Friday 24 April 2015

ಗೂಡು ಮರೆತ ಹಕ್ಕಿಗಳೇ.!? (ತಂದೆ ತಾಯಿಗಳಿಗಿಂತ ಮಿಗಿಲಾಯಿತೆ ಹುಚ್ಚು ಪ್ರೀತಿ)


       ಬೆಳಿಗ್ಗೆ ಎದ್ದು ಪೇಪರ್ ಓದುತ್ತಿದ್ದಾಗ ಬಹಳ ಸಿಂಪಲ್ ಎನ್ನುವಂತೆ ಮುದ್ರಿಸಿರುವ ತುಂಬಾ ಗಂಭೀರವಾದ ವಿಚಾರವನ್ನು ಗಮನಿಸಿದೆ. ‘ಯುವ ಪ್ರೇಮಿಗಳಿಬ್ಬರೂ ರಾತ್ರೋರಾತ್ರಿ ಪರಾರಿ, ಪ್ರೀತಿಸುತ್ತಿದ್ದ ಈ ಜೋಡಿಗಳು ಮನೆಯವರಿಗೆ ಹೆದರಿ ಓಡಿಹೋಗಿದ್ದಾರೆ’ ಇದು ಸುದ್ಧಿಯ ಸಾರಾಂಶ. ನನಗಂತೂ ತುಂಬಾ ಬೇಸರವಾಯಿತು. ಪತ್ರಿಕೆಯ ಪುಟದಲ್ಲಿ ಇದು ನಾರ್ಮಲ್ ವಿಷಯವಾದರೂ ಓದುತ್ತಿರುವಷ್ಟು ಹೊತ್ತು ಎಂತವನಿಗಾದರೂ ಇದೇನು ಕಾಲ ಬಂದಿತಪ್ಪಾ! ಅಂತ ಅನಿಸದಿರದು.
ಕೆಲ ಹದಿ ಹರೆಯದ ಮಕ್ಕಳನ್ನು ನೋಡುವಾಗ ಕೋಪದ ಜೊತೆಗೆ ಅವರ ಮುಂದಿನ ಬದುಕಿನ ಬಗ್ಗೆಯೂ ಅನುಕಂಪ ಮೂಡಿ ಬರುತ್ತದೆ. ಆ ವಯಸ್ಸೇ ಹಾಗೆ ಲಂಗು-ಲಗಾಮಿಲ್ಲದ ಕುದುರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಎಂದು ಅರಿಯುವ ತಾಳ್ಮೆ ಅವರಲ್ಲಿಲ್ಲ, ಹಿರಿಯರ ಮಾತುಗಳೋ ಅವರಿಗೆ ಹಿತವೆನಿಸೋದೆ ಇಲ್ಲಾ. ಪ್ರೀತಿ-ಪ್ರೇಮ, ಸಿಗರೇಟ್, ಕುಡಿತ ಇತ್ಯಾದಿ ಶೋಕಿಗಳ  ಕಡೆ ವಾಲುವ ಮನದ ಕಂಟ್ರೋಲ್ ಅವರಿಗೆ ಸಿಗೋದೆ ಇಲ್ಲಾ.
        ಹರೆಯದ ಹುಡುಗ ಹುಡುಗಿಯರು ಪರಸ್ಪರ ಆಕರ್ಷಣೆಗೊಳಗಾಗುವುದು ಪ್ರಕೃತಿ ಸಹಜ. ಜೀವನಪರ್ಯಂತ ಕೂಡಿ ಬಾಳಬೇಕಾಗಿರುವುದರಿಂದ ಪರಸ್ಪರರು ಹೊಂದಿಕೊಂಡು ಹೋಗುವಂತ ಸ್ವಭಾವ, ಒಂದು ಗೂಡಿನ ಬದುಕಿಗೆ ಬೆಸುಗೆಯಂತೆ ಕೆಲಸ ಮಾಡುವ ಲೈಂಗಿಕತೆ ಅಂದರೆ ಪರಸ್ಪರರ ಲೈಂಗಿಕ ಸಾಮಥ್ರ್ಯ, ತ್ಯಾಗ, ಕಷ್ಟ-ಸುಖಗಳ ಹಂಚಿಕೆ ಇದೆ ಮೊದಲಾದವನ್ನೆಲ್ಲಾ ಪರೀಕ್ಷಿಸಿ ನೋಡುವ ಕುತೂಹಲ ಎಲ್ಲಾ ಹುಡುಗ ಹುಡುಗಿಯರಲ್ಲೂ ಇದ್ದೆ ಇರುತ್ತವೆ. ಇಂತಹ ಪೃಕೃತಿ ಸಹಜ ಗುಣಗಳೇ ಲಿವಿಂಗ್ ಟುಗೆದರ್ ಗೆ ಅನುವುಮಾಡಿ ಕೊಡುತ್ತವೆ ಎನಿಸುತ್ತದೆ.
ಈ ಪ್ರೀತಿ-ಪ್ರೇಮ ಇಂದಿನ ಕಾಲದಲ್ಲಿ ಎಷ್ಟು ಮೌಲ್ಯ ಕಳೆದುಕೊಂಡಿದೆ ಎಂದರೆ, ವಿದೇಶಿ ಸಂಸ್ಕøತಿಯ ಪ್ರಭಾವದಿಂದ ಇಂದಿನ ಬಹುತೇಕ ಹುಡುಗ ಹುಡುಗಿಯರು ಹೈಸ್ಕೂಲು, ಪಿ.ಯು, ಕಾಲೇಜು ಓದುವಾಗಲೇ ಅನಾವಶ್ಯಕ ಆಕರ್ಷಣೆಯ ಪ್ರೀತಿಗೆ ಬಿದ್ದು, ಮನೆಯವರು ಒಪ್ಪಲ್ಲ ಎಂದು ತಿಳಿಯುತ್ತಲೇ ಮುಂದೆನು ಮಾಡಬೇಕು ಎಂದು ತೋಚದೆ ಮನೆ ಬಿಟ್ಟು ಓಡಿ ಹೋಗಿ ತಡಕಾಡುವ ಮಟ್ಟಕ್ಕೆ ಒಂದು ಕಡೆಯಾದರೆ, ಒಬ್ಬರನ್ನೊಬ್ಬರು ಅರಿಯುವ ಮುನ್ನವೇ ಎಲ್ಲಾ ಸಂಪರ್ಕದ ಏಳು ಬೀಳು ನಡೆದು, ಜೀವನದಲ್ಲಿ ಇನ್ನೇನೂ ಇಲ್ಲಾ ಎನ್ನುವ ಹಂತಕ್ಕೆ ತಲುಪಿ ಡೈವೋರ್ಸ್ ಎಂಬಲ್ಲಿಗೆ ಎಲ್ಲಾ ಮುಗಿತು ಎಂದು ಕೈತೊಳೆದುಕೊಳ್ಳುವ ಮಟ್ಟಕ್ಕೂ ತಲುಪಿದೆ.
ಪ್ರೀತಿ ಪ್ರೇಮ ಫೇಲಾದ ಒಂದು ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಯುವ ಪ್ರೇಮಿಗಳಿಗೆ ತಮ್ಮ ತಂದೆ ತಾಯಿಯ ಬಗ್ಗೆ ಯೋಚನೆ ಇರುವುದೇ ಇಲ್ಲ. ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡಾಗ ಪಡುವ ದುಃಖವನ್ನು ಯಾವ ಪದದಿಂದಲೂ ಹೇಳಲಾಗದು. ಮಗು ಗರ್ಭದಲ್ಲಿ ಬೆಳೆಯುವಾಗಿನಿಂದ ಹಿಡಿದು ಅವನು/ಅವಳು ಬೆಳೆದು ದೊಡ್ಡವನಾಗುವವರೆಗೂ ಪ್ರತಿಕ್ಷಣ ಪ್ರತಿ ದಿನ ತಂದೆ ತಾಯಿಯರು ನಮ್ಮನ್ನು ಎಷ್ಟು ಕೇರ್ ಮಾಡುತ್ತಾರೆಂಬುದು ಬಹುತೇಕ ಮಕ್ಕಳಿಗೆ ತಿಳಿದಿರುವುದಿಲ್ಲ. ಅದು ತಿಳಿಯಬೇಕೆಂದರೆ ಇವರು ಕೂಡ ತಂದೆ ತಾಯಿಯಾಗಿ ಅವರ ಮಕ್ಕಳು ಇದೇ ರೀತಿ ಕೆಲಸ ಮಾಡಬೇಕು ಅಷ್ಟೆ. ಎಲ್ಲೋ ಒಂದು ಕಡೆ ಮನೆಯವರ ತಪ್ಪು ಇದರಲ್ಲಿದೆ ಎನಿಸುತ್ತದೆ. ತಂದೆ ತಾಯಿಗಳು ಮಗುವಾದ ಮೇಲೆ ಎಲ್ಲಿಯೂ ಕೂಡ ಮಗುವಿನ ಮುಂದೆ ಪರಸ್ಪರ ಮುದ್ಧಿಸುವ ಮನಸಾಗಲಿ, ಅಪ್ಪಿಕೊಳ್ಳುವ ಪರಿಯಾಗಲಿ ಮಕ್ಕಳ ಮುಂದೆ ತೋರಲು ಇಷ್ಟಪಡುವುದಿಲ್ಲ. ‘ಸುಮ್ಮನೀರ್ರಿ ಮಗ/ಮಗಳು’ ಇದ್ದಾರೆ ಎನ್ನುವ ರಾಗದೊಂದಿಗೆ ಮುಚ್ಚು ಮರೆ ಮಾಡುತ್ತಾರೆ. ಇಬ್ಬರ ನಡುವೆ ಮಗುವನ್ನು ಮಲಗಿಸಿಕೊಂಡು ಮಗುವಿನ ಪ್ರೀತಿಗಾಗಿ ತಮ್ಮ ಸುಖವನ್ನು ತ್ಯಾಗ ಮಾಡಿರುತ್ತಾರೆ. ಯಾಕೆ ಹೀಗೆ!?.., ಇನ್ನೂ ಕೆಲವರಿದ್ದಾರೆ ಮಗ/ ಮಗಳು ವಯಸ್ಸಿಗೆ ಬಂದ ತಕ್ಷಣ ಅವರಿಗೆ ಒಂದು ಸಪರೇಟ್ ರೂಮ್ ಮಾಡಿ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳದೇ ಯಾವುದೆ ವಿಚಾರವನ್ನು ಗಮನಿಸಿದೆ ತೆಪ್ಪಗಿರುತ್ತಾರೆ. ಮಕ್ಕಳಿಗಿರುವ ಕುತೂಹಲ, ಅವರ ಮನದಲ್ಲಿರುವ  ವಸ್ತು-ಸ್ಥಿತಿಯ ತಳಮಳ ಏನನ್ನೂ ಅರಿಯದೆ ಸುಮ್ಮನಿರುತ್ತಾರೆ. ಹೌದು ಲೈಂಗಿಕ ವಿಷಯಗಳ ಬಗ್ಗೆ ಮುಜುಗರವಿಲ್ಲದೆ ಮಾತಾಡುವುದು ಕಷ್ಟ. ಆದರೆ ಲೈಂಗಿಕ ಕ್ರೀಯೆಗಳು ಪಾಪಪ್ರಜ್ಞೆಯ ಚಟುವಟಿಕೆ ಎನ್ನುವ ರೀತಿಯಲ್ಲಿ ಮಾತನಾಡುವುದು ತಪ್ಪು ಅಲ್ವಾ. ಇಂತಹ ಭಾವನೆಗಳನ್ನು ದೂರ ಸರಿಸಿದಾಗ ಲೈಂಗಿಕ ವಿಷಯಗಳು ಹುಟ್ಟಿಸುವ ತೀವ್ರ ಕುತೂಹಲ ಅದರ  ಮುಜುಗರ ಬದಲಾಗಬಹುದು ಎನ್ನಿಸುತ್ತದೆ. ಮಕ್ಕಳ ಮನಸ್ಸಿನ ಬೆಳವಣಿಗೆ, ಬದಲಾವಣೆಗಳ ಅಧ್ಯಯನ ಮಾಡಿರುವ ಅನೇಕರ ಪ್ರಕಾರ ಲೈಂಗಿಕ ವಿಷಯಗಳ ಬಗ್ಗೆ ಮನೆಯ ವಾತಾವರಣದಲ್ಲಿರುವಂತಹ ಮುಜುಗರ, ಮಡಿವಂತಿಕೆಯ ಭಾವನೆಗಳು ಮಕ್ಕಳ ಮನದಲ್ಲಿ ಮೂಡುವ ಲೈಂಗಿಕ ವಿಷಯದ ಬಗೆಗಿನ ಕುತೂಹಲವನ್ನು ಕ್ಷೀಣಿಸುವುದಿಲ್ಲ. ಬದಲಿಗೆ ಕಾಮದ ವಿಷಯಗಳ ಬಗ್ಗೆ ಮುಚ್ಚುಮರೆಯ ವರ್ತನೆಯನ್ನು ಗಟ್ಟಿಯಾಗುವಂತೆ ಮಾಡಿಸುತ್ತದೆ. ಇದೇ ನಂತರದ ದಿನಗಳಲ್ಲಿ ವ್ಯಕ್ತಿತ್ವದ ಗೊಂದಲಕ್ಕೂ ಕಾರಣವಾಗಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೆತ್ತವರೆ, ಎಲ್ಲದಕ್ಕೂ ಒಂದೊಂದು ಸಮಯ ಅಂತ ಇರುತ್ತೆ. ಯಾವಾಗ ಎನಾಗÀಬೇಕೋ ಆಗೆ ಆಗುತ್ತೆ ಅಲ್ಲಿಯವರೆಗೂ ಸುಮ್ಮನಿದ್ದು ಬಿಟ್ಟರೆ ಬೆಟರ್. ಇಲ್ಲವಾದಲ್ಲಿ ವಯಸ್ಸಿನಲ್ಲಾಗುವ ಬದಲಾವಣೆಯನ್ನು ಗಮನಿಸಿ, ಕೂಲಂಕುಶವಾಗಿ ಚರ್ಚಿಸಿ, ಪರಸ್ಪರ ಮುಕ್ತವಾಗಿ ಮಾತನಾಡಿ ತಿಳಿಹೇಳುವುದು ಉತ್ತಮ ಎನಿಸುತ್ತದೆ. ಬದಲಾಗಿ ಅದೇ ಶಿಕ್ಷಾರ್ಹ ಅಪರಾಧ ಎಂದುಕೊಳ್ಳಬೇಡಿ.                                                                                                                                                                                                                                                         ಹರೆಯದ ಹುಡುಗ ಹುಡುಗಿಯರೇ ನೀವ್ಯಾಕೆ ‘ಲಿವಿಂಗ್ ಟುಗೆದರ್ ಕಾನ್ಸೆಪ್ಟ್’ ನ್ನು ಫಾಲೋ ಮಾಡ್ತೀರಾ. ನಿಮಗಾಗಿ ತಂದೆ ತಾಯಂದಿರು ಹಗಲಿರುಳು ಕಷ್ಟಪಟ್ಟು, ಸುಖವನ್ನು ಬಲಿಕೊಟ್ಟು, ಬೆಳೆಸಿದ್ದು ತಿಳಿದಿದ್ದರೂ ನೀವ್ಯಾಕೆ ಅವರ ಪ್ರೀತಿಗೆ ಕೈಕೊಟ್ಟು ಇನ್ನೊಂದು ಪ್ರೀತಿಗೆ ಹಾತೊರೆದು ಓಡಿ ಹೋಗ್ತಿರಾ!?... ಒಂದು ಕ್ಷಣ ಯೋಚಿಸಿ. ಮಕ್ಕಳೇ, ಮುಂದುವರಿಯುವ ಮುಂಚೆ ಮುಂದೆ ನಿಂತು ನೋಡಿ, ಲಿವ್ ಇನ್ ರಿಲೇಷನ್‍ಶಿಪ್ ಎಂಬ ತತ್ವ ಪಾಶ್ಚಿಮಾತ್ಯ ಸಂಸ್ಕøತಿಯಿಂದ  ಬಂದಿದ್ದರೂ ಅದು ಇದೀಗ ಎಲ್ಲಾ ಕಡೆಯೂ ಕಾಮನ್ ಎನ್ನುವ ಹಂತಕ್ಕೆ ತಲುಪಿದೆ. ಇದರ ಪರಿಣಾಮ ನೀವು ಪರಸ್ಪರ ಆಕರ್ಷಿಸಲ್ಪಟ್ಟು, ಪ್ರೀತಿ ಬಲೆಗೆ ಬಿದ್ದು, ಜೀವನವೇ ಅಲ್ಲೋಲ ಕಲ್ಲೋಲ ಮಾಡಿಕೊಳ್ಳುತ್ತಿದ್ದೀರಾ!? ಅದಕ್ಕಾಗಿಯೇ ದಿನ ಬೆಳಗಾದರೆ ಇಂತಹದೇ ಸುದ್ದಿ ನಾವು- ನೀವು ಕೇಳುತಿರುವುದೆನ್ನುವದರಲ್ಲಿ ಮುಚ್ಚುಮರೆ ಇಲ್ಲಾ. ಅತ್ತ ಮನೆಯವರು ನಿಮ್ಮನ್ನು ಎಕ್ಸೆಪ್ಟ್ ಮಾಡಲ್ಲ, ಇತ್ತ ಬಾಳ್ವೆಯೂ ಸರಿಯಾಗಿ ನಡೆಯೊಲ್ಲ. ಕೊನೆಗಿರೋದೊಂದೆ ನಾವು ತಪ್ಪು ಮಾಡಿ ಬಿಟ್ವಿ ಅನ್ನೋ ಮನಸ್ಸಿನ ತಿಕಳಾಟ. ಪರಿಣಾಮ ಸಾವಾಗಿರಲೂಬಹುದು... ಜೋಡಿಗಳು ಬೇರೆ-ಬೇರೆಯಾಗಲೂಬಹುದು.
ಸ್ವಾಮಿ ವಿವೇಕಾನಂದರು ಒಂದು ಕಡೆ ಹೇಳುತ್ತಾರೆ, “ಒಬ್ಬ ಮನುಷ್ಯನ ಜನ್ಮ ಸಾರ್ಥಕವಾಗುವುದು ಯಾವಾಗೆಂದರೆ, ಅವನು ಬೇರೆಯವರ ಸಲುವಾಗಿ ದುಡಿದಾಗ”...ಎಂದು. ನಾವು ಬೇರೆಯವರಿಗಾಗಿ ದುಡಿಯುವುದು ಬೇಡ ಅಟ್‍ಲೀಸ್ಟ್ ನಮ್ಮನ್ನು ಹೆತ್ತ ತಂದೆ-ತಾಯಿಗಾದರೂ ದುಡಿಯೋಣ, ಅವರಿಗಾಗಿ ಬದುಕೋಣ, ಲವ್ ಅನ್ನೋ ಕ್ಷಣಿಕ ಸುಖಕ್ಕೆ ಹಾತೊರೆಯದೆ ಸುಖಸಂಸಾರದಲ್ಲಿ ಎಲ್ಲರ ಜೊತೆಯೂ ಲೀನರಾಗೋಣ, ತಂದೆ ತಾಯಿಯರೆ ನೀವೂ ಕೂಡ ಅಷ್ಟೆ, ಸಂಕೋಚ ಬಿಟ್ಟು ಸಂಸಾರ ನಡೆಸಿ, ನಿಮ್ಮ ಹಾಗೂ ಮಕ್ಕಳ ಬಾಳಲ್ಲಿ ಸಮೃದ್ಧರಾಗಿ...




No comments:

Post a Comment