Friday, 19 June 2015

ಹೆಣ್ಣು-6


       'ಬೇಲಿಯೆ ಎದ್ದು ಹೊಲ ಮೆಯ್ದರೆ ಗತಿಯೇನು' ಎಂದು ಹಿರಿಯರು ಯಾವಾಗಲೂ ಹೇಳಿದ್ದು ನನಗೆ ಈಗಲೂ ನೆನಪಿದೆ. ನಾವು ಅವರ ಮಾತನ್ನು ಕೇಳಿದ್ದೆವೆ ಹೊರತು ಎಂದಿಗೂ ಫಾಲೋ ಮಾಡಲಿಲ್ಲ. ಹೆಣ್ಣು ಮಕ್ಕಳು ಸಮಾಜದ ಕಣ್ಣುಗಳಿದ್ದಂತೆ. ಗಂಡು ಮಕ್ಕಳನ್ನು ಅತೀರೇಕದಿಂದ ಕಾಣುವುದು, ಹೆಣ್ಣು ಮಕ್ಕಳನ್ನು ವಕ್ರದೃಷ್ಠಿಯಿಂದ  ಕಾಣುವುದು ಮಾಡಬಾರದು ಅಂತಲೂ ಅವರು ಹೇಳಿ ಹೋಗಿದ್ದಾರೆ. ಆದರೆ ಇಂದೇನಾಗುತ್ತಿದೆ!. ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು, ಗುಲಾಮಿ ಇವಳಲ್ಲ, ಸಲಾಮು ಹೊಡೆಯೊಲ್ಲ ಎಂದು ಮನೆಯಿಂದ ಹೊರಬಿದ್ದು ಅಧಿಕಾರ ಮತ್ತು ಹಕ್ಕುಗಳು ಹಾಗೂ ಜೊತೆಯಲ್ಲಿ ಕರ್ತವ್ಯ ಹಾಗೂ ಜವಾಬ್ಧಾರಿಗಳನ್ನು ಅರಿತುಕೊಂಡಿದ್ದಾಳೆ. ದಕ್ಷತೆ ಎಂಬುದೇನು ಎನ್ನುವುದನ್ನು ಅರಿತಿದ್ದಾಳೆ. ಎಲ್ಲಾ ರಂಗದಲ್ಲೂ ಸಫಲತೆಯನ್ನು ಕಂಡುಕೊಂಡಿದ್ದಾಳೆ. ಇವೆಲ್ಲವೂ ಸಂತೋಷದ ವಿಚಾರವೇ ಆಗಿದೆ. ಆದರೆ ಇಂದು ಅದೇ ಹೆಣ್ಣು ದುಶ್ಚಟಗಳಿಗೆ ದಾಸಿಯಾಗಿ ಸಂಸ್ಕ್ರತಿಯೆಂಬ ಗೆರೆ ದಾಟಿ ಅನಾಚಾರಕ್ಕೆ ಲಗ್ಗೆ ಇಡುತ್ತಿರುವುದು ಭಯ ತರಿಸುತ್ತದೆ.
ಜಗತ್ತು ಬದಲಾಗಿದೆ. ಎಲ್ಲವೂ, ಎಲ್ಲರೂ ಬದಲಾವಣೆಯ ಗಾಳಿಗೆ ಸಿಲುಕಿದ್ದಾರೆ. ನಾಗರಿಕತೆಯು ಬದಲಾಗಿದೆ.
ಹಾಕೋ ಡ್ರೆಸ್‍ನಿಂದ ಹಿಡಿದು ಮಾತಾಡೋ, ಜೀವನ ನಡೆಸೋ ಶೈಲಿಯವರೆಗೂ ಬದಲಾಗಿದೆ. ಹೆಣ್ಣಿನ ಜೀವನಕ್ಕೆ ಬಂದರೆ ಇದು ಇನ್ನೂ ಜಾಸ್ತಿ ಅಳವಡಿಕೆ ಕಂಡಿದೆ ಏನಿಸುತ್ತದೆ. ಆದರೆ ಇಂದಿನ ಹುಡುಗಿಯರ ಅಬ್‍ನಾರ್ಮಲ್ ಏದೆಗಾರಿಕೆಯನ್ನು ಕಂಡಾಗ ಅಚ್ಚರಿ, ಬೆರಗು, ಮೂಡಿ ಎಲ್ಲಾ ಹಾರ್ಮೋನುಗಳ ಮಹಿಮೆ ಎನಿಸುತ್ತದೆ. ಎಲ್ಲೆಂದರಲ್ಲಿ ಬಟ್ಟೆಬಿಚ್ಚಿ ಅರೆಬೆತ್ತಲಾಗಿ ಸಾರ್ವಜನಿಕವಾಗಿ ತೆರೆದುಕೊಳ್ಳುವ,  ಅದನ್ನು ಯಾರೂ ಗಮನಿಸಿಲ್ಲ ಎಂದು ತಮ್ಮ ಪಾಡಿಗೆ ತಾವಿರುವ ವಾತಾವರಣ ನೋಡಿದಾಗ ಅಯ್ಯೋ ಏನಿಸುತ್ತದೆ. ಹಿಂದೆಲ್ಲಾ ಎಲ್ಲೋ ಫೋಟೋಗಳಲ್ಲಿ ಕುಡಿಯುತ್ತಿರುವ, ಸಿಗರೇಟ್ ಸೇದುತ್ತಿರುವ ಫಾರಿನ್ ಹುಡುಗಿಯನ್ನು ಕಂಡರೆ ಬಾಯಿ ಮೇಲೆ ಕೈಯಿಟ್ಟುಕೊಂಡು ಅಬ್ಬಾ ಎಂಥಾ ಕಾಲ ಬಂದಿತಪ್ಪಾ! ಎಂದು ಆಶ್ಚರ್ಯಚಕಿತರಾಗುತ್ತಿದ್ದೆವು. ಆದರಿಂದು ಇಂತಹ ಸೇವನೆಗಳು ನಮ್ಮ ಭಾರತಕ್ಕೂ ಲಗ್ಗೆ ಇಟ್ಟು ಕಾಮನ್ ಎನ್ನುವ ಹಂತಕ್ಕೆ ತಲುಪಿದೆ.
ಸಾಮಾನ್ಯವಾಗಿ ಐಟಿಬಿಟಿ ಕಂಪೆನಿಗಳ ಆವರಣದಲ್ಲಿ ನೀವು ಒಂದು ವಾಕ್ ಮಾಡಿ ನೋಡಿದರೆ ಹುಡುಗಿಯರ ಸಿಗರೇಟ್ ಸೇವನೆಯ ಶೋಕಿ ನಿಮಗೆ ಶಾಕ್ ನೀಡುವುದು ಗ್ಯಾರಂಟಿ. ಹೌದು! ಸಿಗರೇಟ್ ಸೇವನೆ ಕೆಲವರಿಗೆ ಚಟವಷ್ಟೆ ಅಲ್ಲ ಅದೊಂದು ಶೋಕಿಯೂ ಹೌದು. ಎನಾದರೂ ಇದು 21 ಶತಮಾನ ನೋಡಿ ಇಲ್ಲಿ ಮಾನಕ್ಕಿಂತ ಶೋಕಿಯೇ ಇಂಪಾರ್ ಟೆಂಟ್.
 ಫಾರಿನ್ ಸಂಸ್ಕ0ತಿಯವರು ಏನಾದರೂ ಮಾಡಿಕೊಂಡು ಸಾಯಲಿ ಆದರೆ ನಮಗಿದು ಸಮಂಜಸವೇ ಎಂಬುದನ್ನು ನಾವರಿಯಬೇಕು. ಕೇವಲ ಸಿಗರೇಟ್ ಸೇವನೆಯೊಂದರಿಂದಲೇ ತಲೆದೊರುವ ಸಮಸ್ಯೆಗಳನ್ನು ಏಣಿಸಿದರೆ ಇದೆಲ್ಲಾ ಬೇಕಾ ಎನಿಸುತ್ತೆ. ಉಸಿರಾಟದ ಸಮಸ್ಯೆ, ಕಿಡ್ನಿ ವೈಫಲ್ಯ, ಬಂಜೆತನ, ಗರ್ಭಪಾತ, ಕಡಿಮೆ ತೂಕ, ಶಿಶುಮರಣ, ಲೈಂಗಿಕ ನಿರುತ್ಸಾಹತೆ ಹೀಗೆ ಇನ್ನೂ ಅನೇಕ ಸಮಸ್ಯೆ ಈ ಚಟದಿಂದ ನಾವೇ ಆಮುದು ಮಾಡಿಕೊಳ್ಳಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವಿಶ್ವದ ಶೇಕಡಾ 20ರಷ್ಟು ಅಂದರೆ ಸುಮಾರು 100 ಕೋಟಿಗೂ ಹೆಚ್ಚು ಮಹಿಳೆಯರು ಸಿಗರೇಟು ಸೇದುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆಯಂತೆ.
ಇನ್ನಾದರೂ ಚಿಂತಿಸಿ ಹೆಣ್ಣುಮಕ್ಕಳೆ ನಿಮ್ಮ ಒಂದು ಪರಿವರ್ತನೆ ನಮ್ಮ ದೇಶ, ರಾಜ್ಯ, ಊರು, ಮನೆ, ಇತ್ಯಾದಿಗಳನ್ನು ಬದಲಿಸಿ ಸುಖದ ಬೆಳಕಾಗಬಹುದು, ಸಾರಿ!!, ಈ ಮಾತುಗಳು ಮಧ್ಯ ಮತ್ತು ಧೂಮಲೀಲೆಗೆ ಇಳಿದಿರುವ ನಾರಿಗೆ ಮಾತ್ರಾ. ಮನೆಬೆಳಗುವ ಹೆಣ್ಣು ಸಿಗರೇಟ್ ಬೆಳಗಿದರೆ ಮನೆಗೆ ಜೊತೆಗೆ ದೇಶಕ್ಕೆ ಬೆಂಕಿ ಇಡುತ್ತಿದ್ದಾಳೆ ಎಂದರ್ಥ ಕಾರಣ ಮಾನ ಹಾಗೂ ಜೀವನ ಎರಡು ಹಾರಾಜಾಗುವುದು ಪ್ರಭುತ್ವದ್ದೆ ಹೊರತು ಹುಡುಗಿಯರದಲ್ಲ!..

ಜಗತ್ತಿನಲ್ಲಿಯೇ ಕಷ್ಟದ ಕೆಲಸ ಯಾವುದು ಗೊತ್ತಾ!?

 “ದಿನಂಪ್ರತಿ ಜಗತ್ತಿನಲ್ಲಿ ಅನೇಕ ಜನ ತಮ್ಮ-ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಆದರೆ ಜಗತ್ತಿನಲ್ಲಿಯೇ ಮನುಷ್ಯನಿಗೆ ಅತ್ಯಂತ ಕಷ್ಟವಾದ ಕೆಲಸ ಅಥವಾ ಹೆಚ್ಚು ಕಷ್ಟಕರವಾದ ಕೆಲಸ ಯಾವುದು!!?”...
ಹೀಗೊಂದು ಪ್ರಶ್ನೆ ಕೇಳಿ ತಲೆ ಕೆರೆಯುವಂತೆ ಮಾಡಿದ್ದು, ನಮ್ಮ ಸಿರಿ ಮಾಸ ಪತ್ರಿಕೆಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಭಾವನಾಜೀವಿ ಶ್ರೀಮತಿ ಜೆ.ಎಸ್. ರುಕ್ಮಿಣಿಯವರು. ಪ್ರಶ್ನೆ ಒ0ಥರಾ ಎಲ್ಲರ ಜೀವನಕ್ಕೂ ನೆರೆಟಿವ್ ಅನಿಸಿದ್ದರೂ, ನನ್ನ ಮುಂದೆ ಮೇಡಂ ಈ ಪ್ರಶ್ನೆ ಕೇಳಿದಾಗ ಒ0ದು ಕ್ಷಣ ನನ್ನೋಳಗೆ ನಾನು ಸ್ಥಬ್ಧನಾಗಿಬಿಟ್ಟೆ. ಮನಸ್ಸನ್ನು ಶರವೇಗದಲ್ಲಿ ಓಡಾಟ ಆರಂಭಿಸಿ, ರಾಜ್ಯ, ದೇಶ, ವಿದೇಶದಿಂದ ಹಿಡಿದು, ಸಂಸ್ಕøತಿಯಿಂದ ಸಮಾಜದೊರೆಗೂ, ಅಡುಗೆ ಮನೆಯಿಂದ ಬಚ್ಚಲ ಮನೆಯವರೆಗೂ, ಅಷ್ಟೇ ಏಕೆ ಬೀದಿಯ ಪುಟ್‍ಪಾತ್ ದಾರಿ ಅಂಗಡಿಗಳಿಂದ ಹಿಡಿದು, ಎಮ್.ಎನ್.ಸಿ ಕಂಪೆನಿಯ ಒಳಗೂ ಹೊರಗೂ ಎಲ್ಲಾ ಕಡೆಗಳಲ್ಲೂ ಆಡಿಸಿ, ಓಡಿಸಿ, ತಡಕಾಡಿಸಿ, ಸರ್ಚ್ ಮಾಡಿದರೂ, ಎಲ್ಲೆಂದರಲ್ಲಿ ಯೋಚನೆಯ ತಕಧಿಮಿತವನ್ನೂ ಆರಂಭಿಸಿದರೂ, ಯಾವುದಿರಬಹುದೂ ಈ ಪ್ರಶ್ನೆಗೆ ಉತ್ತರ? ಏನೆಂದೂ ಹೇಳಬಹುದು ಪ್ರತ್ಯುತ್ತರ ಎನ್ನುವ ಕೃಮಾಗತದಲ್ಲಿ ಎಲ್ಲ್ಲಿಯೂ ನಿಖರವಾದ ಉತ್ತರ ನೀಡಲು ತಯಾರಿರದೇ ಸುಮ್ಮನೆ ನಗುಮುಖದಲ್ಲೇ ನಿಂತುಬಿಟ್ಟೆ.
ಪ್ರಶ್ನೆಗೆ ಸಮಜಾಯಿಸಿ ಉತ್ತರವನ್ನು ಮಾತುಬಲ್ಲ ನಾನು ಕೊಡಬಹುದು ಏನಿಸಿದರೂ ಎಲ್ಲೋ ಒಂದು ಕಡೆ ನನ್ನ ಮನಸ್ಸಿನ ನೇರಕ್ಕೆ ನಾ ಹೇಳಿದ್ದು ತಪ್ಪಾಗಲೂಬಹುದು ಎಂದೆನಿಸಿ, ಕೋಲಿಗೆ ಕೋಲು ಎಂಬಂತೆ  ಏನ್ ಸಮಾಚಾರ ಮೇಡಂ!, ನೀವ್ಯಾಕೆ ಈ ಪ್ರಶ್ನೆ ಎತ್ತಿದ್ದು ಈಗ? ಪ್ರಶ್ನೇ ಮೂಡಿದ್ದರ ಸೋಜಿಗ ಕೇಳಬಹುದೇ? ಎಂಬ ನನ್ನ ಇನ್ನೊಂದಿಷ್ಟು ಮರುಪ್ರಶ್ನೆಗಳನ್ನು ಮುಂದಿಟ್ಟೆ.
ನಾನೊಮ್ಮೆ ಕಾರ್‍ನಲ್ಲಿ ಹೋಗುವಾಗ, ರಸ್ತೆಬದಿಗಳಲ್ಲಿ ತಳ್ಳಿಕೊಂಡು ಹೋಗುವ ಸೈಕಲ್ ಗಾಡಿಗಳ ಮೂಲಕ ವ್ಯಾಪಾರ ಮಾಡುವವರನ್ನು ನೋಡಿದಾಗ, ಅವರು ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೋ ದೂರದೂರಿಗೆ ಹೋಗಿ ಅಲ್ಲಿ ಪದಾರ್ಥಗಳನ್ನು ಮೂಟೆಕಟ್ಟಿಕೊಂಡು ತಂದು ಮನೆ ಮನೆಗೋ, ರಸ್ತೆ ಬದಿಗಳಲ್ಲೋ ನಿಂತು ವ್ಯಾಪಾರ ಮಾಡುವುದನ್ನು ಏಣಿಸಿ ಹೀಗನ್ನಿಸಿತು ಸಂದೀಪ್ ಎಂದರು ಮೇಡಂ.
ಓಹೋ ಹೀಗಾ ಸಮಾಚಾರ ಆದ್ರೂ ವಾವ್ಹ್ ಸೂಪರ್ ಪ್ರಶ್ನೆ ...ಮೇಡಂ ರೀಯಲೀ ನನ್ನಲ್ಲಿ ಗರಿಗೆದರಿ ದಿನವೂ ಹೊಸತನ್ನು ಹುಡುಕುವ ಭಾವನೆಗೆ ಇನ್ನಷ್ಟೂ ಕೆಲಸ ಸಿಕ್ಕಂತಾಯಿತು. ಥ್ಯಾಂಕ್ಯೂ ಮೇಡಂ ಎನ್ನುತ್ತಾ ಇಂಥಹ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡುವುದು ಮೂರ್ಖತನವೆನಿಸುತ್ತದೆ, ನನಗೆ ಒಂದಿಷ್ಟು ಸಮಯ ಬೇಕೆ ಬೇಕು ವಿಷಯ ವೈವಿಧ್ಯವನ್ನುಆಲೋಚಿಸಿ, ಸಮಾಲೋಚಿಸಿ, ಸಂಧರ್ಭದಲ್ಲಿ ನಿಮಗೆ ಉತ್ತರಿಸುತ್ತೇನೆ ಎಂದು ಕ್ಯಾಬಿನ್ ಹೊರಬಂದೆ.
ಈಗ ನಿಮ್ಮ ಮೈಂಡ್‍ನಲ್ಲೂ ಇದೇನೂ ಅಷ್ಟೊಂದು ಕಷ್ಟದ ಪ್ರಶ್ನೆಯಾ ಎಂದೆಸುತ್ತಿರಬಹುದು ಅಲ್ವಾ? ಆದರೆ ನನ್ನ ಮನಸ್ಸೆ ಹಾಗೆ, ಯಾವುದನ್ನೂ, ಯಾರನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಂಡು ಬಿಡುವ ಜಾಯಮಾನದಲ್ಲ್ಲ ಅದು. ಏನಿದ್ದರೂ ನೆಕ್ಕಿ ರುಚಿನೋಡಿದ ಬಳಿಕವೇ ಒಪ್ಪೋ- ಉಪ್ಪೋ, ಚಪ್ಪೆಯೋ- ಹುಳಿಯೋ ಎಂದು ಪ್ರರಿಭ್ರಮಿಸುವುದು. ಸುಲಭವಾಗಿ ಒಪ್ಪಿಕೊಳ್ಳುವುದು, ಉತ್ತರ ನೀಡೋದು, ಪೆದ್ದುಪೆದ್ದಾಗಿ ಉತ್ತರದ ಮಾತನಾಡುವುದು ನನ್ನ ಪ್ರಕಾರ ಸಮಂಜಸವೂ ಅಲ್ಲ. ನಾನೊಂದು ಪರಿಸರಕ್ಕೆ ವಾಸಿಸಿಕೊಂಡಿದ್ದನ್ನು ಏಣಿಸಿ ಮೇಲಿನ ಪ್ರಶ್ನೆಗೆ ಉತ್ತರ ಹೇಳಿದರೆ, ಅಲ್ಲಿ ಕೆಲಸ ಮಾಡುವವರ ಅನೇಕಾನೇಕ ಕೈಂಕರ್ಯವನ್ನು ಗಮನಿಸಿ ಹೇಳಿದರೆ, ಪ್ರತಿ ಕೆಲಸವವೂ ಅವರವರ ಭಾವನೆಗಳಿಗೆ ಹೊಂದಿಕೊಂಡು ಅರುಹಿದರೆ ಮನದಾಳದಲ್ಲಿ “ಕಷ್ಟ ಕಷ್ಟ ಅದು ಕಷ್ಟವೇ” ಎಂಬ ಉತ್ತರ ಬರುತ್ತೆ. ಅದು ವ್ಯಕ್ತಿ, ವರ್ಗ, ಎನ್ನುವುದಕ್ಕಿಂತ ಮನಸ್ತಿತಿ ಅನ್ನಬಹುದೇನೋ ಎನಿಸುತ್ತೆ. ಸರ್ಕಾರದ ಹತ್ತಿರ ಈ ಪ್ರಶ್ನೆ ಎತ್ತಿದರೆ ಮಲ ಎತ್ತುವುದು ಅತ್ಯಂತ ಅಸಹ್ಯಕರ ಹಾಗೂ ಕಷ್ಟದ ಕೆಲಸ ಎನ್ನುವ ವೈರುಧ್ಯದ ಉತ್ತರ ಕೊಟ್ಟರೆ, ರಸ್ತೆಯಲ್ಲಿ ಡಾಂಬರ್ ಕೆಲಸ ಮಾಡುವುದು ಅತ್ಯಂತ ಬೇಗೆಯ ಕಷ್ಟದ ಕಾಯ ಎಂದು ನಾನು ಉತ್ತರಕೊಡುವೆ ಆದರೆ ಇದು ನಮ್ಮ ನೇರಕ್ಕೆ ಅಷ್ಟೆ.


ಸತ್ಯ ಜಿಜ್ಞಾಸೆಯಿಂದ ಮಥಿಸಿ ಸಿಗಬೇಕು ಎಂದು ಹೇಳುತ್ತಾರೆ ಆದರೆ ಇಲ್ಲಿ ಜಿಜ್ಞಾಸೆ ಯಾವುದು!? ಸತ್ಯ ಯಾವುದು!? ಎನ್ನುವ ಭಾವನೆಗಳನ್ನು ಅಂತಃಕರಣವನ್ನು ಕಾಡುತ್ತವೆ ಅದಕ್ಕಾಗಿ ನೋಡೋಣ ಈ ಪ್ರಶ್ನೆಯನ್ನು ಜನಕ್ಕೆ ಎದುರಿಟ್ಟರೆ ಅವರ ಬಾಯಿಂದ ಯಾವ್ಯಾವ ಉತ್ತರಗಳು ಬರುತ್ತವೆ ಎಂದು ಒಂದು ಸಮೀಕ್ಷೆಯನ್ನು  ಆರಂಭಿಸಿಯೇ ಬಿಟ್ಟೆ.
ನನ್ನ ಮೊದಲ ಪ್ರಯತ್ನವೆಂಬಂತೆ ಫೇಸ್‍ಬುಕ್‍ನ ಗೆಳೆಯರಿಗೆ ಈ ಪ್ರಶ್ನೆ ಮುಂದಿಟ್ಟೆ. ಉತ್ತರಗಳು ಬಹುಬೇಗನೆ ಬಗೆ ಬಗೆಯಲಿ ಟೈಮ್ ಲೈನ್‍ನ ಕಮೆಂಟ್‍ಬಾಕ್ಸ್‍ಗೆ ನಾ ಮುಂದೆ ತಾ ಮುಂದೆ ಎಂಬಂತೆ ಬಂದಿಳಿದವು. ಮನೆಯಲ್ಲಿ ಅಮ್ಮ ಮಾಡುವ ಕೆಲಸ ಅವಳು ನಮಗಾಗಿ ಕಷ್ಟಪಡುವುದನ್ನು ನೋಡಿದರೆ ಅವಳಿಗೆ ಜೀವನದಲ್ಲಿ ಕಷ್ಟದ ಕೆಲಸ ಇರೋದು ಅಂತ ಆತ್ಮೀಯನೊಬ್ಬ ಹೇಳಿದರೆ, ರೈತ ಎಲ್ಲರಿಗಿಂತ ಹೆಚ್ಚು ಕಷ್ಟ ಪಡುವವ, ದೇಶ ಕಾಯೋ ಸೈನಿಕ ಪ್ರಾಣ ಒತ್ತೆ ಇಟ್ಟು ಹೋರಾಡುತ್ತಿರುತ್ತಾನೆ. ಚಳಿಯಲ್ಲಿ ಅವನ ಪಾಡು ಅದೆಷ್ಟು ಕಷ್ಟವೆಂದರೆ ಹೇಳತೀರದು ಎಂದು ಮತ್ತೊಬ್ಬಳು ಗೆಳತಿ ಉತ್ತರಿಸಿದಳು. ಮತೊಬ್ಬ “Very urgent but not important, Very important but not urgent” ಎನ್ನುವ ಹಾಸ್ಯ ಸಮರ್ಥನೆಯನ್ನು ಹೇಳಿದ್ದ. ಕಂಪೆನಿಯಲ್ಲಿ ಕೆಲಸ ಮಾಡುವ ಎಜ್ಯುಕೇಟೆಡ್ ಮಿತ್ರ ಪ್ರಾಡಕ್ಟ್ ಗಳನ್ನು ತಯಾರಿಸುವಾಗ ಅದರ ರುಚಿ (taste)   ನೋಡುವ ಕೆಲಸ ಮಾಡುತ್ತಾರಲ್ಲ (ಉದಾ; ಸಿಗರೇಟ್, ಕೂಲ್ ಡ್ರಿಂಕ್ಸ್, ವೈನ್ ಇಲ್ಯಾದಿಗಳ ರುಚಿ ನೋಡುವುದು) ಅದು ತುಂಬಾನೆ ಕಷ್ಟ ಮಗಾ ಎಂದ. ಯಾವುದು ನಂಬುವುದು!?,ಯಾವುದು ಬಿಡುವುದು!?, ಆದರೂ ಇವ್ಯಾವುದು ಸರಿಯಾದ ಉತ್ತರವೆಂದು ಅನಿಸದೇ ಮುಂದಿನ ಸಮೀಕ್ಷೆಯತ್ತ ಮುಂದುವರಿದೆ. ನಿಮ್ಮ ಮನದಲ್ಲೂ ಈಗ ಪ್ರಶ್ನೆಗೆ ಉತ್ತರದ ಆಲೋಚನೆಗಳು ಅದಾ ಇದಾ ಎಂದು ಮೂಡಿ ಹುಳ ಬಿಟ್ಟಂತೆ ಆಗುತ್ತಿರಬಹುದಲ್ವಾ. ಸ್ವಲ್ಪ ಇರೀ ಇನ್ನೂ ಒಂದಿಷ್ಟು ಹಿರಿಯ ಕಿರಿಯರನ್ನು ವಿಚಾರಿಸಿದಾಗ ಅವರು ಹೇಳಿದ ಉತ್ತರ ಹೇಳುತ್ತೇನೆ ಓದಿ.
ಹಿಂದಿ ಚಿತ್ರರಂಗದ ಖ್ಯಾತ ನಟಿ ಸೋನಂ ಕಪೂರ್‍ಗೆ  ಸೆಟ್‍ನಲ್ಲಿ ಮನೆಯವರ ಜೊತೆ ನಟಿಸುವುದು ಕಷ್ಟದ ಕೆಲಸವಂತೆ. ಪ್ರಸಿದ್ದ ರಾಜಕಾರಣಿಯೊಬ್ಬ ಹೇಳಿದ ಹಾಗೆ ಅವನಿಗೆ ಕನಸುಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟವಂತೆ. ಪರಭಾಷಾ ನಟಿ ನಮಿತಾಗೆ ನಿರ್ಧೇಶನ ಮಾಡುವುದು ಕಷ್ಟ ಅನಿಸುತ್ತದೆ. ಗ್ಯಾಂಗ್‍ಸ್ಟರ್, ಫ್ಯಾಷನ್, ಕ್ವೀನ್, ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಯಾಗಿ ಮಿಂಚಿರುವ ಕಂಗನಾ ರನೋಟ್‍ಗೆ ದ್ವಿಪಾತ್ರದಲ್ಲಿ ನಟಿಸೋದು ಕಷ್ಟದ ಕೆಲಸ ಅನ್ನಿಸುತ್ತದಂತೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕಷ್ಟ ಬದುಕಲ್ಲಿ.
ಕೆಲವರಿಗೆ ಉತ್ತಮ ವ್ಯಕ್ತಿಯಾಗುವುದು ಕಷ್ಟ ಎನಿಸಿದರೆ ಇನ್ನೂ ಕೆಲವರಿಗೆ ಮರಣೋತ್ತರ ಪರೀಕ್ಷೆ ಮಾಡುವುದು ಕಷ್ಟ ಎನಿಸುತ್ತದಂತೆ. ಇಲ್ಲಿ ಪರಾಮರ್ಶೆಗೆ ಇಳಿದರೆ ಮಾನಸಿಕ ವಿಕ್ಷಿಪ್ತತೆಗೆ ಒಳಗಾಗುತ್ತೇವೆ. ಸರ್ಕಾರಿ ಅಧಿಕಾರಿಯೊಬ್ಬ ಬಡತನದ ರೇಖೆ ನಿರ್ಧರಿಸುವುದು ಕಷ್ಟದ ಕೆಲಸ ಎಂದರೆ, ಹಿರಿಯರ ಬದುಕಿನ ಒಳ ಅರ್ಥಗಳನ್ನು ಅರಿಯೋದು ಕಷ್ಟವೆಂದು  ವೃದ್ಧಾಶ್ರಮದ ಸಂಘಟಕರು ಹೇಳುತ್ತಾರೆ. ಖೈದಿಗಳನ್ನು ಕಾಯುವ ಜೈಲರ್ 500ಕ್ಕಿಂತ ಹೆಚ್ಚು ಖೈದಿಗಳು ಜೈಲಲ್ಲಿ ತುಂಬಿದಾಗ ಅವರನ್ನು ನೋಡಿಕೊಳ್ಳೋದು ಕಷ್ಟದ ಕೆಲಸ ಎಂದರೆ,  ಖೈದಿಯೊಬ್ಬ ಸೆರೆಮನೆಯಲ್ಲಿ ಖುರ್ಚಿ ನೇಯುವ ಕೆಲಸ ಕಷ್ಟ ಅಂತಾನೆ. ವಿದ್ಯಾರ್ಥಿ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಕಣ್ರೀ ಎಂದರೆ ಕಲಾವಿದನೊಬ್ಬ ರೇಖೆಯಲ್ಲಿ ಡೊಂಬರಾಟ ನಡೆಸುವುದು ಕಷ್ಟದ ಕೆಲಸವೆಂದು ಹೇಳುತ್ತಾನೆ. ಹೌಸ್ ವೈಫ್ ಆಗಿರುವುದು ಕಷ್ಟವೆಂದು ಮಹಿಳಾ ಮಣಿಯೊಬ್ಬಳು ಹೇಳಿದರೆ, ಶಾಸಕರಾಗಿ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸವೆಂದು ಎಂ.ಎಲ್.ಎ ಯೊಬ್ಬರು ಹೇಳುತ್ತಾರೆ. ಸಿಟಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಕಷ್ಟ ಎಂದು ಒಬ್ಬ ಹೇಳಿದರೆ ಕಾಮಿಡಿ ಪಾತ್ರಗಳನ್ನು ನಿರ್ವಹಿಸುವು ಕಷ್ಟದ ಕೆಲಸವೆಂದು ನಟನೊಬ್ಬ ಹೇಳುತ್ತಾನೆ... ಹೀಗೆ ಮನಸ್ಥಿತಿಯ ನೇರಕ್ಕೆ ಅವರರವರ ಕಷ್ಟವೆಂದರೆ ಪ್ರಶ್ನೆಯೆಂಬ ಹುಳಕ್ಕೆ ವಿಷವೆಂಬ ಉತ್ತರ ಆಗಬಹುದು.
ಬಹುಶಃ ಈ ಪ್ರಶ್ನೆಗೆ ಇದೇ ರೀತಿ ಉತ್ತರ ನೀಡುತ್ತಾ ಹೊರಟರೆ ನಿಮಗೂ ಹೌದು ಹೌದು ಎನ್ನಿಸುತ್ತಲೇ ಹೋಗಬಹುದು ಅದಕ್ಕಾಗಿ ಒಂದು ಪುಟ್ಟ ದೇವತೆಗಳ ಕಷ್ಟ ಎಂಬ ಕಥೆಯನ್ನು ಹೇಳಿ ಲೇಖನ ಮುಗಿಸುತ್ತೇನೆ ಕೇಳಿ...

ಇಳಿಸಂಜೆಯ ಹೊತ್ತಲ್ಲಿ ಇಬ್ಬರು ದೇವತೆಗಳು ನಗರದ ಹೊರಬಾಗಿಲಲ್ಲಿ ಪರಸ್ಪರ ಬೇಟಿಯಾದರು. ಅನೇಕ ದಿನಗಳ ನಂತರ ಅವರ ಬೇಟಿಯಾಗಿದ್ದರಿಂದ ಉಭಯಕುಶಲೋಪರಿಯ ಜೊತೆಗೆ ಬದುಕಿನ ಹಾದಿಯ ಕೆಲಸಗಳ ಬಗ್ಗೆಯೂ ಮಾತುಕತೆಗಳನ್ನು ನಡೆಸುತ್ತಾ. ಒಬ್ಬ ದೇವತೆ ಇನ್ನೊಬ್ಬಳಿಗೆ ಕೇಳಿದರು, ‘ನಿನ್ನ ಕೆಲಸ ಹೇಗೆ ನಡೆದಿದೆ. ಈಗ ನಮ್ಮ ನಾಯಕರು ನಿನಗೆ ಯಾವ ಕೆಲಸ ವಹಿಸಿದ್ದಾರೆ.ಎಂದು ಕೇಳಿದಳು. ಅಯ್ಯೋ ಅದನ್ನೇನು ಕೇಳುತ್ತೀಯಾ?. ನಿನಗೇ ಗೊತ್ತಲ್ಲ, ನಮಗೆ ಕೆಲಸಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದೆಯೇ?. ನಾಯಕರು ಕೊಟ್ಟಿದನ್ನು ಮಾಡಬೇಕು. ಸದ್ಯ ನೀಚ ಮನುಷ್ಯನನ್ನು ಹಿಂಬಾಲಿಸುವ, ಅವನ ಕಾಳಜಿ ಮಾಡುವ ಕೆಲಸ. ಅವನೋ ಪರಮ ನೀಚ, ಕಣಿವೆ ಪ್ರದೇಶದಲ್ಲಿ ವಾಸವಾಗಿದ್ದಾನೆ. ಇದು ತುಂಬ ಕಷ್ಟದ ಕಾರ್ಯ. ಆದರೆ ನಾನು ಅತ್ಯಂತ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದೇನೆ’. ಇದಕ್ಕೆ ಇನ್ನೊಬ್ಬ ದೇವತೆ ಉತ್ತರಿಸುತ್ತಾ ‘ಹಾಗಾದರೆ ನಿನ್ನ ಕೆಲಸವೇ ವಾಸಿ. ನೀಚರನ್ನು ಉದ್ಧರಿಸುವುದು ಸುಲಭ. ನಾನು ಕೆಲವರನ್ನು ಉದ್ಧರಿಸಿದ್ದೇನೆ.ಅದೇನು ಮಹಾ!. ನನ್ನ ಪಾಡು ಕೇಳಿದರೆ ನಿನ್ನದೇ ವಾಸಿ. ನನ್ನ ಕೆಲಸ ತುಂಬ ಕಷ್ಟಕರವಾದದ್ದು. ನನಗೊಬ್ಬ ಧರ್ಮಗುರುವನ್ನು ನೋಡಿಕೊಳ್ಳುವ ಕರ್ಮಬಂದಿದೆ. ಅವನು ತನ್ನದೇ ಸಾಮ್ರಾಜ್ಯದಲ್ಲಿದ್ದಾನೆ. ಇದಕ್ಕಿಂತ ಕಷ್ಟದ ಕೆಲಸ ಯಾವುದೂ ಇರಕ್ಕಿಲ್ಲ’ ಎಂದಳು.
ಇನ್ನೊಬ್ಬಳು ಬಿಟ್ಟಾಳೆಯೇ. ‘ಎಷ್ಟು ಅಹಂಕಾರ ನಿನಗೆ. ನಿನ್ನ ಕೆಲಸವೇ ಮುಖ್ಯ ಮತ್ತು ಕಷ್ಟದ್ದೇ. ನೀನು ಕೆಲವು ನೀಚರನ್ನು ಸರಿಮಾಡಿದ್ದಿರಬಹುದು. ಆದರೆ, ಇವನನ್ನು ಕಂಡವರೆಲ್ಲ ಗುಣಗಾನ ಮಾಡುತ್ತಾರೆ. ಏಕಾಂತದಲ್ಲಿ ಸದಾ ಅವನಿಗೆ. ಯಾರಿಗೆ, ಎಲ್ಲಿ ಎಷ್ಟು ಮೋಸ ಮಾಡಬೇಕು ಎಂಬುದೊಂದೇ ಯೋಚನೆ. ಅವನ ಮನಸ್ಸು ಎಂದಿಗೂ ಸರಿಯಾದ ದಾರಿಯಲ್ಲಿ ಚಿಂತಿಸುವುದಿಲ್ಲ. ಇಂಥವನನ್ನು ನಿಭಾಯಿಸುವ ಕೆಲಸ ನಿನಗೆ ಸಿಕ್ಕಿದ್ದರೆ ಕಷ್ಟ ಅರ್ಥವಾಗುತ್ತಿತ್ತು’. ಎಂದು ಹೂಂಕರಿಸಿದಳು. ಮೊದಲನೆಯವಳಿಗೆ ಕೋಪ ಉಕ್ಕೇರಿತು. ‘ನಿನ್ನ ಸ್ವಭಾವ ನನಗೆ ಗೊತ್ತು. ಮೊದಲಿನಿಂದಲೂ ನೀನು ಹಾಗೆಯೇ. ಯಾವಾಗಲೂ ನಿನ್ನ ಕೆಲಸವೇ ದೊಡ್ಡದು, ನೀನೇ ಶ್ರೇಷ್ಠ ಅಲ್ಲವೇ. ನಾನು ನೋಡಿಕೊಳ್ಳುತ್ತಿರುವುದು ಒಬ್ಬ ಧರ್ಮಗುರುವನ್ನು. ಅವನನ್ನು ಧಾರ್ಮಿಕನನ್ನಾಗಿಯೇ ಇಡಲು ನಾನು ಪಡುತ್ತಿರುವ ಕಷ್ಟ  ಯಾರಿಗೂ ತಿಳಿಯದು. ಅವನು ಧರ್ಮಕಾರ್ಯಗಳನ್ನು ಬಿಟ್ಟು ಇನ್ನೆಲ್ಲವನ್ನೂ ಮಾಡುತ್ತಾನೆ. ಅವನಷ್ಟು ಅನಾಚಾರಗಳನ್ನು ನೀನು ನೋಡಿಕೊಳ್ಳುತ್ತಿರುವ ಪಾಪಿಯೂ ಮಾಡಲಿಕ್ಕಿಲ್ಲ. ಅವನನ್ನು ನಿಧಾನವಾಗಿ ದಾರಿಗೆ ತರುತ್ತಿದ್ದೇನೆ. ನನ್ನ ಕೆಲಸವೇ ದೊಡ್ಡದು’ ಎಂದಳಾಕೆ ಉಗ್ರವಾಗಿ.
ಮಾತಿಗೆ ಮಾತು ಬೆಳೆಯಿತು. ಮಾತು ಜಗಳವಾಯಿತು. ಜಗಳ ಜಗಮಗಿಸಿತು. ದೇವತೆಗಳಾದರೇನಂತೆ ಅವರಿಗೂ ಸಿಟ್ಟು, ಅಹಂಕಾರ ಇದ್ದದ್ದೇ. ಕೊನೆಗೆ ಕೈಕೈಮಿಲಾಯಿಸುವ ಸಂದರ್ಭ ಬಂದಿತು. ಆಗ ಭಗವಂತನ ಆಗಮನ ಅನಿವಾರ್ಯವಾಯಿತು. ಆತ ಬಂದು ಜಗಳ ನಿಲ್ಲಿಸಿದ. ಇಬ್ಬರೂ ತಮ್ಮ ತಮ್ಮ ವಾದಗಳನ್ನು ಮಂಡಿಸಿ ಹೇಗೆ ತಮ್ಮ ಕಾರ್ಯವೇ ಶೇಷ್ಠವಾದದ್ದು ಎಂದು ಅರುಹಿದರು. ಭಗವಂತ ತಾಳ್ಮೆಯಿಂದ ಇಬ್ಬರ ಮಾತುಗಳನ್ನು ಕೇಳಿಸಿಕೊಂಡು ಹೇಳಿದ, ‘ನಾನು ಈಗಲೇ ಯಾರ ಕಾರ್ಯ ಹೆಚ್ಚು ದೊಡ್ಡದು, ಜವಾಬ್ದಾರಿಯಾದದ್ದು ಎಂದು ಹೇಳಲಾರೆ.
ಆದರೆ ನಿಮಗಿಬ್ಬರಿಗೂ ಒಂದು ವಿಷಯ ಖಚಿತವಾಗಿದೆ. ಅದೇನೆಂದರೆ ಇನ್ನೊಬ್ಬರ ಕೆಲಸ ಸುಲಭವಾದದ್ದು. ಆದ್ದರಿಂದ ನಿಮಗೆ ನಿಮ್ಮ ಕೆಲಸಗಳನ್ನು ಹಗುರಮಾಡಿಕೊಳ್ಳಲು ಈ ಕ್ಷಣದಿಂದ ನೀವು ಮಾಡುತ್ತಿರುವ  ಕಾರ್ಯಗಳನ್ನು ಅದಲುಬದಲು ಮಾಡಿದ್ದೇನೆ. ನೀವಿನ್ನು ಹೊರಡಿ’, ಇಬ್ಬರೂ ತಮ್ಮ ಕೆಲಸ ಕಡಿಮೆಯಾಯಿತೆಂಬ ಸಂತೋಷದಲ್ಲಿ  ಕುಣಿಯುತ್ತ ಹೋದರು. ಒಂದು ವಾರದ ನಂತರ ಮತ್ತೆ ಬೇಟಿಯಾದಾಗ ಮತ್ತೆ ಅದೇ ವಾದ ಮಾಡುತ್ತಾ ಈಗ ನಾವು ನಿರ್ವಹಿಸುತ್ತಿರುವ ತಮ್ಮ ಕೆಲಸವೇ ಕಷ್ಟದ್ದು ಎಂದು ಜಗಳಕ್ಕಿಳಿದರು.
ನಾವೂ ಹಾಗೆಯೇ . ನಮ್ಮ ಕಷ್ಟವೇ ದೊಡ್ಡದು, ನಮ್ಮ ಸಾಧನೆಯೇ ಹೆಚ್ಚಿನದು ಎಂದು ಭಾವಿಸುತ್ತೇವೆ, ಇನ್ನೊಬ್ಬರ ಕಷ್ಟ, ಪರಿಶ್ರಮ ಅರ್ಥವಾಗುವವರೆಗೆ ಅವರ ಕಷ್ಟ ತಿಳಿಯುವುದಿಲ್ಲ. ಅನಂತರವೇ ತಿಳಿವಳಿಕೆ ಮೂಡುತ್ತದೆ. ಅಂದರೆ ಭೂಮಿಯ ಮೇಲೆ ಮನುಷ್ಯನಿಗೆ ಕಷ್ಟವಾಗುವ ಕೆಲಸ ಯಾವುದೂ ಇಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನಬಹುದು ಆದರೆ ಅಲ್ಲಿ ಹೋಗಿ ಪರಾಂಭರಿಸಿ ನೋಡಿದರೆ ನುಣ್ಣಗಿದ್ದದ್ದೂ ವಕ್ರವಾಗಿರಬಹುದು. ಕಷ್ಟಗಳು ಹಾಗೆ ಇನ್ನೊಬ್ಬರದು ನೋಡುವಾಗ ಸುಲಭ ಎನಿಸಬಹುದು. ಅಥವಾ ನಾವಂದುಕೊಂಡಂತೆ ಎಲ್ಲವೂ ಸುಲಭ ಅಥವಾ ಎಲ್ಲವೂ ಕಷ್ಟ ಎನಿಸಲುಬಹುದು. ಅಂದುಕೊಂಡು ಮನಸಿಟ್ಟು, ಕೆಲಸ ಮಾಡಿದರೆ ಯಾವುದು ಕಷ್ಟವಿಲ್ಲ ಎಲ್ಲವೂ ನಾವಂದುಕೊಂಡಂತೆÀ ಅಲ್ವಾ ಕಷ್ಟಕ್ಕೆ ಕಷ್ಟವೇ ಸಾಟಿ,ನೋಡುವುದೆಲ್ಲಾ ಸುಲಭ, ಮಾಡುವುದು ಕಷ್ಟ, ಮಾಡುವುದು ಸುಲಭವಿರಬಹುದು!!! ಮಾಡುವ ಕೆಲಸ ನೋಡುವ ನಮ್ಮ ಕಂಗಳೆ ಕಷ್ಟವೆಂದುಕೊಂಡಿರಬಹುದು ಅಲ್ವಾ...
 ಏನಂತೀರಾ!?




Tuesday, 12 May 2015

ಹೆಣ್ಣು-5


ಹೆಣ್ಣಿನಂದವೇ ಹಾಗೆ ಅವಳೊಂದು ಸುಂದರತೆಯ ಗೂಡು. ಆ ಸುಂದರತೆಗೆ ಮಾರು ಹೋಗದವರೆ ಇಲ್ಲಾ. ಸಾಮಾನ್ಯನಿಂದ ಕವಿವರ್ಯರವರೆಗೂ ಅವಳಂದದ ಪುಳಕಕ್ಕೆ ಸೋತವರೇ ಹೆಚ್ಚು. ಹೆಣ್ಣಂತೂ ತನ್ನ ಅಂದದ ವಿಚಾರದಲ್ಲಿ ಜಾಗೃತೆ ವಹಿಸುವ ನಿಸ್ಸೀಮೆ. ಹಾಕೋ ಡ್ರೇಸ್ ನಿಂದ ಹಿಡಿದು ಮಾಡೋ ಊಟದವರೆಗೆ ಎಲ್ಲದರಲ್ಲೂ ಅಂದ ಚಂದದ ಸೆಲೆಕ್ಷನ್‍ಗೆ ಒತ್ತು ಜಾಸ್ತಿ. ಇಂದಿನ ಮಾಡರ್ನ್ ಯುಗದಲ್ಲಿ ಅಂದವಾಗಿ ಕಾಣಲು ಅವರು  ಒಳಗಾಗುವ ಬಗೆ ಬಗೆಯ ಪ್ಯಾಶನ್‍ಗಳು ಅವರಿಗೆ ಮಾರಕವಾಗುತ್ತೆ. ಅಲ್ಲದೇ ಕೆಲ ಅಭ್ಯಾಸಗಳು ಸಾರ್ವತ್ರಿಕವಾಗಿ ಕಿರಿ ಕಿರಿ ಏನಿಸಿದಾಗ ಅವು ದುರಭ್ಯಾಸವಾಗಬಹುದು ಅಥವಾ ಇನ್ನೂ ಕೆಲವು ವೈಯಕ್ತಿಕವಾಗಿ ನಷ್ಟವುಂಟುಮಾಡುವ ದುರಭ್ಯಾಸವೂ ಆಗಬಹುದು. ನಿಮ್ಮ ಬ್ಯುಟಿ ಬಗ್ಗೆ ನೀವೆಷ್ಟು ಆಸಕ್ತಿ ತೋರುತ್ತಿರೋ ಅಷ್ಟೇ ಮುತುವರ್ಜಿಯನ್ನು ವಹಿಸಿ ನಿಮಗಾಗಿ ಈ ಕೆಳಗಿನ ಕೆಲವೊಂದಿಷ್ಟು ಮಾಹಿತಿ ನಿಮಗಾಗಿ...

ಮೈಗಂಟುವ ಧಿರಿಸುಗಳು ತೊಡುವಾಗ ಎಚ್ಚರವಿರಲಿ;
ನೀವು ದಿನ ನಿತ್ಯ ಜೀನ್ಸ್ ಧರಿಸುತ್ತಿದ್ದರೆ ಅದನ್ನು ಬಳಸುವ ಬಗ್ಗೆ ಎಚ್ಚರವಹಿಸಿ. ಬಿಗಿಯಾದ ಜೀನ್ಸ್ ಅಥವಾ ಉಡುಪು ಧರಿಸುವುದು ಅನೇಕ ಖಾಯಿಲೆಗಳಿಗೆ ದಾರಿಯಾಗÀಬಹುದು. ಅತೀ ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸುವುದರಿಂದ  ಕಾಲಿನಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ಅಲ್ಲದೇ ಬ್ಲಾಡರ್ ಇನ್ಫೆಕ್ಷನ್ ವಜಿನಿಯಲ್ ಯೀಸ್ಟ್ ಇನ್ಫೆಕ್ಷನ್ ಕೂಡ ಆಗಬಹುದು.

ಒಳ ಉಡುಪುಗಳು ಕಿರಿ ಕಿರಿ ನೀಡದಂತಿರಲಿ;
ಬಹುತೇಕ ಸಿಂಥೆಟಿಕ್  ಒಳುಡುಪುಗಳು ಸೊಂಕು ಹಾಗೂ ಕೆರೆತ ಉಂಟು ಮಾಡುತ್ತವೆ. ಅವುಗಳನ್ನು ಧರಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಕಿರಿ ಕಿರಿ ಕೊಡಬಹುದು. ಅದಕ್ಕಾಗಿ ಆದಷ್ಟು ದಿನಬಳಕೆಗೆ ಹತ್ತಿಯ ಒಳುಡುಪನ್ನೇ ಧರಿಸಿ.


ಹೈ ಹೀಲ್ಡ್ ಪಾದರಕ್ಷೆ ಧರಿಸುತ್ತಿದ್ದರೆ  ಆದಷ್ಟು ಕಡಿಮೆ ಮಾಡಿ;
‘The wearer knows, where the shoe pinches’ಎಂಬ ನಾಣ್ನುಡಿಯಂತೆ  ಪಾದಗಳಿಗೆ ಸೂಕ್ತ ಪಾದರಕ್ಷೆ ಇಲ್ಲದಿದ್ದರೆ ಅವು ಒಳಗೊಳಗೆ ಪದ ಹಾಡುತ್ತವಂತೆ. ನಮ್ಮ ನಡಿಗೆಗೆ ಸಂಪೂರ್ಣ ರಕ್ಷಣೆ ನೀಡುವುದೇ ಪಾದರಕ್ಷೆಯ ಉದ್ದೇಶ. ಆದರೆ ಇಂದು ಅವುಗಳೇ ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತಿವೆ. ವಿಜ್ಞಾನಿಗಳ ಅಧ್ಯಯನದ ಪ್ರಕಾರ ಹೈಹೀಲ್ಡ್ ಪಾದರಕ್ಕೆ ಧರಿಸುವುದು  ಆರೋಗ್ಯಕವಲ್ಲ ಎಂದು ಸಾಭೀತಾಗಿದೆ. ಇದು ಮಂಡಿ, ಹಿಂಭಾಗ, ಪಾದ , ಮಣಿಕಟ್ಟುಗಳಿಗೆ ವ್ಯತಿರಿಕ್ತ ಪರಿಣಾಮ ನೀಡುವುದಲ್ಲದೇ ಸುಮಾರು 2 ಇಂಚುಗಳಿಗಿಂತಲೂ ಎತ್ತರದ ಹಿಮ್ಮಡಿಯುಳ್ಳ ಪಾದರಕ್ಷೆಗಳು ಜಾಯ್ಟ್ಸ್ ನೋವಿಗೆ ಕಾರಣವಾಗುತ್ತವಂತೆÉ. ಆದ್ದರಿಂದ ಪಾದಗಳಿಗೆ ಸೂಕ್ತ ರಕ್ಷಣೆ ನೀಡುವ ಪಾದರಕ್ಷೆಗಳನ್ನೇ ಧರಿಸಿ.

ಮೊಬೈಲ್ ಬಳಕೆಯಲ್ಲಿ ಎಚ್ಚರವಿರಲಿ;
ದಿನನಿತ್ಯದ ಜೀವನದಲ್ಲಿ ಮೊಬೈಲ್ ಒಂದು ಅವಶ್ಯಕ ವಸ್ತುವಾಗಿದ್ದು, ಅದು ಇಲ್ಲದೇ ಜೀವನವೇ ಇಲ್ಲ ಎನ್ನುವಂತಾಗಿದೆ. ಇದು ಎಷ್ಟು ಮುಖ್ಯವೋ ಅಷ್ಟೇ ಕೆಟ್ಟದ್ದೂ ಕೂಡ ಹೌದು. ಮುಖ್ಯವಾಗಿ ಹೆಣ್ಣು ಮಕ್ಕಳು ಇದಕ್ಕೆ ಅಡಿಕ್ಟ್ ಆಗಿ ದಾರಿ ತಪ್ಪುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಮೆಸೇಜ್, ಇಂಟರ್ನೆಟ್, ಅನ್‍ವಾಂಟೆಡ್ ಕರೆ ಇತ್ಯಾದಿಗಳ ವಿಚಾರದಲ್ಲಿ ಎಚ್ಚರದಿಂದಿರಿ. ಫ್ಯಾಷನ್ ಮೋಜು ಮೊಬೈಲ್‍ನಲ್ಲಿರಲಿ ಹಾಗೇ ಅದನ್ನು ಉಪಯೋಗಿಸುವ ವಿಧಾನದಲ್ಲೂ ಹಿಡಿತವಿರಲಿ.
ಹ್ಯಾಂಡ್ ಬ್ಯಾಗ್ ವಿಚಾರ;
 ಮನೆಯಿಂದ ಹೊರಗೆ ಹೆಜ್ಜೆ ಇಡುವ ಹೆಣ್ಣಿಗೆ  ಹೆಗಲಲ್ಲೊಂದು ಬ್ಯಾಗ್ ಇರೋದು ಸಹಜ. ಅವಳ ಬ್ಯಾಗ್‍ನಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಹೇಳುವುದೇ ಸುಲಭ. ಇದು ಹೆಣ್ಣಿನ ಉಡುಪಿನಷ್ಟೇ ವೈವಿಧ್ಯಮಯ. ಆದರೆ ಈ ಬ್ಯಾಗ್ ಗಳೇ ಒಮ್ಮೊಮ್ಮೆ ಕುತ್ತಿಗೆ ನೋವಿಗೂ ಕಾರಣವಿರಬಹುದು. ಅದಕ್ಕಾಗಿ ನೀವು ಬಳಸುವ ಬ್ಯಾಗ್ ಹಗುರವಾಗಿರಲಿ, ಇಲ್ಲದಿದ್ದರೆ ನಿಮಗೆ ಭುಜ, ಕುತ್ತಿಗೆ ನೋವು ಫ್ರೀ...ನೆನಪಿರಲಿ...


ಅಮ್ಮ ನೀನಿಲ್ಲದಾ ಹೊತ್ತು...


ಅದೊಂದು ಶುದ್ಧ ‘ಬ್ಯಾಡ್ ಡ್ರೀಮ್’...
       ಕನಸುಗಳೇ ಹಾಗೆ ಎಲ್ಲಿ ಕಾಡುತ್ತವೋ, ಎಲ್ಲಿ ತೂರುತ್ತವೋ, ಎಲ್ಲಿ ಸತ್ಯಾಸತ್ಯದಿಂದ ಕೂಡಿರುತ್ತವೋ, ಮನಸಿನ ಕಣ್ಣುಗಳಿಗೆ ಯಾವ ರೀತಿಯ ‘ಫಿಲ್ಮ್’ಗಳನ್ನು ತೋರಿಸುತ್ತವೆಯೋ, ಹೇಳಲಾಗದು, ಮರೆತರಂತೂ ವರ್ಣಿಸಲೂ ಆಗದು...ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ ಪೂರ್ತಿ ಕಾಲ್ಪನಿಕತೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುವ ಸಂಬಂಧಿಕನಂತೆಯೂ ಕೆಲವೊಮ್ಮೆ ನಾಟ್ಯವಾಡುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ ಇನ್ನೂ ಕೆಲವು ಕಹಿ ಅನುಭವ ಕೊಡುತ್ತವೆ. ಅಂತಹ ಕೆಟ್ಟ ಕನಸೇ ಆ ದಿನ ರಾತ್ರಿ ಮನದಾಳದಲ್ಲಿ  ತೆರೆಯಂತೆ ಅಪ್ಪಳಿಸಿದ್ದೆ ಈ ಬರವಣಿಗೆಗೆ ಕಾರಣ. ಅದುವೇ ‘ಕೆಟ್ಟ ಕನಸು’.
ಕನಸಿನ ವಿಷಯಗಳನ್ನು  ಚೆನ್ನಾಗಿ ಜಗತ್ತಿಗೆ ತೋರಿಸಿಕೊಟ್ಟ ಮಹಾ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮತ್ತು ಯುಂಗ್ ಪ್ರಾಯ್ಡ್‍ರು ಹೇಳುವಂತೆ, ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇರುವ ಮಾರ್ಗವಂತೆ. ಇವರ ಪ್ರಕಾರ ನಮಗೆ ಇಷ್ಟವಾಗದ ಎಷ್ಟೋ ಭಾವನೆಗಳನ್ನು(ಕೋಪ, ನೋವು) ನಾವು ಸುಪ್ತ ಮನಸ್ಸಿನೊಳಗೆ ತಳ್ಳಿ ಬಿಡುತ್ತೆವಂತೆ. ನಿದ್ರಿಸುವಾಗ ಆ ಸುಪ್ತಮನಸ್ಸಿನ ಒಳಗಿರುವ ವಿಷಯಗಳೇ ಮೇಲೇರಿ ಬರುತ್ತವಂತೆ. ಅಂತಹ ಸುಪ್ತಮನಸ್ಸಿನಿಂದ ಎದ್ದು ಬಂದ ‘ಫಿಲ್ಮೇ’ ಆ ‘ಬ್ಯಾಡ್ ಡ್ರೀಮ್’.
ಹೌದು!., ನಿಜಕ್ಕೂ ಅದು ನನಗೆ ಇಷ್ಟವಾಗದ , ನನ್ನ ಮನಸ್ಸಿಗೆ ತಡೆದುಕೊಳ್ಳಲಾಗದಂತಹ, ಅದರೆದುರೂ ನಾ ನಿಲ್ಲಲಾಗದ ನಿರ್ವಾಜ್ಯ ಸನ್ನಿವೇಶ. ಇದರಿಂದ ನಾ ಕಲಿತುಕೊಂಡಿದ್ದು ಬಹಳ. ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಕಲಿಯೋದು ನನ್ನ ಹಾಬಿ ಕೂಡ ಹೌದು. ಇದು ವ್ಯಕ್ತಿತ್ವ ಬಲಗೊಳಿಸಲು ಸಹಕಾರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. 

ಆ ದಿನದ ಕನಸಲ್ಲಿ ನನ್ನ ಜೀವ, ನನ್ನ ಭಾವ, ನನ್ನ ಆತ್ಮವೇ ಆಗಿರುವ ‘ನನ್ನಮ್ಮ’  ನನ್ನ ಬಳಿ ಜೀವಂತವಾಗಿ ಇರಲಿಲ್ಲ. ಅವಳೇ ಕರೆತಂದ ಈ ಜೀವ ಅವಳಿಲ್ಲದೇ ಒಂಟಿಯಾಗಿತ್ತು. ಏಕಾಂಗಿಯಾಗಿಸಿ ಬಿಟ್ಟು ಕಾಣದ ಲೋಕಕ್ಕೆ ಪಯಣಿಸಿದ್ದಳು. ಅಮ್ಮನ ಉಪಸ್ಥಿತಿ ಅಂದಿಗೆ ಕೊನೆಯಾಗಿ ಇನ್ನೂ ಮುಂದೆ ಅಪ್ಪಿಕೊಳ್ಳಲು, ಸೆರಗ ಹಿಂದೆ ಅವಿತುಕೊಳ್ಳಲು, ನೋವಾದಾಗ ತೊಡೆಯ ಮೇಲೆ ಮಲಗಲು, ಮುದ್ಧಾದ ಅಪ್ಪುಗೆಯ ಆಲಿಂಗನ ಮಾಡಿಕೊಳ್ಳಲು , ಮುದ್ದಾಡಲು  ಯಾವುದಕ್ಕೂ ಲಭ್ಯವಾಗದಂತೆ  ನಿರ್ಜಿವಿಯಾಗಿದ್ದಳು. ಯಾವಾಗ ಇನ್ಮುಂದೆ ಅಮ್ಮ ನನ್ನ ಲಭ್ಯತೆಗೆ ದೊರೆಯಳು ಅಂತ ತಿಳಿಯಿತೋ ಆಗಲೇ ಎದೆಯ ಪಂಜರದಲ್ಲಿ ಢವ-ಢÀವ ಶಬ್ದದ ಉಸ್ತುವಾರಿಯೇ ಜಾಸ್ತಿಯಾಗಿ ಅತೀರೇಕತೆಗೆ  ತಿರುಗಿ ಏನು ಮಾಡಬೇಕೆಂದು ತೋಚದೇ ಒದ್ದಾಟ ಪ್ರಾರಂಭಿಸಿದ್ದೆ. ಕನಸಿನ ರಾಜನ ಆಸ್ತಾನದಲ್ಲಿ ರಾಜ, ಮಂತ್ರಿ, ಸಭಿಕರು, ಅಷ್ಟೇ ಅಲ್ಲದೇ ಕಾಲಾಳುಗಳ ಪಾದಕ್ಕೂ ಬಿದ್ದು, ಪರಿ ಪರಿಯಲ್ಲಿ ಬೇಡಿಕೊಂಡರೂ ಯಾರು ನÀನ್ನ ಒಡಲಾಳದ  ನೋವನ್ನು ಅರ್ಥಮಾಡಿಕೊಳ್ಳಲಿಲ್ಲ. ‘ಬೇಕಾ ಅಮ್ಮಾ ಬೇಕಾ’ ಎಂದು ಕೇಳಲಿಲ್ಲ. ಆ ಆರ್ಥನಾದ ಮಾಡಿಕೊಂಡವರಿಗೆ ಗೊತ್ತು, ಹೇಳಲಸಾಧ್ಯವನಿಸುತ್ತೆ. ಅಮ್ಮ ಅಂದರೆ ಏನೂ!?,ಎಂದು ಅತ್ತು ಅತ್ತು ಸುಸ್ತಾದ ನನಗೆ ಆಗಲೇ ಅರಿವಾಗಿದ್ದು. ಅಮ್ಮ ಎನ್ನುವ ಪದ ಈ ಜನ್ಮ ತಾಳಿ ಭೂಮಿಗೆ ಬಂದ ದಿನದಿಂದ ದಿನಂಪ್ರತಿ ಎನ್ನದೇ ಬಾಯಲ್ಲಿ ತೊದಲುತ್ತಾ, ಕರೆಯುತ್ತಾ, ಅರಚುತ್ತಾ, ಬೆಳೆದರೂ ಅದರ ಅರಿವು ಆಗಲಿಲ್ಲವಲ್ಲಾ!, ಈಗೆಲ್ಲಿಂದ ಬಂದಿತೆಂದು ಸಾಧಾರಣ ಭಿನ್ನತೆಯಲ್ಲೆ ಅರ್ಥವಾಗುತ್ತಾ ಸಾಗಿತ್ತು.
ಈ ಹಿಂದೆ ಯಾರೋ ಒಂದು ಮಾತು ಹೇಳಿದ್ದರು. ‘ಹತ್ತಿರ ಇರುವಾಗ ಯಾವುದರ ಬೆಲೆಯೂ ಅರಿಯುವುದಿಲ್ಲ ಕಳೆದುಕೊಂಡಾಗಲೇ ಅದರ ಮೌಲ್ಯ, ಅಂತಸ್ತು ಅರಿಯುವುದೆಂದು’. ಅದೀಗÀ ಹೌದನ್ನಿಸುವ ಕಾಲ. ಅವಳಿರುವಾಗ ಅವಳ ಮೌಲ್ಯ ಅಷ್ಟಿದೆ ಎನ್ನುವ ಪರಿವೇ ಇರಲಿಲ್ಲ. ಕಲ್ಪನೆಯೂ ಬಂದಿರಲಿಲ್ಲ. ನಿಜವಾಗಲೂ ಅವಳ ಉಪಸ್ಥಿತಿ ಎಷ್ಟು ಭದ್ರ ಅನಿಸಿದ್ದು ಆವಾಗಲೇ..! 
 ಎಸ್... ಅಮ್ಮ ಅಮ್ಮನೇ. ಅವಳೊಂದು ತ್ಯಾಗಮಯಿ, ಆ ಪದವೇ ಒಂದು ‘ಯುನೀಕ್ ಐಡೆಂಟಿಟಿ’. ಈ ಭೂಮಿಯಲ್ಲಿ  ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಿಂದ ಬರುವ ಮೊದಲ ಪದವೇ ಅಮ್ಮ. ಪುಟ್ಟ ಮಗುವಿನ ಮೊದಲ ತೊದಲ ನುಡಿಯೂ ಅಮ್ಮನೇ. ಅಮ್ಮ ಎಂದರೆ ಅದೇನೋ ಹರುಷ ಆ ಎರಡಕ್ಷರದ ಪದದಲ್ಲಿ ಅದೇನೋ ಚೈತನ್ಯ. ನವ ಮಾಸ ಗರ್ಭದಲ್ಲಿ ಹೊತ್ತು ಹಲವು ನೋವು , ಯಾತನೇ ಅನುಭವಿಸಿ, ಸೃಷ್ಟಿಗೆ ಕಾರಣವಾಗಿ ತನ್ನ ಮಡಿಲಲ್ಲಿಟ್ಟು ಸಣ್ಣ ನೋವು ಆಗದಂತೆ ಜತನವಾಗಿ ಕಾಪಾಡಿ ತಾನು ಅರೆಹೊಟ್ಟೆ ಇದ್ದರೂ ಮಗನಿಗೆ ಹೊಟ್ಟೆ ತುಂಬಾ ಕೈ ತುತ್ತು ಹಾಕಿ ಬೆಳೆಸುವ ತಾಯಿಗೆ ತಾಯಿಯೇ ಸಾಟಿ. 
ಒಮ್ಮೊಮ್ಮೆ ಮೌನವೇ ಮಾತಾಗುವ ಅಮ್ಮ ಇನ್ನೂ ಕೆಲವೊಮ್ಮೆ ಮಾತೇ ಮೌನ ಎನಿಸುವುದು ಉಂಟು. ಅಕಳಂಕ ಧಾರೆ ಅವಳೆಂದರೆ ತಪ್ಪಲ್ಲ. ಪ್ರಪಂಚದಲ್ಲಿ ಕೆಟ್ಟ ಮಗ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲವೆಂಬಂತೆ  ಎಷ್ಟೋ ಮಂದಿಯ ಜೀವನದ ಜಂಜಡಗಳಿಗೆ, ಸುಖಕ್ಕೆ, ದುಃಖಕ್ಕೆ, ಔನತ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತು ಯಾವುದೇ ಸ್ವಾರ್ಥವಿಲ್ಲದೇ ನಾನೇ ಎಲ್ಲ, ನನ್ನಿಂದಲೇ ಎಲ್ಲಾ ಆಯಿತು ಎಂದು ಕ್ರೆಡಿಟ್ ತೆಗೆದುಕೊಳ್ಳಲು ಎಳಸದ ಮನಸ್ಸಿದ್ದರೆ ಅದು ಅಮ್ಮಂದಿರದು ಮಾತ್ರಾ.
ಚಿಕ್ಕಂದಿನಲ್ಲಿ ನಡೆಯಲು ಬಾರದಿದ್ದಾಗ ಕೈ ಹಿಡಿದು ಸಾಗಿಸಿ, ಆನಂತರ ನಡೆಯಲು ಸಮರ್ಥರಾದರೂ ತನ್ನ ಕರುಳ ಬಳ್ಳಿಗೆ ನೋವಾಗುವುದೇನೋ ಎಂದು ಕಂಕುಳಲ್ಲಿ ಕೂರಿಸಿಕೊಂಡು ಪಯಣಿಸಿ ಮುದ್ದಿಸುವ ಆ ಹೆತ್ತ ಪ್ರೀತಿ, ಮಜ್ಜಿಗೆ ಕಡೆಯುವ ಹೊತ್ತು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಹಾಡಿನ ಧಾರೆಯ ಮೂಲಕ ನೀತಿಕತೆ ಹೇಳುವ ನಲ್ಮೆ, ಶಾಲೆಗೆ ಹೋಗಲ್ಲ ಎಂದಾಗ ನಿನಗೇನು ಬೇಕು ತಗೋ ಎಂದು ಬಳಿಯಲ್ಲಿ ಕೂಡಿಟ್ಟ ಅಷ್ಟಿಷ್ಟು ಖಾಸನ್ನು ಕೊಟ್ಟು, ತಪ್ಪುಗೆರೆದಾಗ ಬುದ್ಧಿ ಹೇಳಿ, ಕಷ್ಟವಿದ್ದರೂ ತೋರ್ಪಡಿಸದೇ ಸದಾ ಮುಗುಳ್ನಕ್ಕೂ ನನ್ನ ಬೆಳೆಸಿದ  ಈ ಪರಿಗಳೇ ಅವಳನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ಒಪ್ಪಲಿಲ್ಲವಾ!? ಅಥವಾ ಆ
ಭಾಂಧವ್ಯ ಇನ್ಯಾರಿಂದಲೂ ಧಾರೆಯೆರೆಯಲಾಗುವುದಿಲ್ಲ  ಅಂತಲಾ!? ತಿಳಿಯಲಿಲ್ಲ...
ಸಾಹಸಕ್ಕೆ ಛಲಕ್ಕೆ ಮೂಲಹೇತುವಾಗುವ ಆಕೆ, ಅನಿವಾರ್ಯತೆ ಬಂದರೆ ಅಪ್ಪನೂ ಆಗಿ ನಮ್ಮನ್ನ ಸಲಹಿದ್ದು ಕಣ್ಣಮುಂದೆ ಗೋಚರಿಸಿತ್ತು. ನನ್ನ ಪಾಲಿಗೆ ಬಾಳದೀವಿ, ದಾರಿ ದೀವಿ ಎರಡು ಆಗಿರುವ ಆಕೆಯ ವಾತ್ಸಲ್ಯದ ಸಾಗರದಲ್ಲಿ ಪ್ರತಿದಿನ ಮಿಂದೇಳುವುದು ಅನಿರ್ವಚನೀಯ ಆನಂದಸಾಗರ. ಆ ಸಾಗರದಿ ಅವಳೇ ಮುತ್ತು. ಆ ಮುತ್ತನ್ನು ಕಳೆದುಕೊಳ್ಳಲು ನಾ ಒಲ್ಲೆ ...
ಆಗೆಲ್ಲಾ ನಾ ಅತ್ತು ಅವಳಿಗೆ ಎಷ್ಟು ಘಾಸಿ, ಕಿರಿ ಕಿರಿ ಮಾಡಿದ್ದರೂ, ಅಪ್ಪನನ್ನೇ ಆನೆ ಮಾಡಿ ಅಂಬಾರಿಯಂತೆ ನನ್ನ ಕೂರಿಸಿ ಮನದೊಳಗೆ ನಗುವನ್ನು ಕಂಡಿದ್ದಳು. ಮನಸ್ಸಿನ ಅಂತಃಕರಣದಲ್ಲಿ ಅವಳಿಲ್ಲದೇ ಜೀವನ ಸಾಗಲ್ಲ. ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ ಪ್ರತಿಯೊಬ್ಬ ಪುರುಷನಿಗೂ ಬೆನ್ನೆಲುಬಾಗಿ ನಿಲ್ಲ್ಲುವ ಈಕೆಯ ಇಂಪು ಪಸರಿಸದೇ ಜಗತ್ತೇ ಇಲ್ಲ ಅನಿಸುತ್ತೆ. ಶಾಲಾ ದಿನದ ನಾಟಕದಲ್ಲಿ ನಾ ಸಾಯೋ ಸೈನಿಕನ ಪಾತ್ರ ಮಾಡಿದ್ದನ್ನು ಎದುರು ನಿಂತು ನೋಡಿದ ಆಕೆ ಎಡೆಬಿಡದೆ ಅತ್ತಿದ್ದು, ಮಳೆ ಮಿಂಚು, ಗುಡುಗಿನಲಿ ತಾ ನೆನೆದರೂ ತನ್ನ ಸೆರಗ ಎನ್ನ ತಲೆಗೆ ಹೊದಿಕೆಯಾಗಿಸಿ ಜಾಗೃತಿವಹಿಸಿದ್ದು, ಇದೆಲ್ಲಾ ಗಮನಿಸಿದರೆ ಭಾವನಾತ್ಮಕವಾಗಿ ಅಮ್ಮನೊಂದಿಗಿರುವ ಸಂಬಂಧ ಅಪ್ಪನೊಂದಿಗೆ ಇಲ್ಲ ಎನಿಸುತ್ತದೆ. ಅಂಬೆಗಾಲಿಡುವಾಗÀ ಆನೆಯಾಗಿ ಆಡಿಸುವ ಅಪ್ಪ, ನಡೆಯುವಾಗ ಅಂಗಡಿಗೆ ಬೆರಳು ಹಿಡಿದು ಹೋಗಿ ಕೇಳಿದ್ದು ಕೊಡಿಸುವ ಅಪ್ಪ ಒಮ್ಮೊಮ್ಮೆ ಸಿಟ್ಟು ಬಂದಾಗ ಹೊಡೆಯುತ್ತಿದ್ದದ್ದು  ಅಮ್ಮನೆದೆಯಲ್ಲಿ ಹೇಳಲಾಗದೇ ಎಷ್ಟು ಸಂಕಟವನ್ನು ನೀಡಿತ್ತೋ ನಾ ಕಾಣೆ.
ಇಷ್ಟೆಲ್ಲಾ ಮಮಕಾರ ಇರುವ ಅಮ್ಮ ಕಣ್ಣೇದುರು ಕಾಣದಾದಾಗ ನನ್ನಯ ತಳಮಳ , ಕಸಿವಿಸಿ,  ಒದ್ದಾಟದ ಪರಿ ಹೇಳಲಾಗದೇ ಇನ್ನೇನೂ ತಡೆಯಲಾರೆ ಎನ್ನುವಷ್ಟರಲ್ಲಿ ಕಣ್ಧೇರೆಡು ಆಕಸ್ಮಿಕವಾಗಿ ಎದ್ದೆ. ಜಗತ್ತು ನಿರ್ಮಲವಾಗಿತ್ತು ಕಹಿಯ ಸತ್ಯ, ಜೀವನದ ಸಹಿಯ ತಿಳಿಸಿತ್ತು.
ಅವಳು ಬಳಿ ಇದ್ದಳೆಂದು ತಿಳಿದಿದ್ದ ಸಮಯದಲ್ಲಿ ಅರಿಯದ ಅದೆಷ್ಟೋ ಮೌಲ್ಯಯುತ ಬಾಳ್ವೆಯ ಅಂಶವನ್ನು ಅವಳು ಇಲ್ಲವೆಂಬ ಕನಸಿನಲ್ಲಿ ಕಂಡೆ. ಅಂದಿನಿಂದ ಅಮ್ಮನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ನಾನು ನಮ್ಮ ವೈಯಕ್ತಿಕ ಜೀವನದ ಏಳು ಬೀಳುಗಳ ನಡುವೆ ಮಕ್ಕಳಿಗಾಗಿ ಅವಳು ಮಾಡುವ ತ್ಯಾಗ, ಪ್ರೀತಿ, ಕರುಣೆ, ಮಮತೆ ಇತ್ಯಾದಿಗಳನ್ನು ಮನಗೊಂಡು ಇತರರಿಗೂ ಅಮ್ಮನ ಅಂತಃಕರಣ ಹಾಗೂ ಅವಳ ಉಪಸ್ಥಿತಿಯ ಮೌಲ್ಯಗಳನು ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಯಾಕೆಂದರೆ ‘ಮೇರೆ ಪಾಸ್ ಮಾ ಹೈ’... ನಿಮಗೂ ಅಮ್ಮ ಬೇಕಲ್ವಾ!!? ಅರಿಯದ ಅವಳ ಪ್ರೀತಿ ಅರಿತು ನೋಡಿ, ಆ ಭರವಸೆಯ ಭಾವ  ಮನಸ್ಸಿಗೆ ಹೊಸ ಶಕ್ತಿ ನೀಡುತ್ತದೆ. 
‘ಅವಳು ನಾಳೆಗಳೆಡೆಗಿನ ಭರವಸೆ, ಬದುಕಿನ ಮೂಲಾಧಾರಗಳ ಒಳಸೆಲೆ’
ಲವ್ ಯೂ ಅಮ್ಮ

ಇನ್ನೊಂದು ಹ್ಯಾಪಿ ವಿಷಯ ಏನೆಂದರೆ ಮೇ ತಿಂಗಳ ಎರಡನೇ ಭಾನುವಾರ ‘ವಿಶ್ವ ಅಮ್ಮಂದಿರ ದಿನಾಚರಣೆ’ ಇದನ್ನು ಎಲ್ಲರೂ ಸಂಭ್ರಮದಿಂದ ಆಚರಿಸೋಣ. ಸಮಸ್ತ ಅಮ್ಮಂದಿರಿಗೂ ನನ್ನ ಕಡೆಯಿಂದ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು...

Friday, 24 April 2015

ಗೂಡು ಮರೆತ ಹಕ್ಕಿಗಳೇ.!? (ತಂದೆ ತಾಯಿಗಳಿಗಿಂತ ಮಿಗಿಲಾಯಿತೆ ಹುಚ್ಚು ಪ್ರೀತಿ)


       ಬೆಳಿಗ್ಗೆ ಎದ್ದು ಪೇಪರ್ ಓದುತ್ತಿದ್ದಾಗ ಬಹಳ ಸಿಂಪಲ್ ಎನ್ನುವಂತೆ ಮುದ್ರಿಸಿರುವ ತುಂಬಾ ಗಂಭೀರವಾದ ವಿಚಾರವನ್ನು ಗಮನಿಸಿದೆ. ‘ಯುವ ಪ್ರೇಮಿಗಳಿಬ್ಬರೂ ರಾತ್ರೋರಾತ್ರಿ ಪರಾರಿ, ಪ್ರೀತಿಸುತ್ತಿದ್ದ ಈ ಜೋಡಿಗಳು ಮನೆಯವರಿಗೆ ಹೆದರಿ ಓಡಿಹೋಗಿದ್ದಾರೆ’ ಇದು ಸುದ್ಧಿಯ ಸಾರಾಂಶ. ನನಗಂತೂ ತುಂಬಾ ಬೇಸರವಾಯಿತು. ಪತ್ರಿಕೆಯ ಪುಟದಲ್ಲಿ ಇದು ನಾರ್ಮಲ್ ವಿಷಯವಾದರೂ ಓದುತ್ತಿರುವಷ್ಟು ಹೊತ್ತು ಎಂತವನಿಗಾದರೂ ಇದೇನು ಕಾಲ ಬಂದಿತಪ್ಪಾ! ಅಂತ ಅನಿಸದಿರದು.
ಕೆಲ ಹದಿ ಹರೆಯದ ಮಕ್ಕಳನ್ನು ನೋಡುವಾಗ ಕೋಪದ ಜೊತೆಗೆ ಅವರ ಮುಂದಿನ ಬದುಕಿನ ಬಗ್ಗೆಯೂ ಅನುಕಂಪ ಮೂಡಿ ಬರುತ್ತದೆ. ಆ ವಯಸ್ಸೇ ಹಾಗೆ ಲಂಗು-ಲಗಾಮಿಲ್ಲದ ಕುದುರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಎಂದು ಅರಿಯುವ ತಾಳ್ಮೆ ಅವರಲ್ಲಿಲ್ಲ, ಹಿರಿಯರ ಮಾತುಗಳೋ ಅವರಿಗೆ ಹಿತವೆನಿಸೋದೆ ಇಲ್ಲಾ. ಪ್ರೀತಿ-ಪ್ರೇಮ, ಸಿಗರೇಟ್, ಕುಡಿತ ಇತ್ಯಾದಿ ಶೋಕಿಗಳ  ಕಡೆ ವಾಲುವ ಮನದ ಕಂಟ್ರೋಲ್ ಅವರಿಗೆ ಸಿಗೋದೆ ಇಲ್ಲಾ.
        ಹರೆಯದ ಹುಡುಗ ಹುಡುಗಿಯರು ಪರಸ್ಪರ ಆಕರ್ಷಣೆಗೊಳಗಾಗುವುದು ಪ್ರಕೃತಿ ಸಹಜ. ಜೀವನಪರ್ಯಂತ ಕೂಡಿ ಬಾಳಬೇಕಾಗಿರುವುದರಿಂದ ಪರಸ್ಪರರು ಹೊಂದಿಕೊಂಡು ಹೋಗುವಂತ ಸ್ವಭಾವ, ಒಂದು ಗೂಡಿನ ಬದುಕಿಗೆ ಬೆಸುಗೆಯಂತೆ ಕೆಲಸ ಮಾಡುವ ಲೈಂಗಿಕತೆ ಅಂದರೆ ಪರಸ್ಪರರ ಲೈಂಗಿಕ ಸಾಮಥ್ರ್ಯ, ತ್ಯಾಗ, ಕಷ್ಟ-ಸುಖಗಳ ಹಂಚಿಕೆ ಇದೆ ಮೊದಲಾದವನ್ನೆಲ್ಲಾ ಪರೀಕ್ಷಿಸಿ ನೋಡುವ ಕುತೂಹಲ ಎಲ್ಲಾ ಹುಡುಗ ಹುಡುಗಿಯರಲ್ಲೂ ಇದ್ದೆ ಇರುತ್ತವೆ. ಇಂತಹ ಪೃಕೃತಿ ಸಹಜ ಗುಣಗಳೇ ಲಿವಿಂಗ್ ಟುಗೆದರ್ ಗೆ ಅನುವುಮಾಡಿ ಕೊಡುತ್ತವೆ ಎನಿಸುತ್ತದೆ.
ಈ ಪ್ರೀತಿ-ಪ್ರೇಮ ಇಂದಿನ ಕಾಲದಲ್ಲಿ ಎಷ್ಟು ಮೌಲ್ಯ ಕಳೆದುಕೊಂಡಿದೆ ಎಂದರೆ, ವಿದೇಶಿ ಸಂಸ್ಕøತಿಯ ಪ್ರಭಾವದಿಂದ ಇಂದಿನ ಬಹುತೇಕ ಹುಡುಗ ಹುಡುಗಿಯರು ಹೈಸ್ಕೂಲು, ಪಿ.ಯು, ಕಾಲೇಜು ಓದುವಾಗಲೇ ಅನಾವಶ್ಯಕ ಆಕರ್ಷಣೆಯ ಪ್ರೀತಿಗೆ ಬಿದ್ದು, ಮನೆಯವರು ಒಪ್ಪಲ್ಲ ಎಂದು ತಿಳಿಯುತ್ತಲೇ ಮುಂದೆನು ಮಾಡಬೇಕು ಎಂದು ತೋಚದೆ ಮನೆ ಬಿಟ್ಟು ಓಡಿ ಹೋಗಿ ತಡಕಾಡುವ ಮಟ್ಟಕ್ಕೆ ಒಂದು ಕಡೆಯಾದರೆ, ಒಬ್ಬರನ್ನೊಬ್ಬರು ಅರಿಯುವ ಮುನ್ನವೇ ಎಲ್ಲಾ ಸಂಪರ್ಕದ ಏಳು ಬೀಳು ನಡೆದು, ಜೀವನದಲ್ಲಿ ಇನ್ನೇನೂ ಇಲ್ಲಾ ಎನ್ನುವ ಹಂತಕ್ಕೆ ತಲುಪಿ ಡೈವೋರ್ಸ್ ಎಂಬಲ್ಲಿಗೆ ಎಲ್ಲಾ ಮುಗಿತು ಎಂದು ಕೈತೊಳೆದುಕೊಳ್ಳುವ ಮಟ್ಟಕ್ಕೂ ತಲುಪಿದೆ.
ಪ್ರೀತಿ ಪ್ರೇಮ ಫೇಲಾದ ಒಂದು ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಯುವ ಪ್ರೇಮಿಗಳಿಗೆ ತಮ್ಮ ತಂದೆ ತಾಯಿಯ ಬಗ್ಗೆ ಯೋಚನೆ ಇರುವುದೇ ಇಲ್ಲ. ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡಾಗ ಪಡುವ ದುಃಖವನ್ನು ಯಾವ ಪದದಿಂದಲೂ ಹೇಳಲಾಗದು. ಮಗು ಗರ್ಭದಲ್ಲಿ ಬೆಳೆಯುವಾಗಿನಿಂದ ಹಿಡಿದು ಅವನು/ಅವಳು ಬೆಳೆದು ದೊಡ್ಡವನಾಗುವವರೆಗೂ ಪ್ರತಿಕ್ಷಣ ಪ್ರತಿ ದಿನ ತಂದೆ ತಾಯಿಯರು ನಮ್ಮನ್ನು ಎಷ್ಟು ಕೇರ್ ಮಾಡುತ್ತಾರೆಂಬುದು ಬಹುತೇಕ ಮಕ್ಕಳಿಗೆ ತಿಳಿದಿರುವುದಿಲ್ಲ. ಅದು ತಿಳಿಯಬೇಕೆಂದರೆ ಇವರು ಕೂಡ ತಂದೆ ತಾಯಿಯಾಗಿ ಅವರ ಮಕ್ಕಳು ಇದೇ ರೀತಿ ಕೆಲಸ ಮಾಡಬೇಕು ಅಷ್ಟೆ. ಎಲ್ಲೋ ಒಂದು ಕಡೆ ಮನೆಯವರ ತಪ್ಪು ಇದರಲ್ಲಿದೆ ಎನಿಸುತ್ತದೆ. ತಂದೆ ತಾಯಿಗಳು ಮಗುವಾದ ಮೇಲೆ ಎಲ್ಲಿಯೂ ಕೂಡ ಮಗುವಿನ ಮುಂದೆ ಪರಸ್ಪರ ಮುದ್ಧಿಸುವ ಮನಸಾಗಲಿ, ಅಪ್ಪಿಕೊಳ್ಳುವ ಪರಿಯಾಗಲಿ ಮಕ್ಕಳ ಮುಂದೆ ತೋರಲು ಇಷ್ಟಪಡುವುದಿಲ್ಲ. ‘ಸುಮ್ಮನೀರ್ರಿ ಮಗ/ಮಗಳು’ ಇದ್ದಾರೆ ಎನ್ನುವ ರಾಗದೊಂದಿಗೆ ಮುಚ್ಚು ಮರೆ ಮಾಡುತ್ತಾರೆ. ಇಬ್ಬರ ನಡುವೆ ಮಗುವನ್ನು ಮಲಗಿಸಿಕೊಂಡು ಮಗುವಿನ ಪ್ರೀತಿಗಾಗಿ ತಮ್ಮ ಸುಖವನ್ನು ತ್ಯಾಗ ಮಾಡಿರುತ್ತಾರೆ. ಯಾಕೆ ಹೀಗೆ!?.., ಇನ್ನೂ ಕೆಲವರಿದ್ದಾರೆ ಮಗ/ ಮಗಳು ವಯಸ್ಸಿಗೆ ಬಂದ ತಕ್ಷಣ ಅವರಿಗೆ ಒಂದು ಸಪರೇಟ್ ರೂಮ್ ಮಾಡಿ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳದೇ ಯಾವುದೆ ವಿಚಾರವನ್ನು ಗಮನಿಸಿದೆ ತೆಪ್ಪಗಿರುತ್ತಾರೆ. ಮಕ್ಕಳಿಗಿರುವ ಕುತೂಹಲ, ಅವರ ಮನದಲ್ಲಿರುವ  ವಸ್ತು-ಸ್ಥಿತಿಯ ತಳಮಳ ಏನನ್ನೂ ಅರಿಯದೆ ಸುಮ್ಮನಿರುತ್ತಾರೆ. ಹೌದು ಲೈಂಗಿಕ ವಿಷಯಗಳ ಬಗ್ಗೆ ಮುಜುಗರವಿಲ್ಲದೆ ಮಾತಾಡುವುದು ಕಷ್ಟ. ಆದರೆ ಲೈಂಗಿಕ ಕ್ರೀಯೆಗಳು ಪಾಪಪ್ರಜ್ಞೆಯ ಚಟುವಟಿಕೆ ಎನ್ನುವ ರೀತಿಯಲ್ಲಿ ಮಾತನಾಡುವುದು ತಪ್ಪು ಅಲ್ವಾ. ಇಂತಹ ಭಾವನೆಗಳನ್ನು ದೂರ ಸರಿಸಿದಾಗ ಲೈಂಗಿಕ ವಿಷಯಗಳು ಹುಟ್ಟಿಸುವ ತೀವ್ರ ಕುತೂಹಲ ಅದರ  ಮುಜುಗರ ಬದಲಾಗಬಹುದು ಎನ್ನಿಸುತ್ತದೆ. ಮಕ್ಕಳ ಮನಸ್ಸಿನ ಬೆಳವಣಿಗೆ, ಬದಲಾವಣೆಗಳ ಅಧ್ಯಯನ ಮಾಡಿರುವ ಅನೇಕರ ಪ್ರಕಾರ ಲೈಂಗಿಕ ವಿಷಯಗಳ ಬಗ್ಗೆ ಮನೆಯ ವಾತಾವರಣದಲ್ಲಿರುವಂತಹ ಮುಜುಗರ, ಮಡಿವಂತಿಕೆಯ ಭಾವನೆಗಳು ಮಕ್ಕಳ ಮನದಲ್ಲಿ ಮೂಡುವ ಲೈಂಗಿಕ ವಿಷಯದ ಬಗೆಗಿನ ಕುತೂಹಲವನ್ನು ಕ್ಷೀಣಿಸುವುದಿಲ್ಲ. ಬದಲಿಗೆ ಕಾಮದ ವಿಷಯಗಳ ಬಗ್ಗೆ ಮುಚ್ಚುಮರೆಯ ವರ್ತನೆಯನ್ನು ಗಟ್ಟಿಯಾಗುವಂತೆ ಮಾಡಿಸುತ್ತದೆ. ಇದೇ ನಂತರದ ದಿನಗಳಲ್ಲಿ ವ್ಯಕ್ತಿತ್ವದ ಗೊಂದಲಕ್ಕೂ ಕಾರಣವಾಗಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೆತ್ತವರೆ, ಎಲ್ಲದಕ್ಕೂ ಒಂದೊಂದು ಸಮಯ ಅಂತ ಇರುತ್ತೆ. ಯಾವಾಗ ಎನಾಗÀಬೇಕೋ ಆಗೆ ಆಗುತ್ತೆ ಅಲ್ಲಿಯವರೆಗೂ ಸುಮ್ಮನಿದ್ದು ಬಿಟ್ಟರೆ ಬೆಟರ್. ಇಲ್ಲವಾದಲ್ಲಿ ವಯಸ್ಸಿನಲ್ಲಾಗುವ ಬದಲಾವಣೆಯನ್ನು ಗಮನಿಸಿ, ಕೂಲಂಕುಶವಾಗಿ ಚರ್ಚಿಸಿ, ಪರಸ್ಪರ ಮುಕ್ತವಾಗಿ ಮಾತನಾಡಿ ತಿಳಿಹೇಳುವುದು ಉತ್ತಮ ಎನಿಸುತ್ತದೆ. ಬದಲಾಗಿ ಅದೇ ಶಿಕ್ಷಾರ್ಹ ಅಪರಾಧ ಎಂದುಕೊಳ್ಳಬೇಡಿ.                                                                                                                                                                                                                                                         ಹರೆಯದ ಹುಡುಗ ಹುಡುಗಿಯರೇ ನೀವ್ಯಾಕೆ ‘ಲಿವಿಂಗ್ ಟುಗೆದರ್ ಕಾನ್ಸೆಪ್ಟ್’ ನ್ನು ಫಾಲೋ ಮಾಡ್ತೀರಾ. ನಿಮಗಾಗಿ ತಂದೆ ತಾಯಂದಿರು ಹಗಲಿರುಳು ಕಷ್ಟಪಟ್ಟು, ಸುಖವನ್ನು ಬಲಿಕೊಟ್ಟು, ಬೆಳೆಸಿದ್ದು ತಿಳಿದಿದ್ದರೂ ನೀವ್ಯಾಕೆ ಅವರ ಪ್ರೀತಿಗೆ ಕೈಕೊಟ್ಟು ಇನ್ನೊಂದು ಪ್ರೀತಿಗೆ ಹಾತೊರೆದು ಓಡಿ ಹೋಗ್ತಿರಾ!?... ಒಂದು ಕ್ಷಣ ಯೋಚಿಸಿ. ಮಕ್ಕಳೇ, ಮುಂದುವರಿಯುವ ಮುಂಚೆ ಮುಂದೆ ನಿಂತು ನೋಡಿ, ಲಿವ್ ಇನ್ ರಿಲೇಷನ್‍ಶಿಪ್ ಎಂಬ ತತ್ವ ಪಾಶ್ಚಿಮಾತ್ಯ ಸಂಸ್ಕøತಿಯಿಂದ  ಬಂದಿದ್ದರೂ ಅದು ಇದೀಗ ಎಲ್ಲಾ ಕಡೆಯೂ ಕಾಮನ್ ಎನ್ನುವ ಹಂತಕ್ಕೆ ತಲುಪಿದೆ. ಇದರ ಪರಿಣಾಮ ನೀವು ಪರಸ್ಪರ ಆಕರ್ಷಿಸಲ್ಪಟ್ಟು, ಪ್ರೀತಿ ಬಲೆಗೆ ಬಿದ್ದು, ಜೀವನವೇ ಅಲ್ಲೋಲ ಕಲ್ಲೋಲ ಮಾಡಿಕೊಳ್ಳುತ್ತಿದ್ದೀರಾ!? ಅದಕ್ಕಾಗಿಯೇ ದಿನ ಬೆಳಗಾದರೆ ಇಂತಹದೇ ಸುದ್ದಿ ನಾವು- ನೀವು ಕೇಳುತಿರುವುದೆನ್ನುವದರಲ್ಲಿ ಮುಚ್ಚುಮರೆ ಇಲ್ಲಾ. ಅತ್ತ ಮನೆಯವರು ನಿಮ್ಮನ್ನು ಎಕ್ಸೆಪ್ಟ್ ಮಾಡಲ್ಲ, ಇತ್ತ ಬಾಳ್ವೆಯೂ ಸರಿಯಾಗಿ ನಡೆಯೊಲ್ಲ. ಕೊನೆಗಿರೋದೊಂದೆ ನಾವು ತಪ್ಪು ಮಾಡಿ ಬಿಟ್ವಿ ಅನ್ನೋ ಮನಸ್ಸಿನ ತಿಕಳಾಟ. ಪರಿಣಾಮ ಸಾವಾಗಿರಲೂಬಹುದು... ಜೋಡಿಗಳು ಬೇರೆ-ಬೇರೆಯಾಗಲೂಬಹುದು.
ಸ್ವಾಮಿ ವಿವೇಕಾನಂದರು ಒಂದು ಕಡೆ ಹೇಳುತ್ತಾರೆ, “ಒಬ್ಬ ಮನುಷ್ಯನ ಜನ್ಮ ಸಾರ್ಥಕವಾಗುವುದು ಯಾವಾಗೆಂದರೆ, ಅವನು ಬೇರೆಯವರ ಸಲುವಾಗಿ ದುಡಿದಾಗ”...ಎಂದು. ನಾವು ಬೇರೆಯವರಿಗಾಗಿ ದುಡಿಯುವುದು ಬೇಡ ಅಟ್‍ಲೀಸ್ಟ್ ನಮ್ಮನ್ನು ಹೆತ್ತ ತಂದೆ-ತಾಯಿಗಾದರೂ ದುಡಿಯೋಣ, ಅವರಿಗಾಗಿ ಬದುಕೋಣ, ಲವ್ ಅನ್ನೋ ಕ್ಷಣಿಕ ಸುಖಕ್ಕೆ ಹಾತೊರೆಯದೆ ಸುಖಸಂಸಾರದಲ್ಲಿ ಎಲ್ಲರ ಜೊತೆಯೂ ಲೀನರಾಗೋಣ, ತಂದೆ ತಾಯಿಯರೆ ನೀವೂ ಕೂಡ ಅಷ್ಟೆ, ಸಂಕೋಚ ಬಿಟ್ಟು ಸಂಸಾರ ನಡೆಸಿ, ನಿಮ್ಮ ಹಾಗೂ ಮಕ್ಕಳ ಬಾಳಲ್ಲಿ ಸಮೃದ್ಧರಾಗಿ...




ಮುದ್ದು ಮರಿಯ ಸೋಜಿಗದ ನಲ್ಮೆ


       ಮುಂಜಾನೆ ಸೂರ್ಯಕಿರಣ ನೆತ್ತಿಯಿಂದ ಎದ್ದು ತನ್ನ ಪ್ರಖರತೆಯ ಮೃದು ಬಿಸಿಯನ್ನು ಭೂಮಿಗೆ ತಾಗುವ ಮುನ್ನವೇ ಮುಂಗಾಲನ್ನು ಊರಿ, ಹಿಂಗಾಲನ್ನು ಮಡಚಿ, ಸಣ್ಣ ಕಿರು ನಗೆಯೊಂದಿಗೆ ನನ್ನ ಏಳುವಿಕೆಯನ್ನು ಕಾಯುತ್ತಾ ಕುಳಿತಿರುತ್ತಿದ್ದ ಆ ಜಾಗÀದಲ್ಲಿ ಇವತ್ತಿನ ನಿನ್ನ ಪ್ರಸ್ತುತತೆ ಇಲ್ಲದಿರುವುದನ್ನು ಎಣಿಸಿಕೊಂಡರೆ ವೇದನೆಯ ಜೊತೆಗೆ ಮನ ಪಟಲದಲ್ಲಿ ಎಕಾಂಗಿ ಭಾವ ಮೂಡಿ ಕಣ್ಣಿನ ಅಂಚಲ್ಲಿ ಕಂಬನಿ ಜಿನುಗುತ್ತೆ.
ಅದ್ಯಾಕೋ ಗೊತ್ತಿಲ್ಲ...!, ನೀನಂದ್ರೇ ನಂಗೆ ತುಂಬಾ ಇಷ್ಟ ಕಣೋ, ನಾನು ನಿನ್ನ ತುಂಬಾ ಹಚ್ಚಿಕೊಂಡಿದ್ದೆ. ನಿನಗೂ ಕೂಡ ನಾನಂದ್ರೆ ಪಂಚಪ್ರಾಣ ಅಂತ ಗೊತ್ತು. ರಜೆಯಲ್ಲಿ ಅಜ್ಜ- ಅಜ್ಜಿಯ ಊರು ಅಂತ ಮನೆಬಿಟ್ಟು ಅಲ್ಲಿ- ಇಲ್ಲಿ ಸ್ವಲ್ಪ ದಿನ ಇದ್ದರೂ ನೀನು ಮಾತ್ರಾ ಪ್ರತಿದಿನ ನನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ನನ್ನ ಬರುವಿಕೆಯಂತೂ ನಿನಗೆಷ್ಟು ಖುಷಿ ಕೊಡುತ್ತಿತ್ತೆಂದರೆ ಅದರ ಅಂದವನ್ನು ನೀನು ಕೂಗಿ ವರ್ಣಿಸುತ್ತಿದ್ದ ಸೋಜಿಗವೇ ಬೇರೆ ಎನಿಸುತ್ತೆ. ಪ್ರತಿ ದಿನ ನನ್ನ ಶಾಲೆಗೆ ಬಿಟ್ಟು, ಸಂಜೆ   ನಾ ಮನೆಗೆ ಬರುವ ಸಮಯವನ್ನು ಬಾಗಿಲ ಬಳಿಯೇ ಕಾದು ಕುಳಿತು ನೀನು ಆದರದಿಂದ ಆಹ್ವಾನಿಸುತ್ತಿದ್ದ ರೀತಿ ಇನ್ನೆಂದೂ ಯಾರಿಂದಲೂ ತೋರಲಾಗದು ಬಿಡು.

ದಿನ ಬೆಳಿಗ್ಗೆ ನಾನು ಎದ್ದು ಹೊರ ಬಂದಾಗ ಸಣ್ಣ ಕಿರುನಗೆಯೊಂದಿಗೆ ಶುಭೋದಯ ಸಾರಿ, ಎದ್ದ ತಕ್ಷಣವೇ ನನಗೊಂದು ಪ್ರಣಾಮವಿತ್ತು. ಒಂದಾಟ ಆಡೋಣವೆಂದು ಒಟ್ಟಿಗೆ ಅಂಗಳದಲ್ಲಿ ಎದ್ದು-ಬಿದ್ದು ಆಡಿ ನಂತರವೇ ಮುಖ ತೊಳೆದು ತಿಂಡಿ ತಿನ್ನುವುದನ್ನು ನೆನೆಸಿಕೊಂಡರಂತೂ ಇಂದಿಗೂ ಬಾಲ್ಯ ಜೀವನಕ್ಕೊಂದು ಮಹತ್ವದ ಅರ್ಥ ಕಲ್ಪಿಸಿಕೊಟ್ಟು ನನಗದರ ಅಂದವನ್ನು ಹೆಚ್ಚಿಸಿದ ಆಪ್ತ ನೀನೆನಿಸುತ್ತದೆ. ನಿನಗೆ ನಾನು ಎಷ್ಟು ಇಷ್ಟ ಅಂತ ಗೊತ್ತಾಗಿದ್ದು ಯಾವಾಗ ಗೊತ್ತಾ!? ನಾನು ಮನೆಯಲ್ಲಿ ಇಲ್ಲದಾಗ ನೀನು ಒಬ್ಬನೇ ಅಮ್ಮ-ಅಪ್ಪನ ಜೊತೆ ಇದ್ದು ನನಗಾಗಿ  ಫೀಲ್ ಮಾಡ್ತಿದ್ದ ಸಂದರ್ಭವನ್ನು ಅಮ್ಮ ಹೇಳುತ್ತಿದ್ದಾಗಲೆ ತಿಳಿದದ್ದು. ಆಗಲೇ ನಿನ್ನ ಮೇಲೆ ಇರುವ ಪ್ರೀತಿ ಇನ್ನಷ್ಟು ಇಮ್ಮಡಿಯಾಗಿದ್ದು. ಪ್ರತಿ ದಿನ ಈ ಪ್ರೀತಿ ಇಮ್ಮಡಿಯಾಗುತ್ತಿತ್ತೆ ಹೊರತು ಕಡಿಮೆಯಾಗಿದ್ದೆ ಗೊತ್ತಿಲ್ಲ ಕಣೋ.
ನನ್ನ ಮಾಮೂಲಿ ದಿನಚರಿಯಲ್ಲಿ ಎಡೆಬಿಡದೆ ಏಳುವ ಆಸೆಗಳಿಗೆ ನೀ ಕೊಡುವ ಸಾಥ್, ನನ್ನ ಮೆಚ್ಚಿಸೋ ನಿನ್ನ ಪ್ರೀತಿಯ ಪಾಥ್ ಇವೆಲ್ಲದರ ನಡುವೆ ನಾನು ತುಂಬಾ ಚಿಕ್ಕವನು ಅನ್ನಿಸುತ್ತೆ ಕಣೋ. ಚಿಕ್ಕಂದಿನಿಂದಲೂ ಇದ್ದ ಕ್ರಿÀ್ರಕೆಟ್ ಆಟದ ಹುಚ್ಚು ನಿನಗೆ ಎಷ್ಟು ಕಷ್ಟಕೊಟ್ಟಿತ್ತೋ ನಾ ತಿಳಿಯೆ!!!. ಗೆಳೆಯರ್ಯಾರು ಸಿಗದಿದ್ದಾಗ ನಾ ದೂರಕ್ಕೆ ಎಸೆಯುತ್ತಿದ್ದ ಬಾಲ್‍ನ್ನು  ನೀನು ಕೈಗಳಿಂದ ತರಲಾಗದೇ ಬಾಯಿಂದ ಕಚ್ಚಿಕೊಂಡು ಬರುತ್ತಿದ್ದದ್ದೂ ನಿನ್ನನ್ನ ಕಾಡಿಸುವಂತೆ ಮಾಡುತ್ತಿತ್ತೆಂದು ನನಗೆ ಅನಿಸುತ್ತಿದೆ. ದಯವಿಟ್ಟು ಕ್ಷಮಿಸಿಬಿಡು. ಫರ್ಲಾಂಗು ದೂರಗಳ ನಿನ್ನ ಓಟ ಕಿಲೋ ಮೀಟರ್‍ವರೆಗೂ ಸಾಗಿದರೂ, ನಿನ್ನಲ್ಲಿ ಯಾವುದೇ ಉತ್ಸಾಹ ಕಡಿಮೆ ಆಗದೆ ಇನ್ನೂ ಆಡೋಣ-ಆಡೋಣ ಅಂತಲೇ ನನ್ನ ಸಂತೋಷವನ್ನೇ ನೀನು ಹಾರೈಕೆ ಮಾಡಿಕೊಳ್ಳುತ್ತಿದ್ದದ್ದೂ, ಯಾವ ಋಣಾನುಬಂಧವೋ ನಾ ತಿಳಿಯೇ...
      ಹೇ ನಿನಗೆ ನೆನಪಿದ್ಯಾ, ನನಗೀಗಲು ನೆನಪಿದೆ. ನನಗಾಗ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಮನೆಯಲ್ಲೆ ಕುಳಿತು ಓದಲು ಒಂದಿಷ್ಟು ದಿನ ರಜೆ ನೀಡಿದ್ದ ಸಮಯ, ಕುಳಿತಲ್ಲೆ ಕುಳಿತು ಓದಲು ಬೋರ್ ಎನಿಸುವ ನನಗೆ ಎಲ್ಲಾ ಕಡೆ ಓಡಾಡುತ್ತಾ ಓದುವ ಹಂಬಲ, ಮನೆಯಂಗಳ, ಗದ್ದೆಯ ಅಂಚು, ಗುಡ್ಡದ ಮೇಲಿರುವ ಬೆಟ್ಟದ ತುದಿಯ ಮೇಲೆ ಕುಳಿತು ಒಂದಿಷ್ಟು ಹೊತ್ತು ಒಂದೊಂದು ಸ್ಥಳದಲ್ಲಿ ಓದುವ ಪರಿವಿಡಿ ನನ್ನದು. ಆ ಸಮಯದಲ್ಲಿ ನೀ ಒಂದಿನವೂ ನನ್ನ ಬೆನ್ನು ಬಿಡದೆ, ನೀ ಓದು ನಾನು ನಿನಗೆ ಬೇಸರವಾಗದಂತೆ ಕಂಪೆನಿ ಕೊಡುತ್ತಾ ಪ್ರತಿ ದಿನವೂ ನಾ ಸಾಗುವ ಎಲ್ಲಾ ಕಡೆ ನನ್ನ ಪಕ್ಕವೇ ಕುಳಿತು, ಕಾಲಿನ ಬಳಿ ಬಂದು ಮಲಗಿ ಸ್ಫೂರ್ತಿ ತುಂಬಿದ ಬಂಧುಗಿಂತಲೂ ಆಪ್ತನಾಗಿದ್ದೆ ನೀ.
 ಈಗಲೂ ಊರಿಗೋದರೆ ಒಮ್ಮೊಮ್ಮೆ ಆ ಪರಿಸರ, ನಿನ್ನ ಜೊತೆ ಕಳೆದ ಆ  ಕ್ಷಣ ಮನಸಿನ ಮೂಲೆಯಲ್ಲಿ ಕಚಗುಳಿ ಇಡುತ್ತದೆ. ಇದಂತೂ ನಿನಗೆ ನೆನಪಿರಲೇಬೇಕು!, ಆ ದಿನ ರಾತ್ರಿ ನಾವೆಲ್ಲಾ ಮಲಗಿ ನಿದ್ರಾದೇವಿಯ ಮಡಿಲಿಗೆ ಶರಣಾಗಿದ್ದಾಗ ಮನೆಯ ಹೊರಗಡೆ ಹಾಕಿದ್ದ ಅಡಿಕೆ ರಾಶಿಗೆ ಒಬ್ಬ ಕಳ್ಳ ಕನ್ನ ಹಾಕಲು ಬಂದಿದ್ದಾಗ ನಿನಗೆ  ಕಳ್ಳ ಬಂದ ಸುಳಿವು ಸಿಕ್ಕಿ ನಮ್ಮ ನಿದ್ರೆಗೆ ಭಂಗ ಬರಬಾರದೆಂದು ನಿನೋಬ್ಬನೇ ನಿನ್ನ ಪ್ರಾಣ ಒತ್ತೆ ಇಟ್ಟು ಅವನನ್ನು ಎದುರಿಸಿದ್ದೆ. ಬೆದರಿಸಿ ಅಟ್ಟಿಸಿಕೊಂಡು ಹೋಗಿ ಓಡಿಸಿದ್ದೆ. ಚಿಕ್ಕಂದಿನಿಂದಲೂ ನೀನು ನಮಗಾಗಿ, ನಮ್ಮ ಮನೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಕೊನೆಯವರೆಗೂ ಎನೂ ಕೇಳದೇ, ಏನಕ್ಕೂ ಅಳದೇ ಖುಷಿ ಖುಷಿಯಾಗೆ ಇದ್ದದ್ದನ್ನು  ನೋಡಿದರೆ ನಾವು ಮಾನವರು  ಚಿಕ್ಕ ಚಿಕ್ಕ ವಿಷಯಕ್ಕೂ ಅಸೂಯೇ, ಆಸೆ ಪಡುವ ಮನೋಭಾವನೆಯನ್ನು ತೊಡೆದುಹಾಕಿಕೊಳ್ಳಲು ನಿನ್ನನು ನೋಡಿ ಕಲಿಬೇಕು ಅನ್ನಿಸುತ್ತೆ.
ಆ ದಿನ ತಪ್ಪು ಮಾಡಿದೆ ಅಂತ ಆಣ್ಣ ಹೊಡೆದ ಒಂದೇಟಿಗೆ  ಸಿಟ್ಟು ಮಾಡಿಕೊಂಡು ಕುಳಿತ ನಿನ್ನನ್ನು ಸಮಾಧಾನ ಮಾಡಲು ನಾನು ಎಷ್ಟು ಹರಸಾಹಸ ಪಟ್ಟಿದ್ದೆ ಅಲ್ವಾ, ಅಬ್ಬಾ!! ನಿನ್ನ ಸಿಟ್ಟನ್ನೂ ನೋಡಿ ಭಯಪಟ್ಟಿದ್ದೆ ನೀನು ಊಟ ಮಾಡಿಲ್ಲ ಅಂತ ನಾನು ಊಟ ಬಿಟ್ಟಿದ್ದೆ, ಆಮೇಲೆ ನನಗಾಗಿ ನೀ ಊಟ ಮಾಡಲು ಒಪ್ಪಿಕೊಂಡಿದ್ದೆ. ಅಷ್ಟೆ ಅಲ್ಲದೇ, ಪಕ್ಕದ ಮನೆಯ ಅಭಿ ಜೊತೆ ಆಟವಾಡಲು ಹೋದಾಗ ಸಣ್ಣ ವಿಷಯಕ್ಕೆ ಗಲಾಟೆಯಾಗಿ ಅವನು ನನಗೆ ಹೊಡೆಯಲು ಬಂದಾಗ ನೀ ಅವನಿಗೆ ಕಚ್ಚಲು ಹೋಗಿ ಹೆದರಿಸಿ ಓಡಿಸಿದ್ದನ್ನೂ ಮರೆಯಲಾಗುತ್ತದೆಯಾ?. ನನಗೆ ಸ್ವಲ್ಪ ನೋವಾದರೂ ಮರುಗುತ್ತಿದ್ದ ನಿನ್ನ ಮಾನವೀಯತೆಯನ್ನು ನಾನು ಎಷ್ಟು ಹೊಗಳಿದರೂ ಕಡಿಮೆಯೇ ಹೌದು.
        ಈಗಲೂ  ನನಗೆ ಅನೇಕ ಕಾರಣಗಳಿಂದ ನೀನು ಹೆಮ್ಮೆಯ ಗೆಳೆಯ ಎನಿಸುತ್ತೆ . ತುಂಬಾ ಚಿಕ್ಕವನಾಗಿದ್ದಾಗ ನಿನ್ನನ್ನು ಅಣ್ಣ ಮನೆಗೆ ಕರೆದುಕೊಂಡು ಬಂದಿದ್ದ. ಆ ದಿನ ನಿನಗೆ ನಾನು ‘ಟಾಮಿ’ ಅಂತ ಇಟ್ಟಿದ್ದೆ ಅಂದಿನಿಂದಲೇ ನೀ ನಮ್ಮೆಲ್ಲರ ಮುದ್ದಿನ ಟಾಮಿ ಮರಿ ಆಗಿದ್ದೆ. ನೀನಿವತ್ತು ಈ ಲೋಕದಲ್ಲಿ ನಮ್ಮ ಜೊತೆ ಇರದಿದ್ದರೂ, ಮನೆ-ಮನದಲ್ಲಿ ಶಾಶ್ವತವಾಗಿ ಉಳಿದಿರುವೆ ಪುಟ್ಟಾ. ನಿನ್ನ ನೆನಪು ಹೃದಯಪಟಲದಲ್ಲಿ ಅಜರಾಮರವಾಗಿ ನೆಲೆಸಿದೆ.  ‘ನಾಯಿ ಮರಿ ನಾಯಿಮರಿ ತಿಂಡಿ ಬೇಕೆ’ ಎನ್ನುವ ಜಿ. ಪಿ ರಾಜರತ್ನಂರವರ ಹಾಡು ಆವಾಗಲೇ ನಾನು ನಿನ್ನ ಎದುರು ಹಾಡಿ ನಿನ್ನನ್ನು ಬಗೆ ಬಗೆಯಾಗಿ ರಂಜಿಸುತ್ತಿದ್ದದ್ದೂ, ‘ನಾಯಿ ಮರಿ ನಿನಗೆ ತಿಂಡಿ ಯಾಕೆ ಬೇಕು?’ ಎಂದು ಪ್ರಶ್ನಿಸುತ್ತಿದ್ದದ್ದೂ ಅದನ್ನೆಲ್ಲಾ ಮರೆಯಲಿಕ್ಕಾಗುತ್ತಾ ನೀನೆ ಹೇಳು. ಎಲ್ಲದಕ್ಕೂ ನಿನ್ನಲ್ಲಿ ನಗುವಿನ ಒಲುಮೆ ಇತ್ತು, ಸೋಜಿಗದ ಉತ್ತರವಿತ್ತು. ಆದರೆ ಏನು ಮಾಡಲಿ ನಮ್ಮ ಈ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ ಎನೋ ಆ ದಿನ ನೀನು ಮನೆಯ ಅಂಗಳದಿಂದ ಹೊರ ಹೋದವನು ವಾಪಾಸು ಬಂದಿದ್ದು ಉಸಿರಿರದ ದೇಹದಿಂದಲೇ. ಎಲ್ಲಿ, ಏನಾಯಿತು ಎಂಬುದು ಅರಿಯುವ ಮುನ್ನವೇ ನನ್ನನ್ನು ಅನಾಥ ಮಾಡಿ ನೀ ಕಾಣದೂರಿಗೆ ಪಯಣಿಸಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿದಿನ ಯಾರ ಮನೆಯ ನಾಯಿಮರಿ ಕಂಡರೂ ಅಲ್ಲಿ ನಿನ್ನನ್ನೇ ಅರಸುವೇ, ಮುಂದಿನ ಏಳೇಳು ಜನ್ಮದಲ್ಲೂ ನಿನ್ನ ಗೆಳೆತನ ನನಗೆ ಸಿಗಲಿ, ಮತ್ತೊಮ್ಮೆ ನಮ್ಮ ಮನೆಯಲ್ಲೇ ಹುಟ್ಟಿ ಬಾ...ಎಂದು ಅನುದಿ ಆಶಿಸುವೆ ಕಣೋ..

“ಎಂದೆಂದೂ ನಿನ್ನ ನೆನಪಲ್ಲೇ ಇರುವ ನನ್ನ ನಲ್ಮೆಯೇ ನಿನ್ನ ವ್ಯಕ್ತಿತ್ವ ತೋರಿಸುವ ಕನ್ನಡಿ...
ನನ್ನ ಬದುಕಿನ ಪುಸ್ತಕದ ಪ್ರಾರಂಭದಲ್ಲೇ ಸದಾ ಇರುತ್ತದೆ ನಿನ್ನದೇ ಮುನ್ನುಡಿ...”




ಹೆಣ್ಣು-4

     ಮಹಿಳೆ ಇಂದು ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿಗತಿ, ಸಮಾನತೆ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶದಲ್ಲೂ ಸುಧಾರಣೆಯನ್ನು ಕಂಡಿಲ್ಲ. ಮಹಿಳೆಯ ವಿಚಾರದಲ್ಲಿ ಕೌಟಂಬಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮೌಲ್ಯಗಳು ಬದಲಾಗದ ಹೊರತು ಅವರ ರಕ್ಷಣೆಯೂ ಅಷ್ಟಕಷ್ಟೆ. ಗಂಡು ಹೆಣ್ಣನ್ನು ಸಮಾನವಾಗಿ ಕಾಣಬೇಕೆಂದು ಭಾಷಣ ಬಿಗಿಯುವವರು ಎಲ್ಲಾ ಕಡೆಯೂ ಸಿಗಬಹುದು ಆದರೆ ಹೊರಗಡೆಯಾಗಲಿ, ಮನೆಯಲ್ಲಾಗಲಿ ಗಂಡು ಹೆಣ್ಣಿನ ಮಧ್ಯೆ ತಾರತಮ್ಯ ನಿಲ್ಲಿಸಲು ನಾವು ಎಷ್ಟು ಜವಾಬ್ಧಾರಿಯ ಕೆಲಸ ಮಾಡುತ್ತಿದ್ದೇವೆ…!?ಊಹೂ!!! ಉತ್ತರವಿಲ್ಲ...

ಭಾರತೀಯ ಪರಂಪರೆಯು ಅನಾಧಿಕಾಲದಿಂದಲೂ ಪುರುಷರು ಮತ್ತು ಮಹಿಳೆಯರ ವಿಷಯದಲ್ಲಿ, ಜೀವನದ ಎಲ್ಲಾ ಅಂಶಗಳಲ್ಲೂ ತಾರತಮ್ಯತೆಯನ್ನು ಕಾಣುತ್ತಾ ಬಂದಿದ್ದು, ಇದು ಶೋಷಣೆಯ ಹೆಸರಲ್ಲಿ ದಿನಂಪ್ರತಿ ನಮ್ಮೆದುರು ಬಿಂಬಿತವಾಗುತ್ತಾ ಇದೆ. ಹೆಣ್ಣಿನ ಮೇಲೆ ಎಲ್ಲಿಯವರೆಗೆ ಶೋಷಣೆಯೆಂಬ ಪೆಡಂಭೂತ ಇರುತ್ತದೋ ಅಲ್ಲಿಯವರೆಗೆ ಅವಳಿಗೆ ಪೂರ್ಣ ಪ್ರಮಾಣದ ರಕ್ಷಣೆ ದೊರಕುವುದು ಅಕ್ಷರಸಹ ಸುಳ್ಳು.
ಹೆಣ್ಣಿನ ರಕ್ಷಣೆ ಹೆಣ್ಣಿನ ಕೈಯಲ್ಲೇ ಇರುವುದಂತು ಸತ್ಯ ಹಾಗೆಯೇ ಅದನ್ನವರು ಅರಿತುಕೊಂಡಾಗ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ. ಇನ್ನೊಂದು ವಿಚಾರದಲ್ಲಿ ಸರಕಾರ ಮತ್ತು ಸಮಾಜ ಇವೆರಡೂ  ಹೆಣ್ಣಿನ ದೌರ್ಜನ್ಯದ ಅಪರಾಧದಲ್ಲಿ ಸಮಪಾಲು ಹೊಂದಿದೆ ಎಂದರೆ ತಪ್ಪಿಲ್ಲ. ನಮ್ಮಲ್ಲಿ ಅನೇಕ ಶಾಸನಗಳಿವೆ ವರ್ಷಂಪ್ರತಿ ಅವುಗಳು ಬದಲಾವಣೆಗಳನ್ನು ಕಾಣುತ್ತಿವೆ ಆದರೆ ಅದರಿಂದ ಶಿಕ್ಷೆಯ ಪ್ರಮಾಣವನ್ನು ಶಾಸನ ಹೆಚ್ಚು ಮಾಡಿತೆ ಹೊರತು, ಸಮಾಜದಲ್ಲಿ ಹೆಣ್ಣಿಗೆ  ರಕ್ಷಣೆ ಮಾತ್ರಾ ದೊರಕುತ್ತಿಲ್ಲ.
ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊರೆಯಾದರೆ ಇನ್ನರ್ಧ ಅವಳ ಕುಟುಂಬ ಮತ್ತು ಸಮಾಜದ್ದಾಗಿದೆ. ಜೊತೆಗೆ ನಮ್ಮ ನೆಲದ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಕಾರ್ಯಕೂಡ ಆಗಬೇಕಿದೆ, ಕಾನೂನು ಮತ್ತು ಸಮಾಜ ನೋಡುವ ರೀತಿ ಬದಲಾಗಬೇಕು. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ನಿರ್ಭಯವಾಗಿ ದೂರನ್ನು ನೀಡುವಂತಾಗಬೇಕು. ದೂರು ತಕ್ಷಣವೇ ತನಿಖೆಯನ್ನು ಆರಂಭಿಸಬೇಕು ಸಮಾಜದಲ್ಲಿ ಅವಳು ಮತ್ತೆ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡಬೇಕು. ಹೆಣ್ಣನ್ನು ಕೇವಲ ಭೋಗದ ವಸ್ತವೆಂದು ನೋಡುವ ಪ್ರಪಂಚಕ್ಕೆ ಆಕೆ ನಿಭಾಯಿಸುವ ಪಾತ್ರಗಳ ಬಗ್ಗೆ ಅರಿವಾಗಬೇಕು. ಅವಳ ಮೇಲೆ ಆಕ್ರಮಣ, ಶೋಷಣೆ ಕಂಡಲ್ಲಿ ಅದನ್ನೆದುರಿಸಿ ನ್ಯಾಯ ಪಡೆಯುವಂತಾಗಬೇಕು
 ಪ್ರತಿಯೊಬ್ಬ ಮಹಿಳೆಯಲ್ಲೂ ಶಕ್ತಿ, ಲಾವಣ್ಯ, ಧೈರ್ಯ, ಕರುಣೆ, ಸಮೃದ್ಧಿ, ಕರುಣೆ, ಮೌಲ್ಯ, ಜ್ಞಾನ ಮತ್ತು ದೂರದೃಷ್ಟ್ಟಿಗಳ ಸರಿಯಾದ ಸಮ್ಮಿಶ್ರಣವಿದೆ. ದಿವ್ಯತೆಯ ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀಯಾಗಿರುವ ಅರ್ಧನಾರೀಶ್ವರಿಯನ್ನು ಕಲ್ಪನೆಯಲ್ಲೇ ಪೂರ್ವಜರು ತೋರಿಸಿರುವುದು ಸಮಾನತೆಯ ಅಭಿವ್ಯಕ್ತಿಯೇ ಹೊರತು ಉತ್ಫ್ರೇಕ್ಷೆಯಲ್ಲ. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಆದ್ದರಿಂದ ಹೆಣ್ಣಿನ ರಕ್ಷಣೆಯಲ್ಲಿ ನಾವು ಪಾಲುದಾರರಾಗೋಣ.