Friday 19 June 2015

ನೆನಪಿನಂಗಳದಿಂದ...


“ಊರು ಉಡಿಯೊಳಿಟ್ಟುಕೊಂಡುನಿಂತ ತೆಂಗು ಅಡಿಕೆಯು
ಬೆಟ್ಟಗಳಿಗೆ ಹಗಲಿರುಳು ನೀಲ ನೀಲ ನಿದ್ದೆಯು
ಊರ ಸುತ್ತ ತೆನೆಗಳಿಂದ ತೊನೆವ ಹಸಿರು ಗದ್ದೆಯು
ಮುಗಿಲು ಹರಿದ ಹಾಗೆ ಸುರಿದು ಬಿದ್ದ ನೀರ ಮಳೆಯು
ಸಾಲು ಮರದ ನೆರಳಿನಲ್ಲಿ ಹಾವಿನಂಥಾ ಹಾದಿಯು”
ಇದೇನೂ ಕವಿತೆಯಾ!? ಆಥವಾ ಕಥೆಯಾ!? ಎಂದು ಕೇಳಬೇಡಿ! ಯಾಕೆಂದರೆ ಮೊನ್ನೆ ಮೊನ್ನೆ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತು ಅನುಭವಿಸಿದ ಪುಳಕವನ್ನು ಕವಿತೆಯ ಮೂಲಕ ಹೇಳಲಾ? ಅಥವಾ ಕತೆಯ ಮೂಲಕ ಹೇಳಲಾ? ಎಂದು ತಿಳಿಯಲಾಗದೆ ಧ್ವಂಧ್ವದಲ್ಲೇ ಭಾವನೆಗಳನ್ನು ಬಚ್ಚಿಟ್ಟು ಕುಳಿತುಕೊಂಡಿರುವೆ. ಮೇಲಿನ ಸಾಲುಗಳನ್ನು ಓದಿ ಕಣ್ಮುಚ್ಚಿ ಮನನ ಮಾಡಿದರೆ ನಿಮಗೂ ನಿಮ್ಮ ಬಾಲ್ಯ, ಆಟ, ಪಾಠ, ಹಳೆಯ ನೆನಪುಗಳು ಮತ್ತೆ ಮನದಲ್ಲಿ ಮೂಡಬಹುದು.
ಒಂದೈದು ದಿನಗಳ ರಜೆ ಪಡೆದು ಊರಿಗೆ ಬಸ್ ಹತ್ತಿದ ನನಗೆ ರಾತ್ರಿಯ ತಂಪಾದ ಗಾಳಿಯಲ್ಲಿ ಒಳ್ಳೆಯ ನಿದ್ದೆಬಂದಿತ್ತು. ಬಸ್ ಶಿರಾಡಿಘಾಟ್  ದಾಟಿ ಮುಂದೆ ಸಾಗಿ ಮಂಗಳೂರನ್ನು ಬಳಸಿ ನಮ್ಮೂರ ಕಡೆ ಸಾಗುವ ಬರದಲ್ಲಿ ಕಿಟಕಿಯಿಂದ ನುಗ್ಗಿದ ಮಳೆಯ ಹನಿಯೊಂದು ಮುಖದ ಮೇಲೆ ಬಿದ್ದು ನಿದ್ರಾದೇವಿಯನ್ನು ಓಡಿಸಿ ಮುಂಜಾನೆÉಯ ಗುಡ್ ಮಾರ್ನಿಂಗ್ ಎಂಬಂತೆ ನನ್ನ ಕಣ್ಣನ್ನು ತೆರೆಸಿತ್ತು. ಕಣ್ಬಿಟ್ಟು ನೋಡಿದರೆ ವಾವ್ಹ್ ಅದೇನೂ ತಂಪು, ಮೆಲ್ಲನೆ ಮಳೆಯ ಜೊತೆಗೆ ತಂಪಾದ ಗಾಳಿ, ನಡುವೆ ಊರು ಕೇರಿಯ ತೆಂಗು ಅಡಿಕೆ ಮರಗಳ ಸಾಲು, ಬೆಟ್ಟಗುಡ್ಡಗಳ ಝರಿ, ಹಸಿರು ಗದ್ದೆ, ಹಾವಿನಂತೆ ಸಾಗುತ್ತಿರುವ ಏರುಪೇರಿನ ಹಾದಿ, ಇವುಗಳ ಮಧ್ಯೆ ನಾನು!. ನಿಜವಾಗಲೂ ಪ್ರಕೃತಿ ಮಾತೆಯ ಮಡಿಲಲ್ಲಿ ನಾವು ಎಷ್ಟು ಎಂಜಾಯ್ ಮಾಡಬಹುದು ಎಂದು ಅನಿಸಿದ್ದೆ ಆ ಘಳಿಗೆ. ಅದಾಗಲೇ ರಾತ್ರಿಯಿಂದ ಎಡೆಬಿಡದೆ ಗಾನದ ಹೊಳೆಯನ್ನೆ ಹರಿಸುತ್ತಿದ್ದ ಹೆಡ್ ಫೋನ್‍ನ್ನು ಕಳಚಿ, ಸಿಕ್ಕಿದ್ದೆ ಸಮಯ ಎಂಬಂತೆ ಬಾಲ್ಯ ಜೀವನದಲ್ಲಿ ಆಡಿದ ಆಟ, ನೋವು, ನಲಿವು ಇತ್ಯಾದಿಗಳನ್ನು ನೆನೆಯುತ್ತಾ ಅಂದಿನ ಕಾಲಕ್ಕೆ ಕಣ್ಮುಚ್ಚಿಕೊಂಡು ಮತ್ತೆ ಜಾರಿದೆ. ಆಗ ಮೂಡಿದ ವಿಚಾರ ಸರಣಿಯೇ  ಈ ನೆನಪಿನಂಗಳ...
ಬೆಚ್ಚನೆಯ ಚಳಿಯ ಮಧ್ಯೆ ಅಮ್ಮ ‘ಏಳು ಮಗಾ ಟೈಮ್ ಏಳಾಯಿತು’ ಎಂದು ಪದೆ ಪದೇ ಕೂಗಿ ಎಬ್ಬಿಸಿದರು  ಇನೈದು ನಿಮಿಷ ಮಲಗಿರ್ತೀನಿ ಇರಮ್ಮಾ ಎಂದು ಪೂಸಿ ಹೊಡೆದು ಅರ್ಧಗಂಟೆಯಾದರೂ ಎಳದೆ  ಮತ್ತೊಂದು ಬೆಡ್ ಶೀಟ್ ಹೊದ್ದು ಮಲಗಿ ಅಪ್ಪನ ಚೀರುವಿಕೆಗೆ ಭಯಪಟ್ಟು ಎದ್ದು ಹಲ್ಲುಜ್ಜಿ ತಿಂಡಿ ತಿನ್ನುವುದು ಮತ್ತೊಂಧರ್ಧ ಗಂಟೆಯಾಗುತ್ತಿತ್ತು.
ಸಮಯ 8 ಆಯಿತೆಂದರೆ ಶಾಲೆಗೆ ಓಡುವ ತರಾತುರಿ, ಬುತ್ತಿ ಕೈಯಲ್ಲಿಟ್ಟು ಬಗಲಿಗೆ ಬೀಣಿಚೀಲ ಸಿಕ್ಕಿಸಿಕೊಂಡು, ಮರೆತು ಹೋದ ಕೊಡೆಯನ್ನು ಮತ್ತೆ ನೆನಪಿಸಿಕೊಂಡು, ಶಾಲೆಗೆ ಮಳೆಯ ನೀರಿನಲ್ಲೇ ಆಡುತ್ತಾ ಮೈ ಒದ್ದೆ ಮಾಡಿಕೊಂಡು ಓಡಿ ಹೋಗಿ ಟೀಚರ್ಗೆ ಮೊದಲ ಬೆಲ್ ಕ್ಕಿಂತ ಮೊದಲೇ ಕೋಪಿ ಪುಸ್ತಕ, ಮಗ್ಗಿ ಬರೆದಿದ್ದನ್ನು ತೋರಿಸಿ ಅಬ್ಬಾ! ನಾನು ಪ್ರಾಮಾಣಿಕ ಎಂಬಂತೆ ಎದೆಯುಬ್ಬಿಸಿಕೊಂಡು ಕ್ಲಾಸ್ ಮುಗಿಸಿ, ಮನೆಯ ಬೆಲ್ ಹೊಡೆಯುವುದನ್ನೇ ಕಾದು, ಪಟ-ಪಟನೇ ಮನೆಗೆ ಬಂದು ಚೀಲ ಬಿಸಾಕಿ, ಪಕ್ಕದ ಮನೆಯ ಹುಡುಗರ ಜೊತೆ ಶಾಲೆಯಿಂದ ಬರುವಾಗಲೇ ಪಾರ್ಟಿಹಾಕಿಕೊಂಡು ಇಲ್ಲಿ ಸೇರೋಣ ಎಂದು ನಿರ್ಧರಿಸಿರುವ ಆಟವನ್ನು ಆಡಲು ರೆಡಿ ಎಂಬಂತೆ ತಿಂಡಿ ತಿಂದು ಮನೆಯಿಂದ ಹೊರಬೀಳುತ್ತಿದ್ದೆವು.
ಆಗೆಲ್ಲಾ ಸಮಯ ಸಿಕ್ಕಾಗ ಈಗಿನ ರೀತಿ ಟಿ.ವಿ, ಮೊಬೈಲ್ ಅಂತ ಸಮಯ ಹಾಳು ಮಾಡುವ ಪರಿ ಇರಲಿಲ್ಲ. ಬೆಳಿಗ್ಗೆ ಎದ್ದಾಗಲೇ ನಮ್ಮ ಕಿವಿಗೆ ಬೀಳುವುದೆಂದರೆ ಅದು ರೇಡಿಯೋ ಧ್ವನಿಗಳು ಮಾತ್ರಾ. ಬೆಳಿಗ್ಗೆಯ ಪ್ರಾರ್ಥನೆ, ಚಿಂತನ, ವಾರ್ತೆ, ಮಧ್ಯಾಹನದ ಭಾವಗೀತೆ. ಚಿತ್ತಗೀತೆಗಳು, ಸಂಜೆಯ ಕೃಷಿರಂಗ, ಯುವವಾಣಿ, ನಾಟಕ, ಇತ್ಯಾದಿಗಳ ರೇಡಿಯೋ ಕಾರ್ಯಕೃಮ ಬಿಟ್ಟರೆ ರಾತ್ರಿ ಪಾಳಯದಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಯಕ್ಷಗಾನ ಬಯಲಾಟಗಳಷ್ಠೆ ನಮ್ಮ ಮನರಂಜನೆ. ಈ ಮನರಂಜನೆಗಳನ್ನು ಹೊರತುಪಡಿಸಿದರೆ ನಮ್ಮ ಪ್ರಪಂಚ ನಾವು ಕಂಡಿದ್ದು ನಮ್ಮ ಆಟಗಳಲ್ಲಿ.
ಎಷ್ಟೋ ಬಾರಿ ನಮ್ಮ ಆಟಗಳು ರಾತ್ರಿ ಕನಸಿನಲ್ಲೂ ದಾಳಿ ಇಟ್ಟು ಸೋಲಿಸುವ ಕ್ಷಣದಲ್ಲೇ ನನ್ನನ್ನು ಗೆಲ್ಲಿಸಿ ಕೂಗುವಂತೆ ಮಾಡಿದ್ದು ಉಂಟು. ನಮ್ಮೂರಿನ ಗುಡ್ಡದಲ್ಲಿ ಒಂದು ದೊಡ್ಡ ಮರವಿತ್ತು. ಅದರ ಹೆಸರೆ ‘ಹಾಸಿಗೆ ಗೇರು ಮರ’. ಮರದ ಬುಡಕ್ಕಿಂತ ಅದರ ಕೊಂಬೆಗಳೆ ಬಲು ಅಗಲ. ಇಬ್ಬರೂ ಸರಾಸರಿ ವ್ಯಕ್ತಿಗಳು ನಡೆಯಬಹುದಾದ ಆ ಕೊಂಬೆಗಳ ಮೇಲೆಯೆ ನಮ್ಮ ಆಟ ಸಾಗುತ್ತಿತ್ತು ಅದುವೇ ‘ಮರಕೋತಿ ಆಟ’. ಒಟ್ಟಿಗೆ ಸೇರುವ ಒಂದಿಷ್ಟು ಮಂದಿಯಲ್ಲಿ ಒಬ್ಬನನ್ನು ಸೆಲೆಕ್ಟ್ ಮಾಡಿ ಉಳಿದವರನ್ನು ಆತ ಮೇಲೆ-ಕೆಳಗೆ  ಅಟ್ಟಾಡಿಸಿ ಓಡಿಸಿಕೊಂಡು, ಕೈಯಲ್ಲಿ ಮುಟ್ಟಿ ಔಟ್ ಮಾಡಿ ಆಡುವ ಆಟವೇ ಈ ಮರಕೋತಿಯಾಟ. ಇದು ಥೇಟ್ ಕೋತಿಗಳ ಆಟದಂತೆ ಇರುವುದರಿಂದ ಮರಕೋತಿಯಾಟ ಎಂದೆ ನಮಗೆಲ್ಲಾ ಚಿರಪರಿಚಿತ. ಮರಗಳನ್ನು ಹತ್ತಿಹಾರುವ ಸಂಧರ್ಭ ಆಯತಪ್ಪಿ ಕೆಳಗೆ ಬಿದ್ದರೆ ಕೈಕಾಲು ಮುರಿಯುವುದು ಗ್ಯಾರಂಟಿ ಇದ್ದರೂ ಅದಕ್ಕೆಲ್ಲಾ ಭಯಪಡದೆ ಬೆಳೆದವರು ನಾವು. ಹಾಗೆ ಸಣ್ಣ ಪುಟ್ಟ ಏಟಿಗೆ ಹೆದರುವ ಜಾಯಮಾನವೂ ನಮ್ಮದಲ್ಲ ಬಿದ್ದು ಕೈ ಮುರಿದರೂ ಒಂದು ತಿಂಗಳು ಅಷ್ಟೆ ಕಣೋ ಸರಿಯಾಗುತ್ತೆ ಎಂದು ಕೈಗೊಂದು ಸಿಮೆಂಟ್ ಬ್ಯಾಂಡೆಜ್ ಏರಿಸಿಕೊಂಡು ನಗುತ್ತಲೇ ಇದ್ದೆವು ಆದರೆ ಇಂದಿನ ಮಕ್ಕಳು!.. ಮನೆಯ ಮೆಟ್ಟಿಲಿಂದ ಕೆಳಗೆ ಬಿದ್ದರೂ ಕೈಯೋ ಕಾಲೋ ಡ್ಯಾಮೇಜ್ ಆಗೋದು ಗ್ಯಾರಂಟಿ. ಇದು ಇಂದಿನ ಕಾಲದ ತಪ್ಪೋ, ಹೆತ್ತವರ ಕರುಣೆ ಮಮತೆಯ ತಪ್ಪೋ, ನಮಗ್ಯಾಕೆ!? ಹೇಳಿದರೆ ಕೆರಳುವ ವಿಚಾರ.
        ನಾನು ಓದಿದ್ದು ಸರಕಾರಿ ಶಾಲೆ, ಹಾಗಾಗಿ ಆಗೆಲ್ಲಾ ಆಂಗ್ಲ ಭಾಷೆ ಗೊತ್ತಿರಲಿಲ್ಲ. ‘ಎಳೆ ವಯಸ್ಸು ಸ್ವಚ್ಚ ಮನಸ್ಸು’ ಎಂಬಂತೆ ಆಗಿನ ಮುಗ್ಧತೆಯ ಆಟಗಳು ಇಂದಿನ ಬೆಟ್ಟಿಂಗ್‍ನ ಅಸಂತೋಷದ ಕ್ಷಣದಂತೆ ನೋವನ್ನು ತರುತ್ತಿರಲಿಲ್ಲ. ಬೇಸಿಗೆಯ ರಜೆಯಲ್ಲಿ ಮಾವಿನ ಕಾಯಿಯನ್ನು ಕೊಯ್ದು ಉಪ್ಪು ಊಡಿಕೊಂಡು ಸವಿಯುತ್ತಿದ್ದ ಕಾಲ ಇಂದಿಗೂ ಬಾಯಲ್ಲಿ ನೀರನ್ನು ಸುರಿಸುತ್ತವೆ. ‘ಕಳೆದು ಹೋದ ನೆನಪುಗಳು ಕಳೆದುಕೊಂಡ ಆಭರಣಗಳಂತೆ’ ಅದರ ಮೇಲಿನ ನೋವು.ನೆನಪು ಕಾಡುತ್ತಲೇ ಇರುತ್ತವೆ ಹೊರತು ಎಂದಿಗೂ ಮನಸ್ಸಿನಿಂದ ಮರೆಯಾಗುವುದಿಲ್ಲ. ಅಂದು ಆಡಿದ್ದ ಕುಂಟೆ ಬಿಲ್ಲೆ, ಲಗೋರಿ, ಗೋಲಿ, ಗಿಲ್ಲಿ ದಾಂಡು, ಜೋಕಾಲಿ, ಜೂಟಾಟ, ಬುಗುರಿ, ಗಿರಿಗಿಟ್ಲೆ, ಈಜಾಟ, ಅಳಿಗುಳಿಮನೆ, ಚೌಕಾಬಾರ, ಅವರ್ ಬಿಟ್ ಇವರ್ ಬಿಟ್ ಅವರ್ಯಾರು ಸೇರಿದಂತೆ ಅನೇಕ ಆಟಗಳು ಇಂದು ಮರೆಯಾಗಿ ಏನು?, ಹೇಗೆ? ಎಂಬುದು ಅರಿಯದೆ ಪುಸ್ತಕದಲ್ಲೋ, ಇಂಟರ್‍ನೆಟ್‍ನಲ್ಲೋ ಹುಡುಕಿ ಓದುವ ಕಾಲ ವರ್ತಮಾನದಲ್ಲಿದೆ. ಅಂದಿನ ‘ಕಣ್ಣಾಮುಚ್ಚೆ ಕಾಡೇ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು, ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ  ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ’ ಎಂದಿರುವ ಆಟದ ಹಾಡು ಇಂದು ನೆರೆದು ದೊಡ್ಡವರಾದ ಅದೆಷ್ಟೋ ಪ್ಯಾಟೆಮಂದಿಯ ಹುಡುಗರಿಗೆ ತಿಳಿಯದಿರುವುದು ಬೇಸರ ತರಿಸುತ್ತೆ. ಹಳ್ಳಿಯ ಸೊಗಡಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ ಇವುಗಳ ಇಂಗಿತ, ಇಂಪು  ಸಿಕ್ಕೆ ಸಿಕ್ಕಿರುತ್ತೆ. ಆದರೆ ಇಂದು ಹಳ್ಳಿಗಳಲ್ಲೂ ಆಧುನಿಕತೆಯ ಸೋಗಡಿನ ಗಾಳಿ ಬೀಸಿ ಅಲ್ಲಿಯೂ ಕಾಣದಾಗಿರುವುದು ಯಾರ ದುರಾದೃಷ್ಟವೋ ತಿಳಿಯುತ್ತಿಲ್ಲ.
        ನನಗೆ ಈಗಲೂ ನೆನಪಿದೆ ಅಂದು ಎಮ್ಮೆಯನ್ನು ಸ್ನಾನಕ್ಕೆಂದು ನೀರಿಗೆ ಕರೆದುಕೊಂಡು ಹೋಗುವಾಗ ಅದರ ಬಾಲ ಹಿಡಿದುಕೊಂಡು ಹೋಗಿ ಅದರ ಜೊತೆಯೇ ನೀರಿಗೆ ಬೀಳುವ ಆಟ, ಮೊದಲ ಮಳೆಯ ಸಂಧರ್ಭ ಹರಿವ ನೀರಿಗೆ ಕಾಗದದ ದೋಣಿಯನ್ನು ಬಿಟ್ಟು ಅದರಲ್ಲೇ ಖುಷಿ ಪಡುತ್ತಿದ್ದದ್ದು, ಸೈಕಲ್ ಚಕ್ರವನ್ನು ಬಳಸಿ ಸಣ್ಣ ಕೋಲಿಂದ ಓಡಿಸುತ್ತಿದ್ದು, ಹೀಗೆ ಅನೇಕ ವಿಧದಲ್ಲೇ ಅದೆಷ್ಟು ಸಂತೋಷ ಪಡುತಿದ್ವಿ ಎಂದರೆ ಹೇಳಲಾಗದು ಎನಿಸುತ್ತೆ. ಹಾಗೆಯೇ ಎಂದಿಗೂ ಎಂದೆಂದಿಗೂ ಇನ್ನೂ ಅವುಗಳನ್ನು ಸವಿಯುವುದು ಕಷ್ಟ ಅನ್ನಿಸುತ್ತದೆ.
       ಬಾಲ್ಯದ ಆಟ-ಹಾಡು-ಹಸೆ ಇಂದು ಕಾಲದ ತೊರೆಯಲ್ಲಿ ಕೊಚ್ಚಿ ಹೋಗುತ್ತಿದ್ದು, ತಡೆಯಲು ಯತ್ನಿಸುವ ನೆನಪಿನ ಹಾಯಿದೋಣಿಗಳು ಇಲ್ಲದೇ ಎಲ್ಲಾ ಆಟಗಳು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿವೆ. ಅಂದಿನ ಆಟಗಳು ಮನಸ್ಸಿಗೆ ಉಲ್ಲಾಸದ ಜೊತೆ ದೇಹಕ್ಕೆ ಒಂದಿಷ್ಟು ವ್ಯಾಯಾಮವನ್ನು ನೀಡಿ ಆರೋಗ್ಯಕರವಾಗಿರಿಸುತ್ತಿದ್ದವು ಆದರೆ ಇಂದು ಅಂತಹ ಆಟಗಳೇ ಆಡದೇ ಅನಾರೋಗ್ಯಕರ ಕೆಲಸವನ್ನು ಮಾಡುತ್ತಿದ್ದೇವೆ ಎನ್ನಲೂ ವಿಷಾಧಕರವಾಗುತ್ತದೆ. ಹಳೆಯ ನೆನಪುಗಳು ಹೊಸ ಜೀವನವನ್ನು ಕಟ್ಟುತ್ತವಂತೆ ಹಾಗೆ ಅವುಗಳು ನಮ್ಮೆಲ್ಲರ ಬದುಕನ್ನು ವಿಧವಿಧವಾಗಿ ಕಲಿಸಿ ಬೆಳೆಸುತ್ತವೆ ಎನ್ನುವುದರಲ್ಲೂ ಯಾವುದೇ ಅಪಾರ್ಥವಿಲ್ಲ. ಇನ್ನಾದರೂ ಹಳೆಯ ಆಟವನ್ನು ಗುರುತಿಸಿ ಬೆಂಬಲಿಸೋಣ, ಪೋಷಿಸೋಣ ಅಲ್ವಾ!? ವಾಟ್ ಯೂ ಸೇ...

No comments:

Post a Comment