Monday, 25 July 2016
Monday, 4 July 2016
ಕವಿ ಕನವರಿಕೆ - ಪ್ರೇಮಾಯಣ...
-ಸ್ಯಾಂಡಿ...
ತುಸು ಪ್ರೇಮವಿತ್ತು, ತುಸು ಮೌನವಿತ್ತು ಪ್ರತಿ ಕ್ಷಣವೂ ಮೊದಲ ನೋಟವೋ ಎಂಬಂತೆ ಸಾಗುತ್ತಿತ್ತು ಅವನ-ಅವಳ ಕಣ್ಣುಗಳ ವಿಚಾರ ವಿನಿಮಯ...ಬೇಸಿಗೆ ಉರಿಬಿಸಿಲಿರಲಿ, ಚಳಿ ಚಂಚಲತೆಯಿರಲಿ, ಮಳೆಯ ಪುಳಕತನವಿರಲಿ ಎಲ್ಲಿಯೂ ಎಂದೂ ರಾಜಿಯನುಭವವಿಲ್ಲ... ಪ್ರೀತಿ, ಪ್ರೀತಿಸು, ಪ್ರೀತಿಸುತ್ತೇನೆ ಇವಷ್ಟೇ ಅರಿತು ನಡೆಯುತ್ತಿದ್ದ ಪುಟ್ಟ ಬಾಳು ಅವರದು!!.
ಟೀನೇಜಿನ ಟೈಮ್ ಅದು. ಓದುವಿಕೆಯಿಂದ ಹತ್ತಿರ ಕಂಡಿದ್ದ ಎರಡು ಹೃದಯಗಳು ಭವಿಷ್ಯದ ಚಿಂತನೆಯನ್ನೇ ಮರೆತಿದ್ದವು. ಕೇವಲ ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರೇ ವಿನಃ ಮುಂದಿರುವ ಭವಿಷ್ಯದ ಗೋಜೆ ಅವಗಿರಲಿಲ್ಲ.
ಚಂದುಟಿಯ ಪಕ್ಕಕ್ಕೊಂದು ಮುತ್ತು, ದೂರಾಗುವ ಭಯಕ್ಕೊಂದು ಅಪ್ಪು... ಟೋಟಲ್ಲಿ ಮನ ಕಲಕದಂತೆ ಸಮನಾಗಿ ಎಳೆವ ತೇರು ಅವರದು. ಪ್ರೀತಿಸುತ್ತಿದ್ದ ಅಷ್ಟು ದಿನಗಳು ಕಳೆದದ್ದೇ ಅರಿಯದ ಜೋಡಿಯ ಹುಡುಗಿಗೆ ಮದುವೆ ಹುನ್ನಾರ ಮನೆಯಲ್ಲಿ ಅದಾಗಲೇ ನಡೆಯಲು ಶುರುವಿಟ್ಟಿದ್ದೆ ತಡ!, ಅವರಿಬ್ಬರಿಗೂ ಸಂಕಷ್ಟಗಳು ತಲೆಯೇರಲು ರೆಡಿಯಾದಂತೆ ಭಾಸವಾಗಿದೆ.
ಮನೆಯವರ ವಿರೋಧ, ದೂರಾದರೆ ಬಾಳು ಸಾಧ್ಯವಿರದ ಭಾದಿತ ಎನ್ನುವ ಆತಂಕ. ಒಂದು ಕಡೆ ಅರ್ಧಂಬರ್ಧ ಕಲಿಕೆಯಲ್ಲಿರುವ ವಿದ್ಯಾಭ್ಯಾಸ, ಇನ್ನೊಂದು ಕಡೆ ಪ್ರೀತಿಯ ತ್ಯಾಗಿಗಳಾಗಿ ಬದುಕು ಕಾಣಲಾರದ ಮಂಪರತೆ, ಭವಿಷ್ಯದಲ್ಲಿ ನೆಲೆಯಾಗದಿರುವ ಧೃಡತೆ!, ಇತ್ಯಾದಿಗಳ ಹೈರಾಣತೆ ಇನ್ನೇನೂ ಜೀವನ ಬಿಗಡಾಯಿಸುತ್ತೆ ಎಂದು ಅರಿತ-ಅರಳಬೇಕಿದ್ದ ಪ್ರೇಮಿಗಳು ಕೊನೆಗೊಂದು ನಿರ್ಣಯದಿಂದ, ಜಯಿಸಬಹುದೆಂಬ ತೀರ್ಮಾನಕ್ಕಿಳಿದಿದ್ದಾರೆ.
ಇಬ್ಬರು ಜೊತೆ ಸೇರಿದ್ದಾರೆ. ದುಃಖವನ್ನು ಮೌನವಾವರಿಸಿಕೊಂಡಿದೆ. ಇಬ್ಬರೂ ಇಹ ತ್ಯಜಿಸಿ ಪರ ಸೇರುವ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಎದುರಿರುವ ಚೂಡಿದಾರದ ವೇಲು ಕೊಕ್ಕೆಯಂತೆ ಕೊರಳೊಳು ಸೇರಿದೆ!!.
ಸಾರ್ಥಕತೆ ಇಲ್ಲದ ಜೀವನದುಸಿರು ಗೆದ್ದೆ ಎಂದು ತನ್ನಾಟ ನಿಲ್ಲಿಸಿದೆ!., ಆಗತಾನೆ ಅರಳಿ ಸುವಾಸನೆ ಬೀರುತ್ತಿದ್ದ ಪ್ರೀತಿ ಮಸಣದ ಪಾಲಾಗಿದೆ!., ಮೌನ ಬಲಿ ಪಡೆದಿದೆ!., ಜನುಮ ಅಂತ್ಯ ಕಂಡಿದೆ!., ಪ್ರೇಮಾಯಣ ಪಾಪ ಭಾವ ತಳೆದಿದೆ..!
ಕೊಂಡಿ ಕಳಚಿತು...
ಕೈ ನಡುಗುತ್ತಿದೆ!.. ಪದಗಳು ಜಾರುತ್ತಿವೆ!.. ಭಾವ ಯಾವುದರದೋ ಬೆನ್ನೇರಿ ಸಾಗಿದಂತಿದೆ!.. ಮಾತುಗಳು ಮೌನತೆ ಪಡೆದಿವೆ!.. ಕಾರಣವಿಷ್ಟೇ ಮನೆಯ ಹಿರಿಯ ಕೊಂಡಿಯೊಂದು ಕಳಚಿದೆ!!. ಮನೆಯವರಾದ ಮಾಮನ ಉಸಿರು ನಿಂತಿದೆ. .. ಕಳೆದ 85 ವರ್ಷಗಳಿಂದಲೂ ಸದಾ ಒಂದಿಲ್ಲೊಂದು ವಿಚಾರದಲ್ಲಿ ಚಲನೆ ಕಂಡಿದ್ದ ಮನೆತನದ ಹಿರಿಯ ಕೊಂಡಿ ಇಹಲೋಕ ತ್ಯಜಿಸಿ ದೂರ ಸಾಗಿದೆ. ಅಂದು ಮಧ್ಯಾಹ್ನ ಮನೆಯಿಂದ ಫೋನ್ ಬಂದು ವಿಷಯ ತಿಳಿದಾಗ, ಸರಿಸುಮಾರು ಜೀವಮಾನದ 25 ವರ್ಷಗಳ ಇಂದಿನ ಬದುಕಿನವರೆಗೆ ಸಂಬಂಧಿಗಳ ಪೈಕಿ ತೀರಾ ಹತ್ತಿರವಾದವರನ್ನು ಮೊದಲ ಬಾರಿಗೆ ಶಾಶ್ವತ ಉಪಸ್ಥಿತಿಯಿಂದ ಕಳೆದುಕೊಂಡ ಶಾಕ್ ನನಗೆ!..
ಹಿಂದಿನ ಬದುಕಲ್ಲಿ ಸ್ನೇಹಿತನ ಮನೆಯಲ್ಲೋ, ಪಕ್ಕದ ಮನೆಯಲ್ಲೋ ಅಥವಾ ಹಳ್ಳಿಯ ಇನ್ಯಾರದ್ದೋ ಮನೆಗಳಲ್ಲಿ ಈ ಥರದ ಅಗಲಿಕೆಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತಿದ್ದರೂ, ತದ ನಂತರ ಅದರ ಕಾಡುವಿಕೆ ವಿರಳವಾಗಿರುತಿತ್ತು. ಆದರೆ ನನ್ನವರೇ ಆದ ಮಾಮನ ಸಾವು ಅವೆಲ್ಲದರ ಔಚಿತ್ಯದಂತಾಗಲಿಲ್ಲ. ಮಾಮ ನನ್ನ ಬೆಳವಣಿಗೆಯ ಜೊತೆಯಲ್ಲಿ ಒಬ್ಬರಾಗಿ ಇದ್ದ ವ್ಯಕ್ತಿಯಾದ್ದರಿಂದ, ಮನೆಯಿಂದ ಮಸಣತಲುಪಿ, ವಿಧಿವಿಧಾನ ಜರುಗಿ ಇಷ್ಟು ದಿನವಾದರೂ ಕಾಡುತ್ತಿದ್ದಾರೆ. ಭಾವನಾತೀತ ನೆನಪುಗಳು ಪಕ್ಕದಲ್ಲೇ ಗಿರಕಿ ಹೊಡೆದು ಕಳೆದ ದಿನಗಳನ್ನು ನೆನಪಿಸುತ್ತಿದೆ.
ನನ್ನಮ್ಮನಿಗೆ ಅವರು ಅಣ್ಣ, ನನಗೆ ಮಾವ. ನಾ ಕರೆಯುತ್ತಿದ್ದುಮಾಮ. ವಯಸ್ಸು 80 ಕ್ಕಿಂತ ಜಾಸ್ತಿ, ಉದ್ದನೆಯ ದೇಹ, ಇಳಿವಯಸ್ಸಲ್ಲೂ ಕಟ್ಟು ಮಸ್ತಾದ ಶರೀರ, ಅಲ್ಪಸ್ವಲ್ಪ ಗಡ್ಡ, ಬಿಳಿಕೂದಲಿನ ತಲೆ, ವಯಸ್ಸಿನನುಸಾರ ಮುಖದ ನೆರಿಗೆ, ಬಾಯಲ್ಲಿ ಒಂದೆರಡು ಹಲ್ಲು, ದಪ್ಪ ಕೈ, ಸದಾ ನಗುಮೊಗದಿಂದಿರುವ ಮನೆಯ ಹಿರಿಯವ, ನಮ್ಮ ಜೊತೆ ಇದ್ದ ಅಷ್ಟು ದಿನಗಳು ನಮಗಾಗೇ ಬದುಕಿದ ತ್ಯಾಗಮಯಿ...
ನನಗೀಗಲೂ ನೆನಪಿದೆ... ಅವರು ನನ್ನ ಮನೆಗೆ ಬಂದು ನೆಲೆಯಾಗಿದ್ದು ನಾನು 3ನೇ ತರಗತಿ ಓದುತ್ತಿದ್ದಾಗ. ಮದುವೆಯಾಗಿ ಮಕ್ಕಳಾದ ಒಂದಿಷ್ಟು ವರ್ಷದ ಬಳಿಕ ಹೆಂಡತಿ ಮಕ್ಕಳಿಂದ ಯಾವುದೋ ಕಾರಣಕ್ಕೆ ಬೇರಾಗಿ ಅನಾಥರಾದ ಮಾಮ ಮತ್ತೆ ಮನೆಗೆ ಹಿಂತಿರುಗದೇ ಸ್ವಾಭಿಮಾನಿಯಾಗಿ ಸಾಯೋವರೆಗೂ ಯಾರಿಂದಲೂ ಏನನ್ನು ಕೇಳದೇ ಬದುಕಿದ ನಿಸ್ವಾರ್ಥಿ. ಅಂದು ಮನೆ ಬಿಟ್ಟವರು ನೇರ ಬಂದಿದ್ದೇ ತಂಗಿಯಾದ ನನ್ನಮ್ಮನ ಮನೆಗೆ. ಅದಾಗಲೇ ಅಪ್ಪ ಅಮ್ಮ ತೀರಿಕೊಂಡಿದ್ದರಿಂದ ಅಣ್ಣನ ಪೂರ್ಣ ಜವಾಬ್ಧಾರಿಯೂ ಅಮ್ಮನ ಹೆಗಲ ಮೇಲೆಯೇ ಬಿದ್ದಿತ್ತು. ಸಾಯೋ ಕೊನೆಕ್ಷಣದವರೆಗೂ ಅಮ್ಮ ಅಣ್ಣನನ್ನು ಸಾಕಿದ್ದು ತನ್ನ ಮಗನಂತೆಯೇ!..
ನಮ್ಮ ಜೀವನದಲ್ಲಿ ಕಳೆದಿರುವ ದಿನಗಳೆಲ್ಲವನ್ನು ನಾನು ಇತಿಹಾಸವೇ ಎಂದು ಕರೆಯಲು ಇಷ್ಟ ಪಡುತ್ತೇನೆ. ಕಾರಣ ಪ್ರತಿಯೊಬ್ಬ ಮನುಷ್ಯನ ಜೀವಿತದ ಹಳೆಯ ದಿನಗಳನ್ನು ಎಣಿಸಿದರೆ ಅಲ್ಲೊಂದು ಇತಿಹಾಸವಾಗಬಹುದಾದ ನೆನಪುಗಳ ಮಾಲೆ ಇದ್ದೆ ಇರುತ್ತದೆ. ಅಂತೆಯೇ ಇವರ ಜೀವನದ ಗಾಥೆಯೂ ಹಾಗೆ ಇದೆ. ಎಲ್ಲರೂ ಕೈ ಬಿಟ್ಟಾಗ ನಮ್ಮನೆ ಸೇರಿದ್ದ ಮಾಮ, ಪ್ರಾರಂಭದಲ್ಲಿ ನನಗೂ ಅಪರಿಚಿತರಾಗಿದ್ದರು. ಮೊದಲ ಬಾರಿ ಅವರನ್ನು ನೋಡಿದ್ದಾಗ ಅಮ್ಮನ ಬಳಿ ಅವರ್ಯಾರೆಂದು ಕೇಳಿದ್ದೆ!., ಅವಳಂದು ನನ್ನಣ್ಣ ಅಂದಿದ್ದಳು. ಹಾಗಾದರೆ ನನಗೇನಾಗುತ್ತಾರೆನ್ನುವ ಮರು ಪ್ರಶ್ನೆಗೆ ನೀ ‘ಮೊಮ್ಮ’ ಎಂದು ಕರೆ ಎಂದಿದ್ದಳು. ‘ಮೊಮ್ಮ’ ಪದ ಹೇಳಲು ಕಷ್ಟವಾದ್ದರಿಂದ, ಚಿಕ್ಕಂದಿನ ಚಿಕ್ಕಬದಲಾವಣೆ ಎಂಬಂತೆ ಮೊಮ್ಮ ನನಗೆ ‘ಮಾಮ’ನಾಗಿಯೇ ಉಳಿದರು.
ನಿಮಗೆ ಗೊತ್ತಾ!?, ಮಾಮ, ಇತ್ತೀಚಿನ ದಿನಗಳಲ್ಲಿ ನನ್ನ ಹಿರಿಯಣ್ಣನ ಮಗಳು ‘ಸ್ವಾತಿ’ಗೆ ಹೋರಿ ಅಜ್ಜನಾಗಿ, ಕಿರಿಯಣ್ಣನ ಮಗ ‘ಶ್ರಜ್ಜು’ಗೆ ‘ಅಂಗಡಿ ಅಜ್ಜ’ನಾಗಿಯೂ ಬದಲಾಗಿದ್ದು ಇನ್ನೊಂದು ಥರದ ವಿಶೇಷ!. ಅವರಿಗೆ ಮನೆಯ ಧನಕರುಗಳಿಗಿಂತ ಗದ್ದೆ ಹೂಳುವ ಕೋಣ(ಹೋರಿ)ಗಳೆಂದರೆ ಇಷ್ಟ. ತೀರಾ ಇತ್ತೀಚಿನವರೆಗೂ ತನ್ನ ಮಕ್ಕಳಂತೆ ಸಾಕುತ್ತಿದ್ದ ಕೋಣಗಳ ದೆಸೆಯಿಂದ ‘ಸ್ವಾತಿ’ಗೆ ಅವರು ‘ಹೋರಿಅಜ್ಜ’ ಎಂದೆ ಪರಿಚಿತರಾಗಿದ್ದರು. ಒಂದೆರಡು ವರ್ಷಗಳಿಗಿಂತ ಈಚೆ ‘ನನಗೂ ವಯಸ್ಸಾಯಿತು ಇನ್ನೂ ಪ್ರಾಣಿಗಳನ್ನು ಸಾಕಲು ಆಗೋದಿಲ್ಲ’ ಎಂದು ಅರಿತು ಮನೆಯಿಂದ ಸ್ವಲ್ಪವೇ ಹತ್ತಿರವಿದ್ದ ಅಂಗಡಿಯೊಂದನ್ನು ಬಾಡಿಗೆ ಪಡೆದು ಸ್ವಾವಲಂಭಿಯಾಗಿ ವ್ಯಾಪಾರ ನಡೆಸುತ್ತಿದ್ದದ್ದನ್ನು ನೋಡಿದರೆ ಪ್ರತಿಯೊಬ್ಬನೂ ಅವರಿಗೆ ಶಭಾಷ್ ಎನ್ನಲೇಬೇಕು. ದಿನಾ ಅವರ ಅಂಗಡಿ ಪಯಣ ನೋಡಿದ್ದ ಚಿಕ್ಕ ವಯಸ್ಸಿನ ‘ಶ್ರಜ್ಜು’ ಅವರಿಗೆÀ ‘ಅಂಗಡಿಅಜ್ಜ’ ಎಂದು ಹೆಸರಿಟ್ಟಿದ್ದು ಆ ಕಾಣಕ್ಕಾಗಿ ಅಷ್ಟೆ.
ಮೊದಲಿನಿಂದಲೂ ಅವರಿಗೆ ಮನೆಯಲ್ಲಿ ಹಿರಿತಲೆಯೆಂದು ಸ್ವಲ್ಪ ಬೇರೆಯದೇ ಮರ್ಯಾದೆ ಇತ್ತಾದರೂ, ಯಾವುದೊಂದನ್ನು ನನಗೆ ಬೇಕು ಎಂದು ಹವಣಿಸಿದ್ದು ನಾನೆಂದು ಕಂಡಿರಲಿಲ್ಲ. ಸದಾ ತಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಮಾಮ ದೇವರಿಗಿಂತಲೂ ದೈವದ ಕೆಲಸಗಳಲ್ಲಿ ವಿಶೇಷ ಆಸಕ್ತಿ, ಭಯ, ಶ್ರದ್ಧೆ, ಅನುಕಂಪದ ಕ್ಷೋಭೆಯಾಗಿದ್ದರು. ಮನೆಯಲ್ಲಿ ಏನೇ ದೈವದ, ದೇವರ ಕೆಲಸವಿದ್ದರೂ, ಅವರೇ ಅದಕ್ಕೆ ಮುಂದಾಳು. ಅವರ ರೂಢಿಯಂತೆ ಎಲ್ಲವೂ ಎತಾವತ್ತಾಗಿ ನಡೆಯುತ್ತಿತ್ತು. ತಪ್ಪಾದರೆ ಕ್ಷಮಿಸುತ್ತಿರಲಿಲ್ಲ. ದೊಡ್ಡ ಬೈಗುಳವನ್ನೇ ಕಾರುತಿದ್ದರು.
ನಾನಾಗ 5ನೇ ತರಗತಿ ಓದುತ್ತಿದ್ದೆ... ಅಂದು ನಮ್ಮೂರಿನ ಮನೆಗಳೆಲ್ಲ ಇಂದಿನಂತೆ ಕರೆಂಟ್ ಸೌಲಭ್ಯ ಕಂಡಿರಲಿಲ್ಲ. ನಮ್ಮ ರಾತ್ರಿ ಓದೆಲ್ಲವೂ ನೆಡೆಯುತ್ತಿದ್ದದ್ದು ಸೀಮೆ ಎಣ್ಣೆಯ ಚಿಮಣಿ ದೀಪದಡಿ. ಬರೆಯೋಕೆ ಒಂದು ಮಂಚವೂ ಇರಲಿಲ್ಲ. ಖಾಲಿ ನೆಲದ ಮೇಲೆ ಉದ್ದಕ್ಕೆ ಮಲಗಿ, ಮುಂಗೈ ಊರಿ ಅಥವಾ ಕಾಲುಗಳನ್ನು ಮಡಚಿ, ಬರೆಯುದೋ!, ಓದುವುದೋ!! ಮಾಡುತ್ತಿದ್ದೆ. ಆ ಸಮಯದಲ್ಲಿ ನನಗೆ ನಿದ್ದೆ ಬಂದಂತಾಗಿ ಕಣ್ಣು ಮುಚ್ಚಿ ಒಮ್ಮೊಮ್ಮೆ ದೀಪದ ಮೇಲೆ ಬೀಳುವುದು ಮಾಮೂಲಿಯಾಗಿತ್ತು. ಅಲ್ಲದೇ ಸೀಮೆ ಎಣ್ಣೆ ಕೆಳಕ್ಕೆ ಸೋರಿ ಬೆಂಕಿ ಹತ್ತುವ, ಹತ್ತು-ಹಲವು ಸನ್ನಿವೇಶಗಳು ನಡೆದದ್ದು ಮಾಮನೂ ನೋಡಿದ್ದರು. ಅಂದಿನ ನನ್ನ ಕಷ್ಟವನ್ನರಿತಿದ್ದ ಮಾಮ ದೂರದೂರಿಗೆ ಹೋಗಿ ಹಿತ್ತಾಳೆಯ ಮಣಭಾರದ ಒಂದು ದೀಪದ ಲ್ಯಾಂಪನ್ನು ತಂದು ನನಗೆ ಉಡುಗೊರೆ ನೀಡಿದ್ದರು. ಅದು ಇವತ್ತಿಗೂ ನನ್ನ ಬಳಿ ಜೋಪಾನವಾಗಿದೆÉ. ‘ನಮ್ಮ ಕಾಲದಲ್ಲಿ ನಮಗೆ ಓದಲಾಗಿಲ್ಲ!, ನಮ್ಮನೇ ಮಕ್ಕಳಾದರೂ ಚೆನ್ನಾಗಿ ಓದಲಿ’ ಎನ್ನುವ ಅವರ ಆಶಾಭಾವ ಆ ಉಡುಗೊರೆ ನನಗೆ ಸಿಗುವಂತೆ ಮಾಡಿತ್ತೆಂದು ನನಗಂದೇ ಅನಿಸಿತ್ತು. ಅವುಗಳು ಕೂಡ ಇಂದು ಮಾಮನ ನೆನೆಪನ್ನು ಮತ್ತೆ ಮತ್ತೆ ಭಿತ್ತುತ್ತಿವೆ... ನಾನೇಗೆ ಮರೆಯಲಿ ನೀವೇ ಹೇಳಿ!.
ಅವರಿಗೆ ನನ್ನ ಹಾಗೂ ನನ್ನಣ್ಣಂದಿರ ಮೇಲಿನ ಕಾಳಜಿಯೇ ಒಂಥರಾ ವಿಶೇಷತೆಯಿಂದ ಕೂಡಿತ್ತು. ಕೇವಲ ನಮ್ಮನ್ನಷ್ಟೇ ಅಲ್ಲದೇ ಮನೆಯಲ್ಲಿ ಮುದ್ದಿಂದ ಸಾಕಿದ್ದ ನಾಯಿ ಮರಿ ಮೇಲೆಯೂ ಪ್ರೀತಿ ಅಗಾಧವಾಗಿತ್ತು. ತಟ್ಟೆಗೆ ಐದು ಇಡ್ಲಿ ಹಾಕಿಕೊಂಡರೆ ಅದರಲ್ಲಿ ಒಂದು ನಾಯಿಮರಿಗೆ, ಒಂದು ಕೋಳಿ ಹುಂಜನಿಗೆ, ಇನ್ನೆರಡು ಮುದ್ದಿನ ಕೋಣಗಳಿಗೆ ದಿನವೂ ನೀಡಿ ಅವರು ತಿನ್ನುತ್ತಿದ್ದದ್ದು ಕೇವಲ ಉಳಿದ ಒಂದು ಇಡ್ಲಿಯನ್ನು ಮಾತ್ರಾ!.
ಅಷ್ಟೇ ಯಾಕೆ!?, ಮಾಮನಿಗೆ ಶಿಕಾರಿಯೆಂದರೆ ಹುಚ್ಚು. ಪ್ರತಿ ಮಳೆಗಾಲ ಸನ್ನಿಹಿತವಾಯಿತೆಂದರೆ ಮಾಮನಿಗೆ ವಿಶೇಷವಾದ ಖುಷಿ. ಯಾಕೆಂದರೆ ಶಿಕಾರಿ ಅಥವಾ ಕಾಡು ಪ್ರಾಣಿಗಳ ಬೇಟೆಯಾಡಲು ಮಳೆಗಾಲ ಸೂಕ್ತ ಎನ್ನುವ ನಿಲುವು ಅವರದ್ದು. ಇಡೀ ನಮ್ಮ ಊರಿಗೆ ಒಂದು ಕಾಲಕ್ಕೆ ಬಹುದೊಡ್ಡ ಬೇಟೆಗಾರರಾಗಿದ್ದ ಅವರು ಇತ್ತೀಚಿಗೆ ಕಣ್ಣು ಕಾಣಿಸುವುದಿಲ್ಲ ಎನ್ನುವ ನೆಲೆಯಿಂದ ಅದಕ್ಕೂ ಪೂರ್ಣ ವಿರಾಮ ನೀಡಿದ್ದರು. ಹುಲಿ, ಹಂದಿ, ಮಿಗ, ಮುಳ್ಳುಹಂದಿ, ಮೊಲ ಹೀಗೆ ಅನೇಕ ಬಗೆಯ ಪ್ರಾಣಿಗಳನ್ನು ಬೇಟೆಯಾಡಲು ನಿಂತರೆಂದರೆ ಅವುಗಳ ಪ್ರಾಣವನ್ನು ಯಾರಿಂದಲೂ ತಡೆಯಲಾಗುತ್ತಿರಲಿಲ್ಲ. ಆಗೆಲ್ಲಾ ಕಾಡು ಭೇಟೆ ಅಥವಾ ಶಿಕಾರಿಗೆ ವಿಶೇಷ ಪ್ರಾಮುಖ್ಯವಿತ್ತು ಮತ್ತು ಪ್ರಾಣಿ ಭಯಗಳನ್ನು ಕೋವಿಯಿಂದಲೇ ನೀಗಿಸಿಕೊಳ್ಳಬೇಕಾದ ಅನಿರ್ವಾಯತೆ ಕೂಡ ಅಂದಿನ ಜನರ ಜೀವನವನ್ನು ಶಿಖಾರಿಗೆ ದೂಡುತ್ತಿತ್ತು.
ಎಷ್ಟೋ ಬಾರಿ ಅಕ್ಕ ಪಕ್ಕದವರ ಮೇಲೆ ಅವರು ರೇಗಾಡಿದ್ದನ್ನು ನಾ ನೋಡಿದ್ದೆ ಆದರೆ ಅದೆಲ್ಲವೂ ನಡೆಯುತ್ತಿದ್ದ ತಪ್ಪುಗಳನ್ನು ತಿದ್ದಲೋಸುಗವಾಗಿಯೇ ಹೊರತು ಬೇರೆ ಯಾವ ಉದ್ದೇ± ಅವರಲ್ಲಿರಲಿಲ್ಲ. ಕಬ್ಬುಗಳನ್ನು ಗಾಣಕ್ಕೆ ಕಟ್ಟಿ ಬೆಲ್ಲ ಸಿದ್ಧಪಡಿಸುತ್ತಿದ್ದ ‘ಆಲಿಮನೆ’ಯಲ್ಲೂ ಅನೇಕ ವರ್ಷ ದುಡಿದಿದ್ದ ಅವರು ಸಾಯೋ ಮುಂಚಿನ ಪ್ರತಿ ದಿನವೂ ಕೆಲಸ ಮಾಡುತ್ತಲೇ ಕೊನೆಕಂಡವರು.
ಮಾಮ.., ನಿಂತಿರುವುದು ನಿಮ್ಮ ಉಸಿರು ಮಾತ್ರಾ. ನಿಮ್ಮ ನೆನಪು ಸದಾ ನಮಗೆ ಹಸಿರಾಗೆ ಇದೆ. ನಿಮ್ಮ ಜೊತೆ ಆಡಿಕೊಂಡು ಬೆಳೆದಿದ್ದ ಪರಿಸರವೆಲ್ಲಾ ನೀವಿಲ್ಲದೇ ಬಡವಾದಂತಿದೆ, ಮೊನ್ನೆ ಮೊನ್ನೆ ನೀವು ನನ್ನ ಕ್ಯಾಮರಾಕ್ಕೆ ಕೊಟ್ಟ ಫೋಸ್ ಕೂಡ ಕಣ್ಣಂಚಲಿ ಹನಿ ಬರುವಂತೆ ಮಾಡುತ್ತಿದೆ, ಫೋಟೋಗಳು ಮರುಗಿಸುತ್ತಿವೆ. ದೈವದ ಮನೆಗಳು ಹೂವಿಲ್ಲದೇ ಬಾಡಿದೆ. ಧನಕರುಗಳು ಗೋಗೆರೆಯುತ್ತಿವೆ, ದಿನಾ ಮಲಗುತ್ತಿದ್ದ ನಿಮ್ಮ ಕೋಣೆ ಬಿಕೋ ಎನ್ನುತ್ತಿದೆ, ಸುತ್ತಣ ಪರಿಸರ ಮೌ£ವಹಿಸಿದೆ, ಪ್ರೀತಿಸುತ್ತಿದ್ದ ಕೆಲಸಗಳೆಲ್ಲ ಪ್ರಣಯರಾಜನಿಲ್ಲದೇ ಕಂಗೆಟ್ಟಿದೆ, ಮನೆ ಮಠದ ಸುತ್ತ ಗಲೀಜುಗಳು ಮತ್ತೆ ಎದ್ದಿದೆ, ಮನೆಗೆ ಬಂದ ನೆಂಟರೆಲ್ಲಾ ನೀವಿಲ್ವಾ ಎಂದು ಕೇಳಿಯೇ ಹೊರ ನಡೆಯುತ್ತಿದ್ದಾರೆ, ನಡೆದೆ ಸವೆಸುತ್ತಿದ್ದ ದಾರಿಗಳೆಲ್ಲ ನಿಮ್ಮ ಬರುವಿಕೆಗೆ ಕಾದು ಸೋತು ಹೊಸ ಹುಲ್ಲುಗಳನ್ನು ಆವರಿಸಿಕೊಂಡಿವೆ. ನನ್ನ ಭಾವನಾಲಹರಿಯ ಮೇಳ ನೀವಿಲ್ಲದೇ ಇರುವ ನಿಜಸ್ಥಿತಿ ಅರಿತು, ಮತ್ತೆ ಮತ್ತೆ ನೋವು, ಸಂಕಟಗಳನ್ನು ತಂದಿಕ್ಕಿ ಹೃದಯ ಭಾರವಾಗಿಸುತ್ತಿದೆ. ಅಮ್ಮ ಅಳುತ್ತಿದ್ದಾಳೆ!..
ಮಾಫಿಯಾ... ಬಿಕ್ಷಾ!!, ಮಾಫಿಯಾ... - ಸಿರಿ ಬುಲೆಟ್
• ಮಹಾನಗರದಲ್ಲಿ ಹೆಚ್ಚುತ್ತಿದೆ ಭಿಕ್ಷೆಯ ಅತಿರೇಕತೆ....
• ನಿಲ್ಲದ ಭಿಕ್ಷಾಟನೆಗೆ, ಉಚ್ಚಾಟನೆಯೇ ಮದ್ದು...
• ಚಿಲ್ಲರೆಗೆ ಬೆಲೆ ಇಲ್ಲ, ಡೆಬಿಟ್ಟು ಕ್ರೆಡಿಟ್ಟು...ಬರೀ ನೋಟು ನೋಟು...
• ದುಡ್ ಮಾಡೋ ದುನಿಯಾ ; ಭಿಕ್ಷಾ ಮಾಫಿಯಾ...
ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ನಗರೀಕರಣ, ವ್ಯಾಪಾರಿಕರಣ ಹಾಗೂ ಇನ್ನಿತರ ಹತ್ತು ಹಲವು ಔದ್ಯೋಗೀಕರಣಗಳಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಧಾತನಾಗಿ, ಹೊಟ್ಟೆ ಬಟ್ಟೆಯ ಒಡೆಯನಾಗಿ ಸಿಲಿಕಾನ್ ಸಿಟಿ ಗಾಂಭೀರ್ಯ ತೋರಿಸುತ್ತಿದೆ. ಬಹಳ ಹಿಂದೆ ನಾಡು ನುಡಿಯ ಗಂಧದ ಕಂಪನ್ನು ಅರಿತ ಅನೇಕರು, ಬೆಂಗಳೂರು ಎಲ್ಲಾ ವಲಯಗಳಿಗಿಂತಲೂ ಅತ್ಯಂತ ಸುರಕ್ಷಿತ ಪ್ರದೇಶ ಎಂದು ಸಾರಿದ್ದು ಇನ್ನಷ್ಟು ಜನ ಇಲ್ಲಿಗೆ ಬಂದು ನಿರ್ಭೀತರಾಗಿ ನೆಲೆ ನಿಲ್ಲಲು ದಾರಿಯಾಗಿತ್ತು. ಇಲ್ಲಿನ ಪರಿಸರ, ಹವಾಮಾನ, ಜೌದ್ಯೋಗಿಕ ನೆಲೆಗಟ್ಟು ಇತ್ಯಾದಿಗಳೆಲ್ಲವೂ ಉತ್ತಮ ಆರೋಗ್ಯದ ಜೊತೆಗೆ ಸುಖಮಯ ಜೀವನವನ್ನು ನಡೆಸಬಹುದಾದ ಮಾರ್ಗಗಳನ್ನು ತೋರಿಸಿತ್ತು.
ಆದರೆ ಈಗ!,
ಬೆಂಗಳೂರು ಇಸ್ ನಾಟ್ ಎ ಸೇಫ್ಟಿ ಸಿಟಿ...
ಎಸ್!.. ಇತ್ತೀಚೆಗೆ ಎಲ್ಲಿ ಹೋದರು ಸದಾ ಒಂದಿಲ್ಲೊಂದು ಬಗೆಯ ಸುಲಿಗೆ ಬೆಂಗಳೂರಿನ ಮಂದಿಗೆ ಖಾಯಂ ಆಗಿದೆ. ಎಲ್ಲಿಂದಲೋ ಜನ ವಲಸಿಗರಾಗಿ ಇಲ್ಲಿಗೆ ಬರುತ್ತಿದ್ದಾರೆ!, ಏನೇನೋ ವ್ಯವಹಾರ ನಡೆಸುತ್ತಿದ್ದಾರೆ!. ಹಣ ಗಳಿಸುವ ವ್ಯಾಮೋಹತನದಿಂದ ಮನುಷ್ಯತ್ವವನ್ನು ಮರೆತು ವ್ಯವಹರಿಸುತ್ತಿದ್ದಾರೆ. ಈ ಹಿಂದಿನ ಸಂಚಿಕೆಯಲ್ಲಿ ಓಲಾ ಕ್ಯಾಬ್‍ಗಳ ‘ಪೀಕ್ ಚಾರ್ಜಸ್’ ಎನ್ನುವ ಉಲಾಲದ ಆಟ ಮತ್ತು ಅವರ ಕೊಳ್ಳುಬಾಕತನದ ಪೂರ್ತಿ ಚಿತ್ರಣವನ್ನು ನಾವು ನಿಮಗೆ ನೀಡಿದ್ದೆವು. ಅದು ದೊಡ್ಡ ಸುದ್ಧಿ ಕೂಡ ಆಗಿದ್ದನ್ನು ನೀವೂ ಓದಿರಬಹುದು. ಇದೀಗ ಅಂತಹದ್ದೇ ಇನ್ನೊಂದು ಮಾಫಿಯಾ ಮಹಾನಗರದಲ್ಲಿ ಬೀಡು ಬಿಟ್ಟಿದ್ದು, ದಂಧೆಯಂತೆ ಎಲ್ಲಾ ಪಟ್ಟಣಗಳಲ್ಲೂ ಶರವೇಗದಿಂದ ಹರಡುತ್ತಿರುವುದು ನಮ್ಮ ಕಣ್ಣಿಗೆ ಬಿದ್ದಿದೆ. ಅದರ ಒಂದು ಸಮೀಕ್ಷೆಯ ಮಜಲನ್ನು ನಿಮಗೂ ತಿಳಿಸಿ ಎಚ್ಚರಿಸುವ ಪುಟ್ಟ ಪ್ರಯತ್ನವೇ ಈ ‘ಸಿರಿ ಬುಲೆಟ್ ಮುಲಾಜೆ ಇಲ್ಲ’ ಎನ್ನುವ ಅಂಕಣದ ಮೂಲ ಉದ್ದೇಶ. ಸಾಧ್ಯವಾದರೆ ಓದಿ ಎಚ್ಚೆತ್ತುಕೊಳ್ಳಿ!..
ಏನದು!!? ಎನ್ನುವ ಪ್ರಶ್ನೆಯಾ!?
ಅದುವೇ ‘ಭಿಕ್ಷಾ ಮಾಫಿಯಾ’...
ಡೈರೆಕ್ಟಾಗಿ ಹೇಳಬೇಕೆಂದರೆ, ಮಹಾನಗರದಲ್ಲಿ ಬಿಕ್ಷುಕರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳಿಂದ ಬಿಕ್ಷೆ ಬೇಡುವುದಕ್ಕಾಗಿಯೇ ಜನ ಬರ್ತಿದ್ದಾರೆ.
ಎಲ್ಲೆಲ್ಲಿಂದಲೋ ಜನರನ್ನು ನಗರಕ್ಕೆ ಕರೆತಂದು ಭಿಕ್ಷೆ ಬೇಡುವ ದಂಧೆಯಲ್ಲಿ ಹಣ ಮಾಡಿಕೊಳ್ಳುವ ಮಾಫಿಯಾವೇ ಬೆಂಗಳೂರಲ್ಲಿ ಈಗ ಶುರುವಾಗಿದೆ ಎಂದರೆ ನಂಬ್ತೀರಾ!?.
ಹಾ! ಸ್ವಾಮಿ... ನಂಬಲೇಬೇಕು...!!!
ತಲೆ ಕೆಡುತ್ತಿದೆಯಾ!?...
ಮೇಲೆ ಹೇಳಿದ ಎಲ್ಲಾ ವಿಚಾರಗಳು ಅಪ್ಪಟ ಸತ್ಯ!..
ದಿನನಿತ್ಯದಲ್ಲಿ ನಿಮ್ಮ ಕಣ್ಣಿಗೂ ಭಿಕ್ಷುಕರು ಕಂಡಾಗ, ಎಂತಹ ಸಣ್ಣ ಪುಟ್ಟ ಕೆಲಸಮಾಡಿದರು ಜೀವನ ನಡೆಸಬಹುದಾದ ಇಂದಿನ ಕಾಲದಲ್ಲಿ ಬಿಕ್ಷೆ ಯಾಕೆ ಬೇಡುತ್ತಿದ್ದಾರೆಂದು ಅನೇಕ ಬಾರಿ ನಿಮಗೂ ಅನಿಸಿರಬಹುದು. ಆದರೆ ಇದಕ್ಕೆ ಏನು ಕಾರಣ!? ಬಿಕ್ಷೆ ಬೇಡುವ ಇವರೆಲ್ಲಾ ಯಾರು!? ಎಲ್ಲಿಂದ ಬಂದಿದ್ದಾರೆ!? ಯಾವ ಮೈಮುರಿಯುವ ಕೆಲಸವನ್ನು ಮಾಡದೇ ಬಿಕ್ಷೆಯನ್ನೇ ಯಾಕೆ ಬೇಡುತ್ತಿದ್ದಾರೆ!? ಇತ್ಯಾದಿಗಳ ಬಗ್ಗೆ ಎಂದಾದರೂ ಚಿಂತೆ ಮಾಡಿದ್ದೀರಾ!? ಮಾಡಿಲ್ಲವಾದರೆ ಈ ಓದುವಿಕೆಯ ಒಂದೇ ರೌಂಡಪ್‍ನಲ್ಲಿ ನಾವು ನಿಮಗೆ ಅಚ್ಚರಿಯ ಮಾಹಿತಿ ಕೊಡ್ತೀವಿ ಓದಿ. ನಂತರ ಮನನ ಮಾಡಿಕೊಂಡು ಚಿಂತಿಸಿ...ಬದಲಾಗಿ ; ಬದಲಾಯಿಸಿ...
ಹಲವು ಕಡೆ ವಯಸ್ಸಾದವರು ಅಥವಾ ಹರಕು ಬಟ್ಟೆ ತೊಟ್ಟವರು ಕಾಸು ಕೊಡಿ!!, ಕಾಸು ಕೊಡಿ!! ಎಂದು ಅನೇಕ ಬಾರಿ ಕಣ್ಣೆದುರು ಓಡಾಡಿದ್ದನ್ನು ನೀವು ಗಮನಿಸಿರಬಹುದು. ಅದಷ್ಟೇ ಅಲ್ಲದೇ ಇನ್ನೂ ಕೆಲವು ಕಡೆ ಪ್ರಿಂಟೆಡ್ ಕಾರ್ಡ್‍ಗಳನ್ನು ಹಿಡಿದುಕೊಂಡು ನಾವು ಅನಾಥರು, ಯಾವುದೋ ಅನಾಹುತಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿರುವೆವು ಸಹಾಯ ಮಾಡಿ ಎಂದು ಕನ್ನಡ, ಇಂಗ್ಲೀಷ್, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಬರೆದ ಪ್ರತಿಯನ್ನು ತೋರಿಸಿ ದುಡ್ಡು ಕೀಳುವವರನ್ನು ನೋಡಿರಬಹುದು!. ಅವರ ಕಷ್ಟಗಳು ನಿಜವಿರಬಹುದೆಂದು ನೀವೂ ಸಹಾಯ ಹಸ್ತವಾಗಿ ಅಷ್ಟೋ ಇಷ್ಟೋ ಹಣವನ್ನು ನೀಡಿರಬಹುದು. ಹಾಗೇನಾದರೂ ಮಾಡಿದ್ದೀರೆಂದರೆ ನೀವೂ ಯಾಮಾರಿದ್ದೀರಿ!, ನಿಮ್ಮ ಹಣವನ್ನು ಯಾರೋ ಅನುಕಂಪನದಿಂದ ಎಗರಿಸಿದ್ದಾರೆ ಎಂದರ್ಥ.
ನಿಜ!!, ಅವರು ತೋರಿಸುವ, ಎದುರಿಗೆ ಬಂದು ನಾಟಕವಾಡುವ ಯಾವುದೂ ನಡೆದೆ ಇರುವುದಿಲ್ಲ. ಅವ್ಯಾವುದು ನಿಜವೂ ಅಲ್ಲ. ಇದರ ಹಿಂದೆ ಭಿಕ್ಷಾಟನೆಯ ಬಹುದೊಡ್ಡ ಮಾಫಿಯಾವೇ ಇದೆ. ಅದಕ್ಕೂ ಒಬ್ಬ ಒಡೆಯನಿರುತ್ತಾನೆ. ಅವನ ಆಳುಗಳೇ ಆ ಮಕ್ಕಳೋ!, ಮನುಜರೋ!! ಆಗಿರುತ್ತಾರೆ. ಅಥವಾ ಸ್ವಂತ ಉದ್ಯಮವೆನ್ನುವಂತೆ ಮಾಡುತ್ತಿರುತ್ತಾರೆ.
ನಗರದ ಟ್ರಾಫಿಕ್ ಸಿಗ್ನಲ್‍ನಲ್ಲಿ ವಾಹನ ನಿಲ್ಲಿಸಿದ ತಕ್ಷಣ ಸಂಧಿಗೊಂದಿಯಿಂದ ಮೂರ್ನಾಲ್ಕು ಮಹಿಳೆಯರು ಬೀದಿಗಿಳಿಯುತ್ತಾರೆ. ಕಂಕುಳಲ್ಲೊಂದು ಎಳೆ ಮಗುವನ್ನು ಇರಿಸಿಕೊಂಡು ಅದರ ಕಡೆ ಕೈ ತೋರಿಸಿ ಹಣ ಕೇಳುತ್ತಾರೆ. ಆ ದ್ರಶ್ಯ ಅನೇಕರ ಮನಕಲಕಿ ಕೈಗೆ ಸಿಕ್ಕ ಹಣವನ್ನು ಕೊಡುವಂತೆ ಪ್ರೇರೆಪಿಸುತ್ತೆ. ಆ ಟ್ರಾಫಿಕ್ ಸಿಗ್ನಲ್‍ನಲ್ಲಿ ಇಡೀ ದಿನ ಇದೆ ಕಥೆ ಮುಂದುವರಿಯುತ್ತದೆ. ನೀವು ಇಲ್ಲೊಂದು ವಿಶೇಷತೆಯನ್ನು ಗಮನಿಸಿರಲಿಕ್ಕಿಲ್ಲ!!. ಬೇಕಿದ್ದರೆ ನಾಳೆಯಿಂದಲೇ ಗಮನಿಸಿ... ಕಂಕುಳಲ್ಲಿರುವ ಅವರ ಮಗು ಯಾವಾಗಲೂ ಅರೆ ನಿದ್ರಾವಸ್ಥೆಯಲ್ಲೆ ಇರುತ್ತದೆ!?
ಚಿಂತಿಸಿ!..
ಯಾಕೆ!?...
ಈ ವಿಚಾರವನ್ನೇ ಮನಗೊಂಡು ನಮ್ಮ ಸಿರಿ ತಂಡ ಈ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಲು ಮುಂದಾದಾಗ ಸಿಕ್ಕ ದೃಷ್ಟಾಂತವನ್ನು ಕೇಳಿದರೆ ನೀವು ಬೆಚ್ಚಿ ಬೀಳಬಹುದು!..
ನಿಜವಾಗಿಯೂ ಆ ಮಗು ಅವರ ಮಗುವಾಗಿರುವುದೇ ಇಲ್ಲ!. ಅದು ಬಾಡಿಗೆಗೆ ದೊರೆಯುವ ಮಗುವಾಗಿರುತ್ತೆ. ಪ್ರತಿದಿನ ಬೆಳಿಗ್ಗೆ ದಿನದ ಬಾಡಿಗೆಯಲ್ಲಿ ಮಗುವನ್ನು ಕರೆತರುತ್ತಿದ್ದಾರೆ ಭಿನ್ನಾಣಗಿತ್ತಿಯ ಪ್ರಿಂಟೆಡ್ ಅಮ್ಮಂದಿರು. ಅಷ್ಟೇ ಅಲ್ಲದೇ ಆ ಮಗುವಿಗೆ ಮಂಪರು ಬರುವಂಥ ಔಷಧಿ ಅಥವಾ ಮಧ್ಯವನ್ನು ಕುಡಿಸುತ್ತಾರಂತೆ. ಅದಕ್ಕಾಗಿಯೇ ಆ ಮಗು ಯಾವಾಗಲೂ ಮಂಪರಲ್ಲೇ ಮಲಗಿರುತ್ತದೆ. ಬಾಡಿಗೆಗೆ ಮಗುವನ್ನು ನೀಡುವಾತ ಅದೆಷ್ಟು ಶ್ರೀಮಂತಿಕೆಯಿಂದ ಬಾಳುತ್ತಿದ್ದಾನೋ ಆ ದೇವರಿಗೆ ಗೊತ್ತು!, ಬಿಕ್ಷೆಯಲ್ಲಿ ದುಡಿಯುತ್ತಿರುವªರಲ್ಲಂತೂ ಚಿಲ್ಲರೆಗೆ ಬೆಲೆಯೇ ಇಲ್ಲ, ಚಿಲ್ಲರೇ ಕೊಟ್ಟರೂ ಸ್ವೀಕರಿಸುವುದಿಲ್ಲ. ಏನಿದ್ದರೂ ನೋಟೇ ನೀಡಬೇಕು. ಅವರ ಅಕೌಂಟ್‍ಗಳಲ್ಲಿರುವ ದುಡ್ಡು ನಮ್ಮ ನಿಮ್ಮಂತವರಲ್ಲಿಯೂ ಇರಲಿಕ್ಕಿಲ್ಲ ಬಿಡಿ!. ನೋ ಚಿಲ್ಲರೇ!, ಓನ್ಲೀ ಡೆಬಿಟ್ಟು ಕ್ರೆಡಿಟ್ಟು...ಬರೀ ನೋಟು ನೋಟು!!. ಇದು ಎಂಥಾ ಭೀಭತ್ಸವಲ್ಲವಾ!?...ಹಾಡು ಹಗಲ ದಂಧೆಯಲ್ಲವಾ!?.
ಉನ್ನತ ಮಾಹಿತಿಗಳಂತೆ, ಈ ಹಿಂದೆ, ಬೆಂಗಳೂರಿನಲ್ಲಿರುವ ಫೇಕ್ಡ್ ಬಿಕ್ಷುಕರನ್ನು ಹಿಡಿಯಲು ಹೋದಾಗ ಅವರು ಮಕ್ಕಳನ್ನು ಬಿಟ್ಟು ಓಡಿ ಹೋಗಿರುವ ಘಟನೆಗಳು ನಡೆದದ್ದು ಇದೆ ಎಂದು ಖಾಸಗಿ ವರದಿಯೊಂದು ಹೇಳುತ್ತದೆ. ಆ ಮಕ್ಕಳು ಎಲ್ಲಿಯವೋ!? ಯಾರದೋ!? ಒಂದೂ ತಿಳಿದಿಲ್ಲ!, ತಿಳಿಯುವುದು ಇಲ್ಲ!. ಈ ರೀತಿಯ ಬಿಕ್ಷಾಟನೆ ಮಕ್ಕಳ ಕಳ್ಳಸಾಗಣೆಯನ್ನು ಹೆಚ್ಚಿಸುತ್ತಿದ್ದು, ಸರ್ಕಾರ ಈ ಬಗ್ಗೆ ಎಷ್ಟೇ ಗಮನ ನೀಡಿದರೂ ಅಧಿಕಾರಿಗಳ ನಿದ್ರಾವಸ್ಥೆಯ ವ್ಯವಸ್ಥೆಯಿಂದ ಭಿಕ್ಷೆ ಬೇಡುವ ದಂಧೆ ಇದೀಗ ಮಾಫಿಯಾವಾಗಿ ಬದಲಾಗಿದೆ.
ಇವರಿಷ್ಟೇ ಅಲ್ಲದೇ ಮಂಗಳಮುಖಿಯರೂ ಕೂಡ ಸಿಗ್ನಲ್‍ಗಳಲ್ಲಿ ಚಿತ್ರ ವಿಚಿತ್ರವಾಗಿ ಭಾವ-ಭಂಗಿಗಳನ್ನು ಪ್ರದರ್ಶಿಸಿ ದುಡ್ಡು ಕೀಳುತ್ತಿರುವುದು ಜನರಿಗೆ ಮುಜುಗರ, ಕಿರಿಕಿರಿ ಉಂಟು ಮಾಡುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಭಿಕ್ಷಾ ಕಲೆಕ್ಷನ್‍ನಲ್ಲಿ ಪ್ರತಿ ಒಂದು ಸಿಗ್ನಲ್ ಬಿದ್ದು ಮೂವ್ ಆಗುವ ಹೊತ್ತಿಗೆ 50 ರಿಂದ 100 ರೂಪಾಯಿಯ ಕಲೆಕ್ಷನ್ ಮಾಡಬಹುದಂತೆ!!. ಇದೆಲ್ಲ ಅಕ್ರಮವಲ್ಲದೇ ಇನ್ನೇನು!? ನೀವೇ ಹೇಳಿ!!.
ಎಷ್ಟೋ ಕಡೆ ಅನೇಕ ಕಿಡಿಗೇಡಿಗಳು ಮಂಗಳಮುಖಿಯರ ವೇಷ ಧರಿಸಿ ಕಾಸು ಕೀಳುವ ಧಂಧೆಗೆ ಇಳಿದಿದ್ದಾರೆ. ಕೆಲವೊಮ್ಮೆ ಜನರನ್ನು ಬೆದರಿಸಿ ಹಣ ಒಡವೆಗಳನ್ನು ಕಿತ್ತುಕೊಂಡಿರುವ ಘಟನೆಗಳು ನಡೆದಿವೆ. ಅದಕ್ಕಾಗಿ ಎಲ್ಲಿ ಭಕ್ಷತೆ ಕಂಡು ಬರುತ್ತೋ ಅಲ್ಲೇ ಅದರ ನುಂಗುವಿಕೆಯನ್ನು ಬಲೆ ಹಾಕಿ ತಡೆಯಬೇಕು. ಲೈಂಗಿಕ ಅಲ್ಪಸಂಖ್ಯಾತ (ಮಂಗಳಮುಖಿ)ರಾಗಿರುವವರನ್ನು ಸೇರಿಸಿ, ಜಾಗೃತಿ ಮೂಡಿಸಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು.
ಮನುಷ್ಯನ ಹೊಟ್ಟೆಪಾಡೇನು!? ಅವನು ಅದಕ್ಕಾಗಿ ಮಾಡುತ್ತಿರುವುದೇನು!? ಮಾನವನ ನೈತಿಕತೆ ಅಧೋಗತಿಯಾಗಿದೆಯಾ!? 21ನೇ ಶತಮಾನದಲ್ಲಿ ಭಾರತದ ಸಮಾಜ ವ್ಯವಸ್ಥೆ ಗಬ್ಬುನಾರುತ್ತಿದೆಯಾ!? ಈ ಎಲ್ಲದರ ಬಗ್ಗೆ ಪ್ರಜ್ಞಾವಂತಾರಾಗಿ ನಾವು-ನೀವು ಚಿಂತಿಸಬೇಕು.
ಅಂದು ಅಮ್ಮಾ!!!.., ತಾಯಿ!!!.., ಎಂದು ಮನೆ ಮುಂದೆ ಊಟಕ್ಕೆ ಬೇಕಾಗುವ ಅನ್ನವನ್ನೋ, ಅಕ್ಕಿಯನ್ನೋ ಬೇಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ದುಡ್ಡು ಎನ್ನುವ ಮಾಯಾಂಗನೆ ಎಲ್ಲಾ ರಂಗವನ್ನು ನರಕಕ್ಕೆ ದೂಡುತ್ತಿದೆ, ಮಾಫಿಯಾ ಎನ್ನುವ ಜಾಲ ಎಲ್ಲಾ ರಂಗದಲ್ಲೂ ಹಾಸು ಹೊಕ್ಕಾಗಿದೆ. ಸಮಾಜ ಕೆಡುತ್ತಿದೆ, ಕೆಡಿಸುತ್ತಿದೆ.
ನಗರದ ರಸ್ತೆಗಳಲ್ಲಿ ಸಣ್ಣಪುಟ್ಟ ಮಕ್ಕಳನ್ನು ಭಯಾನಕವಾಗಿ ನಡೆಸಿಕೊಳ್ಳಲಾಗುತ್ತಿದೆ. ಫುಟ್ ಪಾತ್‍ಗಳಲ್ಲಿ ಬಿಸಿಲು ಧೂಳಿನಲ್ಲಿ ಮಕ್ಕಳನ್ನು ನಿಲ್ಲಿಸಿ ಬಿಕ್ಷೆ ಬೇಡಿಸಲಾಗುತ್ತಿದೆ. ಮಹಾನ್ ಸಿಟಿಗಳಲ್ಲೇ ನಡೆಯುವ ಈ ಬಿಕ್ಷಾ ದಂಧೆಯ ಹಿಂದೆ ಒಂದು ದೊಡ್ಡ ಮಾಯಾಜಾಲವೇ ಇದೆ ಎನ್ನುವುದು ಇವೆಲ್ಲದರ ಮೂಲಕ ನೇರವಾಗಿ ಗ್ರಾಹಿತವಾಗುತ್ತದೆ. ಪೋಲೀಸರು ಇಂತಹ ಬಿಕ್ಷಾಟಕರ ಮೇಲೆ ತೀವ್ರ ನಿಗಾ ಇಡಲೇಬೇಕಾಗಿದೆ. ಇವೆಲ್ಲದರ ಮೂಲ ಹುಡುಕಿ ಬಹು ಬೇಗ ಸರ್ಕಾರ ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲವಾದರೆ ಮುಂದೊಂದು ದಿನ ಇದೇ ಇನ್ಯಾವುದೋ ಮಾಫಿಯಾ ಜಾಲಕ್ಕೆ ಕರೆದೊಯ್ದು ಮತ್ಯಾವ ಸಂಕಷ್ಟಕ್ಕೆ ಸಿಲುಕಿಸುವುದೋ ಹೇಳಲಸಾಧ್ಯ.
ಒಟ್ಟಾರೆ ಮೇಲೆ ಹೇಳಿದಂತೆ ಬಿಕ್ಷಾಟನೆ ಎಂಬ ಧಂಧೆಯನ್ನು ನಿರ್ಮೂಲನ ಮಾಡಲು ಪೋಲೀಸರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ. ಅಲ್ಲದೇ ಸಾರ್ವಜನಿಕರಾದ ನೀವುಗಳು ಇವತ್ತಿಂದಲೇ ಬಿಕ್ಷೆ ನೀಡುವ ಗುಣವನ್ನೇ ನಿಲ್ಲಿಸಿ ಅದರ ಹಿಂದೆ ಹೋರಾಡಬೇಕಾಗಿದೆ. ಬಾಲ ನ್ಯಾಯ ಕಾಯಿದೆ ಅನ್ವಯ ಮಕ್ಕಳ ಶೋಷಣೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಹಾಗೂ ಬಿಕ್ಷಾಟನೆಗೆ ದೂಡುವವರ ವಿರುದ್ಧ ಮೊಕದ್ದಮೆ ದಾಖಲಿಸುವ ಎಲ್ಲಾ ಸ್ವಾತಂತ್ರ್ಯವೂ ನಿಮಗೆ ಇದ್ದು, ನಿಮ್ಮ ಕಣ್ಣಿಗೆ ಇಂತಹ ಘಟನೆಗಳು ಕಂಡು ಬಂದರೆ ಶೀಘ್ರ ದೂರು ನೀಡಿ ಸಮಾಜದ ಒಳ್ಳೆಯ ಕಾರ್ಯಗಳಲ್ಲಿ ಭಾಗಿಯಾಗಬೇಕು. ಕೇವಲ ಸರ್ಕಾರ, ಸರ್ಕಾರೇತರ, ಅಧಿಕಾರಿ ಹಾಗೂ ಫೋಲಿಸ್ ವರ್ಗಗಳಿಂದ ಮಾತ್ರಾ ಇವುಗಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರಾದ ನಮ್ಮ-ನಿಮ್ಮ ಕೆಲಸ ಕಾರ್ಯ ಸಹಕಾರವೂ ಅತೀ ಮುಖ್ಯ.
ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದ ಹಲವೆಡೆ ಈ ಸಮಸ್ಯೆಗಳು ತುಂಬಿ ತುಳುಕುತ್ತಿದ್ದು, ಇವುಗಳ ಬಗ್ಗೆ ಸಂಬಂಧಿಸಿದ ಇಲಾಖೆ ಇನ್ನೂ ಹೆಚ್ಚಿನ ನಿಲುವನ್ನು ತಳೆದು ಸರಿಯಾದ ಕ್ರಮಕೈಗೊಳ್ಳಬೇಕು. ಆಗ ಮಾತ್ರಾ ಈ ಬಿಕ್ಷಾಟನೆಯ ದಂಧೆಗೆ ಕಡಿವಾಣ ಹಾಕಬಹುದು. ಏನಂತೀರಾ!?.
ಮತ್ತೇ ಎಚ್ಚಿರಿಸುತ್ತಿದ್ದೇನೆ ಇಂದಿನಿಂದಲೇ ನೀವು ಬಿಕ್ಷೆ ನೀಡುವುದನ್ನೇ ಸ್ಟಾಪ್ ಮಾಡಿ... ಯಾರೂ ಯಾರ ಜೀವನಕ್ಕೂ ನೆರವಾಗೋದು ಬೇಡ... ಅವರವರ ಹೊಟ್ಟೆ ಬಟ್ಟೆ ಅವರವರೇ ನೋಡಿಕೊಳ್ಳಲಿ...ಈ ಮೂಲಕ ನಾವು ನೀವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ, ಸಮಾಜವನ್ನು ಕೆಟ್ಟ ಕರ್ಮಗಳಿಂದ ವಿಮುಕ್ತಿಗೊಳಿಸೋಣ...
Tuesday, 14 June 2016
ಮಳೆಗೆ ಶುರು ಬಾಲ್ಯದ ನೆನಪ ತೇರು
ಬರಡಾಗಿ ಬೆಂಡಾದ ಭುವಿಗೆ ತಂಪಾಗೋ ಕಾಲ ಸನ್ನಿಹಿತವಿನ್ನೂ..
ಶುರುವಾಗುತ್ತದೆ ಎಲ್ಲೆಲ್ಲೂ ಹನಿಮಳೆಯ ಪುಳಕವಿನ್ನೂ...
ಜಯಂತ್ ಕಾಯ್ಕಿಣಿ ಹೇಳುವಂತೆ "ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು"..
ನಿಜ.! ಎಂಥಾ ಸಾಲುಗಳಲ್ವಾ!, ಇಷ್ಟುದಿನ ಮೇಲೆ ತೇಲಾಡುತ್ತಿದ್ದ ಮೋಡಗಳು, ಇಳೆಗೆ ಹನಿಯಾಗಿ ಮುಗಿಲನ್ನು ತರುವ ಸನ್ನಿಹಿತ ಬರುತ್ತಿದೆ.ಮೋಡಗಳೆಲ್ಲಾ ಮುಗಿಲಾಗುವ ಕಾತರಿಕೆಯಲ್ಲಿ ತಾ ಮುಂದು ನಾ ಮುಂದು ಎಂದು ಬಂದು ಒಬ್ಬೋಬ್ಬರಿಗೆ ಇಷ್ಟ, ಇನ್ನೂ ಕೆಲವರಿಗೆ ಕಷ್ಟವಾಗೋ ಪ್ರಮಯವೂ ಬರುತ್ತಿದೆ..ಆದ್ರೂ ಮಳೆಕೊಡುವ ನೆನಪು, ಖುಷಿ, ಬಹುಹಿಂದಿನ ಪುನರ್ಮಿಲನದ ಭಾವನೆ, ಪುಳಕ, ಇನ್ಯಾವುದು ಕೊಡಲಾರವು ಅಲ್ವಾ..ಅದೇಷ್ಟೋ ನೋವು-ನಲಿವು, ದುಃಖ-ದುಮ್ಮಾನಗಳು ಜೊತೆ ಇದ್ದರೂ ಒಮ್ಮೆ ಹನಿಮಳೆಯಲಿ ಕೈಚಾಚಿ ಭಾವಪೂರ್ಣವಾಗಿ ನೆನೆದರೆ ಅದರ ಹಿತವೆ ಬೇರೆ ಮುಖ್ಯವಾಗಿ ಅದು ನೀಡೊ ಬಾಲ್ಯ ಜೀವನದ ಆ ಸುಖವೆ ಬೇರೆ ಅಲ್ವಾ!.
ಆಗೆಲ್ಲಾ ನಮ್ಮ ಚಿಕ್ಕವಯಸ್ಸು, ಹರಿದಕೊಡೆಯ ಜೊತೆ, ತುಂಬು ಭಾರದ ಚೀಲಾ ಬಗುಲಲ್ಲಿ..ಜೊತೆಗೆ ಮಧ್ಯಾಹ್ನದ ತಂಪು ಊಟದ ಬುತ್ತಿ(ಇಗಿನ ಮಕ್ಕಳದ್ದು ಬಿಸಿಯೂಟ),ಶಾಲೆಯ ಪ್ರಾರಂಭದ ದಿನಗಳೇ ಮಳೆಯ ಚಳಿ..ರಸ್ತೆಯ ಕೆಂಪುಮಣ್ಣಿನ ಪಾಕದ ಮೇಲೆ ಸವಾರಿ ಅಲ್ಲಲ್ಲಿ ಹರಿಯೋ ಸಣ್ಣ ಜರಿಗಳಲ್ಲಿ ಮೀನು ಹಿಡಿದುಬಿಡೊ ಆಟ..ಆಗ ಬರುತಿದ್ದ ಪ್ಯಾರಗಾನ್ ಚಪ್ಪಲಿ.,, ಇದೆ ಮೊದಲಾದವುಗಳ ಸಂಘಮ..
ಸ್ವಲ್ಪ ದುಡ್ಡಿರೋರು ತಮ್ಮ ಮಕ್ಕಳಿಗೆ ಹೊಸ ಕೊಡೆಯನ್ನ ತೆಗೆಸಿಕೊಟ್ಟರೆ, ನಮ್ಮ ಬಡವರ ಪಾಡು ನಡೆದಿದ್ದೆ ಹರಿದ ಹಿರಿದಾದ ಉದ್ದನೆಯ ಹಿಡಿಯ ನಡುವೆ..ಆ ಸುಖವೆ ಒಂಥರ ಬೇರೆ;ನಡುದಾರಿಯಲ್ಲಿ ಗಾಳಿಮಳೆಗೆ ಸಿಕ್ಕ ಛತ್ರಿ ಮೇಲಕ್ಕೆ ಹಾರಿದ್ದು, ಒಂದೇ ಕೊಡೆಯ ನಡುವೆಅಡಿ ನಾಲ್ಕು ಜನರು ಆಶ್ರಯ ಪಡೆದು ಮೈ ಒದ್ದೆಯೊಂದಿಗೆ ಮನೆ ಸೇರಿದ್ದು, ಅನ್ಯಾಯದ ಮರೆಯುವಿಕೆಯ ನಡುವೆ ಶಾಲೆಯಲ್ಲೆ ಛತ್ರಿ ಮರೆತು ಗೆಳೆಯನ ಜೊತೆ ಆಶ್ರಯ ಕೇಳಿದ್ದು, ರಸ್ತೆಯ ಹೊಂಡದ ನೀರನ್ನ ಕಾಲಲ್ಲಿ ಚೊಗೆದು ಖುಷಿಪಟ್ಟಿದ್ದು, ತೊರೆಗಳಲ್ಲಿ ಮೀನು ಹಿಡಿಯುತ್ತಾ ಕುಳಿತು ಸಮಯ ಮರೆತು ಮಾಸ್ಟರ್ ಹತ್ತಿರ ಭೈಸಿಕೊಂಡಿದ್ದು, ಹೊಸ ಕೊಡೆಬೇಕು ಅಂತಾ ಅಮ್ಮನ ಹತ್ತಿರ ಗೋಗೆರೆದಿದ್ದು, ಲೋ ಮಳೆರಾಯ ಇವತ್ತು ಇಡೀ ಬಾ ಶಾಲೆಗೆ ರಜೆ ಕೊಡುತ್ತಾರೆ ಅಂತ ಮಳೆರಾಯನಿಗೆ ಭುವಿಯಿಂದಲೇ ಕರೆಕೊಟ್ಟಿದ್ದು.., ಹೀಗೆ ಹಲವು ಅಂಶಗಳು ಸವಿಮಳೆಯ ಮೆಮೋರಿಯಲ್ ಮೆಮೋರೇಬಲ್ ಆಗೆ ಕುಳಿತು ನಮ್ಮೇದೆಯಲ್ಲಿ ಕಚಗುಳಿಯ ಪುಳಕವೆಬ್ಬಿಸಿದರೆ ಆಶ್ಚರ್ಯ ಪಡಬೇಕಿಲ್ಲಾ ಅಲ್ವಾ .ನಿಮಗೂ ಇಗ ನಿಮ್ಮ ಹಳೆಯ ಮೆಮೋರೆಬಲ್ ನೆನಪಿನ ಸವಿ ಕಾಡುತ್ತಾ ಇದ್ಯೆನೋ ಅಲ್ವ..
ನೀವು ಒಮ್ಮೆ ಸಖತ್ತಾಗಿರೋ ಅನುಭವ ಪಡಿಬೇಕು ಅಂದ್ರೆ ಹನಿ ಮಳೆಯಲ್ಲಿ ಹಾಯಾಗಿ ಬಾನಿಗೆ ಮುಖಚಾಚಿ , ಕಣ್ಮುಚ್ಚಿ ನೆನೆದು ಬಾಲ್ಯದ ಸವಿ ನೆನಪನ್ನ ಸವಿಯಿರಿ..
ಹಾ..,! ಶೀತ ಜ್ವರ ಬರೋತರ ನೆನಿಬೇಡಿ ಅಮೇಲೆ ಕಷ್ಟವಾದೀತು..
ನಿಮಗೆ ಎನನಿಸಿತ್ತು ಮಳೆಯಲ್ಲಿ ನೆನೆದಾದ ಮೇಲೆ ನನಗೂ ತಿಳಿಸಿ..
Subscribe to:
Posts (Atom)



























































