Monday, 14 March 2016

ಕರ್ಮದ ಕಡಲಲ್ಲಿ...


         
                   ಅವಳು ಮಾತೆ. ಪ್ರಾಯ 80 ಆಗಿರಬಹುದು. ಬೆನ್ನು ಬಾಗಿದೆ. ನೇರವಾಗಿ ನಿಲ್ಲುವುದು ಬಿಡಿ, ನೆಟ್ಟಗೆ ಕಾಲು ಚಾಚಿ ಮಲಗಲು ಕಷ್ಟಪಡುವ ಸ್ಥಿತಿಯಲ್ಲಿದ್ದಾಳೆ. ಜೀವ ಇದ್ದು ಸಾಯಿಸುತ್ತಿರುವ ಉಬ್ಬಸ, ವಿಪರೀತ ಕೆಮ್ಮು ಖಾಯಂ ಆಗಿ ಸತಾಯಿಸಿ ಪ್ರತಿ ದಿನವೂ ನಿದ್ದೆಗೆಡಿಸುತ್ತಿದೆ. ಆಗಾಗ ಹಳೆ ನೆನಪುಗಳಿಗೆ ಹೋಗಿ ಹೋಗಿ ಬರುತ್ತಿದ್ದ ಅವಳ ಕಣ್ಣಂಚಿನಲ್ಲಿ  ಕಣ್ಣೀರು ಸುಮಾರು ವರ್ಷಗಳಿಂದ ಮಾಮೂಲಾಗಿ ಜಿನುಗುತ್ತಿದೆ.  ಒಂದು ಕಾಲದಲ್ಲಿ ತನ್ನದೇ ಸ್ವಂತ ಮನೆ, ಮಗ, ಗಂಡ ಆಸ್ತಿ ಎಲ್ಲವನ್ನು ಹೊಂದಿದ್ದ ಅವಳ ಜೀವನ ಇಂದು ಸಾಗುತ್ತಿರುವುದು ವೃದ್ಧಾಶ್ರಮದಲ್ಲಿ. ಅಂದು ಅದೆಷ್ಟೋ ಜನರಿಗೆ ಊಟ ನೀಡಿದ್ದ ಕೈಗಳು ಇಂದು ಅನ್ನ ಪಡೆಯಲು ಹವಣಿಸುತ್ತಿದೆ. ಜೀವಕ್ಕೆ ಜೀವವಾಗಿದ್ದ ಗಂಡ ಆ ದಿನ ಹೃದಯಾಘಾತದಿಂದ ತೀರಿಕೊಂಡ ಬಳಿಕ ಎಲ್ಲಾ ನೋವನ್ನು ಬಿಗಿಹಿಡಿದುಕೊಂಡು ಇದ್ದ ಒಬ್ಬ ಮಗನಿಗೆ ಅಲ್ಲೋ ಇಲ್ಲೋ ಸಾಲ ಮಾಡಿ ಮದುವೆ ಮಾಡಿಸಿ, ಬಡ ಕುಟುಂಬದ ಹುಡುಗಿಯನ್ನೇ ಆರಿಸಿಕೊಂಡು ಮನೆ ಬೆಳಗಿಸಿಕೊಂಡಿದ್ದಳು. ಒಂದಷ್ಟು ದಿನ ಹೊಸತನದಲ್ಲೇ ಮನೆಯೇನೋ ಬೆಳಗಿತು. ಮಗನಿಗೆ ಬರೆದ ಸರ್ಕಾರಿ ಪರೀಕ್ಷೆಯೊಂದು ಪಾಸಾಗಿ ಕೆಲಸವೂ ದೊರೆಯಿತು. ಕೈ ತುಂಬ ಸಂಬಳ, ಮನೆ ತುಂಬ ನಗು ಕಾಣುತ್ತಿದೆ ಎನ್ನುವಾಗಲೇ ಸೊಸೆಯ  ನಾಟಕೀಯ ಬದುಕು ನರ್ತಿಸಲು ಪ್ರಾರಂಭಿಸತೊಡಗಿತು. ಕುಂತರೂ ತಪ್ಪು, ನಿಂತರೂ ತಪ್ಪು... ಐಶ್ವರ್ಯ ಹೇಗೆ ಜಾಸ್ತಿಯಾಗತೊಡಗಿತೋ ಅಂತೆಯೇ ಮನೆಯ ಸುಖ, ಶಾಂತಿ, ನೆಮ್ಮದಿಗಳೂ ಮೂಲೆ ಸೇರಿ ದಿನಾಲೂ ಗಲಾಟೆ ಗೌಜುಗಳಲ್ಲೇ  ನೆಮ್ಮದಿಯ ದೀಪ ಆರತೊಡಗಿತು. ಮಗ ಇತ್ತ ವಯಸ್ಸಿನ ಅಮ್ಮನನ್ನೂ, ಅತ್ತ ಪ್ರಾಯದ ಹೆಂಡತಿ ಇಬ್ಬರನ್ನೂ ಬಿಟ್ಟುಕೊಡಲಾಗದೇ ಒದ್ದಾಟ ದಿನದೂಡತೊಡಗಿದ. ಕೊನೆಗೂ ಮಾತೆಯೇ ಸೋತಳು. ‘ಎಲ್ಲವೂ ನಿನ್ನದೇ ಮಗನೆ ವೃದ್ಧರಿಗಾಗಿಯೇ ಒಂದು ಆಶ್ರಮವಿದೆಯಂತೆ ನನ್ನನ್ನೂ ಅಲ್ಲಿಗೆ ಸೇರಿಸಿಬಿಡು’ ಎಂದು ಶ್ರಮದ ಬೆವರಲ್ಲಿ ಕಟ್ಟಿದ್ದ ಮನೆಗೆ ಬೀಳ್ಕೊಡುವ ಮಾತನ್ನು ಆಡಿದ್ದಳು. ಮಗನೂ ದೊಡ್ಡ ಮನಸ್ಸು ಮಾಡಿ ಆಶ್ರಮಕ್ಕೆ ಸೇರಿಸಿಯೇ ಬಿಟ್ಟಿದ್ದ.
                                         
                                                  *****************************

                       
ಗೆಳೆಯರೊಬ್ಬರ ಮನೆ ಮದುವೆ. ಊಟದ ಪಂಕ್ತಿಯಲ್ಲಿ ಕುಳಿತಿದ್ದೆ. ಅದು ಕೊನೆಯ ಪಂಕ್ತಿಯಾದ್ದರಿಂದ ನನ್ನೆದುರು ಅನೇಕ ಜನ ಕೂಲಿ ಕೆಲಸಗಾರರೂ ಊಟಕ್ಕೆ ಕುಳಿತಿದ್ದರು. ಅವರ ಮಧ್ಯದಲ್ಲಿ ಸಾಧಾರಣ ಉಡುಗೆ ತೊಟ್ಟ ಸುಮಾರು 70-80 ವಯಸ್ಸಿನ ಗಂಡ ಹೆಂಡತಿ ಅನಾಮಿಕರಂತೆ ಬಂದು ಕುಳಿತಿರುವುದು ಗಮನಸೆಳೆಯಿತು. ಗಂಡನ ಕೈ ನಡುಗುತ್ತಿತ್ತು. ಮುಷ್ಟಿಯನ್ನು ಬಾಯಿಗೆ ಹಾಕಲು ಕಷ್ಟ ಪಡುತ್ತಿದ್ದ. ಹೆಂಡತಿ ಮಗುವಿನಂತೆ ಊಟ ಮಾಡಿಸುತ್ತಿದ್ದಳು. ಬಹುಶಃ ಬಹಳ ದಿನಗಳಿಂದ ಇದ್ದ ಹಸಿವಿಗೋ ಏನೋ ಅವರಿಬ್ಬರು ಗಬಗಬನೇ ಊಟ ಮಾಡುತ್ತಿದ್ದರು.  ಊಟ ಮುಗಿಸಿ ಕೈ ತೊಳೆಯುವ ಹೊತ್ತಿಗೆ ಅವರ ಬಳಿ ಹೋಗಿ. ‘ಏನಾಯ್ತು ಅಮ್ಮ ಅಂಕಲ್‍ಗೆ!’ ಎಂದೆ. ಅಳೋಕೆ ಶುರುವಿಟ್ಟರು. ‘ದಯಮಾಡಿ ಅಳದಿರಿ ಏನಾಯ್ತು ಹೇಳಿ!’ ಎಂದು ಮತ್ತೆ ಪ್ರಶ್ನೆಯನಿತ್ತೆ. ಉತ್ತರಿಸಲಿಲ್ಲ... ‘ಅತ್ತರೆ ಯಾವುದು ಸರಿಹೋಗುವುದಿಲ್ಲ ಅಲ್ವಾ ಹೇಳಿ? ಏನಾಯ್ತು?’ ಎಂದೆ...
ಉತ್ತರ ಪಂಕ್ತಿ ಬಡಿಸುವ ಅಡುಗೆ ಭಟ್ಟರಿಂದ ಬಂತು...
ಅವರಿಗೆ ಒಬ್ಬನೇ ಮಗನಂತೆ. ತುಂಬಾ ಪ್ರೀತಿಯಿಂದ ಓದಿಸಿದ್ರಂತೆ. ತಕ್ಕಂತೆ ಟ್ಯಾಲೆಂಟ್‍ಗನುಸಾರ ಅಮೇರಿಕಾದಲ್ಲಿ ವೈಧ್ಯಕೀಯ ಸಂಸ್ಥೆಯೊಂದರಲ್ಲಿ ವೃತ್ತಿಯನ್ನು ನಿರ್ವಹಿಸಲು ಅವಕಾಶ ದೊರೆತು ಅಲ್ಲಿಗೂ ಅವನನ್ನು ಕಳುಹಿಸಿಕೊಟ್ಟಿದ್ದರಂತೆ. ಆದರೆ ವಿದೇಶಕ್ಕೆ ಹೋದ ಮಗ ಒಂದೆರಡು ಬಾರಿ ಬಂದು ಹೋದವ ಮತ್ತೆ ವಾಪಸ್ಸು ಬರಲೇ ಇಲ್ಲ. ಅಲ್ಲಿಯೇ ಮದುವೆಯಾಗಿ ಸೆಟ್ಲ್ ಆದ ಆತ ಇವರನ್ನು ಹೇಗೆ ಮರೆತನೋ, ಅದ್ಯಾವ ಮನಸ್ಸು ಮರೆಯುವಂತೆ ಮಾಡಿತೋ ಇದುವರೆಗೂ ತಿಳಿದಿಲ್ಲ. ಸದ್ಯ ಸರ್ಕಾರದಿಂದ ಬರುವ 500 ರೂಪಾಯಿ ಮಾಸಾಶನದಿಂದ ಜೀವನ ದೂಡುತ್ತಿದ್ದಾರೆ. ಇªರು ಮಾತ್ರಾ ಇಂದಿಗೂ ಅವನ ಬರುವಿಕೆಗೆ ಕಾಯುತ್ತಲೇ ಇದ್ದಾರೆ. ಅಮೇರಿಕಾದಂತ ದೊಡ್ಡ ಕಂಟ್ರಿಯ ಜನರಿಗೆ ಮೆಡಿಸಿನ್ ಕೊಡುವ, ಖಾಯಿಲೆ ಗುಣಪಡಿಸುವ ಆತನಿಗೆ ತನ್ನ ತಂದೆ ತಾಯಿ ಇಲ್ಲಿ ಅನಾರೋಗ್ಯದಿಂದ, ನಿರಾಶಾಭಾವದಿಂದ, ಹೊಟ್ಟೆಗೂ ಹಿಟ್ಟಿಲ್ಲದೇ ಬದುಕುತ್ತಿರುವುದು ಕಾಣದೇ ಹೋಗಿದೆ!?.
ಇದು ಓನ್ಲಿ ಸ್ಯಾಂಪಲ್ ಅನಿಸುವ ಸ್ಟೋರಿ ಅಷ್ಟೇ. ಇದೇ ರೀತಿಯ ಇನ್ನೆಷ್ಟೋ ಸಮಸ್ಯೆಗಳು, ಕತೆಗಳು ನಮ್ಮೊಳಗೆ ಇವೆಯೋ ಪಟ್ಟಿ ಮಾಡುತ್ತಾ ಹೋದರೆ ಅಂತ್ಯವೇ ಕಾಣಲ್ಲ ಬಿಡಿ. ಸಮಾಜ ಯಾಕೆ ಹೀಗೆ ಆಗ್ತಿದೆ!?, ಸಾಮಾಜಿಕ ಸಂಬಂಧಗಳು ಯಾಂತ್ರೀಕೃತವಾಗುತ್ತಿವೆಯಾ? ಹಣದ ಮೋಹ ಸಂಬಂಧಗಳ ಮೌಲ್ಯವನ್ನು ಮರೆಯುತ್ತಿದೆಯಾ? ಜೀವವನ್ನೇ ಇತ್ತು ಜೀವ ನೀಡಿರುವ ಹೆತ್ತವರ್ಯಾಕೆ ನಮಗೆ ಭಾರವಾಗುತ್ತಿದ್ದಾರೆ!?. ಚಿಕ್ಕಂದಿನಲ್ಲಿ ಮಲಗಲು ಹಾಸಿಗೆಯಿಲ್ಲದಿದ್ದರೂ ಹೊದೆಯಲು ಬೆಡ್ ಶೀಟ್ ಇಲ್ಲದಿದ್ದರೂ , ಅಪ್ಪನ ಪಂಚೆಯನ್ನೋ, ಅಮ್ಮನ ಸೆರಗನ್ನೋ ಎಳೆದು ಹೊದ್ದು ಮಲಗಿದ್ದ ಮಕ್ಕಳಿಗೆ ಬೆಳೆದು ದೊಡ್ಡವರಾದ ಮೇಲೆ ಅರಮನೆಯಂತ ಬಂಗಲೆಯಲ್ಲಿ ವಾಸಿಸುತ್ತಿರುವಾಗ ತಂದೆ ತಾಯಿಯನ್ಯಾಕೆ ವೃದ್ದಾಶ್ರಮದ ಗೋಣಿಚೀಲದಲ್ಲಿ ಮಲಗಿಸಬೇಕನಿಸುತ್ತೆ!?, ಮಾನವೀಯತೆಯ ಮೌಲ್ಯ ನಮಗಿಲ್ವಾ!? ಅಥವಾ ಭಾವನೆ ಬಿಕಾರಿಯಾಗಿದೆಯಾ!? ತಿಳಿಯುತ್ತಿಲ್ಲ. ನೀವು ಸ್ವಲ್ಫ ಯೋಚಿಸಿ...
ವರ್ಷವಿಡೀ ಒಂದೇ ಮಾಸಿದ ಸೀರೆ ಉಟ್ಟರೂ, ಯಾವತ್ತೂ ಸಿಡುಕದೆ, ಚಳಿಗಾಲದ ಚಳಿಯಲ್ಲಿ ಮಗು ನಡುಗುವಾಗ ಅದೇ ಮಾಸಿದ ಸೀರೆಯಿಂದ ತನ್ನಪ್ಪುಗೆಯಲ್ಲೇ ಸುತ್ತಿ, ಬಿಸಿ ಉಸಿರಿನಿಂದ ಚಳಿಯನ್ನು ಬಡಿದೊಡಿಸಿದ ಅಮ್ಮನ ನೆನಪು ಬೆಳೆದು ದೊಡ್ಡವರಾದ ಮೇಲೆ ಯಾಕೆ ಮನಪಟಲದಲ್ಲಿ ಮೂಡುವುದಿಲ್ಲ. ಕೂಡಿಟ್ಟ ಅಷ್ಟು ದುಡ್ಡನ್ನು ಅನಾರೋಗ್ಯದ ಸಂಧರ್ಭ ಖಾಲಿ ಮಾಡಿದರೂ ಸಾಕಾಗದೆ ಇದ್ದಾಗ, ಕೈ ತುಂಬ ಸಾಲ ಮಾಡಿ ಹಗಲಿರುಳು ದುಡಿದು ದೇವರನ್ನು ಪ್ರಾರ್ಥಿಸಿ ಹರಕೆ ಹೊತ್ತುಕೊಳ್ಳುವ ತಂದೆಯ ಮಮತೆ ಮರೆಯಲು ಮನಸ್ಸಾದರೂ ಹೇಗೆ ಬರುತ್ತಿದೆಯೋ ಅರಿಯೋದೆ ಕಷ್ಟವಾಗಿದೆ.
ಒಂದು ತಿಳಿದುಕೊಳ್ಳಿ  ಹೆತ್ತವರಿಗೆ ಇಳಿವಯಸ್ಸಲ್ಲಿ ಬೇಕಾಗಿರುವುದು ತಮ್ಮ ಕರುಳಬಳ್ಳಿಯ ಪ್ರೀತಿ, ವಾತ್ಸಲ್ಯ, ಮತ್ತು ಮಮತೆ ಅಷ್ಟೆ. ಮಕ್ಕಳ ಅರಮನೆ, ಆಡಂಬರ ಐಶ್ವರ್ಯ, ಫಿಜಾ-ಬರ್ಗರ್, ಬಿರಿಯಾನಿಗಳಲ್ಲ. ನಮ್ಮ ಪೂರ್ವಜರ ಮನೆಗಳು ಅವಿಭಕ್ತ ಕುಟುಂಬದಲ್ಲೇ ಕೂಡಿದ್ದರಿಂದ ನಮ್ಮ ತಂದೆ ತಾಯಿಗಳು ಹೆಚ್ಚಾಗಿ ಅಂತಹ ವಾತಾವರಣದಲ್ಲೇ ಬೆಳೆದಿರುತ್ತಾರೆ ಅವರಿಗೆ ಒಂಟಿತನದಲ್ಲಿ ಬದುಕಲು ಬಿಟ್ಟರೆ ಅದು ಅಸಾಧ್ಯ. ಮನೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಇದ್ದರೆ ಅವರ ಜೊತೆಗೂಡಿ ತಮ್ಮ ವೃದ್ದಾಪ್ಯವನ್ನು ಮರೆತು ಯವೌನದ ದಿನಗಳಿಗೆ ತಿರುಗಿ ನೋವನ್ನು ಮರೆತು ಸುಖಿಯಾಗಿರುತ್ತಾರೆ. ಮೊಮ್ಮಕ್ಕಳ ಆಟ ಪಾಠ ಮತ್ತು ಒಡನಾಟಗಳಲ್ಲಿ ಮಗದೊಮ್ಮೆ ಬದುಕಿನ ವಸಂತವನ್ನು ಪಡೆಯುತ್ತಾರೆ. ಒಂದು ನೆನಪಿಡಿ ಮಿತ್ರರೇ, ಬಾಳಿನ ಮುಸ್ಸಂಜೆಯ ಹೊತ್ತಲ್ಲಿ ಬೇಕಿರುವುದು ಬೋಗಾಭೋಗಗಳಲ್ಲ ಬದಲಾಗಿ ಕುಟುಂಬ ಭದ್ರತೆ ಮತ್ತು ನೆಮ್ಮದಿ. ಅದನ್ನು ನೀಡಿಲ್ಲವಾದರೆ ಅಂತಹ ಮಕ್ಕಳಿಂದ  ಸಮಾಜಕ್ಕೆ ಪ್ರಯೋಜನವಿಲ್ಲ, ಹೀಗೆ ಸಾಗಿದರೆÉ ಸಮಾಜದ ಅಧಃಪತನ ತಪ್ಪಿದಲ್ಲ.
ನಿಮಗೆ ಗೊತ್ತಾ!?...  ಪುಟ್ಟದಾಗಿ ಬಂದ ಈ ಜೀವಕೆ, ಪುಟಗಟ್ಟಲೇ ವಿದ್ಯೆಯ ಕೊಟ್ಟು, ಪ್ರಪಂಚಕ್ಕೆ ಪರಿಚಯಿಸುವ ಪ್ರಸ್ತಾವನೆ ತಂದೆಯಾದರೆ, ನೀರಿಲ್ಲದ ಈ ಬೇರಿಗೆ ನೀರುಣಿಸಿ , ನಯವಿನಯವ ತಿಳಿಪಡಿಸಿ ನಲ್ಮೆಯ ನಲಿವನ್ನು ಉಣಬಡಿಸಿ ಸಾರ್ಥಕತೆಯ ಜೀವನ ಕೊಡುವವಳೆ ತಾಯಿ. ಅಂತಹವರನ್ನು ದೇವರಂತೆ ಪೂಜಿಸಿ ಆರಾಧಿಸದರೆ ಪುಣ್ಯ ಬರುತ್ತದೆಯೇ ಹೊರತು ಮನೆಯಿಂದ ಹೊರಗಟ್ಟಿದರೆ ಸುಖಿಯಾಗುವೆ ಎನ್ನುವ ಗೊಡ್ಡು ನಂಬಿಕೆಯಿದ್ದರೆ ಬಿಟ್ಟು ಬಿಡಿ. ತಂದೆ ತಾಯಿಯರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಸಿಕ್ಕವನು ನಿಜವಾಗಿಯೂ ಪುಣ್ಯವಂತ.  ಈ ಮೇಲೆ ಹೇಳಿರುವ ಎರಡು ಉದಾಹರಣೆಯನ್ನು ದೀರ್ಘವಾಗಿ, ಆಳವಾಗಿ ಅರಿಯಬೇಕಾದರೆ ಒಮ್ಮೆ ನಿಮಗೆ ಹತ್ತಿರವಿರುವ ಅನಾಥಾಶ್ರಮಗಳಿಗೆ ಭೇಟಿ ಕೊಡಿ. ಅಲ್ಲಿ ಸಿಗುವ ಯಾರಾದರೂ ಒಬ್ಬರನ್ನು ಕುಳ್ಳಿರಿಸಿಕೊಂಡು ನಿಮ್ಮ ನೋವೇನು? ಎಂದು ಕೇಳಿ, ತಮ್ಮ ಇಳಿವಯಸ್ಸಿನಲ್ಲೂ ಅದುಮಿಟ್ಟುಕೊಂಡು ಬದುಕುತ್ತಿರುವ ಅವರ ನೋವು ಸಂಕಟವನ್ನೆಲ್ಲಾ ಒಮ್ಮೆ ಕೇಳಿದರೆ ನಿಜವಾಗಿಯೂ ಪ್ರಪಂಚ ಇಷ್ಟೊಂದು ಕೆಟ್ಟದಾಗಿದೆಯಾ ಎಂದು ಅನ್ನಿಸದಿರದು.
                    ಇಲ್ಲಿ ಪ್ರತಿಯೊಂದಕ್ಕೂ ಬೆಲೆಯಿದೆ ಆದರೆ ಮಾನವನ ಸಂಬಂಧಗಳಿಗೆ ಇಲ್ಲ. ಇಂಗ್ಲೀಷ್ ಸಂಸ್ಕøತಿ ನಮಲ್ಲೂ ಅಗಾಧವಾಗಿ ಲಗ್ಗೆ ಇಟ್ಟು ಕೆಡಿಸಲು ಇನ್ನೇನೂ ಬಾಕಿ ಇದೆ ಎನ್ನುವಷ್ಟು ಹದಗೆಡಿಸಿದೆ. ಒಟ್ಟಿನಲ್ಲಿ ಕರ್ಮದ ಭೂಮಿ ಕೆಟ್ಟ ಕರ್ಮದ ಕಡಲಾಗಿ ತೆರೆಕಾಣುತ್ತಿದೆ. ಏನೆ ಇರಲಿ ಹಿಂದಿನ ನಡೆ ನುಡಿಗಳಲ್ಲಿ ನಾವೆಷ್ಟೇ ಬದಲಾವಣೆ ಮಾಡಿಕೊಂಡರೂ, ನಮ್ಮ ಕರ್ಮ ಫಲಗಳಿಗೆ ಯಾವ ಬದಲಾವಣೆಯೂ ಇರುವುದಿಲ್ಲ. ನೀನೆನೂ ಮಾಡುತ್ತೀಯಾ? ನೀನದನ್ನೇ ಪಡೆಯುತ್ತೀಯಾ!! ಅದು ಇಲ್ಲಿಯೇ ಪಡೆದುಕೊಂಡೆ ಹೋಗುತ್ತೀಯಾ!!! ಅಷ್ಟೆ... ನಮ್ಮ ಮುಂದೆ ಅನೇಕ ದೇವರು ಇರಬಹುದು. ಆದರೆ ಕಣ್ಮುಂದೆ ಇರುವ ಒಂದೇ ದೇವರೆಂದರೆ ಅದು ನಮ್ಮ ಅಪ್ಪ ಅಮ್ಮ ಮಾತ್ರಾ... ಎಂಥಾ ಸಂಧರ್ಭದಲ್ಲೂ ಅವರಿಗೆ ನೋವು ಕೊಡೊ ಕೆಲಸಕ್ಕೆ ಕೈ ಹಾಕಬೇಡಿ. ಇಷ್ಟು ದಿನ ಪಾಪದಲ್ಲೇ ಕರ್ಮದ ಕಡಲು ಹರಿಸಿದ್ದರೆ ಇನ್ನಾದರೂ ಎದ್ದೇಳಿ... ಪುಣ್ಯವಂತರಾಗೋಣ...ಹಾಗಂತ ಎಲ್ಲರೂ ತಪ್ಪು ಮಾಡುತ್ತಿದ್ದಾರೆ ಎನ್ನುವುದು ನನ್ನ ವಾದವಲ್ಲ. ಮಾಡಿರುವವರು ಅವರವರೇ ಅರಿತುಕೊಳ್ಳಬೇಕು ನಮ್ಮ ಆಶಾವಾದ ಎಷ್ಟು ನಿಜವಾಗಿದೆ ಮತ್ತು ಎಷ್ಟು ನಿರೀಕ್ಷಣಾ ರಹಿತವಾಗಿದೆ ಎಂದು ಮನನ ಮಾಡಿಕೊಳ್ಳಬೇಕು. ಒಂದಂತು ನಿಜ!!, ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಅಸಹನೆ, ಧ್ವೇಷ ವಂಚನೆಗಳಿಗೆ ಮರೆಯಾಗುತ್ತಿರುವ ಮೌಲ್ಯ ಶಿಕ್ಷಣದ ಕೊರತೆ ಒಂದು ಕಡೆಯಾದರೆ, ವ್ಯಾಪಾರೀಕರಣದ ಇಂದಿನ ಶಿಕ್ಷಣ ಪದ್ದತಿಯಲ್ಲಿ ಕೇವಲ ಹಣ ಗಳಿಕೆ ಮತ್ತು ಉನ್ನತ ಹುದ್ದೆಗಳನ್ನು ಪಡೆಯುವ ಕುರಿತು ಭೋಧಿಸಲಾಗುತ್ತಿರುವುದು ಇನ್ನೊಂದು ಕಾರಣ. ಮಾನವೀಯ ಸಂಬಂಧಗಳ ಅಡಿಪಾಯವನ್ನು ಗಟ್ಟಿಗೊಳಿಸುವ ಮೌಲ್ಯ ಶಿಕ್ಷಣವನ್ನು ಯಾರೂ ನೀಡುತ್ತಿಲ್ಲ. ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ ಇಂದಿನ ಜೀವನ ಪದ್ದತಿ ಬದಲಾಗಬೇಕಿದೆ. ಭೋಗ ಸಂಸ್ಕøತಿಯಿಂದ ಹೊರಬರಬೇಕಿದೆ. ಹಣ ಗಳಿಸುವ ಶಿಕ್ಷಣದ ಬದಲಾಗಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಭಾರತೀಯ ಸನಾತನ ಸಂಸ್ಕøತಿಯನ್ನು, ಅದರ ಅಗತ್ಯವನ್ನು, ಶ್ರೇಷ್ಠತೆಯನ್ನು ಕಲಿಸಬೇಕಿದೆ, ಕಲಿಯಬೇಕಿದೆ...

ಸಿರಿ ಬುಲೆಟ್ - ಉಗ್ರವಾದದ ಭೀತಿಯಲ್ಲಿ ಭಾರತ...ಭಾರತದಲ್ಲಿ ಬೇರು ಬಿಡುತ್ತಿದ್ದಾರೆ ಐಸಿಸ್ ಉಗ್ರರು...
ಎನ್‍ಐಎ ಯಿಂದ ಬೆಚ್ಚಿಬೀಳಿಸುವ ಮಾಹಿತಿ.
30 ಸಾವಿರ ಭಾರತೀಯ ಯುವಕರು ಐಸಿಸ್ ಸೇರಲು ಉತ್ಸುಕ...
ಈ ಹಣೆಬರೆಕ್ಕೆ ಹೊಣೆಯಾಗುವವರ್ಯಾರು!??.


                     ‘ಉಗ್ರ’ವಾದ ಎನ್ನುವುದು ಮಾನವ ಕುಲಕ್ಕೆ ಅಂಟಿದ ಶಾಪ. ಅದು ನಾಗರಿಕಾ ಸಮಾಜ ನೆಮ್ಮದಿಯಿಂದಿರಲು ಬಿಡದ ಒಂದು ಬಹುರೂಪಿ ಬಾಹು. ‘ಕೊಲ್ಲು’ ಅಥವಾ ‘ಕೊಲ್ಲಲ್ಪಡು’ ಎಂಬ ತತ್ವಕ್ಕೆ ಪ್ರಾಧಾನ್ಯತೆ ನೀಡುವ ಉಗ್ರವಾದ ಇಂದು ತನ್ನ ಧೈತ್ಯ ಹಿಡಿತದ ಮೂಲಕ ಇಡೀ ವಿಶ್ವವನ್ನಲ್ಲದೇ, ಭಾರತವನ್ನೂ ಬಿಡದೆ ಬೆಚ್ಚಿ ಬೀಳಿಸುವಂತಹ ದುಷ್ಕøತ್ಯಗಳನ್ನು ಎಸಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ. ಇದೀಗ ದೇಶವ್ಯಾಪಿ ಹರಡುತ್ತಿರುವ ಇದು ಅಮಾಯಕ ಜನರ ಜೀವ ಮತ್ತು ಆಸ್ತಿ ಪಾಸ್ತಿಗಳ ಮಾರಣಹೋಮ ಮಾಡುತ್ತಿರುವುದು ಶೋಚನೀಯ ಎನಿಸುತ್ತದೆ.
ಉಗ್ರವಾದವು ಜಾತಿ ವಾದದಿಂದಲೋ!, ಒಂದು ರಾಷ್ಟ್ರದ ಪ್ರಗತಿ ಇನ್ನೊಂದು ರಾಷ್ಟ್ರದ ಕೋಮುವಾದಿಗಳಿಗೆ ಸಹಿಸಲಾಗದೆಯೋ!, ನೊಂದ ಜೀವನ ಬೇಸತ್ತು ಒಳಗಿನ ಉರಿ ಕೋಪವನ್ನು ಧಮನ ಮಾಡಿಕೊಳ್ಳುವ ಸಲುವಾಗಿಯೋ!, ಸಿಗದ ಸ್ವಾತಂತ್ರ್ಯ ಪಡೆಯಲೋಸುಗವಾಗಿಯೋ!!, ಸದಾ ಒಂದಿಲ್ಲೊಂದು ಬೇಡಿಕೆಯನ್ನಿಟ್ಟು ಚಾಕು, ಚೂರಿ, ಬಂದೂಕು, ಬಾಂಬ್ ಹಿಡಿದು ನಿಷ್ಕರುಣೆ ತಲೆದೋರಿಸಿಕೊಂಡು ರಕ್ತದೋಕುಳಿ ಹರಿಸುತ್ತಲೇ ಎಲ್ಲರನ್ನು ಭಯಪಡಿಸುತ್ತಿದೆ.
ಈ ಹಿಂದೆ ಅನೇಕ ಉಗ್ರಗಾಮಿ ಸಂಘಟನೆಗಳು ರೂಪ ತಳೆದು, ಅಟ್ಟಹಾಸ ಮೆರೆದು ಕಳಚಿ ಹೋಗಿದ್ದು, ಇದೀಗ ಎಲ್ಲವೂ ಒಂದು ಹಂತಕ್ಕೆ ನಿರಾಳವಾಗಿದೆ ಎನ್ನುವಾಗಲೇ ಮತ್ತೊಂದು ಉಗ್ರ ಸಂಘಟನೆ ತಲೆಯೆತ್ತಿ ನಿಂತಿದೆ.  ಅದರಲ್ಲೂ ನಮ್ಮ ಭಾರತಕ್ಕೂ ಆ ಸಂಘಟನೆ ಕಾಲಿಟ್ಟು ಇಲ್ಲಿನ ಜನರನ್ನೂ ತನ್ನತ್ತ ಸೆಳೆದುಕೊಂಡು ಅತೀ ಕಡಿಮೆ ಅವಧಿಯಲ್ಲಿ ಕೆಡವಲು ಕಷ್ಟವೇನೋ ಎಂಬಂತೆ ಬಲವಾಗಿ ನಿಂತಿದೆ ಎಂದರೆ ನೀವು ನಂಬಲಿಕ್ಕಿಲ್ಲ...
           ಎಸ್!... ಅದುವೇ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆ. ಅಮೇರಿಕಾದಂತ ದೊಡ್ಡ ರಾಷ್ಟ್ರಕ್ಕೆ ತಲೆನೋವು ನೀಡಿರುವ ಈ ಉಗ್ರರ ಕೃತ್ಯಗಳು ನಮ್ಮಲ್ಲಿಲ್ಲ ಬಿಡು ಎಂದು ಬೆಚ್ಚಗೆ ಕುಳಿತು ಎಲ್ಲೋ ತಲೆ ಕತ್ತರಿಸಿರುವ, ಬಾಂಬ್ ಸಿಡಿಸಿರುವ ದೃಶ್ಯಗಳನ್ನು ಕಣ್ಣು ಮುಚ್ಚಿ ನೋಡಿಕೊಂಡು ಸಮ್ಮನಾಗಿದ್ದೆವು. ನಾವು ಭಾರತೀಯರಲ್ಲವೇ ನಮ್ಮ ಮನೆಯ ದೋಸೆ ತೂತಾದರೂ ನಮಗೆ ತಿಳಿಯಲ್ಲ, ಬೇರೆಯವರ ಮನೆಯ ದೋಸೆ ತೂತಾಗಿದ್ದರ ಬಗ್ಗೆಯೇ ಮಾತಾಡುವುದು ಜಾಸ್ತಿ. ಇದು ಕೂಡ ಹಾಗೆ ಆಗಿದೆ ಅನ್ನಿಸುತ್ತಿದೆ. ಅವರ ಸಂಘಟನೆ ಬೆಳೆದು ಎಲ್ಲೋ ಪ್ರತಾಪ ತೋರುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕುಳಿತು ಇದೀಗ ನಮ್ಮೂರಲ್ಲೇ ಉಗ್ರ ಸಂಘಟನೆ ಬಲವಾಗಿ ನಿಂತಿದೆ, ನಮ್ಮನ್ನು ನುಂಗುವುದು ಗ್ಯಾರಂಟಿ ಎನ್ನುವಾಗಲೇ ತಲೆಯಲ್ಲಿ ಎದ್ದೇಳುವ ಅಲಾರಾಂ ಗೊಣಗಿದ್ದು ನೋಡಿ!!.
        ಎಲ್ಲೋ ಇದ್ದ ಐಸಿಸ್ ಉಗ್ರರು ಇದೀಗ ಭಾರತವನ್ನೂ ಟಾರ್ಗೆಟ್ ಮಾಡಿದ್ದು, ಮೊನ್ನೆ ಮೊನ್ನೆ ನಡೆದ ಗಣರಾಜ್ಯೋತ್ಸವದ ಮುನ್ನಾದಿನ ನಡೆದ ವಿಶೇಷ ಕಾರ್ಯಚರಣೆಯಲ್ಲಿ ಬಂಧಿತರಾಗಿರುವವರು ಭಾರತದಲ್ಲಿ ಐಸಿಸ್ ಸಂಘಟನೆಯ ಪ್ರಮುಖರು ಎನ್ನುವ ಅಘಾತಕಾರಿ ಮಾಹಿತಿಯನ್ನು ನಮ್ಮ ರಾಷ್ಟ್ರೀಯ ತನಿಖಾ ತಂಡ (ಎನ್‍ಐಎ)ದ ಅಧಿಕಾರಿಗಳು ಹೊರಹಾಕಿದಾಗಲೇ ತಿಳಿದದ್ದು ಅವರು ನಮ್ಮೊರೆಗೂ ಬಂದಿದ್ದಾರೆಂದು!. ಅಷ್ಟೇ ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ ಐಸಿಸ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಜೊತೆಯಾಗಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿತ್ತು  ಎನ್ನುವುದೂ ಬಹಿರಂಗವಾಗಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿಗಳ ಮೇರೆಗೆ, ಆರು ರಾಜ್ಯಗಳಲ್ಲಿ ಏಕಕಾಲಕ್ಕೆ  ದಾಳಿ ನಡೆಸಿದ್ದ ಎನ್‍ಐಎ ಅಧಿಕಾರಿಗಳು ಐಸಿಸ್ ಜೊತೆಗೆ ನಂಟು ಹೊಂದಿದ ಆರೋಪದ ಮೇಲೆ ಒಟ್ಟು 14 ಜನರನ್ನು ಬಂದಿಸಿದ್ದರು. ಈ ಆರೋಪ ಇದೀಗ ನಿಜವಾಗಿದ್ದು, ಬಂಧಿತರಿಗೆ ಐಸಿಸ್ ಜೊತೆಗೆ ನಂಟಿರುವುದು ಖಚಿತವಾಗಿದೆ. ಬಂಧಿತರು ಐಸಿಸ್ ಅಂಗ ಸಂಸ್ಥೆ ‘ಅನ್ಸರ್ ವುಲ್ ತವಾಹಿದ್ ಫಿ ಬಿಲಾಲ್ ಅಲ್ ಹಿಂದ್’ (ಎಯುಪಿ) ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಎಂದು ತಿಳಿದುಬಂದಿದೆ. ಜೊತೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿ, ಶರಿಯಾ ಕಾನೂನು ತರಲು ಸಂಚು ರೂಪಿಸಿದ್ದರು ಎಂಬ ಅಂಶ ಕೂಡ ಬಟ್ಟಂಬಯಲಾಗಿದೆ.
ತಿಂಗಳ ಹಿಂದೆ ಐಸಿಸ್ ಉಗ್ರರನ್ನು ಮಣಿಸಲು ಅಮೇರಿಕಾ, ಬ್ರಿಟನ್, ಫ್ರಾನ್ಸ್ ಹಾಗೂ ಸೌದಿ ಅರೇಬಿಯಾದಂಥ ಮುಸ್ಲಿಂ ರಾಷ್ಟ್ರಗಳು ಒಂದುಗೂಡಿದ್ದು, ಅದರೊಂದಿಗೆ ಭಾರತವೂ ಕೂಡ ಕೈಜೋಡಿಸುವುದಾಗಿ ಹೇಳಿಕೆ ನೀಡಿತ್ತು. ಹೇಳಿಕೆಯ ಮೊದಲೇ ಉಗ್ರರು ನಮ್ಮದೇಶವನ್ನು ಟಾರ್ಗೆಟ್ ಮಾಡಿದ್ದು, ಈಗಾಗಲೇ ಬೀಡುಬಿಟ್ಟು, ದೇಶದ ಅನೇಕ ಯುವಕರನ್ನು ಒಟ್ಟುಗೂಡಿಸಿ ತಂಡ ಕಟ್ಟಿ ವಿದ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದೆ ಎನ್ನುವುದನ್ನು ಕೇಳಿ ರಕ್ಷಣಾ ಇಲಾಖೆ ಇದೀಗ ನಿದ್ದೆಗೆಟ್ಟಿದೆ.
ನಮ್ಮ ದೇಶದ ಅಲ್ಪಸಂಖ್ಯಾತ ಸಮುದಾಯಯದ ಹಲವಾರು ಯುವಕರಿಗೆ ಐಸಿಸ್ ಉಗ್ರ ಸಂಘಟನೆಯಿಂದ ಭಾರೀ ಆಮಿಷಗಳು ಬರುತ್ತಿದ್ದು, ಸಂಘಟನೆಗೆ ಸೇರುವಂತೆ ಉತ್ತೇಜಿಸಲಾಗುತ್ತಿದೆ. ಈ ಬಗ್ಗೆ ಸಂಶಯಾಸ್ಪದವಾಗಿ ಮುಂಬೈನ ಕಲ್ಯಾಣ್ ಪ್ರದೇಶದ ನಾಲ್ವರು ಇಂಜಿನಿಯರ್ ವಿದ್ಯಾರ್ಥಿಗಳು ಹಾಗೂ ಇತರ ಏಳು ಮಂದಿ ಭಾರತೀಯ ಯುವಕರು 2015 ರಲ್ಲೇ ಸಿಕ್ಕಿ ಹಾಕಿಕೊಂಡಿದ್ದರು. ಆದರೆ ನಂಬಿಕೆ ಮಹಾಶಯರಾದ ನಾವುಗಳು ಹುಡುಗರು ಅಮಾಯಕರು, ಹಾಗೇನಿಲ್ಲ ಎಂದು ನಂಬಿರಲಿಲ್ಲ. ಆದರೆ ಈಗ ಹೌದಿರಬಹುದೇನೋ ಅನಿಸುತ್ತಿದೆ ಆದರೆ ಪ್ರಯೋಜನವಿಲ್ಲ ಐಸಿಸ್ ಎಂಬ ಬೀಜ ಮೊಳಕೆಯೊಡೆದು ಮgವಾಗಿ ಗಟ್ಟಿತನದಲಿ ಬೆಳೆದು ನಿಂತಾಗಿದೆ.
           ವರ್ಷದ ಹಿಂದೆ  ಅಮೇರಿಕಾದ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಐಸಿಸ್ ಉಗ್ರರ ವಿರುದ್ಧ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಆಕ್ರೋಶಗೊಂಡು ಐಸಿಸ್ ಉಗ್ರರ ಹುಟ್ಟಡಗಿಸುತ್ತೇನೆಂದು ಬೊಬ್ಬಿರುವಾಗಲೇ ವಿಶ್ವವ್ಯಾಪಿ ತನ್ನ ಕಬಂಧ ಬಾಹುವನ್ನು ಚಾಚಿತ್ತು ಈ ಉಗ್ರಗಾಮಿ ತಂಡ. ಅದಾದ ನಂತರ ಅಲ್ಲಿಷ್ಟು ಜನ, ಇಲ್ಲಿಷ್ಟು ಜನ, ಅಲ್ಲಿಷ್ಟು ಹೆಂಗಳೆಯರು, ಇಲ್ಲಿಷ್ಟು ಮಕ್ಕಳ ತಲೆ ಕತ್ತರಿಸಿ, ನೇಣಿಗೇರಿಸಿ, ಬಾಂಬ್ ಸಿಡಿಸಿ ವಿಡಿಯೋ ತುಣುಕನ್ನು ಹರಿಯ ಬಿಟ್ಟು ಭಯ ಹುಟ್ಟಿಸಿದ್ದರೂ, ಇನ್ನೂ ಅವರ ಹುಟ್ಟಡಗಿಸುವ ಮಾತುಕತೆಗಳು ನಡೆಯುತಿವೆಯೇ ಹೊರತು ನಿರ್ದಿಷ್ಟ ಶಾಸನ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ.
            ಗುಪ್ತಚರ ಇಲಾಖೆ ನೀಡಿರುವ ಇನ್ನೊಂದು ಮಾಹಿತಿಯ ಪ್ರಕಾರ ಐಸಿಸ್ ಸೇರುವವರಿಗೆ  ಆನ್ ಲೈನ್‍ನಲ್ಲೇ ಬಾಂಬ್ ತಯಾರಿಯ ತರಬೇತಿ ನೀಡಲಾಗುತ್ತಂತೆ. ಮಹಾರಾಷ್ಟ್ರ ಎಟಿಸ್ ಈ ಮಾಹಿತಿ ನೀಡಿದ್ದು, ಐಸಿಸ್ ಜತೆ ನಂಟಿರುವ ಬಹುತೇಕರು ಬಾಂಬ್ ತಯಾರಿಯಲ್ಲಿ ನಿಪುಣತೆ ಹೊಂದಿದ್ದಾರಂತೆÉ. ಇವುಗಳ ಮೂಲಕ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎನ್ನುವುದು ವಿಚಾರಣೆಯಲ್ಲಿ  ತಿಳಿದುಬಂದಿದೆ. ಇನ್ನೊಂದು ಸ್ಪೋಟಕ ಮಾಹಿತಿಯ ಪ್ರಕಾರ, ಐಸಿಸ್ ಉಗ್ರರ ನೇಮಕಕ್ಕೆ ಸಿರಿಯಾ ಮತ್ತು ಇರಾಕ್‍ನಲ್ಲಿರುವವರಿಂದ ಸಾಧ್ಯವಾದಷ್ಟು ಹಣ ಸಿಗುತ್ತಿರಲಿಲ್ಲ. ಹೀಗಾಗಿ ಸಿಕ್ಕ ಸಿಕ್ಕವರನ್ನು ದೋಚಿ, ಹಫ್ತಾ ವಸೂಲಿ ಮಾಡಿ ಕಳ್ಳತನ ಮಾಡಿ ಎಂದು ನಾಯಕ ಮುದ್ದಾಬಿರ್ ಮುಸ್ತಾಕ್ ಶೇಖ್ ಭಾರತದಲ್ಲಿದ್ದ ಉಗ್ರರಿಗೆ ಆದೇಶ ನೀಡಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಎಲ್ಲ ಉಗ್ರ ಸಂಘಟನೆಗಳನ್ನು ಒಟ್ಟು ಗೂಡಿಸಲು ಮುದ್ದಾಬಿರ್ ಶೇಖ್ ಚಿಂತಿಸಿದ್ದ ಎನ್ನಲಾಗಿದೆ. ಈ ಮೂಲಕ  ಐಸಿಸ್ ಮೂಲ ಸಂಘಟನೆ ಹೊಂದಿರುವ ಎಲ್ಲ ಜಿಹಾದಿಗಳು ಒಟ್ಟಾಗಿ  ಕೆಲಸ ಮಾಡಬೇಕು ಎಂಬುದನ್ನು ಪ್ರತಿಪಾದಿಸುತ್ತಿದ್ದ ಎಂದು ತಿಳಿದುಬಂದಿದೆ. ಸಂಘಟನೆ ಬಲಪಡಿಸಲು ಹಣದ ಅವಶ್ಯಕತೆ ಇದೆ ಇದಕ್ಕಾಗಿ ನಿಮ್ಮಲ್ಲಿರುವ ಹಣ ನೀಡಿ, ಜೊತೆಗೆ ನಿಮಗೆ ಹೇಗೆ ಸಾಧ್ಯವಾದರೂ ಸಂಪಾದನೆ ಮಾಡಿ ಎಂದು ಹೇಳಿದ್ದ. ಅಲ್ಲದೇ ತನ್ನ ಬಳಿಯಿದ್ದ 1.4 ಲಕ್ಷ ಹಣವನ್ನು  ಮುದ್ದಾಬಿರ್ ಐಸಿಸ್ ಸಂಘಟನೆಗೆ ಖರ್ಚು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
           ಈ ಸಂಘಟನೆಯಲ್ಲಿ ಬಹುತೇಕ ಯುವಕರೇ ಇದ್ದು, ಹೊಸ ಸೇರ್ಪಡೆಗೆ ಈಗಾಗಲೇ 30,000 ಭಾರತೀಯ ಯುವಕರು ಉತ್ಸುಕ ತೋರಿದ್ದಾರೆಂದು ಹೇಳಲಾಗಿದೆ. ಭಾರತದಲ್ಲಿ ಕೆಲಸ ಮಾಡುವ ಐಸಿಸ್ ಹುಡುಗರನ್ನು ವಿದೇಶದಿಂದಲೇ ನಿಯಂತ್ರ¸ಲಾಗುತ್ತಿದ್ದು, ಇಲ್ಲಿರುವ ಉಗ್ರರು ಮಾಹಿತಿ ರವಾನಿಸಿದರೆ ವಿದೇಶದಲ್ಲಿ ದಾಳಿಯ ಸಂಚು ರೂಪುಗೊಳ್ಳುತ್ತಂತೆ. ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವುದರಿಂದ ಐಸಿಸ್ ಸಂಘÀಟನೆ ಬೆಳೆಸುವ ಉದ್ದೇಶ ಹೆಚ್ಚಾಗಿಯೇ ಹೊಂದಲಾಗಿದೆ. ಐಸಿಸ್ ಸೇರಿದ ತಕ್ಷಣ ವಿಧ್ವಂಸಕ ಕೃತ್ಯ ಮಾಡಲು ತಿಳಿಸಿಲ್ಲ, ಬದಲಾಗಿ ಜನಬಲ ಮಾಡಿ ಆನಂತರ ಉಳಿದ ಕಾರ್ಯಕ್ಕೆ ಸಂಚು ರೂಪಿಸಲಾಗಿದೆ ಎಂದು ಸೆರೆ ಸಿಕ್ಕ ಉಗ್ರರಿಂದ ತಿಳಿದುಬಂದಿದೆ.
         ಅಧಿಕ ಪ್ರಮಾಣದಲ್ಲಿ ಐಸಿಸ್ ಸೇರಲು ಉತ್ಸುಕತೆ ತೋರಿಸಿರುವ ಯುವಕರು ಯಾಕೆ ಈ ರೀತಿ ನಿರ್ಣಯ ತೆಗೆದುಕೊಂಡಿದ್ದಾರೆನ್ನುವ ಜಾಡು ಹಿಡಿದರೆ ನಮ್ಮ ದೇಶದಲ್ಲಿ ಸಿಗುವ ಸಂಬಳವೇ ಕಾರಣ ಎನ್ನಲಾಗಿದೆ. ದೇಶ ಬಡತನ, ಭ್ರಷ್ಟಾಚಾರ ಇತ್ಯಾದಿಗಳಿಂದ ಈಗಾಗಲೇ ಬರಡಾಗಿದ್ದು, ಈ ಹಿಂದಿನ ಉಗ್ರರ ಹೊಡೆತಕ್ಕೆ ಸಿಲುಕಿ ನಡುಗಿ ಹೋಗಿರುವಾಗಲೇ ಇದೀಗ ಐಸಿಸ್ ಎನ್ನುವ, ಬೆಚ್ಚಿಬೀಳಿಸುವ ಉಗ್ರ ಸಂಗಟನೆಯಿಂದ ಮತ್ತಷ್ಟು ಫಜೀತಿಗೆ ಸಿಲುಕಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿ ಭಾರತೀಯ ಪ್ರಜೆಯೂ ಯೋಚಿಸಬೇಕಿದೆ. ಕೇವಲ ಬಡತನ, ಹಸಿವು ಇತ್ಯಾದಿ ಕಾರಣವೊಡ್ಡಿ ಉಗ್ರವಾದಕ್ಕೆ ಪ್ರೇರೆಪಣೆಯಾಗುವುದನ್ನು ನಿಲ್ಲಿಸಬೇಕಿದೆ...ಇಂದಿನ ತಲೆಮಾರು ಎತ್ತ ಸಾಗುತ್ತಿದೆ, ಏನಾಗುತ್ತಿದೆ ಎಂಬುದನ್ನು ಚಿಂತಿಸಿ.., ಹೀಗೆ ಆದರೆ ನಮ್ಮ ಮುಂದಿನ ಪೀಳಿಗೆಯ ಹಣೆಬರ ಏನಾಗಬಹುದು!? ಮತ್ತು ಅವರ ಹಣೆಬರಕ್ಕೆ ಹೊಣೆಯಾರು...!? ಎಂಬುದನ್ನು ಯೋಚಿಸಬೇಕಿದೆ.
       ಎಚ್ಚರವಹಿಸಿ, ನಾವೆಂದಿಗೂ ದೇಶ ದ್ರೋಹಿಯಾಗೋದು ಬೇಡ, ಕ್ರಾಂತಿಯಲ್ಲಿ ರಕ್ತ ನೋಡಲು ಹವಣಿಸುವುದು ಬೇಡ, ಕಷ್ಟವಿದೆಯೆಂದು ರಕ್ತಪಾತಕ್ಕೆ ಧುಮುಕಿದರೆ ನಮಗೂ ನಿದ್ರೆಯಿರದು, ಇನ್ನೊಬ್ಬರಿಗೂ ಸುಖವಿರದು...ಯುವಕರೇ ನಾವು ಎದ್ದೇಳಬೇಕಿರುವುದು ಹೊಸ ಪ್ರಭೆಯಿಂದಲೇ ಹೊರತು ಕಾಣದ ಕ್ರಾಂತಿಯಿಂದಲ್ಲ...

ಐಸಿಸ್ ಸಂಘಟನೆಯ ನೇಮಕ ಪ್ರಕ್ರಿಯೆ:
ಸಾಮಾಜಿಕವಾಗಿ ಹಿಂದುಳಿದು ನೊಂದ ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡುವುದು .
ಬಡ ಹಾಗೂ ಹಣಕಾಸಿನ ಅವಶ್ಯಕತೆ ಇರುವವರಿಗೆ ಶರಿಯಾ ಕಾನೂನಿನ ಬೋಧನೆ
ಅಂತರ್ಜಾಲ ಬಳಕೆಯ ಸಂಪೂರ್ಣ ಮಾಹಿತಿ ಇರುವ ಯುವಕರನ್ನು ಪತ್ತೆ ಹಚ್ಚುವುದು.
ಐಸಿಸ್ ಸಂಘಟನೆ ಸೇರಿದ ಮೇಲೆ ಪ್ರತ್ಯೇಕ ಕೋಣೆಗಳಲ್ಲಿ ವಾಸಕ್ಕಿಡುವುದು.
ಆ ಪ್ರತ್ಯೇಕ ಕೋಣೆಗಳಲ್ಲಿ ಐಸಿಸ್ ವಾದದ ಉಪದೇಶ ಬಿತ್ತುವುದು.
ಶಸ್ತ್ರಾಸ್ತ್ರಗಳ ಬಳಕೆ, ಬಾಂಬ್ ತಯಾರಿಕೆಯ ತರಬೇತಿ ನೀಡುವುದು
ತರಬೇತಿ ಮಧ್ಯದಲ್ಲಿ ಐಸಿಸ್ ತ್ಯಜಿಸಲು ನಿರ್ಧರಿಸಿದರೆ ಮರಣದಂಡನೆ.
ಮನಪರಿವರ್ತನೆ ಆಗಿರುವ ಬಗ್ಗೆ ಖಚಿತವಾದ ಮೇಲೆ ದುಷ್ಕತ್ಯಕ್ಕೆ ಬಳಕೆ.