Saturday 1 October 2016

ಅವಳು ನೆನಪಾದಳು!.. ನಗಬೇಡಿ ಬಿ ಸೀರಿಯಸ್...



“ಅಭ್ಯಾಸ ಕಡಿಮೆ ನಂಗೆ ಅನುಭವದ ಅಭಾವ
ಕಣ್ಮುಚ್ಚಿದರೂ ಕಾಣುತ್ತದೆ ಒಮ್ಮೊಮ್ಮೆ ಅವಳದೇ ಹಾವ ಭಾವ...”
ಗೊತ್ತಿಲ್ಲ!.. ಅವಳು ಮತ್ತೆ ಮತ್ತೆ ನೆನಪಾಗುತ್ತಾಳೆ. ಯಾವ ದೈವಲೀಲೆಯೋ ತಿಳಿದಿಲ್ಲ!!! ಮೊನ್ನೆ ಮೊನ್ನೆ ಮತ್ತೆ ನೆನಪಾದಳು!.. ಸುಮ್ಮನಿದ್ದ ನನ್ನಲ್ಲಿ ಇತ್ತೀಚಿಗೆ ಕಾಡಲು ಶುರುವಿಟ್ಟಿದ್ದೆ ಅವಳ ಅಂದಿನ ವೈಯಾರದ ನೆಪ, ವಿಧವಿಧದಲ್ಲಿ ಮಿಡುಕಿ ನನ್ನ ಮನಸ್ಸನ್ನು ಕದ್ದು ಹೋದವಳು ಅವಳು. ಅಂದು ನಾ ಅವಳಿಗೆ ಬಿದ್ದೋಗಲು ಭವಣೆ ಸಮಾಚಾರ ಬೇಡವಾಗಿತ್ತು ಬದಲಾಗಿ ಅವಳ ಹವ ಭಾವವೊಂದೇ ಸಾಕಾಗಿತ್ತು.
“ಬಾಳ ಸಂತೆಯ ತುಂಬಾ
ಅವಳದೇ ವೈಖರಿ...
ಬಿಟ್ಟು ಹೋದ ಕ್ಷಣದಿಂದ
ಎದೆಯ ರಂಗದಲ್ಲಿ ಮುನ್ನಡೆಯುತ್ತಲೇ ಇದೆ ಮಂಜರಿ...”
ಅವಳೆಂದರೆ ನನಗೊಂದು ಸಂತೆ, ತುದಿಯನ್ನೇ ಕಾಣದ ಆನಂತ ರೇಖೆ. ಹಲವಾರೂ ಅದ್ಭುತಗಳ ಕಂತೆ. ಅನೇಕಾನೇಕ ಮೂಲ ಪರಿಕರಗಳ ಕುಂಟೆ. ಹೀಗೆಲ್ಲ ಆಗಿರುವ ಅವಳು ನೆನಪೋದರೆ ತಾನೆ ನೆನಪಿಸಿಕೊಳ್ಳಲು!!. ಗೊತ್ತಿಲ್ಲ..,ಕಳ್ಳಿ ಅವಳು!, ನೆನಪಲ್ಲೂ ಬಿಟ್ಟೋಗುತ್ತಾಳೆ!.. ನೆನಪೋಗಿ, ನೆನೆಸಿ ಮತ್ತೆ ಮತ್ತೆ ನೆನಪಾಗುತ್ತಾಳೆ.

“ಪಯಣದ ಮಧ್ಯೆ ಇದಿರಾಗುವ ಮಂದಿಯಲ್ಲೇ ಅವಳ ಗೋಚರ...
ಒಂದರೆಘಳಿಗೆ  ಕಂಡು, ಮತ್ತೇ ಕಾಣದೆ ಅಘೋಚರ...”
ರಸ್ತೆ ಬದಿಯಲ್ಲಿ ನಿಂತಿದ್ದ ಹುಡುಗಿಯೊಬ್ಬಳನ್ನು ಕಂಡು ನನ್ನವಳ ನೆನಪು ಇತ್ತೀಚಿಗೆ ಮತ್ತೆ ಮನದ ಕದ ತೆರೆಯಿತು. ಬದುಕಲ್ಲಿ ಪ್ರತಿ ದಿನವೂ ನೂತನ ನೆಪವೊಡ್ಡಿ ಇದಿರಾಗುವ ಆಕೆಯ, ನೆನಪ ಸುಂಟರ ಗಾಳಿಗೆ ಸಿಲುಕಿ ಅದೆಷ್ಟೋ ಬಾರಿ ಗಿರ ಗಿರನೇ ತಿರುಗಿ ತಲೆಕೆಡಿಸಿಕೊಂಡಿದ್ದರೂ, ಮನಕ್ಕೆ ಮಾತ್ರಾ ಇನ್ನೂ ಬುದ್ಧಿ ಬಂದಿಲ್ಲ!!. ಎಷ್ಟೋ ಬಾರಿ ಅವಳ ಬಗ್ಗೆ ಕಂಪಿಸಿದ್ದೆ, ಮೌನಿಸಿದ್ದೆ, ಕೋಪಿಸಿದ್ದೆ... ಆದರೂ, ಅವಳ ನೆನಪು ನನ್ನ ಬಿಟ್ಟೋಗುವ ಲಕ್ಷಣ ಮಾತ್ರಾ ಕಾಣುತ್ತಿಲ್ಲ!..

ಪ್ರಶ್ನೆ ಏನೆಂದರೆ ಅವಳೇ ಯಾಕೆ ನೆನಪಾಗಬೇಕು... ಈ ಹಾಳು ಹೃದಯ ಬತ್ತಿ ಹೋದ ಎದೆಯಲ್ಲಿ ಮತ್ತೆ ಪ್ರೀತಿ ಸಿಂಚನ ಸಿಂಪಡಿಸಲು ಮತ್ಯಾರಿಗೂ ಅವಕಾಶ ನೀಡುತ್ತಿಲ್ಲವ್ಯಾಕೆ!?...  . ಅವಳೆಂದರೆ ಅದಕ್ಯಾಕೆ ಅಷ್ಟೊಂದು ಇಷ್ಟ!?, ನಾ ಇಷ್ಟು ನೆನಪಿಸಿಕೊಂಡರೂ ಅವಳಿಗ್ಯಾಕೆ ಇವ್ಯಾವುದು ಚುಚ್ಚುತ್ತಿಲ್ಲ!?, ಎಲ್ಲಾ ಕಡೆ ವೃಬ್ರೇಟ್ ಶಕ್ತಿ ಇದೆ ಅಂತಾರೆ ಹಾಗಾದರೆ ಇವಳಲ್ಲಿ ನನ್ನಲ್ಲಿ ಅದು ಇಲ್ಲವಾ!? ಕಣ್ಣಿಗೆ ಬೀಳೋರೆಲ್ಲಾ ಅವಳಂತೆ ಕಾಣುತ್ತಾರೆ. ತತ್ ಕ್ಷಣ ನನ್ನ ಹೃದಯ ಬಡಿದಾಡಿಕೊಂಡು ಸಾಯುತ್ತದೆ. ಇನ್ನೇನು ಉಳಿದಿಲ್ಲ ಸತ್ತೇ ಎನ್ನುವಾಗ ಮತ್ತೆ ಹೃದಯ ನೆನಪುಗಳನ್ನು ಹಾಡಿ ಬದುಕಿಸುತ್ತದೆ...
ಇತ್ತೀಚಿಗೆ ಎಲ್ಲವೂ ರುಟೀನ್ ಆಗಿದೆ. ಹಳೆ ಹುಡುಗಿಯರೆಲ್ಲಾ ಮಗುವೆಯಾಗಿ ಮಗುವನ್ನಾಡಿಸುತ್ತಿರುವುದು ಕಂಡು ಬಂದಿದೆ. ಒಬ್ಬರು ಒಬ್ಬರಿಗೆಂದು ಬರೆದಿಡುವ ಬ್ರಹ್ಮ ನನ್ನವಳನ್ನು ಎಲ್ಲಿಟ್ಟಾದೆನೆಂದು ಅರಸುವುದೇ ಕಾಯಕವೆನಿಸಲು ಶುರುವಾಗಿದೆ. ಮೊದಲೆಲ್ಲ ಹುಡುಗರು ಹುಡುಗಿಯರಿಗೆ ಕಾಟ ಕೊಡುತ್ತಿದ್ದರೆಂದು ಕೇಳಿದ್ದೆ ಆದರೆ ಇದೀಗ ಹುಡುಗೀಯರೆ ಹುಡುಗರಿಗೆ ಕಾಟವೀಯುವಷ್ಟು ಜಗತ್ತು ಬದಲಾಗಿದೆ. ಆದರೆ ಅವಳೊಬ್ಬಳು ಎಲ್ಲೋ ಮಿಸ್ ಆಗಿ ಜನ್ಮಿಸಿರಬೇಕು. ಅವಳಿನ್ನು ಹಳೆ ಕ್ವಾಲಿಟಿಯಳೆನಿಸುತ್ತದೆ. ಹೊಸ ಟ್ರೆಂಡ್ಯಾವುದು ಅವಳರಿವಿಗೆ ಬಂದಿಲ್ಲವೋ ಅಥವಾ ನನ್ನ ಇಷ್ಟಾರ್ಥ ಅವಳು ಹಾಗೆ ಜನ್ಮಿಸಿರುವಳೋ ನಾ ಕಾಣೆ!!. ಹಳೆ ಹುಡುಗಿ ಯಜಮಾನನಿದ್ದರೂ, ಫ್ರೀ ಟೈಮ್ ಮಾಡಿಕೊಂಡು ಮಿಸ್ ಕಾಲ್ ಮಾಡುತ್ತಾಳೆ. ಹೊಸ ಹುಡುಗಿಯೊಬ್ಬಳು ಕರೆಯಲ್ಲೇ ಹೃದಯ ಕೆರೆಯುತ್ತಿದ್ದಾಳೆ.  ಮನಸ್ಸು ಹುಚ್ಚು ಅನಿಸಿದರೂ ಈ ವಿಚಾರದಲ್ಲೆಲ್ಲಾ ನನ್ನ ಮನ ಕೆಟ್ಟ ದಾರಿ ಹಿಡಿಯುವುದಿಲ್ಲ. ಆದರೆ ಅವಳ ವಿಚಾರದಲ್ಲಿ ಹಿಂದೆ ಬೀಳುವುದನ್ನು ಮರೆತಿಲ್ಲ. ಅವಳೇ ಬೇಕು ಅನ್ನುತ್ತದೆÉ. ಈ ಬೇಕು ಬೇಡಗಳೆಲ್ಲ ಮತ್ತೊಬ್ಬಳಿಗೆ ಗೊತ್ತಾಗಿ ವೈಶಮ್ಯ ನೆಲೆಗೊಳಿಸುತ್ತಿದ್ದಾಳೆ... ಇದು ತಪ್ಪು ಕಣೇ! ಹೋಗು ನನ್ನ ಮನಸಿಂದ ಎಂದರೂ ಕೇಳದೆ ಮತ್ತೆ ಮತ್ತೆ ನೆನಪಾಗುತ್ತಲೇ ನನ್ನಲ್ಲಿ ನೆಲೆನಿಂತಿದ್ದಾಳೆ. 
“ವಿಪರೀತ ಬಗೆಯವಳು
ಅಪರಿಮಿತದ ಆಸೆಯವಳು
ನಗುವೇ ಸೋಜಿಗವೆನಿಸುವವಳು
ತುಸು ದೂರವೂ ಬಿಟ್ಟು ಕೊಡದವಳು”
ಅನೇಕ ಕನಸುಗಳ ರಾಶಿಯಲ್ಲಿ ಬುಸ್ಸೆಂದು ಯಾವಾಗಲೂ ಎದ್ದು ಬಿದ್ದು ಬರುವ ಆ ನನ್ನ ಬೆಡಗಿ... ವರ್ಷಗಳ ಹಿಂದೆ ನಮ್ಮೆದುರು ಮನೆಯ ಮಹಡಿಯಲ್ಲಿ ನಗು ಬೀರುತ್ತಿದ್ದ ಸುಂದರಿ. ನೀಳ ಜಡೆಯ ವರ ಪಡೆದಿದ್ದಾಕೆ, ತಲೆ ಸ್ನಾನ ಮಾಡಿ ಮಹಡಿ ಮೇಲೆ ಪ್ರಕಾಶಿಸುವ ಸೂರ್ಯ ಕಿರಣಕೆ ತಲೆಯೊಡ್ಡಿ ಕೂದಲನ್ನು ಒಣಗಿಸುತ್ತಿದ್ದ ಮೊದಲ ದಿನವೇ ನನಗಿಷ್ಟವಾದªಳು.  

ಹರೆಯದ ಹರಿತವಿದು ತುಡಿತದ ಅಮಲಿದು...
ಹುಚ್ಚು ಹೆಚ್ಚೆ ಕಾಡುವುದು, ಪ್ರೀತಿ ಹಚ್ಚಿ ಸತಾಯಿಸುವುದು...
ಹದಿ ಹರೆಯದ ನಮ್ಮಂತವರಲ್ಲಿ ಕಾಣದ ಪ್ರೀತಿಯನ್ನು ಅರಸುವ ಮಜಭೂತೇನು  ಕಡಿಮೆ ಇಲ್ಲ. ಅದರಂತೆ ನಾನು ಒಬ್ಬ. ಹುಡುಗತನ ಹಿಂಬಾಗಿಲಿನಲ್ಲಿ ಮೆಲ್ಲಗೆ ಹೊರಡುತ್ತಿರುವುದು ಒಂದೆಡೆಯಾದರೆ, ಜವಾಬ್ಧಾರಿ ಅನ್ನೋದು ಮುಂಬಾಗಿಲಿನಲ್ಲಿ ಕಾಲಿಂಗ್ ಬೆಲ್ ಒತ್ತುತ್ತಾ ಇರುತ್ತದೆ. ಈ ಹುಡುಗತನ ಪ್ರಾರಂಭದಲ್ಲಿ ಅನೇಕ ಸತ್ಕಾರಗಳ ಸಂತೋಷ ಕೊಟ್ಟರೂ, ಆಮೇಲೆ ನೋವು ನೋವೆ... ಆದರೆ ಒಂದತೂ ನಿಜ!!, ಜೀವನದಲ್ಲಿ ಈ ಪ್ರೀತಿ-ಪ್ರೇಮದ ಮಳೆಗೆ ಸ್ವಲ್ಫ ಆದ್ರೂ ಮೈ ನೆನಸಿಕೊಳ್ಳದವರು ಯಾರೂ ಇಲ್ಲ. ನಮ್ಮನ್ನ ಪ್ರಡ್ಯೂಸ್ ಮಾಡಿದ ದೇವಾನು ದೇವತೆಗಳೇ ಪ್ರೀತಿಯ ಮಳೆಗೆ ನೆನೆದು ಚಳಿ ಜ್ವರ ಆಗಿ ಕಂಬಳಿ ನೆನೆದುಕೊಂಡವರೆ...
ಅವಳನ್ನು ನಾನೆಂದು ಮಾತಾಡಿಸಿಲ್ಲ, ರೌಡಿಯ ಥರ ರೊಡಿಗಡ್ಡಗಟ್ಟಿ ಚುಡಾಯಿಸಿಲ್ಲ, ನೀನೇ ನನ್ನ ಪ್ರೀತಿ, ನೀನೇ ನನ್ನ ಸಿಂಡ್ರೇಲಾ, ನೀನೇ ನನ್ನ ಮಜನೂ ಅಂತ ಪೋಸಿ ಹೊಡೆದಿಲ್ಲ, ಆದರೆ ಅವಳಿಗರಿವಿಲ್ಲದಂತೆ ಕದ್ದು ಮುಚ್ಚಿ ನೋಡಿದ್ದು ಮಾತ್ರಾ ಹೆಚ್ಚಾಗಿಯೇ ಇದೆ. ಅದೇಕೋ ಗೊತ್ತಿಲ್ಲ ಪದೆ ಪದೇ ನೊಡುತ್ತಿದ್ದಂತೆ ಜಾಸ್ತ್ತಿ ಜಾಸ್ತೀಯೇ ಇಷ್ಟವಾಗುತ್ತಿದ್ದಳು. ನಾನವಳ ಕಣ್ಣಿಗೆ ಅಪ್ಪಿ ತಪ್ಪಿ ಎದುರಾಗುತ್ತಿದ್ದರೆ, ಪರವಾಸಿಯೆಂಬಂತೆ ದೂರ ಸರಿಯುತ್ತಿದ್ದದ್ದು, ಇನ್ನೆಲ್ಲೋ ನೋಡುತ್ತಾ ಕೆನ್ನೆಗಿಳಿದಿರುತ್ತಿದ್ದ ಕೂದಲನ್ನು ಮೇಲೆತ್ತಿ ಕಿವಿಯ ಮೇಲ್ಭಾಗಕ್ಕೆ ಪೋಣಿಸುತ್ತಾ, ನಾಚುತ್ತಾ ನೆಲ ನೋಡಿಕೊಂಡು ನಡೆಯುತ್ತಿದ್ದದ್ದು, ಓಪನ್ ಹೇರ್ ಬಿಟ್ಕೊಂಡು ಆಗಾಗ ಸ್ಕೂಟಿಯಲ್ಲಿ ಹೋಗುತ್ತಿದ್ದದ್ದು, ಪಕ್ಕಾ ಟ್ರೆಡಿಷನಲ್ ಎಲಿಮೆಂಟ್ ಎಂಬಂತೆ ಬಟ್ಟೆಗಳನ್ನು ಧರಿಸುತ್ತಿದ್ದದ್ದು, ಇತ್ಯಾದಿಗಳೆಲ್ಲ ನನ್ನನ್ನು ಅವಳತ್ತ ತೀರಾ ಹತ್ತಿರ ಸೆಳೆಯಲು ಖಾತ್ರಿಯಾದ ವಿಚಾರವೆಂದರೆ ತಪ್ಪಿಲ್ಲ. ಮೈನೆರೆದು ನಿಂತಿದ್ದ ಅವಳ ಪ್ರಾಯದ ಬಿಸುಪಿಗೆ ನನ್ನ ಹರೆಯದ ಆಸೆಗಳು ಗರಿಗೆದರಿದ್ದವು. ನಾನೊಬ್ಬನೇ ಅಲ್ಲ ಅನೇಕ ಹುಡುಗರೂ ಅವಳಿಗೆ ಗಾಳ ಹಾಕಿದ್ದರು, ಸಿನೀಮೀಯ ಚರ್ಯೆಯಲ್ಲಿ ರಾಜಕುಮಾರರಾಗಲೂ ಹೊರಟಿದ್ದರು. ನನಗದೇನೂ ಬೇಕಿರಲಿಲ್ಲ!. ಅವಳ್ಯಾರು!?, ಎಲ್ಲಿಂದ ಬಂದವಳು!? ಹೀಗೆ ಯಾವುದನ್ನು ಹುಡುಕುವ ಪ್ರಯತ್ನ ನನ್ನ ಸತಾಯಿಸಲಿಲ್ಲ... ಕೇವಲ ಅವಳನ್ನು, ಅವಳ ನಡೆ ನುಡಿಯನ್ನು ಮಾತ್ರಾ ಗರಬಡಿದವನಂತೆ ನೋಡುತ್ತಾ ನಿಲ್ಲುವುದಷ್ಟೇ ನನ್ನ ಕಾಯಕವಾಗಿತ್ತು.

ಮುಂಜಾನೆ ಕನಸಲ್ಲಿ ಮನಸಿಗೆ ಗಾಯ
ಮನಸೆಂಬ ಮಸಣದಲಿ ಕನಸುಗಳ ಮಾರಣಹೋಮ...
ಕೋಣೆಯ ಮಂಚದ ಮೇಲೆ ಅದೆಷ್ಟೋ ದಿನ ಅವಳನ್ನೇ ನೆನದು ಮಲಗುತ್ತಿದ್ದ ನನಗೆ ಅವಳು ಹತ್ತಿರ ಬಂದು ಕುಂತಂತೆ, ನಿಂತಂತೆ, ಬಿಗಿದಪ್ಪಿಕೊಂಡಂತೆ, ಕತ್ತನ್ನೆತ್ತಿ ಮುತ್ತಿಕ್ಕಿದಂತೆ, ಕಾಣದ ಮೊಗಸಾಲೆಯಲ್ಲಿ ಪ್ರೀತಿ ತುಂಬಿ ತುಂಬಿ ಕೊಟ್ಟಂತೆ. ಆಕೃತಿ ಅನುಭವದಲ್ಲಿ ಒಮ್ಮೊಮ್ಮೆ ಮಧು ಮಂಚ ಏರಿದಂತೆ. ಯಾವುದೋ ಐಶಾರಾಮಿ ಬಂಗಲೆಯಲ್ಲಿ ನಾನೇ ರಾಜ ಅವಳೇ ರಾಣಿಯಾದಂತೆ, ನಮಗೆರಡು ಮಕ್ಕಳಾದಂತೆಲ್ಲಾ ಕನಸು ಬೀಳುತ್ತಿತ್ತು. ಕನಸು ಮಾತ್ರಾ ನನ್ನ ಅವಳನ್ನು ಒಂದು ಮಾಡಿ ಬಂಧಿಸಿ ಫ್ಯಾಮಿಲಿ ನಡೆಸುವ ರೆಂಜ್‍ಗೆ ಲಗ್ಗೆ ಇಟ್ಟಿತ್ತು. ಅವಳನ್ನು ಮುದ್ದಿಸಲು ಮನಸಾಗುತ್ತಿತ್ತು, ಖುಷಿಯಾಗುತ್ತಿತ್ತು. ಕಂಡಿದ್ದೆಲ್ಲವೂ ರಾತ್ರಿಯ ಕನಸು ಎಂದರಿತ ಕ್ಷಣ ನೋವಾಗುತ್ತಿತ್ತು. ಬಿಟ್ಟರೇ ಮದುವೇನೇ ಮಾಡಿಕೊಳ್ಳುತ್ತೇನೆ! ಎನ್ನುವ ಜೋಷ್ ಕೂಡ ಇತ್ತು ಆದರೆ ಮನದಭಯ, ಮನೆಯವರ ಭಯ, ಸಮಾಜದ ಭಯ, ಅರಿವಿನ ಭಯ, ಪ್ರೀತಿ ಭಯ ಇವೆಲ್ಲವೂ ನನ್ನನ್ನ ಕಡೆಯವರೆಗೂ ತಡೆದು ನಿಲ್ಲಿಸಿ ಮಾತೂ ಆಡದಂತೆ, ಮಾತೇ ಬಾರದಂತೆ ಕಟ್ಟಿಹಾಕಿತ್ತು. ಅದೆಷ್ಟೋ ಹೇಳಬೇಕೆಂದಿದ್ದ ಮಾತು ನನ್ನೊಳಗೆ ಮೀಟಿ ಒದ್ದಾಡಿ ಕನಸಿನ ಮಾರಣ ಹೋಮ ಮಾಡಿಕೊಂಡಿತ್ತು. ಇಂದು ಅವಳನ್ನು ಪದೆ ಪದೇ ನೆನದುಕೊಳ್ಳಲು ಅದೂ ಕೂಡ ಒಂದು ಕಾರಣವಾಗಿತ್ತು.




ಮರೆವೆನೆಂದರೂ ನೆನಪಾಗುವೆಯಲ್ಲೆ..
ಬೇಡವೆಂದರೂ ಕಾಡುವಿಯಲ್ಲೆ...
ಈಗೆಲ್ಲಿರುವೆ ಹೇಳೆ ನಲ್ಲೆ...
ಅಲ್ಲೇ ಬಂದು ಹುಡುಕುವೆ ನಿಲ್ಲೆ...
ಆ ದಿನ ಎಲ್ಲಿಗೋ ಬ್ಯಾಗ್ ಕಟ್ಟಿಕೊಂಡು ಹೊರನಡೆದ ನೀನು ಇಂದಿಗೂ ಆ ಮನೆಯ ಬಾಡಿಗೆಗೆ ತಿರುಗಿ ಬಂದಿಲ್ಲ. ನೀ ಹೋದ ಮೇಲೆ ಅದೆಷ್ಟೋ ಜನ ಹುಡುಗಿಯರು, ಹುಡುಗರು ಬಂದು ಬಂದು ಹೋಗಿದ್ದನ್ನು ನೋಡಿರುವೇ ಆದರೆ ಅಲ್ಲಿಗೆ ನಿನ್ನ ಸುಳಿವೇ ಇಲ್ಲ. ನಿನಗದೇನಾಯಿತೋ ತಿಳಿದಿಲ್ಲ. ಆದರೆ ಕೊನೆಯದಾಗಿ ಒಂದೆರಡು ಮಾತು ನಿನಗಾಗಿ ಹೇಳುವೆ ಕೇಳು...
ನೀ ನನಗೊಂದು ತೆರೆ ನೀರ ಭಾವನೆ. ನಿನ್ನ ನೆನಪು ನನಗಿನ್ನು ಗಾಳಿಯಲ್ಲಿ ಒಣಗಿದ ಹೂವಿನ ಗಂಧದಂತೆ. ನಾಳೆಯ ದಿನಗಳ ಪ್ರತಿಷ್ಠಿತ ಭರವ¸ಯಂತೆ. ಬಿಂದಿಗೆಗೆ ಬಿದ್ದ ಬೆಳದಿಂಗಳಂತೆ. ಅವೆಲ್ಲವನ್ನೂ ನಾನಿರುವವರೆಗೂ ಕಾಪಾಡಿಕೊಂಡು ಅದರಲ್ಲೇ ನಿನ್ನ ನೆನೆಸಿಕೊಂಡು ದಿನ ಕಳೆಯುವೆ. ನೀನ್ಯಾರೋ ಎಲ್ಲಿದ್ದೀಯೋ ಗೊತ್ತಿಲ್ಲ!! ಆದರೆ, ನೀ ಅಡಿಗಡಿಗೆ ನೆನಪಾಗುತ್ತೀಯಾ!! ಎಡಬಿಡದೇ ಹಿಂಬಾಲಿಸುತ್ತೀಯಾ!! ನನ್ನ ಹಾದಿಯಲ್ಲಿ ಯಾರದೋ ರೂಪದಲ್ಲಿ ಪ್ರತ್ಯಕ್ಷವಾಗುತ್ತೀಯಾ!! ಈಗಲೂ ನೋಡು ಕಾಣದ ರೂಪದಲ್ಲಿ ನನ್ನನ್ನು ಬರೆಸುತ್ತಿದ್ದೀಯಾ!! ಎಲ್ಲೇ ಇರು ಚೆನ್ನಾಗಿರು... ಈ ಮೌನದೊಳಗೂ ಒಂದು ಪ್ರೀತಿ ಭಿತ್ತಿದ ನಿನಗೆ ನಾನಾಗಲು ಭಯಸುವೆ ಎಂದಿಗೂ ಪುಟ್ಟ ಮಗು...
ಅಯ್ಯೋ ರಾಮ ರಾಮ ಅವಳು ಮತ್ತೆ ನೆನಪಾದಳು...

2 comments: