Friday 6 November 2015

ಹೆಣ್ಣು-11




ಹೆಣ್ಣು ಮನುಪ್ರಣಿತ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಬೇರುಗಂಟಿದಂತೆ ಯಾವಾಗಲೂ ಪುರುಷನಿಂದಲೇ ದೌರ್ಜನ್ಯಕ್ಕೆ ಒಳಗಾಗಿ ಸಾಯುತ್ತಾಳೆ ಎನ್ನುವ ಮಾತು ಶುದ್ಧ ಸುಳ್ಳು. ಯಾಕೆಂದರೆ ಇತ್ತೀಚಿಗೆ ಅನೇಕ ಹೆಣ್ಣು ಮಕ್ಕಳು ಯಾವ ದೌರ್ಜನ್ಯವೂ ಇಲ್ಲದೇ ಸಾವನ್ನು ಕಾಣುತ್ತಿರುವುದೇ ಈ ಮಾತಿಗೆ ಕಾರಣ. ಮೊನ್ನೆ ಮೊನ್ನೆ ನಡೆದ ಒಂದು ಘಟನೆ ನಿಜಕ್ಕೂ ಈ ಮೇಲೆ ಆಡಿದ ಮಾತಿಗೆ ಕಾರಣವೆಂದು ಕಡಾಖಂಡಿತವಾಗಿ ಹೇಳುವೆ. ಆಗಿದ್ದಿಷ್ಟು...
ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಪಿ.ಯು.ಸಿ ಓದುತ್ತಿರುವ ಹುಡುಗಿಯೊಬ್ಬಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳದಿನ್ನು ಚಿಗುರುತ್ತಿರುವ ಬದುಕು. ಯಾವ ಕಷ್ಟವಾಗಲಿ, ಹಿತಶತ್ರುಗಳಾಗಲಿ, ಜೀವನದ ಸಮಸ್ಯೆಯಾಗಲಿ ಅವಳಿಗಿರಲಿಲ್ಲ. ಆದರೆ ಅವಳ್ಯಾಕೆ ಜೀವ ತೆಗೆದುಕೊಂಡಳು ಎನ್ನುವುದೇ ಎಲ್ಲರ ಯಕ್ಷ ಪ್ರಶ್ನೆ!?.
 ಸರಿ ಸುಮಾರು  ಇಪ್ಪತ್ತು ದಿನಗಳ ಬಳಿಕ ಅವಳ ಸಾವಿಗೆ, ಮಾನಸಿಕ ದೌರ್ಬಲ್ಯವೇ ಕಾರಣ ಎಂದು ಪ್ರಾಥಮಿಕ ವರದಿಯೊಂದು ತಿಳಿಸಿತು. ನಿಜಕ್ಕೂ ಇತ್ತೀಚಿಗೆ ಇಂತಹ ಘಟನೆಗಳು ಜಾಸ್ತಿಯಾಗುತ್ತಿವೆ. ಆಕೆಗೆ ಎಲ್ಲವೂ ಚೆನ್ನಾಗಿತ್ತು. ಓದುತ್ತಿರುವ ಕಾಲೇಜು, ಅಪ್ಪ-ಅಮ್ಮ ಬೆಳೆಸಿದ ರೀತಿ, ಮನೆ ಪರಿಸರ, ಗೆಳೆಯ-ಗೆಳತಿಯರು ಹೀಗೆ ಪ್ರತಿಯೊಂದು ಚೆನ್ನಾಗಿದ್ದ ಅವಳಿಗೆ ಆ ದಿನ ಸಾಯಲು ಕಾರಣವಾಗಿದ್ದು ಯಾವುದೋ ಸಣ್ಣ ಸಿಲ್ಲಿ ಮ್ಯಾಟರ್. ಅವರ ತಂದೆಯವರೇ ಹೇಳುವ ಹಾಗೆ ಡ್ರೆಸ್ ಬೇಕು ಎಂದು ಹಠ ಹಿಡಿದಿದ್ದಳಂತೆ, ಈಗ ಆಗಲ್ಲ ಸ್ವಲ್ಪ ದಿನದ ಬಳಿಕ ತೆಗೆದುಕೊಡುವೆ ಎಂದಾಗ ಕೋಪ ದುಃಖ ಎರಡನ್ನು ಉಮ್ಮಳಿಸಿಕೊಂಡ ಆಕೆ ಈ ಕೆಟ್ಟ ವರ್ತನೆ ತೋರಿದ್ದಾಳೆ.
ಯಾಕೆ ಹೀಗೆ!? ಹೆಣ್ಣಿನ ಮನಸ್ಸು ಬೆಣ್ಣೆಯಂತೆ ಎಂಬ ಮಾತಿದೆ ನಿಜ ಆದರೆ ಇಷ್ಟೊಂದು ಮೃದುವಾಗಿರುತ್ತದಾ!? ಹುಟ್ಟು ಅಂದ ಮೇಲೆ ಒಬ್ಬರಿಂದ ಒಬ್ಬರಿಗೆ  ನಾನಾ ರೀತಿಯ ವ್ಯತ್ಯಾಸಗಳಿರುವುದು ಸಹಜ. ಅದಕ್ಕಾಗಿ ನಿರಾಶವಾದಿಗಳಾಗದೇ ಎದುರಿಸುವ ಧೈರ್ಯಶಾಲಿಗಳಾಗಬೇಕು. ಜಗತ್ತು ಇಂದು ನಮಗಾಗಿ ಏನು ನೀಡದೇ ಇರಬಹುದು ಆದರೆ ಶ್ರಮಪಟ್ಟು ಜೀವನವನ್ನು ಪ್ರೀತಿಸಿ ಮುಂದೆ ಅಡಿ ಇಟ್ಟರೆ ಖಂಡಿತಾ ನಾವಂದುಕೊಂಡದ್ದನ್ನೆಲ್ಲಾ ಸಾಧಿಸಿ ಪಡೆಯಬಹುದು. ಸಮಾಜ ಬದಲಾಗುತ್ತಿದೆ ಅದರಂತೆ ನಾವು ಬದಲಾಗುತ್ತಿದ್ದೇವೆ. ಎಷ್ಟೋ ಜನ್ಮದ ಪುಣ್ಯದ ಫಲವಾಗಿ ಮನುಷ್ಯ ಜನ್ಮವನ್ನು ತಾಳುತ್ತೆವೆಂದು ಪುರಾಣದಲ್ಲೊಂದು ಮಾತಿದೆ ಅಂತಹ ಪವಿತ್ರ ಜನ್ಮವನ್ನು ಬೇಡವೆಂದು ತಿರಸ್ಕರಿಸಿಕೊಂಡು ಜೀವ ಕಳೆದುಕೊಳ್ಳುವುದು ಎಷ್ಟು ಸರಿ!?.
ಚರಿತ್ರೆಯಲ್ಲಿ ಅವಳದು ದುರವಸ್ಥೆ ಇರಬಹುದು. ಆದರೆ ಇಂತಹ ಘಟನೆಗಳೆಲ್ಲ ನಡೆಯುವುದು ಮನಸ್ಸಿನ ಅವ್ಯವಸ್ಥೆಯಿಂದಲೇ ಹೊರತು ಬೇರೆನಿಂದಲೂ ಅಲ್ಲ. ಇದು ಮನಸ್ಸಿನ ದೌರ್ಬಲ್ಯವೇ ಹೊರತು ಬೇರೆನೂ ಅಲ್ಲ. ಅವನಿಂದ-ಅವರಿಂದ ಕಿರುಕುಳ, ಅದರಿಂದ-ಇದರಿಂದ ಬೇಸರ ಎನ್ನುವ ಸಿಲ್ಲಿ ಸಿಲ್ಲಿ ವಿಷಯವನ್ನು ಬದಿಗಿಟ್ಟು ಮನ್ನಡೆಯಿರಿ. ಮನಸ್ಸಿನ ದುರ್ಬಲತೆಯನ್ನು ಸರಿದೂಗಿಸಿಕೊಂಡು ಧೈರ್ಯವಾಗಿರಿ. ನೆನಪಿಡಿ ಹೆಣ್ಮಕ್ಕಳೇ ‘ಜಗತ್ತಿನಲ್ಲಿ ಪುರುಷರಿಗಿಂತ ಮುಂದಿರುವುದು ಮಹಿಳೆಯರೇ’...

No comments:

Post a Comment