Friday 5 May 2017

ಪ್ರೇಮಾಯಣ...ಕವಿ ಕನವರಿಕೆ: 8

   ನನಗ್ಯಾರು ಇಲ್ಲ. ಅವಳಿಗೆ ಗಂಡನಿದ್ದಾನೆ. ಮನೆಯಲ್ಲಿ ಪ್ರೀತಿಯ ಸುರಿಮಳೆಯಿದೆ. ಆದರೆ ನನಗೆ ಸವಿ ಮಾತೂ ಇಲ್ಲ. ಪ್ರೀತಿಯ ಬಿಂಕ ಪ್ರಾರಂಭದಲ್ಲಿ ಮಳೆಯಂತೆ ಸುರಿಯುತ್ತಿದ್ದರೂ, ಈಗ ಹಿಮದಂತೆ ಕರಗಿದೆ.

    ಅವಳೆಂದರೆ ಈಗಲೂ ನನಗಿಷ್ಟ. ಅವಳ ಭಿನ್ನಾಣದ ನಾಟಕ ಮಾತ್ರ ನನಗಾಗಲ್ಲ. ಹಾಗಂತ ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲವೆಂತಲ್ಲ. ತುಂಬಾ ಪ್ರೀತಿಸುತ್ತಾಳೆ ಆದರೆ ನನಗದೂ ವ್ಯಕ್ತಿನಿಷ್ಠತೆ ಅನಿಸುತ್ತದೆ. ಇದು ನನ್ನ ಸ್ವಾರ್ಥವೋ, ಸರ್ವಾರ್ಥವೋ ಸಂಬಂಧವೇ ತಿಳಿಯದೇ ಹಗ್ಗ ಬಿಗಿದ ಕುತ್ತಿಗೆ ಆ ಕಡೆ ಸರಿಯದೆಯೂ ಈ ಕಡೆ ಬಿಗಿಯದೆಯೂ ನಡುಮಧ್ಯೆ ಕುಳಿತು ಜೀವ ಹಿಂಡುವಂತೆ ಪರಿಸ್ಥಿತಿ ಹದಮೀರಿ ನನ್ನ ಹಂತ ಹಂತವಾಗಿ ಕೊಲ್ಲುತ್ತಿರುವುದು ನನ್ನ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ.

    ನನ್ನ ಪ್ರೀತಿ ಇಂದಿಗೂ ಅವಳ ಮೇಲೆ ಅಷ್ಟೇ ಇದೆ. ಅವಳು ಒಮ್ಮೊಮ್ಮೆ ನನ್ನ ಖುಷಿಯಲ್ಲಿ ಬಿಗಿದಪ್ಪಿಕೊಳ್ಳುವುದನ್ನು ನೋಡಿದರೆ ನನಗೆ ನನ್ನ ಬಗ್ಗೆ ಹೊಟ್ಟೆ ಉರಿಯುತ್ತೆ. ಎಷ್ಟು ಒಳ್ಳೆಯವಳು ನಾನ್ಯಾಕೆ ಅವಳನ್ನು ಅರಿತಿಲ್ಲ ಎನ್ನುವ ಸಂಕಟವೂ ಕಾಡುತ್ತದೆ. 'ಅದ್ಯಾರೆ ಆಗಿರಲಿ ತಾನು ಇಷ್ಟ ಪಡುವ ಹುಡುಗ/ಹುಡುಗಿ, ಇನ್ನೊಬ್ಬನ/ಳ ಜೊತೆ ಸ್ವಲ್ಪ ಅಟ್ಯಾಚ್ ಆದ್ರೂ ತಡೆದುಕೊಳ್ಳೋ ಶಕ್ತಿ ಯಾರಿಗೂ ಆ ಭಗವಂತ ನೀಡಿಲ್ಲ' ಇದು ನಿಜವಾದ ಮಾತು.  ಬೇಡ ಕಣೋ ನೀನು ನಇನ್ನ ಸಂಸಾರದ ಜೊತೆ ಹೊಂದಿಕೊಂಡು ಚೆನ್ನಾಗಿರು ಎಂದು ಅವಳಿಗೆ ಹಲವು ಬಾರಿ ಮನಮುಟ್ಟುವಂತೆ ಹೇಳಿದ್ದೆ. ಆದರೂ ಅವಳಿಗದು ಸಾಧ್ಯವಿಲ್ಲ. ನಾನು ಬೇಕೇ ಬೇಕು ಎನ್ನುತ್ತಾಳೆ!!. ನನ್ನ ಜೊತೆ ಇರಲೇಬೇಕೆಂದು ಹಠ ಹಿಡಿಯುತ್ತಾಳೆ. ನನಗೋ ಅವಳ ಬಿಂಕ ಬಿಟ್ಟುಕೊಡಲಾಗುತ್ತಿಲ್ಲ. ನನ್ನ ಹೃದಯ ಶ್ರೀಮಂತಿಕೆಯ ಗುಟ್ಟು ಅವಳಿಗೆ ತಿಳಿದಿಲ್ಲ. ಮದುವೆಯಾದೊಡೆ ಪ್ರೀತಿ ಸುಡುವುದೋ!?, ಪ್ರೀತಿ ಸ್ಥಾನಕೆ ಮತ್ತೊಬ್ಬ ಬಂದೊಡೆ ಬರೀ ಕತ್ತಲೇ ತುಂಬುವುದೋ!? ಎನ್ನುವ ಸಂಕೋಲೆಯ ಅರಿಯದೇ ತೀರ ನೋಡುತ ಕಣ್ಗಳು ಕೆಂಪಗಾಗಿವೆ. ಮತ್ತೆ ಮತ್ತೆ ಅವಳೇ ಬರುತ್ತಾಳೆ. ನೋವನ್ನು ಸಹಜವಾಗೇ ನೀಡುತ್ತಾಳೆ. ಅದಕ್ಕಾಗಿ ಅವಳು ಅವಳಾಗಿಯೇ ಇರಲಿ. ಅವಳ ಸಂಸಾರದಲಿ ಪ್ರೀತಿ ತುಂಬಿರಲಿ ಎನ್ನುತ ಅವಳಿಂದ ದೂರ ತ್ಯಾಗಿಯಾಗಿ ಹೆಜ್ಜೆಯಿಡುತ್ತಿದ್ದೇನೆ... ಓ ಪ್ರೀತಿಯೇ ಕಾಯ್ದಿರಿಸಿ ಕಾಪಾಡುತಿರು ನನ್ನವಳ...

No comments:

Post a Comment