Thursday 9 June 2016

ಸಿರಿ ಬುಲೆಟ್ - ನಾಮ ಹಾಕುವ ಓಲಾ...

ಊಲಾಲಾ ಆಡುವ ಓಲಾ...
ಅಯ್ಯೋ ಓಲಾ ಇರುವುದು ಬಡವರ ಪಾಲಿಗಲ್ಲಯ್ಯ!!.
‘ಪೀಕ್ ಚಾರ್ಚ್’ ಎಂದು ಫಜೀತಿಗೆ ಸಿಲುಕಿಸುತ್ತಾರೆ ಹುಷಾರ್!!!
ಇಂಗ್ಲೀಷ್ ಓದಿ ಅರ್ಥೈಸಿಕೊಳ್ಳಲು, ಬಂದಿಲ್ಲವೆಂದರೆ ನಿಮ್ಮ ಕತೆ ಗೋವಿಂದ..! 

          ಮಾರುಕಟ್ಟೆಗಿಂದು ಬರಗಾಲವಿಲ್ಲ... ಎಲ್ಲ ರಂಗದಲ್ಲಿಯೂ ಅದರ ವ್ಯಾಪಕತೆ ಜೋರಾಗಿದೆ, ಹಬ್ಬಿಕೊಂಡಿದೆ!..ತಬ್ಬಿಕೊಂಡಿದೆ!.. ಅನೇಕ ವರ್ಷಗಳಿಂದ                                                                                                                                                                                                                                                                ಅಂತ್ಯವಿಲ್ಲವೆಂಬಂತೆ ಲಾಭ ನಷ್ಟಗಳ ಮೆಟ್ಟಿಲ ಮಜಲುಗಳನ್ನು ಹತ್ತಿಕೊಂಡು ಸಾಗುತ್ತಲೇ ಇದೆ. ಪ್ರಾರಂಭದಲ್ಲಿ ಮಾರುಕಟ್ಟೆ ಎನ್ನುವ ಪದ ಸಂಚಾರವಾಗಿದ್ದು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಕೋಡು-ಕೊಂಡುವಿಕೆಯಲ್ಲಾದರೂ, ಔಧ್ಯಮಿಕ ಕ್ರಾಂತಿಯ ನಂತರದ ದಿನಗಳಲ್ಲಿ ಮಾನವ ಸ್ಮಾರ್ಟ್ ಥಿಂಕಿಂಗ್ ನಡೆಸುತ್ತಾ, ಎಲ್ಲಾ ವ್ಯವಹಾರದ ಪ್ರಗತಿ ಕಂಡುಕೊಳ್ಳಲು ಮಾರ್ಕೆಟಿಂಗ್ ವ್ಯಾಕುಲತೆಯ ಸಂಚಲನ ಸೃಷ್ಟಿಸಿಕೊಂಡ.

         ದೇಶ ಪ್ರಗತಿಯಲ್ಲಿದೆ ನಿಜ!, ಬೆಳವಣಿಗೆ ಕಾಣುತ್ತಿದೆ ಅದೂ ನಿಜ!!. ಅನೇಕಾನೇಕ ಕಂಪೆನಿಗಳು ಮಾರುಕಟ್ಟೆಯ ಸಹಾಯದಿಂದ ಇಂದು ತಲೆಯೆತ್ತಿ ನಿಂತು ದೇಶದ ಪ್ರಗತಿಯಲ್ಲಿ ಸಕ್ರೀಯವಾಗಿವೆ. ಒಂದರ ಹಿಂದೆ ಒಂದು ಎಂಬಂತೆ ಲಕ್ಷಗಟ್ಟಲೇ ಕಂಪೆನಿಗಳು ಮಾರುಕಟ್ಟೆಯ ಲಾಭದಿಂದ ಬೀಗಿ ಬೆಂಡಾಗದೆ ನೆಲೆನಿಂತಿವೆ. ಆದರೆ ಆ ಲಾಬಾಂಶಗಳ ಅತೀ ಆಸೆ ಇದೀಗ ಅಕ್ರಮಗಳು ತಾಂಡವವಾಡುವಂತೆ ಮಾಡಿದೆ. ಸಾವಿರ ಎನ್ನುವಂತಹ ಲಾಭಾಂಶ ಲಕ್ಷಕ್ಕೇರಿಸಬೇಕು ಎನ್ನುವ ದುರಾಸೆಗಳಿಂದ ಸಾಮಾನ್ಯ ವರ್ಗದ ಜನತೆಯನ್ನು ಬಂಡವಾಳ ವರ್ಗ ಯಾಮಾರಿಸುತ್ತಿದೆ. ಅಂತಹ ಒಂದು ಲೇಟೆಸ್ಟ್ ವಂಚನೆಯ ಮಾಹಿತಿಯೇ ಈ ಲೇಖನ. 
ಯಾಮಾರಬೇಡಿ ಹುಷಾರಾಗಿರಿ...

     ಇಂತಹದೊಂದು ಆಕ್ರಮಣಶೀಲತೆ ಸೃಷ್ಟಿಯಾಗುತ್ತಿರುವುದು ಬೇರೆಲ್ಲೂ ಅಲ್ಲ, ‘ಬಡವರ ಟ್ಯಾಕ್ಸಿ’, ‘ಕಡಿಮೆ ಬಾಡಿಗೆಯಲ್ಲಿ ಸರ್ವರೂ ಚಲಿಸಿ’ ಎಂಬಂತ ಘೋಷವಾಕ್ಯವನ್ನಿಟ್ಟು ಮಾರುಕಟ್ಟೆಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವಾಹನಗಳೊಂದಿಗೆ ಸವಾರಿ ಆರಂಭಿಸಿದ ‘ಓಲಾ ಕ್ಯಾಬ್’ ಸರ್ವಿಸ್‍ನಲ್ಲಿ!..
ಎಸ್!.. ನಿಜ...

ನಂಬಲಾಗುತ್ತಿಲ್ಲವಾ!? ನಂಬಲೇಬೇಕು!..
    ಹಾಗಿದೆ-ಹೀಗಿದೆ!, ಆ ಸೇವೆ ಇದೆ-ಈ ಸೇವೆ ಇದೆ!., ಎಂದು ನಂಬಿಸಿ ಸಾವಿರಾರು ಜನರನ್ನು ತನ್ನತ್ತ ಸೆಳೆದು ಆ್ಯಪ್ ಎನ್ನುವ ಮಾಯಾಜಾಳದಲ್ಲೇ ಪಿಕ್ ಅಪ್ ಡ್ರಾಪ್ ಎನ್ನುವ ಆಟ ಆಡಿ, ನಂಬಿಸಿ ಇದೀಗ ಹೊಸ ಹೊಸ ಪ್ಲಾನ್ ಗಳ ಅಪ್ ಡೇಟ್ ನಿಂದ ಕತ್ತು ಕುಯ್ಯಲು ಮುಂದಾಗಿದೆ ಓಲಾ ಎನ್ನುವ ಒಡೆಯನ ಕಾರು.

ಉದಾಹರಣೆ ಕೊಡ್ತೀನಿ ಓದಿ:
   ತೀರಾ ಮೊನ್ನೆ ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೆಂದುಕೊಂಡಿದ್ದ  ಆಕಾಶ್ ಎಂಬ ವ್ಯಕ್ತಿ ಮಾಮೂಲಿಯೆಂಬಂತೆ ಬೆಳಿಗ್ಗೆ 5:50 ರ ಸುಮಾರಿಗೆ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಕೋರಮಂಗಲದಿಂದ   ಏರ್ ಪೋರ್ಟ್‍ಗೆ ಸಾಗಿದ್ದ. ಅಲ್ಲಿಂದಲ್ಲಿಗೆ ಸುಮಾರು 50 ಕಿಲೋಮೀಟರ್ ದೂರ ಟ್ಯಾಕ್ಸಿ ಪ್ರಯಾಣ ಆಗಿರಬಹುದು. ಏರ್‍ಪೋರ್ಟ್ ತಲುಪಿದ ನಂತರ ಆಕಾಶ್‍ಗೆ ಟ್ಯಾಕ್ಸಿ ಬಿಲ್ ನೋಡಿ ಗಾಬರಿ!!. ಸಾಮಾನ್ಯವಾಗಿ ಅಬ್ಬಾಬ್ಬಾ ಅಂದರೆ 800 ರೂಪಾಯಿಯ ಒಳಗೆ ಕಾಣಿಸಬೇಕಾಗಿದ್ದ ಬಿಲ್ ಮೊತ್ತ ಬರೋಬ್ಬರಿ 2,767 ರೂ ತೋರಿಸುತ್ತಿತ್ತು. ಕ್ಷಣಾರ್ಧದಲ್ಲಿ ತೀವ್ರ ವಿರೋಧದ ನಡುವೆ ಸಿಡಿದೆದ್ದ ಆಕಾಶ್, ಕ್ಯಾಬ್‍ನ ಡ್ರೈವರ್ ಮೇಲೆ ಜಗಳಕಾಯ್ದರು ಯಾವ ಪ್ರಯೋಜನವಾಗದೆ ಬಿಲ್ ಪೇಮೇಂಟ್ ಮಾಡಲೇಬೇಕಾಯಿತು. ಓಲಾ ಕಸ್ಟಮರ್ ಕೇರ್‍ಗೆ ಫೋನ್ ಮಾಡಿ ವಿಚಾರಿಸಿದರೆ ಅವರ ಉತ್ತರ, ಸರ್ ನಿಮಗೆ ‘ಪೀಕ್ ಚಾರ್ಚಸ್’ ಅಪ್ಲೈ ಆಗಿದೆ, ಪೀಕ್ ಆಪ್ಶನ್‍ನಲ್ಲಿ ನೀವು ಬುಕ್ ಮಾಡಿದ್ರಿ!... ಡಿಸ್ ಪ್ಲೇ ಮೆಸೇಜ್ ಓದಿ ನೋಡಿ ನೀವು ಕ್ಯಾಬ್ ಬುಕ್ ಮಾಡಬೇಕಿತ್ತು. ಏನೂ ಮಾಡಲಾಗುವುದಿಲ್ಲ ಪೇ ಮಾಡಲೇಬೇಕು ಎಂದು ಕೈತೊಳೆದುಕೊಂಡಿದ್ದಾರೆ. ಲೆಕ್ಕಾಚಾರ ಮಾಡಿ ನೋಡಿದರೆ ಆಕಾಶ್‍ರವರ ಪ್ರಯಾಣದ 50 ಕಿ,ಮೀನಲ್ಲಿ ಮೊದಲ 30 ಕಿ.ಮೀಗೆ 540 ರೂ. ಹಾಗೂ ನಂತರದ 20 ಕಿ.ಮೀಗೆ 1,639 ರೂ. ಚಾರ್ಜಸ್ ಬಿದ್ದಿದೆ. ಎಲ್ಲಿದೆ ಸ್ವಾಮಿ ಇಷ್ಟೊಂದು ಬಿಲ್!! ಯಾವ ಮಾಮೂಲಿ ಟ್ಯಾಕ್ಸಿ, ಆಟೋದವರು ಇಷ್ಟು ಚಾರ್ಚ್ ಮಾಡುತ್ತಾರೆ ನೀವೇ ಹೇಳಿ!?.  

   ಆಕಾಶ್‍ಗೆ ಒಂದು ಕಿಲೋ ಮೀಟರ್‍ಗೆ 81.95 ರೂ ಚಾರ್ಜಸ್ ಬಿದ್ದಿತ್ತು. ಸದ್ಯ ಒಂದು ಲೀಟರ್ ಪೆಟ್ರೋಲ್‍ಗೆ 67.64 ಹಾಗೂ ಡೀಸೆಲ್ ಬೆಲೆ ಇರುವುದು 55.32 ರೂ. ಅಂದರೆ 1 ಲೀಟರ್ ಪೆಟ್ರೋಲ್, ಡೀಸೆಲ್‍ಗಿಂತಲೂ ದುಪ್ಪಟ್ಟು ದುಡ್ಡನ್ನು ತೆಗೆದುಕೊಂಡು ಅದಕ್ಕೊಂದು ನಾಮಧ್ಯೇಯ ಎಂಬಂತೆ ಪೀಕ್ ಚಾರ್ಚ್ ಎಂದು ಚಾಕಚಕ್ಯತೆಯಲ್ಲಿ ತಲೆ ಹೊಡೆದು ದುಡ್ ಮಾಡುವುದೆಂದರೆ ಇದೆ ಅಲ್ವಾ!?
 ಈಗ ಹೇಳಿ ಸ್ವಾಮಿ ಮಾಮೂಲಿ 1 ಕಿ.ಮೀ ಗೆ 6 ರೂ.ನಂತೆÉ ಟ್ಯಾಕ್ಸಿ ದೊರಕಿಸಿಕೊಡುತ್ತಿದ್ದ ಓಲಾ ಯಜಮಾನ ಹೀಗೆಲ್ಲಾ ಅಕ್ರಮವಾಗಿ ಆಟವಾಡಿ ಊಲಾಲಾ ಆಡುತ್ತಿರುವುದನ್ನು ಏನೆಂದು ಕರೆಯಬಹುದು!?

    ಇಂತಹ ಅಕ್ರಮವನ್ನು ಬಯಲಿಗೆಳೆಯಬೇಕು, ಸಾಮಾನ್ಯರಿಗಾಗುತ್ತಿರುವ, ಮುಂದೆ ಆಗಬಹುದಾದ ಅನ್ಯಾಯವನ್ನು ತಡೆಯಬೇಕು, ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಬೇಕೆಂದು ನಮ್ಮ ಸಿರಿ ತಂಡ  ಓಲಾ ಕ್ಯಾಬ್ ಬುಕ್ ಮಾಡಿ ಹೊಸತೊಂದು ಸಾಹಸಕ್ಕೆ ಕೈ ಹಾಕಿತು.

     ಮೂರು ಜನರಿದ್ದ ನಮ್ಮ ತಂಡ, ಸಿರಿ ಕಛೇರಿ ಪ್ಯಾಲೆಸ್ ಗುಟ್ಟಹಳ್ಳಿಯಿಂದ ಮೈಸೂರು ರಸ್ತೆಯ ಬಳಿ ಇರುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‍ವರೆಗೆ ಓಲಾ ಕ್ಯಾಬ್ ಬುಕ್ ಮಾಡಿ ಹೊರಟುಬಿಟ್ಟಿತು. ಹೋಗುವಾಗ ಮಿನಿ ಕ್ಯಾಬ್ ಮಾಡಿಕೊಂಡು, ಸಾಮಾನ್ಯ ಬುಕ್ಕಿಂಗ್‍ನಲ್ಲಿ ಹೋಗಿ ಇಳಿದೆವು. ಚಾರ್ಜಸ್ 125 ರೂಪಾಯಿ ಆಯ್ತು. ಮತ್ತೆ ರಿಟರ್ನ್, ಓಲಾ ಆ್ಯಪ್ ಓಪನ್ ಮಾಡಿ ಪೀಕ್ ಚಾರ್ಜಸ್‍ನಲ್ಲಿ ಬುಕ್ ಮಾಡಲಾಯಿತು. ಅದು ಯಾವ ನಿಖರವಾದ ಮೆಸೇಜ್‍ಗಳನ್ನು ಕಣ್ಣಿಗೆ ಕಾಣಿಸದೇ ಬುಕ್ಕಿಂಗ್ ತೆಗೆದುಕೊಂಡಿತು. ಸೆಟಲೈಟ್ ಬಸ್ ಸ್ಟ್ಯಾಂಡ್‍ನಿಂದ, ಪ್ಯಾಲೇಸ್ ಗುಟ್ಟಳ್ಳಿಗೆ ಬಂದು ಇಳಿಯಿತು ನಮ್ಮ ತಂಡ. ಇಳಿಯುವವರೆಗೂ ಪೀಕ್ ಚಾರ್ಜಸ್‍ನಲ್ಲಿ ಪ್ರಯಾಣಿಸಲಾಗುತ್ತಿದೆ ಎಂದು ನಮ್ಮ ತಂಡಕ್ಕಾಗಲಿ, ಡ್ರೈವರ್‍ಗಾಗಲಿ ತಿಳಿಯಲೇ ಇಲ್ಲ. ಮಧ್ಯೆ ಯಾವ ಮೆಸೇಜ್ ಕೂಡ ಸಂದೇಶ ಸಾರಲಿಲ್ಲ... ಜರ್ನಿ ಅಂತಿಮಗೊಳಿಸಿ ಬಿಲ್ ಡಿಸ್ ಪ್ಲೇ ಆದಾಗಲೇ ತಿಳಿಯಿತು. ಕೇವಲ 8 ಕಿ.ಮೀನ ನಮ್ಮ ಪ್ರಯಾಣಕ್ಕೆ ಬರೋಬ್ಬರಿ 512 ರೂಪಾಯಿಯ ಬಿಲ್ ಹೊರಬಿದ್ದಿತ್ತು!.. 
ಅಬ್ಬಾ!! ಹೀಗೂ ದುಡಿತಿದ್ದಾರಾ ಓಲಾ ಸಂಸ್ಥೆ ಎನ್ನುವ ಶಾಕ್ ಆಗ ನಮಗಾಯಿತು.

   
       ನಿಗಧಿಪಡಿಸಿದ ಹತ್ತಾರುಪಟ್ಟು ಹೆಚ್ಚು ಮೊತ್ತವನ್ನು ನಮಗೆ ಅರಿವಿಲ್ಲದೇ, ಇರಿದು ರಕ್ತಬರದಂತೆ ಸಾಯಿಸಿ ಸುಲಿಗೆಗೈಯುವುದೆಂದರೆ ಇದೆ ಅಲ್ಲವಾ!!? ಎರಡೂವರೆ ವರ್ಷಗಳ ಹಿಂದೆ ಓಲಾ ದೆಹಲಿಯಲ್ಲಿ ಚಾಲ್ತಿಯಾದಾಗ ಬೆಂಗಳೂರಿಗೆ ಬರಲಿ ಎಂದು ನಾವೂ ಸ್ವಾಗತಿಸಿದ್ದೆವು. ಎಲ್ಲೆಲ್ಲೂ ಓಲಾ ಓಲಾ ಎನ್ನುವ ಮಾತುಬಂದಾಗ ಇನ್ನಾದರೂ ಆಟೋ ರಿಕ್ಷಾದವರು ಮಾಡುವ ಸುಲಿಗೆಗೆ ಬ್ರೇಕ್ ಬಿತ್ತು. ಒಳ್ಳೆಯ ಸೇವೆ ಎಂದು ಅಪ್ಪಿಕೊಂಡಿದ್ದೆವು. ಪ್ರಾರಂಭದಲ್ಲಿ ‘ಕಡಿಮೆ ದರ, ಸಾಮಾನ್ಯನಿಗೆ ವರ’.., ಎನ್ನುವಂತಿದ್ದ ಓಲಾವನ್ನು ‘ಬಡವರ ಪ್ರಯಾಣದ ದೇವರಾಯಿತು, ಎಲ್ಲರಿಗೂ ಕೈ ಗೆಟುಕುವ ದರದಲ್ಲಿ ಸಿಗುತ್ತೆ’ ಹಾಗೆ ಹೀಗೆ ಎಂದೆಲ್ಲಾ ಪಟಾಕಿ ಹಾರಿಸಿದ್ದ ಓಲಾ ಸಂಸ್ಥೆ ಇದೀಗ ‘ಪೀಕ್ ಚಾರ್ಚಸ್’ ಎನ್ನುವ ಮೂಲಕ ಬಡ ಸವಾರರನ್ನು ಪ್ರಯಾಣದ ಬಳಿಕ ಪೀಕಲಾಟಕ್ಕೆ ದೂಡುವುದು ನಿಶ್ಚಿತ ಎನಿಸುತ್ತಿದೆ.     

   ಅಷ್ಟಕ್ಕೆ ನಮ್ಮ ತಂಡ ಸುಮ್ಮನಾಗಲಿಲ್ಲ. ಕಸ್ಟಮರ್ ಕೇರ್‍ಗೆ ಡಯಲ್ ಮಾಡಿ ವಿಚಾರಿಸೋಣವೆಂದು ಟೋಲ್ ಫ್ರಿ ನಂಬರ್‍ಗೆ ಡಯಲ್ ಮಾಡಿತು. ಒಂದೆರಡು ಬಾರಿ ನೇರ ಕನೆಕ್ಟ್ ಆಗದೆ ಆಟ ಆಡಿಸಿದ ಅವರ ಕಸ್ಟಮರ್ ಸರ್ವಿಸ್, ನಂತರ  5 ನಿಮಿಷದ ವೈಟಿಂಗ್‍ನಲ್ಲಿ ಆಂಗ್ಲಬಾಷೆಯಲ್ಲಿ ಮಾತುಗಾರಿಕೆಗೆ ಇಳಿಯಿತು. ಅಂತೂ ಮೇಲೆ ಹೇಳಿದಂತೆ ತಮ್ಮ ನಿಲುವೇ ಸರಿ, ನೀವು ಬುಕ್ ಮಾಡಿದ್ದೇ ತಪ್ಪು, ಸರಿಯಾಗಿ ನೋಡಿಕೊಂಡು ಮಾಡಬೇಕು, ಪೀಕ್ ಚಾರ್ಜಸ್ ಇದ್ದರೆ ನಿಮ್ಮ ಮೊಬೈಲ್‍ನಲ್ಲಿ ವಾರ್ನಿಂಗ್ ಮೆಸೇಜ್ ಬರುತ್ತೆ!, ಅದನ್ನು ಗಮನಿಸದೇ ಬುಕ್ ಮಾಡಿದರೆ ಹೀಗೆ ಆಗುತ್ತೆ! ಎನ್ನುವ ಮಾತಿನೊಂದಿಗೆ, ‘ನಾವೇನು ಮಾಡಲು ಬರುವುದಿಲ್ಲ ಸರ್ ದಯಮಾಡಿ ಪೇ ಮಾಡಿ’ ಎಂದಳಾಕೆ. ‘ಆಯ್ತು ಮಾಡ್ತೀವಿ.., ಆದ್ರೆ ಯಾಕೀಥರ ಬಡವರ ಮೇಲೆ ಸುಲಿಗೆ ಮಾಡುತ್ತೀರಾ? ನಿಮ್ಮ ಮ್ಯಾನೇಜ್‍ಮೆಂಟ್ ಲೆವೆಲ್‍ಗೆ ಕಾಲ್ ಕನೆಕ್ಟ್ ಮಾಡಿ ನಾವು ಮಾತಾಡ್ತೇವೆ’ ಅಂದ್ರೆ ‘ಹಾಗೆ ಕನೆಕ್ಟ್ ಮಾಡೋಕೆ ಆಗುವುದಿಲ್ಲ ಸರ್ ಬೇಕಿದ್ರೆ ನಿಮ್ಮ ಅಹವಾಲನ್ನು ಮೇಲ್ ಮೂಲಕ ನಾನು ಮಂಡಳಿಗೆ ತಿಳಿಸುತ್ತೇನೆ, ನಿಮಗೆ ಮೇಲ್ ಬರುತ್ತೆ ನಿಮ್ಮ ಕಂಪ್ಲೇಂಟ್ ಪಡೆದುಕೊಳ್ಳುತ್ತೇನೆ’ ಎನ್ನುತ್ತಾ ಕಾಲ್ ತುಂಡರಿಸಿದ ಆಕೆ ಇವತ್ತಿನವರೆಗೂ ನಾವು ಕಾಯುತ್ತಿದ್ದರೂ ಯಾವ ಕಂಪ್ಲೇಂಟ್ ಕಾಪಿಗಳನ್ನು ಇ-ಮೇಲ್‍ಗೆ ರವಾನಿಸದೇ ಇರುವುದು ಸಂಶಯಕ್ಕೆ ಎಡೆಮಾಡಿದೆ.

   ಹೌದು ಸ್ವಾಮಿ!, ನಾವು ಬಡವರು ಅದನ್ನು ಬಿಡಿ ಆದರೆ ಎಲ್ಲರಿಗೂ ಇಂಗ್ಲೀಷ್ ಬುರುತ್ತದಾ!? ಅದನ್ನು ಹೇಳಿ ಮೊದಲು!!! ನಾವೇನೋ ಓದಿದ್ದೀವಿ, ಇಂಗ್ಲೀಷ್ ಕಲಿತಿದ್ದೀವಿ, ಮೆಸೇಜ್‍ನ್ನು ಓದಿ ಬುಕ್ ಮಾಡುತ್ತೇವೆ!, ಆದರೆ ಒಬ್ಬ ಸಾಮಾನ್ಯ ಮನುಷ್ಯ, ಇಂಗ್ಲೀಷ್ ಬರದಿದ್ದವನು ನಿಮ್ಮ ಕಾರ್‍ನಲ್ಲಿ ಚಲಿಸಬೇಕಲ್ಲ... ಅವನು ಹೇಗೆ ಆ ನಿಮ್ಮ ವಾರ್ನಿಂಗ್ ಮೆಸೇಜ್‍ಗಳನ್ನೆಲ್ಲಾ ಓದುತ್ತಾನೆ!?? ಉತ್ತರ ನೀಡಿ...

   ಪ್ರಾರಂಭ ದಿನಗಳಲ್ಲಿ ಗ್ರಾಹಕರು, ಡ್ರೈವರ್‍ಗಳನ್ನು ಸೆಳೆಯುವ ದೃಷ್ಟಿಯಿಂದ ಸಾವಿರ ಸಾವಿರ ಸಂಬಂಳ, ಇನ್‍ಸೆಂಟಿವ್ ನೀಡುತ್ತಿದ್ದ ಓಲಾ ಒಡೆಯ ಇಂದು  ಅಂದುಕೊಂಡಂದ್ದಕ್ಕಿಂತ ಅಧಿಕ ಲಾಭ, ಹಾಗೂ ಜನ ಬಲ ಬಂದ ಕೂಡಲೇ ಎಲ್ಲದಕ್ಕೂ ಬದಲಾವಣೆ ಹಾಡಿದ್ದಾನೆ. ಅಂದು ಡ್ರೈವರ್‍ಗಿದ್ದ ಲಾಭಾಂಶ ಕಡಿಮೆಗೊಳಿಸಿದ್ದಾನೆ. ಇನ್ ಸೆಂಟಿವ್‍ನಲ್ಲೂ ಹಂಬಾಕಿನ ಆಟವಾಡುತ್ತಿದ್ದಾನೆ.

  ಇಷ್ಟೇ ಅಲ್ಲದೇ ಕ್ಯಾಬ್‍ಗಳು ಎಷ್ಟು ದುರ್ಬಳಕೆಯ ಹಂತಕ್ಕೆ ಇಂದು ತಲುಪಿದೆ ಎಂದರೆ, ವರದಿಯೊಂದರ ಪ್ರಕಾರ ಕ್ಯಾಬ್‍ಗಳು ರಾಜ್ಯ ಪರವಾನಗಿ ಪಡೆದು, ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಹೇಳಲಾಗಿದೆ. ಅದೆಷ್ಟೋ ಕ್ಯಾಬ್‍ಗಳಲ್ಲಿ ಇನ್ನೂ ಯಾವುದೇ ರೀತಿಯ ಡಿಜಿಟಲ್ ಮೀಟರ್ ಅಳವಡಿಸಿಲ್ಲ, ರಸ್ತೆÉ ತೆರಿಗೆ ಪಾವತಿಸಿಲ್ಲ, ವಾಹನಗಳ ಅರ್ಹತೆ, ಪತ್ರದ ಅವಧಿ ಮುಗಿದಿದ್ದರೂ ವಾಹನಗಳ ಕಾರ್ಯಾಚರಣೆ ಮುಂದುವರಿದಿರುವುದು ಬೆಳಕಿಗೆ ಬಂದಿದೆ.  ಇದಷ್ಟೇ ಅಲ್ಲದೇ ಇದೀಗ ಸಾರಿಗೆ ನಿಯಮ ನಿಗಧಿಪಡಿಸಿದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿಗಳು ದಾಖಲಾಗುತ್ತಿದ್ದು, ಜನರ ಹಣವನ್ನು ದೋಚುವ ಹುನ್ನಾರ ನಡೆಯುತ್ತಿರುವುದು ಕಂಡು ಬಂದಿದೆ...

   
ನೀವು ಸಾಮಾನ್ಯ ಮನುಷ್ಯರಾಗಿದ್ದರೆ ನಿಮ್ಮ ಪಾಕೇಟ್ ಮೇಲು ಇವರು ಬರೆ ಎಳೆಯುವುದು ಗ್ಯಾರಂಟಿ. ಸಂಬಂಧಿಸಿದ ಸಾರಿಗೆ ಇಲಾಖೆ ಇದರ ಬಗ್ಗೆ ಈಗಲೇ ಸರಿಯಾದ ನಿರ್ಣಯ ತೆಗೆದುಕೊಂಡಿಲ್ಲ ಎಂದಾದರೆ ಮುಂದೊಂದು ದಿನ 10 ರೂಪಾಯಿಯ ಮೀಟರ್ ಚಾರ್ಜ್‍ಗೆ 100 ರೂಪಾಯಿ ನೀಡಿ ಹೋಗುವ ಸಮಯ ನಿಮಗೂ ಬಂದು ‘ಪೀಕ್ ಫಜೀತಿ’  ಸಂಭವಿಸಬಹುದು!. 
ಸರ್ಕಾರ ಈ ಬಗ್ಗೆ ಸರಿಯಾದ ನಿಲುವನ್ನು ಕೈಗೊಂಡು ಎಲ್ಲರಿಗೂ, ಎಲ್ಲ ಸಮಯದಲ್ಲೂ ಸಮಾನ ರೀತಿಯಲ್ಲಿ ದೊರಕುವ ಭಾಗ್ಯ ಒದಗಿಸಬೇಕಾಗಿದೆ. ಯಾರೋ ಓಡಿಸುವವನು!, ಯಾರೋ ಆಡಿಸುವವನು! ಆಗಿರುವ ಈ ಆನ್ ಲೈನ್ ಕ್ಯಾಬ್‍ಗಳ ಬಗ್ಗೆ ಅಧಿಕಾರಿಗಳು ಒಂದು ಕಣ್ಣನ್ನು ಇಡಬೇಕು. ಅವರವರೇ ತಂದುಕೊಳ್ಳುವ ಕಾನೂನುಗಳಿಗೆ ಬ್ರೇಕ್  ನೀಡಬೇಕು...
ಪ್ರಯಾಣಿಕರು ಅಷ್ಟೇ ಜಾಗೃತರಾಗಿ ಮುಂದುವರಿಯಿರಿ. ದೋಚುವ ಕ್ಯಾಬ್‍ಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲವಾದರೆ ಮುಂದೊಂದು ದಿನ ಇನ್ನೂ ಯಾವ ಯಾವ ಚಾರ್ಜಸ್‍ನ್ನು ಹೇರಿ ನಮ್ಮನ್ನು ಸುಲಿಗೆ ಮಾಡುವರೋ ತಿಳಿದಿಲ್ಲ...
                                                    ಕೇರ್ ಫುಲ್ ಯೂರ್ ಸೆಲ್ಫ್...




No comments:

Post a Comment