Saturday 1 October 2016

ಸಿರಿ ಬುಲೆಟ್... ಕಾವೇರಿದೆ ಕಾವೇರಿ ಕೂಗು...


* ಗೋಳು ಕೇಳುತ್ತಿಲ್ಲ...ಬರೀ ನೋವೆ ಎಲ್ಲಾ...
* ಅಂದಿನಿಂದ ಇಂದಿನವರೆಗೂ ಕರ್ನಾಟಕಕ್ಕೆ ಅನ್ಯಾಯವೊಂದೆ ತೀರ್ಪು
* ಯಾಕೆ!? ಏನು!? ಎತ್ತ!? ಬನ್ನಿ ತಿಳಿಯೋಣ...

         
     ಪ್ರತಿಭಟನೆ...ಪ್ರತಿಭಟನೆ...ಪ್ರತಿಭಟನೆ... 
ಒಮ್ಮೆ ಬಸ್ ನೌಕರರದ್ದು, ಇನ್ನೊಮ್ಮೆ ಕೂಲಿ ಕಾರ್ಮಿಕರದ್ದು, ಮಗದೊಮ್ಮೆ ಬೃಹತ್ ಮಟ್ಟದ ಕಾವೇರಿಯದ್ದು...ಈ ವರ್ಷ ಈ ರೀತಿಯ ಸ್ಟ್ರೈಕ್‍ಗಳಿಗೆ ಬರಗಾಲವೇ ಇಲ್ಲ ಎನ್ನುವಂತಾಗಿದೆ.
ಒಂದೊಂದು ಕಡೆ ಹೊತ್ತಿ ಉರಿಯಿತು, ಇನ್ನೊಂದು ಕಡೆ ಲಾಠಿ ಏಟು ಬಿತ್ತು, ಮತ್ತೊಂದು ಕಡೆ ಆ ರಾಜ್ಯದವನು ಈ ರಾಜ್ಯದವನಿಗೆ, ಇಲ್ಲಿಯವನು ಅಲ್ಲಿಯವನಿಗೆ ಮನಬಂತಂತೆ ಹೊಡೆದು ಆಕ್ರೋಶ ತೀರಿತು. 
ಈಗ ಎಲ್ಲವನ್ನು ಬದಿಗಿಟ್ಟು ದಿನದಿಂದ ದಿನಕ್ಕೆ ಕಾವೇರುತ್ತಿರುವ ಕಾವೇರಿ ನದಿ ಮತ್ತು ಹೋರಾಟದ ಹಿಂದಿರುವ ಎಲ್ಲಾ ಅಂಶಗಳ ನಡುವೆ ಒಂದು ರೌಂಡ್ ಚಲಿಸಿ ತಿಳಿದುಕೊಂಡು ಬರೋಣ. ಯಾಕೆಂದರೆ ಪ್ರತಿಭಟನೆಯೆಂದು ಮಾಡುವ ಅದೆಷ್ಟೋ ಜನರಿಗೆ ಮ್ಯಾಟರ್ ಏನೆಂದೆ ತಿಳಿದಿರುವುದು ಕಡಿಮೆ!. ಇದರ ಇತಿಹಾಸವೇನು?, ಕರ್ನಾಟಕದವರಾದ ನಾವು ಹೋರಾಟ ಯಾಕೆ ಮಾಡಬೇಕು? ನಮಗಾಗುತ್ತಿರುವ ಅನ್ಯಾಯವೇನು? ನೀರನ್ನು ಬಿಡಲಾಗದು ಎಂದು ಖಡಾಖಂಡಿತ ಯಾಕೆ ಹೇಳಬೇಕು ಇತ್ಯಾದಿಗಳನ್ನೆಲ್ಲಾ ತಿಳಿಯೋಣ ಬನ್ನಿ...
ಕಾವೇರಿ ನದಿ ನೀರು ವಿವಾದಕ್ಕೆ ಶತಮಾನಗಳ ಇತಿಹಾಸವಿದೆ. 1892 ಮತ್ತು 1924ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮಾಡಿಕೊಂಡ ಎರಡು ಒಪ್ಪಂದಗಳಿಂದ ವಿವಾದ ಪ್ರಾರಂಭವಾಯಿತು. ಅದು 19ನೇ ಶತಮಾನದ ಬ್ರಿಟೀಷ್ ಆಳ್ವಿಕೆಯ ಕಾಲ. ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಸಂಸ್ಥಾನಗಳು ಆಂಗ್ಲರ ಆಳ್ವಿಕೆಗೆ ಒಳಪಟ್ಟಿದ್ದವು. ಕಾವೇರಿ ನದಿ ನೀರಿನ ಬಳಕೆ ಕುರಿತು ಆಂಗ್ಲರು ಹಲವು ಯೋಜನೆಗಳನ್ನು ರೂಪಿಸಿದ್ದರು. ಇದೇ ವೇಳೆ ಬರಗಾಲ ಪ್ರಾರಂಭವಾಗಿದ್ದರಿಂದ  ಈ ಯೋಜನೆಗಳು ಜಾರಿಗೆ ಬಂದಿರಲಿಲ್ಲ. 1881ರಲ್ಲಿ ಮೈಸೂರು ಸಂಸ್ಥಾನ ಕಾವೇರಿ ನದಿ ನೀರಿನ ಬಳಕೆ ಬಗ್ಗೆ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಯ್ತು. ಈ ಯೋಜನೆ ಜಾರಿಗೆ ಬರಬೇಕೆನ್ನುವಷ್ಟರಲ್ಲಿ ಮೈಸೂರು ಸಂಸ್ಥಾನ ಬ್ರಿಟೀಷ್ ಆಳ್ವಿಕೆಯಿಂದ ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು. ಆದರೆ ಮದ್ರಾಸ್ ಸಂಸ್ಥಾನ ಇನ್ನೂ ಬ್ರಿಟೀಷರ ಆಳ್ವಿಕೆಯಲ್ಲೇ ಇತ್ತು. ಆಗ ಮೈಸೂರು ಸಂಸ್ಥಾನ ಕಾವೇರಿ ಬಗ್ಗೆ ನೀರಿನ ಸದ್ಭಳಕೆ ಬಗ್ಗೆ ಮುಂದಾದಾಗ ಮದ್ರಾಸ್ ಸಂಸ್ಥಾನ ವಿರೋಧ ವ್ಯಕ್ತಪಡಿಸಿತು. ಬಿಕ್ಕಟ್ಟಿನ ಶಮನಕ್ಕಾಗಿ 1890ರಲ್ಲಿ ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ನಡುವೆ ಮಾತುಕತೆ ಏರ್ಪಟ್ಟಿತು. 2 ವರ್ಷಗಳ ಬಳಿಕ 1892ರಲ್ಲಿ ಉಭಯ ಸಂಸ್ಥಾನಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಅನ್ಯಾಯ ಪ್ರಾರಂಭವಾಗಿದ್ದೆ ಈ ಒಪ್ಪಂದದ ಮೂಲಕ. ಈ ಒಪ್ಪಂದಕ್ಕೆ ಮೈಸೂರು ಸಂಸ್ಥಾನ ವಿರೋಧ ವ್ಯಕ್ತಪಡಿಸಿತ್ತಾದರೂ ಸಹಿ ಮಾಡಿತ್ತು. ಮೈಸೂರಿನ ಸಂಸ್ಥಾನಕ್ಕೆ ಕಾವೇರಿ ನೀರಿನ ಹರಿವಿಕೆಯಲ್ಲಿ ಕಡಿಮೆ ಸ್ವಾತಂತ್ರ್ಯ ಹಾಗೂ ಮದ್ರಾಸ್  ಸಂಸ್ಥಾನಕ್ಕೆ ನದಿ ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ  ನೋಡಿಕೊಳ್ಳಲಾಗಿತ್ತಲ್ಲದೇ ಮದ್ರಾಸ್ ಸಂಸ್ಥಾನಕ್ಕೆ ಸರ್ವಾಧಿಕಾರ ನೀಡಲಾಗಿತ್ತು.
           ಅಂದಿನಿಂದ ಸ್ವಾತಂತ್ರ್ಯಾ ನಂತರವೂ ಮೈಸೂರು ಸಂಸ್ಥಾನ 1892ರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇತ್ತು. 1910ರಲ್ಲಿ ಕನ್ನಂಬಾಡಿ ಎಂಬ ಹಳ್ಳಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅಂದಿನ ಇಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ರೂಪಿಸಿದರು. ಆ ಅಣೆಕಟ್ಟು 2 ಹಂತದಲ್ಲಿ ನಿರ್ಮಿಸುವ ಯೋಜನೆ ಹೊಂದಲಾಗಿದ್ದು, ಆ ಮೂಲಕ 41.5 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಹೊಂದಲಾಗಿತ್ತು. ಆದರೆ ಈ ಯೋಜನೆಗೆ ಮದ್ರಾಸ್ ಸಂಸ್ಥಾನ ತೀವ್ರ ವ್ಯಕ್ತಪಡಿಸಿತಲ್ಲದೇ ನೀರಿನ ಹರಿವು ಕಡಿಮೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ಅಲ್ಲದೇ ಮೆಟ್ಟೂರು ಬಳಿ ತಾನೂ ಒಂದು ಅಣೆಕಟ್ಟು ನಿರ್ಮಿಸಲು ನಿರ್ಧರಿಸಿತು. ಅದರಲ್ಲಿ 80 ಟಿಎಂಸಿ ನೀರು ಸಂಗ್ರಹದ ಉದ್ದೇಶ ಹೊಂದಿತ್ತು. ಈ ವಿವಾದ ಬ್ರಿಟೀಷ್ ಆಡಳಿತದ ಭಾರತ ಸರ್ಕಾರದ ಮೆಟ್ಟಿಲೇರಿತು. ವಿವಾದವನ್ನು ಪರಿಶೀಲಿಸಿದ ಸರ್ಕಾರ ಮೈಸೂರು ಸಂಸ್ಥಾನಕ್ಕೆ ಅಣೆಕಟ್ಟು ನಿರ್ಮಿಸಲು ಅವಕಾಶ ಕೊಟ್ಟಿತಾದರೂ ಅದರಲ್ಲಿ 11 ಟಿಎಂಸಿ ನೀರು ಸಂಗ್ರಹಿಸಬೇಕು ಎಂದು ತಿಳಿಸಿತು. ಇದರಿಂದ ಉಭಯ ಸಂಸ್ಥಾನಗಳ ನಡುವಿನ ವಿವಾದ ಹಾಗೆಯೇ ಮುಂದುವರೆಯಿತು.
ಕಾವೇರಿ ನದಿ ನೀರಿನ ಇತ್ಯರ್ಥಕ್ಕಾಗಿ ಸರ್ಕಾರ ಅಲಹಾಬಾದ್ ಹೈಕೋರ್ಟ್ ನ್ಯಾ.ಸರ್.ಹೆಚ್.ಡಿ ಗ್ರಿಫಿನ್ ಹಾಗೂ ಇನ್ಸ್‍ಪೆಕ್ಟರ್ ಜನರಲ್ ಆಫ್ ಇರಿಗೇಷನ್ ಇನ್ ಇಂಡಿಯಾ ಮಧ್ಯಸ್ಥಿಕೆ ಹಾಗೂ ಪರಿಶೀಲನೆಗಾಗಿ ನೇಮಕ ಮಾಡಿತು. 1913ರ ವರದಿಯನ್ವಯ 1914ರಲ್ಲಿ ತೀರ್ಪು ನೀಡಿದ  ಸರ್ಕಾರ ಮೈಸೂರು ಸರ್ಕಾರ ಕಾವೇರಿ ಕೊಳ್ಳದಲ್ಲಿ ಕೃಷಿಭೂಮಿಯನ್ನು 1,10,000 ಎಕರೆಗಿಂತ ಹೆಚ್ಚಿಸಬಾರದು ಮದ್ರಾಸ್ ಸಂಸ್ಥಾನಕ್ಕೆ  3,01,000 ಎಕರೆವರೆಗೂ ಹೆಚ್ಚಿಸಿತು. ಈ ತೀರ್ಪಿನ ಬಗ್ಗೆ ಮತ್ತೆ ಮತ್ತೆ ವಿರೋಧಗಳು ವ್ಯಕ್ತವಾದವು.
ಉಭಯ ಸಂಸ್ಥಾನಗಳ ಮಾತುಕತೆ ಫಲವಾಗಿ 1924ರಲ್ಲಿ ಮತ್ತೊಂದು  ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಮದ್ರಾಸ್ ಸಂಸ್ಥಾನ ಮೆಟ್ಟೂರು ಅಣೆಕಟ್ಟು ಕಟ್ಟಲು ಹಾಗೂ ಮೈಸೂರು ಸಂಸ್ಥಾನ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲು ಒಪ್ಪಿಗೆ ಸೂಚಿಸಲಾಯಿತು. ಉಭಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ತಲೆದೋರದಂತೆ  ನೋಡಿಕೊಳ್ಳುವ ಭರವಸೆಗಳನ್ನು ಉಭಯ ರಾಜ್ಯಗಳು ನೀಡಿದ್ದವು. ಆದರೆ ಈ ಒಪ್ಪಂದ 1974 ಅಂದರೆ 50 ವರ್ಷಗಳು ಮಾತ್ರಾ ಜಾರಿಯಲ್ಲಿರುತ್ತದೆ ಎಂದು ದಾಖಲಿಸಲಾಗಿತ್ತು. ಬಳಿಕ 1956ರಲ್ಲಿ ರಾಜ್ಯಗಳ ಏಕೀಕರಣದ ಸಂಧರ್ಭದಲ್ಲಿ ಬಾಂಬೆ, ಕೊಡಗು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳು ಕರ್ನಾಟಕಕ್ಕೆ ಸೇರ್ಪಡೆಗೊಂಡವು. ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಮಲಬರ್ ಕೇರಳ ರಾಜ್ಯವಾಗಿ ಹೊರಹೊಮ್ಮಿತು. ಇದರ ಜೊತೆಗೆ ಪದುಚೇರಿ ಕೂಡ ರಾಜ್ಯವಾಗಿ ಉದಯಿಸಿತು. ಹೀಗೆ ಕಾವೇರಿ ನದಿ ನೀರಿನ ವಿವಾದಕ್ಕೆ 4 ರಾಜ್ಯಗಳು ಸೇರ್ಪಡೆಗೊಂಡವು.
          1924ರಲ್ಲಿ ಮಾಡಿಕೊಂಡ ಒಪ್ಪಂದ ಪೂರ್ಣಗೊಳ್ಳುವ ಮೊದಲೇ ಅಂದರೆ 1970ರಲ್ಲಿ ಕರ್ನಾಟಕ ಮತ್ತು ಮದ್ರಾಸ್  ರಾಜ್ಯಗಳು ಮತ್ತೆ ಕಾವೇರಿ ನದಿ ವಿಚಾರವಾಗಿ ಚರ್ಚೆ ನಡೆಸಿದವು. ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ‘ಕಾವೇರಿ ಸತ್ಯ ಶೋಧನಾ ಸಮಿತಿ’ ರಚಿಸಿತು. ಇದರ ವರದಿ ಪ್ರಕಾರ ಕಣಿವೆ ಪ್ರಾಧಿಕಾರ ಸ್ಥಾಪನೆಗೆ ಉಭಯ ರಾಜ್ಯಗಳು ಒಪ್ಪಿಗೆ ಸೂಚಿಸಿದರಾದರೂ ಕೇಂದ್ರ ಸರ್ಕಾರ ಇದಕ್ಕೆ ಅಧಿಕೃತ ಅನುಮೋದನೆ ನೀಡಲಿಲ್ಲ. ಬಳಿಕ 1976ರಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವರಾಗಿದ್ದ ಜಗಜೀವನ್ ರಾಂ ನೇತೃತ್ವದಲ್ಲಿ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದವು. ಈ ಒಪ್ಪಂದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯುವ ವೇಳೆಗೆ ತಮಿಳುನಾಡಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದ ಬಳಿಕ ಹೊಸ ಸರ್ಕಾರ ಎಐಡಿಎಂಕೆ ಅಧಿಕಾರಕ್ಕೆ ಬಂದಿತು. ಆಗ ಮುಖ್ಯಮಂತ್ರಿಯಾಗಿದ್ದ ಎಂ.ಜಿ ರಾಮಚಂದ್ರನ್ 1976ರಲ್ಲಿ ಹೊಸ ಒಪ್ಪಂದವನ್ನು ತಿರಸ್ಕರಿಸಿ 1924ರ ಒಪ್ಪಂದವೇ ನಿರ್ಧರಿಸಿದರು. ಈ ಸಂಧರ್ಭದಲ್ಲಿ  ತಮಿಳುನಾಡಿನಲ್ಲಿ 14,40000 ಎಕರೆಯಿಂದ 15,80,000 ಎಕರೆಗೆ ವಿಸ್ತರಣೆಗೊಂಡಿದ್ದರೆ ಕರ್ನಾಟಕ 1924ರ ಒಪ್ಪಂದದ ಬಿಗಿ ಹಿಡಿತಕ್ಕೆ ಸಿಲುಕಿ ತನ್ನ ಕೃಷಿ ಭೂಮಿಯನ್ನು 6,80,000 ಎಕರೆಗೆ ಸೀಮಿತಗೊಳಿಸಿತು.
1984ರಲ್ಲಿ ತಮಿಳುನಾಡಿನ ತಂಜಾವೂರು ಪ್ರಾಂತದ ರೈತ ಸಂಘಟನೆ ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಇತ್ಯರ್ಥಕ್ಕಾಗಿ ನ್ಯಾಯಾಧಿಕರಣ ರಚನೆ ಮಾಡಬೇಕೆಂದು  ಸುಪ್ರಿಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿತು. ಅರ್ಜಿಯ ವಿವಾರಣೆ ನಡೆಸಿದ ಸುಪ್ರೀಂ ಕೋರ್ಟ್ 1990ರಲ್ಲಿ ಉಭಯ ರಾಜ್ಯಗಳು ಪರಸ್ಫರ ಒಪ್ಪಂದಕ್ಕೆ ಬರಬೇಕು. ಇಲ್ಲವಾದಲ್ಲಿ ನ್ಯಾಯಾಧಿಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅದೇ ವರ್ಷದಲ್ಲಿ ನ್ಯಾಯಾಧಿಕರಣವನ್ನು ರಚನೆ ಮಾಡಿತು.
1991ರಲ್ಲಿ ತೀರ್ಪು ನೀಡಿದ ನ್ಯಾಯಾಧಿಕರಣ ವಾರ್ಷಿಕ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತು. ಅಲ್ಲದೇ ಹಾಲಿ ಇರುವ ಕೃಷಿ ಭೂಮಿಯನ್ನು ಇನ್ನಷ್ಟು ಹೆಚ್ಚಿಸದಂತೆ ತಿಳಿಸಿತು. ಈ ತೀರ್ಪನ್ನು ವಿರೋಧಿಸಿದ ಕರ್ನಾಟಕ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿತು. ಸುಗ್ರೀವಾಜ್ಞೆ ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧಿಕರಣದ ಆದೇಶವನ್ನು ಪಾಲಿಸುವಂತೆ ಆದೇಶ ನೀಡಿತು. ಇದೇ ವೇಳೆ 1995-96ರ ವೇಳೆ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕರ್ನಾಟಕಕ್ಕೆ ಸಂಕಷ್ಟದ ಸ್ಥಿತಿ ಬಂದೊದಗಿತು ಬಳಿಕ 1997ರಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ಪ್ರಾಧಿಕಾರ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಿತು.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧಿಕರಣ 2007ರ ಫೆ. 5ರಂದು ಕಾವೇರಿ ನದಿ ಪಾತ್ರದಲ್ಲಿ 740ಟಿಎಂಸಿ ನೀರು ಲಭ್ಯವಿದ್ದು, ಇದರಲ್ಲಿ ತಮಿಳುನಾಡಿಗೆ 419 ಟಇಎಂಸಿ ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30ಟಿಎಂಸಿ ಹಾಗೂ ಪಾಂಡಿಚೇರಿಗೆ 7 ಟಿಎಂಸಿ ಮತ್ತು 4 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯುವಿಕೆ ಕುರಿತು ಅಂತಿಮ ತೀರ್ಪು ನೀಡಿತು. ಆದರೆ ಬೇರೆ ವರದಿಗಳಂತೆ ಅಲ್ಲಿ 740 ಟಿಎಂಸಿ ನೀರಿರಲಿಲ್ಲ. ಅಲ್ಲಿಯೂ ಮೋಸವಾಯ್ತು. 
ಅಂದಿನಿಂದ ಇಂದಿನವರೆಗೂ ಈ ವಿವಾದ ನಡೆಯುತ್ತಲೇ ಇದ್ದು, ಸದಾ ಒಂದಿಲ್ಲೊಂದು ವಿಭಾಗದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಸದ್ಯ ದಿನೇ ದಿನೇ ಸುಪ್ರೀಂ ಕೋರ್ಟ್ ತೀರ್ಪು ತಮಿಳುನಾಡಿನ ಪರವಾಗೇ ಇದ್ದು, ದಿನಗಟ್ಟಲೇ ಸಾವಿರ ಸಾವಿರ ಕ್ಯೂಸೆಕ್ ನೀರನ್ನು ಬಿಡಿ ಬಿಡಿ ಅನ್ನುತ್ತಲೇ ಇದೆ.
ಈ ಬಗ್ಗೆ ಸುಪ್ರೀಂ ನಮ್ಮ ಮಾತನ್ನು ಕೇಳಬೇಕು:
ನಮ್ಮ ಜಲಾಶಯದಲ್ಲಿ ನೀರಿಲ್ಲ...
ಈಶಾನ್ಯ ಮಳೆಯ ಮಾರುತಗಳು ತಮಿಳುನಾಡಿನಲ್ಲಿ ಸುರಿಸುವ ಸಾದ್ಯತೆ ಇದ್ದು, ಈಗಾಗಲೇ ಅವರ ಮೆಟ್ಟೂರು ಜಲಾಶಯದಲ್ಲಿ 50 ಟಿಎಂಸಿಗೂ ಅಧಿಕ ನೀರಿದೆ.
ನಮ್ಮಲ್ಲಿ ಮಳೆಯ ಪ್ರಮಾಣವೂ ಕಡಿಮೆ ಇದ್ದು ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಆದರೂ ನಮ್ಮ ಕುಡಿಯುವ ನೀರನ್ನು ಅವರು ಕೇಳುತ್ತಿರುವುದು ಎಷ್ಟು ಸರಿಯೋ ಗೊತ್ತಿಲ್ಲ.
         ಹಳೆಯ ಕಾಯ್ದೆಗೆ ಅಂಟಿಕೊಂಡು ಕುಳಿತಿರುವ ತಮಿಳುನಾಡಿನಿಂದ ಅನ್ಯಾಯವಾಗುತ್ತಲೇ ಇದ್ದರೂ ಕನ್ನಡದ ಮಂದಿ ಸಹಿಸಿಕೊಂಡಿದ್ದರು ಆದರೆ ನಮಗೆ ಇಲ್ಲದಿರುವಾಗ ಇನ್ನೊಬ್ಬರಿಗೆ ನೀರನ್ನು ನೀಡಿ ಎನ್ನುವ ಮಾತು ಸಮಂಜಸವಲ್ಲವೆಂದರಿತ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ!?, ಯಾವ ನ್ಯಾಯಾಧಿಕರಣ ಇದನ್ನು ಬಗೆ ಹರಿಸುತ್ತೆ!? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ...ಹೀಗೆ ತೀರ್ಪು ತಮಿಳಿಗರ ಪರವಾಗಿಯೇ ಸಾಗುತ್ತಿದ್ದರೆ ಒಂದಿನ ಮಂಡ್ಯ, ಮೈಸೂರು ಮತ್ತು ಬೆಂಗಳೂರಿನ ಮಂದಿ ಎಲ್ಲವೂ ಬರಡಾಗಿ ನೀರಿಗೆ ಹಾಹಾಕಾರವಿತ್ತು ಸಾಯಬೇಕಾಗುವುದು ಗ್ಯಾರಂಟಿ...
ಈಗ ಯಾಕಾಗಿ ನಾವು ಹೋರಾಟಕಿಳಿದ್ದೇವೆಂದು ಎದೆ ತಟ್ಟಿ ಹೇಳಿ ಮುಂದಡಿಯಿಡೋಣ ಬನ್ನಿ...

No comments:

Post a Comment