Wednesday 23 December 2015

ಮಳೆಯ ಹನಿಯಲ್ಲಿ ಕೂತು...


“ಎಲ್ಲ ಮರೆತು ನೆವವ ಹೂಡಿ ಅಡಗಿ ಕುಳಿತ ನೆನಪೆ..,
ಗುಳಿತೋಡಿ ಎದೆಯಿಳಿದು ಕುಳಿತು ಮನ ಕುಣಿಸುತಿರುವೆ ಏಕೆ ನೆನಪೆ...!?”
ನಿಜ...ತಮಿಳುನಾಡಿನಲ್ಲೂಂಟಾದ ಚಂಡಮಾರುತದ ನಿಮಿತ್ತ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ವರ್ಷಧಾರೆ ದೀರ್ಘ ಎರಡು ಮೂರು ದಿನಗಳು ಸುರಿದಿತ್ತು. ಈ ಸಮಯ ನೆರೆ ಬರುವಂತೆ ಹೊಡೆಯುವ ಮಳೆಗಾಲ ಅಲ್ಲ. ಆದರೂ ಎಡೆಬಿಡದ ದುಂಬು ದುಂಬು ಮಳೆ ಎಲ್ಲೆಲ್ಲೂ ಚಳಿ ಹಿಡಿಸಿದ್ದಂತೂ ನಿಜ. ಧರಿತ್ರಿ ಈ ವರ್ಷ ಸಿಂಚನದಿಂದ ಚೇತನಗೊಂಡಿದ್ದಾಳೆ. ಬೇಸಿಗೆಯಂತೆ ಸೂರ್ಯನ ಧಗೆಯಿಂದ ದಹಿಸುತ್ತಿದ್ದ ಭೂಮಿ ಈಗ ತಂಪಾಗಿದೆ. ಪರಿಚಿತರೊಬ್ಬರು ಹೇಳುವಂತೆ ಸುಮಾರು 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಹವಮಾನ ಸುಮಾರು ತಿಂಗಳುಗಳ ಕಾಲ ಇತ್ತಂತೆ. ಬಹುಶಃ ಇದೀಗ ಮತ್ತೇ ಹಾಗೆ ಆದಂತಿದೆ. ಅಬ್ಬಾ ಭೂಮಿಗೆ ಸೂರ್ಯನ ಕಿರಣವೇ ಇಲ್ಲ, ಮಂಜಿನಂತೆ ಸದಾ ಪಿರಿ ಪಿರಿಸುವ ಮಳೆ ಎಲ್ಲರಿಗೂ ಸ್ವೆಟರ್ ಹಾಕಿಸುವಂತೆ ಮಾಡಿತ್ತು. ಯಾರಿಗೆ ಫೋನ್ ಮಾಡಿದರೂ ಅಬ್ಭಾ ಏನು ಚಳಿ ಸಾಕಾಗಿ ಹೋಯ್ತು ಅನ್ನಿಸುವಷ್ಟು ಮಳೆರಾಯ ಬೆಂಗಳೂರಲ್ಲಿ ಚಳಿ ಬೀಸಿ ಹೋಗಿದ್ದ. ಇವಿಷ್ಟು ಒಂದು ಕಡೆಯ ವಿಷಯವಾದರೆÉ ಇಂತಹ ಮಳೆ ಚಳಿಯಲ್ಲೂ ಅಡಗಿ ಕುಳಿತ ಭಾವನೆಗಳು ಮತ್ತೆ ಗರಿಗೆದರಿ ಏದೆಯಲ್ಲಿ ಕುಳಿತದ್ದು ನನ್ನನ್ನು ಇನ್ನಷ್ಟೂ ಮೋಹಕತೆಗೆ ಜಾರಿಸಿ ನೆನಪ ತೇರಲ್ಲಿ ಒಂದು ಮೆರವಣಿಗೆ ಕರೆದುಕೊಂಡು ಹೋಗಿಯೇ ಬಿಟ್ಟಿತು...
ಅದೊಂದು ಸಂಭ್ರಮ...
ಬಾಲ್ಯದಿಂದ ಹಿಡಿದು ಇಂದಿನ ತನಕದ ಹಲವು ನೆನಪುಗಳು ಮಳೆಗಾಲದೊಂದಿಗೆ ಯಾವಾಗಲೂ ಮರುಕಳಿಸುತ್ತವೆ. ಬಹುಶಃ ಇದಕ್ಕೆ, ಹಿರಿಯರು ಹೇಳಿರಬೇಕು ವರ್ಷ ಋತುವಿಗೆ ಸೋಲದ ಮನಸ್ಸುಗಳೇ ಇರಲಾರವು ಎಂದು.
ಬಾಲ್ಯದಲ್ಲಿ ಮಳೆಯೊಂದಿಗೆ ಮಾಡಿದ ಅದೆಷ್ಟೋ ಮೋಜುಗಳು ಮೊನ್ನೆ ನೆನೆಪುಗಳ ಪುಟ ತೆರೆಯಿತು. ಮೊದಲ ರಭಸದ ಮಳೆಗೆ ತುಂಬುತ್ತಿದ್ದ ಮನೆಯ ಮುಂದಿನ ತೋಡುಗಳು, ಹರಿಯುವ ನೀರಿನಲ್ಲಿ ಮುಳುಗಿ ಆಟವಾಡಿ ಮೈರೆತು ಒದ್ದೆಯಾಗಿತ್ತಿದ್ದ ಸಂಧರ್ಭಗಳು, ಕಪ್ಪೆಗಳನ್ನು ಮೀನುಗಳೆಂದು ಭಾವಿಸಿ ಹಿಡಿಯುತ್ತಿದ್ದ ದಿನಗಳು. ನನ್ನೊಡನೆ ಆಡಲು ಬಂದ ಪುಟ್ಟ ನಾಯಿಯನ್ನು ನೀರಿಗೆ ದೂಡಿ ಅದರÀ ಈಜನ್ನು ನೋಡಿ ಖುಷಿಪಡುತ್ತಿದ್ದ ಕ್ಷಣಗಳು, ಮುಂಜಾನೆ ಬಿಸಿಲಿದ್ದ ಕಾರಣ ಕೊಡೆ ಮರೆತು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಕೊಡೆಯಿಲ್ಲದೇ ನೆನದು ಬಳಿಕ ಕಟ್ಟಿಗೆ ಒಲೆಯ ಮುಂದೆ ಕುಳಿತಿದ್ದ ಆ ಬೆಚ್ಚನೆಯ ಸವಿಸಮಯಗಳು, ಪಾಪ ಧನಕರುಗಳು ಮಳೆಯಲ್ಲೇ ನಿಂತಿವೆ ಎಷ್ಟು ಚಳಿಯಾಗಬಹುದೇನೋ!? ಎಂದು ಮಳೆಯನ್ನು ತಡೆಯಲು ಕೊಡೆ ಹಿಡಿದ ಆ ಸುಂದರ ಸವಿಕ್ಷಣಗಳು, ಮಳೆಯಿದೆ ಶಾಲೆಗೆ ಹೋಗಲ್ಲ ಎಂದು ಹಠ ಬಿದ್ದು ಅಮ್ಮನ ಕೈ ಏಟು ತಿಂದು ಮಳೆಗಿಂತ ಜೋರಾಗಿ ಕಣ್ಣೀರ ಧಾರೆ ಹರಿಸಿ ಮನೆ ಸೇರಿದಂತ ವೇಳೆಗಳು, ಶಾಲೆ ಆರಂಭವಾಗುವ ಸಮಯ ರೈನ್ ಕೋಟ್, ಕೊಡೆಗಳಿಗಾಗಿ ಮಾಡಿದ್ದ ರಂಪಾಟಗಳು ಹೀಗೆ ನೆನಪುಗಳು ಒಂದೆರಡಲ್ಲ. ನಿಜಕ್ಕೂ ಅವೆಲ್ಲವೂ ಒಂದು ಸಂಭ್ರಮವೇ ಸರಿ...
ಚಿಕ್ಕವರಿದ್ದಾಗ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆಪಕ್ಕೊಂದು ಕೊಡೆ ಹಿಡಿದು ಚಪ್ಪಲಿಯನ್ನು ಬೇಕೆಂದೇ ಮನೆಯಲ್ಲಿ ಮರೆತು ಬರಿಗಾಲಲ್ಲಿ ಶಾಲೆಗೆ ಹೋಗುವುದೇ ಒಂದು ಪುಟ್ಟ ಹಬ್ಬದಂತೆ. ಆದರಿಂದು ಬೈಕ್ ಏರಿ ರಸ್ತೆಯಲ್ಲಿ ಸಾಗುವಾಗ ಅಂದು ಅನುಭವಿಸುತ್ತಿದ್ದ, ರಸ್ತೆಯ ನೀರಾಟದ ಮಜಾ ಮತ್ತೆ ಮತ್ತೆ ಮನ ಪಟಲವನ್ನು ಚಾಚುತ್ತದೆ. ಅಂದದು ಕೆಸರು ನೀರೋ, ಸ್ವಚ್ಚ ನೀರೋ ನಮಗೇ ವ್ಯತ್ಯಾಸವೇ ಇರಲಿಲ್ಲ, ಯಾವಶುಚಿತ್ವದ ಕಲ್ಪನೆಯೂ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಕಣ್ಣಿಗೆ ಬೀಳುವ ಕೆಂಪು ಬಣ್ಣದ ‘ರೇಶಿಮೆ ಹುಳು’ಗಳು, ನೀರಿನಲ್ಲಿ ಆಟವಾಡುವಾಗ ಕಾಲಿಗೆ ಹತ್ತಿಕೊಳ್ಳುವ ನಂಜು ಹುಳಗಳು, ಮೈ ಕೈ ತಾಗಿ ತುರಿಕೆ ಎಬ್ಬಿಸುವ ಕಂಬಳಿ ಹುಳಗಳು, ಇನ್ನೂ ಅನೇಕ ನೀರಿನಲ್ಲಿ ತೊಯ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜೀವಿಗಳು ಮಳೆಗಾಲದಲ್ಲಿ ನಮ್ಮ ಆಸಕ್ತಿ ವಿಷಯಗಳಾಗಿದ್ದವು. ಕೆಲವಂತೂ ನಮ್ಮ ಹಿಂಸೆಗೆ ಜೀವ ತೆಯ್ದವೂ ಇವೆ, ಪಾಪದಂತೆ ಕಂಡು ಕೈ ಹಿಡಿದು ದಡ ಕಂಡವೂ ಇವೆ...
ಆ ಸಮಯ ಸಂಧರ್ಭಗಳೇ ಹಾಗೆ... ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗುತ್ತಿದ್ದ ಮರಗಿಡಗಳು ಮಳೆಯ ಹನಿಯ ಸ್ಫರ್ಶಕ್ಕೆ  ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗೊಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು.  ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಳದಲ್ಲಿ ಹಾವಸೆಯ ಸ್ಫರ್ಶದ ಹಿತವನ್ನು ಅನುಭವಿಸುತ್ತಿದ್ದವು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತಿದ್ದದ್ದೂ ಮೊನ್ನೆ ಸುರಿದ ಮಳೆ ಮತ್ತೆ ಮನಸ್ಸನ್ನು ತೆರೆಸಿತ್ತು. ಆಗೆಲ್ಲ ಕೊಡೆಗಳಲ್ಲಿ ಅಷ್ಟು ವೆರೈಟಿ ಬಂದಿರಲಿಲ್ಲ. ಕಪ್ಪು ಬಟ್ಟೆಯ ದೊಡ್ಡ ಕೊಡೆಗಳಷ್ಟೇ ಹೆಚ್ಚಾಗಿ ಕಾಣಸಿಗುತಿದ್ದವು. ಅವುಗಳಲ್ಲಿ ನಮಗೆ ಮರದ್ದೋ, ಸ್ಟೀಲ್‍ದ್ದೋ ಬಾಗಿದ ಬೆತ್ತದಂತಿರುವ ಉದ್ದನೆಯ ಹಿಡಿPಯ ಕೊಡೆÉ ಮಾತ್ರಾ ಕಾಣ ಸಿಗುತ್ತಿತ್ತು. ಇಂದಿನ ಮಾಡರ್ನ್ ಯುಗದ ಚಿಕ್ಕ ಚಿಕ್ಕ ಛತ್ರಿಗಳನ್ನು ನೋಡಿದ ನೆನಪೇ ಇಲ್ಲ. ಆ ಉದ್ದನೆಯ ಅಜ್ಜನ ಕೊಡೆಗಳಿಗೊಂದು ಹಚ್ಚೆ ಹಾಕಿಸಿಕೊಂಡು, ನಾಮಾಂಕಿತ ಮಾಡಿಕೊಂಡು ಇದು ನನ್ನದು ಎನ್ನುವ ಗ್ಯಾರಂಟಿ ಕಾರ್ಡ್‍ನ್ನು ನಿಗಧಿಪಡಿಸಿ ಗುರುತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೂಡ ಎಷ್ಟೊ ಸಲ ಕೊಡೆ ಕಳುವಾಗುತ್ತಿದ್ದವು. ಆದರೆ ಇದರಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಮನೆಯಲ್ಲಿ ಕಡುಬು ತಿನ್ನಬೇಕಾಗಿದ್ದು ನಾವೇ ಆಗಿದ್ದೇವು. ಕೊಡೆಯೋ ಬುತ್ತಿಯೋ, ಹಾಕೋ ಚಪ್ಪಲಿಯೋ ಇದರಲ್ಲಿ ಯಾವೊಂದು ಕಳುವಾದರೂ ನಮ್ಮ ತಲೆಮೇಲೆ ಆಕಾಶ ಬಿದ್ದ ಹಾಗೇ ಫೀಲೀಂಗ್ ಆಗುತ್ತಿದ್ದದ್ದೂ ಮಾತ್ರಾ ಸುಳಲ್ಲ...
ಮಳೆಗಾಲವೆಂದರೆ ಇಷ್ಟೇ ಅಲ್ಲ ಅದು ಎಲ್ಲರ ಗೆಳೆಯ. ನೊಂದ ಮನಸ್ಸುಗಳ ಮಿತ್ರ, ಪ್ರೇಮಿಗಳ ಪ್ರೀತಿಯನ್ನು ಇಮ್ಮಡಿಸುವ ಆತ್ಮೀಯ. ನೋವನ್ನು ಮರೆಸುವ ಮಾಣಿಕ್ಯ. ಕಣ್ಣೀರನ್ನು ಒರೆಸುವ ಅಮ್ಮ. ಇನ್ನೂ ಏನೇನೋ ಒಬ್ಬೊಬ್ಬರಿಗೆ ಒಂದೊಂದು ಥರ. ನನಗಂತೂ ಮಳೆಯೆಂದರೆ ಪ್ರಾಣ. ಮತ್ತೆ ಮತ್ತೆ ಭೂವಿಗೆ ಮಳೆಯಾಗಲಿ ಎಂದು ಯಾವಾಗಲೂ ಹಂಬಲಿಸುವ ಮುದ್ದು ಮನಸು ನನದು. ಪ್ರತಿ ಮಳೆಯಲ್ಲೂ ಮನಪಟಲದಿಂದ ನೆನಪುಗಳು ಗರಿಗೆದರಿ ಬಂದು ಭಾವನೆಯನ್ನು ಕೆಣಕಿ ಮಾತನಾಡಿಸುತ್ತವೆ. ಈ ಮಳೆ ಇಲ್ಲಿಗೆ ನಿಲ್ಲಬಹುದು ಆದರೆ ನನ್ನ ಮೈ ಮನ ಮುಂದಿನ ಮುಂಗಾರಿನ ಸಿಂಚನಕ್ಕೆ ಮೈಯೊಡ್ಡಲು ಈಗಲೇ ಕಾತರಿಕೆಯಲಿ ನಿಂತಿದೆ...ಯಾವುದೇ ಜವಾಬ್ಧಾರಿಯಿಲ್ಲದ, ಕೇವಲ ಕುತೂಹಲ, ಹುಡುಗಾಟದಲ್ಲಿಯೇ ಕಳೆದು ಹೋಗುವ ಬಾಲ್ಯದ ಆ ದಿನಗಳು  ಮತ್ತೆಂದು ಹಿಂದಿರುಗಿ ಬರಲಾರವು ಎನ್ನುವ ಮನೋಭಾವವಿದ್ದರೂ, ಕಳೆದ ಆ ದಿನಗಳನ್ನೇ ಸಿಕ್ಕ ಸಮಯ ನೆನಪಿಸಿಕೊಂಡು ಎಂಜಾಯ್ ಮಾಡುವುದು ನಿಜಕ್ಕೂ ಮನಸ್ಸಿಗೆ ಉಲ್ಲಾಸ ಕೊಡದೆ ಇರದು. ನನಗೆ ಇದುವರೆಗೂ 24 ವಸಂತಗಳು ಕಳೆದು ಹೋದವು ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೊ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ಒತ್ತಡದ ಬದುಕಿನ ಈ ದಿನಗಳಲ್ಲಿ ಅಪರೂಪಕ್ಕೊಮ್ಮೆ ಸಿಗುವ ಏಕತಾನತೆಯ ನಡುವೆ ಮತ್ತೊಮ್ಮೆ ಹಂಬಲಿಸುವ ಹಳೆಯ ನೆನಪಿನ ರೀವೈಂಡಿಂಗ್ ರೀಲ್ ನಿಜಕ್ಕೂ ಮಳೆಗಾಲದಲ್ಲೇ ಜಾಸ್ತಿ ಅನ್ನಿಸುತ್ತದೆ.
ಹೊರಗೆ ಭೋರ್ಗೆರದು  ಸುರಿವ ಮಳೆಗೆ, ಬೆಚ್ಚಗೆ ಬೆಡ್ ಶೀಟ್ ಹೊದ್ದು ಅಮ್ಮಾ ಮಾಡಿದ ಬಿಸಿ ಚಹವನ್ನು ತುಟಿಗೇರಿಸಿ, ಜತೆಜತೆಗೆ ಬಿಸಿ ಬಿಸಿ ಬೋಂಡಾ ತಿನ್ನುವ ಆಸೆಗಳನ್ನು ಅನುಭವಿಸಿದಂತೆ ನಿಮಗೂ ಈಗ ನೆನಪುಗಳ ಫೀಲಿಂಗ್ ಗರಿಗೆದರುತ್ತಿರಬಹುದು ಅಲ್ವಾ...ಅಷ್ಟಾದರೆ ಸಾಕು. ಓದಿ ಮುಗಿಸಿದ ನಂತರ ಪ್ಲೀಸ್ ಮಳೆರಾಯನಿಗೆ ನೀವು ತಿಳಿಸಿ ಒಂದು ಸಣ್ಣ ಧನ್ಯವಾದ...ಯಾಕೆಂದರೆ ಈ ಬರವಣಿಗೆಗೆ ಮೊನ್ನೆ ಅವನೇ ಕಾರಣವಾದ...

No comments:

Post a Comment