೆ ಯಾವ ತಪ್ಪಿಲ್ಲ ಬಿಡಿ...
               ನಿಜಕ್ಕೂ ಸತ್ಯ, ಕನ್ನಡ ಭಾಷೆ, ಅದರ ಉಳಿಯುವಿಕೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಆಂದೋಲನ, ಜಾಗೃತಿಗಳನ್ನು ನಮ್ಮಲ್ಲಿ ನಾವೇ ಎತ್ತಿಕೊಂಡಿದ್ದರೂ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಭಿತ್ತಿಕೊಂಡಿದ್ದರೂ, ಎಲ್ಲವೂ ಮುಗಿದ ಮೇಲೆ ನಾವು ಮೊರೆಹೋಗುವುದು ಅನ್ಯಭಾಷೆಗೆ!!!. ಏನು ಮಾಡಲಾಗದು ಸರ್, ವ್ಯವಹರಿಸಲು, ಆಧುನಿಕತೆಯ ಸರಪಳಿಯಲ್ಲಿ ಬದುಕಲು ಅನ್ಯಭಾಷೆ ಬೇಕೆ ಬೇಕು ಎನ್ನುತ್ತೀರಾ!?... ಇರಬಹುದು ಆದರೆ ಅದನ್ನೇ ನಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸಿ, ನೋಡಪ್ಪ ಅದನ್ನು ಬಿಟ್ಟರೆ ಸಾಧನೆ ಸಾಧ್ಯವಿಲ್ಲ. ನಮ್ಮ ಭಾಷೆ ಬೇಕಾಗಿಲ್ಲ ಅನ್ನುತ್ತಿರುವುದು ಎಷ್ಟು ಸರಿ!? ನೀವೆ ಹೇಳಿ!???. ನಾವು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು, ಇಲ್ಲಿನ ಅನ್ನ ನೀರನ್ನೇ ಉಪಯೋಗಿಸಿಕೊಂಡು ನಮ್ಮ ತನವನ್ನೇ ಮರೆತು ಹೆತ್ತವ್ವನ ಭಾಷೆಯನ್ನೇ ಕಡೆಗಣಿಸುತ್ತಿರುವಾಗ, ರಾಜ್ಯದ ಗಡಿ ಭಾಗದಲ್ಲಿ ಇನ್ನೊಂದು ಭಾಷೆಯ ಕಲಿಕೆಯ ಒತ್ತಡವಿದ್ದರೂ ಕನ್ನಡದ ಭಾಷೆಯೇ ಬೇಕು ಎಂದು ಅತೀವ ಆಸಕ್ತಿ ವಹಿಸಿ, ವ್ಯವಹರಿಸಿ, ಶಿಕ್ಷಣ ವಿನಿಮಯಿಸಿಕೊಳ್ಳುತ್ತಿರುವ ಗಡಿನಾಡ ಜನರಿಗೆ ನಿಜಕ್ಕೂ ಸೆಲ್ವ್ಯುಟ್ ಹೊಡೆಯಬೇಕೆನಿಸುತ್ತದೆ.
ಕರ್ನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ, ಬೆಳೆಸುವ ಬಗ್ಗೆ ಚರ್ಚೆ ಆಂದೋಲನಗಳು ನಡೆಯುತ್ತಲೇ ಇರುತ್ತವೆ. ವಿಚಾರವಾದಿಗಳು, ಬುದ್ಧಿಜೀವಿಗಳು ಭಾಷಣ ಬಿಗಿಯುತ್ತಲೇ ಇರುತ್ತಾರೆ. ಆದರೂ ಚಿಂತನೆಗಳಿಂದ ಕನ್ನಡz ಉಳಿವಿನ ಚಿಂತೆ ಮಾತ್ರ ಅಳಿಯುತ್ತಿಲ್ಲ. ಯಾವ ಚಿಂತನೆಗಳು ಕಾರ್ಯರೂಪಕ್ಕೆ ಇಳಿಯದ ಕಾರಣ ಕನ್ನಡದ ಸ್ಥಿತಿ ಇನ್ನೂ ಚಿಂತಾಕ್ರಾಂತವಾಗಿಯೇ ಇದೆ. ಮಾತೆತ್ತಿದರೆ ಕನ್ನಡ ಎಂದು ಹೋರಾಡುವವರೆ ತಮ್ಮ ಮಕ್ಕಳನ್ನು ಒಂಗ್ಲೀಷ್ ಸ್ಕೂಲ್‍ಗೆ ಸೇರಿಸುತ್ತಾರೆ, ದಿನದ ವ್ಯವಹಾರನ್ನು ಅನ್ಯಭಾಷೆಯ ಗೋಜಿಗೆ ಬಿದ್ದು ದಣಿವಾರಿಸಿಕೊಳ್ಳುತ್ತಿದ್ದಾರೆ. ಹೋರಾಟದ ಸಂಖ್ಯೆ, ಹೋರಾಟಗಾರರ ಸಂಖ್ಯೆ, ಅಳಿವಿ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ, ರಾಜಕೀಯ ಪಕ್ಷದ ಕನ್ನಡ ಹೇಳಿಕೆಯ ಕಂತೆ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೊಗುತ್ತಿದ್ದರೂ, ನಾಡಿನಲ್ಲಿರುವ ಇಂಗ್ಲೀಷ್ ಶಾಲೆಗಳ ಸಂಖ್ಯೆ, ಅಲ್ಲಿಗೆ ಮಕ್ಕಳನ್ನು ಕಳಿಸುವ ಪೋಷಕರ ಸಂಖ್ಯೆ, ದಿನೇ ದಿನೇ ಹೆಚ್ಚುತ್ತಿರುವ ಅನ್ಯಭಾಷೆಯ ಅಳವಡಿಕೆ, ಯಾವುದು ಕುಗುತ್ತಿಲ್ಲ. ಇಷ್ಟೇಲ್ಲಾ ಧ್ವಂಧ್ವಭಯದ ನಡುವೆಯೂ ಮತ್ತೊಂದು ರಾಜ್ಯೋತ್ಸವ ಬಂದೇ ಬಿಟ್ಟಿದೆ. ಹೋದ ವರ್ಷ ಹಾಕಿದ್ದ ಶಪತಗಳೆಲ್ಲವೂ ಅಲ್ಲೆ ಸತ್ತಿವೆ. ಭಯವಿಲ್ಲ ಈ ವರ್ಷ ಇನ್ನಷ್ಟೂ ಮಾರುದ್ದದ ಶಪತಗಳು ರಾರಾಜಿಸುತ್ತವೆ ಸಂದೇಹವೆ ಬೇಡ. ರಾಜಕೀಯ ಪುಡಾರಿಗಳೇ ದಯವಿಟ್ಟು ನಿಮ್ಮಲ್ಲೊಂದು ವಿನಂತಿ. ನಿಮ್ಮ ಬೆಳೆ ಬೇಯಿಸಿಕೊಳ್ಳಲು ನಮ್ಮ ತಾಯ ನುಡಿಯನ್ನು ಅಸ್ತ್ರವಾಗಿಸಿಕೊಳ್ಳದಿರಿ...
ಮುಖ್ಯವಾಗಿ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಕನ್ನಡ ಕಲಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿ ಬಿಟ್ಟಿದೆಯೇನೊ ಎಂದೆನಿಸುವ ಸುಪ್ತತೆಗೆ ತೆರಳಿರುವುದು ವಿಷಾಧಕರ. ಇದಕ್ಕೆ ಕಾರಣ ಕನ್ನಡ ಭಾರದ ಅನ್ಯಭಾಷೆಯ ಜನ ಇಲ್ಲಿಗೆ ವಲಸೆ ಬಂದಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕನ್ನಡ ಕಲಿಸುವ ಶಾಲೆಗಳ ಕೊರತೆ ಎನ್ನುವುದು ಎದ್ದು ಕಾಣುತ್ತದೆ.
ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ನೆಲಕ್ಕೆ ಗಟ್ಟಿತನವಿದೆ, ಭವ್ಯ ಪರಂಪರೆ ಇದೆ. ಆದರೆ ನಾವು ಸ್ವಯಂ ಪ್ರೇರಿತರಾಗಿ ಉಳಿಸಿ ಬೆಳೆಸುತ್ತಿಲ್ಲ ಅಷ್ಟೆ. ನಮ್ಮ ಇಡೀ ಭಾರತ ದೇಶದಲ್ಲಿ ನೂರಾರು ಭಾಷೆಗಳು ಸಾವಿರಾರು ವರ್ಷಗಳಿಂದ ಸಹಭಾಳ್ವೆ ನಡೆಸುತ್ತಿದ್ದದ್ದು ನಿಮಗೆ ಗೊತ್ತೆ ಇರಬಹುದು.  ಅದನ್ನು 1929ರಲ್ಲಿ ಲೆಕ್ಕಾಚಾರದ ಆಯಾಮಕ್ಕೆ ತಂದ ಗ್ರಿಯರ್ಸನ್ ಎಂಬಾತ  ಸುಮಾರು 139 ಭಾಷೆಗಳು, 544 ಉಪಭಾಷೆಗಳು ಇವೆಯೆಂದು ಮೊಟ್ಟ ಮೊದಲಬಾರಿಗೆ ಭಾಷಾ ಪರಿವೀಕ್ಷಣೆಯಲ್ಲಿ ಗುರುತಿಸಿ ತಿಳಿಸಿದ್ದ. ನಂತರ 1961ರ ಜನಗನತಿಯು 1652 ವರ್ಗೀಕೃತ ಭಾಷೆಗಳು, 184 ಅವರ್ಗೀಕೃತ ಭಾಷೆಗಳು ಇವೆಯೆಂದು ಗುರುತಿಸಿತು. ಆನಂತರದಲ್ಲಿ ಒಟ್ಟು 22 ಭಾಷೆಗಳನ್ನು ಭಾರತೀಯ ಸಂವಿಧಾ£ದÀ 8ನೇ ಅನುಸೂಚಿಯ ಭಾಷೆಯಲ್ಲಿ ಸೇರಿಸಿದ್ದು ಇದರಲ್ಲಿ ಕನ್ನಡ ಭಾಷೆಯೂ ಒಂದು ಎನ್ನುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಇಂತಹ ಪುರಾತÀನ ಮಹತ್ವವಿರುವ, ಪ್ರತಿಶತ 99.99ರಷ್ಟು ವೈಜ್ಞಾನಿಕ ಹಾಗೂ ತರ್ಕಬದ್ಧವಾದ ನಮ್ಮ ಭಾಷೆಯನ್ನು ಉಳಿಸಿ-ಬೆಳೆಸಬೇಕಾದ ನಾವೇ ಇಂದು ಮೂಲೆ ಸೇರುತ್ತಿರುವುದು ನೋವಿನ ವಿಚಾರ. ಏನಾದರಾಗಲಿ ಎದ್ದು ಹೊರಾಡೋಣ ನಮ್ಮ ನಾಡು ನುಡಿಯನ್ನು ಎತ್ತಿ ಬೆಳೆಸೋಣ. ಇದು ನಮ್ಮದು ಎನ್ನುವುದಕ್ಕೆ ಹೆಮ್ಮೆ ಪಡೋಣ.
ಉಳಿಸಿ ಬೆಳೆಸುವುದ್ಹೇಗೆ?
ಲೇಖನಗಳು, ಭಾಷಣಗಳು, ಜಾಗ್ರತಿ ಸಭೆಗಳು ಅನಂತವಾಗಿ ಕೇಳಿಬರುತ್ತಲೇ ಇರುತ್ತವೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಕುರಿತು ಚಿಂತನೆ ನಡೆಯುವುದಿಲ್ಲ. ಈ ಬಗ್ಗೆ ಸಾಕಷ್ಟು ಗೊಂದಲ, ಅಡೆ-ತಡೆಗಳಿದ್ದರೂ, ನಮ್ಮ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡುವುದು ನಾಳೆಯ ಕನ್ನಡಕ್ಕೆ ಒಳಿತೆನ್ನಿಸುತ್ತದೆ. ಈಗಾಗಲೇ ‘ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ’ ಎಂಬ ಗುಂಪೊಂದು ತನ್ನದೇ ಒಂದಿಷ್ಟು ಜನರ ಸಂಘದೊಂದಿಗೆ ಕನ್ನಡ ಭಾಷೆಯ ನಾಳಿನ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದೆ. ಯುದ್ಧರಂಗಕ್ಕಿಳಿಯದೇ ಯುದ್ಧ ಗೆಲ್ಲುವುದು  ಅಸಾಧ್ಯ ಎನ್ನುವಂತೆ ನಾವು ನಮ್ಮ ಭಾಷೆಗಾಗಿ ಕಣಕ್ಕಿಳಿದು ಹೋರಾಡಬೇಕು ಅದರಲ್ಲಿ ಯಾವ ಮುಲಾಜೂ ಬೇಡ. ರಾಜ್ಯ ರಾಜಧಾನಿ ಬೆಂಗಳೂರನ್ನು ತುಂಬುತ್ತಿರುವ ಅನ್ಯಭಾಷಿಕರನ್ನು ಕನ್ನಡ ಕಲಿಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಭಾಷಾಭಿಮಾನವನ್ನು ಬೆಳೆಸಬೇಕು. ಕನ್ನಡ ನಾಡಿನ ಸಂಸ್ಕ್ರತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳುವ ಮತ್ತು ಹಬ್ಬಿಸುವ ಕೆಲಸಕ್ಕೆ ನಮ್ಮ ಭಾಷಣಿಕರು, ನುಡಿಪ್ರೇಮಿಗಳು, ಸಂಘಟನೆಗಳು  ಸೀಮಿತವಾಗದೇ ನಮ್ಮ ಭಾಷೆಯ ಗತ್ತನ್ನು ಕಾರ್ಯರೂಪzಲ್ಲಿ ತೋರಿಸಿ, ಅವ್ಯಾಹತವಾಗಿ ತೋರಿಸಿ ಎಲ್ಲರಲ್ಲೂ, ಕನ್ನಡವೆ ಸತ್ಯ, ಕನ್ನಡವೇ ನಿತ್ಯವೆನ್ನುವ ಬೀಜವನ್ನು ಭಿತ್ತಬೇಕು. ಅಷ್ಟೇ ಅಲ್ಲದೇ ನಗರದ  ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಸಂಘ ಸಂಸ್ಥೆಗಳ ಸಮೀಕ್ಷೆ ಮಾಡಿ ಅಲ್ಲಿನ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನಾಡಿನ ಗಡಿ ಪ್ರದೇಶದಲ್ಲಿರುವ ಶಾಲೆಗಳಿಗೆ ಸರಿಯಾದ ಮೂಲಭೂತ ವ್ಯವಸ್ಥೆ ಹಾಗೂ ಅಗತ್ಯ ಪಠ್ಯಪುಸ್ತಕಗಳ ಸೌಕರ್ಯವನ್ನು ಸರ್ಕಾರ ಓದಗಿಸಬೇಕು. ಕನ್ನಡ ಭಾರದಿರುವವರು ದಿನೇ ದಿನೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಭಾಷಾಮಾಲಿನ್ಯಕ್ಕೆ ನೇರ ಕಾರಣವಾಗುತ್ತಿದೆ. ಅದಕ್ಕಾಗಿ ಎಲ್ಲರೂ ಸುಲಭವಾಗಿ ಅರಿಯುವ ಹಾಗೂ ಸಂಭಾಷಿಸುವಂತಹ ಸ್ವಯಂ ಭೋಧನ ಕಲಿಕಾ ಪುಸ್ತಕಗಳನ್ನು ಪ್ರಕಟಿಸಬೇಕು. ಕಾರ್ಮಿಕರ ಅನಕ್ಷರಸ್ತ ಮಕ್ಕಳಿಗೆ ಕನ್ನಡ ಭೋಧಿಸುವ ಕಾರ್ಯ ಸರ್ಕಾರ ರೂಪಿಸಬೇಕು.ಕನ್ನಡ ಶಾಲೆಗಳ ಬೆಳವಣಿಗೆಗೆ ಶ್ರಮಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಕೊಂಡು ಓದುವ  ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಬರೆಯುವ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲೇ ಲಿಪಿಯ ಸೌಂದರ್ಯ ಕೆಡದಂತೆ ಬರಯುವ ಕೆಲಸವನ್ನು ಕಡ್ಡಾಯಗೊಳಿಸಬೇಕು.
ವಾಹನದ ತೆಕ್ಕೆಗೆ ಕನ್ನಡ ಭಾವುಟವನ್ನು ಹಾಕಿ ಒಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಅನ್ಯರಾಜ್ಯದವರ ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ ,ದುಂದು ವೆಚ್ಚದ ರಾಜ್ಯೋತ್ಸವದ ಆಚರಣೆಯಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ. ಚಾನೆಲ್ ಗಳನ್ನು ನಿರ್ಭಂಧಿಸುವುದರಿಂದ ಕನ್ನಡದ ಬೆಳವಣಿಗೆಯಾಗುತ್ತದೆ ಎನ್ನುವುದು  ಕೇವಲ ಭ್ರಮೆ ಮಾತ್ರ. ಈ ವಿಧಾನಗಳೆಲ್ಲ ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದೇ ವಿನಃ ಬೇರೇನೂ ಸಾಧಿಸದು.
ಇನ್ನಾದರೂ ಮಾತು ಕಡಿಮೆ ಮಾಡಿ ಕೈಗೊಂಡಿರುವ, ಹಿಂದೆ ವಾಚಸಿಕೊಂಡಿರುವ ಮಾತುಗಳ ನೆರವೇರಿಕೆಯನ್ನು ಕಾರ್ಯಗತಗೊಳಿಸಲು ಪಣತೊಡೋಣ. ಅದರ ಮೂಲಕ ನಮ್ಮ ನಾಡು-ನುಡಿಯನ್ನು ಉಳಿಸೋಣ ಬೆಳೆಸೋಣ ಏನಂತೀರಾ!?...

.................................ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು................................................

Friday, 6 November 2015

ಅಕ್ರಮ ಮಧ್ಯ ಮಾರಾಟ, ಮಂದಿಗೆ ಮಾರಣವಾಗುತ್ತಿದೆ.

ಹಳ್ಳಿಗಳ ಮೂಲೆ ಮೂಲೆಯ ಜನತೆಯಲ್ಲಿ ಬೀಡು ಬಿಟ್ಟ ಆತಂಕ
ಇದು ಸೆಕೆಂಡ್ಸ್ ಮಧ್ಯವಲ್ಲ ಬದಲಾಗಿ ನಕಲಿ ಮಧ್ಯ
ಇದೇ ರೀತಿ ಗ್ರಾಮೀಣ ಭಾಗದಲ್ಲಿ ತೀರ್ಥ ಸಮಾರಾಧನೆ ಮಿತಿಮಿರಿದರೆ ಮುಂದಾಗುತ್ತದೆ  ವ್ಯಸನಿಯ ವೈಕುಂಟ ಸಮಾರಾಧನೆ
ಪಾಕೆಟ್ ಹೋಯ್ತು ಬಾಟಲಿ ಬಂತು


         ಕಳೆದ ಏಳೆಂಟು ವರ್ಷಗಳ ಹಿಂದೆ ರಾಜ್ಯ ಸರಕಾರ ಸಾರಾಯಿ ನಿಷೇಧ ಮಾಡಿದಾಗ ಸರಕಾರವೇನೋ ಘÀನಂಧಾರಿ ಕೆಲಸ ಮಾಡಿತ್ತು ಎಂಬಂತೆ ಎಲ್ಲರೂ ಬೇಷ್ ಎಂದಿದ್ದೂ ಈಗಲೂ ನಿಮಗೆಲ್ಲಾ ನೆನಪಿರಬಹುದು. ಅಂದಿನ ಕಾಲಘಟಕ್ಕೆ  ಆ ನಿಷೇಧದ ನಿರ್ಧಾರ ರಾಜ್ಯಕ್ಕೆ ಒಳ್ಳೆಯದು ಕೂಡ ಆಗಿತ್ತು. ಆದರೆ ಇಂದು ಕರಾವಳಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಅಕ್ರಮ ಮಧ್ಯ ಮಾರಾಟದ ಜಾಲ ಭುಗಿಲೆದ್ದಿದ್ದು, ಈಗÀದನ್ನು ಅದನ್ನು ಹತ್ತಿಕ್ಕದಿದ್ದರೆ ನಾಳೆಯ ದಿನಗಳಲ್ಲಿ ಅದು ಗ್ರಾಮೀಣವಾಸಿಗಳ ಜನ ಜೀವನವನ್ನು ತತ್ತರಿಸಿ ಬಿಡುವುದರಲ್ಲಿ ಯಾವ ಸಂಶಯವಿಲ್ಲ. ಅಂದದರ ನಿಷೇಧ ಕಂಡಾಗ ಎಷ್ಟೋ ಮನೆಗಳಲ್ಲಿ ನಗುವಿನ ಅಲೆ ತೇಲಿತ್ತು, ಆದರೆ ಇಂದು ಆ 10 ರುಪಾಯಿಗೆ ಸಿಗುತ್ತಿದ್ದ ಸಾರಾಯಿ ಪಾಕೆಟ್‍ಗಳಾದರೂ ವಾಸಿಯಾಗಿತ್ತು ರೀ, ನೂರಿನ್ನೂರು ರೂಪಾಯಿಯ ಬಾರ್ ಬಾಟಲಿಯ ಸಹವಾಸದಿಂದ ಗಂಜಿ ನೀರಿಗೂ ಪರದಾಡುವಂತಾಗಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ!.
ಅಂದು ಹೇಗೆ ಮಾರು ದೂರದ ಅಂಗಡಿಗಳಲ್ಲಿ ಸಾರಾಯಿ ಅಂಗಡಿ ಎನ್ನುವ ಫಲಕದೊಂದಿಗೆ ಪಾಕೆಟ್‍ಗಳ ಸಾರಾಯಿ ಸಿಗುತ್ತಿತ್ತೋ, ಇಂದು ಅದೇ ರೀತಿ ನಾಮಫಲಕದ ಜೋತುವಿಕೆ ಇಲ್ಲದೇ ಬಾರ್‍ನ ಬಾಟಲಿಗಳು ಬಾಕ್ಸ್ ಬಾಕ್ಸ್ ನಲ್ಲಿ ಸಿಗುತ್ತಿವೆ. ಇದರಲ್ಲಿ ಸ್ಥಳೀಯ ಬಾರ್ ಓನರ್‍ಗಳ ಕೈವಾಡವೂ ಇದ್ದು, ಬಾರ್‍ನಿಂದ ಹಳ್ಳಿಯೊಳಗೆ ದಿನಸಿ ಅಂಗಡಿಗಳಿಗೆ ಡೈರೆಕ್ಟ್ ಸರಂಜಾಮು ಸಿಕ್ಕಿ ಊರಿಗೆ ಊರೇ ಕೆಡುವಂತೆ ಮಾಡುತ್ತಿದೆ. ಅನೇಕ ಹೆಂಗಸರು ಮಕ್ಕಳು ಇದರಿಂದ ಬೀದಿಗೆ ಬರುತ್ತಿದ್ದರೂ, ಸರ್ಕಾರ ಈ ಬಗ್ಗೆ ಯಾವುದೇ  ಕಟ್ಟುನಿಟ್ಟಿನ ಕ್ರಮವನ್ನೂ, ಕೈಗೊಳ್ಳದಿರುವುದು ನಿಜಕ್ಕೂ ಭಯತರಿಸುವಂತಿದೆ.
  ನಮ್ಮ ದೇಶದ ಜೀವಾಳವೇ ಹಳ್ಳಿಗಳು, ಗ್ರಾಮೀಣ ಪ್ರದೇಶಗಳು. ನಮ್ಮೆಲ್ಲರ ಅಳಿವು ಅಲ್ಲಿದೆ. ಉಳಿವೂ ಅಲ್ಲಿದೆ. ಹಳ್ಳಿಗಳನ್ನು ನಾವಿಂದು ಸುವ್ಯವಸ್ಥಿತವಾಗಿ ಉಳಿಸಿದರೆ ಅವು ಮುಂದೆಯೂ ನಮ್ಮನ್ನು ಸುಭಿಕ್ಷವಾಗಿ ಉಳಿಸುತ್ತವೆ. ಆದ್ದರಿಂದ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲ ಖಂಡಿತ ಇರುವುದಿಲ್ಲ. ಬಹಳ ವರ್ಷಗಳ ಹಿಂದೆ ಶೇ. 80ರಷ್ಟಿದ್ದ ಹಳ್ಳಯ ಜನಸಾಂಧ್ರತೆ ನಗರೀಕರಣದಿಂದ ಶೇ. 40 ರಿಂದ 50 ರ ಆಸುಪಾಸಿನಲ್ಲಿದೆ. ಇದೀಗ ಹಳ್ಳಿಯೂ ಬದಲಾವಣೆ ಕಂಡಿದೆ ಹಳ್ಳಿಯ ಜನರೆಲ್ಲ ಕೆಲಸವರಸಿ ಸಿ.ಟಿಯ ಕಡೆ ಪಯಣಿಸುತ್ತಿದ್ದಾರೆ ಇದರಿಂದ ಯಾವ ನಷ್ಟವಿಲ್ಲ. ದೇಶ ಪ್ರಗತಿಯಾಗುತ್ತದೆ, ಆದರೆ ಅನಾಚಾರ, ಅನಾಗರಿಕ, ಅವ್ಯವಸ್ಥೆ, ಅಕ್ರಮ, ಇತ್ಯಾಧಿಗಳು ನಡೆದರೆ ಮುಂಬರುವ  ಫಲ ಇಡೀ ದೇಶಕ್ಕೆ ದೇಶವೇ ಪಶ್ಚಾತಾಪಪಡುವಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶ್ರೀಮಾನ್ ರಾಜಕಾರಣಿಗಳೇ ನೀವೂ ಇಲೆಕ್ಷನ್ ಟೈಮಲ್ಲಿ, ಗೆದ್ದ ನಡುವಲ್ಲಿ, ಅದು ಇದು ಅಂತ ವಾಕ್ ಚಾತುರ್ಯವಾ ತೋರಿಸುತ್ತಾ ಮನೆ ಮನೆಗೆ ಕೇಳುವಂತೆ ಕೂಗುತ್ತಿರಿ, ಆದರೆ ಇಂದು ನಿಮ್ ಹಳ್ಳಿಗಳೇ ಈ ಅಕ್ರಮಗಳಲ್ಲಿ ಬಿದ್ದು ಸಾಯುತ್ತಿದೆ, ನೋಡಿ ಮಾಡಿ ಸರಿಪಡಿಸಲು ನಿಮಗೇನು ದಾಡಿಯಾ!? ಮುಖ್ಯಮಂತ್ರಿಗಳೇ ನಗರ ಮಂದಿಗೆ ಅದು ಇದು ಅಂತ ಹಣ ಸ್ಯಾಂಕ್ಷೆನ್ ಮಾಡುತ್ತಿರುವಿರಿ ಆದರೆ ದೇಶದ ಜೀವಾಳವೇ ಆಗಿರುವ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ, ಅಕ್ರಮಗಳ ತಡೆಯುವಲ್ಲಿ ದಕ್ಷ ಅಧಿಕಾರಿಗಳ ನೇಮಕ, ಸರಿಯಾದ ಕಟ್ಟುನಿಟ್ಟಿನ ಕ್ರಮ ಇತ್ಯಾದಿಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ!?, ನಗರ ಪ್ರದೇಶದಲ್ಲಿ ಬೇರೆ ಬೇರೆ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ನೀವುಗಳು ಹಳ್ಳಿಗಳ ಬೆಳವಣಿಗೆಗೆ ಯಾಕೆ ಸಹಕರಿಸುತ್ತಿಲ್ಲ!?, ಲಂಚಗುಳಿಕ ತನದ ಅಧಿಕಾರಿಗಳು ಇದ್ದರೆಂದು ತಿಳಿದರೂ ಅವರನ್ಯಾಕೆ ಕೆಲಸದಿಂದ ಎತ್ತಂಗಡಿ ಮಾಡುತ್ತಿಲ್ಲ!?, ಇದರಿಂದ ನಿಮಗೆಷ್ಟು ಹಣ ಕಿಸೆತುಂಬುತ್ತಿದೆ ಹೇಳಿ!?.
ಕಣ್ಣೇದುರೇ ಸೋಗಲಾಡಿಯ ದಂಧೆಗಳು ನಡೆಯುತ್ತಿದ್ದರೂ ಕಣ್ಣಿದ್ದು ಇಲ್ಲದವರಂತೆ ಮೂಖರಾಗಿ ನಿದ್ರಿಸುತ್ತಿರುವಿರಲ್ಲ ಅಧಿಕಾರಿಗಳೇ,  ನಿಮಗೆ ನಿಮ್ಮ ಕೆಲಸದಲ್ಲಿ ಅತೃಪ್ತಿ ಅಥವಾ ಧೃಡ ಮನಸ್ಸು ಇಲ್ಲವೆಂದರೆ ಹೇಳಿಬಿಡಿ ನಿಮಗಿಂತಲೂ ಹೆಚ್ಚು ಓದಿರುವ ಟ್ಯಾಲೆಂಟೆಡ್ ಎಂಗ್ ಮೈಂಡೆಡ್ ಹುಡುಗ/ಹುಡುಗಿಯರು ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ ಅವರಿಗಾದರೂ ಆ ಕೆಲಸ ಬಿಟ್ಟುಕೊಟ್ಟು ಸೈಲೆಂಟ್ ಆಗಿ ಸೈಡ್‍ಗೆ ಹೋಗಿ ಆಗಲಾದರೂ ದಕ್ಷ ರಾಜ್ಯ ಸೃಷ್ಟಿಯಾಗುತ್ತದಾ, ಇಲ್ಲವಾ ನೋಡೋಣ...
ವಿಷಯಕ್ಕೆ ಬರುತ್ತೇನೆ..,
ಕುಡಿತ ಕುಡಿಯುವವರನ್ನು, ಕುಡಿಯದವರನ್ನು ಟೋಟಲ್ಲಿ ಇಡೀ ಫ್ಯಾಮಿಲಿಯನ್ನು ವಿನಾಶದಂಚಿಗೆ ದೂಡುವುದಲ್ಲದೇ ಮಿತಿಮೀರಿದರೆ ದೇಶಭಾಂಧವ್ಯಕ್ಕೂ ಧಕ್ಕೆ ತರುವ ಪರಿಣಾಮಕಾರಿ ಕೆಟ್ಟತನವನ್ನು ಬೀರುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಮಧ್ಯಪಾನದಿಂದ ಸತ್ತವರ ಪ್ರತಿ ಕುಟುಂಬದಲ್ಲೂ ಒಂದೊಂದು ನೋವಿನ ಕಥೆ ಇದೆ, ಕೆಲ ಕುಟುಂಬಗಳು ಅನಾಥವಾಗಿವೆ, ಸತ್ತವರ ಮನೆ ಮಕ್ಕಳು ವಿಘಟಿತರಾಗಿದ್ದರೆ, ಮಡದಿ ಮಕ್ಕಳು ಊಟಕ್ಕಾಗಿ ಕೂಲಿನಾಲಿಯನ್ನೇ ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿವೆ. ಹೀಗೆ ಪಟ್ಟಿಗೈಯುತ್ತಾ ಹೋದರೆ ಮಧ್ಯಪಾನ ಮನೆ ಕೆಡಿಸಿ ತಲ್ಲಣಿಸುತ್ತಿದೆ ಅಲ್ಲದೇ ಬೇರೇನೂ ಉಪಯೋಗಿ ಕಾರ್ಯ ಮಾಡುತ್ತಿಲ್ಲ. ಒಂದು ಕಡೆ ರೈತರ ಸಾಲ ಭಾದೆಯ ಸಾವು ಇನ್ನೊಂದು ಕಡೆ ಈ ಸಮಸ್ಯೆ. ದಿನಕಳೆದರೆ ಏನಾಗುತ್ತದೋ ತಿಳಿಯುತ್ತಿಲ್ಲ. ಸರ್ಕಾರಕ್ಕೆ ಇದು ತಿಳಿಯುತ್ತಿಲ್ಲ, ಎಲ್ಲ ಆದ ಮೇಲೆ ಚಿಂತಿಸಿ ಫಲವಿಲ್ಲ.
 ಇದೀಗ ಹಳ್ಳಿಗಳಲ್ಲಿ ಅಕ್ರಮವಾಗಿ ಎಣ್ಣೆ ಸರಭರಾಜು ಎತೇಚ್ಚವಾಗಿ ನಡೆಯುತ್ತಿರುವುದು ನೋಡಿದರೆ ಕಣ್ಣಾಲಿಯಲ್ಲಿ ಭಯ ದಿಗಿಲುಗೊಳ್ಳುತ್ತಿದೆ. ಹಳ್ಳಿ ಮಂದಿಯ ಕೆಲವರಿಗೆ ಕುಡಿಯೋದೆ ಕೆಲಸವಾದರೆ ಇನ್ನೂ ಕೆಲವರಿಗೆ  ಬೀದಿ ಬೀದಿಯ ಅಂಗಡಿಗಳಲ್ಲಿಟ್ಟು ಮಾರೋದೆ ಬ್ಯುಸಿನ್ನೆಸ್ಸಾಗಿದೆ. ಒಂದು ಮೂಲದ ಪ್ರಕಾರ ಊರನ್ನೇ  ಕಾದು ಸುವ್ಯವಸ್ಥೆಯಲ್ಲಿಡಬೇಕಾದ ಪೋಲೀಸರು ಹಣದ ಆಮೀಷಕ್ಕೆ ಬಿದ್ದು ತಿಂಗಳಿಗೆ ಇಂತಿಷ್ಟು ಎಂಬಂತೆ ಲಂಚ ಪಡೆದು, ಅಕ್ರಮ ಧಂಧೆಗಳು ತಮ್ಮೆದುರೇ ನಡೆಯುವುದ ತಿಳಿದರೂ ಸುಮ್ಮನಿರುತ್ತಿದ್ದಾರೆ. ಇದು ರೋಲ್ ಕಾಲ್ ರೂಪವನ್ನು ಕರಾವಳಿಯ ಅನೇಕ ಕಡೆ ಕಾಣುತ್ತಿದ್ದು, ಕಾವಲು ಪಡೆಯುವವನೇ ಜಗಕೆ ಕತ್ತಲಾಗುತ್ತಿದ್ದಾನೆ. ಈ ಅವ್ಯವಸ್ಥೆ ಸರಕಾರ ಮನಗಾಣಬೇಕು. ಕುಡಿತದಂತ ಕೆಟ್ಟ ಚಟ ಹಳ್ಳಿಗಳಲ್ಲಿ ಪ್ರಭೆಬೀರುವುದನ್ನು ತಡೆಗಟ್ಟಬೇಕು. ಭ್ರಷ್ಟ ಅಧಿಕಾರಿಗಳನ್ನು ಕೈ ಬಿಟ್ಟು ದಕ್ಷ ಅಧಿಕಾರಿಗಳ ನೇಮಕಕ್ಕೆ ಸಾಕ್ಷಿಯಾಗಬೇಕು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಆದಷ್ಟು ಬೇಗ ಜರುಗಿಸಬೇಕು.

 ಆಧೀಕೃತವಾಗಿ ಮುಖ್ಯಗ್ರಾಮಗಳಲ್ಲಿ ಬಾರ್ ಹಾಗೂ ಮದ್ಯದಂಗಡಿ ನಡೆಸಲು ಲೈಸನ್ಸ್ ನೀಡಿರುವುದೇ ಇದಕ್ಕೆಲ್ಲಾ ಮುಖ್ಯ ಕಾರಣವಾಗಿದ್ದು, ಅನಧೀಕೃತವಾಗಿರುವ ಹಾಗೂ ನಿರ್ದಿಷ್ಟ ಪ್ರದೇಶಕ್ಕೆ ಇಂತಿಷ್ಟು ಎಂಬಂತೆ ಪರಿಷ್ಕರಿಸಿ ಹೆಚ್ಚು ಉಳಿದಿರುವ ಎಲ್ಲಾ ಮಧ್ಯದಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡುವುದರ ಜೊತೆಗೆ, ಏಕಾಏಕೀ ಲೈಸೆನ್ಸ್ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು. ಹಳ್ಳಿ ಹಳ್ಳಿಗಳ ಸಣ್ಣ ಪುಟ್ಟ ಕಿರಾಣಿ ಅಂಗಡಿ ಸೇರಿದಂತೆ, ಹೊಲ ಗದ್ದೆಯ ಗುಡಿಸಲು, ಹಾಡಿ ಗುಡ್ಡಗಳಲ್ಲು ಅನಧೀಕೃತ ಸ್ಟೋರೆಜ್‍ನ ಜೊತೆಗೆ ಮಾರಾಟಗಳು ನಡೆಯುತ್ತಿದ್ದು, ಇದನ್ನೆಲ್ಲ ತಡೆಯಲೋಸುಗವಾಗಿ ಒಂದಿಷ್ಟು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿ ತಪಾಸಣೆಗೆ ಬಿಟ್ಟು ಅಕ್ರಮದಂಧೆಗಾರರನ್ನು ಬಂಧಿಸಬೇಕು.
ಹಳ್ಳಿ ಹಾಗೂ ಗ್ರಾಮೀಣ ಪ್ರದೇಶವಾಸಿಗಳೇ ಕೊನೆಯಲ್ಲಿ ಒಂದು ಮಾತು, ಅಪಾಯಕಾರಿ ಮಧ್ಯದ ಚಟದಿಂದ ಹೊರಬರಲು ಸಾಕಷ್ಟು ಉಪಾಯಳಿವೆ. ಯಾರೇನೆಂದರೂ ನಿಮ್ಮ ನಿರ್ಧಾರದ ಮೇಲೆ ಎಲ್ಲಾ ನಿಂತಿರುವುದು. ವ್ಯಸನಿಗಳ ನಿರ್ಧಾರದಿಂದ ಮಾತ್ರ ಮಧ್ಯದ ಗೀಳನ್ನು ಬಿಡಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ ಮಧ್ಯವ್ಯಸನದಿಂದ ಹೊರಬರಲು ಪ್ರಯತ್ನಿಸಿ. ಇದರಿಂದ ಉತ್ತಮ ಆರೋಗ್ಯ ಹೊಂದಿ ಬಹುಕಾಲ ಬಾಳಲು ಸಾಧ್ಯ. ವಿಷವಾದರೂ ಒಂದೇಟಿಗೆ ವ್ಯಸನಿಯೊಬ್ಬನನ್ನೇ ಸಾಯಿಸಬಹುದು ಆದರೆ ಕುಡಿತ ನಿಧಾನವಾಗಿ ಇಡೀ ಮನೆ ಮಠವನ್ನೇ ಸಾಯಿಸುತ್ತದೆ. ಜಾಗೃತರಾಗೋಣ-ಜಾಗೃತಗೊಳಿಸೋಣ-ಜಾಗೃತಿ ಇರೋಣ...

ಹೆಣ್ಣು-11
ಹೆಣ್ಣು ಮನುಪ್ರಣಿತ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಬೇರುಗಂಟಿದಂತೆ ಯಾವಾಗಲೂ ಪುರುಷನಿಂದಲೇ ದೌರ್ಜನ್ಯಕ್ಕೆ ಒಳಗಾಗಿ ಸಾಯುತ್ತಾಳೆ ಎನ್ನುವ ಮಾತು ಶುದ್ಧ ಸುಳ್ಳು. ಯಾಕೆಂದರೆ ಇತ್ತೀಚಿಗೆ ಅನೇಕ ಹೆಣ್ಣು ಮಕ್ಕಳು ಯಾವ ದೌರ್ಜನ್ಯವೂ ಇಲ್ಲದೇ ಸಾವನ್ನು ಕಾಣುತ್ತಿರುವುದೇ ಈ ಮಾತಿಗೆ ಕಾರಣ. ಮೊನ್ನೆ ಮೊನ್ನೆ ನಡೆದ ಒಂದು ಘಟನೆ ನಿಜಕ್ಕೂ ಈ ಮೇಲೆ ಆಡಿದ ಮಾತಿಗೆ ಕಾರಣವೆಂದು ಕಡಾಖಂಡಿತವಾಗಿ ಹೇಳುವೆ. ಆಗಿದ್ದಿಷ್ಟು...
ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಪಿ.ಯು.ಸಿ ಓದುತ್ತಿರುವ ಹುಡುಗಿಯೊಬ್ಬಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳದಿನ್ನು ಚಿಗುರುತ್ತಿರುವ ಬದುಕು. ಯಾವ ಕಷ್ಟವಾಗಲಿ, ಹಿತಶತ್ರುಗಳಾಗಲಿ, ಜೀವನದ ಸಮಸ್ಯೆಯಾಗಲಿ ಅವಳಿಗಿರಲಿಲ್ಲ. ಆದರೆ ಅವಳ್ಯಾಕೆ ಜೀವ ತೆಗೆದುಕೊಂಡಳು ಎನ್ನುವುದೇ ಎಲ್ಲರ ಯಕ್ಷ ಪ್ರಶ್ನೆ!?.
 ಸರಿ ಸುಮಾರು  ಇಪ್ಪತ್ತು ದಿನಗಳ ಬಳಿಕ ಅವಳ ಸಾವಿಗೆ, ಮಾನಸಿಕ ದೌರ್ಬಲ್ಯವೇ ಕಾರಣ ಎಂದು ಪ್ರಾಥಮಿಕ ವರದಿಯೊಂದು ತಿಳಿಸಿತು. ನಿಜಕ್ಕೂ ಇತ್ತೀಚಿಗೆ ಇಂತಹ ಘಟನೆಗಳು ಜಾಸ್ತಿಯಾಗುತ್ತಿವೆ. ಆಕೆಗೆ ಎಲ್ಲವೂ ಚೆನ್ನಾಗಿತ್ತು. ಓದುತ್ತಿರುವ ಕಾಲೇಜು, ಅಪ್ಪ-ಅಮ್ಮ ಬೆಳೆಸಿದ ರೀತಿ, ಮನೆ ಪರಿಸರ, ಗೆಳೆಯ-ಗೆಳತಿಯರು ಹೀಗೆ ಪ್ರತಿಯೊಂದು ಚೆನ್ನಾಗಿದ್ದ ಅವಳಿಗೆ ಆ ದಿನ ಸಾಯಲು ಕಾರಣವಾಗಿದ್ದು ಯಾವುದೋ ಸಣ್ಣ ಸಿಲ್ಲಿ ಮ್ಯಾಟರ್. ಅವರ ತಂದೆಯವರೇ ಹೇಳುವ ಹಾಗೆ ಡ್ರೆಸ್ ಬೇಕು ಎಂದು ಹಠ ಹಿಡಿದಿದ್ದಳಂತೆ, ಈಗ ಆಗಲ್ಲ ಸ್ವಲ್ಪ ದಿನದ ಬಳಿಕ ತೆಗೆದುಕೊಡುವೆ ಎಂದಾಗ ಕೋಪ ದುಃಖ ಎರಡನ್ನು ಉಮ್ಮಳಿಸಿಕೊಂಡ ಆಕೆ ಈ ಕೆಟ್ಟ ವರ್ತನೆ ತೋರಿದ್ದಾಳೆ.
ಯಾಕೆ ಹೀಗೆ!? ಹೆಣ್ಣಿನ ಮನಸ್ಸು ಬೆಣ್ಣೆಯಂತೆ ಎಂಬ ಮಾತಿದೆ ನಿಜ ಆದರೆ ಇಷ್ಟೊಂದು ಮೃದುವಾಗಿರುತ್ತದಾ!? ಹುಟ್ಟು ಅಂದ ಮೇಲೆ ಒಬ್ಬರಿಂದ ಒಬ್ಬರಿಗೆ  ನಾನಾ ರೀತಿಯ ವ್ಯತ್ಯಾಸಗಳಿರುವುದು ಸಹಜ. ಅದಕ್ಕಾಗಿ ನಿರಾಶವಾದಿಗಳಾಗದೇ ಎದುರಿಸುವ ಧೈರ್ಯಶಾಲಿಗಳಾಗಬೇಕು. ಜಗತ್ತು ಇಂದು ನಮಗಾಗಿ ಏನು ನೀಡದೇ ಇರಬಹುದು ಆದರೆ ಶ್ರಮಪಟ್ಟು ಜೀವನವನ್ನು ಪ್ರೀತಿಸಿ ಮುಂದೆ ಅಡಿ ಇಟ್ಟರೆ ಖಂಡಿತಾ ನಾವಂದುಕೊಂಡದ್ದನ್ನೆಲ್ಲಾ ಸಾಧಿಸಿ ಪಡೆಯಬಹುದು. ಸಮಾಜ ಬದಲಾಗುತ್ತಿದೆ ಅದರಂತೆ ನಾವು ಬದಲಾಗುತ್ತಿದ್ದೇವೆ. ಎಷ್ಟೋ ಜನ್ಮದ ಪುಣ್ಯದ ಫಲವಾಗಿ ಮನುಷ್ಯ ಜನ್ಮವನ್ನು ತಾಳುತ್ತೆವೆಂದು ಪುರಾಣದಲ್ಲೊಂದು ಮಾತಿದೆ ಅಂತಹ ಪವಿತ್ರ ಜನ್ಮವನ್ನು ಬೇಡವೆಂದು ತಿರಸ್ಕರಿಸಿಕೊಂಡು ಜೀವ ಕಳೆದುಕೊಳ್ಳುವುದು ಎಷ್ಟು ಸರಿ!?.
ಚರಿತ್ರೆಯಲ್ಲಿ ಅವಳದು ದುರವಸ್ಥೆ ಇರಬಹುದು. ಆದರೆ ಇಂತಹ ಘಟನೆಗಳೆಲ್ಲ ನಡೆಯುವುದು ಮನಸ್ಸಿನ ಅವ್ಯವಸ್ಥೆಯಿಂದಲೇ ಹೊರತು ಬೇರೆನಿಂದಲೂ ಅಲ್ಲ. ಇದು ಮನಸ್ಸಿನ ದೌರ್ಬಲ್ಯವೇ ಹೊರತು ಬೇರೆನೂ ಅಲ್ಲ. ಅವನಿಂದ-ಅವರಿಂದ ಕಿರುಕುಳ, ಅದರಿಂದ-ಇದರಿಂದ ಬೇಸರ ಎನ್ನುವ ಸಿಲ್ಲಿ ಸಿಲ್ಲಿ ವಿಷಯವನ್ನು ಬದಿಗಿಟ್ಟು ಮನ್ನಡೆಯಿರಿ. ಮನಸ್ಸಿನ ದುರ್ಬಲತೆಯನ್ನು ಸರಿದೂಗಿಸಿಕೊಂಡು ಧೈರ್ಯವಾಗಿರಿ. ನೆನಪಿಡಿ ಹೆಣ್ಮಕ್ಕಳೇ ‘ಜಗತ್ತಿನಲ್ಲಿ ಪುರುಷರಿಗಿಂತ ಮುಂದಿರುವುದು ಮಹಿಳೆಯರೇ’...

Friday, 23 October 2015

ಕಳಚಿತು ಸಾರಸ್ವತ ಲೋಕದ ಮತ್ತೊಂದು ಕೊಂಡಿ...


ಡಾ. ಎಂ.ಎಂ. ಕಲಬುರ್ಗಿಗೆ ಗುಂಡು, ಯುವಕರೇ ನಿಮಗ್ಯಾಕೆ ಇಷ್ಟವಾಯ್ತು ಈ ಸೌಂಡು...
ವಿಚಾರದ ಧನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. 
ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...
ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ!!? 
ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.           ಶಬ್ಧ ಬಳಕೆಯ ಬಗ್ಗೆ ಇರುವ ಜಿಜ್ಞಾಸೆ ಹಾಗೂ ಪಂಥೀಯ ನಿಲುವುಗಳ ಬಗ್ಗೆ ಇರುವ ತಾರ್ಕಿಕ ಧ್ವಂಧ್ವಗಳನ್ನು
ಮನಸ್ಸಲ್ಲಿಟ್ಟುಕೊಂಡು ಈ ತಿಂಗಳ ಸಿರಿ ಬುಲೆಟ್ ಅಂಕಣವನ್ನು ಪ್ರಾರಂಭಿಸುತ್ತಿರುವೆ...
ನನ್ನ ಮಾತು, ಪ್ರಶ್ನೆ ಎಲ್ಲಾ ಯುವಜನಾಂಗಕ್ಕೆ, ನಾವೇಕೆ ಹೀಗೇ ಜಾತಿ, ಮತ, ಭೇಧ,ಎಂಬ ಅಸಹ್ಯಕರ ಭಾವದಿಂದ ಕಚ್ಚಾಡುತ್ತಲೇ ಬಾಳುತ್ತಿದ್ದೇವೆ!?, ಸರಿಯಾಗುವುದು ಯಾವಾಗ!? ಎಂಬಿತ್ಯಾಧಿಗಳು ನನನ್ನು ಈ ಸಂಧರ್ಭ ಜಿಜ್ಞಾಸೆಗೆ ಸಿಲುಕಿ ತಡಕಾಡಿಸುತ್ತಿವೆ. ಮಿತ್ರರೇ ಇದೊಂಥರ ಪ್ರಶ್ನೆ ಎನಿಸಿದರೂ, ಉತ್ತರ ಕಂಡುಕೊಳ್ಳುವ ಮಾರ್ಗ ಗೊತ್ತಿದ್ದರೂ,  ಬಹುಶಃ ಕಷ್ಟಪಟ್ಟು  ಜಿಜ್ಞಾಸೆಯಿಂದಲೇ ಮಥಿಸಿ ಸತ್ಯ ಕಂಡುಕೊಳ್ಳಬೇಕೇನೋ ಗೊತ್ತಿಲ್ಲ..! ಆದರೆ ಒಂದು ಮಾತು ನಿಜ!, ‘ಇಂದು ನಡೆಯುತ್ತಿರುವ ಅನಾಚಾರಕ್ಕೆ, ಗೂಂಡಾಗಿರಿಗೆ ‘ಬೆಳೆಯುತ್ತಿರುವ ನಮ್ಮಂತ ನಡುವಯಸ್ಸಿನ ಯುವಕರುಗಳೇ ಕಾರಣ’. ಅವರ ರೋಷ, ಕೋಶ ಎಲ್ಲವೂ ಬಲಪಂಥಕ್ಕೆ ಸಿಲುಕಿ ಅನಾಚಾರಕ್ಕೆ ಮುಹೂರ್ತವಿಡುತ್ತಿರುವುದು ನಿಜ.
ಬಿಸಿ ರಕ್ತದ ಪಂಥೀಯರೇ ನೀವು ಇದೇ ಸತ್ಯ, ಇದೇ ಹೌದು, ಇದೇ ಸರಿ ಎಂದು ವಾದಿಸಿ ಆದರೆ ನನ್ನ ನಿಲುವೇ ಸರಿ ನಾನೋಬ್ಬನೇ ಧರ್ಮ ಉಳಿಸುವವನು ಎನ್ನುವುದು ಎಷ್ಟು ಐಕ್ಯರೂಪಿ!?. ತಪ್ಪುಗಳ ಲೆಕ್ಕಾಚಾರ ಹಾಕದೇ, ಪ್ರಭುತ್ವದ ಶಾಂತಿ ನೆಮ್ಮದಿಯನ್ನು ಸುಖಿಯಾಗಿಡುವ ಐಕ್ಯರೂಪಿ ಗುಣವನ್ನು ಹೊಂದದೆ, ನನ್ನ ಧರ್ಮವೇ ಶ್ರೇóಷ್ಠ ಎಂದು ವಾದಿಸುವುದು ಎಷ್ಟು ಸರಿ!?. ಹೇಳುವ ಮಾತಿನಲ್ಲಿ ಕೇಳುವ ತಾಳ್ಮೆಯೂ ಇರಬೇಕು. ಇದ್ದರೆ ಚಂದ.
ಯಾಕೆ ಈ ಮಾತು ಎಂದು ನೀವು ಚಿಂತಿಸುತ್ತಿರಬಹುದು ಅದಕ್ಕೆ ಕಾರಣವೂ ಇದೆ,
ಮೊನ್ನೆ ಮೊನ್ನೆ ಅಪರಿಚಿತ ವ್ಯಕ್ತಿಗಳಿಂದ ನಡೆದ ಹಿರಿಯ ಸಾಹಿತಿ ಮತ್ತು ಸಂಶೋಧಕ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿರವರ ಹತ್ಯೆ ನಾಡು  ನುಡಿಯ ಜನರನ್ನು ಬೆಚ್ಚಿ ಬೀಳಿಸಿದ್ದಲ್ಲದೇ ಜನರಲ್ಲಿ ‘ಏನಪ್ಪಾ ಕಾಲ ಯಾಕೆ ಈ ಥರ ಎನ್ನುವ ಯಕ್ಷ ಪ್ರಶ್ನೆ ನೆಲೆಸುವಂತೆಯೂ ಮಾಡಿತ್ತು. ಹಂತಕರು ಯಾಕೆ ಗುಂಡು ಹೊಡೆದು ಅವರನ್ನು ಕೊನೆಗಾಣಿಸಿದ್ದಾರೆ ಎನ್ನುವುದು ಇಂದಿಗೂ ಸರಿಯಾದ ವಿಚಾರಣೆಯಲ್ಲಿ ತಿಳಿಯದಿದ್ದರೂ, ಮಾನವೀಯ ಹೃದಯವಂತರಿಗೆ ನೋವಾದರೂ ಅವರು ಸತ್ತ ಬಗೆ ಹಾಗೂ ವಿಚಾರ ಹಲವಾರೂ ಪಂಥೀಯ ನಿಲುವುಗಳ ಪುಂಡರಿಗೆ ಪಾಯಸವುಂಡಷ್ಟು ಖುಷಿ ನೀಡಿದ್ದು, ಆಶ್ಚರ್ಯವಾಗುತ್ತದೆ. ಇದು ನಮ್ಮ ದೌರ್ಬಲ್ಯವಲ್ಲದೇ ಮತ್ತೇನೆನ್ನಿಸಿ ಪೆನ್ನನ್ನು ಕೈಗೆತ್ತಿಕೊಂಡಿರುವೆ ಅಷ್ಟೇ. ಸತ್ಯ ತಿಳಿಸುವ, ತಮ್ಮನ್ನು ತಮಗೆ ಅರಿಸುವ ಸಣ್ಣ ಮೊಂಡುತನ ನನ್ನದಾದರೂ ಚಿಂತೆಯಿಲ್ಲ. ಖಂಡಿತಾ ಇದು ಹುಚ್ಚುತನ ಮಾತ್ರಾ ಅಲ್ಲಾ.
ನೇರ ನಿಷ್ಠುರ ಮಾತುಗಳು ಹಾಗೂ ಬರವಣಿಗೆಯಿಂದ  ಅನೇಕ ಬಾರಿ ವಿವಾಧಗಳಿಗೂ ಸಿಲುಕಿದವರಾಗಿದ್ದ ಡಾ.ಕಲಬುರ್ಗಿಯ ಗ್ರಂಥ ‘ಮಾರ್ಗ’ದ ಮೊದಲ ಸಂಪುಟದಲ್ಲಿನ  ಎರಡು ಲೇಖನಗಳು 1989ರಲ್ಲಿ ಭಾರಿ ವಿವಾಧ ಸೃಷ್ಟಿಸಿತ್ತು, ಈ ಎರಡು ಲೇಖನಗಳು  ಬಸವಣ್ಣನ ಪತ್ನಿ ಹಾಗೂ ಸೋಧರರಿಗೆ ಸಂಬಂಧಿಸಿದ್ದವಾಗಿದ್ದವು. ಮುಂದೆ ತನಗೆ ತಾನೇ ಮೋಸಮಾಡಿಕೊಂಡಂತೆ ತಮ್ಮ ಲೇಖನಗಳನ್ನು ಬರೆದ ಕಲಬುರ್ಗಿ ಇದು ‘ಬೌದ್ಧಿಕ ಆತ್ಮಹತ್ಯೆ’ ಎಂದು ಮರುಗಿದ್ದರು. ಏರಡು ವರ್ಷಗಳ ಹಿಂದೆ ಅನಂತಮೂರ್ತಿಯವರ ಮಾತೊಂದನ್ನು ತಪ್ಪಾಗಿ ಉಲ್ಲೇಖಿಸಿದ ಪ್ರಕರಣದಲ್ಲಿ ಕಲಬುರ್ಗಿ ಸಮಸ್ತ ಹಿಂದೂ ಜನತೆಯ ಕೆನ್ನಾಲಿಗೆಗೆ ಗುರಿಯಾಗಿದ್ದಲ್ಲದೇ ನೋವಲ್ಲೇ ಸಂಶೊಧನೆಯನ್ನು ಮುಂದುವರಿಸುತ್ತಾ ಸಾಯೋ ದಿನದವರೆಗೂ ಎದೆಗುಂದದೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರನ್ನು ಬೃಹತ್ ಧರ್ಮಧ್ವೇಷಿ ಎಂಬ ಪಟ್ಟವನ್ನು ನೀಡಿದ್ದು, ಸ್ವತಃ ಅವರಿಗೆ ನೋವಿದ್ದರು ಯಾವುದನ್ನೂ ಮನಸ್ಸಲ್ಲಿಟ್ಟುಕೊಳ್ಳದೇ ಬದುಕಿದ್ದರು.
ಆಡಿದ ಮಾತು ಎಲ್ಲವೂ ಸರಿಯಿರಬೇಕೆಂದೇನೂ ಇಲ್ಲ, ಅವರವರ ನಿಲುವು ಅಷ್ಟೆ.  ಒಬ್ಬ ಸಂಶೋಧಕನಾಗಿ  ಅವರಾಡಿದ ಮಾತು ಸಂಶೋಧನೆಯ ಎಳೆ ಇರಬಹುದು ಆದರೆ ಅದನ್ನೇ ಹಿಡಿದು ಕೊನೆಗಾಣಿಸಬಾರದಿತ್ತು. ಅಥವಾ ಅದನ್ನು ತಪ್ಪೆಂದು ನಾವು ಚರ್ಚಿಸುವುದು ಬಿಟ್ಟು, ಸಂಶೋಧನೆಯೇ ಸರಿಯಿಲ್ಲ, ಅವನೊಬ್ಬ ಸಂಶೋಧಕನೇ ಅಲ್ಲ ಎನ್ನುವುದು ಎಷ್ಟು ಸರಿ!? ಸಾರಸ್ವತ ಲೋಕದ ಒಬ್ಬ ಚಿಂತಕ, ಶ್ರೇಷ್ಠ ಬರಹಗಾರ ಸತ್ತನೆಂದರೆ ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆಂದರೆ ನಾವೆಂತ ಮಾನವತಾವಾಧಿಗಳಾದೆವು ನೀವೆ ಹೇಳಿ,
ಸಮಾಜದಲ್ಲಿ ಯಾವೊಬ್ಬ ಸಾಮಾನ್ಯನಾಗಲಿ, ಶ್ರೀಮಂತನೇ ಆಗಿರಲಿನ ಸತ್ತ ಎಂದರೆ ಅವನ ಹಿಂದಿನ ಎಂತಹ ಕೆಟ್ಟ ಕರ್ಮ ಫಲಗಳಿದ್ದರು, ಎಲ್ಲವನ್ನು ಪಕ್ಕಕ್ಕಿಟ್ಟು ಅರ್ಪಣೆಯಾಗಿ ಮನಪೂರ್ಣ ನಮನ ಸಲ್ಲಿಸಬೇಕಾಗಿರುವುದು ನಮ್ಮ ಹಿಂದೂ ಸಂಸ್ಕøತಿಯ ಸಂಸ್ಕಾರ. ಅದನ್ನ ಬಿಟ್ಟು ಹಿರಿಯ ತಲೆ ಉರುಳಿತು, ಸಾವು ಖುಷಿಕೊಟ್ಟಿತು, ಇನ್ನೂ ಕೆಟ್ಟ ಸಾವು ಅವನದಾಗಬೇಕಿತ್ತು, ಇಷ್ಟು ದಿನ ಬದುಕಲು ಬಿಟ್ಟಿದ್ದೆ ಹೆಚ್ಚು ಎನ್ನುವುದು,ಸತ್ತಿದ್ದಕ್ಕೆ ಹಬ್ಬ ಆಚರಿಸುವುದು ಮಾನವೀಯತೆ ಅಲ್ಲ. ಬೇಜಾವಾಬ್ದಾರರಾಗಿ ಉಂಡಾಡಿ ಗುಂಡನ ಹಾಗೆ ಬೊಬ್ಬಿರುವ ಬಾಯಿಯಿದೆ ಎಂದು  ಕತ್ತೆ, ನಾಯಿಗಳಂತೆ ಬೋರ್ಗೆರೆದರೆ ನಮ್ಮ ಸಂಸ್ಕøತಿಯನ್ನು ನಾವೇ ಬೀದಿಲಿಟ್ಟು ಮಾನ ತೆಗೆಸಿಕೊಂಡಂತೆ ವಿನಃ ಕಿಂಚಿತ್ತು ಉಳಿಸಿದಂತಲ್ಲ. ಕಲಬುರ್ಗಿ ಸತ್ತ ನಂತರ ಬಲಪಂಥೀ, ಎಡ ಪಂಥೀಯ ನಿಲುವುಗಳ ಮಧ್ಯದಲ್ಲಿ, ಟಿ.ವಿ ಹಾಗೂ ಸೋಷಿಯಲ್ ಮೀಡಿಯಾಗಳ ಮಾಧ್ಯಮದಲ್ಲೂ ಅನೇಕ ಮಾತುಗಾರಿಕೆಯ ಹೊಡೆದಾಟಗಳಾಯಿತು. ಹಿಂದೂ ಮುಂದು ಯೋಚಿಸದ ಯುವಕರು ತಮಗನಿಸಿದಂತೆ ಸ್ಟೇಟಸ್ ಕೊಟ್ಟು ಮೆರೆದರು. ಇದೆಲ್ಲಾ ಅವರ ಮನೆಯವರಿಗೆ, ಸಂಬಂಧಿಕರಿಗೆ, ಆಗಿದ್ದರೆ ಆಗೇನು ಹೇಳುತಿದ್ದರೋ ನಾ ತಿಳಿಯೆ. ಈ ಹಿಂದೆ ಅನಂತ ಮೂರ್ತಿ ಸತ್ತಾಗಲೂ ಅವರೊಬ್ಬ ಹಿಂದೂ ಧರ್ಮ ವಿರೋಧಿ, ಅವಹೇಳನಕಾರಿ ವ್ಯಕ್ತಿ ಎಂದು ಪಟಾಕಿ ಸಿಡಿಸಿದ ಘಟನೆಗಳು ನಡೆದಿದ್ದು ಮಾಸುವಾಗಲೇ ಮತ್ತೊಮ್ಮೆ ಈ ರೀತಿಯ ಘಟನೆ ಸಂಭವಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ನಾಚಿಗೆ ಗೇಡಿನ ಸಂಗತಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಈ ಜಾತಿ-ಭೇಧ ಎನ್ನುತ್ತಾ ವಿಷ ಬಿಜ ಬಿತ್ತುತ್ತಿರುವವರು ಯಾರೂ!?...  ನಾವೇ ಅಲ್ಲವೇ!?... ಯಾಕೆ ಬೇಕು ಇದು?. ಬರಿಯ ಸ್ವಾತಂತ್ರ್ಯ ದಿನಾಚರಣೆಯ ದಿನ ‘ನಾವು ಭಾರತೀಯರು, ನಾವೆಲ್ಲ ಒಂದೇ, ಅವಳ ಮಕ್ಕಳು’ ಎಂದು ಹೇಳುತ್ತೇವೆ ಆದರೆ ಈಗ್ಯಾಕೆ ಈ ಮೊಂಡುತನ.
 ಯುವಕರೇ ಪದೇ ಪದೇ ಮಾತುಗಳನ್ನೇ ನೆಕ್ಕಿಕೊಳ್ಳುತ್ತಾ ಡೆಮಾಕ್ರಸಿಯ ವಿಷಬೀಜ ಬಿತ್ತುತ್ತಿದ್ದೀರಲ್ಲಾ, ನೀವು ಸಮಾಜದ ಸಹಿಷ್ಣು ಕಾಪಾಡುವ ವ್ಯಕ್ತಿಗಳಾ!?, ನೀವು ನಮ್ಮ ಭಾರತಾಂಭೆಯ ಮಕ್ಕಳಾ!? ನಿಮಗೆ ಕರಣೆ ಮಮಕಾರದ ಭಾವನಾತ್ಮಕತೆಯ ನಲಿವು ಗೊತ್ತಿದ್ಯಾ!?? ಮೊದಲು ಪಂಥಗಳನ್ನು ಬಿಟ್ಟು, ಕಾರಣಿಭೂತರಾದ ಹಂತಕರನ್ನು ಹಿಡಿಯಲು ಸಹಾಯ ಮಾಡಿ.  ಉಗ್ರತ್ವಕ್ಕೆ  ಶಹಬ್ಬಾಸ್ ಎಂದರೆ ನಾವೆಂಥಾ ನೈತಿಕೆಯುಳ್ಳವರು.
ಡಾ.ಎಂ ಎಂ. ಕಲಬುರ್ಗಿಯವರಿಗಾದ ಗತಿಯೇ ನಾಳೆ ನಿಮಗೂ ನಿಮ್ಮ ಮಕ್ಕಳಿಗೂ ಆದರೆ ಅದನ್ನು ಹೀಗೆ ಕಾಣುತ್ತೀರಾ!?, ಸ್ವಲ್ಪ ಚಿಂತಿಸಿ, ಕಚ್ಚಾಟ ನಮ್ಮನ್ನು ಬದಲಿಸುವುದಿಲ್ಲ, ಮೆರೆದಾಟ ಎಂದು ಮೇಲೆ ನಿಲ್ಲಿಸುವುದಿಲ್ಲ.ಬದಲಾಗೋಣ. ಸಂಘ ಸಂಘಟನೆಗಳ ಬೆಂಬಲವಿದೆಯೆಂದು ಗುಂಪುಗಾರಿಕೆ ಸರಿಯಲ್ಲ.ಅವುಗಳು ಇರುವುದು ಒಳ್ಳೆಯ ಕಾರ್ಯಮಾಡಲು ಹೊರತು ನೀಚತನಕ್ಕಲ್ಲ. ನಿಮಗೆ ಹೇಗೆ ಮಾತನಾಡುವ ಹಕ್ಕಿದೆಯೋ ಹಾಗೆ ಎಲ್ಲರಿಗೂ ತನ್ನ ಭಾವನೆ ವ್ಯಕ್ತಪಡಿಸುವ ಹಕ್ಕಿದೆ. ಆಂದ ಮಾತ್ರಕ್ಕೆ ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.
ನಾನೊಬ್ಬ ಮುಖ್ಯಸ್ಥ ನನ್ನ ಹಿಂದೆ ಸುಮಾರು ಜನರ  ನಾಯಿ ಬಾಲವಿದೆ ಎಂದ ಮಾತ್ರಕ್ಕೆ ಕಿರುಚಬಾರದು ಬದಲಾಗಿ ಫ್ರೌಡರಾಗಬೇಕು, ಓದಬೇಕು, ಲೋಕ ಜ್ಞಾನ ಮೈಗೂಡಿಸಿಕೊಳ್ಳಬೇಕು.

ಕಲಬುರ್ಗಿಯವರು ಸಾಹಿತ್ಯ ಚರಿತ್ರೆ, ಗ್ರಂಥ ಸಂಪಾಧನೆ, ಶಾಸನ ಶಾಸ್ತ್ರ, ವಚನ ಸಾಹಿತ್ಯ, ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅಪಾರ. ಐದು ದಶಕಗಳಿಗಿಂತಲೂ ಹೆಚ್ಚಿನ ಕಾಲ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...ಕಲಬುರ್ಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಇತಿಹಾಸ ಕುರಿತಂತೆ ಖಚಿತ ಅಭಿಪ್ರಾಯಗಳನ್ನು ಹೊಂದಿದ್ದರಲ್ಲದೇ, 4 ಸಂಪುಟಗಳಲ್ಲಿ ಅವರು ಪ್ರಕಟಿಸಿದ ‘ಮಾರ್ಗ’ಪುಸ್ತಕದಲ್ಲಿರುವ ಸಂಶೋಧನಾ ಲೇಖನಗಳು ಅವರ ವಿಧ್ವತ್ತಿಗೆ ಸಾಕ್ಷಿಯಾಗಿವೆ. ತಮ್ಮ ಪ್ರಧಾನ ಸಂಪಾದಕತ್ವದಲ್ಲಿ
ವಿವಿಧ ಸಂಪಾದಕರು ಸಂಪಾಧಿಸಿರುವ ಸಮಗ್ರ ವಚನ ಸಂಪುಟಗಳಲ್ಲಿರುವ ಇಪ್ಪತ್ತು ಸಾವಿರ ವಚನಗಳನ್ನು ಆರಿಸುವಲ್ಲಿ ಕೊನೆಯ ಪಕ್ಷ ಮೂವತ್ತುಸಾವಿರ  ವಚನಗಳನ್ನಾದರೂ ನಿಕಟವಾಗಿ ಓದಿದ್ದಾರೆ ಡಾ.ಎಂ ಎಂ. ಕಲಬುರ್ಗಿ..ಉತ್ತರ ಕೊಡಿ ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ???. ಅನಂತಮೂರ್ತಿ ಅಥವಾ ಕಲಬುರ್ಗಿ ಮಾಡಿರುವ ಸಾಹಿತ್ಯ ಕೃಷಿಯ ಒಂದು ಎಳೆಯನ್ನ ನೀವು ಮಾಡಿದ್ದೀರಾ?.. ಅದು ನಿಮ್ಮಿಂದ ಸಾಧ್ಯವಾದರೂ ಇದ್ಯಾ?.. ನಿಮಗೆ ಕೂಗುವುದು, ಬೆಂಕಿಹಚ್ಚುವುದು, ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿಯಲು ಗೊತ್ತು ಆದರೆ ಯೋಚಿಸುವುದು ಮಾತ್ರಾ ಗೊತ್ತಿಲ್ಲ ಅಲ್ವಾ...
ನಾನು ಒಬ್ಬ ಹಿಂದೂ, ನನಗೂ ಕೆಚ್ಚೆದೆ ಇದೆ, ರೋಷವಿದೆ. ಹಾಗಂತ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವಾಗ್ವಾದಗಳ ನೆಲೆಗಳಲ್ಲಷ್ಟೇ ಉಳಿಸದೇ ಒತ್ತಡಗಳನ್ನು ಸೃಷ್ಟಿಸುವಂತಹ ಈ ಬಗೆಯ ಬೆದರಿಕೆಯ ವಾತಾವರಣ ಸೃಷ್ಟಿಸುವುದು ಸಾಮಾಜಿಕ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ.  ಪ್ರಜಾ ಪ್ರಭುತ್ವದಲ್ಲಿ ಅದರಲ್ಲೂ ಕನ್ನಡದ ನೆಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ವಿಚಾರದ ದನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. ವಿಚಾರಗಳನ್ನು ಹತ್ತಿಕ್ಕಿದಷ್ಟೂ ಅವು ಬೆಳೆಯುತ್ತಲೇ ಇರುತ್ತವೆ ಯಾವುದೇ ಭಿನ್ನಾಭಿಪ್ರಾಯವೂ ಕೊಲೆಯ ಹಂತಕ್ಕೆ ಹೋಗಬಾರದು. ಇದೆಲ್ಲವನ್ನು  ಅರಿಯುವ ಅಗತ್ಯ ಇಂದು ನಮ್ಮ ಸಮಾಜಕ್ಕಿದೆ.
 ‘ನಿನ್ನ ಆಭಿಪ್ರಾಯವನ್ನು ನಾನು ಒಪ್ಪುವುದಿಲ್ಲ ಆದರೆ ಅಭಿಪ್ರಾಯವನ್ನು ಹೊಂದುವ ನಿನ್ನ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ’ ಎನ್ನುವುದು ನಮ್ಮ ‘ಪ್ರಜಾಪ್ರಭುತ್ವ’. ಆದರೆ ಇಂದು ಹಾಗಾಗುತ್ತಿಲ್ಲ ಜನ ನೈತಿಕತೆಯನ್ನೇ ಮರೆತು ವರ್ತಿಸುತ್ತಿದ್ದಾರೆ. ಇಲ್ಲಿ ಯಾರೂ ಯಾರ ಮೇಲೂ ಏನೂ ಹೇಳುವಂತಿಲ್ಲ. ಬಲವಂತನ ಮಾತು ಬಡವಂತ ಕೇಳಲೆಬೇಕು. ಇಲ್ಲವಾದರೆ ಜಗಳವಾಗುತ್ತದೆ, ಹೊಡೆದಾಟ ನಡೆಯುತ್ತದೆ. ಅಷ್ಟೇ ಏಕೆ ಪಾಪಿಗಳು ಕೊಲೆಯನ್ನು ಮಾಡುತ್ತಾರೆ. ಇದರಲ್ಲಿ ರಾಜಕೀಯದ ಹಾವು ಏಣಿ ಆಟವೂ ಇದೆ ಎನ್ನುವುದು ತಿಳಿದಿದ್ದರೂ ಜನ ಅಸಹನೆಯ ಭಾವನೆಗಳಿಂದ ಹೊರಬರುತ್ತಿಲ್ಲ...ಹಾಗೆ ಮಾಡುವುದರಿಂದ ನಾವು ಮೂಲಭೂತ ವಾದಿಗಳಂತೆ ಸತ್ಯಶೋಧನೆಯ  ಕಣ್ಣು ಕಳೆದುಕೊಳ್ಳುತ್ತೇವೆ.
ಕೊನೆ ಮಾತು ಸರ್ಕಾರ ಸೇರಿ ಎಲ್ಲರಿಗಾಗಿ... ವಾದ ವಿವಾದಗಳ ನಡುವೆ ಕಲಬುರ್ಗಿಯವರ ಸಾವಿನಿಂದಾಗಿ, ಒಂದು ಬಗೆಯ ವಿಶಿಷ್ಟ ವಿದ್ವಾಂಸ ಮಾರ್ಗದ ಕಡು ಸಂಶೋಧನಾ ನಿಷ್ಠೆಯ ಕೊನೆಯ ಕೊಂಡಿಯೊಂದು ಕಳಚಿ ಹೋದದ್ದರ ಬಗ್ಗೆ ತುಂಬಾ ವಿಷಾಧವಿದೆ. ಹಾಡ ಹಗಲೇ ಸಾಹಿತಿಯೊಬ್ಬನನ್ನು ಗುಂಡೇಟಿನಿಂದ ಕೊಲ್ಲುವ ಪರಿ ನಿಜಕ್ಕೂ ಒಳ್ಳೆಯದಲ್ಲ. ಟೀಕಿಸುವುದನ್ನು ಬಿಟ್ಟು ನಾವೆಲ್ಲ ಎದ್ದೇಳಬೇಕಿದೆ. ಈ ಬಗ್ಗೆ ಸರ್ಕಾರ ತೀವ್ರ ಕಾಳಜಿ ಮತ್ತು ಭಧ್ರತೆ ಇಟ್ಟು ದುಷ್ಟ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಬೇಕು. ಮಾನ್ಯ ಮುಖ್ಯಮಂತ್ರಿಗಳೇ, ಅದು ಯಾರಾದರೂ ಸರಿ ಆದಷ್ಟು ಬೇಗ ವಿಚಾರಿಸಿ ಸಮಾಜದ ನೆಮ್ಮದಿ ಕಾಪಾಡಿ, ಅಬ್ಬರಿಸುವ ಬೊಬ್ಬಿರುವ ಅಶಾಂತಿ ರೂಪಿಸುವ  ಕೋಮುಗಲಭೆಯನ್ನು ಹುಟ್ಟಿಸುವವರನ್ನು ಜಾಡಿಸಿ ಒದೆಯಿರಿ...ಮುಲಾಜೇ ಬೇಡ...

ಪ್ರೀತಿ ಎಂದರೆ ಇದೇನಾ!?...       ರಿಂಗಣಿಸಿದ ಮೊಬೈಲ್ ಸೌಂಡ್‍ಗೆ ಬೇಗ ಬೆಳಗಾಯಿತಾ ಎಂದು ಲಘುಬಗೆಯಲ್ಲಿ ಎದ್ದು ಸ್ಕ್ರೀನ್ ನೋಡಿದರೆ ಆ ಕಡೆಯಿಂದ ಬಾಸ್ ಪೋನ್ . ಟೈಮ್ ಮುಂಜಾನೆ ಎಂಟರ ಸಮಯ. ರಾತ್ರಿ ರೀಡಿಂಗ್ ಗೆ ಕುಳಿತಿದ್ದರಿಂದ ಮಲಗೋದು ಕೊಂಚ ತಡವಾಗಿದ್ದೆ ಅಷ್ಟೊಂದು ನಿದ್ದೆಗೆ ಕಾರಣವಾಗಿತ್ತೋ ಏನೋ ಗೊತ್ತಿಲ್ಲ. ಆಲ್ ಮೋಸ್ಟ್ ಎಲ್ಲರೂ ಕಾಳಜಿಯಿಂದ ನನಗೆ ಬೈಯೋದು ಇತ್ತೀಚೆಗೆ ಮಾಮೂಲಾಗಿತ್ತು. ಸರಿ ಟೈಮ್ ಗೆ ಊಟ ತಿಂಡಿ ಮಾಡಲ್ಲ, ಸರಿಯಾದ ಸಮಯಕ್ಕೆ ಮಲಗಲ್ಲ ಅಂತ ಕೇಳಿಸಿಕೊಂಡು ಕೇಳಿಸಿಕೊಂಡು ಕಿವಿಗೆ ಜಿಡ್ಡು ಹಿಡಿದಂತಿತ್ತು.
    ‘ಏನಪ್ಪಾ ಇದು ಬೆಳಿಗ್ಗೆ ಬೆಳಿಗ್ಗೆ ಬಾಸ್ ಫೋನ್ ಮಾಡುತ್ತಿದ್ದಾರೆ’ ಎಂದು ಗೊಂದಲದಲ್ಲೇ ಮುದ್ದಾದ ಮನಸ್ಸಿಂದಲೇ ಹಸಿರು ನಿಶಾನೆಯತ್ತ ಕೈ ಜಾರಿಸಿ ರಿಸಿವ್ ಮಾಡಿ ‘ಗುಡ್ ಮಾರ್ನಿಂಗ್, ಹೇಳಿ ಸರ್’ ಎಂದೇ... ‘ಗುಡ್ ಮಾರ್ನಿಂಗ್ ಸ್ಯಾಂಡಿ’ ಇವತ್ತು ಸ್ವಲ್ಪ ಬೇಗ ಬನ್ನಿ, ಒಂದು ಫಕ್ಷನ್ ಇದೆ ಹೋಗೋಣ. ಮ್ಯಾಗಜಿನ್ ಕಡೆಯಿಂದ ನೀವು ನಾವು ಹೋಗಿ ಒಂದಿಷ್ಟು ಪ್ರಚಾರ ಮಾಡಿ ಬರೋಣ ಎಂದರು. ಹೌದಾ!!!, ಹಾ ಆಯ್ತು ಸರ್ ಇದೋ ಈಗ್ ಹೊರಟೆ ಎಂದವನೆ, ಗೀಝರ್ ಆನ್ ಮಾಡಿ ಸ್ನಾನಕ್ಕೆ ರೆಡಿ ಆದೆ. ಎಲ್ಲರ ಥರ ಗಂಟೆಗಟ್ಟಲೇ ಸ್ನಾನ ಗೃಹದಲ್ಲಿ ಕಾಲ ಕಳೆಯುವ ಅಭ್ಯಾಸ ನನ್ನದಲ್ಲ. ಏರಡೇ ನಿಮಿಷ. ಹಾಗೆ ಹೋಗಿ ಹೀಗೆ ಬರುವುದಂತ ಅಮ್ಮ ಯಾವಾಗಲೂ ಹೇಳುತ್ತಿದ್ದಳು.ಅದು ನಿಜವೆ ಬಿಡಿ. ನಂತರ ಬಡಬಡನೇ ಬಟ್ಟೆಗೆ ಐರನ್ ಪೋಣಿಸಿದೆ. ಕೈಗೊಂದು ವಾಚ್, ಹಣೆಗೊಂದು ಕುಂಕುಮದ ಬಿಂದು, ಕಿಸೆಯಲ್ಲೊಂದು ಖರ್ಚಿಫ್, ತಲೆಗೆ ಹೆಲ್ಮೆಟ್, ಕಿವಿಗೊಂಡು ಹೆಡ್ ಫೋನ್, ಹಿಂದಿನ ಜೋಬಲ್ಲಿ ಪಾಕೆಟ್ ಜೊತೆಗೆ ಸಣ್ಣದೊಂದು ಬಾಚಣಿಗೆ.., ದಿನನಿತ್ಯ ನಾನು ಮನೆಯಿಂದ ಹೊರಬೀಳಬೇಕಾದರೆ ಘನವೆತ್ತ ಬದುಕಲ್ಲಿ ಈ ಮಾಮೂಲಿಗಳು ಪ್ರತಿದಿನ ಅವಶ್ಯವಾಗಿ ಇರಲೇಬೇಕು. ಅಷ್ಟಿದ್ದರೇ ಏನೋ ಒಂದು ರೀತಿಯ ಸಮಾಧಾನ. ಇಲ್ಲವೆಂದರೇ ಏನೋ ಕಳೆದುಕೊಂಡಂತೆ ಫೀಲ್ ಅಷ್ಟೆ.
ಪ್ರತಿದಿನದಂತೆ ಹೆಡ್ ಫೋನ್‍ನನ್ನು ಕಿವಿಗೆ ಸಿಕ್ಕಿಸಿಕೊಂಡು, ಗುನುಗುನಿಸಲು ಮೆಲ್ಲನೆ ಒಂದು ಹಾಡನ್ನು ಹಾಕಿಕೊಂಡು, ನನ್ನ ರೆಂಜ್‍ನ ಮಿನಿಮಮ್ ಸ್ಫೀಡ್‍ನಲ್ಲಿ ಬೈಕ್ ಏರಿ ಸರಾಗವಾಗಿ ಹೊರಟೆ.
ಅದಾಗಲೇ ಶಾಲಾವಾಹನಗಳು, ಅಟೋರಿಕ್ಷಾಗಳು, ಬಸ್‍ಗಳೆಲ್ಲ ಮಕ್ಕಳನ್ನು ಶಾಲೆಗೆ ತಲುಪಿಸುವ ಕೆಲಸವನ್ನು ಪಾರಂಭಿಸಿ, ಎಲ್ಲೆಂದರಲ್ಲಿ ಪುಟಾಣಿಗಳನ್ನು ತುಂಬಿಸಿಕೊಳ್ಳುತ್ತಿದ್ದವು. ಅಷ್ಟೆಲ್ಲಾ ಬದುಕು ಭಿನ್ನಣದ ನಡುವೇ ಆ ದಿನ ದಾರಿ ಮಧ್ಯೆ ಕಂಡ ಒಂದೇ ಒಂದು ಸೀನ್ ಮಾತ್ರಾ ನನ್ನ ಕಣ್ಣನ್ನು ಸೆಳೆದು ಮನಸ್ಸನು ಮುಟ್ಟಿ ಬೈಕ್‍ನ ವೇಗವನ್ನು ತಗ್ಗಿಸಿ, ನಿಲ್ಲಿಸುವಂತೆ ಮಾಡಿತು.
ನೋಡಿದ್ದಿಷ್ಟೇ...
ತಾಯಿಯೊಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಹಿಡಿದುಕೊಂಡು ಎದುರು ಕಾರ್ನರ್ ರೋಡ್‍ನಿಂದ ಓಡುತ್ತಾ ಬರುತ್ತಿದ್ದಳು. ಆಕೆ ನೋಡಲು ಎಷ್ಟೊಂದು ಕುರೂಪಿಯಾಗಿದ್ದಾಳೆಂದರೆ, ಶಿ ಇಸ್ ಕಂಪ್ಲೀಟ್ಲಿ ಲುಕ್ ಲೈಕ್ ಔಟ್ ಆಫ್ ಬ್ಲಾಕ್...                                                                                                                    
                                                                                 ರಸ್ತೆ ಬದಿ ಬೇಡಲು ಬರುವ ಬಿಕ್ಷುಕಿಯನ್ನಾದರೂ ನೋಡಬಹುದು ಆದರೆ ಅದಕ್ಕಿಂತಲೂ ವಕೃವಾಗಿ, ವಿರೂಪಿಯಾಗಿ, ಕುರೂಪಿಯಂತೆ ಹರಿದ ಸೀರೆ ಉಟ್ಟು, ಒಂದೇ ಮಗ್ಗಲಲ್ಲಿ ಮಲಗಿ ಎದ್ದವಳಂತೆ ಗಿಜಿ-ಗಿಜಿ ಕೂದಲಲ್ಲಿ ಒಂದಿಷ್ಟು ಮಣ್ಣ ಮೆತ್ತಿದಂತೆ, ಬಾಯಲ್ಲಿರುವ ಹಲ್ಲು ತಂಬಾಕು ಸೇವನೆಯಿಂದ ಕಪ್ಪಾಗಿಸಿಕೊಂಡಿದ್ದಂತೆ, ಸಂಪೂರ್ಣ ಅನಾಥಳ ಹಾಗೆ ಬಾಳಿ ಬದುಕಿ, ಭಿನ್ನವಾಗಿ ಕರಾಬಾಗಿ ಕಾಣುತ್ತಿದ್ದಳು. ಆದರೆ ತನ್ನಪ್ಪುಗೆಯಲ್ಲಿದ್ದ ಕಂದನನ್ನು ಮಾತ್ರಾ ಅದೆಷ್ಟು ಸಿಂಗರಿಸಿ, ಮುದ್ದಾಗಿಸಿ ಅಂದವಾಗಿರಿಸಿದ್ದಳೆಂದರೆ ರಸ್ತೆ ಮೇಲಿರುವ ಜನರ ದೃಷ್ಟಿ ಆ ಮಗುವಿಗೆ ತಾಗುವುದೇನೋ ಅನ್ನಿಸುವಂತಿತ್ತು. ವಿಶೇಷವೇನೆಂದರೆ ಅವಳಂದದ ಬಗ್ಗೆ ಅವಳಿಗೇನೂ ಬೇಸರವಿರಲಿಲ್ಲ ತನ್ನ ಮಗುವಿನ್ನು ಸಿಂಗರಿಸಿ ಸ್ಕೂಲ್ ಬಸ್ ಗೆ ಹತ್ತಿಸಲು ಎಷ್ಟೊಂದು ಉತ್ಸುಕಳಾಗಿ ಆಯಾಸವಿಲ್ಲದೇ ಓಡಿ ಬರುತ್ತಿದ್ದಳೆಂದರೆ ಅದನ್ನು ನೋಡುತ್ತಲೇ ನಾನೊಂದು ಕ್ಷಣ ತನ್ಮಯನಾದೆ. ಬಸ್ ಇನ್ನೇನು ಮುಂದೆ ಚಲಿಸುವುದು ಎನ್ನುವಷ್ಟರಲ್ಲಿ ಬಾಗಿಲಿನೊಳಗೆ ಹತ್ತಿ ಮಗುವಿಗಾಗಿ ಕಾದಿರಿಸಿದ್ದ ಸೀಟ್ ನಲ್ಲಿ ಕೂರಿಸಿ, ಮೆಲ್ಲನೆ ಕೆಳಗೆ ಎಗರಿ ಮುಗ್ಧ ಕಂದಮ್ಮಗೆ ಕೈ ಮಾಡಿದ್ದಳು ಟಾಟಾ ಟಾಟಾ ಎಂದು. ಅದಕ್ಕುತ್ತರವಾಗಿ ಮಗಳ ಎರಡು ಕೈಗಳ ಜೊತೆಗೆ ಬಸ್‍ನಲ್ಲಿದ್ದ ಹತ್ತಿಪ್ಪತ್ತು ಮಕ್ಕಳು ತಮ್ಮೆಲ್ಲ ತೊಳನ್ನು ಮೇಲಕ್ಕೆತ್ತಿ ಅವಳಿಗೆ ಹೋಗಿ ಬರುವೆವು ಅಮ್ಮಾ ಎನ್ನುವಂತೆ ಟಾಟಾ ಮಾಡುತ್ತಿದ್ದದ್ದೂ ನೋಡಿದರೆ ಎಂತಹವರಿಗೂ ಸನ್ನಿವೇಶ ಮನ ತಟ್ಟದೆ ಇರದು. ನಿಜಕ್ಕೂ ಆ ತಾಯ ಜೀವ ಆ ಸಂಧರ್ಭ ಎಷ್ಟು ಖುಷಿ ಪಟ್ಟಿರಬಹುದು ಅಲ್ವಾ...
ಪ್ರತಿಯೊಂದರಲ್ಲೂ ಶಿಸ್ತು, ಅಂದ ಚಂದ ಲೆಕ್ಕ ಹಾಕುವ ನಾವು, ಇಂತಹ ಅದೆಷ್ಟೋ ಪ್ರೀತಿಗಳನ್ನು ಕಳೆದುಕೊಂಡಿರುತ್ತೇವೋ ದೇವನೇ ಬಲ್ಲ.  ಯಾವ ಕುಹಕವೂ ಇರದ ಮುಗ್ಧ ಮನಸ್ಸಿನ ನಗುವನ್ನು ಹೊಂದಿರುವ ಆ ಪುಟ್ಟ ಮಕ್ಕಳಿಗೆ ಯಾವ ಭೇಧ ಭಾವವು ಇಲ್ಲದೇ ಪ್ರೀತಿಸುವ ಹೃದಯ ಎಲ್ಲಾ ತಿಳಿದ-ಬೆಳೆದ ನಮಗೆ ಇಲ್ಲವಲ್ವಾ...ಎಂದು ಮನ ಮೌನಮುರಿಯಿತು. ಜೀವನ ಜೋಪಾನ ಮಾಡುವ ತಾಯಿಯ ಪ್ರೀತಿ ಪ್ರತಿ ಮಕ್ಕಳು ಎಷ್ಟು ಬಡತನವಿದ್ದರೂ ಸಿರಿತನದಲ್ಲೇ ಹೇಗೆಲ್ಲಾ ಅನುಭವಿಸುತ್ತಾರೆ ಎನ್ನುವುದನ್ನು ಆ ಒಂದು ಸೀನ್ ಕಣ್ಮುಂದೆ ಬಂದು ತೋರಿಸಿತು.ಮಕ್ಕಳ ಪ್ರೀತಿ ಒಂದು ಕಡೆ, ತಾಯಿಯ ಪ್ರೀತಿ ಇನ್ನೊಂದು ಕಡೆ ಇವೆರಡನ್ನು ನೋಡಿ ಮನಸ್ಸು ಕೇಳಿತು ಪ್ರೀತಿ ಎಂದರೆ ಇದೇನಾ!???

                                                             
                                                              *******************


ಇದೊಂದು ಅನ್ ಎಕ್ಸಫೆಕ್ಟೆಡ್ವ ಇನ್‍ಸಿಡೆಂಟ್...
                 ಈ ಘಟನೆ ನಡೆದಿದ್ದು ಮೊನ್ನೆ ಮೊನ್ನೆ . ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಮಗಳ ಮದುವೆಗೆ ಎಲ್ಲರಂತೆ ನಮಗೂ ಆಮಂತ್ರಣವಿತ್ತು. ಕಳೆದ ಎರಡು ದಿನದಿಂದಲೂ ಅರಮನೆ ಮೈದಾನದಲ್ಲಿ ದೊಡ್ಮನೆ ಮದುವೆಯದೇ ಗಲಾಟೆ, ಇಡೀ ಅರಮನೆ ಮೈದಾನವನ್ನೇ ರೊಚ್ಚಿಗೆಬ್ಬಿಸಿತ್ತು. ಸ್ಟಾರ್ ನಟನ ಮಗಳ ಮದುವೆ ಎಂದರೆ ನಾರ್ಮಲ್ಲಿ ಎಲ್ಲಾ ಸ್ಟಾರ್ಸ್‍ಗಳು ಹಾಜರಾಗಿಯೇ ಆಗುತ್ತಾರೆ. ನಮ್ಮ ಜನತೆ ಮನೆಯಲ್ಲಿ ದೇವರನ್ನು ಪೂಜಿಸುತ್ತಾರೋ ಇಲ್ಲವೋ!? ಆದರೆ ಸಿನಿಮಾ ನಟ/ನಟಿಯನ್ನು ಮಾತ್ರಾ ದೇವರಿಗಿಂತ ಎತ್ತರದಲ್ಲಿ ನಿಲ್ಲಿಸಿ, ಅಯ್ಯೋ ಅವರನ್ನು ನೋಡುವುದೇ ಒಂದು ಭಾಗ್ಯವೆನ್ನುತ್ತಾರೆ. ಅಪ್ಪಿ ತಪ್ಪಿ ಅವರನ್ನು ನೋಡಿದರೆ ತಿರುಪತಿ ತಿಮ್ಮಪ್ಪನ ಮೊದಲ ದರ್ಶನ ಮಾಡಿದ್ದಕ್ಕಿಂತಲೂ ದೊಡ್ಡ ಖುಷಿ ಘೋಷವನ್ನು ಸಾರಿ-ಸಾರಿ ನೆನೆದು ಹಲುಬುತ್ತಾರೆ. ಹಿಂದಿನ ದಿನದಂತೆ ಆ ದಿನವೂ ಚಿತ್ರರಂಗದ ಅನೇಕಾನೇಕ ಗಣ್ಯರೂ ಆಗಮಿಸಿ ಆಶೀರ್ವಧಿಸಿ ವಧು-ವರರನ್ನು ಹರಸುತ್ತಿದ್ದರೂ. ನಮ್ಮದೂ ಅದೇ ನಡೆ. ಅಂತೂ ನಾನು, ಭಾಸ್, ಅಭಿ, ರಾಜೇಶ್ ನಾಲ್ಕು ಮಂದಿ ಜನಗಳ ಮಧ್ಯೆ ಸಿಕ್ಕಿಹಾಕಿಕೊಂಡು, ಅಲ್ಲೋ-ಇಲ್ಲೋ ನಾಲ್ಕಾರೂ ಆಫಿಸರ್‍ಗಳ ಪರಿಚಯವಿದ್ದ ಕಾರಣ, ವಿ.ವಿ.ಐ.ಪಿ ಎಂಟ್ರೆನ್ಸ್‍ನಲ್ಲಿ ಒಳನುಗ್ಗಿ, ಒಂದಷ್ಟು ಹೊತ್ತು ಸ್ಟೇಜ್‍ನಲ್ಲಿ ನಿಂತು, ನಂತರ ಊಟವನ್ನು ಮುಗಿಸಿ, ಹೊರನಡೆಯಲು ಅಣಿಯಾದೆವು. ಎಲ್ಲಿ ಕಂಡರೂ ಪೊಲೀಸ್ ಬಂದೋಬಸ್ತು ಹೇರಳವಾಗಿತ್ತು. ಅದು ದೊಡ್ಮನೆ ಮದುವೆಯಾದ್ದರಿಂದ, ಭೋಜನ ಶಾಲೆಯಲ್ಲಿ ವಿವಿಧ ತಿಂಡಿ ತಿನಿಸುಗಳ ಜೊತೆಗೆ ಬಂದ ಪ್ರತಿಯೊಬ್ಬರಿಗೂ ಹೊಸ ಹೊಸ ಪ್ಲೇಟನ್ನು ಆಗತಾನೆ ಕವರ್‍ನಿಂದ ತೆಗೆ-ತೆಗೆದು ಕೊಡುತ್ತಿದ್ದರು. ಬಹುಶಃ ಅದನ್ನು ನೀಡುವವನಿಗೆ ನಾನ್ಯಾರಿಗೆ ನೀಡುತ್ತಿರುವೆ ಎನ್ನುವ ಪರಿವೇ ಇರಲಿಕ್ಕಿಲ್ಲ ಯಾಕೆಂದರೆ ಅದು ಲಕ್ಷ ಜನರಿಗೂ ಮಿಕ್ಕಿ ಸೇರಿದ್ದ ಮದುವೆಯ ಸಂಭ್ರಮ.
ಅವನ್ಯಾರೋ ಗೊತ್ತಿಲ್ಲ. ಬಡವನಂತೆ ಕಾಣುತ್ತಾನೆ. ಶಿವಣ್ಣನ ಅಭಿಮಾನಿಯೋ ಅಥವಾ ಎಲ್ಲ ಬರುತ್ತಾರೆ ಅಂತ ನಾನು ಮದುವೆಗೆ ಹೋಗಿ ಊಟ ಮಾಡಿ ಬರೋಣವೆಂದು ಬಂದಿದ್ದಾನೆಯೋ ಗೊತ್ತಿಲ್ಲ!!!. ಆದರೆ ಊಟ ಮಾಡಿದಾತ ಮತ್ತೊಮ್ಮೆ ಪ್ಲೇಟ್ ಕೊಡುವ ಕೌಂಡರ್ ಗೆ ಹೋಗಿ ಹೊಸತೊಂದು ಕವರ್ ಹೊಂದಿರುವ ಪ್ಲೇಟ್ ತೆಗೆದುಕೊಂಡು ಲಾಗ್ ಔಟ್ ಆಗುವ ಗೇಟ್‍ನ ಕಡೆಗೆ ನಮ್ಮ ಜೊತೆನೆ ಹೊರಬರುತ್ತಿದ್ದ. ಉಳಿದ ಎರಡು ಮೂರು ಗೇಟ್‍ನಲ್ಲಿ ಅವನ ಕೈಲಿರುವ ಪ್ಲೇಟ್ ಪೊಲೀಸ್ ಮಾಮರ ಕಣ್‍ಗೆ ಬಿಳದೇ ಕೊನೆಯ ಗೇಟ್ ದಾಟಿ ಇನ್ನೇನು ಹೊರಗೆ ಹೋದ ಎನ್ನುವಷ್ಟರಲ್ಲಿ ಒಬ್ಬ ಪೇದೆಯ ಕಣ್ಣಿಗೆ ಇವನ ಕೈಲಿರುವ ಪ್ಲೇಟ್ ಕಂಡು ಬಂದು ‘ಲೇ ಲೋಫರ್ ಎಲ್ಲಿಗೆ ಪ್ಲೇಟ್ ತಗೊಂಡು ಹೋಗ್ತಿದ್ದೀಯಾ? ಊಟ ಮಾಡಲು ಪ್ಲೇಟ್ ಕೊಟ್ಟರೆ ಅದನ್ನು ಕದ್ದು ಒಯ್ಯುತ್ತಿದ್ದೀಯಾ!? ಎಂದು ಹಿಡಿದುಕೊಂಡ. ಪೊಲೀಸ್ ಮಾಮನೇನೋ ತಾನೋಬ್ಬ ಘನಂಧಾರಿ ಎಂಬಂತೆ ಆ ಯುವಕನನ್ನು ಅಷ್ಟು ಜನರ ಮಧ್ಯೆ ಕರೆದು, ನಾಲ್ಕಾರೂ ಬೈಗುಳವನ್ನಿತ್ತು, ಇಲ್ಲೇ ಇಟ್ಟು  ಹೋಗು ಎನ್ನುವಂತೆ ಗಧರಿಸಿ ಅವಮಾನಿಸಿ, ಮೂಲೆಯೊಂದರಲ್ಲಿ ಪ್ಲೇಟನ್ನು ಇರಿಸಿ ಅವನನ್ನು ಕಳುಹಿಸಿದ ಆದರೆ ಇದೆಲ್ಲವನ್ನು ಜನರ ಮಧ್ಯೆದಲ್ಲಿ ನಾನೊಬ್ಬನಾಗಿ  ನೋಡುವಾಗ ಒಂದೆರಡು ಕ್ಷಣ ಮನಸು ಆತನ ಮನದಿಂಗಿತ ಹೀಗಿರಬಹುದೇನೋ ಎಂದು ಮರುಗಿತು.
“ನಾನೊಬ್ಬ ಬಡವ, ಈ ಪ್ಲೇಟ್‍ನ್ನು ದುಡ್ಡು ಕೊಟ್ಟು ಖರೀಧಿಸಲು ಸಾಧ್ಯವಿಲ್ಲ. ಬಹುಶಃ ಇಷ್ಟೊಂದು ಚೆಲ್ಲಾಪಿಲ್ಲಿಯಾಗಿರುವ ಪ್ಲೇಟ್‍ಗಳಲ್ಲಿ ಒಂದನ್ನು ನನ್ನ ಮನೆಗೆ ತೆಗೆದುಕೊಂಡು ಹೋದರೆ ನನ್ನ ಹೆಂಡತಿ ಅಥವಾ ಮಗ/ಮಗಳು ಖುಷಿಯಾಗಬಹುದು. ಅವರಿಗೆಲ್ಲಾ ಇಷ್ಟೊಂದು ದೊಡ್ಡ ಸಮಾರಂಭಕ್ಕೆ ಬಂದು ಊಟ ಮಾಡಲು ಆಗುವುದಿಲ್ಲ. ಅಟ್‍ಲೀಸ್ಟ್ ಇಂತ ಪ್ಲೇಟ್‍ಗಳಲ್ಲಾದರೂ ಊಟ ಮಾಡಿ ಖುಷಿ ಪಡಲಿ, ಮಗ/ಮಗಳಾದರೂ ಖುಷಿಯಿಂದ ನಲಿಯಲಿ, ಇದರಲ್ಲಿ ನನ್ಮಗ/ಮಗಳು ಊಟ ಮಾಡುತ್ತಾಳೆ ಎನ್ನುವಂತಿತ್ತೋ ಏನೋ” ಎಂದೆನಿಸಿತು. ಅದಾಗಲೇ ಮನದೊಳಗಿಂದ ಪ್ರೀತಿ ಎಂದರೆ ಇದೇನಾ ಎನ್ನುವ ಭಾವ ಹೊರಹೊಮ್ಮಿ ಕಂಬನಿ ಕಣ್ಣಿನಂಚಲಿ ಜಾರಿತ್ತು...
“ಅರಿವಿಲ್ಲದೇ ಆದ ಒಲವಿನ ಚೆಲುವು ತಿಳಿಸಿ ಕೇಳಿತು ಪ್ರೀತಿ ಎಂದರೆ ಇದೇನಾ!?..” ನೀವೇ ಹೇಳಿ ಉತ್ತರ...


ಅಭಿಮಾನಿಗಳ ಅಣ್ಣ, ಕನ್ನಡದ ಯಜಮಾನ ಡಾ. ವಿಷ್ಣುವರ್ಧನ್...


         ಸಿನಿಮಾ ಅಂದರೆ ಹಾಗೆ ಅಲ್ಲಿ ಅನೇಕ ಪ್ರತಿಭೆಗಳು ದಿನದಿಂದ ದಿನಕ್ಕೆ ಅನಾವರಣಗೊಳ್ಳುತ್ತಲೇ ಇರುತ್ತಾರೆ. ಆದರೆ ಏಷ್ಟೇ ಹೊಸ ಪ್ರತಿಭೆಗಳು ಬಂದರೂ ಹಿಂದೆ ಇದ್ದ, ಕನ್ನಡ ಸಿನಿ ಜಗತ್ತನ್ನು ವಿಶಾಲಗೊಳಿಸಿ, ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ತಂದಿತ್ತ, ಅನೇಕ ಮಹನೀಯರಿಗೆ ಎಂದಿಗೂ ಇಂದಿನ ಪ್ರತಿಭೆಗಳು ಸಾಟಿಯಾಗಲಾರದು. ಅಂದು ನಟನೆಯಲ್ಲಿ ರಂಗಭೂಮಿ ಹಿನ್ನೆಲೆಯ ಅಭಿನಯದ ಸೊಗಡಿತ್ತು, ಅಲ್ಲಿ ಕಷ್ಟದ ಕೆಲಸವಿತ್ತು, ಗಂಜಿ ನೀರಿಗೂ ಛಲದ ಬದುಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞಾನದ ಕೊರತೆಯಿತ್ತು. ಇಂದಿರುವ ತಾಂತ್ರಿಕತೆಯ ಬಳಕೆ ಅಂದು ಇರಲಿಲ.್ಲ ಆದರೂ ಇರುವ ಟೆಕ್ನಾಲಜಿಯಲ್ಲೇ ಮನಮುಟ್ಟುವ ಸಿನಿಮಾ ನೀಡುತ್ತಿದ್ದವರು ಆಗಿನ ಮೇರು ಪ್ರತಿಭೆಗಳು.
ಏನೇ ಹೇಳಿ ಅವರಿಗೆ ಅವರೇ ಸಾಟಿ. ವರ್ಷಗಳ ಹಿಂದೆ ಮೂಡಿ ಬಂದ ಅನೇಕ ನಟ, ನಟಿ, ನಿರ್ದೇಶಕ, ಸಹಕಲಾವಿದರನ್ನು  ನೆನೆಸಿಕೊಂಡರೇ ಕಣ್ಮುಂದೆ ಅನೇಕಾನೇಕ ಕಾಣದ, ಕಾಣುವ ಪ್ರತಿಭೆಗಳು ಹೊರಹೊಮ್ಮುತ್ತವೆ. ಮಹಾನ್ ಮೇರು ನಟರ ಸಾಲೇ ಜಿನುಗುತ್ತದೆ. ಅಂತಹ ನಟನಾ ವೀರರ ಪೈಕಿಯಲ್ಲಿ ನಮಗೆ ಕಾಣುವ ವಿಶೇಷ ಪ್ರತಿಭೆ ಅಂದರೆ ಅದು ‘ಸಾಹಸಸಿಂಹ ಡಾ. ವಿಷ್ಣುವರ್ಧನ್’.
       

ಹೌದು.., ಅವರೊಂದು ಸಂಪತ್ತು, ಚಿತ್ರರಸಿಕರ ಪಾಲಿನ ಮುತ್ತು, ನಿರ್ಮಾಪಕರ ಪಾಲಿನ ಕಾಮಧೇನು, ಅಭಿಮಾನಿಗಳ ಪ್ರೀತಿಯ ಅಣ್ಣ. ‘ ನಾನು ಅಭಿಮಾನಿಗಳನ್ನು ಪ್ರೀತಿಸುತ್ತೇನೆ, ಅವರ ಆಶೀರ್ವಾದದಿಂದಲೇ ನಾನಿಲ್ಲಿ ಇದ್ದೇನೆ. ಅವರ ಪ್ರೀತಿಗೆ ನಾನೆಂದು ಋಣಿ’ ಎಂದು ಬದುಕಿನ ತುಂಬಾ ಅಭಿಮಾನಿಗಳನ್ನು ಪ್ರೀತಿಸುತ್ತಲೇ ಇದ್ದ ಚಿರಋಣಿ. ಇಂದಿಗೂ ವಿಷ್ಣು ಎಂದರೆ ಅಭಿಮಾಣಿಗಳಲ್ಲಿ ಎನೋ ಒಂದು ರೀತಿಯ ಪುಳಕ. ಅವರ ನೆನಪು ಅಂದು-ಇಂದು-ಮುಂದು ಎಂದೆಂದೂ ಚಿರಸ್ಥಾಯಿ. ರಕ್ತಧಾನ, ನೇತ್ರಧಾನ, ಹೃದಯ ತಪಾಸಣೆ, ಕಣ್ಣಿನ ಪರೀಕ್ಷೆ, ಅನ್ನದಾನ, ವಿವಿಧ ವಿನೋಧಾವಳಿಯ ಮೂಲಕ ಪ್ರತಿ ದಿನ, ಪ್ರತಿ ನಿಮಿಷ ಅಭಿಮಾನಿಗಳು ಯಜಮಾನನನ್ನು ತಾವು ಮಾಡುವ ಸಮಾಜ ಸೇವೆಯ ಮೂಲಕ ಕಾಣುತ್ತಲೇ ಇರುತ್ತಾರೆ, ಇದ್ದಾರೆ ಕೂಡ.
ವಿಷ್ಣುವರ್ಧನ ಎನ್ನುವುದೊಂದು ಅಪ್ರತಿಮ ಮೇರು ಪ್ರತಿಭೆ. ಬಹುಶಃ ಆ ಸ್ಥಾನಕ್ಕೆ ಕನ್ನಡ ಚಿತ್ರರಂಗ ಮತ್ತೊಂದು ಪ್ರತಿಭೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವಷ್ಟು ದೊಡ್ಡ ನಟಶಿಖರ. ಡಾ. ರಾಜ್ ಕುಮಾರ್ ಜೊತೆ ಗಂಧದ ಗುಡಿ ಚಿತ್ರದಲ್ಲಿ ನಾಯಕನ ಸಮಾನ ಪಾತ್ರವನ್ನು ಹಂಚಿಕೊಂಡ ನಂತರವಂತೂ ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜರು ಎಂಬ ಖ್ಯಾತಿಯೂ ಬಂದಿದ್ದೂ, ಇಂದಿಗೂ ಆ ಖ್ಯಾತಿ ಅವರಿಬ್ಬರಿಗೆ ಸಲ್ಲವುದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
1952 ರ ಸಪ್ಟೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್, ನಾರಾಯಣರಾವ್ ಹಾಗೂ ಕಾಮಾಕ್ಷಮ್ಮನವರ ಪ್ರೀತಿಯ ಮಗನಾಗಿದ್ದರು. ಬಾಲ್ಯದಿಂದಲೂ ಸಂಪತ್‍ಕುಮಾರ್ ಎಂಬ ಹೆಸರಲ್ಲಿದ್ದ ವಿಷ್ಣು, 1955ರಲ್ಲಿ ಮೊದಲಬಾರಿಗೆ ‘ಶಿವಶರಣ ನಂಬೆಯಕ್ಕ’ ಎಂಬ ಸಿನಿಮಾದಲ್ಲಿ ಬಾಲನಟನಾಗಿ ಅವಕಾಶವನ್ನು ಗಿಟ್ಟಿಸಿಕೊಂಡರು. ಮುಂದೊಂದು ದಿನ ಭರವಸೆಯ ನಾಯಕನಾಗುವುದನ್ನು ಆ ಸಿನಿಮಾ ನಟನೆಯಲ್ಲೇ ತೋರ್ಪಡಿಸಿದ್ದರು. ಆಗಿನ ಕಾಲಕ್ಕೆ ಆ ಸಿನಿಮಾ ಹೊಸ ಇತಿಹಾಸ ಬರೆದಿತ್ತು. ಅದಾಗಲೇ ಬರೋಬ್ಬರಿ 28 ದಿನಗಳ ಚಿತ್ರೀಕರಣ ನಡೆಸಿ, ಅಷ್ಟು ದಿನ ಸಿನಿಮಾ ಶೂಟಿಂಗ್ ನಡೆಸಿದ ಕನ್ನಡದ ಮೊದಲ ಚಿತ್ರ ಎಂಬ ಕೀರ್ತಿಗೂ ಪಾತ್ರವಾಗಿತ್ತು. ಇದಾದ ನಂತರ ಎಸ್. ಎಲ್. ಬೈರಪ್ಪನವರ ವಂಶವೃಕ್ಷ ಕಾದಂಬರಿಯಾಧಾರಿತ ‘ಕೋಕಿಲವಾಣಿ’ ಎಂಬ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡು ಪುಟ್ಟ ಪಾತ್ರವನ್ನು ನಿರ್ವಹಿಸಿ ನಾಯಕನಾಗುವ ಎಲ್ಲಾ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.  ನಟನಾಗಿ ಅಭಿನಯಿಸಿದ ಪ್ರಥಮ ಚಿತ್ರ ‘ನಾಗರಹಾವು’. ಅವರಿಗೆ ಆ ಚಿತ್ರದ ನಿರ್ದೇಶಕ ಪುಟ್ಟಣ್ಣ ಕಣಗಾಲರವರು ಸಿನಿಮಾದ ಶೂಟಿಂಗ್ ವೇಳೆಯಲ್ಲಿ ‘ವಿಷ್ಣುವರ್ಧನ’ ಎಂದು ಹೊಸ ನಾಮಕರಣ ಮಾಡಿದ್ದರು. ಅಲ್ಲಿಂದ ಸಂಪತ್‍ಕುಮಾರ್‍ನಾಗಿದ್ದವನು ವಿಷ್ಣುವರ್ಧನ ಆದ. ಬಾಲ್ಯದ ವಿಧ್ಯಾಭ್ಯಾಸವನ್ನು ಮೈಸೂರಿನಲ್ಲೇ ಕಳೆದ ವಿಷ್ಣುವರ್ಧನ್, ಮುಂದಿನ ಶಿಕ್ಷಣವನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿ ನಟನೆಯತ್ತ ಹೆಜ್ಜೆಹಾಕಿದ್ದರು. ಇವರ ತಂದೆ ಕಲಾವಿದರಾಗಿದ್ದು, ತಂದೆಯ ಕಲಾ ಭಕ್ತಿ ಮಗನಿಗೂ ಪಸರಿಸಿತ್ತು. ತಂದೆಯವರು ಸಂಗೀತ, ಸಂಭಾಷಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅದುವೇ ಸಂಪತ್‍ಕುಮಾರ್(ವಿಷ್ಣುವರ್ಧನ)ನಿಗೆ ಬಾಲ್ಯದಿಂದಲೂ ನಟನೆಯ ವಿಷಯದಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿತ್ತು..
‘ವಿಷ್ಣುವರ್ಧನ’ ಎಂಬ ಹೆಸರು ಚಿತ್ರದ ಶೀರ್ಷಿಕೆಯ ಮೇಲೆ ಬಂತೆಂದರೆ ಆ ಸಿನಿಮಾ ಫ್ಯಾಮಿಲಿ ಚಿತ್ರರಸಿಕ ಬಳಗವನ್ನು ಚಿತ್ರಮಂದಿರದ ಕಡೆಗೆ ಸೆಳೆಯುವುದು ಖಾತ್ರಿ ಎಂದೇ ಅರ್ಥ. ಅಲ್ಲದೇ ಅವರ ಸಿನಿಮಾಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಸರು ಮಾಡುತ್ತಿದ್ದದ್ದೂ ನಿರ್ಮಾಪಕರುಗಳಲ್ಲಿ ನಮ್ಮ ದುಡ್ಡು ಸೇಫ್ ಎನ್ನುವ ಭಾವವನ್ನು ತಂದಿರುತ್ತಿತ್ತು. ಅವರೊಬ್ಬ ಸಾಧು ವ್ಯಕ್ತಿ. ಯಾರನ್ನು ಯಾವುದನ್ನೂ ನೋಯಿಸದ ಹೃದಯವಂತ. ತನ್ನ ನಿಜ ಜೀವನದಲ್ಲಿ ಯಾವತ್ತೂ ಮತ್ತೊಬ್ಬರಿಗೆ ನೋವಾಗುವಂತೆ ಗಟ್ಟಿಯಾಗಿ ಮಾತನಾಡಿದವರಲ್ಲ. ಯಾವ ಕೆಲಸ ಮಾಡುವುದಿದ್ದರೂ ಮತ್ತೊಬ್ಬರಿಗೆ ತಿಳಿಯದಂತೆ ಕಾಯ ಕೈಗೊಳ್ಳುವುದು ಅವರ ಸ್ಫೆಷಾಲಿಟಿಯಲ್ಲೊಂದು. ಅವರದು ಸರಳ ವ್ಯಕ್ತಿತ್ವ. ಸದಾ ಸಾಯಿಬಾಬನ ಭಕ್ತಿಯಲ್ಲಿಯೇ ಕಾಲಕಳೆಯುತ್ತಿದ್ದ ವಿಷ್ಣುವರ್ಧನ ಎಂದೂ ರಾಜಕೀಯದ ವಿಷಯಕ್ಕೆ ಹೋಗದೆ ಸ್ವತಂತ್ರತೆಯಲ್ಲಿಯೇ ತಮ್ಮ ಬಳಿ ಬಂದ ಅಭಿಮಾನಿಗಳನ್ನು ತಮ್ಮಿಂದ ಆದ ರೀತಿಯಲ್ಲಿ ಸಹಾಯ ಮಾಡಿ, ಕಳುಹಿಸುತ್ತಿದ್ದರು.
ತಮ್ಮೊಳಗೆ ಅದೇನು ನೋವಿದ್ದರೂ ಯಾರಲ್ಲಿಯೂ ತೋಡಿಕೊಳ್ಳದ ವಿಷ್ಣು, ನಿಜಕ್ಕೂ ಇನ್ನೊಬ್ಬರಿಗಾಗಿ ಬದುಕಿದ ಧೀಮಂತ ವ್ಯಕ್ತಿ ಎಂದರೆ ತಪ್ಪಿಲ್ಲ. ಅವರ ಸಿನಿಮಾ ಎಂದರೆ ಅಲ್ಲೊಂದು ಹೊಸ ದಾಖಲೆ ಇದ್ದೆ ಇರುತ್ತದೆ ಎಂದು ಜನ ಮಾತನಾಡುತ್ತಿದ್ದ ಕಾಲವೊಂದಿತ್ತಂತೆ. ಅದಕ್ಕೆ ಕಾರಣವೂ ಇತ್ತು. ಅವರ ಮೊದಲ ಸಿನಿಮಾ ‘ನಾಗರಹಾವು’ ಬೆಂಗಳೂರಿನ ಸಾಗರ್ ಚಿತ್ರಮಂದಿರವೊಂದರಲ್ಲೇ ಬರೋಬ್ಬರಿ 25 ವಾರಗಳನ್ನು ಪೂರೈಸಿ, ಆಗಿನ ಕಾಲಕ್ಕೆ 7 ಲಕ್ಷ ರೂಪಾಯಿಗಳ ಗಳಿಕೆ ಕಂಡು ಹೊಸ ದಾಖಲೆ ಬರೆದಿತ್ತು. ಅಲ್ಲದೇ ಬೆಂಗಳೂರಿನ 3 ಚಿತ್ರ ಮಂದಿರಗಳಲ್ಲಿ ನೂರು ದಿನ ಪೂರೈಸಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಆ ಚಿತ್ರ ಪಾತ್ರವಾಗಿತ್ತು. ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಅದಾದ ನಂತರ ನೂರಕ್ಕೂ ಹೆಚ್ಚು ಹಿಟ್ ಸಿನಿಮಾ ನೀಡಿದ ಖ್ಯಾತಿ ಡಾ. ವಿಷ್ಣುವರ್ಧನ್‍ರದ್ದು. ಅವರ ಸಿನಿಮಾ ಸಾಧನೆಯನ್ನಂತು ಪಟ್ಟಿ ಮಾಡುತ್ತಾ ಹೊರಟರೆ ಲೇಖನ ಮುಗಿಯದಷ್ಟು ಸಿಗುತ್ತವೆ, ಸರಳ ಜೀವನದ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದ ವಿಷ್ಣುವರ್ಧನ ಕನ್ನಡ ಚಿತ್ರರಂಗಗಳಲ್ಲಿ ಅತೀ ಹೆಚ್ಚು ದ್ವಿಪಾತ್ರ ನಿರ್ವಹಿಸಿದ ನಟ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರ ನಟನೆಗೆ 6 ಬಾರಿ ‘ಶ್ರೇಷ್ಠ ನಟ’ ಪ್ರಶಸ್ತಿಯೂ ದೊರೆತಿದ್ದು, ನಟನೆ ಮಾತ್ರವಲ್ಲದೇ ಕಿಲಾಡಿ ಕಿಟ್ಟು, ನಾಗಕಾಳ ಬೈರವ, ಸಾಹಸಸಿಂಹ, ಖೈದಿ, ಮೋಜುಗಾರ, ಸೊಗಸುಗಾರ, ವಿಷ್ಣುಸೇನಾ ಮೊದಲಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನು ಮಾಡಿ ಗಾಯಕರಾಗಿಯೂ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
ಅದು ಡಾ. ರಾಜ್‍ಕುಮಾರ್ ನಿಧನ ಹೊಂದಿದ್ದ ಸಮಯ. ಆಗ ಹಲವಾರು ಜನ, ವಿಷ್ಣುವರ್ಧನ್ ಬಳಿ ಬಂದು ರಾಜ್‍ಕುಮಾರ್ ಅವರ ಸ್ಥಾನಕ್ಕೆ ನೀವೇ ಬರಬೇಕು ಎಂದು ಹೇಳಿದ್ದರು. ಜನರ ಆ ದಿನದ ಮಾತಿಗೆ ಉತ್ತರ ನೀಡಿದ್ದ ವಿಷ್ಣುವರ್ಧನ್, ‘ರಾಜಕುಮಾರ ಎಂದರೆ ಸೂರ್ಯ ಇದ್ದಂತೆ. ನಾನು ಎಂದಿಗೂ ಸೂರ್ಯನಾಗಲೂ ಸಾಧ್ಯವಿಲ್ಲ. ಸೂರ್ಯ  ಚಂದ್ರನಾಗುವುದಿಲ್ಲ, ಚಂದ್ರ ಸೂರ್ಯನಾಗುವುದಿಲ್ಲ. ಚಂದ್ರ ಚಂದ್ರನೇ, ಸೂರ್ಯ ಸೂರ್ಯನೆ’ ಎಂದು ಬರೀ ಕಲೆಯಷ್ಟೇ ಅಲ್ಲದೇ ಇನ್ನೊಬ್ಬ ಕಲಾವಿದನ ಮೇಲೆ ಇರುವ ಪ್ರೀತಿ, ಗೌರವವನ್ನು ತೋರಿಸಿದ್ದರು. ಈ ಸಾಕ್ಷಿ ಪ್ರಜ್ಞೆಯನ್ನು ಗಮನಿಸಿದರೆ ವಿಷ್ಣು ಎಷ್ಟು ದೊಡ್ಡ ಸಹಬಾಳ್ವೆಯ, ಗೌರವಾಧಾರಿತ ವ್ಯಕ್ತಿ ಎಂಬುದು ಎಲ್ಲರಿಗೂ ಅರಿಯುತ್ತದೆ. ಇಂತಹ ಮೇರು ಪ್ರತಿಭೆ ಕೇವಲ ಪರದೆಯ ಮೇಲಷ್ಟೆ ಮೇರು ಬಿಂಬವಾಗಿ ಮಿಂಚದೇ ನಾವೆಲ್ಲ ಇಂದು ನೆನಸಿಕೊಳ್ಳುವ ನೆನಪುಗಳ ಚಿತ್ರವಾಗಿ ಪ್ರತಿ ಕನ್ನಡಿಗನ ಹೃದಯದಲ್ಲಿ ನಿಂತಿದ್ದಾರೆ. ಅವರಿಂದು ನಮ್ಮ ಜೊತೆ ಇಲ್ಲವೆನ್ನುವ ಕೊರಗೊಂದನ್ನು ಬಿಟ್ಟರೆ, ಅವರ ನೆನಪು, ಆದರ್ಶ, ಎಲ್ಲವೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಹೂ ಬಳ್ಳಿಯಂತೆ ಹಬ್ಬಿ ನಿಂತಿದೆ. ಅಭಿಮಾನಿಗಳಿಗೆ ಪ್ರೀತಿಯ ಅಣ್ಣನಾಗಿ, ಕನ್ನಡದ ಸಿಂಹಾದ್ರಿಯಂತೆ ತನು ಮನದಲ್ಲಿ ನಲೆಸಿರುವ ನಮ್ಮ ವಿಷ್ಣುವರ್ಧನ ಯಾವಾಗಲೂ ಕರುನಾಡಿನ ಸಿಂಹನೆ ಎನ್ನುವುದರಲ್ಲಿ ಏರಡು ಮಾತಿಲ್ಲ...


ಹೆಣ್ಣು-10         ಮೊನ್ನೆ ಒಂದು ವ್ಯಾಟ್ಸಾಪ್ ವೀಡಿಯೋ ನೋಡಿದೆ. ಅದು ಐದು ನಿಮಿಷದ ಒನ್ ಲೈನ್ ಸ್ಟೋರಿಯಂತೆ ಸಮಾಜದಲ್ಲಿ ಈಗ ಆಗುತ್ತಿರುವ ಅತ್ಯಾಚಾರ ಅನಾಚಾರವನ್ನು ತೋರಿಸುವ ಮತ್ತು ದಾರಿತಪ್ಪುತ್ತಿರುವ ಇಂದಿನ  ಹದಿ ಹರೆಯದ ಹುಡುಗಿಯರಿಗೆ ಅರಿವು ಮೂಡಿಸುವ ಒಂದೊಳ್ಳೆ ವೀಡಿಯೋ ಎನ್ನುವುದರಲ್ಲಿ ಎರಡು ಮಾತಿಲ್ಲ...


ಸ್ಟೋರಿ ಹೀಗಿತ್ತು...
      ಹೈಸ್ಕೂಲು ಓದುವ ಹುಡುಗಿ.  ಓದು ತುಂಬಾ ಚೆನ್ನಾಗಿಯೇ ನಡೆಯುತ್ತಿತ್ತು. ಎಲ್ಲವುದರಲ್ಲೂ ಮುಂದಿದ್ದಳು. ಆದರೆ ಅಚಾನಕ್ಕಾಗಿ ಮನೆಯವರು ತೆಗೆದುಕೊಟ್ಟ ಮೊಬೈಲ್‍ನ ಮಿಸ್ ಕಾಲ್‍ಗೆ ಮುಗಿಬಿದ್ದ ಹುಡುಗಿ, ತನ್ನಲ್ಲಿರುವ ಉಳಿದ ಆಸಕ್ತಿಯನ್ನೆಲ್ಲಾ ಕಳೆದುಕೊಂಡು, ನಿಧಾನವಾಗಿ ಮಿಸ್ ಕಾಲ್ ನಲ್ಲಿ ಪರಿಚಯವಾದ ಹುಡುಗನ ಬಣ್ಣಬಣ್ಣದ ಮಾತಿಗೆ ಮರುಳಾಗಿ ಲವ್ ಎನ್ನುವ ಪಾಶಕ್ಕೆ ಬೀಳುತ್ತಾಳೆ.
ಒಂದು ದಿನ ಬೆಳಿಗ್ಗೆ ತುಂಬಾ ಅಸಹ್ಯಕರವಾದ ಅಶ್ಲೀಲ ಪೋಟೋಗೆ ಇವಳ ಮುಖವನ್ನು ಎಡಿಟ್ ಮಾಡಿ, ನೀನು ನಾ ಹೇಳಿದಲ್ಲಿಗೆ ಬರಬೇಕು ಇಲ್ಲವೆಂದರೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ನಿಮ್ಮ ಮನೆಯವರೆಲ್ಲರಿಗೂ ಈ ಫೋಟೋವನ್ನು ಸೆಂಡ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್‍ಗೆ ಇಳಿಯುತ್ತಾನೆ. ಲೈಂಗಿಕ ಉಪಯೋಗಕ್ಕಾಗಿ ಅವಳನ್ನು ಬಳಸಿಕೊಳ್ಳುವ ಆ ಧಂಧೆಗೆ ಇಳಿಸುವ,ಯಾವುದೋ ಹೊರ ಪ್ರಪಂಚಕ್ಕೆ ಕಿಡ್ನಾಪ್ ಮಾಡಿ ಮಾರಾಟ ಮಾಡುವ ಇರಾದೆ ಅವನದ್ದಾಗಿತ್ತು. ಆ ಫೋಟೋಗಳನ್ನು  ನೋಡಿದ ಹುಡುಗಿ ಹೆದರಿ ಮನೆಯವರಿಗೆ ತಿಳಿದರೆ ಸಾಯಿಸುತ್ತಾರೆ, ಪ್ಲೀಸ್ ಹಾಗೆ ಮಾಡದಿರು ನೀವು ಹೇಳಿದಲ್ಲಿಗೆ ಬರುತ್ತೆನೆಂದು ತಿಳಿಸಿದ ವಿಳಾಸದ ಕಡೆ ಹೊರಡುತ್ತಾಳೆ. ಆದರೆ ದಾರಿಮಧ್ಯೆ ಅವಳು ತಲುಪಬೇಕಾದ ವಿಳಾಸ ತಿಳಿಯದೇ ಪರದಾಡುತಿದ್ದಾಗ, ಅದೇ ಮಾರ್ಗವಾಗಿ ಬಂದ ಅವಳ ಸ್ಕೂಲ್ ಟೀಚರ್ ಅವಳನ್ನು ಇಲ್ಲೇನು ಮಾಡುತ್ತಿರುವೆ ಎಂದು ಗದರಿಸಿ ವಿಷಯತಿಳಿದು, ಕೂಪಕೃತ್ಯದ ಬಾಯಿಂದ ಪಾರು ಮಾಡಿಸಿ, ಧೈರ್ಯ ಹೇಳಿ ಮನೆಗೆ ಕಳುಹಿಸುತ್ತಾರೆ.
ವಿಚಾರ ಇಷ್ಟೆ ಆದರೂ ವೀಡಿಯೋ ನೋಡುತ್ತಾ ಹೋದರೆ ನಿಜಕ್ಕೂ ಮನ ಕಂಪಿಸುತ್ತದೆ. ಕುರುಡು ಪ್ರೇಮದ ಅಮಲಿನಲ್ಲಿ ಎಷ್ಟೋ ಜನ ಹುಡುಗಿಯರು, ತಮ್ಮ ಪ್ರೇಮಿಯು ಎದುರು ತೋರುವ ಉತ್ತಮ ಗುಣಗಳನ್ನು ಮಾತ್ರವೇ ಕಂಡು ಯಾಮಾರುತ್ತಾರೆ. ಎಷ್ಟೋ ಕಡೆ ಸ್ಫುರದ್ರೂಪಿ ಯುವಕರು ತಮ್ಮ ಸೌಂದರ್ಯವನ್ನೇ ಬಂಡವಾಳವನ್ನಿಟ್ಟುಕೊಂಡು ಹುಡುಗಿಯರ ಜೊತೆ ಆಟವಾಡಿ, ಅತೀವ ಬುದ್ಧಿವಂತಿಕೆಯಿಂದ ತಮ್ಮ ಆಸೆ ಅಕಾಂಕ್ಷೆಗಳನ್ನೆಲ್ಲಾ ಈಡೇರಿಸಿಕೊಂಡ ಮೇಲೆ ವಿಳಾಸ ತಿಳಿಯದಂತೆ ಮಾಯವಾಗುತ್ತಾರೆ. ಹೆಣ್ಮಕ್ಕಳೇ ಆದಷ್ಟು ಎಚ್ಚರವಿರಿ, ನೀವು ನಂಬಿರುವ ಪ್ರೀತಿ, ಮೋಸದಿಂದಲೂ ಕೂಡಿರಬಹುದು. ಯಾವುದೇ ಹೆಜ್ಜೆ ಇಡುವುದಕ್ಕೆ ಮುನ್ನ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ.
ಇಂತಹ ಸ್ಟೋರಿಯ ವೀಡಿಯೋಗಳು ನಮ್ಮ ನಿಜ ಜೀವನದಲ್ಲಿ ದಿನಾಲೂ ನೋಡುತ್ತಿದ್ದರೂ ಎಂದೂ ಅವುಗಳ ಬಗ್ಗೆ ಚಿಂತಿಸುವುದಿಲ್ಲ. ಮೊದಲು ನಾವು ಒಳ್ಳೆಯವರಾಗೋಣ. ಕೆಲವೊಂದನ್ನು ಹೇಳುವುದರಿಂದಲೂ ಬದಲಾಯಿಸÀಲು ಸಾಧ್ಯವಿಲ್ಲ. ತಮ್ಮನ್ನು ತಾವು ಅರಿತಾಗಲೇ ಬದಲಾವಣೆ ಸಾಧ್ಯ. ಹೆಣ್ಮಕ್ಕಳೇ ಗೊಡ್ಡು ನಂಬಿಕೆ, ಮೊಬೈಲ್ ಪ್ರೀತಿಯನ್ನು ನಂಬದಿರಿ. ಎಂಜಾಯ್ ಮೆಂಟ್‍ಗಾಗಿ ಈ ಕ್ಷಣವನ್ನು ಮರೆಯದಿರಿ. ದಾರಿ ತಪ್ಪದಿರಿ. ಕ್ಷಣಿಕ ಸುಖಕ್ಕಾಗಿ ಹಾತೋರೆದು ಬಂಗಾರದ ಬಾಳನ್ನು ಕೈತಪ್ಪಿಸಿಕೊಳ್ಳದಿರಿ. ಜಾಗೃತಿ ವಿಚಾರ ಮೂಡಿಸುವ ಆ ವೀಡಿಯೋ ಮಾಡಿ ಕಳುಹಿಸಿದವನಿಗೆ ನನ್ನದೊಂದು ಸಣ್ಣ ಸಲಾಮ್...

Tuesday, 22 September 2015

ಹೆಣ್ಣು-9


“ಹೆಣ್ಣು ಹೆಂಗಸಾದಾಗಾ ಬದಲಾಗುತ್ತಾಳೇ ಅನಿಸುತ್ತದೆ ಅಲ್ವಾ ಸಾರ್!...”
ಈ ಹಿಂದಿನ ಸಂಚಿಕೆಗಳಲ್ಲಿ ಮೂಡಿಬಂದಿರುವ ಹೆಣ್ಣು ಅಂಕಣವನ್ನು ಓದಿದ ಓದುಗರೊಬ್ಬರು ಈ ಮೇಲಿನ ಪ್ರಶ್ನೆಯನ್ನು ಕರೆ ಮಾಡಿ ಕೇಳಿದ್ದರು.
 ‘ಹೌದು, ಖಂಡಿತ ನೋ ಡೌಟ್’ ಎಂದೆ.
‘ಹಾಗಾದರೆ ಅವಳು ಬದಲಾವಣೆಗೆ ಒಳಗಾದಾಗ ಸಹಜ ಸಂವೇದನೆಗಳನ್ನ ಕಳೆದುಕೊಳ್ಳುತ್ತಾಳಾ ಸರ್’ ಎಂದು ಮರುಪ್ರಶ್ನೆ ಪ್ರೀತಿಯಿಂದಲೇ ಕೇಳಿದರು.
 ‘ಸಹಜವಾದ ಸಂವೇದನೆಗಳನ್ನು ಕಳೆದುಕೊಂಡಾಗಲೇ ಬದಲಾವಣೆ ಕಾಣಲು ಸಾಧ್ಯ ಅಲ್ವಾ, ಇಲ್ಲವೆಂದರೆ ಬದಲಾವಣೆಯಾಗೋದು ಕಷ್ಟ ಸಾಧ್ಯ ಸರ್’ ಎಂದೆ.

 ಎಸ್.., ಈ ಮಾತು ನಿಜ. ಹುಡುಗಿ ಹೆಣ್ಣಾಗಿ ಹೆಂಗಸಾಗುವ ಪ್ರವರ್ಧಮಾನಕ್ಕೆ ತಿರುಗಿದಾಗ ತನ್ನಿಂದ ತಾನೇ ಬರುವ ಕಾತುರತೆ, ನಿರೀಕ್ಷೆ, ಲಜ್ಜೆ, ನಾಚಿಕೆ, ಕನಸು ಕಂಗಳು , ಕೆನ್ನೆ ಚುಂಬಿಸುತ್ತಲೇ ಇರುವ ರೆಪ್ಪೆಗಳು, ಬಳುಕೋ ವೈಯಾರ, ಬಿಂಕ ಭಿನ್ನಾಣಗಳು ಎಲ್ಲವೂ ತನ್ನಿಂದ ತಾನೇ ಅವಳ ಸಂವೇದನೆಗೆ ಅರಿಯದೆ ಪ್ರವೇಶಿಸುತ್ತದೆ.
ಬಾಲಕಿ ಹೆಣ್ಣಾಗುತ್ತಾಳೆ, ಸೀದಾ ಮಹಿಳೆಯೂ ಆಗುತ್ತಾಳೆ ಆಗ, ಅವಳಲ್ಲಿ ಬದಲಾವಣೆಯ ಮಹಾಪೂರವೇ ಹರಿಯುತ್ತದೆ. ಒಂಥರ ಗಾಂಭೀರ್ಯ, ದಿನಚರಿಯಲ್ಲಿ ಬದಲಾವಣೆ, ಆರೋಗ್ಯದ ಕಡೆ ಗಮನ, ತನ್ನ ತನದ ಕಾಳಜಿ, ಲೈಂಗಿಕತೆಯ ಬಗೆಗಿನ ಕುತೂಹಲ, ಹುಡುಗರ ಮೇಲಿನ ಸೆಳೆತ, ಉಡುಗೆ ತೊಡುಗೆಯ ಬದಲಾವಣೆ ಇವೇ ಮುಂತಾದವುಗಳು ತನ್ನಿಂದ ತಾನಾಗಿಯೇ ಯಾರ ಹೇಳಿಕೆಯನ್ನು ಪಡೆಯದೇ ಬರುವುದು. ಇದೆಲ್ಲ ಕಾಮನ್ ಬದಲಾವಣೆಯಾದರೆ, ಇನ್ನೊಂದು ಬದಲಾವಣೆಗಳನ್ನು ನಮಗೆ ನಾವೇ ಮಾಡಿಕೊಂಡು ಬಿಡುವ ಪ್ರಜ್ಞೆಯ ಬದಲಾವಣೆ. ಉದಾಹರಣೆಗೆ, ಅವಳು ಮದುವೆಯ ನಂತರ ಮನೆ ಹಾಗೂ ಗಂಡನ ಮನೆ ಎರಡನ್ನು ಹೊಂದಾಣಿಸಿಕೊಂಡು ಬದುಕುವುದು ಸಹಜ ಧರ್ಮವಾಗಿ ಬಿಡುತ್ತದೆ. ಹೊಂದಿಕೊಂಡು ಸರಿಸಮಾನವಾಗಬೇಕಾಗುತ್ತದೆ. ಆದರೆ ಇದರಲ್ಲಿ ಈಗೀಗ ಬದಲಾವಣೆಯನ್ನು ಕಾಣುತ್ತಿದ್ದೇವೆ.  ಇತ್ತೀಚಿನ ಮಹಿಳೆ ತಮ್ಮ ಕಾಲ ಮೇಲೆ ತಾನು ನಿಂತುಕೊಳ್ಳುವ ಉಸಾಬರಿಯಲ್ಲಿ ವೃತ್ತಿ ಮತ್ತು ಸಂಸಾರ ಎರಡನ್ನು ನೋಡಿಕೊಳ್ಳಬೇಕಾಗುತ್ತಿದ್ದು, ಹೊಂದಾಣಿಕೆ ಒಂದು ಹೆಜ್ಜೆ ಮುಂದೆ ಸಾಗಿ ಆಯತಪ್ಪುತ್ತಿದೆ. ಇತ್ತೀಚಿನ ಮಹಿಳೆಯರ ಹೊಂದಾಣಿಕೆ ನೆಮ್ಮದಿಗೆ ಅಡ್ಡಗಾಲಿಡುವುದರ ಜೊತೆಗೆ ಜೀವನದ ಸುಖ, ಸಂತೋಷವನ್ನು ಕೊಲ್ಲತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬದುಕೆ ಇಷ್ಟೆ. ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತೇವೆ ಎಂದುಕೊಂಡರೆ ಸಡಗರ. ಇಲ್ಲವಾದರೆ ತಡಬಡ. ಗಂಡು-ಹೆಣ್ಣಿನಲ್ಲಿ ಹೆಚ್ಚು ಯಾತನಾದಾಯಕ ಬದುಕು ಹೆಣ್ಣಿದ್ದೆ ಆದರೂ ಅವಳ ಸಂವೇದನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದು ಅವರವರ ನೇರಕ್ಕೆ ನಿಂತಿರುತ್ತದೆ. ಪ್ರೀತಿ, ಪ್ರೇಮ, ಕಾಮ ಹೀಗೆ  ಕ್ಷಣದ ಮಾಯೆಯಾಗುತ್ತಾಳೆ. ಲವ್ ಅನ್ನುವ ಎರಡಕ್ಷರದ ಮಾಯೆ ಹೆಣ್ಣು ಹೆಂಗಸಾದಾಗ ಬಹುಮುಖ ಪ್ರತಿಭೆಯ ಆಟ ತರಿಸುತ್ತದೆ. ಅವಳು ಸಹಜ ಸಂವೇದನೆಗೆ ತಿರುಗಿದಾಗ ಕಾಣದ ಅಷ್ಟೂ-ಇಷ್ಟೂ ಎಲ್ಲವೂ ಆವರಿಸುತ್ತದೆ.
ಆದರೂ ‘ಬಿ ಕೇರ್‍ಫುಲ್’ ಈ ಸಮಯದಲ್ಲಿ ನಿಮ್ಮ ಜಾಗೃತೆ ನಿಮ್ಮಲ್ಲಿರಲಿ. ಸಂವೇದನೆಗಳು ಸಮಯಪ್ರಜ್ಞೆ ಕಳೆದುಕೊಳ್ಳದಿದ್ದರೆ ಚೆಂದ. ಅಂತ ಬದುಕು ನಿಮ್ಮದಾಗಲಿ.
ಹೊಸ ಮನೆಗೆ ಹೋಗುತ್ತಿದ್ದೀರಾ!? ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ...


          ಮನೆ ಬದಲಿಸಬೇಕು, ಸ್ವಲ್ಪ ದೊಡ್ಡ ಮನೆನೆ ನೋಡಿದ್ದೀವಿ, ಫೈನಲ್ ಸೆಟ್ಲಮೆಂಟ್ ಬಾಕಿ ಇದೆ ಅಷ್ಟೇ, ಅದೆಲ್ಲಾ ಹೇಗೋ ಆಗತ್ತೆ ಆದ್ರೇ ಇಲ್ಲಿರೋ ಸಾಮಾನು ಸರಂಜಾಮು ವರ್ಗಾವಣೆ ಮಾಡುವುದೇ ದೊಡ್ಡ ತಲೆ ನೋವು. ಇಲ್ಲಿ ನಮಗೆ ಎಲ್ಲವೂ ಚೆನ್ನಾಗಿತ್ತು. ಈ ಮನೆ ಒಂಥರಾ ಲಕ್ಕಿ ಕಣ್ರೀ.., ಏನ್ಮಾಡೋದು ಅಲ್ಲಿಯ ವಾತಾವರಣ ಹೇಗಿರುತ್ತೋ ಏನೋ? ಇದೆಲ್ಲಾ ಹೇಗೆ ಸರಬರಾಜಾಗಿ ಅಲ್ಲಿ ಹೋಗಿ ಸೆಟ್ ಆಗುತ್ತೋ ದೇವರೇ ಬಲ್ಲ..!. ಬಹುಶಃ ಇಂತಹ ಮಾತುಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುವವರಿಗೆ ಸರ್ವೇಸಾಮಾನ್ಯವಾಗಿರುತ್ತದೆ. ನಿಜ.., ಅವರನ್ನು ತೀರದ ಭಾವಗಳು, ನೆನಪುಗಳು, ಕನಸುಗಳು, ಹೊಸಸ್ಥಳದ ಆತಂಕಗಳು ಕಟ್ಟಿ ಹಾಕುತ್ತವೆ. ತೀರಾ ಅಟ್ಯಾಚಮೆಂಟ್ ಇದ್ದರೆ ಹಾಗೆ ಆಗುವುದು ನೋಡಿ...!


 ಆ ಮನೆಯಲ್ಲಿ ಕಳೆದಿರುವುದು ಒಂದಿಷ್ಟೇ ದಿನವಾಗಿದ್ದರೂ, ಕಳೆದಿರುವ ಭಾವನೆಗಳು, ಜೊತೆಯಾಗಿ ಸವಿಯೂಟ ಮಾಡಿದ್ದ ಕ್ಷಣಗಳು,  ಎಲ್ಲೆಂದರಲ್ಲಿ ಕುಳಿತು, ನಿಂತು, ಮಲಗಿ, ಆಟವಾಡಿದ್ದ ಹಲವಾರು ಸವಿ ನೆನಪು, ಕಷ್ಟ- ಸುಖ- ದುಃಖಗಳಿಗೆ, ಪ್ರೀತಿಯ ನೆಮ್ಮದಿಗೆ ಕಾರಣವಾಗಿದ್ದ ಭಾವಾಂತರಂಗಗಳು ಹೀಗೆ ಎಲ್ಲವೂ ನಮ್ಮನ್ನು ಒಂದು ಕ್ಷಣ ಮಮಕಾರದ ಪ್ರೀತಿಯ ಸಂಕೋಲೆಯಿಂದ ಬಂಧಿಸುತ್ತವೆ.  ಆದರೇನು ಮಾಡೋದು ಸೂರನ್ನು ಬದಲಿಸಲೇಬೇಕಿದೆ. ಯಾಕೆಂದರೆ ಅದು ನಮ್ಮ ಸ್ವಂತದಲ್ಲವಲ್ಲ...
ಪ್ರತಿ ಬಾಡಿಗೆ ಮನೆಯೂ ಮುಂದಿನ ಮನೆಗೆ ಹೋಗುವರೆಗೂ ಸ್ವಂತದ್ದೇ ಆದ್ದರಿಂದ  ಪ್ರತಿ ಮನೆಯ ಮೇಲೂ ಅಕ್ಕರೆ, ಪ್ರೀತಿ, ದ್ವೇಷ, ಕೋಪ, ಇತ್ಯಾದಿ, ಇತ್ಯಾದಿ... ಮನುಷ್ಯ ನಿರ್ಮಿತ ಭಾವನೆಗಳು ಇದ್ದೆ ಇರ್ತವೆ. ಮನೆ ಬದಲಾಯಿಸುವುದೆಂದರೆ ಅದು ಕೇವಲ ಸಾಮಾನುಗಳ ಮೆರವಣಿಗೆಯಲ್ಲ ಬದಲಿಗೆ ನಮ್ಮನುಭವಗಳ ಪಾರಮ್ಯದಲ್ಲಿ ವಿಕಸಿತಗೊಂಡ ಕುಶಲ ಕಲೆ. ಒಂದಿಷ್ಟು ವರ್ಷಕ್ಕಾಗಿ ಹಿಂದೂ-ಮುಂದೂ ನೂರು ಬಾರಿ ಯೋಚಿಸಿ,  ಅಡ್ವಾನ್ಸ್ ಹಾಗೂ ಬಾಡಿಗೆ ವಿಚಾರವಾಗಿ ಓನರ್ ಎಷ್ಟೇ ಕಮ್ಮಿ ಹೇಳಿದ್ದರೂ ಅದರಲ್ಲೇ ಇನ್ನು ಸ್ವಲ್ಪ ಬೌಕಾಶಿಗಿಳಿದು, ಓ.ಕೆ ಫರ್ಫೆಕ್ಟ್ ಎಂದು ಶಿಫ್ಟಿಂಗ್ ಮಾಡಿ ಇನ್ನೇನು ಸೆಟ್ ಆಯ್ತು ಮನೆ ಎಂದು ಮನೆಯಿಂದ ಮನೆಗೆ ಲಗ್ಗೇಜು ಹೊತ್ತೊಯ್ದು ಹೈರಾಣಾಗಿ, ನಿಟ್ಟುಸಿರು ಬಿಟ್ಟು ಜೀವನದ ಬಂಡಿ ನೂಕುತ್ತಿರುವಾಗಲೇ ಎರ್ಗಿಮೆಂಟ್ ಮುಗ್ತಾಯವೋ, ವರ್ಗಾವಣೆಯ ಸಂದೇಶವೋ, ಓನರ್‍ನ ಕಿರಿಕ್ಕೋ, ನಮ್ಮನೆ ಇಂಗಿನ ಒಗ್ಗರಣೆಯ ವಾಸನೆ ಪಕ್ಕದಲ್ಲೇ ಇರುವ ಒನರ್ ಮಗಳಿಗೆ  ತಲೆನೋವು ಬರಿಸುತ್ತೆಯಂತಲೋ, ಪ್ರತಿ ಭಾನುವಾರ ಆಂಟಿ ಮನೆಯ ಕಿಚನ್‍ನಿಂದ ಹೊರಹೊಮ್ಮುವ ಗರಂ ಮಸಾಲೆಯ ವಾಸನೆ  ನನ್ನ ಹೆಂಡತಿಗೆ ವಾಕರಿಕೆ ತರಿಸುತ್ತೆಯಂತಲೋ, ಸ್ನಾನಕ್ಕೆ ಸರಿಯಾದ ನೀರನ್ನು ಕೊಡಲ್ಲ ಅಂತಲೋ, ಸಮ್‍ಥಿಂಗ್ ಪ್ರಾಬ್ಲಂ! ಮನೆಯ ವಾಸ್ತುನೇ ಸರಿಯಿಲ್ಲ ಅಂತಲೋ, ಯಾವುದೋ ಸ್ವಾಮೀಜೀ ಹೇಳಿದ ಅಡುಗೆ ಮನೆ ಸರಿಯಿಲ್ಲ ಎಂಬ  ಮಾತಿಗೆ ಮರುಳಾಗಿಯೋ, ಸಕ್ಸಸ್ ದೊರೆಯುತ್ತಿಲ್ಲ ಮನೆ ಬದಲಾಯಿಸೋಣ ಎಂತಲೋ, ಸ್ಕೂಲ್‍ಗೆ ಹೋಗಲು ಮಗನಿಗೆ ದೂರ ಪ್ರಯಾಣವಾಗುತ್ತದೆ ಹತ್ತಿರದಲ್ಲೇ ಮನೆ ಮಾಡೋಣವಂತಲೋ, ಪಾರ್ಕಿಂಗ್ ಪ್ರಾಬ್ಲಂ ಇದೆಯಂತಲೋ, ಜೀವನದ ಚಕ್ರಕ್ಕೆ ಕಲ್ಲುಬಂಡೆ ಸಿಕ್ಕಂತೆÉ ಜರ್ಕ್ ಹೊಡೆಸಿ ಮತ್ತೆ ನವ ದಾರಿ ಹಿಡಿದು ಹೊಸ ಮನೆಯ ಹುಡುಕಾಟಕ್ಕೆ ನಮ್ಮ ಚಂಚಲ ಚಿತ್ತವನ್ನು ಆಯಾಯ ಸಂಧರ್ಭಗಳು ಅಣಿಗೊಳಿಸುತ್ತವೆ.
ಬಹಳ ಹಿಂದೆ ಮಾನವ ನೆಲೆಸಲು ಉಪಯೋಗಿಸಿಕೊಂಡ ಸ್ಥಳದ ಸೂರುಗಳೇ ಇಂದು ಈ ಮನೆಗಳು ಎಂಬ ಧೈತ್ಯಕ್ಕೆ ಬಂದು ನಿಂತಿವೆ. ಸುಮಾರು 11,000 ವರ್ಷಗಳ ಹಿಂದೆ, ಮಾನವ ಮರದ ಪೊಟರೆ, ಗುಹೆ, ಕಲ್ಲು ಬಂಡೆಗಳ ಸಂಧಿನಿಂದ ತೊಡಗಿ ಇಂದಿನ ಗಗನಚುಂಬಿ ಗ್ರಹಗಳವರೆಗೆ ಬೆಳೆದ ಮನೆಗಳ ಬೆಳವಣಿಗೆ ಮಾನವ ಸಮಾಜದ ವಿಕಾಸದಲ್ಲಿ ದೊಡ್ಡ ಮುಖ ಎಂದರೆ ತಪ್ಪಿಲ್ಲ. ಮನೆಗಳು ನಾಗರಿಕತೆಯ ವಿಕಾಸದೊಂದಿಗೆ ನಿಕಟವಾಗಿ ಸಂಪರ್ಕ ಹೆಣೆದುಕೊಂಡು ಶತಶತಮಾನಗಳ ಹಿಂದಿನಿಂದಲೇ ಉದ್ಭವಿಸಿಕೊಂಡು ಬಂದಿದೆ. ತನಗಾಗಿ, ತನ್ನವರಿಗಾಗಿ, ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವ ಹುಟ್ಟಿನ ಸ್ವಲ್ಪ ಕಾಲದಲ್ಲೇ ಉದ್ಬವಿಸಿದ್ದು ವಿಶೇಷವೇ ಆದರೂ, ಇವತ್ತು ಅದೆ ಬಾಡಿಗೆ, ಲೀಸ್ ಎಂಬ ನೆಪದಲ್ಲಿ ಅನೇಕ ಬಿಲ್ಡಿಂಗ್ ಮಾಲೀಕರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ಬಿಟ್ಟು, ಲಕ್ಷ ಲಕ್ಷ ಅಡ್ವಾನ್ಸ್ ಪಡೆದು, ಸರ್ಕಾರಕ್ಕೆ ತೆರಿಗೆಯನ್ನು ನೀಡದೆ ಹಗಲು ದರೊಡೆಯಲ್ಲಿ ಸಾಗುತ್ತಿರುವುದು ವಿಶೇಷವಲ್ಲದೇ ಮತ್ತೇನು?
ಮನುಷ್ಯ ನಿರ್ಮಿಸಿಕೊಂಡ ಮನೆ ಎಂಬ ನೆಲೆ, ಗುಹೆ-ಮರದ ಪೊಟರೆಯ ನಂತರ ಗುಡಿಸಲಿನಂತೆ ಇದ್ದು, ಅದು ಮೊದಲು ಅತೀ ಪ್ರಾಚೀನ ಕಾಲದಲ್ಲಿ ಅಸ್ಸೀರಿಯಾದ ಉಬೈದನ್ ಗ್ರಾಮದಲ್ಲಿ ಹಾಗೂ ನಂತರದ ನೆಲೆಗಳನ್ನು ಈಜಿಪ್ಟ್‍ನ ನೈಲ್ ನದಿಯ ರೊಸೆಟ್ಟಾ ಶಾಖೆಯ ಬಳಿ ಇರುವ ಮೆರಿಂದೆ ಎಂಬಲ್ಲಿತ್ತು ಎನ್ನುವುದು ಉತ್ಕನನದಲ್ಲಿ ಸಿಕ್ಕ ಅವಶೇಷಗಳಿಂದ ತಿಳಿದು ಬಂದಿದೆ. ಇನ್ನೂ ಭಾರತದ ವಿಚಾರಕ್ಕೆ ಬಂದರೆ  ಪ್ರಾಚೀನ ಗ್ರಹಾಶೇಷಗಳು, ಗಂಗಾನದಿಯ ಬಯಲಿನಲ್ಲಿರುವ ಸೂಕ್ಷ್ಮ ಶಿಲಾಯುಗದ ನೆಲೆಗಳಲ್ಲಿ ಆಯತ, ವೃತ್ತಾಕಾರ ಹೀಗೆ ಹಲವು ಬಗೆಂiÀಲ್ಲಿ  ಅವಶೇಷಗಳು,  ಮನೆಯ ಕುರುಹುಗಳು ಪತ್ತೆಯಾಗಿದ್ದು, ಹರಪ್ಪ, ಮೊಹೆಂಜೋದಾರೋ ನಾಗರಿಕತೆಯಲ್ಲೂ ಕೂಡ ಅದೇ ಸಂಸ್ಕøತಿಗೆ  ಹೊಂದಿಕೊಂಡಿರುವ ಕುರುಹುಗಳು ಲಭಿಸಿವೆ. ಅಂದರೆ ಮನೆ ನಿರ್ಮಾಣ ಇಂದು ನಿನ್ನೆಯ ಪ್ರಕ್ರಿಯೇ ಅಲ್ಲ ಎಂಬುದು ಸ್ಫಷ್ಟವಾಗುತ್ತದೆ.
 ಅದೇನೆ ಇರಲಿ. ಪ್ರಾರಂಭದಲ್ಲಿ ಪೊದೆ, ಪೊಟರೆ, ಗುಹೆ, ಆಮೇಲೆ ಹುಲ್ಲಿನ ಸೂರು, ನಂತರದಲ್ಲಿ ಬಿದಿರು, ಮರಗಳನ್ನು ಕಡಿದು ನಿರ್ಮಿಸುತ್ತಿದ್ದ ಮನೆ ಇಂದು ಸೀಮೆಂಟ್, ಕಬ್ಬಿಣ ರಾಡ್‍ಗಳ ಸಹಾಯದಿಂದ ದೈತ್ಯಾಕಾರಕ್ಕೂ ಬೆಳೆದು ನಿಂತಿರುವುದು ಮಾನವನ ಬೆಳವಣಿಗೆಯ ವಿಕಸನವನ್ನು ತೋರಿಸುತ್ತದೆ. ಇಂತಹ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಬಾಡಿಗೆ ಮನೆಯನ್ನು ಕೊಡಲು ಸಮರ್ಥವೆಂಬಂತೆ ಅದರಲ್ಲೂ ಹೊಸತನ ಕಂಡುಕೊಂಡು  ‘ಇನ್‍ಸ್ಟಾಲ್ ಮೆಂಟ್ ಕಟ್ಟಿ, ಅಪಾರ್ಟ್‍ಮೆಂಟ್ ಪಡೆಯಿರಿ’ ಎಂಬ ವ್ಯಾಪಾರೀಕರಣದಲ್ಲಿ’ ಹಣ ಮಾಡಲು ತೊಡಗಿದೆ ಇಂದಿನ ಜನತೆ.
 ಮನೆಯೆಂದರೆ ಹಾಗೆ ಅದಕ್ಕಾಗಿ ಎಷ್ಟು ದುಡ್ಡು ಬೇಕಿದ್ದರೂ ಸುರಿಯುತ್ತೇವೆ. ಅದು ಮನಕ್ಕೆ ಸುಸ್ತು ಬಡಿದಿದ್ದಾಗ ಶಾಂತಿ ನೀಡುವ ನೆಮ್ಮದಿಯ ಸೂರು. ಬೆಂಗಳೂರಿನಂತ ಮಹಾನಗರಿಯಲ್ಲಿ ವಾಸಿಸುವವರಿಗೆ ಮನೆ ಮಾಡುವುದು, ಬದಲಾಯಿಸುವುದು ಯಾವುದು ಅಸಾಮಾನ್ಯವಲ್ಲ. ಇಲ್ಲಿನ ಜನರಿಗಿಂತ, ಕೆಲಸವರಸಿ ವಲಸೆ ಬಂದಿರುವ ಜನರೇ ಮಹಾನಗರದಲ್ಲಿ ಜಾಸ್ತಿ ಇರುವುದರಿಂದ ಬಾಡಿಗೆ ಮನೆಗೆ ಬಹು ಬೇಡಿಕೆ ಇದೆ. ಎಷ್ಟು ಬೇಡಿದರು ಸಿಗುತ್ತೆ ಮನೆಗಳಿಗೆ ಕೊರತೆ ಇಲ್ಲ ಎನ್ನುವಂತ ಭೂಮಿ ಮಾಲೀಕರು ಸಣ್ಣ ರೋಡನ್ನು ಬಿಡದೆ  ಹಂತ ಹಂತವಾಗಿ ಸಿಕ್ಕ ಸಿಕ್ಕಲ್ಲಿ ಮನೆ ನಿರ್ಮಿಸಿ ಗ್ರಹ ರಚನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬಾಡಿಗೆಗೆ ಬಿಟ್ಟು ಆರಾಮಾಗಿ ಅರಸರಾಗಿದ್ದಾರೆ. ಅಲ್ಲಲ್ಲಿ ಅಕ್ರಮ ಮನೆಗಳು ಕೆರೆ ಕಟ್ಟೆಗಳು ಇವೆ ಎಂದು ನೋಡದೆ ನಿರ್ಮಿಸಿಕೊಂಡ ಮಹಾನುಭಾವರು ಇಂದು ಸರ್ಕಾರದ ಕಟ್ಟು ನಿಟ್ಟಿನ ಅಕ್ರಮಗಳ ಮರುಕಬಳಿಕೆಗೆ ತುತ್ತಾಗಿ ಅನೇಕ ಬಾಡಿಗೆದಾರರಿಂದ ಲಕ್ಷಗಟ್ಟಲೇ ಅಡ್ವಾನ್ಸ್ ಪಡೆದು ಪಂಗನಾಮ ಹಾಕಿ ಓಡಿ ಹೋದವರು ಇದ್ದಾರೆ.
ಏನೇ ಹೇಳಿ ಆದ್ರೆ, ಸಾಯೋದ್ರೊಳಗೆ ಸ್ವಂತದೊಂದು ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಮನುಜನ ಆಸೆ. ಇದನ್ನು ಸಾಕಾರಗೊಳಿಸಿಕೊಳ್ಳುವುದು ಬೆಂಗಳೂರಿನಂತಹ ಮಹಾ ನಗರಿಯಲ್ಲಿ ಇದು ದೊಡ್ಡ ಸಾಧನೆಯೇ ಸರಿ. ಇನ್ನು ಸ್ವಲ್ಪ ವರ್ಷ ಕಳೆದರೆ ಮನೆ ಕಟ್ಟೋದಿರಲಿ ಬಾಡಿಗೆ ಮನೆಯ ಬೆಲೆಯೂ ಗಗನಕ್ಕೇರಬಹುದೇನೋ!?
ಮನೆ ಮಾಡುವುದು, ಬದಲಾಯಿಸುವುದೆಲ್ಲವೂ ಜೀವನದ ಆಕಸ್ಮಿಕ ಘಟನೆಗಳಾದರೂ   ಅದು ಮನಸ್ಸು ಮನಸ್ಸುಗಳ ತೀರದ ಸ್ಪಂಧನ, ಕೂಡಿಕೆ ಅಗಲಿಕೆಗಳ ನಿರಂತರ ಸಮ್ಮಿಲನ. ಸಣ್ಣ ಮನೆಯಿಂದ ದೊಡ್ಡ ಮನೆಗೆ ಪ್ರಯಾಣಿಸುವ ಚಿಂತನೆ ಒಂದು ಕಡೆಯಾದರೆ, ಇರುವ ಮನೆಯನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಚಿಂತೆ ಇನ್ನೊಂದು ಕಡೆ. ತೀರಾ ಅಟ್ಯಾಚ್‍ಮೆಂಟ್ ಹಳೆ ಮನೆಯ ಬಗ್ಗೆ ಇದ್ದರೆ ನಮ್ಮ ಮನಸ್ಸು ಒಂದಿಷ್ಟು ದಿನ ಬೇಸರಿಕೆಯಿಂದ  ಅಳಲುಬಹುದು. ಆದರೆ ಸ್ವಲ್ಪ ದಿನವಾದ ಬಳಿಕ ಇದೇ ಚೆನ್ನಾಗಿದೆ ಎಂಬಂತೆ ಹೊಂದಿಕೊಳ್ಳುತ್ತದೆ. ನಾವು ಮಾನವರೇ ಹೀಗೆ ನೀರಿನ ಥರ. ಸಣ್ಣ ಮನೆಯಿಂದ ದೊಡ್ಡ ಮನೆಗೆ ಬಹುಬೇಗ ಅಡ್ಜಸ್ಟ್ ಆಗುತ್ತೇವೆ ಯಾವ ಸಂಶಯವೂ ಇಲ್ಲ. ಹಿಂದಿದ್ದ ಮನೆಗಿಂತ ಈಗ ಬಂದಿರುವ ಮನೆ ದೊಡ್ಡದೇ ಇದ್ದರೂ ಹೆಂಗಸರು ಮಾತ್ರ ಓಡಾಡುವ ಜಾಗ ಕತ್ತಲು ಎನ್ನುತ್ತಲೋ, ರೂಮಿಗೆ ಮಂಚ (ಕಾಟ್) ಹಾಕಿದ ಮೇಲೆ ಕಾಲಿಡಲು ಜಾಗ ಇಲ್ಲ ಎನ್ನುತ್ತಲೋ, ಹಿಂದಿನ ಮನೆಯಲ್ಲಿ ಇಟ್ಟಿದ್ದ ವಸ್ತುಗಳು ಇಲ್ಲಿ ಸರಿಯಾಗಿ ಜೋಡಿಸಲು ಆಗುತ್ತಲೇ ಇಲ್ಲ ಎನ್ನುತ್ತಲೋ, ಎಂದಿನ ತಮ್ಮ ಅಸಹನೆಯನ್ನು ತೋರ್ಪಡಿಸುತ್ತಲೇ ಇರುತ್ತಾರೆ. ಸತತ ಬದಲಾವಣೆ ಕಾಣುವ ನಮ್ಮ ದೈನಂದಿನ ಜೀವನದಲ್ಲಿ ಮನೆಗಳನ್ನು ಬದಲಾಯಿಸುತ್ತಾ ಇರುವಾಗ ನನಗೆ ಊರಲ್ಲಿರುವ ನಮ್ಮ ಸ್ವಂತ ಮನೆ ನೆನಪಿಗೆ ಬಂದು, ಅಲ್ಲಿ ಕಳೆದ ದಿನಗಳು, ಓಡಾಡಿಕೊಂಡಿದ್ದ ನಮ್ಮ ಬಾಲ್ಯಗಳೆಲ್ಲಾ ಕಚಗುಳಿ ಇಟ್ಟು, “ಅಲ್ಲಿರುವುದು ನಮ್ಮನೆ ಇಲ್ಲಿರುವುದು ಬಾಡಿಗೆ ಮನೆ, ಕಷ್ಟಪಟ್ಟು ದುಡಿಯುತ್ತಿರುವ ಹಣವನ್ನು ಹೋಮ್ ಓನರ್‍ಗಳಿಗೆ ನೀಡುತ್ತೇವೆ ಸುಮ್ಮನೆ, ಹೊಟ್ಟೆ ಪಾಡಿಗಾಗಿ ಈ ಒದ್ದಾಟ ಒಮ್ಮೊಮ್ಮೆ.., ನೆಮ್ಮದಿಯ ಜೀವನವಿದೆ ಊರಲ್ಲಿ ಬೆಚ್ಚನೆ.., ಏನಿದು ಬದುಕೇ ನಿನ್ನ ಮಹಿಮೆ...”ಎನಿಸುತ್ತದೆ.

ಗುರುತ್ವ ... ಇದು ಗುರು ಶಿಷ್ಯರ ಸಂಬಂಧ


      ಪ್ರೀತಿಯ ಮಾತುಗಳಲ್ಲಿ ಸಿಹಿಮುತ್ತು ಎಷ್ಟು ಮುಖ್ಯವೋ? ಹೆಮ್ಮೆಯ ದೇಶಕ್ಕೆ ಪ್ರಭುತ್ವ ಎಷ್ಟು ಮುಖ್ಯವೋ? ಹಾಗೆ ನಲ್ಮೆಯ ಮುಗ್ಧಮನಸಿನ ಮಕ್ಕಳಿಗೆ ಗುರು ಅಥವಾ ಗುರುತ್ವ ಇವೆಲ್ಲಕ್ಕಿಂತ ಮುಖ್ಯ. ಇದೇ ಇಂದಿನ ಜನಾಂಗದ ಕೊರತೆ. ಗುರು ಎಂದರೆ ಭಾರ. ಶಿಷ್ಯನೆಂದರೆ  ಹಗುರವೆಂದರ್ಥವಲ್ಲ. ಗುರು ಎಲ್ಲ ರೀತಿಯಲ್ಲೂ ಭಾರ. ತಿಳಿವಿನಲ್ಲಿ, ಅರಿವಿನಲ್ಲಿ, ಆನಂದದಲ್ಲಿ, ವಿಧ್ಯೆಯಲ್ಲಿ, ಬಗೆ ಬಗೆಯ ಜ್ಞಾನದಲ್ಲಿ.
ಆದರೆ ಶಿಷ್ಯ ಶೂನ್ಯ. ಇನ್ನೂ ಹೆಚ್ಚಿನ ಮಾತಲ್ಲಿ ಹೇಳಬೇಕೆಂದರೆ ಶಿಷ್ಯನೇನನ್ನೂ ಬೇಡುವುದಿಲ್ಲ. ಗುರು ಏನನ್ನೂ ಭರವಸೆ ನೀಡುವುದಿಲ್ಲ. ಶಿಷ್ಯನಲ್ಲಿ ತೃಷೆಯಿದೆ, ಗುರುವಿನಲ್ಲಿ ತಕ್ಕ ಭರವಸೆಯಿದೆ. ಈ ಸಾಮೀಪ್ಯದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ.
 ಶಿಷ್ಯತ್ವ ಒಂದು ಸ್ತ್ರೀತ್ವ. ಶಿಷ್ಯನೊಂದು ಧ್ವಾರ, ಶಿಷ್ಯನೊಂದು ಗರ್ಭ, ಶಿಷ್ಯನೊಂದು ಸ್ವೀಕೃತಿ. ಗುರುತ್ವ ಎಂದೂ ಪುರುಷತ್ವ. ಗುರು ಕೊಡುಗೈ ತುಂಬಿದ ಕೊಡ. ಕೊಡುವುದೊಂದು ಗೊತ್ತು. ಅವನು ಕೊಡಬೇಕು ಅದು ಮಳೆ ತುಂಬಿದ ಮೋಡ.

  ಗುರು ಶಿಷ್ಯ ಪರಿಕಲ್ಪನೆಯೇ ಭಿನ್ನವಾದುದು. ಗುರು ಜ್ಞಾನವನ್ನು ಕೊಡುವುದಿಲ್ಲ. ತನ್ನ ಅಸ್ತಿತ್ವವನ್ನೇ ಸಮಗ್ರವಾಗಿ ಶಿಷ್ಯನೊಂದಿಗೆ ಹಂಚಿಕೊಳ್ಳುತ್ತಾನೆ. ಶಿಷ್ಯನೂ ಅರಸುತ್ತಿರುವುದು ಜ್ಞಾನವನ್ನಲ್ಲ ಬದಲಾಗಿ ತನ್ನ ಸಮಗ್ರ ಅಸ್ತಿತ್ವ ಅಷ್ಟೆ. ಅವನಿದ್ದಾನೆ ಆದರೂ ಅವನಾರಿದ್ದಾನೆಂಬುದು ಅವನೇ ಅರಿತಿಲ್ಲ. ಅದನ್ನೇ ಅರಿಯುವ ಗಾಢ ಯತ್ನ ಅವನದು. ತನಗೆ ತಾನೇ ಬತ್ತಲಾಗುವ ತೃಷೆ ಅವನದು. ಹೀಗೆ ಗುರು ಶಿಷ್ಯರ ಸಂಬಂಧ ಶಿಷ್ಯನಿಗೋ ಒಂದು ಹುಡುಕಾಟ. ಹಾಗೆ ಗುರುವಿಗೂ ಕೂಡ. ಈ ಹುಡುಕಾಟವನ್ನು ಪೂರ್ಣಗೊಳಿಸಲು ಶಿಷ್ಯನಲ್ಲಿ ಆತ್ಮವಿಶ್ವಾಸವನ್ನು ಸೃಷ್ಟಿಸುವುದೇ ಅವನ ಕಾರ್ಯ ಉಳಿದೆಲ್ಲವೂ ತಂತಾನೇ ಘಟಿಸುವುದು.
ಮನೆಯಲ್ಲಿ ತಾಯಿಯ ಪ್ರೀತಿ, ಅವಳ ಪಾಠಗಳೆಷ್ಟು ಮುಖ್ಯವೋ ಅಂತೆಯೇ ಶಾಲೆಯಲ್ಲಿ ಒಬ್ಬ ಒಳ್ಳೆಯ ಗುರು ಅವನ ಮಾರ್ಗದರ್ಶನವೂ ಅಷ್ಟೆ ಅಗತ್ಯ. ಗುರುವಿನ ಕೈಯಲ್ಲಿ ಅಸಾಧ್ಯವಾದದ್ದು ಏನೂ ಇಲ್ಲ . ಹೀಗೆ ಹೇಳುವಾಗ ಒಂದು ಮಾತು ಬಹಳ ಹತ್ತಿರಕ್ಕೆ ನೆನಪಾಗುತ್ತದೆ. ಪ್ರಾರ್ಥನೆಗಾಗಿ ಜೋಡಿಸಿರುವ ಸಾವಿರ ಕೈಗಳಿಗಿಂತ ಹಿರಿದಾದ್ದನ್ನು, ಕೆಲಸ ಮಾಡುತ್ತಿರುವ ಎರಡು ಕೈಗಳು ಸಾಧಿಸಬಲ್ಲದು. ಈ ಮಾತು ನಿಜವಾಗಿಯೂ ಹೌದು ಏನಿಸುತ್ತದೆ. ಗುರು ಎನ್ನುವ ಏರಡು ಅಕ್ಷರದಲ್ಲಿ ಎಷ್ಟು ಭಾವ, ಭಕ್ತಿ, ಭಯ ಅಡಗಿದೆಯೋ ಹಾಗೆಯೇ ಅವರ ಕೆಲಸದಲ್ಲೂ ಕೂಡ ಅಷ್ಟೆ ಪರಿಶ್ರಮ ಅಗತ್ಯವಿದೆ. ಈ ಮೊದಲೇ ಹೇಳಿದ ಹಾಗೆ ನಮ್ಮ ದೇಶದ ಪ್ರಭುತ್ವ ನಿಂತಿರುವುದು ಈ ಗುರು ಅಥವಾ ಗುರುತ್ವದ ಮೇಲೆ ಯಾಕೆಂದರೆ ನಮ್ಮ ಹೆಮ್ಮೆಯ ರಾಷ್ಟ್ರದ ಮಕ್ಕಳನ್ನು ತಿದ್ದಿ, ಬುದ್ದಿ, ಬೆಳೆಸುವುದು ಗುರುವಾದವನ ಕೈಯಲ್ಲೇ ಅಡಗಿದೆ. ಮಾನ್ಯ ಸಿದ್ಧೇಶ್ವರ ಸ್ವಾಮಿಯವರ ಒಂದು ಮಾತು ಎಷ್ಟು ಚಂದಕ್ಕಿದೆ ನೋಡಿ, “ದೋಷಗಳನ್ನು ಬಿಟ್ಟು ಸದ್ಗುಣಗಳನ್ನು ಅರಸೋದು ಗುಣಗ್ರಾಹಿತವಾಗುತ್ತದೆ. ದಿನಪತ್ರಿಕೆ ಹಿಡಿದು  ಒಂದೆರಡು ಗಂಟೆ ಓದಿನೋಡಿ  ಆಮೇಲೆ ನೀವು ಬರೆದಿಟ್ಟ ವಿಷಯಗಳು ಯಾವುದಕ್ಕೆ ಸಂಬಂಧಿಸಿದ್ದೆಂದು ಕಣ್ಣಾಟಿಸಿ. ನಿಮಗೆ ಅಚ್ಚರಿಯಾಗುತ್ತದೆ ಯಾಕೆಂದರೆ ಶೇ. 90 ರಷ್ಟು ಕೆಡುಕಿನ ವಿಚಾರಗಳೇ  ಬರೆದಿಟ್ಟ ಹಾಳೆಯಲ್ಲಿರುತ್ತದೆÉ. ದೃಷ್ಟಿಯನ್ನು ಬದಲಿಸಿ ಒಳ್ಳೆಯದನ್ನೇ ಹುಡುಕುವ ಕೆಲಸ ಶುರುಹಚ್ಚಿ ಕೆಲವೇ ತಿಂಗಳಲ್ಲಿ ಉಲ್ಟಾ ಫಲಿತಾಂಶ ಬಂದಿರುತ್ತದೆ”. ಹೌದು ಇದು ಗ್ಯಾರಂಟಿ. ಬಹುಶಃ ಈ ಮಾತು ಎಲ್ಲದಕ್ಕೂ ಹೋಲಿಕೆಯಾಗುತ್ತದೆ ಎನಿಸುತ್ತದೆ. ಹಾಗೆ ಇಲ್ಲಿ ಕೂಡ. ಒಬ್ಬ ಶಿಕ್ಷಕ ಅಥವಾ ಗುರು ಎಂದರೆ ಕೇವಲ ಹೆಸರಿಗೆ ಮಾತ್ರಾ ಅಲ್ಲ. ಇಡೀ ಸಮಾಜವನ್ನೇ ಉಳಿಸಿ ಬೆಳೆಸುವ ಜವಾಬ್ಧಾರಿ ಅವನ ಕೈಯಲ್ಲಿದೆ. ಅಂತೆಯೇ ಗುರುವೊಬ್ಬ ಒಳ್ಳೆಯವನಾಗಿದ್ದರೆ ಖಂಡಿತಾ ಶಿಷ್ಯಂದಿರು ಒಳ್ಳೆಯವರಾಗಿ ಬೆಳೆಯಲು ಸಾಧ್ಯ. ಮಕ್ಕಳು ಒಳ್ಳೆಯವರಾದರೆ ಸಮಾಜ ಒಳ್ಳೆಯದಾಗಲೂ ಸಾಧ್ಯ. ಯಾಕೆಂದರೆ ಇಂದಿನ ಮಕ್ಕಳೆ ನಾಳೆಯ ಪ್ರಜೆಗಳಲ್ಲವೇ!?...
          ಗುರು ಶಿಷ್ಯವೆಂಬ ಎರಡೂ ಬಿಂದುಗಳು ನಿಧಾನವೋ, ಶೀಘ್ರವೋ ಸ್ಫಂಧಿಸುವವು, ಒಂದಾಗುವವು. ಇಲ್ಲಿ ಮಿಲನ ಶರೀರದಲ್ಲ, ಮನಸ್ಸಿನದ್ದಲ್ಲ, ಬದಲಾಗಿ ಆತ್ಮದ್ದು.
ಎರಡು ದೀಪಗಳು ಸನಿಹ  ಬಂದಾಗ ಒಂದೇ ಜ್ವಾಲೆಯಾದಂತೆ. ಗುರು ಶಿಷ್ಯ ಎರಡು ಒಂದಾದರೆ ಬೆಳಕು ಉನ್ನತಿಯಲ್ಲಿ ಉರಿಯುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಷ್ಟು ಸುಲಭವಲ್ಲ. ಭಾವಗಳ ಭಾವೈಕ್ಯ ಒಂದಾಗಬೇಕು. ಗುರು ಶಿಷ್ಯರ ಪರಂಪರೆ, ಸಂಸ್ಕ್ರತಿ ಪ್ರವಹಿಸಲು, ನಿರರ್ಗಳವಾಗಿ ಹರಿಯಲು, ಹೆಸರುವಾಸಿಯಾಗಲು ಗುರು ಶಿಷ್ಯರ ಶ್ರಮವೂ ಅತ್ಯಗತ್ಯ. ತಾನು ಗುರುವಿನಿಂದ ಕಲಿತ ವಿದ್ಯೆಯನ್ನು ತನ್ನ ಸೃಜನಾತ್ಮಕತೆಯಿಂದ ಪರಿಪಕ್ವಗೊಳಿಸಿ ಶಿಷ್ಯನಿಗೆ ಧಾರೆಯೆರೆಯುವವನೇ ಪರಮ ಶ್ರೇಷ್ಠ ಗುರು. ಸಂಪ್ರದಾಯವೆನ್ನುವುದು ನಿಂತ ನೀರಲ್ಲ, ಪ್ರವಹಿಸುವ ಮಹಾಪೂರ. ಗುರು ಶಿಷ್ಯರಿಬ್ಬರೂ ಒಂದರ ಮುಂದೊಂದು ಹಿಡಿದ ಕನ್ನಡಿಗಳಂತೆ. ಒಂದರೊಳಗೊಂದು ಕಾಣುವ ಪ್ರತಿಬಿಂಬದಂತೆ. ಗುರುವಿನಿಂದ ಶಿಷ್ಯ ಹೇಗೆ ಕಲಿಯುತ್ತಾನೋ, ಗುರು ಶಿಷ್ಯನಿಗೆ ಪಾಠ ಹೇಳುತ್ತಾ ಅನೇಕ ವಿಚಾರಗಳನ್ನು ಅರಿತು, ಓರೆಕೋರೆಗಳನ್ನು ತಿದ್ದಿ ತೀಡಿ ಮುಂದುವರಿಯುತ್ತಾನೆ.
ಶಿಷ್ಯ ಪ್ರವರ್ಧಮಾನನಾಗುತ್ತಾ ಗುರುವಿನ ಹೆಗ್ಗಳಿಕೆಯೂ ವೃದ್ಧಿಸುತ್ತಾ ಹೋಗುತ್ತದೆ. ಇದೇ ಗುರು ಶಿಷ್ಯ ಪರಂಪರೆಯ ಧ್ಯೇಯ, ಆದರ್ಶ. ಹಿಂದಿನಿಂದ ಬಂದಿರುವ ಈ ಗುರು ಶಿಷ್ಯ ಪರಂಪರೆ ಇಂದು ಹಲವಾರೂ ಬದಲಾವಣೆಗಳೊಂದಿಗೆ ಮುಂದುವರಿಯುತ್ತಿದೆ. ಆ ಪರಂಪರೆಗೂ ಸಂಪ್ರದಾಯದ ಸಂಸ್ಕಾರಕ್ಕೂ ಆಧುನೀಕತೆ ಅನೇಕ ಬದಲಾವಣೆಯ ಗಾಳಿ ಸೋಕಿಸಿದೆ. ಆದರೆ ಒಂದಂತು ನಿಜ.
“ಗುರು ಎಂದೂ ಶಿಷ್ಯನ ಕಡೆಗೆ ಆಕರ್ಷಿತ,
ಶಿಷ್ಯನೆಂದೂ ಗುರುವಿನ ಕಡೆಗೆ ಆಕರ್ಷಿತ”...

“ನಮ್ಮೆಲ್ಲಾ ಓದುಗರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

Tuesday, 11 August 2015

"ನಮ್ಮ ಭಾರತ" - ಭಾರತಕ್ಕೆ ಭಾರತವೇ ಸಾಟಿ    ಭಾರತ ಅಥವಾ ಭಾರತೀಯತೆಯ ಬಗ್ಗೆ ಮಾತನಾಡುವಾಗ ಯಾರಿಗೆ ಆಗಲಿ ಆತ್ಮದೊಳಗಿನಿಂದ ಉತ್ಸಾಹ ಭಾವಕತೆ, ದೇಶಾಭಿಮಾನದ ಜ್ವಾಜ್ವಲ್ಯ ಮೂಡಿ ಬರುತ್ತದೆ. ಯಾಕೆಂದರೆ, ಭಾರತದಲ್ಲಿ ಅನೇಕ ಭಾರತಗಳಿವೆ. ನೂರಕ್ಕೂ ಹೆಚ್ಚು ಭಾಷೆಗಳು ಹತ್ತಕ್ಕೂ ಪ್ರಮುಖ ಹಾಗೂ ಅನೇಕ ಅಪ್ರಮುಖ ಲಿಪಿ ವ್ಯವಸ್ಥೆಗಳು ಅಸಂಖ್ಯಾತ ಕುಲ, ಪಂಗಡಗಳಿಂದೊಡಗೂಡಿದ ಅನೇಕ ಪ್ರಾಚೀನ ಮತ ಧರ್ಮಗಳು, ಸಾವಿರಾರು ವರ್ಷಗಳಲ್ಲಿ ನಡೆದಿರುವ ವರ್ಣಸಂಕರಗಳು, ಬಗೆ ಬಗೆಯ ಭೂಪ್ರದೇಶಗಳು, ನಾನಾ ತೆರನಾದ ಹವಾ ಗುಣಗಳು ಇವೇ ಮುಂತಾದವುಗಳಿಂದಾಗಿ ಪರಂಪರೆ ಹಾಗೂ ವಿರುದ್ಧ ಪರಂಪರೆಗಳ ಅತ್ಯಂತ ಸಂಕೀರ್ಣವಾದ ಜಾಲ ನಿರ್ಮಾಣವಾಗಿದೆ. ಇನ್ನೊಂದು ವಿಷ್ಯ ಏನಪ್ಪ ಅಂದ್ರೆ ನೀವು ಭಾರತದ ಬಗೆಗೆ ಇದು ಸತ್ಯ ಎಂದು ಎನನ್ನೇ ಹೇಳಿದರೂ, ಅದಕ್ಕೆ ತೀರ ವಿರುದ್ಧವಾದುದನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಕೂಡ ಹೇಳಬಹುದು.
   ‘ಭಾರತ’ ಎಂದರೆ ಹೆಮ್ಮೆ. ಅದೊಂದು ಗರಿಮೆ, ಹಿರಿಮೆ. ನಮ್ಮ ದೇಶಕ್ಕೆ ನಮ್ಮ ದೇಶವೇ ಸಾಟಿ ಯಾಕೆಂದರೆ ಭಾರತ ತನ್ನ ದೀರ್ಘ ಇತಿಹಾಸದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿದೆ. ಹಲವು ಬಾರಿ ಪರರ ದಾಳಿಗೆ, ಆಕ್ರಮಣಗಳಿಗೆ ತುತ್ತಾಗಿದೆ. ಎದುರಾದ ಎಲ್ಲಾ ವಿಷಮ ಸಂಧರ್ಭಗಳನ್ನೆಲ್ಲಾ ತಾಳ್ಮೆಯಿಂದ ಆತ್ಮ ವಿಶ್ವಾಸದಿಂದ ಎದುರಿಸಿದೆ. ನಮ್ಮ ಭಾರತ ಆಕ್ರೋಶದಿಂದ ಬಿರಿಯುತ್ತಾ ಮೇಲೆದ್ದು ನಿಂತು ಹೋರಾಡುವುದಿಲ್ಲ ಬದಲಾಗಿ ತನ್ನ ಸಮಯಕ್ಕಾಗಿ ತಾಳ್ಮೆಯಿಂದ ಕಾದು ನಿಲ್ಲುತ್ತದೆ. ಈ ದೇಶ ತಗ್ಗ ಬಲ್ಲದು, ಬಗ್ಗ ಬಲ್ಲದು ಆದರೆ ಮುರಿದು ಬೀಳುವುದಿಲ್ಲ. ಸಮಾಧಾನದಿಂದ ತನ್ನ ಅಂತಃಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆಯೇ ಹೊರತು ಕುಗ್ಗುವುದಿಲ್ಲ.
   1757 ರಿಂದ ಭಾರತವನ್ನು ಬ್ರಿಟೀಷರು ಆಕ್ರಮಿಸಿಕೊಳ್ಳುತ್ತಾ ಬಂದಾಗ ಸಾಮಾನ್ಯ ಜನರಲ್ಲಿ ಉಂಟಾದ ಪ್ರತ್ರಿಕ್ರೀಯೇನು ಎಂಬುದನ್ನು ನಾವು ಅರಿತುಕೊಳ್ಳಬೇಕು ಮತ್ತು ನಮ್ಮ ಜನ ಆಗಲೇ ಪ್ರತಿಕ್ರಿಯಿಸಿದ್ದರೆ ಬ್ರಿಟೀಷರ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಪ್ಲಾಸಿ ಕದನವನ್ನು ರಾಬರ್ಟ್‍ಕ್ಲೈವ್‍ನ ನಾಯಕತ್ವದಲ್ಲಿ ಬ್ರಿಟಿಷರು ಗೆದ್ದರೇನೋ ನಿಜ. ಆದರೆ ಆ ನಂತರ ಅವನು 200 ಇಂಗ್ಲೀಷ್ ಸೈನಿಕರು ಹಾಗೂ 500 ಭಾರತೀಯ ಸಿಪಾಯಿ ದಳಗಳೊಂದಿಗೆ ಬಂಗಾಳದ ರಾಜಧಾನಿಯಾಗಿದ್ದ ಮುರ್ಷಿದಾ ಬಾದಿನಲ್ಲಿ ಒಂದು ವಿಜಯೋತ್ಸವ ನಡೆಸಿದ್ದ. ಸಹಸ್ರಾರು ಪ್ರಜೆಗಳು ಆ ಮೆರವಣಿಗೆಯನ್ನು ನೋಡಿದ್ದರು. ಅದನ್ನು ಕುರಿತು ಕ್ಲೈವ್ ಪಾರ್ಲಿಮೆಂಟರಿ ಸಮಿತಿಗೆ ವರದಿ ನೀಡುವಾಗ, ಮೆರವಣಿಗೆಯ ಸಂಧರ್ಭದಲ್ಲಿ ಲಕ್ಷಾಂತರ ಮಂದಿ ಭಾರತೀಯರು ಕೂಡಿದ್ದು, ಅವರು ಮನಸ್ಸು ಮಾಡಿದ್ದರೆ ಕಲ್ಲು, ದೊಣ್ಣೆಗಳಿಂದಲೇ ಯುರೋಪಿಯನ್ನರನ್ನು ನಾಶ ಮಾಡಬಹುದಾಗಿತ್ತು ಎಂದಿದ್ದನಂತೆ. ಅವನಾಡಿದ ಅಂದಿನ ಆ ಮಾತಿನಿಂದಲೇ ತಿಳಿಯುತ್ತದೆ ನಮ್ಮ ಭಾರತೀಯರು ಎಷ್ಟು ಪರಾಕ್ರಮಿಗಳು ಜೊತೆಗೆ ಎಷ್ಟು ಮುಗ್ಧರು ಎಂದು. ನಮ್ಮ ಅಂದಿನ ಮುಗ್ಧತೆಯನ್ನು ಬ್ರಿಟೀಷರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು 18ನೇ ಶತಮಾನದ ಮಧ್ಯಭಾಗದಲ್ಲಿ ಸಮೃದ್ಧ ದೇಶವೆಂದು ಖ್ಯಾತಿ ಪಡೆದಿದ್ದ ಭಾರತವನ್ನು 19ನೇಯ ಶತಮಾನದ ಕೊನೆಯ ವೇಳೆಗೆ ಜಗತ್ತಿನ ಅತ್ಯಂತ ಧೀನ ಧರಿದ್ರ ದೇಶ ಎಂಬ ಸ್ಧಿತಿಗೆ ತಂದರು. ಆದರೆ ಭಾರತ ಎಂದೂ ತನ್ನ ಅಸ್ಧಿತ್ವವಾಗಲಿ, ಹಿರಿಮೆಯಾಗಲಿ, ತನ್ನತನವನ್ನಾಗಲಿ ಕಳೆದುಕೊಳ್ಳಲಿಲ್ಲ. ಅದು ಕಣ್ರೀ ನಮ್ಮ ಭಾರತದ ಅಂತಸ್ತು.
   ಆಗತಾನೆ ಇಂಗ್ಲೆಂಡಿನಲ್ಲಿ ನಡೆದ ಔಧ್ಯಮಿಕ ಕ್ರಾಂತಿಯು ಭಾರತಕ್ಕೆ ‘ಹಳ್ಳಕ್ಕೆ ಬಿದ್ದವನ ಮೇಲೆ ಬಂಡೆ ಎಳೆದಂತೆ’ ಮಾಡಿತ್ತು. ಇದರ ಸರಿದೂಗುವಿಕೆಗೆ ಭಾರತದ ಪಾತ್ರ ಎಷ್ಟು ಆಳವಾಗಿತ್ತೆಂದು ಆಲೋಚಿಸಿದರೆ ತಲೆ ಕೆಡುತ್ತದೆ. ಯಾಕೆಂದರೆ ನಮ್ಮಲ್ಲಿಯ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ಇಂಗ್ಲೆಂಡಿಗೆ ಹಣದ ಹೊಳೆ ಹರಿಸಿ ಬೃಹತ್ ಉದ್ಯಮಗಳು ತಲೆ ಎತ್ತಲು ಅಗತ್ಯವಾದ ಬಂಡವಾಳವನ್ನು ಓದಗಿಸಿತ್ತು. ಹತ್ತಿ ಉದ್ಯಮ, ಸಣ್ಣ ಕೈಗಾರಿಕೆಯ ಇತರ ಉದ್ಯಮ ಇತ್ಯಾದಿಗಳಿಂದಲೇ ಇಂಗ್ಲೆಂಡಿಗೆ ದುಡ್ಡಿನ ಸುರಿಮಳೆಗಳೇ ಬರುತ್ತಿದ್ದವು ಹೊರತು, ಅವರು ಮಾಡಿದ ಕ್ರಾಂತಿಯಿಂದಲ್ಲ ಅದು ನಮ್ಮ ಭಾರತದ ಕೌಶಲ್ಯತೆ.
   ಅದು 1919 ಏಪ್ರಿಲ್ 11. ಆ ಸಂಧರ್ಭ ಡಯರ್ ಎಂಬ ಸೇನಾಧಿಕಾರಿಯನ್ನು ಭಾರತಕ್ಕೆ ಕರೆಸಿ ಮಾರ್ಷಲ್ ಲಾ ಜಾರಿ ಮಾಡಲಾಗಿತ್ತು. ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್‍ನಲ್ಲಿ ಒಂದು ಜಾತ್ರೆಗಾಗಿ ಜನ ಕೂಡಿದ್ದರು. ಬಹುತೇಕ ಜನ ಹಳ್ಳಿಗರಾಗಿದ್ದು, ಅವರಿಗೆ ಬ್ರಟಿಷ್ ನಾಯಿಗಳ ಪ್ರತಿ ಬಂಧಕ ವಿಚಾರವೇ ತಿಳಿದಿರಲಿಲ್ಲ. ಆ ಮೈದಾನಕ್ಕೆ ಸುತ್ತಲೂ ಗೋಡೆ ಇದ್ದು ಒಂದೇ ಒಂದು ಧ್ವಾರ ಇತ್ತು. ಡಯರ್ ತಾನೇ ಮುಂದೆ ನಿಂತು ನಿಶ್ಯಸ್ತ್ರ ಗುಂಪಿನ ಮೇಲೆ ಯಾವ ಮುನ್ನಚ್ಚರಿಕೆಯನ್ನು ನೀಡದೆ ಗುಂಡಿನ ಮಳೆಗೆರೆದಿದ್ದ. ಆ ದಿನ ಅಲ್ಲಿ ಸತ್ತವರ ಸಂಖ್ಯೆ 379 ಎಂದು ಸರ್ಕಾರವೇ ತಿಳಿಸಿತ್ತು. ಇದಾದ ಬಳಿಕ ಮಾತನಾಡಿದ್ದ ಡಯರ್ ಈ ಅಮಾನುಷ ಕೃತ್ಯಕ್ಕೆ ಗುಂಡುಗಳು ಸಾಲದಾದವು, ಗಲ್ಲಿಗಳು ಕಿರಿದಾದವು, ಕಾರಣ ಅರ್ಮರ್ಡ ಕಾರುಗಳನ್ನು ತರಲಾಗಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದ. ಇದರಿಂದಲೇ ತಿಳಿಯುತ್ತದೆ ನಿಶ್ಯಸ್ತ್ರಧಾರಿಗಳಾದ ನಮ್ಮನ್ನು ಕೊಲ್ಲಲು ಅವನಿಗೆ ಅಷ್ಟು ಗಂಡುಗಳು ಸಾಲಲಿಲ್ಲ. ಇನ್ನು ನಾವು ಅವರಂತೆ ಶಸ್ತ್ರಧಾರಿಗಳಾಗಿದ್ದರೆ ನಮ್ಮ ಮೈಯನ್ನೇ ಅವರಿಗೆ ಮುಟ್ಟಲಾಗುತ್ತಿರಲಿಲ್ಲವೇನೋ ಅಲ್ಲವೇ...
      17 ಮತ್ತು 18ನೇಯ ಶತಮಾನಗಳಲ್ಲಿ ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಹೇಳಿದರೆ ಅದನ್ನು ನಂಬುವುದು ಕಷ್ಟ ಆದರೂ ಈ ಮಾತು ಅಕ್ಷರಶಃ ನಿಜ ಈ ಅಭಿಪ್ರಾಯವನ್ನು ಸ್ಫಷ್ಟ ಪಡಿಸಲು ಎರಡು ಮೂರು ಉಲ್ಲೇಖಗಳಿವೆ ನನ್ನ ಬಳಿ. ಹೇಳ್ತೀನಿ. ಓದಿದ ನಂತರ ನಮ್ಮ ದೇಶಕ್ಕೆ ಯಾವ ದೇಶವೂ ಸಾಟಿ ಆಗಲಾರದು  ಬಿಡಿ ಎಂದು ನಿಮಗೆ ಅನಿಸಬಹುದು. ಇಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಆಗಲೇ ಅಷ್ಟಿದ್ದ ಶ್ರೀಮಂತಿಕೆ ಇಂದಿದ್ದರೆ ಎಷ್ಟು ಕೋಟಿ ಆಗುತ್ತಿತ್ತೋ ಎಂದು ನಿಬ್ಬೆರಗಾಗಬಹುದು.
ಪಿಯರ್ ಸೆನ್ ಎಂಬಾತ 1572ರಲ್ಲಿ ಭಾರತದ ಸಮುದ್ರ ವ್ಯಾಪಾರ 8 ಕೋಟಿ ರೂಪಾಯಿಗಳಷ್ಟು ಎಂದು ಅಂದಾಜು ಮಾಡಿ ಹೇಳಿದ್ದ. (ಗಮನಿಸಬೇಕು ನೀವು ಇದು ಸಾವಿರ ಅಲ್ಲ ಲಕ್ಷ ಅಲ್ಲ ಬದಲಾಗಿ ಕೋಟಿ)
ಬ್ರಿಟೀಷರು ಭಾರತಕ್ಕೆ ಬರುವ ಮುಂಚಿನ ಮಾತು ಇದು 1601 ರಿಂದ 1623ರವರೆಗೆ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ತಂದ ವಸ್ತುಗಳಲ್ಲಿ ಶೇ 68.2 ಪಾಲು ಚಿನ್ನ ಬೆಳ್ಳಿ ಯಾಗಿತ್ತಂತೆ.
ಆಗ ಭಾರತಕ್ಕೆ ವಿನಿಮಯವಾಗಿ ಕಳುಹಿಸಲು ಯೋಗ್ಯವಾದ ವಸ್ತುಗಳು ಬ್ರಿಟನ್‍ನಲ್ಲಿ ತಾಯಾರಾಗುತ್ತಿರಲಿಲ್ಲ ಹಾಕ್ಸಿನ್ ಎಂಬಾತ ಎಲ್ಲ ರಾಷ್ಟ್ರಗಳು ಇಲ್ಲಿಗೆ ನಾಣ್ಯ (ಚಿನ್ನ,ಬೆಳ್ಳಿ) ತಂದು ಸರಕುಗಳನ್ನು ಒಯ್ಯುತ್ತವÉ. ಎಂದು ತನ್ನ ಪ್ರವಾಸ ಕಥನದಲ್ಲಿ ತಿಳಿಸಿದ್ದಾನೆ.
ಈಸ್ಟ್ ಇಂಡಿಯಾ ಕಂಪೆನಿ ತನ್ನ ವ್ಯಾಪಾರ ಕುದುರಿಸಿಕೊಂಡ ನಂತರವೂ 1710-1759 ರ ಅರ್ಧ ಶತಮಾನದ ಅವಧಿಯಲ್ಲಿ ಇಂಗ್ಲೆಂಡು ಪೂರ್ವ ದೇಶಗಳೊಂದಿಗೆ ಮಾಡಿದ ರಪ್ತು ವ್ಯಾಪಾರದ ಒಟ್ಟು 3 ಕೋಟಿ 60 ಲಕ್ಷ ಪೌಂಡು ಆಗಿತ್ತಂತೆ.  ಅವುಗಳಲ್ಲಿ 92 ಲಕ್ಷ ಮಾತ್ರ ಸರಕು ರೂಪದಲ್ಲಿ ಉಳಿದ 2 ಕೋಟಿ 68 ಲಕ್ಷ ಚಿನ್ನ, ಬೆಳ್ಳಿ, ರೂಪದಲ್ಲಿ ಇದ್ದವಂತೆ.

ನೋಡಿ ನಾವೆಷ್ಟು ಶ್ರೀಮಂತರಲ್ವಾ...ಎಂಥಹ ಅರ್ಥವ್ಯವಸ್ಥೆ ನಮ್ಮದಲ್ವಾ...!!!
  ಈ ಅಂಕಿ ಸಂಖ್ಯೆಗಳ ಅರ್ಥ ಇಷ್ಟು. ಭಾರತ 18ನೇಯ ಶತಮಾನದ ನಡು ಭಾಗದವರೆಗೆ ಸಿದ್ಧ ವಸ್ತುಗಳನ್ನು ರಫ್ತು ಮಾಡಿ ಸಂಪತ್ತನ್ನು ಗಳಿಸುತ್ತಿತ್ತು. ಹಲವಾರು ಆಕ್ರಮಣಗಳು, ಯುದ್ಧಗಳು ನಡೆಯುತ್ತಿದ್ದ ಆ ಕಾಲದಲ್ಲಿಯೂ ಸುಭದ್ರವಾಗಿದ್ದ ನಮ್ಮ ಅರ್ಥವ್ಯವಸ್ಥೆ ಸುಮಾರು 10 ಕೋಟಿಯಷ್ಟಿದ್ದ ಅಂದಿನ ಜನ ಸಂಖ್ಯೆಯ ಅಗತ್ಯಗಳನ್ನು ಪೂರೈಸಿ, ದೇಶದ ಒಳ ಮಾರುಕಟ್ಟೆಗೆ, ಬೆಳೆಯುತ್ತಿದ್ದ ವಿದೇಶಿ ಮಾರುಕಟ್ಟೆಗೆ , ಮೊಘಲ್ ಸಾಮ್ರಾಜ್ಯದ ಸೈನ್ಯಕ್ಕೆ ಹಾಗೂ  ಬೃಹತ್ ಸಾರ್ವಜನಿಕ ಕಟ್ಟಡ ಮತ್ತಿತರ ನಿರ್ಮಾಣ ಕಾರ್ಯಗಳಿಗೆ  ವಿವಿಧ ಸಿದ್ಧವಸ್ತುಗಳನ್ನು ಒದಗಿಸುತ್ತಿದ್ದು ಅಂತಹ ಅರ್ಥ ವ್ಯವಸ್ಥೆಯನ್ನು ನಿರ್ಬಲವಾಗಿತ್ತೆಂದೋ ಶಿಥಿಲವಾಗಿತ್ತೆಂದೋ ಹೆಸರಿಸುವುದು ಅಪಚಾರವೇವಾಗುತ್ತದೆ ಅಲ್ವಾ!?
  ಈ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ. ಆದರೆ ಇಲ್ಲಿ ನಾ ಹೇಳಿರುವುದು ಅತ್ಯಂತ ಸ್ಥೂಲ ರೂಪ. ದೂರದಿಂದ ಬೆಟ್ಟ ತೋರಿಸಿದ ಹಾಗೆ. ಈ ವಿಷಯಗಳನ್ನು ಬಹಳ ಕೂಲಂಕುಶವಾಗಿ ವಿವರಿಸಲು ವಿಧ್ವಾಂಸರೇ ಹಿಂಜರಿಯುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ಭಾರತದ ಸಂಪತ್ತನ್ನು ಅರಿಯಲು ಇಂದಿಗೂ ಕಷ್ಟ ಸಾಧ್ಯವಾಗಿದೆ.
  ಇದು ನಮ್ಮ ಭಾರತ ಬಹಳ ಪುರಾತನ ಕಾಲದಿಂದ ಪರಕೀಯ ದಾಳಿ ಆಕ್ರಮಣಗಳನ್ನು ಎದುರಿಸಿದ ದೇಶ. ಆದರೆ ಅಮೇರಿಕಾದ ಮೆಕ್ಸಿಕೋ, ಪೆರುಗಳಂತೆ ತಳ್ಳಿದರೆ ಬೀಳುವಂತಹ ದುಃಸ್ಥಿತಿಯಲ್ಲಿರಲಿಲ್ಲ 8-10 ಶತಮಾನಗಳ ಕಾಲ ಅರಬರ, ತುರ್ಕರ, ಅಫ್ಘ್‍ನ್ನರ ದಾಳಿಗಳನ್ನು ಅನುಭವಿಸಿ ಒಂದೊಂದರ ಪರಿಣಾಮವಾಗಿಯನ್ನು ಒಂದೊಂದು ಹೊಸ ಸಮತೋಲನವನ್ನು ಸಾಧಿಸಿಕೊಂಡ ಹೆಮ್ಮೆ ಇದ್ದರೆ ಅದು ನಮ್ಮ ಭಾರತದ್ದು ಮಾತ್ರಾ.
ಹೀಗೆ ಒಂದೊಂದು ವಿಷಯ ವೈವಿಧ್ಯವನ್ನು ಹೋಲಿಸುತ್ತಾ ವಿಮರ್ಶಿಸುತ್ತಾ ಸಾಗಿದರೆ ನಂಬಲಾರದ ಅದೆಷ್ಟೋ ಸತ್ಯಗಳು ಕಣ್ಮುಂದೆ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ ಸಾಗುತ್ತವೆ. ಈಗ ಹೇಳಿ ನಾವು ಪುಣ್ಯಾತ್ಮರಲ್ಲವೇ. ಮತ್ತೆ ಎಲ್ಲರಿಗೂ ಎದೆತಟ್ಟಿ ಕೂಗಿ ಹೇಳಿ ಇದು “ನಮ್ಮ ಭಾರತ”...

ಅತ್ತೆ ಸೊಸೆ...ಕಿರಿಕ್...


          ಮನಸ್ತಾಪ, ಜಗಳ, ವೈಮನಸ್ಸು ಇದು ಮಹಿಳೆಯರ ಸಹಜ ದೌರ್ಬಲ್ಯ...ಅವರ ಕಷ್ಟ ಕಾರ್ಪಣ್ಯ ಎಷ್ಟಿದ್ದರೂ, ಒಳಗೊಳಗೆ ಪ್ರಾರಂಭವಾಗುವ ಮುನಿಸು, ಜಲಸು, ಬೇರೆಯದನ್ನು ತನ್ನದಾಗಿಸಿಕೊಳ್ಳಲು ನಡೆಸುವ ಹೋರಾಟ ಎಲ್ಲವೂ ರೌದ್ರಾವತಾರದಂತೆ ಹೊಡೆದಾಡುತ್ತಲೇ ಇರುತ್ತವೆ.ಇನ್ನೂ ಇಬ್ಬರು ಹೆಂಗಸರ ಕಚ್ಚಾಟ ಪ್ರಾರಂಭವಾದರಂತೂ ಸಾಮಾಜಿಕವಾಗಿ ಪಸರಿಸದಿದ್ದರೆ ಅವರಿಗೆ ಸಮಾಧಾನ ಇರಲ್ಲ ಬಿಡಿ. ಇಲ್ಲಿ ಬರುವ ಎರಡು ಪಾತ್ರಗಳು ಹೆಣ್ಣೆ ಆದರೂ ಭಾವಗಳು ಬೇರೆ, ಅದೇ ಅವರ ಜಿದ್ದಿಗೆ ಹೆಚ್ಚು ಕಾರಣವಾದರೂ ಅರಿತು ಬಾಳಲು ಆಗುವುದಿಲ್ಲ ಎಂದರ್ಥವಲ್ಲ. ಬರವಣಿಗೆಗೂ ಮುನ್ನ ಈ ಪೀಠಿಕೆ ಯಾಕೆಂದರೆ  ಇದು ಸಾಮಾನ್ಯ ವಿಷಯವಲ್ಲ ಏರಡು ಹೆಂಗಳೆಯರ ಮಧ್ಯೆ ಕಂಡು ಬರುವ, ಪರಸ್ಫರ ಅಧಿಕಾರದಿಂದಲೋ, ಸ್ಥಾನ ಮಾನದ ಘನತೆಯಿಂದಲೋ  ಕೂಡಿರುವ ವಾದ ವಿವಾದ ಅದುವೇ ಅತ್ತೆ ಸೊಸೆಯರ ವಿಕಾರ ನಾದ...
          ಅತ್ತೆ ಸೊಸೆ ಕಾನ್ಸೆಪ್ಟ್ ತಲೆಗೆ ಮೂಡಿದಾಗಲೇ ನಮಗೆ ತೋಚುವುದೇ ದಿನಂಪ್ರತಿ ಕಾಣುತ್ತಿರುವ ಜಗಳದ ಅವರಿಬ್ಬರ ಜಲಕು. ಈ ಅತ್ತೆ ಸೊಸೆ ಜಗಳ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ  ಇತ್ತು ಇಂದು ಇದೆ. ಆದರೆ ಅದು ಮುಂದೆ ಪ್ರವೃತ್ತಿ ಆಗುವುದು ಬೇಡ ಎನ್ನುವ ನಿಟ್ಟಿಲ್ಲಿ ಈ ಬರಹ ಅಷ್ಟೆ.

           ಒಂದು ಕಡೆ ಮನೋವೈಧ್ಯರು ಹೇಳುತ್ತಾರೆ ಅತ್ತೆ ಸೊಸೆಯ ಜಗಳಕ್ಕೆ ಮುಖ್ಯ ಕಾರಣ ಅವರ ಪರಸ್ಫರ ಧನಾತ್ಮಕ ನಿರೀಕ್ಷೆಗಳೇ ಕಾರಣವಂತೆ. ಆದರೆ ಕೆಲವೊಮ್ಮೆ ಅಧಿಕಾರ, ನಾನು ನನ್ನದು ಎನ್ನುವ ಭಾವೈಕ್ಯವೂ ಬರಬಹುದೇನೋ ಹೇಳಲಾಗದು. ನಾವೆಲ್ಲ ಸಮಾಜದಲ್ಲಿ ಮಹಿಳೆ ನಿರ್ಲಕ್ಷ್ಯಕ್ಕೊಳಪಟ್ಟಿದ್ದರೂ, ಆಕೆಯನ್ನು ದೇವತೆಯ ಸ್ಥಾನದಲ್ಲಿಯೇ ನೋಡುತ್ತೇವೆ., ಭೂಮಿಯನ್ನು ನೀರನ್ನು ಕೂಡ ಸ್ತ್ರೀ ರೂಪಿಯಾಗಿ, ಅಮ್ಮನ ಪಾತ್ರದಲ್ಲಿ ದೇವತೆಯಾಗಿ ಕಾಣುತ್ತೇವೆ. ಇಷ್ಟೆಲ್ಲಾ ಆದರೂ ಹೆಣ್ಣನ್ನೂ ಹೆಣ್ಣೆ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.ಇನ್ನೂ ಗಹನವಾಗಿ ಆಲೋಚನೆಗೆ ಕುಳಿತರೆ, ಬಲಗಾಲಿಟ್ಟು ಬಂದ ಸೊಸೆಗೆ ಅತ್ತೆ ರಾಕ್ಷಸಿಯಂತೆ ಕಾಣುವುದ್ಯಾಕೆ?, ಸಂಧರ್ಭಕ್ಕೆ ತಕ್ಕಂತೆ ಸೊಸೆಯ ಪಾಲಿಗೆ ಅತ್ತೆ ಯಾಕೆ ತಾಯಿಯಾಗುತ್ತಿಲ್ಲ?, ಅತ್ತೆಯ ಬುದ್ಧಿ ಮಾತುಗಳ್ಯಾಕೆ ಸೊಸೆಗೆ ತಾಯಿಯ ಬುದ್ಧಿ ಮಾತುಗಳಾಗುತ್ತಿಲ್ಲ?, ಗಂಡನ ಮನೆಗೆ ಬಂದಾಗ  ಅತ್ತೆಯೂ ತನ್ನ ತಾಯಿಯಂತೆ ಎಂದು ಯಾಕೆ ಅಂದುಕೊಳ್ಳುವುದಿಲ್ಲ?, ಮಗನನ್ನು ಕಂಡುಕೊಂಡ ಪ್ರೀತಿಯಲ್ಲಿಯೇ ಅತ್ತೆ ಯಾಕೆ ಸೊಸೆಯನ್ನು ಕಾಣುವುದಿಲ್ಲ?, ಸಂಧರ್ಭದ ಆಧಾರದಲ್ಲಿ  ನಮ್ಮ ಮನಸ್ಥಿತಿಗಳು ಬದಲಾಗುತ್ತವೆಯಾ?, ತಾಯಿ ಮನೆ ಸ್ವರ್ಗ, ಅತ್ತೆ ಮನೆ ನರಕ ಎನ್ನೋ ಮನೋಕ್ಲಿಷೆ ಸರ್ವವ್ಯಾಪಿಯಾಗಿ ಬಿಟ್ಟಿದೆಯಾ?, ಅತ್ತೆ ಸೊಸೆಯರ ಸಂಬಂಧ ವ್ಯತಿರಿಕ್ತವಾಗೋದ್ಯಾಕೆ?, ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ಅಮ್ಮನಂತೆ ಯಾಕೆ ನೋಡಿಕೊಳ್ಳಬಾರದು!? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಬಹುಶಃ ಕವಿ ಜಿ.ಎಸ್. ಶಿವರುದ್ರಪ್ಪ ಬಹಳ ಹಿಂದೆಯೇ “ಸ್ತ್ರೀ ಎಂದರೆ ಅಷ್ಟೇ ಸಾಕೆ ..!?” ಎಂಬ ಪ್ರಶ್ನೆ ಮಾಡಿದ್ದು ಇದಕ್ಕೆ ಎನಿಸುತ್ತದೆ.
          ದಿನಂಪ್ರತಿ ಎನ್ನದೇ ಅತ್ತೆ ಸೊಸೆಯರ ಬಗೆಗಿನ ಸುದ್ಧಿಗಳಂತೂ ಕಿವಿಗೆ ಬೀಳುತ್ತಲೇ ಇರುತ್ತವೆ. ಅತ್ತೆಯ ಕಾಟಕ್ಕೆ ನೇಣು ಬಿದಿದುಕೊಂಡ ಸೊಸೆ, ವರದಕ್ಷಿಣೆಗಾಗಿ ಅತ್ತೆಯಿಂದ ಹಿಂಸೆ, ಮಾವ ಹಾಗೂ ಅತ್ತೆಯ ಮೇಲೆ ಕೇಸ್ ದಾಖಲಿಸಿದ ಸೊಸೆ... ಹೀಗೆ ಒಂದರ ಮೇಲೊಂದರಂತೆ ದಿನಂಪ್ರತಿ ಘಟನೆಗಳು ಘಟಿಸುತ್ತಲೇ ಇವೆ.  ಆದರೆ ಯಾರೊಬ್ಬರು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೇ, ಬಗೆ ಹರಿಸಿಕೊಳ್ಳದೇ, ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುತ್ತಿಲ್ಲದಿರುವುದೇ ಸಮಸ್ಯೆಯ ಜ್ವಾಲಕ್ಕೆ ಇನ್ನಷ್ಟು ತುಪ್ಪ ಎರೆದಂತಾಗಿದೆ. ಇನ್ನೂ ಮಾಧ್ಯಮಗಳಂತೂ ಏಕಾಏಕಿ ಸಂಧರ್ಭದ ಲಾಭ ಪಡೆದು ಸುಮ್ಮನಾಗುತ್ತಿವೆ. ಎಂಟರ್ ಟೈನ್ ಮೆಂಟ್ ಹೆಸರಿನಲ್ಲಿ ಮನೆಮಂದಿಗೆ ಜಗಳಗಳನ್ನು ತಂದಿಕ್ಕಿ ರಂಪಾಟ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿವೆ. ಬೇಸರದ ಸಂಗತಿ ಎಂದರೆ ಪೋಸಿಟಿವ್ ವಿಷಯ ನೀಡಿ ಇಂತಹ ಕೌಟಂಬಿಕ ವಿಚಾರಗಳನ್ನು ತಿಳಿ ಹೇಳಲು ಯಾವ ಮಾಧ್ಯಮವೂ ಪುಷ್ಟಿ ನೀಡುತ್ತಿಲ್ಲ...
 ಇದು ಕೇವಲ ಒಂದೆರಡು ಮನೆಗಳ ಸಮಸ್ಯೆಯಲ್ಲ. ಪ್ರಪಂಚದ ಮುಕ್ಕಾಲು ಭಾಗ ಸಂಸಾರಗಳಲ್ಲಿ ಅತ್ತೆ ಸೊಸೆ ವೈಮನಸ್ಸು ಇದ್ದದ್ದೆ. ಅತ್ತೆ  ಒಳ್ಳೆಯವಳಾದರೆ ಸೊಸೆ ಕೆಟ್ಟವಳು. ಅತ್ತೆ ತಾಟಕಿಯಾದರೆ ಸೊಸೆಗೆ ಗೋಳು. ಇವರ ಮಧ್ಯೆ ಸಾಮರಸ್ಯವೇ ಸಾಧ್ಯವಿಲ್ಲವಾ ಎನ್ನುವುದು ವಿದ್ವಾಂಸರ ಮುಂದಿರುವ ಯಕ್ಷ ಪ್ರಶ್ನೆ.
ಮಗನಿಗೆ ಹೆಂಡತಿ ಬರುತ್ತಾಳೆ ಎಂದರೆ ಅತ್ತೆ ಸ್ಥಾನಕ್ಕೇರುವ ಆ ಮನೆಯ ಸೊಸೆಯ ಮನಸ್ಸಿನಲ್ಲೊಂದು ಸಣ್ಣ ಏರುಪೇರು ಉಂಟಾಗುತ್ತದೆ.  ಸೊಸೆ ತನ್ನ ಮಗನನ್ನು ತನ್ನಿಂದ ಕಸಿದುಕೊಂಡು  ಬಿಡುತ್ತಾಳೇನೋ ಎನ್ನುವ ಆತಂಕ ಪ್ರತಿಯೊಂದು ಅಮ್ಮನಲ್ಲೂ ಇರುತ್ತೆ. ಇದು ಹೆತ್ತವಳ ಪ್ರೀತಿಯ ಚಡಪಡಿಕೆ ಅಷ್ಟೆ. ಮದುವೆಯ ನಂತರ ಮಗ ಪತ್ನಿಯನ್ನು ಕರೆದಾಗ ತಾಯಿ ಸಣ್ಣದೊಂದು ಶಾಕ್ ಅನುಭವಿಸುತ್ತಾಳೆ.   ಜತನದಿಂದ ಸಾಕಿದ ಮಗನನ್ನು ಸೊಸೆ ಬಂದು ಕೈವಶ ಮಾಡಿಕೊಂಡಳೆಂಬ ಭಾವನೆ ಅತ್ತೆಗೆ. ಮಗ ವಯಸ್ಸಿಗೆ ಬಂದಿದ್ದಾನೆ ಈಗವನಿಗೆ ಹೆಂಡತಿ ಪ್ರೀತಿಯೂ ಅಷ್ಟೆ ಮುಖ್ಯ ಎಂದಾಲೋಚಿಸಿದರೆ ಏನಾಗುತ್ತದೆ!?? ಇನ್ನೂ ಏನಾದರೂ ಮಗ ಅಮ್ಮನ ಮಾತೇ ಸರಿ ಎಂದು ಪುಸಲಾಯಿಸಿದರೆ  ಸೊಸೆಗೆ ಮಗನನ್ನು ತನ್ನ ಕೈಮುಷ್ಠಿಯಲ್ಲೇ ಇರಿಸಿಕೊಂಡು ಆಡಿಸುತ್ತಿದ್ದಾಳೆ ಎನ್ನೋ ಭಾವನೆ ಅದನ್ನೆ ಯಾಕೆ ಸೊಸೆಯಾದವಳು ದೊಡ್ಡದು ಎಂದು ಗೊಗೆರೆದುಕೊಳ್ಳಬೇಕು. ಎಲ್ಲವೂ ಸ್ವಲ್ಪ ಸಮಯ ಕೊಟ್ಟು ಆಲೋಚಿಸಿದರೆ ಯಾವುದು ಸಮಸ್ಯೆ ಅಥವಾ ತಪ್ಪು ಅನ್ನಿಸುವುದಿಲ್ಲ.. ಇದು ಜಗಳವಲ್ಲ, ಮನಸು ಮನಸುಗಳ ಹೊಡೆದಾಟ.  ನಮ್ಮ ಎದುರಾಗುವ ಎಲ್ಲಾ ಪೂರ್ವಾಗ್ರಹಗಳಿಂದ ಹೊರಬಂದು ನೋಡಿದಾಗ ಅತ್ತೆ ಮಾತ್ರಾ ಕೆಟ್ಟವಳು ಅಂತ ಎಲ್ಲಿಯೂ ಹೇಳಲಾಗದು. ಎಷ್ಟೋ ಬಾರಿ ಅತ್ತೆ ಹೊಂದಿಕೊಂಡರೂ, ಸೊಸೆ ಅತ್ತೆಯನ್ನು ನಿರ್ಲಕ್ಷ್ಯದಿಂದ ನೋಡುತ್ತಾಳೆ. ಮನೆಕೆಲಸ ಮಗುವಿನ ಆರೈಕೆ ಎಲ್ಲವನ್ನೂ ಅತ್ತೆಗೊಪ್ಪಿಸಿ, ತಾವು ಮಾತ್ರಾ ಕ್ಲಬ್, ಪಬ್ ಎನ್ನುತ್ತಾ ಕಾಲ ಕಳೆಯುವ ಸೊಸೆಯಂದಿರೂ ಇದ್ದಾರೆ.
              ಅವಳು ಸರಿ ಇಲ್ಲ. ಇವಳಿಗೆ ಅಹಂಕಾರ ಅಂತೆಲ್ಲ ಪರಸ್ಫರ ಆರೋಪ ಮಾಡಿಕೊಳ್ಳುವುದಕ್ಕಿಂತ ಸಾಮರಸ್ಯದ ಬದುಕು ನಡೆಸಬೇಕು. ಇದೇನೂ ಕಷ್ಟದ ಕೆಲಸವಲ್ಲ. ಪರಸ್ಫರ ಗೌರವ, ಪ್ರೀತಿ ಇದ್ದರೆ ಅತ್ತೆ ಸೊಸೆ ತಾಯಿ- ಮಗಳಂತಿರಬಹುದು. ಅತ್ತೆಯಾದವಳು ತನ್ನ ಹಿರಿತನದಿಂದ ಸೊಸೆಯನ್ನು ವಾತ್ಸಲ್ಯದಿಂದ ಮಗನ ಜವಾಬ್ಧಾರಿ ಅವಳಿಗೊಪ್ಪಿಸಿದರೆ ಸೊಸೆಯೂ ಅತ್ತೆಯನ್ನು ಪ್ರೀತಿಯಿಂದ ಕಾಣುತ್ತಾಳೆ. ಹಿರಿಯರನ್ನು ಗೌರವದಿಂದ ಕಂಡು ಅವರನ್ನು ಪ್ರೀತಿಯಿಂದಾಗಿ ನೋಡಿಕೊಂಡು ಸೊಸೆಗೂ ಗಂಡನ ಪ್ರೀತಿ ಹಿರಿಯರ ವಾತ್ಸಲ್ಯ ದೊರಕುತ್ತದೆ. ಎಲ್ಲ ಸಂಸ್ಕಾರವಂತರೊಳಗೂ ಜಗಳವನ್ನು ನಿಯಂತ್ರಿಸುವ ಶಮನಗೊಳಿಸುವ, ಹತ್ತಿಕ್ಕುವ, ನಂದಿಸುವ ಒಂದು ಅದ್ಭುತ ಇನ್ ಬ್ಯುಲ್ಟ್ ಸಿಸ್ಟಮ್ ರಚನೆ ಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಕೊಳ್ಳಬೇಕಷ್ಟೆ. ನಾವು ನಮ್ಮೊಳಗೆ ವಿಕಾರತೆಯ ಅನಾವರಣ ಮಾಡಿಕೊಂಡು ಅಪ್ರಬುದ್ದ ಮನಸ್ಸಿನ ಬಡಬಡಿಕೆಯ ತಾಂಡವವನ್ನು ಪ್ರದರ್ಶಿಸುತ್ತಾ ಇರುತ್ತೇವೆಯೋ ಹೊರತು ಸಂಸಾರ ದೋಣಿ ಬಳುಕುವ ನೃತ್ಯ ನಿಲ್ಲಿಸಿಕೊಂಡು ಸರಿದೂಗಿಸಿಕೊಳ್ಳುವುದಿಲ್ಲ. ಸೊಸೆಯಂದಿರೆ ನಿವೇಕೆ ಅತ್ತೆಯನು ಕೆಟ್ಟವಳಂತೆ ಕಾಣುತ್ತೀರಿ. ಅತ್ತೆ ಯಾವಾಗಲೂ ಸೊಸೆಯಿಂದ ನಿರೀಕ್ಷಿಸುವುದು, ನಯವಾದ ಮಾತು, ಉತ್ತಮ ನಡತೆ, ಗುಣ, ಆಡಮಬರವಿಲ್ಲದ ಸೌಂದರ್ಯಪ್ರಜ್ಞೆ, ಮನೆಯವರನ್ನೆಲ್ಲಾ ಪ್ರೀತಿಯಿಂದ ಓಲೈಸುವ ಮನೊಭಾವ ಅಷ್ಟೆ. ಮಗ ಪ್ರತಿ ದಿನ ಆಫೀಸ್‍ಗೆ ಹೋಗುವಾಗ ಅಮ್ಮ ಟಿಫಿನ್ ರೆಡಿ ಮಾಡಿ ಕೊಡುವುದು ಹೊಸತೇನಲ್ಲ ಆದರೆಸೊಸೆ ಬಂದ ಮೇಲೆ ಇದು ಬದಲಾಗಬೇಕು ಅತ್ತೇ ನಾನೀದಿನಲ್ಲಾ ಇನ್ನೂ ನೀವ್ಯಾಕೆ ಇದನ್ನೆಲ್ಲಾ ಮಾಡ್ಬೇಕು. ಅನ್ನುವ ಸೊಸೆಯ ಪ್ರೀತಿ ತುಂಬಿದ ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ಖಾತೆ ತೆರೆದಂತೆ. ಅಲ್ಲಿ ಅತ್ತೆ ನಿಮ್ಮೆದುರು ಏನೇ ಗೊಣಗಿದರೂ ಮರೆಯಲ್ಲಿ ನಿಂತು ಆನಂದದ ಕಣ್ಣೀರು ಸುರಿಸುತ್ತಾಳೆ. ಹೆಣ್ಮಕ್ಕಳೆ ಒಂದು ನೆನಪಿಟ್ಟುಕೊಳ್ಳಿ ಇಂದು ನೀವು ಸೊಸೆಯಾಗಿ ಮನೆ ಬೆಳಗಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ."ಅತ್ತೆ ಸೊಸೆ ಜಗಳವೆಂಬುದು ಅನಾಧಿಕಾಲದಿಂದಲೂ ಇದೆ. ಅದೊಂಥರ ಇನ್‍ಬಾರ್ನ್ ಸಿಸ್ಟಮ್. ಅತ್ತೆಯಾದವಳು ಅವಳ ಅತ್ತೆಯಿಂದ ಅನುಭವ ಪಡೆದಿರುತ್ತಾಳೆ ಅದನ್ನು ಅವಳು ತನ್ನ ಸೊಸೆ ಮೇಲೆ ತೀರಿಸಿಕೊಳ್ಳುತ್ತಾಳೆ. ಆದರೆ ಸೊಸೆಯಂದಿರು ಅತ್ತೆ ಮೇಲೆ ಹರಿಹಾಯಲು ಕಾರಣ ತಾನು ಸ್ವತಂತ್ರ ವಾಗಿರಲು ಭಯಸುವುದೇ ಆಗಿರುತ್ತದೆ. ಇದನ್ನು ಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಆದರೆ ಇಂತಹ ದೌರ್ಜನ್ಯ ಕಂಡುಬಂದಾಗ ‘ಕೌಟುಂಬಿಕ ದೌರ್ಜನ್ಯ ಕಾಯ್ದೆ’ಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ದೂರು ನೀಡಬಹುದಾಗಿದೆ."
-ಪ್ರಮೀಳಾ ನೇಸರ್ಗಿ.
ವಕೀಲರು, ಶಿಕ್ಷಣ ತಜ್ಞರು, ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ.