Tuesday 27 February 2018

ಧನ್ಯತೆಯ ವಿದಾಯ ನಿನಗೆ...

           
   8ಕ್ಕೂ ಅಧಿಕ ವರ್ಷದ ಕನಸದು, ಮುಂದೊಂದು ದಿನ ಕೈ ಹಿಡಿದರೆ ನಿನ್ನೆ ಹಿಡಿಯಬೇಕೆನ್ನುವ ಛಲವದು, ಮುಂಗಾಲಿನ ನನ್ನ ನಡೆಯ ಹಿಂದೆ ನಿನ್ನ ನಡೆಗೆ ದಾರಿ ತೋರಿ ಸಪ್ತಪದಿ ತುಳಿಸಿಕೊಂಡು ಮನೆಯ ಹೊಸ್ತಿಲ ಮೇಲೆ ಸೇರನ್ನಿಟ್ಟು ಅಕ್ಕಿ ತುಳಿಸಿ, ಮನೆ-ಮನೆತನದ ಬೆಳಕಿನ ಜೊತಗೆ ಈ ದೀಪನಿಗೂ ಪ್ರಜ್ವಲಿಕೆಯ ಬೆಳಕನ್ನಾಗಿಸಿಕೊಳ್ಳಬೇಕೆಂಬ ಕುರುಡು ಆಸೆಯದು, ಪರಿಸ್ಥಿತಿಯ ಗಾಳದಲ್ಲಿ ಮುಂದೊಂದು ದಿನ ಬರುತ್ತೆ ಆಗ ನೀ ನನ್ನ ಮದುವೆಯಾಗ್ತೀಯಾ ಎಂದು ಕೇಳೋಣವೆನ್ನುವ ಹೆವಿ ಕಾನ್ಫಿಡೆನ್ಸ್‍ನ ಕಂಪು ಅದು, ಶುರುವಾದಾಗಿನಿಂದ ಇಲ್ಲಿಯವರೆಗೂ ಮೈಗೆತ್ತಿಕೊಂಡ ಬರವಣಿಗೆಯಲ್ಲಿ ಮನವರಿಕೆ ಮಾಡುವೆ ಎನ್ನುವ ಅಮಾಯಕ ಗೀಚುದು, ನೀ ಎದುರು ಬಂದಾಗ ಒಳಗಿದ್ದ ಹೇಳಲಾರದ ತಳಮಳಗಳು ಒಟ್ಟಿಗೆ ಥಂಡಿಗೇರಿಸಿ ನಡುಗಿಸಿದ ನಲ್ಮೆಯದು, ದೂರಿಂದ ನಿನ್ನ ನೋಡಿ ಖುಷಿಪಡುತ್ತಿದ್ದ ಮನದಂದವದು, ಭಾವಗಳ ತೋಳ್ತೆಕೆಯಲ್ಲಿ ಅದೆಷ್ಟೋ ರಾತ್ರಿ ಕನಸಿನಲೇ ನಿನ್ನಿಯನಾಗಿ ರಾಜ್ಯವಾಳಿದ ಕುಬೇರ ಸುಖವದು, ನನ್ನೆಲ್ಲಾ ಸಾಧನೆ ಮುಗಿದ ಬಳಿಕ ನಿನ್ನೆದುರು ಬಂದಾಗ ಓಡಿ ಬಂದು ತಬ್ಬಿಕೊಳ್ಳುತ್ತಿಯಾ ಎನ್ನುವ ಆಶಾದಾಯಕದ ಕನಸದು, ಕಷ್ಟವಾಗಲಿ-ಸುಖವಾಗಲಿ ಸಿಕ್ಕೇ ಸಿಗುವೆ ಎಂದು ಅತಿಯಾಗಿ ಹಚ್ಚಿಕೊಂಡ ಆತ್ಮೀಯತೆಯದು...

           
ಸಾಕಾಗಿಲ್ಲ ಅನ್ನಿಸುತ್ತೆ!,, ಎಸ್... ಎಷ್ಟು ವರ್ಣಿಸಿದರೂ, ಎಷ್ಟು ಬರೆದರೂ, ಎಷ್ಟೆಲ್ಲಾ ಹಲುಬಿಕೊಂಡರೂ ಈ ಕ್ಷಣಕ್ಕೆ ಎಲ್ಲವೂ ಶೂನ್ಯ ಯಾಕೆಂದರೆ ನೀನಿಲ್ಲ... ಇನ್ಮುಂದೆ ನನ್ನ ತೋಳ್ತೆಕ್ಕೆಯಲ್ಲಿ ನೀನಿರುವುದಿಲ್ಲ.., ಹೌದು ನೀನಿರಲ್ಲ!..

           ನಿಜ! ನನಗೆ ಈ ಬರವಣಿಗೆ ಕಲಿಸಿದವಳೆ ನೀನಲ್ವಾ!? ಯಾರಿಗೆ ಯಾರು ಸ್ಫೂರ್ತಿಯಾಗುತ್ತಾರೋ ನಾ ತಿಳಿಯೇ!, ಆದರೆ ನನಗಂತೂ ನೀನೇ ಸ್ಪೂರ್ತಿ ಕಣೋ... ಅನೇಕರ ನಿರೀಕ್ಷೆಯ ಮುಂದೆ ಇಂದಿಲ್ಲಿ ನಾನು ರಹದಾರಿಯಲ್ಲಿ ಕ್ರಮಿಸಿ ಸಾಗುತ್ತಿರಬಹುದು ಆದರೆ ಒಮ್ಮೆ ಹಿಂದಿರುಗಿ ನೋಡಿದರೆ, ಅಕ್ಕಪಕ್ಕ ಇಣುಕಿ ನೋಡಿದರೆ ಸನಿಹ ಖಾಲಿ ಖಾಲಿ...  ಉಳಿದಿದೆ ಒಂಟಿಪಯಣದ ಜೋಲಿ...

          ಇನ್ನೇನು  ಮಾಡಲಾಗದು, ಎಲ್ಲವೂ ವಿಧಿಬರಹ..! ಆ ಬರಹದಲ್ಲಿ ನೀನೊಂದು ಪಾತ್ರ..! ಅನುಕ್ಷಣವೂ ಸನಿಹವೇ ಇರುತ್ತಿಯಾ ಅಂದುಕೊಂಡ ಅಕ್ಷರಗಳಿಗೆ ಪೂರ್ಣವಿರಾಮ. ಗೀಚಲ್ಲಿ ಕಂಡಿದ್ದ ಪಾತ್ರಗಳಿಂದ ಮರೆಯಾಗಿ ಮಾಪನವೇ ಇಲ್ಲದೆ ದೂರಾಗಿ ವಿಧಿಯಲ್ಲಿ ಬರೆದಿಲ್ಲ ಎಂದು ಸಾಲನ್ನು ನುಂಗಿ ಕೊನೆಗಾಣಿಸಿವೆ ಎಂದರೆ ನೀನೊಪ್ಪುತ್ತೀಯಾ!?

           
 ತಪ್ಪಿಲ್ಲ. ಆಗ ನೀನು ಪಿ.ಯು.ಸಿ  ಓದುತ್ತಿದ್ದೆ. ನನ್ನದು ಅದೇ ಪಿ.ಯು.ಸಿ ಸ್ಟಡಿಯಾದರೂ ಇಬ್ಬರದ್ದೂ ಬೇರೆ ಬೇರೆ ಕಾಲೇಜ್. ಆದ್ದರಿಂದ ಮನೆಯವರ ಪರಿಚಯ ಬಿಟ್ಟರೆ ನನಗೆ ನಿನ್ನ ಯಾವ ಒಳಪರಿಚಯ ಆಗಲಿ, ಹೊರ ಪರಿಚಯವಾಗಲಿ, ನಗುವಿನ ಪರಿಚಯವಾಗಲಿ ಇರಲೇ ಇರಲಿಲ್ಲ.

        ಒಂದು ಮಾತನ್ನು ಹೇಳುತ್ತೀನಿ ಕೇಳು.., ನನ್ನಯ ಪರೀಧಿಯ ಪುಸ್ತಕದಲ್ಲಿ ನೀನು ಯಾವಾಗಲೂ ಬೀಡು ಬಿಟ್ಟಿರೋ ಶಿಲಾಕಲ್ಲು. ಹತ್ತಾರು ಬಾರಿ ಮಾತನಾಡಿಸಬೇಕೆಂದರೂ, ಹೇಳಬೇಕೆಂದರೂ ಆಗದ ಒತ್ತಡಕ್ಕೆ ಸಿಲುಕಿದ ಮೂಖಪ್ರಾಣಿ ನಾನು. 

          ಸದ್ಯ ನಿನ್ನ ಕಾಲ್ತೊಳೆದು ಬೀಳ್ಕೊಡಬೇಕಾದ ಸಮಯ ನನ್ನಯ ಪಾಲಿಗೆ ಒದಗಿರುವುದು ಕಣ್ಣಂಚಲಿ ಹನಿ ನೀರು ಮೂಡಿಸಿದೆ.  ಚಿಂತೆಯಿಲ್ಲ!!, ಕೊನೆಯ ಮಾತೆನ್ನುವಂತೆ ನೀನಾಡಿದ ಒಂದೆರಡು ಮಾತೇ ನನ್ನಯ ಇಂಪಿನ ಬಾಳ್ವೆಯ ತೆಕ್ಕೆಯಲ್ಲಿ ಪದೆ ಪದೇ ಲಹರಿಯಾಗಿ ಹರಿಯುತ್ತಲೇ ಇದೆ. ಅದೆಂದಿಗೂ ಇರುತ್ತದೆ.

         ಅಳುವಿದೆ, ಬೇಜಾರಿಲ್ಲ ಅಪ್ಪಿ!.. ಎಲ್ಲಿದ್ದರೂ ಸುಖವಾಗಿರು... ಗಳೆತನಕ್ಕೆ ಪ್ರತಿ ಜನ್ಮವೂ ಜೊತೆಯಾಗಿರು...

           
ಅಂದು ನೀ ನನ್ನ ಕಣ್ಣಿಗೆ ಬಿದ್ದಾಗಲೂ ನಾನು ಶೂನ್ಯನಾಗಿದ್ದೆ, ನಡುವೆ ನಿನ್ನ ಪಡೆಯಬೇಕೆನ್ನುವ ಹಂಬಲದಲ್ಲಿ ಒಂದಿಷ್ಟು ಪಡೆದ ಸ್ವರ ಸ್ಥರದಲ್ಲಿದ್ದೆ. ಆದರೆ ಇಂದು ನೀ ಹೊರಡುವ ಸಮಯ ಬಂದಿದೆ.  ಆಶ್ಚರ್ಯವೆಂದರೆ ಗೊತ್ತಿಲ್ಲದೇ ಮತ್ತೆ ಶೂನ್ಯನಾಗಿ ಬಿದ್ದಿದ್ದೇನೆ!. ಚಿಂತೆಯಿಲ್ಲ!.. ಏಳು-ಬೀಳು ಬಂದರೆ ಬದುಕು ಗಡಸಾಗಿರುತ್ತೆ ಎಂದು ಹಿರಿಯರು ಹೇಳುತ್ತಾರೆ ಅದು ನಿಜವೂ ಕೂಡ. ಆದರೇನು ಮಾಡಲಿ ಅಂದೆಲ್ಲಾ ನೀ ನನ್ನೊಳಗೆ ಸ್ಫೂರ್ತಿ ಚಿಲುಮೆಯಾಗಿದ್ದೆ ಇಂದು ನೀನೇ ಇಲ್ಲದ ಶೂನ್ಯ ಸಂಪಾದನೆಯ ಬಾಳಲ್ಲಿ ಮತ್ತೆ ಎದ್ದೇಳುವುದು ಹೇಗೆ!?, ಏಳ್ತೀನಾ!?, ಬೀಳ್ತೀನಾ!?, ಸಾಯ್ತೀನಾ!? ಒಂದೂ ನಾ ಅರಿಯೆ...

"ಒಂದಂಕ್ಕಿ ಕಾಳಿಗೂ ನೀ ಬೇಕು ಊಟವಿಕ್ಕಲೂ,
ಪ್ರತಿ ಕ್ಷಣಗಳೂ ಕಾಯುತಿವೆ ನಿನ್ನಯ ಸೋಂಕಿಗೆ ಸೋಕಲು...
ಮೈ ರೋಮಗಳ ನಡುಗುವಿಕೆಗೆ ಭಯವಿದೆ ಇಂದಿಗೂ,
ನಲುಮೆಗಳು ಕೇಳುತಿವೆ ಇನ್ನ್ಹೇಗೆ ನಾ ಜೀವ ಪಡೆಯಲಿ ವೈಯಾರಿಸಲು...”
                                                                                                                             ಎಂದಿಗೂ ನಿನ್ನವ,
                                                         - ಸಂದೀಪ್ ಶೆಟ್ಟಿ ಹೆಗ್ಗದ್ದೆ

No comments:

Post a Comment