Saturday 13 February 2016

ಮಂಡೆ ಬಿಸಿ ಮಾಡಿರುವ ಮಂಡೆ ಕವಚ...


* ರಕ್ಷಣೆಯೇನೋ ಸರಿ, ಸೇಫ್ಟಿ ಫಾಲೋ ಯಾರ ಗುರಿ...
* 2006ರಲ್ಲಿ ಒಬ್ಬರಿಗೆ, 2016ರಲ್ಲಿ ಇಬ್ಬರಿಗೆ...
* ಉಪಕಾರಿ ಎನಿಸಿದ್ದು, ಉಪದ್ರವಕಾರಿಯಾಗದಿದ್ದರೆ ಒಳಿತು...
*ರಸ್ತೆ ಗುಂಡಿಗಳನ್ನು ಮೊದಲು ಮುಚ್ಚಿಸಿ, ಸಾವನ್ನು ತಪ್ಪಿಸಿ...

ಮೊನ್ನೆ ರೈಲು ಪ್ರಯಾಣದ ವೇಳೆ ನನ್ನೆದುರಿಗೊಬ್ಬ ವ್ಯಕ್ತಿ ಕುಳಿತುಕೊಂಡು ತನ್ನಷ್ಟಕ್ಕೆ ತಾನೆ ಗೊಣಗಿಕೊಂಡು ಪೇಪರ್ ಓದುತ್ತಾ, ಹಿಡಿ ಹಿಡಿ ಶಾಪ ಎನ್ನುವಂತೆ ಕರಕಿರಿಸುತ್ತಿದ್ದ. ಏನಾಯ್ತಪ್ಪಾ!, ಯಾಕೆ ಹೀಗಾಡುತ್ತಿದ್ದೀಯಾ? ಎಂದು ಕೇಳಿದ್ದೆ ತಡ ಅವನ ಕೋಪ ತಾಪವೆಲ್ಲ ನನ್ನ ಬಳಿ ತೋರಿಸುವನಂತೆ ವರ್ತಿಸಿ, ‘ನೋಡಿ ಸ್ವಾಮಿ!, ಇಷ್ಟು ದಿನ ಏನೋ ಒಂದು ನಡೆದು ಹೋಯ್ತು, ಆದರೆ ಇನ್ನೂ ಮುಂದಿನ ದಿನಗಳಲ್ಲಿ ಜೀವನ ಕ್ರಮ ಬಹಳ ಕಷ್ಟವಿದೆ.., ಆಳುವವರ ದಬ್ಬಾಳಿಕೆ ಹಿಂದಿದ್ದ ಕಾಲಕ್ಕೆ ಮತ್ತೆ ನಮ್ಮನ್ನ ದೂಡಿ ಬ್ರಿಟೀಷ್ ಕಾಲದಲ್ಲಿದ್ದಂತೆ ಹೆದರಿ ಬದುಕುವುದೇ ಮಾಮೂಲಿಯಾಗಿ ಬಿಡುತ್ತದೇನೋ ಎನ್ನುವ ಭಯ ಮೂಡುತ್ತಿದೆ.!, ಅಲ್ಲಾ ಸಾರ್!, ಇದನ್ನ ನೋಡಿ ಆಮೇಲೆ ನೀವೆ ಹೇಳಿ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಂತೆ ಇದು ಬೇಕಿತ್ತಾ...??? ಎಂದ
 ಉತ್ತರವಾಗಿ, ಹು.., ಹೌದು. ಇದು ಸರ್ಕಾರದ ಆಜ್ಞೆ ಪಾಲಿಸಲೇಬೇಕಲ್ಲ ಅದಕ್ಯಾಕೆ ಇಷ್ಟು ಟೆನ್ಷನ್ ಮಾಡ್ಕೊಂಡಿದ್ದೀರಾ ಎಂದೆ.
ಹಾಗಲ್ಲಾ ಸಾರ್, ಈಗ ನೀವೊಬ್ಬರೇ ಮನೆಗೆ ಹೋಗ್ತಾ ಇರುತ್ತೀರಾ, ನಿಮ್ಮ ಆತ್ಮೀಯ ಸ್ನೇಹಿತ ಎದುರಿಗೆ ಸಿಗುತ್ತಾನೆ. ಅವನನ್ನು ನಿಮ್ಮ ಮನೆಗೆ ಕರೆದುಕೊಂಡು ಹೊರಡುತ್ತೀರಿ. ಮಧ್ಯದಾರಿಯಲ್ಲಿ ಬಿಳಿ ಖಾಕಿವೆತ್ತ ಪೊಲೀಸರು ತಡೆದು ಪ್ರಶ್ನಿಸುತ್ತಾರೆ. ‘ಹಿಂಬದಿ ಸವಾರರ ಹೆಲ್ಮೆಟ್ ಎಲ್ಲಿ?, ಕಟ್ಟಿ ಫೈನ್!!’ ಎಂದು ರಿಸಿಟ್ ಹರಿದೇ ಬಿಡುತ್ತಾರೆ. ನೀವು ಲಂಚಾನೋ ಅಥವಾ ಫೈನ್ ಬಿಲ್‍ನ ಮೊತ್ತವನ್ನೋ ಪ್ರಾಮಾಣಿಕನಂತೆ ಕೈಗಿತ್ತು ಬರುತ್ತೀರಿ. ಇಲ್ಲವಾದರೆ ನೀವೆನ್ ಮಾಡ್ತೀರಾ!? ಹೇಳಿ ಎಂದ.
ನನಗೆ ಉತ್ತರ ದೋಚಲಿಲ್ಲ. ಸುಮ್ಮನೆ ಕುಳಿತೆ. ಅದಾಗಲೇ ಆತ ಮಾತನ್ನು ಮುಂದುವರಿಸಿ ಹಾಗೆ ಮಾಡಲೇಬೇಕು ಬೇರೆ ಉಪಾಯವೇ ಇಲ್ಲ ಬಿಡಿ..,!? ಏನು ಸರ್ಕಾರವೋ ಏನೋ, ಎಂದು ಎದ್ದು ಪಕ್ಕದಲ್ಲಿದ್ದ ಲ್ಯಾಟ್ರಿನ್ ಒಳಹೋದ.
ಹೌದಲ್ವಾ!!!..,ಈ ಹೆಲ್ಮೆಟ್ ಎಷ್ಟು ಉಪಕಾರಿ ಎನಿಸುತ್ತೋ ಅಷ್ಟು ಉಪದ್ರವಕಾರಿಯಾಗಿಯೂ ಕಿರಿಕಿರಿ ಉಂಟು ಮಾಡುತ್ತಿದೆ ಎನಿಸಿದ್ದೇ ಆಗ.
ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಸಾವು ನೋವುಗಳಿಗೆ ತುತ್ತಾಗುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಇಗಾಗಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಈ ಹಿಂದೆ ದೆಹಲಿ, ಕೋಲ್ಕತ್ತಾ ಹಾಗೂ ಜೈಪುರಗಳಲ್ಲಿ ಜಾರಿಯಲ್ಲಿದ್ದ ಕಾಯ್ದೆಯನ್ನು ಇದೀಗ ನಮ್ಮ ರಾಜ್ಯದಲ್ಲೂ ಜಾರಿಗೊಳಿಸಿದೆ. ಹಾಗಾಗಿ ಮೋಟಾರು ವಾಹನ ಕಾಯ್ದೆ ಕಲಂ 129ರ ಅನ್ವಯ ‘ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್’ನಿಂದ ಪ್ರಾಮಾಣೀಕೃತ ಐ.ಎಸ್.ಐ ಮಾರ್ಕ್ ಇರುವ ಹೆಲ್ಮೆಟ್‍ಗಳನ್ನೇ ಬೈಕ್ ಸವಾರರು ಬಳಸಬೇಕು, ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಬೇಕು. ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ  ಬೈಕ್ ಚಲಾಯಿಸುವ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆ ಎನ್ನುವ ಮಾನದಂಡದ ಘೋಷವಾಕ್ಯ ಎಲ್ಲೆಲ್ಲೂ ಇತ್ತೀಚಿಗೆ ಪ್ರಭೆ ಬಿರುತ್ತಾ ಮಂಡೆ ಬಿಸಿ ಮಾಡಿದೆ. ದಂಡದ ಪ್ರಮಾಣವೂ ಹೀಗಿದೆ, ಮೊದಲಬಾರಿಗೆ 100ರೂ, ಎರಡನೇ ಬಾರಿಗೆ 200ರೂ, ಹಾಗೂ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ಸವಾರನ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಮಾಡುವ ವಿಶೇಷ ಅಧಿಕಾರವನ್ನು  ಸಾರಿಗೆ ಇಲಾಖೆಯು ಹೊಂದಿರುತ್ತದೆ. ಈ ಕಡ್ಡಾಯದ ಕಷಾಯ ಚಿಕ್ಕ ಮಕ್ಕಳಿಗೂ ಅನ್ವಯಿಸುತ್ತದೆ. ಅದಕ್ಕಾಗಿ ಇನ್ನೂ ಮುಂದೆ ಮಕ್ಕಳಿಗೆ ಶಾಲಾ ಬ್ಯಾಗು, ಕೈಯಲ್ಲೊಂದು ಟಿಫಿನ್ ಬಾಕ್ಸ್ ಜೊತೆಗೆ ಹೆಲ್ಮೆಟ್‍ನ್ನು ಹಿಡಿದುಕೊಂಡು ಸ್ಕೂಲ್‍ಗೆ ಹೋಗುವ ಸೌಭಾಗ್ಯವೂ ದೊರತಿದೆ.
ರೂಲ್ಸ್ ಇರಲಿ ಅದೆಂತಹದ್ದೆ ಆಗಿರಲಿ ಫಾಲೋನೂ ಮಾಡೋಣ.., ಆದರೆ ಇರುವ ಸಿದ್ಧಾಂತಗಳೇ ನೆಲಕಚ್ಚಿ ಕಾಲ ಮುನ್ನುಗ್ಗುತ್ತಿರುವ ಸಂಧರ್ಭದಲ್ಲಿ ತಾಪತ್ರಯಗಳನ್ನು ಸರಿ ಮಾಡುವ ಬದಲಾಗಿ ಇನ್ನೂ ಬೇರೆ ಬೇರೆ ಹೊಸ ಹೊಸ ಸಿದ್ಧಾಂತಗಳನ್ನು ಹೊರಡಿಸಿದರೆ ಯಾರು ಫಾಲೋ ಮಾಡೋರು ನೀವೆ ಹೇಳಿ!?.
ದಿನದ ತಿರುಗಾಟದಲ್ಲಿ ಒಂದು ಹೆಲ್ಮೆಟ್‍ನ್ನು ಕ್ಯಾರಿ ಮಾಡುವುದೇ ಕಷ್ಟ ಅಂತಹದ್ದರಲ್ಲಿ ಎಲ್ಲೆಲ್ಲೋ ಸಿಗುವ ಹಿಂಬದಿ ಸವಾರರಿಗಾಗಿ (ಗೆಳೆಯರು, ಸಂಬಂಧಿಕರು,ದಾರಿಹೋಕರು) ನಾವು ಇನ್ನೊಂದು ಹೆಲ್ಮೆಟ್‍ನ್ನು ಹೇಗೆ ಕ್ಯಾರಿ ಮಾಡಬಹುದು ಸಣ್ಣ ಐಡಿಯಾ ಕೊಡಿ ಪ್ಲೀಸ್...
ಮದುವೆ ಪಾರ್ಟಿ ಇರುತ್ತೆ. ಗಂಡ-ಹೆಂಡತಿ ಇಬ್ಬರೂ ರೆಡಿಯಾಗಿ ಹೊರಡುತ್ತಾರೆ. ಗಂಡ ಮಾಮೂಲಿಯಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸುತ್ತಿರುತ್ತಾನೆ. ಹೆಂಡತಿಯಾದವಳು ಜರಿ ಸೀರೆಯುಟ್ಟು, ಒಡವೆತೊಟ್ಟು ತಲೆಗವಚುವ ಹೆಲ್ಮೆಟ್ ಹಾಕಿ ಬೈಕ್ ಹಿಂದೆ ಕುಳಿತು ಸವಾರಿಯಾರಂಭಿಸಿದರೆ ಮೇಕಪ್ ಭರಿತ ಅವರ ಬ್ಯುಟಿ ಎಷ್ಟು ಕೆಟ್ಟದಾಗಿ ನೋಡುವವರಿಗೆ ಕಾಣಬಹುದು ನೀವೇ ಹೇಳಿ..!?
ಈ ಸಮಸ್ಯೆ ತಡೆಯಲು ಕಾರ್ ಖರೀದಿಸುವ ಗೋಜಿಗೆ ಬಿದ್ದರೆ ಈಗಲೇ ತಡೆಯಲಾರದ ಟ್ರಾಫಿಕ್ ಸಮಸ್ಯೆ ತಡೆಯಲು ಯಾವ ಬುದ್ಧಿ ಶಿಖಾಮಣಿ ಬರುತ್ತಾನೆ ಉತ್ತರಿಸಿ!?...
ಇತ್ತೀಚಿನ ದಿನUಳಲ್ಲಿ ಜನ ಅವರ ಜೀವಕ್ಕೆ ಭಯ ಪಡುವುದಕ್ಕಿಂತ, ಪೊಲೀಸರಿಗೆ ಭಯ ಪಡುವುದೇ ಜಾಸ್ತಿಯಾಗಿದೆ. ವಾಹನವಿರುವ ಪ್ರತಿ ವ್ಯಕ್ತಿಗೆ ಮೂಲಭೂತವಾದ ಒಂದಿಷ್ಟು ಡಾಕ್ಯುಮೆಂಟ್, ನಿಯಮಾವಳಿ ಇತ್ಯಾದಿಗಳ ಹಾವಳಿಯಿಂದ ಸ್ವಲ್ಫ ಯಾಮಾರಿದರೂ ಫೈನ್ ಬೀಳುತ್ತಪ್ಪಾ ಎನ್ನುವ ಸಂಕಟದಿಂದ ಅನೇಕರು ಪೋಲೀಸರನ್ನು ಕಂಡ ಕÀಡೆ ವಾಹನ ಚಲಾಯಿಸಲು ಭಯಭೀತರಾಗುತ್ತಿದ್ದಾರೆ. ಒಂದು ವರದಿಯ ಪ್ರಕಾರ 2014 ರಲ್ಲಿ ಒಟ್ಟು 16,67,248 ಹಾಗೂ 2015 ರಲ್ಲಿ 17,70,890 ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಕೇಸ್ ದಾಖಲಾಗಿವೆಯಂತೆ. ಇದರಿಂದ ಸರ್ಕಾರಕ್ಕೆ ಎಷ್ಟು ಆದಾಯ ಬಂದಿರಬಹುದು ನೀವೆ ಹೇಳಿ, ಒಂದು ಹೆಲ್ಮೆಟ್ ಕಡ್ಡಾಯದಿಂದಲೇ ಇಷ್ಟೊಂದು ಆದಾಯ ಬಂದಿದೆ ಎಂದರೆ ಇನ್ನೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ಕಾಯ್ದೆಯಿಂದ ಇನ್ನೆಷ್ಟು ಆದಾಯ ಹರಿದಾಡಬಹುದು ಮತ್ತು ಹೆಲ್ಮೆಟ್ ಕಂಪೆನಿಗಳಿಂದ ಸರ್ಕಾರಿ ಬೊಕ್ಕಸ ಎಷ್ಟು ತುಂಬಬಹುದು, ತುಂಬಿರುತ್ತೆ ಎಂಬುದನ್ನು ಪ್ರತಿಯೊಬ್ಬನೂ ಯೋಚಿಸಬೇಕಾಗಿದೆ.
  ಡೈರೆಕ್ಟ್‍ಶೂಟ್ ಎನ್ನುವಂತೆ ನಾನಿಂದು ಒಬ್ಬ ಸಾಮಾನ್ಯ ಪ್ರಜೆಯಾಗಿ ಸರ್ಕಾರಕ್ಕೆ ಹೇಳ ಹೊರಟಿರುವುದು ಇಷ್ಟೆ. ಅಪಘಾತ ಎನ್ನುವುದು ದ್ವಿಚಕ್ರ ವಾಹನಗಳಿಂದ ಮಾತ್ರಾ ಉಂಟಾಗುವುದಲ್ಲ. ರಸ್ತೆಗಳ ದುರ್ಬಲೀಕರಣದಿಂದಲೂ ಇವು ಪ್ರತಿನಿತ್ಯ ನಡೆಯುತ್ತಿರುತ್ತದೆ. ಮೊದಲು ರಸ್ತೆ ಸರಿ ಮಾಡಿ.  ಈ ಹೊಸ ಹೊಸ ಕಾಯ್ದೆಯನ್ನು ತರುವ ಬದಲು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಲು ವ್ಯವಸ್ಥೆ ಮಾಡಿ. ಗಾಡಿ ಓಡಿಸುವ ವ್ಯಕ್ತಿ ನಿರ್ದಿಷ್ಟ ವಯಸ್ಸು ತಲುಪಿದ್ದಾನೆಯೇ?, ಲೈಸನ್ಸ್ ಪಡೆದಿದ್ದಾನೆಯೇ? ಎಂಬುದನ್ನು  ಸರಿಯಾಗಿ ಪರಿಗಣಿಸಿ ನಿಯಮ ಪಾಲಿಸಿ. ಇಂದು ನಾವು ನೀವು ನೋಡುತ್ತಿರುವಂತೆ ಪೊಲೀಸರು ಧರಿಸುತ್ತಿರುವ ಹೆಲ್ಮೆಟ್‍ಗಳೇ ಸರಿಯಾಗಿ ಅವರ ಕಿವಿಗಳನ್ನು ಮುಚ್ಚುತ್ತಿಲ್ಲ, ಆ ರೀತಿಯ ಅನ್ ಸೇಫ್ಟಿ  ಹೆಲ್ಮೆಟ್‍ಗಳನ್ನು ಯಾರದೋ ಕಣ್ತಪ್ಪಿಸಲು ಹಾಕಿಕೊಂಡು ಓಡಾಡುವ ಮುಂಬದಿ ಸವಾರನನ್ನೇ ಮೊದಲು ಹಿಡಿದು ನಿಲ್ಲಿಸಿ. ಅಂತಹ ಹೆಲ್ಮೆಟ್‍ಗಳನ್ನು ಮೊದಲು ಬ್ಯಾನ್ ಮಾಡಿ. ಅಷ್ಟೇ ಅಲ್ಲದೇ ಸಾಮಾನ್ಯ ಮನುಷ್ಯನಿಗೂ ಸ್ಟಾಂಡರ್ಡ್ ಸೇಫ್ಟಿ ಎನ್ನುವಂತೆ ಕಡಿಮೆ ದರೆದಲ್ಲಿ ಒಳ್ಳೆಯ ಹೆಲ್ಮೆಟ್ ದೊರೆಯಲು ಅನುವು ಮಾಡಿಕೊಡಿ... ಇಷ್ಟು ಮಾಡಲಾಗುತ್ತದಾ!? ಹಾಗಿದ್ದರೆ ಹೊಸ ಹೊಸ ಕಾಯಿದೆ ತನ್ನಿ. ಮನಪೂರ್ವಕವಾಗಿ ಫಾಲೋ ಮಾಡ್ತೇವೆ ಡೌಟೇ ಬೇಡ.
ಇನ್ನೂ ನಮ್ಮ ರಾಜಧಾನಿ ಬೆಂಗಳೂರನ್ನು ದ್ವಿಚಕ್ರ ವಾಹನಗಳ ನಗರಿ ಎಂದು ಕರೆದರೂ ತಪ್ಪಲ್ಲ ಬಿಡಿ. ಇಂದು ನಗರದ ರಸ್ತೆಗಳಲ್ಲಿ ಓಡಾಡುವ ಬೈಕ್, ಸ್ಕೂಟರ್, ಮುಂತಾದ ದ್ವಿಚಕ್ರ ವಾಹನಗಳ ಪ್ರಮಾಣ ಶೇ.70 ಕ್ಕೆ ಮುಟ್ಟಿದೆ. ಅವನ್ನು ಓಡಿಸುವುದೆಂದರೆ ಸರ್ಕಸ್ ಮಾಡಿದಷ್ಟೇ ಕಷ್ಟ ಕರ. ಆಯತಪ್ಪಿದರೆ ಮೂಳೆಮುರಿತ. ಮತ್ತೂ ಎಡವಟ್ಟಾದರೆ ಪ್ರಾಣಕ್ಕೆ ಕುತ್ತು. ಜವರಾಯನಿಗೆ ವಾಹನ ಚಾಲನೆ ಮಾಡುವವರು, ಹಿಂಬಂದಿ ಸವಾರರೂ, ಎಂದು ಬೇಧಭಾವವಿಲ್ಲ!!. ‘ನಿಮ್ಹಾನ್ಸ್’ ಅಧ್ಯಯನದ ಪ್ರಕಾರ,  ದ್ವಿ ಚಕ್ರವಾಹನ ಅಪಘಾತದಲ್ಲಿ ದುರ್ಮರಣಕ್ಕೀಡಾದ 116 ಮಂದಿಯಲ್ಲಿ 33 ಮಂದಿ ಹಿಂಬದಿ ಸವಾರರೆ ಆಗಿದ್ದಾರಂತೆ. ಹೆಲ್ಮೆಟ್ ಧರಿಸುವುದು ಮೂಲಭೂತವಾದ ಒಂದು ಸುರಕ್ಷ ಕ್ರಮ ನಿಜ  ಅಪಘಾತದಿಂದ ತಲೆಗೆ ಆಗಬಹುದಾದ ಪೆಟ್ಟಿನ ತೀವೃತೆಯನ್ನು ಹೆಲ್ಮೆಟ್ ತಗ್ಗಿಸಬಲ್ಲದು. ಇದೀಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಲ್ಲಿ ರಾಜ್ಯ ಸರ್ಕಾರದ ಈ ಮೇಲಿನ ಸಮರ್ಥನೆಯಂತೂ ಇದ್ದೆ ಇದೆ. ಆದರೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಸಾಲದು. ಇದೇ ನಿಟ್ಟಿನಲ್ಲಿ ದ್ವಿಚಕ್ರವಾಹನರ ಜೀವರಕ್ಷಣೆಗೆ ಬೇರೇನೂ ಬೇಕಿಲ್ಲ ಎಂದು ಆಳುವ ಮಂದಿ ಯೋಚಿಸುತ್ತಿರುವುದು ತಪ್ಪು. ಇಂದು ದ್ವಿಚಕ್ರವಾಹನಗಳ ಅಪಘಾvಗಳಿಗೆ ರಸ್ತೆಯ ಗುಂಡಿಗಳೇ ಕಾರಣವಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಅಪಾರ ಹಣ ವೆಚ್ಚವಾಗುತ್ತಿದ್ದರೂ ಪದೇ ಪದೇ ಇಂತಹ ಗುಂಡಿಗಳು ಉದ್ಭವವಾಗಲೂ ಏನು ಕಾರಣ ಎನ್ನುವುದೇ ತಿಳಿಯದಾಗಿರುವುದು ವಿಪರ್ಯಾಸವೇ ಸರಿ.

ಕೊನೆಯ ಮಾತು;
ನಾವು ನಿಮ್ಮ ತತ್ವಕ್ಕೆ ಬದ್ದರಾಗುತ್ತೇವೆ. ಆದರೆ ಹೊಸ ಯೋಜನೆಗೆ ಅಡಿ ಇಡುವ ಮೊದಲು ಈ ಕೆಳಗಿನವುಗಳ ಬಗ್ಗೆ ಒಂದಿಷ್ಟು ಗಮನಹರಿಸಿ ಮಾನ್ಯ ಮುಖ್ಯಮಂತ್ರಿಗಳೇ...
*ನಗರ ಸ್ಥಳೀಯ ಸಂಸ್ಥೆಗಳಿಗೆ ಗಂಭೀರ ವಾರ್ನಿಂಗ್ ನೀಡಿ ರಸ್ತೆ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ.
*ಪಾದಚಾರಿ ಮಾರ್ಗ ಹಾಗೂ ರಸ್ತೆ ನಡುವೆ ನಿಗಧಿತ ವ್ಯತ್ಯಾಸ ರೂಪಿಸಿ
*ದುರಸ್ತಿ ಎನ್ನುವ ದಂಧೆ ತಡೆಯಿರಿ
*ಸರ್ಕಾರದ ನೀತಿ ನಿಯಮಗಳಲ್ಲಿ ಪಾರದರ್ಶಕತೆ ರೂಪಿಸಿ
*ನಿಯಮ ಅನುಷ್ಠಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ
* ಕಾಟಾಚಾರದ ಹೆಲ್ಮೆಟ್ ಧರಿಸುವುದು, ಅತೀ ವೇಗ, ಮಧ್ಯಸೇವಿಸಿ ವಾಹನ ಓಡಿಸುವುದು ಇತ್ಯಾದಿಗಳ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಿ.
ಮಾಡ್ತೀರಲ್ವಾ.../ ಡೌಟ್ ಇದೆ ನನಗೆ... ಆದರೂ ಚಿಂತೆಯಿಲ್ಲ, ಇದೇ ರೀತಿ ಬರವಣಿಗೆಯಲ್ಲೇ ಆಗಾಗ ಎಬ್ಬಿಸುತ್ತಿರುತ್ತೇನೆ...

No comments:

Post a Comment