Saturday 1 October 2016

ಕವಿ ಕನವರಿಕೆ: ಪ್ರೇಮಾಯಣ - #5

       ಅವನಿನ್ನು ಬ್ಯಾಚುಲರ್. ಅವಳಿಗೀಗ ಮದುವೆಯಾಗಿದೆ. ಒಂದೆರಡು ವರ್ಷಗಳ ಹಿಂದೆ ಇವರಿಬ್ಬರು ಪ್ರೇಮ ಪಕ್ಷಿಗಳು...ಅವನಿಗೆ ಅವಳ ಜೊತೆ ಕಳೆದಿರುವ ನೆನಪುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅವಳಿಗೆ ಗಂಡನನ್ನು ಬಿಟ್ಟರೆ ಜೊತೆಗೊಂದು ಮಗುವಿದೆ.
ರಾತ್ರಿ ಮಲಗಿದರೆ ಆಕೆ ನೆನಪಾಗುತ್ತಾಳೆ. ಹೊರ ಪ್ರಪಂಚಕ್ಕೆ ಕಾಲಿಟ್ಟರೆ ಜೊತೆ ನಡೆದ, ಜೊತೆ ಕಳೆದ ಸಮಯಗಳು ನೆನಪುಗಳನ್ನು ಒತ್ತುವರಿ ಪಡೆದು ಅಳಿಸುತ್ತವೆ. ಆಕೆಯ ದೇಹವನ್ನು ಇನ್ನೊಬ್ಬ ಹಕ್ಕುದಾರ ಮುಟ್ಟಬಹುದು ಎನ್ನುವ ಅಂಶ ತಿಳಿದೂ, ಮುಟ್ಟಬಾರದು ಎಂದು ಮನಸು ಹಾಹಾಕಾರ ವ್ಯಕ್ತಪಡಿಸಿ ಹೃದಯ ಚುಚ್ಚುತ್ತದೆ. ಬಾಯಿಗೆ ಬಂದಿರುವ ಮಾತುಗಳು ಆಡದೇ ಮಣ್ಣು ಸೇರಿ ಇವನನ್ನು ಮಣ್ಣಾಗಿಸುತ್ತಿದೆ.
      ಇಬ್ಬರದೂ ಪ್ರೀತಿಯ ಮನಸು. ಯಾವುದೋ ಅನ್ಯ ಶಿಕಾರಿಗೆ ಶಿರ ಕಳೆದಿದೆ. ಸಂಜೆಯಾದರೆ ಅವಳ ನೆನಪು ಆತನಿಗೆ ಮಾರಕವಾಗಿದೆ. ಕುಂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೇ, ಯಾರ ಸಂಪರ್ಕಕ್ಕೂ ಮನ ಒಪ್ಪದೇ, ಮನ ಕಾರಾಗ್ರದ ಬಂಧಿಯಾಗಿ ಬವಣೆ ನೋವನ್ನು ಪಡೆಯುತ್ತಿರುವ ಆತನ ಎದೆಯೊಳಗೆ ಅವಳು ಸಉಖವಾಗಿರಲಿ ಎನ್ನುವ ಹಸಿರ ಹೃದಯ ವೈಶಲ್ಯತೆ ಅಷ್ಟೋ ಇಷ್ಟೋ ತ್ಯಾಗದ ಸುಖವನ್ನು ಸಿಂಪಡಿಸುತ್ತಿದೆ...
   
      ಅತ್ತ ಅವಳು ಒಂದಿಷ್ಟು ದಿನ ಏನೂ ಅರಿಯದಂತೆ ಕಾಲ ಕಳೆದು ಎಲ್ಲವನ್ನು ಮರೆತು ಸಂಭ್ರಮಿಸಿದ್ದಕ್ಕೆ ಬಸುರಿಯಾಗಿ ಮಗನನ್ನು ಹೆತ್ತಿದ್ದಳು. ಈಗೀಗ ಮತ್ತೆ ಅವನ ನೆನಪಾಗುತ್ತಿದೆ. ಛೇ!, ನಾನು ಮೋಸ ಮಾಡಿದೆ ನನ್ನ ಹುಡುಗನಿಗೆ ಎನ್ನುವ ಸಾಕ್ಷ್ಯ ಪ್ರಜ್ಞೆ ಅವಳನ್ನು ಕಾಡ ಹತ್ತಿದೆ...ಇತ್ತ ತನ್ನದಲ್ಲ ಎನ್ನುವ ಅವನ ಅನಾಥ ಪ್ರಜ್ಞೆ, ಆತ ನನ್ನವನು ಎನ್ನುವ ಇವಳ ಸಮಯ ಪ್ರಜ್ಞೆಗಳೆರಡು ಕಾಲದ ಹೊಡೆತಕ್ಕೆ ಸಿಕ್ಕಿ ನೋವಲ್ಲೇ ಕನವರಿಸುತ್ತಿವೆ...

No comments:

Post a Comment