Friday, 5 May 2017

ಸಿರಿ ಬುಲೆಟ್: ಸೇಫಾದ ಸೇಫ್ಟಿ ಎಲ್ಲಿದೆ ತೋರ್ಸಿ..: ಸೇಫ್ಟಿ... ಸೇಫ್ಟಿ... ಸೇಫ್ಟಿ... ಸೀಟ್ ಬೆಲ್ಟೇ ಸೇಫ್ಟೀ...


“ಜಾಗೃತಿ ಮಗಾ... ಹುಷಾರು ಮಗಾ”...
ಮಾಮೂಲಾಗಿ ಪ್ರತಿ ಮನೆಯಿಂದ ಹೊರಬೀಳುವ ಮನುಷ್ಯನಿಗೆ ಅಪ್ಪನೋ, ಅಮ್ಮನೋ, ಮಡದಿಯೋ, ಅಕ್ಕನೋ, ತಂಗಿನೋ, ಅಣ್ಣನೋ, ತಮ್ಮನೋ ಅಥವಾ ಯಾರೋ ಒಬ್ಬರು, ಪ್ರೀತಿ ಪಾತ್ರರು ಹೇಳುವ ಅಕ್ಕರೆಯ ಮಾತಿದು. ಹಾಗೆ ಆಳವಾಗಿ ನೋಡಿದರೆ ಇದು ಸಣ್ಣ ಪದವಲ್ಲ ಅದರಲ್ಲಿ ತುಂಬಾ ಭಾರವಿದೆ, ತುಂಬಾ ಕಾಳಜಿ ಇದೆ, ತುಂಬಾ ನಿರೀಕ್ಷೆ ಇದೆ, ಅವಾಂತರ ತಪ್ಪಿಸಿಕೋ ಎನ್ನುವ ಜನ್ಮಾಂತರದ ಅರ್ಥವಿದೆ ಆದರೆ ಎಲ್ಲವೂ ಹೇಳಿಕೆಗಷ್ಟೇ ತೂರುತ್ತಿದೆ ಯಾರೂ ಜಾಗೃತರಾಗಿ ಹೊರಬೀಳುತ್ತಿಲ್ಲ ಅದುವೇ ನಮ್ಮ ಸಮಸ್ಯೆ ... ಇದುವೇ ಈ ಬಾರಿಯ ಬುಲೆಟ್ ಸೇಫಾದ ಸೇಫ್ಟಿ ಎಲ್ಲಿದೆ ತೋರ್ಸಿ...

ಒಂದು ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಯಾವೊಂದರಲ್ಲೂ ಸೇಫ್ಟಿಯಿಲ್ಲ. ಕಿಚನ್‍ನಲ್ಲಿ ಕೆಲಸ ಮಾಡುವ ಮಹಿಳೆಗೆ, ಸ್ಕೂಲ್‍ಗೆ ಹೋಗುವ ಮಕ್ಕಳಿಗೆ, ಕಾರ್ಖಾನಾ ಕಾರ್ಮಿಕರಿಗೆ, ದಿನಗೂಲಿಗರಿಗೆ, ಬೈಕ್ ಸವಾರರಿಗೆ, ಕಾರ್ ಪ್ರಯಾಣಿಕರಿಗೆ, ಬಸ್ ಲಾರಿಗಳಿಗೆ, ಅಷ್ಟೇ ಯಾಕೆ ದಾರಿಹೋಕನಿಗೂ ಸೇಫ್ಟಿ ಇಲ್ಲ...
ನಾವಿಂದು ಅನೇಕ ಬಗೆಯ ಪ್ರಗತಿಯಲ್ಲಿ ಮುನ್ನಡೆ ಕಾಣುತ್ತಿದ್ದೇವೆ. ಆಧುನಿಕತೆಯ ಟ್ರೆಂಡ್ ನಮ್ಮನ್ನು ಕ್ಷಣಿಕ ಸುಖ ಕೊಟ್ಟು ಕಟ್ಟಿ ಹಾಕುತ್ತಿದೆ ಅದರಿಂದಾಗಿ ನಾವ್ಯಾರು ಕ್ವಾಲಿಟಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೊಡಬೇಕಾದ ವಿಚಾರಕ್ಕೆ ಹೆಚ್ಚಿನ ಪ್ರಯೋರಿಟಿ ನೀಡುತ್ತಿಲ್ಲ. ಮುಂದೇನಾಗುತ್ತದೆ ಎನ್ನುವ ಅರಿವನ್ನು ಮೈದಳೆಯುತ್ತಿಲ್ಲ!..
ತುಂಬಾ ಸಿಂಪಲ್ ಆಗಿ ಹೇಳುವುದಾದರೆ ಸೇಫ್ಟಿ ಅಂದ್ರೆ ‘ಜಾಗೃತೆ’. ಅದನ್ನರಿತು ಮುಂದೆ ಹೋಗೋಣ. ಜೀವನದ ಮೊದಲ ಧ್ಯೇಯವಾಗಿ ಕ್ರಮವಾಗಿ, ಸ್ಫಷ್ಟವಾಗಿ, ವಿಸ್ತಾರವಾಗಿ ಕೆಲಸ ಮಾಡುವಂತಹ ಸರಕ್ಷಿತ ನಿರ್ವಹಣೆ ವ್ಯವಸ್ಥೆಗೆ ಬದ್ಧರಾಗಿ, ಸೇಫ್ಟಿ ಸಿಸ್ಟಮ್‍ಗಳನ್ನು ಆದಷ್ಟು ಹೆಚ್ಚು ಅಳವಡಿಸಿಕೊಂಡು ಬರುವ ಅನೇಕ ಗಂಡಾಂತರಗಳಿಂದ ದೂರವಿರುವ ಪ್ರಯತ್ನ ಮಾಡೋಣ ಎನ್ನುತ್ತಾ ಈ ತಿಂಗಳು ಸೀಟ್ ಬೆಲ್ಟ್‍ನ ಅವಾಂತರ ಮತ್ತು ಅದನ್ನು ಅಳವಡಿಸಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಪ್ರಯತ್ನವಿದು. ಓದಿ ಅಳವಡಿಸಿಕೊಳ್ಳಿ...

ನೈಜ ಘಟನೆಯಿದು:
ಹಾಸನದಿಂದ ಐಶಾರಾಮಿ ಕಾರಿನಲ್ಲಿ ಪ್ರಕಾಶ್ ಮತ್ತವರ 5 ಜನ ಸ್ನೇಹಿತರು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದರು. ಹೊಸ ಕಾರಾದ್ದರಿಂದ ಶರವೇಗದಲ್ಲಿ ಪವನರಾಜನಂತೆ ನನಗಾರು ಸಾಟಿಯಿಲ್ಲವೆಂಬಂತೆ ಗಾಳಿಯನ್ನು ಸೀಳಿಕೊಂಡು ಕಾರು ಮುನ್ನುಗ್ಗುತ್ತಿತ್ತು. ಕಾರು ಚಾಲನೆ ಮಾಡುತ್ತಿದ್ದ ಪ್ರಕಾಶ ಹತ್ತಾರು ವರ್ಷದ ನುರಿತ ಚಾಲಕನೂ ಆಗಿದ್ದ. ತಕ್ಷಣವೇ ಹೆದ್ದಾರಿಯ ಎಡಭಾಗದಲ್ಲಿ ನಿಧಾನವಾಗಿ ಸಾಗುತ್ತಿದ್ದ ಚಿಕ್ಕ ಕಾರೊಂದಕ್ಕೆ ಈ ಐಶಾರಾಮಿ ಕಾರು ಸ್ವಲ್ಪವೇ ತಾಗಿದಂತಾಗಿ ಪ್ರಕಾಶ್ ತನ್ನ ಕಾರನ್ನು ಬಲಭಾಗಕ್ಕೆ ತಿರುಗಿಸಿದ. ಪವರ್ ಸ್ಟೇರಿಂಗ್ ಇದ್ದ ಕಾರು ಸ್ವಲ್ಪ ಹೆಚ್ಚಾಗಿಯೇ ತಿರುಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಕಾಶನ ಐಶಾರಾಮಿ ಕಾರು ನಾಲ್ಕು ಪಲ್ಟಿ ಹೊಡೆದು ಚಕ್ರಗಳನ್ನು ಮೇಲ್ಮುಖ ಮಾಡಿಕೊಂಡು ನಿಂತಿತ್ತು. ಹಿಂಭಾಗ ತಾಗಿಸಿಕೊಂಡಿದ್ದ ಚಿಕ್ಕ ಕಾರು ಕೂಡ ಒಂದು ಪಲ್ಟಿ ಹೊಡೆದು ರಸ್ತೆಯ ಎಡಭಾಗದಲ್ಲಿ ಹಿಂದೆ ತಿರುಗಿ ನಿಂತಿತ್ತು.
ಸ್ಥಳದಲ್ಲಿ ಕೂಗಾಟ, ಚೀರಾಟ, ಆಕ್ರಂಧನದ ಜೊತೆಗೆ ರಕ್ತದೋಕುಳಿ ಹರಿದಿತ್ತು. ಸ್ಥಳಕ್ಕೆ ಪೊಲೀಸ್‍ರು ಮತ್ತು ಅಂಬುಲೆನ್ಸ್ ವಾಹನ ಬಂದು ಪರೀಶೀಲಿಸಿದಾಗ ಐಶಾರಾಮಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮರಣಹೊಂದಿದ್ದರು, ಉಳಿದಿಬ್ಬರಿಗೆ ತೀವ್ರ ಪೆಟ್ಟಾಗಿತ್ತು. ಆದರೆ ಚಿಕ್ಕ ಕಾರ್‍ನಲ್ಲಿದ್ದ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಬೇರೇನೂ ಆಗಿರಲಿಲ್ಲ. ಕಾರಣ ಐಶಾರಾಮಿ ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ, ಚಿಕ್ಕ ಕಾರ್‍ನಲ್ಲಿದ್ದ ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಹಿರಿಯ ಕಾನೂನು ಅಧಿಕಾರಿಯೊಬ್ಬರು ರಾಮನಗರ ಬಳಿ ತಮ್ಮ ಕಾರನ್ನು ತಾವೇ ಚಾಲನೆ ಮಾಡಿಕೊಂಡು ಬೆಂಗಳೂರಿನ ಕಡೆ ಬರುತ್ತಿರುವಾಗ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ಸೊಂದು ಹಿಂದಿನಿಂದ ಗುದ್ದಿದ ರಭಸಕ್ಕೆ ಕಾರು ಪಲ್ಟಿ ಹೊಡೆದು ಪಕ್ಕದ ರಸ್ತೆಯಲ್ಲಿ ನೇರವಾಗಿ ನಿಂತಿತ್ತು. ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರೆಲ್ಲಾ ಸಹಾಯಹಸ್ತ ಚಾಚಿ ಅಧಿಕಾರಿಯನ್ನು ರಕ್ಷಿಸಲು ಮುಂದಾದಾಗ ಆ ಅಧಿಕಾರಿ, ಯಾವುದೇ ಸಣ್ಣ ಪುಟ್ಟ ಗಾಯಗಳು ಆಗದೆ ಕಾರಿನಿಂದ ಹೊರಬಂದರು. ಕಾರಣ ಆ ಅಧಿಕಾರಿ ಸೀಟ್ ಬೆಲ್ಟ್ ಧರಿಸಿದ್ದರು...
  ಎಸ್..! ಸೀಟ್ ಬೆಲ್ಟ್‍ಗಳಿಗೆ ಪ್ರಾಣ ಕಾಪಾಡುವ ಮಾಂತ್ರಿಕ ಶಕ್ತಿಯಿದೆ. ಸ್ವೀಡನ್ ದೇಶದ ನಿಲ್ಸ್ ಬೊಹ್ಲಿನ್ ಎಂಬ ವಿಜ್ಞಾನಿ ಪ್ರಪಥಮ ಬಾರಿಗೆ ಈ ಸೀಟ್ ಬೆಲ್ಟ್‍ನ್ನು ವಾಹನಗಳಲ್ಲಿ ಅಳವಡಿಸಿದ ಕೀರ್ತಿಗೆ ಭಾಜನರಾಗುತ್ತಾರೆ. ಯಾವುದೇ ವಾಹನವು ವೇಗವಾಗಿ ಚಲಿಸುತ್ತಿರುವಾಗ ಅದರ ಒಳಾಂಗಣದ ಪ್ರತಿಯೊಂದು ವಸ್ತುವೂ- ಪ್ರಯಾಣಿಕರೂ ಸೇರಿದಂತೆ ಎಲ್ಲವೂ ಅಷ್ಟೇ ವೇಗದಲ್ಲಿ ಚಲಿಸುತ್ತಿರುತ್ತದೆ. ಒಂದು ವೇಳೆ ಆಕಸ್ಮಿಕವಾಗಿ ನಿಲ್ಲಿಸಿದಾಗ ಅಥವಾ ಡಿಕ್ಕಿ ಹೊಡೆದಾಗ ವಾಹನ ಮಾತ್ರಾ ನಿಲ್ಲುತ್ತದೆ ಹೊರತು ಅದರೊಳಗಿರುವ ಪ್ರಯಾಣಿಕನೂ ಅಲ್ಲ, ವಸ್ತುಗಳೂ ಅಲ್ಲ!. ಒಳಗಿರುವ ಎಲ್ಲವೂ, ಎಲ್ಲರೂ, ವೇಗಕ್ಕೆ ಅನುಗುಣವಾದ ವಾಹನದ ಮೊಮೆಂಟಮ್‍ನಿಂದಾಗಿ ಹೊರಗೆಸೆಯಲ್ಪಡುತ್ತಾರೆ. ಕವಣೆಯಿಂದ ಬಿಸಾಕುವ ಕಲ್ಲು ಹಾರುವುದೂ ಇದೇ ಬಗೆಯಲ್ಲಿ. ಕವಣೆ ಬೀಸು ನಮ್ಮ ಕೈಯಲ್ಲೇ ಸ್ಥಗಿತಗೊಂಡಾಗ ಕಲ್ಲು ಹೇಗೆ ಸಿಡಿದು ಮುಂದಕ್ಕೆ ಸಾಗುತ್ತದೆಯೋ ಹಾಗೆ!!...
ವಾಹನಗಳ ಅಪಘಾತದ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಎಷ್ಟೆಂದರೆ ಡಬ್ಲ್ಯೂ.ಎಚ್.ಓ ನ 2015ರ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ 3 ನಿಮಿಷಕ್ಕೊಂದು ಅಪಘಾತ ಸಂಭವಿಸುತ್ತಂತೆ. ಅಂದರೆ ಒಂದು ವರ್ಷದಲ್ಲಿ 5 ಲಕ್ಷಕ್ಕೂ ಅಧಿಕ ಅಪಘಾತ ಸಂಭವಿಸುತ್ತದಲ್ಲದೇ 1,43,000ಕ್ಕೂ ಅಧಿಕ ಮಂದಿ ಈ ರಸ್ತೆ ಅಪಘಾತಗಳಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರಂತೆ. ಇದರಲ್ಲಿ ದ್ವಿಚಕ್ರವಾಹನ ಅತೀ ಹೆಚ್ಚು ಅಪಘಾತಕ್ಕೆ ಕಾರಣವಾಗಿದೆ ಎಂಬ ವರದಿಯೂ ಇದೆ. ಮುಖ್ಯವಾಗಿ ಅಪಘಾತದಲ್ಲಿ ಹೆಲ್ಮೆಟ್ ಧರಿಸದೆ ದ್ವೀ ಚಕ್ರವಾಹನ ಸವಾರರು ಜೀವ ಕಳೆದುಕೊಳ್ಳುತ್ತಿದ್ದರೆ, ಕಾರು ಹಾಗೂ ಇನ್ನಿತರ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ, ಸರಿಯಾದ ಏರ್‍ಬ್ಯಾಗ್ ಸೌಲಭ್ಯವಿಲ್ಲದೆ ಸಾಯುತ್ತಿದ್ದಾರೆ ಎನ್ನುವ ಮಾಹಿತಿಯೂ ಅದರಲ್ಲಿ ಹೊರಬಿದ್ದಿದೆ.
ವಾಹನದ ವೇಗ ಮತ್ತು ಅದರ ಅಶ್ವಶಕ್ತಿಗೆ ಹೋಲಿಸಿದಾಗ ಮಾನವನ ದೇಹವು ತುಂಬಾ ದುರ್ಬಲವಾಗಿರುವುದರಿಂದ ವಾಹನದಿಂದ ಎಸೆಯಲ್ಪಟ್ಟಾಗ ಅಥವಾ ವಾಹನದ ಒಳಾಂಗಣದ ಯಾವುದೇ ಭಾಗಕ್ಕೆ ತಾಗಿದಾಗ ಮಾರಣಾಂತಿಕ ಗಾಯಗಳಾಗಿ ಬಿಡುತ್ತವೆ. ಆದುದ್ದರಿಂದ ಪ್ರತಿಯೊಬ್ಬ ಪ್ರಯಾಣಿಕ/ಚಾಲಕನೂ ಸಹ ತಮ್ಮನ್ನು ತಾವು ಯಾವುದಾದರೂ ಒಂದು ಸ್ಥಿರವಸ್ತುವಿಗೆ ತಮ್ಮನ್ನು ಬಂಧಿಸಿಕೊಳ್ಳುವುದು ಅತ್ಯವಶ್ಯಕ. ಸೀಟ್ ಬೆಲ್ಟ್‍ಗಳು ಈ ‘ಬಂಧನ’ ಕ್ರಿಯೆಯನ್ನು ನೆರವೇರಿಸುತ್ತವೆ.
ಸಾಮಾನ್ಯವಾಗಿ ಡ್ರೈವಿಂಗ್ ಸೀಟ್‍ನಲ್ಲಿ ಕುಳಿತು ಕೊಂಡಾಗ ಆ ಬೆಲ್ಟ್‍ನ್ನು ತೊಟ್ಟುಕೊಳ್ಳುವಷ್ಟು ಸಮಯವಿಲ್ಲ, ಶರ್ಟ್‍ನ ಐರನ್ ಹಾಳಾಗುತ್ತೆ, ಕುತ್ತಿಗೆಗೆ ಸರಿಯುತ್ತೆ, ನಾನು ಸೇಫ್ ಡ್ರೈವರ್, ಅನುಭವವಿದೆ, ಏನಾದರೂ ನಾನು ಕುಳಿತಲ್ಲಿಂದ ಜಗ್ಗಲ್ಲ ಸ್ಟ್ರಾಂಗ್ ಇದÉ್ದನೆ.., ಹೀಗೆ ಬಗೆ ಬಗೆಯಲ್ಲಿ ಸಮಜಾಯಿಸಿ ಮಾಡಿಕೊಳ್ಳುವ ಅನೇಕರು ಅಜಾಗರೂಕತೆಯಿಂದ ಪ್ರಾಣಕ್ಕೆ ಕುತ್ತು ತಂದೊಡ್ಡಿಕೊಳ್ಳುತ್ತಿದ್ದಾರೆ. ಮೂರು ಮತ್ತು ಐದು ಪಾಯಿಂಟ್‍ಗಳಲ್ಲಿ ಫಿಕ್ಸ್ ಮಾಡಿರುವ ಸೀಟ್ ಬೆಲ್ಟ್‍ನ ಎದೆಯ ಭಾಗದ ಬೆಲ್ಟ್ ಕಡಿಮೆ ಬಿಗಿ ಇರುವಂತೆ ಕಂಡು ಬಂದರೂ ಸಹ ವಾಹನವು ವೇಗವಾಗಿ ಚಲಿಸುವಾಗ ದಿಢೀರೆಂದು ಮುಂದಕ್ಕೆ ಬಾಗಿದರೂ ಬೆಲ್ಟ್‍ನ ಹಿಡಿತ ಹೆಚ್ಚಾಗುವಂತೆ ವಿನ್ಯಾಸಗೊಲಿಸಲಾಗಿರುತ್ತದೆ. ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಸೀಟಿಗೆ ಅಂಟಿಕೊಂಡಂತೆಯೇ ಕುಳಿತುಕೊಳ್ಳಲು ಸಹಕಾರಿಯಾಗಿರುತ್ತದೆ.

     ಭಾರತದಲ್ಲಿ ರೋಡ್ ಸೇಫ್ಟಿ ಮತ್ತು ವಾಹನ ಸವಾರರ ಸೇಫ್ಟಿ ಇನ್ನೂ ಸುಧಾರಿಸಬೇಕಾಗಿದೆ. ಕೆಲವೊಂದು ಹೈ ಎಂಡ್ ಕಾರ್‍ಗಳನ್ನು ಹೊರತು ಪಡಿಸಿದರೆ ಯಾವ ಕಂಪೆನಿಯ ಕಾರುಗಳು ಸುರಕ್ಷಿತವಾಗಿಲ್ಲ. ಇದಕ್ಕಾಗಿ  ಸರ್ಕಾರ 2020ರ ವೇಳೆಗೆ ‘ಭಾರತ್ ಎನ್ಕ್ಯಾಪ್’ ಎಂಬ ಯೋಜನೆಯಲ್ಲಿ ಸೇಫ್ಟಿ ಕಾರುಗಳನ್ನು ಮಾತ್ರಾ ರೋಡ್‍ಗೆ ಬಿಡಲು ನಿರ್ಧರಿಸಿ, ಎಲ್ಲಾ ಕಾರುಗಳ ಡೆಮೋ ಡ್ರೈವ್ ಮತ್ತು ಅಪಘಾತವಾದಾಗ ಅದರ ಸುರಕ್ಷತೆಯ ಕ್ವಾಲಿಟಿಯನ್ನು ಈಗಾಗಲೇ ದೆಹಲಿಯಲ್ಲಿ ನೆರವೇರಿಸಿದೆ.
ನ್ಯೂಟನ್‍ನ ಮೊದಲ ನಿಯಮದಂತೆ ‘ಜಡತ್ವ’ವೇ ಸೇಫ್ಟಿ ಎನ್ನಬಹುದು. ಅದುವೇ ಕಾರುಗಳ ಏರ್‍ಬ್ಯಾಗ್ ಮತ್ತು ಸೀಟ್ ಬೆಲ್ಟ್‍ನ ಜಡತ್ವ. ಮೋಟಾರು ವಾಹನ ಕಾಯ್ದೆ 1998ರ ಅನ್ವಯ ಎಲ್ಲಾ ವಿಧದ ಕಾರುಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕ ಹಾಗೂ ಚಾಲಕ ಸಹ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಸೇಫ್ಟಿಯ ಇನ್ನೊಂದು ಭಾಗವಾದ ಏರ್‍ಬ್ಯಾಗ್ ಕೂಡ ಉತ್ತಮ ತಾಂತ್ರಿಕೆಯಲ್ಲಿದ್ದು ಜನರ ಜೀವವನ್ನು ರಕ್ಷಿಸುತ್ತಿದೆ ಅದನ್ನು ಪ್ರತಿವಾಹನವೂ ಹೊಂದಲು ಸೂಚಿಸಲಾಗಿದೆ. 
     ಪ್ರತಿವರ್ಷ ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, 10 ರಿಂದ 20 ಲಕ್ಷ ಜನರು ತೀವ್ರವಾಗಿ ಗಾಯಗೊಳ್ಳುತ್ತಿರುವ ಈ ಸಮಯದಲ್ಲಿ ರಸ್ತೆ ನಿಯಮದ ಮುಂಜಾಗ್ರತಾ ಕ್ರಮದ ಜೊತೆ ವಾಹನಗಳಲ್ಲಿರುವ ಸೇಫ್ಟಿಗಳನ್ನು ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರಸ್ತೆ ಮಾರ್ಗಗಳನ್ನು ಆದಷ್ಟು ವಿಸ್ತರಿಸಿ ನೇರ ಮಾರ್ಗವನ್ನು ಹೊಂಡ-ಗುಂಡಿಗಳ ಮುಕ್ತತೆತೆಗೆ ಸಂಕಲ್ಪಿಸಬೇಕಿದೆ.  ಇನ್ನಾದರೂ ನಮಗಿರುವ ಸೇಪ್ಟಿಯನ್ನು ಸರಿಯಾಗಿ ಪಾಲಿಸೋಣ, ನಮ್ಮ ಜೀವ ನಮ್ಮ ಕೈಯಲ್ಲೇ ಇದೆ ಆದ್ದರಿಂದ ರೋಡ್ ಸೇಫ್ಟಿಯ ಬಗ್ಗೆ ಎಚ್ಚರರಾಗಿರೋಣ... ಏನಂತೀರಾ!? 

“ನನ್ನ ಪ್ರಕಾರ ಸೇಫ್ಟಿ ಅಂದರೆ ‘ಜಾಗೃತಿ’ ಎಂದರ್ಥ. ನಮ್ಮಲ್ಲಿ ಹೆಚ್ಚಿನವರಿಗೆ ಆ ಜಾಗೃತಿ ಇಲ್ಲ. ಈಗ ಕಾರುಗಳನ್ನೇ ತೆಗೆದುಕೊಂಡರೆ ಅದನ್ನು ಓಡಿಸುವ ಮುಂಚೆ ಸೀಟ್ ಬೆÉಲ್ಟ್ ತೊಟ್ಟುಕೊಳ್ಳಲು ಎರಡು ನಿಮಿಷ ಸಾಕು ಆದರೆ ಅದು ದೊಡ್ಡ ಕೆಲಸವೆಂಬಂತೆ ಹೆಚ್ಚಿನವರು ಅದನ್ನು ಮಾಡುತ್ತಿಲ್ಲ. ಇನ್ನೂ ಹೆಚ್ಚಿನ ಕಾರುಗಳಲ್ಲಿ ಸೀಟ್ ಬೆಲ್ಟ್‍ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಎಲ್ಲಕ್ಕಿಂತ ಜಾಸ್ತಿಯಾಗಿ ನಮಗೆ ಸೇಪ್ಟಿಗಾಗಿ ಇರುವ ಪರಿಕರಗಳ ಬಗ್ಗೆ ಪ್ರಾಥಮಿಕ ಜ್ಞಾನಗಳೂ ಇಲ್ಲ. ಅದಕ್ಕಾಗಿ ಈ ಜ್ಞಾನಗಳು ಸಾಮಾನ್ಯರಿಗೂ ತಲುಪುವ ಹಾಗೆ ಸರ್ಕಾರ ಯೋಜನೆಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ”.

- ವಿಜಯ್ ಶೆಟ್ಟಿ.
ಸೇಪ್ಟಿ ಬೆಲ್ಟ್ ಇಂಜೀನಿಯರಿಂಗ್ ಹೆಡ್, ಆಟೋಲೀವ್ ಕಂಪೆನಿ.

No comments:

Post a Comment