Saturday, 13 February 2016

ಭಾವದ ಬೆನ್ನೇರಿ...ಈ ಗುಟ್ಟಲ್ಲಿ ಶಾಮೀಲು ನೀನು...



(ಪ್ರೇಮಿಗಳ ದಿನದ ವಿಶೇಷವಾಗೊಂದು ಲೇಖನ. ಓದುವ ಮುನ್ನ ಎಚ್ಚರಿಕೆಯ ಮಣೆ, ಹುಡುಗಿಯರೇ ನಿಮ್ಮ ಹಾರ್ಟ್‍ಗೆ ನೋವಾದರೆ ನಾನಲ್ಲ ಹೊಣೆ)
ಹಾಯ್ ಡಿಯರ್,
ಇ...
“ ಎಲ್ಲಿಂದ ಬಂದೆ ನೀನೊಬ್ಬಳೆ..,
ಊಹೆಗೂ ಮೀರಿದ ಗಂಧರ್ವಳೆ..,
ಕಾಡಿಹೆ ನೀನು ಇಂದಿಗೂ ನನ್ನೊಬ್ಬಳೆ...”


ಇಲ್ ಕೇಳು...
ನೋ ಡೌಟ್...
 ನಾನೊಬ್ಬ ತ್ಯಾಗಿಯಾಗಿ ತಂತಿ ಮೀಟುವುದು ಖಚಿತ, ಅದಕ್ಕೆ ಮನಪೂರ್ಣ ಸಿದ್ಧನಾಗಿರುವುದು ನಿಜ...ಆರಾಮಾಗಿ ಸ್ವಚ್ಚಂದದಿ ಬಾನಂಗಳದಲ್ಲಿ ಹಾರಾಡಿಕೊಂಡಿದ್ದ ನನ್ನ ಭ್ರಾಂತಿ ಮಂಪರಿಗೆ ಬಲೆ ಬೀಸಿ ಮನವ ಕದ್ದಿದ್ದು ನೀನಾ!? ನಿನ್ನಾ ಚೆಲುವಾ!!? ಎನ್ನುವ ಸಂಶಯ ಇಂದಿಗೂ ನನ್ನೊಳಗೆ ಪ್ರಶ್ನೆಯಾಗಿಯೇ ಉಳಿದಿದೆ. ನಿಂಗೊತ್ತಾ!?..,ನಿನ್ನ ಮೋಹಕತೆ ಈಗಲೂ ನನ್ನನ್ನ ಬಡಿದೆಬ್ಬಿಸುತ್ತೆ, ಪುಟಿದೆಬ್ಬಿಸುತ್ತೆ, ಕಳವಳಗೊಳ್ಳುವಂತೆ ಮಾಡುತ್ತೆ, ಆದರೂ ಇದ್ಯಾವುದು ನಿನಗೆ ತಿಳಿದಿಲ್ಲ ಬಿಡು. ನಾನೊಂತರ ಹೂವಿನ ಸಂತೆಗೆ ಬಂದಿರೋ ದುಂಬಿ ಅನಿಸಿದರೂ, ನನ್ನ ಮನಸಿಗೆ ಸುವಾಸನೆ ಬೀರಿದ ಹೂ ಮಾತ್ರಾ ನೀನೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಒಮ್ಮೊಮ್ಮೇ ಹೀಗೇ ಕಳೆಯಲಿ ಜೀವನಾ, ಹೀಗೆ ಮೆರೆಯಲಿ ತನುಮನ ಅನಿಸಿದರೂ ಮುಂದೊಂದು ದಿನ ನೀ ಸಿಗಲಾರೆಯೇನೋ ಅನ್ನಿಸಿ ಬೇಡ ಸುಮ್ಮನಿರು ಎನ್ನುವ ಮೌನದಲ್ಲೇ ನಿಟ್ಟುಸಿರಿಯುತ್ತೇನೆ.
ಬೇಜಾರಿಲ್ಲ.., 
ಈಗಲೂ ರಾತ್ರಿ ಸಮಯ ಬಾನಂಗಳಕ್ಕೆ ಮುಖ ಮಾಡಿ ನಿಂತರೆ ಅಗೋಚರಕ್ಕೆ ನಕ್ಷತ್ರಗಳ ರಾಶಿ ಮಧ್ಯೆ ನಿನ್ನ ನಗು ಹೊಳೆದಂತಾಗಿ ಭಾವನೆಗಳ ಮೆರವಣಿಗೆ ರಥಭೀದಿ ತುಳಿಯಲು ಆರಂಭಿಸಿಯೇ ಬಿಡುತ್ತದೆ. ಬಹುಶಃ ಸರಿಸುಮಾರು 7 ವರ್ಷಗಳಿಂದ ಕಾಣುತ್ತಿದ್ದ ನಿನ್ನ ಮುಖದ ಸೊಬಗೂ ಇನ್ನೂ ಮಾಸದೇ ಹಾಗೆ ಉಳಿದಿದ್ದರೂ, ಕಾಂತಿ ಹೆಮ್ಮರವಾಗಿ ಬೆಳೆಯುತ್ತಲೇ ಹೆಜ್ಜೆ ಇಡುತ್ತಿದ್ದರೂ, ನನ್ನೊಳಗಿರುವ ಭಾವನೆಯನ್ನು ಮಾತ್ರಾ ಒಂದಿನಿತು-ಒಂದಿನವೂ ಹೇಳಲಾಗದೇ ತಡಬಡಿಸುತ್ತಿರುವುದು, ನನ್ನ ದೌರ್ಭಾಗ್ಯವೋ, ನಿನ್ನ ಸೌಭಾಗ್ಯವೋ ತಿಳಿದಿಲ್ಲ ಕಣೇ...
ನಂಗೊತ್ತು ನಾ ಭಾವಗಳ ಬೆನ್ನೇರಿ ಸಾಗುತ್ತಿರುವ ಪಯಣಿಗ ಎಂದು, ಆದರೆ ನಾ ಇಷ್ಟು ದೂರ ಸಾಗಿ ಬರಲು, ಎತ್ತರಕ್ಕೇರಲು, ಈ ಮಾರ್ಗ ಕಂಡುಕೊಳ್ಳಲು ಕಾರಣ ಇದ್ದರೇ  ಅದು ನೀನೇ ಬಂಗಾರಿ.  ಈ ನನ್ನ ಒಂಟಿಯಾದ ಭಾವನೆಗಳಿಗೆ ಗೊಬ್ಬರವಿತ್ತು ಪೋಷಿಸುತ್ತಿರುವ, ಏಕಾಂಗಿ ತನದಲ್ಲಿ ಒಮ್ಮೊಮ್ಮೆ ನೋವು-ನಲಿವನ್ನು ಝಳಪಿಸುವಂತೆ ಮಾಡುವ ಮನ್ಮಥೆಯೂ ನೀನೆ. ಸದಾ ಕಾಡುವ ನೆನಪೂ ನಿನೆ...  ಹಾ...ನೀನೊಂತರ ತಿಳಿನೀರು, ನಾನೊಂಥರ ಭೂಮಿಗಾವು. ಆದರೆ, ಮರುಭೂಮಿಯ ಭಂಜರಲ್ಲ್ಲಿ ಬಿದ್ದಿದ್ದ ನನ್ನ ಬದುಕಿಗೆ ನೀರುಣಿಸಿ ಮೊಳಕೆಯೆಬ್ಬಿಸಿ ಭಾವದ ಜೀವ ಬೆಳೆಸಿ ಬಳಿಕ ಸುಳಿವಿಲ್ಲದೇ ಸಾಗಿದ ನಿನಗೆ ನಿನ್ನ ಪಾಪುವಿನ ಚಿಂತೆಯಿಲ್ಲದಿರುವುದು ಪಾಲನೆಯ ಕೊರತೆಯಾಗುತ್ತೆಂದು ಒಂದಿನವು ಅನಿಸಿಲ್ಲವೇ ಗೆಳತಿ!?.
ಯಾಕೀತರ!!?, 
ನೀ ಎದುರು ಬಂದಾಗೆಲ್ಲಾ ಏನೋ ನಿರೀಕ್ಷೆ, ಸಡಗರ, ಸಂತೋಷ, ಜೊತೆಗೊಂದಿಷ್ಟು ಅಳುಕು, ಬೆವರು, ಭ್ರಾಂತಿ, ನಡುಕ. ಆದರೆ ಅವುಗಳಲ್ಲೂ ಎಷ್ಟೊಂದು ಸುಖವಿತ್ತು ಗೊತ್ತಾ... ನಡುರಾತ್ರಿಯಲ್ಲಿ ಕೆಟ್ಟ ಕನಸು ಕಂಡು ಹೆದರಿದವನೊಬ್ಬ ಬೆಳಿಗ್ಗೆ ಎದ್ದಾಗ ಜ್ವರದಿಂದ ಬೇವತ ಸುದ್ದಿ ಸುಮಾರು ಬಾರಿ ಅಜ್ಜಿ ಬಾಯಲ್ಲಿ ಕೇಳಿದ್ದ ನನಗೆ ಈ ಪ್ರೀತಿ ಜ್ವರ ಎಬ್ಬಿಸಿ ತೋರಿಸಿದ್ದು ಬರವಣಿಗೆಯ ನಿರಾಳ ವೇಧ...
ನನಗೆ ಗೊತ್ತು..,
ಈ ಎಳು ವರ್ಷ ನಾ ಕಳೆದಿದ್ದು ಮೌನ ಕ್ರಾಂತಿಯಲ್ಲಿಯೆ. ನೀನೂ ಅಮವಾಸೆಗೋ, ಹುಣ್ಣಿಮೆಗೋ ಒಮ್ಮೊಮ್ಮೆ ಬಳಿ ಬಂದು ಹತ್ತಿರ ನಿಂತು ಕೈ ಹಿಡಿದು ಮಾತನಾಡಿಸುತ್ತಿದ್ದರೂ, ನಿಜಾನಾ-ಸುಳ್ಳಾ, ಕನಸಾ-ನನಸಾ ಎನ್ನುವ ಮಂಪರಿನಿಂದ ಹೊರಬರಲಾರದೇ ಗದ್ಗಧಿತನಾಗಿ ಮಾತಾಡದೆ ನಿಂತಿದ್ದು, ನಿನಗೆ ನನ್ನ ಒಳಭಾವ ಅರಿಯಲು ಅಸಮರ್ಥಳನ್ನಾಗಿ ಮಾಡಿರಬಹುದು...ಕ್ಷಮೆ ಇರಲಿ... ಯಾಕೆಂದರೆ ಎಲ್ಲರಂತಲ್ಲ ಈ ನಿನ್ನ ಪ್ರೇಮಿ.
ಪರಿತಾಪವಿದೆ ಮುದ್ದು..,
 ಹಳೆಯ ದಿನಗಳ ಮೆಲುಕು ಹಾಕಿದರೆ ಕಣ್ಣು ಹನಿಯ ದಾರಿ ನೋಡುತ್ತದೆ. ನೆನಪಿದ್ಯಾ ನಿಂಗೆ, ನಾವಿಬ್ಬರೂ ಬಹಳ ಹತ್ತಿರವಿದ್ದರೂ ಮಾತಾಡದೇ ದೂರ ನಿಂತಿದ್ದೆವು, ನಿನಗೆ ನಾನು, ನನಗೆ ನೀನು ಅನೇಕ ಬಾರಿ ಕಷ್ಟ ಸುಖ, ನೋವು ನಲಿವನ್ನು ಹಂಚಿಕೊಂಡಿದ್ದೇವು. ಆದರೆ ಅದೆಲ್ಲಾ ಪ್ರೀತಿ ಅಲ್ಲಾ ಎಂದು ಹೇಗೆ ಹೇಳಲಿ ಇಂದು...
ಕನ್ಫ್ಯೂಷನ್ ಆಗ್ತಿದೆ ನಂಗೆ..,
 ಒಟ್ಟಿಗೆ ಹಿಂದೆ ಮುಂದೆ ನಡೆದ ದಾರಿಗಳು ಇವತ್ತಿಗೂ ಒಂಟಿ ಪಯಣಮಾಡುತ್ತಿದ್ದಾಗ ಎದ್ದು ನಿಂತು ನಿನ್ನ ಬಗ್ಗೆ ಕೇಳುವವು!?, ಮೊದಲು ಮಾತನಾಡಿ ಇಟ್ಟ ಫೋನ್ ಇಂದಿಗೂ  ಮತ್ತೆ ಯಾವಾಗ ನಿಮ್ಮ ಮಾತು ಎನ್ನುವ ಪ್ರಶ್ನೆ ಮಾಡುವುದು!?, ರಜೆ ತನ್ಮಧ್ಯೆ ನಮ್ಮನೆಗೆ ನೀ ಭೇಟಿ ಇಟ್ಟಾಗ ವರಾಂಗಣ ಸುತ್ತಿ ಬರೋಣವೆಂದು ಕರೆದಾಡಿದ ಸ್ಥಳಗಳು ಇಂದು ನನ್ನೊಬ್ಬನ ನಡಿಗೆ ನೋಡಿ ಎಲ್ಲಿ ಅವಳು ಎನ್ನುವವು!?,  ಒಂದೇ ಮರದಡಿ ಮಾತಾಡದೇ ಒಂದರ್ಧ ಗಂಟೆ ಕಳೆದ ಸಮಯ ಇಂದಿಗೂ ನಿಮ್ಮ ಸಂಕೋಚ ಹೋಗಿಲ್ಲವೇ ಎಂದು ಮುಜುಗರ ಪಡಿಸುತ್ತಿರುವುದು, ಮೊದಲ ಬಾರಿ ಹತ್ತಿಸಿಕೊಂಡು ಹಳ್ಳಿ ಸುತ್ತಿಸಿದ್ದ ನನ್ನ  ಬೈಕ್ ನಿಮ್ಮಿಬ್ಬರ ಅಂತರ  ಇನ್ನೂ ಅಷ್ಟೇಯೇ ಇದೆಯಾ ಎಂದು ಗುರಾಯಿಸುತ್ತಿರುವುದು, ಅಂದಿಂದ ಇಂದಿಗೂ ಹೇಳಲಾಗದೇ ಉಳಿದಿರುವ ಮಾತುಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದು,  ಕೆಲವೊಂದಿಷ್ಟು ಆತ್ಮಹತ್ಯೆಗೂ ಮನಸ್ಸು ಮಾಡಿರುವುದು ಸಂಕಟ ತಂದೊಡ್ಡಿದೆ, ಬಾ ಇವರೆಲ್ಲರಿಗೆ ನೀನೆ ಉತ್ತರ ಹೇಳು, ಭವಿಷ್ಯ ನೀಡು.
ಕಾರಣ ಕಂಡವರ್ಯಾರು..,
 ಬಹುಶಃ ನನ್ನ ಪ್ರೇಮ ಪವಿತ್ರವಿರಬಹುದು. ಪವಿತ್ರ ಪ್ರೇಮದ ಹಿನ್ನೆಲೆಯಲ್ಲಿ ಅದೆಷ್ಟೋ ದಂತ ಕತೆಗಳಿವೆ, ಗ್ರಂಥಗಳಿವೆ, ಮರೆಯಲಾರದ ಹಾಡುಗಳಿವೆ, ಅದ್ಭುತ ಸ್ಮಾರಕಗಳಿವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯೆಂದರೆ , ದಿನಕ್ಕೊಂದು ಕಡೆ ಪಾರ್ಕು, ಸಿನೆಮಾ, ಔಟಿಂಗ್, ಡೇಟಿಂಗ್ ಅಂತ ಬಾಯ್ ಫ್ರೆಂಡ್/ಗರ್ಲ್ ಫ್ರೆಂಡ್ಸ್ ಜೊತೆ ಸುತ್ತಾಡಿ, ರಾತ್ರಿ ಇಡೀ ಚಾಟಿಂಗ್ ನಡೆಸಿ, ಇನ್ ಬಾಕ್ಸ್ ಫುಲ್ ಆದ ಮೇಲೆ ಡಿಲೀಟ್ ಮಾಡುವ ಮೆಸೇಜ್‍ನಂತೆ ಹುಡುಗ ಹುಡುಗಿಯರ ಭಾವಗಳು ಬದಲಾಗುತ್ತಿರುವುದು ನಿಜಕ್ಕೂ ನನ್ನ ಪ್ರೀತಿಗೆ ಅನ್ವಯವಾಗುದಿಲ್ಲ ಆದರೂ ಹೋಗುವ ಮುಂಚೆ ಹೇಳಿ ಹೋಗು ಕಾರಣ ಮರೆಯದಿರು!..
ನಿಂಗೊತ್ತಾ ಚಿನ್ನಿ.., 
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು, ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಗೆ ಒಳಪಡದೆ ಇದ್ದದ್ದು.  ಸ್ವಾರ್ಥಕ್ಕೆ ಎಷ್ಟು ದೂರವಾದುದ್ದೋ, ಅಷ್ಟೇ ಹತ್ತಿರವಾದದ್ದು. ಇದುವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಬಗೆ ಬಗೆಯಲ್ಲಿ ಬಣ್ಣಿಕೆ ಕಂಡದ್ದು, ಹೇಗೆ ವರ್ಣಿಸಿದರೂ ಮತ್ತೆ ಮತ್ತೇ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೊ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ಪಟ್ಟಿದ್ದು, ಮತ್ತೆ ಮತ್ತೆ ಬಣ್ಣಿಸಲ್ಪಟ್ಟಿದ್ದು. ಇಷ್ಟೆಲ್ಲಾ ಇದ್ದರೂ ನಿನಗ್ಯಾಕೆ ಅದರಂದ ನನ್ನ ಮನದಲ್ಲಿದೆ ಎಂಬುದು ಅರಿವಾಗಲಿಲ್ಲ ಎನ್ನುವುದೇ ಇಂದಿನ ನನ್ನ ಚಿಂತೆಯ ಚಿಂತನೆ...
ಸಮಸ್ಯೆ ಇದೆ..,
ತಿಳುವಳಿಕೆ ಬರಲು ಈ ಸಮಸ್ಯೆಯೂ ಇರಬಹುದೇನೋ!? ಒಂದು ದಿನವೂ ನಾವು ಪ್ರಾಪಂಚಿಕ ಜಗತ್ತಿನಲ್ಲಿ ಪ್ರೇಮಿಗಳ ಥರ ಜೋಕಾಲಿ ಆಡಲಿಲ್ಲ, ಪ್ರೀತಿ ಎನ್ನುವ ಕಾರಣಕ್ಕೆ ನಾ ನಿನ್ನ ಪೀಡಿಸಿಲ್ಲ, ನಿನ್ನ ಸಾನಿಧ್ಯಕ್ಕೆ ನಾ ತುಂಬಾ ಹತ್ತಿರವಾಗಿ ನಿಂತಿದ್ದರೂ, ನೀ ಅದನ್ನು ಕೆಟ್ಟದೆಂದು ಗ್ರಹಿಸಿಲ್ಲ, ಗೆಳೆಯ ಗೆಳತಿಯ ಹಸಿಬಿಸಿ ಕಣ್ಣ ಸುದ್ದಿಗೆ ಒಂದೆರಡು ಬಾರಿ ನಾವು ಪ್ರೇಮಿಗಳೆನಿಸಿದ್ದರೂ ನಾವು ಪ್ರೇಮಿಗಳಾಗಿದ್ದೇವಂದುಕೊಂಡಿಲ್ಲ. ಅನೇಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತು ಕನಸು ಕಂಡಿದ್ದರೂ ಒಂದೇ ಮನೆ ಮಾಡಿ ಒಂದಾಗುವ ಆಸೆ ತೋರಿಲ್ಲ. ಮುಖ್ಯವಾಗಿ ನನ್ನ ಮನಸ್ಸಲ್ಲಿ ಮೂಡಿದ ಭಾವಾರ್ಥ ನಾ ನಿನಗೆ ಹೇಳಿರಲಿಲ್ಲ... ಇದು ಪ್ರೀತಿಯಲ್ವಾ ಹಾಗಾದರೆ, ಅದು ಸರೀನಾ!!? ಇದು ತಪ್ಪಾ!!?...ಲೆಕ್ಕಕ್ಕೆ ಸಿಗುತ್ತಿಲ್ಲ.ಬಿಟ್ಟೋಗು ಬೇಜಾರಿಲ್ಲ...
ನೀ ನನ್ನ ಪ್ರೀತಿಸಿದ್ದೀಯೋ, ಬಿಟ್ಟಿದ್ದಿಯೋ ಗೊತ್ತಿಲ್ಲ ಕಣೋ, ಆದರೆ ನಿನ್ನಿಂದ ನನ್ನೊಳಗೊಂದು ಅಪರೂಪದ ಭಾವಾತ್ಮ ಮರಿ ಹಾಕುವಂತೆ ಮಾಡಿರುವೆ. ನೀ ಬಳಿ ಬಂದಾಗೆಲ್ಲಾ ನಾ ದಿಕ್ಕೆಟ್ಟು ಓಡುವ ಕನಸುಗಳ ರಭಸಕ್ಕೆ ಎದೆಯೊಡ್ಡಿ ನಿಂತು ನಿನ್ನ ಬೀಳ್ಕೊಡುತ್ತಿದ್ದೆ. ಒಮ್ಮೊಮ್ಮೆ ನನ್ನ ಮೇಲೆ ಸಿಟ್ಟಾಗಿದ್ದೆ, ಒಮ್ಮೊಮ್ಮೆ ಹಲ್ಲು ಕೆರೆದಿದ್ದೆ, ಒಮ್ಮೊಮ್ಮೆ ಪ್ರೀತಿಯಿಂದ ಮುದ್ದು ಮಾಡಿದ್ದೆ, ಮಾತನಾಡಿಸಿದ್ದೆ. ಇವುಗಳೇ ನನ್ನ ಜೀವನದ ಬರವಣಿಗೆಗೆ ಸ್ಫೂರ್ತಿಯಾಗಿತ್ತೆಂದರೆ ಅತಿಶಯೋಕ್ತಯಲ್ಲ ಬಿಡು. ನಿನ್ನ ಸ್ಫೂರ್ತಿ ಚಿಲುಮೆಯೇ ನನ್ನ ಈ ಬರವಣಿಗೆ. ಎಷ್ಟೋ ಬಾರಿ ಅರ್ಧಂಬರ್ಧ ಬರವಣಿಗೆ ಕಂಡಿದ್ದ  ನನ್ನ ಕವನಗಳು ನಿನ್ನುಸಿರು ಕೇಳುತ್ತಿದ್ದಂತೆ ಪೂರ್ತಿಯಾಗಿದ್ದು ಎಂದೂ ಮರೆಯಲಾಗದು ಬಿಡು. ಸಂಜೆ ಮಬ್ಬುಗತ್ತಲ ನಡುವೇ ಅಂದು ಪಾನೀಪೂರಿ ಸವಿದ ಕ್ಷಣದ ಜೊತೆ, ಓಲೈಕೆ ಇಲ್ಲದೇ ದೂರವಾಗಿರುವ ಈ ನಿಮಿಷಕ್ಕ್ಕೆ ಅಜಗಜಾಂತರ ವ್ಯತ್ಯಾಸವಿದ್ದರೂ, ಇಂದಿಗೂ ನಾ ಹೇಳಬೇಕೆಂದ ಪದ ಬಾಯಿಂದ ಹೊರಬೀಳದೆ ಸತಾಯಿಸುತ್ತಿದೆ ಪುಟ್ಟಾ. ನನಗೆ ಗೊತ್ತು ನೀ ಸಿಗುವುದಿಲ್ಲವೆಂದು, ಹಾಗಂತ ನೀ ಸಿಗದೇ ಇದ್ದರೆ ಅದನ್ನೆ ರಂಪಾಟಕ್ಕೆ ತಂದಿಟ್ಟು ಸೆಡ್ಡು ಹೊಡೆಯುವ ಭಗ್ನ ಪ್ರೇಮಿಯ ಹುಚ್ಚು ವರ್ತನೆ ನನ್ನಲ್ಲಿಲ್ಲ. ನನ್ನ ಭಾವ ಹೇಗೆ ನನ್ನದೋ ಹಾಗೆ ನಿನ್ನ ಭಾವ ನಿನ್ನದು. ಆದರೂ ನನ್ನ ಜೀವನದಲ್ಲಿ ನಿನಗೊಂದು ಸಣ್ಣ ವಂದನೆ ಒಂಉ ಬಾರಿ ಬಂದು ಹೇಳಿ ಹೋಗು ಬೇಕಿದ್ದರೆ ಆಮೇಲೆ ಕಾಲ್ತೋಳೆದು ಬಿಳ್ಕೋಡುವೆ ಭಯ ಪಡದಿರು.

ವಿಷಯ ತಿಳಿದು ಅಳದಿರು...
ಜೀವನದ ಪಯಣದಿ ಯಾವುದೋ ಒಂದು ನಿಲ್ದಾಣದಲ್ಲಿ ಸಿಕ್ಕವಳು ನೀನು. ಹಾಗೇ ಇಳಿದು ಹೋಗುವೆ ಎನ್ನುವ ಪರಿವೆ ಇಲ್ಲದಿದ್ದರೂ ಖಾಲಿ ಜೇಬಿನ ಮಜುನೂಗೆ ಪ್ರೀತಿ ಚಿಲ್ಲರೆಯ ಬಸಿದು ಹೋದೆ ಎನ್ನುವ ಸಾಂತ್ವಾನ ನನ್ನೊಳಗೆ ನನಗೆ ಎರಕವೈದುಕೊಂಡಿರುವೆ. ಮುಂದೆಯೂ ಹಾಗೇ ಅಂದುಕೊಂಡೆ ಬಾಳುವೆ...ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲ್ಲಿ ಬದುಕೊಳಗೆ ಸಲೀಸಾಗಿ ನಡೆದು ಬಂದ ನೀನು ನನ್ನ ಮತ್ತೊಂದು ಮಗ್ಗಲು ಬದಲಾಯಿಸಿಬಿಟ್ಟೆ. ನಂಗೊತ್ತು ಇಷ್ಟು ವರ್ಷ ಕಳೆದರೂ ಹೇಳಲಾರದ ಪ್ರೀತಿ ಭಾವ ಇನ್ನೂ ಮುಂದೆಯೂ ಹೇಳಲಾಗದು. ಇನ್ನೂ ಮುಂದೆ ನಾ ಒಬ್ಬಂಟಿ, ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಂಟಿತನ, ಕಾಡದಿರಲಿ ಅವ್ಯಾವುದೂ ನಿನ್ನ ತನುಮನ...
‘ಕೊನೆಯ ಮಾತು ಪ್ರೇಮಿಗಳ ದಿನದ ಶುಭಾಶಯಗಳು...’
ಇತೀ ನಿನ್ನ
ಅ...
(ಭಗ್ನ ಪ್ರೇಮಿ)

ಮಂಡೆ ಬಿಸಿ ಮಾಡಿರುವ ಮಂಡೆ ಕವಚ...


* ರಕ್ಷಣೆಯೇನೋ ಸರಿ, ಸೇಫ್ಟಿ ಫಾಲೋ ಯಾರ ಗುರಿ...
* 2006ರಲ್ಲಿ ಒಬ್ಬರಿಗೆ, 2016ರಲ್ಲಿ ಇಬ್ಬರಿಗೆ...
* ಉಪಕಾರಿ ಎನಿಸಿದ್ದು, ಉಪದ್ರವಕಾರಿಯಾಗದಿದ್ದರೆ ಒಳಿತು...
*ರಸ್ತೆ ಗುಂಡಿಗಳನ್ನು ಮೊದಲು ಮುಚ್ಚಿಸಿ, ಸಾವನ್ನು ತಪ್ಪಿಸಿ...

ಮೊನ್ನೆ ರೈಲು ಪ್ರಯಾಣದ ವೇಳೆ ನನ್ನೆದುರಿಗೊಬ್ಬ ವ್ಯಕ್ತಿ ಕುಳಿತುಕೊಂಡು ತನ್ನಷ್ಟಕ್ಕೆ ತಾನೆ ಗೊಣಗಿಕೊಂಡು ಪೇಪರ್ ಓದುತ್ತಾ, ಹಿಡಿ ಹಿಡಿ ಶಾಪ ಎನ್ನುವಂತೆ ಕರಕಿರಿಸುತ್ತಿದ್ದ. ಏನಾಯ್ತಪ್ಪಾ!, ಯಾಕೆ ಹೀಗಾಡುತ್ತಿದ್ದೀಯಾ? ಎಂದು ಕೇಳಿದ್ದೆ ತಡ ಅವನ ಕೋಪ ತಾಪವೆಲ್ಲ ನನ್ನ ಬಳಿ ತೋರಿಸುವನಂತೆ ವರ್ತಿಸಿ, ‘ನೋಡಿ ಸ್ವಾಮಿ!, ಇಷ್ಟು ದಿನ ಏನೋ ಒಂದು ನಡೆದು ಹೋಯ್ತು, ಆದರೆ ಇನ್ನೂ ಮುಂದಿನ ದಿನಗಳಲ್ಲಿ ಜೀವನ ಕ್ರಮ ಬಹಳ ಕಷ್ಟವಿದೆ.., ಆಳುವವರ ದಬ್ಬಾಳಿಕೆ ಹಿಂದಿದ್ದ ಕಾಲಕ್ಕೆ ಮತ್ತೆ ನಮ್ಮನ್ನ ದೂಡಿ ಬ್ರಿಟೀಷ್ ಕಾಲದಲ್ಲಿದ್ದಂತೆ ಹೆದರಿ ಬದುಕುವುದೇ ಮಾಮೂಲಿಯಾಗಿ ಬಿಡುತ್ತದೇನೋ ಎನ್ನುವ ಭಯ ಮೂಡುತ್ತಿದೆ.!, ಅಲ್ಲಾ ಸಾರ್!, ಇದನ್ನ ನೋಡಿ ಆಮೇಲೆ ನೀವೆ ಹೇಳಿ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಂತೆ ಇದು ಬೇಕಿತ್ತಾ...??? ಎಂದ
 ಉತ್ತರವಾಗಿ, ಹು.., ಹೌದು. ಇದು ಸರ್ಕಾರದ ಆಜ್ಞೆ ಪಾಲಿಸಲೇಬೇಕಲ್ಲ ಅದಕ್ಯಾಕೆ ಇಷ್ಟು ಟೆನ್ಷನ್ ಮಾಡ್ಕೊಂಡಿದ್ದೀರಾ ಎಂದೆ.
ಹಾಗಲ್ಲಾ ಸಾರ್, ಈಗ ನೀವೊಬ್ಬರೇ ಮನೆಗೆ ಹೋಗ್ತಾ ಇರುತ್ತೀರಾ, ನಿಮ್ಮ ಆತ್ಮೀಯ ಸ್ನೇಹಿತ ಎದುರಿಗೆ ಸಿಗುತ್ತಾನೆ. ಅವನನ್ನು ನಿಮ್ಮ ಮನೆಗೆ ಕರೆದುಕೊಂಡು ಹೊರಡುತ್ತೀರಿ. ಮಧ್ಯದಾರಿಯಲ್ಲಿ ಬಿಳಿ ಖಾಕಿವೆತ್ತ ಪೊಲೀಸರು ತಡೆದು ಪ್ರಶ್ನಿಸುತ್ತಾರೆ. ‘ಹಿಂಬದಿ ಸವಾರರ ಹೆಲ್ಮೆಟ್ ಎಲ್ಲಿ?, ಕಟ್ಟಿ ಫೈನ್!!’ ಎಂದು ರಿಸಿಟ್ ಹರಿದೇ ಬಿಡುತ್ತಾರೆ. ನೀವು ಲಂಚಾನೋ ಅಥವಾ ಫೈನ್ ಬಿಲ್‍ನ ಮೊತ್ತವನ್ನೋ ಪ್ರಾಮಾಣಿಕನಂತೆ ಕೈಗಿತ್ತು ಬರುತ್ತೀರಿ. ಇಲ್ಲವಾದರೆ ನೀವೆನ್ ಮಾಡ್ತೀರಾ!? ಹೇಳಿ ಎಂದ.
ನನಗೆ ಉತ್ತರ ದೋಚಲಿಲ್ಲ. ಸುಮ್ಮನೆ ಕುಳಿತೆ. ಅದಾಗಲೇ ಆತ ಮಾತನ್ನು ಮುಂದುವರಿಸಿ ಹಾಗೆ ಮಾಡಲೇಬೇಕು ಬೇರೆ ಉಪಾಯವೇ ಇಲ್ಲ ಬಿಡಿ..,!? ಏನು ಸರ್ಕಾರವೋ ಏನೋ, ಎಂದು ಎದ್ದು ಪಕ್ಕದಲ್ಲಿದ್ದ ಲ್ಯಾಟ್ರಿನ್ ಒಳಹೋದ.
ಹೌದಲ್ವಾ!!!..,ಈ ಹೆಲ್ಮೆಟ್ ಎಷ್ಟು ಉಪಕಾರಿ ಎನಿಸುತ್ತೋ ಅಷ್ಟು ಉಪದ್ರವಕಾರಿಯಾಗಿಯೂ ಕಿರಿಕಿರಿ ಉಂಟು ಮಾಡುತ್ತಿದೆ ಎನಿಸಿದ್ದೇ ಆಗ.
ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರು ಸಾವು ನೋವುಗಳಿಗೆ ತುತ್ತಾಗುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಇಗಾಗಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಈ ಹಿಂದೆ ದೆಹಲಿ, ಕೋಲ್ಕತ್ತಾ ಹಾಗೂ ಜೈಪುರಗಳಲ್ಲಿ ಜಾರಿಯಲ್ಲಿದ್ದ ಕಾಯ್ದೆಯನ್ನು ಇದೀಗ ನಮ್ಮ ರಾಜ್ಯದಲ್ಲೂ ಜಾರಿಗೊಳಿಸಿದೆ. ಹಾಗಾಗಿ ಮೋಟಾರು ವಾಹನ ಕಾಯ್ದೆ ಕಲಂ 129ರ ಅನ್ವಯ ‘ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್’ನಿಂದ ಪ್ರಾಮಾಣೀಕೃತ ಐ.ಎಸ್.ಐ ಮಾರ್ಕ್ ಇರುವ ಹೆಲ್ಮೆಟ್‍ಗಳನ್ನೇ ಬೈಕ್ ಸವಾರರು ಬಳಸಬೇಕು, ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಬೇಕು. ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ  ಬೈಕ್ ಚಲಾಯಿಸುವ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆ ಎನ್ನುವ ಮಾನದಂಡದ ಘೋಷವಾಕ್ಯ ಎಲ್ಲೆಲ್ಲೂ ಇತ್ತೀಚಿಗೆ ಪ್ರಭೆ ಬಿರುತ್ತಾ ಮಂಡೆ ಬಿಸಿ ಮಾಡಿದೆ. ದಂಡದ ಪ್ರಮಾಣವೂ ಹೀಗಿದೆ, ಮೊದಲಬಾರಿಗೆ 100ರೂ, ಎರಡನೇ ಬಾರಿಗೆ 200ರೂ, ಹಾಗೂ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ಸವಾರನ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಮಾಡುವ ವಿಶೇಷ ಅಧಿಕಾರವನ್ನು  ಸಾರಿಗೆ ಇಲಾಖೆಯು ಹೊಂದಿರುತ್ತದೆ. ಈ ಕಡ್ಡಾಯದ ಕಷಾಯ ಚಿಕ್ಕ ಮಕ್ಕಳಿಗೂ ಅನ್ವಯಿಸುತ್ತದೆ. ಅದಕ್ಕಾಗಿ ಇನ್ನೂ ಮುಂದೆ ಮಕ್ಕಳಿಗೆ ಶಾಲಾ ಬ್ಯಾಗು, ಕೈಯಲ್ಲೊಂದು ಟಿಫಿನ್ ಬಾಕ್ಸ್ ಜೊತೆಗೆ ಹೆಲ್ಮೆಟ್‍ನ್ನು ಹಿಡಿದುಕೊಂಡು ಸ್ಕೂಲ್‍ಗೆ ಹೋಗುವ ಸೌಭಾಗ್ಯವೂ ದೊರತಿದೆ.
ರೂಲ್ಸ್ ಇರಲಿ ಅದೆಂತಹದ್ದೆ ಆಗಿರಲಿ ಫಾಲೋನೂ ಮಾಡೋಣ.., ಆದರೆ ಇರುವ ಸಿದ್ಧಾಂತಗಳೇ ನೆಲಕಚ್ಚಿ ಕಾಲ ಮುನ್ನುಗ್ಗುತ್ತಿರುವ ಸಂಧರ್ಭದಲ್ಲಿ ತಾಪತ್ರಯಗಳನ್ನು ಸರಿ ಮಾಡುವ ಬದಲಾಗಿ ಇನ್ನೂ ಬೇರೆ ಬೇರೆ ಹೊಸ ಹೊಸ ಸಿದ್ಧಾಂತಗಳನ್ನು ಹೊರಡಿಸಿದರೆ ಯಾರು ಫಾಲೋ ಮಾಡೋರು ನೀವೆ ಹೇಳಿ!?.
ದಿನದ ತಿರುಗಾಟದಲ್ಲಿ ಒಂದು ಹೆಲ್ಮೆಟ್‍ನ್ನು ಕ್ಯಾರಿ ಮಾಡುವುದೇ ಕಷ್ಟ ಅಂತಹದ್ದರಲ್ಲಿ ಎಲ್ಲೆಲ್ಲೋ ಸಿಗುವ ಹಿಂಬದಿ ಸವಾರರಿಗಾಗಿ (ಗೆಳೆಯರು, ಸಂಬಂಧಿಕರು,ದಾರಿಹೋಕರು) ನಾವು ಇನ್ನೊಂದು ಹೆಲ್ಮೆಟ್‍ನ್ನು ಹೇಗೆ ಕ್ಯಾರಿ ಮಾಡಬಹುದು ಸಣ್ಣ ಐಡಿಯಾ ಕೊಡಿ ಪ್ಲೀಸ್...
ಮದುವೆ ಪಾರ್ಟಿ ಇರುತ್ತೆ. ಗಂಡ-ಹೆಂಡತಿ ಇಬ್ಬರೂ ರೆಡಿಯಾಗಿ ಹೊರಡುತ್ತಾರೆ. ಗಂಡ ಮಾಮೂಲಿಯಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸುತ್ತಿರುತ್ತಾನೆ. ಹೆಂಡತಿಯಾದವಳು ಜರಿ ಸೀರೆಯುಟ್ಟು, ಒಡವೆತೊಟ್ಟು ತಲೆಗವಚುವ ಹೆಲ್ಮೆಟ್ ಹಾಕಿ ಬೈಕ್ ಹಿಂದೆ ಕುಳಿತು ಸವಾರಿಯಾರಂಭಿಸಿದರೆ ಮೇಕಪ್ ಭರಿತ ಅವರ ಬ್ಯುಟಿ ಎಷ್ಟು ಕೆಟ್ಟದಾಗಿ ನೋಡುವವರಿಗೆ ಕಾಣಬಹುದು ನೀವೇ ಹೇಳಿ..!?
ಈ ಸಮಸ್ಯೆ ತಡೆಯಲು ಕಾರ್ ಖರೀದಿಸುವ ಗೋಜಿಗೆ ಬಿದ್ದರೆ ಈಗಲೇ ತಡೆಯಲಾರದ ಟ್ರಾಫಿಕ್ ಸಮಸ್ಯೆ ತಡೆಯಲು ಯಾವ ಬುದ್ಧಿ ಶಿಖಾಮಣಿ ಬರುತ್ತಾನೆ ಉತ್ತರಿಸಿ!?...
ಇತ್ತೀಚಿನ ದಿನUಳಲ್ಲಿ ಜನ ಅವರ ಜೀವಕ್ಕೆ ಭಯ ಪಡುವುದಕ್ಕಿಂತ, ಪೊಲೀಸರಿಗೆ ಭಯ ಪಡುವುದೇ ಜಾಸ್ತಿಯಾಗಿದೆ. ವಾಹನವಿರುವ ಪ್ರತಿ ವ್ಯಕ್ತಿಗೆ ಮೂಲಭೂತವಾದ ಒಂದಿಷ್ಟು ಡಾಕ್ಯುಮೆಂಟ್, ನಿಯಮಾವಳಿ ಇತ್ಯಾದಿಗಳ ಹಾವಳಿಯಿಂದ ಸ್ವಲ್ಫ ಯಾಮಾರಿದರೂ ಫೈನ್ ಬೀಳುತ್ತಪ್ಪಾ ಎನ್ನುವ ಸಂಕಟದಿಂದ ಅನೇಕರು ಪೋಲೀಸರನ್ನು ಕಂಡ ಕÀಡೆ ವಾಹನ ಚಲಾಯಿಸಲು ಭಯಭೀತರಾಗುತ್ತಿದ್ದಾರೆ. ಒಂದು ವರದಿಯ ಪ್ರಕಾರ 2014 ರಲ್ಲಿ ಒಟ್ಟು 16,67,248 ಹಾಗೂ 2015 ರಲ್ಲಿ 17,70,890 ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಕೇಸ್ ದಾಖಲಾಗಿವೆಯಂತೆ. ಇದರಿಂದ ಸರ್ಕಾರಕ್ಕೆ ಎಷ್ಟು ಆದಾಯ ಬಂದಿರಬಹುದು ನೀವೆ ಹೇಳಿ, ಒಂದು ಹೆಲ್ಮೆಟ್ ಕಡ್ಡಾಯದಿಂದಲೇ ಇಷ್ಟೊಂದು ಆದಾಯ ಬಂದಿದೆ ಎಂದರೆ ಇನ್ನೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ಕಾಯ್ದೆಯಿಂದ ಇನ್ನೆಷ್ಟು ಆದಾಯ ಹರಿದಾಡಬಹುದು ಮತ್ತು ಹೆಲ್ಮೆಟ್ ಕಂಪೆನಿಗಳಿಂದ ಸರ್ಕಾರಿ ಬೊಕ್ಕಸ ಎಷ್ಟು ತುಂಬಬಹುದು, ತುಂಬಿರುತ್ತೆ ಎಂಬುದನ್ನು ಪ್ರತಿಯೊಬ್ಬನೂ ಯೋಚಿಸಬೇಕಾಗಿದೆ.
  ಡೈರೆಕ್ಟ್‍ಶೂಟ್ ಎನ್ನುವಂತೆ ನಾನಿಂದು ಒಬ್ಬ ಸಾಮಾನ್ಯ ಪ್ರಜೆಯಾಗಿ ಸರ್ಕಾರಕ್ಕೆ ಹೇಳ ಹೊರಟಿರುವುದು ಇಷ್ಟೆ. ಅಪಘಾತ ಎನ್ನುವುದು ದ್ವಿಚಕ್ರ ವಾಹನಗಳಿಂದ ಮಾತ್ರಾ ಉಂಟಾಗುವುದಲ್ಲ. ರಸ್ತೆಗಳ ದುರ್ಬಲೀಕರಣದಿಂದಲೂ ಇವು ಪ್ರತಿನಿತ್ಯ ನಡೆಯುತ್ತಿರುತ್ತದೆ. ಮೊದಲು ರಸ್ತೆ ಸರಿ ಮಾಡಿ.  ಈ ಹೊಸ ಹೊಸ ಕಾಯ್ದೆಯನ್ನು ತರುವ ಬದಲು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಲು ವ್ಯವಸ್ಥೆ ಮಾಡಿ. ಗಾಡಿ ಓಡಿಸುವ ವ್ಯಕ್ತಿ ನಿರ್ದಿಷ್ಟ ವಯಸ್ಸು ತಲುಪಿದ್ದಾನೆಯೇ?, ಲೈಸನ್ಸ್ ಪಡೆದಿದ್ದಾನೆಯೇ? ಎಂಬುದನ್ನು  ಸರಿಯಾಗಿ ಪರಿಗಣಿಸಿ ನಿಯಮ ಪಾಲಿಸಿ. ಇಂದು ನಾವು ನೀವು ನೋಡುತ್ತಿರುವಂತೆ ಪೊಲೀಸರು ಧರಿಸುತ್ತಿರುವ ಹೆಲ್ಮೆಟ್‍ಗಳೇ ಸರಿಯಾಗಿ ಅವರ ಕಿವಿಗಳನ್ನು ಮುಚ್ಚುತ್ತಿಲ್ಲ, ಆ ರೀತಿಯ ಅನ್ ಸೇಫ್ಟಿ  ಹೆಲ್ಮೆಟ್‍ಗಳನ್ನು ಯಾರದೋ ಕಣ್ತಪ್ಪಿಸಲು ಹಾಕಿಕೊಂಡು ಓಡಾಡುವ ಮುಂಬದಿ ಸವಾರನನ್ನೇ ಮೊದಲು ಹಿಡಿದು ನಿಲ್ಲಿಸಿ. ಅಂತಹ ಹೆಲ್ಮೆಟ್‍ಗಳನ್ನು ಮೊದಲು ಬ್ಯಾನ್ ಮಾಡಿ. ಅಷ್ಟೇ ಅಲ್ಲದೇ ಸಾಮಾನ್ಯ ಮನುಷ್ಯನಿಗೂ ಸ್ಟಾಂಡರ್ಡ್ ಸೇಫ್ಟಿ ಎನ್ನುವಂತೆ ಕಡಿಮೆ ದರೆದಲ್ಲಿ ಒಳ್ಳೆಯ ಹೆಲ್ಮೆಟ್ ದೊರೆಯಲು ಅನುವು ಮಾಡಿಕೊಡಿ... ಇಷ್ಟು ಮಾಡಲಾಗುತ್ತದಾ!? ಹಾಗಿದ್ದರೆ ಹೊಸ ಹೊಸ ಕಾಯಿದೆ ತನ್ನಿ. ಮನಪೂರ್ವಕವಾಗಿ ಫಾಲೋ ಮಾಡ್ತೇವೆ ಡೌಟೇ ಬೇಡ.
ಇನ್ನೂ ನಮ್ಮ ರಾಜಧಾನಿ ಬೆಂಗಳೂರನ್ನು ದ್ವಿಚಕ್ರ ವಾಹನಗಳ ನಗರಿ ಎಂದು ಕರೆದರೂ ತಪ್ಪಲ್ಲ ಬಿಡಿ. ಇಂದು ನಗರದ ರಸ್ತೆಗಳಲ್ಲಿ ಓಡಾಡುವ ಬೈಕ್, ಸ್ಕೂಟರ್, ಮುಂತಾದ ದ್ವಿಚಕ್ರ ವಾಹನಗಳ ಪ್ರಮಾಣ ಶೇ.70 ಕ್ಕೆ ಮುಟ್ಟಿದೆ. ಅವನ್ನು ಓಡಿಸುವುದೆಂದರೆ ಸರ್ಕಸ್ ಮಾಡಿದಷ್ಟೇ ಕಷ್ಟ ಕರ. ಆಯತಪ್ಪಿದರೆ ಮೂಳೆಮುರಿತ. ಮತ್ತೂ ಎಡವಟ್ಟಾದರೆ ಪ್ರಾಣಕ್ಕೆ ಕುತ್ತು. ಜವರಾಯನಿಗೆ ವಾಹನ ಚಾಲನೆ ಮಾಡುವವರು, ಹಿಂಬಂದಿ ಸವಾರರೂ, ಎಂದು ಬೇಧಭಾವವಿಲ್ಲ!!. ‘ನಿಮ್ಹಾನ್ಸ್’ ಅಧ್ಯಯನದ ಪ್ರಕಾರ,  ದ್ವಿ ಚಕ್ರವಾಹನ ಅಪಘಾತದಲ್ಲಿ ದುರ್ಮರಣಕ್ಕೀಡಾದ 116 ಮಂದಿಯಲ್ಲಿ 33 ಮಂದಿ ಹಿಂಬದಿ ಸವಾರರೆ ಆಗಿದ್ದಾರಂತೆ. ಹೆಲ್ಮೆಟ್ ಧರಿಸುವುದು ಮೂಲಭೂತವಾದ ಒಂದು ಸುರಕ್ಷ ಕ್ರಮ ನಿಜ  ಅಪಘಾತದಿಂದ ತಲೆಗೆ ಆಗಬಹುದಾದ ಪೆಟ್ಟಿನ ತೀವೃತೆಯನ್ನು ಹೆಲ್ಮೆಟ್ ತಗ್ಗಿಸಬಲ್ಲದು. ಇದೀಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರಲ್ಲಿ ರಾಜ್ಯ ಸರ್ಕಾರದ ಈ ಮೇಲಿನ ಸಮರ್ಥನೆಯಂತೂ ಇದ್ದೆ ಇದೆ. ಆದರೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಸಾಲದು. ಇದೇ ನಿಟ್ಟಿನಲ್ಲಿ ದ್ವಿಚಕ್ರವಾಹನರ ಜೀವರಕ್ಷಣೆಗೆ ಬೇರೇನೂ ಬೇಕಿಲ್ಲ ಎಂದು ಆಳುವ ಮಂದಿ ಯೋಚಿಸುತ್ತಿರುವುದು ತಪ್ಪು. ಇಂದು ದ್ವಿಚಕ್ರವಾಹನಗಳ ಅಪಘಾvಗಳಿಗೆ ರಸ್ತೆಯ ಗುಂಡಿಗಳೇ ಕಾರಣವಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಅಪಾರ ಹಣ ವೆಚ್ಚವಾಗುತ್ತಿದ್ದರೂ ಪದೇ ಪದೇ ಇಂತಹ ಗುಂಡಿಗಳು ಉದ್ಭವವಾಗಲೂ ಏನು ಕಾರಣ ಎನ್ನುವುದೇ ತಿಳಿಯದಾಗಿರುವುದು ವಿಪರ್ಯಾಸವೇ ಸರಿ.

ಕೊನೆಯ ಮಾತು;
ನಾವು ನಿಮ್ಮ ತತ್ವಕ್ಕೆ ಬದ್ದರಾಗುತ್ತೇವೆ. ಆದರೆ ಹೊಸ ಯೋಜನೆಗೆ ಅಡಿ ಇಡುವ ಮೊದಲು ಈ ಕೆಳಗಿನವುಗಳ ಬಗ್ಗೆ ಒಂದಿಷ್ಟು ಗಮನಹರಿಸಿ ಮಾನ್ಯ ಮುಖ್ಯಮಂತ್ರಿಗಳೇ...
*ನಗರ ಸ್ಥಳೀಯ ಸಂಸ್ಥೆಗಳಿಗೆ ಗಂಭೀರ ವಾರ್ನಿಂಗ್ ನೀಡಿ ರಸ್ತೆ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ.
*ಪಾದಚಾರಿ ಮಾರ್ಗ ಹಾಗೂ ರಸ್ತೆ ನಡುವೆ ನಿಗಧಿತ ವ್ಯತ್ಯಾಸ ರೂಪಿಸಿ
*ದುರಸ್ತಿ ಎನ್ನುವ ದಂಧೆ ತಡೆಯಿರಿ
*ಸರ್ಕಾರದ ನೀತಿ ನಿಯಮಗಳಲ್ಲಿ ಪಾರದರ್ಶಕತೆ ರೂಪಿಸಿ
*ನಿಯಮ ಅನುಷ್ಠಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ
* ಕಾಟಾಚಾರದ ಹೆಲ್ಮೆಟ್ ಧರಿಸುವುದು, ಅತೀ ವೇಗ, ಮಧ್ಯಸೇವಿಸಿ ವಾಹನ ಓಡಿಸುವುದು ಇತ್ಯಾದಿಗಳ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಿ.
ಮಾಡ್ತೀರಲ್ವಾ.../ ಡೌಟ್ ಇದೆ ನನಗೆ... ಆದರೂ ಚಿಂತೆಯಿಲ್ಲ, ಇದೇ ರೀತಿ ಬರವಣಿಗೆಯಲ್ಲೇ ಆಗಾಗ ಎಬ್ಬಿಸುತ್ತಿರುತ್ತೇನೆ...

Saturday, 30 January 2016

ಅಂದೊಂದಿತ್ತು ಕಾಲ...


                ನನ್ನದು ಸಿಂಪಲ್ ಲೈಫ್. ಚಿಕ್ಕಂದಿನಿಂದಲೂ ಯೋಚನೆಗಳನ್ನು ಸ್ವಲ್ಪ ಡಿಫರೆಂಟ್ ಆಗಿ ºರಿಯಬಿಡುವುದು ನನ್ನ ಗುಣಧರ್ಮಗಳಲ್ಲೊಂದು. ಅವನೇನೋ ಮಾಡುತ್ತಾನೆ, ಅವರೇನೋ ಹೇಳುತ್ತಾರೆ ಎಂದು ಕೊರಗಿ ಕೂತು ಮೂಲೆ ಮನೆಯೇ ಗತಿ ಎಂದು ಅಳುಕುವ ಜಾಯಮಾನ ನಂದಲ್ಲ. ಯಾಕೆಂದರೆ ಮೂಲೆ ಮನೆಯನ್ನೇ ಪಡಸಾಲೇಯನ್ನಾಗಿ ಮನದಾಸ್ತಾನದಲ್ಲಿ ಪರರಾಜ್ಯದ ಮನಸ್ಸನ್ನು ಒಳಬಿಟ್ಟು ಆಳ್ವಿಕೆ ಮಾಡಿಸಿಕೊಳ್ಳುವಷ್ಟು ದುರ್ಬಲ ಮನಚಿತ್ತ ನನ್ನಲಿಲ್ಲ. ಒಮ್ಮೊಮ್ಮೆ ಅರಚುತ್ತೇನೆ, ಒಮ್ಮೊಮ್ಮೆ ಕಿರುಚುತ್ತೇನೆ.., ಆದರೆ ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಗೊತ್ತುಪಡಿಸುವುದು ಇಲ್ಲ... ಬಿಕಾಸ್ ಅವೆಲ್ಲವೂ ನನ್ನೊಳಗೆ ಆಗುವ ನನ್ನತನ. ನನ್ನಲ್ಲಿ ಏನಿದ್ದರೂ ನಂದೇ ರಾಜ್ಯಭಾರ. ಹಾಗಂತ ಯಾರಿಗೂ ತೊಂದರೆ ಮಾಡುವ, ನೀಡುವ ಜಾಯಮಾನ ನನ್ನಲಿಲ್ಲ. ಹೊಸ ಬಟ್ಟೆ ಇದ್ದರೂ, ಹಳೆ ಬಟ್ಟೆಯನ್ನು ತೊಟ್ಟರೇನು? ಮಲಗಲು ಹಾಸಿಗೆ ಇದ್ದರೂ, ಚಾಪೆ ಮೇಲೆ ಮಲಗಿದರೇನು? ಎಂದು ಆಗಾಗ ಪ್ರತಿಭಟಿಸುವುದು ನನ್ನ ಸುಪ್ತ ಮನದ ಸಹಜ ಭಾವ.
            ...ಓ ಗಾಡ್ ಇಷ್ಟು ಸಿಂಪಲ್ ಜೀವನ ನನ್ನೊಳಗೆ ಇದ್ದರೂ, ಬಾಹ್ಯ ಜೀವನ ಅಂದುಕೊಂಡಂತೆ ಒಗ್ಗುತ್ತಿಲ್ಲ. ಜೀವನದ ಹಿಂದಿನ ದಿನಗಳನ್ನು ಮತ್ತೆ ಮೆಲುಕು ಹಾಕಿದರೆ ಕೈಗೆ ಸಿಗುವುದು ಖಚಿತವಿಲ್ಲ... ಸಿಗುವುದು ತುಂಬಾನೆ ಕಷ್ಟವಿದೆ ಬಿಡಿ...ಪ್ರಪಂಚ ಬದಲಾಗಿದೆ ಹಾಗೆ ನಾವು ಬದಲಾಗಿದ್ದೇವೆ. ದಿನೆ ದಿನೇ ತ್ವರಿತಗತಿಯ ಪ್ರಗತಿ ಕಾಣುತ್ತಿದ್ದೇವೆ, ಅದಕ್ಕೆ ತಕ್ಕಂತೆ ಚಲನೆ ಪಡೆಯುತ್ತಿದ್ದೇವೆ. ಅಂದುಕೊಂಡ ಕನಸುಗಳನ್ನು ಬೆನ್ನೆತ್ತಿ ಸಾಗುತ್ತಿರುವ ನಾವುಗಳು, ಭೂತಕಾಲದಲ್ಲಿ ಅನುಭವಿಸುವ ಅನೇಕ ದಿನಮಾನಸವನ್ನು ಹಿಂತಿರುಗಿ ನೋಡಿದರೆ ಅಚ್ಚರಿಯ ಪ್ರತಿಬಿಂಬ ಕನ್ನಡಿಗೆ ಬೆಳಕಿನಂತೆ ಬಡಿದು ಕಣ್ಣಿನ ಮನಸ್ಸಿನೊಳಗೆ ಸೀದಾ ಪ್ರತಿಫಲಿಸಿ ಛೇ ಎಂಥಾ ಕಾಲವದು!! ಮತ್ತೆ ಬರುದಿಲ್ಲವಲ್ಲಾ!? ಎನ್ನುವ ಅಳುಕುಂಟು ಮಾಡುತ್ತದೆ. ಏನೂ ಇಲ್ಲದ ಆ ದಿನಗಳನ್ನು ಬಳುವಳಿಯಾಗಿ ನಮ್ಮ ಮುಂದಿನ ತಲೆಮಾರಿಗೆ ಕೊಡುವುದು ಹಾಗಿರಲಿ, ತೋರಿಸಲು ಕಷ್ಟವೇನೋ ಎನ್ನುವ ನತದೃಷ್ಟ ಸ್ಥಿತಿಗೆ ಸಾಗುತ್ತಿರುವ ನಮ್ಮ ಇಂದಿನ  ಪಾಡು ‘ಬ್ಯುಸಿ’ ಎನ್ನುವ ಷೆಡ್ಯೂಲ್‍ನಲ್ಲೇ ದಿನವಿಡಿ ಸಾಗುತ್ತಿದೆ. ಅಂದಿನ ಪ್ರತಿಷ್ಠೆಯ ಕ್ಷಣಗಳು ಇಂದು ಹೊಸ ಪ್ರತಿóಷ್ಠಾನದೊಂದಿಗೆ ನಗುಬೀರುತ್ತಿವೆ. ಅವೆಲ್ಲವೂ ಯಾವ ಬಣ್ಣದೋಕುಳಿಯಿಂದ ಮಾಯವಾದವೋ ಎಂದು ಚಿಂತಿಸಿದರೆ ಕಾರಣ ಒಂದಾ...? ಎರಡಾ...? ಎನ್ನುವಷ್ಟು ದೊಡ್ಡ ಲಿಸ್ಟೇ ರೆಡಿಯಾಗಿ ನಿಲ್ಲುತ್ತದೆ. ಇಂದು ಎಲ್ಲದಕ್ಕೂ ಆಧುನಿಕರಣ ಒಂದೇ ಉತ್ತರ ಸಮರ್ಪಕ ಎನಿಸಿದರೂ, ಅದರ ವಿವಿಧ ಬಾಹುಗಳು ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದೂ, ಮುಂದೆನಾಗುತ್ತದೋ!??? ಎನ್ನುವ ವಿಸ್ಮಯದಲ್ಲೇ ಬೆರಗುಗೊಳ್ಳುವಂತೆ ಮಾಡುತ್ತಿದೆ.

ನಾವಂದು ಕಾಲೇಜು ದಿನಗಳಲ್ಲಿ ಕಾಲೇಜ್ ಬ್ಯಾಗ್ ಹೆಗಲಿಗೆ ಜೋತಾಕಿಕೊಂಡು ನಮ್ಮದೇ ಒಂದೊಂದು ಗುಂಪ್ ಮಾಡಿಕೊಂಡು, ಇವತ್ತು ಹಾಗಾಯು!, ನಿನ್ನೆ ಹೀಗಾಯ್ತು!, ಅವನೂ ಅವಳಿಗೆ.., ಅವಳು ನನಗೆ.., ಲೆಕ್ಚರ್ ಯಾಕೆ ಹಾಗ್ ಆಡ್ತಾರೆ?, ಮಿಸ್ ಯಾಕೆ ಹೀಗೆ?, ಅದು ನಿನ್ಗೋತ್ತಾ? ಇದ್ ಏನ್ ತಿಳಿತಾ? ಹಾಗೆ ಹೀಗೆ ಮಾತನಾಡುತ್ತಾ ಕಾಲೇಜ್ ಕ್ಯಾಂಪಸ್‍ನಲ್ಲಿ ಒಡಾಡಿಕೊಂಡು ಶೈಕ್ಷಣಿಕ ಜೀವನ ಮುಗಿಸಿದ್ದೆವು. ಇನ್ನೂ ಪದವಿ ಶಿಕ್ಷಣದಲ್ಲಿರುವಾಗಂತೂ ಅದೇ ಬೇರೆ ರೀತಿಯ ಮರೆಯಲಾಗದ ಜೀವನ ನೀಡಿತ್ತು. ಪಠ್ಯಕ್ರಮ, ಆಟೋಟ, ಲೈಬ್ರೇರಿಯ ಪುಸ್ತಕದ ಓದಿನಲ್ಲೇ ಸಂತೋಷಗೊಳ್ಳುತ್ತಿದ್ದೆವು. ಇಂದಿನ ಮಕ್ಕಳ ಶಿಕ್ಷಣ ಭೀತಿಯಂತೆ ಅಂದಿರಲಿಲ್ಲ. ಉಳಿದಂತೆ ಮನೆ ಕೆಲಸ, ಹಬ್ಬ ಹರಿದಿನಗಳ ಎಂಜಾಯ್‍ಮೆಂಟ್, ಯಕ್ಷಗಾನ, ಮದುವೆ, ನಾಟಕ, ಇವುಗಳ ವಿನೋಧ ಬಿಟ್ಟರೆ ಬೇರ್ಯಾವ ಟೈಮ್ ಪಾಸ್ ವಕ್ರಗಳು ನಮ್ಮ ಜೀವನದಲ್ಲಿ ಬಂದ ಅನುಭವವಿರಲಿಲ್ಲ. ಆಗ ಈಗಿರುವಷ್ಟು ಟೆಕ್ನಾಲಜಿಗಳು ಇರಲಿಲ್ಲ. ಬಹುಶಃ ಅದಾಗಲೇ ಇಂದಿನ ಟೆಕ್ನಾಲಜಿ ಮರಿ ಮೊಳಕೆಯಂತೆ ಚಿಗುರುತಿತ್ತು ಅಷ್ಟೆ. ಅಬ್ಬಾಬ್ಬಾ ಅಂದರೆ ಸ್ಟಾಂಡರ್ಡ್ ಫ್ಯಾಮಿಲಿಯಿಂದ ಬಂದ ಹುಡುಗರಲ್ಲಿ ಒಂದು ಬ್ಲ್ಯಾಕ್ ಆಂಡ್ ವೈಟ್ ನೋಕಿಯ ಮೊಬೈಲ್ ಕಾಣ ಸಿಗುತ್ತಿತ್ತು. ಕಂಪ್ಯೂಟರ್‍ಗಳನ್ನು ಕಂಡಿದ್ದೆ ಕಂಪ್ಯೂಟರ್ ಕ್ಲಾಸ್ ಕಲಿಯಲು ಹೋದಾಗ. ಇನ್ನೂ ಲ್ಯಾಪ್ ಟಾಪ್‍ಗಳೋ ಅದರ ಹೆಸರೇ ಕೇಳಿರಲಿಲ್ಲ. ಎಚ್.ಎಮ್.ಟಿ ವಾಚ್ ಬಿಟ್ಟರೆ ಬೇರೆ ಕಂಪೆನಿ ಕೈ ಗಡಿಯಾರ ಇರುವುದೇ ತಿಳಿದಿರಲಿಲ್ಲ... ಇವುಗಳಲ್ಲಿ ಯಾವುದನ್ನು ಹೊಂದಿದ್ದರೂ ಆತನಿಗೆ  ವಿಶಾಲ ಹೆಗ್ಗಳಿಕೆ. ಪದವಿ ನಂತರ ಹಾಗೋ ಹೀಗೋ ಉನ್ನತ ಶಿಕ್ಷಣ ಪೂರ್ಣ ಗೊಳಿಸುವ  ಹೊತ್ತಿಗೆ ಚೈನಾ ಕಂಪೆನಿಯ ಅಷ್ಟಿಷ್ಟು ಕಡಿಮೆ ಬೆಲೆಯ ಮೊಬೈಲ್, ವಾಚ್‍ಗಳು, ಕಂಪ್ಯೂಟರ್‍ಗಳು ಇನ್ನೂ ಅನೇಕ ಎಲೆಕ್ಟ್ರಾನಿಕ್ಸ್ ಐಟಮ್‍ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ಎಲ್ಲರಿಗೂ ‘ಟೆಕ್ನಾಲಜಿಯ ಒಗ್ಗು’ ಎನ್ನುವ ಮೂಲಭೂತ ಹೊಂದುವಿಕೆಯ ಅಡಿಪಾಯಕ್ಕೆ ಬಂದಿತ್ತು ಜನ ಸಮೂಹ.
 ಆದರೆ ಇಂದು..!!??
 ಊಹಿಸಿ...
ಅಂದಿದ್ದ ಅತಿ ಚಿಕ್ಕ ಮೊಬೈಲ್ ಸ್ಕ್ರೀನ್ ಇಂದು ಸ್ಲೇಟ್ ಗಾತ್ರದÀಷ್ಟು ದೊಡ್ಡರೂಪ ಪಡೆದಿದೆ, ಆ ಕಾಲದ ವೈಟೆಡ್ ಕಂಪ್ಯೂಟರ್‍ಗಳು ಇಂದು ಭಾರ ಕಳೆದುಕೊಂಡಿವೆ. ಕ್ಯಾಸೆಟ್ ಸಿಡಿಗಳು ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿವೆ. ಅಂದಿನ ಬ್ಲರ್ ಸ್ಕ್ರೀನ್‍ಗಳಲ್ಲಿ ಹೆಚ್.ಡಿ ಕಳೆ  ಮೂಡಿದೆ, ಹ್ಯೂಜ್ ಪ್ರೈಸ್‍ಗಳು, ನಾರ್ಮಲ್ ರೇಟ್‍ಗೆ ಇಳಿದಿದೆ, ಇಂತಹವರಿಗೆ ಮಾತ್ರಾ ಎನಿಸಿದ್ದ ವಸ್ತುಗಳು ಎಲ್ಲರಿಗೂ ಮೀಸಲು ಎನ್ನುವ ಸ್ಥಿತಿಗೆ ತಲುಪಿದೆ. ಹಾಗಾದರೆ ಮುಂದೇನು..!?
ಇಂದು ಯಾವುದರ ಪರಮಾವಧಿ?
ಹೀಗೊಂದು ಪ್ರಶ್ನೆಯನ್ನು ಆಳವಾಗಿ ಚಿಂತಿಸಿದರೆ ಪ್ರತಿಯೊಬ್ಬರ ಮನಸ್ಸಲ್ಲು ರಿಪಿಟ್!., ರಿಪಿಟ್!.. ಯಾವುದು!?, ಯಾವುದು!? ಎಲ್ಲವೂ...!!! ಎನ್ನುವ ಉತ್ತರ ಮೂಡಿ ಬರಬಹುದು. ಇಂದು ಸಾಗುತ್ತಿರುವ ಟೆಕ್ನಾಲಜಿಯ ವೇಗ ಇದೇ ವೇಗದಲ್ಲೇ ಮುಂದೆ ಸಾಗಿದರೆ ಮುಂದಿನ ತಲೆಮಾರುಗಳ ಜನ ಬುದ್ಧಿವಂತರಾಗಬಹುದಾ? ಅಥವಾ ದಡ್ಡ ಶಿಖಾಮಣಿಗಳಾಬಹುದಾ?, ಜಗತ್ತಿನ ಗತಿ ಎತ್ತಸಾಗಬಹುದು? ಈಗಾಗಲೇ ಸೋಷಿಯಲ್ ಮೀಡಿಯಾಗಳ ಹಾವಳಿ ಯುವ ಜನತೆಯನ್ನು ದಿಕ್ಕು ತಪ್ಪಿಸಿದ್ದು, ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಯಂತ್ರಗಾರಿಕೆಯ ಮತ್ತದರ ರೂಪರೇಷೆಯ ಬದಲಾವಣೆಯಿಂದ ಎಲ್ಲವೂ ಮಿತಿಮೀರಿ ಅಟ್ಟಹಾಸ ಮೆರೆಯುವಂತೆ ಮಾಡುತ್ತಿದೆ. ಬೃಹದಾಕಾರದ ಮನೆಗಳಲ್ಲಿ ದೊಡ್ಡ ಯಂತ್ರಗಳಂತೆ ಕೆಲಸ ಮಾಡುತ್ತಾ  ಗಣಿತದ ಲೆಕ್ಕಾಚಾರಗಳನ್ನು  ಚಕ ಚಕನೆ ಮುಗಿಸುತ್ತಿದ್ದ ಕಂಪ್ಯೂಟರ್ ಈಗ ಎಲ್ಲರ ಕೈ ಬೆರಳುಗಳ ಕೀಲಿಮಣೆ ಆಟದ ಆಟಿಕೆಯಾಗಿದೆ. ಡೆಸ್ಕ್ ಟಾಪ್‍ಗಳು ಲ್ಯಾಪ್ಟಾಪ್‍ಗಳಾಗಿ, ಮೊಬೈಲ್ ಫೋನ್‍ಗಳು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಟಚ್ ಪ್ಯಾಡ್ ಹೀಗೆ ಹತ್ತು ಹಲವು ಮಾದರಿಯ ರೂಪ ಪಡೆದಿವೆ. ನೆಟ್‍ಬುಕ್‍ಗಳು ಸಾಮಾನ್ಯನಿಗೂ ಕಂಪ್ಯೂಟರ್‍ರನ್ನು ದಿನ ನಿತ್ಯದ ಡೈರಿಗಿಂತ ಹೆಚ್ಚಿನ ಸಂಗಾತಿಯನ್ನಾಗಿ ಮಾಡಿವೆ.
ಅಂದು ನಮಗೆ ಮೆಮೋರಿ ಕಾರ್ಡ್ ಎಂದರೇನೆಂದೂ ತಿಳಿದಿರಲಿಲ್ಲ, ಪೆಂಡ್ರೈವ್ ಹೆಸರೇ ಗೊತ್ತಿರಲಿಲ್ಲ, ಹಾರ್ಡ್ ಡಿಸ್ಕ್ ಬಗ್ಗೆ ಅರಿವಿರಲಿಲ್ಲ, ಇಂಟರ್ ನೆಟ್ ಗೋಜಿನ ಸುಳಿವಿರಲಿಲ್ಲ... ಆದರರಿಂದು.!?,,,
ಮೊಬೈಲ್ ಫೋನ್ , ನೆಟ್ ಬುಕ್, ಟ್ಯಾಬ್, ಅಗ್ಗದ ಬೆಲೆಯ ಆ್ಯಂಡ್ರಾಯಿಡ್ ಫೋನುಗಳು ಅಷ್ಟೇ ಏಕೆ ಕಂಪ್ಯೂಟರ್‍ಗಳು ಟಚ್ ಅನುಭವ ಕೊಡುತ್ತಾ, ಇಂದಿನ ಯುವ ಪೀಳಿಗೆ  ಇಂಟರ್‍ನೆಟ್‍ನೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಮಾಡಿದೆ. ಇತ್ತೀಚೆಗೆ ಲಗ್ಗೆ ಇಟ್ಟ ನೆಟ್ ಬುಕ್ ಮತ್ತು ಟ್ಯಾಬ್‍ಗಳು ಕೂಡ ಇದೀಗ ಹಳೆಯದಾಗಿವೆ, ಇನ್ನೂ ಹೊಸ ಹೊಸ ಆವಿಷ್ಕಾರಗಳು ಬರುತ್ತಿವೆ. ಅತೀ ಸಣ್ಣ ತಂತ್ರಾಂಶಗಳು ದೈನಂದಿನ ಕೆಲಸಕ್ಕೆ ಬೇಕಾದ ಸೌಲಭ್ಯಗಳನ್ನು ಬೆರಳಂಚಿನಲ್ಲಿ ತಂದಿರುವುದು ಮುಂದಿನ ದಿನಗಳಲ್ಲಿ ಬರೀ ಬ್ರೌಸರ್ ಒಂದರಿಂದಲೇ  ಎಲ್ಲಿಂದಾದರೂ ಕುಳಿತಲ್ಲೆ ಪೂರ್ತಿ ಕೆಲಸ ಮಾಡುವ,  ಅನುಪಸ್ಥಿತಿಯಲ್ಲೂ, ಉಪಸ್ಥಿತಿ ಕೈಗೊಳ್ಳುವ ಕಾಲ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.
 ಪ್ರಾರಂಭದಲ್ಲೇ ಹೇಳಿದಂತೆ ನಾನು, ನನ್ನದು, ನನ್ನ ಮನಸ್ಥಿತಿ, ಕೇವಲ ಇವಷ್ಟೇ ನನ್ನದು!!. ಬೇರ್ಯಾವುದು ನನ್ನದಲ್ಲ, ಆದರೆ ಇಂದಿನ ತಂತ್ರಜ್ಞಾನದ ಬಿಸಿ ಆ ನಾನು!,, ನನ್ನದು!, ನನ್ನದಾದ ಕೆಲವೊಂದು ಎನ್ನುವ ಪರ್ಸ್‍ನಲ್ ವಿಚಾರಕ್ಕೂ ಲಗ್ಗೆ ಇಟ್ಟು ನಮ್ಮ ತನವನ್ನು ಅಪಹರಿಸಿಕೊಂಡು ಹೋಗುತ್ತಿದೆಯೇನೋ ಎಂದು ಅನಿಸುತ್ತಿದೆ. ಮೊದಲೆಲ್ಲ ಒಂದೈದು ನಿಮಿಷ ಫ್ರೀ ಟೈಮ್ ಸಿಕ್ಕರೆ ಪುಸ್ತಕ ಓದುವುದೋ, ಗೆಳೆಯರ ಜೊತೆ ಹರಟುವುದೋ, ಮನೆಯಲ್ಲಿ ಕುಳಿತು ಕೆಲಸ ಕೈಗೊಳ್ಳುವುದೋ ಮಾಡುತ್ತಿದ್ವಿ. ಆದರೆ ಇಂದು ಒದಗಿ ಬರುವ ಅದೇ ಅರೆಘಳಿಗೆ ಗೊತ್ತಿಲ್ಲದಂತೆ ಮೊಬೈಲ್ ಸ್ಕ್ರೀನ್‍ನ ಮೇಲೆ ಕೈ ಓಡಿಸುತ್ತಾ, ಯಾರ್ಯಾರನ್ನೋ ಫ್ರೆಂಡ್ ಮಾಡಿಕೊಳ್ಳುತ್ತಾ, ಬೇಕು ಬೇಡದ ವಿಷಯಗಳನ್ನ ತಡಕಾಡುತ್ತಾ, ಒಳಗೊಳಗೆ ನಗುತ್ತಾ, ಅಳುತ್ತಾ, ಅಯ್ಯೋ ನನಗೆ ಟೈಮೆ ಸಿಗುತ್ತಿಲ್ಲ ಬ್ಯುಸಿ ಬ್ಯುಸಿ  ಎನ್ನುವ ಹಂತಕ್ಕೆ ತಲುಪಿದ್ದೇವೆ. ಇದರಿಂದ ಜನತೆ ಇಂದು ಸಹಜ ವರ್ತನೆಯ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ನಾವಂದು ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ಸಮಯ ಕೈಯಲ್ಲಿ ಪುಸ್ತಕ ಬಿಟ್ಟರೆ ಬೇರೆನೂ ಕಾಣಲಾಗುತ್ತಿರಲಿಲ್ಲ. ಆದರೆ ಇಂದು ಮಕ್ಕಳು ಪುಸ್ತಕ ಮಡಚಿಟ್ಟು ಮೊಬೈಲ್‍ನಲ್ಲೇ ಚಾಟಿಂಗ್  ಮಾಡುತ್ತಾ ಅತ್ಯಮೂಲ್ಯ ಸಮಯಗಳನ್ನ ಹಾಳುಗೆಡವಿಕೊಳ್ಳುತ್ತಿದ್ದಾರೆ. ಒಂದು ಮಾತು ನಿಜ, ‘ನಿರಂಂತರವಾಗಿ ಆವಿಷ್ಕಾರವಾಗುವ ಆಧುನಿಕ ತಂತ್ರಜ್ಞಾನದ ಯಾವುದೇ ವಸ್ತುವೂ ನಮಗೆ ಮಾರಕವಲ್ಲ. ಆದರೆ ಅದು ಅತಿಯಾಗಿ ಬಳಕೆಯಾದರೆ ಖಂಡಿತ ಮಾನವನ ಅಭಿವೃದ್ಧಿಗೆ  ಶಾಪವಾಗುವುದು ಗ್ಯಾರಂಟಿ’. ಲೇಖನದ ಪೀಠಿಕೆಯಲ್ಲಿ  ಹೇಳಿದಂತೆ ನನ್ನ ವೈಯಕ್ತಿಕ ಬದುಕು ಹಾಗೆಲ್ಲ ಇದ್ದರೂ ಒಮ್ಮೊಮ್ಮೆ ಅವುಗಳೇ ಹಿಂದಿದ್ದ ರೀತಿಯಲ್ಲಿ ಈಗಿಲ್ಲ, ಬದಲಾವಣೆ ಕಂಡಿದೆಯೇನೋ ಅನ್ನಿಸುತ್ತದೆ. ಅಂದಿದ್ದ ಸ್ಟ್ರಾಂಗ್ ಮೈಂಡೆಡ್ ಇಂದು ಈ ಟೆಕ್ನಾಲಜಿಯ ಮೊಮ್ಮಕ್ಕಳಾದ ಇಂಟರನೆಟ್ ಹಾಗೂ ಸೋಷಿಯಲ್ ಮೀಡಿಯಾಗಳ, ತಂತ್ರಜ್ಞಾಗಳ ಅತಿರೇಖದಿಂದ ಸ್ಟ್ರೆಸ್ ಆಗಿ ವೀಕ್ ಆಗುತ್ತಾ ಸಾಗುತ್ತಿದೆಯೇನೋ ಅನ್ನಿಸುತ್ತಿದೆ. ಎಲ್ಲೋ ಒಂದು ಕಡೆ ನಾವು ತಂತ್ರಜ್ಞಾನದ ದಾಸರಾಗುತ್ತಿದ್ದೇವಾ ಎನಿಸುತ್ತ್ತಿದೆ. ನನ್ನಲ್ಲಿ ಇವುಗಳ ಹಾವಳಿಯಿಂದ ಒಮ್ಮೊಮ್ಮೆ ನನ್ನತನವೂ ಮರೆಯುತ್ತಿದೆ. ಹಾಗಂತ ಇವುಗಳಿಂದ ದೂರ ಇರುವುದು ಶೊಭೆಯಲ್ಲ. ಬಿಟ್ಟು ಬಿಡಲು ಆಗುವುದಿಲ್ಲ. ಅತಿಯಾದರೆ ಅಮ್ರತವೂ ವಿಷ ಎನ್ನುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಎಷ್ಟೆಷ್ಟೂ ಮುಂದುವರಿಯುತ್ತಿದ್ದೇವೋ, ಅಷ್ಟುಷ್ಟು ತೊಂದರೆಗಳ ದಾಸರಾಗುತ್ತಿದ್ದೇವೆಂದೆ ಅರ್ಥ.
ಕೊನೆಗೊಂದು ಮಾತು,
               ಆರಂಭದಲ್ಲಿ ಎಲ್ಲರೂ ಸನ್ಮಾರ್ಗದಲ್ಲೇ ಇರುತ್ತಾರೆ. ಹಣ, ಅಂತಸ್ತು, ಗೌರವ, ಹಿಂಬಾಲಕರ ಪಡೆ ಎಲ್ಲವೂ ಬಂತು ಜೀವನ ಶೈಲಿಯೇ ಬದಲಾಗುತ್ತೆ. ಎಲ್ಲಾ ಸೌಲಭ್ಯಗಳು ಬಂದಾಗ ಆದರ್ಶ, ತನ್ನ ತನ ಎಲ್ಲವನ್ನೂ ಮರೆಯುವ ಗತಿ ಬಂದೆರಗುವುದು ಖಚಿತ. ಅದೇನೆ ಇರಲಿ ನಾ ಬದುಕೋ ಶೈಲಿ, ಇಷ್ಟು ದಿನ ಉಳಿಸಿಕೊಂಡು ಬಂದಿರೋ ನನ್ನ ವೈಖರಿ ಇತ್ಯಾದಿಗಳು ಈ ಭರದ ಆಧುನೀಕತೆಯ ಜೀವನದಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಟೆನ್ಷನ್ ಲೈಫ್ ಬಿ.ಪಿ ತರಿಸದಿದ್ದರೆ ಸಾಕು. ಅದಕ್ಕಾಗಿ ಕಳೆದ ಹಳೆಯ ದಿನಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಮೈಮರೆಯುವೆ, ಖುಷಿ ಪಡುವೆ... ನಮಗೆ ನೆನೆಸಿಕೊಳ್ಳಲಾದರೂ ಆ ದಿನದ ನೆನಪುಗಳಿವೆ, ನಮ್ಮ ಮೊಮ್ಮಕ್ಕಳಿಗೆ ಅದು ಇಲ್ಲ. ಬರುವ ದಿನಗಳು ಭಯ ತರಿಸುತ್ತಿವೆ...ಏನೂ ಇಲ್ಲದ ಸಂಧರ್ಭಗಳಲ್ಲೇ ಬದುಕು ಚೆನ್ನಾಗಿತ್ತು ಎನಿಸುತ್ತಿದೆ...

ಚಿತ್ರರಂಗದ ಸಮಸ್ಯೆಯ ಸುತ್ತ-ಸಿರಿ ಬುಲೆಟ್

ಕನ್ನಡ ಚಿತ್ರರಂಗಕ್ಕೆ ಸೆಡ್ಡು
ಹೊಡೆತ ತಿಂದರೆ ಹೊಂದುವವರ್ಯಾರು ಭಾಷೆಗೆ
ಪರಭಾಷೆಯ ಚಿತ್ರಗಳಿಗೆ ರತ್ನಗಂಬಳಿ, ಬಂದಿದೆ ಕನ್ನಡ ಚಿತ್ರರಂಗಕ್ಕೀಗ ಅಳಿ ಅಥವಾ ಉಳಿ...
ಗಾಂಧಿನಗರದಲ್ಲೇ ಕನ್ನಡ ಚಿತ್ರಕ್ಕಿಲ್ಲ ಥಿಯೇಟರ್...

   

ವರ್ಷಂಪ್ರತಿಯೂ ರಾಜ್ಯೋತ್ಸವ ಆಚರಣೆ ಮಾಡಿ, ತನು ಕನ್ನq, ಮನ ಕನ್ನಡ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಬಾರಿಯೂ ಜೈ ಎನ್ನುವಂತೆ ಈ ಬಾರಿಯೂ ಕೈ ಎತ್ತಿ, ಕೂಗಿ ಕರತಾಳನವನ್ನು ಮಾಡಿ, ತಾಯಿ ಕನ್ನಡಾಂಬೆಯ ಮಕ್ಕಳು ನಾವು, ಕನ್ನಡಕ್ಕಾಗೇ ನಮ್ಮುಸಿರು ಎಂದೆಲ್ಲಾ ಬೊಬ್ಬಿರಿದು, ವಿಜೃಂಭಣೆಯಲ್ಲಿ ಸಭೆ ಸಭಾರಂಭವನ್ನು ಮುಗಿಸಿ, ತಮ್ಮ ತಮ್ಮ ಮನೆಗೆ ತೆರಳಿ ಸುಮ್ಮನೆ ಕುಳಿತಿದ್ದೇವೆ. ಇನ್ನೂ ಕೆಲವರು ಹಿಂದಿನ ವರ್ಷಗಳ ಆಯೋಜನೆಗಿಂತ ಒಂದು ಪಟ್ಟು ಜಾಸ್ತಿ ಅದ್ಧೂರಿಯನ್ನೇ ಕೈಗೊಂಡು, ಸಿನಿಮಾ ತಾರೆಯರ, ಧುರೀಣರ, ಗಣ್ಯರ ಆಗಮನಭಿಲಾಷೆಯಿಂದಲೇ ಹಾಡಿ, ಕುಣಿದು, ಕುಪ್ಪಳಿಸಿ ಭಾಷಾಭಿಮಾನ ಮೆರೆದಿದ್ದಾರೆ. ಮತ್ತೂ ಹಲವರು ಇನ್ನೂ ಕೂಡ ರಾಜ್ಯೋತ್ಸವದ ಹಬ್ಬ ನಡೆಸುತ್ತಲೇ ಇದ್ದಾರೆ, ಅಂಗಡಿ ಮುಂಗಟ್ಟುಗಳಿಂದ ಸಹಾಯಧನದ ನೆಪದಲ್ಲಿ ಹಣ ಕೀಳುತ್ತಲೇ ಇದ್ದಾರೆ, ಫಂಕ್ಷನ್ ಆಯೋಜನೆಯಲ್ಲಿ ದಿನದೂಡುತ್ತಿದ್ದಾರೆ... ಇರಲಿ ಅದೇನೆ ಇರಲಿ, ವರ್ಷವಿಡೀ ರಾಜ್ಯೋತ್ಸವ ಮಾಡಬೇಕೆಂಬ ಮಾತು ಕೇಳಿ ಕೇಳಿ ನಮಗೂ  ಹೀಗೆಲ್ಲಾ ನಡೆದರೆ ಇಡೀ ವರ್ಷ, ಕನ್ನಡಾಂಬೆಯ ಪೂಜೆಯನ್ನು ನೋಡಿ ಕಣ್ಮನ ಸೆಳೆದುಕೊಳ್ಳಬಹುದೆಂಬ ಆತ್ಮತೃಪ್ತಿಯೂ ಇದೆ.
 ಈ ಅನಿಯಮಿತ ಅದ್ಧೂರಿ ಸಮಾರಂಭಗಳು ಕೇವಲ ಇಲ್ಲಿನವರ ಕನ್ನಡ ಹೃದಯಾಭಿಮಾನಕ್ಕೆ ಮಾತ್ರಾ ಸೀಮಿತವಾ? ಅಥವಾ ಇಲ್ಲಿ ಬಂದು ನೆಲೆಸುವ ಪ್ರತಿ ಬಂಧು ಬಾಂಧವರಿಗೂ ಸಮರ್ಪಣೆಯಾ? ಎನ್ನುವುದರ ಬಗ್ಗೆ ಬಹುಶಃ ಯಾರೂ ಚಿಂತಿಸುವ ಮನಸ್ಸು ಮಾಡಿಲ್ಲ ಅನಿಸುತ್ತಿದೆ. ಕನ್ನಡ ಶಾಲೆಗಳು, ಕನ್ನಡ ಮಾತನಾಡುವ ದಿನಚರಿಗಳು, ಕನ್ನಡ ಕಲಿಸುವ ಡಿಂ ಡಿಮಾಗಳು ಅಲ್ಲಲ್ಲಿ ತನ್ನ ಕಳೆಬರಗಳನ್ನು ಕಳಚಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾದರೂ, ಹೋರಾಟದ ಹೆಸರಿನ ಜೊತೆ ಅಲ್ಲಲ್ಲಿ ಅವುಗಳ ಬಗ್ಗೆ ಮಾತುಕಥೆ, ಚರ್ಚೆ ಇತ್ಯಾದಿಗಳ ಚರ್ಯೆಯು ಕಂಡುಬರುತ್ತಿದೆ. ಸುಮಾರು ಅಷ್ಟು ವರ್ಷಗಳ!!!.., ಸುಮಾರು ಇಷ್ಟು ಶತಮಾನಗಳ!!!..,ಅದು-ಇದು ಇದೆ... ಎಂದು ಕೊಚ್ಚಿಕೊಳ್ಳುವ ನಾವುಗಳೇ ಇಂದು ಕನ್ನಡದ ಉಳಿವನ್ನು ಅಥವಾ ಅದರ ಉಳಿವಿನ ಚಿಂತೆಯನ್ನು ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆಂದು ಮಥಿಸಿದರೆ ಉತ್ತರ ಎಷ್ಟು!!?? ಎನ್ನುವ ಖ್ವಷನ್ ಮಾರ್ಕ್‍ಗೆ ತಿರುಗುತ್ತದೆ. ಇದು ಆಶ್ಚರ್ಯವಾದರೂ ಸತ್ಯ...
 ಎಲ್ಲಾ ಕಡೆಯಿಂದಲೂ ಕನ್ನಡ ನಾಡು ನುಡಿಗೆ ದಬ್ಬಾಳಿಕೆಯ ಬಿಸಿ ಮುಟ್ಟುತ್ತಿದೆ ಬಹುತೇಕ ಎನ್ನುವ ಎಲ್ಲವೂ ಬೇರೆ ಭಾಷೆಗಳ ಲೀನತೆಗೆ ಹೊಂದಿಕೊಳ್ಳುತ್ತಿದೆ, ವಿದ್ಯೆ, ವ್ಯವಹಾರ, ಕಸುಬು, ಕೈಗಾರಿಕೆ ಇತ್ಯಾದಿಗಳಲ್ಲೂ ಅನ್ಯಭಾಷೆಯೇ ಮೇಲುಗೈ ಸಾಧಿಸಿ ನಮ್ಮೂರಲ್ಲೇ, ನಮ್ಮನ್ನವನ್ನೇ ತಿಂದು, ನಮ್ಮ ನೀರನ್ನೇ ಕುಡಿದು ಕ್ಯಾಕರಿಸಿ ನಮ್ಮ ಮುಖಕ್ಕೆ ಉಗಿಯುತ್ತಿದೆ. ಹೀಗೆ ಹೋದರೆ ಮುಂದಿನ ಗತಿ...!?
 ಇಂತಹ ಒಂದು ಸಂಚಕಾರ ಇತ್ತೀಚಿಗೆ ಮನೋರಂಜನೆಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಯಾರಾಗುವ ಪ್ರತಿ ಪ್ರೋಗ್ರಾಮ್‍ನಿಂದ ಹಿಡಿದು, ಅದನ್ನು ನಡೆಸುವ ಇನ್ ಚಾರ್ಜರ್ ಕೂಡ ಅನ್ಯರಾಜ್ಯದವನೇ ಆಗಿದ್ದು ನಮ್ಮನ್ನು ಬುಗುರಿಯಾಡಿಸುತ್ತಿದ್ದಾನೆ. ಈ ಸರದಿ ಇದೀಗ ಜನಸಾಮಾನ್ಯರ ಅತ್ಯಮೂಲ್ಯ ಮನೋರಂಜನೆಯ ಭಾಗವಾಗಿರುವ ಸಿನಿಮಾರಂಗಕ್ಕೂ ಕಾಲಿಟ್ಟಿದ್ದು, ಇದರ ಬಗ್ಗೆ ಮಂಡಳಿಯವರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಮುಂದೊಂದು ದಿನ ನಮ್ಮ ಇಂಡಸ್ಟ್ರೀಯೂ ಮೂಲೆಗುಂಪಾಗಿ, ಪರಭಾಷೆಯ ಚಿತ್ರಗಳ ಎದುರು ತಲೆ ಎತ್ತಿ ನಿಲ್ಲುವುದು ಕಷ್ಟಸಾಧ್ಯ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ ಯಾರಾದರೂ ಒಬ್ಬರನ್ನು, ಸ್ಯಾಂಡಲ್‍ವುಡ್ ಸಮಸ್ಯೆ ಏನು!? ಎಂದು ಕೇಳಿದರೂ ಸಾಕು, ‘ಪರಭಾಷೆ ಚಿತ್ರಗಳ ದಾಳಿ’, ‘ಕನ್ನಡಿಗರು ಚಿತ್ರಮಂದಿರಕ್ಕೆ ಬರುವುದಿಲ್ಲ’ , ‘ಕನ್ನಡ ಚಿತ್ರಗಳನ್ನು ನೋಡುವುದಿಲ್ಲ’, ಎಂಬೆಲ್ಲಾ ಉದ್ಧುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋರುವುದೇನೆಂದರೆ, ಈ ಎಲ್ಲಾ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗವೇ ಹೊಣೆ!... ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.
ಕನ್ನಡ ಚಿತ್ರರಂಗಕ್ಕೆ ತವರು ಮನೆಯಾಗಿರುವ ಗಾಂಧಿನಗರದಲ್ಲೇ, ಇಂದು ನಮ್ಮ ಭಾಷೆಯ ಹೀರೋಗಳ ಕಟೌಟ್  ಬೀಳಬೇಕಾದ ಸ್ಥಳಗಳಲ್ಲಿ, ಅನ್ಯಭಾಷೆಯ ಹೀರೋ ಒಬ್ಬನ ಕಟೌಟ್ ನಿಲ್ಲಿಸಿ ಅವರ ಸಿನಿಮಾಗಳನ್ನು ಗೆಲ್ಲಿಸುವಷ್ಟು ಆಳವಾದ ಬೇರನ್ನು ಬಿಟ್ಟಿದೆ ಪರಭಾಷೆ. ವರ್ಷಗಳ ಹಿಂದೆ ಮೆಜೆಸ್ಟಿಕ್ ಒಂದರಲ್ಲೇ ಸಾಲು ಸಾಲಿದ್ದ ಸಿನಿಮಾ ಥೀಯೇಟರ್‍ಗಳು ಇಂದು  ಕೆಲವೇ ಕೆಲವು ಎಣಿಕೆಗಳಿಗೆ ಬಂದು ನಿಂತಿದೆ. ಇನ್ನೂ ರಾಜ್ಯದ ವಿವಿಧ ಪ್ರದೇಶಗಳಲ್ಲಿದ್ದ ಅದೆಷ್ಟೋ ಚಿತ್ರಮಂದಿರಗಳು ಹೇಳ ಹೆಸರಿಲ್ಲದಂತೆ ಮುಚ್ಚಿದೆಯೋ ನಾ ಕಾಣೆ...
ಯಾಕೆ ಈ ಸಮಸ್ಯೆ???, ಯಾಕೆ ಈ ಸಂಕಷ್ಟ???.
ಒಂದು ಕಡೆ ಹೈ ಬಜೆಟ್, ಇನ್ನೊಂದು ಕಡೆ ಡಬ್ಬಿಂಗ್ ಭೂತ. ಇವೆರಡು ಕನ್ನಡ ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದ್ದು, ವಾರಂಪ್ರತಿ ಎಷ್ಟೆóóಷ್ಟೋ ಸಿನಿಮಾಗಳು ತೆರೆ ಕಂಡರೂ, ಚಿತ್ರಮಂದಿರ ಸಿಗದೇ  ಎತ್ತಂಗಡಿಯಾಗುತ್ತಿರುವುದು ನೋಡಿದರೆ ಕನ್ನಡಕ್ಕೆ, ಕನ್ನಡ ಚಿತ್ರಗಳಿಗೆ ಎಷ್ಟೆಲ್ಲಾ ಸಂಚಕಾರ ಬಂದಿದೆ ಎಂಬುದನ್ನು  ಅರಿಬಹುದಾಗಿದೆ. ಕನ್ನಡ ಚಿತ್ರಗಳು ಗೆಲ್ಲಬೇಕಾದ ಪ್ರಮುಖ ಭಾಗಗಳಲ್ಲೇ ಪರಭಾಷೆ ಚಿತ್ರಗಳು ತಮ್ಮ ದರ್ಪವನ್ನು ತೋರ್ಪಡಿಸುತ್ತಿದ್ದರೂ, ಕೈ ಕಟ್ಟಿ ಕುಂತಿದೆ ನಮ್ಮ ವಾಣಿಜ್ಯ ಮಂಡಳಿ. ಇದಕ್ಕೇನಂತೀರಾ?...
 ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಡೆಯಲು ಚಲನಚಿತ್ರ ಮಂಡಳಿ ಯಾವುದೇ ಆಸಕ್ತಿ ತೋರುತ್ತಿಲ್ಲ. ಖುರ್ಚಿಯಲ್ಲಿರುವವರಿಗೆ ಕೇವಲ ಅಧಿಕಾರ ಅನುಭವಿಸುವುದೊಂದೆ ಧ್ಯೇಯವಾಗಿದೆ. 1934 ರಲ್ಲಿ ತೆರೆಕಂಡ ‘ಸತಿಸುಲೋಚನ’ ಎಂಬ ಮೊದಲ ವರ್ಣಮಯ ಚಿತ್ರ ಕಾಲಿರಿಸಿದ್ದರಿಂದ ಹಿಡಿದು ರಾಜ್ ಮತ್ತು ವಿಷ್ಣುವರ್ಧನ್‍ರವರ ಕೊನೆ ದಿನಗಳವರೆಗೂ ಕನ್ನಡ ಚಿತ್ರರಂಗ ಮೇರು ಶಿಖರದ ಹೆಸರು, ಅಭಿಮಾನ, ಅವಕಾಶ, ಗೆಲುವು ಎಲ್ಲವನ್ನು ಹೊಂದಿತ್ತು. ಆದರೆ ಇಂದು ಕಾಲಿರಿಸುತ್ತಿರುವ ಹೊಸ ಹೊಸ ಟೇಸ್ಟ್‍ಗಳು ಇಡೀ ಚಿತ್ರರಂಗವನ್ನೇ ಗುಲ್ಲೆಬ್ಬಿಸಿ ಬಿಟ್ಟಿವೆ. ಮಂಡಳಿಯ ಮುಖ್ಯಸ್ಥರೇ ನಿಮಗ್ಯಾಕೆ ಬೇಕು ಆ ಅಧಿಕಾರ. ನಿಮ್ಮನ್ನಲ್ಲಿ ಕುಳಿಸಿರುವುದು ಕೇವಲ ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸರ್ಕಾರದಿಂದ ಬಿಡುಗಡೆಯಾಗುವ ಕಾಂಚಾಣವನ್ನು ತಮ್ಮ ಖಜಾನೆಗೆ ತುಂಬಿಕೊಳ್ಳುವುದು, ಪತ್ರಿಕೆ, ಟಿ.ವಿ ಚಾನೆಲ್‍ಗಾಗಿ ಆ ಸಿನಿಮಾ, ಈ ಸಿನಿಮಾದ ಪ್ರೆಸ್ ಮೀಟ್ ನಡೆಸಿ  ಅದರಲ್ಲಿಷ್ಟು ದುಡ್ಡು ಹೊಡೆಯುವುದು ಮಾಡುವುದಕ್ಕಲ್ಲ. ಬದಲಾಗಿ ಎಲ್ಲಿ ನಮ್ಮ ಭಾಷೆಯ ಚಿತ್ರಗಳಿಗೆ ಅಡ್ಡಿ ಬರುತ್ತಿದೆ?, ನಮ್ಮ ಭಾಷೆಯ ಚಿತ್ರ ಬಿಡುಗಡೆಗಳ ಸಮಸ್ಯೆ ಏನು!?, ಇತ್ಯಾದಿಗಳ ಬಗ್ಗೆಯೂ ಚರ್ಚಿಸಿ, ಗಮನಿಸಿ ಹೋರಾಡಲಿ ಎನ್ನುವುದಕ್ಕೆ...ಬಹುಶಃ ಇದು ನಿಮಗೆಲ್ಲಿ ತಿಳಿಯುತ್ತೇ. ಹೊರಗೆ ಒದ್ದಾಡಿ ಸಾಯುವವರು ನೀವಲ್ಲವಲ್ಲ...
ಒಂದು ಅಂದಾಜಿನ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ತೆಲುಗು ಚಿತ್ರಗಳು 60 ಕ್ಕೂ ಹೆಚ್ಚಿನ ಚಿತ್ರಮಂದಿರ, ತಮಿಳು ಚಿತ್ರಗಳು 40 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿವೆಯಂತೆ. ಹೀಗಿರುವಾಗ ಕನ್ನಡ ಸಿನಿಮಾಗಳನ್ನು ನೋಡಬೇಕೆಂದರೂ ಎಲ್ಲರಿಗೂ ನೋಡಲಾಗುತ್ತದೆಯೇ!!?  ನೀವೇ ಹೇಳಿ...
ಬಹುಶಃ ಬೆಂಗಳೂರಿ£ ಒಳಪ್ರದೇಶವೆನಿಸಿಕೊಂಡಿರುವ ಕೆಲವೊಂದು ಸಂಧಿಗೊಂದಿಗಳಿಗೆ ಹೋದರೆ ಕನ್ನಡ ಭಾಷೆ ಮಾತನಾಡುವವರೆ ಸಿಗುತ್ತಿಲ್ಲ, ಅಂಥದ್ದರಲ್ಲಿ ಕನ್ನಡ ಸಿನಿಮಾಗಳು ನೋಡಲು ಸಿಗುತ್ತವೆಯೇ!?. ಎಷ್ಟೋ ಜನ ಸಿನಿಮಾ ನೋಡಲು ಮಲ್ಟೀಪ್ಲೆsÉಕ್ಸ್‍ಗಳಿಗೆ ದುಬಾರಿ ಹಣವನ್ನು ಕೊಟ್ಟು ಕೂರಬೇಕಾದ ಸಂಧರ್ಭ ಇಂದೊದಗಿದೆ ಎಂದರೆ ಅದಕ್ಕೆ ಈ ಮೇಲಿನ ಸಮಸ್ಯೆಯೇ ಕಾರಣ. ಅಂತಹವರಲ್ಲಿ ನಾನು ಒಬ್ಬ. ಯಾಕೆಂದರೆ ನಮ್ಮ ಏರಿಯಾದಲ್ಲಿ ಹಾಲು ಮಾರುವವನು ಕೂಡ ಕನ್ನಡ ಮಾತನಾಡುತ್ತಿಲ್ಲ. ನಮ್ಮ ಏರಿಯಾದಲ್ಲಿ ಒಂದೇ ಒಂದು ಕನ್ನಡ ಸಿನಿಮಾವನ್ನು ಪ್ರದರ್ಶನಕ್ಕಿಡುತ್ತಿಲ್ಲ. ಕನ್ನಡ ಸಿನಿಮಾ ನೋಡಬೇಕು ಎಂದರೆ ನಗುತ್ತಾರೆ. ಅತ್ತ ಕಡೆ ಮಲ್ಟೀಫ್ಲೇಕ್ಸ್ ಥೀಯೇಟರ್‍ಗಳು ದುಬಾರಿ ಹಣ ಪಡೆದು ಸಾಯಿಸುತ್ತಾರೆ...ಎಲ್ಲಿಗೆ ಹೋಗಲಿ ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ಪ್ರೇಕ್ಷಕ ನೊಂದರೆ ಸದಭಿರುಚಿಯೂ ನೋಯುವುದಿಲ್ಲ, ಕಡಿಮೆಯಾಗುವುದೂ ಇಲ್ಲ. ಬದಲಾಗಿ ಬೇರೆ ಕಡೆ ವಾಲಬಹುದು ಎಚ್ಚರವಹಿಸಿ...
ಭಾಷೆಯ ಮೇಲಿನ ಅಭಿಮಾನ ಹಾಗೂ ಉತ್ತಮ ಚಿತ್ರಗಳು ಬಂದರೆ ಬೇರೆ ಭಾಷೆಯ ಯಾವುದೇ ಚಿತ್ರ ರಿಲೀಸ್ ಆದರೂ ಅದನ್ನು ಬದಿಗಿಟ್ಟು  ಕನ್ನಡ ಸಿನಿಮಾ ನೋಡಲು  ಜನರು ಬಂದೇ ಬರುತ್ತಾರೆ. ಹಾಗಂದ ಮಾತ್ರಕ್ಕೆ ಕನ್ನಡದಲ್ಲಿ ಉತ್ತಮ ಚಿತ್ರಗಳು ಕಡಿಮೆ ಇವೆ ಅಂತಲ್ಲ ಆದರೆ ಅದು ಪರಭಾಷೆ ಚಿತ್ರದೊಂದಿಗೆ ಪೈಪೋಟಿ ಇಳಿಯಲು ಸಿದ್ಧವಿಲ್ಲ. ಇಳಿದರೂ ಸೋಲಬೇಕಾದ ಪರಿಸ್ಥಿತಿ ನಮ್ಮವರೇ ತಂದಿದ್ದಾರೆ. ಕಾರಣ ‘ಚಿತ್ರಮಂದಿರಗಳ ಅಭಾವ’.
ಯಾವ ಭಯವೂ ಬೇಡ ನಮ್ಮಲ್ಲಿ ಬ್ಯುಸಿನೆಸ್‍ಗೇನೂ ಕೊರತೆ ಇಲ್ಲ. ಸಮಸ್ಯೆ ಎಲ್ಲಿಯೂ ಇಲ್ಲ ನಮ್ಮೊಳಗೆ ಇದೆ. ಖುರ್ಚಿಯಲ್ಲಿ ಕುಳಿತಿರುವವರು ಎದ್ದು ನಿಲ್ಲುತ್ತಿಲ್ಲ, ಅಧಿಕಾರ ದಾಹ ತೀರುತ್ತಿಲ್ಲ, ಹೆಸರು ಮಾಡಿರುವವರು ಕ್ರೀಯಾತ್ಮಕವಾಗಿ ಕೆಲಸ ಮಾಡುತ್ತಿಲ್ಲ,  ಹೆಸರಿಲ್ಲದವರು ಬಡಾಯಿ ಮಾತುಗಳನ್ನಾಡುವುದು ಬಿಡುತ್ತಿಲ್ಲ. ತಣ್ಣಗಿರುವಾಗ ಇದೆಲ್ಲಾ ನಮ್ಮದಲ್ಲವೆಂದು ತಮ್ಮ ಪಾಡಿಗೆ ಅವರವರ ಚಿತ್ರ ಬಿಡುಗಡೆ ಮಾಡಿ ಹಣ ಸಂಪಾದಿಸಿಕೊಂಡು ಸುಮ್ಮನೆ ಕೂರುವರಿಗೇನು ಕಡಿಮೆ ಇಲ್ಲ. ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಯಾರೂ ಪ್ರಯತ್ನಿಸುತ್ತಿಲ್ಲ. ಅನ್ಯಭಾಷೆಯ ಚಿತ್ರಕ್ಕೆ ಕೋಟಿ ಕೋಟಿ ಸುರಿದು ಖರೀದಿಸುವವರು ನಮ್ಮ ಭಾಷೆಯ ಚಿತ್ರಗಳನ್ನು ಮುಟ್ಟಿ ಮೂಸುತ್ತಿಲ್ಲ...
ಇಂತಹ ಸಮಸ್ಯಾ ಸಂಧಿಯಲ್ಲಿ ಸಿಲುಕಿರುವ ಚಿತ್ರೋದ್ಯಮ ಈ ಹೊತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸಲೇಬೇಕಾಗಿದೆ. ನಿರ್ದೇಶಕರು ನಿರ್ಮಾಪಕರು ಮಾತ್ರವಲ್ಲದೇ ನಟ- ನಟಿಯರು ಕೂಡ ಪರಭಾಷೆಯ ಹಾವಳಿ ತಡೆಯಲು ಮುಂದಾಗಬೇಕಾಗಿದೆ. ಈ ಹಿಂದೆ ಪರಭಾಷೆಯ ಚಿತ್ರಗಳು ಕೇವಲ ಇಪ್ಪತ್ತೇಳು ಚಿತ್ರಮಂದಿರದಲ್ಲಿ ಮಾತ್ರಾ ಬಿಡುಗಡೆಯಾಗಬೇಕು ಎನ್ನುವ ಒಪ್ಪಂದ ರೂಡಿಯಲ್ಲಿತ್ತು. ಆದರೆ ಆ ನಂತರ ಕೆಲವು ಚಿತ್ರಗಳು ಇನ್ನೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿದವು. ಕೊನೆಗೆ ಅದು ನ್ಯಾಯಾಲಯದ ಮೆಟ್ಟಿಲೇರಿತು. ತೀರ್ಪು ಪರಭಾಷಿಕ ಚಿತ್ರ ತಯಾರಕರ ಪರವಾಗಿ ಬಂತು. ಇದರಿಂದ ಇನ್ನಷ್ಟು ಹೊಡೆತ ನಮಗಾಯಿತು. ಕೆಲ ವರ್ಷಗಳ ಹಿಂದೆ ಮಲಯಾಳಿ ಚಿತ್ರಗಳು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಇದೀಗ ಅವು ಕೂಡ  ಲಾಭ ಮಾಡಿಕೊಳ್ಳುತ್ತಿವೆ. ತಮಿಳುನಾಡು ಸರ್ಕಾರ ಪರಭಾಷಾ ಚಿತ್ರಗಳ ಬಿಡುಗಡೆಗೆ ಸಂಬಂಧಿಸಿದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದು ಈ ಬಗ್ಗೆ ನಾವು ಕೂಡ ಚಿಂತನೆ ನಡೆಸಬೇಕಾಗಿದೆ.
ವರನಟ ಡಾ. ರಾಜ್‍ಕುಮಾರ್‍ರವರು ಅಂದು ನನ್ನ ಕ್ಷೇತ್ರ ಅಲ್ಲ ಎಂದು ಗೋಕಾಕ್ ಚಳುವಳಿಯಲ್ಲಿ ಇಳಿಯದಿದ್ದರೆ, ಚಳುವಳಿಗೆ ಅಷ್ಟು ಜನ ಸೇರುತ್ತಲೇ ಇರಲಿಲ್ಲ, ಚಳುವಳಿ ಆಗುತ್ತಲೇ ಇರಲಿಲ್ಲ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರ ಸಿನಿಮಾಗಳಿಂದ, ಅವರ ನಡವಳಿಕೆಗಳಿಂದ ಕೆಲವನ್ನಾದರೂ ಅನುಸರಿಸಿದರೆ  ಕನ್ನಡ ಮತ್ತು ಕರ್ನಾಟಕ ಚಿತ್ರರಂಗ ಮತ್ತೆ ಹಿಂದಿನ ದಿನಗಳನ್ನು ನೋಡಬಹುದು!!! ಎನಿಸುತ್ತದೆ. ಏನಂತೀರಾ???...

Wednesday, 23 December 2015

ಮಳೆಯ ಹನಿಯಲ್ಲಿ ಕೂತು...


“ಎಲ್ಲ ಮರೆತು ನೆವವ ಹೂಡಿ ಅಡಗಿ ಕುಳಿತ ನೆನಪೆ..,
ಗುಳಿತೋಡಿ ಎದೆಯಿಳಿದು ಕುಳಿತು ಮನ ಕುಣಿಸುತಿರುವೆ ಏಕೆ ನೆನಪೆ...!?”
ನಿಜ...ತಮಿಳುನಾಡಿನಲ್ಲೂಂಟಾದ ಚಂಡಮಾರುತದ ನಿಮಿತ್ತ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ವರ್ಷಧಾರೆ ದೀರ್ಘ ಎರಡು ಮೂರು ದಿನಗಳು ಸುರಿದಿತ್ತು. ಈ ಸಮಯ ನೆರೆ ಬರುವಂತೆ ಹೊಡೆಯುವ ಮಳೆಗಾಲ ಅಲ್ಲ. ಆದರೂ ಎಡೆಬಿಡದ ದುಂಬು ದುಂಬು ಮಳೆ ಎಲ್ಲೆಲ್ಲೂ ಚಳಿ ಹಿಡಿಸಿದ್ದಂತೂ ನಿಜ. ಧರಿತ್ರಿ ಈ ವರ್ಷ ಸಿಂಚನದಿಂದ ಚೇತನಗೊಂಡಿದ್ದಾಳೆ. ಬೇಸಿಗೆಯಂತೆ ಸೂರ್ಯನ ಧಗೆಯಿಂದ ದಹಿಸುತ್ತಿದ್ದ ಭೂಮಿ ಈಗ ತಂಪಾಗಿದೆ. ಪರಿಚಿತರೊಬ್ಬರು ಹೇಳುವಂತೆ ಸುಮಾರು 18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಹವಮಾನ ಸುಮಾರು ತಿಂಗಳುಗಳ ಕಾಲ ಇತ್ತಂತೆ. ಬಹುಶಃ ಇದೀಗ ಮತ್ತೇ ಹಾಗೆ ಆದಂತಿದೆ. ಅಬ್ಬಾ ಭೂಮಿಗೆ ಸೂರ್ಯನ ಕಿರಣವೇ ಇಲ್ಲ, ಮಂಜಿನಂತೆ ಸದಾ ಪಿರಿ ಪಿರಿಸುವ ಮಳೆ ಎಲ್ಲರಿಗೂ ಸ್ವೆಟರ್ ಹಾಕಿಸುವಂತೆ ಮಾಡಿತ್ತು. ಯಾರಿಗೆ ಫೋನ್ ಮಾಡಿದರೂ ಅಬ್ಭಾ ಏನು ಚಳಿ ಸಾಕಾಗಿ ಹೋಯ್ತು ಅನ್ನಿಸುವಷ್ಟು ಮಳೆರಾಯ ಬೆಂಗಳೂರಲ್ಲಿ ಚಳಿ ಬೀಸಿ ಹೋಗಿದ್ದ. ಇವಿಷ್ಟು ಒಂದು ಕಡೆಯ ವಿಷಯವಾದರೆÉ ಇಂತಹ ಮಳೆ ಚಳಿಯಲ್ಲೂ ಅಡಗಿ ಕುಳಿತ ಭಾವನೆಗಳು ಮತ್ತೆ ಗರಿಗೆದರಿ ಏದೆಯಲ್ಲಿ ಕುಳಿತದ್ದು ನನ್ನನ್ನು ಇನ್ನಷ್ಟೂ ಮೋಹಕತೆಗೆ ಜಾರಿಸಿ ನೆನಪ ತೇರಲ್ಲಿ ಒಂದು ಮೆರವಣಿಗೆ ಕರೆದುಕೊಂಡು ಹೋಗಿಯೇ ಬಿಟ್ಟಿತು...
ಅದೊಂದು ಸಂಭ್ರಮ...
ಬಾಲ್ಯದಿಂದ ಹಿಡಿದು ಇಂದಿನ ತನಕದ ಹಲವು ನೆನಪುಗಳು ಮಳೆಗಾಲದೊಂದಿಗೆ ಯಾವಾಗಲೂ ಮರುಕಳಿಸುತ್ತವೆ. ಬಹುಶಃ ಇದಕ್ಕೆ, ಹಿರಿಯರು ಹೇಳಿರಬೇಕು ವರ್ಷ ಋತುವಿಗೆ ಸೋಲದ ಮನಸ್ಸುಗಳೇ ಇರಲಾರವು ಎಂದು.
ಬಾಲ್ಯದಲ್ಲಿ ಮಳೆಯೊಂದಿಗೆ ಮಾಡಿದ ಅದೆಷ್ಟೋ ಮೋಜುಗಳು ಮೊನ್ನೆ ನೆನೆಪುಗಳ ಪುಟ ತೆರೆಯಿತು. ಮೊದಲ ರಭಸದ ಮಳೆಗೆ ತುಂಬುತ್ತಿದ್ದ ಮನೆಯ ಮುಂದಿನ ತೋಡುಗಳು, ಹರಿಯುವ ನೀರಿನಲ್ಲಿ ಮುಳುಗಿ ಆಟವಾಡಿ ಮೈರೆತು ಒದ್ದೆಯಾಗಿತ್ತಿದ್ದ ಸಂಧರ್ಭಗಳು, ಕಪ್ಪೆಗಳನ್ನು ಮೀನುಗಳೆಂದು ಭಾವಿಸಿ ಹಿಡಿಯುತ್ತಿದ್ದ ದಿನಗಳು. ನನ್ನೊಡನೆ ಆಡಲು ಬಂದ ಪುಟ್ಟ ನಾಯಿಯನ್ನು ನೀರಿಗೆ ದೂಡಿ ಅದರÀ ಈಜನ್ನು ನೋಡಿ ಖುಷಿಪಡುತ್ತಿದ್ದ ಕ್ಷಣಗಳು, ಮುಂಜಾನೆ ಬಿಸಿಲಿದ್ದ ಕಾರಣ ಕೊಡೆ ಮರೆತು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಕೊಡೆಯಿಲ್ಲದೇ ನೆನದು ಬಳಿಕ ಕಟ್ಟಿಗೆ ಒಲೆಯ ಮುಂದೆ ಕುಳಿತಿದ್ದ ಆ ಬೆಚ್ಚನೆಯ ಸವಿಸಮಯಗಳು, ಪಾಪ ಧನಕರುಗಳು ಮಳೆಯಲ್ಲೇ ನಿಂತಿವೆ ಎಷ್ಟು ಚಳಿಯಾಗಬಹುದೇನೋ!? ಎಂದು ಮಳೆಯನ್ನು ತಡೆಯಲು ಕೊಡೆ ಹಿಡಿದ ಆ ಸುಂದರ ಸವಿಕ್ಷಣಗಳು, ಮಳೆಯಿದೆ ಶಾಲೆಗೆ ಹೋಗಲ್ಲ ಎಂದು ಹಠ ಬಿದ್ದು ಅಮ್ಮನ ಕೈ ಏಟು ತಿಂದು ಮಳೆಗಿಂತ ಜೋರಾಗಿ ಕಣ್ಣೀರ ಧಾರೆ ಹರಿಸಿ ಮನೆ ಸೇರಿದಂತ ವೇಳೆಗಳು, ಶಾಲೆ ಆರಂಭವಾಗುವ ಸಮಯ ರೈನ್ ಕೋಟ್, ಕೊಡೆಗಳಿಗಾಗಿ ಮಾಡಿದ್ದ ರಂಪಾಟಗಳು ಹೀಗೆ ನೆನಪುಗಳು ಒಂದೆರಡಲ್ಲ. ನಿಜಕ್ಕೂ ಅವೆಲ್ಲವೂ ಒಂದು ಸಂಭ್ರಮವೇ ಸರಿ...
ಚಿಕ್ಕವರಿದ್ದಾಗ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆಪಕ್ಕೊಂದು ಕೊಡೆ ಹಿಡಿದು ಚಪ್ಪಲಿಯನ್ನು ಬೇಕೆಂದೇ ಮನೆಯಲ್ಲಿ ಮರೆತು ಬರಿಗಾಲಲ್ಲಿ ಶಾಲೆಗೆ ಹೋಗುವುದೇ ಒಂದು ಪುಟ್ಟ ಹಬ್ಬದಂತೆ. ಆದರಿಂದು ಬೈಕ್ ಏರಿ ರಸ್ತೆಯಲ್ಲಿ ಸಾಗುವಾಗ ಅಂದು ಅನುಭವಿಸುತ್ತಿದ್ದ, ರಸ್ತೆಯ ನೀರಾಟದ ಮಜಾ ಮತ್ತೆ ಮತ್ತೆ ಮನ ಪಟಲವನ್ನು ಚಾಚುತ್ತದೆ. ಅಂದದು ಕೆಸರು ನೀರೋ, ಸ್ವಚ್ಚ ನೀರೋ ನಮಗೇ ವ್ಯತ್ಯಾಸವೇ ಇರಲಿಲ್ಲ, ಯಾವಶುಚಿತ್ವದ ಕಲ್ಪನೆಯೂ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಕಣ್ಣಿಗೆ ಬೀಳುವ ಕೆಂಪು ಬಣ್ಣದ ‘ರೇಶಿಮೆ ಹುಳು’ಗಳು, ನೀರಿನಲ್ಲಿ ಆಟವಾಡುವಾಗ ಕಾಲಿಗೆ ಹತ್ತಿಕೊಳ್ಳುವ ನಂಜು ಹುಳಗಳು, ಮೈ ಕೈ ತಾಗಿ ತುರಿಕೆ ಎಬ್ಬಿಸುವ ಕಂಬಳಿ ಹುಳಗಳು, ಇನ್ನೂ ಅನೇಕ ನೀರಿನಲ್ಲಿ ತೊಯ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜೀವಿಗಳು ಮಳೆಗಾಲದಲ್ಲಿ ನಮ್ಮ ಆಸಕ್ತಿ ವಿಷಯಗಳಾಗಿದ್ದವು. ಕೆಲವಂತೂ ನಮ್ಮ ಹಿಂಸೆಗೆ ಜೀವ ತೆಯ್ದವೂ ಇವೆ, ಪಾಪದಂತೆ ಕಂಡು ಕೈ ಹಿಡಿದು ದಡ ಕಂಡವೂ ಇವೆ...
ಆ ಸಮಯ ಸಂಧರ್ಭಗಳೇ ಹಾಗೆ... ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗುತ್ತಿದ್ದ ಮರಗಿಡಗಳು ಮಳೆಯ ಹನಿಯ ಸ್ಫರ್ಶಕ್ಕೆ  ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗೊಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು.  ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಳದಲ್ಲಿ ಹಾವಸೆಯ ಸ್ಫರ್ಶದ ಹಿತವನ್ನು ಅನುಭವಿಸುತ್ತಿದ್ದವು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತಿದ್ದದ್ದೂ ಮೊನ್ನೆ ಸುರಿದ ಮಳೆ ಮತ್ತೆ ಮನಸ್ಸನ್ನು ತೆರೆಸಿತ್ತು. ಆಗೆಲ್ಲ ಕೊಡೆಗಳಲ್ಲಿ ಅಷ್ಟು ವೆರೈಟಿ ಬಂದಿರಲಿಲ್ಲ. ಕಪ್ಪು ಬಟ್ಟೆಯ ದೊಡ್ಡ ಕೊಡೆಗಳಷ್ಟೇ ಹೆಚ್ಚಾಗಿ ಕಾಣಸಿಗುತಿದ್ದವು. ಅವುಗಳಲ್ಲಿ ನಮಗೆ ಮರದ್ದೋ, ಸ್ಟೀಲ್‍ದ್ದೋ ಬಾಗಿದ ಬೆತ್ತದಂತಿರುವ ಉದ್ದನೆಯ ಹಿಡಿPಯ ಕೊಡೆÉ ಮಾತ್ರಾ ಕಾಣ ಸಿಗುತ್ತಿತ್ತು. ಇಂದಿನ ಮಾಡರ್ನ್ ಯುಗದ ಚಿಕ್ಕ ಚಿಕ್ಕ ಛತ್ರಿಗಳನ್ನು ನೋಡಿದ ನೆನಪೇ ಇಲ್ಲ. ಆ ಉದ್ದನೆಯ ಅಜ್ಜನ ಕೊಡೆಗಳಿಗೊಂದು ಹಚ್ಚೆ ಹಾಕಿಸಿಕೊಂಡು, ನಾಮಾಂಕಿತ ಮಾಡಿಕೊಂಡು ಇದು ನನ್ನದು ಎನ್ನುವ ಗ್ಯಾರಂಟಿ ಕಾರ್ಡ್‍ನ್ನು ನಿಗಧಿಪಡಿಸಿ ಗುರುತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೂಡ ಎಷ್ಟೊ ಸಲ ಕೊಡೆ ಕಳುವಾಗುತ್ತಿದ್ದವು. ಆದರೆ ಇದರಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಮನೆಯಲ್ಲಿ ಕಡುಬು ತಿನ್ನಬೇಕಾಗಿದ್ದು ನಾವೇ ಆಗಿದ್ದೇವು. ಕೊಡೆಯೋ ಬುತ್ತಿಯೋ, ಹಾಕೋ ಚಪ್ಪಲಿಯೋ ಇದರಲ್ಲಿ ಯಾವೊಂದು ಕಳುವಾದರೂ ನಮ್ಮ ತಲೆಮೇಲೆ ಆಕಾಶ ಬಿದ್ದ ಹಾಗೇ ಫೀಲೀಂಗ್ ಆಗುತ್ತಿದ್ದದ್ದೂ ಮಾತ್ರಾ ಸುಳಲ್ಲ...
ಮಳೆಗಾಲವೆಂದರೆ ಇಷ್ಟೇ ಅಲ್ಲ ಅದು ಎಲ್ಲರ ಗೆಳೆಯ. ನೊಂದ ಮನಸ್ಸುಗಳ ಮಿತ್ರ, ಪ್ರೇಮಿಗಳ ಪ್ರೀತಿಯನ್ನು ಇಮ್ಮಡಿಸುವ ಆತ್ಮೀಯ. ನೋವನ್ನು ಮರೆಸುವ ಮಾಣಿಕ್ಯ. ಕಣ್ಣೀರನ್ನು ಒರೆಸುವ ಅಮ್ಮ. ಇನ್ನೂ ಏನೇನೋ ಒಬ್ಬೊಬ್ಬರಿಗೆ ಒಂದೊಂದು ಥರ. ನನಗಂತೂ ಮಳೆಯೆಂದರೆ ಪ್ರಾಣ. ಮತ್ತೆ ಮತ್ತೆ ಭೂವಿಗೆ ಮಳೆಯಾಗಲಿ ಎಂದು ಯಾವಾಗಲೂ ಹಂಬಲಿಸುವ ಮುದ್ದು ಮನಸು ನನದು. ಪ್ರತಿ ಮಳೆಯಲ್ಲೂ ಮನಪಟಲದಿಂದ ನೆನಪುಗಳು ಗರಿಗೆದರಿ ಬಂದು ಭಾವನೆಯನ್ನು ಕೆಣಕಿ ಮಾತನಾಡಿಸುತ್ತವೆ. ಈ ಮಳೆ ಇಲ್ಲಿಗೆ ನಿಲ್ಲಬಹುದು ಆದರೆ ನನ್ನ ಮೈ ಮನ ಮುಂದಿನ ಮುಂಗಾರಿನ ಸಿಂಚನಕ್ಕೆ ಮೈಯೊಡ್ಡಲು ಈಗಲೇ ಕಾತರಿಕೆಯಲಿ ನಿಂತಿದೆ...ಯಾವುದೇ ಜವಾಬ್ಧಾರಿಯಿಲ್ಲದ, ಕೇವಲ ಕುತೂಹಲ, ಹುಡುಗಾಟದಲ್ಲಿಯೇ ಕಳೆದು ಹೋಗುವ ಬಾಲ್ಯದ ಆ ದಿನಗಳು  ಮತ್ತೆಂದು ಹಿಂದಿರುಗಿ ಬರಲಾರವು ಎನ್ನುವ ಮನೋಭಾವವಿದ್ದರೂ, ಕಳೆದ ಆ ದಿನಗಳನ್ನೇ ಸಿಕ್ಕ ಸಮಯ ನೆನಪಿಸಿಕೊಂಡು ಎಂಜಾಯ್ ಮಾಡುವುದು ನಿಜಕ್ಕೂ ಮನಸ್ಸಿಗೆ ಉಲ್ಲಾಸ ಕೊಡದೆ ಇರದು. ನನಗೆ ಇದುವರೆಗೂ 24 ವಸಂತಗಳು ಕಳೆದು ಹೋದವು ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೊ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ಒತ್ತಡದ ಬದುಕಿನ ಈ ದಿನಗಳಲ್ಲಿ ಅಪರೂಪಕ್ಕೊಮ್ಮೆ ಸಿಗುವ ಏಕತಾನತೆಯ ನಡುವೆ ಮತ್ತೊಮ್ಮೆ ಹಂಬಲಿಸುವ ಹಳೆಯ ನೆನಪಿನ ರೀವೈಂಡಿಂಗ್ ರೀಲ್ ನಿಜಕ್ಕೂ ಮಳೆಗಾಲದಲ್ಲೇ ಜಾಸ್ತಿ ಅನ್ನಿಸುತ್ತದೆ.
ಹೊರಗೆ ಭೋರ್ಗೆರದು  ಸುರಿವ ಮಳೆಗೆ, ಬೆಚ್ಚಗೆ ಬೆಡ್ ಶೀಟ್ ಹೊದ್ದು ಅಮ್ಮಾ ಮಾಡಿದ ಬಿಸಿ ಚಹವನ್ನು ತುಟಿಗೇರಿಸಿ, ಜತೆಜತೆಗೆ ಬಿಸಿ ಬಿಸಿ ಬೋಂಡಾ ತಿನ್ನುವ ಆಸೆಗಳನ್ನು ಅನುಭವಿಸಿದಂತೆ ನಿಮಗೂ ಈಗ ನೆನಪುಗಳ ಫೀಲಿಂಗ್ ಗರಿಗೆದರುತ್ತಿರಬಹುದು ಅಲ್ವಾ...ಅಷ್ಟಾದರೆ ಸಾಕು. ಓದಿ ಮುಗಿಸಿದ ನಂತರ ಪ್ಲೀಸ್ ಮಳೆರಾಯನಿಗೆ ನೀವು ತಿಳಿಸಿ ಒಂದು ಸಣ್ಣ ಧನ್ಯವಾದ...ಯಾಕೆಂದರೆ ಈ ಬರವಣಿಗೆಗೆ ಮೊನ್ನೆ ಅವನೇ ಕಾರಣವಾದ...

ವೆಂಕಟ ಇನ್ ಸಂಕಟ...


ಟಿ.ವಿ ಮಾಧ್ಯಮಗಳೇ ಶೇಮ್... ಶೇಮ್...
ಖಾಸು ಸಿಗುತ್ತದೆಂದು ಬಾಸು ಆದ ಹುಚ್ಚ ವೆಂಕಟ್...
ಟಿ.ಆರ್.ಪಿ ಸುಲ್ತಾನನ ಫೈರಿಂಗ್
ಅಂದು ಜಂಗಲ್ ಜಾಕಿ ರಾಜೇಶ ಇಂದು ಹುಚ್ಚ ವೆಂಕಟ್...

              ‘ನನ್ ಎಕ್ಡಾ.., ನನ್ ಮಗಂದ್.., ಬ್ಯಾನ್ ಆಗ್ಬೇಕ್...’ಈ ಡೈಲಾಗ್‍ಗಳೆಲ್ಲ ಇದೀಗ ಸಣ್ಣ ಮಗುವಿನಿಂದ ಹಿಡಿದು ಹಿರಿಯವರೆನಿಸಿಕೊಂಡ ದೊಡ್ಡಣ್ಣರ ಬಾಯಲ್ಲೂ ಕಾಮನ್ ಆಗಿ ಬಿಟ್ಟಿದೆ...ಇದಕ್ಕೆ ಕಾರಣ ವೆಂಕಟ್ ಹುಚ್ಚ ವೆಂಕಟ್... ಇರಬಹುದು ಹುಚ್ಚು ಮನಸ್ಸಿಗೆ ಹತ್ತು ಮುಖಗಳಂತೆ ಇತ್ತೀಚಿಗೆ ಟಿ.ವಿ ಮಾಧ್ಯಮದಲ್ಲಿ ಭಿತ್ತರವಾಗುತ್ತಿರುವ ವೆಂಕಟನ ಸಂಕಟ ವೀಕ್ಷಿಸಿ ನಗು, ಅಸಹನೆ, ನೋವು ಎಮಬಿತ್ಯಾದಿಗಳನ್ನೆಲ್ಲ ತಾಳಲಾರದೇ ಈಗ ಜನ ಹೇಳುತ್ತಿದ್ದಾರೆ ಹುಚ್ಚು ಮನಸ್ಸಿಗೆ ಹತ್ತಲ್ಲ ನೂರೋ, ನೂರಿಪ್ಪತ್ತೋ ಮುಖಗಳಿರಬೇಕು ಎಂದು!!. ಬಹುಶಃ ಇಂತದ್ದೊಂದು ಆಲೋಚನೆ ಮೂಡಿ ಬಂದಿದ್ದು ಹುಚ್ಚ ವೆಂಕಟ್‍ರವರ ಡಿಬೆಟ್ ಪ್ರೋಗ್ರಾಮ್ ನೋಡಿದ ಮೇಲೆಂದರೆ ಅನುಮಾನ ಸುಳಿಯುವುದಿಲ್ಲ ಬಿಡಿ. ನಾವು ಕನ್ನಡಿಗರೂ ವಿಶಾಲ ಹೃದಯದವರು, ಅನೇಕ ಒಳ್ಳೆಯ ಲೋಕ ಕಲ್ಯಾಣದ ವಿಚಾರಗಳಿದ್ದರೂ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹುಚ್ಚುಚ್ಚಾದ ವಿಷಯಗಳಿಗೆ ತಲೆ ಕೆರೆದುಕೊಳ್ಳುವುದು ಜಾಸ್ತಿ...ನಮ್ಮವರಿಗೆ ಮನೆ ಒಡೆಯುವುದರಲ್ಲಿರುವ ಸುಖ ಮನೆ ಕಟ್ಟುವುದರಲ್ಲಿಲ್ಲ. ಯಾರೂ ಹುಚ್ಚನಾಗಿದ್ದಾನೆ, ಯಾರನ್ನು ಹುಚ್ಚನ ಸ್ಥಾನದಲ್ಲಿ ನಿಲ್ಲಿಸಿ ಗೋಳಾಡಿಸುವುದು, ಎಂಬಿತ್ಯಾದಿ ವಿಚಾರಗಳನ್ನು ಕೆಲವೇ ಕೆಲವು ಮಂದಿ ನಿರ್ಧರಿಸಿ ಮೀಡಿಯಾ ಎಂಬ ಬಣ್ಣವನ್ನು ಹಚ್ಚಿ, ಕುಣಿಸಿ, ನಂತರ ಹೀರೋವಾಗಿಸುತ್ತಾರೆ. ಅವನ ಪ್ರತಿ ಘಳಿಗೆಯನ್ನು ಉಪಯೋಗಿಸಿಕೊಂಡು ಹಣ ಸಂಪಾದಿಸಿ ನಂತರ ಸತ್ತನೋ!, ಜೀವಿದ್ದನೋ! ಎಂಬುದನ್ನು ತಿಳಿಯದೇ ಮುಗ್ಧರಂತಿರುತ್ತಾರೆ. ಸದ್ಯಕ್ಕೆ ಇವು ಈ ತಿಂಗಳ ಹೈಲೆಟ್...
 ಕರೆಕ್ಟ್...ಇಲ್ಲಿನ ಸಮಸ್ಯೆ ಎದ್ದು ಕಾಣುತ್ತಿರುವುದು ಒಬ್ಬ ವ್ಯಕ್ತಿಯ ಅಭಿವ್ಯಕ್ತತೆಯ ಶೈಲಿಯಲ್ಲಿ ಅಷ್ಟೆ.  ಹುಚ್ಚ ವೆಂಕಟ್ ಒಬ್ಬ ಹುಚ್ಚ ಅಲ್ಲದಿದ್ದರೂ ಅವನ ಸಿನಿಮಾ ಹುಚ್ಚು,  ಕೆಲವೊಂದು ವಿಚಾರದಲ್ಲಿ ಆತ ತೆಗೆದುಕೊಳ್ಳುವ ನಿರ್ಣಯಗಳು, ಮಾತುಗಳು, ಅಷ್ಟೇ ಅಲ್ಲದೇ ಅವನ ಸಿನಿಮಾ ಟೈಟಲ್, ಎಲ್ಲಾ ಜೊತೆ ಜೊತೆಗೆ ಸೇರಿಸಿ ಆತನನ್ನ ‘ಹುಚ್ಚ’ನನ್ನಾಗಿ ಮಾಡಿದೆ ಅಷ್ಟೇ. ವೆಂಕಟ್ ಒಳಗೆ ಒಂದು ಮುಗ್ಧ ಮನಸ್ಸಿದೆ ಅದರ ಬಗ್ಗೆ ಯಾವ ಅನುಮಾನವೂ ಇಲ್ಲ, ಯಾವ ನಿರಾಸಕ್ತಿಯೂ ಇಲ್ಲ ಬದಲಾಗಿ ಅಭಿಮಾನವಿದೆ. ಎಷ್ಟೇ ಏನೆ ಅನ್ ವಾಂಟೆಡ್ ಸ್ಟೇಟ್‍ಮೆಂಟ್ ಇದ್ದರೂ ಈ ಒಂದು ಕಾರಣಕ್ಕಾಗಿಯೇ ಜನರಿಗೆ ಈತ ಹಿಡಿಸಿರಬೇಕು.
ಕಳೆದೆರಡು ಆವೃತ್ತಿಯ ಬಿಗ್‍ಬಾಸ್ ಎನ್ನುವ ಹೈ ಬಜೆಟ್  ಡ್ರಾಮಾ ಇಡೀ ಕರ್ನಾಟಕದ ಜನತೆಗೆ ಎಷ್ಟು ತಿಳಿದಿತ್ತೋ, ಮನೆರಂಜನೆ ನೀಡಿತ್ತೋ ತಿಳಿದಿಲ್ಲ. ಆದರೆ ಈ ಬಾರಿಯ ಬಿಗ್ ಬಾಸ್ ಅಂತೂ  ಉಳಿದೆಲ್ಲಾ ಟಿ.ವಿ ಕಾರ್ಯಕ್ರಮಗಳಿಗಿಂತ ಹೆಚ್ಚು ವೀಕ್ಷಿಸಲ್ಪಟ್ಟಿದೆ ಎಂದು ಬಿಗ್‍ಬಾಸ್ ಮಂಡಳಿ ಹೆಮ್ಮೆಯಿಂದ ಬೀಗಿದೆ. ಅನೇಕ ಜನ ಹೇಳುವಂತೆ ಇದಕ್ಕೆಲ್ಲಾ ಒಬ್ಬನೇ ಒಬ್ಬ ವ್ಯಕ್ತಿ ಕಾರಣ ಅವನೆ ಹುಚ್ಚ ವೆಂಕಟ್. ಈ ಮೊದಲು ಎರಡು ಸಿನಿಮಾಗಳಲ್ಲಿ ಅಭಿನಯವನ್ನು ತೋರಿದ್ದರೂ ವೆಂಕಟ್ ಥೀಯೇಟರ್‍ನಲ್ಲಿ ಸ್ಟಾರ್ ನಾಯಕನಾಗಿ ಹೊರಬೀಳಲಿಲ್ಲ. ಬದಲಾಗಿ ನಿರಾಸೆಯ ಆಕ್ರೋಶದಿಂದ ಹೊರಬಿದ್ದು, ಬಾಯಿಗೆ ಬಂದ ಸ್ಟೇಟಸ್ ನೀಡಿ ಯುಟ್ಯೂಬ್‍ನಲ್ಲಿ ಅಲ್ಟೀಮೇಟ್ ಹಿಟ್ ಆಗಿದ್ದ. ಅದೇ ಡೈಲಾಗು, ಅವನದೇ ವೈಖರಿಯನ್ನು ಅನೇಕ ಜನ ಅನುಕರಿಸಿ ಎಲ್ಲರ ಕಣ್ಣು ವೆಂಕಟ್ ಮೇಲೆ ಎನ್ನುವಂತಾಗಿತ್ತು. ಅದು ಬಿಗ್‍ಬಾಸ್ ಮನೆಗೂ ಎಂಟ್ರಿ ದೊರಕಿಸಿಕೊಟ್ಟಿತ್ತು. ಅಲ್ಲಿಯೂ ತನ್ನ ಬುದ್ಧಿಯನ್ನು ಎಳ್ಳಷ್ಟೂ ಬಿಟ್ಟುಕೊಡದ ವೆಂಕಟ್ ತಂದೆ, ತಾಯಿ ಹಾಗೂ ಹೆಣ್ಮಕ್ಕಳ ಬಗ್ಗೆ ಅಪಾರ ಅಭಿಮಾನದ ಮಾತುಗಳನ್ನಾಡಿ ಅಭಿಮಾನಿಗಳ ಗುಂಪನ್ನು ಗಿಟ್ಟಿಸಿಕೊಂಡು ಎಲ್ಲರಿಗೂ ಅಣ್ಣನಾಗಿಯೇ ಬಿಟ್ಟ...
 ಬಹುಶಃ ಇಲ್ಲಿಯವರೆಗೆ ಆಗಿದ್ದೆಲ್ಲವೂ ಆತನ ವೈಯಕ್ತಿಕ ವಿಚಾರ ಆಗಿದ್ದಿರಬಹುದು. ಆದರೆ ಇನ್ನೂ ಮುಂದೆ ಸಂಭವಿಸಿದ್ದು ನಿಜಕ್ಕೂ ವಿಷಾಧನೀಯ. ಇದರಲ್ಲಿ ಜನತೆಯ ತಪ್ಪೇನು ಇರಲಿಕ್ಕಿಲ್ಲ ಯಾಕೆಂದರೆ ಯಾರೊಬ್ಬನನ್ನು ಅವರು ಹೀರೋ ಮಾಡಬೇಕೆಂದರೂ, ಆತ ಟಿ.ವಿ.ಯಲ್ಲಿ ಮೊದಲು ಕಾಣಿಸಿಕೊಂಡು ಓ.ಕೆ ಆದ ಮೇಲೆ ಬೆಂಬಲ ಸೂಚಿಸಿ ಚಪ್ಪಾಳೆ ತಟ್ಟೋದು. ಆದರೆ ಟಿ.ವಿಯವರು ಎಂತಹವರನ್ನು ಬೇಕಾದರೂ ಸ್ಟಾರ್ ಮಾಡುತ್ತಾರೆ!. ಆ ತಾಕತ್ ಅವರಿಗಿದೆ ಬಿಡಿ!!!. ನಮ್ಮಲ್ಲೂ ಸ್ಟಾರ್‍ಗಿರಿಗೇನೂ ಕಡಿಮೆ ಇಲ್ಲ. ಎಂತಹವ ಬೇಕಾದರೂ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡುವ, ಬಿಡಿಸುವ  ಶಕ್ತಿ ನಮಗಿದೆ. ಇಲ್ಲಿಯ ನನ್ನ ನೋವು ಹುಚ್ಚ ವೆಂಕಟನ ಮೇಲೂ ಅಲ್ಲ, ಹೀರೋ ಮಾಡಿದ ಜನತೆಯ ಮೇಲೂ ಅಲ್ಲ ಟಿ.ಆರ್.ಪಿ ಹುಚ್ಚು ಹಿಡಿದಿರೋ ಟಿವಿ ಮಾಧ್ಯಮಗಳ ಮೇಲೆ. ಪ್ರಸರಿಸೋ ಪ್ರತಿ ಕಾರ್ಯಕ್ರಮವನ್ನು ಸ್ಲ್ಯಾಟ್ ಎನ್ನುವ ಸಂಭಾವನೆಯಲ್ಲಿಯೇ ಮುಳುಗುವ ವಾಹಿನಿಗಳಿಗೆ ಇತ್ತೀಚೆಗೆ ವೆಂಕಟನ ಲೀಲೆ ಖಾಸು ಮಾಡಲು ದಾರಿ ಮಾಡಿ ಕೊಟ್ಟಿತ್ತೆಂದರೆ ಅತಿಶಯೋಗ್ತಿಯಲ್ಲ.  ರವಿ ಮುರೂರು  ಮೇಲೆ ಹಲ್ಲೆ ಮಾಡಿದ ಪರಿಣಾಮ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ವೆಂಕಟ್‍ಗೆ ಅಭಿಮಾನಿ ಬಳಗವೇ ಸೃಷ್ಟಿಯಾದದ್ದು ಟಿ.ವಿ ಚಾನೆಲ್‍ಗಳಿಗೆ ವರವಾಗಿ ಪರಿಣಮಿಸಿತು.  
ಇದೆಲ್ಲ ನಡೆಯುತ್ತಿರುವ ಸಮಯದಲ್ಲೇ ಹಲವಾರೂ ಏಳುಬೀಳುಗಳು, ಏನೇನೋ-ಎಷ್ಟೆಷ್ಟೋ ಲೋಕಕಲ್ಯಾಣದ ಕಾರ್ಯಗಳು ನಡೆಯುತ್ತ್ತಾ ಇದ್ದರೂ ಅದನ್ಯಾವ ಚಾನಲ್‍ಗಳು ಜಾಸ್ತಿ ತೋರಿಸುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಏಕೆ ಪ್ರಧಾನಿ ಮೋದಿ ಲಂಡನ್‍ಗೆ ಹೋಗಿದ್ದು, ಮೊದಲ ದಿನ ಎಡಬಿಡದೆ ವರದಿಯಾಗುತ್ತಿದ್ದರೂ ನಂತರದ ಭಾಷಣ, ಬಸವಣ್ಣನ ಪ್ರತಿಮೆ ಅನಾವರಣ ಇತ್ಯಾದಿಗಳ್ಯಾವವು ಹೆಚ್ಚು ಸುದ್ದಿಯಾಗಲಿಲ್ಲ ಕಾರಣ ಬಿಗ್‍ಬಾಸ್ ಮನೆಯಿಂದ ಹುಚ್ಚ ವೆಂಕಟ್ ಹೊರಬಂದಿದ್ದರು!. ನೋಡಿ ಎಂಥಾ ವಿಪರ್ಯಾಸ!!!.
ಅಷ್ಟಕ್ಕೂ ಮಾಧ್ಯಮಗಳು ಇಂತಹ ವಿಚಾರಗಳನ್ನು ಯಾಕಿಷ್ಟು ವೈಭವೀಕರಿಸುತ್ತವೆ ಎಂಬುದು ಹೆಚ್ಚಿನವರ ಪ್ರಶ್ನೆಯಾದರೂ ಇದಕ್ಕೆ  ಟಿ. ಆರ್.ಪಿ ಎನ್ನೋ ಸಾಮಾನ್ಯ ಉತ್ತರ ಎಂದು ತಿಳಿದಿದೆ. ಹೌದು ಬಹುಶಃ ವೆಂಕಟ್ ಬಿಗ್‍ಬಾಸ್‍ನಿಂದ ಹೊರಬಿದ್ದ ನಂತರ ಮನೆಯಲ್ಲಿ ಸರಿಯಾಗಿ ಕುಳಿತಿದ್ದನೋ ಇಲ್ಲವೋ ಗೊತ್ತಿಲ್ಲ!, ಆದರೆ ರಾತ್ರಿ 2ರ ತನಕವೂ ಬೇರೆ ಬೇರೆ ನ್ಯೂಸ್ ಚಾನೆಲ್‍ಗಳಲ್ಲಿ ಕುಳಿತು ಮಾತನಾಡಿದ್ದ. ಊಟ ಮಾಡಿಸಿದ್ದರೋ ಇಲ್ಲವೋ! ಆದರೆ ಬ್ರೇಕ್ ಕೊಡದೆ ಮಾತನಾಡಿಸಿದ್ದರು... ಯಾಕೆಂದರೆ ಅವನೊಬ್ಬ ಟಿ.ಆರ್.ಪಿ ಮೇಕರ್.
ವರ್ಷಗಳ ಹಿಂದೆ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಎನ್ನುವ ರಿಯಾಲಿಟಿ ಶೋನಲ್ಲಿ ತೊಡೆ ತಟ್ಟಿ ‘ಕುಂತ್ರೆ ಕುರುಬ ನಿಂತ್ರೆ ಕಿರುಬ’ ಎಂದು ಡೈಲಾಗ್ ಹೊಡೆದು ಕನ್ನಡ ಜನತೆಯ ಮನಗೆದ್ದು, ನಿಜವಾದ ಹೀರೋ ಆಗಿದ್ದ್ ‘ಜಂಗಲ್ ಜಾಕಿ ರಾಜೇಶ್’ ಎನ್ನುವ ಹುಡುಗ ಫೈನಲ್‍ನಲ್ಲಿ ಗೆದ್ದಾಗ ಇದೇ ಪಾಡನ್ನು ಅನುಭವಿಸಿದ್ದ.
ನಂತರದ ದಿನಮಾನಗಳಲ್ಲಿ ಇದೇ ಮಾಧ್ಯಮಗಳು ವೈಭವೀಕರಿಸಿ ಹೀರೋ ಮಾಡಿ, ಕಾಡಿನ ಮಧ್ಯದಲ್ಲಿ ಬೆಳೆದ ಹುಡುಗನನ್ನು ಪ್ಯಾಟೆಗೆ ತಂದು  ಇಲ್ಲಿನ ಸಂಪ್ರದಾಯ ಸಂಸ್ಕøತಿಯನ್ನು ತೋರಿಸಿ, ಅವನಿಗೆ ಆ ಕಡೆ ಸಂಪೂರ್ಣವಾಗಿ ಹಳ್ಳಿಯ ಕ್ರಮವನ್ನು ಅನುಸರಿಸಲಾಗದೆ, ಇತ್ತ ನಗರ ಜೀವನಕ್ಕೂ ಒಗ್ಗಲಾಗದೇ ಮನಸ್ಸಿನಲ್ಲಿ  ತೀವ್ರ ತಳಮಳ ಅನುಭವಿಸುವಂತೆ ಮಾಡಿ , ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದ್ದರು. ಇದರಿಂದಾಗಿ  ಆತ ‘ ಅಕ್ಯೂಟ್ ಮೇನಿಯಾ’  ಖಾಯಿಲೆಗೂ ತುತ್ತಾಗಿದ್ದ.  ನಂತರ ಮನೆಯ ಮೇಲಿಂದ ಹಾರಿ ಪ್ರಾಣವನ್ನು ತೆತ್ತಿದ್ದ.   ಇಂತಹ ಚಿತ್ರಣವೊಂದು ಮಾಸುವ ಮುನ್ನವೇ ಇದೀಗ ಮತ್ತೊಬ್ಬನನ್ನು ಹೀರೋ ಮಾಡಿ, ಅವನಾಡುವ ಮಾತುಗಳಿಗೆ ಬಣ್ಣ ಬಳಿದು ಟಿ.ಆರ್.ಪಿ ಹೆಚ್ಚಿಸಿಕೊಂಡು  ಇವನ ಕತೆಯನ್ನು ಮುಗಿಸುತ್ತಾರೋ ಏನೋ ತಿಳಿದಿಲ್ಲ ಎನ್ನುವುದೇ ಸುಮಾರು ಜನರ ಭಯ. ವೆಂಕಟ್ ಒಬ್ಬ ಹುಚ್ಚನಲ್ಲ ಅವನೊಳಗೆ ಬೇಯುತ್ತಿರುವ ನೋವು, ತುಡಿತ ಹಾಗೆ ಆಡಿಸುತ್ತಿದೆ ಅಷ್ಟೆ.  ರಕ್ತದೊತ್ತಡ ಜಾಸ್ತಿಯಾಗಿ ಅತಿರೇಖತೆಗೆ ತಲುಪಿ ಏನೇನೋ ಆಡುವಂತೆ ಮಾಡುತ್ತಿದೆ. ಇದು ಸ್ಥಿತ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಇಲ್ಲದ ಆಟವಷ್ಟೆ...
 ಟಿ.ವಿ ಮಾಲೀಕರೇ ಯಾಕಿಷ್ಟು ಉತ್ಸಾಹ ನಿಮಗೆ ಬೇರೆಯವರ ಜೀವನದಾಟದಲ್ಲಿ.!? ಅದೇ ವೆಂಕಟ ಯಾಕೆ ಹೀಗಾದ ಅವನನ್ನು ಸರಿ ಮಾಡೋಕೆ ಆಗುತ್ತಾ? ಅವನಿಗೆ ನಮ್ಮಿಂದ ಏನಾದರೂ ಸಹಾಯ ಆಗಬಹುದಾ?, ಅವನ ಸಮಸ್ಯೆ ಏನು ಎಂಬಿತ್ಯಾದಿ ವಿಚಾರವನ್ನು ಗಹಗಹಿಸುವುದ ಬಿಟ್ಟು, ಅವನ ಜೊತೆ ಡಮ್ಮಿ ನಿರೂಪಕನೊಬ್ಬನನ್ನು ಕುಳ್ಳಿರಿಸಿ, ಅವನು ಹೇಳಿದ ಹಾಗೆ ಪೂಸಿ ಹೊಡೆದು ಮರುಮಾತನಾಡದೇ ಊಟ ಏನ್ ಮಾಡ್ತೀರಾ?, ಅವರ ಬಗ್ಗೆ ಏನ್ ಹೇಳ್ತೀರಾ?, ಇವರಿಗೆ ಬೈತೀರಾ!? ಎಂದೆಲ್ಲಾ ಕಾಲಹರಿಸಿ, ನಿಮ್ಮ ಜೀವನ ಉತ್ತುಂಗಕ್ಕೇರಿಸಿ, ಮತ್ತೊಬ್ಬನ ಜೀವನ ಪಲ್ಟಿ ಹೊಡೆಸುವುದು ಸರಿನಾ?  ದಯಮಾಡಿ ಉತ್ತರಿಸಿ.
ಹಿಂದಿನ ದಿನ  ಸ್ಟುಡಿಯೋದಲ್ಲಿಟ್ಟುಕೊಂಡು ಕೊಂಡಾಡಿದವರು ಆನಂತರ ದಿನ ಶಾಕ್ ನ್ಯೂಸ್‍ನ್ನು ಕೊಟ್ಟು ಮತ್ತೇ ಬ್ರೇಕಿಂಗ್ ಎಂದರು. ಬಹುಶಃ ಇಷ್ಟು ಆಗಬೇಕು ಎಂದು ಕಾದಿದ್ದರೋ ಗೊತ್ತಿಲ್ಲ ಆದರೂ ಇಷ್ಟಾಯ್ತು...
“ ಕುತಂತ್ರದಿಂದ ಮಸಿ ಬಡಿಸಿದರು, ಬಾಯಿಗೆ ಬಂದಂತೆ ಮಾತಾಡಿಸಿದರು. ವೆಂಕಟ್ ಮೇಲೆ ಆರೋಪ ಬಿತ್ತು, ಪೋಲೀಸರು ಅರೆಸ್ಟ್ ಮಾಡಿದ್ರು, ಕೋರ್ಟ್‍ಗೆ ಹಾಜರು ಪಡಿಸಿದ್ರು...ಕೋರ್ಟ್ ಹಾಲ್ ತುಂಬಿತ್ತು... ನೂರಕ್ಕೂ ಹೆಚ್ಚು ಅಡ್ವೋಕೇಡ್‍ಗಳು ವೆಂಕಟ್‍ನ ನೋಡಲು ಮುಗಿಬಿದ್ರು, ಆದರೆ ವಿಚಾರಣೆ ವೇಳೆ ವೆಂಕಟ್ ಪರ ವಕೀಲರು ಜೆರಾಕ್ಸ್‍ಗೆಂದು ಹೋದವರು ಬರಲಿಲ್ಲ... ಕೋರ್ಟ್ ಹಾಲ್‍ನಲ್ಲಿದ್ದ 400 ಕ್ಕೂ ಅಧಿಕ ವಕೀಲರು ವೆಂಕಟ್ ಬಳಿ ನಾವೇ ಬಂದು ಪುಕ್ಸಟ್ಟೆ ವಾದ ಮಂಡಿಸ್ತೀವಿ ಅಂತದ್ರು. ಆದರೆ ನಂತರ ಸುಮ್ಮನಿರಿ ಎನ್ನುವ ಜಡ್ಜ್ ಮಾತಿಗೆ ಎಲ್ಲ ಸುಮ್ಮನಾದ್ರು.  ಜಡ್ಜೇ ವಾದ ಶುರು ಮಾಡಿದ್ರು... ನೀನು ಅಂಬೇಡ್ಕರನ್ನು ನಿಂದಿಸಿದ್ದು ನಿಜಾನಾ ಅಂತ ಕೇಳಿದ್ರು. ಪಾಪ ವೆಂಕಟ್ ನಿಜ ನುಡಿದು ಹೌದೆಂದ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು ಕೋರ್ಟ್. ವೆಂಕಟ್ ಅಣ್ಣ ಮಾತ್ರ ಎಲ್ಲದಕ್ಕೂ ಮೀಡಿಯಾಗಳೇ ಕಾರಣ ಎಂದ್ರು. ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದ್ರು. ಅಲ್ಲೂ ಅಭಿಮಾನಿಗಳ ಜೈಕಾರ ಸಿಕ್ತು...”
ಇಷ್ಟೆಲ್ಲಾ ಆಯ್ತು ಇನ್ನು ಅದರ ಫಲಿತಾಂಶ ಎಲ್ಲಿಗೆ ಹೋಗಿ ಮುಟ್ಟುವುದೋ ಆ ದೇವನೇ ಬಲ್ಲ. ಆದರೆ ಟಿ.ಆರ್.ಪಿ ಸಮರಕ್ಕಾಗಿ ಮತ್ತೊಬ್ಬನ ಜೀವನವನ್ನೇ ಸಮರ ಸಾರುವುದು ಎಷ್ಟು ಸರಿ...? ಮಾನಸಿಕವಾಗಿ ನೊಂದಿರುವವನ್ನು ಕೂರಿಸಿ ಮಜಾ ತಗೊಂಡ್ರು... ಟಿ.ಆರ್.ಪಿ ಸುಲ್ತಾನ ಏಕಾಂಗಿಯಾಗಿ ಇರಲು ಬಿಡದೆ ಪ್ರಚೋಧನಾತ್ಮಕವಾಗಿ ಕೆಣಕಿ ಕಣ್ಣೀರು ಸುರಿಸುವಂತೆ ಮಾಡಿದರು. ಅಣ್ಣ ತಮ್ಮಂದಿರಂತಿದ್ದವರನ್ನು ದಾಯಾದಿಗಳಂತೆ ಮಾಡಿದರು. ನಿಜಕ್ಕೂ ಇದು ವಿಚಾರ ಹೀನತೆಯ ಪರಮಾವಧಿ, ಟಿ.ಆರ್.ಪಿ ಹುಚ್ಚು


ಹೆಣ್ಣು-12


ಹೆಣ್ಣಿನ ಮೇಲಿನ ದುರಾಕ್ರಮಣ, ಅತ್ಯಾಚಾರ, ಅನಾಧಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಈ ಬಗ್ಗೆ ನಮ್ಮ ಪುರಾಣಗಳಲ್ಲೂ ಕೂಡ ಬಹಳಷ್ಟು ಹೃದಯ ವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣನ್ನು ತನ್ನ ಭೋಗದ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ಈ ನಡೆಯನ್ನು ಸಮಾಜ ಕೂಡ ಸತತವಾಗಿ ಕ್ಷಮಿಸುತ್ತಲೇ ಬಂದಿದೆ. ಕೇವಲ ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು  ನೋಡಿದರೂ ಇದೇ ಕಥೆ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬಾಕೆಯನ್ನು ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಬಹುದಾದರೂ, ಅದು ಕೇವಲ ಸಂಭೋಗವೇ ಆಗಿರಬೇಕೆಂದೇನೂ ಇಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಕೆಣಕುವುದು, ಪೀಡಿಸುವುದು, ಚುಡಾಯಿಸುವುದು ಅನಾವಶ್ಯಕವಾಗಿ ಅವಳ ಮೇಲೆ ಕೈಯಾಡಿಸುವುದು, ಮುಟ್ಟುವುದು ಕೂಡ ಅತ್ಯಾಚಾರದ ಪರಿಧಿಯೊಳಗೆ ಬರುತ್ತದೆ.
ಕೇವಲ ಮನುಷ್ಯ ವರ್ಗದಲ್ಲಿ ಮಾತ್ರವಲ್ಲದೆ ಪ್ರಾಣಿವರ್ಗವೆನ್ನುವ ಎಲ್ಲಾ ಜಾತಿಯಲ್ಲೂ ಈ ಅತ್ಯಾಚಾರವೆನ್ನುವುದು ಸಾಮಾನ್ಯವಾದರೂ, ಮನುಷ್ಯನ ಮಾನಕ್ಕೆ ಜಾಸ್ತಿ ಬೆಲೆ ಎನ್ನುವಂತೆ ಮನುಷ್ಯರಾದ ನಮ್ಮ ಘಟನೆಯನ್ನು ಮಾತ್ರಾ ಪ್ರತಿಬಿಂಬಿಸುತ್ತಾ ಸಾಗುತ್ತೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತಿದ್ದರೂ, ನಡೆದದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಆಗಿದ್ದೆಲ್ಲವೂ ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಗಣನೆಗೆ ತೆಗೆದುಕೊಂಡು ನೋಡಿದರೆ ಒಂದು ಕ್ಷಣ ಎಂತಹವರು ದಂಗಾಗಬೇಕು ಹಾಗಾಗುತ್ತದೆ.
ಒಂದು ಮೂಲಗಳ ಪ್ರಕಾರ, ನಮ್ಮ ಕರ್ನಾಟಕದಲ್ಲೇ 2008 ರಿಂದ 2012 ರ ವರೆಗೆ 2,798 ಅತ್ಯಾಚಾರ ಪ್ರಕರಣಗಳು ನಡೆದಿವೆಯಂತೆ. ಇದು ಪೋಲಿಸ್ ಇಲಾಖಾ ವರದಿಯಾದರೆ ಲೆಕ್ಕಕ್ಕೆ ಸಿಗದೆ ಮಣ್ಣು ಕಚ್ಚಿರುವ ರೋಧನಿಕೆ ಎಷ್ಟು ನಡೆದಿವೆಯೋ ದೇವನೇ ಬಲ್ಲ. ಇನ್ನೂ ಈ ಅಂಕಿ ಸಂಖ್ಯೆಯನ್ನು ದೇಶೀಯ ಮಟ್ಟದಲ್ಲಿ ಗಮನಿಸಿದರೆ 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದ್ದು, 22,172 ಲೈಂಗಿಕ ಆಕ್ರಮಣ, 40,613 ಅಸಭ್ಯ ವರ್ತನೆಗಳ ಕೇಸ್‍ಗಳು ದಾಖಲೆಯಲ್ಲಿವೆ. 2011ರ ಅಂಕಿ ಅಂಶಗಳ ಪ್ರಕಾರ ಪ್ರತಿ 54 ನಿಮಿಷಗಳಿಗೊಂದು ರೇಪ್, 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ, 26 ನಿಮಿಷಗಳಿಗೊಮ್ಮೆ ಹೆಂಗಸನ್ನು ಚುಡಾಯಿಸುವುದು, 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ ನಡೆದಿದೆಯಂತೆ. ಇವೆಲ್ಲವನ್ನು ಮೀರಿ ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ.
ಅತ್ಯಾಚಾರವೊಂದು ಗುರುತರವಾದ, ಅಮಾನವೀಯ ಅಪರಾಧ ಅದಕ್ಕೆ ತಕ್ಕ ಶಿಕ್ಷೆಯಾಗಬೇಕೆಂಬುನ್ನು ಸಮಾಜ ಪದೆ ಪದೇ  ಸಭೆ, ಪ್ರತಿಭಟನೆ, ಭಾಷಣದಲ್ಲಿ ತೋರ್ಪಡಿಸುತ್ತಿದ್ದರೂ ಯಾವ ಬದಲಾವಣೆಯೂ ಆಗುತ್ತಿಲ್ಲ. ದಿನೇ ದಿನೇ ಹೆಣ್ಣು ಮಕ್ಕಳ ಈ ಶೋಷಣೆ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಭವಣೆ ನೀಗಲು ಕಾನೂನು ಕೈ ಇದ್ದರೂ ಸಮರ್ಪಕವಾದ ವಿಚಾರಣೆಯಿಲ್ಲದೆ ಆರೋಪಿಗಳೆಲ್ಲ ಕೈ ತಪ್ಪಿಸಿಕೊಳ್ಳುತ್ತಿದ್ದಾರೆ.
 ಒಂದಂತು ನಿಜ...
‘ದಶ ಶಿರಂ ಪೊತ್ತೊಯ್ಧುದು ಒರ್ಬನ ಸತಿಯನಲ್ತು, ಸತಿತನವನ್  ಉಯ್ದಿಹನ್...’ ಎಂಬ ಸಾಲು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹೇಗಿದೆಯೋ ಹಾಗೆ ಇಂದು ಅತ್ಯಾಚಾರ ವೈಯಕ್ತಿಕವಾಗಿ ಯಾವುದೋ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವುದಿಲ್ಲ. ಅದು ಇಡೀ ಹೆಣ್ಣು ಕುಲದ ಮೇಲೆ, ಆ ಮನು ಕುಲದ ಮೇಲೆ ನಡೆಯುತ್ತಿರುವ ಅತ್ಯಾಚಾರ. ಅದರ ಹೊಣೆಯನ್ನು ಇಡೀ ಮನುಕುಲವೇ ಹೊರಬೇಕಾಗಿದೆ. ‘ಪುರುಷನಿರಲಾಗದು ಈ ಧರೆಯ ಮೇಲೊರ್ವನುಂ  ಪೊರೆಯದೆ ಅನ್ನೆಗಂ ಆ ಸತೀತ್ವಮಂ...’ ಎಂಬ ರನ್ನನ ಮಾತುಗಳನ್ನು ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ಈ ಅತ್ಯಾಚಾರದ ಅನಿಷ್ಟವನ್ನು ತಡೆಯಲಾಗದಿದ್ದರೆ ಈ ಭೂಮಿಯ ಮೇಲೆ ವಾಸಿಸುವ ಹಕ್ಕನ್ನು ಮನುಷ್ಯ ಕಳೆದುಕೊಳ್ಳುತ್ತಾನೆ ಎಂದರ್ಥ...