Sunday 3 April 2016

ನನ್ನಂತರಂಗದ ಹಾಯ್ಕುಗಳು



ವಾಟ್ ಇಸ್  ದಿಸ್!...
           ತೀರಾ ಮೊನ್ನೆ ಮೊನ್ನೆಯವರೆಗೂ ನಾರ್ಮಲ್ ಆಗಿದ್ದೆ. ಸಣ್ಣ ಮೈ ಕೈ ನೋವು ಬಂದಂತಾಯ್ತು. ನೋವಿನೊಂದಿಗೆ ಜ್ವರವೂ ಅಡಿ ಇಡುವುದು ಯಾಕೋ ಖಾತ್ರಿಯಾಯಿತು. ನಮ್ಮಂಥವರಿಗೆ ಪ್ರಥಮ ಚಿಕಿತ್ಸೆ ‘ಮೆಡಿಕಲ್ ಅಲ್ವಾ’ ಎನ್ನುತ್ತಾ, ಜ್ವರ, ಮೈ-ಕೈ ನೋವಿಗೊಂದು ಮಾತ್ರೆ ಕೊಡಿ ಎಂದು ಗುಳಂ! ಸ್ವಾಹ ಮಾಡಿದೆ. ಮಾತ್ರೆ ಕೊಟ್ಟವಳ ಕೈಗುಣವೋ ಏನೋ ಯಾವುದು ಬರಬಾರದೆಂದು ಮಾತ್ರೆ ನುಂಗಿದ್ದೇನೋ ಅದಷ್ಟೇ ಅಲ್ಲದೇ ಸಹಪರಿವಾರದಲ್ಲಿರುವ ಎಲ್ಲಾ ಖಾಯಿಲೆ ಮಿತ್ರರು ಪ್ರೀತಿಯಿಂದ ಬಾಚಿ ತಬ್ಬಿಕೊಂಡರು. ಒತ್ತಡದಲ್ಲೇ ಒಂದೆರಡು ದಿನ ಆಫೀಸ್ ಕೆಲಸವೂ ಆಯ್ತು. ಗಂಟಲಲ್ಲಿ ಊಟ ಅಲ್ಲ ನೀರಿಳಿಯುವುದೇ ಕಷ್ಟ ಎನಿಸಿತು. ದ್ವಿತೀಯಾರ್ಧ ಚಿಕಿತ್ಸೆ ಎಂಬಂತೆ ಪಕ್ಕದಲ್ಲೇ ಇದ್ದ ಹೊಸ್ಪಿಟಲ್‍ಗೆ ಓಡಿದೆ. ಒಂದು ಇಂಜೆಕ್ಷನ್ ಕೊಟ್ಟು, ‘ಹೋಗುತ್ತೆ ಬಿಡಿ ಏನೂ ಪ್ರಾಬ್ಲಂ ಇಲ್ಲ, ಟ್ಯಾಬ್ಲೇಟ್ ತಗೋಳಿ’ ಅಂದ್ರು. ಆಯ್ತೆಂದು ಮಾತ್ರೆ ತಂದು ಕುಡಿದೇ ಬಿಟ್ಟೆ. ಆದರೂ ವರ್ಕೌಟ್ ಇಲ್ಲ. ಮಾಮೂಲಿ ಜ್ವರ ದೀರ್ಘ ಮೆರವಣಿಗೆಯಲ್ಲಿ  ಐದನೇ ದಿನಕ್ಕೆ ಬಂದು ನಿಂತಿತು. ಕಳೆದ ಒಂದೂವರೆ ವರ್ಷದ ಹಿಂದೆಯೂ ಇದೇ ಮಾಮೂಲಿ ಜ್ವರ ಗೋಳು ಕೊಟ್ಟಿತ್ತು. ಆಗಲೇ ಸಾಯುತ್ತಿದ್ದೆ. ಆದರೆ ಡಾಕ್ಟರ್ ಹೋರಾಟ, ಅಮ್ಮನ ಹರಕೆಯಿಂದ ಬದುಕಿದ್ದೆ. ಈ ಬಾರಿ ಹಾಗಾಗಲಿಕ್ಕಿಲ್ಲವೆಂದುಕೊಂಡಿದ್ದೆ. ಆದರೂ ಹಾಗೇ ಫೀಲ್ ಆಯ್ತು. ಮನೆಯಲ್ಲಿ ಹೇಳಿದರೆ ಹೆದರುತ್ತಾರೆ. ಹೇಳಲಿಲ್ಲ...! ಹಾಗೋ ಹೀಗೋ ದಿನ ಸಂದೇಶ ಮಾಡುವ ಕೆಲವೊಂದಿಬ್ಬರಿಗೆ ಆರೋಗ್ಯ ಸ್ಥಿತಿ ಹದವಾಗಿದ್ದು ತಿಳಿಯಿತು. ಕೇರ್ ನೆಸ್ ಎಂಬಂತೆ ಸಂದೇಶದಲ್ಲೇ ಕಿರಿ ಕಿರಿಯ ವಿಚಾರಣೆ ಜಾಸ್ತ್ತಿಯಾಯಿತು. ರೆಸ್ಟ್ ಮಾಡೋಣ ಎಂದು ಹಾಸಿಗೆ ಹಿಡಿದೆ. ಮತ್ತೆ ಮತ್ತೆ ಮೆಸೇಜ್‍ಗಳು ಇನ್ ಬಾಕ್ಸ್‍ನಲ್ಲಿ ಸದ್ದುಮಾಡತೊಡಗಿದವು. ಬೇಸತ್ತು, ಯಾರೂ ಡಿಸ್ಟರ್ಬ್ ಮಾಡಬಾರದೆಂದು ವ್ಯಾಟ್ಸಾಪ್‍ನಲ್ಲಿ ಒಂದು ಸಣ್ಣ ಸ್ಟೇಟಸ್ ಬರೆದೆ. ಅಲ್ಲಿಯೇ ಮಾಡಿದ್ದು ಎಡವಟ್ಟು ನೋಡಿ!., ಒಂದಿಬ್ಬರಿಗೆ ತಿಳಿದಿದ್ದ ವಿಚಾರ ಎಲ್ಲರಿಗೂ ತಿಳಿದು ಮರುಘಳಿಗೆ ಸರದಿಯಲ್ಲಿ ವಿಚಾರಣೆ ಪ್ರಾರಂಭವಾಯ್ತು. ಎಂಥಾ ಮೂಡನಯ್ಯ ನಾನು, ಅಷ್ಟಿದ್ದ ರಗಳೆ ತಡೆಯಲು ಹೋಗಿ ಇಷ್ಟು ಮಾಡಿಕೊಂಡೆನಲ್ಲಾ ಎಂದು ನನ್ನಯ ಗೊಡ್ಡುತನಕ್ಕೆ ಬೈದುಕೊಂಡೆ.
            ಗೆಳೆಯರ್ಯಾರೂ ಸೀರಿಯಸ್ ಅಂದುಕೊಳ್ಳಲಿಲ್ಲ. ಅಷ್ಟೋ ಇಷ್ಟೋ ಒನ್ ಸೈಡ್ ಭಾವನೆಗಳನ್ನಿಟ್ಟುಕೊಂಡಿದ್ದ, ಪ್ರೀತಿಯಲ್ಲಿ ಜೋಲಾಡುತ್ತಿದ್ದ ಹುಡುಗಿಯರು ಏನೋ ಪ್ರಳಯವೇ ಆಗಿದೆ ಎನ್ನುವಂತೆ ಗೊಣಗತೊಡಗಿದರು. ನಿನಗೆ ಆರೋಗ್ಯ ವಿಚಾರದಲ್ಲಿ ಜಾಗೃತೆ ಇಲ್ಲ ಯಾವಾಗ ಬುದ್ದಿ ಬರುತ್ತೋ ಏನೋ ಎಂಬಂತೆ ಬೈದರು. ಹೂಃ ಅಂತ ಹೇಳು ಬಂದು ವಿಚಾರಿಸಿಕೊಳ್ತೀವಿ ಅಂತ ಕೆಲವೊಂದಿಬ್ಬರ ಆರ್ತನಾದ. ಎಲ್ಲಿ ಮನೆ!?, ಬಂದೇ ಬಿಡುವೆ ನೋಡಲು..! ಎಂಬಂತೆ ಇನ್ನೊಂದಿಷ್ಟು. ಬೆನ್ನು ಬಿದ್ದ ಮೆಸೇಜ್‍ಗೆ ಬೆನ್ನು ಕೊಟ್ಟು ಮಲಗಿದೆ. ಯಾವುದಕ್ಕೂ ಉತ್ತರಿಸಲಿಲ್ಲ...
            ಸಂಜೆ ಯಾಕೋ ಮಂಕು ಬಡಿದಂತಾಯ್ತು. ಮತ್ತೆ ಮೊಬೈಲ್ ಕೈಗೆತ್ತಿಕೊಂಡೆ. ಮೆಸೇಜ್ ಓದಿ ಅರ್ಧಕ್ಕರ್ಧ ಉತ್ತರವಿತ್ತೆ... ಡಬ್ಬಲ್ ಸುಸ್ತಾಯಿತು. ಬಂದ ಸಂದೇಶಗಳನ್ನು ಓದಿಯೇ ಹೈರಾಣಾದೆ. ಮೈ ಬಿಸಿಗೆ ಮೆಸೇಜ್ ರಿಪ್ಲೈ ಕೂಡ ಕಾರಣ ಏನಿಸಿತು. ಸಾವಾಸ ಸಾಕು ಎಂದು ಮರಳಿ ಮೊಬೈಲ್ ಸೈಲೆಂಟ್ ಇಟ್ಟು ಸುಮ್ಮನಾದೆ. ಈ ವಯಸ್ಸೇ ಹಾಗಲ್ವಾ! ಮತ್ತೇ ಮತ್ತೆ ತಪ್ಪು ಅನಿಸಿದರೂ ಕೆಟ್ಟ ವಿಚಾರದಲ್ಲಿ ಮನಸ್ಸು ಯಾವಾಗಲೂ ಸೆಳೆಯುತ್ತಲೇ ಇರುತ್ತದೆ. ಅನಾವಶ್ಯಕ ಟೈಮ್ ಪಾಸ್‍ಗೆ ಅತಿಹೆಚ್ಚು ಜನ ಮರುಳಾಗಿರುವ ಮೊಬೈಲ್‍ನ್ನು ನೋಡೋಣ ಎನಿಸುತ್ತಿತ್ತು, ಆದರೂ ಕಂಟ್ರೋಲ್ ಮಾಡಿಕೊಂಡೆ. ಪ್ರೀತಿಸುವವರನ್ನು ಯಾಕೆ ದ್ವೇಷಿಸಬೇಕು!?, ದೂರ ಮಾಡೋದು ಬೇಡ ಸೈಡಲ್ಲಿ ಭಾವನೆಯ ಪ್ರೀತಿ ಇರಲಿ ಎಂದು ಹಾಗೇ ಕಣ್ಮುಚ್ಚಿ ಮಲಗಿದೆ.
           ಮನದ ಮೂಲೆಯ ಬಿಳಿಪರದೆಯ ಮೇಲೆ ಯೋಚನಾ ಲಹರಿ ತೇಲಿತು. ಈ ಬದುಕೆ ಹೀಗೆ ಅಲ್ವಾ ಯಾವಾಗ ಏನೂ ಬೇಕಾದರೂ ಆಗಬಹುದು. ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ, ಆರೋಗ್ಯ, ಅನಾರೋಗ್ಯ, ಯೋಗ್ಯ, ಅಯೋಗ್ಯ... ಹೀಗೆ ಎಲ್ಲವೂ ಒಂದಿಲ್ಲೊಂದು ಸರಣಿಯಲ್ಲೇ ನಡೆಯುತ್ತಿರುತ್ತದೆ. ಯಾವನಿಗೊತ್ತು ಬದುಕು ಯಾವಾಗ ಅಂತ್ಯವಾಗುತ್ತೆ ಅಂತ. ನನ್ನೇ ನೋಡಿ ಹೋದ ವರ್ಷವೇ ಅಂತ್ಯ ಕಾಣಬೇಕಾಗಿದ್ದವನು ಇನ್ನೂ ಬದುಕಿರುವೆ. ಬದುಕಿಲ್ಲವೆಂದಿದ್ದರೆ ಇಷ್ಟೆಲ್ಲಾ ಮಾಡಲಾಗುತ್ತಿರಲಿಲ್ಲ. ನಾನು ಯಾರೆಂದು ನಿಮಗೇನು!, ನಮ್ಮವರಿಗೆ ಗೊತ್ತಿರುತ್ತಿರಲಿಲ್ಲ. ಒಂದಿಷ್ಟು ಅಳು, ಒಂದಿಷ್ಟು ಮೌನ, ಒಂದಿಷ್ಟು ನೆನಪಿನೊಂದಿಗೆ ನಾನು ಕೂಡ ಗೋಡೆಯ ಮೇಲಿನ ಫೋಟೋವಾಗುತ್ತಿದ್ದೇನೋ ಏನೋ...!
     ವಿಷಯ ಅದಲ್ಲ... ಎಲ್ಲರೂ ಒಂದಲ್ಲ ಒಂದು ದಿನ ಸಾಯುವುದು ಗ್ಯಾರಂಟಿ... ಅಲ್ವಾ!??...
ಹೌದು..!ಅಂತೀರಾ...
ಇದರೊಳಗೆ ಇನ್ನೊಂದು ಸತ್ಯ ಇದೆ!...
ಏನ್ ಗೊತ್ತಾ!?,
           ನಾನ್ ಮಾತ್ರ್ರಾ ಅಲ್ಲಾ ನೀವು ಕೂಡ ಸಾಯ್ತೀರಾ...! ಇದು ಪಕ್ಕಾ ಗ್ಯಾರಂಟಿ. ಕೆಲವೊಂದು ವಿಚಾರಗಳು ಗೊತ್ತಿದ್ದರೂ ಇನ್ನೊಬ್ಬರೂ ಹೇಳಿದ ಮೇಲೆ ಕನ್‍ಫರ್ಮ್ ಆಗೋದಂತೆ... ಇದು ಕೂಡ ಹಾಗೆ. ಅಂತ್ಯ ಎಲ್ಲರಿಗೂ ಎಲ್ಲದಕ್ಕೂ ಕಟ್ಟಿಟ್ಟ ಬುತ್ತಿ. ಇರುವಷ್ಟು ದಿನ ಹೊಡೆದಾಡ್ತೀವಿ, ನಗ್ತೀವಿ, ರೇಗಿಸ್ತೀವಿ, ಪಾಪ-ಪುಣ್ಯ ಮಾಡ್ತೀವಿ, ಪಾ..ಪಾ ಅಂತೀವಿ, ರೋಗಿಯಾಗ್ತೀವಿ, ರೇಗಿ ನುಲಿತೀವಿ, ಸುಖ ಪಡ್ತೀವಿ, ಕಷ್ಟ ಅನುಭವಿಸ್ತೀವಿ, ಹೀಗೆ ಎಲ್ಲದಕ್ಕೂ ಅಂತ್ಯವಿದೆ... ಸಾಯ್ತೀರಿ ಅಂದಿದ್ದಕ್ಕೆ ಭಯ ಪಡಬೇಡಿ. ಹಾಗೆಯೇ ಜೀವದ ಬಗ್ಗೆಯೂ ಭಯ ಬೇಡ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರೀಯೆ.
             ಸಾಧು ಸಂತರೇ ಹೇಳಿರುವಂತೆ ಜೀವನ ನಾಲ್ಕು ದಿನದ ಹೋರಾಟ. ಅಲ್ಲಿ ಸಂಪಾದಿಸಬೇಕೆಂದು ಅನಗತ್ಯವಾಗಿ ಹೊಡೆದಾಡುತ್ತೇವೆ. ಒಮ್ಮೊಮ್ಮೆ ಎಷ್ಟಿದ್ದರೂ ಏನೂ ಮಾಡಲಾಗದಂತ, ಇದ್ದದ್ದನ್ನು ಕರಗಿಸಲಾಗದಂತ ದುರವಸ್ಥೆ. ಸರಿಯಾಗಿ ಗಮನಿಸಿದರೆ ಎಲ್ಲವೂ ಜೀರೋ... ಯಾರೋ ನಮಗಿಂತ ಮುಂದೆ ಸಾಗುವರೆಂದೋ, ನಮ್ಮನೆ ಜಾಗ ಅವರ ಮನೆಯ ಆರ್ಟಿಸಿ ಅಲ್ಲಿ ನಮೂದಾಗಿದೆಯೆಂತಲೋ, ಯಾರು ಸತ್ತರೆ ನಮಗೇನು ದುಡ್ಡು ಮಾಡಬೇಕು ಅಷ್ಟೇ ಎಂದೋ, ನಿಮ್ಮ ಕಷ್ಟ ನಮಗೆ ಬೇಡ, ನನಗೆ ಬರೋ ದುಡ್ಡು ಬರಬೇಕು ಅಂದೋ, ಮೊದಲು ನಾವ್ ಸೇಫ್ ಆಗಬೇಕು ಉಳಿದವರ ಚಿಂತೆ ನಮಗೆ ಬ್ಯಾಡ ಅಂತಲೋ,ಮಕ್ಕಳ್ಯಾರೂ ಇಲ್ಲ, ಕೈಯಲ್ಲಿ ದುಡ್ಡು ಬೇಕಾದಷ್ಟಿದೆ ಆದರೂ ಆ ಬಾಡಿಗೆ ಮನೆಯವ ಇನ್ನೂ ಬಾಡಿಗೆ ಕೊಟ್ಟಿಲ್ಲ, ಯಾಮಾರಿಸುತ್ತಾನೆಂತಲೋ, ವಸ್ತು ಹಾಳಾದರೆ ಕೊಟ್ಟ ದುಡ್ಡು ಮಾರಾಟಗಾರನ ಅಕೌಂಟ್‍ಗೆ ಹೋಗಿ ಅವನೇನಾದರೂ ಬಿಲ್ಡಿಂಗ್ ಕಟ್ಟುತ್ತಾನೆ ಎನ್ನುವ ಭಯದ ಚೌಕಾಸಿಗೋ, ಬೇರೆಯವರಿಗೆ ಅನ್ನ ಹಾಕಿದರೆ ನಮ್ಮನೆಗೆ ದಿನಾ ಬರುತ್ತಾರೆಯೇನೋ ಎನ್ನುವ ಮುಜುಗರದ ಅಸೂಯೆಗೋ, ಹೀಗೆ ಒಂದಿಲ್ಲೊಂದರಲ್ಲಿ ಬದುಕನ್ನು ಹೆಣಗಾಡುತ್ತಲೇ ಇರುತ್ತೇವೆ.

ಎಣ್ಣೆ ಕಾಣದಂಥ ಶಿರ...
ಕಿತ್ತು ಬಂದಿರೋ ಕೆರ...
ಬಣ್ಣ ಮಾಸಿರೋ ಚರ...
ಅನ್ನ ಕಾಣದ ಉದರ...
ಕಳೆ ಇಲ್ಲದ ಮುಖ...
ರೇಖೆ ಅಳಿಸಿರೋ ಕೆರ...
ಕೊಳೆ ತುಂಬಿದ ಸುಖ...
ಕೊನೆ ಕಾಣದ ದುಃಖ...
ಇಷ್ಟೇ ಜೀವನ!!!...
             ಎಲ್ಲವೂ ತಿಳಿಯುವುದು ಸಂತೋಷದ ಶುಭ ಸಮಯ ಅಲ್ಲ, ಬದುಕು ಕೊನೆಯಾಗಬಹುದೋ ಏನೋ ಎನ್ನುವ ವಿದಾಯ ಮುಹೂರ್ತ ತಬ್ಬಿಕೊಳ್ಳುವಾಗಲೆ...!!!.   ರತಿ ಕ್ರೀಡೆಯಲ್ಲಿ, ಮೈಥುನ ಸಂಧರ್ಭದಲ್ಲಿ, ಆಹಾ!! ಎಂತಾ ಸುಖವಪ್ಪಾ ಜೀವನವೆಂದೆನಿಸಿದ ಭಾವಗಳೆಲ್ಲವೂ ರೋಗ ಹಿಡಿದು ಅಲ್ಲೊಂದು ಇಲ್ಲೊಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ನರಕವಪ್ಪಾ ಅಂತನಿಸದೇ ಇರದು. ಎಲ್ಲವೂ ಕಾಲ ಘಟ್ಟವಷ್ಟೇ. ಕಾಲಕ್ಕೆ ಕಾಲವೇ ತಲೆಭಾಗುವುದಂತೆ. ಇನ್ನೂ ನಾವು ನೀವೂ ಯಾವ ಲೆಕ್ಕ. ಸರಿಯಿರುವಾಗ ತಿಳಿಯದ ಜೀವನ ಹದಗೆಟ್ಟಾಗ ತಿಳಿಯುವುದೇ ಜಾಸ್ತಿ...


2 comments: