Friday 24 April 2015

ಮುದ್ದು ಮರಿಯ ಸೋಜಿಗದ ನಲ್ಮೆ


       ಮುಂಜಾನೆ ಸೂರ್ಯಕಿರಣ ನೆತ್ತಿಯಿಂದ ಎದ್ದು ತನ್ನ ಪ್ರಖರತೆಯ ಮೃದು ಬಿಸಿಯನ್ನು ಭೂಮಿಗೆ ತಾಗುವ ಮುನ್ನವೇ ಮುಂಗಾಲನ್ನು ಊರಿ, ಹಿಂಗಾಲನ್ನು ಮಡಚಿ, ಸಣ್ಣ ಕಿರು ನಗೆಯೊಂದಿಗೆ ನನ್ನ ಏಳುವಿಕೆಯನ್ನು ಕಾಯುತ್ತಾ ಕುಳಿತಿರುತ್ತಿದ್ದ ಆ ಜಾಗÀದಲ್ಲಿ ಇವತ್ತಿನ ನಿನ್ನ ಪ್ರಸ್ತುತತೆ ಇಲ್ಲದಿರುವುದನ್ನು ಎಣಿಸಿಕೊಂಡರೆ ವೇದನೆಯ ಜೊತೆಗೆ ಮನ ಪಟಲದಲ್ಲಿ ಎಕಾಂಗಿ ಭಾವ ಮೂಡಿ ಕಣ್ಣಿನ ಅಂಚಲ್ಲಿ ಕಂಬನಿ ಜಿನುಗುತ್ತೆ.
ಅದ್ಯಾಕೋ ಗೊತ್ತಿಲ್ಲ...!, ನೀನಂದ್ರೇ ನಂಗೆ ತುಂಬಾ ಇಷ್ಟ ಕಣೋ, ನಾನು ನಿನ್ನ ತುಂಬಾ ಹಚ್ಚಿಕೊಂಡಿದ್ದೆ. ನಿನಗೂ ಕೂಡ ನಾನಂದ್ರೆ ಪಂಚಪ್ರಾಣ ಅಂತ ಗೊತ್ತು. ರಜೆಯಲ್ಲಿ ಅಜ್ಜ- ಅಜ್ಜಿಯ ಊರು ಅಂತ ಮನೆಬಿಟ್ಟು ಅಲ್ಲಿ- ಇಲ್ಲಿ ಸ್ವಲ್ಪ ದಿನ ಇದ್ದರೂ ನೀನು ಮಾತ್ರಾ ಪ್ರತಿದಿನ ನನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ನನ್ನ ಬರುವಿಕೆಯಂತೂ ನಿನಗೆಷ್ಟು ಖುಷಿ ಕೊಡುತ್ತಿತ್ತೆಂದರೆ ಅದರ ಅಂದವನ್ನು ನೀನು ಕೂಗಿ ವರ್ಣಿಸುತ್ತಿದ್ದ ಸೋಜಿಗವೇ ಬೇರೆ ಎನಿಸುತ್ತೆ. ಪ್ರತಿ ದಿನ ನನ್ನ ಶಾಲೆಗೆ ಬಿಟ್ಟು, ಸಂಜೆ   ನಾ ಮನೆಗೆ ಬರುವ ಸಮಯವನ್ನು ಬಾಗಿಲ ಬಳಿಯೇ ಕಾದು ಕುಳಿತು ನೀನು ಆದರದಿಂದ ಆಹ್ವಾನಿಸುತ್ತಿದ್ದ ರೀತಿ ಇನ್ನೆಂದೂ ಯಾರಿಂದಲೂ ತೋರಲಾಗದು ಬಿಡು.

ದಿನ ಬೆಳಿಗ್ಗೆ ನಾನು ಎದ್ದು ಹೊರ ಬಂದಾಗ ಸಣ್ಣ ಕಿರುನಗೆಯೊಂದಿಗೆ ಶುಭೋದಯ ಸಾರಿ, ಎದ್ದ ತಕ್ಷಣವೇ ನನಗೊಂದು ಪ್ರಣಾಮವಿತ್ತು. ಒಂದಾಟ ಆಡೋಣವೆಂದು ಒಟ್ಟಿಗೆ ಅಂಗಳದಲ್ಲಿ ಎದ್ದು-ಬಿದ್ದು ಆಡಿ ನಂತರವೇ ಮುಖ ತೊಳೆದು ತಿಂಡಿ ತಿನ್ನುವುದನ್ನು ನೆನೆಸಿಕೊಂಡರಂತೂ ಇಂದಿಗೂ ಬಾಲ್ಯ ಜೀವನಕ್ಕೊಂದು ಮಹತ್ವದ ಅರ್ಥ ಕಲ್ಪಿಸಿಕೊಟ್ಟು ನನಗದರ ಅಂದವನ್ನು ಹೆಚ್ಚಿಸಿದ ಆಪ್ತ ನೀನೆನಿಸುತ್ತದೆ. ನಿನಗೆ ನಾನು ಎಷ್ಟು ಇಷ್ಟ ಅಂತ ಗೊತ್ತಾಗಿದ್ದು ಯಾವಾಗ ಗೊತ್ತಾ!? ನಾನು ಮನೆಯಲ್ಲಿ ಇಲ್ಲದಾಗ ನೀನು ಒಬ್ಬನೇ ಅಮ್ಮ-ಅಪ್ಪನ ಜೊತೆ ಇದ್ದು ನನಗಾಗಿ  ಫೀಲ್ ಮಾಡ್ತಿದ್ದ ಸಂದರ್ಭವನ್ನು ಅಮ್ಮ ಹೇಳುತ್ತಿದ್ದಾಗಲೆ ತಿಳಿದದ್ದು. ಆಗಲೇ ನಿನ್ನ ಮೇಲೆ ಇರುವ ಪ್ರೀತಿ ಇನ್ನಷ್ಟು ಇಮ್ಮಡಿಯಾಗಿದ್ದು. ಪ್ರತಿ ದಿನ ಈ ಪ್ರೀತಿ ಇಮ್ಮಡಿಯಾಗುತ್ತಿತ್ತೆ ಹೊರತು ಕಡಿಮೆಯಾಗಿದ್ದೆ ಗೊತ್ತಿಲ್ಲ ಕಣೋ.
ನನ್ನ ಮಾಮೂಲಿ ದಿನಚರಿಯಲ್ಲಿ ಎಡೆಬಿಡದೆ ಏಳುವ ಆಸೆಗಳಿಗೆ ನೀ ಕೊಡುವ ಸಾಥ್, ನನ್ನ ಮೆಚ್ಚಿಸೋ ನಿನ್ನ ಪ್ರೀತಿಯ ಪಾಥ್ ಇವೆಲ್ಲದರ ನಡುವೆ ನಾನು ತುಂಬಾ ಚಿಕ್ಕವನು ಅನ್ನಿಸುತ್ತೆ ಕಣೋ. ಚಿಕ್ಕಂದಿನಿಂದಲೂ ಇದ್ದ ಕ್ರಿÀ್ರಕೆಟ್ ಆಟದ ಹುಚ್ಚು ನಿನಗೆ ಎಷ್ಟು ಕಷ್ಟಕೊಟ್ಟಿತ್ತೋ ನಾ ತಿಳಿಯೆ!!!. ಗೆಳೆಯರ್ಯಾರು ಸಿಗದಿದ್ದಾಗ ನಾ ದೂರಕ್ಕೆ ಎಸೆಯುತ್ತಿದ್ದ ಬಾಲ್‍ನ್ನು  ನೀನು ಕೈಗಳಿಂದ ತರಲಾಗದೇ ಬಾಯಿಂದ ಕಚ್ಚಿಕೊಂಡು ಬರುತ್ತಿದ್ದದ್ದೂ ನಿನ್ನನ್ನ ಕಾಡಿಸುವಂತೆ ಮಾಡುತ್ತಿತ್ತೆಂದು ನನಗೆ ಅನಿಸುತ್ತಿದೆ. ದಯವಿಟ್ಟು ಕ್ಷಮಿಸಿಬಿಡು. ಫರ್ಲಾಂಗು ದೂರಗಳ ನಿನ್ನ ಓಟ ಕಿಲೋ ಮೀಟರ್‍ವರೆಗೂ ಸಾಗಿದರೂ, ನಿನ್ನಲ್ಲಿ ಯಾವುದೇ ಉತ್ಸಾಹ ಕಡಿಮೆ ಆಗದೆ ಇನ್ನೂ ಆಡೋಣ-ಆಡೋಣ ಅಂತಲೇ ನನ್ನ ಸಂತೋಷವನ್ನೇ ನೀನು ಹಾರೈಕೆ ಮಾಡಿಕೊಳ್ಳುತ್ತಿದ್ದದ್ದೂ, ಯಾವ ಋಣಾನುಬಂಧವೋ ನಾ ತಿಳಿಯೇ...
      ಹೇ ನಿನಗೆ ನೆನಪಿದ್ಯಾ, ನನಗೀಗಲು ನೆನಪಿದೆ. ನನಗಾಗ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಮನೆಯಲ್ಲೆ ಕುಳಿತು ಓದಲು ಒಂದಿಷ್ಟು ದಿನ ರಜೆ ನೀಡಿದ್ದ ಸಮಯ, ಕುಳಿತಲ್ಲೆ ಕುಳಿತು ಓದಲು ಬೋರ್ ಎನಿಸುವ ನನಗೆ ಎಲ್ಲಾ ಕಡೆ ಓಡಾಡುತ್ತಾ ಓದುವ ಹಂಬಲ, ಮನೆಯಂಗಳ, ಗದ್ದೆಯ ಅಂಚು, ಗುಡ್ಡದ ಮೇಲಿರುವ ಬೆಟ್ಟದ ತುದಿಯ ಮೇಲೆ ಕುಳಿತು ಒಂದಿಷ್ಟು ಹೊತ್ತು ಒಂದೊಂದು ಸ್ಥಳದಲ್ಲಿ ಓದುವ ಪರಿವಿಡಿ ನನ್ನದು. ಆ ಸಮಯದಲ್ಲಿ ನೀ ಒಂದಿನವೂ ನನ್ನ ಬೆನ್ನು ಬಿಡದೆ, ನೀ ಓದು ನಾನು ನಿನಗೆ ಬೇಸರವಾಗದಂತೆ ಕಂಪೆನಿ ಕೊಡುತ್ತಾ ಪ್ರತಿ ದಿನವೂ ನಾ ಸಾಗುವ ಎಲ್ಲಾ ಕಡೆ ನನ್ನ ಪಕ್ಕವೇ ಕುಳಿತು, ಕಾಲಿನ ಬಳಿ ಬಂದು ಮಲಗಿ ಸ್ಫೂರ್ತಿ ತುಂಬಿದ ಬಂಧುಗಿಂತಲೂ ಆಪ್ತನಾಗಿದ್ದೆ ನೀ.
 ಈಗಲೂ ಊರಿಗೋದರೆ ಒಮ್ಮೊಮ್ಮೆ ಆ ಪರಿಸರ, ನಿನ್ನ ಜೊತೆ ಕಳೆದ ಆ  ಕ್ಷಣ ಮನಸಿನ ಮೂಲೆಯಲ್ಲಿ ಕಚಗುಳಿ ಇಡುತ್ತದೆ. ಇದಂತೂ ನಿನಗೆ ನೆನಪಿರಲೇಬೇಕು!, ಆ ದಿನ ರಾತ್ರಿ ನಾವೆಲ್ಲಾ ಮಲಗಿ ನಿದ್ರಾದೇವಿಯ ಮಡಿಲಿಗೆ ಶರಣಾಗಿದ್ದಾಗ ಮನೆಯ ಹೊರಗಡೆ ಹಾಕಿದ್ದ ಅಡಿಕೆ ರಾಶಿಗೆ ಒಬ್ಬ ಕಳ್ಳ ಕನ್ನ ಹಾಕಲು ಬಂದಿದ್ದಾಗ ನಿನಗೆ  ಕಳ್ಳ ಬಂದ ಸುಳಿವು ಸಿಕ್ಕಿ ನಮ್ಮ ನಿದ್ರೆಗೆ ಭಂಗ ಬರಬಾರದೆಂದು ನಿನೋಬ್ಬನೇ ನಿನ್ನ ಪ್ರಾಣ ಒತ್ತೆ ಇಟ್ಟು ಅವನನ್ನು ಎದುರಿಸಿದ್ದೆ. ಬೆದರಿಸಿ ಅಟ್ಟಿಸಿಕೊಂಡು ಹೋಗಿ ಓಡಿಸಿದ್ದೆ. ಚಿಕ್ಕಂದಿನಿಂದಲೂ ನೀನು ನಮಗಾಗಿ, ನಮ್ಮ ಮನೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಕೊನೆಯವರೆಗೂ ಎನೂ ಕೇಳದೇ, ಏನಕ್ಕೂ ಅಳದೇ ಖುಷಿ ಖುಷಿಯಾಗೆ ಇದ್ದದ್ದನ್ನು  ನೋಡಿದರೆ ನಾವು ಮಾನವರು  ಚಿಕ್ಕ ಚಿಕ್ಕ ವಿಷಯಕ್ಕೂ ಅಸೂಯೇ, ಆಸೆ ಪಡುವ ಮನೋಭಾವನೆಯನ್ನು ತೊಡೆದುಹಾಕಿಕೊಳ್ಳಲು ನಿನ್ನನು ನೋಡಿ ಕಲಿಬೇಕು ಅನ್ನಿಸುತ್ತೆ.
ಆ ದಿನ ತಪ್ಪು ಮಾಡಿದೆ ಅಂತ ಆಣ್ಣ ಹೊಡೆದ ಒಂದೇಟಿಗೆ  ಸಿಟ್ಟು ಮಾಡಿಕೊಂಡು ಕುಳಿತ ನಿನ್ನನ್ನು ಸಮಾಧಾನ ಮಾಡಲು ನಾನು ಎಷ್ಟು ಹರಸಾಹಸ ಪಟ್ಟಿದ್ದೆ ಅಲ್ವಾ, ಅಬ್ಬಾ!! ನಿನ್ನ ಸಿಟ್ಟನ್ನೂ ನೋಡಿ ಭಯಪಟ್ಟಿದ್ದೆ ನೀನು ಊಟ ಮಾಡಿಲ್ಲ ಅಂತ ನಾನು ಊಟ ಬಿಟ್ಟಿದ್ದೆ, ಆಮೇಲೆ ನನಗಾಗಿ ನೀ ಊಟ ಮಾಡಲು ಒಪ್ಪಿಕೊಂಡಿದ್ದೆ. ಅಷ್ಟೆ ಅಲ್ಲದೇ, ಪಕ್ಕದ ಮನೆಯ ಅಭಿ ಜೊತೆ ಆಟವಾಡಲು ಹೋದಾಗ ಸಣ್ಣ ವಿಷಯಕ್ಕೆ ಗಲಾಟೆಯಾಗಿ ಅವನು ನನಗೆ ಹೊಡೆಯಲು ಬಂದಾಗ ನೀ ಅವನಿಗೆ ಕಚ್ಚಲು ಹೋಗಿ ಹೆದರಿಸಿ ಓಡಿಸಿದ್ದನ್ನೂ ಮರೆಯಲಾಗುತ್ತದೆಯಾ?. ನನಗೆ ಸ್ವಲ್ಪ ನೋವಾದರೂ ಮರುಗುತ್ತಿದ್ದ ನಿನ್ನ ಮಾನವೀಯತೆಯನ್ನು ನಾನು ಎಷ್ಟು ಹೊಗಳಿದರೂ ಕಡಿಮೆಯೇ ಹೌದು.
        ಈಗಲೂ  ನನಗೆ ಅನೇಕ ಕಾರಣಗಳಿಂದ ನೀನು ಹೆಮ್ಮೆಯ ಗೆಳೆಯ ಎನಿಸುತ್ತೆ . ತುಂಬಾ ಚಿಕ್ಕವನಾಗಿದ್ದಾಗ ನಿನ್ನನ್ನು ಅಣ್ಣ ಮನೆಗೆ ಕರೆದುಕೊಂಡು ಬಂದಿದ್ದ. ಆ ದಿನ ನಿನಗೆ ನಾನು ‘ಟಾಮಿ’ ಅಂತ ಇಟ್ಟಿದ್ದೆ ಅಂದಿನಿಂದಲೇ ನೀ ನಮ್ಮೆಲ್ಲರ ಮುದ್ದಿನ ಟಾಮಿ ಮರಿ ಆಗಿದ್ದೆ. ನೀನಿವತ್ತು ಈ ಲೋಕದಲ್ಲಿ ನಮ್ಮ ಜೊತೆ ಇರದಿದ್ದರೂ, ಮನೆ-ಮನದಲ್ಲಿ ಶಾಶ್ವತವಾಗಿ ಉಳಿದಿರುವೆ ಪುಟ್ಟಾ. ನಿನ್ನ ನೆನಪು ಹೃದಯಪಟಲದಲ್ಲಿ ಅಜರಾಮರವಾಗಿ ನೆಲೆಸಿದೆ.  ‘ನಾಯಿ ಮರಿ ನಾಯಿಮರಿ ತಿಂಡಿ ಬೇಕೆ’ ಎನ್ನುವ ಜಿ. ಪಿ ರಾಜರತ್ನಂರವರ ಹಾಡು ಆವಾಗಲೇ ನಾನು ನಿನ್ನ ಎದುರು ಹಾಡಿ ನಿನ್ನನ್ನು ಬಗೆ ಬಗೆಯಾಗಿ ರಂಜಿಸುತ್ತಿದ್ದದ್ದೂ, ‘ನಾಯಿ ಮರಿ ನಿನಗೆ ತಿಂಡಿ ಯಾಕೆ ಬೇಕು?’ ಎಂದು ಪ್ರಶ್ನಿಸುತ್ತಿದ್ದದ್ದೂ ಅದನ್ನೆಲ್ಲಾ ಮರೆಯಲಿಕ್ಕಾಗುತ್ತಾ ನೀನೆ ಹೇಳು. ಎಲ್ಲದಕ್ಕೂ ನಿನ್ನಲ್ಲಿ ನಗುವಿನ ಒಲುಮೆ ಇತ್ತು, ಸೋಜಿಗದ ಉತ್ತರವಿತ್ತು. ಆದರೆ ಏನು ಮಾಡಲಿ ನಮ್ಮ ಈ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ ಎನೋ ಆ ದಿನ ನೀನು ಮನೆಯ ಅಂಗಳದಿಂದ ಹೊರ ಹೋದವನು ವಾಪಾಸು ಬಂದಿದ್ದು ಉಸಿರಿರದ ದೇಹದಿಂದಲೇ. ಎಲ್ಲಿ, ಏನಾಯಿತು ಎಂಬುದು ಅರಿಯುವ ಮುನ್ನವೇ ನನ್ನನ್ನು ಅನಾಥ ಮಾಡಿ ನೀ ಕಾಣದೂರಿಗೆ ಪಯಣಿಸಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿದಿನ ಯಾರ ಮನೆಯ ನಾಯಿಮರಿ ಕಂಡರೂ ಅಲ್ಲಿ ನಿನ್ನನ್ನೇ ಅರಸುವೇ, ಮುಂದಿನ ಏಳೇಳು ಜನ್ಮದಲ್ಲೂ ನಿನ್ನ ಗೆಳೆತನ ನನಗೆ ಸಿಗಲಿ, ಮತ್ತೊಮ್ಮೆ ನಮ್ಮ ಮನೆಯಲ್ಲೇ ಹುಟ್ಟಿ ಬಾ...ಎಂದು ಅನುದಿ ಆಶಿಸುವೆ ಕಣೋ..

“ಎಂದೆಂದೂ ನಿನ್ನ ನೆನಪಲ್ಲೇ ಇರುವ ನನ್ನ ನಲ್ಮೆಯೇ ನಿನ್ನ ವ್ಯಕ್ತಿತ್ವ ತೋರಿಸುವ ಕನ್ನಡಿ...
ನನ್ನ ಬದುಕಿನ ಪುಸ್ತಕದ ಪ್ರಾರಂಭದಲ್ಲೇ ಸದಾ ಇರುತ್ತದೆ ನಿನ್ನದೇ ಮುನ್ನುಡಿ...”




No comments:

Post a Comment