Friday 9 December 2016

ಸಿರಿ ಬುಲೆಟ್-ದೇಶಕ್ಕೆ ದೇವರಾಗಿ...ದೆವ್ವಗಳಾಗಬೇಡಿ...

ದೇಶಕ್ಕೆ ದೇವರಾಗಿ...ದೆವ್ವಗಳಾಗಬೇಡಿ...
ಪ್ರಾಮಾಣಿಕ ದುಡಿಮೆಯ ತಾಕತ್ತು ನಮ್ಮಲ್ಲಿರಲಿ...
ಪರ್ಸಂಟೇಜ್ ಮೊತ್ತದಲ್ಲಿ ಹಣವಿನಿಮಯ ಮಾಡಿಕೊಳ್ಳಬೇಡಿ...
ಇದು ನಮ್ಮೆಲ್ಲರ ಹೊಣೆ, ದೇಶದ ಬದಲಾವಣೆ, ಬದಲಾಗೋಣ...

ರಾಜಮೂಲೋ ಹಿ ಧರ್ಮಶ್ಚ, ಜಯತಾಂ ವರ|
ತಸ್ಮಾತ್ ಸರ್ವಾಸು, ಅವಸ್ಥಾಸು ರಕ್ಷಿತವ್ಯಾಃ ನರಾಧಿಪಾಃ||
ದೊರೆಯು ಸರಿಯಾಗಿದ್ದರೆ ರಾಷ್ಟ್ರದಲ್ಲಿ ಧರ್ಮ, ಯುದ್ಧದಲ್ಲಿ ಜಯ, ಕಾರ್ಯಸಿದ್ಧಿಗಳು ಸಾಧ್ಯ. ದೊರೆಯನ್ನು ಹೇಗೂ ಅಪಮಾರ್ಗದಲ್ಲಿ ಹೋಗಗೊಡದಂತೆ ಬುದ್ಧಿವಂತರು ರಕ್ಷಿಸಬೇಕು. ಹತೋಟಿಯಲ್ಲಿಡಬೇಕು... 

ಆದರೆ  ಹೆಚ್ಚಿನರು ಇಂದು ಏನು ಮಾಡುತ್ತಿದ್ದಾರೆ!!? 
ಬಹುದಿನಗಳ ಬಳಿಕ, ಅಲ್ಲಲ್ಲ..!, ಬಹುವರ್ಷದ ಬಳಿಕ ಒಬ್ಬ ಒಳ್ಳೆಯ ಪ್ರಧಾನಿ ದೇಶಕ್ಕೆ ಸಿಕ್ಕಿದ್ದಾನೆ ಅವನ ಗುರಿ, ಉದ್ದೇಶಗಳೆಲ್ಲವೂ ನೇರವಾಗಿದೆ ಆದರೆ ಅನೇಕ ಕಪ್ಪು ಹಣದ ದೆವ್ವಗಳು ಅವರನ್ನು ದೇಶದ ಮಂತ್ರಿಯಾಗಿ, ರಾಜನಾಗಿ ಮುಂದುವರಿಯಲು ಅಸಾಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಇಂತಹವರಿಗೆ ಏನ್ ಹೇಳಬೇಕು!? ನೀವೇ ಹೇಳಿ!!!.

ಕಾಳಧನ, ಖೋಟಾನೋಟು, ಭ್ರಷ್ಟಾಚಾರ ಎಂಬ ಪಿಡುಗುಗಳ ಮೂಲೋತ್ಪಾಟನೆಯ ಯತ್ನದ ಒಂದು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕ ಮುಖಬೆಲೆಯ ನೋಟು ರದ್ಧತಿಯ ಐತಿಹಾಸಿಕ ನಿರ್ಧಾರ ಘೋಷಿಸುತ್ತಿದ್ದಂತೆಯೇ ಸಮಾಜದ ವಿವಿಧ ಸ್ತರಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಹೊರಹೊಮ್ಮಿದವು. ನೀಯತ್ತಾಗಿ ತೆರಿಗೆ ಕಟ್ಟುವವರಿಂದ ಹರ್ಷೋದ್ಗಾರ ಹೊಮ್ಮಿದರೆ, ತೆರಿಗೆ ವಂಚಿಸಿ ಕಪ್ಪುಹಣ ಕೂಡಿಟ್ಟುಕೊಂಡವರಲ್ಲಿ ನಡುಕ ನಿರಂತರವಾಯಿತು. ನಿಗಧಿತ ಅವಧಿಯೊಳಗೆ ಹಳೆಯ ನೋಟುಗಳನ್ನು ತಂತಮ್ಮ ಖಾತೆಗೆ ಜಮೆ ಮಾಡಬೇಕಾದ, ಹೊಸದಕ್ಕೆ ಬದಲಿಸಿಕೊಳ್ಳಬೇಕಾದ ಹಾಗೂ ದಿನಕ್ಕಿಷ್ಟು ವಾರಕ್ಕಿಷ್ಟು ಎಂಬ ಲೆಕ್ಕಾಚಾರದಲ್ಲಿ ಸೀಮಿತ ಮೊತ್ತವನ್ನಷ್ಟೇ ಹಿಂಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ, ಶ್ರೀ ಸಾಮಾನ್ಯರು ದೈನಂದಿನ ಖರ್ಚಿನ ನಿಭಾವಣೆಯ ಕುರಿತು ಚಿಂತಿತರಾದರೂ ತಲ್ಲಣಗೊಳ್ಳಲಿಲ್ಲ. ಅದು ಪ್ರಾಮಾಣಿಕ ದುಡಿಮೆಯ ತಾಕತ್ತು.

ಆದರೆ ರಂಗೋಲಿ ಕೆಳಗೆ ತೂರಿಕೊಳ್ಳುವ ಚಾಣಾಕ್ಷ ಕಾಳಧನಿಕರು, ಕಾಳ ಧನವನ್ನು ಬಿಗಿಯಾಗಿಸುವ ಕಸರತ್ತಿನಲ್ಲಿ ವಾಮಮಾರ್ಗವನ್ನು ಆಯ್ದುಕೊಂಡಿದ್ದಂತೂ ಹೌದು. ಇದ್ದಬದ್ಧ ಸ್ನೇಹಿತರನ್ನು ನೆಂಟರಿಷ್ಟರನ್ನೆಲ್ಲಾ ಬ್ಯಾಂಕಿನ ಸರತಿ ಸಾಲಿನಲ್ಲಿ ನಿಲ್ಲಿಸಿ ಸಾಧ್ಯವಾದಷ್ಟು ಮಟ್ಟಿಗೆ ಹೊಸ ನೋಟನ್ನು ವಿನಿಮಯ ಮಾಡಿಕೊಳ್ಳುವ ಸರ್ಕಸ್‍ಗೆ ಮೊರೆಹೋದರು. ಪರಿಚಿತ ಶ್ರೀಸಾಮಾನ್ಯರ ‘ಜನಧನ’ ಬ್ಯಾಂಕ್ ಖಾತೆಗಳಿಗೂ ಹಣಹಾಕಿಸಿ ನಂತರ ಅವರಿಂದ ಪೀಕಿಸುವ ಚಿಂತನೆಯೂ ಅವರಿಂದ ಹೊರಹೊಮ್ಮಿತು. ಕೆಲವರಂತೂ ಹಳೆತು-ಹೊಸತು, ಎಪ್ಪತ್ತು-ಮೂವತ್ತು, ಐವತ್ತು-ಐವತ್ತು ಎಂದೂ ಹಳೆ ನೋಟು- ಹೊಸ ನೋಟನ್ನು ವಿನಿಮಯ ಮಾಡಿಕೊಂಡು, ಅದರಲ್ಲೂ ದಲ್ಲಾಳಿಗಳನ್ನಿಟ್ಟುಕೊಂಡು, ಅವರಿಗೂ ಒಂದಿಷ್ಟು ಹಣವನ್ನು ಕೊಟ್ಟು ಬ್ಲ್ಯಾಕ್ ಮನಿಯನ್ನು ವೈಟ್‍ಮನಿಯಾಗಿಸಿಕೊಳ್ಳುವುದು ಅಲ್ಲಲ್ಲಿ ನಡೆಯುತ್ತಿದೆ.

ಯಾರು ಏನೇ ಹೇಳಲಿ... ದೇಶದ ಸಮಾನಾಂತರ ಅಥವಾ ಛಾಯಾ ಅರ್ಥವ್ಯವಸ್ಥೆಯನ್ನು ನಿವಾರಿಸುವುದಕ್ಕಾಗಿ 500, 1000ರೂ. ಮುಖಬೆಲೆಯ ನೋಟುಗಳ ಮಾನ್ಯತೆ ರದ್ದುಗೊಳಿಸಿರುವ ಪ್ರಧಾನಿಯವರ ನಿರ್ಧಾರ ಐತಿಹಾಸಿಕವಾದುದು. ಈ ಮೂಲಕ ಅನೇಕ ಕಾಳಧನಿಕರಿಗೆÀ ಮರ್ಮಾಘಾವನ್ನೇ ನೀಡಿದಂತಾಗಿತೆ. ಈ ಎರಡು ನೋಟುಗಳ ಮೌಲ್ಯ, ದೇಶಾದ್ಯಂತ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯದ ಶೇಕಡಾ 86ರಷ್ಟಿತ್ತು ಎಂದರೆ ಅದರ ಅಗಾಧತೆಯನ್ನು ನೀವೇ ಊಹಿಸಬಹುದು!!.

ಅರ್ಥವ್ಯವಸ್ಥೆಯಲ್ಲಿ ನಕಲಿ ನೋಟುಗಳ ಹೆಚ್ಚಳ ಮತ್ತು ಅದು ಉಂಟುಮಾಡುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕಾರಣಕ್ಕಾಗಿಯೇ, ಇಂತಹ ಪ್ರಮುಖ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿ ಬಂತು. ಚಲಾವಣೆಯಲ್ಲಿದ್ದ ನಕಲಿ ನೋಟುಗಳ ಮೌಲ್ಯವು 400 ಕೋಟಿ ರೂ.ಗಳಷ್ಟಿತ್ತು. ಈ ಹೊಸ ನೀತಿಯಂತು ಹಳೇ 500, 1000 ರೂಪಾಯಿ ನೋಟುಗಳ ಮಾನ್ಯತೆ ರದ್ದುಗೊಳಿಸಿದ್ದಷ್ಟೇ ಅಲ್ಲ, ನಕಲಿ ನೋಟುಗಳ ಚಲಾವಣೆಗೂ ಇತಿಶ್ರೀ ಹೇಳುವಂತೆ ಮಾಡಿದೆ.  ಹೊಸ ನೋಟುಗಳಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇರಿಸುವುದು ಸಾಧ್ಯವಾಗುತ್ತಿದೆ. ಇದಕ್ಕೆಲ್ಲಾ ಮಿಗಿಲಾಗಿ ನೂರು ರೂಪಾಯಿ ವಹಿವಾಟು ನಡೆಸುವಾಗಲೂ ಎಚ್ಚರದಿಂದಿರುವಷ್ಟು ಹಣಕಾಸು ವಹಿವಾಟಿನ ಜಾಗೃತಿ ಎಲ್ಲರಲ್ಲಿ ಮೂಡುವಂತಾಗಿದೆ.
ಕೇಂದ್ರ ಸರ್ಕಾರದ ಸಮಾನಾಂತರ ಅರ್ಥವ್ಯವಸ್ಥೆ ಮತ್ತು ನಕಲಿ ನೋಟುಗಳನ್ನು ಇಲ್ಲವಾಗಿರಿಸುವ ಈ ಕ್ರಮಕ್ಕೆ ಅನೇಕ ಟೀಕೆಗಳು, ಪ್ರತಿಭಟನೆಗಳು ಕೇಳಿಬರುತ್ತಿವೆ. ಇದನ್ನೆಲ್ಲಾ ಸೋ ಕಾಲ್ಡ್ ಅಧಿಕಾರ ಮತ್ತು ಹಣದಾಸೆಯ ರಾಜಕೀಯಪಕ್ಷಗಳು ನಡೆಸುತ್ತಿವೆ ಯಾಕೆಂದರೆ ಅವರ ಹತ್ತಿರ ಇರುವ ಹಣವೆಲ್ಲಾ ಈ ದೇಶದ ಮೂಲೆ ಮೂಲೆಯಿಂದ ಕೊಳ್ಳೆ ಹೊಡೆದ ಕಪ್ಪುಹಣ. ವಾಸ್ತವದಲ್ಲಿ ನೋಡಿದರೆ ಇದರಿಂದ ಹೆಚ್ಚು ತೊಂದರೆಗೊಳಗಾದವರು ಬಡವರಲ್ಲ, ಶ್ರೀಮಂತರು!!. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಅಲ್ಪ ಪ್ರಮಾಣದ ಸಂಕಷ್ಟಗಳನ್ನು  ಎದುರಿಸುವುದಕ್ಕೆ  ಜನರೂ ಸಿದ್ಧರಾಗಿದ್ದಾರೆ. ಆಯಾಯಾ ರಾಜ್ಯಗಳ ಆಯಾಯ ಸರ್ಕಾರ ಪಕ್ಷಬೇಧ ಮರೆತು ಇದಕ್ಕೆ ಸ್ಪಂಧಿಸಬೇಕಿದೆ ಅಷ್ಟೆ.
ಮೋದಿಯವರ ನೀತಿ ನಿರೂಪಣೆಯು ದಿಟ್ಟ ನಿಲುವಿನಿಂದ ಕೂಡಿದ್ದು, ಆರ್ಥಿಕ ನೀತಿಯನ್ನು ಅದರ ಮಿತಿಯನ್ನು ಮೀರಿ ಉತ್ತೇಜಿಸುವಂತಿದೆ. ಅನಾಣ್ಯೀಕರಣವು ಸದ್ಯ ಅರ್ಥವ್ಯವಸ್ಥೆಯನ್ನು ಕುಗ್ಗಿಸಿರುವುದು ನಿಜವಾದರೂ, ಸರ್ಕಾರದ ಈ ಕ್ರಮವು ಅರ್ಥವ್ಯವಸ್ಥೆಯನ್ನು ಹೊಸ ಶುರುವಾತನ್ನು ನೀಡುವುದರ ಜತೆಗೆ ಎಲ್ಲ ಭಾರತೀಯರನ್ನೂ ಡಿಜಿಟಲ್ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವ ಪ್ರಯತ್ನ ಎಂದೇ ಹೇಳಬೇಕು. ಈ ಕ್ರಮವು ಜನರಿಗೆ ಡಿಜಿಟಲ್ ವಹಿವಾಟಿನ ಪ್ರಯೋಜನವನ್ನು ಅರ್ಥೈಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. 
ಜನಸಾಮಾನ್ಯರೇ, ಎಲ್ಲವನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಹತ್ತಿರವಿರುವ ಅಲ್ಪ ಸ್ವಲ್ಪ ಹಣಕ್ಕೆ ಯಾವ ತೊಂದರೆಯೂ ಇಲ್ಲ. ಅನೇಕ ಹಳ್ಳಿಯಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿಗಳಿಲ್ಲದೆ ಅಲ್ಲಲ್ಲಿ ಗೊಂದಲಗಳು, ಗಲಭೆಗಳು, ಸಾವು ನೋವುಗಳು ಸಂಭವಿಸಿರಬಹುದು ಆದರೆ ನೀವುಗಳು ಇಷ್ಟೆಲ್ಲಾ ಹರಸಾಹಸ ಮಾಡುವ ಅವಶ್ಯಕತೆಯೇ ಇಲ್ಲ. ದಯವಿಟ್ಟು ತಾಳ್ಮೆ ವಹಿಸಿ. ತಾಳ್ಮೆಯೊಂದಿದ್ದರೆ ನಮ್ಮ ಮುಂದಿನ ತಲೆಮಾರಿನವರು ತಲೆಬಿಸಿಯಿಲ್ಲ ಬಾಳಬಹುದು.
ನೆನಪಿಡಿ ನಿಜವಾಗಿಯೂ ನಮ್ಮ ದೇಶಕ್ಕೆ ಇದು ಬದಲಾವಣೆಯ ಕಾಲ.
ಹಣವನ್ನು ಕೂಡಿಟ್ಟ ಅನೇಕರು ನಿದ್ದೆಗೆಟ್ಟು ಅದೆಷ್ಟೋ ದಿನಗಳಾಯ್ತು. ನಾವು ಭಾರತೀಯರು, ಮಹಾನ್ ಬುದ್ಧಿವಂತರು. ಆದರಂತೆ ಈ ಕಾಯ್ಧೆ ಹೊರಬಿದ್ದ ಮರುದಿನವೇ  ಪರ್ಸಂಟೇಜ್ ಮೊತ್ತದಲ್ಲಿ ಹಳೆನೋಟು ಹೊಸನೋಟುಗಳ ವಿನಿಮಯವೂ ಅಲ್ಲಲ್ಲಿ ನಡೆಯುತ್ತಿರುವುದು ಕಂಡು ಬಂತು. ಮಹನೀಯರೇ ದಯವಿಟ್ಟು ಅನೇಕರು ತೋರಿಸುವ ಕೆಟ್ಟ ಆಸೆಗೆ ಬಲಿಯಾಗಬೇಡಿ. ಸೈಬರ್ ಕ್ರೈಂ ಈ ಬಗ್ಗೆ ಗುಪ್ತ ಮಾಹಿತಿಗಳನ್ನು ಕಲೆಹಾಕುತ್ತಿದೆ. ಅಪ್ಪಿ ತಪ್ಪಿ ಸಿಕ್ಕಿಬಿದ್ದರೆ ನೀವು ಹೊರಬರುವುದು ತುಂಬಾ ಕಷ್ಟವಿದೆ.

ಇದರಿಂದ ನೀವೇನೋ ಅಲ್ಪ ಸ್ವಲ್ಪ ಹಣಮಾಡಬಹುದೆಂಬುದನ್ನು ಬಿಟ್ಟರೆ ಬೇರೇನೂ ಸಾರ್ಥಕತೆಯಿಲ್ಲ. ನೀವು ಸ್ವಲ್ಪ ತಾಳ್ಮೆ ವಹಿಸಿದರೆ  ಈ ನೋಟು ರದ್ಧತಿ ನಮಗೆಲ್ಲರಿಗೂ ವರದಾನವಾಗಲಿದೆ ಎನ್ನುವುದರಲ್ಲಿ ಯಾವ ಸಂಶಯವಿಲ್ಲ. ಸದ್ಯ ಅನೇಕ ಒತ್ತಡದಿಂದ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಶ್ರೀ ಸಾಮಾನ್ಯರು ಸರ್ಕಾರದ ಕ್ರಮದ ಪರವಾಗಿ ನಿಂತಿದ್ದು, ನಿಜಕ್ಕೂ ನಮ್ಮ ದೇಶದ ಹೆಮ್ಮೆ ಮತ್ತು ಪ್ರಗತಿಯ ಲಕ್ಷಣ.

ಈ ಕ್ರಮದಿಂದಾಗಿ ಮೊದಲೇ ಹೇಳಿದಂತೆ ಕಪ್ಪುಹಣದ ನಿಯಂತ್ರಣ, ಖೋಟಾನೋಟಿನ ನಿರ್ಮೂಲನೆ ಸೇರಿದಂತೆ ಉಗ್ರರು-ನಕ್ಸಲರಿಗೆ ಆಗುವ ಹಣದ ಸರಬರಾಜಿಗೆ ಹೊಡೆತ ಬೀಳುತ್ತದೆ. ಭ್ರಷ್ಟರಿಗೆ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಬಡವರಿಗೆ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಇದು ಸಹಕಾರಿಯಾಗುತ್ತದೆ ಎಂಬುದು ಇಲ್ಲಿ ಮುಖ್ಯ.
ಅಲ್ಲದೇ ತಮ್ಮ ಒಡೆಯರಿಂದ, ಬಡ್ಡಿ ವ್ಯವಹಾರಸ್ಥರಿಂದ ಹೆಚ್ಚಿನ ಬಡ್ಡಿಗೆ ಸಾಲಪಡೆದು ಶೋಷಣೆಗೆ ಒಳಗಾಗುತ್ತಿರುವ ಬಡವರು, ಕೂಲಿ ಕಾರ್ಮಿಕರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡರೆ, ಇಂಥ ಉಪಟಳದಿಂದ  ಮುಕ್ತರಾಗಬಹುದು. ಕೇಂದ್ರ-ರಾಜ್ಯ ಸರ್ಕಾರಗಳು ನೀಡುವ ಕಡಿಮೆ ಬಡ್ಡಿದರದ ಸಾಲಸೌಲಭ್ಯವನ್ನು ಪಡೆಯಬಹುದು. ಅಷ್ಟೇಕೆ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಯಂಥ ಸ್ವ ಉದ್ಯೋಗ ಯೋಜನೆಗಳ ಲಾಭವು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ. ಒಟ್ಟಾರೆಯಾಗಿ, ಅಂತ್ಯೋದಯದ ಕನಸುಗಳು ಸಾಕಾರಗೊಳ್ಳುವಲ್ಲಿ ನೋಟು ರದ್ಧತಿ ಐತಿಹಾಸಿಕ ಹೆಜ್ಜೆಯಾಗಲಿದೆ ಎನ್ನಲು ಯಾವ ಅನುಮಾನವಿಲ್ಲ...
ಹುಷಾರಾಗಿರಿ ದೇಶಕ್ಕೆ ದೇವರಾಗಿ...ದೆವ್ವಗಳಾಗಬೇಡಿ...

No comments:

Post a Comment