Friday 10 July 2015

ಹೆಣ್ಮಕ್ಕಳೇ ನೀವೆಷ್ಟು ಸೇಫ್...!? (ಬೈಂದೂರು ಬಲಿಯ ಸುತ್ತ...)


ಕಾಮಾಂಧನ ಕುರುಡು ಕಾಮಕ್ಕೆ ಬಲಿಯಾದ ಅಕ್ಷತಾ...
ಮತ್ತೆ ಕರಾವಳಿಯಲ್ಲಿ ಕೊಲೆಯ ತಾಪ
ಕಾಮದ ಹಪಾಹಪಿಯ ನಡುವೆ ಕಣ್ಮುಚ್ಚಿದ ಅಕ್ಷತಾ...
ಕರಾವಳಿ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ…

         ಗೋವಾ ಮತ್ತು ಕೇರಳಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶಕ್ಕೆ ಹಬ್ಬಿ ನಿಸರ್ಗ ಸೌಂದರ್ಯವನ್ನು ಉಣಿಸುತ್ತಿರುವ, ಸಮುದ್ರಕ್ಕೆ ತಾಗಿಕೊಂಡಿರುವುದೇ ಕರ್ನಾಟಕದ ಕರಾವಳಿ ಭೂಪ್ರದೇಶ. ಉಪ್ಪು ಸಿಹಿ ನೀರಿನ ಹವೆ, ಮಳೆ, ಉತ್ತಮ ಆರೋಗ್ಯದ ಜೊತೆಗೆ ದಷ್ಟ-ಪುಷ್ಟತೆಯನ್ನು, ಮೇಧಾವಿ ಚುರುಕು ಬುದ್ಧಿಯನ್ನು, ಮತ್ತು ಕಷ್ಟ ಸಹಿಸುವುದನ್ನು ಮೈಗೂಡಿಸಿಕೊಂಡ ಸ್ಥರಯುತ ಬಾಹುಳ್ಯ ಹೊಂದಿರುವವರು ಅಲ್ಲಿನ ಜನತೆ. ಕಲೆ, ಯಕ್ಷಗಾನ, ವಿದ್ಯಾಭ್ಯಾಸ, ಆರೋಗ್ಯ, ಶಿಸ್ತಿನ ಜೀವನಕ್ಕೆ ಹೆಸರು ಮಾಡಿದ್ದು, ಹೆಚ್ಚು ಅಂಕ ಪಡೆಯುವ ಜಿಲ್ಲೆ ಎಂದು ಬಿರುದನ್ನು ಪಡೆದಿದ್ದು, ವಾಯುಮಾರ್ಗ, ಜಲಮಾರ್ಗ, ರಸ್ತೆ, ರೈಲ್ವೆ ಮಾರ್ಗದಲ್ಲೂ ಉನ್ನತ ಸ್ಥರದಲ್ಲಿದ್ದು, ನೀರಿರಲಿ, ಬಿಸಿಲಿರಲಿ, ಕಾಡಿರಲಿ ಯಾವುದಕ್ಕೂ ಭಯ ಪಡಲಾರೆವು ಎನ್ನುತ್ತಿದ್ದ ಜನ ಇದೀಗ ಕೊಲೆ, ಹತ್ಯೆಯೆಂಬ ಹೆಸರಿಗೆ ನಿಜಕ್ಕೂ ಬೆಚ್ಚಿ ಬೀಳುತ್ತಿರುವುದು ಎಲ್ಲರಲ್ಲೂ ಭಯತರಿಸುತ್ತಿದೆ. ಅದರಲ್ಲೂ ಹರೆಯದ ಯುವತಿಯರ ನಿಗೂಢ ಸಾವುಗಳು ಮನೆಯ ಮನೆಯಲ್ಲೂ ಮಾನಸಿಕ ವಿಕ್ಷಿಪ್ತತೆಯೊಂದಿಗೆ ಭಯ ಹುಟ್ಟಿಸುತ್ತಿದೆ.
ಅರೇ ಇದೇನಿದು ಕೇಳ್ತೀರಾ..! ಹೌದು ಕಳೆದ  ಎರಡು ಮೂರು ವರ್ಷಗಳಿಂದ ಕರಾವಳಿಯಲ್ಲಿ ಕೊಲೆಯ ಕೂಗು ಕೇಳುತ್ತಿದೆ, ಉಗ್ರರ ತಾಂಡವತೆ, ರೋಲ್ ಕಾಲ್, ಸೆಕ್ಸ್ ದಂಧೆ , ರಾಜಕಾರಣಿ ಪುಡಾರಿಗಳ ರಕ್ತಚರಿತ್ರೆ, ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕುಖ್ಯಾತಿಯಾಗುತ್ತಿದೆ. ಒಂದು ಕಡೆ ಅಲ್ಪ ಸಂಖ್ಯಾತರನ್ನು ಪ್ರತ್ಯೇಕಿಸುತ್ತಿರುವುದು ಇನ್ನೊಂದು ಕಡೆ ದುಡಿಯುವ ದಲಿತ ಶೂದ್ರ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದು  ಅಷ್ಟೇ ಅಲ್ಲದೇ ದೈವ ಭಕ್ತಿಯ ಆಡಂಬರದ ಅಗ್ಗದ ಪ್ರದರ್ಶನ ಹೆಚ್ಚುತ್ತಿರುವುದನ್ನು ನೋಡಿದರೆ ಮನುಷ್ಯನ ಜೀವನ ಇಲ್ಲಿ ಅಗ್ಗವಾಗಿದೆಯೇನೋ ಅನ್ನಿಸುತ್ತಿದೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಕ್ರಿಮಿನಲ್ ಚಟುವಟಿಕೆಗಳಿಗೆ ಧರ್ಮವನ್ನು ರಕ್ಷಾಕವಚವನ್ನಾಗಿ ಬಳಸುತ್ತಿರುವುದು ಹಲವಾರು ಕಡೆ ನಡೆಯುತ್ತಲೇ ಇದೆ.
    ಇವೆಲ್ಲವುಗಳ ಸಂಗಮ ಇಂದು ಕರಾವಳಿಯ ಜನತೆಯಲ್ಲಿ ನಿದ್ರೆಗೆಟ್ಟಿಸಿಬಿಟ್ಟಿದೆ. ಒಂದಕ್ಕೊಂದು ಸಂಭಂಧವೇನೋ ಎಂಬಂತೆ ಇದೀಗ ಮಕ್ಕಳ ರಕ್ತದಲ್ಲೂ ಉಗ್ರತೆಯ ಕಂಪು ಮೂಡುತ್ತಿದ್ದು ಇದರ ಬಗ್ಗೆ ಗಮನವಹಿಸದಿದ್ದರೆ ಮುಂದೊಂದು ದಿನ  ಪ್ರತಿಷ್ಠಿತ ಕರಾವಳಿ ದಂಡು ಪಾಳ್ಯವೋ, ಕಾಬುಲ್‍ನ ಬುಡಕಟ್ಟು ಪ್ರದೇಶದಂತೋ ಆಗುವುದಂತು ನಿಜ.
  ಬಹುತೇಕ ಕಾಡುಗಳೇ ಇರುವ ಕರಾವಳಿಯ ಹಳ್ಳಿಗಳಲ್ಲಿ ಇದೀಗ ಹೆಣ್ಣು ಮಕ್ಕಳ ಕಣ್ಮರೆ, ನಿಗೂಢ ಸಾವುಗಳು ನಡೆಯುತ್ತಿವೆ. ಅಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಮೊದಲು ಅದೆಷ್ಟು ಹೆಣ್ಮಕ್ಕಳು ಹೆಸರಿಗಿಲ್ಲ ಎಂಬಂತೆ ಮಾಯವಾದರೋ ಗೊತ್ತಿಲ್ಲ. ಬಹುಶಃ ಇದು ಪೋಲೀಸ್ ಪುಸ್ತಕದಲ್ಲಿಯೂ ಎಂಟ್ರಿಯಾಗಿತ್ತೋ ಇಲ್ವೋ ಬಲ್ಲವರಿಲ್ಲ. ಆದರೆ ಮೂರ್ನಾಲ್ಕು ವರ್ಷದಿಂದ ಈಚೆಗೆ ನಾಲ್ಕೈದು ಹೆಣ್ಮಕ್ಕಳ ಶವ ನಿಬಿಡ ಪ್ರದೇಶದಲ್ಲಿ ದೊರಕಿದರೂ, ಹೇಗಾಯಿತು? ಯಾಕಾಯಿತು? ಯಾರು ಇದನ್ನು ಮಾಡಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ದೊರಕದೆ, ರಸವತ್ತಾಗಿ ಎಲ್ಲವೂ ಕಳಚಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಮೊನ್ನೆ ಮೊನ್ನೆ ಬೈಂದೂರಿನ ಕಾಡಿನಲ್ಲಿ ಅನಾಥವಾಗಿ ದೊರೆತ ಕಾಲೇಜು ಬಾಲೆ ಅಕ್ಷತಾ ಎನ್ನುವವಳ ಶವ, ಹಳೆಯ ಪ್ರಕರಣಗಳು ಮಾಸುವ ಮೊದಲೇ ಹೊಸ ಆಕೃಂಧನಕ್ಕೆ ನಾಂಧಿಯಾಯಿತು. ಈ ಹಿಂದೆ ನಡೆದ ಸೌಜನ್ಯ, ನಂದಿತಾ, ರತ್ನಾ ಕೊಠಾರಿಯ ಅನುಮಾನಾಸ್ಫದ ಸಾವುಗಳಿಗೆ  ಜನ ಹೋರಾಡಿ ಹೋರಾಡಿ ಸೋತು ಸುಣ್ಣವಾಗಿ ಹೋಗಿದ್ದರೂ, “ಇದು ಯುದ್ಧ ಕಣ್ರೀ ಎದುರಿಸಿ ಬಿಡೋಣ” ಎಂಬ ಕೂಗಿನೊಂದಿಗೆ ಶವ ಸಿಕ್ಕಿದ ಕ್ಷಣದಿಂದಲೇ ಪ್ರತಿಭಟನೆಯನ್ನು ಕೈಗೆತ್ತಿಕೊಂಡರು ನೋಡಿ!!!, ಆಗಲೇ ಪೋಲೀಸ್ ಮಹಾಶಯರಿಗೆ ಒತ್ತಡದ ಕಾವು ನಿದ್ದೆಗೆಡಿಸುವಂತೆ ಮಾಡಿ ಆರೋಪಿಗಳನ್ನು ಹಿಡಿಯಲೇಬೇಕು ಎಂಬ ಛಲ ಮೂಡಿ ಬಂತು. ಕುಂದಾಪುರ ತಾಲೋಕಿನ ಬೈಂದೂರಿನ ಎಲ್ಲಾ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರ ಹಾಗೂ ಒತ್ತಡದೊಂದಿಗೆ  ಅಂತು ಕೊಲೆಗಡುಕ ಸಿಕ್ಕಿಯೇಬಿದ್ದ ಅವನೇ ಕಾಮಪಿಶಾಚಿ 19ರ ಹರೆಯದ ಸುನೀಲ್..





ಸುನೀಲ್ ಏನು ರೇಪ್ ಆ್ಯಂಡ್ ಮರ್ಡರ್ ಮಾಡೋಷ್ಟು ಬೆಳೆದವನಲ್ಲ. ಆದರೆ ಆತನ ಕಾಮದ ಕೀಳು, ಚುಡಾಯಿಸುವ ಪುಂಡಾಟಿಕೆ ಅಮಾಯಕ ಹೆಣ್ಣೋಬ್ಬಳ ಜೀವವನ್ನೇ ಬಲಿ ಪಡೆದದ್ದು ದುರಾದೃಷ್ಟ. ಬೈಂದೂರಿನ ಒತ್ತಿನಣೆಯ ಸಮೀಪದಲ್ಲಿರುವ ಹನ್ನಬೇರು ಎಂಬ ಪುಟ್ಟ ಊರಿನ ಪ್ರತಿಭಾನ್ವಿತ ಹುಡುಗಿ ಅಕ್ಷತಾ. ಮನೆಯಲ್ಲಿ ಬಡತನವಿದ್ದರೂ ಓದಿಗೆ ಅದು ಅಡ್ಡಿಯಲ್ಲ ಎಂದು ತೋರಿಸಿದ ಮುಗ್ಧೆ ಅವಳು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲ ಶೇ.93 ಅಂಕ ಪಡೆದು ಕರ್ನಾಟಕ ರಾಜ್ಯದಲ್ಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನೀಯರಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತಿಗೆ ಭಾಜನಳಾಗಿ ಹಲವು ಕಡೆ ಸನ್ಮಾನಗಳನ್ನು ಗಿಟ್ಟಿಸಿಕೊಂಡಿದ್ದಳು. ಸದ್ಯ ಬೈಂದೂರಿನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಓದುತ್ತಿದ್ದ ಆಕೆಯ ಮೇಲೆ ಅದಾಗಲೇ ಕಿಡಿಗೇಡಿ ಸುನೀಲನ ಕಣ್ಣು ಬಿದ್ದಿತ್ತು. ಆ ದಿನ ಅಂದರೆ ಜೂನ್ 17ರಂದು ಕಾಲೇಜಿಗೆ ಹೋಗಿದ್ದ ಅಕ್ಷತಾ ಸಮಯ 6 ಆದರೂ ಮನೆಗೆ ಬರದಿದ್ದದ್ದು ಮನೆಯವರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಅದಾದ  ನಂತರ ಹುಡುಕಾಟವನ್ನು ಪ್ರಾರಂಭಿಸಿದ ಮನೆಯವರಿಗೆ ದೊರಕಿದ್ದು ದಾರಿಮಧ್ಯೆ ಪೊದೆಯ ಸಮೀಪ ಅಂಗಾತ ಮಲಗಿರುವ ಆಕೆಯ  ಶವ. ದಟ್ಟ ಕಲ್ಲು ಬಂಡೆಯ ನಡುವೆ ಹಾದು ಹೋಗಿ ಮನೆ ಸೇರಬೇಕಾದ ಹುಡುಗಿ ಸ್ಮಶಾನದ ಕದ ತಟ್ಟಿದ್ದಳು.
ಕಾಮಾಂಧ ಸುನೀಲ್, ಈಗಷ್ಟೇ ಐ.ಟಿ.ಐ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಹುಡುಗಿಯರಿಗೆ ಚುಡಾಯಿಸುವುದು, ಗಾಂಜಾ, ಸಿಗರೇಟ್, ಸೇರಿದಂತೆ ಅನೇಕ ಚಟಗಳಿಗೂ ದಾಸನಾಗಿದ್ದ ಅಸಾಮಿಯೆಂದರೆ ನಂಬುತ್ತೀರಾ!?. ಎಸ್... ನಂಬಲೇಬೇಕು...  ಹೌದು!.., ಆ ದಿನ ಅಕ್ಷತಾಳ ಬರಿವಿಕೆಗೆ ಹೊಂಚು ಹಾಕಿ ಕಾಯುತ್ತಿದ್ದ, ದುರ್ಗಮ ದಾರಿಯಲ್ಲಿ ಅವಳು ಆಗಮಿಸಿದಾಗ  ಅಡ್ಡ ನಿಂತು ದುರ್ವರ್ತನೆ ತೋರಿದ್ದ. ಅದಕ್ಕವಳು ಹೆದರಿ ಓಡಲಾರಂಭಿಸಿದ್ದೆ ತಡ ಆಕೆಯ ದುಪ್ಪಟ್ಟವನ್ನು ಜಗ್ಗಿ  ಮುಗ್ಧೆಯನ್ನು ಕಡೆವಿದ್ದ. ಕೂಗಿದಾಗ, ಅದರಿಂದಲೇ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿದ್ದಾನೆ. ಅರೆಉಸಿರಿನಿಂದ ಒದ್ದಾಡುತ್ತಿರುವ  ಅಕ್ಷತಾಳನ್ನು ಪಕ್ಕದಲ್ಲೇ ಇರುವ ಅಕೇಶಿಯಾ ಗಿಡಗಳತ್ತ ಎಳೆದುತಂದು ಮಲಗಿಸಿ, ಅವಳ ಮೈ ಮೇಲೆ ಮಲಗಿ, ಲೈಂಗಿಕ ಪೀಡನೆ ನಡೆಸಿ ಮತ್ತೊಮ್ಮೆ ತನ್ನ ವಾಮನಾವತಾರವನ್ನು ತೋರಿದ್ದಾನೆ. ಅದಾಗಲೇ ಅವಳು ಪೂರ್ತಿ ಜೀವ ಕಳೆದು ಇಹಲೋಕವನ್ನು ತ್ಯಜಿಸಿದ್ದಳು. ಇದನ್ನು ಗಮನಿಸಿದ ಸುನೀಲ್ ಭಯಗೊಂಡು ಆಕೆಯ ಬ್ಯಾಗ್ ಮತ್ತು ಕೊಡೆಯನ್ನು ಪಕ್ಕದಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ಆನಂತರದಲ್ಲೇ ನೋಡಿ, ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ, ಪೊಲೀಸರಿಗೆ ಸುಳಿವು ಸಿಗಬಾರದೆಂದು ತಲೆ ಕೂದಲನ್ನು ಕ್ಷೌರ ಮಾಡಿಸಿಕೊಂಡು ರೂಪ ಬದಲಾವಣೆಯ ಚರ್ಯೆಗೆ ನಿಂತು ಬಿಟ್ಟ ಸುನೀಲಕಾಮಿ. ಈ ನಡುವೆ ಮಾತನಾಡುತ್ತಾ ತನ್ನ ಚಿಕ್ಕಮ್ಮನ ಮಗ ಅಕ್ಷಯನಿಗೂ ವಿಷಯ ಹಂಚಿ, ಮತ್ಯಾರಿಗೂ ಹೇಳಬೇಡ ಪೊಲೀಸರ ಮುಂದೆಯೂ ಬಾಯಿ ಬಿಡದಿರು ಎಂದು ಸಲಹೆ ನೀಡಿದ್ದ. ಅಷ್ಟೇನೂ ಖಚಿತ ಮಾಹಿತಿ ಇಲ್ಲದಿದ್ರೂ ಅನುಮಾನಾಸ್ಫದವಾದ ಸುಮಾರು 150 ರಿಂದ 200 ಮಂದಿಯನ್ನು ವಿಚಾರಿಸಿದ ಉಡುಪಿ ಎಸ್ಫಿ ಅಣ್ಣಾಮಲೈ ಹಾಗೂ ಅವರ ತಂಡ ಅಂತಿಮವಾಗಿ ಸುನೀಲ್ ಮತ್ತು ಅಕ್ಷಯನನ್ನು ಪೋಲೀಸ್ ಗಾಡಿಗೆ ಹತ್ತಿಸಿದ್ದರು. ಸ್ಟೇಷನ್‍ನಲ್ಲಿ ಒಟ್ಟಿಗೆ ವಿಚಾರಿಸಿದಾಗ ಬಾಯಿ ಬಿಡದ ಇಬ್ಬರೂ ಕದೀಮರು ಒಬ್ಬೊಬ್ಬರನ್ನೇ ವಿಚಾರಿಸಿ ಬೆಂಡೆತ್ತಿದಾಗ, ಅಕ್ಷಯ ನಿಜವನ್ನು ಅರುಹಿದ್ದ. ಅಲ್ಲಿಗೆ ಕೇವಲ ಎರಡೇ ದಿನದಲ್ಲಿ ಇದು ಸಹಜವಾದ ಸಾವಲ್ಲ ‘ರೇಪ್ ಆ್ಯಟಂಪ್ಟ್ ಆ್ಯಂಡ್ ಮರ್ಡರ್’ ಎಂಬ ಸುದ್ಧಿ ಹೊರಬಿತ್ತು. ಇದೀಗ ಸುಳ್ಳು ಮಾಹಿತಿ ಕೊಟ್ಟು ಪೊಲೀಸರ ದಾರಿ ತಪ್ಪಿಸಿದ ನಿಟ್ಟಿನಲ್ಲಿ ಅಕ್ಷಯ ಹಾಗೂ ಕೊಲೆಯ ಪ್ರಮುಖ ವ್ಯಕ್ತಿ ಸುನೀಲ್ ಇಬ್ಬರೂ ಪೊಲೀಸ್ ತೆಕ್ಕೆಯಲ್ಲಿ ಕೋಳನ್ನು ತೊಟ್ಟಿದ್ದಾರೆ.
ಕೊಲೆಯೇನೋ ನಡೆದು ಹೋಯ್ತು, ಆರೋಪಿಗಳು ಸೆರೆ ಸಿಕ್ಕರು ಆದರೆ ಕರಾವಳಿಯ ಜನರಲ್ಲಿ ಮಡುಗಟ್ಟಿದ ಕರಿಛಾಯೆಯ ಕಾರ್ಮೋಡ ಇನ್ನೂ ಇಳಿದಿಲ್ಲ. ಈ ಹಿಂದೆ ನಡೆದ ಕೊಲೆಗಳಿಗೂ ಉತ್ತರ ಹುಡುಕಲು ಇದೀಗ ಅಲ್ಲಿನ ಜನತೆ ಮುಂದಾಗಿದ್ದಾರೆ. ಇದೇನೋ ಬಹಳ ಬೇಗ ಬೇಗ ತಪಾಸಣೆ, ವಿಚಾರಣೆ ನಡೆಯಿತು ಇದರಂತೆ ಹಿಂದಿನ ಕೊಲೆಗಳಿಗೂ ಉತ್ತರಿಸಿ ಎನ್ನುವುದು ತಾಲೋಕಿನ ಜನರ ಆಶಯ. ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಕ್ಷೇತ್ರದಲ್ಲಿ ಭಟ್ಟಂಗಿತನ ಮತ್ತು ಸ್ವಹಿತಾಸಕ್ತಿ ನಡೆಸುತ್ತಿದ್ದು, ಪ್ರಜಾಪ್ರಭುತ್ವವನ್ನು ಹೊಸುಕಿಹಾಕಿ ಜನರಿಗೆ ನ್ಯಾಯ ದೊರೆಯದಂತೆ ಮಾಡುತ್ತಿವೆ, ಇಲ್ಲಿನ ಅನೇಕ ಅಕ್ರಮಗಳಿಗೆ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಗಳೇ ಕಾರಣ ಎನ್ನುತ್ತಾರೆ ಅಲ್ಲಿನ ಜನ.
ನಿಜ! ಈ ಜಗತ್ತನ್ನು ಬೇರೆ ಬೇರೆ ಸ್ವರೂಪದ ಅನಿಷ್ಟಗಳು ಕಾಡುತ್ತಿವೆ. ಯರ್ರಾ ಬಿರ್ರಿಯಾಗಿ ಆಳುತ್ತಿವೆ. ಅಕ್ಷತಾಳ ಕೊಲೆಯ ರಹಸ್ಯವನ್ನೇನೋ ಬೇಧಿಸಿದ್ದೇವೆ ಆದರೆ ಇಂತಹ ಘಟನೆಗಳು ಮಾನವ ಲೋಕವನ್ನೇ ತಲ್ಲಣಿಸುವ ಹಾಗೂ ಅಮಾನವೀಯವನ್ನು ಅಕ್ರಮ ಸಮಾಜದೆಡೆ ಕೊಂಡು ಹೋಗುವ ಲಕ್ಷಣಗಳಾಗಿದ್ದು ಈಗಲೇ ಇದನ್ನು ತಡೆಯದಿದ್ದರೆ ಮುಂದೆ ನಮ್ಮ ಕಣ್ಮುಂದೆ ನಮ್ಮ ಮಕ್ಕಳು ಸತ್ತು ಹೆಣವಾಗುವುದನ್ನು ಕಾಣಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದರ ಬಗ್ಗೆ ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೀವೇ ಹೊಣೆ ಹೊತ್ತು  ಕಾಡು ಮೇಡಿನಲ್ಲಿರುವ ಪ್ರದೇಶಗಳಿಗೆ ಸೂಕ್ತ ಭದ್ರತೆ, ದಕ್ಷ ಅಧಿಕಾರಿಯ ನೇಮಕ, ಜೊತೆಗೆ ಸರಿಯಾದ ಮಾರ್ಗ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ನಮ್ಮ ಕಳಕಳಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲವಾದರೇ ನೀವೆ ಹೇಳಿ ‘ಘನವೆತ್ತ ಬದುಕನ್ನು ಅವರು ಬದುಕುವುದ್ಹೇಗೆ...!?’

No comments:

Post a Comment