Friday 10 July 2015

ನಗ್ನತೆಯ ಪಿಸುಮಾತು...


ತಮ್ಮ-ತಂಗಿ ಶಾಲೆಗೆ ಹೋಗುತ್ತಿರುವರು ಆದರೆ...!!!

           ಜೂನ್ 1...
           ಮುಂಜಾನೆಯ ನಿತ್ಯಕರ್ಮಗಳನ್ನು ಮುಗಿಸಿ, ಬಾಹ್ಯ ಪ್ರಪಂಚಕ್ಕೆ ಹೊರ ಬೀಳುವ ಮುನ್ನ ಮೊಬೈಲ್ ಡಾಟಾ ಆನ್ ಮಾಡಿ ದಿನದ ವಿಷಯ ವೈವಿಧ್ಯ ಹಾಗೂ ಗೆಳೆಯ, ಗೆಳತಿಯರ ಸಂದೇಶ, ಪತ್ರಿಕೋದ್ಯಮದ ಸುದ್ದಿ ಶಕಾರನ್ನು ತಿಳಿಯಲು ಮನತೆರೆದೆ. ಎಂದಿನಂತೆ ಒಂದಿಷ್ಟು ಫೇಸ್ ಬುಕ್ ಟ್ಯಾಗ್‍ಗಳು, ಪೋಟೋ ಅಪ್ಡೇಟೆಡ್, ಸ್ಟೇಟಸ್, ಮೇಸೆಂಜರ್‍ನ ಸಂದೇಶಗಳು ಟಿನ್ ಟಿನ್ ಸದ್ದಿನೊಂದಿಗೆ ಪರದೆಯಲ್ಲಿ ನೋಟಿಫಿಕೇಷನ್ ಸ್ಥಳದಲ್ಲಿ ಮಿಂಚಿದವು. ಆಗಲೇ ವಾಟ್ಸಾಪ್‍ನಲ್ಲೂ ಶುಭೋದಯ ಸಾರುವ ಹಲವಾರು ಮೆಸೇಜ್‍ಗಳು ತಾ ಮುಂದು ನಾ ಮುಂದು ಎಂಬಂತೆ ಬೇರೆಯದೇ ರೀತಿಯಲ್ಲಿ ಸೌಂಡ್ ಮಾಡುತ್ತಾ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತಿದ್ದವು. ದಿನಬೆಳಗಾದರೆ ಇದಕ್ಕೇನು ಕಡಿಮೆ ಇಲ್ಲ. ಇತ್ತೀಚಿಗಂತು ಆ್ಯಂಡ್ರಾಯ್ಡ್ ಹವಾ ಎಲ್ಲರಲ್ಲೂ ಮೇಸೆಜ್‍ಗಳ ವ್ಯಾಲ್ಯೂವನ್ನು ಜಾಸ್ತಿಗೊಳಿಸಿ, ಅದಕ್ಕಿರುವ ಬೆಲೆಯ ಮೊತ್ತವನ್ನು ಕಡಿಮೆಗೊಳಿಸಿ ಬಿಟ್ಟಿವೆ ಬಿಡಿ!. ಮೊದಲು ನಾವೆಲ್ಲ ಸಿಮ್‍ನ ಪರ್ಸ್‍ನಲ್ ಆಕೌಂಟ್‍ನಿಂದ ಪ್ರತಿ ಮೇಸೆಜ್‍ಗೆ ಇಂತಿಷ್ಟು ಎಂಬಂತೆ ಹಣವನ್ನು ತೆಯ್ದು ಸಂದೇಶ ಕಳುಹಿಸುತ್ತಿದ್ದೇವು ಆಗ ಒಂದೊಂದು ಸಂದೇಶಕ್ಕೂ ಬೆಲೆ ಅಗಾಧ ಎಂಬಂತ್ತಿತ್ತು. ಆದರೀಗ ಎಲ್ಲವೂ ಇಂಟರ್‍ನೆಟ್ ಜಾಲದೊಳಗೆ ಫ್ರೀ ಎಂಬ ಪಾಶಕ್ಕೆ ಸಿಲುಕಿ ಅವುಗಳ ಮಹತ್ವವೇ ಅಡಗಿ ಹೋಗಿದೆ. ಒಮ್ಮೊಮ್ಮೆ ಈ ಮೆಸೇಜ್‍ಗಳು ಕಿರಿ ಕಿರಿ ಎನಿಸಿದರೂ ಎಲ್ಲೋ ಒಂದು ಕಡೆ ಕ್ಷಣ ಮಾತ್ರದಲ್ಲಿ ತಿಳಿಯದ ಹಾಗೂ ಅಚ್ಚರಿಯ ಕೆಲವೊಂದಿಷ್ಟು ಸುದ್ದಿ, ಪೋಟೋ ಇತ್ಯಾದಿಗಳನ್ನು ಕುಳಿತಲ್ಲೇ ವೇಗದಿ ಪಡೆಯಲು ಸಹಕಾರಿಯಾಗುತ್ತವೆ. ಆ ದಿನ ಬಂದಿರುವ ಅಷ್ಟು ಮೆಸೇಜ್‍ಗಳ ಪೈಕಿ ‘ಹಾಯ್ ಗೆಳೆಯ ಗುಡ್ ಮಾರ್ನಿಂಗ್ ಈ ದಿನ ನೆನಪಿದ್ಯಾ ನಿಂಗೆ’ ಎಂದು ಕಳುಹಿಸಿದ್ದ ನನ್ನ 18 ವರ್ಷದ ಹಿಂದಿನ ಬಾಲ್ಯದ ಗೆಳೆಯನ ಸಂದೇಶ ನನ್ನನ್ನು ತೀರಾ ಆಕರ್ಷಿಸಿತ್ತು. ಅರೇ ಇದೇನಿದು ಈ ದಿನ ಏನಿದೆ ಸ್ಫೇಷಲ್ ಅಂದುಕೊಂಡು ಮೆದುಳಿಗೆ ರೀಕಾಲ್ ಕೊಟ್ಟರೂ ಉತ್ತರ ತೋಚದಾಯಿತು. ‘ಎನ್ ಸ್ಫೇಷಲ್ ಮಿತ್ರಾ, ಗೊತ್ತಾಗಿಲ್ಲ’ ಎಂದು ರಿಪ್ಲೈ ನೀಡಿದೆ. ‘ಹೇ ಇವತ್ತು ಜೂನ್ ಒಂದು ಅಲ್ವೇನೋ, ನಾನು ನೀನು 18 ವರ್ಷಗಳ ಹಿಂದೆ ಇದೇ ದಿನ ನಮ್ಮ 6ನೇ ವಯಸ್ಸಿನಲ್ಲಿ ಒಂದನೇ ಕ್ಲಾಸ್‍ಗೆ ಹೋಗುವಾಗ ಪರಿಚಯವಾಗಿ ದೋಸ್ತಿಗಳಾಗಿದ್ದು, ಮೊದಲ ದಿನ 2 ಮೈಲಿ ದೂರವಿರುವ ಸಣ್ಣ ಶಾಲೆಗೆ ಹೋಗಿ ಒಂದು ಮೂಲೆಯಲ್ಲಿ ಯಾರದ್ದು ಪರಿಚಯವಿರದೇ ಇಬ್ಬರೇ ಎನ್ನುವಂತೆ ಮೇಸ್ಟ್ರ ಹಳೆಯ ಖುರ್ಚಿಯ ಕೆಳಗೆ ಹೋಗಿ ಕುಳಿತದ್ದು’ ಎಂದು ಹಳೆಯದನ್ನು ನೆನಪಿಸಿದ.
      ಹೌದಲ್ವಾ!!... ವಾವ್ಹ್... ಗೆಳೆಯ ಅದನ್ನೆಲ್ಲಾದ್ರೂ ಮರೆಯೋಕಾಗತ್ತಾ, ಆ ದಿನದ ಅನುಭವವೇ ಬೇರೆ. ನೀನು ದೂರದ ಗುಜರಾತ್‍ನಿಂದ  ಇಲ್ಲಿಗೆ ಬಂದು ನನ್ನ ಗೆಳೆಯನಾಗಿದ್ದು, ಅದಾದ ನಂತರವೂ ಅಷ್ಟೇ ಜೊತೆಗೆ ಶಾಲೆಗೆ ಹೋಗಿದ್ದು, ಒಂದೇ ಕೊಡೆಯಲ್ಲಿ ಗುಡುಗು ಮಿಂಚಿಗೆ ಹೆದರದೇ ಕಾಡು ಮೇಡು ದಾಟಿ ಅಕ್ಷರ ಕಲಿತದ್ದು ಅದೆಲ್ಲಾ ಎಣಿಸಿಕೊಂಡರೆ ಮೈಯಲ್ಲಿ ಎನೋ ಸಂಚಲನ ಆಗುತ್ತೆ ಮಗಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಕಣೋ ಎಂದು ಒಂದಿಷ್ಟು ಹಳೆಯ ಬಾಲ್ಯದ ನೆನಪುಗಳ ವಿಚಾರ ವಿನಿಮಯ ಮಾಡಿಕೊಂಡೆವು...
     ನಿಜಕ್ಕೂ ಅನ್ನಿಸುವುದು ನನಗೆ ಎಷ್ಟೊಳ್ಳೆ ದಿನಗಳು ಅವು. ನಾವೆಲ್ಲ ಕಾಲ್ನಡಿಗೆಯಲ್ಲಿ, ಉದ್ದನೆಯ ಹರಿದ ಕೊಡೆಯನ್ನು ಹಿಡಿದು, ಹವಾಯಿ ಚಪ್ಪಲಿಯನ್ನು ತೊಟ್ಟು ಒಮ್ಮೊಮ್ಮೆ ಅದು ಹರಿದರೆ ಬರಿಗಾಲಲ್ಲಿ ನಡೆದುಕೊಂಡು, ಮಳೆಗಾಲದಲ್ಲಿ ಮಳೆ ನೀರು ಹರಿಯುತ್ತ್ತಿದ್ದಾಗ ಕಾಗದದ ದೋಣಿ ಮಾಡಿ ಅದು ಹೋಗುವುದನ್ನೆ ಹಿಂಬಾಲಿಸಿಕೊಂಡು ಚಲಿಸುತ್ತಿದ್ದದ್ದು, ಕಾಡು ಹಣ್ಣುಗಳು ಜೊತೆಗೆ ಪೇರಲ, ನೇರಳೆ, ಮಾವು, ಗೇರು, ಬುಗುರಿಹಣ್ಣು ಇತ್ಯಾದಿಗಳನ್ನು ಕಿಸೆಯಲ್ಲಿ ತುಂಬಿಕೊಂಡು,ಹಣ್ಣು ಸಿಗದವನಿಗೆ ಸಾಲಕೊಟ್ಟು ಮರುದಿನ ಎರಡು ಹಣ್ಣು ಕೊಡು ಎನ್ನುವಂತೆ ಜಗಳ ಮಾಡುತ್ತಾ ಶಾಲೆಯ ದಾರಿಯನ್ನು ಸವೆಸುತ್ತಿದ್ದದ್ದು ಒಂಥರ ಮಜವಾಗಿದ್ದವು. ಇಂದಿನ ಕಾಲದಲ್ಲೂ ಮಕ್ಕಳು ಶಾಲೆಗೆ ಹೋಗುತ್ತಾರೆ ಆದರೆ ಶಾಲೆಯ ಜೊತೆಗೆ ಬದುಕು ಬಿನ್ನಾಣದ ಪರಪಂಚ ನೋಡಿದರೆ, ಇವತ್ತಿನ ಮಕ್ಕಳಿಗೆ ಸ್ಕೂಲ್ ಬಸ್ ಎಂಬ ವಾಹನದೊಳಗೆ ಅವರ ಸಂಭ್ರಮ ಕೊನೆಗಾಣುತ್ತದೆ. ನಮಗೆ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಆಟವಿತ್ತು ಜೊತೆಗೆ ವ್ಯಾಯಾಮದ ಆಯಾಮಗಳಿದ್ದವು. ಆದರೆ ಇಂದು ಗಿಜಿ-ಗಿಜಿಯಾಗಿ ಮಕ್ಕಳು ಸರಿಯಾದ ಕ್ರೀಡಾಂಗಣದ ವ್ಯವಸ್ಥೆಯೆ ಇಲ್ಲದೆ ನಮ್ಮ ಅಂದಿನ ಆ ಮಜದ ಸ್ಫರ್ಶವೇ ಇರದೇ ಸೊರಗುತ್ತಿದ್ದಾರೆ. ಕೇವಲ ಲಕ್ಷ ಲಕ್ಷ ಡೊನೆಷನ್‍ಗೆ ಬಾಯಿಬಿಟ್ಟು ದುಡ್ಡುಮಾಡುವ ಶಿಕ್ಷಣ ಸಂಸ್ಥೆಗಳು ತನ್ನ ಬಾಹ್ಯ ಚಹರೆ ಹೊರಗಡೆ ತೋರಬಾರದೆಂದು ದೊಡ್ಡ ದೊಡ್ಡ ಕಂಪೌಂಡ್ ಏರಿಸಿ ಸ್ವಾತಂತ್ರ್ಯದ ಆಟಕ್ಕೆ ಬ್ರೇಕ್ ಹಾಕಿ, ಓದು-ಓದು-ಓದು ಎಂದು ಮಕ್ಕಳನ್ನು ಮಂಡೆ ಬಿಸಿಯಲ್ಲೇ ಬೇಯುವಂತೆ ಮಾಡುತ್ತಿರುವುದು ನಿಜಕ್ಕೂ ನೋವು ತರಿಸುತ್ತದೆ.
          ಅಂದು ಇಂದಿನ ಮಣಬಾರದಂತ  ಬ್ಯಾಗ್‍ಗಳು ಬೆನ್ನಲ್ಲಿರುತ್ತಿರಲಿಲ್ಲ. ಇವತ್ತಿನ ಮಕ್ಕಳ ಕುತ್ತಿಗೆಯಲ್ಲಿ ವಾಟರ್ ಕ್ಯಾನ್, ಕೈಯಲ್ಲಿ ಲಂಚ್ ಕ್ಯಾರಿಯರ್ ನೋಡಿದರೆ ಅವುಗಳು ಅಂದು ನಮಗೆ ಯಾವುದೆಂದೆ ಗೊತ್ತಿರಲಿಲ್ಲ. ಮಧ್ಯಾಹ್ನ ಮರದ ಕೆಳಗೆ ಊಟದ ಬುತ್ತಿಯನ್ನು ಹಂಚಿಕೊಂಡು ತಿನ್ನುತ್ತಿದ್ದದ್ದು, ಇರುವುದು ಒಂದೇ ಜೊತೆ ಅಂಗಿ ಚಡ್ಡಿಯಾದರೂ ಅದನ್ನೇ ಒಗೆದು ಒಣಗಿಸಿಕೊಂಡು ಹಾಕಿಕೊಳ್ಳುತ್ತಿದದ್ದು, ಅಣ್ಣ-ಅಕ್ಕ ಬಳಸಿದ ಪುಸ್ತಕವನ್ನೇ ನಾವು ಬಳಸುತ್ತಿದ್ದದ್ದು, ಹಳೇ ನೋಟ್ ಪುಸ್ತಕಗಳಲ್ಲಿ ಖಾಲಿ ಇರುವ ಪುಟಗಳನ್ನು ಮಾತ್ರ ಕಿತ್ತು ರಫ್ ಬುಕ್ ಮಾಡುತ್ತಿದ್ದದ್ದು ಎಲ್ಲವೂ ಇಂದು ಬ್ಲಾಕ್ ಆ್ಯಂಡ್ ವೈಟ್ ಚಿತ್ರವಷ್ಟೆ.
 ಇಂದಿನ ಜನರೇಷನ್ ಮಕ್ಕಳಿಗೆ ಈ ಎಲ್ಲಾ ವೈವಿಧ್ಯತೆಯ ಬಗ್ಗೆ ಎಷ್ಟು ಗೊತ್ತಿರಬಹುದು ಎಂದು ಚಿಂತಿಸಿದಾಗ, ಮೊದಲು ನನಗೆ ಕಾಡುವುದೇ ಓದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎನ್ನುವ ಭಯ. ಅಪ್ಪ ಅಮ್ಮಂದಿರು, ಕನ್ನಡ ಮಾತಾಡಲೂ ಬೇಡ, ಕನ್ನಡ ಮೀಡಿಯಂ ಸ್ಕೂಲ್ ಅಂತೂ ಬೇಡವೇ ಬೇಡ ಎಂಬಂತೆ ಎಷ್ಟೇ ಬಡತನದಲ್ಲಿ ಬೇಯುತ್ತಿದ್ದರೂ ಮಗುವನ್ನೂ ಇಂಗ್ಲೀಷ್ ಮೀಡಿಯಂ ಸ್ಕೂಲ್‍ಗೆ ಲಕ್ಷಾಂತರ ಹಣ ಖರ್ಚುಮಾಡಿ ಸೇರಿಸುತ್ತಿದ್ದಾರೆ. ಬೆಳಿಗ್ಗೆ ಎದ್ದರೆ ಶುರುವಾಯ್ತು ದಿನದ ವೈಖರಿ, ಮಗುವಿಗೆ ಖಡಕ್ ಐರನ್ ಶರ್ಟ್ ಹಾಕಿಸಿ, ತಲೆ ಬಾಚಿ, ಪೌಡರ್ ಬಳಿದು, ಅಂದ ಚಂದವಾಗಿಸಿ, ಸ್ಕೂಟಿಯಲ್ಲೋ, ವ್ಯಾನ್‍ನಲ್ಲೋ ಶಾಲೆಗೆ ಭರ-ಭರನೇ ಕರೆದುಕೊಂಡು ಹೋಗಿ ಕಂಪೌಂಡ್ ಒಳಗೆ ಕಾರಾಗೃಹದೊಳಗೆ ಬಿಟ್ಟಂತೆ ದೂಡಿ ಬರುತ್ತಾರೆ. ಇನ್ನೂ ಒಳಗೋದ ಮಕ್ಕಳ ಪಾಡಂತು ಅಯ್ಯೋ ಎಂದರೂ ಇಲ್ಲ, ಅಮ್ಮಾ ಎಂದರೂ ಇಲ್ಲ...
       
ಆಧುನಿಕ ಶಿಕ್ಷಣ ಪದ್ಧತಿಯಿಂದ ಸ್ಫರ್ಧೆಗಿಳಿದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ ಎನ್ನಬಹುದು. ವಿಕಸನದ ಹಾದಿ ಹಿಡಿದಿರುವ ತಂದೆ ತಾಯಿಗಳು ಮಕ್ಕಳನ್ನು ಅದೇ ಹಾದಿಗೆ ಕಳುಹಿಸಲು ಇದ್ದಾಡುತ್ತಿದ್ದಾರೆ. ಬದಲಾವಣೆಯ ಸುಳಿಯಲ್ಲಿ  ಬಾಲ್ಯದ ಅದ್ಭುತತೆಯನ್ನು ಕಳೆದುಕೊಂಡು ಚಲನ ಶೀಲತೆಯನ್ನು ಕೇವಲ ಡಿಜಿಟಲ್ ಯುಗಕ್ಕೆ ಸೀಮಿತ ಮಾಡಿಕೊಳ್ಳುತ್ತಿದ್ದಾರೆ.  ಆಧುನೀಕತೆಗಳ ಶ್ರೀಮಂತಿಕೆಯಲ್ಲಿ ಕಳೆದು ಹೋಗುತ್ತಿರುವ ಬಾಲ್ಯದ ಶ್ರೀಮಂತಿಕೆ, ಶಿಕ್ಷಣ ಹಂತದಲ್ಲೇನೋ ಮಕ್ಕಳನ್ನು  ಪ್ರಭುದ್ಧವಾಗಿಸುತ್ತಿದೆ. ನಾವು ಗೆಳೆಯರು  ಮಾತನಾಡಲು ಕುಳಿತಾಗ  ಬಾಲ್ಯದ ನೆನಪುಗಳ, ಶಾಲಾದಿನಗಳ ಮಜವನ್ನು  ನೆನಪುಮಾಡಿಕೊಂಡು ಹಲ್ಕಿರಿದು ನಗು ನಗುತ್ತಾ ಧನ್ಯ ನಾನು ಎಂಬಂತೆ ಖುಷಿ ಪಡುತ್ತೇವೆ. ಅದನ್ನೆಣಿಸಿದರೆ ಆ ಮಟ್ಟಿಗೆ ನಮ್ಮ ಮಕ್ಕಳು ದುರದೃಷ್ಟವಂತರಾ..,? ಎನ್ನುವ ಪ್ರಶ್ನೆ ಮೂಡುತ್ತೆ. ಆದರೆ ಅದಕ್ಕೂ ಮಿಗಿಲಾದ ಕಂಪ್ಯೂಟರ್, ಇಂಟರ್‍ನೆಟ್, ಪ್ಲೂಯೆನ್ಸ್ ಶಿಕ್ಷಣ ಅವರಿಗೆ ಸಿಕ್ಕಿದೆ. ಊಹಿಸಲಾಗದ ವೈಜ್ಞಾನಿಕ ಆವಿಷ್ಕಾರಗಳು ಅವರ ಕೈಯಲ್ಲಿ ಹರಿದಾಡುತ್ತಿವೆ. ಅದು ಅವರ ಅದೃಷ್ಟವಿರಬಹುದು. ಆದರೂ ಹಿಂದೆ ನಾವನುಭವಿಸಿರುವ ರಜೆಯ-ಮಜ, ಶಾಲೆಯ ರೂಪು-ರೇಷೆ, ಆಟ-ಪಾಠಗಳು, ತೀರಾ ಭಾವನೆಯ ಗೊಂಚಲಿಗೆ ಹತ್ತಿರವಾದಾಗ ಈ ಮುದ್ದು-ಪೆದ್ದು ಅನಿಸಿಕೆ, ಭಾವಲಹರಿಯಲ್ಲಿ ಮೀಟಿ ಆನಂದ ಬಾಷ್ಫ ಹೊಮ್ಮಿಸುತ್ತವೆ. ಆಗ ಆನಿಸುತ್ತದೆ ನಾವೇ ಅದೃಷ್ಟವಂತರು. ಬದಲಾವಣೆಯ ಹಾದಿಯಲ್ಲೇನೋ ನಾವಿದ್ದೇವೆ ಆದರೆ ಬದಲಾಯಿಸುತ್ತಿರುವುದು ಹೆಚ್ಚಾಗಿ ಹಳೆಯ ಮಾದರಿಯ ವಿಶೇಷತೆಗಳನ್ನೇ ಹೊರತು ಹೊಸದಾಗಿ ಬಂದಿರುವ ಕಟ್ಟುಪಾಡುಗಳನ್ನಲ್ಲ... ಥಿಂಕ್ ಡಿಫರೆಂಟ್ಲೀ... ಮುಂದೆ ಅನಿಸಬಹುದು, ಇದೇ ಇರಬಹುದು ನಮ್ಮೆಲ್ಲರ ದುರದೃಷ್ಟ...





 

No comments:

Post a Comment