Monday, 4 July 2016

ಕವಿ ಕನವರಿಕೆ - ಪ್ರೇಮಾಯಣ...


-ಸ್ಯಾಂಡಿ...

       
     ತುಸು ಪ್ರೇಮವಿತ್ತು, ತುಸು ಮೌನವಿತ್ತು ಪ್ರತಿ ಕ್ಷಣವೂ ಮೊದಲ ನೋಟವೋ ಎಂಬಂತೆ ಸಾಗುತ್ತಿತ್ತು ಅವನ-ಅವಳ ಕಣ್ಣುಗಳ ವಿಚಾರ ವಿನಿಮಯ...ಬೇಸಿಗೆ ಉರಿಬಿಸಿಲಿರಲಿ, ಚಳಿ ಚಂಚಲತೆಯಿರಲಿ, ಮಳೆಯ ಪುಳಕತನವಿರಲಿ ಎಲ್ಲಿಯೂ ಎಂದೂ ರಾಜಿಯನುಭವವಿಲ್ಲ... ಪ್ರೀತಿ, ಪ್ರೀತಿಸು, ಪ್ರೀತಿಸುತ್ತೇನೆ ಇವಷ್ಟೇ ಅರಿತು ನಡೆಯುತ್ತಿದ್ದ ಪುಟ್ಟ ಬಾಳು ಅವರದು!!.

ಟೀನೇಜಿನ ಟೈಮ್ ಅದು. ಓದುವಿಕೆಯಿಂದ ಹತ್ತಿರ ಕಂಡಿದ್ದ ಎರಡು ಹೃದಯಗಳು ಭವಿಷ್ಯದ  ಚಿಂತನೆಯನ್ನೇ ಮರೆತಿದ್ದವು. ಕೇವಲ ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರೇ ವಿನಃ ಮುಂದಿರುವ ಭವಿಷ್ಯದ ಗೋಜೆ ಅವಗಿರಲಿಲ್ಲ.

ಚಂದುಟಿಯ ಪಕ್ಕಕ್ಕೊಂದು ಮುತ್ತು, ದೂರಾಗುವ ಭಯಕ್ಕೊಂದು ಅಪ್ಪು... ಟೋಟಲ್ಲಿ ಮನ ಕಲಕದಂತೆ ಸಮನಾಗಿ ಎಳೆವ ತೇರು ಅವರದು. ಪ್ರೀತಿಸುತ್ತಿದ್ದ ಅಷ್ಟು ದಿನಗಳು ಕಳೆದದ್ದೇ ಅರಿಯದ ಜೋಡಿಯ ಹುಡುಗಿಗೆ ಮದುವೆ ಹುನ್ನಾರ ಮನೆಯಲ್ಲಿ ಅದಾಗಲೇ ನಡೆಯಲು ಶುರುವಿಟ್ಟಿದ್ದೆ ತಡ!, ಅವರಿಬ್ಬರಿಗೂ ಸಂಕಷ್ಟಗಳು ತಲೆಯೇರಲು ರೆಡಿಯಾದಂತೆ ಭಾಸವಾಗಿದೆ.

ಮನೆಯವರ ವಿರೋಧ, ದೂರಾದರೆ ಬಾಳು ಸಾಧ್ಯವಿರದ ಭಾದಿತ ಎನ್ನುವ ಆತಂಕ. ಒಂದು ಕಡೆ ಅರ್ಧಂಬರ್ಧ ಕಲಿಕೆಯಲ್ಲಿರುವ ವಿದ್ಯಾಭ್ಯಾಸ, ಇನ್ನೊಂದು ಕಡೆ ಪ್ರೀತಿಯ ತ್ಯಾಗಿಗಳಾಗಿ ಬದುಕು ಕಾಣಲಾರದ ಮಂಪರತೆ, ಭವಿಷ್ಯದಲ್ಲಿ ನೆಲೆಯಾಗದಿರುವ ಧೃಡತೆ!, ಇತ್ಯಾದಿಗಳ ಹೈರಾಣತೆ ಇನ್ನೇನೂ ಜೀವನ ಬಿಗಡಾಯಿಸುತ್ತೆ ಎಂದು ಅರಿತ-ಅರಳಬೇಕಿದ್ದ ಪ್ರೇಮಿಗಳು ಕೊನೆಗೊಂದು ನಿರ್ಣಯದಿಂದ, ಜಯಿಸಬಹುದೆಂಬ ತೀರ್ಮಾನಕ್ಕಿಳಿದಿದ್ದಾರೆ.
ಇಬ್ಬರು ಜೊತೆ ಸೇರಿದ್ದಾರೆ. ದುಃಖವನ್ನು ಮೌನವಾವರಿಸಿಕೊಂಡಿದೆ. ಇಬ್ಬರೂ ಇಹ ತ್ಯಜಿಸಿ ಪರ ಸೇರುವ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಎದುರಿರುವ ಚೂಡಿದಾರದ ವೇಲು ಕೊಕ್ಕೆಯಂತೆ ಕೊರಳೊಳು ಸೇರಿದೆ!!.

     
          ಸಾರ್ಥಕತೆ ಇಲ್ಲದ ಜೀವನದುಸಿರು ಗೆದ್ದೆ ಎಂದು ತನ್ನಾಟ ನಿಲ್ಲಿಸಿದೆ!., ಆಗತಾನೆ ಅರಳಿ ಸುವಾಸನೆ ಬೀರುತ್ತಿದ್ದ ಪ್ರೀತಿ ಮಸಣದ ಪಾಲಾಗಿದೆ!., ಮೌನ ಬಲಿ ಪಡೆದಿದೆ!., ಜನುಮ ಅಂತ್ಯ ಕಂಡಿದೆ!., ಪ್ರೇಮಾಯಣ ಪಾಪ ಭಾವ ತಳೆದಿದೆ..!

ಕೊಂಡಿ ಕಳಚಿತು...


       ಕೈ ನಡುಗುತ್ತಿದೆ!.. ಪದಗಳು ಜಾರುತ್ತಿವೆ!.. ಭಾವ ಯಾವುದರದೋ ಬೆನ್ನೇರಿ ಸಾಗಿದಂತಿದೆ!.. ಮಾತುಗಳು ಮೌನತೆ ಪಡೆದಿವೆ!.. ಕಾರಣವಿಷ್ಟೇ ಮನೆಯ ಹಿರಿಯ ಕೊಂಡಿಯೊಂದು ಕಳಚಿದೆ!!. ಮನೆಯವರಾದ ಮಾಮನ ಉಸಿರು ನಿಂತಿದೆ. .. ಕಳೆದ 85 ವರ್ಷಗಳಿಂದಲೂ ಸದಾ ಒಂದಿಲ್ಲೊಂದು ವಿಚಾರದಲ್ಲಿ ಚಲನೆ ಕಂಡಿದ್ದ ಮನೆತನದ ಹಿರಿಯ ಕೊಂಡಿ ಇಹಲೋಕ ತ್ಯಜಿಸಿ ದೂರ ಸಾಗಿದೆ. ಅಂದು ಮಧ್ಯಾಹ್ನ ಮನೆಯಿಂದ ಫೋನ್ ಬಂದು ವಿಷಯ ತಿಳಿದಾಗ,  ಸರಿಸುಮಾರು ಜೀವಮಾನದ 25 ವರ್ಷಗಳ ಇಂದಿನ ಬದುಕಿನವರೆಗೆ ಸಂಬಂಧಿಗಳ ಪೈಕಿ ತೀರಾ ಹತ್ತಿರವಾದವರನ್ನು ಮೊದಲ ಬಾರಿಗೆ ಶಾಶ್ವತ ಉಪಸ್ಥಿತಿಯಿಂದ ಕಳೆದುಕೊಂಡ ಶಾಕ್ ನನಗೆ!.. 

           ಹಿಂದಿನ ಬದುಕಲ್ಲಿ ಸ್ನೇಹಿತನ ಮನೆಯಲ್ಲೋ, ಪಕ್ಕದ ಮನೆಯಲ್ಲೋ ಅಥವಾ ಹಳ್ಳಿಯ ಇನ್ಯಾರದ್ದೋ ಮನೆಗಳಲ್ಲಿ ಈ ಥರದ ಅಗಲಿಕೆಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತಿದ್ದರೂ, ತದ ನಂತರ ಅದರ ಕಾಡುವಿಕೆ ವಿರಳವಾಗಿರುತಿತ್ತು. ಆದರೆ ನನ್ನವರೇ ಆದ ಮಾಮನ ಸಾವು ಅವೆಲ್ಲದರ ಔಚಿತ್ಯದಂತಾಗಲಿಲ್ಲ. ಮಾಮ ನನ್ನ ಬೆಳವಣಿಗೆಯ ಜೊತೆಯಲ್ಲಿ ಒಬ್ಬರಾಗಿ ಇದ್ದ ವ್ಯಕ್ತಿಯಾದ್ದರಿಂದ, ಮನೆಯಿಂದ ಮಸಣತಲುಪಿ, ವಿಧಿವಿಧಾನ ಜರುಗಿ ಇಷ್ಟು ದಿನವಾದರೂ ಕಾಡುತ್ತಿದ್ದಾರೆ.  ಭಾವನಾತೀತ ನೆನಪುಗಳು ಪಕ್ಕದಲ್ಲೇ ಗಿರಕಿ ಹೊಡೆದು ಕಳೆದ ದಿನಗಳನ್ನು ನೆನಪಿಸುತ್ತಿದೆ.

ನನ್ನಮ್ಮನಿಗೆ ಅವರು ಅಣ್ಣ, ನನಗೆ ಮಾವ. ನಾ ಕರೆಯುತ್ತಿದ್ದುಮಾಮ. ವಯಸ್ಸು 80 ಕ್ಕಿಂತ ಜಾಸ್ತಿ, ಉದ್ದನೆಯ ದೇಹ, ಇಳಿವಯಸ್ಸಲ್ಲೂ ಕಟ್ಟು ಮಸ್ತಾದ ಶರೀರ, ಅಲ್ಪಸ್ವಲ್ಪ ಗಡ್ಡ, ಬಿಳಿಕೂದಲಿನ ತಲೆ, ವಯಸ್ಸಿನನುಸಾರ ಮುಖದ ನೆರಿಗೆ, ಬಾಯಲ್ಲಿ ಒಂದೆರಡು ಹಲ್ಲು, ದಪ್ಪ ಕೈ, ಸದಾ ನಗುಮೊಗದಿಂದಿರುವ ಮನೆಯ ಹಿರಿಯವ, ನಮ್ಮ ಜೊತೆ ಇದ್ದ ಅಷ್ಟು ದಿನಗಳು ನಮಗಾಗೇ ಬದುಕಿದ ತ್ಯಾಗಮಯಿ...

      ನನಗೀಗಲೂ ನೆನಪಿದೆ... ಅವರು ನನ್ನ ಮನೆಗೆ ಬಂದು ನೆಲೆಯಾಗಿದ್ದು ನಾನು 3ನೇ ತರಗತಿ ಓದುತ್ತಿದ್ದಾಗ. ಮದುವೆಯಾಗಿ ಮಕ್ಕಳಾದ ಒಂದಿಷ್ಟು ವರ್ಷದ ಬಳಿಕ ಹೆಂಡತಿ ಮಕ್ಕಳಿಂದ ಯಾವುದೋ ಕಾರಣಕ್ಕೆ ಬೇರಾಗಿ ಅನಾಥರಾದ ಮಾಮ ಮತ್ತೆ ಮನೆಗೆ ಹಿಂತಿರುಗದೇ ಸ್ವಾಭಿಮಾನಿಯಾಗಿ ಸಾಯೋವರೆಗೂ ಯಾರಿಂದಲೂ ಏನನ್ನು ಕೇಳದೇ ಬದುಕಿದ ನಿಸ್ವಾರ್ಥಿ. ಅಂದು ಮನೆ ಬಿಟ್ಟವರು ನೇರ ಬಂದಿದ್ದೇ ತಂಗಿಯಾದ ನನ್ನಮ್ಮನ ಮನೆಗೆ. ಅದಾಗಲೇ ಅಪ್ಪ ಅಮ್ಮ ತೀರಿಕೊಂಡಿದ್ದರಿಂದ ಅಣ್ಣನ ಪೂರ್ಣ ಜವಾಬ್ಧಾರಿಯೂ ಅಮ್ಮನ ಹೆಗಲ ಮೇಲೆಯೇ ಬಿದ್ದಿತ್ತು. ಸಾಯೋ ಕೊನೆಕ್ಷಣದವರೆಗೂ ಅಮ್ಮ ಅಣ್ಣನನ್ನು ಸಾಕಿದ್ದು ತನ್ನ ಮಗನಂತೆಯೇ!..

ಅವರಿಗೆ ಅವರೇ ಸಾಟಿ!, ತೀರಾ ಚಿಕ್ಕಂದಿನಿಂದಲೂ ಗದ್ದೆ, ತೋಟ, ಮನೆ ಹೀಗೆ ಎಲ್ಲದರಲ್ಲೂ ಮುಂದಿದ್ದ ಮಾಮ ಏನೇ ಕೆಲಸಕ್ಕೆ ಕೈ ಹಾಕಿದರೂ, ಅದು ಶಿಸ್ತು ಮತ್ತು ಪರಿಪೂರ್ಣ ಎನ್ನುವ ಮಾತು ಇಡೀ ಊರಿನವರ ಬಾಯಲ್ಲೇ ಕೇಳಿಬರುತ್ತಿತ್ತು. ಇದಕ್ಕಾಗಿ ಅವರೆಂದು ಬೀಗಿದವರಲ್ಲ! ‘ಒಂದು ಕೆಲಸವನ್ನು ಮಾಡಿದರೆ ಅಂದವಾಗಿ, ಪೂರ್ಣವಾಗಿ ಮಾಡಬೇಕು’ ಎಂದು ಆಗಾಗ ಬೇರೆಯವರಿಗೆ ಹೇಳುತ್ತಿದ್ದ ಮಾತುಗಳು ನನ್ನ ಕಿವಿಗೂ ಬಿದ್ದಿದ್ದು ನೆನಪಿದೆ.  ಆಗೆಲ್ಲಾ ಬಸ್ಸುಗಳ ಸಂಚಾರ ನಮ್ಮ ಊರಲ್ಲಿರಲಿಲ್ಲ. ಸುಮಾರು 15 ರಿಂದ 20 ಕಿ.ಮೀ ಅಂತರದ ನಡಿಗೆಯಲ್ಲಿ ಸಿಗುವ ಸಿಟಿಗೆ ಹೋಗಿ ಸಾಮಾನು ಸರಂಜಾಮುಗಳ ವಹಿವಾಟು ನಡೆಸಬೇಕಿತ್ತು. ಅಲ್ಲಿ ಒಂದೆರಡು ಅಂಗಡಿ ಮುಂಗಟ್ಟುಗಳಿದ್ದವು. ಹುಷಾರಿಲ್ಲದೇ ಖಾಯಿಲೆ ಇದ್ದರೂ ಅಲ್ಲಿಯೇ ಜೌಷಧಿ ಮಾಡಿಕೊಂಡು ಬರಬೇಕಿತ್ತು, ಮನೆಗೆ ಬೇಕಾದ ಸಾಮಾನುಗಳ ಅವಶ್ಯಕತೆ ಇದ್ದರೆ ಅಲ್ಲಿಂದಲೇ ತಲೆ ಮೇಲೆ ಹೊತ್ತು ವಾಪಾಸ್ಸಾಗಬೇಕಿತ್ತು. ಕಾಲು ನಡಿಗೆ ಇಲ್ಲವೆಂದರೆ ಎತ್ತಿನಗಾಡಿಯ ಸೌಲಭ್ಯ ಅಲ್ಪ-ಸ್ವಲ್ಪ ಇತ್ತು. ಇಡೀ ಊರಲ್ಲೇ ನಮ್ಮದು ದೊಡ್ಡದಾದ ಮನೆತನದ ಮನೆಯಾದ್ದರಿಂದ ಸ್ವಲ್ಪ ಶ್ರೀಮಂತಿಕೆ ಎಂಬಂತೆ ಎತ್ತಿನ ಗಾಡಿಯನ್ನು ನಮ್ಮ ಹಿರಿಯಜ್ಜನೇ ಹೊಂದಿದ್ದರು ಅಲ್ಲದೇ ಬಹಳ ಚಿಕ್ಕವಯಸ್ಸಿನಲ್ಲೇ ಅದರ ಪೂರ್ತಿ ಜವಾಬ್ಧಾರಿಯನ್ನು ಮಾಮನ ಹೊಗಲಿಗೆ ಹೇರಿದ್ದು ಅವರೇ ನನಗೆ ಎಷ್ಟೋ ಬಾರಿ ಹೇಳಿದ್ದು ಕೇಳಿಸಿಕೊಂಡಿದ್ದೆ. ಎತ್ತಿನ ಗಾಡಿಯನ್ನು ಓಡಿಸುವುದರಲ್ಲಿ ಈಗಲೂ ನಂಬರ್ ಒನ್ ಎನ್ನುವ ಹೆಗ್ಗಳಿಕೆ ಅವರ ಪಾಲಿಗೆ ಹಾಗೇ ಉಳಿದಿದೆ. ನಾನು ಆಗೊಮ್ಮೆ-ಈಗೊಮ್ಮೆ ಊರಿಗೆ ಹೋದಾಗ ಗಾಡಿ ಎತ್ತುಗಳ ಕತೆ ಹೇಳುವ ಮಾಮ ಅಂದು ನಿರ್ವಹಿಸುತ್ತಿದ್ದ ಕೆಲಸಗಳನ್ನು ಎಣಿಸಿದರೆ  ಇಂದು ಮಾಡುತ್ತಿರುವುದು ಏನೂ ಅಲ್ಲ ಎನಿಸುತ್ತದೆ. ಅಂದೆಲ್ಲಾ ಅವರಿಗೆ ದಿನಕ್ಕಿಂತಿಷ್ಟು ಕೆಲಸ ಮಾಡಲೇಬೇಕೆಂಬ ಮನೆಯ ಹಿರಿಯರ ಆಜ್ಞೆ ಇತ್ತಂತೆ. ಇಲ್ಲವಾದರೆ ಸಂಜೆ ಊಟಕ್ಕೆ ಮನೆಗೆ ಬರುವ ಹಾಗಿರಲಿಲ್ಲವಂತೆ!...

ನಮ್ಮ ಜೀವನದಲ್ಲಿ ಕಳೆದಿರುವ ದಿನಗಳೆಲ್ಲವನ್ನು ನಾನು ಇತಿಹಾಸವೇ ಎಂದು ಕರೆಯಲು ಇಷ್ಟ ಪಡುತ್ತೇನೆ. ಕಾರಣ ಪ್ರತಿಯೊಬ್ಬ ಮನುಷ್ಯನ ಜೀವಿತದ ಹಳೆಯ ದಿನಗಳನ್ನು ಎಣಿಸಿದರೆ ಅಲ್ಲೊಂದು ಇತಿಹಾಸವಾಗಬಹುದಾದ ನೆನಪುಗಳ ಮಾಲೆ ಇದ್ದೆ ಇರುತ್ತದೆ. ಅಂತೆಯೇ ಇವರ ಜೀವನದ ಗಾಥೆಯೂ ಹಾಗೆ ಇದೆ. ಎಲ್ಲರೂ ಕೈ ಬಿಟ್ಟಾಗ ನಮ್ಮನೆ ಸೇರಿದ್ದ ಮಾಮ, ಪ್ರಾರಂಭದಲ್ಲಿ ನನಗೂ ಅಪರಿಚಿತರಾಗಿದ್ದರು. ಮೊದಲ ಬಾರಿ ಅವರನ್ನು ನೋಡಿದ್ದಾಗ ಅಮ್ಮನ ಬಳಿ ಅವರ್ಯಾರೆಂದು ಕೇಳಿದ್ದೆ!., ಅವಳಂದು ನನ್ನಣ್ಣ ಅಂದಿದ್ದಳು. ಹಾಗಾದರೆ ನನಗೇನಾಗುತ್ತಾರೆನ್ನುವ ಮರು ಪ್ರಶ್ನೆಗೆ ನೀ ‘ಮೊಮ್ಮ’ ಎಂದು ಕರೆ ಎಂದಿದ್ದಳು. ‘ಮೊಮ್ಮ’ ಪದ ಹೇಳಲು ಕಷ್ಟವಾದ್ದರಿಂದ, ಚಿಕ್ಕಂದಿನ ಚಿಕ್ಕಬದಲಾವಣೆ ಎಂಬಂತೆ ಮೊಮ್ಮ ನನಗೆ ‘ಮಾಮ’ನಾಗಿಯೇ ಉಳಿದರು. 

ನಿಮಗೆ ಗೊತ್ತಾ!?, ಮಾಮ, ಇತ್ತೀಚಿನ ದಿನಗಳಲ್ಲಿ ನನ್ನ ಹಿರಿಯಣ್ಣನ ಮಗಳು ‘ಸ್ವಾತಿ’ಗೆ ಹೋರಿ ಅಜ್ಜನಾಗಿ, ಕಿರಿಯಣ್ಣನ ಮಗ ‘ಶ್ರಜ್ಜು’ಗೆ ‘ಅಂಗಡಿ ಅಜ್ಜ’ನಾಗಿಯೂ ಬದಲಾಗಿದ್ದು ಇನ್ನೊಂದು ಥರದ ವಿಶೇಷ!. ಅವರಿಗೆ ಮನೆಯ ಧನಕರುಗಳಿಗಿಂತ ಗದ್ದೆ ಹೂಳುವ ಕೋಣ(ಹೋರಿ)ಗಳೆಂದರೆ ಇಷ್ಟ. ತೀರಾ ಇತ್ತೀಚಿನವರೆಗೂ ತನ್ನ ಮಕ್ಕಳಂತೆ ಸಾಕುತ್ತಿದ್ದ ಕೋಣಗಳ ದೆಸೆಯಿಂದ ‘ಸ್ವಾತಿ’ಗೆ ಅವರು ‘ಹೋರಿಅಜ್ಜ’ ಎಂದೆ ಪರಿಚಿತರಾಗಿದ್ದರು. ಒಂದೆರಡು ವರ್ಷಗಳಿಗಿಂತ ಈಚೆ ‘ನನಗೂ ವಯಸ್ಸಾಯಿತು ಇನ್ನೂ ಪ್ರಾಣಿಗಳನ್ನು ಸಾಕಲು ಆಗೋದಿಲ್ಲ’ ಎಂದು ಅರಿತು ಮನೆಯಿಂದ ಸ್ವಲ್ಪವೇ ಹತ್ತಿರವಿದ್ದ ಅಂಗಡಿಯೊಂದನ್ನು ಬಾಡಿಗೆ ಪಡೆದು ಸ್ವಾವಲಂಭಿಯಾಗಿ ವ್ಯಾಪಾರ ನಡೆಸುತ್ತಿದ್ದದ್ದನ್ನು ನೋಡಿದರೆ ಪ್ರತಿಯೊಬ್ಬನೂ ಅವರಿಗೆ ಶಭಾಷ್ ಎನ್ನಲೇಬೇಕು. ದಿನಾ ಅವರ ಅಂಗಡಿ ಪಯಣ ನೋಡಿದ್ದ ಚಿಕ್ಕ ವಯಸ್ಸಿನ ‘ಶ್ರಜ್ಜು’ ಅವರಿಗೆÀ ‘ಅಂಗಡಿಅಜ್ಜ’ ಎಂದು ಹೆಸರಿಟ್ಟಿದ್ದು ಆ ಕಾಣಕ್ಕಾಗಿ ಅಷ್ಟೆ.

  ಮೊದಲಿನಿಂದಲೂ ಅವರಿಗೆ ಮನೆಯಲ್ಲಿ ಹಿರಿತಲೆಯೆಂದು ಸ್ವಲ್ಪ ಬೇರೆಯದೇ ಮರ್ಯಾದೆ ಇತ್ತಾದರೂ, ಯಾವುದೊಂದನ್ನು ನನಗೆ ಬೇಕು ಎಂದು ಹವಣಿಸಿದ್ದು ನಾನೆಂದು ಕಂಡಿರಲಿಲ್ಲ. ಸದಾ ತಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಮಾಮ ದೇವರಿಗಿಂತಲೂ ದೈವದ ಕೆಲಸಗಳಲ್ಲಿ ವಿಶೇಷ ಆಸಕ್ತಿ, ಭಯ, ಶ್ರದ್ಧೆ, ಅನುಕಂಪದ ಕ್ಷೋಭೆಯಾಗಿದ್ದರು. ಮನೆಯಲ್ಲಿ ಏನೇ ದೈವದ, ದೇವರ ಕೆಲಸವಿದ್ದರೂ, ಅವರೇ ಅದಕ್ಕೆ ಮುಂದಾಳು. ಅವರ ರೂಢಿಯಂತೆ ಎಲ್ಲವೂ ಎತಾವತ್ತಾಗಿ ನಡೆಯುತ್ತಿತ್ತು. ತಪ್ಪಾದರೆ ಕ್ಷಮಿಸುತ್ತಿರಲಿಲ್ಲ. ದೊಡ್ಡ ಬೈಗುಳವನ್ನೇ ಕಾರುತಿದ್ದರು.

ನಾನಾಗ 5ನೇ ತರಗತಿ ಓದುತ್ತಿದ್ದೆ... ಅಂದು ನಮ್ಮೂರಿನ ಮನೆಗಳೆಲ್ಲ ಇಂದಿನಂತೆ  ಕರೆಂಟ್ ಸೌಲಭ್ಯ ಕಂಡಿರಲಿಲ್ಲ. ನಮ್ಮ ರಾತ್ರಿ ಓದೆಲ್ಲವೂ ನೆಡೆಯುತ್ತಿದ್ದದ್ದು ಸೀಮೆ ಎಣ್ಣೆಯ ಚಿಮಣಿ ದೀಪದಡಿ. ಬರೆಯೋಕೆ ಒಂದು ಮಂಚವೂ ಇರಲಿಲ್ಲ. ಖಾಲಿ ನೆಲದ ಮೇಲೆ ಉದ್ದಕ್ಕೆ ಮಲಗಿ, ಮುಂಗೈ ಊರಿ ಅಥವಾ ಕಾಲುಗಳನ್ನು ಮಡಚಿ, ಬರೆಯುದೋ!, ಓದುವುದೋ!! ಮಾಡುತ್ತಿದ್ದೆ. ಆ ಸಮಯದಲ್ಲಿ ನನಗೆ ನಿದ್ದೆ ಬಂದಂತಾಗಿ ಕಣ್ಣು ಮುಚ್ಚಿ ಒಮ್ಮೊಮ್ಮೆ ದೀಪದ ಮೇಲೆ ಬೀಳುವುದು ಮಾಮೂಲಿಯಾಗಿತ್ತು. ಅಲ್ಲದೇ ಸೀಮೆ ಎಣ್ಣೆ ಕೆಳಕ್ಕೆ ಸೋರಿ ಬೆಂಕಿ ಹತ್ತುವ, ಹತ್ತು-ಹಲವು ಸನ್ನಿವೇಶಗಳು ನಡೆದದ್ದು ಮಾಮನೂ ನೋಡಿದ್ದರು. ಅಂದಿನ ನನ್ನ ಕಷ್ಟವನ್ನರಿತಿದ್ದ ಮಾಮ  ದೂರದೂರಿಗೆ ಹೋಗಿ ಹಿತ್ತಾಳೆಯ ಮಣಭಾರದ ಒಂದು ದೀಪದ ಲ್ಯಾಂಪನ್ನು ತಂದು ನನಗೆ ಉಡುಗೊರೆ ನೀಡಿದ್ದರು. ಅದು ಇವತ್ತಿಗೂ ನನ್ನ ಬಳಿ ಜೋಪಾನವಾಗಿದೆÉ. ‘ನಮ್ಮ ಕಾಲದಲ್ಲಿ ನಮಗೆ ಓದಲಾಗಿಲ್ಲ!, ನಮ್ಮನೇ ಮಕ್ಕಳಾದರೂ ಚೆನ್ನಾಗಿ ಓದಲಿ’ ಎನ್ನುವ ಅವರ ಆಶಾಭಾವ ಆ ಉಡುಗೊರೆ ನನಗೆ ಸಿಗುವಂತೆ ಮಾಡಿತ್ತೆಂದು ನನಗಂದೇ ಅನಿಸಿತ್ತು. ಅವುಗಳು ಕೂಡ ಇಂದು  ಮಾಮನ ನೆನೆಪನ್ನು ಮತ್ತೆ ಮತ್ತೆ ಭಿತ್ತುತ್ತಿವೆ... ನಾನೇಗೆ ಮರೆಯಲಿ ನೀವೇ ಹೇಳಿ!.

ಅವರಿಗೆ ನನ್ನ ಹಾಗೂ ನನ್ನಣ್ಣಂದಿರ ಮೇಲಿನ ಕಾಳಜಿಯೇ ಒಂಥರಾ ವಿಶೇಷತೆಯಿಂದ ಕೂಡಿತ್ತು. ಕೇವಲ ನಮ್ಮನ್ನಷ್ಟೇ ಅಲ್ಲದೇ ಮನೆಯಲ್ಲಿ ಮುದ್ದಿಂದ ಸಾಕಿದ್ದ ನಾಯಿ ಮರಿ ಮೇಲೆಯೂ ಪ್ರೀತಿ ಅಗಾಧವಾಗಿತ್ತು. ತಟ್ಟೆಗೆ ಐದು ಇಡ್ಲಿ ಹಾಕಿಕೊಂಡರೆ ಅದರಲ್ಲಿ ಒಂದು ನಾಯಿಮರಿಗೆ, ಒಂದು ಕೋಳಿ ಹುಂಜನಿಗೆ, ಇನ್ನೆರಡು ಮುದ್ದಿನ ಕೋಣಗಳಿಗೆ ದಿನವೂ ನೀಡಿ ಅವರು ತಿನ್ನುತ್ತಿದ್ದದ್ದು ಕೇವಲ ಉಳಿದ ಒಂದು ಇಡ್ಲಿಯನ್ನು ಮಾತ್ರಾ!.

ಅಷ್ಟೇ ಯಾಕೆ!?, ಮಾಮನಿಗೆ ಶಿಕಾರಿಯೆಂದರೆ ಹುಚ್ಚು. ಪ್ರತಿ ಮಳೆಗಾಲ ಸನ್ನಿಹಿತವಾಯಿತೆಂದರೆ ಮಾಮನಿಗೆ ವಿಶೇಷವಾದ ಖುಷಿ. ಯಾಕೆಂದರೆ ಶಿಕಾರಿ ಅಥವಾ ಕಾಡು ಪ್ರಾಣಿಗಳ ಬೇಟೆಯಾಡಲು ಮಳೆಗಾಲ ಸೂಕ್ತ ಎನ್ನುವ ನಿಲುವು ಅವರದ್ದು. ಇಡೀ ನಮ್ಮ ಊರಿಗೆ ಒಂದು ಕಾಲಕ್ಕೆ ಬಹುದೊಡ್ಡ ಬೇಟೆಗಾರರಾಗಿದ್ದ ಅವರು ಇತ್ತೀಚಿಗೆ ಕಣ್ಣು ಕಾಣಿಸುವುದಿಲ್ಲ ಎನ್ನುವ ನೆಲೆಯಿಂದ ಅದಕ್ಕೂ ಪೂರ್ಣ ವಿರಾಮ ನೀಡಿದ್ದರು. ಹುಲಿ, ಹಂದಿ, ಮಿಗ, ಮುಳ್ಳುಹಂದಿ, ಮೊಲ ಹೀಗೆ ಅನೇಕ ಬಗೆಯ ಪ್ರಾಣಿಗಳನ್ನು ಬೇಟೆಯಾಡಲು ನಿಂತರೆಂದರೆ ಅವುಗಳ ಪ್ರಾಣವನ್ನು ಯಾರಿಂದಲೂ ತಡೆಯಲಾಗುತ್ತಿರಲಿಲ್ಲ. ಆಗೆಲ್ಲಾ ಕಾಡು ಭೇಟೆ ಅಥವಾ ಶಿಕಾರಿಗೆ ವಿಶೇಷ ಪ್ರಾಮುಖ್ಯವಿತ್ತು ಮತ್ತು ಪ್ರಾಣಿ ಭಯಗಳನ್ನು ಕೋವಿಯಿಂದಲೇ ನೀಗಿಸಿಕೊಳ್ಳಬೇಕಾದ ಅನಿರ್ವಾಯತೆ ಕೂಡ ಅಂದಿನ ಜನರ ಜೀವನವನ್ನು ಶಿಖಾರಿಗೆ ದೂಡುತ್ತಿತ್ತು.

ಎಷ್ಟೋ ಬಾರಿ ಅಕ್ಕ ಪಕ್ಕದವರ ಮೇಲೆ ಅವರು ರೇಗಾಡಿದ್ದನ್ನು ನಾ ನೋಡಿದ್ದೆ ಆದರೆ ಅದೆಲ್ಲವೂ ನಡೆಯುತ್ತಿದ್ದ ತಪ್ಪುಗಳನ್ನು ತಿದ್ದಲೋಸುಗವಾಗಿಯೇ ಹೊರತು ಬೇರೆ ಯಾವ ಉದ್ದೇ± ಅವರಲ್ಲಿರಲಿಲ್ಲ. ಕಬ್ಬುಗಳನ್ನು ಗಾಣಕ್ಕೆ ಕಟ್ಟಿ ಬೆಲ್ಲ ಸಿದ್ಧಪಡಿಸುತ್ತಿದ್ದ ‘ಆಲಿಮನೆ’ಯಲ್ಲೂ ಅನೇಕ ವರ್ಷ ದುಡಿದಿದ್ದ ಅವರು ಸಾಯೋ ಮುಂಚಿನ ಪ್ರತಿ ದಿನವೂ ಕೆಲಸ ಮಾಡುತ್ತಲೇ ಕೊನೆಕಂಡವರು.

ಮಾಮ.., ನಿಂತಿರುವುದು ನಿಮ್ಮ ಉಸಿರು ಮಾತ್ರಾ. ನಿಮ್ಮ ನೆನಪು ಸದಾ ನಮಗೆ ಹಸಿರಾಗೆ ಇದೆ. ನಿಮ್ಮ ಜೊತೆ ಆಡಿಕೊಂಡು ಬೆಳೆದಿದ್ದ ಪರಿಸರವೆಲ್ಲಾ ನೀವಿಲ್ಲದೇ ಬಡವಾದಂತಿದೆ, ಮೊನ್ನೆ ಮೊನ್ನೆ ನೀವು ನನ್ನ ಕ್ಯಾಮರಾಕ್ಕೆ ಕೊಟ್ಟ ಫೋಸ್ ಕೂಡ ಕಣ್ಣಂಚಲಿ ಹನಿ ಬರುವಂತೆ ಮಾಡುತ್ತಿದೆ, ಫೋಟೋಗಳು ಮರುಗಿಸುತ್ತಿವೆ. ದೈವದ ಮನೆಗಳು ಹೂವಿಲ್ಲದೇ ಬಾಡಿದೆ. ಧನಕರುಗಳು ಗೋಗೆರೆಯುತ್ತಿವೆ, ದಿನಾ ಮಲಗುತ್ತಿದ್ದ ನಿಮ್ಮ ಕೋಣೆ ಬಿಕೋ ಎನ್ನುತ್ತಿದೆ, ಸುತ್ತಣ ಪರಿಸರ ಮೌ£ವಹಿಸಿದೆ, ಪ್ರೀತಿಸುತ್ತಿದ್ದ ಕೆಲಸಗಳೆಲ್ಲ ಪ್ರಣಯರಾಜನಿಲ್ಲದೇ ಕಂಗೆಟ್ಟಿದೆ, ಮನೆ ಮಠದ ಸುತ್ತ ಗಲೀಜುಗಳು ಮತ್ತೆ ಎದ್ದಿದೆ, ಮನೆಗೆ ಬಂದ ನೆಂಟರೆಲ್ಲಾ ನೀವಿಲ್ವಾ ಎಂದು ಕೇಳಿಯೇ ಹೊರ ನಡೆಯುತ್ತಿದ್ದಾರೆ, ನಡೆದೆ ಸವೆಸುತ್ತಿದ್ದ ದಾರಿಗಳೆಲ್ಲ ನಿಮ್ಮ ಬರುವಿಕೆಗೆ ಕಾದು ಸೋತು ಹೊಸ ಹುಲ್ಲುಗಳನ್ನು ಆವರಿಸಿಕೊಂಡಿವೆ. ನನ್ನ ಭಾವನಾಲಹರಿಯ ಮೇಳ ನೀವಿಲ್ಲದೇ ಇರುವ ನಿಜಸ್ಥಿತಿ ಅರಿತು, ಮತ್ತೆ ಮತ್ತೆ ನೋವು, ಸಂಕಟಗಳನ್ನು ತಂದಿಕ್ಕಿ ಹೃದಯ ಭಾರವಾಗಿಸುತ್ತಿದೆ. ಅಮ್ಮ ಅಳುತ್ತಿದ್ದಾಳೆ!.. 

ಮಾಫಿಯಾ... ಬಿಕ್ಷಾ!!, ಮಾಫಿಯಾ... - ಸಿರಿ ಬುಲೆಟ್



ಮಹಾನಗರದಲ್ಲಿ ಹೆಚ್ಚುತ್ತಿದೆ ಭಿಕ್ಷೆಯ ಅತಿರೇಕತೆ....
ನಿಲ್ಲದ ಭಿಕ್ಷಾಟನೆಗೆ, ಉಚ್ಚಾಟನೆಯೇ ಮದ್ದು...
ಚಿಲ್ಲರೆಗೆ ಬೆಲೆ ಇಲ್ಲ, ಡೆಬಿಟ್ಟು ಕ್ರೆಡಿಟ್ಟು...ಬರೀ ನೋಟು ನೋಟು...
ದುಡ್ ಮಾಡೋ ದುನಿಯಾ ; ಭಿಕ್ಷಾ ಮಾಫಿಯಾ...

   
           ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ನಗರೀಕರಣ, ವ್ಯಾಪಾರಿಕರಣ ಹಾಗೂ ಇನ್ನಿತರ ಹತ್ತು ಹಲವು ಔದ್ಯೋಗೀಕರಣಗಳಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಧಾತನಾಗಿ, ಹೊಟ್ಟೆ ಬಟ್ಟೆಯ ಒಡೆಯನಾಗಿ ಸಿಲಿಕಾನ್ ಸಿಟಿ ಗಾಂಭೀರ್ಯ ತೋರಿಸುತ್ತಿದೆ. ಬಹಳ ಹಿಂದೆ ನಾಡು ನುಡಿಯ ಗಂಧದ ಕಂಪನ್ನು ಅರಿತ ಅನೇಕರು, ಬೆಂಗಳೂರು ಎಲ್ಲಾ ವಲಯಗಳಿಗಿಂತಲೂ ಅತ್ಯಂತ ಸುರಕ್ಷಿತ ಪ್ರದೇಶ ಎಂದು ಸಾರಿದ್ದು ಇನ್ನಷ್ಟು ಜನ ಇಲ್ಲಿಗೆ ಬಂದು ನಿರ್ಭೀತರಾಗಿ ನೆಲೆ ನಿಲ್ಲಲು ದಾರಿಯಾಗಿತ್ತು. ಇಲ್ಲಿನ ಪರಿಸರ, ಹವಾಮಾನ, ಜೌದ್ಯೋಗಿಕ ನೆಲೆಗಟ್ಟು ಇತ್ಯಾದಿಗಳೆಲ್ಲವೂ ಉತ್ತಮ ಆರೋಗ್ಯದ ಜೊತೆಗೆ ಸುಖಮಯ ಜೀವನವನ್ನು ನಡೆಸಬಹುದಾದ ಮಾರ್ಗಗಳನ್ನು ತೋರಿಸಿತ್ತು.
     ಆದರೆ ಈಗ!, 
     ಬೆಂಗಳೂರು ಇಸ್ ನಾಟ್ ಎ ಸೇಫ್ಟಿ ಸಿಟಿ...
ಎಸ್!.. ಇತ್ತೀಚೆಗೆ ಎಲ್ಲಿ ಹೋದರು ಸದಾ ಒಂದಿಲ್ಲೊಂದು ಬಗೆಯ ಸುಲಿಗೆ ಬೆಂಗಳೂರಿನ ಮಂದಿಗೆ ಖಾಯಂ ಆಗಿದೆ. ಎಲ್ಲಿಂದಲೋ ಜನ ವಲಸಿಗರಾಗಿ ಇಲ್ಲಿಗೆ ಬರುತ್ತಿದ್ದಾರೆ!, ಏನೇನೋ ವ್ಯವಹಾರ ನಡೆಸುತ್ತಿದ್ದಾರೆ!. ಹಣ ಗಳಿಸುವ ವ್ಯಾಮೋಹತನದಿಂದ ಮನುಷ್ಯತ್ವವನ್ನು ಮರೆತು ವ್ಯವಹರಿಸುತ್ತಿದ್ದಾರೆ. ಈ ಹಿಂದಿನ ಸಂಚಿಕೆಯಲ್ಲಿ ಓಲಾ ಕ್ಯಾಬ್‍ಗಳ ‘ಪೀಕ್ ಚಾರ್ಜಸ್’ ಎನ್ನುವ ಉಲಾಲದ ಆಟ ಮತ್ತು ಅವರ ಕೊಳ್ಳುಬಾಕತನದ ಪೂರ್ತಿ ಚಿತ್ರಣವನ್ನು ನಾವು ನಿಮಗೆ ನೀಡಿದ್ದೆವು. ಅದು ದೊಡ್ಡ ಸುದ್ಧಿ ಕೂಡ ಆಗಿದ್ದನ್ನು ನೀವೂ ಓದಿರಬಹುದು. ಇದೀಗ ಅಂತಹದ್ದೇ ಇನ್ನೊಂದು ಮಾಫಿಯಾ ಮಹಾನಗರದಲ್ಲಿ ಬೀಡು ಬಿಟ್ಟಿದ್ದು, ದಂಧೆಯಂತೆ ಎಲ್ಲಾ ಪಟ್ಟಣಗಳಲ್ಲೂ ಶರವೇಗದಿಂದ ಹರಡುತ್ತಿರುವುದು ನಮ್ಮ ಕಣ್ಣಿಗೆ ಬಿದ್ದಿದೆ. ಅದರ ಒಂದು ಸಮೀಕ್ಷೆಯ ಮಜಲನ್ನು ನಿಮಗೂ ತಿಳಿಸಿ  ಎಚ್ಚರಿಸುವ ಪುಟ್ಟ ಪ್ರಯತ್ನವೇ ಈ ‘ಸಿರಿ ಬುಲೆಟ್ ಮುಲಾಜೆ ಇಲ್ಲ’ ಎನ್ನುವ ಅಂಕಣದ ಮೂಲ ಉದ್ದೇಶ. ಸಾಧ್ಯವಾದರೆ ಓದಿ ಎಚ್ಚೆತ್ತುಕೊಳ್ಳಿ!..
  
 ಏನದು!!? ಎನ್ನುವ ಪ್ರಶ್ನೆಯಾ!?

ಅದುವೇ ‘ಭಿಕ್ಷಾ ಮಾಫಿಯಾ’...

   ಡೈರೆಕ್ಟಾಗಿ ಹೇಳಬೇಕೆಂದರೆ, ಮಹಾನಗರದಲ್ಲಿ ಬಿಕ್ಷುಕರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳಿಂದ ಬಿಕ್ಷೆ ಬೇಡುವುದಕ್ಕಾಗಿಯೇ ಜನ ಬರ್ತಿದ್ದಾರೆ. 
      ಎಲ್ಲೆಲ್ಲಿಂದಲೋ ಜನರನ್ನು ನಗರಕ್ಕೆ ಕರೆತಂದು ಭಿಕ್ಷೆ ಬೇಡುವ ದಂಧೆಯಲ್ಲಿ ಹಣ ಮಾಡಿಕೊಳ್ಳುವ ಮಾಫಿಯಾವೇ ಬೆಂಗಳೂರಲ್ಲಿ ಈಗ ಶುರುವಾಗಿದೆ ಎಂದರೆ ನಂಬ್ತೀರಾ!?.

ಹಾ! ಸ್ವಾಮಿ... ನಂಬಲೇಬೇಕು...!!!

ತಲೆ ಕೆಡುತ್ತಿದೆಯಾ!?...

ಮೇಲೆ ಹೇಳಿದ ಎಲ್ಲಾ ವಿಚಾರಗಳು ಅಪ್ಪಟ ಸತ್ಯ!..

ದಿನನಿತ್ಯದಲ್ಲಿ ನಿಮ್ಮ ಕಣ್ಣಿಗೂ ಭಿಕ್ಷುಕರು ಕಂಡಾಗ, ಎಂತಹ ಸಣ್ಣ ಪುಟ್ಟ ಕೆಲಸಮಾಡಿದರು ಜೀವನ ನಡೆಸಬಹುದಾದ ಇಂದಿನ ಕಾಲದಲ್ಲಿ ಬಿಕ್ಷೆ ಯಾಕೆ ಬೇಡುತ್ತಿದ್ದಾರೆಂದು ಅನೇಕ ಬಾರಿ ನಿಮಗೂ ಅನಿಸಿರಬಹುದು. ಆದರೆ ಇದಕ್ಕೆ ಏನು ಕಾರಣ!? ಬಿಕ್ಷೆ ಬೇಡುವ ಇವರೆಲ್ಲಾ ಯಾರು!? ಎಲ್ಲಿಂದ ಬಂದಿದ್ದಾರೆ!? ಯಾವ ಮೈಮುರಿಯುವ ಕೆಲಸವನ್ನು ಮಾಡದೇ ಬಿಕ್ಷೆಯನ್ನೇ ಯಾಕೆ ಬೇಡುತ್ತಿದ್ದಾರೆ!? ಇತ್ಯಾದಿಗಳ ಬಗ್ಗೆ ಎಂದಾದರೂ ಚಿಂತೆ ಮಾಡಿದ್ದೀರಾ!? ಮಾಡಿಲ್ಲವಾದರೆ ಈ ಓದುವಿಕೆಯ ಒಂದೇ ರೌಂಡಪ್‍ನಲ್ಲಿ ನಾವು ನಿಮಗೆ ಅಚ್ಚರಿಯ ಮಾಹಿತಿ ಕೊಡ್ತೀವಿ ಓದಿ. ನಂತರ ಮನನ ಮಾಡಿಕೊಂಡು ಚಿಂತಿಸಿ...ಬದಲಾಗಿ ; ಬದಲಾಯಿಸಿ...
 
         ಹಲವು ಕಡೆ ವಯಸ್ಸಾದವರು ಅಥವಾ ಹರಕು ಬಟ್ಟೆ ತೊಟ್ಟವರು ಕಾಸು ಕೊಡಿ!!, ಕಾಸು ಕೊಡಿ!! ಎಂದು ಅನೇಕ ಬಾರಿ ಕಣ್ಣೆದುರು ಓಡಾಡಿದ್ದನ್ನು ನೀವು ಗಮನಿಸಿರಬಹುದು. ಅದಷ್ಟೇ ಅಲ್ಲದೇ ಇನ್ನೂ ಕೆಲವು ಕಡೆ ಪ್ರಿಂಟೆಡ್ ಕಾರ್ಡ್‍ಗಳನ್ನು ಹಿಡಿದುಕೊಂಡು ನಾವು ಅನಾಥರು, ಯಾವುದೋ ಅನಾಹುತಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿರುವೆವು ಸಹಾಯ ಮಾಡಿ ಎಂದು ಕನ್ನಡ, ಇಂಗ್ಲೀಷ್, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಬರೆದ ಪ್ರತಿಯನ್ನು ತೋರಿಸಿ ದುಡ್ಡು ಕೀಳುವವರನ್ನು ನೋಡಿರಬಹುದು!. ಅವರ ಕಷ್ಟಗಳು ನಿಜವಿರಬಹುದೆಂದು ನೀವೂ ಸಹಾಯ ಹಸ್ತವಾಗಿ ಅಷ್ಟೋ ಇಷ್ಟೋ ಹಣವನ್ನು ನೀಡಿರಬಹುದು. ಹಾಗೇನಾದರೂ ಮಾಡಿದ್ದೀರೆಂದರೆ ನೀವೂ ಯಾಮಾರಿದ್ದೀರಿ!, ನಿಮ್ಮ ಹಣವನ್ನು ಯಾರೋ ಅನುಕಂಪನದಿಂದ ಎಗರಿಸಿದ್ದಾರೆ ಎಂದರ್ಥ. 
    ನಿಜ!!, ಅವರು ತೋರಿಸುವ, ಎದುರಿಗೆ ಬಂದು ನಾಟಕವಾಡುವ ಯಾವುದೂ ನಡೆದೆ ಇರುವುದಿಲ್ಲ. ಅವ್ಯಾವುದು ನಿಜವೂ ಅಲ್ಲ. ಇದರ ಹಿಂದೆ ಭಿಕ್ಷಾಟನೆಯ ಬಹುದೊಡ್ಡ ಮಾಫಿಯಾವೇ ಇದೆ. ಅದಕ್ಕೂ ಒಬ್ಬ ಒಡೆಯನಿರುತ್ತಾನೆ. ಅವನ ಆಳುಗಳೇ ಆ ಮಕ್ಕಳೋ!, ಮನುಜರೋ!! ಆಗಿರುತ್ತಾರೆ. ಅಥವಾ ಸ್ವಂತ ಉದ್ಯಮವೆನ್ನುವಂತೆ ಮಾಡುತ್ತಿರುತ್ತಾರೆ.

     ನಗರದ ಟ್ರಾಫಿಕ್ ಸಿಗ್ನಲ್‍ನಲ್ಲಿ ವಾಹನ ನಿಲ್ಲಿಸಿದ ತಕ್ಷಣ ಸಂಧಿಗೊಂದಿಯಿಂದ ಮೂರ್ನಾಲ್ಕು ಮಹಿಳೆಯರು ಬೀದಿಗಿಳಿಯುತ್ತಾರೆ. ಕಂಕುಳಲ್ಲೊಂದು ಎಳೆ ಮಗುವನ್ನು ಇರಿಸಿಕೊಂಡು ಅದರ ಕಡೆ ಕೈ ತೋರಿಸಿ ಹಣ ಕೇಳುತ್ತಾರೆ. ಆ ದ್ರಶ್ಯ ಅನೇಕರ ಮನಕಲಕಿ ಕೈಗೆ ಸಿಕ್ಕ ಹಣವನ್ನು ಕೊಡುವಂತೆ ಪ್ರೇರೆಪಿಸುತ್ತೆ. ಆ ಟ್ರಾಫಿಕ್ ಸಿಗ್ನಲ್‍ನಲ್ಲಿ ಇಡೀ ದಿನ ಇದೆ ಕಥೆ ಮುಂದುವರಿಯುತ್ತದೆ. ನೀವು ಇಲ್ಲೊಂದು ವಿಶೇಷತೆಯನ್ನು ಗಮನಿಸಿರಲಿಕ್ಕಿಲ್ಲ!!. ಬೇಕಿದ್ದರೆ ನಾಳೆಯಿಂದಲೇ ಗಮನಿಸಿ... ಕಂಕುಳಲ್ಲಿರುವ ಅವರ ಮಗು ಯಾವಾಗಲೂ ಅರೆ ನಿದ್ರಾವಸ್ಥೆಯಲ್ಲೆ ಇರುತ್ತದೆ!? 

ಚಿಂತಿಸಿ!..

ಯಾಕೆ!?...

     ಈ ವಿಚಾರವನ್ನೇ ಮನಗೊಂಡು ನಮ್ಮ ಸಿರಿ ತಂಡ ಈ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಲು ಮುಂದಾದಾಗ ಸಿಕ್ಕ ದೃಷ್ಟಾಂತವನ್ನು ಕೇಳಿದರೆ ನೀವು ಬೆಚ್ಚಿ ಬೀಳಬಹುದು!..

   
      ನಿಜವಾಗಿಯೂ ಆ ಮಗು ಅವರ ಮಗುವಾಗಿರುವುದೇ ಇಲ್ಲ!. ಅದು ಬಾಡಿಗೆಗೆ ದೊರೆಯುವ ಮಗುವಾಗಿರುತ್ತೆ. ಪ್ರತಿದಿನ ಬೆಳಿಗ್ಗೆ  ದಿನದ ಬಾಡಿಗೆಯಲ್ಲಿ ಮಗುವನ್ನು ಕರೆತರುತ್ತಿದ್ದಾರೆ ಭಿನ್ನಾಣಗಿತ್ತಿಯ ಪ್ರಿಂಟೆಡ್ ಅಮ್ಮಂದಿರು. ಅಷ್ಟೇ ಅಲ್ಲದೇ ಆ ಮಗುವಿಗೆ ಮಂಪರು ಬರುವಂಥ ಔಷಧಿ ಅಥವಾ ಮಧ್ಯವನ್ನು ಕುಡಿಸುತ್ತಾರಂತೆ.  ಅದಕ್ಕಾಗಿಯೇ ಆ ಮಗು ಯಾವಾಗಲೂ ಮಂಪರಲ್ಲೇ ಮಲಗಿರುತ್ತದೆ. ಬಾಡಿಗೆಗೆ ಮಗುವನ್ನು ನೀಡುವಾತ ಅದೆಷ್ಟು ಶ್ರೀಮಂತಿಕೆಯಿಂದ ಬಾಳುತ್ತಿದ್ದಾನೋ ಆ ದೇವರಿಗೆ ಗೊತ್ತು!, ಬಿಕ್ಷೆಯಲ್ಲಿ ದುಡಿಯುತ್ತಿರುವªರಲ್ಲಂತೂ ಚಿಲ್ಲರೆಗೆ  ಬೆಲೆಯೇ ಇಲ್ಲ, ಚಿಲ್ಲರೇ ಕೊಟ್ಟರೂ ಸ್ವೀಕರಿಸುವುದಿಲ್ಲ. ಏನಿದ್ದರೂ ನೋಟೇ ನೀಡಬೇಕು. ಅವರ ಅಕೌಂಟ್‍ಗಳಲ್ಲಿರುವ ದುಡ್ಡು ನಮ್ಮ ನಿಮ್ಮಂತವರಲ್ಲಿಯೂ ಇರಲಿಕ್ಕಿಲ್ಲ ಬಿಡಿ!. ನೋ ಚಿಲ್ಲರೇ!, ಓನ್ಲೀ ಡೆಬಿಟ್ಟು ಕ್ರೆಡಿಟ್ಟು...ಬರೀ ನೋಟು ನೋಟು!!. ಇದು ಎಂಥಾ ಭೀಭತ್ಸವಲ್ಲವಾ!?...ಹಾಡು ಹಗಲ ದಂಧೆಯಲ್ಲವಾ!?.
   
   ಉನ್ನತ ಮಾಹಿತಿಗಳಂತೆ, ಈ ಹಿಂದೆ, ಬೆಂಗಳೂರಿನಲ್ಲಿರುವ ಫೇಕ್ಡ್ ಬಿಕ್ಷುಕರನ್ನು ಹಿಡಿಯಲು ಹೋದಾಗ ಅವರು ಮಕ್ಕಳನ್ನು ಬಿಟ್ಟು ಓಡಿ ಹೋಗಿರುವ ಘಟನೆಗಳು ನಡೆದದ್ದು ಇದೆ ಎಂದು ಖಾಸಗಿ ವರದಿಯೊಂದು ಹೇಳುತ್ತದೆ. ಆ ಮಕ್ಕಳು ಎಲ್ಲಿಯವೋ!? ಯಾರದೋ!? ಒಂದೂ ತಿಳಿದಿಲ್ಲ!, ತಿಳಿಯುವುದು ಇಲ್ಲ!. ಈ ರೀತಿಯ ಬಿಕ್ಷಾಟನೆ ಮಕ್ಕಳ ಕಳ್ಳಸಾಗಣೆಯನ್ನು ಹೆಚ್ಚಿಸುತ್ತಿದ್ದು,    ಸರ್ಕಾರ ಈ ಬಗ್ಗೆ ಎಷ್ಟೇ ಗಮನ ನೀಡಿದರೂ ಅಧಿಕಾರಿಗಳ ನಿದ್ರಾವಸ್ಥೆಯ ವ್ಯವಸ್ಥೆಯಿಂದ ಭಿಕ್ಷೆ ಬೇಡುವ ದಂಧೆ ಇದೀಗ ಮಾಫಿಯಾವಾಗಿ ಬದಲಾಗಿದೆ.

   
        ಇವರಿಷ್ಟೇ ಅಲ್ಲದೇ ಮಂಗಳಮುಖಿಯರೂ ಕೂಡ ಸಿಗ್ನಲ್‍ಗಳಲ್ಲಿ ಚಿತ್ರ ವಿಚಿತ್ರವಾಗಿ ಭಾವ-ಭಂಗಿಗಳನ್ನು ಪ್ರದರ್ಶಿಸಿ ದುಡ್ಡು ಕೀಳುತ್ತಿರುವುದು ಜನರಿಗೆ ಮುಜುಗರ, ಕಿರಿಕಿರಿ ಉಂಟು ಮಾಡುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಭಿಕ್ಷಾ ಕಲೆಕ್ಷನ್‍ನಲ್ಲಿ ಪ್ರತಿ ಒಂದು ಸಿಗ್ನಲ್ ಬಿದ್ದು ಮೂವ್ ಆಗುವ ಹೊತ್ತಿಗೆ 50 ರಿಂದ 100 ರೂಪಾಯಿಯ ಕಲೆಕ್ಷನ್ ಮಾಡಬಹುದಂತೆ!!. ಇದೆಲ್ಲ ಅಕ್ರಮವಲ್ಲದೇ ಇನ್ನೇನು!? ನೀವೇ ಹೇಳಿ!!. 
  ಎಷ್ಟೋ ಕಡೆ ಅನೇಕ ಕಿಡಿಗೇಡಿಗಳು ಮಂಗಳಮುಖಿಯರ ವೇಷ ಧರಿಸಿ ಕಾಸು ಕೀಳುವ ಧಂಧೆಗೆ ಇಳಿದಿದ್ದಾರೆ. ಕೆಲವೊಮ್ಮೆ ಜನರನ್ನು ಬೆದರಿಸಿ ಹಣ ಒಡವೆಗಳನ್ನು ಕಿತ್ತುಕೊಂಡಿರುವ ಘಟನೆಗಳು ನಡೆದಿವೆ. ಅದಕ್ಕಾಗಿ ಎಲ್ಲಿ ಭಕ್ಷತೆ ಕಂಡು ಬರುತ್ತೋ ಅಲ್ಲೇ ಅದರ ನುಂಗುವಿಕೆಯನ್ನು  ಬಲೆ ಹಾಕಿ ತಡೆಯಬೇಕು. ಲೈಂಗಿಕ ಅಲ್ಪಸಂಖ್ಯಾತ (ಮಂಗಳಮುಖಿ)ರಾಗಿರುವವರನ್ನು ಸೇರಿಸಿ, ಜಾಗೃತಿ ಮೂಡಿಸಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು.    
    ಮನುಷ್ಯನ ಹೊಟ್ಟೆಪಾಡೇನು!? ಅವನು ಅದಕ್ಕಾಗಿ ಮಾಡುತ್ತಿರುವುದೇನು!? ಮಾನವನ ನೈತಿಕತೆ ಅಧೋಗತಿಯಾಗಿದೆಯಾ!? 21ನೇ ಶತಮಾನದಲ್ಲಿ ಭಾರತದ ಸಮಾಜ ವ್ಯವಸ್ಥೆ ಗಬ್ಬುನಾರುತ್ತಿದೆಯಾ!? ಈ ಎಲ್ಲದರ ಬಗ್ಗೆ ಪ್ರಜ್ಞಾವಂತಾರಾಗಿ ನಾವು-ನೀವು ಚಿಂತಿಸಬೇಕು.
    ಅಂದು ಅಮ್ಮಾ!!!.., ತಾಯಿ!!!.., ಎಂದು ಮನೆ ಮುಂದೆ ಊಟಕ್ಕೆ ಬೇಕಾಗುವ ಅನ್ನವನ್ನೋ, ಅಕ್ಕಿಯನ್ನೋ ಬೇಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ದುಡ್ಡು ಎನ್ನುವ ಮಾಯಾಂಗನೆ ಎಲ್ಲಾ ರಂಗವನ್ನು ನರಕಕ್ಕೆ ದೂಡುತ್ತಿದೆ, ಮಾಫಿಯಾ ಎನ್ನುವ ಜಾಲ ಎಲ್ಲಾ ರಂಗದಲ್ಲೂ ಹಾಸು ಹೊಕ್ಕಾಗಿದೆ. ಸಮಾಜ ಕೆಡುತ್ತಿದೆ, ಕೆಡಿಸುತ್ತಿದೆ.
   ನಗರದ ರಸ್ತೆಗಳಲ್ಲಿ ಸಣ್ಣಪುಟ್ಟ ಮಕ್ಕಳನ್ನು ಭಯಾನಕವಾಗಿ ನಡೆಸಿಕೊಳ್ಳಲಾಗುತ್ತಿದೆ. ಫುಟ್ ಪಾತ್‍ಗಳಲ್ಲಿ ಬಿಸಿಲು ಧೂಳಿನಲ್ಲಿ ಮಕ್ಕಳನ್ನು ನಿಲ್ಲಿಸಿ ಬಿಕ್ಷೆ ಬೇಡಿಸಲಾಗುತ್ತಿದೆ. ಮಹಾನ್ ಸಿಟಿಗಳಲ್ಲೇ ನಡೆಯುವ ಈ ಬಿಕ್ಷಾ ದಂಧೆಯ ಹಿಂದೆ ಒಂದು ದೊಡ್ಡ ಮಾಯಾಜಾಲವೇ ಇದೆ ಎನ್ನುವುದು ಇವೆಲ್ಲದರ ಮೂಲಕ ನೇರವಾಗಿ ಗ್ರಾಹಿತವಾಗುತ್ತದೆ. ಪೋಲೀಸರು ಇಂತಹ  ಬಿಕ್ಷಾಟಕರ ಮೇಲೆ ತೀವ್ರ ನಿಗಾ ಇಡಲೇಬೇಕಾಗಿದೆ. ಇವೆಲ್ಲದರ ಮೂಲ ಹುಡುಕಿ ಬಹು ಬೇಗ ಸರ್ಕಾರ ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲವಾದರೆ ಮುಂದೊಂದು ದಿನ ಇದೇ ಇನ್ಯಾವುದೋ ಮಾಫಿಯಾ ಜಾಲಕ್ಕೆ ಕರೆದೊಯ್ದು ಮತ್ಯಾವ ಸಂಕಷ್ಟಕ್ಕೆ ಸಿಲುಕಿಸುವುದೋ ಹೇಳಲಸಾಧ್ಯ.
  ಒಟ್ಟಾರೆ ಮೇಲೆ ಹೇಳಿದಂತೆ ಬಿಕ್ಷಾಟನೆ ಎಂಬ ಧಂಧೆಯನ್ನು ನಿರ್ಮೂಲನ ಮಾಡಲು ಪೋಲೀಸರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ. ಅಲ್ಲದೇ ಸಾರ್ವಜನಿಕರಾದ ನೀವುಗಳು ಇವತ್ತಿಂದಲೇ ಬಿಕ್ಷೆ ನೀಡುವ ಗುಣವನ್ನೇ ನಿಲ್ಲಿಸಿ ಅದರ ಹಿಂದೆ ಹೋರಾಡಬೇಕಾಗಿದೆ. ಬಾಲ ನ್ಯಾಯ ಕಾಯಿದೆ ಅನ್ವಯ ಮಕ್ಕಳ ಶೋಷಣೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಹಾಗೂ ಬಿಕ್ಷಾಟನೆಗೆ ದೂಡುವವರ ವಿರುದ್ಧ ಮೊಕದ್ದಮೆ ದಾಖಲಿಸುವ ಎಲ್ಲಾ ಸ್ವಾತಂತ್ರ್ಯವೂ ನಿಮಗೆ ಇದ್ದು, ನಿಮ್ಮ ಕಣ್ಣಿಗೆ ಇಂತಹ ಘಟನೆಗಳು ಕಂಡು ಬಂದರೆ ಶೀಘ್ರ ದೂರು ನೀಡಿ ಸಮಾಜದ ಒಳ್ಳೆಯ ಕಾರ್ಯಗಳಲ್ಲಿ ಭಾಗಿಯಾಗಬೇಕು. ಕೇವಲ ಸರ್ಕಾರ, ಸರ್ಕಾರೇತರ, ಅಧಿಕಾರಿ ಹಾಗೂ ಫೋಲಿಸ್ ವರ್ಗಗಳಿಂದ ಮಾತ್ರಾ ಇವುಗಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರಾದ ನಮ್ಮ-ನಿಮ್ಮ ಕೆಲಸ ಕಾರ್ಯ ಸಹಕಾರವೂ ಅತೀ ಮುಖ್ಯ. 

   
       ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದ ಹಲವೆಡೆ ಈ ಸಮಸ್ಯೆಗಳು ತುಂಬಿ ತುಳುಕುತ್ತಿದ್ದು, ಇವುಗಳ ಬಗ್ಗೆ ಸಂಬಂಧಿಸಿದ ಇಲಾಖೆ ಇನ್ನೂ ಹೆಚ್ಚಿನ ನಿಲುವನ್ನು ತಳೆದು ಸರಿಯಾದ ಕ್ರಮಕೈಗೊಳ್ಳಬೇಕು. ಆಗ ಮಾತ್ರಾ ಈ ಬಿಕ್ಷಾಟನೆಯ ದಂಧೆಗೆ ಕಡಿವಾಣ ಹಾಕಬಹುದು. ಏನಂತೀರಾ!?.
ಮತ್ತೇ ಎಚ್ಚಿರಿಸುತ್ತಿದ್ದೇನೆ ಇಂದಿನಿಂದಲೇ ನೀವು ಬಿಕ್ಷೆ ನೀಡುವುದನ್ನೇ ಸ್ಟಾಪ್ ಮಾಡಿ... ಯಾರೂ ಯಾರ ಜೀವನಕ್ಕೂ ನೆರವಾಗೋದು ಬೇಡ... ಅವರವರ ಹೊಟ್ಟೆ ಬಟ್ಟೆ ಅವರವರೇ ನೋಡಿಕೊಳ್ಳಲಿ...ಈ ಮೂಲಕ ನಾವು ನೀವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ, ಸಮಾಜವನ್ನು ಕೆಟ್ಟ ಕರ್ಮಗಳಿಂದ ವಿಮುಕ್ತಿಗೊಳಿಸೋಣ...

Tuesday, 14 June 2016

ಮಳೆಗೆ ಶುರು ಬಾಲ್ಯದ ನೆನಪ ತೇರು



ಬರಡಾಗಿ ಬೆಂಡಾದ ಭುವಿಗೆ ತಂಪಾಗೋ ಕಾಲ ಸನ್ನಿಹಿತವಿನ್ನೂ..
ಶುರುವಾಗುತ್ತದೆ ಎಲ್ಲೆಲ್ಲೂ ಹನಿಮಳೆಯ ಪುಳಕವಿನ್ನೂ...

ಜಯಂತ್ ಕಾಯ್ಕಿಣಿ ಹೇಳುವಂತೆ "ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು"..
ನಿಜ.! ಎಂಥಾ ಸಾಲುಗಳಲ್ವಾ!, ಇಷ್ಟುದಿನ ಮೇಲೆ ತೇಲಾಡುತ್ತಿದ್ದ ಮೋಡಗಳು, ಇಳೆಗೆ ಹನಿಯಾಗಿ ಮುಗಿಲನ್ನು ತರುವ ಸನ್ನಿಹಿತ ಬರುತ್ತಿದೆ.ಮೋಡಗಳೆಲ್ಲಾ ಮುಗಿಲಾಗುವ ಕಾತರಿಕೆಯಲ್ಲಿ ತಾ ಮುಂದು ನಾ ಮುಂದು ಎಂದು ಬಂದು ಒಬ್ಬೋಬ್ಬರಿಗೆ ಇಷ್ಟ, ಇನ್ನೂ ಕೆಲವರಿಗೆ ಕಷ್ಟವಾಗೋ ಪ್ರಮಯವೂ ಬರುತ್ತಿದೆ..ಆದ್ರೂ ಮಳೆಕೊಡುವ ನೆನಪು, ಖುಷಿ, ಬಹುಹಿಂದಿನ ಪುನರ್ಮಿಲನದ ಭಾವನೆ, ಪುಳಕ, ಇನ್ಯಾವುದು ಕೊಡಲಾರವು ಅಲ್ವಾ..ಅದೇಷ್ಟೋ ನೋವು-ನಲಿವು, ದುಃಖ-ದುಮ್ಮಾನಗಳು ಜೊತೆ ಇದ್ದರೂ ಒಮ್ಮೆ ಹನಿಮಳೆಯಲಿ ಕೈಚಾಚಿ ಭಾವಪೂರ್ಣವಾಗಿ ನೆನೆದರೆ ಅದರ ಹಿತವೆ ಬೇರೆ ಮುಖ್ಯವಾಗಿ ಅದು ನೀಡೊ ಬಾಲ್ಯ ಜೀವನದ ಆ ಸುಖವೆ ಬೇರೆ ಅಲ್ವಾ!.

ಆಗೆಲ್ಲಾ ನಮ್ಮ ಚಿಕ್ಕವಯಸ್ಸು, ಹರಿದಕೊಡೆಯ ಜೊತೆ, ತುಂಬು ಭಾರದ ಚೀಲಾ ಬಗುಲಲ್ಲಿ..ಜೊತೆಗೆ ಮಧ್ಯಾಹ್ನದ ತಂಪು ಊಟದ ಬುತ್ತಿ(ಇಗಿನ ಮಕ್ಕಳದ್ದು ಬಿಸಿಯೂಟ),ಶಾಲೆಯ ಪ್ರಾರಂಭದ ದಿನಗಳೇ ಮಳೆಯ ಚಳಿ..ರಸ್ತೆಯ ಕೆಂಪುಮಣ್ಣಿನ ಪಾಕದ ಮೇಲೆ ಸವಾರಿ ಅಲ್ಲಲ್ಲಿ ಹರಿಯೋ ಸಣ್ಣ ಜರಿಗಳಲ್ಲಿ ಮೀನು ಹಿಡಿದುಬಿಡೊ ಆಟ..ಆಗ ಬರುತಿದ್ದ ಪ್ಯಾರಗಾನ್ ಚಪ್ಪಲಿ.,, ಇದೆ ಮೊದಲಾದವುಗಳ ಸಂಘಮ..

ಸ್ವಲ್ಪ ದುಡ್ಡಿರೋರು ತಮ್ಮ ಮಕ್ಕಳಿಗೆ ಹೊಸ ಕೊಡೆಯನ್ನ ತೆಗೆಸಿಕೊಟ್ಟರೆ, ನಮ್ಮ ಬಡವರ ಪಾಡು ನಡೆದಿದ್ದೆ ಹರಿದ ಹಿರಿದಾದ ಉದ್ದನೆಯ ಹಿಡಿಯ ನಡುವೆ..ಆ ಸುಖವೆ ಒಂಥರ ಬೇರೆ;ನಡುದಾರಿಯಲ್ಲಿ ಗಾಳಿಮಳೆಗೆ ಸಿಕ್ಕ ಛತ್ರಿ ಮೇಲಕ್ಕೆ ಹಾರಿದ್ದು, ಒಂದೇ ಕೊಡೆಯ ನಡುವೆಅಡಿ ನಾಲ್ಕು ಜನರು ಆಶ್ರಯ ಪಡೆದು ಮೈ ಒದ್ದೆಯೊಂದಿಗೆ ಮನೆ ಸೇರಿದ್ದು, ಅನ್ಯಾಯದ ಮರೆಯುವಿಕೆಯ ನಡುವೆ ಶಾಲೆಯಲ್ಲೆ ಛತ್ರಿ ಮರೆತು ಗೆಳೆಯನ ಜೊತೆ ಆಶ್ರಯ ಕೇಳಿದ್ದು, ರಸ್ತೆಯ ಹೊಂಡದ ನೀರನ್ನ ಕಾಲಲ್ಲಿ ಚೊಗೆದು ಖುಷಿಪಟ್ಟಿದ್ದು, ತೊರೆಗಳಲ್ಲಿ ಮೀನು ಹಿಡಿಯುತ್ತಾ ಕುಳಿತು ಸಮಯ ಮರೆತು ಮಾಸ್ಟರ್ ಹತ್ತಿರ ಭೈಸಿಕೊಂಡಿದ್ದು, ಹೊಸ ಕೊಡೆಬೇಕು ಅಂತಾ ಅಮ್ಮನ ಹತ್ತಿರ ಗೋಗೆರೆದಿದ್ದು, ಲೋ ಮಳೆರಾಯ ಇವತ್ತು ಇಡೀ ಬಾ ಶಾಲೆಗೆ ರಜೆ ಕೊಡುತ್ತಾರೆ ಅಂತ ಮಳೆರಾಯನಿಗೆ ಭುವಿಯಿಂದಲೇ ಕರೆಕೊಟ್ಟಿದ್ದು.., ಹೀಗೆ ಹಲವು ಅಂಶಗಳು ಸವಿಮಳೆಯ ಮೆಮೋರಿಯಲ್ ಮೆಮೋರೇಬಲ್ ಆಗೆ ಕುಳಿತು ನಮ್ಮೇದೆಯಲ್ಲಿ ಕಚಗುಳಿಯ ಪುಳಕವೆಬ್ಬಿಸಿದರೆ ಆಶ್ಚರ್ಯ ಪಡಬೇಕಿಲ್ಲಾ ಅಲ್ವಾ .ನಿಮಗೂ ಇಗ ನಿಮ್ಮ ಹಳೆಯ ಮೆಮೋರೆಬಲ್ ನೆನಪಿನ ಸವಿ ಕಾಡುತ್ತಾ ಇದ್ಯೆನೋ ಅಲ್ವ..

ನೀವು ಒಮ್ಮೆ ಸಖತ್ತಾಗಿರೋ ಅನುಭವ ಪಡಿಬೇಕು ಅಂದ್ರೆ ಹನಿ ಮಳೆಯಲ್ಲಿ ಹಾಯಾಗಿ ಬಾನಿಗೆ ಮುಖಚಾಚಿ , ಕಣ್ಮುಚ್ಚಿ ನೆನೆದು ಬಾಲ್ಯದ ಸವಿ ನೆನಪನ್ನ ಸವಿಯಿರಿ..
ಹಾ..,! ಶೀತ ಜ್ವರ ಬರೋತರ ನೆನಿಬೇಡಿ ಅಮೇಲೆ ಕಷ್ಟವಾದೀತು.. ನಿಮಗೆ ಎನನಿಸಿತ್ತು ಮಳೆಯಲ್ಲಿ ನೆನೆದಾದ ಮೇಲೆ ನನಗೂ ತಿಳಿಸಿ..


Monday, 13 June 2016

ಕವಿ ಕನವರಿಕೆ - ಪ್ರೇಮಾಯಣ...


-ಸ್ಯಾಂಡಿ...

ಕಾತರಿಕೆ ಅವಳ ಮನದಲ್ಲಿ ಹನಿಯಂತೆ ಜಿನುಗುತ್ತಿತ್ತು. ಸುಂದರತೆಯ ವೈಭೋಗವು ಹುಟ್ಟಿನಿಂದಲೇ ಬಳುವಳಿಯಾಗಿ ಅವಳಿಗಪ್ಪಿತ್ತು. ಮುಂಜಾನೆ ಬಿಸಿಚಳಿಯ ಗಾವು ನಡುಕತೆ ಸೃಷ್ಟಿಸುತ್ತಿದ್ದರೂ, ಹೊಸ ಭೇಟಿಗೆ, ಹೊಸ ಕಂಪನತೆಗೆ ಬೇಗನೆ ಎದ್ದು ಅಂದಕ್ಕಿಂತ ಅಂದವಾಗಿ ಸಿಂಗಾರ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಳು ಆಕೆ. ಕಾರಣ ಇಷ್ಟೇ ಅರಿಯದ ಪ್ರೀತಿಯಲ್ಲಿ ಬಿದ್ದಿದ್ದ ಅವಳಿಗೆ ನವಿರಾದ ಪ್ರೇಮಾಂಕುರವಾಗಿದ್ದು ಪಕ್ಕದೂರಿನ ಹುಡುಗನ ಜೊತೆ. ಅವರಿಬ್ಬರ ಪ್ರಥಮ ಭೇಟಿಯ ಚಡಪಡಿಕೆಯೇ ಇವಳ ಈ ದಿನದ ಪಯಣಕ್ಕೆ ಹೊಸ ರೂಪದ ಇಂಪಾಗಿತ್ತು.

ಅದೇನೋ ತಳಮಳ, ಅದೇನೋ ನಾಚಿಕೆ, ಕೆಂಪಾದ ಕೆನ್ನೆತುಂಬೆಲ್ಲಾ ಹೊಸ ಅಪ್ಪುಗೆ ದೊರೆಯುವ ವೈಯಾರ, ನಿಂತಲ್ಲಿ ನಿಲ್ಲಲೂ ಬಿಡದೆ ಮನೆಯಿಂದ ನಡೆ ಹೊರಡುವಂತೆ ಮಾಡಿತ್ತು.

 ಆಗಲೇ ಸೂರ್ಯ ಬೆಟ್ಟಗುಡ್ಡಗಳನ್ನು ಸೀಳಿ ಮೇಲೆ ಬಂದಿದ್ದ. ಮೊದಲೇ ನಿರ್ಧರಿಸಿದ್ದ ಸ್ಥಳದಲ್ಲಿ ಅವನು ಕಾಯುತ್ತಿದ್ದ. ಕೈಯಲ್ಲೊಂದು ಪ್ರೇಮ ಪತ್ರ ಹಿಡಿದಿದ್ದಾನೆ. ಕಣ್ಣಿಂದ ದೂರ ಇರುವ ಅವಳನ್ನು ಕಣ್ಮಚ್ಚಿ ನೆನಸಿಕೊಳ್ಳುತ್ತಿದ್ದಾನೆ. ಇವಳೋ ಭಯಪಡುತ್ತಲೇ ಹತ್ತಿರ ಹೋಗಿದ್ದಾಳೆ. ಸಮಯ ಮಿಂಚು ಗುಡುಗುಗಳು ಒಟ್ಟಿಗೆ ಸೇರುವ ಸನ್ನಿಹಿತ... ಇಬ್ಬರೂ ಬೇವತಿದ್ದಾರೆ!... ತುಟಿ ತೊದಲುತ್ತಿದೆ!..ಗಂಟಲು ಸ್ವರ ಕಟ್ಟಿಸುತ್ತಿದೆ!.. ಸೌಂದರ್ಯವರ್ಧಕ ಕರಗಿ ಇವರ ಮಧ್ಯೆ ನಾನಿರಲ್ಲ!!! ನನ್ನ ಅವಶ್ಯಕತೆ ಇಲ್ಲ!!! ಎಂದು ನಾಚಿ ದೂರಸರಿಯುತ್ತಿದೆ!.. ಮಾತನಾಡಬೇಕೆಂದಿದ್ದ ಪದಗಳೆಲ್ಲ ಮೌನದಲ್ಲಿ ನೀನಾಡು!.. ನೀನಾಡು!.. ಎನ್ನುತ್ತಿವೆ. 

      ಬೀಸೋಗಾಳಿಯು, ಇವರ ಬೆವರ ಹನಿಗೆ ಬಾ ತೊಂದರೆ ಮಾಡಬೇಡ ಎಂದು ಆವಿಯಾಗಿಸುತ್ತಿದೆ!..
ಕೊನೆಗೂ ಹುಡುಗನೇ ನಿವೇದಿಸಿದ್ದಾನೆ... ‘ನನ್ನ ಪ್ರತಿ ಹೆಜ್ಜೆಗೂ ನಿನ್ನ ಗೆಜ್ಜೆಯ ಸದ್ದಿರಬೇಕು, ನಿನ್ನ ಪ್ರತಿ ನೋವಿಗೂ ನನ್ನ ಪ್ರೀತಿಯ ಮದ್ದಿರಬೇಕು’...
   ಮುದ್ದಿನ ಹುಡುಗನ ಮುದ್ದು ಮಾತಿಗೆ ಅವಳು ಸೋತು ಸುಣ್ಣವಾಗಿದ್ದಾಳೆ...ಪೆದ್ದುಮುದ್ದಾದ ಪ್ರೀತಿ ಇಬ್ಬರನ್ನು ಬಾಚಿ ತಬ್ಬಿಕೊಂಡಿದೆ...ಸೂರ್ಯನ ಕಿರಣ ನಾಚಿ ಮೋಡ ಸೇರಿದೆ. ಪ್ರಕ್ರತಿಯ ಕಲರವ ಬೆಚ್ಚಿ ಮೌನವಹಿಸಿದೆ...

ಎದುರು ಮನೆಯ ತಾತ ಸತ್ತೋದರು:..


   
ಇಡೀ ಏರಿಯಾಕ್ಕೆ ಅವರೊಂಥರ ಓಲ್ಡ್...ಸದಾ ಮೌನಿ...ಮೊನ್ನೆ ಸತ್ತೋದರು... ಸರಾಗ ಕನ್ನಡ ಬರದಿದ್ದರೂ ಕರ್ನಾಟಕವೇ ನನ್ನ ಮನೆ ಎಂದು ತಿಳಿದ ತಿಳುವಳಿಕ, ಅಂತಿಮವಾಗಿಯೂ ಇಲ್ಲಿಯೇ ಉಸಿರು ಬಿಟ್ಟು ಹೊರಟು ಹೋದ ಈ ಮಣ್ಣಿನ ಅಭಿಮಾನಿ. 
  
        ಸದಾ ಒಂಟಿಯಾಗಿರುತ್ತಿದ್ದ ಅಜ್ಜನನ್ನು ನಾನು ಸುಮಾರು ದಿನದಿಂದ ನೋಡುತ್ತಲೇ ಇದ್ದೆ. ಒಬ್ಬಳು ಹುಡುಗಿ ಅವರನ್ನು ನೋಡಿಕೊಳ್ಳುತ್ತಿದ್ದಳು. ಬಹುಶಃ ಯಾರೂ ಇಲ್ಲವೇನೋ ಅಂದುಕೊಂಡಿದ್ದೆ. ಒಂದಿನ ವಿಷಯ ತಿಳಿಯಿತು!, ತಾತನಿಗೆ ಇಬ್ಬರು ಮಕ್ಕಳು. ಅವರಿಬ್ಬರು ತಾತನ ಜೊತೆ ಇಲ್ಲ. ಬೆಳೆಸಿ, ಓದಿಸಿ ವಿದೇಶಕ್ಕೆ ತಾತನೇ ಕಳುಹಿಸಿದ್ದರಂತೆ. ಮಕ್ಕಳ ವಾಸ ಯಾವಾಗ ಹೊರದೇಶದಲ್ಲೇ ಫಿಕ್ಸ್ ಆಯ್ತೋ!, ಅಂದಿನಿಂದ ಅವರು ಒಂಥರಾ ತಾತನಿಂದ ಹೊರಗಿದ್ದರು.

ನಾನು ದಿನಾ ಬೆಳಿಗ್ಗೆ ಎದ್ದು ಆಫೀಸ್‍ಗೆ ಹೊರಡೋ ಮುಂಚೆ ಮನೆಯ ಹೊರಗಿನ ಅಂಗಳದಲ್ಲಿ ಕುಳಿತಿರುತ್ತಿದ್ದ ತಾತ ದಿನಾಲೂ ಮುಗುಳ್ನಗೆ ಬೀರುತ್ತಿದ್ದರೇ ವಿನಃ, ಎಂದಿಗೂ ನನ್ನ ಅವರ ನಡುವೆ ಫೇಸ್ ಟು ಫೇಸ್ ಮಾತುಗಾರಿಕೆಯೇ ಆಗಿರಲಿಲ್ಲ.
ನನ್ನದು ಒಂಥರಾ ಮೌನ!.. ಅವರದು ಇನ್ನೊಂದು ಬಗೆಯ ಮೌನ!!. ಮಾತನಾಡಬೇಕು ಅಂದುಕೊಂಡಾಗೆಲ್ಲಾ ಆಫೀಸ್ ಲೇಟಾಗುತ್ತೆ!!, ಎನ್ನುವ ಸಮಯದ ಭಯದಿಂದಲೋ!, ಏನಿರುತ್ತೆ ಮಾತನಾಡಲು ಎನ್ನುವ ಕಾತುರತೆ ಇರದೆಯೋ!, ಮತ್ತೆ ಮಾತಾನಾಡೊಣ ಎನ್ನುವ ಭವಿಷ್ಯದ ಬಂಧದಿಂದಲೋ! ಹಾಗೆ ಬೈಕ್ ಸ್ಟಾರ್ಟ್ ಮಾಡಿ ಅವರೆದುರೇ ದಿನಾಲೂ ಪಯಣಿಸುತ್ತಿದ್ದೆ. ಆದರೆ ಉದ್ದನೆಯ ದಾರಿ ಎಡಕ್ಕೆ ತಿರುಗಿ ನನ್ನ ಬಿಂಬ ಮಾಯವಾಗುªವÀರೆಗೂ ದುರುಗುಟ್ಟಿಕೊಂಡು ಬೆನ್ನನ್ನೇ ನೋಡುತ್ತಿದ್ದ ತಾತ ಎಂದೂ ನನ್ನ ಬೈಕ್ ರೈಡ್ ಬಗ್ಗೆಯಾಗಲಿ, ಟೈಮಿಂಗ್‍ಗಾಗಲಿ, ನಡೆದುಕೊಳ್ಳುತ್ತಿದ್ದ ರೀತಿಗಾಗಲಿ ಎಲ್ಲೂ ಯಾವ ಬೇಸರಿಕೆಯನ್ನೂ ಕಂಡಿರಲಿಲ್ಲ. ಯಾಕೆಂದರೆ ಅವರು ಒಂದಿನವೂ ನನ್ನನ್ನು ಬೇರೊಬ್ಬ ಹುಡುಗ ಎನ್ನುವಂತೆ ನೋಡಿರಲಿಲ್ಲ.

         
   ಅವರೊಂಥರ ಮೌನಿಯಾಗಿದ್ದರು!!. ಉದ್ದ ಮೀಸೆ, ದಪ್ಪ ದೇಹ, ಕಟ್ಟುಮಸ್ತಾದ ತೋಳು ಎಲ್ಲವೂ ಈಗಲೂ ಹಾಗೆ ಮನದ ಗೋಡೆಯಲ್ಲಿ ವ್ಯಕ್ತಿಚಿತ್ರ ಅಚ್ಚೊತ್ತಿದಂತಿದೆ.  ಆದರೆ ಮೊನ್ನೆ ಮೊನ್ನೆ ಇದ್ದ ಅವರೆದುರಾಗುವಿಕೆಯ ಉಪಸ್ಥಿತಿ ಇಂದು ಆ ಅಂಗಳದಲ್ಲಿಲ್ಲ ಅಷ್ಟೆ...

          ಹೊರದೇಶಗಳಲ್ಲಿ ಮಕ್ಕಳಿದ್ದ ಪಕ್ಷಕ್ಕೋ ಅಥವಾ ತನ್ನ ಒಡನಾಟಕ್ಕೆ ಸಾಥ್ ಕೊಡುತ್ತವೇ ಎನ್ನುವ ಆಸೆಗೋ!, ಏನೋ!... ಎರಡು ನಾಯಿಗಳನ್ನು ಮುದ್ದಿನಿಂದ ಸಾಕಿದ್ದರು. ಇದೀಗ ಅವುಗಳು  ಅನಾಥವಾಗಿವೆ. ಇಂದು ನಾ ಪಾರ್ಕಿಂಗ್‍ಗೆ ಬಂದು ಬೈಕ್ ನಿಲ್ಲಿಸುವಾಗ ಅವುಗಳು ಗೊಳೋ ಎಂದು ಅಳುತ್ತಾ ಕೂಗುತ್ತವೆ. ಸಾಂತ್ವಾನ ಹೇಳೋಣ ಅಂದರೆ ಏನೆಂದು ಹೇಳಲಿ... ಬಹುಶಃ ತಾತ ಸತ್ತಿರುವ ವಿಚಾರ ಅವುಗಳಿಗೂ ತಿಳಿಯಿತೋ ಏನೋ...ಎಂದು ಸುಮ್ಮನಾಗುವೆ...ದಿನಾ ಸಂಜೆ ಬೆಳಿಗ್ಗೆ ನನ್ನ ನಾ ಬೈಕ್ ಹತ್ತಿರ ಹೋದಾಗ ಅವು ಮತ್ತೆ ಮತ್ತೆ ಕೂಗುತ್ತಿವೆ. ಬಿಳಿ ಮೈಯ ಟಾಮಿಯಂತೂ ಅಜ್ಜನ ಉಪಸ್ಥಿತಿ ಕಾಣದೆ ಕಂಗೆಟ್ಟಿದಂತಿದೆ!.. 

        ಪಕ್ಕದ ಮನೆಯ ಅಂಕಲ್ ಹೇಳುತ್ತಿದ್ದಾರೆ, ತಾತ ಮೊದಲು ಐದಾರು  ನಾಯಿ, ಹತ್ತಿಪ್ಪತ್ತು ಕೋಳಿಗಳನ್ನು ಸಾಕಿದ್ದರಂತೆ...ಇದೀಗ ಆರೋಗ್ಯ ಸ್ಥಿತಿಯ ಹದಗೆಡುವಿಕೆಯಿಂದಾಗಿ ಅವುಗಳಂಕಿಯನ್ನು ಕಡಿಮೆಗೊಳಿಸಿದ್ದರಂತೆ...ಡೆಹರಾಡೂನ್ ಮೂಲದಿಂದ ಇಲ್ಲಿಗೆ ವಲಸೆ ಬಂದು, ಕನ್ನಡ ಕಲಿತು, ಇಲ್ಲಿಯೇ ಮನೆ ಕಟ್ಟಿ ವಾಸವಾಗಿದ್ದ ಅವರು ಮೊದಲೆಲ್ಲ ದುಡಿದ ಅರ್ಧದಷ್ಟನ್ನು ಪ್ರಾಣಿ ಪಕ್ಷಿಗಳಿಗೆ ಖರ್ಚುಮಾಡುತ್ತಿದ್ದರಂತೆ. ‘ಅವರು ಯಾಕೆ ಸೈಲೆಂಟ್ ಆಗಿ ಇರುತ್ತಿದ್ದರು’!? ಎನ್ನುವ ನನ್ನ ಪ್ರಶ್ನೆಗೆ, ಮದುವೆಯಾಗಿ ಎರಡು ಮಕ್ಕಳು ಹುಟ್ಟಿ, ಸ್ವಲ್ಪ ಸಮಯದಲ್ಲೇ ಹೆಂಡತಿ ಅನಾರೋಗ್ಯದಿಂದ ಸತ್ತಿದ್ದು ತಾತನ ಸೈಲೆಂಟ್ ನೆಸ್‍ಗೆ ಕಾರಣವಿರಬಹುದೆನೋ! ಎನ್ನುತ್ತಿದ್ದಾರೆ ಏರಿಯಾ ಮಂದಿ.
ಮಕ್ಕಳ ಜೀವನವನ್ನು ಚೆನ್ನಾಗಿರುವಂತೆ ನೋಡಿಕೊಂಡಿದ್ದ ತಾತ ಮನಸ್ಸು ಮಾಡಿದ್ದರೆ ಇನ್ನೊಂದು ಮದುವೆಯಾಗಬಹುದಿತ್ತು ಆದರೆ ಮಕ್ಕಳಿಗಾಗಿ ಮದುವೆಯನ್ನೆ ಮಾಡಿಕೊಳ್ಳಲಿಲ್ಲ ಎಂಬುದು ಅವರ ಒಡನಾಡಿಯೊಬ್ಬರ ಮಾತು.

        ಏನಿದ್ದರೂ ಎಲ್ಲವೂ ಉಸಿರಿರೋವರೆಗೆ ಅನ್ನುವ ಮಾತು ನಿಜ ಅನಿಸುತ್ತದೆ. ಮೊನ್ನೆಯವರೆಗೂ ದಿನಾ ಕಾಣುತ್ತಿದ್ದ ತಾತನ ಖುರ್ಚಿ, ಅಂಗಳ ಇಂದು ಅವರಿಲ್ಲದೇ ಖಾಲಿ ಹೊಡೆಯುತ್ತಿದೆ. ನೆನಪು ಗಿರಕಿಯಂತೆ ಬಡಿ ಬಡಿದು ಮನ ನೋಯಿಸುತ್ತಿದೆ.  ಈ ನೋವಲ್ಲಿ ನನ್ನಜ್ಜನು ನೆನಪಾಗುತ್ತಿದ್ದಾರೆ.  

ನಮ್ಮ ವ್ಯಕಿತ್ವಗಳೆಲ್ಲ ರೂಪುಗೊಂಡಿದ್ದು ಅಜ್ಜಂದಿರಿಂದಲೇ. ಅವರ ಅನುಭವ, ಅವರ ಕಥೆಗಳು, ಅವರ ಎದೆಗಾರಿಕೆ ಇತ್ಯಾದಿಗಳೆಲ್ಲವೂ ನಮಗಂದು ವೈವಿಧ್ಯಮಯವಾಗೆÉೀ ಜೀವನ ರೂಪಿಸಿದ್ದವೆಂದರೆ ತಪ್ಪಿಲ್ಲ. ಇವತ್ತು ಎಷ್ಟೇ ಉನ್ನತ ವ್ಯಾಸಂಗ ಮುಗಿಸಿ ಬದುಕು ಕಟ್ಟಿಕೊಂಡಿದ್ದರೂ ನನಗೆ ಸಮಾಜದಲ್ಲಿ ಮಾನವೀಯತೆಯನ್ನು ಕಲಿಸಿಕೊಟ್ಟಿದ್ದು ಅಜ್ಜನ ಕತೆಗಳೇ ಹೊರತು ಇಂದು ನಾವು ಓದುತ್ತಿರುವ ಸ್ಟೋರಿಗಳಲ್ಲ.

     ಶಾಲೆಗಳಲ್ಲಿ ಬೇಸಿಗೆ ರಜೆ ಬಂದರೆ ಅಜ್ಜನ ಮನೆಗೆ ಹೋಗುವುದು, ಅಜ್ಜಿಯಿಂದ ಕೈ ತುತ್ತು ತಿನ್ನಲು ಹವಣಿಸುವುದು, ರಾತ್ರಿಯಾದರೆ ಕಥೆ ಹೇಳಿ ಮಲಗಿಸಿ ಎಂದು ದೊಂಬಾಲು ಬೀಳುವುದೆಲ್ಲ ಇಂದು ಕನಸಷ್ಟೆ. ನನ್ನಜ್ಜ ಕತೆ ಹೇಳುತ್ತಿದ್ದಾಗಂತೂ ನಾನು ಈ ಭೂಮಿ ಮೇಲಿರುವುದನ್ನೆ ಮರೆತು ಕಲ್ಪನಾ ಲೋಕದಲ್ಲಿ ವಿರಹಿಸುತ್ತಿದ್ದೆÉ. ಅಜ್ಜ ಕತೆ ಕಟ್ಟಿ ಹೇಳುವ ರೀತಿಯೇ ಹಾಗಿತ್ತು. ಕತೆಯೊಳಗೆ ತಾವೇ ಪ್ರವೇಶಿಸಿಕೊಂಡು ನಮ್ಮನ್ನು ಅಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲದೇ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ  ತಾತ ಮತ್ತು ಅವರ ಗೆಳೆಯರು ಸಿಡಿದು ನಿಂತಿದ್ದು, ಚಳ್ಳೆಹಣ್ಣು ತಿನ್ನಿಸಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದು, ಹೀಗೆ ಹೋರಾಟದ ಬದುಕನ್ನು ಹೇಳುತ್ತಿದ್ದಾಗ ನಮ್ಮ ಕಣ್ಣ ಮುಂದೆಯೇ ಅವೆಲ್ಲ ನಡೆದಂತಿರುತ್ತಿತ್ತು.

          ಬೇಸಿಗೆ ರಜೆಯ ದಿನಗಳಲ್ಲಿ ಅಜ್ಜನ ಬೆನ್ನ ಹಿಂದೆ ತಿರುಗಿ ಕಾಲ ಕಳೆಯುತ್ತಿದ್ದ ನನಗೆ, ಈಗಲೂ ಅವರು ಬಾಳಿ ಬದುಕಿದ್ದ ಮನೆಗೆ ಹೋದೆನೆಂದರೆ ಹಳೆಯ ನೆನಪುಗಳೆಲ್ಲ ಕಾಡದೆ ಇರದು. ಕೆರೆ, ಗದ್ದೆ, ಬೀದಿಯಲ್ಲಿರುವ ದೇವರ ಕಲ್ಲು, ಕಾಡಿಗೆ ಹೋಗುತ್ತಿದ್ದಾಗ ವಿರಾಮ ಪಡೆಯಲು ನಿಲ್ಲುತ್ತಿದ್ದ ಗುತ್ತುಗಳು, ರಾತ್ರ್ರಿ ಬೇಟೆಗೆ ಸಜ್ಜಾಗುತ್ತಿದ್ದಾಗ, ‘ನೀನಿನ್ನು ಚಿಕ್ಕವನು ಇಲ್ಲೇ ಇರು ಬರುವುದು ಬೇಡ ನಾನು ಶಿಕಾರಿ ಮಾಡಿಕೊಂಡು ಬರುವೆ.. ಕಾಯುತ್ತಿರು’... ಎಂದು ಅಜ್ಜಿಯ ತೋಳ ತೆಕ್ಕೆಯಲ್ಲಿ ನನ್ನ ಮಲಗಿಸಿ, ರಾತ್ರಿಯಿಡಿ ಕಾಡಿನಲ್ಲಿ ಪ್ರಾಣಿಗಳಿಗಾಗಿ ಬಲೆ ಬೀಸಿ ಮೊಮ್ಮಗನಿಗೆ ಮಾಂಸದೂಟ ಹಾಕಲು ಓಡಾಡುತ್ತಿದ್ದ ನನ್ನಜ್ಜ ಇಂದಿಗೂ ನನಗೆ ಇತಿಹಾಸ.

     ಪ್ರತಿದಿನ ಸಂಜೆ ‘ವಂದಿಪೆ ನಿನಗೆ ಗಣನಾಥ’ ಎಂದು ಪ್ರಾರಂಭವಾಗುವ ಭಜನೆಯ ಪರಿಪಾಠವನ್ನು ಹೇಳಿಕೊಟ್ಟಿದ್ದ ತಾತ, ಹಳ್ಳಿಯಲ್ಲಿ ಸುದೀರ್ಘ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಕರೆದುಕೊಂಡು ಹೋಗಿದ್ದ ನೆನಪು ಇದೆ ನನಗೆ. ಆಗೆಲ್ಲ ಚಳಿಯಾಗುತ್ತೆ! ಎಂದು ಅವನ ಹೆಗಲ ಮೇಲಿದ್ದ ಟವೆಲ್‍ನ್ನು ನನ್ನ ತಲೆ ಮೇಲೆ ಹೊದೆಸುತ್ತಿದ್ದ ತಾತನ ಬಗ್ಗೆ ಬರೆಯಹೊರಟರೇ ಬರವಣಿಗೆ ಮುಗಿಯೋದಿಲ್ಲ.

         
     ನಮ್ಮ ಸುತ್ತಮುತ್ತಲಿನ ಇತಿಹಾಸ, ಪೌರಾಣಿಕ ಮಹತ್ವವನ್ನು ಯಾವುದೇ ಪಠ್ಯಕ್ರಮಗಳ ಓದಿಲ್ಲದೇ ಅಜ್ಜ ಕತೆಗಳ ಮೂಲಕ ತಿಳಿಯುತ್ತಿದ್ದ ನನಗೆ ಇಂದಿನ ಮಕ್ಕಳಿಗೂ ಅಜ್ಜಂದಿರ ಅಪ್ಪುಗೆ ಬೇಕು ಎನಿಸುತ್ತಿದೆ.

       ಇಂದಿನ ದಿನಗಳಲ್ಲಿ ಅಜ್ಜ ಮೊಮ್ಮಕ್ಕಳ ಗಾಢ ಸಂಬಂಧ ಮೊದಲಿನ ಹಾಗೇ ಕಂಡು ಬರುವುದಿಲ್ಲ. ಇವತ್ತಿನ ಮಕ್ಕಳು ಅಜ್ಜ-ಅಜ್ಜಿಯರ ಜೊತೆ ಬೆರೆಯಲು ತಂದೆ ತಾಯಂದಿರು ಬಿಡುತ್ತಿಲ್ಲ. ಯಂತ್ರದ ರೀತಿ ಬೆಳೆಸುತ್ತಿದ್ದಾರೆ. ಮೊದಲೆಲ್ಲ ಹಿರಿಯರ ಪ್ರಭಾವ ಮಕ್ಕಳ ಬೆಳವಣಿಗೆಗೆ ಪೂರಕವಾಗಿತ್ತು. ಇಂದು ಬೇಸಿಗೆಯ ಶಿಬಿರಗಳಿಗೆ ಮಕ್ಕಳನ್ನು ದೂಡುವ ಪಾಲಕರು ಮಕ್ಕಳನ್ನು ಮನೆಯಲ್ಲೇ ಕ್ರೀಯಾಶೀಲರನ್ನಾಗಿಸುವ ಪ್ರಯತ್ನದಲ್ಲಿ ಸಂಬಂಧಗಳ ಪ್ರೀತಿ ತೋರದೆ ಕೂಡಿ ಹಾಕುತ್ತಿದ್ದಾರೆ. ಮಕ್ಕಳು ಮತ್ತು  ಹಿರಿಯರ ನಡುವೆ ಪಾಲಕರು ತಡೆಗೋಡೆಯಾಗಿರದೆ ಬೆಸೆಯುವ ಕೊಂಡಿಯಾಗಬೇಕು. ಇಂದು ಶಾಲೆ ಮುಗಿಸಿ ಮನೆಗೆ ಬರುವ ಮಕ್ಕಳು ಟ್ಯೂಶನ್, ಟಿ.ವಿ ಇತ್ಯಾದಿಗಳಲ್ಲೇ ಸಮಯ ಹಾಳುಮಾಡುವುದನ್ನು ನಿಲ್ಲಿಸಿ ಹಿರಿಯರ ಜೊತೆ ಬೆರೆತು ಭಾಂಧವ್ಯ ಸವಿಯಬೇಕು ಆಗಲೇ ಮಕ್ಕಳ ವ್ಯಕ್ತಿತ್ವ, ಕಲ್ಫನಾ ಶಕ್ತಿ, ಕ್ರೀಯಾಶೀಲತೆ ಚಿಗುರಲು ಸಾಧ್ಯ.
ಏನೇ ಇರಲಿ...ನನ್ನ ತಾತನು ಇಂದು ನನ್ನ ಬಳಿ ಇಲ್ಲ. ಊರಿಂದ ಉದ್ಯೋಗವರಸಿ ಬೆಂಗಳೂರಿಗೆ ಬಂದ ನಂತರ ಎದುರು ಮನೆಯ ತಾತನೇ ನನ್ನವರಾಗಿ ಮನಸೆಳೆಯುತ್ತಿದ್ದರು. ಆದರೆ ಅವರ ಉಪಸ್ಥಿತಿ ಇಂದಿಲ್ಲ. ದಿನಾ ಬೆಳಿಗ್ಗೆ ಸಿಗುತ್ತಿದ್ದ ಸ್ಮೈಲ್ ಫೇಸ್ ಎದುರಿಲ್ಲ...

        ಇಂದು ಎಲ್ಲವೂ ಖಾಲಿ ಖಾಲಿಯಾಗಿ, ನೆನಪುಗಳು ಮಾತ್ರಾ ಉಳಿದಿದೆ ಜೋಲಿಯಾಗಿ...ಎದುರು ಮನೆಯ ತಾತನನ್ನ ಇಂದು ಮಾತನಾಡಿಸಬೇಕು ಅನ್ನಿಸುತ್ತಿದೆ!.  ಆದರೆ ಅವರೇ ಇಲ್ಲ. ಅವರಿಲ್ಲದ ಆ ಜಾಗ ಮತ್ತೆ ಮತ್ತೆ ಕಣ್ಣನ್ನು ಆಕರ್ಷಿಸಿ, ಹೃದಯ ಕರಗಿಸುತ್ತಿದೆ. ಕರಗುವ ಭಾವ ಕಣ್ಣಂಚಲಿ ನೀರು ತರಿಸುತ್ತಿದೆ...ಮಕ್ಕಳು ತಾತನ ಅಂತ್ಯಕ್ರಿಯೆಯ ನಂತರ ಪರಲೋಕಕ್ಕೆ ವಾಪಾಸಾಗಿದ್ದಾರೆ. ತಾತನನ್ನ ನೋಡಿಕೊಳ್ಳುತ್ತಿದ್ದ ಹುಡುಗಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದಾಳೆ. ಅಂಗಳ ಬೀಕೋ ಎನ್ನುತ್ತಿದೆ...

Thursday, 9 June 2016

ಸಿರಿ ಬುಲೆಟ್ - ನಾಮ ಹಾಕುವ ಓಲಾ...

ಊಲಾಲಾ ಆಡುವ ಓಲಾ...
ಅಯ್ಯೋ ಓಲಾ ಇರುವುದು ಬಡವರ ಪಾಲಿಗಲ್ಲಯ್ಯ!!.
‘ಪೀಕ್ ಚಾರ್ಚ್’ ಎಂದು ಫಜೀತಿಗೆ ಸಿಲುಕಿಸುತ್ತಾರೆ ಹುಷಾರ್!!!
ಇಂಗ್ಲೀಷ್ ಓದಿ ಅರ್ಥೈಸಿಕೊಳ್ಳಲು, ಬಂದಿಲ್ಲವೆಂದರೆ ನಿಮ್ಮ ಕತೆ ಗೋವಿಂದ..! 

          ಮಾರುಕಟ್ಟೆಗಿಂದು ಬರಗಾಲವಿಲ್ಲ... ಎಲ್ಲ ರಂಗದಲ್ಲಿಯೂ ಅದರ ವ್ಯಾಪಕತೆ ಜೋರಾಗಿದೆ, ಹಬ್ಬಿಕೊಂಡಿದೆ!..ತಬ್ಬಿಕೊಂಡಿದೆ!.. ಅನೇಕ ವರ್ಷಗಳಿಂದ                                                                                                                                                                                                                                                                ಅಂತ್ಯವಿಲ್ಲವೆಂಬಂತೆ ಲಾಭ ನಷ್ಟಗಳ ಮೆಟ್ಟಿಲ ಮಜಲುಗಳನ್ನು ಹತ್ತಿಕೊಂಡು ಸಾಗುತ್ತಲೇ ಇದೆ. ಪ್ರಾರಂಭದಲ್ಲಿ ಮಾರುಕಟ್ಟೆ ಎನ್ನುವ ಪದ ಸಂಚಾರವಾಗಿದ್ದು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಕೋಡು-ಕೊಂಡುವಿಕೆಯಲ್ಲಾದರೂ, ಔಧ್ಯಮಿಕ ಕ್ರಾಂತಿಯ ನಂತರದ ದಿನಗಳಲ್ಲಿ ಮಾನವ ಸ್ಮಾರ್ಟ್ ಥಿಂಕಿಂಗ್ ನಡೆಸುತ್ತಾ, ಎಲ್ಲಾ ವ್ಯವಹಾರದ ಪ್ರಗತಿ ಕಂಡುಕೊಳ್ಳಲು ಮಾರ್ಕೆಟಿಂಗ್ ವ್ಯಾಕುಲತೆಯ ಸಂಚಲನ ಸೃಷ್ಟಿಸಿಕೊಂಡ.

         ದೇಶ ಪ್ರಗತಿಯಲ್ಲಿದೆ ನಿಜ!, ಬೆಳವಣಿಗೆ ಕಾಣುತ್ತಿದೆ ಅದೂ ನಿಜ!!. ಅನೇಕಾನೇಕ ಕಂಪೆನಿಗಳು ಮಾರುಕಟ್ಟೆಯ ಸಹಾಯದಿಂದ ಇಂದು ತಲೆಯೆತ್ತಿ ನಿಂತು ದೇಶದ ಪ್ರಗತಿಯಲ್ಲಿ ಸಕ್ರೀಯವಾಗಿವೆ. ಒಂದರ ಹಿಂದೆ ಒಂದು ಎಂಬಂತೆ ಲಕ್ಷಗಟ್ಟಲೇ ಕಂಪೆನಿಗಳು ಮಾರುಕಟ್ಟೆಯ ಲಾಭದಿಂದ ಬೀಗಿ ಬೆಂಡಾಗದೆ ನೆಲೆನಿಂತಿವೆ. ಆದರೆ ಆ ಲಾಬಾಂಶಗಳ ಅತೀ ಆಸೆ ಇದೀಗ ಅಕ್ರಮಗಳು ತಾಂಡವವಾಡುವಂತೆ ಮಾಡಿದೆ. ಸಾವಿರ ಎನ್ನುವಂತಹ ಲಾಭಾಂಶ ಲಕ್ಷಕ್ಕೇರಿಸಬೇಕು ಎನ್ನುವ ದುರಾಸೆಗಳಿಂದ ಸಾಮಾನ್ಯ ವರ್ಗದ ಜನತೆಯನ್ನು ಬಂಡವಾಳ ವರ್ಗ ಯಾಮಾರಿಸುತ್ತಿದೆ. ಅಂತಹ ಒಂದು ಲೇಟೆಸ್ಟ್ ವಂಚನೆಯ ಮಾಹಿತಿಯೇ ಈ ಲೇಖನ. 
ಯಾಮಾರಬೇಡಿ ಹುಷಾರಾಗಿರಿ...

     ಇಂತಹದೊಂದು ಆಕ್ರಮಣಶೀಲತೆ ಸೃಷ್ಟಿಯಾಗುತ್ತಿರುವುದು ಬೇರೆಲ್ಲೂ ಅಲ್ಲ, ‘ಬಡವರ ಟ್ಯಾಕ್ಸಿ’, ‘ಕಡಿಮೆ ಬಾಡಿಗೆಯಲ್ಲಿ ಸರ್ವರೂ ಚಲಿಸಿ’ ಎಂಬಂತ ಘೋಷವಾಕ್ಯವನ್ನಿಟ್ಟು ಮಾರುಕಟ್ಟೆಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವಾಹನಗಳೊಂದಿಗೆ ಸವಾರಿ ಆರಂಭಿಸಿದ ‘ಓಲಾ ಕ್ಯಾಬ್’ ಸರ್ವಿಸ್‍ನಲ್ಲಿ!..
ಎಸ್!.. ನಿಜ...

ನಂಬಲಾಗುತ್ತಿಲ್ಲವಾ!? ನಂಬಲೇಬೇಕು!..
    ಹಾಗಿದೆ-ಹೀಗಿದೆ!, ಆ ಸೇವೆ ಇದೆ-ಈ ಸೇವೆ ಇದೆ!., ಎಂದು ನಂಬಿಸಿ ಸಾವಿರಾರು ಜನರನ್ನು ತನ್ನತ್ತ ಸೆಳೆದು ಆ್ಯಪ್ ಎನ್ನುವ ಮಾಯಾಜಾಳದಲ್ಲೇ ಪಿಕ್ ಅಪ್ ಡ್ರಾಪ್ ಎನ್ನುವ ಆಟ ಆಡಿ, ನಂಬಿಸಿ ಇದೀಗ ಹೊಸ ಹೊಸ ಪ್ಲಾನ್ ಗಳ ಅಪ್ ಡೇಟ್ ನಿಂದ ಕತ್ತು ಕುಯ್ಯಲು ಮುಂದಾಗಿದೆ ಓಲಾ ಎನ್ನುವ ಒಡೆಯನ ಕಾರು.

ಉದಾಹರಣೆ ಕೊಡ್ತೀನಿ ಓದಿ:
   ತೀರಾ ಮೊನ್ನೆ ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೆಂದುಕೊಂಡಿದ್ದ  ಆಕಾಶ್ ಎಂಬ ವ್ಯಕ್ತಿ ಮಾಮೂಲಿಯೆಂಬಂತೆ ಬೆಳಿಗ್ಗೆ 5:50 ರ ಸುಮಾರಿಗೆ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಕೋರಮಂಗಲದಿಂದ   ಏರ್ ಪೋರ್ಟ್‍ಗೆ ಸಾಗಿದ್ದ. ಅಲ್ಲಿಂದಲ್ಲಿಗೆ ಸುಮಾರು 50 ಕಿಲೋಮೀಟರ್ ದೂರ ಟ್ಯಾಕ್ಸಿ ಪ್ರಯಾಣ ಆಗಿರಬಹುದು. ಏರ್‍ಪೋರ್ಟ್ ತಲುಪಿದ ನಂತರ ಆಕಾಶ್‍ಗೆ ಟ್ಯಾಕ್ಸಿ ಬಿಲ್ ನೋಡಿ ಗಾಬರಿ!!. ಸಾಮಾನ್ಯವಾಗಿ ಅಬ್ಬಾಬ್ಬಾ ಅಂದರೆ 800 ರೂಪಾಯಿಯ ಒಳಗೆ ಕಾಣಿಸಬೇಕಾಗಿದ್ದ ಬಿಲ್ ಮೊತ್ತ ಬರೋಬ್ಬರಿ 2,767 ರೂ ತೋರಿಸುತ್ತಿತ್ತು. ಕ್ಷಣಾರ್ಧದಲ್ಲಿ ತೀವ್ರ ವಿರೋಧದ ನಡುವೆ ಸಿಡಿದೆದ್ದ ಆಕಾಶ್, ಕ್ಯಾಬ್‍ನ ಡ್ರೈವರ್ ಮೇಲೆ ಜಗಳಕಾಯ್ದರು ಯಾವ ಪ್ರಯೋಜನವಾಗದೆ ಬಿಲ್ ಪೇಮೇಂಟ್ ಮಾಡಲೇಬೇಕಾಯಿತು. ಓಲಾ ಕಸ್ಟಮರ್ ಕೇರ್‍ಗೆ ಫೋನ್ ಮಾಡಿ ವಿಚಾರಿಸಿದರೆ ಅವರ ಉತ್ತರ, ಸರ್ ನಿಮಗೆ ‘ಪೀಕ್ ಚಾರ್ಚಸ್’ ಅಪ್ಲೈ ಆಗಿದೆ, ಪೀಕ್ ಆಪ್ಶನ್‍ನಲ್ಲಿ ನೀವು ಬುಕ್ ಮಾಡಿದ್ರಿ!... ಡಿಸ್ ಪ್ಲೇ ಮೆಸೇಜ್ ಓದಿ ನೋಡಿ ನೀವು ಕ್ಯಾಬ್ ಬುಕ್ ಮಾಡಬೇಕಿತ್ತು. ಏನೂ ಮಾಡಲಾಗುವುದಿಲ್ಲ ಪೇ ಮಾಡಲೇಬೇಕು ಎಂದು ಕೈತೊಳೆದುಕೊಂಡಿದ್ದಾರೆ. ಲೆಕ್ಕಾಚಾರ ಮಾಡಿ ನೋಡಿದರೆ ಆಕಾಶ್‍ರವರ ಪ್ರಯಾಣದ 50 ಕಿ,ಮೀನಲ್ಲಿ ಮೊದಲ 30 ಕಿ.ಮೀಗೆ 540 ರೂ. ಹಾಗೂ ನಂತರದ 20 ಕಿ.ಮೀಗೆ 1,639 ರೂ. ಚಾರ್ಜಸ್ ಬಿದ್ದಿದೆ. ಎಲ್ಲಿದೆ ಸ್ವಾಮಿ ಇಷ್ಟೊಂದು ಬಿಲ್!! ಯಾವ ಮಾಮೂಲಿ ಟ್ಯಾಕ್ಸಿ, ಆಟೋದವರು ಇಷ್ಟು ಚಾರ್ಚ್ ಮಾಡುತ್ತಾರೆ ನೀವೇ ಹೇಳಿ!?.  

   ಆಕಾಶ್‍ಗೆ ಒಂದು ಕಿಲೋ ಮೀಟರ್‍ಗೆ 81.95 ರೂ ಚಾರ್ಜಸ್ ಬಿದ್ದಿತ್ತು. ಸದ್ಯ ಒಂದು ಲೀಟರ್ ಪೆಟ್ರೋಲ್‍ಗೆ 67.64 ಹಾಗೂ ಡೀಸೆಲ್ ಬೆಲೆ ಇರುವುದು 55.32 ರೂ. ಅಂದರೆ 1 ಲೀಟರ್ ಪೆಟ್ರೋಲ್, ಡೀಸೆಲ್‍ಗಿಂತಲೂ ದುಪ್ಪಟ್ಟು ದುಡ್ಡನ್ನು ತೆಗೆದುಕೊಂಡು ಅದಕ್ಕೊಂದು ನಾಮಧ್ಯೇಯ ಎಂಬಂತೆ ಪೀಕ್ ಚಾರ್ಚ್ ಎಂದು ಚಾಕಚಕ್ಯತೆಯಲ್ಲಿ ತಲೆ ಹೊಡೆದು ದುಡ್ ಮಾಡುವುದೆಂದರೆ ಇದೆ ಅಲ್ವಾ!?
 ಈಗ ಹೇಳಿ ಸ್ವಾಮಿ ಮಾಮೂಲಿ 1 ಕಿ.ಮೀ ಗೆ 6 ರೂ.ನಂತೆÉ ಟ್ಯಾಕ್ಸಿ ದೊರಕಿಸಿಕೊಡುತ್ತಿದ್ದ ಓಲಾ ಯಜಮಾನ ಹೀಗೆಲ್ಲಾ ಅಕ್ರಮವಾಗಿ ಆಟವಾಡಿ ಊಲಾಲಾ ಆಡುತ್ತಿರುವುದನ್ನು ಏನೆಂದು ಕರೆಯಬಹುದು!?

    ಇಂತಹ ಅಕ್ರಮವನ್ನು ಬಯಲಿಗೆಳೆಯಬೇಕು, ಸಾಮಾನ್ಯರಿಗಾಗುತ್ತಿರುವ, ಮುಂದೆ ಆಗಬಹುದಾದ ಅನ್ಯಾಯವನ್ನು ತಡೆಯಬೇಕು, ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಬೇಕೆಂದು ನಮ್ಮ ಸಿರಿ ತಂಡ  ಓಲಾ ಕ್ಯಾಬ್ ಬುಕ್ ಮಾಡಿ ಹೊಸತೊಂದು ಸಾಹಸಕ್ಕೆ ಕೈ ಹಾಕಿತು.

     ಮೂರು ಜನರಿದ್ದ ನಮ್ಮ ತಂಡ, ಸಿರಿ ಕಛೇರಿ ಪ್ಯಾಲೆಸ್ ಗುಟ್ಟಹಳ್ಳಿಯಿಂದ ಮೈಸೂರು ರಸ್ತೆಯ ಬಳಿ ಇರುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‍ವರೆಗೆ ಓಲಾ ಕ್ಯಾಬ್ ಬುಕ್ ಮಾಡಿ ಹೊರಟುಬಿಟ್ಟಿತು. ಹೋಗುವಾಗ ಮಿನಿ ಕ್ಯಾಬ್ ಮಾಡಿಕೊಂಡು, ಸಾಮಾನ್ಯ ಬುಕ್ಕಿಂಗ್‍ನಲ್ಲಿ ಹೋಗಿ ಇಳಿದೆವು. ಚಾರ್ಜಸ್ 125 ರೂಪಾಯಿ ಆಯ್ತು. ಮತ್ತೆ ರಿಟರ್ನ್, ಓಲಾ ಆ್ಯಪ್ ಓಪನ್ ಮಾಡಿ ಪೀಕ್ ಚಾರ್ಜಸ್‍ನಲ್ಲಿ ಬುಕ್ ಮಾಡಲಾಯಿತು. ಅದು ಯಾವ ನಿಖರವಾದ ಮೆಸೇಜ್‍ಗಳನ್ನು ಕಣ್ಣಿಗೆ ಕಾಣಿಸದೇ ಬುಕ್ಕಿಂಗ್ ತೆಗೆದುಕೊಂಡಿತು. ಸೆಟಲೈಟ್ ಬಸ್ ಸ್ಟ್ಯಾಂಡ್‍ನಿಂದ, ಪ್ಯಾಲೇಸ್ ಗುಟ್ಟಳ್ಳಿಗೆ ಬಂದು ಇಳಿಯಿತು ನಮ್ಮ ತಂಡ. ಇಳಿಯುವವರೆಗೂ ಪೀಕ್ ಚಾರ್ಜಸ್‍ನಲ್ಲಿ ಪ್ರಯಾಣಿಸಲಾಗುತ್ತಿದೆ ಎಂದು ನಮ್ಮ ತಂಡಕ್ಕಾಗಲಿ, ಡ್ರೈವರ್‍ಗಾಗಲಿ ತಿಳಿಯಲೇ ಇಲ್ಲ. ಮಧ್ಯೆ ಯಾವ ಮೆಸೇಜ್ ಕೂಡ ಸಂದೇಶ ಸಾರಲಿಲ್ಲ... ಜರ್ನಿ ಅಂತಿಮಗೊಳಿಸಿ ಬಿಲ್ ಡಿಸ್ ಪ್ಲೇ ಆದಾಗಲೇ ತಿಳಿಯಿತು. ಕೇವಲ 8 ಕಿ.ಮೀನ ನಮ್ಮ ಪ್ರಯಾಣಕ್ಕೆ ಬರೋಬ್ಬರಿ 512 ರೂಪಾಯಿಯ ಬಿಲ್ ಹೊರಬಿದ್ದಿತ್ತು!.. 
ಅಬ್ಬಾ!! ಹೀಗೂ ದುಡಿತಿದ್ದಾರಾ ಓಲಾ ಸಂಸ್ಥೆ ಎನ್ನುವ ಶಾಕ್ ಆಗ ನಮಗಾಯಿತು.

   
       ನಿಗಧಿಪಡಿಸಿದ ಹತ್ತಾರುಪಟ್ಟು ಹೆಚ್ಚು ಮೊತ್ತವನ್ನು ನಮಗೆ ಅರಿವಿಲ್ಲದೇ, ಇರಿದು ರಕ್ತಬರದಂತೆ ಸಾಯಿಸಿ ಸುಲಿಗೆಗೈಯುವುದೆಂದರೆ ಇದೆ ಅಲ್ಲವಾ!!? ಎರಡೂವರೆ ವರ್ಷಗಳ ಹಿಂದೆ ಓಲಾ ದೆಹಲಿಯಲ್ಲಿ ಚಾಲ್ತಿಯಾದಾಗ ಬೆಂಗಳೂರಿಗೆ ಬರಲಿ ಎಂದು ನಾವೂ ಸ್ವಾಗತಿಸಿದ್ದೆವು. ಎಲ್ಲೆಲ್ಲೂ ಓಲಾ ಓಲಾ ಎನ್ನುವ ಮಾತುಬಂದಾಗ ಇನ್ನಾದರೂ ಆಟೋ ರಿಕ್ಷಾದವರು ಮಾಡುವ ಸುಲಿಗೆಗೆ ಬ್ರೇಕ್ ಬಿತ್ತು. ಒಳ್ಳೆಯ ಸೇವೆ ಎಂದು ಅಪ್ಪಿಕೊಂಡಿದ್ದೆವು. ಪ್ರಾರಂಭದಲ್ಲಿ ‘ಕಡಿಮೆ ದರ, ಸಾಮಾನ್ಯನಿಗೆ ವರ’.., ಎನ್ನುವಂತಿದ್ದ ಓಲಾವನ್ನು ‘ಬಡವರ ಪ್ರಯಾಣದ ದೇವರಾಯಿತು, ಎಲ್ಲರಿಗೂ ಕೈ ಗೆಟುಕುವ ದರದಲ್ಲಿ ಸಿಗುತ್ತೆ’ ಹಾಗೆ ಹೀಗೆ ಎಂದೆಲ್ಲಾ ಪಟಾಕಿ ಹಾರಿಸಿದ್ದ ಓಲಾ ಸಂಸ್ಥೆ ಇದೀಗ ‘ಪೀಕ್ ಚಾರ್ಚಸ್’ ಎನ್ನುವ ಮೂಲಕ ಬಡ ಸವಾರರನ್ನು ಪ್ರಯಾಣದ ಬಳಿಕ ಪೀಕಲಾಟಕ್ಕೆ ದೂಡುವುದು ನಿಶ್ಚಿತ ಎನಿಸುತ್ತಿದೆ.     

   ಅಷ್ಟಕ್ಕೆ ನಮ್ಮ ತಂಡ ಸುಮ್ಮನಾಗಲಿಲ್ಲ. ಕಸ್ಟಮರ್ ಕೇರ್‍ಗೆ ಡಯಲ್ ಮಾಡಿ ವಿಚಾರಿಸೋಣವೆಂದು ಟೋಲ್ ಫ್ರಿ ನಂಬರ್‍ಗೆ ಡಯಲ್ ಮಾಡಿತು. ಒಂದೆರಡು ಬಾರಿ ನೇರ ಕನೆಕ್ಟ್ ಆಗದೆ ಆಟ ಆಡಿಸಿದ ಅವರ ಕಸ್ಟಮರ್ ಸರ್ವಿಸ್, ನಂತರ  5 ನಿಮಿಷದ ವೈಟಿಂಗ್‍ನಲ್ಲಿ ಆಂಗ್ಲಬಾಷೆಯಲ್ಲಿ ಮಾತುಗಾರಿಕೆಗೆ ಇಳಿಯಿತು. ಅಂತೂ ಮೇಲೆ ಹೇಳಿದಂತೆ ತಮ್ಮ ನಿಲುವೇ ಸರಿ, ನೀವು ಬುಕ್ ಮಾಡಿದ್ದೇ ತಪ್ಪು, ಸರಿಯಾಗಿ ನೋಡಿಕೊಂಡು ಮಾಡಬೇಕು, ಪೀಕ್ ಚಾರ್ಜಸ್ ಇದ್ದರೆ ನಿಮ್ಮ ಮೊಬೈಲ್‍ನಲ್ಲಿ ವಾರ್ನಿಂಗ್ ಮೆಸೇಜ್ ಬರುತ್ತೆ!, ಅದನ್ನು ಗಮನಿಸದೇ ಬುಕ್ ಮಾಡಿದರೆ ಹೀಗೆ ಆಗುತ್ತೆ! ಎನ್ನುವ ಮಾತಿನೊಂದಿಗೆ, ‘ನಾವೇನು ಮಾಡಲು ಬರುವುದಿಲ್ಲ ಸರ್ ದಯಮಾಡಿ ಪೇ ಮಾಡಿ’ ಎಂದಳಾಕೆ. ‘ಆಯ್ತು ಮಾಡ್ತೀವಿ.., ಆದ್ರೆ ಯಾಕೀಥರ ಬಡವರ ಮೇಲೆ ಸುಲಿಗೆ ಮಾಡುತ್ತೀರಾ? ನಿಮ್ಮ ಮ್ಯಾನೇಜ್‍ಮೆಂಟ್ ಲೆವೆಲ್‍ಗೆ ಕಾಲ್ ಕನೆಕ್ಟ್ ಮಾಡಿ ನಾವು ಮಾತಾಡ್ತೇವೆ’ ಅಂದ್ರೆ ‘ಹಾಗೆ ಕನೆಕ್ಟ್ ಮಾಡೋಕೆ ಆಗುವುದಿಲ್ಲ ಸರ್ ಬೇಕಿದ್ರೆ ನಿಮ್ಮ ಅಹವಾಲನ್ನು ಮೇಲ್ ಮೂಲಕ ನಾನು ಮಂಡಳಿಗೆ ತಿಳಿಸುತ್ತೇನೆ, ನಿಮಗೆ ಮೇಲ್ ಬರುತ್ತೆ ನಿಮ್ಮ ಕಂಪ್ಲೇಂಟ್ ಪಡೆದುಕೊಳ್ಳುತ್ತೇನೆ’ ಎನ್ನುತ್ತಾ ಕಾಲ್ ತುಂಡರಿಸಿದ ಆಕೆ ಇವತ್ತಿನವರೆಗೂ ನಾವು ಕಾಯುತ್ತಿದ್ದರೂ ಯಾವ ಕಂಪ್ಲೇಂಟ್ ಕಾಪಿಗಳನ್ನು ಇ-ಮೇಲ್‍ಗೆ ರವಾನಿಸದೇ ಇರುವುದು ಸಂಶಯಕ್ಕೆ ಎಡೆಮಾಡಿದೆ.

   ಹೌದು ಸ್ವಾಮಿ!, ನಾವು ಬಡವರು ಅದನ್ನು ಬಿಡಿ ಆದರೆ ಎಲ್ಲರಿಗೂ ಇಂಗ್ಲೀಷ್ ಬುರುತ್ತದಾ!? ಅದನ್ನು ಹೇಳಿ ಮೊದಲು!!! ನಾವೇನೋ ಓದಿದ್ದೀವಿ, ಇಂಗ್ಲೀಷ್ ಕಲಿತಿದ್ದೀವಿ, ಮೆಸೇಜ್‍ನ್ನು ಓದಿ ಬುಕ್ ಮಾಡುತ್ತೇವೆ!, ಆದರೆ ಒಬ್ಬ ಸಾಮಾನ್ಯ ಮನುಷ್ಯ, ಇಂಗ್ಲೀಷ್ ಬರದಿದ್ದವನು ನಿಮ್ಮ ಕಾರ್‍ನಲ್ಲಿ ಚಲಿಸಬೇಕಲ್ಲ... ಅವನು ಹೇಗೆ ಆ ನಿಮ್ಮ ವಾರ್ನಿಂಗ್ ಮೆಸೇಜ್‍ಗಳನ್ನೆಲ್ಲಾ ಓದುತ್ತಾನೆ!?? ಉತ್ತರ ನೀಡಿ...

   ಪ್ರಾರಂಭ ದಿನಗಳಲ್ಲಿ ಗ್ರಾಹಕರು, ಡ್ರೈವರ್‍ಗಳನ್ನು ಸೆಳೆಯುವ ದೃಷ್ಟಿಯಿಂದ ಸಾವಿರ ಸಾವಿರ ಸಂಬಂಳ, ಇನ್‍ಸೆಂಟಿವ್ ನೀಡುತ್ತಿದ್ದ ಓಲಾ ಒಡೆಯ ಇಂದು  ಅಂದುಕೊಂಡಂದ್ದಕ್ಕಿಂತ ಅಧಿಕ ಲಾಭ, ಹಾಗೂ ಜನ ಬಲ ಬಂದ ಕೂಡಲೇ ಎಲ್ಲದಕ್ಕೂ ಬದಲಾವಣೆ ಹಾಡಿದ್ದಾನೆ. ಅಂದು ಡ್ರೈವರ್‍ಗಿದ್ದ ಲಾಭಾಂಶ ಕಡಿಮೆಗೊಳಿಸಿದ್ದಾನೆ. ಇನ್ ಸೆಂಟಿವ್‍ನಲ್ಲೂ ಹಂಬಾಕಿನ ಆಟವಾಡುತ್ತಿದ್ದಾನೆ.

  ಇಷ್ಟೇ ಅಲ್ಲದೇ ಕ್ಯಾಬ್‍ಗಳು ಎಷ್ಟು ದುರ್ಬಳಕೆಯ ಹಂತಕ್ಕೆ ಇಂದು ತಲುಪಿದೆ ಎಂದರೆ, ವರದಿಯೊಂದರ ಪ್ರಕಾರ ಕ್ಯಾಬ್‍ಗಳು ರಾಜ್ಯ ಪರವಾನಗಿ ಪಡೆದು, ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಹೇಳಲಾಗಿದೆ. ಅದೆಷ್ಟೋ ಕ್ಯಾಬ್‍ಗಳಲ್ಲಿ ಇನ್ನೂ ಯಾವುದೇ ರೀತಿಯ ಡಿಜಿಟಲ್ ಮೀಟರ್ ಅಳವಡಿಸಿಲ್ಲ, ರಸ್ತೆÉ ತೆರಿಗೆ ಪಾವತಿಸಿಲ್ಲ, ವಾಹನಗಳ ಅರ್ಹತೆ, ಪತ್ರದ ಅವಧಿ ಮುಗಿದಿದ್ದರೂ ವಾಹನಗಳ ಕಾರ್ಯಾಚರಣೆ ಮುಂದುವರಿದಿರುವುದು ಬೆಳಕಿಗೆ ಬಂದಿದೆ.  ಇದಷ್ಟೇ ಅಲ್ಲದೇ ಇದೀಗ ಸಾರಿಗೆ ನಿಯಮ ನಿಗಧಿಪಡಿಸಿದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿಗಳು ದಾಖಲಾಗುತ್ತಿದ್ದು, ಜನರ ಹಣವನ್ನು ದೋಚುವ ಹುನ್ನಾರ ನಡೆಯುತ್ತಿರುವುದು ಕಂಡು ಬಂದಿದೆ...

   
ನೀವು ಸಾಮಾನ್ಯ ಮನುಷ್ಯರಾಗಿದ್ದರೆ ನಿಮ್ಮ ಪಾಕೇಟ್ ಮೇಲು ಇವರು ಬರೆ ಎಳೆಯುವುದು ಗ್ಯಾರಂಟಿ. ಸಂಬಂಧಿಸಿದ ಸಾರಿಗೆ ಇಲಾಖೆ ಇದರ ಬಗ್ಗೆ ಈಗಲೇ ಸರಿಯಾದ ನಿರ್ಣಯ ತೆಗೆದುಕೊಂಡಿಲ್ಲ ಎಂದಾದರೆ ಮುಂದೊಂದು ದಿನ 10 ರೂಪಾಯಿಯ ಮೀಟರ್ ಚಾರ್ಜ್‍ಗೆ 100 ರೂಪಾಯಿ ನೀಡಿ ಹೋಗುವ ಸಮಯ ನಿಮಗೂ ಬಂದು ‘ಪೀಕ್ ಫಜೀತಿ’  ಸಂಭವಿಸಬಹುದು!. 
ಸರ್ಕಾರ ಈ ಬಗ್ಗೆ ಸರಿಯಾದ ನಿಲುವನ್ನು ಕೈಗೊಂಡು ಎಲ್ಲರಿಗೂ, ಎಲ್ಲ ಸಮಯದಲ್ಲೂ ಸಮಾನ ರೀತಿಯಲ್ಲಿ ದೊರಕುವ ಭಾಗ್ಯ ಒದಗಿಸಬೇಕಾಗಿದೆ. ಯಾರೋ ಓಡಿಸುವವನು!, ಯಾರೋ ಆಡಿಸುವವನು! ಆಗಿರುವ ಈ ಆನ್ ಲೈನ್ ಕ್ಯಾಬ್‍ಗಳ ಬಗ್ಗೆ ಅಧಿಕಾರಿಗಳು ಒಂದು ಕಣ್ಣನ್ನು ಇಡಬೇಕು. ಅವರವರೇ ತಂದುಕೊಳ್ಳುವ ಕಾನೂನುಗಳಿಗೆ ಬ್ರೇಕ್  ನೀಡಬೇಕು...
ಪ್ರಯಾಣಿಕರು ಅಷ್ಟೇ ಜಾಗೃತರಾಗಿ ಮುಂದುವರಿಯಿರಿ. ದೋಚುವ ಕ್ಯಾಬ್‍ಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲವಾದರೆ ಮುಂದೊಂದು ದಿನ ಇನ್ನೂ ಯಾವ ಯಾವ ಚಾರ್ಜಸ್‍ನ್ನು ಹೇರಿ ನಮ್ಮನ್ನು ಸುಲಿಗೆ ಮಾಡುವರೋ ತಿಳಿದಿಲ್ಲ...
                                                    ಕೇರ್ ಫುಲ್ ಯೂರ್ ಸೆಲ್ಫ್...