Friday 24 April 2015

ಹೆಣ್ಣು-4

     ಮಹಿಳೆ ಇಂದು ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿಗತಿ, ಸಮಾನತೆ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶದಲ್ಲೂ ಸುಧಾರಣೆಯನ್ನು ಕಂಡಿಲ್ಲ. ಮಹಿಳೆಯ ವಿಚಾರದಲ್ಲಿ ಕೌಟಂಬಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮೌಲ್ಯಗಳು ಬದಲಾಗದ ಹೊರತು ಅವರ ರಕ್ಷಣೆಯೂ ಅಷ್ಟಕಷ್ಟೆ. ಗಂಡು ಹೆಣ್ಣನ್ನು ಸಮಾನವಾಗಿ ಕಾಣಬೇಕೆಂದು ಭಾಷಣ ಬಿಗಿಯುವವರು ಎಲ್ಲಾ ಕಡೆಯೂ ಸಿಗಬಹುದು ಆದರೆ ಹೊರಗಡೆಯಾಗಲಿ, ಮನೆಯಲ್ಲಾಗಲಿ ಗಂಡು ಹೆಣ್ಣಿನ ಮಧ್ಯೆ ತಾರತಮ್ಯ ನಿಲ್ಲಿಸಲು ನಾವು ಎಷ್ಟು ಜವಾಬ್ಧಾರಿಯ ಕೆಲಸ ಮಾಡುತ್ತಿದ್ದೇವೆ…!?ಊಹೂ!!! ಉತ್ತರವಿಲ್ಲ...

ಭಾರತೀಯ ಪರಂಪರೆಯು ಅನಾಧಿಕಾಲದಿಂದಲೂ ಪುರುಷರು ಮತ್ತು ಮಹಿಳೆಯರ ವಿಷಯದಲ್ಲಿ, ಜೀವನದ ಎಲ್ಲಾ ಅಂಶಗಳಲ್ಲೂ ತಾರತಮ್ಯತೆಯನ್ನು ಕಾಣುತ್ತಾ ಬಂದಿದ್ದು, ಇದು ಶೋಷಣೆಯ ಹೆಸರಲ್ಲಿ ದಿನಂಪ್ರತಿ ನಮ್ಮೆದುರು ಬಿಂಬಿತವಾಗುತ್ತಾ ಇದೆ. ಹೆಣ್ಣಿನ ಮೇಲೆ ಎಲ್ಲಿಯವರೆಗೆ ಶೋಷಣೆಯೆಂಬ ಪೆಡಂಭೂತ ಇರುತ್ತದೋ ಅಲ್ಲಿಯವರೆಗೆ ಅವಳಿಗೆ ಪೂರ್ಣ ಪ್ರಮಾಣದ ರಕ್ಷಣೆ ದೊರಕುವುದು ಅಕ್ಷರಸಹ ಸುಳ್ಳು.
ಹೆಣ್ಣಿನ ರಕ್ಷಣೆ ಹೆಣ್ಣಿನ ಕೈಯಲ್ಲೇ ಇರುವುದಂತು ಸತ್ಯ ಹಾಗೆಯೇ ಅದನ್ನವರು ಅರಿತುಕೊಂಡಾಗ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ. ಇನ್ನೊಂದು ವಿಚಾರದಲ್ಲಿ ಸರಕಾರ ಮತ್ತು ಸಮಾಜ ಇವೆರಡೂ  ಹೆಣ್ಣಿನ ದೌರ್ಜನ್ಯದ ಅಪರಾಧದಲ್ಲಿ ಸಮಪಾಲು ಹೊಂದಿದೆ ಎಂದರೆ ತಪ್ಪಿಲ್ಲ. ನಮ್ಮಲ್ಲಿ ಅನೇಕ ಶಾಸನಗಳಿವೆ ವರ್ಷಂಪ್ರತಿ ಅವುಗಳು ಬದಲಾವಣೆಗಳನ್ನು ಕಾಣುತ್ತಿವೆ ಆದರೆ ಅದರಿಂದ ಶಿಕ್ಷೆಯ ಪ್ರಮಾಣವನ್ನು ಶಾಸನ ಹೆಚ್ಚು ಮಾಡಿತೆ ಹೊರತು, ಸಮಾಜದಲ್ಲಿ ಹೆಣ್ಣಿಗೆ  ರಕ್ಷಣೆ ಮಾತ್ರಾ ದೊರಕುತ್ತಿಲ್ಲ.
ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊರೆಯಾದರೆ ಇನ್ನರ್ಧ ಅವಳ ಕುಟುಂಬ ಮತ್ತು ಸಮಾಜದ್ದಾಗಿದೆ. ಜೊತೆಗೆ ನಮ್ಮ ನೆಲದ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಕಾರ್ಯಕೂಡ ಆಗಬೇಕಿದೆ, ಕಾನೂನು ಮತ್ತು ಸಮಾಜ ನೋಡುವ ರೀತಿ ಬದಲಾಗಬೇಕು. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ನಿರ್ಭಯವಾಗಿ ದೂರನ್ನು ನೀಡುವಂತಾಗಬೇಕು. ದೂರು ತಕ್ಷಣವೇ ತನಿಖೆಯನ್ನು ಆರಂಭಿಸಬೇಕು ಸಮಾಜದಲ್ಲಿ ಅವಳು ಮತ್ತೆ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡಬೇಕು. ಹೆಣ್ಣನ್ನು ಕೇವಲ ಭೋಗದ ವಸ್ತವೆಂದು ನೋಡುವ ಪ್ರಪಂಚಕ್ಕೆ ಆಕೆ ನಿಭಾಯಿಸುವ ಪಾತ್ರಗಳ ಬಗ್ಗೆ ಅರಿವಾಗಬೇಕು. ಅವಳ ಮೇಲೆ ಆಕ್ರಮಣ, ಶೋಷಣೆ ಕಂಡಲ್ಲಿ ಅದನ್ನೆದುರಿಸಿ ನ್ಯಾಯ ಪಡೆಯುವಂತಾಗಬೇಕು
 ಪ್ರತಿಯೊಬ್ಬ ಮಹಿಳೆಯಲ್ಲೂ ಶಕ್ತಿ, ಲಾವಣ್ಯ, ಧೈರ್ಯ, ಕರುಣೆ, ಸಮೃದ್ಧಿ, ಕರುಣೆ, ಮೌಲ್ಯ, ಜ್ಞಾನ ಮತ್ತು ದೂರದೃಷ್ಟ್ಟಿಗಳ ಸರಿಯಾದ ಸಮ್ಮಿಶ್ರಣವಿದೆ. ದಿವ್ಯತೆಯ ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀಯಾಗಿರುವ ಅರ್ಧನಾರೀಶ್ವರಿಯನ್ನು ಕಲ್ಪನೆಯಲ್ಲೇ ಪೂರ್ವಜರು ತೋರಿಸಿರುವುದು ಸಮಾನತೆಯ ಅಭಿವ್ಯಕ್ತಿಯೇ ಹೊರತು ಉತ್ಫ್ರೇಕ್ಷೆಯಲ್ಲ. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಆದ್ದರಿಂದ ಹೆಣ್ಣಿನ ರಕ್ಷಣೆಯಲ್ಲಿ ನಾವು ಪಾಲುದಾರರಾಗೋಣ.

No comments:

Post a Comment